ನೀವು ನಿಮ್ಮ ದೃಷ್ಟಿಕೋನವನ್ನು ವಿಶಾಲಗೊಳಿಸಬೇಕೋ?
ಒಂದು ವಿನಾಶಕ ಭೂಕಂಪವು ಪಶ್ಚಿಮ ಜಪಾನಿನ ಕೋಬೆ ಪಟ್ಟಣಕ್ಕೆ ಬಡಿಯಿತು ಮತ್ತು ಸ್ವ-ತ್ಯಾಗಿ ಸ್ವಯಂ ಸೇವಕರು ಬಾಧಿತ ನಿವಾಸಿಗಳ ಸಹಾಯಕ್ಕಾಗಿ ತ್ವರಿತವಾಗಿ ಬಂದರು. ಹೀಗಿದ್ದರೂ, ವೈದ್ಯಕೀಯ ಸಾಮಗ್ರಿಗಳಿಗಾಗಿ ಮಾಡಲಾದ ಅವರ ವಿನಂತಿಯು ನಗರದ ಆರೋಗ್ಯ ಕಚೇರಿಯಲ್ಲೊಬ್ಬರಿಂದ ತಿರಸ್ಕರಿಸಲ್ಪಟ್ಟಿರುವುದು ವೈದ್ಯರ ಸಂದರ್ಶಕ ತಂಡವೊಂದಕ್ಕೆ ಗೊತ್ತಾಯಿತು. ಒಂದು ವಿಶಾಲ ಪುರಸಭೆ ಆಸ್ಪತ್ರೆಯ ನಿರ್ದೇಶಕರು ಕೂಡ ಆಗಿದ್ದ ಆ ಅಧಿಕಾರಿಯು, ಬಾಧಿತರು ಕೋಬೆ ಆಸ್ಪತ್ರೆಗಳಿಗೆ ಕಳಿಸಲ್ಪಡಬೇಕೆಂದು ಬಯಸಿದನೇ ಹೊರತು ವೈದ್ಯರು ಪರಿಹಾರ ಕೇಂದ್ರಗಳಲ್ಲಿಯೇ ಬೆಲೆಯುಳ್ಳ ಚುಚ್ಚುಮದ್ದು ಮತ್ತು ಅಭಿಧಮನಿಯೊಳಗೆ ದ್ರವ ನೀಡುವುದರ ಮೂಲಕ ಉಪಚರಿಸುವುದನ್ನು ಬಯಸಲಿಲ್ಲ. ಕೊನೆಗೂ, ಆ ವೈದ್ಯರ ವಿನಂತಿಯನ್ನು ಮಾನ್ಯಮಾಡಲಾಯಿತು, ಆದರೆ ಆ ಅಧಿಕಾರಿಯ ಆರಂಭದ ಬಗ್ಗದ ಮನೋಭಾವ ಮತ್ತು ವ್ಯಕ್ತವಾಗುತ್ತಿರುವ ಕನಿಕರದ ಕೊರತೆಯು ವ್ಯಾಪಕ ಟೀಕೆಗೊಳಗಾಯಿತು.
ಅಧಿಕಾರದಲ್ಲಿರುವ ಯಾವನಿಂದಲಾದರೂ ತದ್ರೀತಿಯ ಹಟವನ್ನು ನೀವು ಪ್ರಾಯಶಃ ಅನುಭವಿಸಿದ್ದಿರಬೇಕು. ನೀವು ಸ್ವತಃ ಇದರ ದೋಷಿಯಾಗಿರಲೂಬಹುದು. ವಿಶಾಲವಾದ ದೃಷ್ಟಿಕೋನವನ್ನು ಬೆಳೆಸುವುದರಿಂದ ನೀವು ಪ್ರಯೋಜನ ಪಡೆಯಬಲ್ಲಿರೋ?
