ಯುವಜನರೇ—ದೇವರ ವಾಕ್ಯವನ್ನು ಓದಿರಿ!
1 ಯೌವನಾವಸ್ಥೆಯು ಪಂಥಾಹ್ವಾನಗಳ ಮತ್ತು ಗಂಭೀರವಾದ ನಿರ್ಣಯಗಳನ್ನು ಮಾಡುವ ಒಂದು ಸಮಯವಾಗಿರುತ್ತದೆ. ಕ್ರೈಸ್ತ ಯುವಜನರಾಗಿರುವ ನಿಮ್ಮಲ್ಲಿ ಅನೇಕರು, ನಡತೆಯ ಕುರಿತಾಗಿರುವ ದೈವಿಕ ಮಟ್ಟಗಳನ್ನು ಉಲ್ಲಂಘಿಸುವ ಒತ್ತಡವನ್ನು ಪ್ರತಿನಿತ್ಯವೂ ಎದುರಿಸುತ್ತೀರಿ. ವಿದ್ಯಾಭ್ಯಾಸ, ಉದ್ಯೋಗ, ಮತ್ತು ವಿವಾಹದ ವಿಷಯದಲ್ಲಿ ನೀವು ವೈಯಕ್ತಿಕ ನಿರ್ಣಯಗಳನ್ನು ಮಾಡುವುದಕ್ಕೆ ಮುಂಚೆಯೇ ನೀವು ಆಧ್ಯಾತ್ಮಿಕ ಗುರಿಗಳನ್ನಿಟ್ಟಿರಬೇಕು. ಹೀಗೆ ಮಾಡುವಲ್ಲಿ ಮಾತ್ರವೇ ನೀವು ನಿಮ್ಮ ಉಳಿದ ಜೀವಮಾನವನ್ನು ಪ್ರಯೋಜನಾರ್ಥವಾಗಿ ರೂಪಿಸಲಿರುವ ಇತರ ನಿರ್ಣಯಗಳನ್ನು ಮಾಡಬಲ್ಲಿರಿ. ನಿಶ್ಚಿತ ರೂಪದ ಆಧ್ಯಾತ್ಮಿಕ ಗುರಿಗಳು, ನೀವು ವಿವೇಕದಿಂದ ವರ್ತಿಸಿ ನಿಮ್ಮ ದಾರಿಯನ್ನು ಸಫಲಗೊಳಿಸುವಂತೆ ನಿಮಗೆ ಸಹಾಯಮಾಡುವವು. ದೇವರ ವಾಕ್ಯವನ್ನು ಕ್ರಮವಾಗಿ ಓದುವ ಮತ್ತು ಅದರ ಕುರಿತು ಧ್ಯಾನ ಮಾಡುವ ಮೂಲಕ, ನೀವು ಅದರ ಪ್ರೇರಿತ ಬುದ್ಧಿವಾದಕ್ಕನುಸಾರವಾಗಿ ಜೀವಿಸುವಂತೆ ಉತ್ತೇಜಿಸಲ್ಪಡುವಿರಿ, ಮತ್ತು ನಿಮ್ಮ ಯೋಗ್ಯವಾದ ಪ್ರಯತ್ನಗಳು ಯಶಸ್ಸನ್ನು ಕಾಣುವವು.—ಯೆಹೋ. 1:8; ಕೀರ್ತ. 1:2, 3.
2 ಅದು ನಿಮಗೆ ಹೇಗೆ ಪ್ರಯೋಜನವನ್ನು ತರುವುದು? ಸೈತಾನನ ಲೋಕವು ತಪ್ಪುಕೃತ್ಯದಲ್ಲಿ ತೊಡಗುವಂತೆ ಮಾಡುವ ಆಕರ್ಷಣೆಗಳಿಂದ ತುಂಬಿರುತ್ತದೆ. (1 ಯೋಹಾ. 2:15, 16) ಸಮಾನಸ್ಥರ ಒತ್ತಡಕ್ಕೆ ಮಣಿದ ಕಾರಣ ವಿಪತ್ತನ್ನು ಅನುಭವಿಸಿದ ನಿಮ್ಮ ಸಹಪಾಠಿಗಳ ಅಥವಾ ನಿಮ್ಮ ವಯಸ್ಸಿನ ಇತರರ ಕುರಿತು ನಿಮಗೆ ತಿಳಿದಿರಬಹುದು. ಆದರೆ ಬೈಬಲಿನ ಬುದ್ಧಿವಾದಕ್ಕೆ ಅಂಟಿಕೊಂಡಿರುವುದು, ಒಂದು ಪಾಪಕರ ಮಾರ್ಗವನ್ನು ತೊರೆಯಲು ನಿಮಗೆ ನೈತಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ನೀಡುವುದು. ಮಾತ್ರವಲ್ಲದೆ, ದೇವರ ವಾಕ್ಯದ ಬುದ್ಧಿವಾದವು ಸೈತಾನನ ವಂಚನಾತ್ಮಕ ಪಾಶಗಳಿಂದ ದೂರವಿರುವಂತೆಯೂ ನಿಮಗೆ ಸಹಾಯಮಾಡಬಲ್ಲದು. (2 ಕೊರಿಂ. 2:11; ಇಬ್ರಿ. 5:14) ದೇವರ ಮಾರ್ಗಗಳಲ್ಲಿ ನಡೆಯುವುದು ನಿಮಗೆ ನಿಜ ಸಂತೋಷವನ್ನು ಮತ್ತು ನಿಮ್ಮ ಜೀವನ ಮಾರ್ಗದಿಂದ ವೈಯಕ್ತಿಕ ಸಂತೃಪ್ತಿಯನ್ನು ತರುತ್ತದೆ.—ಕೀರ್ತ. 119:1, 9, 11.
