ನಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ಯೆಹೋವನಿಗೆ ಅರ್ಪಿಸುವುದು
1 ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟಿದ್ದ ಧರ್ಮಶಾಸ್ತ್ರದಲ್ಲಿ, ಆತನಿಗೆ ಯಜ್ಞಗಳಾಗಿ ಅರ್ಪಿಸಲ್ಪಡುವ ಪ್ರಾಣಿಗಳು “ಪೂರ್ಣಾಂಗ”ದವುಗಳಾಗಿರಬೇಕೆಂದು ವಿಧಿಸಿದ್ದನು. ದೋಷವುಳ್ಳ ಪ್ರಾಣಿಯು ಸ್ವೀಕರಿಸಲ್ಪಡುತ್ತಿರಲಿಲ್ಲ. (ಯಾಜ. 22:18-20; ಮಲಾ. 1:6-9) ಮಾತ್ರವಲ್ಲದೆ, ಒಂದು ಯಜ್ಞವನ್ನು ಅರ್ಪಿಸುವಾಗ, ಅದರ ಅತಿ ಶ್ರೇಷ್ಠ ಭಾಗವಾಗಿರುವ ಕೊಬ್ಬೆಲ್ಲವೂ ಯೆಹೋವನದ್ದಾಗುತ್ತಿತ್ತು. (ಯಾಜ. 3:14-17ಎ) ಇಸ್ರಾಯೇಲ್ಯರ ತಂದೆಯೂ ದಣಿಯೂ ಆಗಿದ್ದ ಯೆಹೋವನು ಅತ್ಯುತ್ತಮವಾದದ್ದನ್ನು ಪಡೆದುಕೊಳ್ಳಲು ಅರ್ಹನಾಗಿದ್ದನು.
2 ಪ್ರಾಚೀನ ಕಾಲಗಳಂತೆಯೇ, ದೇವರು ಇಂದು ನಾವು ಅರ್ಪಿಸುವ ವಿಷಯಗಳ ಗುಣಮಟ್ಟದ ಕುರಿತು ತೀವ್ರ ಆಸಕ್ತಿ ವಹಿಸುತ್ತಾನೆ. ನಮ್ಮ ಸೇವೆಯು ಯೆಹೋವನಿಗಾಗಿ ಯೋಗ್ಯವಾದ ಭಯಭಕ್ತಿಯನ್ನು ಪ್ರತಿಬಿಂಬಿಸಬೇಕು. ನಿಜ, ಪ್ರತಿಯೊಬ್ಬ ವ್ಯಕ್ತಿಯ ಪರಿಸ್ಥಿತಿಗಳು ಭಿನ್ನವಾಗಿರುತ್ತವೆ. ಆದರೂ, ನಾವು ನಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ಆತನಿಗೆ ಕೊಡುತ್ತಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಮ್ಮನ್ನೇ ಪರಿಶೋಧಿಸಿಕೊಳ್ಳಲಿಕ್ಕಾಗಿ ಒಳ್ಳೆಯ ಕಾರಣವಿದೆ.—ಎಫೆ. 5:10.
3 ಪೂರ್ಣಹೃದಯದ ಸೇವೆ: ನಮ್ಮ ಶುಶ್ರೂಷೆಯು ಯೆಹೋವನನ್ನು ಗೌರವಿಸುವಂಥದ್ದು ಮತ್ತು ನಮ್ಮ ಕೇಳುಗರ ಹೃದಯಗಳನ್ನು ಸ್ಪರ್ಶಿಸುವಂಥದ್ದಾಗಿರಬೇಕಾದರೆ, ಅದು ಯಾಂತ್ರಿಕವಾಗಿರಲಾರದು. ನಮ್ಮ ದೇವರ ಮತ್ತು ಆತನ ಮಹಾ ಉದ್ದೇಶಗಳ ಕುರಿತಾದ ನಮ್ಮ ಅಭಿವ್ಯಕ್ತಿಗಳು, ಗಣ್ಯತೆಯಿಂದ ತುಂಬಿತುಳುಕುವ ಹೃದಯಗಳಿಂದ ಹೊರಹೊಮ್ಮಬೇಕು. (ಕೀರ್ತ. 145:7) ಇದು, ವೈಯಕ್ತಿಕ ಬೈಬಲ್ ವಾಚನ ಮತ್ತು ಅಧ್ಯಯನದ ಒಳ್ಳೆಯ ಕಾರ್ಯಕ್ರಮವನ್ನು ಹೊಂದಿರುವುದರ ಪ್ರಾಮುಖ್ಯತೆಯನ್ನು ಎತ್ತಿತೋರಿಸುತ್ತದೆ.—ಜ್ಞಾನೋ. 15:28.