ಇಡೀ ವಿಷಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ
ಸಾಮಾನ್ಯವಾಗಿ ವ್ಯಕ್ತಿಗಳು ತಮ್ಮ ಗ್ರಹಿಕೆಯ ಮತ್ತು ವಿಷಯಗಳನ್ನು ಅರ್ಥಮಾಡಿಕೊಳ್ಳುವ ತಮ್ಮ ಸಾಮರ್ಥ್ಯವನ್ನು ಸೀಮಿತಗೊಳಿಸುತ್ತಾ ಒಂದೇ ಕೋನದಿಂದ ಅಥವಾ ದೃಷ್ಟಿಕೋನದಿಂದ ವಿಷಯಗಳನ್ನು ನೋಡುತ್ತಿರುತ್ತಾರೆ. ಹಲವು ಬಾರಿ ಇದು, ವಿದ್ಯಾಭ್ಯಾಸ, ಜೀವಿತದ ಅನುಭವ ಮತ್ತು ಹಿನ್ನೆಲೆ ಇವೇ ಮುಂತಾದ ಅಂಶಗಳ ಕಾರಣದಿಂದ ಆಗುತ್ತದೆ. ಒಬ್ಬನು ಸಂಪೂರ್ಣ ಚಿತ್ರಣವನ್ನು ಪಡೆಯಲು ಪರಿಶ್ರಮಪಟ್ಟಾಗಲೇ ವಿವೇಕಯುತವಾದ ನಿರ್ಣಯಗಳನ್ನು ಮಾಡಬಲ್ಲನು. ಉದಾಹರಣೆಗೆ, ಯಾವುದೇ ಸಂಚಾರದೀಪಗಳಿಲ್ಲದ ನಿಬಿಡ ರಸ್ತೆ ತಿರುವನ್ನು ನೀವು ದಾಟುವಾಗ, ನೇರವಾಗಿ ಮುಂದಕ್ಕೆ ಮಾತ್ರ ನೋಡುವುದು ವಿವೇಕಯುತವಾಗಿರಬಲ್ಲದೋ? ಖಂಡಿತವಾಗಿಯೂ ಇಲ್ಲ! ತದ್ರೀತಿಯಲ್ಲಿ, ಪೂರ್ಣ ದೃಷ್ಟಿಕೋನವನ್ನು ಪಡೆಯಲಾಗುವಂತೆ, ನಿಮ್ಮ ಯೋಚನೆಯಲ್ಲಿ ವಿಶಾಲಗೊಳ್ಳುವುದು, ನಿರ್ಣಯಗಳನ್ನು ಮಾಡಲು ಹಾಗೂ ಜವಾಬ್ದಾರಿಯುತವಾಗಿ ಕಾರ್ಯನಡಿಸಲು ಬಹಳ ಸಹಾಯಕಾರಿಯಾಗಿರಬಲ್ಲದು. ಇದು ಜೀವರಕ್ಷಕವಾಗಿಯೂ ಇರಸಾಧ್ಯವಿದೆ.
ಸಂಭವನೀಯವಾಗಿ, ನಾವೆಲ್ಲರೂ ಈ ವಿಷಯದಲ್ಲಿ ಅಭಿವೃದ್ಧಿಯನ್ನು ಮಾಡಸಾಧ್ಯವಿದೆ. ಆದ್ದರಿಂದ ನಿಮ್ಮನ್ನು ನೀವೇ ಹೀಗೆ ಕೇಳಿಕೊಳ್ಳಿ: ‘ನಾನು ಯಾವೆಲ್ಲಾ ಕ್ಷೇತ್ರಗಳಲ್ಲಿ ನನ್ನ ಯೋಚನೆಯಲ್ಲಿ ವಿಶಾಲಗೊಳ್ಳುವುದರಿಂದ ಪ್ರಯೋಜನವನ್ನು ಪಡೆಯಬಲ್ಲೆನು?’
ಇತರರೆಡೆಗೆ ನಿಮ್ಮ ದೃಷ್ಟಿಕೋನ
ಇತರರನ್ನು ನೋಡುವಾಗ ಅವರಲ್ಲಿ ನೀವೇನನ್ನು ಅವಲೋಕಿಸುತ್ತೀರಿ? ಬೇರೆ ಯಾವ ಸಂವೇದನೆಯು ಅಥವಾ ಛಾಯೆಯು ಅಸ್ತಿತ್ವದಲ್ಲಿಲ್ಲವೊ ಎಂಬಂತೆ, ಅವರು ಮಾಡುವ ಇಲ್ಲವೇ ಹೇಳುವುದೆಲ್ಲವು ಒಂದೋ ಪೂರ್ತಿ ಒಳ್ಳೆಯದಾಗಿ ಅಥವಾ ಪೂರ್ತಿ ಕೆಟ್ಟದ್ದಾಗಿ ಇರುವ ಹಾಗೆ ವೀಕ್ಷಿಸುವ ಪ್ರವೃತ್ತಿಯು ನಿಮ್ಮಲ್ಲಿದೆಯೋ? ನೀವು ಒಬ್ಬನು ಮಾಡಿದ ಹೇಳಿಕೆಯನ್ನು ಅಭಿನಂದನೆಯಾಗಿ ಇಲ್ಲವೆ ಅವಮಾನವಾಗಿ ತೆಗೆದುಕೊಳ್ಳುತ್ತೀರೋ? ಒಬ್ಬನು ಒಂದೋ ಸಂಪೂರ್ಣವಾಗಿ ಸರಿ ಅಥವಾ ಪೂರ್ಣವಾಗಿ ತಪ್ಪಾಗಿ ನಿಮ್ಮ ದೃಷ್ಟಿಯಲ್ಲಿದ್ದಾನೋ? ಇಂಥ ದೃಷ್ಟಿಕೋನವನ್ನು ಪಡೆಯುವುದು ಕಪ್ಪು ಮತ್ತು ಬಿಳುಪು ಚಿತ್ರಗಳು ಮಾತ್ರವೇ ಇವೆಯೋ ಎಂಬಂತೆ, ಶರತ್ಕಾಲದ ಭೂದೃಶ್ಯದಲ್ಲಿ ಬೃಹತ್ ಪ್ರಮಾಣದಲ್ಲಿ ವಿಭಿನ್ನ ಕಾಂತಿಮಯ ವರ್ಣ ವೈವಿಧ್ಯ ಮತ್ತು ಉತ್ತಮವಾಗಿರುವ ಬಣ್ಣವನ್ನು ಕಡೆಗಣಿಸುವ ಒಬ್ಬ ಛಾಯಾಚಿತ್ರಕಾರನಿಗೆ ಸಮಾನವಾಗಿರಬಹುದು. ಅಥವಾ ಕೆಲವು ವಿಚಾರಹೀನ ಸಂದರ್ಶಕರಿಂದ ಎಸೆಯಲ್ಪಟ್ಟ ಕೆಲವು ಕಸಕಡ್ಡಿಗಳ ರಾಶಿಯಿಂದ ಅಪಕರ್ಷಿಸಲ್ಪಟ್ಟು ಹೀಗೆ ಸುಂದರ ದೃಶ್ಯವೊಂದರ ಆನಂದವನ್ನು ಸವಿಯುವ ಅವಕಾಶವನ್ನು ಬಿಟ್ಟುಕೊಡುವ ಪ್ರಯಾಣಿಕನೊಬ್ಬನಂತೆಯೇ, ವ್ಯಕ್ತಿಯ ವ್ಯಕ್ತಿತ್ವದ ನಕಾರಾತ್ಮಕ ವಿಷಯಗಳ ಮೇಲೆ ಕೇಂದ್ರೀಕರಿಸುವ ಪ್ರವೃತ್ತಿಯುಳ್ಳವರಾಗಿದ್ದೀರೋ?—ಪ್ರಸಂಗಿ 7:16ನ್ನು ಹೋಲಿಸಿರಿ.