3 ದೇವರ ವಾಕ್ಯದ ಸಾರ್ವಕಾಲಿಕ ಮೂಲತತ್ತ್ವಗಳು ಮಾನವ ವಿವೇಕಕ್ಕಿಂತ ಉನ್ನತವಾಗಿವೆ. (ಕೀರ್ತ. 119:98-100) ಬೈಬಲ್ ಮೂಲತತ್ತ್ವಗಳ ಜ್ಞಾನವುಳ್ಳವರಾಗಿರುವುದು ಮತ್ತು ಯೆಹೋವನ ಪ್ರಕಟಿತ ಉದ್ದೇಶಗಳ ಕುರಿತು ಧ್ಯಾನಮಾಡುವುದರೊಂದಿಗೆ ಹೃತ್ಪೂರ್ವಕ ಪ್ರಾರ್ಥನೆಯು, ಬೈಬಲಿನ ಸರ್ವವಿವೇಕಿ ಗ್ರಂಥಕರ್ತನಾದ ಯೆಹೋವ ದೇವರೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ನಿಮಗೆ ಸಹಾಯಮಾಡಸಾಧ್ಯವಿದೆ. ಆತನು ವಾಗ್ದಾನಿಸುವುದು: “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು.”—ಕೀರ್ತ. 32:8.
4 ಅದನ್ನು ಓದಲಿಕ್ಕಾಗಿ ಸಮಯವನ್ನು ಮಾಡಿಕೊಳ್ಳಿರಿ: ಒಬ್ಬ ಕ್ರೈಸ್ತ ಯುವತಿಯು ಇಡೀ ಬೈಬಲನ್ನು ಓದುವ ಗುರಿಯನ್ನು ಇಟ್ಟಳು, ಮತ್ತು ಒಂದು ವರ್ಷದೊಳಗೆ ಅವಳದನ್ನು ಓದಿಮುಗಿಸಿದಳು. ಅವಳು ಹೇಗೆ ಪ್ರಯೋಜನ ಹೊಂದಿದಳು? ಅವಳು ಜ್ಞಾಪಿಸಿಕೊಳ್ಳುವುದು: “ನಾನು ಯೆಹೋವನ ಬಗ್ಗೆ ಬಹಳಷ್ಟನ್ನು ಕಲಿತುಕೊಂಡೆ; ಆತನ ಸಮೀಪಕ್ಕೆ ನನ್ನನ್ನು ಸೆಳೆದಂತಹ ಮತ್ತು ನನ್ನ ಜೀವನಪರ್ಯಂತ ನಾನು ಆತನಿಗೆ ಭಯಪಡಲಿಚ್ಛಿಸುವಂತೆ ಮಾಡಿದ ವಿಷಯಗಳನ್ನು ಕಲಿತೆ.” (ಯಾಕೋ. 4:8) ನೀವು ಇಡೀ ಬೈಬಲನ್ನು ಓದಿದ್ದೀರೋ? ಇಲ್ಲವಾದರೆ, ಹಾಗೆ ಮಾಡುವುದನ್ನು ನಿಮ್ಮ ಗುರಿಯನ್ನಾಗಿ ಏಕೆ ಮಾಡಿಕೊಳ್ಳಬಾರದು? ಯೆಹೋವನು ನಿಶ್ಚಯವಾಗಿಯೂ ನಿಮ್ಮ ಪ್ರಯತ್ನಗಳನ್ನು ಆಶೀರ್ವದಿಸುವನು, ಮತ್ತು ನೀವು ಅತ್ಯುತ್ತಮ ಪ್ರತಿಫಲಗಳನ್ನು ಕೊಯ್ಯುವಿರಿ.