ಯೆಹೋವನ ದಿನವು ಹತ್ತಿರವಿದೆ
1 ಕ್ರೈಸ್ತರು ಯೆಹೋವನ ದಿನದ ಬರೋಣವನ್ನು ಆತುರದಿಂದ ಎದುರುನೋಡುತ್ತಿದ್ದಾರೆ. ಆ ದಿನವು, ಸದ್ಯದ ವಿಷಯಗಳ ವ್ಯವಸ್ಥೆಯನ್ನು ನಾಶಮಾಡಿ ನೀತಿಯ ನೂತನ ಲೋಕವನ್ನು ತರಲಿದೆ. (2 ಪೇತ್ರ 3:12, 13) ಆ ದಿನವು ಯಾವಾಗ ಬರುತ್ತದೆ ಎಂಬುದು ನಮಗೆ ತಿಳಿದಿಲ್ಲದಿರುವ ಕಾರಣ ನಾವು ಎಚ್ಚರದಿಂದಿರಬೇಕು ಮತ್ತು ಇತರರೂ ಎಚ್ಚರದಿಂದಿರುವಂತೆ ಸಹಾಯನೀಡಬೇಕು. (ಯೆಹೆ. 33:7-9; ಮತ್ತಾ. 24:42-44) ದೇವರ ಪ್ರವಾದನಾ ವಾಕ್ಯದ ಕುರಿತು ಧ್ಯಾನಿಸುವುದು “ಯೆಹೋವನ ಮಹಾದಿನವು ಹತ್ತಿರವಾಯಿತು” ಎಂಬ ನಮ್ಮ ದೃಢಭರವಸೆಯನ್ನು ಇನ್ನಷ್ಟು ಬಲಗೊಳಿಸುವುದು.—ಚೆಫ. 1:14.
2 ಅನುಕ್ರಮವಾಗಿ ಬರುವ ಲೋಕ ಶಕ್ತಿಗಳು: ಪ್ರಕಟನೆ 17:9-11ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಅನುಕ್ರಮವಾಗಿ ಬರುವ ಏಳು ಲೋಕ ಶಕ್ತಿಗಳನ್ನು ಸೂಚಿಸುವ “ಏಳು ಮಂದಿ ಅರಸುಗಳ” ಕುರಿತು ಅಪೊಸ್ತಲ ಯೋಹಾನನು ಉಲ್ಲೇಖಿಸುತ್ತಾನೆ. ಯೋಹಾನನು ‘ಎಂಟನೆಯ ಅರಸನ’ ಬಗ್ಗೆಯೂ ತಿಳಿಸುತ್ತಾನೆ. ಈ ಅರಸನು, ಇಂದಿನ ವಿಶ್ವಸಂಸ್ಥೆಯನ್ನು ಸೂಚಿಸುತ್ತಾನೆ. ಬೇರೆ ಯಾವುದೇ ಲೋಕ ಶಕ್ತಿಯು ದೃಶ್ಯಕ್ಕೆ ಬರುವುದನ್ನು ನಾವು ಎದುರುನೋಡಬೇಕೊ? ಇಲ್ಲ. ಈ ಎಂಟನೆಯ ಅರಸನು “ನಾಶಕ್ಕೆ ಹೋಗುವನು” ಎಂಬುದಾಗಿ ಪ್ರವಾದನೆಯು ತಿಳಿಸುತ್ತದೆ ಮತ್ತು ಅನಂತರ ಬೇರಾವುದೇ ಭೂರಾಜರ ಕುರಿತಾಗಿಯೂ ತಿಳಿಸಲ್ಪಟ್ಟಿಲ್ಲ. ಕಾಲಪ್ರವಾಹದಲ್ಲಿ ನಾವೆಲ್ಲಿದ್ದೇವೆ ಎಂಬುದನ್ನು ಕಂಡುಕೊಳ್ಳಲು ಈ ಪ್ರವಾದನೆಯು ನಿಮಗೆ ಸಹಾಯಮಾಡುವುದಿಲ್ಲವೊ?