ಮಾನವ ದೋಷಗಳೆಡೆಗೆ ಯೆಹೋವನ ದೃಷ್ಟಿಕೋನವನ್ನು ಪರಿಗಣಿಸುವುದರಿಂದ ನಾವು ಹೆಚ್ಚನ್ನು ಕಲಿಯಬಲ್ಲೆವು. ಮನುಷ್ಯನ ಅನೇಕ ಬಲಹೀನತೆಗಳ ಹಾಗೂ ವಿಫಲತೆಗಳ ಅರಿವು ಆತನಿಗಿರುವುದಾದರೂ, ಆತನು ಅವುಗಳ ಮೇಲೆ ಕೇಂದ್ರೀಕರಿಸುವುದಿಲ್ಲ ಅಥವಾ ಗಮನಕೊಡುವುದಿಲ್ಲ. ಕೃತಜ್ಞನಾಗಿರುವ ಕೀರ್ತನೆಗಾರನು ಅವಲೋಕಿಸುವುದು: “ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು?” (ಕೀರ್ತನೆ 130:3) ಯೆಹೋವನು ಪಶ್ಚಾತ್ತಾಪಿ ಪಾಪಿಗಳ ದ್ರೋಹಗಳನ್ನು ಅವರಿಂದ ಬಹಳ ದೂರ ಮಾಡಲು, ಹೌದು ಅವುಗಳನ್ನು ಉದಾರವಾಗಿ ಅಳಿಸಿಬಿಡಲು ಇಚ್ಛೆಯುಳ್ಳವನಾಗಿದ್ದಾನೆ. ಈ ಮೂಲಕ ಅವು ಆತನೊಂದಿಗಿರುವ ನಮ್ಮ ಸಂಬಂಧದ ಮೇಲೆ ಕಳಂಕವಾಗಿರುವುದಿಲ್ಲ. (ಕೀರ್ತನೆ 51:1; 103:12) ಒಂದು ಸಂದರ್ಭದಲ್ಲಿ ಬತ್ಷೆಬೆಯೊಂದಿಗೆ ಗಂಭೀರವಾದ ಪಾಪಗಳನ್ನು ಮಾಡಿದ್ದ ಅರಸನಾದ ದಾವೀದನ ಕುರಿತು, ಅವನು “ನನ್ನ ದೃಷ್ಟಿಯಲ್ಲಿ ಸರಿಯಾದದ್ದನ್ನೇ ಮಾಡುತ್ತಾ ಪೂರ್ಣಮನಸ್ಸಿನಿಂದ ನನ್ನನ್ನು ಹಿಂಬಾಲಿಸಿದ” ವ್ಯಕ್ತಿಯಾಗಿದ್ದನೆಂದು ಯೆಹೋವನು ಹೇಳಸಾಧ್ಯವಿತ್ತು. (1 ಅರಸು 14:8, NW) ದಾವೀದನ ಕುರಿತು ದೇವರಿಗೆ ಹೀಗೇಕೆ ಹೇಳಸಾಧ್ಯವಾಯಿತು? ಯಾಕಂದರೆ ಆತನು ಪಶ್ಚಾತ್ತಾಪಿ ದಾವೀದನ ಉತ್ತಮ ಗುಣಗಳ ಮೇಲೆ ಕೇಂದ್ರೀಕರಿಸಿದನು. ಆತನು ಪ್ರಸ್ತುತ ಸಂಗತಿಗಳನ್ನೆಲ್ಲಾ ಗಮನಿಸಿದನು ಮತ್ತು ತನ್ನ ಸೇವಕನಿಗೆ ವಿಸ್ತಾರವಾದ ರೀತಿಯಲ್ಲಿ ಕರುಣೆಯನ್ನು ತೋರಿಸುತ್ತಾ ಮುಂದುವರಿದನು.
