ಏಪ್ರಿಲ್—‘ಕಷ್ಟಪಟ್ಟು ದುಡಿಯುವ ಹಾಗೂ ಹೆಣಗಾಡುವ ಸಮಯ’
1 ಜ್ಞಾಪಕಾಚರಣೆಯ ಮುಂಚಿನ ಮತ್ತು ನಂತರದ ವಾರಗಳು, ಯೆಹೋವನ ಜನರಿಗೆ ಮನನಮಾಡುವ ಸಮಯವಾಗಿವೆ. ಕ್ರಿಸ್ತನ ಮರಣದ ಮೂಲಕ ಏನೆಲ್ಲ ಸಾಧಿಸಲ್ಪಟ್ಟಿದೆ ಎಂಬುದರ ಬಗ್ಗೆ ಯೋಚಿಸುವ ಮತ್ತು ಯೇಸು ಸುರಿಸಿದ ರಕ್ತದಿಂದ ಸಾಧ್ಯವಾಗಿರುವ ದೇವದತ್ತ ನಿರೀಕ್ಷೆಯ ಕುರಿತಾಗಿ ಅವಲೋಕಿಸುವ ಸಮಯವೂ ಇದೇ ಆಗಿದೆ. ಕಳೆದ ವರ್ಷ ಏಪ್ರಿಲ್ ತಿಂಗಳ 19ನೆಯ ತಾರೀಖಿನ ಕುರಿತಾಗಿ ಯೋಚಿಸುವಾಗ ನಿಮ್ಮ ಮನಸ್ಸಿಗೆ ಏನು ಜ್ಞಾಪಕಕ್ಕೆ ಬರುತ್ತದೆ? ಆ ಸಂಜೆ ನೀವು ನೋಡಿದಂಥ ಮುಖಗಳು ನೆನಪಿಗೆ ಬರುತ್ತವೋ? ಜ್ಞಾಪಕಾಚರಣೆಯ ಸಮಯದಲ್ಲಿದ್ದ ಸಮೃದ್ಧವಾದ ಆತ್ಮಿಕ ವಾತಾವರಣವು ನೆನಪಿಗೆ ಬರುತ್ತದೋ? ಇಲ್ಲವೇ, ಅಲ್ಲಿ ನಡೆದ ಗಂಭೀರವಾದ ಬೈಬಲ್ ಚರ್ಚೆ ಹಾಗೂ ಹೃತ್ಪೂರ್ವಕವಾದ ಪ್ರಾರ್ಥನೆಗಳು ಮನಸ್ಸಿಗೆ ಬರುತ್ತವೋ? ಬಹುಶಃ, ಯೆಹೋವ ಮತ್ತು ಯೇಸು ನಿಮಗಾಗಿ ತೋರಿಸಿರುವ ಪ್ರೀತಿಗಾಗಿ, ಆಳವಾದ ಕೃತಜ್ಞತೆಯನ್ನು ಇನ್ನೂ ಹೆಚ್ಚಾಗಿ ತೋರಿಸುವ ದೃಢನಿರ್ಧಾರವನ್ನು ನೀವು ಮಾಡಿದ್ದಿರಬೇಕು. ಇಂಥ ಮನನವು ನಿಮ್ಮ ಮೇಲೆ ಈಗ ಯಾವ ಪ್ರಭಾವವನ್ನು ಬೀರುತ್ತದೆ?
2 ಯೆಹೋವನ ಜನರು ತಮ್ಮ ಕೃತಜ್ಞತೆಯನ್ನು ಬರೀ ಮಾತುಗಳಲ್ಲಿ ವ್ಯಕ್ತಪಡಿಸುವುದಿಲ್ಲ ಎಂಬುದು ಸ್ಪಷ್ಟ. (ಕೊಲೊ. 3:15, 17) ವಿಶೇಷವಾಗಿ ಕಳೆದ ಏಪ್ರಿಲ್ ತಿಂಗಳಿನಲ್ಲಿ, ಕ್ರೈಸ್ತ ಶುಶ್ರೂಷೆಯಲ್ಲಿ ನಾವು ನಮ್ಮನ್ನು ಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ, ರಕ್ಷಣೆಗಾಗಿ ಯೆಹೋವನು ಮಾಡಿರುವ ಏರ್ಪಾಡುಗಳಿಗೆ ನಮ್ಮ ಗಣ್ಯತೆಯನ್ನು ತೋರಿಸುವ ಪ್ರಯತ್ನವನ್ನು ಮಾಡಿದೆವು. ನೂರಾರು ಸಂಖ್ಯೆಯಲ್ಲಿ ಸಹೋದರಸಹೋದರಿಯರು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಿದರು. ಅದು, ಭಾರತದ ಹಿಂದಿನ ಉಚ್ಚಾಂಕಕ್ಕಿಂತ 34 ಪ್ರತಿಶತ ಹೆಚ್ಚಾಗಿತ್ತು. ಇವರು ಮತ್ತು ಇನ್ನಿತರ ರಾಜ್ಯ ಘೋಷಕರ ಪ್ರಯತ್ನದಿಂದಾಗಿ, ತಾಸುಗಳಲ್ಲಿ, ಪತ್ರಿಕೆಗಳ ನೀಡುವಿಕೆಗಳಲ್ಲಿ ಮತ್ತು ಪುನರ್ಭೇಟಿಗಳಲ್ಲಿ ಒಂದು ಹೊಸ ಉಚ್ಚಾಂಕವಿತ್ತು. ಸಾವಿರಾರು ಹೊಸ ಬೈಬಲ್ ಅಭ್ಯಾಸಗಳು ಆರಂಭಿಸಲ್ಪಟ್ಟಿರುವುದನ್ನು ಮತ್ತು ಜ್ಞಾಪಕಾಚರಣೆಗೆ ಹಾಜರಾದವರ ಒಂದು ಹೊಸ ಉಚ್ಛಾಂಕವನ್ನು ನೋಡಿ ನಮ್ಮ ಆನಂದವು ಇಮ್ಮಡಿಯಾಯಿತು!
3 ಹೌದು, ನಮ್ಮ ನಿರೀಕ್ಷೆಯ ಕುರಿತಾದ ನಿಶ್ಚಿತತೆಯೇ ನಮ್ಮನ್ನು ಕಾರ್ಯವೆಸಗುವಂತೆ ಪ್ರಚೋದಿಸುತ್ತದೆ. ಇದು ಅಪೊಸ್ತಲ ಪೌಲನು ಬರೆದಂತೆಯೇ ಇದೆ: “ಇದಕ್ಕಾಗಿ ನಾವು ಕಷ್ಟಪಡುತ್ತೇವೆ, ಹೋರಾಡುತ್ತೇವೆ, [“ಕಷ್ಟಪಟ್ಟು ಹೋರಾಡುತ್ತೇವೆ ಹಾಗೂ ಹೆಣಗಾಡುತ್ತೇವೆ,” NW] ಯಾಕಂದರೆ ಎಲ್ಲಾ ಮನುಷ್ಯರಿಗೂ, ವಿಶೇಷವಾಗಿ ನಂಬುವವರಿಗೆ, ರಕ್ಷಕನಾಗಿರುವ ಜೀವವುಳ್ಳ ದೇವರ ಮೇಲೆ ನಾವು ನಿರೀಕ್ಷೆಯನ್ನಿಟ್ಟುಕೊಂಡಿದ್ದೇವೆ.”—1 ತಿಮೊ. 4:10.
4 ಈ ವರ್ಷದ ಜ್ಞಾಪಕಾಚರಣೆಯ ಸಮಯದಲ್ಲಿ, ಜೀವಕ್ಕಾಗಿ ಯೆಹೋವನು ಮಾಡಿರುವ ಏರ್ಪಾಡುಗಳಲ್ಲಿ ನಿಮಗಿರುವ ನಂಬಿಕೆಯನ್ನು ಹೇಗೆ ಪ್ರದರ್ಶಿಸುವಿರಿ? ಕಳೆದ ಏಪ್ರಿಲ್ ತಿಂಗಳಿನಲ್ಲಿ, ಇದುವರೆಗೂ ದಾಖಲಾಗಿರುವ ರಾಜ್ಯ ಘೋಷಕರ ಸಂಖ್ಯೆಯಲ್ಲಿ ಭಾರತವು ಎರಡನೇ ಅತ್ಯುಚ್ಛ ಸಂಖ್ಯೆಯನ್ನು ಮುಟ್ಟಿರುವುದನ್ನು ನೋಡಿದೆವು. ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ನಾವು ಆ ಸಂಖ್ಯೆಯನ್ನು ಮೀರಿಸಬಲ್ಲೆವೋ? ಈ ಗುರಿಯನ್ನು ಮುಟ್ಟಲು ಸಾಧ್ಯವಿದೆ. ಆದರೆ ಅದಕ್ಕಾಗಿ, ದೀಕ್ಷಾಸ್ನಾನವನ್ನು ಪಡೆದುಕೊಂಡಿರುವ ಹಾಗೂ ಪಡೆದುಕೊಂಡಿರದ ಪ್ರತಿಯೊಬ್ಬ ಪ್ರಚಾರಕನು ಕ್ಷೇತ್ರಸೇವೆಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಅನೇಕ ಹೊಸಬರು ಸಹ ಪಾಲ್ಗೊಳ್ಳಲು ಅರ್ಹರಾಗಿರಬಹುದು. ಆದುದರಿಂದ, ಈ ಏಪ್ರಿಲ್ ತಿಂಗಳಿನಲ್ಲಿ ನೀವು ಕಷ್ಟಪಟ್ಟು ದುಡಿಯಲು ಮತ್ತು ಹೆಣಗಾಡಲು ಯೋಜನೆಗಳನ್ನು ಮಾಡುವಾಗ, ನಿಮ್ಮೊಂದಿಗೆ ಜೊತೆಗೂಡುವಂತೆ ಹೊಸಬರು ಮತ್ತು ಕಡಿಮೆ ಅನುಭವವುಳ್ಳವರನ್ನು ಸೇರಿಸಿ ಇತರರನ್ನೂ ಉತ್ತೇಜಿಸುವ ವಿಧಗಳನ್ನು ಪರಿಗಣಿಸಿರಿ.