3 ಬರಲಿರುವ ಯೆಹೋವನ ದಿನದ ಕುರಿತು ಅರ್ಥಮಾಡಿಕೊಳ್ಳುವಂತೆ ದಾನಿಯೇಲ 2:31-45 ನಮಗೆ ಸಹಾಯಮಾಡುತ್ತದೆ. ಆ ಪ್ರವಾದನೆಯಲ್ಲಿ, ನೆಬೂಕದ್ನೆಚ್ಚರನು ಕನಸಿನಲ್ಲಿ ಕಂಡ ಬೃಹದಾಕಾರದ ಪ್ರತಿಮೆಯು ಅನುಕ್ರಮವಾಗಿ ಬರುವ ಲೋಕ ಶಕ್ತಿಗಳನ್ನು ಸೂಚಿಸುತ್ತದೆ. ಎಲ್ಲ ಲೋಕ ಶಕ್ತಿಗಳು ಈಗಾಗಲೇ ತೋರಿಬಂದಿವೆ. ಇಂದು ನಾವು ಯಾವ ಶಕ್ತಿಯು ಆಳ್ವಿಕೆ ನಡೆಸುತ್ತಿರುವ ಸಮಯಾವಧಿಯಲ್ಲಿ ಜೀವಿಸುತ್ತಿದ್ದೇವೆ? ಆ ಪ್ರತಿಮೆಯ ಕಾಲುಗಳನ್ನು ಸೂಚಿಸುವ ಸಮಯಾವಧಿಯಲ್ಲಿ ನಾವಿಂದು ಜೀವಿಸುತ್ತಾ ಇದ್ದೇವೆ. ಮುಂದೆ ಏನು ಸಂಭವಿಸಲಿದೆ ಎಂಬುದನ್ನು ಪ್ರವಾದನೆಯು ಸ್ಪಷ್ಟವಾಗಿ ವರ್ಣಿಸುತ್ತದೆ. ಮಾನವ ಆಳ್ವಿಕೆಯು ಸಂಪೂರ್ಣವಾಗಿ ನಾಶವಾಗಲಿದೆ ಮತ್ತು ‘ಎಂದಿಗೂ ಅಳಿಯದ ಒಂದು ರಾಜ್ಯಕ್ಕೆ’ ದಾರಿಯನ್ನು ಮಾಡಲಿದೆ. ಯೆಹೋವನ ದಿನವು ಹತ್ತಿರವಿದೆ ಎಂಬುದನ್ನು ಇದು ಹೇಗೆ ತೋರಿಸುತ್ತದೆ ಎಂಬುದನ್ನು ನೀವು ಗ್ರಹಿಸಬಲ್ಲಿರಾ?
4 ಹೆಚ್ಚಿನ ಪುರಾವೆ: ಯೆಹೋವನ ದಿನವು ಹತ್ತಿರವಿದೆ ಎಂಬುದಕ್ಕಿರುವ ಹೆಚ್ಚಿನ ಪುರಾವೆಗಳಿಗೆ ನಾವು ಪ್ರತ್ಯಕ್ಷ ಸಾಕ್ಷಿಗಳಾಗಿದ್ದೇವೆ. “ಕಡೇ ದಿವಸಗಳಲ್ಲಿ” ಇರುವ ಜನರ ಗುಣಲಕ್ಷಣಗಳ ಕುರಿತು ಅಪೊಸ್ತಲ ಪೌಲನು ಮುಂತಿಳಿಸಿದ ವಿಷಯಗಳ ನೆರವೇರಿಕೆಯನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ. (2 ತಿಮೊ. 3:1-5) ಅಂತ್ಯವು ಬರುವದಕ್ಕಿಂತ ಮುಂಚೆ ಮಾಡಬೇಕಾದ ಭೌಗೋಳಿಕ ಸಾರುವ ಕೆಲಸದಲ್ಲಿ ನಾವು ಭಾಗಿಗಳಾಗುತ್ತಿದ್ದೇವೆ. (ಮತ್ತಾ. 24:14) ನಮ್ಮ ಸಾರ್ವಜನಿಕ ಶುಶ್ರೂಷೆಯು, “ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ, ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ” ಎಂಬ ದೇವದೂತ ಘೋಷಣೆಯು ಎಷ್ಟೊಂದು ತುರ್ತಿನದ್ದಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತಾ ಮುಂದುವರಿಯಲಿ.—ಪ್ರಕ. 14:6, 7.