ಒಂದು ಕುಟುಂಬದೋಪಾದಿ ದೇವರ ವಾಕ್ಯವನ್ನು ಕ್ರಮವಾಗಿ ಅಭ್ಯಾಸಿಸಿರಿ
“ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು.”—ಮತ್ತಾಯ 4:4.
1. ಕುಟುಂಬ ತಲೆಗಳು ತಮ್ಮ ಮಕ್ಕಳಿಗೆ ಯೆಹೋವನ ಮಾರ್ಗಗಳನ್ನು ಕಲಿಸಬೇಕೆಂಬ ಜವಾಬ್ದಾರಿಯ ಕುರಿತು ಬೈಬಲ್ ಏನು ಹೇಳುತ್ತದೆ?
ಯೆಹೋವ ದೇವರು ಕುಟುಂಬ ತಲೆಗಳಿಗೆ, ತಮ್ಮ ಮಕ್ಕಳಿಗೆ ಕಲಿಸಬೇಕೆಂಬ ಜವಾಬ್ದಾರಿಯ ಕುರಿತು ಮರುಜ್ಞಾಪನಗಳನ್ನು ಪದೇ ಪದೇ ನೀಡಿದನು. ಇಂತಹ ಉಪದೇಶವು ಮಕ್ಕಳನ್ನು ಸದ್ಯದ ಜೀವಿತಕ್ಕಾಗಿ ಮಾತ್ರ ಸಜ್ಜುಗೊಳಿಸದೆ, ಬರಲಿರುವ ಜೀವಿತಕ್ಕಾಗಿಯೂ ಅವರು ಸಿದ್ಧರಾಗಿರುವಂತೆ ಮಾಡಲು ನೆರವು ನೀಡುವುದು. ದೇವರನ್ನು ಪ್ರತಿನಿಧಿಸಿದ ಒಬ್ಬ ದೇವದೂತನು, ಅಬ್ರಹಾಮನಿಗೆ ಅವನ ಜವಾಬ್ದಾರಿಯ ಕುರಿತು ತಿಳಿಸಿದನು. ತನ್ನ ಮನೆವಾರ್ತೆಯವರು “ಯೆಹೋವನ ಮಾರ್ಗವನ್ನು ಅನುಸರಿಸ”ಸಾಧ್ಯವಾಗುವಂತೆ, ಅವನು ಅವರಿಗೆ ಕಲಿಸಬೇಕಿತ್ತು. (ಆದಿಕಾಂಡ 18:19) ದೇವರು ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡಿಸಿ, ಹೋರೇಬ್ನಲ್ಲಿರುವ ಸೀನಾಯಿ ಬೆಟ್ಟದ ಮೇಲೆ ಧರ್ಮಶಾಸ್ತ್ರವನ್ನು ಹೇಗೆ ನೀಡಿದನೆಂಬುದನ್ನು ಇಸ್ರಾಯೇಲ್ಯ ಹೆತ್ತವರು ತಮ್ಮ ಮಕ್ಕಳಿಗೆ ವಿವರಿಸುವಂತೆ ಹೇಳಲಾಗಿತ್ತು. (ವಿಮೋಚನಕಾಂಡ 13:8, 9; ಧರ್ಮೋಪದೇಶಕಾಂಡ 4:9, 10; 11:18-21) ಕ್ರೈಸ್ತ ಕುಟುಂಬ ತಲೆಗಳು, ತಮ್ಮ ಮಕ್ಕಳಿಗೆ ‘ಯೆಹೋವನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಮಾನಸಿಕ ಕ್ರಮಪಡಿಸುವಿಕೆಯನ್ನೂ’ ನೀಡುತ್ತಾ ಬೆಳೆಸುವಂತೆ ಹೇಳಲ್ಪಟ್ಟಿದ್ದಾರೆ. (ಎಫೆಸ 6:4) ಹೆತ್ತವರಲ್ಲಿ ಒಬ್ಬರು ಮಾತ್ರ ಯೆಹೋವನನ್ನು ಸೇವಿಸುತ್ತಿದ್ದರೂ, ಅವರು ಮಕ್ಕಳಿಗೆ ಯೆಹೋವನ ಮಾರ್ಗಗಳನ್ನು ಕಲಿಸಲು ಪ್ರಯತ್ನಿಸಬೇಕು.—2 ತಿಮೊಥೆಯ 1:5; 3:14, 15.
2. ಮನೆಯಲ್ಲಿ ಮಕ್ಕಳಿಲ್ಲದಿದ್ದರೆ ಕುಟುಂಬ ಅಧ್ಯಯನದ ಅಗತ್ಯವಿದೆಯೊ? ವಿವರಿಸಿರಿ.
2 ದೇವರ ವಾಕ್ಯವನ್ನೊಳಗೊಂಡ ಕುಟುಂಬ ಅಧ್ಯಯನವು, ಮಕ್ಕಳಿರುವ ಕುಟುಂಬಗಳಲ್ಲಿ ಮಾತ್ರ ನಡೆಸಲ್ಪಡಬೇಕೆಂಬುದು ಇದರ ಅರ್ಥವಲ್ಲ. ಮನೆಯಲ್ಲಿ ಮಕ್ಕಳಿರದಿದ್ದರೂ ಪತಿ ಪತ್ನಿಯರು ಒಂದು ಕುಟುಂಬ ಅಧ್ಯಯನವನ್ನು ನಡೆಸುವುದಾದರೆ, ಇದು ಆತ್ಮಿಕ ವಿಷಯಗಳಿಗಾಗಿ ಅವರಲ್ಲಿರುವ ಅತ್ಯತ್ತುಮ ಗಣ್ಯತಾಭಾವವನ್ನು ವ್ಯಕ್ತಪಡಿಸುತ್ತದೆ.—ಎಫೆಸ 5:25, 26.
3. ಕುಟುಂಬ ಅಧ್ಯಯನವನ್ನು ಕ್ರಮವಾಗಿ ನಡೆಸುವುದು ಏಕೆ ಪ್ರಾಮುಖ್ಯವಾಗಿದೆ?
3 ಅತ್ಯಂತ ಹೆಚ್ಚಿನ ಪ್ರಯೋಜನವನ್ನು ಪಡೆಯಲು, ಉಪದೇಶವು ಕ್ರಮವಾಗಿ ನೀಡಲ್ಪಡಬೇಕು. ಇದು ಯೆಹೋವನು ಇಸ್ರಾಯೇಲ್ಯರಿಗೆ ಅರಣ್ಯದಲ್ಲಿ ಕಲಿಸಿದ ಪಾಠಕ್ಕೆ ಅನುಗುಣವಾಗಿದೆ: “ಮನುಷ್ಯರು ಆಹಾರಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುತ್ತಾರೆ.” (ಧರ್ಮೋಪದೇಶಕಾಂಡ 8:3) ಕುಟುಂಬದ ಪರಿಸ್ಥಿತಿಗಳಿಗನುಸಾರ, ಕೆಲವು ಮನೆವಾರ್ತೆಗಳು ಸಾಪ್ತಾಹಿಕ ಅಧ್ಯಯನವನ್ನು ಏರ್ಪಡಿಸಬಹುದು, ಇತರರು ಪ್ರತಿದಿನವೂ ಅಲ್ಪಾವಧಿಯ ಅಧ್ಯಯನವನ್ನು ಏರ್ಪಡಿಸಬಹುದು. ನೀವು ಯಾವ ಏರ್ಪಾಡನ್ನೇ ಆರಿಸಿಕೊಳ್ಳಲಿ, ಬಿಡುವಿರುವಾಗ ಮಾತ್ರ ಅಧ್ಯಯನಕ್ಕಾಗಿ ಒಟ್ಟುಸೇರುವ ನಿರ್ಧಾರವನ್ನು ಮಾಡಬೇಡಿ. ಅದಕ್ಕಾಗಿ ‘ಸಮಯವನ್ನು ಕೊಂಡುಕೊಳ್ಳಿರಿ.’ ಇಂತಹ ಸಮಯಕ್ಕಾಗಿ ಬೇಕಾದ ಬೆಲೆಯನ್ನು ತೆರುವುದು ಪ್ರಯೋಜನಕರವಾದ ಬಂಡವಾಳವಾಗಿದೆ. ಏಕೆಂದರೆ, ನಿಮ್ಮ ಕುಟುಂಬ ಸದಸ್ಯರ ಜೀವಿತಗಳು ಗಂಡಾಂತರದಲ್ಲಿವೆ.—ಎಫೆಸ 5:15-17; ಫಿಲಿಪ್ಪಿ 3:16.
