ಸಾಕ್ಷಿಯಾಗಿರದ ಸಂಗಾತಿಗಳಿಗೆ ನಾವು ಹೇಗೆ ಸಹಾಯಮಾಡಬಲ್ಲೆವು?
1 ಯೆಹೋವನ ಸೇವಕರಲ್ಲಿ ಅನೇಕರ ಸಂಗಾತಿಗಳು, ಸಾಕ್ಷಿಗಳ ಕಡೆಗೆ ಸ್ನೇಹಭಾವವನ್ನು ಮತ್ತು ಸಭೆಯ ವಿಷಯದಲ್ಲಿ ಆಸಕ್ತಿಯನ್ನು ತೋರಿಸುತ್ತಾರಾದರೂ, ದೇವರ ಸೇವಕರಾಗಲು ಹಿಂಜರಿಯುತ್ತಾರೆ. ಒಬ್ಬ ಪತಿಯು ಒಪ್ಪಿಕೊಂಡದ್ದು: “ಮನೆಯಿಂದ ಮನೆಗೆ ಹೋಗುವ ವಿಚಾರವೇ ನನ್ನ ಮುಂದೆ ದೊಡ್ಡ ಅಡ್ಡಗೋಡೆಯಂತಿತ್ತು.” ಇತರರಲ್ಲಿಯಾದರೋ, ಅವರು ಜಯಿಸಬೇಕಾಗಿರುವ ಅಶಾಸ್ತ್ರೀಯ ಹವ್ಯಾಸಗಳಿರಬಹುದು, ಇಲ್ಲವೆ ತಮ್ಮ ಸಂಗಾತಿಯಂತೆ ಕಾರ್ಯಮಗ್ನವಾದ ದೇವಪ್ರಭುತ್ವಾತ್ಮಕ ಶೆಡ್ಯೂಲ್ ಅನ್ನು ಪಾಲಿಸಲು ತಮ್ಮಿಂದ ಎಂದಿಗೂ ಸಾಧ್ಯವಿಲ್ಲವೆಂದು ಅವರು ನೆನಸಬಹುದು. ನಾವು ಅವರಿಗೆ ಹೇಗೆ ಸಹಾಯಮಾಡಬಲ್ಲೆವು?
2 ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ: ಇತರರಲ್ಲಿ ವೈಯಕ್ತಿಕ ಆಸಕ್ತಿಯನ್ನು ವಹಿಸುವುದು ಮತ್ತು ಅವರ ಚಿಂತೆಗಳ ವಿಷಯದಲ್ಲಿ ಪರಿಗಣನೆ ತೋರಿಸುವುದು, ಬೈಬಲ್ ಸತ್ಯಕ್ಕೆ ಪ್ರತಿಕ್ರಿಯೆ ತೋರಿಸುವಂತೆ ಅವರನ್ನು ನಡಿಸಬಹುದು. (ಫಿಲಿ. 2:4) ಹಿಂದೆ ತಮ್ಮ ಸಂಗಾತಿಯ ನಂಬಿಕೆಯಲ್ಲಿ ಪಾಲಿಗರಾಗದ್ದಿದ್ದವರು ತಮಗೆ ಇತರ ಸಾಕ್ಷಿಗಳು ತೋರಿಸಿದ ಪ್ರೀತಿಪರ ಕಾಳಜಿಯ ಕುರಿತು ಅನೇಕಾವರ್ತಿ ಮಾತನಾಡುತ್ತಾರೆ. “ಸಭೆಯಲ್ಲಿ ಒಬ್ಬ ಹಿರಿಯರಾಗಿರುವ ಹೋಸೇ ನನ್ನಲ್ಲಿ ವಿಶೇಷ ಆಸಕ್ತಿಯನ್ನು ವಹಿಸಿಕೊಂಡರು,” ಎಂದು ಮೇಲೆ ಉಲ್ಲೇಖಿಸಲ್ಪಟ್ಟಿರುವ ಗಂಡನು ವಿವರಿಸುತ್ತಾನೆ. “ಅವರ ಪ್ರೋತ್ಸಾಹವೇ ಕೊನೆಯದಾಗಿ ನಾನು ಅಧ್ಯಯನ ಮಾಡುವುದನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಮಾಡಿತು ಎಂದು ನನಗನಿಸುತ್ತದೆ.” ಸಂದರ್ಶಿಸುತ್ತಿದ್ದ ಸಹೋದರರು ಹೇಗಾದರೂ ಮಾಡಿ ತನ್ನ ಅಭಿರುಚಿಗಳ ಕುರಿತು ಮಾತನಾಡಲು ಪ್ರಯತ್ನಿಸಿದರು ಎಂದು ಮತ್ತೊಬ್ಬ ಪತಿಯು ಜ್ಞಾಪಿಸಿಕೊಳ್ಳುತ್ತಾ ಹೇಳುತ್ತಾನೆ. “ನಾನು [ನನ್ನ ಹೆಂಡತಿಯ] ನಂಬಿಕೆಯನ್ನು ಸಂಪೂರ್ಣವಾಗಿ ಮಾರ್ಪಟ್ಟ ದೃಷ್ಟಿಕೋನದಿಂದ ನೋಡಲು ಆರಂಭಿಸಿದೆ,” ಎಂದನವನು. “ಅವಳ ಸ್ನೇಹಿತರು ಭಿನ್ನಭಿನ್ನವಾದ ವಿಷಯಗಳ ಕುರಿತು ಚರ್ಚಿಸಬಲ್ಲ ಬುದ್ಧಿವಂತರಾಗಿದ್ದರು.”—1 ಕೊರಿಂ. 9:20-23.
