ಪುರುಷರಿಗೆ ಸಾಕ್ಷಿಕೊಡುವ ಸವಾಲನ್ನು ಸ್ವೀಕರಿಸಿ
1. ರಾಜ್ಯಾಭಿರುಚಿಗಳನ್ನು ನೋಡಿಕೊಳ್ಳಲು ಯಾರು ತುರ್ತಾಗಿ ಬೇಕಾಗಿದ್ದಾರೆ?
1 ಈ ಕಡೇ ದಿವಸಗಳಲ್ಲಿ ರಾಜ್ಯ ಸಾರುವ ಕೆಲಸವು ಅಭಿವೃದ್ಧಿ ಆಗುತ್ತಿರುವುದರಿಂದ ಮುಂದಾಳತ್ವ ವಹಿಸಲು ಆಧ್ಯಾತ್ಮಿಕವಾಗಿ ಅರ್ಹ ಪುರುಷರು ತುರ್ತಾಗಿ ಬೇಕಾಗಿದ್ದಾರೆ. (ಮಾರ್ಕ 4:30-32; ಅ. ಕಾ. 20:28; 1 ತಿಮೊ. 3:1-13) ಆದರೆ ಕೆಲವು ಪ್ರದೇಶಗಳಲ್ಲಿ ರಾಜ್ಯ ಸಂದೇಶವನ್ನು ಸ್ವೀಕರಿಸುವವರಲ್ಲಿ ಸ್ತ್ರೀಯರಿಗಿಂತ ಪುರುಷರು ಕಡಿಮೆ. ಕೆಲವೊಂದು ಸಂಸ್ಕೃತಿಗಳಲ್ಲಿ ಗಂಡಸರು, ಆಧ್ಯಾತ್ಮಿಕ ವಿಷಯಗಳನ್ನು ಮತ್ತು ಧರ್ಮದ ಬಗ್ಗೆ ಮಕ್ಕಳಿಗೆ ಕಲಿಸಿಕೊಡುವ ಜವಾಬ್ದಾರಿಯನ್ನು ಹೆಂಗಸರಿಗೆ ಬಿಟ್ಟುಬಿಡುತ್ತಾರೆ. ಹೀಗಿರುವುದರಿಂದ ಹೆಚ್ಚೆಚ್ಚು ಪುರುಷರು ತಮ್ಮ ಆಧ್ಯಾತ್ಮಿಕ ಅಗತ್ಯವನ್ನು ಅರಿತುಕೊಳ್ಳಲು ಮತ್ತು ಸತ್ಯಾರಾಧನೆಯಲ್ಲಿ ನಮ್ಮನ್ನು ಜೊತೆಗೂಡಲು ನಾವೇನು ಮಾಡಬಹುದು?
2. ಪೌಲ ಮತ್ತು ಪೇತ್ರನು ಪುರುಷರಿಗೆ ಸಾಕ್ಷಿಕೊಟ್ಟಾಗ ಯಾವ ಒಳ್ಳೇ ಫಲಿತಾಂಶಗಳು ಸಿಕ್ಕಿದವು?
