ಮೌನ ಸಾಕ್ಷಿ
1 ಒಂದೇ ಒಂದು ಮಾತನ್ನೂ ಆಡದೆ, ಯೆಹೋವನ ಭೌತಿಕ ಸೃಷ್ಟಿಯು ಆತನ ಅದೃಶ್ಯ ಗುಣಗಳ ಕುರಿತಾಗಿ ಬಹಳಷ್ಟನ್ನು ಹೇಳುತ್ತದೆ. (ಕೀರ್ತ. 19:1-3; ರೋಮಾ. 1:20) ಇದೇ ರೀತಿಯಲ್ಲಿ ನಮ್ಮ ಉತ್ತಮ ನಡತೆ, ಕ್ರೈಸ್ತ ಗುಣಗಳು ಮತ್ತು ಸಭ್ಯ ತೋರಿಕೆಯು ಮೌನ ಸಾಕ್ಷಿಯನ್ನು ನೀಡುತ್ತವೆ. (1 ಪೇತ್ರ 2:12; 3:1-4) ಆದುದರಿಂದ, ನಾವು ನಡಕೊಳ್ಳುವ ರೀತಿಯಿಂದ ‘ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಅಲಂಕಾರವಾಗಿರಬೇಕು’ ಎಂಬುದೇ ನಮ್ಮಲ್ಲಿ ಪ್ರತಿಯೊಬ್ಬರ ಇಚ್ಛೆಯಾಗಿರಬೇಕು.—ತೀತ 2:10.
2 ಅಪರಿಪೂರ್ಣ ಮಾನವರಾದ ನಾವು ಹೇಗೆ ಬೈಬಲ್ ಬೋಧನೆಗಳಿಗೆ ಆಕರ್ಷಣೆಯನ್ನು ಕೂಡಿಸಬಲ್ಲೆವು? ದೇವರ ವಾಕ್ಯದ ಮಾರ್ಗದರ್ಶನ ಮತ್ತು ಪವಿತ್ರಾತ್ಮದ ಶಕ್ತಿಯಿಂದ ಮಾತ್ರ ಇದು ಸಾಧ್ಯ. (ಕೀರ್ತ. 119:105; 143:10) ದೇವರ ವಾಕ್ಯವು “ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು.” (ಇಬ್ರಿ. 4:12) ಅದು ನಮ್ಮೊಳಗೆ ಆಳವಾಗಿ ಪ್ರವೇಶಿಸಿ, ನೂತನಸ್ವಭಾವವನ್ನು [“ನೂತನ ವ್ಯಕ್ತಿತ್ವವನ್ನು,” NW] ಧರಿಸಿಕೊಳ್ಳಲು ಸಹಾಯಮಾಡುತ್ತದೆ. (ಕೊಲೊ. 3:9, 10) ದಯೆ, ಉಪಕಾರ, ಸಾಧುತ್ವ ಮತ್ತು ಶಮೆದಮೆ ಈ ಮುಂತಾದ ಮನೋಹರ ಗುಣಗಳನ್ನು ಪವಿತ್ರಾತ್ಮವು ನಮ್ಮಲ್ಲಿ ಉಂಟುಮಾಡುತ್ತದೆ. (ಗಲಾ. 5:22, 23) ದೇವರ ವಾಕ್ಯ ಮತ್ತು ಆತ್ಮವು ನಮ್ಮ ಜೀವನವನ್ನು ಪ್ರಭಾವಿಸುವಂತೆ ನಾವು ವೈಯಕ್ತಿಕವಾಗಿ ಅನುಮತಿಸುತ್ತಿದ್ದೇವೊ?—ಎಫೆ. 4:30; 1 ಥೆಸ. 2:13.
