ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಯೆಹೋವನನ್ನು ಘನಪಡಿಸುವ ಸತ್ಕಾರ್ಯಗಳು
ತನ್ನ ಪರ್ವತ ಪ್ರಸಂಗದಲ್ಲಿ ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು [“ಸತ್ಕಾರ್ಯಗಳನ್ನು,” NW] ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು [“ಘನಪಡಿಸುವರು,” NW].” (ಮತ್ತಾಯ 5:16) ತದ್ರೀತಿಯಲ್ಲಿ, ನಿಜ ಕ್ರೈಸ್ತರು ಇಂದು ಯೆಹೋವನನ್ನು ಘನಪಡಿಸುವ “ಸತ್ಕಾರ್ಯಗಳ”ಲ್ಲಿ ತೊಡಗುತ್ತಾರೆ.
ಈ ಸತ್ಕಾರ್ಯಗಳು ಯಾವುವು? ಸುವಾರ್ತೆಯನ್ನು ಸಾರುವುದು ಅವುಗಳಲ್ಲಿ ಒಳಗೂಡಿದೆಯಾದರೂ, ನಮ್ಮ ಆದರ್ಶಪ್ರಾಯ ನಡವಳಿಕೆಯೂ ನಮ್ಮ ಸತ್ಕಾರ್ಯಗಳ ಒಂದು ಪ್ರಮುಖ ಭಾಗವಾಗಿದೆ. ಅನೇಕವೇಳೆ ಜನರನ್ನು ಮೊದಲಾಗಿ ಕ್ರೈಸ್ತ ಸಭೆಯ ಕಡೆಗೆ ಆಕರ್ಷಿಸುವಂತಹದ್ದು, ನಮ್ಮ ಒಳ್ಳೆಯ ನಡವಳಿಕೆಯೇ ಆಗಿರುತ್ತದೆ. ಮಾರ್ಟಿನೀಕ್ನಲ್ಲಿರುವ ಯೆಹೋವನ ಸಾಕ್ಷಿಗಳು ‘ಜನರ ಮುಂದೆ ತಮ್ಮ ಬೆಳಕನ್ನು ಪ್ರಕಾಶಿಸುವಂತೆ ಬಿಡುತ್ತಿರುವ’ ವಿಧವನ್ನು, ಈ ಮುಂದಿನ ಅನುಭವಗಳು ದೃಷ್ಟಾಂತಿಸುತ್ತವೆ.
◻ ಮನೆಯಿಂದ ಮನೆಗೆ ಸಾರುವ ಕಾರ್ಯದಲ್ಲಿ ತೊಡಗಿದ್ದಾಗ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳು ಕ್ಯಾಥೊಲಿಕ್ ಸ್ತ್ರೀಯೊಬ್ಬಳನ್ನು ಭೇಟಿಮಾಡಿದಳು. ಈ ಸ್ತ್ರೀಯು ತಾನು ವಿವಾಹವಾಗಿರದಿದ್ದ ಒಬ್ಬ ಪುರುಷನೊಂದಿಗೆ 25 ವರ್ಷಗಳಿಂದ ಜೀವಿಸುತ್ತಿದ್ದಳು. ಸುಮಾರು ಏಳು ವರ್ಷಗಳಿಗೆ ಮೊದಲೇ ಅವಳು ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವನ್ನು ಪಡೆದುಕೊಂಡಿದ್ದುದರಿಂದ, ಯೆಹೋವನ ಸಾಕ್ಷಿಗಳ ಬೋಧನೆಗಳೊಂದಿಗೆ ಅವಳಿಗೆ ನೇರ ಪರಿಚಯವಿತ್ತು.a ಆ ಸ್ತ್ರೀಯು ಸಾಕ್ಷಿಗೆ ಹೇಳಿದ್ದು: “ತೀರ ಹೆಚ್ಚು ಧರ್ಮಗಳಿವೆ. ಈ ಎಲ್ಲಾ ಗೊಂದಲದ ನಡುವೆ ಯಾವುದನ್ನು ನಂಬಬೇಕು ಎಂಬುದು ನನಗೆ ತಿಳಿದಿಲ್ಲ.” ಬೈಬಲಿನಲ್ಲಿ ಮಾತ್ರವೇ ಸತ್ಯವನ್ನು ಕಂಡುಕೊಳ್ಳಸಾಧ್ಯವಿದೆ ಮತ್ತು ಅದನ್ನು ಕಂಡುಕೊಳ್ಳಲಿಕ್ಕಾಗಿ, ಅವಳು ಶಾಸ್ತ್ರವಚನಗಳನ್ನು ಜಾಗರೂಕತೆಯಿಂದ ಅಭ್ಯಾಸಿಸಬೇಕು ಮತ್ತು ದೇವರ ಆತ್ಮ ಮತ್ತು ಮಾರ್ಗದರ್ಶನಕ್ಕಾಗಿ ಆತನಿಗೆ ಪ್ರಾರ್ಥಿಸಬೇಕು ಎಂಬುದಾಗಿ ಸಾಕ್ಷಿಯು ವಿವರಿಸಿದಳು.