2 ಪುರುಷರಿಗೆ ಸಾಕ್ಷಿಕೊಡಿರಿ: ಕುಟುಂಬದ ಶಿರಸ್ಸು ಸತ್ಯವನ್ನು ಸ್ವೀಕರಿಸುವಾಗ ಅನೇಕವೇಳೆ ತನ್ನ ಮನೆಮಂದಿ ಸಹ ಶುದ್ಧಾರಾಧನೆಯಲ್ಲಿ ಜೊತೆಗೂಡುವಂತೆ ಮಾಡಬಲ್ಲನು. ಉದಾಹರಣೆಗೆ, ಸಾರುವ ಕೆಲಸದ ನಿಮಿತ್ತ ಸೆರೆಯಲ್ಲಿದ್ದ ಪೌಲ ಸೀಲರು ಸೆರೆಮನೆಯ ಯಜಮಾನನಿಗೆ ಸಾಕ್ಷಿಕೊಟ್ಟರು. ಆಗ ಅವನು ಮಾತ್ರವಲ್ಲ ಅವನ ಮನೆಯವರೆಲ್ಲರೂ ದೀಕ್ಷಾಸ್ನಾನಹೊಂದಿದರು. (ಅ. ಕಾ. 16:25-34) ಕೊರಿಂಥದಲ್ಲಿ ಪೌಲನ ಸಾಕ್ಷಿಕಾರ್ಯದಿಂದಾಗಿ “ಸಭಾಮಂದಿರದ ಸಭಾಪತಿಯಾದ ಕ್ರಿಸ್ಪನೂ ಅವನ ಮನೆಯವರೆಲ್ಲರೂ ಕರ್ತನಲ್ಲಿ ನಂಬಿಕೆಯಿಡುವವರಾದರು.” (ಅ. ಕಾ. 18:8) ಯೆಹೋವನ ನಿರ್ದೇಶನದ ಮೇರೆಗೆ ಪೇತ್ರನು ‘ದೇವಭಕ್ತನೂ ದೇವರಿಗೆ ಭಯಪಡುವವನೂ’ ಆದ ಸೇನಾಧಿಕಾರಿ ಕೊರ್ನೇಲ್ಯನಿಗೆ ಸಾಕ್ಷಿಕೊಟ್ಟನು. ಫಲಿತಾಂಶ? ಅವನೂ ಅವನ ಬಂಧುಮಿತ್ರರೂ ದೀಕ್ಷಾಸ್ನಾನಹೊಂದಿದರು.—ಅ. ಕಾ. 10:1-48.
3. ಫಿಲಿಪ್ಪನನ್ನು ಅನುಕರಿಸುತ್ತಾ, “ಉನ್ನತ ಸ್ಥಾನದಲ್ಲಿರುವ” ಯಾರಿಗೆ ನೀವು ಸಾಕ್ಷಿಕೊಡಬಲ್ಲಿರಿ?
3 “ಉನ್ನತ ಸ್ಥಾನದಲ್ಲಿರುವ” ಪುರುಷರಿಗೆ ಸಾಕ್ಷಿಕೊಡುವುದು ಬಹು ವ್ಯಾಪಕ ಪರಿಣಾಮಬೀರಬಲ್ಲದು. (1 ತಿಮೊ. 2:1, 2) ಉದಾಹರಣೆಗೆ, ಇಥಿಯೋಪ್ಯದ ರಾಣಿಯ ಖಜಾನೆಯ “ಮುಖ್ಯ ಅಧಿಕಾರಿಯಾಗಿದ್ದ” ಒಬ್ಬ ಪುರುಷನೊಟ್ಟಿಗೆ ಮಾತಾಡಲು ಯೆಹೋವನ ದೂತನು ಫಿಲಿಪ್ಪನನ್ನು ನಿರ್ದೇಶಿಸಿದನು. ಆ ಅಧಿಕಾರಿ “ಯೆಶಾಯ ಪ್ರವಾದಿಯ ಗ್ರಂಥವನ್ನು ಗಟ್ಟಿಯಾಗಿ ಓದುತ್ತಿರುವುದನ್ನು” ಕೇಳಿಸಿಕೊಂಡ ಫಿಲಿಪ್ಪನು ಯೇಸುವಿನ ಕುರಿತ ಸುವಾರ್ತೆಯನ್ನು ಅವನಿಗೆ ವಿವರಿಸಿದನು. ಈ ಇಥಿಯೋಪ್ಯ ಪುರುಷನು ಯೇಸುವಿನ ಶಿಷ್ಯನಾದನು ಮಾತ್ರವಲ್ಲ ತನ್ನ ಸ್ವದೇಶಕ್ಕೆ ಹೋಗುವ ಮಾರ್ಗದುದ್ದಕ್ಕೂ ಸುವಾರ್ತೆಯನ್ನು ಹಬ್ಬಿಸಿರಲೂಬಹುದು. ಸುವಾರ್ತೆ ಕೇಳಿಸಿಕೊಳ್ಳುವ ಸಂದರ್ಭ ತೀರ ವಿರಳವಾಗಿದ್ದಂಥ ರಾಣಿಗೂ ಆಕೆಯ ಆಸ್ಥಾನದಲ್ಲಿದ್ದವರಿಗೂ ಅವನು ಸಾಕ್ಷಿ ಕೊಟ್ಟಿರಬಹುದು.—ಅ. ಕಾ. 8:26-39.