ಇತರರ ದೋಷಗಳೆಡೆಗೆ ಈ ವಿಸ್ತಾರವಾದ ದೃಷ್ಟಿಕೋನವನ್ನು ಕ್ರಿಸ್ತ ಯೇಸುವು ಕುಂದಿಲ್ಲದೆ ಪ್ರತಿಬಿಂಬಿಸಿದನು. (ಯೋಹಾನ 5:19) ತನ್ನ ಅಪೊಸ್ತಲರ ಲೋಪದೋಷಗಳೊಂದಿಗೆ ನಿಭಾಯಿಸಬೇಕಾದ ಸಂದರ್ಭಗಳಲ್ಲಿ, ಯೇಸುವು ಕನಿಕರವುಳ್ಳವನು ಮತ್ತು ಅರ್ಥಮಾಡಿಕೊಳ್ಳುವವನು ಆಗಿದ್ದನು. ಅಪರಿಪೂರ್ಣ ಮನುಷ್ಯರಿಗಾದರೊ, ‘ಮನಸ್ಸು ಸಿದ್ಧವಾಗಿರುತ್ತದೆ ಆದರೆ ದೇಹಕ್ಕೆ ಬಲ ಸಾಲದಾಗಿರು’ತ್ತದೆಂದು ಅವನು ಒಪ್ಪಿಕೊಂಡನು. (ಮತ್ತಾಯ 26:41) ಇದನ್ನು ಮನಸ್ಸಿನಲ್ಲಿರಿಸುತ್ತಾ, ಯೇಸುವು ತನ್ನ ಶಿಷ್ಯರ ಬಲಹೀನತೆಗಳನ್ನು ಮತ್ತು ದೋಷಗಳನ್ನು ತಾಳ್ಮೆಯಿಂದ ಮತ್ತು ಅರ್ಥಮಾಡಿಕೊಂಡು ಅವರೊಂದಿಗೆ ನಿಭಾಯಿಸುತ್ತಿದ್ದನು. ಅವನು ಅವರ ವಿಫಲತೆಗಳ ಮೇಲೆ ಗಮನಹರಿಸುವ ಬದಲು, ಅವರ ಒಳ್ಳೆಯ ಗುಣಗಳ ಮೇಲೆ ಕೇಂದ್ರೀಕರಿಸಿದನು.
ಒಂದು ಸಂದರ್ಭದಲ್ಲಿ ತಮ್ಮೊಳಗೆ ಹೆಚ್ಚಿನವನೆನಸಿಕೊಳ್ಳುವವನು ಯಾರೆಂಬ ವಿಷಯದಲ್ಲಿ ವಾದವು ಎದ್ದಾಗ, ಅಪೊಸ್ತಲರನ್ನು ತಿದ್ದಿದನು. ಅನಂತರ, ಯೇಸುವು ಕೂಡಿಸಿದ್ದು: “ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು. ಆದದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಮಿಸಿದ್ದ ಪ್ರಕಾರ ನಾನು ನಿಮಗೂ ನೇಮಿಸುತ್ತೇನೆ; ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ, ಕುಡಿಯುವಿರಿ; ಮತ್ತು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.” (ಲೂಕ 22:24-30) ಹೌದು, ಅಪೊಸ್ತಲರ ಅನೇಕ ಕುಂದು-ಕೊರತೆಗಳ ಮಧ್ಯೆಯೂ, ಯೇಸುವು ಅವರ ನಂಬಿಗಸ್ತಿಕೆಯನ್ನು ಹಾಗೂ ಅವನ ಕಡೆಗೆ ಅವರು ತೋರಿಸಿದ ಪ್ರೀತಿಯನ್ನು ಜ್ಞಾಪಿಸಿಕೊಂಡನು. (ಜ್ಞಾನೋಕ್ತಿ 17:17) ಅವರು ಮಾಡಸಾಧ್ಯವಿರುವ ಮತ್ತು ಮಾಡಲಿರುವ ವಿಷಯಗಳಲ್ಲಿ ಯೇಸುವಿಗೆ ಆತ್ಮವಿಶ್ವಾಸವಿತ್ತು, ಆದ್ದರಿಂದ ಅವನು ಅವರೊಂದಿಗೆ ರಾಜ್ಯಕ್ಕಾಗಿ ಒಂದು ಒಡಂಬಡಿಕೆಯನ್ನು ಸ್ಥಾಪಿಸಿದನು. ಹೌದು, ‘ಯೇಸುವು ತನ್ನ ಶಿಷ್ಯರನ್ನು ಕೊನೆ ಗಳಿಗೆಯ ವರೆಗೆ ಪ್ರೀತಿಸುತ್ತಾ ಬಂದನು.’—ಯೋಹಾನ 13:1.
