ರಾಜ್ಯ ಸಭಾಗೃಹ ನಿರ್ಮಾಣ ಕಾರ್ಯಕ್ರಮವು ಮುಂದೆ ಸಾಗುತ್ತದೆ
1 ಇಸವಿ 1983ರಲ್ಲಿ ಅಮೆರಿಕದಲ್ಲಿ ನಡೆಸಲ್ಪಟ್ಟ “ರಾಜ್ಯ ಐಕ್ಯ” ಜಿಲ್ಲಾ ಅಧಿವೇಶನಗಳಲ್ಲಿ, ಯುನೈಟಡ್ ಸ್ಟೇಟ್ಸ್ ಮತ್ತು ಕೆನಡದಾದ್ಯಂತ ರಾಜ್ಯ ಸಭಾಗೃಹಗಳನ್ನು ಕಟ್ಟುವ ಮತ್ತು ನವೀಕರಿಸುವ ಕೆಲಸವನ್ನು ಬೆಂಬಲಿಸಲು ಒಂದು ವಿಶೇಷ ನಿಧಿಯು ಸ್ಥಾಪಿಸಲ್ಪಡುವುದು ಎಂಬ ಪ್ರಕಟನೆ ಮಾಡಲ್ಪಟ್ಟಿತು. ಈ ರೀತಿಯ ಸಣ್ಣ ಪ್ರಾರಂಭಗಳಿಂದ ಯಾವ ಆಶೀರ್ವಾದಗಳು ಫಲಿಸುವವು ಎಂದು ಆಗ ಅವರು ನೆನಸಿರಲಿಲ್ಲ. ಕೀರ್ತನೆ 92:4 ಸೂಕ್ತವಾಗಿ ಏನು ಹೇಳುತ್ತದೋ ಅದನ್ನು ಅವರು ಅನುಭವಿಸಲು ಆರಂಭಿಸಿದರು: “ಯೆಹೋವನೇ, ನಿನ್ನ ಕ್ರಿಯೆಗಳಿಂದ ನನ್ನನ್ನು ಸಂತೋಷಪಡಿಸಿದ್ದೀ; ನಿನ್ನ ಕೆಲಸಗಳ ದೆಸೆಯಿಂದ ಉತ್ಸಾಹಧ್ವನಿಮಾಡುತ್ತೇನೆ.” ತರುವಾಯ, ಆರ್ಥಿಕವಾಗಿ ಬಿಕ್ಕಟ್ಟಿನಲ್ಲಿರುವ ಆಫ್ರಿಕ, ಏಷ್ಯಾ, ಮಧ್ಯ ಮತ್ತು ದಕ್ಷಿಣ ಅಮೆರಿಕ ಹಾಗೂ ಪೂರ್ವ ಯೂರೋಪಿನ ಸಹೋದರರಿಗೆ ನೆರವಾಗುವಂತೆ ಈ ನಿಧಿಗಳನ್ನು ಕಳುಹಿಸುವ ಮೂಲಕ ಈ ಕಾರ್ಯಕ್ರಮವನ್ನು ವಿಸ್ತರಿಸಲಾಯಿತು.