ಮನಸ್ಸಿನಲ್ಲಿಡಬೇಕಾದ ಲಕ್ಷ್ಯಗಳು
4, 5. (ಎ) ತಮ್ಮ ಮಕ್ಕಳಿಗೆ ಕಲಿಸುವುದರ ಮುಖ್ಯ ಲಕ್ಷ್ಯವು ಏನಾಗಿರಬೇಕೆಂದು ಯೆಹೋವನು ಮೋಶೆಯ ಮೂಲಕ ಹೆತ್ತವರಿಗೆ ತಿಳಿಸಿದನು? (ಬಿ) ಅದು ಇಂದು ಏನನ್ನು ಒಳಗೊಳ್ಳುತ್ತದೆ?
4 ನೀವು ಕುಟುಂಬ ಅಧ್ಯಯನವನ್ನು ನಡೆಸುವಾಗ, ನಿಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿ ವಿಶದೀಕರಿಸಲ್ಪಟ್ಟ ಲಕ್ಷ್ಯಗಳು ಇರುವುದಾದರೆ, ಇದರಿಂದ ಹೆಚ್ಚಿನ ಒಳಿತಾಗುವುದು. ಕೆಲವು ಲಕ್ಷ್ಯಗಳನ್ನು ಪರಿಗಣಿಸಿರಿ.
5 ಪ್ರತಿಯೊಂದು ಅಧ್ಯಯನದಲ್ಲೂ, ಯೆಹೋವ ದೇವರಿಗಾಗಿ ಪ್ರೀತಿಯನ್ನು ಬೆಳೆಸಲು ಪ್ರಯತ್ನಿಸಿರಿ. ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುವ ಮೊದಲು ಮೋವಾಬಿನ ಬಯಲಿನಲ್ಲಿ ಕೂಡಿಬಂದಾಗ, ಯಾವುದನ್ನು ಯೇಸು ಕ್ರಿಸ್ತನು ತದನಂತರ “ಧರ್ಮಶಾಸ್ತ್ರದಲ್ಲಿ ಮುಖ್ಯವಾದ ಆಜ್ಞೆ” ಎಂದು ಗುರುತಿಸಿದನೊ ಅದರ ಮೇಲೆ ಮೋಶೆಯು ಅವರ ಗಮನವನ್ನು ಕೇಂದ್ರೀಕರಿಸಿದನು. ಅದು ಏನಾಗಿತ್ತು? “ನಿನ್ನ ದೇವರಾಗಿರುವ ಯೆಹೋವನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು.” (ಮತ್ತಾಯ 22:36, 37, NW; ಧರ್ಮೋಪದೇಶಕಾಂಡ 6:5) ಇಸ್ರಾಯೇಲ್ಯರು ಇದನ್ನು ತಮ್ಮ ಹೃದಯಗಳ ಮೇಲೆ ಅಚ್ಚೊತ್ತಿಕೊಂಡ ನಂತರ, ತಮ್ಮ ಮಕ್ಕಳಿಗೆ ಕಲಿಸುವಂತೆ ಮೋಶೆಯು ಉತ್ತೇಜಿಸಿದನು. ಇದು ಪುನರಾವರ್ತನೆಯನ್ನು, ಯೆಹೋವನನ್ನು ಪ್ರೀತಿಸುವುದಕ್ಕಾಗಿರುವ ಕಾರಣಗಳ ಕಡೆಗೆ ಗಮನ ಸೆಳೆಯುವುದನ್ನು, ಇಂತಹ ಪ್ರೀತಿಯ ಪ್ರದರ್ಶನವನ್ನು ತಡೆಯಬಹುದಾದ ಮನೋಭಾವಗಳು ಮತ್ತು ನಡತೆಯೊಂದಿಗೆ ವ್ಯವಹರಿಸುವುದನ್ನು, ಮತ್ತು ಯೆಹೋವನಿಗಾಗಿರುವ ಪ್ರೀತಿಯನ್ನು ತಮ್ಮ ಜೀವಿತಗಳಲ್ಲೇ ತೋರ್ಪಡಿಸುವುದನ್ನು ಕೇಳಿಕೊಂಡಿತು. ನಿಮ್ಮ ಮಕ್ಕಳಿಗೂ ಇದೇ ರೀತಿಯ ಉಪದೇಶದ ಅಗತ್ಯವಿದೆಯೋ? ಹೌದು! ಮತ್ತು ಅವರಿಗೆ ‘ತಮ್ಮ ಹೃದಯದ ಸುನ್ನತಿಮಾಡಿಕೊಳ್ಳಲು’ ಅಂದರೆ, ದೇವರಿಗಾಗಿರುವ ಪ್ರೀತಿಯನ್ನು ಅಡ್ಡಿಮಾಡುವ ಯಾವುದೇ ವಿಷಯವನ್ನು ತೆಗೆದುಹಾಕಲು ಸಹಾಯದ ಅಗತ್ಯವಿದೆ. (ಧರ್ಮೋಪದೇಶಕಾಂಡ 10:12, 16; ಯೆರೆಮೀಯ 4:4) ಇಂತಹ ಅಡೆತಡೆಗಳಲ್ಲಿ, ಲೋಕದ ವಿಷಯಗಳಿಗಾಗಿ ಮತ್ತು ಅದರ ಚಟುವಟಿಕೆಗಳಲ್ಲಿ ತಲ್ಲೀನರಾಗುವ ಅವಕಾಶಗಳಿಗಾಗಿ ಹಾತೊರೆಯುವುದು ಸೇರಿರಬಹುದು. (1 ಯೋಹಾನ 2:15, 16) ಯೆಹೋವನಿಗಾಗಿರುವ ಪ್ರೀತಿಯು ಸಕ್ರಿಯವೂ, ಭಾವಗರ್ಭಿತವೂ ಆಗಿದ್ದು, ನಮ್ಮ ಸ್ವರ್ಗೀಯ ತಂದೆಯನ್ನು ಮೆಚ್ಚಿಸುವಂತಹ ಕೆಲಸಗಳನ್ನು ಮಾಡುವಂತೆ ನಮ್ಮನ್ನು ಪ್ರೇರಿಸಬೇಕು. (1 ಯೋಹಾನ 5:3) ನಿಮ್ಮ ಕುಟುಂಬ ಅಧ್ಯಯನದಿಂದ ದೀರ್ಘ ಕಾಲದ ಪ್ರಯೋಜನಗಳು ಲಭ್ಯವಾಗಬೇಕಾದರೆ, ಪ್ರತಿಯೊಂದು ಅಧ್ಯಯನವು ಈ ಪ್ರೀತಿಯನ್ನು ಬಲಪಡಿಸುವ ವಿಧದಲ್ಲಿ ನಡೆಸಲ್ಪಡಬೇಕು.
6. (ಎ) ನಿಷ್ಕೃಷ್ಟ ಜ್ಞಾನವನ್ನು ನೀಡಲು ಯಾವುದರ ಅಗತ್ಯವಿದೆ? (ಬಿ) ಶಾಸ್ತ್ರಗಳು ನಿಷ್ಕೃಷ್ಟ ಜ್ಞಾನದ ಮಹತ್ವವನ್ನು ಹೇಗೆ ಒತ್ತಿಹೇಳುತ್ತವೆ?