3 ಪ್ರಾಯೋಗಿಕ ನೆರವನ್ನು ನೀಡಿರಿ: ಸಾಕ್ಷಿಯಾಗಿರದ ಸಂಗಾತಿಗಳು, ತಮಗೆ ನೀಡಲ್ಪಡುವ ದಯಾಪರ ನೆರವಿನಿಂದಲೂ ಸ್ಪರ್ಶಿಸಲ್ಪಡಬಹುದು. (ಜ್ಞಾನೋ. 3:27; ಗಲಾ. 6:10) ಒಬ್ಬ ಅವಿಶ್ವಾಸಿ ಗಂಡನ ಕಾರ್ ಕೆಟ್ಟು ಹೋದಾಗ, ಯುವ ಸಾಕ್ಷಿಯೊಬ್ಬನು ಅವನ ನೆರವಿಗೆ ಬಂದನು. “ಅದು ನನ್ನನ್ನು ತುಂಬ ಪ್ರಭಾವಿಸಿತು,” ಎಂದು ಅವನು ಜ್ಞಾಪಿಸಿಕೊಳ್ಳುತ್ತಾನೆ. ಮತ್ತೊಬ್ಬ ಸಹೋದರನು, ಅವಿಶ್ವಾಸಿಯಾಗಿದ್ದ ಒಬ್ಬ ಸಹೋದರಿಯ ಗಂಡನಿಗೆ ಅವನ ಹಿತ್ತಲಿನ ಸುತ್ತಲೂ ಬೇಲಿಯನ್ನು ಕಟ್ಟುವುದರಲ್ಲಿ ಒಂದು ದಿನವಿಡೀ ಸಹಾಯಮಾಡಿದನು. ಒಟ್ಟಿಗೆ ಕೆಲಸಮಾಡುತ್ತಾ ಮಾತನಾಡುತ್ತಾ ಇದ್ದಾಗ, ಅವರ ಮಧ್ಯೆ ಸ್ನೇಹಸಂಬಂಧವು ಬೆಳೆಯಿತು. ಎರಡು ವಾರಗಳ ನಂತರ, ಆ ವ್ಯಕ್ತಿ ಈ ಸಹೋದರನನ್ನು ಸಮೀಪಿಸಿ ಹೀಗೆ ಹೇಳಿದನು: “ನನ್ನ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಸಮಯ ಬಂದಿದೆ. ನೀವು ನನ್ನೊಟ್ಟಿಗೆ ಬೈಬಲನ್ನು ಅಧ್ಯಯನ ಮಾಡುವಿರೋ?” ಅವನು ವೇಗಗತಿಯಲ್ಲಿ ಪ್ರಗತಿಯನ್ನು ಮಾಡಿದನು ಮತ್ತು ಈಗ ಒಬ್ಬ ಸ್ನಾತ ಸಾಕ್ಷಿಯಾಗಿದ್ದಾನೆ.
4 ನಾವು ನಮ್ಮ ಟೆರಿಟೊರಿಯಲ್ಲಿರುವ ಯೋಗ್ಯ ವ್ಯಕ್ತಿಗಳಿಗಾಗಿ ಹುಡುಕುತ್ತಾ ಹೋಗುವಾಗ, ನಮ್ಮ ಜೊತೆ ವಿಶ್ವಾಸಿಗಳ ಸಂಗಾತಿಗಳಿಗೂ ಸಹಾಯಮಾಡುವುದನ್ನು ಮುಂದುವರಿಸೋಣ.—1 ತಿಮೊ. 2:1-4.