5 ತಮ್ಮ ಚಟುವಟಿಕೆಯನ್ನು ಮತ್ತೆ ಆರಂಭಿಸಲು ಕೆಲವರಿಗೆ ಸಹಾಯಮಾಡುವುದು: ಒಂದು ಅಥವಾ ಎರಡು ತಿಂಗಳುಗಳಿಂದ ಕ್ಷೇತ್ರ ಸೇವೆಯಲ್ಲಿ ಪಾಲ್ಗೊಂಡಿರದ ಕೆಲವರ ಕುರಿತು ನಿಮಗೆ ಗೊತ್ತಿರುವಲ್ಲಿ, ನೀವು ಅವರನ್ನು ಉತ್ತೇಜಿಸಬಹುದು ಮತ್ತು ಅವರು ನಿಮ್ಮೊಂದಿಗೆ ಕ್ಷೇತ್ರ ಸೇವೆಗೆ ಬರುವಂತೆ ಆಮಂತ್ರಿಸಬಹುದು. ಸಭೆಯಲ್ಲಿ ಕೆಲವರು ನಿಷ್ಕ್ರಿಯರಾಗಿರುವಲ್ಲಿ, ಹಿರಿಯರು ಅವರನ್ನು ಭೇಟಿಮಾಡಲು ಮತ್ತು ಏಪ್ರಿಲ್ ತಿಂಗಳಿನಲ್ಲಿ ಸೇವೆಯನ್ನು ಪುನಃ ಆರಂಭಿಸುವಂತೆ ಅವರನ್ನು ಉತ್ತೇಜಿಸಲು ವಿಶೇಷವಾದ ಪ್ರಯತ್ನವನ್ನು ಮಾಡುವರು.
6 ಯೆಹೋವನ ಸೇವೆಯನ್ನು ಮಾಡಲು ನಮ್ಮನ್ನು ಬಲಪಡಿಸುವಂತೆ ನಾವೆಲ್ಲರೂ ಆತನ ಆತ್ಮಕ್ಕಾಗಿ ಸತತವಾಗಿ ಬೇಡುತ್ತಾ ಇರಬೇಕು. (ಲೂಕ 11:13) ಆ ಆತ್ಮವನ್ನು ಪಡೆದುಕೊಳ್ಳಲಿಕ್ಕಾಗಿ ನಾವೇನು ಮಾಡಬೇಕು? ದೇವರ ಪ್ರೇರಿತ ವಾಕ್ಯವನ್ನು ಓದಬೇಕು. (2 ತಿಮೊ. 3:16, 17) ಅಲ್ಲದೆ, ಪ್ರತಿ ವಾರ ನಡೆಯುವ ಎಲ್ಲ ಐದು ಕೂಟಗಳಿಗೆ ಹಾಜರಿರುವ ಮೂಲಕವೂ ನಾವು “ದೇವರಾತ್ಮನು ಸಭೆಗಳಿಗೆ ಹೇಳುವದನ್ನು” ಕೇಳಿಸಿಕೊಳ್ಳುವವರಾಗಿರಬೇಕು. (ಪ್ರಕ. 3:6) ಅನಿಯಮಿತ ಹಾಗೂ ನಿಷ್ಕ್ರಿಯರಾಗಿರುವ ಪ್ರಚಾರಕರಿಗೆ ತಮ್ಮ ಅಭ್ಯಾಸದ ರೂಢಿಗಳನ್ನು ಉತ್ತಮಗೊಳಿಸಲು ಹಾಗೂ ಕೂಟಗಳಿಗೆ ಕ್ರಮವಾಗಿ ಹಾಜರಾಗುವಂತೆ ಸಹಾಯಮಾಡಲು ತಕ್ಕ ಸಮಯವು ಇದೇ ಆಗಿದೆ. (ಕೀರ್ತ. 50:23) ಇದನ್ನು ಮಾಡುವ ಸಮಯದಲ್ಲಿ, ನಾವು ನಮ್ಮ ಸ್ವಂತ ಆತ್ಮಿಕ ಯೋಗಕ್ಷೇಮದ ಮೇಲೂ ಕಣ್ಣಿಟ್ಟಿರಬೇಕು. ಹಾಗಿದ್ದರೂ, ಇನ್ನೊಂದು ವಿಷಯವು ಆವಶ್ಯಕವಾಗಿದೆ.
7 “ತನಗೆ ವಿಧೇಯರಾಗಿರುವವರಿಗೆ” ದೇವರು ಪವಿತ್ರಾತ್ಮವನ್ನು ಕೊಡುತ್ತಾನೆಂದು ಅಪೊಸ್ತಲ ಪೇತ್ರನು ವಿವರಿಸುತ್ತಾನೆ. (ಅ.ಕೃ. 5:32) ಅಂಥ ವಿಧೇಯತೆಯಲ್ಲಿ, ‘ಜನರಿಗೆ ಸಾರಿ, ಸಾಕ್ಷಿಹೇಳಬೇಕೆಂಬ’ ಆಜ್ಞೆಯನ್ನು ಪಾಲಿಸುವುದು ಸಹ ಒಳಗೂಡಿದೆ. (ಅ.ಕೃ. 1:8; 10:42) ಹಾಗಾಗಿ, ಸಾರುವ ಕೆಲಸದಲ್ಲಿ ನಮ್ಮನ್ನು ಬಲಪಡಿಸಲು ದೇವರ ಪವಿತ್ರಾತ್ಮವು ನಮಗೆ ಅಗತ್ಯವಾಗಿದೆಯೆಂಬುದೇನೋ ನಿಜವೇ. ಆದರೂ ಯೆಹೋವನನ್ನು ಸಂತೋಷಪಡಿಸುವ ನಮ್ಮ ಇಚ್ಛೆಯನ್ನು ನಾವು ವ್ಯಕ್ತಪಡಿಸಲು ಪ್ರಾರಂಭಿಸಿದಂತೆ ಆತನೇ ನಮಗೆ ಇನ್ನೂ ಹೆಚ್ಚಾಗಿ ಸಹಾಯಮಾಡುತ್ತಾನೆ ಎಂಬುದು ಸಹ ಅಷ್ಟೇ ನಿಜವಾಗಿದೆ. ಆದುದರಿಂದ, ಮನಃಪೂರ್ವಕ ವಿಧೇಯತೆಯ ಆ ಆರಂಭದ ಹೆಜ್ಜೆಗಳನ್ನು ತೆಗೆದುಕೊಳ್ಳುವುದರ ಮಹತ್ವವನ್ನು ಎಂದಿಗೂ ಕಡಿಮೆಮಾಡದಿರೋಣ!
8 ಮಕ್ಕಳಿಗೆ ಸಹಾಯಮಾಡುವುದು: ಹೆತ್ತವರೇ, ಸತ್ಯದ ಕುರಿತಾಗಿ ನಿಮ್ಮ ಮಕ್ಕಳು ಇತರರೊಂದಿಗೆ ಮಾತಾಡಲು ಬಯಸುತ್ತಾರೆ ಎಂಬುದರ ಪುರಾವೆಯನ್ನು ನೀವು ನೋಡಿದ್ದೀರೋ? ಅವರು ನಿಮ್ಮೊಂದಿಗೆ ಕ್ಷೇತ್ರಸೇವೆಗೆ ಬರುತ್ತಾರೋ? ಅವರು ತಮ್ಮ ನಡವಳಿಕೆಯಲ್ಲಿ ಆದರ್ಶಪ್ರಾಯರಾಗಿದ್ದಾರೋ? ಹಾಗಿರುವುದಾದರೆ, ಹಿಂಜರಿಕೆ ಏಕೆ? ಸಭೆಯ ಸರ್ವಿಸ್ ಕಮಿಟಿಯಲ್ಲಿ ಯಾರಾದರೊಬ್ಬರನ್ನು ಸಂಪರ್ಕಿಸಿರಿ. ಮತ್ತು ಈ ಏಪ್ರಿಲ್ ತಿಂಗಳಿನಲ್ಲಿ ನಿಮ್ಮ ಮಗನೋ ಮಗಳೋ ಪ್ರಚಾರಕರಾಗಲು ಅರ್ಹರಾಗಿದ್ದಾರೊ ಎಂಬುದನ್ನು ಪರಿಶೀಲಿಸಿರಿ. (ನಮ್ಮ ಶುಶ್ರೂಷೆ ಪುಸ್ತಕದ 99-100 ಪುಟಗಳನ್ನು ನೋಡಿ.) ಈ ಜ್ಞಾಪಕಾಚರಣೆಯ ಸಮಯದಲ್ಲಿ ನಿಮ್ಮ ಮಕ್ಕಳು ಯೆಹೋವನಿಗೆ ಮಹಾ ಸ್ತುತಿಯ ಘೋಷಣೆಗೆ ಅತ್ಯಂತ ವಿಶೇಷ ರೀತಿಯಲ್ಲಿ ಹೆಚ್ಚನ್ನು ಕೂಡಿಸಸಾಧ್ಯವಿದೆ ಎಂಬುದನ್ನು ಗ್ರಹಿಸಿರಿ.—ಮತ್ತಾ. 21:15, 16.
