ನಮ್ಮ ದೇವರ ಆಲಯವನ್ನು ನಾವು ಅಲಕ್ಷಿಸಬಾರದು
1 “ಈ ಧರ್ಮಶಾಸ್ತ್ರವನ್ನು ಕೇಳಿ ತಿಳಿದುಕೊಳ್ಳುವಂತೆ ಸ್ತ್ರೀಪುರುಷರನ್ನೂ ಮಕ್ಕಳನ್ನೂ ನಿಮ್ಮ ಊರುಗಳಲ್ಲಿರುವ ಅನ್ಯರನ್ನೂ ಕೂಡಿಸಬೇಕು. ಆಗ ಅವರು ತಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸರಿಸಿ ನಡೆಯುವರು.” (ಧರ್ಮೋ. 31:12) ಪುರಾತನ ಇಸ್ರಾಯೇಲ್ ಜನಾಂಗಕ್ಕೆ ಕೊಡಲ್ಪಟ್ಟ ಈ ಬುದ್ಧಿವಾದವು, ಇಂದೂ ಯೆಹೋವನ ಎಲ್ಲಾ ಸತ್ಯಾರಾಧಕರಿಗೆ ಅನ್ವಯವಾಗುತ್ತದೆ. ಯಾಕೆಂದರೆ ಇಬ್ರಿಯ 10:25ರಲ್ಲಿ ಪೌಲನು ಕ್ರೈಸ್ತರಿಗೆ, ಕ್ರಮವಾಗಿ ಕೂಡಿಬರುವಂತೆ ಉತ್ತೇಜಿಸಿದನು. ಹೀಗೆ ಕೂಟಗಳು ನಮ್ಮ ಆರಾಧನೆಯ ಒಂದು ಅತ್ಯಾವಶ್ಯಕ ಭಾಗವಾಗಿವೆ. ಸ್ಪಷ್ಟವಾಗಿ, ಅಂತಹ ಒಟ್ಟುಗೂಡುವಿಕೆಯ ಉದ್ದೇಶವು, ಕಿವಿಗೊಡುವುದು ಹಾಗೂ ಕಲಿಯುವುದು ಮತ್ತು ಯೆಹೋವನಿಂದ ಕಲಿಸಲ್ಪಡುವುದು ಆಗಿರುತ್ತದೆ. (ಯೆಶಾ. 54:13) ಇಂತಹ ಕೂಟಗಳು, ಪುರಾತನ ಇಸ್ರಾಯೇಲಿನಲ್ಲಿದ್ದಂತೆ ಆನಂದಕರ ಸಂದರ್ಭಗಳಾಗಿವೆ. ಇವು, ಹೀಗೆ ಬರೆದ ದಾವೀದನಂತಹ ಪ್ರತಿಕ್ರಿಯೆಯನ್ನು ನಮ್ಮಲ್ಲಿ ಉಂಟುಮಾಡುತ್ತವೆ: “ಯೆಹೋವನ ಮಂದಿರಕ್ಕೆ ಹೋಗೋಣ, ಬಾ ಎಂದು ಜನರು ನನ್ನನ್ನು ಕರೆದಾಗ ನನಗೆ ಸಂತೋಷವಾಯಿತು.” (ಕೀರ್ತ. 122:1) ಯೆಹೋವನ ಆಲಯಕ್ಕಾಗಿ ನೆಹೆಮೀಯನಿಗಿದ್ದ ಹುರುಪು, “ನಮ್ಮ ದೇವರ ಆಲಯವನ್ನು ನಾವು ಎಂದೂ ಅಲಕ್ಷ್ಯಮಾಡಬಾರದು” (NW) ಎಂದು ಅವನು ಹೇಳುವಂತೆ ಮಾಡಿತು.—ನೆಹೆಮೀಯ 10:39.
2 ಕೆಲವೊಮ್ಮೆ ವಾಸ್ತುಶಿಲ್ಪ ರೀತಿಯಲ್ಲಿ ಅತಿ ಭಾವೋತ್ಪಾದಕವಾಗಿರುವ ಕ್ರೈಸ್ತಪ್ರಪಂಚದ ಚರ್ಚುಗಳಂತಿರದೆ, ಯೆಹೋವನ ಸಾಕ್ಷಿಗಳು ಆರಾಧನೆಗಾಗಿ ಸೇರಿಬರುವ ಸ್ಥಳಗಳು, ರಾಜ್ಯ ಸಭಾಗೃಹಗಳೆಂದು ಜ್ಞಾತವಾಗಿರುವ, ಸರಳವಾದರೂ ಚಟುವಟಿಕೆಭರಿತ ಮತ್ತು ಹೃದಯೋಲ್ಲಾಸದ ಸ್ಥಳಗಳಾಗಿವೆ. ರಾಜ್ಯ ಸಭಾಗೃಹವೆಂಬ ಈ ಹೆಸರು, ಪ್ರಥಮವಾಗಿ 1935ರಲ್ಲಿ ಆಗಿನ ಅಧ್ಯಕ್ಷರಾದ ಜೆ. ಎಫ್. ರಥರ್ಫರ್ಡರಿಂದ ಬಳಸಲ್ಪಟ್ಟಿತ್ತೆಂಬುದು ವ್ಯಕ್ತ. ಆಗ ಅವರು ಹವಾಯಿಗೆ ಭೇಟಿಯನ್ನಿತ್ತು, ಅಲ್ಲಿ ಒಂದು ಕೂಟದ ಸ್ಥಳದ ನಿರ್ಮಾಣವನ್ನು ಏರ್ಪಡಿಸಿದ್ದರು. ಆ ಹೆಸರು ಈ ದಿನದ ವರೆಗೆ ಇಡೀ ಲೋಕದಲ್ಲಿ ಉಳಿದಿದೆ. 1961 ವೆಬ್ಸ್ಟರ್ಸ್ ಅನ್ಅಬ್ರಿಜ್ಡ್ ಡಿಕ್ಷನರಿಯು, ರಾಜ್ಯ ಸಭಾಗೃಹವನ್ನು (ಕಿಂಗಡಮ್ ಹಾಲ್) “ಧಾರ್ಮಿಕ ಆರಾಧನೆಯು ನಡೆಸಲ್ಪಡುವ ಯೆಹೋವನ ಸಾಕ್ಷಿಗಳ ಒಂದು ಸ್ಥಳಿಕ ಕೂಟದ ಸ್ಥಳ” ಎಂದು ಅರ್ಥನಿರೂಪಿಸುತ್ತದೆ. ಒಂದು ಆರಾಧನೆಯ ಸ್ಥಳದೋಪಾದಿ, ರಾಜ್ಯ ಸಭಾಗೃಹವು ಇತರರ ಮನಸ್ಸಿನ ಮೇಲೆ ಪ್ರಭಾವಬೀರಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿರುವ ಒಂದು ಆಡಂಬರದ ಕಟ್ಟಡವಾಗಿರಬಾರದು. ಅದರ ವಾಸ್ತುಶಿಲ್ಪವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಭಿನ್ನವಾಗಿರಬಹುದಾದರೂ, ಅದರ ಉದ್ದೇಶವು ಕ್ರಿಯಾತ್ಮಕವಾಗಿದೆ.—ಅ. ಕೃ. 17:24.
ಪ್ರತಿಯೊಂದು ಸಭೆಗೆ ಒಂದು ರಾಜ್ಯ ಸಭಾಗೃಹವಿರಬೇಕೊ?