4. ಸುವಾರ್ತೆಯನ್ನು ಕೇಳಿಸಿಕೊಳ್ಳಲು ನಾವು ಪುರುಷರಿಗೆ ಹೇಗೆ ಹೆಚ್ಚು ಅವಕಾಶ ಕೊಡಬಲ್ಲೆವು?
4 ಹೆಚ್ಚು ಪುರುಷರನ್ನು ಸಂಪರ್ಕಿಸುವ ವಿಧ: ಗಂಡಸರು ಹೆಚ್ಚಾಗಿ ಇಡೀ ದಿನ ಕೆಲಸದ ಸ್ಥಳದಲ್ಲಿರುವುದರಿಂದ ಸಂಜೆಯಲ್ಲಿ, ವಾರಾಂತ್ಯದಲ್ಲಿ ಇಲ್ಲವೆ ರಜಾದಿನಗಳಂದು ಹೆಚ್ಚು ಸೇವೆಮಾಡಲು ನೀವು ಸಮಯ ಮಾಡಿಕೊಳ್ಳಬಲ್ಲಿರೋ? ವ್ಯಾಪಾರದ ಕ್ಷೇತ್ರಗಳಲ್ಲೂ ಕ್ರಮವಾಗಿ ಸೇವೆಮಾಡುವ ಮೂಲಕ ಮನೆಯಲ್ಲಿ ಸಿಗದ ಪುರುಷರನ್ನು ಸಂಪರ್ಕಿಸಲು ಹೆಚ್ಚು ಅವಕಾಶ ಸಿಗುವುದು. ಸಹೋದರರು ಸಹ ತಮ್ಮೊಟ್ಟಿಗೆ ಕೆಲಸಮಾಡುವ ಪುರುಷರಿಗೆ ಅನೌಪಚಾರಿಕವಾಗಿ ಸಾಕ್ಷಿಕೊಡಲು ಹೆಚ್ಚು ಪ್ರಯತ್ನ ಮಾಡಬಹುದು. ಮನೆಮನೆ ಸೇವೆಯಲ್ಲಿ, ಅದರಲ್ಲೂ ಆಗಾಗ್ಗೆ ಆವರಿಸಿರುವ ಟೆರಿಟೊರಿಯಲ್ಲಿ ಕೆಲವೊಮ್ಮೆ ಸಹೋದರರು ಮನೆಯ ಯಜಮಾನರೊಂದಿಗೆ ಮಾತಾಡಲು ಕೇಳಬಹುದು.
5. ಒಬ್ಬ ಪುರುಷನು ರಾಜ್ಯ ಸಂದೇಶಕ್ಕೆ ಒಳ್ಳೇ ಪ್ರತಿಕ್ರಿಯೆ ತೋರಿಸಿದರೆ ಸಹೋದರಿಯೊಬ್ಬಳು ಏನು ಮಾಡಬೇಕು?