9 ಅಮೆರಿಕದ ಜಾರ್ಜಿಯ ನಗರದಲ್ಲಿರುವ ಒಬ್ಬ ಕ್ರೈಸ್ತ ತಾಯಿಯು, ಯೆಹೋವನ ಕುರಿತಾಗಿ ಇತರರೊಂದಿಗೆ ಮಾತಾಡುವಂತೆ ಯಾವಾಗಲೂ ತನ್ನ ಎಳೆಯ ಮಗಳನ್ನು ಉತ್ತೇಜಿಸುತ್ತಿದ್ದಳು. ಕಳೆದ ವರ್ಷ, ಹುಡುಗಿಯು ತನ್ನ ತಾಯಿಯೊಂದಿಗೆ ಕ್ಷೇತ್ರಸೇವೆಯಲ್ಲಿ ಒಳಗೂಡಿದ್ದಾಗ, ಒಬ್ಬ ವ್ಯಕ್ತಿಗೆ ಅಪೇಕ್ಷಿಸು ಬ್ರೋಷರನ್ನು ನೀಡಿದಳು ಮತ್ತು ಪರಿವಿಡಿಯಲ್ಲಿರುವ ವಿಷಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿದಳು. ಅವನು ಅವಳಿಗೆ “ನಿನ್ನ ವಯಸ್ಸೆಷ್ಟು?” ಎಂದು ಕೇಳಿದನು. ಅದಕ್ಕೆ ಅವಳು “ಏಳು ವರ್ಷ” ಎಂದು ಹೇಳಿದಳು. ಅವಳು ಅಷ್ಟೊಂದು ಅರ್ಥಭರಿತ ಪ್ರಸ್ತಾವನೆಯನ್ನು ಕೊಡುವುದನ್ನು ನೋಡಿ ಅವನಿಗೆ ಆಶ್ಚರ್ಯವಾಗಿತ್ತು. ಅವನು ಚಿಕ್ಕವನಾಗಿದ್ದಾಗ ಸಾಕ್ಷಿಗಳೊಂದಿಗೆ ಸಹವಾಸ ಮಾಡುತ್ತಿದ್ದನು. ಆದರೆ ಸತ್ಯವನ್ನು ತನ್ನ ಜೀವನದ ಮಾರ್ಗವನ್ನಾಗಿ ಮಾಡುವುದರ ಬಗ್ಗೆ ಎಂದೂ ಗಂಭೀರವಾಗಿ ಯೋಚಿಸಿರಲಿಲ್ಲ. ಸ್ವಲ್ಪ ಸಮಯದೊಳಗಾಗಿ, ಆ ವ್ಯಕ್ತಿ, ಅವನ ಹೆಂಡತಿ ಮತ್ತು ಮಗಳೊಂದಿಗೆ ಬೈಬಲ್ ಅಭ್ಯಾಸವೊಂದನ್ನು ಪ್ರಾರಂಭಿಸಲಾಯಿತು.
10 ಅನೇಕ ಯುವಜನರು ಈಗಾಗಲೇ ಪ್ರಚಾರಕರಾಗಿದ್ದಾರೆ. ಮತ್ತು ಕ್ಷೇತ್ರಸೇವೆಯಲ್ಲಿ ಅವರು ನಮ್ಮೊಂದಿಗೆ ಕೆಲಸಮಾಡುವಾಗ ನಾವು ಅವರ ಸಾಂಗತ್ಯದಲ್ಲಿ ಆನಂದಿಸುತ್ತೇವೆ. ಈ ಯುವಜನರು ಸಮವಯಸ್ಕರನ್ನು ಪ್ರಚೋದಿಸಸಾಧ್ಯವಿದೆ ಹಾಗೂ ಪ್ರೋತ್ಸಾಹಿಸಸಾಧ್ಯವಿದೆ. ಏಪ್ರಿಲ್ ತಿಂಗಳು ಪ್ರತ್ಯೇಕ ಕುಟುಂಬಗಳು ಸಹ ತಮ್ಮ ಕುಟುಂಬ ಬಂಧಗಳನ್ನು ಬಲಪಡಿಸಲು ಮತ್ತು ಆತ್ಮಿಕತೆಯನ್ನು ಕಟ್ಟಲು ಉತ್ತಮ ಸಮಯವಾಗಿದೆ. ಪವಿತ್ರ ಸೇವೆಯಲ್ಲಿ ಜೊತೆಯಾಗಿ ಕೆಲಸಮಾಡುವ ಮೂಲಕ ಅವರು ಇದನ್ನು ಮಾಡಸಾಧ್ಯವಿದೆ. ಈ ವಿಷಯದಲ್ಲಿ ಕುಟುಂಬದ ತಲೆಗಳು ಮುಂದಾಳತ್ವವನ್ನು ವಹಿಸಬೇಕು.—ಜ್ಞಾನೋ. 24:27.
11 ಹೊಸಬರಿಗೆ ಸಹಾಯಮಾಡುವುದು: ನೀವು ಬೈಬಲ್ ಅಭ್ಯಾಸಮಾಡುತ್ತಿರುವ ಹೊಸಬರ ಕುರಿತೇನು? ಈ ಏಪ್ರಿಲ್ ತಿಂಗಳಿನಲ್ಲಿ ಮಾಡಲಾಗುವ ವಿಶೇಷ ಪ್ರಯತ್ನಕ್ಕೆ ಅವರೇನಾದರೂ ಕೂಡಿಸಬಹುದೋ? ಜ್ಞಾನ ಪುಸ್ತಕದ ಅಧ್ಯಾಯ 2, ಪ್ಯಾರಗ್ರಾಫ್ 22 ಇಲ್ಲವೇ ಅಧ್ಯಾಯ 11, ಪ್ಯಾರಗ್ರಾಫ್ 14ನ್ನು ಚರ್ಚಿಸುವಾಗ, ಅವರೇನನ್ನು ಕಲಿತಿದ್ದಾರೋ ಅದನ್ನು ಬೇರೆಯವರಿಗೆ ಹೇಳುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿರಬಹುದು. ನೀವು ಪುಸ್ತಕವನ್ನು ಮುಗಿಸುವ ಹಂತದಲ್ಲಿರುವುದಾದರೆ, ಅಧ್ಯಾಯ 18, ಪ್ಯಾರಗ್ರಾಪ್ 8ನ್ನು ಆವರಿಸುವಾಗ ಈ ವಿಷಯವನ್ನು ಸ್ಪಷ್ಟವಾಗಿ ಚರ್ಚಿಸಲು ಸಿದ್ಧರಾಗಿರಿ. ಅದು ಹೇಳುವುದು: “ನೀವು ಕಲಿಯುತ್ತಿರುವ ವಿಷಯಗಳನ್ನು ಪ್ರಾಯಶಃ ನೀವು ನಿಮ್ಮ ಸಂಬಂಧಿಕರಿಗೆ, ಮಿತ್ರರಿಗೆ ಮತ್ತು ಇತರರಿಗೆ ತಿಳಿಸಲು ಆತುರವುಳ್ಳವರಾಗಿದ್ದೀರಿ. ಕಾರ್ಯತಃ, ಯೇಸುವು ಅನೌಪಚಾರಿಕ ಸನ್ನಿವೇಶಗಳಲ್ಲಿ ಇತರರೊಂದಿಗೆ ಸುವಾರ್ತೆಯಲ್ಲಿ ಭಾಗಿಯಾದಂತೆಯೇ, ನೀವು ಆಗಲೇ ಇದನ್ನು ಮಾಡುತ್ತಿರಬಹುದು. (ಲೂಕ 10:38, 39; ಯೋಹಾನ 4:6-15) ಈಗ ನೀವು ಇನ್ನೂ ಹೆಚ್ಚನ್ನು ಮಾಡಲು ಬಯಸಬಹುದು.” ಇದು ನೀವು ಅಭ್ಯಾಸಮಾಡುತ್ತಿರುವವರ ವಿಷಯದಲ್ಲೂ ನಿಜವಾಗಿದೆಯೋ?
12 ನಿಮ್ಮ ವಿದ್ಯಾರ್ಥಿಯು ದೇವರ ವಾಕ್ಯವನ್ನು ನಂಬುತ್ತಾನೋ? ಬೈಬಲಿನ ಮೂಲತತ್ವಗಳನ್ನು ಅವನು ಅನ್ವಯಿಸುತ್ತಿದ್ದಾನೋ? ತನ್ನ ಜೀವನವನ್ನು ದೈವಿಕ ಮಟ್ಟಗಳಿಗೆ ಹೊಂದಿಸಿಕೊಂಡಿದ್ದಾನೋ? ಸಭಾ ಕೂಟಗಳಿಗೆ ಹಾಜರಾಗುತ್ತಿದ್ದಾನೋ? ಯೆಹೋವ ದೇವರನ್ನು ಸೇವಿಸುವ ಆಸೆ ಅವನಿಗಿದೆಯೋ? ಹಾಗಾದರೆ, ಹಿರಿಯರೊಂದಿಗೆ ಮಾತಾಡುವಂತೆ ಅವನನ್ನು ಏಕೆ ಪ್ರೋತ್ಸಾಹಿಸಬಾರದು? ಹೀಗೆ ಅವನು ಒಬ್ಬ ಅಸ್ನಾನಿತ ಪ್ರಚಾರಕನಾಗಲು ಅರ್ಹನಾಗಿದ್ದಾನೊ ಇಲ್ಲವೊ ಎಂಬುದನ್ನು ಹಾಗೂ ನಿಮ್ಮೊಂದಿಗೆ ಏಪ್ರಿಲ್ ತಿಂಗಳಿನಲ್ಲಿ ಕೆಲಸಮಾಡಲು ಸಾಧ್ಯವಿದೆಯೋ ಎಂಬುದನ್ನು ಹಿರಿಯರು ನಿರ್ಧರಿಸಸಾಧ್ಯವಿದೆ. (ನಮ್ಮ ಶುಶ್ರೂಷೆ ಪುಸ್ತಕದ ಪುಟ 97-9ನ್ನು ನೋಡಿ.) ಈ ರೀತಿಯಲ್ಲಿ ಯೆಹೋವನ ಸೇವೆಯನ್ನು ಮಾಡಲು ತಾನು ಮಾಡುವ ಪ್ರಯತ್ನಗಳನ್ನು ಯೆಹೋವನ ಸಂಸ್ಥೆಯು ಹೇಗೆ ಬೆಂಬಲಿಸುವುದು ಎಂಬುದನ್ನು ಅವನು ಸ್ವತಃ ಅನುಭವಿಸಲು ಆರಂಭಿಸುವನು.