3 ಒಂದು ಸ್ಥಳಿಕ ಸಭೆಗೆ ತನ್ನ ಸ್ವಂತ ರಾಜ್ಯ ಸಭಾಗೃಹವು ಇರಬೇಕೊ ಇಲ್ಲವೊ ಎಂಬುದನ್ನು ಸೊಸೈಟಿಯು ನಿರ್ಣಯಿಸುವುದಿಲ್ಲ. ಇದು, ಸ್ಥಳಿಕ ಸಭೆಯಿಂದ ನಿರ್ಣಯಿಸಲ್ಪಡಬೇಕಾದ ಒಂದು ವಿಷಯವಾಗಿದೆ. ಕೆಲವು ಸಭೆಗಳು ತಮ್ಮ ಸ್ವಂತ ಸಭಾಗೃಹಗಳನ್ನು ಕಟ್ಟಿಕೊಂಡಿವೆ; ಇತರ ಸಭೆಗಳು ತಮ್ಮ ಕೂಟಗಳನ್ನು ನಡೆಸಲಿಕ್ಕಾಗಿ ಕಟ್ಟಡಗಳನ್ನು ಬಾಡಿಗೆಗೆ ತೆಗೆದುಕೊಂಡಿವೆ. ವಿಷಯವು ಏನೇ ಆಗಿರಲಿ, ಕೂಟದ ಸ್ಥಳವು ಅರ್ಹವೂ, ಸ್ವಚ್ಛವೂ ಆಗಿರುವುದು ಮತ್ತು ಯೆಹೋವನ ಆರಾಧನೆಯ ಉಚ್ಚ ಮಟ್ಟಗಳನ್ನು ಪ್ರತಿಬಿಂಬಿಸುವುದು ಅತ್ಯಾವಶ್ಯಕ. ಅದು ಉಪಯೋಗಿಸಲ್ಪಡುತ್ತಿರುವಾಗ, ಅಲ್ಲಿ ಗಮನಾರ್ಹವಾದ ಸ್ನೇಹಮಯ ವಾತಾವರಣವಿರಬೇಕು. ಒಬ್ಬ ಯೂನಿಯನ್ ಮೆತೊಡಿಸ್ಟ್ ಪಾದ್ರಿಯು ನಮ್ಮ ಒಂದು ರಾಜ್ಯ ಸಭಾಗೃಹದಲ್ಲಿ ಯೆಹೋವನ ಸಾಕ್ಷಿಗಳ ಒಂದು ಕೂಟಕ್ಕೆ ಹಾಜರಾಗಿ ಹೇಳಿದ್ದು: “ಈ ಜನರ ವತಿಯಿಂದ ಯಾವುದು ಪ್ರಾಮಾಣಿಕವಾದ ಕಾಳಜಿಯಾಗಿದೆಯೆಂದು ನಾವು ಭಾವಿಸುತ್ತೇವೊ ಅದಕ್ಕಾಗಿ ನಾವು ಸಿದ್ಧರಾಗಿರಲಿಲ್ಲ. ಆದಾಗಲೂ, ಯಾವುದೇ ಸಮಯದಲ್ಲಿ ಅವರಿಂದ ಒತ್ತಡಕ್ಕೆ ಒಳಗಾಗಿರುವ ಅನಿಸಿಕೆ ನಮಗಾಗಲಿಲ್ಲ. ನಮ್ಮ ರಜಾವಧಿಯಲ್ಲಿ ನಾವು ಭೇಟಿ ಮಾಡಿದಂತಹ ಇತರ 20 ಸಭೆಗಳಲ್ಲಿ ಯಾವುದರಲ್ಲೂ ನಮಗೆ ಸಿಕ್ಕಿದಂತಹ ಸ್ವಾಗತಕ್ಕಿಂತ ಅವರಲ್ಲಿ ಹೆಚ್ಚು ನಿಜವಾದ ಸ್ವಾಗತದ ಅನಿಸಿಕೆಯಾಯಿತು. ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳಲು ಅವರು ತೀವ್ರವಾಗಿ ಕಾಳಜಿವಹಿಸಿದಂತೆಯೇ, ಒಬ್ಬರಿಗೊಬ್ಬರು ಮತ್ತು ಅಪರಿಚಿತರ ಕುರಿತಾಗಿಯೂ ಗಾಢವಾಗಿ ಕಾಳಜಿವಹಿಸುತ್ತಿರುವಂತೆ ವ್ಯಕ್ತವಾಗುವ, ಹೃದಯೋಲ್ಲಾಸದಿಂದ ನಗುವ, ಮತ್ತು ಆರಾಮವಾಗಿರುವ ಜನರ ಒಂದು ಸಭೆ ಇಲ್ಲಿತ್ತು.”
4 ಅನೇಕ ಸಭೆಗಳ ಆರ್ಥಿಕ ಸ್ಥಿತಿಯು, ಅವು ಸದ್ಯಕ್ಕೆ ತಮ್ಮ ಸ್ವಂತ ಸಭಾಗೃಹವನ್ನು ಪಡೆಯುವುದನ್ನು ಪರಿಗಣಿಸಲು ಅನುಮತಿಸುವುದಿಲ್ಲವೆಂಬುದು ಒಪ್ಪತಕ್ಕದ್ದೇ. ಇದಕ್ಕೆ ಕೂಡಿಸಿ, ಕೆಲವು ಸ್ಥಳಗಳಲ್ಲಿ, ಒಂದು ಸಭಾಗೃಹವನ್ನು ಖರೀದಿಸುವುದಕ್ಕಿಂತ ಅಥವಾ ಕಟ್ಟುವುದಕ್ಕಿಂತ, ಬಾಡಿಗೆಗೆ ಪಡೆದುಕೊಳ್ಳುವುದು ಹೆಚ್ಚು ಅನುಕೂಲಕರ. ಆದಾಗಲೂ, ಹೆಚ್ಚಿನ ಸಭೆಗಳು, ಜಮೀನನ್ನು ಖರೀದಿಸಿ, ತಮ್ಮ ಅಗತ್ಯಗಳಿಗೆ ತಕ್ಕದ್ದಾಗಿರುವ ತಮ್ಮ ಸ್ವಂತ ರಾಜ್ಯ ಸಭಾಗೃಹವನ್ನು ಕಟ್ಟಲಿಕ್ಕಾಗಿ ಆರಿಸಿಕೊಂಡಿವೆ. ಅಥವಾ ಅವು ಈಗಾಗಲೇ ಅಸ್ತಿತ್ವದಲ್ಲಿರುವ ಒಂದು ಕಟ್ಟಡವನ್ನು ಖರೀದಿಸಿ, ನವೀಕರಿಸಿವೆ. ಪ್ರತಿಯೊಂದು ಸಭೆಗೆ ತನ್ನ ಸ್ವಂತ ರಾಜ್ಯ ಸಭಾಗೃಹವಿರುವಲ್ಲಿ ನಿರ್ದಿಷ್ಟ ಲಾಭಗಳಿವೆ. ಉದಾಹರಣೆಗಾಗಿ, ಕೇರಳದಲ್ಲಿರುವ ಒಬ್ಬ ಸರ್ಕಿಟ್ ಮೇಲ್ವಿಚಾರಕನು ವರದಿಸುವುದೇನೆಂದರೆ, ಎರಡು ಸಭೆಗಳು ತಮ್ಮ ಸ್ವಂತ ರಾಜ್ಯ ಸಭಾಗೃಹಗಳನ್ನು ನಿರ್ಮಿಸಿದವು ಮತ್ತು ಪ್ರಥಮ ವರ್ಷದೊಳಗೆ ಹಾಜರಿಯು ಎಷ್ಟು ಬೆಳೆಯಿತೆಂದರೆ, ಆ ಸಭೆಗಳು ಕೂಟಗಳ ಎರಡು ಸೆಶನ್ಗಳನ್ನು ವಿಭಿನ್ನ ಸಮಯಗಳಲ್ಲಿ ನಡೆಸಬೇಕಾಯಿತು. ಸಾಕ್ಷಿಗಳು ಒಂದು ರಾಜ್ಯ ಸಭಾಗೃಹ ಕಾರ್ಯಯೋಜನೆಯನ್ನು ಆರ್ಥಿಕವಾಗಿ ಬೆಂಬಲಿಸುವುದನ್ನು ಮಾತ್ರವಲ್ಲ, ಅದರ ನಿರ್ಮಾಣಕ್ಕಾಗಿ ಮತ್ತು ಅನಂತರ ಅದರ ದುರಸ್ತಿಗಾಗಿ—ಅದನ್ನು ಸ್ವಚ್ಛವಾಗಿಯೂ, ನೋಡಲು ಅಂದವಾಗಿಯೂ ಸುಸ್ಥಿತಿಯಲ್ಲಿಯೂ ಇಡಲು—ತಮ್ಮ ಸೇವೆಗಳನ್ನು ಸ್ವಯಂ ಪ್ರೇರಿತರಾಗಿ ನೀಡುವುದನ್ನು ಒಂದು ಸುಯೋಗವಾಗಿ ಪರಿಗಣಿಸಬೇಕು. ಒಳಗೂ ಹೊರಗೂ, ರಾಜ್ಯ ಸಭಾಗೃಹವು ಯೆಹೋವನನ್ನು ಮತ್ತು ಆತನ ಸಂಸ್ಥೆಯನ್ನು ಯೋಗ್ಯವಾಗಿ ಪ್ರತಿನಿಧಿಸಬೇಕು.
5 ಒಂದು ಸಭೆಗೆ, ಅದು ತನ್ನ ಸ್ವಂತ ರಾಜ್ಯ ಸಭಾಗೃಹವನ್ನು ಪಡೆದುಕೊಳ್ಳುವ ಸ್ಥಾನದಲ್ಲಿದೆಯೆಂದು ಅನಿಸುವಲ್ಲಿ ಆಗೇನು? ಈ ವಿಷಯವು ಸ್ಥಳಿಕ ಸಹೋದರರಿಂದ ನಿರ್ಣಯಿಸಲ್ಪಡಬೇಕು. ಆಸ್ತಿಯನ್ನು ಪಡೆದುಕೊಳ್ಳುವಾಗ, ಯೋಜಿಸುವಾಗ, ಮತ್ತು ಸಭಾಗೃಹವನ್ನು ನಿರ್ಮಿಸುವಾಗ, ವ್ಯವಸ್ಥಿತವಾಗಿ ಅನುಸರಿಸಲ್ಪಡಬೇಕಾದ ಸೊಸೈಟಿಯ ಹಲವಾರು ಕಾರ್ಯವಿಧಾನಗಳಿವೆ. ಸಭೆಯು ಈ ಕಾರ್ಯವನ್ನು ಅನುಮೋದಿಸುತ್ತದೆಂಬ ಠರಾವನ್ನು ಮಂಜೂರುಗೊಳಿಸಿ, ಹೆಚ್ಚಿನ ನಿರ್ದೇಶನಗಳಿಗಾಗಿ ಸೊಸೈಟಿಯ ಕಿಂಗ್ಡಮ್ ಹಾಲ್ ಡೆಸ್ಕ್ ಅನ್ನು ಸಂಪರ್ಕಿಸುವುದು ಪ್ರಥಮ ಹೆಜ್ಜೆಯಾಗಿದೆ. ಸಭೆಯು ಆಸ್ತಿಯನ್ನು ಖರೀದಿಸಲು ಕಾರ್ಯವೆಸಗುವ ಮುಂಚೆ ಅನೇಕ ಮುನ್ನೆಚ್ಚರಿಕೆಗಳು ವಹಿಸಲ್ಪಡಬೇಕು. ಸೋನಿಂಗ್ ನಿಯಮಗಳು, ಕಟ್ಟುವಿಕೆಯ ನಿಯಮಾವಳಿಗಳು, ಮತ್ತು ಧಾರ್ಮಿಕ ಉದ್ದೇಶಗಳಿಗಾಗಿ ಕಟ್ಟಲು ಅನುಮತಿ—ಇವೆಲ್ಲವೂ ಪರಿಶೀಲಿಸಲ್ಪಡಬೇಕಾದ ಪೂರ್ವಭಾವಿ ವಿಷಯಗಳಲ್ಲಿ ಕೆಲವಾಗಿವೆ.