2 ಈಗ ಏನು ಸಾಧಿಸಲ್ಪಡುತ್ತಿದೆಯೋ ಅದರ ವಿಷಯದಲ್ಲಿ ನಾವೆಲ್ಲರೂ ಬಹಳಷ್ಟು ಸಂತೋಷಪಡಸಾಧ್ಯವಿದೆ. ಇಂದು ಭೌಗೋಳಿಕ ರಾಜ್ಯ ಸಭಾಗೃಹ ನಿರ್ಮಾಣ ಕಾರ್ಯಕ್ರಮವು ಕ್ಷಿಪ್ರಗತಿಯಲ್ಲಿ ಮುನ್ನಡೆಯುತ್ತಿದೆ. ಆದರೆ, ಭಾರತದಲ್ಲಿರುವ ನಾವು ಈ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಸುಯೋಗವನ್ನು ಹೇಗೆ ಪಡೆದುಕೊಳ್ಳಬಲ್ಲೆವು? ನಾವಿದನ್ನು ನಮ್ಮ ಸ್ವಂತ ದೇಶದಲ್ಲಿ ರಾಜ್ಯ ಸಭಾಗೃಹ ನಿರ್ಮಾಣ ಕಾರ್ಯಕ್ರಮವನ್ನು ಬೆಂಬಲಿಸುವ ಮೂಲಕ ಮಾಡಬಲ್ಲೆವು. ಇದು ಈಗ, ಸ್ಥಳಿಕ ಸಭೆಗಳಿಂದ ಮಾಡಲ್ಪಡುವ ದೊಡ್ಡ ಅಥವಾ ಚಿಕ್ಕ ಮೊತ್ತದ ಹಣಕಾಸಿನ ಕಾಣಿಕೆಗಳ ಮೇಲೆ ಅವಲಂಬಿತವಾಗಿದೆ. ಇಂತಹ ಯೋಜನೆಗಳ ಸಂಬಂಧದಲ್ಲಿ ಅನೇಕ ಸಹೋದರರು ತಮ್ಮ ಸಮಯ, ಸಾಮರ್ಥ್ಯ, ಮತ್ತು ಕೌಶಲಗಳನ್ನು ಸಹ ಸ್ವತಃ ನೀಡಲು ಸಾಧ್ಯವಾಗಬಹುದು. ನಾವು ಎಷ್ಟನ್ನೇ ಕೊಡುವುದಾದರೂ, ಈ ಇಡೀ ಕಾರ್ಯಕ್ರಮವು ಯಶಸ್ಸನ್ನು ಕಾಣುವುದು ನಮ್ಮ ಐಕ್ಯ ಪ್ರಯತ್ನಗಳ ಮೇಲೆ ಇರುವ ಯೆಹೋವನ ಮಾರ್ಗದರ್ಶನೆ, ಬೆಂಬಲ, ಮತ್ತು ಅಪಾರವಾದ ಆಶೀರ್ವಾದಗಳ ಕಾರಣದಿಂದಲೇ ಎಂಬುದನ್ನು ನಾವು ಮನಗಾಣುತ್ತೇವೆ.—ಕೀರ್ತ. 127:1.
3 ದೇಶದಾದ್ಯಂತವಿರುವ ರಾಜ್ಯ ಸಭಾಗೃಹಗಳಲ್ಲಿ, ಒಂದು ಪೆಟ್ಟಿಗೆಯು ಇಡಲ್ಪಟ್ಟಿದೆ ಮತ್ತು ಪ್ರಚಾರಕರು ರಾಜ್ಯ ಸಭಾಗೃಹ ನಿಧಿಗಾಗಿ ತಮ್ಮ ಕಾಣಿಕೆಗಳನ್ನು ಅದರಲ್ಲಿ ಹಾಕುತ್ತಾರೆ. ಮಾತ್ರವಲ್ಲದೆ, ಅನೇಕ ಸಭೆಗಳು ತಮ್ಮ ಸಭೆಯ ನಿಧಿಗಳಿಂದ ಮಾಸಿಕ ದಾನವೊಂದನ್ನು ಕಳುಹಿಸುವ ತೀರ್ಮಾನವನ್ನು ಮಾಡಿವೆ. ಬೇರೆ ಸಭೆಗಳು, ಹಣವನ್ನು ಫಿಕ್ಸ್ಡ್ ಟರ್ಮ್ ಡಿಪಾಸಿಟ್ಗಳಲ್ಲಿ ಇಡುವ ಬದಲಿಗೆ, ತಮ್ಮ ಉಳಿತಾಯವನ್ನು ರಾಜ್ಯ ಸಭಾಗೃಹ ನಿಧಿಗೆ ಕಳುಹಿಸಿವೆ. ಏಕೆಂದರೆ, ತಮ್ಮ ಸಭಾಗೃಹವನ್ನು ಕಟ್ಟುವ ಸಾಧ್ಯತೆ ಉಂಟಾಗುವಾಗ ಅವರಿಗೆ ತಮ್ಮ ಡಿಪಾಸಿಟ್ನಿಂದ ಮಾತ್ರವಲ್ಲ, ಸದ್ಯಕ್ಕೆ ಸಭಾಗೃಹದ ಅಗತ್ಯವಿಲ್ಲದಿರುವ ಇತರ ಸಭೆಗಳು ಕಳುಹಿಸುವ ಹಣದಿಂದಲೂ ಪ್ರಯೋಜನ ಪಡೆಯಸಾಧ್ಯವಿದೆ ಎಂಬ ಭರವಸೆ ಆ ಸಭೆಗಳಿಗಿದೆ.