6 ದೇವರು ಅಪೇಕ್ಷಿಸುವ ವಿಷಯಗಳ ನಿಷ್ಕೃಷ್ಟ ಜ್ಞಾನವನ್ನು ನೀಡಿರಿ. ಇದರಲ್ಲಿ ಏನು ಒಳಗೂಡಿದೆ? ಒಂದು ಪತ್ರಿಕೆ ಇಲ್ಲವೆ ಪುಸ್ತಕದಿಂದ ಉತ್ತರವೊಂದನ್ನು ಓದಿಹೇಳಲು ಶಕ್ತರಾಗಿರುವುದಕ್ಕಿಂತಲೂ ಹೆಚ್ಚಿನದ್ದು ಇದರಲ್ಲಿ ಸೇರಿದೆ. ಮುಖ್ಯ ಪದಗಳು ಮತ್ತು ಪ್ರಧಾನ ವಿಚಾರಗಳು ಸ್ಪಷ್ಟವಾಗಿ ಅರ್ಥವಾಗಿವೆಯೊ ಎಂಬುದನ್ನು ಖಚಿತಪಡಿಸಿಕೊಳ್ಳಲು, ಸಾಮಾನ್ಯವಾಗಿ ಅವುಗಳನ್ನು ಚರ್ಚಿಸಬೇಕಾಗುತ್ತದೆ. ಹೊಸ ವ್ಯಕ್ತಿತ್ವವನ್ನು ಧರಿಸಲು, ಜೀವಿತದ ಸಮಸ್ಯೆಗಳನ್ನು ನಿಭಾಯಿಸುವಾಗ ಪ್ರಾಮುಖ್ಯವಾದ ವಿಷಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು, ಮತ್ತು ಹೀಗೆ ದೇವರಿಗೆ ಮೆಚ್ಚಿಗೆಯಾದುದನ್ನು ಮಾಡಲು ನಿಷ್ಕೃಷ್ಟ ಜ್ಞಾನವು ಅತ್ಯಾವಶ್ಯಕವಾಗಿದೆ.—ಫಿಲಿಪ್ಪಿ 1:9-11; ಕೊಲೊಸ್ಸೆ 1:9, 10; 3:10.
7. (ಎ) ಕುಟುಂಬವು ಅಧ್ಯಯನ ವಿಷಯದ ಪ್ರಾಯೋಗಿಕ ಅನ್ವಯವನ್ನು ಮಾಡಿಕೊಳ್ಳುವಂತೆ, ಯಾವ ರೀತಿಯ ಪ್ರಶ್ನೆಗಳ ಬಳಕೆಯು ಸಹಾಯ ಮಾಡಬಹುದು? (ಬಿ) ಇಂತಹ ಒಂದು ಲಕ್ಷ್ಯದ ಮಹತ್ವವನ್ನು ಶಾಸ್ತ್ರಗಳು ಹೇಗೆ ಒತ್ತಿಹೇಳುತ್ತವೆ?
7 ಕಲಿತುಕೊಳ್ಳುವ ವಿಷಯದ ಪ್ರಾಯೋಗಿಕ ಅನ್ವಯವನ್ನು ಮಾಡಿಕೊಳ್ಳುವಂತೆ ಸಹಾಯ ಮಾಡಿರಿ. ಈ ಲಕ್ಷ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾ, ಕುಟುಂಬ ಅಧ್ಯಯನವನ್ನು ನಡೆಸುವಾಗಲೆಲ್ಲ ಹೀಗೆ ಕೇಳಿರಿ: ‘ಈ ವಿಷಯವು ನಮ್ಮ ಜೀವಿತಗಳನ್ನು ಹೇಗೆ ಪ್ರಭಾವಿಸಬೇಕು? ನಾವು ಈಗ ಮಾಡುತ್ತಿರುವ ವಿಷಯಗಳಲ್ಲಿ ಯಾವುದೇ ಬದಲಾವಣೆಯನ್ನು ಇದು ಕೇಳಿಕೊಳ್ಳುತ್ತದೊ? ನಾವು ಹೊಂದಾಣಿಕೆಗಳನ್ನು ಏಕೆ ಮಾಡಬಯಸಬೇಕು?’ (ಜ್ಞಾನೋಕ್ತಿ 2:10-15; 9:10; ಯೆಶಾಯ 48:17, 18) ಕಲಿತ ವಿಷಯಗಳ ಪ್ರಾಯೋಗಿಕ ಅನ್ವಯಕ್ಕೆ ಸಾಕಷ್ಟು ಗಮನವನ್ನು ನೀಡುವುದು, ಕುಟುಂಬ ಸದಸ್ಯರ ಆತ್ಮಿಕ ಬೆಳವಣಿಗೆಯಲ್ಲಿ ಒಂದು ಪ್ರಾಮುಖ್ಯ ಅಂಶವಾಗಿರಬಲ್ಲದು.
ಕಲಿಸುವ ಸಾಧನಗಳನ್ನು ವಿವೇಕಯುತವಾಗಿ ಬಳಸಿರಿ
8. ಬೈಬಲ್ ಅಧ್ಯಯನಕ್ಕಾಗಿ ಯಾವ ಸಾಧನಗಳನ್ನು ಆಳು ವರ್ಗವು ಒದಗಿಸಿದೆ?
8 ಅಧ್ಯಯನಕ್ಕಾಗಿ ಬಳಸಲ್ಪಡಸಾಧ್ಯವಿರುವ ಬೇಕಾದಷ್ಟು ಸಾಧನಗಳನ್ನು ‘ನಂಬಿಗಸ್ತನೂ ವಿವೇಕಿಯೂ ಆದ ಆಳು’ ವರ್ಗವು ಒದಗಿಸಿದೆ. ಬೈಬಲಿನೊಂದಿಗೆ ಉಪಯೋಗಿಸಲ್ಪಡುವ ಕಾವಲಿನಬುರುಜು ಪತ್ರಿಕೆಯು 131 ಭಾಷೆಗಳಲ್ಲಿ ಲಭ್ಯವಿದೆ. ಬೈಬಲ್ ಅಧ್ಯಯನಕ್ಕಾಗಿರುವ ಪುಸ್ತಕಗಳು 153 ಭಾಷೆಗಳಲ್ಲಿ, ಬ್ರೋಷರುಗಳು 284 ಭಾಷೆಗಳಲ್ಲಿ, ಆಡಿಯೊಕ್ಯಾಸೆಟ್ಗಳು 61 ಭಾಷೆಗಳಲ್ಲಿ, ವಿಡಿಯೊಕ್ಯಾಸೆಟ್ಗಳು 41 ಭಾಷೆಗಳಲ್ಲಿ, ಬೈಬಲ್ ಸಂಶೋಧನೆಗಾಗಿ ಕಂಪ್ಯೂಟರ್ ಕಾರ್ಯಕ್ರಮವು 9 ಭಾಷೆಗಳಲ್ಲಿ ಲಭ್ಯವಿದೆ!—ಮತ್ತಾಯ 24:45-47.
9. ಕುಟುಂಬದಲ್ಲಿ ಕಾವಲಿನಬುರುಜು ಅಧ್ಯಯನವನ್ನು ನಡೆಸುತ್ತಿರುವಾಗ, ಈ ಪ್ಯಾರಗ್ರಾಫಿನಲ್ಲಿ ಉಲ್ಲೇಖಿಸಲ್ಪಟ್ಟ ವಚನಗಳಲ್ಲಿರುವ ಸಲಹೆಯನ್ನು ನಾವು ಹೇಗೆ ಅನ್ವಯಿಸಿಕೊಳ್ಳಬಹುದು?