ರೀಜನಲ್ ಬಿಲ್ಡಿಂಗ್ ಕಮಿಟಿಯ ಪಾತ್ರ
6 ರಾಜ್ಯ ಸಭಾಗೃಹಗಳ ಕಟ್ಟುವಿಕೆಗೆ ಸಂಬಂಧಿಸಿದ ವಿಷಯಗಳಲ್ಲಿ ಸಹಾಯ ಮತ್ತು ನಿರ್ದೇಶನವನ್ನು ಕೊಡಲು ಸಮರ್ಥರಾಗಿರುವ, ಆತ್ಮಿಕವಾಗಿ ಪ್ರೌಢರಾದ ಹಿರಿಯರಿಂದ ರಚಿಸಲ್ಪಟ್ಟಿರುವ ಒಂದು ರೀಜನಲ್ ಬಿಲ್ಡಿಂಗ್ ಕಮಿಟಿಯನ್ನು (ಆರ್ಬಿಸಿ) ಸೊಸೈಟಿಯು ಸ್ಥಾಪಿಸಿದೆ. ಐವರು ಸದಸ್ಯರುಳ್ಳ ಈ ಕಮಿಟಿಯು, ಸಭೆಯ ಆರ್ಥಿಕ ಸಂಪನ್ಮೂಲಗಳು ಮತ್ತು ಅಗತ್ಯವಿರುವ ಅಳತೆಯನ್ನು ಎಣಿಕೆಗೆ ತೆಗೆದುಕೊಳ್ಳುತ್ತಾ, ನಿಮ್ಮ ನಿವೇಶನಕ್ಕೆ ಯೋಗ್ಯವಾಗಿರುವ ರಾಜ್ಯ ಸಭಾಗೃಹಗಳ ಖರೀದಿ ಅಥವಾ ನಿರ್ಮಾಣದ ವಿಷಯದಲ್ಲಿ ಮಾರ್ಗದರ್ಶನಗಳನ್ನು ಕೊಡುವುದು. ರೀಜನಲ್ ಬಿಲ್ಡಿಂಗ್ ಕಮಿಟಿಯು, ಸ್ಥಳಿಕ ಕಿಂಗ್ಡಮ್ ಹಾಲ್ ಕನ್ಸ್ಟ್ರಕ್ಷನ್ ಕಮಿಟಿಯ ಸ್ಥಾನವನ್ನು ತೆಗೆದುಕೊಳ್ಳುವುದಿಲ್ಲ, ಬದಲಾಗಿ ಕಟ್ಟುವಿಕೆಯ ಕಾರ್ಯಕ್ರಮದಲ್ಲಿ ಅದಕ್ಕೆ ನೆರವನ್ನೀಯುವುದು. ಆಸ್ತಿಯು ಖರೀದಿಸಲ್ಪಡುವ ಮುಂಚೆಯೇ, ಸ್ಥಳಿಕ ಬಿಲ್ಡಿಂಗ್ ಕಮಿಟಿಯು, ಸಲಹೆಗಳಿಗಾಗಿ ಆರ್ಬಿಸಿಯನ್ನು ವಿಚಾರಿಸುವುದು ಸೂಕ್ತ. ವೆಚ್ಚ ಮತ್ತು ನಿರ್ಮಾಣದ ವಿಭಿನ್ನ ಅಂಶಗಳಲ್ಲಿ ಪರಿಣತಿಯಿರುವ ಸಮರ್ಥ ಪುರುಷರು ಆರ್ಬಿಸಿಯಲ್ಲಿರುವುದರಿಂದ, ಅವರ ಸಹಾಯವು ಇಂತಹ ಕೆಲಸಗಳಲ್ಲಿ ಅಮೂಲ್ಯವಾಗಿರುವುದು.
7 ಉತ್ತಮವಾದ ಮುನ್ಯೋಜನೆಯು ಆವಶ್ಯಕವಾಗಿರುವ ಒಂದು ಪ್ರಮುಖ ಕ್ಷೇತ್ರವು, ರಾಜ್ಯ ಸಭಾಗೃಹದ ಗಾತ್ರ—ಅದರ ಯೋಜನೆ ಮತ್ತು ಆಸನಗಳ ಸಂಖ್ಯೆ—ಆಗಿದೆ. ಸರಳವಾದರೂ ವ್ಯಾವಹಾರಿಕವಾದ ಒಂದು ಯೋಜನೆಯು ಅತ್ಯುತ್ತಮ. ಆರ್ಬಿಸಿಗೆ ಅಂತಹ ಹಲವಾರು ಯೋಜನೆಗಳಿವೆ, ಆದರೆ ಮೂಲತಃ ಅದು ಮೂರು ವಿಧದ ಆಸನವ್ಯವಸ್ಥಾ ಅಗತ್ಯಗಳಿಗೆ ನೆರವು ನೀಡುತ್ತದೆ: 100, 150, ಮತ್ತು 250 ಜನರಿಗಾಗಿ. ಸಭಾಗೃಹದ ನೆಲದ ಚದರಳತೆಯು, ಒಂದು ಸೂತ್ರದ ಆಧಾರದ ಮೇಲೆ ಲೆಕ್ಕಹಾಕಲ್ಪಡುತ್ತದೆ. ಅಂದರೆ, ಎಷ್ಟು ಮಂದಿಗೆ ಆಸನ ವ್ಯವಸ್ಥೆ ಮಾಡಬೇಕೊ ಆ ವ್ಯಕ್ತಿಗಳ ಸಂಖ್ಯೆಯನ್ನು 1.8 ಚದರ ಮೀಟರುಗಳಿಂದ ಗುಣಿಸುವುದು. ಉದಾಹರಣೆಗಾಗಿ, 100 ವ್ಯಕ್ತಿಗಳಿಗೆ ಸ್ಥಳಾವಕಾಶ ನೀಡುವ ಒಂದು ಸಭಾಗೃಹವು ಬೇಕಾಗಿರುವಲ್ಲಿ, ಆಗ 180 ಚದರ ಮೀಟರುಗಳು ಅಗತ್ಯ. ಇದರಲ್ಲಿ, ಪಾಯಿಖಾನೆಗಳು, ಪತ್ರಿಕೆ ಮತ್ತು ಸಾಹಿತ್ಯ ಕೌಂಟರ್ಗಳು, ಇನ್ನೊಂದು ಶಾಲೆ, ಇತ್ಯಾದಿಯಂತಹ ಇತರ ಆವಶ್ಯಕತೆಗಳಿಗಾಗಿ ಸ್ಥಳವು ಸೇರಿರುವುದು. ಅಂತಹ ಲೆಕ್ಕಾಚಾರ ಮತ್ತು ಯೋಜನೆಯು, ರಾಜ್ಯ ಸಭಾಗೃಹವನ್ನು ಅನುಕೂಲಕರವನ್ನಾಗಿ ಮತ್ತು ಸ್ಥಳವು ಕಮ್ಮಿಯಾಗದಂತೆ ಮಾಡುವುದು. ಒಂದು ತಕ್ಕದ್ದಾದ ವೇದಿಕೆ, ಪಬ್ಲಿಕ್ ಅಡ್ರೆಸ್ ಸಿಸ್ಟಮ್ನ ಸ್ಥಳ, ದೀಪಗಳು ಮತ್ತು ಫ್ಯಾನ್ಗಳು ಮತ್ತು ಇತರ ವಿದ್ಯುತ್ ವಿವರಗಳ ಸ್ಥಾನಗಳು, ಜೆನರೇಟರ್ ಕೋಣೆ, ಕೊಳಾಯಿ ಮತ್ತು ಚರಂಡಿ ವ್ಯವಸ್ಥೆ ಇತ್ಯಾದಿಗಳ ಕುರಿತಾಗಿ ಸಲಹೆಗಳನ್ನು ನೀಡಲೂ ರೀಜನಲ್ ಬಿಲ್ಡಿಂಗ್ ಕಮಿಟಿಯು ಸಮರ್ಥವಾಗಿದೆ.
8 ಕೆಲವು ವಿದ್ಯಮಾನಗಳಲ್ಲಿ, ಒಂದಕ್ಕಿಂತ ಹೆಚ್ಚು ಸಭೆಗಳು ಒಂದೇ ರಾಜ್ಯ ಸಭಾಗೃಹವನ್ನು ಉಪಯೋಗಿಸಸಾಧ್ಯವಿದೆ. ಇದು ಸೌಕರ್ಯಗಳ ಹೆಚ್ಚು ಪೂರ್ಣವಾದ ಉಪಯೋಗವನ್ನು ಸಾಧ್ಯಮಾಡುತ್ತದೆ ಮತ್ತು ಆರ್ಥಿಕ ಹೊರೆಯನ್ನು ಹೆಚ್ಚು ವ್ಯಕ್ತಿಗಳ ಮೇಲೆ ಹೇರುತ್ತದೆ. ಎರಡು ಅಥವಾ ಹೆಚ್ಚಿನ ಸಭೆಗಳ ನಡುವಣ ಅಂತಹ ಸಹಕಾರವು, ನಿರ್ಮಾಣ ಕಾರ್ಯಕ್ರಮದ ಆರ್ಥಿಕ ಸಾಧ್ಯತೆಯನ್ನು ಗಣನೀಯವಾಗಿ ಹೆಚ್ಚಿಸುವುದು. ಆದಾಗಲೂ, ಮುಂಗಡ ಹಣ ಮತ್ತು ಇತರ ಏರ್ಪಾಡುಗಳ ಸಂಬಂಧದಲ್ಲಿ ಸೊಸೈಟಿಯು ಆ ಸಭೆಗಳಲ್ಲಿ ಕೇವಲ ಒಂದು ಸಭೆಯೊಂದಿಗೆ ವ್ಯವಹರಿಸುತ್ತದೆ. ಸಭೆಗಳು ತಮ್ಮ ಕೂಟಗಳನ್ನು ಯಾವಾಗ ನಡೆಸುವುವು ಎಂಬುದರ ಕುರಿತಾದ ವಿವರಗಳು, ಭಾಗವಹಿಸುವ ಸಭೆಗಳ ಹಿರಿಯರ ಮಂಡಲಿಗಳಿಂದ ನಿರ್ಣಯಿಸಲ್ಪಡತಕ್ಕದ್ದು.