ಆದುದರಿಂದ, ಕೆಲವರ ವ್ಯಕ್ತಿತ್ವದ ವಿಲಕ್ಷಣ ಪ್ರವೃತ್ತಿಗಳು ಮತ್ತು ದೋಷಗಳು ನಿಮ್ಮನ್ನು ಕೆರಳಿಸುತ್ತಿರುವುದಾದರೆ, ಯೆಹೋವನ ಮತ್ತು ಯೇಸುವಿನ ಹಾಗೆ ಇರಿ. ನಿಮ್ಮ ಯೋಚನೆಯಲ್ಲಿ ವಿಶಾಲಗೊಳ್ಳಿರಿ, ಮತ್ತು ಎಲ್ಲಾ ಸಂಗತಿಗಳನ್ನು ಪರಿಗಣನೆಗೆ ತರಲು ಪ್ರಯತ್ನಿಸಿರಿ. ವಿಷಯಗಳನ್ನು ಅವುಗಳ ತಕ್ಕ ದೃಷ್ಟಿಕೋನದಿಂದ ವೀಕ್ಷಿಸುವ ಮೂಲಕ, ನಿಮ್ಮ ಸಹೋದರರನ್ನು ಪ್ರೀತಿಸುವುದಕ್ಕೂ ಮತ್ತು ಗಣ್ಯಮಾಡುವುದಕ್ಕೂ ನಿಮಗೆ ಸುಲಭವಾಗಬಲ್ಲದು.
ಭೌತಿಕ ಕೊಡುವಿಕೆಯಲ್ಲಿ
ಕೊಡುವ ಸುಯೋಗವು ಕ್ರೈಸ್ತರಿಗೆ ನೀಡಲ್ಪಟ್ಟ ಅನೇಕ ಸಂತೋಷಗಳಲ್ಲಿ ಒಂದಾಗಿರುತ್ತದೆ. ಆದರೆ ನಮ್ಮ ಕೊಡುವಿಕೆಯನ್ನು ಕೇವಲ ಒಂದೇ ಚಟುವಟಿಕೆಗೆ, ಉದಾಹರಣೆಗೆ, ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವಿಕೆಗೆ ಮಾತ್ರವೇ ನಾವು ಸೀಮಿತಗೊಳಿಸಬೇಕೋ? (ಮತ್ತಾಯ 24:14; 28:19, 20) ಅಥವಾ ಇತರರ ಶಾರೀರಿಕ ಆವಶ್ಯಕತೆಗಳನ್ನು ಮತ್ತು ಹಿತಚಿಂತನೆಗಳನ್ನು ಸೇರಿಸಿ ಹೀಗೆ ನಿಮ್ಮ ಯೋಚನೆಯಲ್ಲಿ ವಿಶಾಲಗೊಳ್ಳಬಹುದಲ್ಲವೇ? ನಿಶ್ಚಯವಾಗಿಯೂ, ಎಲ್ಲಾ ಕ್ರೈಸ್ತರು ಆತ್ಮಿಕ ಕೊಡುವಿಕೆಯನ್ನು ಪರಮ ಮಹತ್ವವುಳ್ಳದ್ದಾಗಿ ಗಣ್ಯಮಾಡುತ್ತಾರೆ. (ಯೋಹಾನ 6:26, 27; ಅ. ಕೃತ್ಯಗಳು 1:8) ಹೀಗಿದ್ದರೂ, ಆತ್ಮಿಕ ಕೊಡುವಿಕೆಯು ಮಹತ್ವವುಳ್ಳದ್ದಾಗಿರುವಂತೆಯೇ, ಭೌತಿಕ ಕೊಡುವಿಕೆಯು ನಿಶ್ಚಯವಾಗಿಯೂ ನಿರ್ಲಕ್ಷಿಸಲ್ಪಡಬಾರದು.—ಯಾಕೋಬ 2:15, 16
ನಮ್ಮ ಸ್ವಂತ ಸಭೆಯ ಮತ್ತು ಲೋಕದ ಸುತ್ತಲಿರುವ ನಮ್ಮ ಆತ್ಮಿಕ ಸಹೋದರರ ತ್ವರಿತ ಅಗತ್ಯಗಳನ್ನು ಅವಲೋಕಿಸಿದಂತೆ, ಸಾಧ್ಯವಿರುವ ಸಹಾಯವನ್ನು ನೀಡಲು ಹೆಚ್ಚು ಪೂರ್ಣವಾಗಿ ನಮ್ಮನ್ನು ತೊಡಗಿಸುವೆವು. ಆರ್ಥಿಕವಾಗಿ ಅನುಕೂಲಸ್ಥರಾಗಿರುವವರು ಇತರರೊಂದಿಗೆ ಉದಾರವಾಗಿ ಹಂಚುವಾಗ, ಸಮಾನತ್ವವು ಉಂಟಾಗುತ್ತದೆ. ಈ ರೀತಿಯಲ್ಲಿ ನಮ್ಮೆಲ್ಲಾ ಸಹೋದರರ ಅಗತ್ಯಗಳು ಪೂರೈಸಲ್ಪಡುತ್ತವೆ. ಒಬ್ಬ ಕ್ರೈಸ್ತ ಹಿರಿಯನು ಈ ರೀತಿಯಲ್ಲಿ ಅದನ್ನು ಅಭಿವ್ಯಕ್ತಗೊಳಿಸಿದನು: “ಲೋಕದ ಒಂದು ಭಾಗದಲ್ಲಿ ಅಗತ್ಯವು ಏಳುವುದಾದರೆ, ಲೋಕದ ಇತರ ಭಾಗದಲ್ಲಿರುವ ಸಹೋದರರು ಅವರ ಸಹಾಯಕ್ಕೆ ಬರುವರು. ಇವರು ಸಹಾಯಮಾಡುವ ಸ್ಥಿತಿಯಲ್ಲಿರದಿದ್ದರೆ, ಆಗ ಇನ್ನೊಂದು ಕಡೆಯಲ್ಲಿರುವ ನಮ್ಮ ಸಹೋದರರು ಅದನ್ನು ಮಾಡುವರು. ಹೀಗೆ, ಲೋಕದಾದ್ಯಂತವಿರುವ ಸಹೋದರರ ಅಗತ್ಯಗಳು ಪೂರೈಸಲ್ಪಡುತ್ತವೆ. ಲೋಕವ್ಯಾಪಕ ಸಹೋದರತ್ವವು ನಿಜವಾಗಿಯೂ ಅದ್ಬುತವಾಗಿರುತ್ತದೆ.”—2 ಕೊರಿಂಥ 8:13-15; 1 ಪೇತ್ರ 2:17.
