ನಾವು “ವಾಕ್ಯವನ್ನು ಸಾರು”ತ್ತೇವೆ
1 “ಕಡೇ ದಿವಸಗಳ” ಕುರಿತಾದ ಬೈಬಲಿನ ವರ್ಣನೆಗನುಸಾರವಾಗಿ, ಇಂದು ಹೆಚ್ಚಿನ ಜನರಿಗೆ ಕೇವಲ “ಭಕ್ತಿಯ ವೇಷ”ವಿದೆ. (2 ತಿಮೊ. 3:1, 5) ಇದು ಏಕೆಂದರೆ ಧಾರ್ಮಿಕ ಮುಖಂಡರು ತಮ್ಮ ಹಿಂಡುಗಳಿಗೆ ಯಥಾರ್ಥವಾದ ಆತ್ಮಿಕ ಮಾರ್ಗದರ್ಶನೆಯನ್ನು ನೀಡಲು ವಿಫಲರಾಗಿದ್ದಾರೆ. ಕ್ರೈಸ್ತಪ್ರಪಂಚದ ವೈದಿಕರು ಬೈಬಲನ್ನು ಎತ್ತಿಹಿಡಿಯುವುದಿಲ್ಲ. ಅವರು ತತ್ತ್ವಜ್ಞಾನಿಗಳ ಮತ್ತು ದೇವತಾಶಾಸ್ತ್ರಜ್ಞರ ವ್ಯರ್ಥ ಬೋಧನೆಗಳನ್ನು ಗಿಳಿಪಾಠಮಾಡಲು, ಇಲ್ಲವೇ ದೇವರ ವಾಕ್ಯವನ್ನು ಸಾರುವ ಬದಲು ಸಾಮಾಜಿಕ ಹಾಗೂ ರಾಜಕೀಯ ವಿಚಾರಗಳನ್ನು ಚರ್ಚಿಸಲು ಇಚ್ಛಿಸುತ್ತಾರೆ. ಅನೇಕ ಧಾರ್ಮಿಕ ಮುಖಂಡರು ಬೈಬಲನ್ನು ನಂಬುವುದಿಲ್ಲ. ಅವರು ಅದು ಹಳೇಕಾಲದ್ದಾಗಿದೆ ಎಂದು ಭಾವಿಸುತ್ತಾರೆ, ಆದುದರಿಂದ ಒಬ್ಬ ಮಹಾ ಸೃಷ್ಟಿಕರ್ತನ ಕುರಿತಾದ ಬೈಬಲಿನ ಬೋಧನೆಯ ಬದಲು ವಿಕಾಸದ ವಾದವನ್ನು ಅವರು ವ್ಯತಿರಿಕ್ತವಾಗಿ ಪ್ರವರ್ಧಿಸುತ್ತಾರೆ. ಹೆಚ್ಚಿನ ವೈದಿಕರು ದೇವರ ವೈಯಕ್ತಿಕ ಹೆಸರನ್ನು ಉಪಯೋಗಿಸುವುದೂ ಇಲ್ಲ ಮತ್ತು ಆಧುನಿಕ ಬೈಬಲ್ ಭಾಷಾಂತರಗಳಿಂದ ಅದು ತೆಗೆದುಹಾಕಲ್ಪಟ್ಟಿರುವುದರ ಬಗ್ಗೆ ಅವರು ಯಾವುದೇ ಆಕ್ಷೇಪಣೆಗಳನ್ನು ಎತ್ತುವುದಿಲ್ಲ.
2 ಯೇಸುವಿನ ದಿನದಲ್ಲಿನ ಧಾರ್ಮಿಕ ಮುಖಂಡರ ವಿಷಯದಲ್ಲಿ ಸತ್ಯವಾಗಿದ್ದಂತೆಯೇ, ಇಂದಿನ ವೈದಿಕರು ವ್ಯರ್ಥವಾಗಿ ಸಾರುತ್ತಿದ್ದಾರೆ. (ಮತ್ತಾ. 15:8, 9) ಇದು ಪ್ರವಾದಿಯಾದ ಆಮೋಸನು ಹೇಳಿದಂತೆಯೇ ಇದೆ. ಅಲ್ಲಿ “ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮವೇ” ಇದೆ. (ಆಮೋ. 8:11) ಬೇರೆಲ್ಲ ವಿಷಯಕ್ಕಿಂತಲೂ ಹೆಚ್ಚಾಗಿ ಜನರಿಗೆ, ದೇವರ ವಾಕ್ಯದಲ್ಲಿನ ಆತ್ಮಿಕ ಆಹಾರದ ಅಗತ್ಯವಿದೆ.