ರಾಜ್ಯ ಸಭಾಗೃಹಕ್ಕೆ ಹಣಕಾಸಿನ ನೆರವು ನೀಡುವುದು
9 ಒಂದು ರಾಜ್ಯ ಸಭಾಗೃಹಕ್ಕಾಗಿರುವ ಜಮೀನಿಗಾಗಿ ಸೊಸೈಟಿಯು ಹಣವನ್ನು ತೆರುವುದಿಲ್ಲವೆಂಬ ವಿಷಯವನ್ನು ಗಮನದಲ್ಲಿಡತಕ್ಕದ್ದು. ಆದರೂ ಅಪರೂಪದ ವಿದ್ಯಮಾನಗಳಲ್ಲಿ, ಯಾವ ನಗರಗಳಲ್ಲಿ ಕೆಲಸವು ಚೆನ್ನಾಗಿ ಪ್ರಗತಿ ಹೊಂದುತ್ತಿದೆಯೊ, ಎಲ್ಲಿ ಎರಡು ಅಥವಾ ಹೆಚ್ಚು ಸಭೆಗಳು ಒಂದು ಸಭಾಗೃಹವನ್ನು ಹಂಚಿಕೊಳ್ಳಬಹುದೊ, ಅಲ್ಲಿ ಜಮೀನನ್ನು ಖರೀದಿಸಲಿಕ್ಕಾಗಿ ಸೊಸೈಟಿಯು ಹಣಕಾಸಿನ ನೆರವನ್ನು ನೀಡಿದೆ. ಯೆಹೋವನ ಆಧುನಿಕ ದಿನದ ಸೇವಕರು, 2 ಕೊರಿಂಥ 8:13-15ರಲ್ಲಿ ಪೌಲನಿಂದ ಉತ್ತೇಜಿಸಲ್ಪಟ್ಟಂತಹದ್ದೇ ರೀತಿಯ ಆತ್ಮವನ್ನು ತೋರಿಸುವುದನ್ನು ಮುಂದುವರಿಸುವರು: “ಇತರರಿಗೆ ಕಷ್ಟಪರಿಹಾರವೂ ನಿಮಗೆ ಕಷ್ಟವೂ ಉಂಟಾಗಬೇಕೆಂಬದು ನನ್ನ ತಾತ್ಪರ್ಯವಲ್ಲ; ಸಮಾನತ್ವವಿರಬೇಕೆಂಬದೇ ನನ್ನ ತಾತ್ಪರ್ಯ. ಸದ್ಯಕ್ಕೆ ನಿಮ್ಮ ಸಮೃದ್ಧಿಯು ಅವರ ಕೊರತೆಯನ್ನು ನೀಗಿಸುತ್ತದೆ. ಮುಂದೆ ಅವರ ಸಮೃದ್ಧಿಯು ನಿಮ್ಮ ಕೊರತೆಯನ್ನು ನೀಗಿಸುವದು; ಹೀಗೆ ಸಮಾನತ್ವವುಂಟಾಗುವದು. ಬಹಳ ಕೂಡಿಸಿದವನಿಗೆ ಏನೂ ಹೆಚ್ಚಾಗಲಿಲ್ಲ, ಸ್ವಲ್ಪವಾಗಿ ಕೂಡಿಸಿದವನಿಗೆ ಏನೂ ಕಡಿಮೆಯಾಗಲಿಲ್ಲ ಎಂದು ಶಾಸ್ತ್ರದಲ್ಲಿ ಬರೆದಿರುವ ಪ್ರಕಾರವಾಗುವದು.” ಹೊಸ ರಾಜ್ಯ ಸಭಾಗೃಹಗಳನ್ನು ಕಟ್ಟುವುದರಲ್ಲಿ ನೆರವನ್ನು ನೀಡಲು ನಮ್ಮ ಸಮಯ ಮತ್ತು ಸಂಪನ್ಮೂಲಗಳನ್ನು ಕೊಡುವುದು, ಯೆಹೋವನನ್ನು ಸನ್ಮಾನಿಸುವ ಒಂದು ಉತ್ತಮ ಮಾರ್ಗವಾಗಿದೆ.—ಜ್ಞಾನೋಕ್ತಿ 3:9.
10 ಸುಮಾರು 3,500 ವರ್ಷಗಳ ಹಿಂದೆ, ಉದಾರವಾದ ಕಾಣಿಕೆಗಳಿಗಾಗಿ ಅಗತ್ಯವೆದ್ದಂತಹ ಸನ್ನಿವೇಶವನ್ನು ಪರಿಗಣಿಸಿರಿ. ತನ್ನ ಆರಾಧನೆಯಲ್ಲಿ ಉಪಯೋಗಿಸಲಿಕ್ಕಾಗಿ ಒಂದು ಗುಡಾರ, ಅಥವಾ ‘ದೇವದರ್ಶನದ ಗುಡಾರ’ವನ್ನು ನಿರ್ಮಿಸುವಂತೆ ಯೆಹೋವನು ಮೋಶೆಗೆ ಸೂಚನೆಯನ್ನಿತ್ತಿದ್ದನು. ದೈವಿಕವಾಗಿ ಕೊಡಲ್ಪಟ್ಟ ವಿನ್ಯಾಸವು, ವಿವಿಧ ಪ್ರಕಾರದ ಬೆಲೆಬಾಳುವ ಸಾಮಗ್ರಿಗಳನ್ನು ಅವಶ್ಯಪಡಿಸಿತು. ಯೆಹೋವನು ಆಜ್ಞಾಪಿಸಿದ್ದು: “ನೀವು ನಿಮ್ಮನಿಮ್ಮೊಳಗೆ ಯೆಹೋವನಿಗೆ ಕಾಣಿಕೆಯನ್ನು ಎತ್ತಿ ಕೊಡಬೇಕು; ಮನಃಪೂರ್ವಕವಾಗಿ ಕಾಣಿಕೆಯನ್ನು ಕೊಡುವವರೇ ತರಬೇಕು.” (ವಿಮೋ. 35:4-9) ಜನರು ಹೇಗೆ ಪ್ರತಿಕ್ರಿಯಿಸಿದರು? “ಯಾರಾರನ್ನು ಹೃದಯವು ಪ್ರೇರಿಸಿತೋ ಯಾರಾರ ಮನಸ್ಸು ಸಿದ್ಧವಾಗಿತ್ತೋ ಅವರೆಲ್ಲರೂ ಬಂದು ದೇವದರ್ಶನದ ಗುಡಾರದ ಕೆಲಸಕ್ಕೋಸ್ಕರವೂ ಅದರ ಸಮಸ್ತಸೇವೆಗೋಸ್ಕರವೂ ದೀಕ್ಷಾವಸ್ತ್ರಗಳಿಗೋಸ್ಕರವೂ ಯೆಹೋವನಿಗೆ ಕಾಣಿಕೆಗಳನ್ನು ತಂದರು” ಎಂದು ವೃತ್ತಾಂತವು ನಮಗೆ ತಿಳಿಸುತ್ತದೆ. ಈ ಸ್ವಯಂಪ್ರೇರಿತ ನೀಡಿಕೆಯು ಕ್ರಮೇಣವಾಗಿ ಎಷ್ಟು ದೊಡ್ಡದಾಯಿತೆಂದರೆ, ಮಾಡಬೇಕೆಂದು ಯೆಹೋವನು ಆಜ್ಞಾಪಿಸಿದ ಕೆಲಸಕ್ಕಾಗಿ ಅಗತ್ಯವಿರುವುದಕ್ಕಿಂತಲೂ “ಬಹಳ ಹೆಚ್ಚಾ”ಯಿತು. (ವಿಮೋ. 35:21-29; 36:3-5) ಆ ಜನರು ಎಂತಹ ಒಂದು ನಿಸ್ವಾರ್ಥ, ಉದಾರ ಆತ್ಮವನ್ನು ಪ್ರದರ್ಶಿಸಿದರು!