ಸ್ವಲ್ಪ ಕಾಲಾವಧಿಯ ವರೆಗೆ, ಬೈಬಲನ್ನು ಅಭ್ಯಾಸಿಸುವುದರಲ್ಲಿ ಆಸಕ್ತಳಾಗಿದ್ದಾಗ್ಯೂ, ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ನಡೆಯುವ ಕ್ರೈಸ್ತ ಕೂಟಗಳಿಗೆ ಹಾಜರಾಗಲಿಕ್ಕಾಗಿ ಕೊಡಲ್ಪಟ್ಟ ಅನೇಕ ಆಮಂತ್ರಣಗಳನ್ನು ಆ ಸ್ತ್ರೀಯು ನಿರಾಕರಿಸಿದಳು. ಏಕೆ? ಅವಳು ವಿಪರೀತ ನಾಚಿಕೆ ಸ್ವಭಾವದವಳಾಗಿದ್ದಳು. ಆದರೂ, ಕ್ರಿಸ್ತನ ಮರಣದ ಜ್ಞಾಪಕದ ಒಂದು ಆಮಂತ್ರಣವನ್ನು ಪಡೆದುಕೊಂಡ ಬಳಿಕ, ಅವಳು ತನ್ನ ನಾಚಿಕೆ ಪ್ರವೃತ್ತಿಯನ್ನು ಜಯಿಸಿ, ಹಾಜರಾದಳು.
ರಾಜ್ಯ ಸಭಾಗೃಹದಲ್ಲಿನ ಪ್ರೀತಿಪೂರ್ಣ ವಾತಾವರಣವು, ಕೂಟದ ಕುರಿತಾಗಿ ಅವಳನ್ನು ಅತಿ ಹೆಚ್ಚು ಪ್ರಭಾವಿಸಿದ ವಿಷಯವಾಗಿತ್ತು. ಅವಳು ತನ್ನ ಚರ್ಚಿನಲ್ಲಿ ಅಂತಹ ನಿಷ್ಕಪಟವಾದ ಗೆಳೆತನವನ್ನು ಎಂದೂ ಅನುಭವಿಸಿರಲಿಲ್ಲ! ಆ ಕೂಟದ ಬಳಿಕ, ಸ್ಥಳಿಕ ಸಾಕ್ಷಿಗಳಿಂದ ನಡೆಸಲ್ಪಟ್ಟ ಎಲ್ಲ ಕೂಟಗಳನ್ನು ಅವಳು ಹಾಜರಾಗಲಾರಂಭಿಸಿದಳು, ಮತ್ತು ಅವಳು ಯಾರೊಂದಿಗೆ ಜೀವಿಸುತ್ತಿದ್ದಳೊ ಆ ಪುರುಷನೊಂದಿಗೆ ಬೇಗನೆ ವಿವಾಹ ಮಾಡಿಕೊಂಡಳು. ಈಗ ಅವಳು ಸಭೆಯ ಒಬ್ಬ ಸ್ನಾನಿತ ಸದಸ್ಯೆಯಾಗಿದ್ದಾಳೆ.
◻ ಇನ್ನೊಬ್ಬ ಸಾಕ್ಷಿಯ ಸತ್ಕಾರ್ಯಗಳು ಒಳ್ಳೆಯ ಫಲಿತಾಂಶಗಳನ್ನು ಉತ್ಪಾದಿಸಿದವು. ಒಂದು ಆಫೀಸಿನಲ್ಲಿ ಅವಳಿಗೆ ಜವಾಬ್ದಾರಿಯುತವಾದ ಒಂದು ಸ್ಥಾನವಿತ್ತು. ರೆಯೂನಿಯನ್ ದ್ವೀಪದ ವ್ಯಕ್ತಿಯೊಬ್ಬನು ಕೆಲಸಕ್ಕೆ ನೇಮಿಸಿಕೊಳ್ಳಲ್ಪಟ್ಟ ಬಳಿಕ, ಕೆಲಸಗಾರರಲ್ಲಿ ಕೆಲವರು, ಅವನ ಗಿಡ್ಡದೇಹದ ಕಾರಣದಿಂದಾಗಿ ಅವನಿಗೆ ಅಪಹಾಸ್ಯಮಾಡಲಾರಂಭಿಸಿದರು. ಅವನು ಹಾಸ್ಯಕ್ಕೆ ಗುರಿಯಾದನು. ಇದಕ್ಕೆ ವ್ಯತಿರಿಕ್ತವಾಗಿ, ಈ ಸಾಕ್ಷಿಯು ಯಾವಾಗಲೂ ಆತನ ಕಡೆಗೆ ದಯಾಪರಳೂ ಗೌರವ ತೋರಿಸುವವಳೂ ಆಗಿದ್ದಳು. ಅವಳು ಏಕೆ ಅಷ್ಟು ಭಿನ್ನಳಾಗಿದ್ದಳೆಂದು ಸ್ವಲ್ಪ ಸಮಯದಲ್ಲೇ ಅವನು ಅವಳನ್ನು ಕೇಳುತ್ತಿದ್ದನು.