4 ಈ ವರೆಗೆ ಯಾವ ಪ್ರತಿಕ್ರಿಯೆ ಸಿಕ್ಕಿದೆ? ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಪ್ರಚಾರಕರು ಈ ಹೊಸ ಏರ್ಪಾಡಿನ ಕುರಿತು ಮೊದಲು ತಿಳಿದುಕೊಂಡಾಗಿನಿಂದ, ಈ ವರೆಗೆ ಎರಡು ಹೊಸ ರಾಜ್ಯ ಸಭಾಗೃಹಗಳನ್ನು ಕಟ್ಟಿ ಮುಗಿಸುವಷ್ಟು ಹಣವು ಈಗಾಗಲೇ ಡಿಪಾಸಿಟ್ ಮಾಡಲ್ಪಟ್ಟಿದೆ. ಆದರೆ ಈ ನಿಧಿಯಿಂದ ಈಗಾಗಲೇ ಪ್ರಯೋಜನವನ್ನು ಪಡೆದುಕೊಂಡಿದ್ದು ಸೂಕ್ತವಾದ ಸಭಾಗೃಹಗಳನ್ನು ಕಟ್ಟಿಕೊಂಡಿರುವ ಸಭೆಗಳು ಕೂಡ, ತಮ್ಮಂತೆಯೇ ಬೇರೆ ಸಭೆಗಳೂ ಪ್ರಯೋಜನ ಹೊಂದುವಂತಾಗಲು ಈಗಲೂ ಕ್ರಮವಾಗಿ ಕಾಣಿಕೆಗಳನ್ನು ಕಳುಹಿಸುತ್ತಿರುವುದನ್ನು ನೋಡುವುದು ಪ್ರೋತ್ಸಾಹದಾಯಕವಾಗಿದೆ. ತಮ್ಮ ಸ್ವಂತ ಸಭಾಗೃಹವನ್ನು ಕಟ್ಟಲು ಅಸಮರ್ಥರಾಗಿರುವವರು ಈಗ ತಮ್ಮ ಮಾಸಿಕ ಕಾಣಿಕೆಗಳನ್ನು ಕಳುಹಿಸಲು ಆರಂಭಿಸಿದ್ದಾರೆ. ದೇಶದ ಬೇರೊಂದು ಕಡೆ ಒಂದು ಸಭಾಗೃಹವನ್ನು ಕಟ್ಟಲಿಕ್ಕಾಗಿ ಈ ಹಣವನ್ನು ತಕ್ಷಣವೇ ಉಪಯೋಗಿಸಲಾಗುತ್ತದೆ ಎಂಬುದನ್ನು ತಿಳಿದಿರುವುದು ಅವರಿಗೆ ಸಂತೋಷವನ್ನುಂಟುಮಾಡುತ್ತದೆ, ಮತ್ತು ಸೂಕ್ತ ಸಮಯದಲ್ಲಿ, ತಮ್ಮ ಯೋಜನೆಗಳಿಗೆ ಬಂಡವಾಳ ಹೂಡಲು ತದ್ರೀತಿಯ ದಾನಗಳಿಂದ ಅವರು ಪ್ರಯೋಜನ ಹೊಂದುವರು.