13 ನಿಜ, ಕೆಲವು ವಿದ್ಯಾರ್ಥಿಗಳು ಇತರರಿಗಿಂತ ಹೆಚ್ಚು ಬೇಗನೆ ಪ್ರಗತಿಯನ್ನು ಮಾಡುತ್ತಾರೆ. ಹೀಗಿರುವುದರಿಂದ, 2000 ಇಸವಿಯ ಜೂನ್ ತಿಂಗಳ ನಮ್ಮ ರಾಜ್ಯ ಸೇವೆಯ ಪುಟ 4, ಪ್ಯಾರಗ್ರಾಫ್ 5-6ರಲ್ಲಿ ನೀಡಲ್ಪಟ್ಟಿರುವ ಮಾರ್ಗದರ್ಶನಕ್ಕೆ ಹೊಂದಿಕೆಯಲ್ಲಿ, ಆರಂಭದಲ್ಲಿ ಆಸಕ್ತಿಯನ್ನು ತೋರಿಸಿದರೂ, ಹೆಚ್ಚು ಕ್ರಿಯಾಶೀಲರಾಗಿ ಸಹವಾಸವನ್ನು ಮಾಡಲು ಇನ್ನೂ ಹೆಚ್ಚಿನ ಸಹಾಯದ ಅಗತ್ಯವಿರುವ ಜನರೊಂದಿಗೆ ಅನೇಕರು ಎರಡನೇ ಪುಸ್ತಕವನ್ನು ಅಭ್ಯಾಸಮಾಡುತ್ತಿದ್ದಾರೆ. ಈ ಪ್ರಾಮಾಣಿಕ ಹೃದಯದ ವ್ಯಕ್ತಿಗಳು, “ಅಲ್ಪಸಮಯದಲ್ಲಾಗಲಿ ದೀರ್ಘಸಮಯದಲ್ಲಾಗಲಿ” (NW) ಕ್ರಿಸ್ತನ ನಿಜ ಶಿಷ್ಯರಾಗುವರು ಎಂಬ ನಿರೀಕ್ಷೆಯನ್ನು ನಾವು ಎಂದೂ ಬಿಟ್ಟುಕೊಡುವುದಿಲ್ಲ. (ಅ.ಕೃ. 26:29) ಆದರೂ, ಅಂಥ ವ್ಯಕ್ತಿಗಳೊಂದಿಗೆ ಅಭ್ಯಾಸಮಾಡುವುದಕ್ಕಾಗಿ ವ್ಯಯಿಸಿರುವ ಸಮಯವನ್ನು ನೀವು “ದೀರ್ಘಸಮಯ”ವೆಂದು ಕರೆಯುವುದಾದರೆ, ಈ ವರ್ಷದ ಜ್ಞಾಪಕಾಚರಣೆಯ ಸಮಯವು, ಕ್ರಿಸ್ತನ ಪ್ರಾಯಶ್ಚಿತ್ತಕ್ಕಾಗಿ ನಿಮ್ಮ ವಿದ್ಯಾರ್ಥಿಗೆ ಎಷ್ಟು ಗಾಢವಾದ ಗಣ್ಯತೆಯಿದೆ ಎಂಬುದನ್ನು ತೋರಿಸಲು ತಕ್ಕ ಸಮಯವಾಗಿರಬಹುದೋ?
14 ಅವರು ಭಾಗವಹಿಸುವಂತೆ ಸಹಾಯಮಾಡುವ ರೀತಿ: ಯೇಸು ಇತರರನ್ನು ಹೇಗೆ ತರಬೇತುಗೊಳಿಸಿದನು ಎಂಬುದನ್ನು ಪರೀಕ್ಷಿಸುವ ಮೂಲಕ, ಅರ್ಹ ವ್ಯಕ್ತಿಗಳು ಕ್ಷೇತ್ರ ಸೇವೆಯನ್ನು ಆರಂಭಿಸುವಂತೆ ಹೇಗೆ ಸಹಾಯಮಾಡುವುದು ಎಂಬುದರ ಕುರಿತು ನಾವು ಹೆಚ್ಚಿನ ವಿಷಯಗಳನ್ನು ಕಲಿತುಕೊಳ್ಳುತ್ತೇವೆ. ಒಂದು ಗುಂಪನ್ನು ಕಂಡೊಡನೆ ಅವನು ತನ್ನ ಅಪೊಸ್ತಲರಿಗೆ ಮಾತಾಡಲು ಆರಂಭಿಸುವಂತೆ ಹೇಳಲಿಲ್ಲ. ಮೊದಲು ಅವನು ಸಾರುವ ಕೆಲಸವು ಏಕೆ ಅಗತ್ಯವಾಗಿದೆ ಎಂಬುದನ್ನು ಒತ್ತಿಹೇಳಿದನು, ಪ್ರಾರ್ಥನಾಪೂರ್ವಕವಾದ ಮನೋಭಾವವನ್ನು ಪ್ರೋತ್ಸಾಹಿಸಿದನು, ಮತ್ತು ಅನಂತರ ಮೂರು ಮುಖ್ಯ ಒದಗಿಸುವಿಕೆಗಳನ್ನು ಅವನು ಅವರಿಗೆ ನೀಡಿದನು: ಒಬ್ಬ ಜೊತೆಗಾರ, ಕ್ಷೇತ್ರದ ನೇಮಕ, ಮತ್ತು ಸಂದೇಶ. (ಮತ್ತಾ. 9:35-38; 10:5-7; ಮಾರ್ಕ 6:7; ಲೂಕ 9:2, 6) ನೀವು ಸಹ ಅದನ್ನೇ ಮಾಡಸಾಧ್ಯವಿದೆ. ನೀವು ನಿಮ್ಮ ಸ್ವಂತ ಮಗುವಿಗೆ ಸಹಾಯಮಾಡುತ್ತಿರಲಿ, ಒಬ್ಬ ಹೊಸ ವಿದ್ಯಾರ್ಥಿಗೆ ಸಹಾಯಮಾಡುತ್ತಿರಲಿ, ಇಲ್ಲವೇ ಸ್ವಲ್ಪ ಸಮಯದಿಂದ ಯಾವುದೇ ಸೇವಾ ಚಟುವಟಿಕೆಗಳನ್ನು ವರದಿಸದಂತಹ ವ್ಯಕ್ತಿಗೆ ಸಹಾಯಮಾಡುತ್ತಿರಲಿ, ಈ ಮುಂದಿನ ಗುರಿಗಳನ್ನು ಬೆನ್ನಟ್ಟುವುದಕ್ಕಾಗಿ ವಿಶೇಷ ಪ್ರಯತ್ನಗಳನ್ನು ಮಾಡುವುದು ಯೋಗ್ಯವಾದದ್ದಾಗಿದೆ.
15 ಅಗತ್ಯವನ್ನು ಎತ್ತಿತೋರಿಸಿರಿ: ಸಾರುವ ಕೆಲಸದ ಮಹತ್ವವನ್ನು ವ್ಯಕ್ತಿಯ ಮನಸ್ಸಿನಲ್ಲಿ ಅಚ್ಚೊತ್ತಿರಿ. ಅದರ ಕುರಿತು ಸಕಾರಾತ್ಮಕವಾಗಿ ಮಾತಾಡಿರಿ. ಕ್ಷೇತ್ರಸೇವೆಯಲ್ಲಿ ಸಭೆಯು ಏನನ್ನು ಸಾಧಿಸುತ್ತಿದೆ ಎಂಬುದನ್ನು ತೋರಿಸುವ ಅನುಭವಗಳನ್ನು ತಿಳಿಸಿರಿ. ಮತ್ತಾಯ 9:36-38ರಲ್ಲಿ ಯೇಸು ವ್ಯಕ್ತಪಡಿಸಿದ ಅದೇ ಆತ್ಮವನ್ನು ಪ್ರದರ್ಶಿಸಿರಿ. ಕ್ಷೇತ್ರಸೇವೆಯಲ್ಲಿ ತನ್ನ ವೈಯಕ್ತಿಕ ಭಾಗವಹಿಸುವಿಕೆಗಾಗಿ ಹಾಗೂ ಲೋಕವ್ಯಾಪಕವಾಗಿ ನಡೆಯುತ್ತಿರುವ ಕೆಲಸದ ಯಶಸ್ಸಿಗಾಗಿಯೂ ಪ್ರಾರ್ಥಿಸುವಂತೆ ಭಾವಿ ಪ್ರಚಾರಕನನ್ನು ಇಲ್ಲವೇ ನಿಷ್ಕ್ರಿಯ ವ್ಯಕ್ತಿಯನ್ನು ಪ್ರೋತ್ಸಾಹಿಸಿರಿ.