11 ಇಸ್ರಾಯೇಲ್ಯರಿಂದ ಒಂದು ಉದಾರವಾದ ಕಾಣಿಕೆಗಾಗಿ ತದ್ರೀತಿಯ ಒಂದು ಕರೆಯು ಪುನಃ ಒಮ್ಮೆ ಸುಮಾರು 500 ವರ್ಷಗಳ ನಂತರ ಹೊರಡಿಸಲ್ಪಟ್ಟಿತು. ಯೆರೂಸಲೇಮಿನಲ್ಲಿ ಯೆಹೋವನಿಗಾಗಿ ಒಂದು ಶಾಶ್ವತ ದೇವಾಲಯವನ್ನು ಕಟ್ಟಲಿಕ್ಕಾಗಿದ್ದ ರಾಜ ದಾವೀದನ ಬಯಕೆಯು, ಅವನ ಮಗನಾದ ಸೊಲೊಮೋನನ ಮೂಲಕ ಸಕಾರಗೊಳಿಸಲ್ಪಡಲಿತ್ತು. ಸ್ವತಃ ದಾವೀದನೇ ಅಗತ್ಯವಿರುವಂತಹ ಸಾಮಗ್ರಿಗಳ ಒಂದು ದೊಡ್ಡ ಭಾಗವನ್ನು ಒಟ್ಟುಗೂಡಿಸಿದನು ಮತ್ತು ಕಾಣಿಕೆಯನ್ನಿತ್ತನು. “ಯೆಹೋವನಿಗೋಸ್ಕರ ಕೊಡುಗೆ”ಯನ್ನು (NW) ತರುವಂತೆ ದಾವೀದನು ಕರೆನೀಡಿದಾಗ ಇತರರು ಜೊತೆಸೇರಿದರು. ಫಲಿತಾಂಶವೇನು? “ಅವರು ಪೂರ್ಣಮನಸ್ಸಿನಿಂದಲೂ ಸ್ವೇಚ್ಛೆಯಿಂದಲೂ ಯೆಹೋವನಿಗೆ ಕಾಣಿಕೆ ಕೊಟ್ಟದ್ದಕ್ಕಾಗಿ ಜನರೆಲ್ಲರೂ ಸಂತೋಷಪಟ್ಟರು. ಅರಸನಾದ ದಾವೀದನಿಗೂ ಬಹಳ ಸಂತೋಷವಾಯಿತು.” (1 ಪೂರ್ವಕಾಲವೃತ್ತಾಂತ 22:14; 29:3-9) ಸದ್ಯದ ಮೌಲ್ಯಗಳಲ್ಲಿ, ಕೇವಲ ಆ ಬೆಳ್ಳಿ ಮತ್ತು ಚಿನ್ನ, 2 ಟ್ರಿಲಿಯ ರೂಪಾಯಿಗಳಷ್ಟು ಬೆಲೆಯುಳ್ಳದ್ದಾಗಿರುತ್ತಿತ್ತು!—2 ಪೂರ್ವಕಾಲವೃತ್ತಾಂತ 5:1.
12 ಆಧುನಿಕ ಸಮಯಗಳಲ್ಲೂ ಅದೇ ರೀತಿಯ ಆತ್ಮವು, ಲೋಕದ ವಿಭಿನ್ನ ಭಾಗಗಳಲ್ಲಿರುವ ನಮ್ಮ ಸಹೋದರರಿಂದ ಪ್ರದರ್ಶಿಸಲ್ಪಡುತ್ತದೆ. ನಮ್ಮ ಸಹೋದರರ ‘ಪೂರ್ಣ ಮತ್ತು ಸಿದ್ಧಮನಸ್ಸನ್ನು’ ತೋರಿಸುವ ರೋಮಾಂಚಕರ ಅನುಭವಗಳೊಂದಿಗೆ, ನಮ್ಮ ಪರಮಾಧಿಕಾರಿ ಪ್ರಭುವಾದ ಯೆಹೋವನನ್ನು ಆರಾಧಿಸಲಿಕ್ಕಾಗಿ ಒಂದು ಸ್ಥಳವನ್ನು ಕಟ್ಟುವ ಬಯಕೆಯು ವ್ಯಕ್ತವಾಗಿರುತ್ತದೆಂಬುದನ್ನು ತಿಳಿಯುವುದು ಎಷ್ಟು ಉತ್ತೇಜನಕರ. ದೃಷ್ಟಾಂತಕ್ಕಾಗಿ, ಸಕಾಲದಲ್ಲಿ ಒಂದು ರಾಜ್ಯ ಸಭಾಗೃಹವನ್ನು ಕಟ್ಟಲಿಕ್ಕಾಗಿ ಹಣವನ್ನು ಪಡೆಯಲು ಸಾಧ್ಯವಾಗುವಂತೆ, ಪೋಲೆಂಡಿನ ಕೆಲವು ಭಾಗಗಳಲ್ಲಿ ಸಹೋದರರು ಹೊಲಗಳನ್ನು ಬಾಡಿಗೆಗೆ ಪಡೆದುಕೊಂಡು, ಬೆಳೆಯನ್ನು ಸಾಗುವಳಿ ಮಾಡಿ, ಉತ್ಪನ್ನವನ್ನು ಮಾರುತ್ತಾರೆ ಅಥವಾ ಬೆರಿ ಹಣ್ಣುಗಳನ್ನು ಹೆಕ್ಕುತ್ತಾರೆ. ಇಂತಹ ಕಾರ್ಯಯೋಜನೆಗಳಿಗೋಸ್ಕರ ಕೆಲವರು ಹಣವನ್ನು ಕೊಟ್ಟಿದ್ದಾರೆ, ಇತರರು ಆಭರಣಗಳನ್ನು ಮತ್ತು ಆಸ್ತಿಯನ್ನು ಕೊಟ್ಟಿದ್ದಾರೆ. ಅನೇಕ ಎಳೆಯರು, ಸೊಸೈಟಿಗೆ ತಮ್ಮ ಸ್ವಲ್ಪ ಸಹಾಯವನ್ನು—ಲೌಕಿಕ ಮೌಲ್ಯದಲ್ಲಿ ಚಿಕ್ಕದಾಗಿರುವ, ಆದರೆ ಯೆಹೋವನ ದೃಷ್ಟಿಯಲ್ಲಿ ದೊಡ್ಡದಾಗಿರುವ ಮೊತ್ತಗಳು—ಕೊಡುವ ಮೂಲಕ ಕಟ್ಟಡ ಕಾರ್ಯಯೋಜನೆಗಳಿಗಾಗಿ ತಮ್ಮ ಗಣ್ಯತೆಯನ್ನು ವ್ಯಕ್ತಪಡಿಸಿದ್ದಾರೆ.
13 ಆರ್ಥಿಕ ಬೆಂಬಲವನ್ನು ಕೊಡುವುದು ಶಾಸ್ತ್ರೀಯವಾಗಿದೆ. “ಕಾಣಿಕೆ” ಎಂಬುದಾಗಿ ಭಾಷಾಂತರಿಸಲ್ಪಟ್ಟ ಹೀಬ್ರು ಶಬ್ದವು, “ಪವಿತ್ರ ಭಾಗ” ಎಂಬುದನ್ನು ಅರ್ಥೈಸುತ್ತದೆ. (ವಿಮೋ. 25:2, ರೆಫರೆನ್ಸ್ ಬೈಬಲ್, ಪಾದಟಿಪ್ಪಣಿ.) ರಾಜ್ಯಾಭಿರುಚಿಗಳನ್ನು ಮುಂದುವರಿಸಲಿಕ್ಕಾಗಿ ಕ್ರೈಸ್ತರು ತಮ್ಮ ಸಮಯ, ಶಕ್ತಿ ಮತ್ತು ಭೌತಿಕ ಸ್ವತ್ತನ್ನು ಕೊಡಲು ಯೋಗ್ಯವಾಗಿ ಆಶಿಸುತ್ತಾರೆ. ಸಭೆಯೊಂದು ರಾಜ್ಯ ಸಭಾಗೃಹವೊಂದನ್ನು ಕಟ್ಟಲು ಯೋಜಿಸುವಾಗ, ಕೆಲವರು ವೈಯಕ್ತಿಕವಾಗಿ ಕಾರ್ಯಯೋಜನೆಗಾಗಿ ತತ್ಕ್ಷಣವೇ ದಾನವನ್ನು ಮಾಡುವುದು ಅಥವಾ ಅವರಿಗೆ ಸದ್ಯಕ್ಕೆ ಅಗತ್ಯವಿಲ್ಲದಿರುವ ಹಣವನ್ನು ಸಾಲದೋಪಾದಿ ಕೊಡುವುದು ಸಾಧ್ಯವೆಂಬುದನ್ನು ಕಂಡುಕೊಳ್ಳಬಹುದು. ಇದಕ್ಕೆ ಕೂಡಿಸಿ, ಪ್ರತಿ ತಿಂಗಳು ತಾವು ಕ್ರಮವಾಗಿ ಎಷ್ಟನ್ನು ಕಾಣಿಕೆಯಾಗಿ ಕೊಡುವೆವೆಂಬುದನ್ನು ಎಲ್ಲರೂ ನಿರ್ಧರಿಸಬಹುದು. ಇದು ಒಂದು ದಶಮಾಂಶ ಕೊಡುವಿಕೆ ಅಥವಾ ಆವಶ್ಯಕತೆಯಾಗಿರದಿದ್ದರೂ, ಅದು ಪೂರ್ತಿಯಾಗಿ ಸ್ವಯಂ ಪ್ರೇರಿತವಾಗಿರುವುದರಿಂದ, ಯೋಜನೆಗಳನ್ನು ಮಾಡುವುದರಲ್ಲಿ ಅವರಿಗೆ ಸಹಾಯ ಮಾಡಲು ಹಿರಿಯರು ಈ ಮಾಹಿತಿಯನ್ನು ಸಭೆಯ ಸದಸ್ಯರಿಂದ ಪಡೆದುಕೊಳ್ಳಬಹುದು. ಈ ಅಂದಾಜನ್ನು ಕೊಡಲಿಕ್ಕಾಗಿ, ಮೊತ್ತವು ಬರೆಯಲ್ಪಟ್ಟಿರುವ ಹಸ್ತಾಕ್ಷರವಿಲ್ಲದ ಕಾಗದದ ಪಟ್ಟಿಗಳು ಸಾಕಾಗುವುವು.
