ದೇವರ ವಾಕ್ಯವನ್ನು ಧೈರ್ಯದಿಂದ ಹೇಳುತ್ತಾ ಇರಿ
1 ಕ್ರೈಸ್ತ ಶುಶ್ರೂಷಕರಾದ ನಮಗೆ, ಎಲ್ಲರೂ ಸುವಾರ್ತೆಗೆ ಕಿವಿಗೊಡುವುದಿಲ್ಲ ಎಂದು ತಿಳಿದಿದೆ. (ಮತ್ತಾ. 10:14) ಆದರೆ ಈ ನಕಾರಾತ್ಮಕ ಪ್ರತಿಕ್ರಿಯೆಯು ಸುವಾರ್ತೆ ಸಾರುವುದರಿಂದ ನಮ್ಮನ್ನು ತಡೆಯುವಂತೆ ನಾವು ಅನುಮತಿಸುವುದಿಲ್ಲ. (ಜ್ಞಾನೋ. 29:25) ದೇವರ ವಾಕ್ಯವನ್ನು ಧೈರ್ಯದಿಂದ ಹೇಳುತ್ತಾ ಇರಲು ನಮಗೆ ಯಾವುದು ಸಹಾಯಮಾಡುತ್ತದೆ?
2 ಅಪೊಸ್ತಲ ಪೌಲನು “ಕ್ರಿಸ್ತ ಯೇಸುವಿನ ಜ್ಞಾನದ ಅತ್ಯುತ್ಕೃಷ್ಟ ಮೌಲ್ಯ”ವನ್ನು (NW) ಗಣ್ಯಮಾಡಿದನು. ಇದು ಅವನನ್ನು “ಬಹು ನಿಶ್ಚಯ”ದಿಂದ ಮಾತಾಡುವಂತೆ ಪ್ರೇರಿಸಿತು. (ಫಿಲಿ. 3:8; 1 ಥೆಸ. 1:5) ಕೆಲವರು ಅವನು ಸಾರಿದ ಸಂದೇಶವನ್ನು ಬಲಹೀನ ಹಾಗೂ ಬುದ್ಧಿಹೀನವಾದದ್ದೆಂದು ಪರಿಗಣಿಸಿದರೂ, ಅದು “ದೇವರ ಬಲಸ್ವರೂಪವಾಗಿದ್ದು . . . ನಂಬುವವರೆಲ್ಲರಿಗೂ ರಕ್ಷಣೆ ಉಂಟುಮಾಡುವಂಥದಾಗಿದೆ” ಎಂದು ಅವನಿಗೆ ತಿಳಿದಿತ್ತು. (ರೋಮಾ. 1:16) ಆದುದರಿಂದ, ವಿರೋಧವನ್ನು ಎದುರಿಸುವಾಗಲೂ ಅವನು ‘ಯೆಹೋವನ ಮೇಲೆ ಭರವಸವಿಟ್ಟು ಧೈರ್ಯದಿಂದ’ ಮಾತನಾಡಿದನು.—ಅ. ಕೃ. 14:1-7; 20:18-21, 24.
3 ನಮ್ಮ ಬಲದ ಮೂಲ: ಪೌಲನು ಧೈರ್ಯದಿಂದ ಸಾಕ್ಷಿ ನೀಡಲು ಸಾಧ್ಯವಾದದ್ದು ತನ್ನ ಸ್ವಂತ ಬಲದಿಂದಲ್ಲ. ಅವನು ತನ್ನ ಮತ್ತು ಸೀಲನ ಕುರಿತು ತಿಳಿಸುವಾಗ ಬರೆದುದು: ‘ನಮಗೆ ಫಿಲಿಪ್ಪಿ ಪಟ್ಟಣದಲ್ಲಿ ಹಿಂಸೆಯೂ ಅವಮಾನವೂ ಮೊದಲು ಸಂಭವಿಸಿದರೂ ನಾವು ನಮ್ಮ ದೇವರ ಮೂಲಕ ಧೈರ್ಯಗೊಂಡು ಬಹು ವಿರೋಧವನ್ನು ಅನುಭವಿಸುವವರಾಗಿ ನಿಮಗೆ ದೇವರ ಸುವಾರ್ತೆಯನ್ನು ತಿಳಿಸಿದ್ದೇವೆ.’ (1 ಥೆಸ. 2:2; ಅ. ಕೃ. 