ಪೂರ್ವ ಯೂರೋಪಿನಲ್ಲಿ ಜರುಗಲಿದ್ದ ಅಂತಾರಾಷ್ಟ್ರೀಯ ಅಧಿವೇಶನವೊಂದಕ್ಕೆ ಹಾಜರಾಗಲು ಯಥಾರ್ಥ ಅಪೇಕ್ಷೆಯನ್ನು ತೋರಿಸಿದ ಒಬ್ಬಾಕೆ ಸಹೋದರಿಗೆ ಅಲ್ಲಿಗೆ ಹೋಗಲು ಆಗಲೇ ಇಲ್ಲ. ಆದರೂ, ಅಲ್ಲಿರುವ ಸಹೋದರರಿಗೆ ಬೈಬಲುಗಳ ತುಂಬ ಅಗತ್ಯವಿತ್ತೆಂಬುದನ್ನು ಕೇಳಿದ ನಂತರ, ಹಾಜರಾಗಲಿರುವ ಒಬ್ಬರ ಮೂಲಕ ಬೈಬಲುಗಳನ್ನು ಕಾಣಿಕೆಯಾಗಿ ನೀಡಲು ಅವಳು ಮುಂದಾದಳು. ಹೀಗೆ, ಪರಸ್ಥಳದಲ್ಲಿರುವ ತನ್ನ ಸಹೋದರರೊಂದಿಗೆ ಹಂಚುವುದರ ಮೂಲಕ, ಕೊಡುವುದರಲ್ಲಿರುವ ಆನಂದವನ್ನು ಅವಳು ಅನುಭವಿಸಿದಳು.—ಅ. ಕೃತ್ಯಗಳು 20:35.
ನಿಮ್ಮ ಆಲೋಚನೆಯಲ್ಲಿ ವಿಶಾಲಗೊಳ್ಳುವ ಮೂಲಕ ಸದಾ ವಿಸ್ತಾರಗೊಳ್ಳುತ್ತಿರುವ ಲೋಕವ್ಯಾಪಕ ಬೈಬಲ್ ಶೈಕ್ಷಣಿಕ ಕಾರ್ಯದಲ್ಲಿ ಬಹುಶಃ ಇನ್ನೂ ಹೆಚ್ಚಿನ ಕಾಣಿಕೆಯನ್ನು ಕೊಡುತ್ತಾ, ಹೀಗೆ ನಿಮಗೆ ಮಾತ್ರವಲ್ಲ ಇತರರಿಗೂ ಆನಂದವನ್ನು ತರುವಿರಿ.—ಧರ್ಮೋಪದೇಶಕಾಂಡ 15:7; ಜ್ಞಾನೋಕ್ತಿ 11:24; ಫಿಲಿಪ್ಪಿ 4:14-19.