16 ಸಾಕ್ಷಿನೀಡುವುದಕ್ಕಾಗಿರುವ ಅನೇಕ ಸಂದರ್ಭಗಳ ಕುರಿತು ಆಲೋಚಿಸುವಂತೆ ಪ್ರೋತ್ಸಾಹಿಸಿರಿ: ಮನೆಯಿಂದ ಮನೆಗೆ ಸಾಕ್ಷಿನೀಡುವುದಕ್ಕಾಗಿ ಪುಸ್ತಕ ಅಭ್ಯಾಸದ ಗುಂಪಿನೊಂದಿಗೆ ಜೊತೆಗೂಡುವ ಸಾಧ್ಯತೆಯ ಕುರಿತು ತಿಳಿಸಿರಿ. ಸಂಬಂಧಿಕರೊಂದಿಗೆ ಹಾಗೂ ಪರಿಚಿತರೊಂದಿಗೆ ಅಥವಾ ಊಟದ ಸಮಯದಲ್ಲಿ ಜೊತೆಕೆಲಸಗಾರರೊಂದಿಗೆ ಇಲ್ಲವೇ ಸಹಪಾಠಿಗಳೊಂದಿಗೆ ಸಂಭಾಷಿಸುವುದರ ಕುರಿತಾಗಿ ಅವರೊಂದಿಗೆ ಮಾತಾಡಿರಿ. ಅನೇಕವೇಳೆ ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುತ್ತಿರುವಾಗ, ಜೊತೆ ಪ್ರಯಾಣಿಕರ ಕುರಿತು ವೈಯಕ್ತಿಕ ಆಸಕ್ತಿಯನ್ನು ತೋರಿಸುವ ಮೂಲಕ ಸುಲಭವಾಗಿ ಸಂಭಾಷಣೆಯನ್ನು ಪ್ರಾರಂಭಿಸಬಹುದು. ನಾವು ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವಾಗ, ಅನೇಕವೇಳೆ ಉತ್ತಮ ಸಾಕ್ಷಿಯನ್ನು ನೀಡುವಂತೆ ಇದು ನಮಗೆ ಅವಕಾಶವನ್ನು ಸೃಷ್ಟಿಸಿಕೊಡುತ್ತದೆ. ನಿಜವಾಗಿಯೂ, ನಮ್ಮ ನಿರೀಕ್ಷೆಯನ್ನು ಇತರರೊಂದಿಗೆ ಹಂಚಿಕೊಳ್ಳಲು “ಪ್ರತಿನಿತ್ಯವೂ” ಅನೇಕ ಸಂದರ್ಭಗಳಿವೆ.—ಕೀರ್ತ. 96:2, 3.
17 ಆದರೆ, ಆದಷ್ಟು ಬೇಗನೆ ನೀವು ಮತ್ತು ಹೊಸ ಪ್ರಚಾರಕನು ಒಟ್ಟುಗೂಡಿ ಮನೆಯಿಂದ ಮನೆಯ ಸೇವೆಮಾಡುವುದು ಹೆಚ್ಚು ಒಳ್ಳೇದಾಗಿರಬಹುದು. ಏಪ್ರಿಲ್ ತಿಂಗಳಿನಲ್ಲಿ ನಿಮ್ಮ ಸೇವೆಯನ್ನು ಹೆಚ್ಚಿಸುವ ಗುರಿಯನ್ನು ನೀವು ಇಟ್ಟುಕೊಂಡಿರುವುದಾದರೆ, ನಿಮಗೆ ಅನುಕೂಲವಾಗಿರುವ ಟೆರಿಟೊರಿ ಲಭ್ಯವಿದೆಯೇ ಎಂದು ಟೆರಿಟೊರಿ ಸೇವಕನನ್ನು ಕೇಳಿ. ಅದು ಲಭ್ಯವಿರುವಲ್ಲಿ, ಆ ಟೆರಿಟೊರಿಯಲ್ಲಿ ನೀವು ಕ್ರಮಬದ್ಧವಾಗಿ ಮತ್ತು ಚೆನ್ನಾಗಿ ಕೆಲಸಮಾಡಲು ನಿಮಗೆ ಹೆಚ್ಚಿನ ಸಂದರ್ಭಗಳು ಸಿಗುವವು. ಉದಾಹರಣೆಗೆ, ನೀವು ಕ್ಷೇತ್ರಸೇವೆಯನ್ನು ಮುಗಿಸಿದಾಗ ಇಲ್ಲವೇ ಕೂಟಗಳಿಗೋ ಅಥವಾ ಬೇರೆಲ್ಲೋ ಪ್ರಯಾಣಿಸುತ್ತಿರುವಾಗ, ಹಿಂದೆ ಆಸಕ್ತಿಯನ್ನು ತೋರಿಸಿದ್ದ ಇಲ್ಲವೇ ಯಾರೂ ಇಲ್ಲವೆಂದು ಬಿಟ್ಟುಹೋಗಿದ್ದ ಮನೆಯಲ್ಲಿ ಈಗ ಯಾರೋ ಇರುವುದನ್ನು ನೀವು ಗಮನಿಸಬಹುದು. ಸೂಕ್ತವಾಗಿರುವಲ್ಲಿ, ಹೆಚ್ಚು ಪರಿಣಾಮಕಾರಿಯಾಗಿರುವಂಥ ಸಮಯದಲ್ಲಿ ಚುಟುಕಾದ ಭೇಟಿಯನ್ನು ನೀಡಿ. ಇದು, ನಿಮಗೆ ಕ್ಷೇತ್ರಸೇವೆಯಲ್ಲಿ ಹೆಚ್ಚಿನ ಸಂತೋಷವನ್ನು ಮತ್ತು ಏನನ್ನೋ ಸಾಧಿಸಿದ್ದೀರೆಂಬ ತೃಪ್ತಿಯನ್ನು ಕೊಡುವುದು.
18 ಮನಮುಟ್ಟುವ ಸಂದೇಶವನ್ನು ತಯಾರಿಸಿ: ರಾಜ್ಯದ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳಲು ಒಬ್ಬನಲ್ಲಿ ತೀವ್ರವಾದ ಬಯಕೆ ಇರಬಹುದು. ಆದರೆ, ಅದನ್ನು ಆತ್ಮವಿಶ್ವಾಸದಿಂದ ಹೇಳುವುದು ಸ್ವಲ್ಪ ಕಷ್ಟವಾಗಬಹುದು. ವಿಶೇಷವಾಗಿ ಅವನು ಹೊಸಬನಾಗಿರುವುದಾದರೆ ಇಲ್ಲವೇ ಬಹಳ ಸಮಯದಿಂದ ಕ್ಷೇತ್ರಸೇವೆಗೆ ಹೋಗಿರದಿದ್ದರೆ ಇದು ನಿಜವಾಗಿಯೂ ಸವಾಲಾಗಿದೆ. ಹೊಸಬರಿಗೆ ಮತ್ತು ನಿಷ್ಕ್ರಿಯ ವ್ಯಕ್ತಿಗಳಿಗೆ ಮುನ್ತಯಾರಿಮಾಡಲು ಸಹಾಯಮಾಡುವುದರಲ್ಲಿ ವ್ಯಯಿಸುವ ಸಮಯವು ಸಾರ್ಥಕವಾಗಿದೆ. ಸೇವಾಕೂಟಗಳು ಮತ್ತು ಕ್ಷೇತ್ರಸೇವೆಗಾಗಿರುವ ಕೂಟಗಳು ಮಾತಾಡಲು ಉಪಯುಕ್ತಕರವಾದ ಅಂಶಗಳನ್ನು ಕೊಡಬಲ್ಲವು. ಆದರೆ ವೈಯಕ್ತಿಕ ತಯಾರಿಗೆ ಯಾವುದೇ ರೀತಿಯ ಬದಲಿಯಿಲ್ಲ.
19 ಕ್ಷೇತ್ರಸೇವೆಗಾಗಿ ತಯಾರಿಮಾಡುವಂತೆ ಹೊಸಬರಿಗೆ ನೀವು ಹೇಗೆ ಸಹಾಯಮಾಡಬಲ್ಲಿರಿ? ಆರಂಭದಲ್ಲಿ ಅವರಿಗೆ ಒಂದು ಪತ್ರಿಕಾ ನಿರೂಪಣೆಯನ್ನು ಕಲಿಸಿರಿ. ಅದು ಸರಳವಾದದ್ದೂ ಚುಟುಕಾದದ್ದೂ ಆಗಿರಲಿ. ಕ್ಷೇತ್ರದಲ್ಲಿರುವವರಿಗೆ ಚಿಂತೆಯನ್ನು ಉಂಟುಮಾಡುವ, ಸುದ್ದಿಯಲ್ಲಿರುವ ಘಟನೆಗಳ ಕುರಿತಾಗಿ ಯೋಚಿಸಿ, ಅನಂತರ ಸದ್ಯದ ಯಾವುದಾದರೊಂದು ಪತ್ರಿಕೆಗಳಲ್ಲಿ ಅದಕ್ಕೆ ಸಂಬಂಧಿಸಿದ ವಿಷಯವನ್ನು ಹುಡುಕುವಂತೆ ಹೇಳಿ. ನಿರೂಪಣೆಯನ್ನು ಒಟ್ಟಾಗಿ ಅಭ್ಯಾಸಮಾಡಿ ಮತ್ತು ಸೇವೆಯಲ್ಲಿ ಆದಷ್ಟು ಬೇಗನೆ ಅದನ್ನು ಉಪಯೋಗಿಸಿರಿ.
