ಹೊಸ ವಿಶೇಷ ಸಮ್ಮೇಳನ ದಿನ ಕಾರ್ಯಕ್ರಮ
ಕಣ್ಣು ಒಂದು ಅದ್ಭುತಕರ ವಿನ್ಯಾಸ ಆಗಿದೆ. (ಕೀರ್ತ. 139:14) ಹಾಗಿದ್ದರೂ, ಒಂದು ಸಮಯದಲ್ಲಿ ಅದು ಕೇವಲ ಒಂದೇ ವಿಷಯದ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಶಕ್ತವಾಗಿದೆ. ಇದು ಅಕ್ಷರಾರ್ಥಕವಾಗಿಯೂ ಸಾಂಕೇತಿಕವಾಗಿಯೂ ಸತ್ಯವಾಗಿದೆ. ನಮ್ಮ ಆಧ್ಯಾತ್ಮಿಕ ದೃಷ್ಟಿಯು ಸ್ಪಷ್ಟವಾಗಿರಬೇಕಾದರೆ, ದೇವರ ಚಿತ್ತವನ್ನು ಮಾಡುವುದರ ಮೇಲೆ ನಾವು ನಮ್ಮ ಗಮನವನ್ನು ಕೇಂದ್ರೀಕರಿಸಬೇಕಾಗಿದೆ. ಸೈತಾನನ ಲೋಕದಲ್ಲಿ ಹೆಚ್ಚುತ್ತಿರುವ ಅಪಕರ್ಷಣೆಗಳನ್ನು ಗಮನದಲ್ಲಿಟ್ಟು, 2006ರ ಸೇವಾ ವರ್ಷದ ವಿಶೇಷ ಸಮ್ಮೇಳನ ದಿನ ಕಾರ್ಯಕ್ರಮವು ‘ನಿಮ್ಮ ಕಣ್ಣು ನೆಟ್ಟಗಿರಲಿ’ ಎಂಬ ಸೂಕ್ತವಾದ ಮುಖ್ಯ ವಿಷಯವನ್ನು ವಿಕಸಿಸಲಿದೆ!—ಮತ್ತಾ. 6:22.
ಯೆಹೋವನಿಂದ ಆಶೀರ್ವಾದಗಳನ್ನು ಪಡೆಯುವವರ ಸಾಲಿನಲ್ಲಿ ನಾವು ಹೇಗೆ ಇರಬಲ್ಲೆವು? (ಜ್ಞಾನೋ. 10:22) ಈ ಪ್ರಶ್ನೆಯನ್ನು, “ಕಣ್ಣನ್ನು ನೆಟ್ಟಗೆ ಇಟ್ಟುಕೊಂಡದ್ದಕ್ಕಾಗಿ ಆಶೀರ್ವಾದಗಳನ್ನು ಕೊಯ್ಯಿರಿ” ಎಂಬ ಭಾಗದಲ್ಲಿ ಪರಿಗಣಿಸಲಾಗುವುದು. ಶಾಸ್ತ್ರೀಯ ಮೂಲತತ್ತ್ವಗಳನ್ನು ಅನ್ವಯಿಸುವುದರಿಂದ ಯಾವ ಪ್ರಯೋಜನವನ್ನು ಪಡೆದುಕೊಳ್ಳಬಲ್ಲೆವು ಎಂಬುದನ್ನು ಇಂಟರ್ವ್ಯೂಗಳು ತೋರಿಸುವವು. ಸಂದರ್ಶಿಸುತ್ತಿರುವ ಭಾಷಣಕರ್ತನಿಂದ ನೀಡಲ್ಪಡುವ ಮೊದಲ ಭಾಷಣವು, “ದುಷ್ಟ ಲೋಕದಲ್ಲಿ ಕಣ್ಣನ್ನು ನೆಟ್ಟಗೆ ಇಟ್ಟುಕೊಳ್ಳುವುದು” ಎಂದಾಗಿದೆ. ಈ ಭಾಷಣವು, ನಮ್ಮ ಜೀವನವನ್ನು ಜಟಿಲಗೊಳಿಸುವ ಮತ್ತು ಕ್ರಮೇಣ ನಮ್ಮ ಆಧ್ಯಾತ್ಮಿಕ ಬೆಳವಣಿಗೆಯನ್ನು ಕುಂಠಿತಗೊಳಿಸುವ ವಿಷಯಗಳ ವಿರುದ್ಧ ಎಚ್ಚರಿಸುತ್ತದೆ. “ಉತ್ತಮ ಭಾಗವನ್ನು” ಆರಿಸಿಕೊಳ್ಳುವುದರಲ್ಲಿ ಏನು ಒಳಗೂಡಿದೆ ಎಂಬುದನ್ನೂ ನಾವು ಕಲಿಯಲಿದ್ದೇವೆ.—ಲೂಕ 10:42.
ಯುವ ಕ್ರೈಸ್ತರು ಆಧ್ಯಾತ್ಮಿಕ ಬೆನ್ನಟ್ಟುವಿಕೆಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುವಂತೆ ಹೆತ್ತವರು ಮತ್ತು ಇತರರು ಹೇಗೆ ಉತ್ತೇಜಿಸಬಲ್ಲರು? ಈ ಪ್ರಾಮುಖ್ಯ ಪ್ರಶ್ನೆಯ ಕುರಿತಾಗಿ ಹೆತ್ತವರು ಹಾಗೂ ಯುವ ಜನರು ನೀಡುವ ಹೇಳಿಕೆಗಳು, “ತಮ್ಮ ಅಂಬುಗಳನ್ನು ಸರಿಯಾಗಿ ಗುರಿಯಿಡುವ ಹೆತ್ತವರು” ಮತ್ತು “ಆಧ್ಯಾತ್ಮಿಕ ಗುರಿಗಳನ್ನು ಎಟಕಿಸುವ ಯುವ ಜನರು” ಎಂಬ ಭಾಗಗಳಲ್ಲಿ ಒಳಗೂಡಿರುವವು. (ಕೀರ್ತ. 127:4) ವ್ಯಕ್ತಿಗತವಾಗಿ, ಕುಟುಂಬವಾಗಿ ಮತ್ತು ಒಂದು ಸಭೆಯಾಗಿ ನಾವು ಹೇಗೆ ಯೆಹೋವನ ಸಂಘಟನೆಯೊಂದಿಗೆ ಪ್ರಗತಿಯನ್ನು ಮಾಡಬಲ್ಲೆವು ಎಂಬುದನ್ನು ಅಂತಿಮ ಭಾಷಣದಲ್ಲಿ ಸಂದರ್ಶಿಸುತ್ತಿರುವ ಭಾಷಣಕರ್ತನು ಪರಿಗಣಿಸುವನು.
ನಮಗೆ ಈಗ ತಾನೇ ಹೊಸದಾಗಿ ಸತ್ಯದ ಪರಿಚಯವಾಗಿರಲಿ ಅಥವಾ ದಶಕಗಳಿಂದ ಯೆಹೋವನನ್ನು ಸೇವಿಸುತ್ತಿರಲಿ, ನಾವು ನಮ್ಮ ‘ಕಣ್ಣನ್ನು ನೆಟ್ಟಗಿಡುವುದು’ ಬಹಳ ಪ್ರಾಮುಖ್ಯ. ಅದನ್ನೇ ಮಾಡುವಂತೆ ವಿಶೇಷ ಸಮ್ಮೇಳನ ದಿನ ಕಾರ್ಯಕ್ರಮವು ನಮಗೆ ಸಹಾಯಮಾಡುತ್ತದೆ.