ಸಲಹೆಯನ್ನು ಕೊಡುವಾಗ
ಸಲಹೆ ಅಥವಾ ತಿದ್ದುವಿಕೆ ಕೊಡಲು ಕರೆಯಲ್ಪಟ್ಟಾಗ, ಸಹಾನುಭೂತಿ ಮತ್ತು ಸಮತೂಕದ ವಿವೇಚನೆಯು ನಮ್ಮ ಆತ್ಮಿಕ ಸಹೋದರರ ಗೌರವವನ್ನು ಪಡೆಯಲು ಮತ್ತು ನಿಜವಾದ ಫಲಕಾರಿ ನೆರವನ್ನು ನೀಡಲು ಸಹಾಯಮಾಡುವುದು. ಕೆಲವೇ ನಿಜತ್ವಗಳನ್ನು ಪರಿಗಣಿಸಿ ಹೀಗೆ ಮುಂದಾಲೋಚನೆಯಿಲ್ಲದ, ಒಮ್ಮುಖ ತೀರ್ಮಾನವನ್ನು ದುಡುಕಿನಿಂದ ಮಾಡುವುದು ಬಹಳ ಸುಲಭವಾಗಿರುತ್ತದೆ. ತಮ್ಮ ಕೊನೆಯಿಲ್ಲದ ಕಟ್ಟಳೆಗಳಿಂದ ಇತರರ ಮೇಲೆ ಭಾರವನ್ನು ಹಾಕಲು ಹವಣಿಸುತ್ತಿದ್ದ ಯೇಸುವಿನ ದಿನದ ಧಾರ್ಮಿಕ ಮುಖಂಡರಂತೆಯೇ, ನಾವು ಸಂಕುಚಿತ ಮನಸ್ಸುಳ್ಳವರೆಂದು ಹೌದು, ಅಭಿವೃದ್ಧಿಯನ್ನು ಕೊನೆಗಾಣಿಸುವ ಮನಸ್ಸುಳ್ಳವರಾಗಿಯೂ ಇದ್ದೇವೆಂಬ ಅನಿಸಿಕೆಯನ್ನು ಇದು ಕೊಡುವುದು. (ಮತ್ತಾಯ 23:2-4) ಇನ್ನೊಂದು ಕಡೆಯಲ್ಲಿ, ನಾವು ಅತಿರೇಕಗಳಿಗೆ ಹೋಗುವುದನ್ನು ತಡೆಯುವುದಾದರೆ ಮತ್ತು ಯೆಹೋವನ ನೀತಿಯುಳ್ಳ ಆದರೂ ಸಮತೆಯ ಹಾಗೂ ಕರುಣಾಭರಿತ ಯೋಚನೆಯನ್ನು ಪ್ರತಿಬಿಂಬಿಸುತ್ತಾ ಶಾಸ್ತ್ರೀಯ ತತ್ವಗಳ ಆಧಾರದಲ್ಲಿ ಅತ್ಯುತ್ತಮ ಸಲಹೆಯನ್ನು ನೀಡುವುದಾದರೆ, ಆಗ ಇತರರು ನಮ್ಮ ಸೂಚನೆಗಳನ್ನು ಸ್ವೀಕರಿಸುವುದಕ್ಕೆ ಮತ್ತು ಅನ್ವಯಿಸುವುದಕ್ಕೆ ಹೆಚ್ಚು ಸುಲಭವನ್ನಾಗಿ ಮಾಡಿಕೊಡುತ್ತೇವೆ.
ಕೆಲವು ವರ್ಷಗಳ ಹಿಂದೆ ಬೇರೆ ಬೇರೆ ಸಭೆಗಳಿಂದ ಯುವ ಸಹೋದರರು ಕ್ರೀಡೆಗಳಲ್ಲಿ ಭಾಗವಹಿಸಲು ಕೂಡಿಬಂದರು. ದುಃಖಕರವಾಗಿ, ಸ್ಪರ್ಧಾತ್ಮಕ ಆತ್ಮವೊಂದು ಅವರ ಮಧ್ಯೆ ವಿಕಾಸಗೊಂಡು, ಪರಿಣಾಮವಾಗಿ ಒರಟಾದ ಬಾಯಿಮಾತಿನ ಮುಖಾಮುಖಿಯಾಯಿತು. ಸ್ಥಳೀಯ ಹಿರಿಯರು ಆ ಸಮಸ್ಯೆಯನ್ನು ಹೇಗೆ ನಿಭಾಯಿಸಿದರು? ಯುವಕರಿಗೆ ಮನೋರಂಜನೆಯ ಅಗತ್ಯವಿರುವುದನ್ನು ಅಂಗೀಕರಿಸುತ್ತಾ, ಅವುಗಳನ್ನು ಸಂಪೂರ್ಣವಾಗಿ ಬಿಟ್ಟುಬಿಡಬೇಕೆಂದು ಅವರು ಕೇಳಿಕೊಳ್ಳಲಿಲ್ಲ. (ಎಫೆಸ 5:17; 1 ತಿಮೊಥೆಯ 4:8) ಅದರ ಬದಲು ಪ್ರತಿಸ್ಪರ್ಧೆಯ ಆತ್ಮವು ಎಲ್ಲಿಗೆ ನಡಿಸಸಾಧ್ಯವಿದೆಯೆಂಬುದರ ಸಂಬಂಧವಾಗಿ ದೃಢವಾದ ಮಾತ್ರವಲ್ಲ ವಿವೇಚನಾಭರಿತ ಎಚ್ಚರಿಕೆಗಳನ್ನು ನೀಡಿದರು. ವಯಸ್ಸಾದ ಜವಾಬ್ದಾರಿಯುಳ್ಳ ವ್ಯಕ್ತಿಗಳು ಉಪಸ್ಥಿತರಿರುವಂತೆ ಏರ್ಪಡಿಸಸಾಧ್ಯವಿರುವ ಸಹಾಯಕಾರಿ ಸೂಚನೆಗಳನ್ನು ಅವರು ನೀಡಿದರು. ಯುವಕರು ತಮಗೆ ನೀಡಿದ ಸಲಹೆಯ ವಿವೇಕವನ್ನು ಹಾಗೂ ಸಮತೆಯನ್ನು ಗಣ್ಯಮಾಡಿದರು ಮತ್ತು ಉತ್ತಮವಾಗಿ ಪ್ರತಿಕ್ರಿಯಿಸಿದರು. ಇನ್ನೂ ಹೆಚ್ಚಾಗಿ, ಹಿರಿಯರ ಕಡೆಗೆ ಅವರ ಗೌರವವು ಮತ್ತು ವಾತ್ಸಲ್ಯವು ಬೆಳೆಯಿತು.