14 ‘ಬಿಲ್ಡಿಂಗ್ ಫಂಡ್’ ಎಂಬ ಲೇಬಲ್ ಹಚ್ಚಿರುವ, ಒಂದು ಕಾಣಿಕೆ ಪೆಟ್ಟಿಗೆಯನ್ನು ರಾಜ್ಯ ಸಭಾಗೃಹದಲ್ಲಿ ಒದಗಿಸುವುದು, ಮತ್ತು ಸಹೋದರರು ಈ ಉದ್ದೇಶಕ್ಕಾಗಿ ಕಾಣಿಕೆಗಳನ್ನು ನೀಡುವಂತೆ ಉತ್ತೇಜಿಸುವುದು, ರಾಜ್ಯ ಸಭಾಗೃಹ ನಿರ್ಮಾಣಕ್ಕಾಗಿ ಸಿದ್ಧ ಹಣವನ್ನು ಒಟ್ಟುಸೇರಿಸುವ ಒಂದು ಪ್ರಾಯೋಗಿಕ ಮಾರ್ಗವಾಗಿದೆ. ಆಗಸ್ಟ್ 1995ರಲ್ಲಿ, ಭಾರತದಲ್ಲಿರುವ ಎಲ್ಲಾ ಸಭೆಗಳು ಅಂತಹ ಒಂದು ಪೆಟ್ಟಿಗೆಯನ್ನು ಇಡುವಂತೆ ಸೊಸೈಟಿಯು ಕೇಳಿಕೊಂಡಿತು. ಈಗಾಗಲೇ ತಮ್ಮ ಸ್ವಂತ ರಾಜ್ಯ ಸಭಾಗೃಹವನ್ನು ಹೊಂದಿರುವ ಮತ್ತು ಅದಕ್ಕಾಗಿ ಹಣ ತೆತ್ತಿರುವ ಸಭೆಗಳು, ಅಥವಾ ಸದ್ಯಕ್ಕೆ ತಮ್ಮ ಸ್ವಂತ ರಾಜ್ಯ ಸಭಾಗೃಹದ ನಿರ್ಮಾಣ ಕಾರ್ಯಯೋಜನೆಯಲ್ಲಿ ಪಾಲುತೆಗೆದುಕೊಳ್ಳದಿರುವ ಮತ್ತು ಅತಿ ಸಮೀಪದ ಭವಿಷ್ಯತ್ತಿಗಾಗಿ ಅಂತಹ ಒಂದು ಕಾರ್ಯಯೋಜನೆಯ ಕುರಿತು ಆಲೋಚಿಸದಿರುವ ಸಭೆಗಳು, ಈ ಪೆಟ್ಟಿಗೆಯಲ್ಲಿ ಪ್ರತಿ ತಿಂಗಳು ಸಿಗುವಂತಹ ಎಲ್ಲಾ ಹಣವನ್ನು ಸೊಸೈಟಿಗೆ ಕಳುಹಿಸಬೇಕು. ಈ ಹಣ ರವಾನೆಗಳು, ‘ನ್ಯಾಷನಲ್ ಕಿಂಗ್ಡಮ್ ಹಾಲ್ ಫಂಡ್’ಗಾಗಿ ಮೀಸಲಾಗಿಡಲ್ಪಟ್ಟಿವೆ. ಈ ಎನ್ಕೆಏಚ್ಎಫ್, ಎಲ್ಲಿಂದ ದೇಶದಾದ್ಯಂತ ಇರುವ ಸಭೆಗಳಿಗೆ, ತಮ್ಮ ರಾಜ್ಯ ಸಭಾಗೃಹ ಕಾರ್ಯಯೋಜನೆಗಳಿಗೆ ನೆರವು ನೀಡಲು ಮುಂಗಡ ಹಣವು ಕೊಡಲ್ಪಡುತ್ತದೊ ಆ ಒಂದು ‘ಆವರ್ತನ ನಿಧಿ’ಯಾಗಿದೆ. ಇದು ಪುನಃ ಪಾವತಿಮಾಡಬೇಕಾಗಿರುವ ಮುಂಗಡ ಹಣವಾಗಿದೆ. ವೆಚ್ಚಗಳ ನಿರ್ವಹಣೆಯನ್ನು ಆವರಿಸಲು ಮತ್ತು ಇತರ ಸಭಾಗೃಹಗಳಿಗೆ ಹಣಕಾಸಿನ ನೆರವನ್ನು ನೀಡುವುದನ್ನು ಶಕ್ತಗೊಳಿಸುವಂತೆ, ಈ ಮುಂಗಡ ಹಣವನ್ನು ಅತ್ಯಲ್ಪವಾದ ಮೂರು ಪ್ರತಿಶತ ತೆರಿಗೆವೆಚ್ಚದೊಂದಿಗೆ ಹಿಂದಿರುಗಿಸಬೇಕು. ಸ್ಥಳಿಕ ಸಭೆಯ ಖರ್ಚುಗಳಿಗಾಗಿ ತಮ್ಮ ಸಾಮಾನ್ಯವಾದ ಕಾಣಿಕೆಗಳನ್ನು ಕೊಡುವುದರ ಹೊರತಾಗಿ, ತಮ್ಮ ಸಾಮರ್ಥ್ಯ ಮತ್ತು ಇಚ್ಛೆಗನುಸಾರ ಈ ನಿಧಿಗಾಗಿ ಏನನ್ನಾದರೂ ಬದಿಗಿರಿಸುವಂತೆ ಎಲ್ಲರೂ ಉತ್ತೇಜಿಸಲ್ಪಡಸಾಧ್ಯವಿದೆ. (1 ಕೊರಿಂಥ 16:1-4ನ್ನು ಹೋಲಿಸಿರಿ.) ಆದಿ ಕ್ರೈಸ್ತ ಸಭೆಯ ಕುರಿತಾಗಿ ಇತಿಹಾಸಕಾರನಾದ ಟೆರ್ಟಲ್ಯನ್ ಬರೆದುದು: “ಪ್ರತಿ ಮನುಷ್ಯನು ತಿಂಗಳಿಗೊಮ್ಮೆ ತಾನು ಯಾವಾಗ ಬಯಸುತ್ತಾನೊ ಆಗ, ಮಿತಬೆಲೆಯ ನಾಣ್ಯವೊಂದನ್ನು ತರುತ್ತಾನೆ; ಆದರೆ ಅವನು ಖಂಡಿತವಾಗಿ ಬಯಸುವುದಾದರೆ ಮತ್ತು ಅವನಿಗೆ ಸಾಧ್ಯವಿದ್ದರೆ ಮಾತ್ರ. ಏಕೆಂದರೆ ಯಾರನ್ನೂ ನಿರ್ಬಂಧಿಸಲಾಗುವುದಿಲ್ಲ. ಅದೊಂದು ಸ್ವಯಂಪ್ರೇರಿತ ನೀಡಿಕೆ.” ಕಾಣಿಕೆಗಳನ್ನು ಒತ್ತಾಯಿಸಿ ಕೇಳಲು, ಒಂದು ಕಲೆಕ್ಷನ್ ಪ್ಲೇಟನ್ನು ದಾಟಿಸುವ ಇಂದಿನ ಅನೇಕ ಧರ್ಮಗಳಂತಿರದೆ, ಕ್ರೈಸ್ತ ಸಭೆಯಲ್ಲಿನ ಎಲ್ಲಾ ಭೌತಿಕ ಅರ್ಪಣೆಗಳು, ಆಂತರ್ಯದಿಂದ ಸ್ವಯಂಪ್ರೇರಿತವಾಗಿ ಕೊಡಲ್ಪಡುತ್ತವೆ.—2 ಕೊರಿಂಥ 9:7.
15 ಆರ್ಬಿಸಿಯ ಸಲಹೆಗಳನ್ನು ಅನ್ವಯಿಸಿದ ನಂತರ ನಿರ್ಮಾಣಕ್ಕಾಗಿರುವ ಯೋಜನೆಗಳು ಹಿರಿಯರ ಸ್ಥಳಿಕ ಮಂಡಲಿಯಿಂದ ಸಮ್ಮತಿಸಲ್ಪಟ್ಟ ನಂತರ, ಇಡೀ ಕಾರ್ಯಯೋಜನೆಯ ವೆಚ್ಚವು, ಪುನಃ ಒಮ್ಮೆ ರೀಜನಲ್ ಬಿಲ್ಡಿಂಗ್ ಕಮಿಟಿಯ ನೆರವಿನೊಂದಿಗೆ ಅಂದಾಜು ಮಾಡಲ್ಪಡಬೇಕು. ಇಷ್ಟರೊಳಗೆ, ಸ್ಥಳಿಕವಾಗಿ ಎಷ್ಟು ಹಣವು ಲಭ್ಯವಿದೆಯೆಂಬುದರ ಕುರಿತಾಗಿಯೂ ಸಭೆಗೆ ತಿಳಿದಿರುವುದು. ಈ ಹಂತದಲ್ಲಿ, ಮುಂಗಡ ಹಣದ ಅವಶ್ಯವಿರುವಲ್ಲಿ, ಸಭೆಯು ಮುಂಗಡ ಹಣಕ್ಕಾಗಿ ಸೊಸೈಟಿಗೆ ವಿನಂತಿಸಬಹುದು. ಸೊಸೈಟಿಯು ವಿನಂತಿಯನ್ನು ಪರಿಶೀಲಿಸಿ, ಹತ್ತು ವರ್ಷಗಳ ಅವಧಿಯಲ್ಲಿ ಮಾಸಿಕ ಕಂತುಗಳಲ್ಲಿ ಪುನರ್ಪಾವತಿಮಾಡಲ್ಪಡಬೇಕಾದ ಮುಂಗಡ ಹಣವನ್ನು ಕೊಡಬೇಕೊ ಬೇಡವೊ ಎಂಬುದನ್ನು ನಿರ್ಣಯಿಸುವುದು. ಸೊಸೈಟಿಯಿಂದ ಅಂತಹ ಮುಂಗಡ ಹಣವನ್ನು ವಿನಂತಿಸುವ ಮುಂಚೆ, ಅದೇ ಕಾರ್ಯಯೋಜನೆಗಾಗಿ ಇನ್ನೂ ಹೆಚ್ಚಿನ ಮುಂಗಡ ಹಣವನ್ನು ಕೇಳುವುದನ್ನು ತಪ್ಪಿಸಲಿಕ್ಕಾಗಿ, ಆ ಸಹೋದರರು ಕುಳಿತು, ಒಳಗೂಡಿರುವ ಖರ್ಚುಗಳನ್ನು ನಿಷ್ಕೃಷ್ಟವಾಗಿಯೂ ವಾಸ್ತವಿಕವಾಗಿಯೂ ಲೆಕ್ಕಮಾಡುವುದು ಅತ್ಯಾವಶ್ಯಕ. (ಲೂಕ 14:28) ಒಂದು ರಾಜ್ಯ ಸಭಾಗೃಹವಾಗಿ ಪುನರ್ವಿನ್ಯಾಸಿಸಲಿಕ್ಕಾಗಿ ಒಂದು ಫ್ಲ್ಯಾಟ್ ಅಥವಾ ಇತರ ಕಟ್ಟಡವನ್ನು ಖರೀದಿಸಲಿಕ್ಕಾಗಿರುವ ಮುಂಗಡ ಹಣದ ವಿನಂತಿಗಳು—ಈ ಯೋಜನೆಯು ಪ್ರಾಯೋಗಿಕವಾಗಿದೆಯೆಂದು ಕಂಡುಕೊಳ್ಳಲ್ಪಡುವಲ್ಲಿ—ಸ್ವೀಕರಿಸಲ್ಪಡುವವು.