5 ಸತ್ಯಕ್ಕೆ ಒಳ್ಳೇ ಪ್ರತಿಕ್ರಿಯೆ ತೋರಿಸುವ ಪುರುಷನನ್ನು ಪುನಃ ಭೇಟಿಮಾಡಲು ಸಹೋದರಿಯರು ಒಬ್ಬರೇ ಹೋಗಬಾರದು. ಗಂಡನನ್ನೊ ಪ್ರಚಾರಕರೊಬ್ಬರನ್ನೊ ಜೊತೆಯಲ್ಲಿ ಕರಕೊಂಡು ಹೋಗಬೇಕು. ಆ ವ್ಯಕ್ತಿಗೆ ಇನ್ನೂ ಆಸಕ್ತಿ ಇದೆಯೆಂದು ಕಂಡಲ್ಲಿ ಆ ಪುನರ್ಭೇಟಿಯನ್ನು ಅರ್ಹ ಸಹೋದರನಿಗೆ ಒಪ್ಪಿಸುವುದು ಉತ್ತಮ.
6. ‘ಹೆಚ್ಚು ಜನರನ್ನು ಗಳಿಸುವ’ ಉದ್ದೇಶದಿಂದ ನಾವು ಅಪೊಸ್ತಲ ಪೌಲನನ್ನು ಹೇಗೆ ಅನುಕರಿಸಬಲ್ಲೆವು?
6 ಅವರಿಗೆ ಆಸಕ್ತಿಯಿರುವ ವಿಷಯ ಆಯ್ಕೆಮಾಡಿ: ಅಪೊಸ್ತಲ ಪೌಲನು ತನ್ನ ಕೇಳುಗರನ್ನು ಮನಸ್ಸಿನಲ್ಲಿಟ್ಟು ತನ್ನ ಮಾತುಗಳನ್ನು ಹೊಂದಿಸುತ್ತಿದ್ದನು. ಏಕೆ? ‘ಹೆಚ್ಚು ಜನರನ್ನು ಗಳಿಸಲಿಕ್ಕಾಗಿಯೇ.’ (1 ಕೊರಿಂ. 9:19-23) ಅದೇ ರೀತಿಯಲ್ಲಿ, ನಾವು ಭೇಟಿಯಾಗಬಹುದಾದ ಪುರುಷರಿಗೆ ಹಿಡಿಸುವ ವಿಷಯಗಳನ್ನು ಮನಸ್ಸಿನಲ್ಲಿಟ್ಟು ಏನು ಮಾತಾಡಬೇಕೆಂದು ತಯಾರಿಸಬೇಕು. ಉದಾಹರಣೆಗೆ, ಪುರುಷರಿಗೆ ಹೆಚ್ಚಾಗಿ ಆರ್ಥಿಕ ಸಮಸ್ಯೆ, ಒಳ್ಳೇ ಸರಕಾರ ಮತ್ತು ಕುಟುಂಬದ ಸುರಕ್ಷೆ, ಭದ್ರತೆ ಬಗ್ಗೆ ಚಿಂತೆಯಿರುತ್ತದೆ. ಜೀವನದ ಉದ್ದೇಶವೇನು, ಭೂಮಿಗೆ ಏನಾಗಲಿದೆ ಮತ್ತು ಕಷ್ಟಸಂಕಟವನ್ನು ದೇವರು ಏಕೆ ಬಿಟ್ಟಿದ್ದಾನೆ ಎಂಬಂಥ ವಿಷಯಗಳಲ್ಲೂ ಆಸಕ್ತಿಯಿರಬಹುದು. ಅವರಿಗೆ ಸಾಕ್ಷಿಕೊಡುವಾಗ ಇಂಥ ಸಂಗತಿಗಳನ್ನು ಸೇರಿಸಿದರೆ ಅವರು ರಾಜ್ಯ ಸಂದೇಶಕ್ಕೆ ಉತ್ತಮ ಪ್ರತಿಕ್ರಿಯೆ ತೋರಿಸುವರು.—ಜ್ಞಾನೋ. 16:23.