9 ಅನೇಕ ಮನೆವಾರ್ತೆಗಳು ಕುಟುಂಬ ಅಧ್ಯಯನಕ್ಕಾಗಿರುವ ಅವಧಿಯನ್ನು, ಸಭೆಯ ಕಾವಲಿನಬುರುಜು ಅಧ್ಯಯನವನ್ನು ತಯಾರಿಸಲು ಬಳಸುತ್ತವೆ. ಅದು ಎಷ್ಟು ಸಹಾಯಕಾರಿಯಾಗಿರಬಲ್ಲದು! ಲೋಕವ್ಯಾಪಕವಾಗಿರುವ ಯೆಹೋವನ ಜನರ ಭಕ್ತಿವೃದ್ಧಿಮಾಡಲು ಬೇಕಾದ ಪ್ರಧಾನ ಆತ್ಮಿಕ ಆಹಾರವು ಕಾವಲಿನಬುರುಜು ಪತ್ರಿಕೆಯಲ್ಲಿದೆ. ಕಾವಲಿನಬುರುಜು ಪತ್ರಿಕೆಯನ್ನು ಕುಟುಂಬವಾಗಿ ಅಭ್ಯಾಸಿಸುವಾಗ, ಪ್ಯಾರಗ್ರಾಫ್ಗಳನ್ನು ಓದಿ, ಮುದ್ರಿತ ಪ್ರಶ್ನೆಗಳನ್ನು ಉತ್ತರಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಿರಿ. ವಿಷಯವನ್ನು ತಿಳಿದುಕೊಳ್ಳಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಿರಿ. ಅದರಲ್ಲಿ ಉದ್ಧರಿಸಲ್ಪಡದ, ಆದರೆ ಉಲ್ಲೇಖಿಸಲ್ಪಟ್ಟ ವಚನಗಳನ್ನು ತೆರೆದುನೋಡಲು ಸಮಯವನ್ನು ತೆಗೆದುಕೊಳ್ಳಿರಿ. ಈ ವಚನಗಳು ಪರಿಗಣಿಸಲ್ಪಡುತ್ತಿರುವ ಪ್ಯಾರಗ್ರಾಫಿಗೆ ಹೇಗೆ ಸಂಬಂಧಿಸಿವೆ ಎಂಬುದನ್ನು ಕುಟುಂಬ ಸದಸ್ಯರು ಹೇಳುವಂತೆ ಕೇಳಿಕೊಳ್ಳಿರಿ. ಪೂರ್ಣಹೃದಯದಿಂದ ಅಧ್ಯಯನದಲ್ಲಿ ಪಾಲ್ಗೊಳ್ಳಿರಿ.—ಜ್ಞಾನೋಕ್ತಿ 4:7, 23; ಅ. ಕೃತ್ಯಗಳು 17:11.
10. ಮಕ್ಕಳನ್ನು ಅಧ್ಯಯನದಲ್ಲಿ ಒಳಗೂಡಿಸಲು ಮತ್ತು ಅದನ್ನೊಂದು ಆನಂದಮಯ ಸಮಯವನ್ನಾಗಿಸಲು ಏನು ಮಾಡಸಾಧ್ಯವಿದೆ?
10 ನಿಮ್ಮ ಮನೆವಾರ್ತೆಯಲ್ಲಿ ಮಕ್ಕಳಿರುವುದಾದರೆ, ಅಧ್ಯಯನವನ್ನು ಕೇವಲ ಒಂದು ಕುಟುಂಬ ದಿನಚರಿಯಾಗಿ ಮಾಡದೆ, ಅದನ್ನು ಭಕ್ತಿವೃದ್ಧಿಮಾಡುವ, ಆಸಕ್ತಿಕರವಾದ, ಹಾಗೂ ಸಂತೋಷದ ಸಮಯವನ್ನಾಗಿ ಮಾಡಲು ನೀವು ಏನು ಮಾಡಬಲ್ಲಿರಿ? ಎಲ್ಲರನ್ನೂ ಸೂಕ್ತವಾದ ವಿಧದಲ್ಲಿ ಒಳಗೂಡಿಸಲು ಪ್ರಯತ್ನಿಸಿರಿ, ಹೀಗೆ ಅಧ್ಯಯನದ ವಿಷಯದ ಮೇಲೆಯೇ ಗಮನವು ಕೇಂದ್ರೀಕೃತವಾಗಿರುತ್ತದೆ. ಸಾಧ್ಯವಿರುವಲ್ಲಿ, ಪ್ರತಿಯೊಂದು ಮಗುವು ತನ್ನ ಸ್ವಂತ ಬೈಬಲ್ ಹಾಗೂ ಅಧ್ಯಯನ ಪತ್ರಿಕೆಯನ್ನು ಹೊಂದಿರಲಿ. ಯೇಸು ಪ್ರದರ್ಶಿಸಿದ ಮಮತೆಯನ್ನು ಅನುಕರಿಸುತ್ತಾ, ಹೆತ್ತವರು ಮಗುವನ್ನು ತಮ್ಮ ಹತ್ತಿರ ಕೂರಿಸಿಕೊಂಡು ಅದನ್ನು ತಮ್ಮ ಕೈಗಳಿಂದ ಬಳಸಿ ಹಿಡಿದುಕೊಳ್ಳಬಹುದು. (ಹೋಲಿಸಿ ಮಾರ್ಕ 10:13-16.) ಅಧ್ಯಯನದ ವಿಷಯದೊಂದಿಗೆ ಮೂಡಿಬರುವ ಒಂದು ಚಿತ್ರವನ್ನು ಯುವಕನೊಬ್ಬನು ವಿವರಿಸುವಂತೆ ಕುಟುಂಬದ ತಲೆಯು ನೇಮಿಸಬಹುದು. ಮಗುವು ಒಂದು ನಿರ್ದಿಷ್ಟ ವಚನವನ್ನು ಓದುವಂತೆ ಮುಂಚಿತವಾಗಿಯೇ ನೇಮಿಸಬಹುದು. ಅಧ್ಯಯನ ವಿಷಯವನ್ನು ಪ್ರಾಯೋಗಿಕವಾಗಿ ಅನ್ವಯಿಸುವ ಸಂದರ್ಭಗಳನ್ನು ಹಿರಿಯ ಮಕ್ಕಳು ಹೇಳುವಂತೆ ನೇಮಿಸಬಹುದು.
11. ಬೇರೆ ಯಾವ ಕಲಿಸುವ ಸಾಧನಗಳು ಒದಗಿಸಲ್ಪಟ್ಟಿವೆ, ಮತ್ತು ಇವು ಎಲ್ಲಿ ದೊರಕುತ್ತವೆ, ಮತ್ತು ಇವುಗಳನ್ನು ಕುಟುಂಬ ಅಧ್ಯಯನದ ಸಂಬಂಧದಲ್ಲಿ ಹೇಗೆ ಪ್ರಯೋಜನಕರವಾಗಿ ಉಪಯೋಗಿಸಸಾಧ್ಯವಿದೆ?