3 ಇತರರು ಗಮನಿಸುತ್ತಾರೆ: ನಾವು ಯೆಹೋವನ ಮಟ್ಟಗಳಿಗೆ ಅನುಸಾರ ಜೀವಿಸುವಾಗ ಮತ್ತು ಆತನ ಗುಣಗಳನ್ನು ಪ್ರತಿಬಿಂಬಿಸಲು ಪ್ರಯತ್ನಿಸುವಾಗ ಇತರರು ಅದನ್ನು ಗಮನಿಸುತ್ತಾರೆ. ಉದಾಹರಣೆಗೆ, ಒಬ್ಬ ಮನುಷ್ಯನನ್ನು ಅವನು ಗಿಡ್ಡದೇಹಿಯಾಗಿದ್ದ ಕಾರಣ ಅವನ ಜೊತೆಕೆಲಸಗಾರರು ಗೇಲಿಮಾಡುತ್ತಿದ್ದರು. ಅದೇ ಆಫೀಸಿನಲ್ಲಿ ಕೆಲಸಮಾಡುತ್ತಿದ್ದ ಒಬ್ಬ ಸಹೋದರಿಯು, ಅವನನ್ನು ಯಾವಾಗಲೂ ಘನತೆ ಮತ್ತು ಗೌರವದಿಂದ ಉಪಚರಿಸುತ್ತಿದ್ದಳು. ಇದು ಅವನನ್ನು, ಅವಳೇಕೆ ಇತರರಿಗಿಂತ ಭಿನ್ನಳಾಗಿದ್ದಾಳೆ ಎಂದು ಕೇಳುವಂತೆ ಪ್ರಚೋದಿಸಿತು. ತಾನು ತನ್ನ ಜೀವನದಲ್ಲಿ ಬೈಬಲ್ ಮೂಲತತ್ತ್ವಗಳನ್ನು ಅನ್ವಯಿಸುವುದೇ ತನ್ನ ಗೌರವಯುಕ್ತ ನಡತೆಗೆ ಕಾರಣ ಎಂದು ಅವಳು ವಿವರಿಸಿದಳು. ಮಾತ್ರವಲ್ಲದೆ, ಆ ವ್ಯಕ್ತಿಗೆ ಅವಳು ಅದ್ಭುತಕರವಾದ ರಾಜ್ಯ ನಿರೀಕ್ಷೆಯ ಕುರಿತಾದ ಸಂದೇಶವನ್ನೂ ನೀಡಿದಳು. ಆ ಮನುಷ್ಯನು ಬೈಬಲನ್ನು ಅಧ್ಯಯನಮಾಡಲು ಆರಂಭಿಸಿ, ಕಾಲಕ್ರಮೇಣ ದೀಕ್ಷಾಸ್ನಾನವನ್ನು ತೆಗೆದುಕೊಂಡನು. ಅವನು ತನ್ನ ಸ್ವದೇಶಕ್ಕೆ ಹಿಂದಿರುಗಿದಾಗ, ಅವನ ಉತ್ತಮ ನಡತೆಯಿಂದ ಅವನ ಸಂಬಂಧಿಕರು ಪ್ರಭಾವಿತರಾದರು ಮಾತ್ರವಲ್ಲ, ಅವರಲ್ಲಿ ಅನೇಕರು ಸತ್ಯವನ್ನು ತಮ್ಮದಾಗಿ ಮಾಡಿಕೊಂಡರು.
4 ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ ಇಲ್ಲವೆ ಸಂಬಂಧಿಕರು ಮತ್ತು ನೆರೆಯವರೊಂದಿಗೆ ವ್ಯವಹರಿಸುವಾಗ, ನಮ್ಮ ಸಾಕ್ಷಿಕಾರ್ಯದೊಂದಿಗೆ ನಮ್ಮ ಉತ್ತಮ ನಡತೆಯ ಮೂಲಕ ಇತರರು ದೇವರನ್ನು ಘನಪಡಿಸುವಂತೆ ನಾವು ಮಾಡಬಲ್ಲೆವು.—ಮತ್ತಾ. 5:16.