3 ಜನರ ಆತ್ಮಿಕ ಅಗತ್ಯವನ್ನು ತೃಪ್ತಿಪಡಿಸುವ ವಿಧ: ಪೌಲನು ತಿಮೊಥೆಯನಿಗೆ “ರಕ್ಷಣೆಗಾಗಿ [ಒಬ್ಬನನ್ನು] ವಿವೇಕಿಯಾಗಿ ಮಾಡಲು ಶಕ್ತವಾಗಿರುವ ಪವಿತ್ರ ಬರವಣಿಗೆಗ”ಳೊಂದಿಗೆ ಅಂಟಿಕೊಂಡಿರುವಂತೆ ಪ್ರೇರೇಪಿಸಿದನು, ಆದುದರಿಂದ ಅವನು ಇತರರಿಗೆ “ವಾಕ್ಯವನ್ನು ಸಾರು”ವಂತೆ ತಿಮೊಥೆಯನಿಗೆ ಅರ್ಥಪೂರ್ಣವಾಗಿ ಹೇಳಿದನು. (2 ತಿಮೊ. 3:14, 15, NW; 4:2) ಯೆಹೋವನ ಸಾಕ್ಷಿಗಳೋಪಾದಿ ನಾವು, “ನಾನು ಹೇಳುವ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದಾತನದು” ಎಂದು ಹೇಳಿದ ನಮ್ಮ ಆದರ್ಶಪ್ರಾಯನಾದ ಯೇಸುವನ್ನು ಅನುಕರಿಸುತ್ತಾ, ನಾವು ಸಾರುವಾಗ ಬೈಬಲು ಏನನ್ನು ಬೋಧಿಸುತ್ತದೋ ಅದಕ್ಕೆ ಅಂಟಿಕೊಳ್ಳಬೇಕು. (ಯೋಹಾ. 7:16) ನಾವು ನಮ್ಮ ಬೋಧಿಸುವಿಕೆಗಾಗಿ ದೇವರ ವಾಕ್ಯವನ್ನು ಆಧಾರವಾಗಿ ಉಪಯೋಗಿಸುತ್ತೇವೆ, ಏಕೆಂದರೆ ಅದು ದೈವಿಕ ವಿವೇಕವನ್ನು ಒಳಗೊಂಡಿದೆ ಎಂಬುದನ್ನು ನಾವು ಗ್ರಹಿಸುತ್ತೇವೆ. ಹಾಗೂ ಜನರು ನಾವು ಅವರೊಂದಿಗೆ ಹಂಚಿಕೊಳ್ಳುತ್ತಿರುವ ಮಾಹಿತಿಯ ಮೂಲವನ್ನು ತಿಳಿದುಕೊಳ್ಳುವಂತೆ ಬಯಸುತ್ತೇವೆ.—1 ಕೊರಿಂ. 2:4-7.
