ಹಂಚಲು ಅಮೂಲ್ಯ ನಿಕ್ಷೇಪಗಳು ನಮ್ಮಲ್ಲಿವೆ
1 ನಾವು ಅಮೂಲ್ಯವೆಂದೆಣಿಸುವ ಆಧ್ಯಾತ್ಮಿಕ ನಿಕ್ಷೇಪಗಳು ದೇವರ ವಾಕ್ಯದಲ್ಲಿ ಹೇರಳವಾಗಿವೆ. (ಕೀರ್ತ. 12:6; 119:11, 14) ದೇವರ ರಾಜ್ಯದ ವಿಭಿನ್ನ ವೈಶಿಷ್ಟ್ಯಗಳನ್ನು ವಿವರಿಸಲು ಯೇಸು ದೃಷ್ಟಾಂತಗಳನ್ನು ಉಪಯೋಗಿಸಿದ ಬಳಿಕ ತನ್ನ ಶಿಷ್ಯರಿಗೆ, “ಈ ಎಲ್ಲಾ ಮಾತುಗಳ ಅರ್ಥವು ನಿಮಗೆ ತಿಳಿಯಿತೋ” ಎಂದು ಪ್ರಶ್ನಿಸಿದನು. ಅವರು ತಿಳಿಯಿತು ಎಂದು ಹೇಳಿದಾಗ ಯೇಸು ಮುಂದುವರಿಸುತ್ತಾ ಹೇಳಿದ್ದು: “ಹೀಗಿರಲಾಗಿ ಪರಲೋಕರಾಜ್ಯದ ವಿಷಯವಾಗಿ ಉಪದೇಶಹೊಂದಿ ಶಿಕ್ಷಿತನಾದ ಪ್ರತಿಯೊಬ್ಬ ಶಾಸ್ತ್ರೋಪದೇಶಕನು ಮನೇಯಜಮಾನನಿಗೆ ಹೋಲಿಕೆಯಾಗಿದ್ದಾನೆ. ಅವನು ತನ್ನ ಬೊಕ್ಕಸದೊಳಗಿಂದ ಹೊಸ ವಸ್ತುಗಳನ್ನೂ ಹಳೇ ವಸ್ತುಗಳನ್ನೂ ಹೊರಗೆ ತರುತ್ತಿರುವನು.”—ಮತ್ತಾ. 13:1-52.
2 ನಾವು ಮೊದಲು ಸತ್ಯವನ್ನು ಕಲಿಯಲು ಪ್ರಾರಂಭಿಸಿದಾಗ ಕಲಿತ ಬೈಬಲ್ ಸತ್ಯಗಳು ಈಗ ಹಳೇ ನಿಕ್ಷೇಪದಂತೆ ಕಾಣಬಹುದು. ವೈಯಕ್ತಿಕ ಅಧ್ಯಯನದ ಮೂಲಕ ದೇವರ ವಾಕ್ಯದ ಆಳವಾದ ವಿಷಯಗಳನ್ನು ಕಲಿಯುವಾಗ ಇನ್ನಿತರ ಬೈಬಲ್ ಸತ್ಯಗಳನ್ನೂ ನಾವು ಕಂಡುಕೊಳ್ಳುತ್ತೇವೆ. ಅವು ನಮಗೆ ಹೊಸ ನಿಕ್ಷೇಪಗಳಂತಿರುತ್ತವೆ. (1 ಕೊರಿಂ. 2:7) ಮಾತ್ರವಲ್ಲ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗದ ಮೂಲಕವೂ ನಾವು ಹೊಸ ಹೊಸ ನಿಕ್ಷೇಪಗಳನ್ನು ಪಡೆಯುತ್ತಾ ಇರುತ್ತೇವೆ.—ಮತ್ತಾ. 24:45.
3 ಈ ಹಳೇ ಮತ್ತು ಹೊಸ ಆಧ್ಯಾತ್ಮಿಕ ನಿಕ್ಷೇಪಗಳನ್ನು ನಾವು ತುಂಬಾ ಮಾನ್ಯಮಾಡುತ್ತೇವೆ. ಇದು ದೇವರ ವಾಕ್ಯದ ಬೋಧಕರಾಗಿ ತರಬೇತು ಹೊಂದಲು ಮತ್ತು ಅನುಭವ ಗಳಿಸಲು ನಮ್ಮನ್ನು ಉತ್ತೇಜಿಸುತ್ತದೆ. ಮಾತ್ರವಲ್ಲ ನಾವು ಕಲಿತ ಅಮೂಲ್ಯ ಸತ್ಯಗಳನ್ನು ಇತರರೊಂದಿಗೆ ಉದಾರವಾಗಿ ಹಂಚುವಂತೆಯೂ ಪ್ರಚೋದಿಸುತ್ತದೆ.