ವಿಶಾಲಗೊಳ್ಳಲು ಪರಿಶ್ರಮದಿಂದ ಕಾರ್ಯನಡಿಸಿರಿ
ಉದ್ದೇಶಪೂರ್ವಕವಾಗಿ ಅಥವಾ ಬುದ್ಧಿಪೂರ್ವಕವಾಗಿ ಅವಿಚಾರಾಭಿಪ್ರಾಯಗಳನ್ನು ಹಿಡಿದಿಟ್ಟುಕೊಳ್ಳಲು ನೀವು ಬಯಸಲಿಕ್ಕಿಲ್ಲವಾದರೂ, ನಿಮ್ಮ ಆಲೋಚನೆಗಳಲ್ಲಿ ವಿಶಾಲಗೊಳ್ಳುವ ನಿಶ್ಚಿತವಾದ ಪ್ರಯತ್ನವನ್ನು ನೀವು ಇನ್ನೂ ಮಾಡಬೇಕಾಗುತ್ತದೆ. ದೇವರ ವಾಕ್ಯವನ್ನು ನೀವು ಅಭ್ಯಾಸಮಾಡಿದಂತೆ, ಯೆಹೋವನ ಆಲೋಚನಾರೀತಿಯನ್ನು ಗ್ರಹಿಸಲು ಮತ್ತು ಗಣ್ಯಮಾಡಲು ಸಾಧ್ಯವಾಗುವಂತೆ ಅದನ್ನು ಮನನಮಾಡಿರಿ. (ಕೀರ್ತನೆ 139:17) ಬೈಬಲಿನಲ್ಲಿರುವ ಹೇಳಿಕೆಗಳಿಗೆ ಕಾರಣಗಳನ್ನು ಮತ್ತು ಒಳಗೂಡಿದ ಮೂಲತತ್ವಗಳನ್ನು ಅರ್ಥಮಾಡಿಕೊಳ್ಳಲು ಪರಿಶ್ರಮಪಡಿರಿ ಮಾತ್ರವಲ್ಲ, ಯೆಹೋವನು ವೀಕ್ಷಿಸುವಂತೆಯೇ ವಿಷಯಗಳನ್ನು ಮೌಲ್ಯೀಕರಿಸಲು ಹೆಚ್ಚು ಪ್ರಯಾಸಪಡಿರಿ. ಇದು ದಾವೀದನ ಪ್ರಾರ್ಥನೆಯೊಂದಿಗೆ ಹೊಂದಿಕೆಯಲ್ಲಿರುತ್ತದೆ: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು. ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡಿಸುತ್ತಾ ಉಪದೇಶಿಸು.”—ಕೀರ್ತನೆ 25:4, 5.
ವಿಶಾಲವಾದ ಹೊರನೋಟವನ್ನು ನಿಮ್ಮದಾಗಿಸಿಕೊಳ್ಳುತ್ತಿರುವಂತೆಯೇ, ನೀವು ಆಶೀರ್ವಾದಪಾತ್ರರಾಗುವಿರಿ. ವಿಶಾಲವಾದ ದೃಷ್ಟಿಕೋನದಿಂದ ಬರುವ ಒಂದು ಆಶೀರ್ವಾದವಾದರೋ, ಸಮತೆಯ ಮತ್ತು ಅರ್ಥಮಾಡಿಕೊಳ್ಳುವವರಾಗಿರುವ ಉತ್ತಮ ಖ್ಯಾತಿಯನ್ನು ನೀವು ಪಡೆಯುವಿರಿ. ವಿಭಿನ್ನ ಸನ್ನಿವೇಶಗಳಲ್ಲಿ ಸಹಾಯವನ್ನು ನೀಡುತ್ತಿರುವಾಗಲೂ ಹೆಚ್ಚು ವಿವೇಚನೆಯಿಂದ ಹಾಗೂ ಅರ್ಥಭರಿತವಾದ ವಿಧದಲ್ಲಿ ಪ್ರತಿಕ್ರಿಯಿಸಲು ನೀವು ಶಕ್ತರಾಗುತ್ತೀರಿ. ಇದರ ಪರಿಣಾಮವಾಗಿ ಕ್ರೈಸ್ತ ಸಹೋದರತ್ವದ ಅದ್ಭುತಕರವಾದ ಐಕ್ಯತೆ ಹಾಗೂ ಸಾಮರಸ್ಯಕ್ಕೆ ನಿಮ್ಮ ಕೊಡುಗೆಯನ್ನು ನೀಡುತ್ತೀರಿ
[ಪುಟ 12 ರಲ್ಲಿರುವ ಚಿತ್ರ]
ಉದಾರವಾಗಿ ಕೊಡುವುದು ಇತರರಿಗೆ ಸಹಾಯಮಾಡುತ್ತದೆ, ನೀಡುವವನಿಗೆ ಹರ್ಷವನ್ನು ತರುತ್ತದೆ, ಅಷ್ಟು ಮಾತ್ರವಲ್ಲದೆ, ನಮ್ಮ ಸ್ವರ್ಗೀಯ ತಂದೆಯನ್ನು ಮೆಚ್ಚಿಸುತ್ತದೆ