11 ನಿಮ್ಮ ಚರ್ಚೆಗಾಗಿ ನೀವು ಕಾವಲಿನಬುರುಜು ಪತ್ರಿಕೆಯನ್ನು ಆಧಾರವಾಗಿ ಉಪಯೋಗಿಸುತ್ತಿದ್ದರೂ, ಅನೇಕ ಭಾಷೆಗಳಲ್ಲಿ ಲಭ್ಯವಿರುವ ಇತರ ಅಧ್ಯಯನದ ಸಾಧನಗಳನ್ನು ಮರೆಯಬೇಡಿ. ಒಂದು ಬೈಬಲ್ ಅಭಿವ್ಯಕ್ತಿಯ ಹಿನ್ನೆಲೆ ಇಲ್ಲವೆ ವಿವರಣೆಯು ಬೇಕಾಗಿದ್ದಲ್ಲಿ, ಶಾಸ್ತ್ರಗಳ ಒಳನೋಟ (ಇಂಗ್ಲಿಷ್) ಪುಸ್ತಕವು ಅದನ್ನು ಒದಗಿಸಬಹುದು. ಇತರ ಪ್ರಶ್ನೆಗಳು, ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ ಅನ್ನು ನೋಡುವ ಮೂಲಕ, ಅಥವಾ ಸೊಸೈಟಿಯು ಒದಗಿಸಿರುವ ಕಂಪ್ಯೂಟರ್ ರೀಸರ್ಚ್ (ಸಂಶೋಧನ) ಕಾರ್ಯಕ್ರಮವನ್ನು ಉಪಯೋಗಿಸುವ ಮೂಲಕ ಉತ್ತರಿಸಲ್ಪಡಬಹುದು. ಈ ಸಾಧನಗಳು ನಿಮ್ಮ ಭಾಷೆಯಲ್ಲಿ ಲಭ್ಯವಿರುವಲ್ಲಿ, ಅವುಗಳನ್ನು ಬಳಸುವ ವಿಧವನ್ನು ನೀವು ಕಲಿತುಕೊಳ್ಳುವುದಾದರೆ, ಅವು ಕೂಡ ಕುಟುಂಬ ಅಧ್ಯಯನದ ಒಂದು ಅಮೂಲ್ಯವಾದ ಭಾಗವಾಗಿ ಪರಿಣಮಿಸಬಲ್ಲವು. ಎಳೆಯರ ಆಸಕ್ತಿಯನ್ನು ಕೆರಳಿಸುವ ಉದ್ದೇಶದಿಂದ, ಸೊಸೈಟಿಯ ಬೋಧಪ್ರದ ವಿಡಿಯೊಗಳಲ್ಲಿ ಒಂದನ್ನು ನೋಡಿ, ಇಲ್ಲವೆ ಆಡಿಯೊಕ್ಯಾಸೆಟ್ಟಿನಲ್ಲಿ ಡ್ರಾಮದ ಒಂದು ಭಾಗವನ್ನು ಕೇಳಿ, ತದನಂತರ ಅದನ್ನು ಚರ್ಚಿಸಲು, ನೀವು ಅಧ್ಯಯನ ಸಮಯದಲ್ಲಿ ಒಂದಿಷ್ಟು ಸಮಯವನ್ನೂ ಬದಿಗಿರಿಸಬಹುದು. ಈ ಅಧ್ಯಯನ ಸಾಧನಗಳ ಒಳ್ಳೆಯ ಬಳಕೆಯು, ನಿಮ್ಮ ಕುಟುಂಬ ಅಧ್ಯಯನವನ್ನು ಆಸಕ್ತಿಕರವಾಗಿ ಮಾಡಲು ಮತ್ತು ಇಡೀ ಕುಟುಂಬಕ್ಕೆ ಪ್ರಯೋಜನಕರವಾಗಿರಲು ಸಹಾಯ ಮಾಡಬಲ್ಲದು.
ನಿಮ್ಮ ಕುಟುಂಬದ ಅಗತ್ಯಗಳಿಗೆ ಸರಿಹೊಂದಿಸಿಕೊಳ್ಳಿರಿ
12. ಕುಟುಂಬದ ತುರ್ತಿನ ಅಗತ್ಯಗಳನ್ನು ನಿಭಾಯಿಸುವುದರಲ್ಲಿ, ಕುಟುಂಬ ಅಧ್ಯಯನವು ಹೇಗೆ ಒಂದು ಪಾತ್ರವನ್ನು ವಹಿಸಸಾಧ್ಯವಿದೆ?
12 ನಿಮ್ಮ ಕುಟುಂಬವು ವಾರದ ಕಾವಲಿನಬುರುಜು ಪಾಠವನ್ನು ಸಾಮಾನ್ಯವಾಗಿ ಅಭ್ಯಾಸಿಸಬಹುದು. ಆದರೆ, ಕುಟುಂಬದ ಸಮಸ್ಯೆಗಳು ಹಾಗೂ ಅಭಿಪ್ರಾಯಗಳ ಅರಿವೂ ನಿಮಗಿರಲಿ. ತಾಯಿಗೆ ಐಹಿಕ ಕೆಲಸಮಾಡುವ ಅಗತ್ಯವಿರದಿದ್ದಾಗ, ಮಕ್ಕಳು ಶಾಲೆಯಿಂದ ಹಿಂದಿರುಗುವಾಗ, ಪ್ರತಿ ದಿನ ಅವರೊಂದಿಗೆ ಸಮಯ ಕಳೆಯಲು ಅವಳು ಶಕ್ತಳಾಗಿರಬಹುದು. ಕೆಲವು ಸನ್ನಿವೇಶಗಳನ್ನು ಆಗಲೇ ನಿರ್ವಹಿಸಿರಬಹುದಾದರೂ, ಬೇರೆಯವುಗಳಿಗೆ ಹೆಚ್ಚಿನ ಗಮನದ ಅಗತ್ಯವಿರಬಹುದು. ಬಹಳ ತುರ್ತಿನ ಕುಟುಂಬ ಅಗತ್ಯಗಳಿರುವಾಗ, ಅವುಗಳನ್ನು ಕಡೆಗಣಿಸಬೇಡಿರಿ. (ಜ್ಞಾನೋಕ್ತಿ 27:12) ಇದು ಶಾಲೆಯಲ್ಲಿನ ಸಮಸ್ಯೆಗಳನ್ನು ಮಾತ್ರವಲ್ಲ, ಇತರ ಸನ್ನಿವೇಶಗಳನ್ನು ಒಳಗೊಳ್ಳಬಹುದು. ಸೂಕ್ತವಾದ ವಿಷಯವನ್ನು ಆಯ್ದು ತೆಗೆದು, ಅಭ್ಯಾಸಿಸಲ್ಪಡುವ ವಿಷಯದ ಕುರಿತು ಮುಂಚಿತವಾಗಿಯೇ ಕುಟುಂಬಕ್ಕೆ ತಿಳಿಸಿರಿ.
13. ಬಡತನವನ್ನು ಹೇಗೆ ನಿಭಾಯಿಸುವುದು ಎಂಬ ವಿಷಯದ ಕುರಿತಾದ ಕುಟುಂಬ ಚರ್ಚೆಯು ಏಕೆ ಪ್ರಯೋಜನಕರವಾಗಿರಬಹುದು?
13 ಉದಾಹರಣೆಗೆ, ಭೂಮಿಯ ಅಧಿಕಾಂಶ ಜನರು ಬಡತನದ ಹಿಡಿತದಲ್ಲಿದ್ದಾರೆ, ಆದುದರಿಂದ ಅದನ್ನು ನಿಭಾಯಿಸುವ ವಿಧವನ್ನು ಚರ್ಚಿಸುವುದು ಅಗತ್ಯವಾಗಿರಬಹುದು. ನಿಜ ಜೀವನದ ಸನ್ನಿವೇಶಗಳು ಮತ್ತು ಬೈಬಲ್ ತತ್ವಗಳ ಕುರಿತಾದ ಕುಟುಂಬ ಅಧ್ಯಯನವು ನಿಮ್ಮ ಮನೆವಾರ್ತೆಗೆ ಪ್ರಯೋಜನಕರವಾಗಿರುವುದೋ?—ಜ್ಞಾನೋಕ್ತಿ 21:5; ಪ್ರಸಂಗಿ 9:11; ಇಬ್ರಿಯ 13:5, 6, 18.
14. ಹಿಂಸಾಚಾರ, ಯುದ್ಧ, ಮತ್ತು ಕ್ರೈಸ್ತ ತಾಟಸ್ಥ್ಯದ ಕುರಿತಾದ ಯೆಹೋವನ ನೋಟವನ್ನು, ಯಾವ ಸನ್ನಿವೇಶಗಳು ಸಮಯೋಚಿತ ಕುಟುಂಬ ಚರ್ಚೆಯಾಗಿ ಮಾಡಬಹುದು?
