ವಿರೋಧವನ್ನು ಎದುರಿಸಲು ಹೊಸಬರನ್ನು ಸಿದ್ಧಗೊಳಿಸಿರಿ
1 ಜನರು ಬೈಬಲ್ ಸತ್ಯವನ್ನು ಕಲಿಯಲಾರಂಭಿಸುವಾಗ ಮತ್ತು ‘ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವಾಗ’ ಸೈತಾನನು ಅವರನ್ನು ಬಹಳ ವಿರೋಧಕ್ಕೆ ಗುರಿಮಾಡಲು ಪ್ರಯತ್ನಿಸುತ್ತಾನೆ. (2 ತಿಮೊ. 3:12) ಸಹೋದ್ಯೋಗಿಗಳಿಂದ, ಸಹಪಾಠಿಗಳಿಂದ ಅಥವಾ ನೆರೆಯವರಿಂದಲೂ ವಿರೋಧ ಬರಬಹುದು. ಸಂಬಂಧಿಕರು ತಾವು ಒಳ್ಳೇದನ್ನು ಕೋರುತ್ತೇವೆಂದು ನೆನಸಿ ಹೊಸಬರನ್ನು ವಿರೋಧಿಸುವಾಗಲಂತೂ ಅದನ್ನು ಸಹಿಸಲು ಅವರಿಗೆ ತುಂಬಾ ಕಷ್ಟಕರ.—ಮತ್ತಾ. 10:21; ಮಾರ್ಕ 3:21.
2 ವಿರೋಧವು ಮುಂತಿಳಿಸಲ್ಪಟ್ಟಿದೆ: ಹಿಂಸೆ ಬಂದೇಬರುವುದೆಂದೂ ಅದು ಯೇಸುವಿನ ನಿಜ ಶಿಷ್ಯರಾಗುವುದನ್ನು ಸೂಚಿಸುತ್ತದೆಂದೂ ಹೊಸಬರು ಅರ್ಥಮಾಡಿಕೊಳ್ಳಬೇಕು. (ಯೋಹಾ. 15:20) ಕೆಲವೊಮ್ಮೆ ವಿರೋಧವು ಯೆಹೋವನ ಸಾಕ್ಷಿಗಳ ಬಗ್ಗೆ ಜನರಿಗಿರುವ ತಪ್ಪಾಭಿಪ್ರಾಯದಿಂದಲೂ ಬರಬಹುದು. ಆದರೆ, ದೇವರಿಗೆ ವಿಧೇಯರಾಗಿರುವ ಮತ್ತು ಯೇಸುವಿನ ಹಿಂಬಾಲಕರಾಗಿರುವ ಕಾರಣಕ್ಕಾಗಿ ಅವಮಾನಹೊಂದುವುದರಿಂದ ಅಪಾರ ಸಂತೋಷ ಸಿಗುತ್ತದೆ ಎಂಬುದನ್ನು ಮನಸ್ಸಿನಲ್ಲಿಡಿ. (ಅ. ಕೃ. 5:27-29, 40, 41) ಹೊಸಬರಿಗೆ ಯೆಹೋವನ ಪ್ರೀತಿಯ ಬೆಂಬಲದ ಆಶ್ವಾಸನೆ ಕೊಡಿ. (ಕೀರ್ತ. 27:10; ಮಾರ್ಕ 10:29, 30) ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವುದರಿಂದ ಅವರು ವಿಶ್ವಪರಮಾಧಿಕಾರದ ವಿವಾದಾಂಶದಲ್ಲಿ ಯೆಹೋವನ ಪಕ್ಷದಲ್ಲಿ ನಿಲ್ಲುವಂತಾಗುವುದು.—ಜ್ಞಾನೋ. 27:11.
3 ನಿಷ್ಕೃಷ್ಟ ಜ್ಞಾನದ ಪಾತ್ರ: ನಿಮ್ಮ ಬೈಬಲ್ ವಿದ್ಯಾರ್ಥಿಗಳು ವಿರೋಧದ ಮಧ್ಯದಲ್ಲಿಯೂ ನಿಷ್ಕೃಷ್ಟ ಜ್ಞಾನವನ್ನು ಪಡೆಯುತ್ತಾ ಮುಂದುವರಿಯುವ ಮಹತ್ವವನ್ನು ಅವರ ಮನಸ್ಸಿನಲ್ಲಿ ಅಚ್ಚೊತ್ತಿರಿ. ಅವರು ಕಲಿಯುವ ವಿಷಯವು ಅವರ ಹೃದಯದಲ್ಲಿ ಬೇರೂರದಂತೆ ತಡೆಯಲು ಸೈತಾನನು ವಿರೋಧವನ್ನು ತರುತ್ತಾನೆ. (ಜ್ಞಾನೋ. 4:23; ಲೂಕ 8:13) ಆದ್ದರಿಂದ, ನಂಬಿಕೆಯಲ್ಲಿ ಆಳವಾಗಿ ಬೇರೂರಲು ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನವನ್ನು ಅವರು ಪಡೆದುಕೊಳ್ಳುತ್ತಾ ಇರಬೇಕು.—ಕೀರ್ತ. 1:2, 3; ಕೊಲೊ. 2:6, 7.
4 ತಾಳ್ಮೆ ಅವಶ್ಯ: ಯಾವುದೇ ಕಷ್ಟಕರ ಸನ್ನಿವೇಶದಲ್ಲಿ ತಾಳ್ಮೆ ಅತ್ಯಾವಶ್ಯಕ ಮತ್ತು ಅದು ಉತ್ತಮ ಫಲಿತಾಂಶಗಳನ್ನು ತರುತ್ತದೆ. (ಲೂಕ 21:16-19) ಹೊಸಬರು ವಿರೋಧಗಳನ್ನು ತಾಳಿಕೊಳ್ಳುವುದರಿಂದ ಅವರಿಗೂ ಇತರರಿಗೂ ಪ್ರಯೋಜನಕಾರಿ. ಹೀಗೆ ನಂಬಿಗಸ್ತಿಕೆಯಿಂದ ತಾಳಿಕೊಳ್ಳುವವರನ್ನು ಯೆಹೋವನು ಹೇರಳವಾಗಿ ಆಶೀರ್ವದಿಸಲು ಶಕ್ತನು ಎಂಬುದನ್ನು ಅವರು ಕಾಣುವರು.—ಯಾಕೋ. 1:12.
5 ಥೆಸಲೊನೀಕ ಸಭೆಯ ಸಹೋದರರ ಆಧ್ಯಾತ್ಮಿಕ ಅಭಿವೃದ್ಧಿ ಕಂಡು ಪೌಲನು ಆನಂದಿಸಿದನು. ಸತ್ಯ ಕಲಿಯಲು ತಾನು ಸಹಾಯಮಾಡಿದ ಅಂಥ ಅನೇಕರಿಗಾಗಿ ಅವನು ದೇವರಿಗೆ ಕೃತಜ್ಞತೆ ಸಲ್ಲಿಸಿದನು. (2 ಥೆಸ. 1:3-5) ವಿರೋಧವನ್ನು ಎದುರಿಸಲು ಮತ್ತು ತಾಳಿಕೊಳ್ಳಲು ನಮ್ಮ ಬೈಬಲ್ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದಾದರೆ ನಾವು ಕೂಡ ತದ್ರೀತಿಯ ಆನಂದ ಹಾಗೂ ಸಂತೃಪ್ತಿಯನ್ನು ಅನುಭವಿಸಬಲ್ಲೆವು.