20 ಜ್ಞಾಪಕಾಚರಣೆಗೆ ಹಾಜರಾದ ಹೊಸಬರಿಗೆ ಪ್ರಗತಿಮಾಡುವಂತೆ ಸಹಾಯಮಾಡಿರಿ: ಕಳೆದವರ್ಷ ಲೋಕವ್ಯಾಪಕವಾಗಿ ಜ್ಞಾಪಕಾಚರಣೆಯ ಹಾಜರಿಯು 14 ಕೋಟಿ 80 ಲಕ್ಷವನ್ನು ಮೀರಿತ್ತು. ಪ್ರಚಾರಕರಾಗಿ ವರದಿಸಿದವರ ಸಂಖ್ಯೆಯು ಕೇವಲ 60 ಲಕ್ಷಕ್ಕಿಂತ ಹೆಚ್ಚಿತ್ತು. ಇದರರ್ಥ, ಸುಮಾರು 8.8 ಕೋಟಿ ಜನರು ಈ ವಿಶೇಷ ಕಾರ್ಯಕ್ರಮಕ್ಕೆ ಬರುವಷ್ಟು ಆಸಕ್ತರಾಗಿದ್ದರು. ಮತ್ತು ಅಲ್ಲಿ ಅವರು, ಬೈಬಲಿನ ಮೂಲ ಬೋಧನೆಗಳಲ್ಲಿ ಒಂದು ವಿವರಿಸಲ್ಪಡುವುದನ್ನು ಕೇಳಿಸಿಕೊಂಡರು. ಅವರಿಗೆ ನಮ್ಮಲ್ಲಿ ಕೆಲವರ ವೈಯಕ್ತಿಕ ಪರಿಚಯವಾಯಿತು. ಮತ್ತು ಅದು ಅವರ ಮನಸ್ಸಿನಲ್ಲಿ ಒಳ್ಳೆಯ ಅಭಿಪ್ರಾಯವನ್ನು ಮೂಡಿಸಿರಬಹುದು. ಅನೇಕರು ನಮ್ಮ ಕುರಿತಾಗಿ ತುಂಬ ಗೌರವದಿಂದ ಮಾತಾಡುತ್ತಾರೆ, ನಮ್ಮ ಲೋಕವ್ಯಾಪಕ ಕೆಲಸಕ್ಕಾಗಿ ದಾನಗಳನ್ನು ಕೊಡುತ್ತಾರೆ, ಮತ್ತು ಇತರರ ಮುಂದೆ ನಮ್ಮ ಪರವಾಗಿ ಮಾತಾಡುತ್ತಾರೆ. ಈ ದೊಡ್ಡ ಗುಂಪು ಭವಿಷ್ಯದಲ್ಲಾಗಬಹುದಾದ ವೃದ್ಧಿಯನ್ನು ಪ್ರತಿನಿಧಿಸುತ್ತದೆ. ಅವರು ಇನ್ನೂ ಹೆಚ್ಚಿನ ಪ್ರಗತಿಯನ್ನು ಮಾಡುವಂತೆ ಸಹಾಯಮಾಡಲು ನಾವೇನು ಮಾಡಬಹುದು?
21 ಜ್ಞಾಪಕಾಚರಣೆಗೆ ಹಾಜರಾಗುವವರಲ್ಲಿ ಹೆಚ್ಚಿನವರು ನಮ್ಮ ವೈಯಕ್ತಿಕ ಆಮಂತ್ರಣಕ್ಕೆ ಬೆಲೆಕೊಟ್ಟು ಅಲ್ಲಿಗೆ ಬಂದಿರುತ್ತಾರೆ. ಇದರರ್ಥ, ಆ ವ್ಯಕ್ತಿಗೆ ಸಭಿಕರಲ್ಲಿ ಕನಿಷ್ಠಪಕ್ಷ ಒಬ್ಬ ವ್ಯಕ್ತಿಯ ವೈಯಕ್ತಿಕ ಪರಿಚಯವಿದೆ ಎಂದಾಯಿತು. ನಮ್ಮ ಆಮಂತ್ರಣವನ್ನು ಸ್ವೀಕರಿಸಿ ಒಬ್ಬನು ಹಾಜರಾಗುವಾಗ, ಅವರು ನಿಸ್ಸಂಕೋಚದಿಂದಿರುವಂತೆ ಮಾಡುವುದು ಮತ್ತು ಕಾರ್ಯಕ್ರಮದಿಂದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಹಾಲ್ ಪೂರ್ತಿಯಾಗಿ ತುಂಬಿರುವಾಗ, ಆಸನವನ್ನು ಕಂಡುಕೊಳ್ಳುವಂತೆ ಅವರಿಗೆ ಸಹಾಯಮಾಡಿ. ಅವರಿಗೊಂದು ಬೈಬಲನ್ನು ಕೊಡಿ, ಮತ್ತು ನಿಮ್ಮೊಂದಿಗೆ ಸಂಗೀತದ ಪುಸ್ತಕವನ್ನು ಹಂಚಿಕೊಳ್ಳುವಂತೆ ಆಮಂತ್ರಿಸಿ. ಅವರು ಕೇಳಬಹುದಾದ ಯಾವುದೇ ಪ್ರಶ್ನೆಗಳಿಗೆ ಉತ್ತರವನ್ನು ನೀಡಿ. ಅವರ ಆಸಕ್ತಿಯನ್ನು ಬೆಳೆಸುವುದರಲ್ಲಿ, ನೀವು ವೈಯಕ್ತಿಕವಾಗಿ ಅವರ ಕಡೆಗೆ ತೋರಿಸುವ ಆದರಣೀಯ ಭಾವವು ಒಂದು ದೊಡ್ಡ ಅಂಶವಾಗಿರಸಾಧ್ಯವಿದೆ. ಆದರೆ ನಮಗೆಲ್ಲರಿಗೂ ಈ ಜವಾಬ್ದಾರಿಯಿದೆ—ನಾವು ಒಂದು ಅಪರಿಚಿತ ಮುಖವನ್ನು ನೋಡುವಾಗ, ಆ ವ್ಯಕ್ತಿಯ ಬಳಿ ಹೋಗಿ ಆದರದ ಸ್ವಾಗತವನ್ನು ನೀಡಿ, ಅವರ ಪರಿಚಯವನ್ನು ಮಾಡಿಕೊಳ್ಳಲು ಸ್ವಲ್ಪ ಹೊತ್ತು ಅವರೊಂದಿಗೆ ಮಾತಾಡಬೇಕು.
22 ಜ್ಞಾಪಕಾಚರಣೆಗೆ ಹಾಜರಾಗುವುದು ಒಬ್ಬ ವ್ಯಕ್ತಿಯ ಆಲೋಚನೆಯ ಮೇಲೆ ನಿಜವಾಗಿಯೂ ಪ್ರಭಾವವನ್ನು ಬೀರಸಾಧ್ಯವಿದೆ. ವ್ಯಕ್ತಿಯೊಬ್ಬನು ಆ ಕೂಟಕ್ಕೆ ಬಂದಿರುವುದು ತಾನೇ, ಬೇರೆ ಕಡೆಗಳಲ್ಲಿ ಅವನು ಯಾವುದಕ್ಕಾಗಿ ಹುಡುಕುತ್ತಿದ್ದಾನೋ ಅದು ಅವನಿಗೆ ಇನ್ನೂ ಸಿಕ್ಕಿಲ್ಲ ಎಂಬುದನ್ನು ಸೂಚಿಸಬಹುದು ಹಾಗೂ ನಾವು ಹೇಳುವ ವಿಷಯವನ್ನು ಇನ್ನೂ ನಿಕಟವಾಗಿ ಪರೀಕ್ಷಿಸುವ ಅಗತ್ಯವಿರುವಂತೆ ಅವನಿಗೆ ಅನಿಸಬಹುದು. ಯೆಹೋವನ ಅನುಪಮ ಪ್ರೀತಿಯನ್ನು ಅರಿಯದಂತಹ ವ್ಯಕ್ತಿಗೆ, ಅದ್ಭುತಕರವಾದ ಪ್ರಾಯಶ್ಚಿತ್ತ ಒದಗಿಸುವಿಕೆಯ ಕುರಿತ ವಿವರಣೆಯು ಅಗಾಧವಾದ ಒಂದು ಪ್ರಕಟನೆಯಾಗಿರಬಹುದು. ನಾವು ಪ್ರಾಮಾಣಿಕರು, ಸ್ನೇಹಪರರು, ಪ್ರೀತಿಯುಳ್ಳವರು ಮತ್ತು ಗೌರವಭರಿತರೂ ಆಗಿದ್ದು, ಭಿನ್ನರಾಗಿದ್ದೇವೆ ಎಂಬುದನ್ನು ಅವನು ಸುಲಭವಾಗಿ ಗಮನಿಸಬಹುದು. ಅವನು ಚರ್ಚುಗಳಲ್ಲಿ ನೋಡಿರುವಂಥ ಪ್ರತಿಮೆಗಳು ಮತ್ತು ಅರ್ಥಹೀನ ಸಂಸ್ಕಾರಗಳನ್ನು ಹೋಲುವಂಥ ಯಾವುದೇ ವಿಷಯವೂ ಇಲ್ಲದಿರುವುದನ್ನು ಅವನು ನೋಡಬಹುದು. ಸಭಿಕರು ಎಲ್ಲಾ ರೀತಿಯ ಹಿನ್ನೆಲೆಗಳಿಂದ ಬಂದವರಾಗಿದ್ದಾರೆ ಮತ್ತು ಯಾವುದೇ ರೀತಿಯಲ್ಲಿ ಹಣವನ್ನು ಸಂಗ್ರಹಿಸಲಾಗುವುದಿಲ್ಲ ಎಂಬುದನ್ನು ಹೊಸಬರು ಖಂಡಿತವಾಗಿಯೂ ನೋಡುವರು. ಅವರು ನೋಡಿರುವ ಈ ಸಂಗತಿಗಳು ತಾನೇ ಅವರು ಮತ್ತೆ ಬರುವಂತೆ ಮಾಡುವ ತುಂಬ ಪ್ರಬಲವಾದ ಕಾರಣವಾಗಿರಸಾಧ್ಯವಿದೆ.
23 ಜ್ಞಾಪಕಾಚರಣೆಯ ನಂತರ, ಹಾಜರಾದ ಪ್ರತಿಯೊಬ್ಬ ಹೊಸ ವ್ಯಕ್ತಿಯನ್ನೂ ಮತ್ತೆ ಭೇಟಿಯಾಗಿ ಸಹಾಯವನ್ನು ಒದಗಿಸಲು ಯಾರಾದರೊಬ್ಬರು ಸಿದ್ಧರಾಗಿರಬೇಕು. ಹೊಸಬರನ್ನು ನೀವು ಆಮಂತ್ರಿಸಿರುವುದಾದರೆ, ಆ ವ್ಯಕ್ತಿಯ ಕುರಿತ ವಿಶೇಷ ಜವಾಬ್ದಾರಿಯೂ ನಿಮ್ಮ ಮೇಲೆಯೇ ಇದೆ. ಅವರು ಹೊರಡುವ ಮುನ್ನ, ರಾಜ್ಯ ಸಭಾಗೃಹದಲ್ಲಿ ನಡೆಯುವ ಇನ್ನಿತರ ಕೂಟಗಳ ಕುರಿತು ಅವರಿಗೆ ತಿಳಿದಿರುವಂತೆ ನೋಡಿಕೊಳ್ಳಿ. ಮುಂದಿನ ಸಾರ್ವಜನಿಕ ಭಾಷಣದ ಶೀರ್ಷಿಕೆಯನ್ನು ತಿಳಿಸಿರಿ. ಅವರ ಮನೆಗೆ ಹತ್ತಿರದಲ್ಲಿರುವ ಸಭಾ ಪುಸ್ತಕ ಅಭ್ಯಾಸದ ಸಮಯ ಮತ್ತು ಸ್ಥಳವನ್ನು ಅವರಿಗೆ ತಿಳಿಸಿರಿ. ನಂತರ, ಅವರಿಗೆ ಇಗೋ! ಬ್ರೋಷರಿನ ಒಂದು ಪ್ರತಿಯನ್ನು ಕೊಡಿ ಮತ್ತು ಏಪ್ರಿಲ್ 30ರ ವಾರದಂದು “ಯೆಹೋವನ ಸೃಷ್ಟಿಗಳು ಮತ್ತು ಅದ್ಭುತಗಳು” ಎಂಬ ವಿಷಯವನ್ನು ಚರ್ಚಿಸಲಾಗುವುದೆಂದು ಅವರಿಗೆ ತಿಳಿಸಿ. ಕೆಲವೇ ವಾರಗಳಲ್ಲಿ ನಡೆಯಲಿರುವ ಒಂದು ಸರ್ಕಿಟ್ ಸಮ್ಮೇಳನ ಇಲ್ಲವೇ ಒಂದು ವಿಶೇಷ ಸಮ್ಮೇಳನ ದಿನಕ್ಕೆ ಇಡೀ ಸಭೆಯು ಹಾಜರಾಗಲು ಏಕೆ ಯೋಜಿಸುತ್ತಿದೆ ಎಂಬುದನ್ನು ವಿವರಿಸಿ.
24 ಅವರ ಮನೆಗಳಿಗೆ ಸ್ನೇಹಪೂರ್ವಕ ಭೇಟಿಯನ್ನು ನೀಡಲು ಏರ್ಪಾಡುಮಾಡಿ. ಅವರ ಬಳಿ ಅಪೇಕ್ಷಿಸು ಬ್ರೋಷರ್ ಮತ್ತು ಜ್ಞಾನ ಪುಸ್ತಕಗಳು ಇವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅವು ಬೈಬಲಿನ ಮೂಲಭೂತ ಬೋಧನೆಗಳನ್ನು ಅವರಿಗೆ ಪರಿಚಯಿಸುವವು. ಅವರು ಇಷ್ಟರತನಕ ಅಭ್ಯಾಸವನ್ನು ಮಾಡದೇ ಇರುವಲ್ಲಿ, ಅವರೊಂದಿಗೆ ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸಿ. ಯೆಹೋವನ ಸಾಕ್ಷಿಗಳು (ಇಂಗ್ಲಿಷ್) ಎಂಬ ಬ್ರೋಷರನ್ನು ಓದುವಂತೆ ಸಲಹೆ ನೀಡಿರಿ. ಅದು ನಾವು ಒಂದು ಸಂಸ್ಥೆಯಾಗಿ ಹೇಗೆ ಕೆಲಸಮಾಡುತ್ತೇವೆ ಎಂಬುದರ ಸ್ಪಷ್ಟ ಚಿತ್ರಣವನ್ನು ನೀಡುವುದು. ನಮ್ಮ ಸಹೋದರರ ಇಡೀ ಬಳಗ (ಇಂಗ್ಲಿಷ್) ಎಂಬಂತಹ ನಮ್ಮ ಸಂಸ್ಥೆಯ ವಿಡಿಯೋಗಳನ್ನು ನೋಡುವಂತೆ ಆಮಂತ್ರಿಸಿರಿ. ಸಭೆಯಲ್ಲಿರುವ ಇತರರನ್ನು ಭೇಟಿಯಾಗುವಂತೆ ಏರ್ಪಾಡನ್ನು ಮಾಡಿ. ಮುಂದಿನ ತಿಂಗಳುಗಳಲ್ಲಿ, ಹೊಸಬರೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಿರಿ; ಸರ್ಕಿಟ್ ಮೇಲ್ವಿಚಾರಕರು ಸಂದರ್ಶಿಸುವಾಗ ಕೂಟಗಳಿಗೆ ಹಾಜರಾಗುವಂತೆ ಇಲ್ಲವೇ ಜಿಲ್ಲಾ ಅಧಿವೇಶನವು ಇರುವಾಗ ಹಾಜರಾಗುವಂತೆ ಅವರಿಗೆ ಆಮಂತ್ರಣಕೊಡಿರಿ. ತಾವು ‘ನಿತ್ಯಜೀವಕ್ಕೆ ನೇಮಿಸಲ್ಪಟ್ಟವರು’ ಎಂಬುದನ್ನು ತೋರಿಸಿಕೊಳ್ಳುವಂತೆ ಪ್ರತಿಯೊಂದು ಅವಕಾಶವನ್ನು ಅವರ ಮುಂದಿಡಿರಿ!—ಅ.ಕೃ. 13:48.
25 ಹಿರಿಯರು ಏನು ಮಾಡಬಹುದು? ಏಪ್ರಿಲ್ ತಿಂಗಳಿನಲ್ಲಿ ಕ್ಷೇತ್ರಸೇವೆಯಲ್ಲಿ ಮಾಡಲ್ಪಡುವ ಹೆಚ್ಚಿನ ಪ್ರಯಾಸದ ಯಶಸ್ಸು, ಬಹುಮಟ್ಟಿಗೆ ಹಿರಿಯರ ಮೇಲೆ ಅವಲಂಬಿಸಿರುವುದು. ನೀವೊಬ್ಬ ಪುಸ್ತಕ ಅಭ್ಯಾಸ ಚಾಲಕರಾಗಿರುವಲ್ಲಿ, ನಿಮ್ಮ ಪುಸ್ತಕ ಅಭ್ಯಾಸದ ಗುಂಪಿನಲ್ಲಿರುವ ಪ್ರತಿಯೊಬ್ಬರೂ ವಿಶೇಷ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ನೀವು ಸಹಾಯಮಾಡಸಾಧ್ಯವಿರುವ ವಿಷಯಗಳ ಒಂದು ಪಟ್ಟಿಯನ್ನು ಮಾಡಿ. ನಿಮ್ಮ ಗುಂಪಿನಲ್ಲಿ ಯುವಜನರು, ಹೊಸಬರು, ಅಕ್ರಿಯರು ಇಲ್ಲವೇ ನಿಷ್ಕ್ರಿಯರು ಇದ್ದಾರೋ? ಹೆತ್ತವರು, ಪಯನೀಯರರು, ಇಲ್ಲವೇ ಇನ್ನಿತರ ಪ್ರಚಾರಕರು ಅವರಿಗೆ ಸಹಾಯಮಾಡಲು ಆರಂಭದ ಹೆಜ್ಜೆಯನ್ನು ತೆಗೆದುಕೊಂಡಿದ್ದಾರೋ ಎಂಬುದನ್ನು ಪರೀಕ್ಷಿಸಿನೋಡಿ. ನಿಮ್ಮಿಂದ ನೀಡಸಾಧ್ಯವಿರುವ ವೈಯಕ್ತಿಕ ಸಹಾಯವನ್ನು ಒದಗಿಸಿರಿ. ಎರಡು ವರ್ಷಗಳ ವರೆಗೆ ಕ್ಷೇತ್ರಸೇವೆಯಲ್ಲಿ ಅನಿಯಮಿತರಾಗಿದ್ದ ಒಬ್ಬ ಸಹೋದರಿಯು ಕಳೆದ ಏಪ್ರಿಲ್ ತಿಂಗಳಿನಲ್ಲಿ 50ಕ್ಕಿಂತಲೂ ಹೆಚ್ಚು ತಾಸುಗಳನ್ನು ವ್ಯಯಿಸಿದ್ದಾರೆ. ಅವರಲ್ಲಿ ಈ ಬದಲಾವಣೆಯನ್ನು ಉಂಟುಮಾಡಿದ್ದು ಯಾವುದು? ಹಿರಿಯರು ಮಾಡಿದ ಉತ್ತೇಜನಕಾರಿ ಕುರಿಪಾಲನಾ ಭೇಟಿಗಳೇ ಅದಕ್ಕೆ ಕಾರಣ ಎಂಬುದಾಗಿ ಅವರು ಹೇಳಿದರು.
26 ಹಿರಿಯರು ಮತ್ತು ಶುಶ್ರೂಷಾ ಸೇವಕರು ಮುಂದಿನ ತಿಂಗಳಿಗಾಗಿ ಸಾಕಷ್ಟು ಟೆರಿಟೊರಿ, ಪತ್ರಿಕೆಗಳು ಮತ್ತು ಸಾಹಿತ್ಯವು ಇದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದರಲ್ಲಿ ಸಹಕರಿಸಬೇಕು. ಕ್ಷೇತ್ರಸೇವೆಗಾಗಿ ಇನ್ನೂ ಹೆಚ್ಚಿನ ಕೂಟಗಳನ್ನು ಏರ್ಪಡಿಸಸಾಧ್ಯವಿದೆಯೇ? ಅದು ಸಾಧ್ಯವಿರುವುದಾದರೆ, ಮಾಡಲಾಗುವ ಆ ವಿಶೇಷ ಏರ್ಪಾಡುಗಳ ಕುರಿತು ಸಭೆಗೆ ತಿಳಿಸಿರಿ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಸಾರ್ವಜನಿಕ ಹಾಗೂ ಖಾಸಗಿ ಪ್ರಾರ್ಥನೆಗಳಲ್ಲಿ, ಆ ತಿಂಗಳ ನಮ್ಮ ಹಚ್ಚಿನ ರಾಜ್ಯ ಚಟುವಟಿಕೆಗಾಗಿ ಯೆಹೋವನ ಆಶೀರ್ವಾದವನ್ನು ಕೇಳಿರಿ.—ರೋಮಾ. 15:30, 31; 2 ಥೆಸ. 3:1.
