ಕುಟುಂಬ ಕಾಲತಖ್ತೆ—ಕುಟುಂಬ ಅಧ್ಯಯನ
1 ಕ್ರೈಸ್ತ ಹೆತ್ತವರಾದ ನೀವು ನಿಮ್ಮ ಮಕ್ಕಳಿಗೆ ಕೊಡಬಲ್ಲ ಅತಿ ಬೆಲೆಬಾಳುವ ಉಡುಗೊರೆಯು ಯೆಹೋವನ ಕಡೆಗಿನ ನಿಮ್ಮ ಪ್ರೀತಿಯೇ ಆಗಿದೆ. ಇದನ್ನು ಮಾಡಬಹುದಾದ ಅತ್ಯುತ್ತಮ ಸಮಯವು, ವಾರದ ಕುಟುಂಬ ಬೈಬಲ್ ಅಧ್ಯಯನಕ್ಕಾಗಿ ‘ಮನೆಯಲ್ಲಿ ಕೂತಿರುವಾಗಲೇ’ ಆಗಿದೆ. (ಧರ್ಮೋ. 6:5-7) ಒಂದುವೇಳೆ ನಿಮಗೆ ವಿಶ್ವಾಸಿಯಾಗಿರುವ ಸಂಗಾತಿ ಇರಲಿ ಅಥವಾ ನೀವು ಧಾರ್ಮಿಕವಾಗಿ ವಿಭಜಿತವಾಗಿರುವ ಕುಟುಂಬದಲ್ಲಿ ವಾಸಿಸುತ್ತಿರಲಿ ಇಲ್ಲವೆ ಒಂಟಿ ಹೆತ್ತವರಾಗಿರಲಿ, ಕ್ರಮವಾದ ಕುಟುಂಬ ಅಧ್ಯಯನವನ್ನು ಹೊಂದಿರುವ ಮೂಲಕ ನಿಮ್ಮ ಮಕ್ಕಳು ನಿಮಗೆ ಮತ್ತು ಯೆಹೋವನಿಗೆ ಸಮೀಪವಾಗುವಂತೆ ನೀವು ಸಹಾಯಮಾಡಬಲ್ಲಿರಿ.
2 ಕುಟುಂಬ ಅಧ್ಯಯನವನ್ನು ಆರಂಭಿಸುವುದು: ಕುಟುಂಬವಾಗಿ ಅಧ್ಯಯನಮಾಡುವ ಪದ್ಧತಿಯನ್ನು ಸ್ಥಾಪಿಸುವುದೇ ಮೊದಲ ಹೆಜ್ಜೆಯಾಗಿದೆ. ಯಾವ ಸಮಯದಲ್ಲಿ ಕುಟುಂಬ ಅಧ್ಯಯನವನ್ನು ನಡೆಸಬೇಕು ಎಂಬುದು ನಿಮಗೆ ಒಂದುವೇಳೆ ತಿಳಿಯದಿದ್ದರೆ, ಕುಟುಂಬವಾಗಿ ಏಕೆ ಇದನ್ನು ಚರ್ಚಿಸಬಾರದು? (ಜ್ಞಾನೋ. 15:22) ನಿಮಗೆ ಒಂದುವೇಳೆ ಚಿಕ್ಕ ಮಕ್ಕಳಿರುವುದಾದರೆ, ವಾರದಾದ್ಯಂತ ಒಂದಕ್ಕಿಂತ ಹೆಚ್ಚು ಅಧ್ಯಯನ ಸಮಯಗಳನ್ನು ನೀವು ಹೊಂದಿರಲು ಬಯಸಬಹುದು. ನಿಮ್ಮ ಕುಟುಂಬಕ್ಕೆ ಯಾವ ಕಾಲತಖ್ತೆಯು ಉತ್ತಮವಾಗಿರಬಲ್ಲದು ಎಂಬುದನ್ನು ನಿರ್ಧರಿಸಿರಿ. ನಿಮ್ಮ ಕುಟುಂಬ ಕಾಲತಖ್ತೆಯಲ್ಲಿ ಅಧ್ಯಯನಕ್ಕಾಗಿ ಒಂದು ನಿರ್ದಿಷ್ಟ ಸಮಯವನ್ನು ಬದಿಗಿರಿಸಿರಿ ಮತ್ತು ಅದಕ್ಕೆ ಅಂಟಿಕೊಳ್ಳಿರಿ.