14 ಚರ್ಚಿಸಬೇಕಾದ ಮತ್ತೊಂದು ಸಂಗತಿಯು ಹಿಂಸಾಚಾರದ ವಿಷಯವಾಗಿದೆ. ಯೆಹೋವನ ದೃಷ್ಟಿಕೋನವನ್ನು ನಮ್ಮ ಹೃದಮನಗಳ ಮೇಲೆ ಬಲವಾಗಿ ಅಚ್ಚೊತ್ತುವ ಅಗತ್ಯ ನಮಗೆಲ್ಲರಿಗೂ ಇದೆ. (ಆದಿಕಾಂಡ 6:13; ಕೀರ್ತನೆ 11:5) ಈ ವಿಷಯದ ಕುರಿತಾದ ಕುಟುಂಬ ಅಧ್ಯಯನವು, ಶಾಲೆಯಲ್ಲಿರುವ ಪೀಡಕರನ್ನು ಹೇಗೆ ನಿಭಾಯಿಸುವುದು ಎಂಬುದನ್ನು, ಯುದ್ಧೋಚಿತ ಕಲೆಗಳಲ್ಲಿ ತರಬೇತಿ ಪಡೆಯಬೇಕೊ ಬೇಡವೊ ಎಂಬುದನ್ನು, ಮತ್ತು ಯೋಗ್ಯವಾದ ಮನೋರಂಜನೆಯನ್ನು ಆರಿಸಿಕೊಳ್ಳುವುದು ಹೇಗೆಂಬುದನ್ನು ಚರ್ಚಿಸುವುದಕ್ಕಾಗಿ ಒಂದು ಅವಕಾಶವನ್ನು ಒದಗಿಸಬಲ್ಲದು. ಹಿಂಸಾತ್ಮಕ ಕ್ಷೋಭೆಗಳು ಸಾಮಾನ್ಯವಾಗಿವೆ. ಪ್ರತಿಯೊಂದು ದೇಶವು ಆಂತರಿಕ ಯುದ್ಧದಿಂದಾಗಲಿ, ರಾಜಕೀಯ ಇಲ್ಲವೆ ಕುಲಸಂಬಂಧಿತ ಕಲಹದಿಂದಾಗಲಿ, ಗ್ಯಾಂಗ್ ಹೋರಾಟಗಳಿಂದಾಗಲಿ ಪೀಡಿತವಾಗಿದೆ. ಫಲಸ್ವರೂಪವಾಗಿ, ಯುದ್ಧಮಾಡುವ ಪಕ್ಷಗಳಿಂದ ಸುತ್ತುವರಿಯಲ್ಪಟ್ಟಾಗ, ಕ್ರೈಸ್ತ ನಡತೆಯನ್ನು ಕಾಪಾಡಿಕೊಳ್ಳುವುದರ ಕುರಿತಾದ ಚರ್ಚೆಯ ಅಗತ್ಯ ನಿಮ್ಮ ಕುಟುಂಬಕ್ಕಿರಬಹುದು.—ಯೆಶಾಯ 2:2-4; ಯೋಹಾನ 17:16.
15. ಲೈಂಗಿಕತೆ ಮತ್ತು ವಿವಾಹದ ಕುರಿತಾದ ಉಪದೇಶವು ಮಕ್ಕಳಿಗೆ ಹೇಗೆ ನೀಡಲ್ಪಡಬೇಕು?
15 ಮಕ್ಕಳು ಬೆಳೆದಂತೆ, ಅವರ ವಯಸ್ಸಿಗೆ ಅನುಗುಣವಾಗಿ ಲೈಂಗಿಕತೆ ಮತ್ತು ವಿವಾಹದ ಕುರಿತಾದ ಉಪದೇಶವು ಅವರಿಗೆ ಅಗತ್ಯವಾಗಿದೆ. ಕೆಲವು ಸಂಸ್ಕೃತಿಗಳಲ್ಲಿ, ಹೆಚ್ಚಿನ ಹೆತ್ತವರು ತಮ್ಮ ಮಕ್ಕಳೊಂದಿಗೆ ಲೈಂಗಿಕತೆಯ ಕುರಿತು ಚರ್ಚಿಸುವುದೇ ಇಲ್ಲ. ಏನೂ ಅರಿಯದ ಮಕ್ಕಳು ಇತರ ಯುವಕರಿಂದ ವಿಕೃತವಾದ ವಿಚಾರಗಳನ್ನು ಕೇಳಿಸಿಕೊಂಡಾಗ, ಪರಿಣಾಮಗಳು ವಿಪತ್ಕಾರಕವಾಗಿರಬಲ್ಲವು. ಬೈಬಲಿನಲ್ಲಿ ಈ ವಿಷಯದ ಕುರಿತು ನೇರವಾದ ಹಾಗೂ ಹಿತಕರವಾದ ಸಲಹೆಯನ್ನು ನೀಡುವ ಯೆಹೋವನನ್ನು ಅನುಕರಿಸುವುದು ಉತ್ತಮವಾಗಿರಲಾರದೋ? ನಮ್ಮ ಮಕ್ಕಳು ಸ್ವಗೌರವವನ್ನು ಕಾಪಾಡಿಕೊಳ್ಳುವಂತೆ ಮತ್ತು ವಿರುದ್ಧ ಲಿಂಗದವರನ್ನು ಮರ್ಯಾದೆಯಿಂದ ಕಾಣುವಂತೆ ದೈವಿಕ ಸಲಹೆಯು ಸಹಾಯ ಮಾಡುವುದು. (ಜ್ಞಾನೋಕ್ತಿ 5:18-20; ಕೊಲೊಸ್ಸೆ 3:5; 1 ಥೆಸಲೊನೀಕ 4:3-8) ಈ ವಿಷಯಗಳನ್ನು ನೀವು ಈಗಾಗಲೇ ಚರ್ಚಿಸಿದ್ದರೂ, ಅದನ್ನು ಮತ್ತೊಮ್ಮೆ ಚರ್ಚಿಸಲು ಹಿಂಜರಿಯಬೇಡಿ. ಹೊಸ ಸನ್ನಿವೇಶಗಳು ಏಳುವಾಗ, ಪುನರಾವರ್ತನೆಯು ಅತ್ಯಾವಶ್ಯಕವಾಗಿದೆ.
16. (ಎ) ವಿವಿಧ ಮನೆವಾರ್ತೆಗಳಲ್ಲಿ, ಕುಟುಂಬ ಅಧ್ಯಯನವು ಯಾವಾಗ ನಡೆಸಲ್ಪಡುತ್ತದೆ? (ಬಿ) ಕ್ರಮವಾದ ಕುಟುಂಬ ಅಧ್ಯಯನವನ್ನು ನಡೆಸಲಿಕ್ಕಾಗಿ ಯಾವ ಅಡೆತಡೆಗಳನ್ನು ನೀವು ಎದುರಿಸಿದ್ದೀರಿ?