27 ಉತ್ತರ ಕರೋಲಿನದಲ್ಲಿರುವ ಒಂದು ಸಭೆಯಲ್ಲಿ, ಕಳೆದ ಏಪ್ರಿಲ್ ತಿಂಗಳ ಕ್ಷೇತ್ರಸೇವೆಯಲ್ಲಿ ಹೆಚ್ಚಿನ ಚಟುವಟಿಕೆಯನ್ನು ಮಾಡುವಂತೆ ಹಿರಿಯರು ನಿಜವಾಗಿಯೂ ಪ್ರೋತ್ಸಾಹಿಸಿದರು. ಪ್ರತಿವಾರದ ಕೂಟಗಳಲ್ಲಿ, ಆಕ್ಸಿಲಿಯರಿ ಪಯನೀಯರಾಗಿ ಸೇವೆಮಾಡಲು ಸಾಧ್ಯವಿದೆಯೇ ಎಂಬುದನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸುವಂತೆ ಅವರು ಪ್ರಚಾರಕರನ್ನು ಕೇಳಿಕೊಂಡರು. ಪ್ರತಿಯೊಂದು ಸಂದರ್ಭದಲ್ಲೂ ಹಿರಿಯರು ಮತ್ತು ಶುಶ್ರೂಷಾ ಸೇವಕರ ಮಂಡಳಿಯವರೆಲ್ಲರೂ ಏಪ್ರಿಲ್ ಅನ್ನು ಅತ್ಯುತ್ತಮ ತಿಂಗಳಾಗಿ ಮಾಡುವ ವಿಷಯದಲ್ಲಿ ಹುರುಪಿನಿಂದ ಮಾತಾಡಿದರು. ಇದರ ಪರಿಣಾಮವಾಗಿ, ಹಿರಿಯರು ಮತ್ತು ಶುಶ್ರೂಷಾ ಸೇವಕರೆಲ್ಲರನ್ನು ಸೇರಿಸಿ 58 ಪ್ರತಿಶತ ಪ್ರಚಾರಕರು ಆ ತಿಂಗಳು ಪಯನೀಯರರಾಗಿ ಸೇವೆಮಾಡಿದರು!
28 ಪೂರ್ಣ ಪಾಲನ್ನು ಹೊಂದುವುದರಲ್ಲಿರುವ ಆನಂದ: ಕ್ಷೇತ್ರಸೇವೆಯಲ್ಲಿ ‘ಕಷ್ಟಪಟ್ಟು ದುಡಿಯುವುದರಿಂದ ಹಾಗೂ ಹೆಣಗಾಡುವುದರಿಂದ’ ಸಿಗುವ ಆಶೀರ್ವಾದಗಳಾವುವು? (1 ತಿಮೊ 4:10) ಕಳೆದ ಏಪ್ರಿಲ್ ತಿಂಗಳಲ್ಲಿ ತಮ್ಮ ಸಭೆಯು ನಡೆಸಿದ ಹುರುಪಿನ ಚಟುವಟಿಕೆಯ ಕುರಿತಾಗಿ ಈಗಾಗಲೇ ತಿಳಿಸಿರುವ ಹಿರಿಯರು ಬರೆದದ್ದು: “ಕ್ಷೇತ್ರಸೇವೆಯಲ್ಲಿ ಹೆಚ್ಚು ಸಮಯ ಕೆಲಸಮಾಡಲು ಪ್ರಾರಂಭಿಸಿರುವುದರಿಂದ, ಒಬ್ಬರಿಗೊಬ್ಬರು ಹೆಚ್ಚು ಪ್ರೀತಿಯ ಹಾಗೂ ಹೆಚ್ಚು ಆಪ್ತತೆಯ ಅನಿಸಿಕೆಯಾಗುತ್ತದೆ ಎಂದು ಅನೇಕವೇಳೆ ಸಹೋದರ ಸಹೋದರಿಯರು ಮಾತಾಡಿಕೊಳ್ಳುತ್ತಾರೆ.”
29 ಒಬ್ಬ ಸಾಧಾರಣ ಆರೋಗ್ಯವಂತ ವ್ಯಕ್ತಿಯಂತೆ ಓಡಾಡಲಾಗದ ಯುವ ಸಹೋದರನೊಬ್ಬನು ಕಳೆದ ಏಪ್ರಿಲ್ ತಿಂಗಳಿನಲ್ಲಿ ವಿಶೇಷ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ತುಂಬ ಹಂಬಲಿಸುತ್ತಿದ್ದನು. ತುಂಬ ಜಾಗ್ರತೆಯಿಂದ ಮಾಡಿದ ಯೋಜನೆ ಹಾಗೂ ಅವನ ತಾಯಿ ಹಾಗೂ ಆತ್ಮಿಕ ಸಹೋದರ ಸಹೋದರಿಯರ ಸಹಾಯದಿಂದಾಗಿ, ಆಕ್ಸಿಲಿಯರಿ ಪಯನೀಯರನಾಗಿ ಹೆಚ್ಚು ಕಾರ್ಯಪವೃತ್ತ ತಿಂಗಳನ್ನು ಆನಂದಿಸಿದನು. ತನ್ನ ಆ ಅನುಭವದ ಕುರಿತು ಅವನಿಗೆ ಹೇಗನಿಸಿತು? ಅವನು ಹೇಳುವುದು: “ನನ್ನ ಜೀವನದಲ್ಲಿ ಪ್ರಥಮ ಬಾರಿಗೆ ಆರೋಗ್ಯವಂತ ಮನುಷ್ಯನಾಗಿರುವಂತಹ ಅನಿಸಿಕೆ ನನಗಾಯಿತು.”
30 ಯೆಹೋವನ ರಾಜತ್ವದ ಕುರಿತು ಮಾತನಾಡುವ ತಮ್ಮ ಸುಯೋಗವನ್ನು ತುಂಬ ಗೌರವದಿಂದ ಕಾಣುವವರನ್ನು ಆತನು ಸಮೃದ್ಧವಾಗಿ ಆಶೀರ್ವದಿಸುತ್ತಾನೆ ಎಂಬುದರಲ್ಲಿ ಕಿಂಚಿತ್ತೂ ಸಂದೇಹವಿಲ್ಲ. (ಕೀರ್ತ. 145:11, 12) ನಮ್ಮ ಕರ್ತನ ಮರಣವನ್ನು ನಾವು ಆಚರಿಸುತ್ತಿದ್ದಂತೆ, ದೇವಭಕ್ತಿಯಿಂದ ಸಿಗುವ ಆಶೀರ್ವಾದಗಳು ಭವಿಷ್ಯತ್ತಿನಲ್ಲಿ ಇನ್ನೂ ಹೆಚ್ಚು ಹೇರಳವಾಗಿರುವವು ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಅಪೊಸ್ತಲ ಪೌಲನು ನಿತ್ಯಜೀವಕ್ಕಾಗಿರುವ ಬಹುಮಾನವನ್ನು ಪಡೆದುಕೊಳ್ಳಲು ಉತ್ಸುಕತೆಯಿಂದ ಹಂಬಲಿಸಿದನು. ಆದರೂ, ಅದಕ್ಕಾಗಿ ಅವನು ಕೈಕಟ್ಟಿ ಕುಳಿತುಕೊಂಡು ನಿರೀಕ್ಷಿಸುತ್ತಾ ಇರುವುದಾದರೆ ಏನೂ ಲಭಿಸದು ಎಂಬುದು ಅವನಿಗೆ ತಿಳಿದಿತ್ತು. ಆದುದರಿಂದಲೇ ಅವನು ಬರೆದದ್ದು: “ನನ್ನಲ್ಲಿ ಕಾರ್ಯಸಾಧಿಸುವ ದೇವರ ಬಲವನ್ನು ಪ್ರಯೋಗಮಾಡಿ ಇದಕ್ಕೋಸ್ಕರವೇ ಹೋರಾಡುತ್ತೇನೆ, ಪ್ರಯಾಸಪಡುತ್ತೇನೆ.” (ಕೊಲೊ. 1:29) ಜೀವರಕ್ಷಕ ಶುಶ್ರೂಷೆಯನ್ನು ಮಾಡಿಮುಗಿಸುವಂತೆ ಯೆಹೋವನು ಯೇಸುವಿನ ಮೂಲಕ ಪೌಲನನ್ನು ಅಧಿಕ ಬಲವುಳ್ಳವನನ್ನಾಗಿ ಮಾಡಿದನು. ಇಂದು ಸಹ ಆತನು ನಮಗೂ ಅದೇ ರೀತಿಯ ಬಲವನ್ನು ನೀಡುವನು. ಏಪ್ರಿಲ್ ತಿಂಗಳಿನಲ್ಲಿ ಇದು ನಿಮ್ಮ ವೈಯಕ್ತಿಕ ಅನುಭವವಾಗಿರುವುದೋ?
[ಪುಟ 3 ರಲ್ಲಿರುವ ಚೌಕ]
ಏಪ್ರಿಲ್ ತಿಂಗಳಿನಲ್ಲಿ ನೀವು ಯಾರನ್ನು ಪ್ರಚಾರ ಕೆಲಸದಲ್ಲಿ ಪ್ರೋತ್ಸಾಹಿಸುವಿರಿ?
ನಿಮ್ಮ ಮಗುವನ್ನೋ?
ಬೈಬಲ್ ವಿದ್ಯಾರ್ಥಿಯನ್ನೋ?
ನಿಷ್ಕ್ರಿಯನಾಗಿರುವ ವ್ಯಕ್ತಿಯನ್ನೋ?