ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ—ದಯೆ ತೋರಿಸುವ ಮೂಲಕ
1 ಯೆಹೋವನ ಸಾಕ್ಷಿಗಳ ಬಗ್ಗೆ ದುರಭಿಪ್ರಾಯವಿದ್ದ ಅಮೆರಿಕದ ಒಬ್ಬ ಮಹಿಳೆಯು, ಸಾಕ್ಷಿಗಳನ್ನು ಪ್ರಪ್ರಥಮ ಬಾರಿ ಭೇಟಿಯಾದ ಸಮಯವನ್ನು ಜ್ಞಾಪಿಸಿಕೊಳ್ಳುತ್ತಾ ಹೇಳಿದ್ದು: “ನಾವು ಯಾವ ವಿಷಯವಾಗಿ ಮಾತಾಡಿದೆವೆಂದು ನನಗೆ ನಿಜವಾಗಿಯೂ ನೆನಪಿಲ್ಲ, ಆದರೆ ಆಕೆ ನನಗೆ ತೋರಿಸಿದ ದಯೆ, ಅತಿಥಿಸತ್ಕಾರ ಮತ್ತು ದೀನತೆಯು ನನಗೆ ಚೆನ್ನಾಗಿ ನೆನಪಿದೆ. ನಾನು ಆಕೆಯ ಸ್ವಭಾವದ ಕಡೆಗೆ ನಿಜವಾಗಿ ಸೆಳೆಯಲ್ಪಟ್ಟೆ.” ಈ ಹೇಳಿಕೆಗಳು, ನಾವು ಯಾರಿಗೆ ಸಾರುತ್ತೇವೋ ಅವರಲ್ಲಿ ಯಥಾರ್ಥವಾದ ವೈಯಕ್ತಿಕ ಆಸಕ್ತಿಯನ್ನು ತೋರಿಸುವ ಮಹತ್ವವನ್ನು ಎತ್ತಿತೋರಿಸುತ್ತವೆ.—ಫಿಲಿ. 2:4.
2 ಪ್ರೀತಿಯು ದಯೆ ತೋರಿಸುವುದು: ಇತರರ ಕಡೆಗೆ ಪ್ರೀತಿಯನ್ನು ಪ್ರದರ್ಶಿಸುವ ಒಂದು ವಿಧವು ದಯೆ ತೋರಿಸುವ ಮೂಲಕವಾಗಿದೆ. (1 ಕೊರಿಂ. 13:4) ಒಬ್ಬ ದಯಾಪರ ವ್ಯಕ್ತಿಯು ಇತರರ ಕ್ಷೇಮದ ಕುರಿತು ಸಕ್ರಿಯ ಆಸಕ್ತಿಯನ್ನು ತೋರಿಸುತ್ತಾನೆ ಮತ್ತು ಅವರಿಗೆ ಸಹಾಯಕಾರಿಯಾಗಿರುವಂಥ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಾನೆ. ಸಾರುವ ಕೆಲಸವು ತಾನೇ ಒಂದು ದಯಾಪರ ಕೃತ್ಯವಾಗಿದೆ ನಿಜ. ಆದರೆ, ಜನರ ಕಡೆಗಿನ ನಮ್ಮ ನೈಜವಾದ ಕಾಳಜಿಯನ್ನು ಕೇವಲ ಸುವಾರ್ತೆ ಸಾರುವ ಮೂಲಕ ವ್ಯಕ್ತಪಡಿಸಲಾರೆವು. ಜನರೊಂದಿಗೆ ನಾವು ವ್ಯವಹರಿಸುವ ಪ್ರತಿಯೊಂದು ವಿಧವು ಅಂದರೆ ನಮ್ಮ ಸ್ನೇಹಪರತೆ, ನಮ್ಮ ಸಭ್ಯಾಚಾರಗಳು, ನಾವು ಕಿವಿಗೊಡುವಂತಹ ವಿಧಾನ, ನಾವು ನುಡಿಯುವ ಮಾತುಗಳು ಮತ್ತು ಅವುಗಳನ್ನು ಹೇಳುವ ರೀತಿ ಹಾಗೂ ನಮ್ಮ ಮುಖಭಾವವು ನಾವು ಅವರ ಕುರಿತು ನಿಜವಾಗಿ ಚಿಂತಿಸುತ್ತೇವೆ ಎಂಬುದನ್ನು ವ್ಯಕ್ತಪಡಿಸುವುದು.—ಮತ್ತಾ. 8:2, 3.