3 ಏನನ್ನು ಅಧ್ಯಯನಮಾಡಬಹುದು? ಕೆಲವರು ಮುಂದಿನ ಸಭಾ ಪುಸ್ತಕ ಅಧ್ಯಯನದ ಅಥವಾ ಕಾವಲಿನಬುರುಜು ಅಧ್ಯಯನದ ವಿಷಯವನ್ನು ತಯಾರಿಸುತ್ತಾರೆ. ಇತರರು, ಮುಖ್ಯವಾಗಿ ಯುವ ಜನರಿಗಾಗಿ ತಯಾರಿಸಿರುವ ಪುಸ್ತಕಗಳನ್ನು ಅಧ್ಯಯನಮಾಡುತ್ತಾರೆ. ಒಬ್ಬ ಚಿಕ್ಕ ಮಗ ಮತ್ತು ಮಗಳಿರುವ ತಂದೆಯು ಹೇಳುವುದು: “ಅಧ್ಯಯನವನ್ನು ಮಕ್ಕಳಿಗೆ ಆನಂದದಾಯಕವಾಗಿ ಮಾಡುವ ಒಂದು ವಿಚಾರವು, ಪ್ರತಿ ವಾರ ಅಧ್ಯಯನದ ಸಮಯದಲ್ಲಿ ಬೈಬಲ್ ಕಥೆಗಳ ನನ್ನ ಪುಸ್ತಕದಲ್ಲಿನ ಪಾತ್ರಗಳ ನಟನೆಯಾಗಿದೆ. ನಾವು ಅವರಿಗಾಗಿ ಎಷ್ಟು ಪುಟಗಳನ್ನು ಓದುತ್ತೇವೆ ಎಂಬುದಕ್ಕಿಂತ, ಅವರು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅದು ಅವರ ಮನಸ್ಸನ್ನು ಎಷ್ಟು ಆಳವಾಗಿ ಪ್ರಭಾವಿಸುತ್ತದೆ ಎಂಬುದು ಹೆಚ್ಚು ಪ್ರಾಮುಖ್ಯ.”
4 ಪ್ರತಿ ವಾರ ಅಧ್ಯಯನಮಾಡಿರಿ: ಕುಟುಂಬ ಅಧ್ಯಯನವನ್ನು ಕ್ರಮವಾಗಿ ನಡೆಸಬೇಕು ಮತ್ತು ಕುಟುಂಬದ ಎಲ್ಲ ಸದಸ್ಯರು ಅದನ್ನು ಆನಂದದಿಂದ ಎದುರುನೋಡುವವರಾಗಿರಬೇಕು. ಅನಿರೀಕ್ಷಿತ ಸನ್ನಿವೇಶಗಳ ಕಾರಣ ಕೆಲವೊಮ್ಮೆ ದಿನ ಮತ್ತು ಸಮಯದಲ್ಲಿ ಬದಲಾವಣೆಗಳನ್ನು ಮಾಡಬೇಕಾಗಿ ಬಂದರೆ ಅದನ್ನು ಅನುಮತಿಸಬಹುದು. ಕೆಲವೊಮ್ಮೆ ಚರ್ಚಿಸುವ ವಿಷಯದಲ್ಲಿಯೂ ಬದಲಾವಣೆಯನ್ನು ಮಾಡಬೇಕಾದ ಅಗತ್ಯವು ಬರಬಹುದು. ಆದರೆ ಅಗತ್ಯವಿರುವ ಯಾವುದೇ ಬದಲಾವಣೆಗಳು, ಕುಟುಂಬ ಅಧ್ಯಯನದ ಕಾಲತಖ್ತೆಗೆ ದೀರ್ಘಕಾಲದ ವರೆಗೆ ಅಡಚಣೆಯಾಗಿರಬಾರದು. ತಮ್ಮ ಕುಟುಂಬದ ಕುರಿತಾಗಿ ಒಬ್ಬ ಮಗಳು ಹೀಗೆ ಹೇಳಿದಳು: “ನಮ್ಮ ಅಧ್ಯಯನದ ಸಮಯವನ್ನು ಬದಲಾಯಿಸಬೇಕಾಗಿರುವಲ್ಲಿ, ತಂದೆಯವರು ಯಾವಾಗಲೂ ಹೊಸ ಸಮಯವನ್ನು ಫ್ರಿಡ್ಜಿನ ಬಾಗಿಲಿನ ಮೇಲೆ ಅಂಟಿಸುತ್ತಾರೆ, ಇದರಿಂದಾಗಿ ಅದು ಯಾವಾಗ ನಡೆಸಲ್ಪಡುವುದು ಎಂಬುದು ನಮ್ಮೆಲ್ಲರಿಗೂ ತಿಳಿಯುತ್ತದೆ.” ಕುಟುಂಬ ಅಧ್ಯಯನವನ್ನು ಕ್ರಮವಾಗಿ ನಡೆಸಲು ಮಾಡುವ ಇಂಥ ಪ್ರಯತ್ನಗಳು ಎಷ್ಟು ಶ್ಲಾಘನೀಯವಾಗಿವೆ! ನಿಮ್ಮ ಮಕ್ಕಳನ್ನು ‘ಯೆಹೋವನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯಲ್ಲಿಯೂ ಬಾಲೋಪದೇಶದಲ್ಲಿಯೂ’ ಬೆಳೆಸುತ್ತಾ ಬರುವಾಗ, ನೀವು ಅವರ ಕಡೆಗಿರುವ ಮತ್ತು ನಿಮ್ಮ ಸ್ವರ್ಗೀಯ ತಂದೆಯ ಕಡೆಗಿರುವ ಪ್ರೀತಿಯನ್ನು ಪ್ರದರ್ಶಿಸುತ್ತಿದ್ದೀರಿ.—ಎಫೆ. 6:4.