16 ಕುಟುಂಬ ಅಧ್ಯಯನವನ್ನು ಯಾವಾಗ ಮಾಡಸಾಧ್ಯವಿದೆ? ಲೋಕದ ಸುತ್ತಲೂ ಇರುವ ಬೆತೆಲ್ ಕುಟುಂಬಗಳನ್ನು ಅನುಕರಿಸುತ್ತಾ, ಅನೇಕ ಮನೆವಾರ್ತೆಗಳು ತಮ್ಮ ಕುಟುಂಬ ಅಧ್ಯಯನವನ್ನು ಸೋಮವಾರದಂದು ಸಂಜೆಯ ವೇಳೆಯಲ್ಲಿ ನಡೆಸುತ್ತವೆ. ಇತರರಿಗೆ ಅದು ಭಿನ್ನವಾಗಿದೆ. ಅರ್ಜೆಂಟೀನದಲ್ಲಿರುವ 9 ಮಕ್ಕಳುಳ್ಳ 11 ಜನರ ಒಂದು ಕುಟುಂಬವು, ತಮ್ಮ ಕುಟುಂಬ ಅಧ್ಯಯನವನ್ನು ನಡೆಸಲು ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಕ್ರಮವಾಗಿ ಎದ್ದಿತು. ಕೆಲಸದ ವೈವಿಧ್ಯಮಯ ವೇಳಾಪಟ್ಟಿಯ ಕಾರಣ, ಬೇರೆ ಯಾವ ಸಮಯವೂ ಅನುಕೂಲಕರವಾಗಿರಲಿಲ್ಲ. ಇದು ಸುಲಭವಾಗಿರದಿದ್ದರೂ, ಮಕ್ಕಳ ಹೃದಮನಗಳ ಮೇಲೆ ಕುಟುಂಬ ಅಧ್ಯಯನದ ಮಹತ್ವವನ್ನು ಇದು ಅಚ್ಚೊತ್ತಿತು. ಫಿಲಿಪ್ಪೀನ್ಸ್ನಲ್ಲಿರುವ ಒಬ್ಬ ಹಿರಿಯನು, ತನ್ನ ಹೆಂಡತಿ ಹಾಗೂ ಬೆಳೆಯುತ್ತಿದ್ದ ಮೂವರು ಮಕ್ಕಳೊಂದಿಗೆ ಕ್ರಮವಾದ ಕುಟುಂಬ ಅಧ್ಯಯನವನ್ನು ನಡೆಸಿದನು. ವಾರದ ಬೇರೆ ಸಮಯಗಳಲ್ಲಿ, ಹೆತ್ತವರು ಪ್ರತಿಯೊಂದು ಮಗುವಿನೊಂದಿಗೆ ವೈಯಕ್ತಿಕ ಅಧ್ಯಯನವನ್ನು ನಡೆಸಿದರು, ಇದರಿಂದ ಮಕ್ಕಳಲ್ಲಿ ಪ್ರತಿಯೊಬ್ಬರೂ ಸತ್ಯವನ್ನು ತಮ್ಮದಾಗಿ ಮಾಡಿಕೊಳ್ಳಲು ಸಾಧ್ಯವಾಯಿತು. ಅಮೆರಿಕದಲ್ಲಿ, ಯಾರ ಗಂಡನು ಸಾಕ್ಷಿಯಾಗಿಲ್ಲವೊ ಆ ಸಹೋದರಿಯು, ತನ್ನ ಮಕ್ಕಳೊಂದಿಗೆ ಪ್ರತಿದಿನ ಬೆಳಗ್ಗೆ ಶಾಲೆಯ ಬಸ್ಸಿಗಾಗಿ ನಡೆಯುತ್ತಾಳೆ. ಬಸ್ಸಿಗಾಗಿ ಕಾಯುತ್ತಿರುವಾಗ, ಸೂಕ್ತವಾದ ಶಾಸ್ತ್ರೀಯ ಅಧ್ಯಯನ ವಿಷಯವನ್ನು ಅವರು ಹತ್ತು ನಿಮಿಷಗಳ ವರೆಗೆ ಒಟ್ಟಿಗೆ ಓದುತ್ತಾರೆ ಮತ್ತು ಚರ್ಚಿಸುತ್ತಾರೆ. ತದನಂತರ, ಮಕ್ಕಳು ಬಸ್ಸನ್ನೇರುವ ಮುಂಚೆ ತಾಯಿಯು ಅವರೊಂದಿಗೆ ಚಿಕ್ಕದಾದ ಪ್ರಾರ್ಥನೆಯನ್ನು ಮಾಡುತ್ತಾಳೆ. ಡೆಮೋಕ್ರ್ಯಾಟಿಕ್ ರಿಪಬ್ಲಿಕ್ ಆಫ್ ಕಾಂಗೊವಿನಲ್ಲಿರುವ ಒಬ್ಬ ಸ್ತ್ರೀಯ ಅವಿಶ್ವಾಸಿ ಗಂಡನು ಕುಟುಂಬವನ್ನು ತೊರೆದುಬಿಟ್ಟಿದ್ದಾನೆ. ಆಕೆ ತನ್ನ ಸೀಮಿತ ಶಿಕ್ಷಣದ ಕಾರಣ ಅಧ್ಯಯನಕ್ಕಾಗಿ ಬಹಳಷ್ಟು ಪ್ರಯಾಸಪಡಬೇಕಾಗಿದೆ. ಆಕೆಯ ಹಿರಿಯ ಮಗನು ಪ್ರತಿ ವಾರ ಕುಟುಂಬವನ್ನು ಸಂದರ್ಶಿಸಿ, ತನ್ನ ತಾಯಿ ಹಾಗೂ ತಮ್ಮಂದಿರಿಗೆ ಅಧ್ಯಯನವನ್ನು ನಡೆಸುವುದರಲ್ಲಿ ನಾಯಕತ್ವ ವಹಿಸುತ್ತಾನೆ. ತನ್ನ ಶ್ರದ್ಧಾಪೂರ್ವಕ ತಯಾರಿಯ ಮೂಲಕ ತಾಯಿಯು ಉತ್ತಮವಾದ ಮಾದರಿಯನ್ನಿಡುತ್ತಾಳೆ. ನಿಮ್ಮ ಮನೆವಾರ್ತೆಯಲ್ಲಿ ಕ್ರಮವಾದ ಕುಟುಂಬ ಅಧ್ಯಯನವನ್ನು ಕಷ್ಟಕರವಾಗಿ ಮಾಡುವಂತಹ ಯಾವ ಸನ್ನಿವೇಶವಾದರೂ ಇದೆಯೋ? ಹತಾಶರಾಗುತ್ತಾ, ಬಿಟ್ಟುಕೊಡಬೇಡಿ. ಕ್ರಮವಾದ ಕುಟುಂಬ ಅಧ್ಯಯನವನ್ನು ನಡೆಸಲು ನೀವು ಮಾಡುವ ಎಲ್ಲ ಪ್ರಯತ್ನಗಳ ಮೇಲೆ ಯೆಹೋವನ ಆಶೀರ್ವಾದಗಳನ್ನು ಶ್ರದ್ಧಾಪೂರ್ವಕವಾಗಿ ಕೋರಿರಿ.—ಮಾರ್ಕ 11:23, 24.
ಪಟ್ಟುಹಿಡಿಯುವಿಕೆಯ ಪ್ರತಿಫಲಗಳು
17. (ಎ) ಕ್ರಮವಾದ ಕುಟುಂಬ ಅಧ್ಯಯನವನ್ನು ನಡೆಸಲು ಯಾವುದರ ಅಗತ್ಯವಿದೆ? (ಬಿ) ಯೆಹೋವನ ಮಾರ್ಗಗಳ ಕುರಿತಾದ ಕ್ರಮವಾದ ಕುಟುಂಬ ಉಪದೇಶದ ಮಹತ್ವವನ್ನು ಯಾವ ಅನುಭವವು ದೃಷ್ಟಾಂತಿಸುತ್ತದೆ?