5 ನಿರ್ಮಾಣಗೊಂಡಿರುವ ರಾಜ್ಯಸಭಾಗೃಹಗಳ ಚಿತ್ರಗಳನ್ನು ನೀವಿಲ್ಲಿ ನೋಡುವಾಗ ಬೇರೆ ದೇಶಗಳಲ್ಲೂ ಈ ಕಾರ್ಯಕ್ರಮದ ಮೇಲೆ ಯೆಹೋವನ ಆಶೀರ್ವಾದವಿದೆ ಎಂಬುದಕ್ಕೆ ಸಾಕ್ಷ್ಯವನ್ನು ಪಡೆದುಕೊಳ್ಳಬಹುದು. ಆ ದೇಶಗಳಲ್ಲಿ ತದ್ರೀತಿಯ ನಿರ್ಮಾಣ ಕೆಲಸಗಳು ಯೆಹೋವನ ಸಾಕ್ಷಿಗಳ ಕೆಲಸದ ಮೇಲೆ ಬೀರಿರುವ ಪ್ರಭಾವದ ಕುರಿತು ತುಸು ಯೋಚಿಸಿರಿ. ಇದು ಮೂರು ವಿಭಿನ್ನ ಕ್ಷೇತ್ರಗಳಲ್ಲಿ ಸತ್ಯವಾಗಿದೆ—ನಮ್ಮ ಲೋಕವ್ಯಾಪಕ ಸಹೋದರತ್ವದ ಐಕ್ಯ, ಸ್ಥಳಿಕ ಸಮಾಜದ ಮೇಲೆ ಆಗುವ ಪ್ರಭಾವ, ಮತ್ತು ಕೂಟಗಳ ಹಾಜರಿಯಲ್ಲಿ ಹೆಚ್ಚಳ. ಈ ಪುರವಣಿಯು, ಆಫ್ರಿಕದಲ್ಲಿ ಕಟ್ಟಲ್ಪಟ್ಟಿರುವ ರಾಜ್ಯ ಸಭಾಗೃಹಗಳನ್ನು ತೋರಿಸುವುದಾದರೂ, ನಮ್ಮ ರಾಜ್ಯದ ಸೇವೆಯ ಭಾವೀ ಸಂಚಿಕೆಗಳು ಈ ರಾಜ್ಯ ಸಭಾಗೃಹ ನಿರ್ಮಾಣ ಕಾರ್ಯಕ್ರಮವು ಸ್ವತಃ ಭಾರತದಲ್ಲಿ ಹೇಗೆ ಮುನ್ನಡೆಯುತ್ತಿದೆ ಎಂಬುದರ ಕುರಿತು ತಿಳಿಸುವವು ಎಂದು ನಾವು ನಂಬುತ್ತೇವೆ. ನಿಮ್ಮ ಸಭೆಯು ಈ ಕಾರ್ಯಕ್ರಮದಿಂದ ಪ್ರಯೋಜನ ಹೊಂದುವುದೋ? ಈ ಕಾರ್ಯಕ್ರಮದಲ್ಲಿ ಸಾಧ್ಯವಾದಷ್ಟು ಪೂರ್ಣವಾಗಿ ಪಾಲ್ಗೊಳ್ಳುವಂತೆ ನೀವು ಮಾಡುವ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸಲಿ.
[ಪುಟ 5 ರಲ್ಲಿರುವಚಿತ್ರ]
ಬಿಂಬೋ, ಬಾಂಗೀ
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್
ಬಗೂವ, ಬಾಂಗೀ
[ಪುಟ 6 ರಲ್ಲಿರುವಚಿತ್ರ]
ಉಕಾಂಗಾ, ಟಾನ್ಸೇನಿಯ
ಸಲಾಲ, ಲೈಬಿರೀಯ
ಪೆಮೀ, ಟೋಗೋ
ಸೋಕೋಡೇ, ಟೋಗೋ
ಕರೊಈ, ಸಿಂಬಾಬ್ವೆ