4 ಯೆಹೋವನ ಕುರಿತಾಗಿ ಕಲಿತುಕೊಂಡು, ಆತನಲ್ಲಿ ನಂಬಿಕೆಯನ್ನಿಡಲಿಕ್ಕಾಗಿ ಜನರು ಸತ್ಯವನ್ನು ಮೊದಲಾಗಿ ಬೈಬಲಿನಿಂದ ಕೇಳಿಸಿಕೊಳ್ಳಬೇಕು. ಪೌಲನು ತಾರ್ಕಿಕವಾಗಿ ಬರೆದುದು: “ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ?” (ರೋಮಾ. 10:14) ದೇವರ ವಾಕ್ಯವನ್ನು ಸಾರುವ ಮೂಲಕ ನಾವು, ಇತರರಿಗೆ ನಿಷ್ಕೃಷ್ಟ ಜ್ಞಾನದ ಮುಖಾಂತರ ನಂಬಿಕೆಯನ್ನು ಪಡೆದುಕೊಳ್ಳುವಂತೆ ಸಹಾಯಮಾಡುತ್ತೇವೆ. ಅಂಥ ಜ್ಞಾನವು ಜೀವಿತಗಳನ್ನು ಹೆಚ್ಚು ಉತ್ತಮವಾದ ಸ್ಥಿತಿಗೆ ಬದಲಾಯಿಸಬಲ್ಲದು ಹಾಗೂ ಬದಲಾಯಿಸುತ್ತದೆ. ಇಂಗ್ಲಿಷ್ ಗ್ರಂಥಕರ್ತನಾದ ಚಾರ್ಲ್ಸ್ ಡಿಕನ್ಸ್ ಬೈಬಲಿನ ಕುರಿತಾಗಿ ಬರೆದುದು: “ಲೋಕದಲ್ಲಿಯೇ ಎಂದಾದರೂ ಇದ್ದ ಅಥವಾ ಇರಲಿರುವ ಅತ್ಯುತ್ತಮ ಪುಸ್ತಕವು ಇದಾಗಿದೆ. ಏಕೆಂದರೆ ಅದು ನಿಮಗೆ ಅತ್ಯುತ್ತಮ ಪಾಠಗಳನ್ನು ಕಲಿಸುತ್ತದೆ. ಇದರಿಂದ, ಸತ್ಯಪೂರ್ಣನೂ ನಂಬಿಗಸ್ತನೂ ಆಗಿರಲು ಪ್ರಯತ್ನಿಸುವ ಯಾವುದೇ ಮಾನವ ಸೃಷ್ಟಿಜೀವಿಯು, ಮಾರ್ಗದರ್ಶಿಸಲ್ಪಡುವ ಸಾಧ್ಯತೆಯಿದೆ.”
5 ಆತ್ಮಿಕ ಸತ್ಯಕ್ಕಾಗಿ ಹಂಬಲಿಸುವವರು, ಇದು ದೇವರ ವಾಕ್ಯದ ಅಧಿಕಾರದಿಂದ ಬೆಂಬಲಿಸಲ್ಪಟ್ಟಿದೆಯೆಂಬುದನ್ನು ಗ್ರಹಿಸುತ್ತಾರೆ. ಹಿಂದೆ 1913ರಲ್ಲಿ, ಒಬ್ಬ ಯುವ ಕಾಲೆಜ್ ವಿದ್ಯಾರ್ಥಿಯಾಗಿದ್ದ ಫ್ರೆಡ್ರಿಕ್ ಡಬ್ಲ್ಯೂ. ಫ್ರಾನ್ಸ್ಗೆ, ಮೃತರು ಎಲ್ಲಿದ್ದಾರೆ? (ಇಂಗ್ಲಿಷ್) ಎಂಬ ಶೀರ್ಷಿಕೆಯುಳ್ಳ ಒಂದು ಪುಸ್ತಿಕೆಯ ಕೊಡಲ್ಪಟ್ಟಿತು. ಈ ಪ್ರಶ್ನೆಗೆ ಬೈಬಲಿನ ಉತ್ತರವನ್ನು ಅತ್ಯಂತ ಆಸಕ್ತಿಯಿಂದ ಓದಿದ ಬಳಿಕ, ಅವರು ಪ್ರಕಟಿಸಿದ್ದು: “ಇದೇ ಸತ್ಯವಾಗಿದೆ.” ಲಕ್ಷಾಂತರ ಸತ್ಯಾನ್ವೇಷಕರಿಗೂ ಇದೇ ರೀತಿಯ ಅನಿಸಿಕೆಯಾಗಿದೆ. ನಾವು ವಾಕ್ಯವನ್ನು ಶ್ರದ್ಧಾಪೂರ್ವಕವಾಗಿಯೂ ಹುರುಪಿನಿಂದಲೂ ಸಾರುವುದನ್ನು ಮುಂದುವರಿಸೋಣ. ಮತ್ತು ಹೀಗೆ “ಇದೇ ಸತ್ಯವಾಗಿದೆ” ಎಂದು ಇತರರು ಹೇಳುವುದನ್ನು ಕೇಳಿಸಿಕೊಳ್ಳುವುದರಲ್ಲಿರುವ ಹರ್ಷದಲ್ಲಿ ಪಾಲಿಗರಾಗೋಣ.