7. ಕೂಟಕ್ಕೆ ಹಾಜರಾಗುವ ಅವಿಶ್ವಾಸಿ ಗಂಡಂದಿರ ಮೇಲೆ ಸಭೆಯವರೆಲ್ಲರೂ ಹೇಗೆ ಒಳ್ಳೇ ಪರಿಣಾಮ ಬೀರಬಲ್ಲರು?
7 ಅವಿಶ್ವಾಸಿ ಗಂಡಂದಿರಿಗೆ ಸಹಾಯಮಾಡಲು ಮುಂದಾಗಿ: ನಮ್ಮ ಕ್ರೈಸ್ತ ಸಹೋದರಿಯರ ಉತ್ತಮ ನಡತೆ ಅವರ ಅವಿಶ್ವಾಸಿ ಗಂಡಂದಿರ ಮೇಲೆ ಹೆಚ್ಚು ಪ್ರಭಾವಬೀರುತ್ತದೆ ನಿಜ. ಆದರೆ ಸಭೆಯವರು ಸಹ ಒಳ್ಳೇ ಪರಿಣಾಮ ಬೀರಬಲ್ಲರು. (1 ಪೇತ್ರ 3:1-4) ಉದಾಹರಣೆಗೆ ಅವಿಶ್ವಾಸಿ ಗಂಡನೊಬ್ಬನು ಹೆಂಡತಿಯೊಂದಿಗೆ ಕೂಟಕ್ಕೆ ಬರುವಾಗ ಸಭೆಯವರಿಂದ ಅವನಿಗೆ ಸಿಗುವ ಆದರದ ಸ್ವಾಗತವು ಬಲವಾದ ಸಾಕ್ಷಿ ಕೊಡುತ್ತದೆ. ಅವನು ಕೂಟಕ್ಕೆ ಬಂದಿರುವುದು ತಾನೇ ಅವನಿಗೆ ಸತ್ಯದಲ್ಲಿ ಸ್ವಲ್ಪವಾದರೂ ಆಸಕ್ತಿಯಿದೆಯೆಂದು ತೋರಿಸುತ್ತದಲ್ಲವೇ? ಮುಂದೆ ಅವನು ಬೈಬಲ್ ಅಧ್ಯಯನಕ್ಕೆ ಒಪ್ಪಿಕೊಳ್ಳಲೂಬಹುದು.
8. ಸತ್ಯದಲ್ಲಿ ಕೊಂಚ ಆಸಕ್ತಿ ತೋರಿಸಿರುವ ಅವಿಶ್ವಾಸಿ ಗಂಡಂದಿರಿಗೆ ಸಹಾಯಮಾಡಲು ಸಹೋದರರು ಹೇಗೆ ಮುಂದಾಗಬಹುದು?
8 ಕೆಲವು ಗಂಡಂದಿರಾದರೋ ಆರಂಭದಲ್ಲಿ ಆಧ್ಯಾತ್ಮಿಕ ವಿಷಯಗಳಲ್ಲಿ ಹೆಚ್ಚು ಆಸಕ್ತಿ ತೋರಿಸಲಿಕ್ಕಿಲ್ಲ. ಆದರೆ ಕ್ರಮೇಣ, ಅವರಿಗೆ ಹಿಡಿಸುವ ಸಹೋದರನೊಂದಿಗೆ ಬೈಬಲಿನ ಕುರಿತು ಚರ್ಚಿಸಲು ಮನಸ್ಸುಮಾಡಬಹುದು. ಒಂದು ಸಭೆಯಲ್ಲಿದ್ದ ಸಹೋದರರು ಸಹೋದರಿಯೊಬ್ಬಳ ಕುಟುಂಬವನ್ನು ಭೇಟಿಮಾಡಲು ಹೋಗುತ್ತಿದ್ದಾಗ ಆಕೆಯ ಅವಿಶ್ವಾಸಿ ಗಂಡನನ್ನು ಮಾತಾಡಿಸಲು ಪ್ರಯತ್ನಿಸುತ್ತಿದ್ದರು. ಅವನಿಗೆ ಇಷ್ಟವಾಗುತ್ತಿದ್ದ ವಿಷಯಗಳನ್ನು ತಿಳಿದುಕೊಂಡು ಆ ಬಗ್ಗೆ ಮಾತಾಡುತ್ತಿದ್ದರು. ಕ್ರಮೇಣ ಅವರ ಮಾತುಕತೆಗಳು ಆಧ್ಯಾತ್ಮಿಕ ವಿಷಯಗಳೆಡೆಗೆ ತಿರುಗಿದವು. ಈಗವನು ಸ್ನಾತ ಸಹೋದರ. ಇನ್ನೊಬ್ಬ ಸಹೋದರನು ಮನೆಯ ಸುತ್ತ ಬೇಲಿಹಾಕಲು ಸ್ನೇಹಭಾವದ ಅವಿಶ್ವಾಸಿ ಗಂಡನೊಬ್ಬನಿಗೆ ಸಹಾಯಮಾಡಿದನು. ಹೀಗೆ ವೈಯಕ್ತಿಕ ಆಸಕ್ತಿ ತೋರಿಸಿದ್ದರಿಂದ ಅವನೊಂದಿಗೆ ಒಂದು ಬೈಬಲ್ ಅಧ್ಯಯನ ಆರಂಭಿಸಲು ಸಾಧ್ಯವಾಯಿತು. (ಗಲಾ. 6:10; ಫಿಲಿ. 2:4) ಕ್ರೈಸ್ತ ಸಹೋದರರೇ, ಅವಿಶ್ವಾಸಿ ಗಂಡಂದಿರಲ್ಲಿ ಕಡಿಮೆಪಕ್ಷ ಒಬ್ಬರಿಗೆ ಸಹಾಯಮಾಡಲು ನೀವೇಕೆ ಮುಂದಾಗಬಾರದು?
9. ಕ್ರೈಸ್ತ ಪುರುಷರ ತರಬೇತಿಯಿಂದ ಯಾವ ಫಲಿತಾಂಶ ಸಿಗಬಹುದು?
9 ಭಾವೀ ಜವಾಬ್ದಾರಿಗಳಿಗಾಗಿ ತರಬೇತಿ: ರಾಜ್ಯ ಸಂದೇಶಕ್ಕೆ ಪ್ರತಿಕ್ರಿಯೆ ತೋರಿಸಿ ಕ್ರೈಸ್ತರಾಗುವ ಪುರುಷರು ಸಭಾ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿಕ್ಕಾಗಿ ಅರ್ಹರಾಗಲು ಪ್ರಯತ್ನಿಸಬಹುದು. ಮುಂದಕ್ಕೆ ಅವರು ‘ಮನುಷ್ಯರಲ್ಲಿ ದಾನಗಳು’ ಅಂದರೆ ಕ್ರೈಸ್ತ ಹಿರಿಯರಾಗಬಹುದು. ಈ ಹಿರಿಯರು ತಮ್ಮ ಬುದ್ಧಿಶಕ್ತಿ, ಸಾಮರ್ಥ್ಯಗಳನ್ನು ಯೆಹೋವನ ಜನರ ಸಭೆಗಳಿಗೋಸ್ಕರ ಬಳಸುತ್ತಾರೆ. (ಎಫೆ. 4:8; ಕೀರ್ತ. 68:18) ಸಭೆಯನ್ನು ಇಚ್ಛಾಪೂರ್ವಕವಾಗಿಯೂ ಸಿದ್ಧಮನಸ್ಸಿನಿಂದಲೂ ಪರಿಪಾಲನೆ ಮಾಡುತ್ತಾರೆ. (1 ಪೇತ್ರ 5:2, 3) ಹೀಗೆ ಅವರು ಸಹೋದರರ ಇಡೀ ಬಳಗಕ್ಕೆ ದೊಡ್ಡ ಆಶೀರ್ವಾದವಾಗುತ್ತಾರೆ.