ಕಿಂಗ್ಡಮ್ ಹಾಲ್ ಅಸಿಸ್ಟೆನ್ಸ್ ಅರೇಂಜ್ಮೆಂಟ್
16 ನಿಮ್ಮದೇ ರಾಜ್ಯ ಸಭಾಗೃಹವಿರುವಲ್ಲಿ ಅಥವಾ ಬಾಡಿಗೆಗೆ ಪಡೆದುಕೊಂಡಿರುವಲ್ಲಿ ಮತ್ತು ಆ ಕಟ್ಟಡ ಇಲ್ಲವೇ ಒಳಗಿರುವ ಸಾಗಿಸಬಲ್ಲ ಬೆಲೆಬಾಳುವ ಸಾಮಗ್ರಿಗಳು ಸಂರಕ್ಷಿಸಲ್ಪಡಬೇಕೆಂದು ನೀವು ಬಯಸುವಲ್ಲಿ, ಸೊಸೈಟಿಯಲ್ಲಿ ಕಿಂಗ್ಡಮ್ ಹಾಲ್ ಅಸಿಸ್ಟೆನ್ಸ್ ಅರೇಂಜ್ಮೆಂಟ್ (ಕೆಏಚ್ಎಎ) ಇದೆ. ಇದರ ಕುರಿತಾದ ಮಾಹಿತಿಯು ಎಲ್ಲಾ ಸಭೆಗಳಿಗೆ ನೀಡಲ್ಪಟ್ಟಿದೆ. ಕಳ್ಳತನ ಹಾಗೂ ವಿಧ್ವಂಸಕತೆಯ ಇತರ ಕೃತ್ಯಗಳ ಸಂಭವಗಳು ಹೆಚ್ಚಾಗಿರುವ ಕಠಿನ ಸಮಯಗಳಲ್ಲಿ ನಾವು ಜೀವಿಸುತ್ತಿರುವ ನೋಟದಲ್ಲಿ, ಇದು ತೀರ ಪ್ರಯೋಜನಕರವಾದ ಏರ್ಪಾಡಾಗಿದೆ. ಪ್ರತಿ ವರ್ಷ ಕೇವಲ ಒಂದು ಚಿಕ್ಕ ಕಾಣಿಕೆಯನ್ನು—ಮೊತ್ತವು ಸೊಸೈಟಿಯಿಂದ ನಿರ್ಧರಿಸಲ್ಪಡುತ್ತದೆ—ತೆರುವ ಮೂಲಕ, ಸ್ವತ್ತು ಅಥವಾ ಬೆಲೆಬಾಳುವ ಸಾಮಗ್ರಿಗಳ ನಷ್ಟವನ್ನು ಪುನಃಭರ್ತಿಮಾಡಲು ಸಹಾಯವನ್ನು ಪಡೆಯುವ ಸ್ಥಾನದಲ್ಲಿ ಸಭೆಯು ತನ್ನನ್ನಿರಿಸಿಕೊಳ್ಳುತ್ತದೆ. ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಮತ್ತು ಪೀಠೋಪಕರಣದಂತಹ ದುಬಾರಿಯಾದ ಸಲಕರಣೆಗಳು, ಈ ರೀತಿಯಲ್ಲಿ ಸಂರಕ್ಷಿಸಲ್ಪಡಬಹುದು. ಇದು ಬಹಳ ಪ್ರೀತಿಪೂರ್ವಕವಾದ ಒದಗಿಸುವಿಕೆಯಾಗಿದೆ ಮತ್ತು ಎಲ್ಲಾ ಸಭೆಗಳು ಇದರ ವಿನಿಯೋಗಮಾಡುವಂತೆ ಉತ್ತೇಜಿಸಲ್ಪಡುತ್ತವೆ.
17 ಕೊಡುವ ಮನೋವೃತ್ತಿಯು ಯೆಹೋವ ದೇವರಿಂದ ಪ್ರಾರಂಭವಾಗುತ್ತದೆ. ಆತನು ತನ್ನ ಭೌಮಿಕ ಮಕ್ಕಳಿಗೆ ಎಲ್ಲಾ ಒಳ್ಳೆಯ ದಾನ ಮತ್ತು ಕುಂದಿಲ್ಲದ ವರಗಳ ಅತ್ಯಂತ ಉದಾರದಾತನಾಗಿದ್ದಾನೆ. (ಯಾಕೋ. 1:17) ಆತನು ಕೊಟ್ಟಿರುವ ಎಲ್ಲಾ ಅದ್ಭುತಕರ ವಿಷಯಗಳಿಗಾಗಿ ಆತನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಕೀರ್ತನೆಗಾರನು ಹೀಗೆ ಹೇಳಿದಾಗ ಈ ಪ್ರಶ್ನೆಯನ್ನು ಎಬ್ಬಿಸಿದನು: “ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?” (ಕೀರ್ತ. 116:12) ಆತನ ಪ್ರೀತಿದಯೆ ಮತ್ತು ನಿತ್ಯಜೀವಕ್ಕಾಗಿರುವ ಪ್ರತೀಕ್ಷೆಗಳಿಗಾಗಿ ನಾವು ಯೆಹೋವನಿಗೆ ಏನನ್ನು ಕೊಡಸಾಧ್ಯವಿದೆ? ಅದಕ್ಕೆ ಉತ್ತರಕೊಡುತ್ತಾ ಕೀರ್ತನೆಗಾರನೇ ಹೇಳಿದ್ದು: “ರಕ್ಷಣಾಪಾತ್ರೆಯನ್ನು ತೆಗೆದುಕೊಂಡು ಯೆಹೋವನಾಮವನ್ನು ಪ್ರಖ್ಯಾತಿಪಡಿಸುವೆನು. ನಾನು ನಿನಗೆ ಕೃತಜ್ಞತಾಯಜ್ಞಗಳನ್ನು ಸಮರ್ಪಿಸುವೆನು; ಯೆಹೋವನಾಮವನ್ನು ಪ್ರಖ್ಯಾತಿಪಡಿಸುವೆನು.” (ಕೀರ್ತ. 116:13, 17) ಹೌದು, ನಾವು ಯೆಹೋವನ ಹೆಸರನ್ನು ಕರೆಯುವಾಗ ಮತ್ತು ನಮ್ಮ ಟೆರಿಟೊರಿಯಲ್ಲಿ ಶುದ್ಧಾರಾಧನೆಯನ್ನು ಪ್ರವರ್ಧಿಸುವಾಗ ನಾವು ತೋರಿಸುವ ನಮ್ಮ ಅಚಲವಾದ ಸ್ವಾಮಿನಿಷ್ಠೆಯು ನಾವು ಯೆಹೋವನಿಗೆ ಕೊಡಸಾಧ್ಯವಿರುವ ಅತ್ಯಮೂಲ್ಯವಾದ ಕೊಡುಗೆಯಾಗಿದೆ. ಎಲ್ಲಿ ಜನರು “ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ” ಎಂದು ಹೇಳುತ್ತಾ ಬರುವರೋ ಆ ನಮ್ಮ ಸ್ವಂತ ರಾಜ್ಯ ಸಭಾಗೃಹವನ್ನು ಹೊಂದಿರುವುದು, ಇದನ್ನು ಮಾಡುವ ಒಂದು ಅತ್ಯುತ್ಕೃಷ್ಟ ಮಾರ್ಗವಾಗಿದೆ.—ಜೆಕರ್ಯ 8:23.
[Box on page 6]
ಒಂದು ರಾಜ್ಯ ಸಭಾಗೃಹವನ್ನು ಕಟ್ಟುವುದಕ್ಕಾಗಿ ನೆರವನ್ನು ನೀಡುವಂತೆ ನಿಮ್ಮ ಹೃದಯವು ನಿಮ್ಮನ್ನು ಪ್ರಚೋದಿಸುತ್ತದೊ?