17 ಇದಕ್ಕೆ ಯೋಜನೆ ಮಾಡುವುದು ಮತ್ತು ಪಟ್ಟುಹಿಡಿಯುವಿಕೆಯು ಅಗತ್ಯವಾಗಿದೆ. ಆದರೆ, ಕ್ರಮವಾದ ಕುಟುಂಬ ಅಧ್ಯಯನದಿಂದ ಬರುವ ಪ್ರಯೋಜನಗಳು ಸಾರ್ಥಕವಾಗಿವೆ. (ಜ್ಞಾನೋಕ್ತಿ 22:6; 3 ಯೋಹಾನ 4) ಜರ್ಮನಿಯಲ್ಲಿರುವ ಫ್ರಾನ್ಸ್ ಮತ್ತು ಹಿಲ್ಡಾ, 11 ಮಕ್ಕಳುಳ್ಳ ಕುಟುಂಬವನ್ನು ಬೆಳೆಸಿದರು. ಅನೇಕ ವರ್ಷಗಳ ತರುವಾಯ ಅವರ ಮಗಳಾದ ಮ್ಯಾಗ್ಡಲೇನಾ ಹೇಳಿದ್ದು: “ಯಾವ ರೀತಿಯಲ್ಲಾದರೂ ಒಂದಿಷ್ಟು ಆತ್ಮಿಕ ಉಪದೇಶವನ್ನು ನಾವು ಪಡೆದುಕೊಳ್ಳದ ದಿನವೇ ಇರಲಿಲ್ಲ ಎಂಬ ವಿಷಯವನ್ನೇ ನಾನು ಇಂದು ಅತ್ಯಂತ ಮಹತ್ವದ ಸಂಗತಿಯಾಗಿ ಪರಿಗಣಿಸುತ್ತೇನೆ.” ಅಡಾಲ್ಫ್ ಹಿಟ್ಲರನ ಆಳ್ವಿಕೆಯ ಕೆಳಗೆ, ರಾಷ್ಟ್ರೀಯತೆಯ ಆತ್ಮವು ತೀವ್ರಗೊಂಡಾಗ, ಬರಲಿರುವ ಪರೀಕ್ಷೆಗಳಿಗಾಗಿ ತನ್ನ ಕುಟಂಬವನ್ನು ತಯಾರಿಸಲು ಮ್ಯಾಗ್ಡಲೇನಾಳ ತಂದೆ ಬೈಬಲನ್ನು ಉಪಯೋಗಿಸಿದರು. ಸಕಾಲದಲ್ಲಿ, ಕುಟುಂಬದ ಸದಸ್ಯರಲ್ಲಿ ಎಳೆಯರನ್ನು ಮನೆಯಿಂದ ಕೊಂಡೊಯ್ದು, ಒಂದು ಸುಧಾರಣೆ ಶಾಲೆಯಲ್ಲಿ ಸೇರಿಸಲಾಯಿತು. ಕುಟುಂಬದ ಇತರ ಸದಸ್ಯರು ದಸ್ತಗಿರಿ ಮಾಡಲ್ಪಟ್ಟು, ಸೆರೆಮನೆಗಳಲ್ಲಿ ಮತ್ತು ಕೂಟ ಶಿಬಿರಗಳಲ್ಲಿ ಹಾಕಲ್ಪಟ್ಟರು. ಕೆಲವರು ವಧಿಸಲ್ಪಟ್ಟರು. ಅವರೆಲ್ಲರ ನಂಬಿಕೆಯು, ಆ ಉಗ್ರವಾದ ಹಿಂಸೆಯ ಸಮಯದಲ್ಲಿ ಮಾತ್ರವಲ್ಲ, ಯಾರು ಬದುಕಿ ಉಳಿದರೋ ಅವರಿಗೆ ತದನಂತರದ ವರ್ಷಗಳಲ್ಲೂ ದೃಢವಾಗಿತ್ತು.
18. ಒಂಟಿ ಹೆತ್ತವರ ಪ್ರಯತ್ನಗಳು ಹೇಗೆ ಬಹುಮಾನಿಸಲ್ಪಟ್ಟಿವೆ?
18 ಅನೇಕ ಒಂಟಿ ಹೆತ್ತವರು ಮತ್ತು ಒಂದೇ ನಂಬಿಕೆಯನ್ನು ಅನುಸರಿಸದ ಸಂಗಾತಿಗಳುಳ್ಳವರು ಸಹ, ತಮ್ಮ ಮಕ್ಕಳಿಗೆ ಕ್ರಮವಾದ ಬೈಬಲ್ ಉಪದೇಶವನ್ನು ನೀಡಿದ್ದಾರೆ. ಭಾರತದಲ್ಲಿ ವಿಧವೆಯಾಗಿರುವ ಒಬ್ಬ ಒಂಟಿ ತಾಯಿಯು, ತನ್ನ ಇಬ್ಬರು ಮಕ್ಕಳಲ್ಲಿ ಯೆಹೋವನಿಗಾಗಿ ಪ್ರೀತಿಯನ್ನು ಬೆಳೆಸಲು ಕಷ್ಟಪಟ್ಟು ದುಡಿದಳು. ಆದರೆ, ಅವಳ ಮಗನು ಯೆಹೋವನ ಜನರೊಂದಿಗೆ ಸಹವಾಸಿಸುವುದನ್ನು ಬಿಟ್ಟುಬಿಟ್ಟಾಗ, ಅವಳು ಎದೆಗುಂದಿಹೋದಳು. ತನ್ನ ಮಗನ ತರಬೇತಿಯಲ್ಲಿ ತಾನು ಮಾಡಿರುವ ಯಾವುದೇ ಕುಂದುಕೊರತೆಗಳನ್ನು ಯೆಹೋವನು ಕ್ಷಮಿಸಬೇಕೆಂದು ಅವಳು ಬೇಡಿಕೊಂಡಳು. ಆದರೆ ತಾನು ಕಲಿತಿದ್ದ ವಿಷಯಗಳನ್ನು ಮಗನು ಮರೆತಿರಲಿಲ್ಲ. ಒಂದು ದಶಕದ ನಂತರ ಅವನು ಹಿಂದಿರುಗಿ, ಒಳ್ಳೆಯ ಆತ್ಮಿಕ ಪ್ರಗತಿಯನ್ನು ಮಾಡಿ, ಸಭಾ ಹಿರಿಯನಾದನು. ಈಗ ಅವನೂ ಅವನ ಪತ್ನಿಯೂ ಪೂರ್ಣ ಸಮಯದ ಶುಶ್ರೂಷಕರಾಗಿ ಸೇವೆ ಸಲ್ಲಿಸುತ್ತಾರೆ. ಕುಟುಂಬ ವೃತ್ತದೊಳಗೆ ಕ್ರಮವಾದ ಬೈಬಲ್ ಉಪದೇಶವನ್ನು ನೀಡಬೇಕೆಂದು ಯೆಹೋವನಿಂದ ಮತ್ತು ಆತನ ಸಂಸ್ಥೆಯಿಂದ ಬರುವ ಸಲಹೆಯನ್ನು ಪಾಲಿಸಿದ ಹೆತ್ತವರು ಎಷ್ಟು ಆಭಾರಿಗಳಾಗಿದ್ದಾರೆ! ನಿಮ್ಮ ಮನೆವಾರ್ತೆಯಲ್ಲಿ ನೀವೂ ಆ ಸಲಹೆಯನ್ನು ಅನ್ವಯಿಸುತ್ತಿದ್ದೀರೋ?
ನೀವು ವಿವರಿಸಬಲ್ಲಿರೊ?
◻ ಕ್ರಮವಾದ ಕುಟುಂಬ ಅಧ್ಯಯನವು ಏಕೆ ಪ್ರಾಮುಖ್ಯವಾಗಿದೆ?
◻ ಪ್ರತಿಯೊಂದು ಕುಟುಂಬ ಅಧ್ಯಯನದಲ್ಲಿ ನಮ್ಮ ಲಕ್ಷ್ಯಗಳು ಏನಾಗಿರಬೇಕು?
◻ ಕಲಿಸಲಿಕ್ಕಾಗಿ ಯಾವ ಸಾಧನಗಳು ನಮಗೆ ಲಭ್ಯಗೊಳಿಸಲ್ಪಟ್ಟಿವೆ?
◻ ಅಧ್ಯಯನವನ್ನು ಕುಟುಂಬದ ಅಗತ್ಯಗಳಿಗೆ ಹೇಗೆ ಹೊಂದಿಸಸಾಧ್ಯವಿದೆ?
[ಪುಟ 15 ರಲ್ಲಿರುವ ಚಿತ್ರ]
ನಿಶ್ಚಿತ ಲಕ್ಷ್ಯಗಳು ನಿಮ್ಮ ಕುಟುಂಬ ಅಧ್ಯಯನದ ಗುಣಮಟ್ಟವನ್ನು ಹೆಚ್ಚಿಸುವವು