4 ಯೇಸುವಿನ ಮಾದರಿಯಿಂದ ಕಲಿಯಿರಿ: ಈ ನಿಕ್ಷೇಪಗಳನ್ನು ಇತರರಿಗೆ ಹಂಚಲು ಬಹಳ ಪ್ರಯಾಸಪಡುವ ಮೂಲಕ ಅವನ್ನು ತಾನೆಷ್ಟು ಅಮೂಲ್ಯವಾಗಿ ಎಣಿಸುತ್ತೇನೆಂದು ಯೇಸು ತೋರಿಸಿದನು. ಅವನು ದಣಿದಿದ್ದಾಗಲೂ ಆ ನಿಕ್ಷೇಪಗಳನ್ನು ಹೊರತೆಗೆದು ಹಂಚುವುದನ್ನು ನಿಲ್ಲಿಸಿರಲಿಲ್ಲ.—ಯೋಹಾ. 4:6-14.
5 ಆಧ್ಯಾತ್ಮಿಕವಾಗಿ ಬಡವರಾಗಿದ್ದವರ ಮೇಲೆ ಯೇಸುವಿಗಿದ್ದ ಪ್ರೀತಿಯು ದೇವರ ವಾಕ್ಯದಲ್ಲಿರುವ ಸತ್ಯದ ಜೀವದಾಯಕ ನಿಕ್ಷೇಪಗಳನ್ನು ಅವರಿಗೆ ಸಾರುವಂತೆ ಪ್ರಚೋದಿಸಿತು. (ಕೀರ್ತ. 72:13) ಅವನು ಆಧ್ಯಾತ್ಮಿಕವಾಗಿ ಹಸಿದಿದ್ದ ಜನರನ್ನು ಕಂಡು ಕನಿಕರಪಟ್ಟನು ಮತ್ತು “ಅವರಿಗೆ ಬಹಳ ಉಪದೇಶಮಾಡುತ್ತಿದ್ದನು.”—ಮಾರ್ಕ 6:34.
6 ಯೇಸುವನ್ನು ಅನುಸರಿಸಿರಿ: ನಮ್ಮಲ್ಲಿರುವ ನಿಕ್ಷೇಪಗಳನ್ನು ಅತ್ಯಮೂಲ್ಯವೆಂದು ಗಣ್ಯಮಾಡುವಾಗ, ಯೇಸುವಿನಂತೆ ನಾವೂ ತೀವ್ರಾಪೇಕ್ಷೆಯಿಂದ ಜನರಿಗೆ ಆಧ್ಯಾತ್ಮಿಕ ರತ್ನಗಳನ್ನು ಬೈಬಲಿನಿಂದಲೇ ನೇರವಾಗಿ ತೋರಿಸುವೆವು. (ಜ್ಞಾನೋ. 2:1-5) ಅಲ್ಲದೆ, ಕೆಲವೊಮ್ಮೆ ನಾವು ದಣಿದಿದ್ದರೂ ಬೈಬಲ್ ಸತ್ಯಗಳ ಬಗ್ಗೆ ಹೃತ್ಪೂರ್ವಕ ಉತ್ಸಾಹದಿಂದ ಮಾತಾಡುವೆವು. (ಮಾರ್ಕ 6:31-34) ನಿಕ್ಷೇಪಗಳಿಗಾಗಿ ನಮ್ಮಲ್ಲಿರುವ ಆಳವಾದ ಗಣ್ಯತೆಯು ಶುಶ್ರೂಷೆಯಲ್ಲಿ ನಮ್ಮಿಂದಾದುದೆಲ್ಲವನ್ನು ಮಾಡುತ್ತಾ ಯಾವಾಗಲೂ ಪೂರ್ಣವಾಗಿ ಪಾಲ್ಗೊಳ್ಳುವಂತೆ ಪ್ರೇರಿಸುವುದು.