ಒಂದು ರಾಜ್ಯ ಸಭಾಗೃಹವನ್ನು ಕಟ್ಟಲಿಕ್ಕಾಗಿರುವ ನಿಮ್ಮ ಗಣ್ಯತೆ ಮತ್ತು ಬಯಕೆಯನ್ನು ನೀವು ತೋರಿಸಸಾಧ್ಯವಿರುವ ಅನೇಕ ಮಾರ್ಗಗಳಿವೆ. ಅಂತಹ ಕಾರ್ಯಯೋಜನೆಗಳಿಗೆ ಹಣಕಾಸನ್ನು ನೀಡಲು ಸಹಾಯ ಮಾಡಲಿಕ್ಕಾಗಿ ಸೊಸೈಟಿಯಲ್ಲಿ ನ್ಯಾಷನಲ್ ಕಿಂಗ್ಡಮ್ ಹಾಲ್ ಫಂಡ್ ಇದೆ. ನೀವು ಈ ಮುಂದೆ ಕೊಡಲ್ಪಟ್ಟಿರುವ ವಿಧಗಳಲ್ಲಿ ನೆರವು ನೀಡಸಾಧ್ಯವಿದೆ:
1. ಕೊಡುಗೆಗಳು (ಗಿಫ್ಟ್ಸ್): ಹಣದ ಸ್ವಯಂಪ್ರೇರಿತ ದಾನಗಳನ್ನು ನೇರವಾಗಿ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಗೆ ಕಳುಹಿಸಬಹುದು. ಆಭರಣಗಳನ್ನು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನೂ ದಾನವಾಗಿ ಕೊಡಬಹುದು. ಈ ದಾನಗಳೊಂದಿಗೆ, ಇದು ನೇರವಾಗಿ ನ್ಯಾಷನಲ್ ಕಿಂಗ್ಡಮ್ ಹಾಲ್ ಫಂಡ್ಗಾಗಿ ಕೊಡಲ್ಪಟ್ಟಿರುವ ದಾನ ಎಂದು ಹೇಳುವ ಸಂಕ್ಷಿಪ್ತ ಪತ್ರವು ಜತೆಗೂಡಿರಬೇಕು.
2. ಷರತ್ತುಳ್ಳ ದಾನದ (ಕಂಡಿಷನಲ್-ಡೊನೇಷನ್) ಏರ್ಪಾಡು: ದಾನಿಗೆ ಒಂದುವೇಳೆ ವೈಯಕ್ತಿಕ ಅಗತ್ಯಬಿದ್ದರೆ ಅದನ್ನು ಅವನಿಗೆ ಹಿಂದೆಕೊಡುವ ಷರತ್ತಿನೊಂದಿಗೆ, ದಾನಿಯ ಮರಣದ ತನಕ ಟ್ರಸ್ಟಿನಲ್ಲಿ ಇಟ್ಟುಕೊಳ್ಳುವಂತೆ ವಾಚ್ ಟವರ್ ಸೊಸೈಟಿಗೆ ಹಣವನ್ನು ಕೊಡಬಹುದು. ಈ ಹಣವು ಮೇಲೆ ಕೊಡಲ್ಪಟ್ಟಿರುವ ನಿಧಿಗಾಗಿದೆಯೆಂದು ಸ್ಪಷ್ಟವಾಗಿ ಗುರುತಿಸಲ್ಪಡಬೇಕು.
3. ಬ್ಯಾಂಕ್ ಖಾತೆಗಳು (ಬ್ಯಾಂಕ್ ಅಕೌಂಟ್ಸ್): ಬ್ಯಾಂಕ್ ಖಾತೆಗಳು, ಠೇವಣಾತಿ ಸರ್ಟಿಫಿಕೇಟುಗಳು ಅಥವಾ ವೈಯಕ್ತಿಕ ನಿವೃತ್ತಿ ಖಾತೆಗಳನ್ನು ಸ್ಥಳಿಕ ಬ್ಯಾಂಕ್ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ, ವಾಚ್ ಟವರ್ ಸೊಸೈಟಿಗೆ ಟ್ರಸ್ಟಿನಲ್ಲಿಟ್ಟುಕೊಳ್ಳುವಂತೆ ಅಥವಾ ದಾನಿಯು ಮರಣ ಹೊಂದುವಲ್ಲಿ ವಾಚ್ ಟವರ್ ಸೊಸೈಟಿಗೆ ಸಲ್ಲುವಂತೆ ಏರ್ಪಡಿಸಬಹುದು. ಈ ಮೊತ್ತಗಳು ಮೇಲೆ ಕೊಡಲ್ಪಟ್ಟಿರುವ ನಿಧಿಗಾಗಿ ಉಪಯೋಗಿಸಲ್ಪಡಬೇಕೆಂಬುದನ್ನು ನಿರ್ದಿಷ್ಟವಾಗಿ ತಿಳಿಸಿರಿ. ಇಂತಹ ಯಾವುದೇ ಏರ್ಪಾಡುಗಳ ಕುರಿತಾಗಿ ಸೊಸೈಟಿಗೆ ತಿಳಿಸಬೇಕು.
4. ಸ್ಟಾಕ್ಗಳು ಮತ್ತು ಷೇರ್ಗಳು: ಸ್ಟಾಕ್ಗಳು ಮತ್ತು ಷೇರುಗಳನ್ನು ಒಂದು ನೇರವಾದ ಕೊಡುಗೆಯಾಗಿ, ಇಲ್ಲವೆ ಆದಾಯವು ದಾನಿಗೆ ಸಲ್ಲುತ್ತಾ ಇರುವಂತಹ ಒಂದು ಏರ್ಪಾಡಿನ ಕೆಳಗೆ ವಾಚ್ ಟವರ್ ಸೊಸೈಟಿಗೆ ದಾನಮಾಡಬಹುದು. ಲಾಭಗಳೇನಾದರೂ ಇರುವಲ್ಲಿ ಅವುಗಳು ಸೊಸೈಟಿಯಲ್ಲಿರುವ ರಾಜ್ಯ ಸಭಾಗೃಹ ನಿಧಿಗಾಗಿ ಮೀಸಲಾಗಿಡಲ್ಪಡಬೇಕು.
5. ಸ್ಥಿರಾಸ್ತಿ (ರಿಯಲ್ ಎಸ್ಟೇಟ್): ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ಒಂದು ಕೊಡುಗೆಯಾಗಿ, ಇಲ್ಲವೇ ದಾನಿಯು, ಅವನ ಅಥವಾ ಅವಳ ಜೀವಮಾನಕಾಲದಲ್ಲಿ ಅಲ್ಲಿ ಜೀವಿಸುತ್ತಾ ಇರಬಲ್ಲ ಏರ್ಪಾಡಿನೊಂದಿಗೆ, ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ವಾಚ್ ಟವರ್ ಸೊಸೈಟಿಗೆ ದಾನಮಾಡಬಹುದು. ಒಬ್ಬನು ಯಾವುದೇ ಸ್ಥಿರಾಸ್ತಿಯನ್ನು ಸೊಸೈಟಿಗೆ ಕರಾರುಪತ್ರ ಮಾಡುವ ಮೊದಲು ಸೊಸೈಟಿಯನ್ನು ಸಂಪರ್ಕಿಸಬೇಕು. ಅದರಿಂದ ಬರುವ ಹಣವು ರಾಜ್ಯ ಸಭಾಗೃಹ ನಿಧಿಯ ಉಪಯೋಗಕ್ಕಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು.
6. ಉಯಿಲುಗಳು ಮತ್ತು ಟ್ರಸ್ಟ್ಗಳು (ವಿಲ್ಸ್ ಆ್ಯಂಡ್ ಟ್ರಸ್ಟ್): ಆಸ್ತಿ ಅಥವಾ ಹಣವನ್ನು ಕಾನೂನುಬದ್ಧವಾಗಿ ನಿರ್ವಹಿಸಿದ ಇಚ್ಛಾಪತ್ರದ ಮೂಲಕ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಗೆ ಬಿಟ್ಟುಬಿಡಬಹುದು. ಅಥವಾ ಸೊಸೈಟಿಯನ್ನು ಒಂದು ಟ್ರಸ್ಟ್ ಕರಾರುಪತ್ರದ ಫಲಾನುಭವಿಯಾಗಿ ಹೆಸರಿಸಬಹುದು. ಒಂದು ಧಾರ್ಮಿಕ ಸಂಸ್ಥೆಗೆ ಪ್ರಯೋಜನವನ್ನು ನೀಡುವ ಟ್ರಸ್ಟು, ನಿರ್ದಿಷ್ಟ ತೆರಿಗೆ ಸೌಲಭ್ಯಗಳನ್ನು ಒದಗಿಸಬಹುದು. ಉಯಿಲಿನ ಅಥವಾ ಟ್ರಸ್ಟಿನ ಒಪ್ಪಿಗೆ ಪತ್ರದ ನಕಲುಪ್ರತಿಯು ಸೊಸೈಟಿಗೆ ಕಳುಹಿಸಲ್ಪಡಬೇಕು ಮತ್ತು ಆ ಉಯಿಲು ಅಥವಾ ಟ್ರಸ್ಟಿನ ಲಾಭಗಳು ರಾಜ್ಯ ಸಭಾಗೃಹ ನಿಧಿಗಾಗಿವೆಯೆಂದು ಸ್ಪಷ್ಟವಾಗಿ ಗುರುತಿಸಲ್ಪಡಬೇಕು.
ಇಂತಹ ವಿಷಯಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ Watch Tower Bible and Tract Society of India, H-58 Old Khandala Road, Lonavla 410 401, MAH., INDIA, ಈ ವಿಳಾಸಕ್ಕೆ ಬರೆಯಿರಿ.