10. ಪೌಲನಿಗೆ ನೆರವು ನೀಡಲು ಅನನೀಯನು ಮಾಡಿದ ಪ್ರಯತ್ನದಿಂದ ಹೇಗೆ ಅನೇಕರಿಗೆ ಪ್ರಯೋಜನವಾಗಿದೆ?
10 ದೃಷ್ಟಾಂತಕ್ಕೆ, ಕಾಲಾನಂತರ ‘ಅನ್ಯಜನಾಂಗಗಳವರಿಗೆ ಅಪೊಸ್ತಲನಾದ’ ಸೌಲನನ್ನು ಪರಿಗಣಿಸಿ. ಅವನು ಒಂದುಕಾಲದಲ್ಲಿ ಕ್ರೈಸ್ತರನ್ನು ಹಿಂಸಿಸುತ್ತಿದ್ದನು. (ರೋಮ. 11:13) ಈ ಕಾರಣದಿಂದಲೇ ಶಿಷ್ಯ ಅನನೀಯನು ಆರಂಭದಲ್ಲಿ ಅವನಿಗೆ ಸಾರಲು ಹಿಂದೇಟುಹಾಕಿದನು. ಹೀಗಿದ್ದರೂ ಅನನೀಯನು ಕರ್ತನ ನಿರ್ದೇಶನವನ್ನು ಪಾಲಿಸಿ ಅವನೊಂದಿಗೆ ಮಾತಾಡಿದನು. ಆ ಪುರುಷನು ಅಪೊಸ್ತಲ ಪೌಲನಾದನು. ಅನೇಕ ವರ್ಷಗಳ ವರೆಗೆ ಪೌಲನು ನಡೆಸಿದ ಶುಶ್ರೂಷೆಯಿಂದಾಗಿ ಸಾವಿರಾರು ಮಂದಿ ಪ್ರಯೋಜನ ಹೊಂದಿದರು. ಅಲ್ಲದೆ, ದೇವರ ವಾಕ್ಯದಲ್ಲಿ ದಾಖಲಾಗಿರುವ ಅವನ ದೇವಪ್ರೇರಿತ ಪತ್ರಗಳಿಂದ ಲಕ್ಷಗಟ್ಟಲೆ ಮಂದಿ ಈಗಲೂ ಪ್ರಯೋಜನ ಪಡೆಯುತ್ತಿದ್ದಾರೆ.—ಅ. ಕಾ. 9:3-19; 2 ತಿಮೊ. 3:16, 17.
11. ಪುರುಷರಿಗೆ ಸಾಕ್ಷಿಕೊಡಲು ಬೇಕಾದ ಹೊಂದಾಣಿಕೆಗಳನ್ನು ನಾವೇಕೆ ಮಾಡಬೇಕು?
11 ಹೀಗಿರುವುದರಿಂದ ಪುರುಷರಿಗೆ ಸಾಕ್ಷಿಕೊಡುವ ಸವಾಲನ್ನು ಸ್ವೀಕರಿಸಲು ಬೇಕಾದ ಯಾವುದೇ ಹೊಂದಾಣಿಕೆಗಳನ್ನು ಮಾಡೋಣ. ಯೆಹೋವನ ಚಿತ್ತವನ್ನು ಪೂರೈಸುವ ಹಾಗೂ ರಾಜ್ಯಾಭಿರುಚಿಗಳನ್ನು ಪ್ರವರ್ಧಿಸುವ ನಿಟ್ಟಿನಲ್ಲಿ ನಾವು ಪುರುಷರಿಗೆ ಸಾಕ್ಷಿಕೊಡಲು ಮಾಡುವ ಶ್ರದ್ಧಾಪೂರ್ವಕ ಪ್ರಯತ್ನಗಳನ್ನು ಆತನು ಹರಸುವನೆಂಬ ಭರವಸೆ ನಮಗಿದೆ.