16:12, 37) ಮಾತ್ರವಲ್ಲ, ರೋಮ್ನಲ್ಲಿ ಪೌಲನು ಬಂಧಿಯಾಗಿದ್ದಾಗ, ಸುವಾರ್ತೆಯನ್ನು ‘ಯಾವ ರೀತಿಯಲ್ಲಿ ಮಾತಾಡಬೇಕೊ ಅದೇ ರೀತಿ ನಿರ್ಭಯದಿಂದ ಮಾತಾಡುವುದನ್ನು’ ಮುಂದುವರಿಸಲು ಇತರರು ತನಗೋಸ್ಕರ ಪ್ರಾರ್ಥಿಸುವಂತೆ ಕೇಳಿಕೊಂಡನು. (ಎಫೆ. 6:18-20, ಪರಿಶುದ್ಧ ಬೈಬಲ್) ಸ್ವತಃ ತನ್ನ ಮೇಲೆ ಅಲ್ಲ ಬದಲಾಗಿ, ಯೆಹೋವನ ಮೇಲೆ ಅವಲಂಬಿಸುವ ಮೂಲಕ ಪೌಲನು ದೇವರ ವಾಕ್ಯವನ್ನು ಧೈರ್ಯದಿಂದ ಹೇಳುತ್ತಾ ಇರಲು ಶಕ್ತನಾದನು.—2 ಕೊರಿಂ. 4:7; ಫಿಲಿ. 4:13.
4 ಈ ವಿಷಯವು ಇಂದು ಕೂಡ ಸತ್ಯವಾಗಿದೆ. ಒಬ್ಬ ಸಹೋದರನಿಗೆ ತನ್ನ ಕೆಲಸದ ಸ್ಥಳದಲ್ಲಿ ತಾನೊಬ್ಬ ಯೆಹೋವನ ಸಾಕ್ಷಿಯೆಂದು ಗುರುತಿಸಿಕೊಳ್ಳಲು ಮತ್ತು ಅನೌಪಚಾರಿಕವಾಗಿ ಸಾಕ್ಷಿಕೊಡಲು ಕಷ್ಟವಾಗುತ್ತಿತ್ತು. ಆದರೆ ಈ ವಿಷಯದ ಕುರಿತು ಅವನು ಪ್ರಾರ್ಥಿಸಿದನು ಮತ್ತು ಸಾಕ್ಷಿಕೊಡಲು ಪ್ರಾರಂಭಿಸಿದನು. ಒಬ್ಬ ಸಹೋದ್ಯೋಗಿಯು ಮೊದಮೊದಲು ಅವನು ಸಾಕ್ಷಿಕೊಡಲು ಮಾಡುತ್ತಿದ್ದ ಪ್ರಯತ್ನಗಳನ್ನು ನಿರಾಕರಿಸಿದನಾದರೂ, ಪುನರುತ್ಥಾನದ ನಿರೀಕ್ಷೆಯ ಕುರಿತಾದ ವಿಷಯವು ಒಂದು ಬೈಬಲ್ ಅಧ್ಯಯನಕ್ಕೆ ನಡೆಸಿತು. ಅಂದಿನಿಂದ ಈ ಸಹೋದರನು ಸಾಕ್ಷಿಕೊಡಲು ತನಗೆ ಸಿಕ್ಕಿದ ಪ್ರತಿಯೊಂದು ಸಂದರ್ಭವನ್ನು ಸದುಪಯೋಗಿಸಿದನು. ಅನಂತರ ತನ್ನ ಹೊಸ ಉದ್ಯೋಗದ ಸ್ಥಳದಲ್ಲಿ, 14 ವರ್ಷಗಳ ಕಾಲಾವಧಿಯಲ್ಲಿ 34 ಮಂದಿ ಜೊತೆಕೆಲಸಗಾರರು ದೀಕ್ಷಾಸ್ನಾನ ಹೊಂದುವಂತೆ ಅವನು ಸಹಾಯಮಾಡಿದನು. ಅದೇ ರೀತಿಯಲ್ಲಿ ನಾವು ‘ದೇವರ ವಾಕ್ಯವನ್ನು ಧೈರ್ಯದಿಂದ ಹೇಳುತ್ತಾ ಇರಲು’ ಯೆಹೋವನು ನಮ್ಮನ್ನು ಬಲಪಡಿಸುವನೆಂದು ಧೃಢಭರವಸೆಯಿಂದಿರಸಾಧ್ಯವಿದೆ.—ಅ. ಕೃ. 4:29.