3 ಜನರ ಕಡೆಗಿರುವ ಪ್ರೀತಿಪರ ಕಾಳಜಿಯು ಅವರಿಗೆ ಪ್ರಾಯೋಗಿಕ ವಿಧದಲ್ಲಿ ಸಹಾಯ ನೀಡುವಂತೆಯೂ ನಮ್ಮನ್ನು ಪ್ರಚೋದಿಸುತ್ತದೆ. ಒಬ್ಬ ಪಯನೀಯರ್ ಸಹೋದರನು ಮನೆಯಿಂದ ಮನೆಗೆ ಸಾರುತ್ತಿರುವಾಗ, ವೃದ್ಧ ವಿಧವೆಯೊಬ್ಬಳು ಅವನು ಯೆಹೋವನ ಸಾಕ್ಷಿಯೆಂದು ತಿಳಿದ ನಂತರ ಅವನಿಗೆ ಹೊರಟುಹೋಗುವಂತೆ ಹೇಳಿದಳು. ಅವನು ಕರೆಗಂಟೆಯನ್ನು ಬಾರಿಸಿದಾಗ ತಾನು ಅಡುಗೆಮನೆಯಲ್ಲಿ ಲೈಟ್ ಬಲ್ಬನ್ನು ಬದಲಾಯಿಸಲು ಏಣಿಯನ್ನು ಹತ್ತಿದ್ದೆ ಎಂದು ಆ ವಿಧವೆ ಅವನಿಗೆ ತಿಳಿಸಿದಳು. ಅದಕ್ಕವನು “ನೀವೊಬ್ಬರೇ ಇದನ್ನು ಮಾಡುವುದು ಸುರಕ್ಷಿತವಲ್ಲ” ಎಂದು ಹೇಳಿದನು. ಆಗ ಆಕೆ ಅವನನ್ನು ಒಳಗೆ ಕರೆದಳು. ಅವನು ಆ ಬಲ್ಬನ್ನು ಬದಲಾಯಿಸಿ ಹೊರಟುಹೋದನು. ಸ್ವಲ್ಪ ಸಮಯದ ಅನಂತರ ಆಕೆಯ ಮಗನು ಆಕೆಯು ಹೇಗಿದ್ದಾಳೆಂದು ನೋಡಲು ಬಂದಾಗ ನಡೆದ ಸಂಗತಿಯನ್ನು ಆಕೆ ತಿಳಿಸಿದಳು. ಈ ವಿಷಯದಿಂದ ಅವನು ಎಷ್ಟು ಪ್ರಭಾವಿತನಾದನೆಂದರೆ, ತನ್ನ ಗಣ್ಯತೆಯನ್ನು ವ್ಯಕ್ತಪಡಿಸಲಿಕ್ಕಾಗಿ ಆ ಸಹೋದರನನ್ನು ಕಂಡುಕೊಳ್ಳಲು ಪ್ರಯತ್ನಿಸಿದನು. ಇದು ಅತ್ಯುತ್ತಮವಾದ ಒಂದು ಸಂಭಾಷಣೆಗೆ ನಡೆಸಿತು ಮತ್ತು ಪರಿಣಾಮವಾಗಿ ಆ ವಿಧವೆಯ ಮಗನು ಒಂದು ಬೈಬಲ್ ಅಧ್ಯಯನವನ್ನು ಸ್ವೀಕರಿಸಿದನು.
4 ದಯೆ ತೋರಿಸುವ ಮೂಲಕ ಜನರ ಕಡೆಗೆ ದೇವರಿಗಿರುವ ಪ್ರೀತಿಯನ್ನು ನಾವು ಪ್ರತಿಬಿಂಬಿಸುತ್ತೇವೆ ಮತ್ತು ರಾಜ್ಯ ಸಂದೇಶವನ್ನು ಅಲಂಕರಿಸುತ್ತೇವೆ. ಆದುದರಿಂದ, ನಾವು ಯಾವಾಗಲೂ ‘ಎಲ್ಲಾ ಸಂಗತಿಗಳಲ್ಲಿ ದೇವರ ಸೇವಕರೆಂದು ದಯೆಯ’ ಮೂಲಕ ತೋರಿಸೋಣ.—2 ಕೊರಿಂ. 6:4, 6.