ತನ್ನ ಗೌರವಪೂರ್ಣವಾದ ನಡವಳಿಕೆಯು, ತಾನು ಯೆಹೋವನ ಸಾಕ್ಷಿಗಳಿಂದ ಕಲಿತುಕೊಂಡಿದ್ದ ಬೈಬಲಿನ ಮೂಲತತ್ವಗಳ ಒಂದು ಫಲಿತಾಂಶವಾಗಿತ್ತು ಎಂದು ಆ ಸಾಕ್ಷಿಯು ವಿವರಿಸಿದಳು. ದೇವರ ಉದ್ದೇಶಗಳ ಕುರಿತಾಗಿ ಮತ್ತು ಹೊಸ ಲೋಕವೊಂದರ ನಿರೀಕ್ಷೆಯ ಕುರಿತಾಗಿ ಶಾಸ್ತ್ರವಚನಗಳು ಏನನ್ನು ಹೇಳುತ್ತವೆ ಎಂಬುದನ್ನೂ ಅವಳು ಅವನಿಗೆ ತೋರಿಸಿದಳು. ಆ ಮನುಷ್ಯನು ಒಂದು ಬೈಬಲ್ ಅಭ್ಯಾಸವನ್ನು ಸ್ವೀಕರಿಸಿದನು, ಕ್ರೈಸ್ತ ಕೂಟಗಳಿಗೆ ಹಾಜರಾಗಲಾರಂಭಿಸಿದನು, ಮತ್ತು ತಾನು ಯಾರೊಂದಿಗೆ ಜೀವಿಸಿದ್ದನೊ ಆ ಸ್ತ್ರೀಯನ್ನು ವಿವಾಹವಾದನು.
ಕ್ರಮೇಣ ಅವನು ರೆಯೂನಿಯನ್ಗೆ ಹಿಂದಿರುಗಿದನು. ಗತಕಾಲದಲ್ಲಿ, ಅವನು ತನ್ನ ಸಂಬಂಧಿಕರೊಂದಿಗೆ, ವಿಶೇಷವಾಗಿ ತನ್ನ ಹೆಂಡತಿಯ ಕುಟುಂಬದೊಂದಿಗೆ ತೊಂದರೆಗಳನ್ನು ಅನುಭವಿಸಿದ್ದನು. ಆದರೆ ಈಗ ಅವನ ಒಳ್ಳೆಯ ಕ್ರೈಸ್ತ ನಡವಳಿಕೆಯಿಂದ ಅವರು ಬಹಳವಾಗಿ ಪ್ರಭಾವಿತರಾದರು. ಆ ಮನುಷ್ಯನು ದೀಕ್ಷಾಸ್ನಾನ ಪಡೆದುಕೊಂಡನು ಮತ್ತು ಪ್ರಸ್ತುತದಲ್ಲಿ ಅವನು ಒಬ್ಬ ಶುಶ್ರೂಷಾ ಸೇವಕನಾಗಿದ್ದಾನೆ. ಅವನ ಹೆಂಡತಿ ಮತ್ತು ಇಬ್ಬರು ಪುತ್ರಿಯರನ್ನು ಒಳಗೊಂಡು, ಅವನ ಕುಟುಂಬದ ಅನೇಕ ಸದಸ್ಯರು ಸಹ, ದೇವರ ರಾಜ್ಯದ ಸುವಾರ್ತೆಯ ಪ್ರಚಾರಕರೋಪಾದಿ ಕ್ರೈಸ್ತ ಸಭೆಯಲ್ಲಿ ಸೇವೆಮಾಡುತ್ತಾರೆ.
[ಪಾದಟಿಪ್ಪಣಿ]
a ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.