4 ಯೆಹೋವನಿಗೆ ನಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ಕೊಡುವುದರಲ್ಲಿ, ಜನರ ಕಡೆಗೆ ಆತನಿಗಿರುವ ಪ್ರೀತಿಯನ್ನು ಅನುಕರಿಸುವುದೂ ಒಳಗೂಡಿದೆ. (ಎಫೆ. 5:1, 2) ಜನರಿಗಾಗಿರುವ ಪ್ರೀತಿಯು, ಸತ್ಯದ ಜೀವದಾಯಕ ಸಂದೇಶದೊಂದಿಗೆ ಸಾಧ್ಯವಿರುವಷ್ಟು ಹೆಚ್ಚು ಜನರನ್ನು ತಲಪುವಂತೆ ನಮ್ಮನ್ನು ಪ್ರೇರಿಸುವುದು. (ಮಾರ್ಕ 6:34) ಈ ಪ್ರೀತಿಯು, ನಾವು ಯಾರೊಂದಿಗೆ ಮಾತಾಡುತ್ತೇವೋ ಅವರ ಬಗ್ಗೆ ವೈಯಕ್ತಿಕ ಆಸಕ್ತಿಯನ್ನು ತೋರಿಸುವಂತೆ ನಮ್ಮನ್ನು ಉತ್ತೇಜಿಸುತ್ತದೆ. ಪ್ರಥಮ ಭೇಟಿಯ ನಂತರ ಅವರ ಕುರಿತು ಚಿಂತಿಸುತ್ತಿರುವಂತೆ ಅದು ಮಾಡುತ್ತದೆ ಮತ್ತು ಅವರನ್ನು ಭೇಟಿಯಾಗಲು ಹಿಂದಿರುಗುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಆಧ್ಯಾತ್ಮಿಕವಾಗಿ ಪ್ರಗತಿಹೊಂದಲು ಅವರಿಗೆ ಸಹಾಯಮಾಡಲಿಕ್ಕಾಗಿ ನಮ್ಮಿಂದ ಸಾಧ್ಯವಿರುವುದೆಲ್ಲವನ್ನು ಮಾಡುವಂತೆ ಅದು ನಮ್ಮನ್ನು ಪ್ರೇರಿಸುತ್ತದೆ.—ಅ. ಕೃ. 20:24; 26:28, 29.
5 “ಸ್ತೋತ್ರಯಜ್ಞ”: ನಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ಯೆಹೋವನಿಗೆ ಕೊಡುವ ಮತ್ತೊಂದು ವಿಧವು, ಶುಶ್ರೂಷೆಯಲ್ಲಿ ನಾವು ಶ್ರದ್ಧಾಪೂರ್ವಕವಾಗಿ ಪಾಲ್ಗೊಳ್ಳುವ ಮೂಲಕವೇ ಆಗಿದೆ. ನಾವು ಸುಸಂಘಟಿತರಾಗಿರುವಾಗ ಮತ್ತು ನಮಗೆ ಕೊಡಲ್ಪಟ್ಟಿರುವ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸಿರುವಾಗ, ನಮಗೆ ಲಭ್ಯವಿರುವ ಸಮಯದಲ್ಲಿ ನಾವು ಅತಿ ಹೆಚ್ಚಿನ ಒಳಿತನ್ನು ಸಾಧಿಸಸಾಧ್ಯವಿದೆ. (1 ತಿಮೊ. 4:10) ಒಳ್ಳೆಯ ತಯಾರಿಯು ನಾವು ಸ್ಪಷ್ಟತೆಯಿಂದ ಹಾಗೂ ನಿಶ್ಚಿತಾಭಿಪ್ರಾಯದಿಂದ ಮಾತನಾಡುವಂತೆ ಸಾಧ್ಯಗೊಳಿಸುತ್ತದೆ, ಮತ್ತು ಹೀಗೆ ಒಂದು ಒಳ್ಳೇ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುವ ಸಂಭಾವ್ಯತೆಯನ್ನು ಹೆಚ್ಚಿಸುತ್ತದೆ. (ಜ್ಞಾನೋ. 16:21) ನಾವು ಇತರರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವಾಗ, ನಮ್ಮ ಹೃತ್ಪೂರ್ವಕ ಅಭಿವ್ಯಕ್ತಿಗಳನ್ನು ಯೋಗ್ಯವಾಗಿಯೇ “ಸ್ತೋತ್ರಯಜ್ಞ”ವೆಂದು ಕರೆಯಸಾಧ್ಯವಿದೆ.—ಇಬ್ರಿ. 13:15.