ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 5/1 ಪು. 26-27
  • ವೆಂಡ ಜನರ ಫಲಪ್ರದ ನಾಡು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವೆಂಡ ಜನರ ಫಲಪ್ರದ ನಾಡು
  • ಕಾವಲಿನಬುರುಜು—1999
  • ಉಪಶೀರ್ಷಿಕೆಗಳು
  • ಕ್ಲಿಷ್ಟವಾದ ಭಾಷೆ
  • ಆತ್ಮಿಕ ಫಲ
ಕಾವಲಿನಬುರುಜು—1999
w99 5/1 ಪು. 26-27

ವೆಂಡ ಜನರ ಫಲಪ್ರದ ನಾಡು

ಕಳೆದ ಹತ್ತು ವರ್ಷಗಳಿಂದ, ನಾನು ಮತ್ತು ನನ್ನ ಪತ್ನಿ ವೆಂಡ ಜನರ ಮಧ್ಯೆ ಪೂರ್ಣ ಸಮಯದ ಸೌವಾರ್ತಿಕರಾಗಿ ಕೆಲಸಮಾಡಿದ್ದೇವೆ. ದಕ್ಷಿಣ ಆಫ್ರಿಕದ ಉತ್ತರಕ್ಕಿರುವ ಲಿಮ್‌ಪೋಪೊ ನದಿಯ ದಕ್ಷಿಣಭಾಗದಲ್ಲಿ ಜೀವಿಸುವ ವೆಂಡ ಜನರ ದೇಶವು, ಕಳೆದ ಶತಮಾನಗಳಲ್ಲಿ ಲಿಮ್‌ಪೋಪೊ ನದಿಯನ್ನು ದಾಟಿ ಬಂದ ಹಲವಾರು ಕುಲಗಳಿಂದ ರಚಿತವಾಗಿದೆ. ತಮ್ಮ ಪೂರ್ವಿಕರು ಸುಮಾರು 1,000 ವರ್ಷಗಳ ಹಿಂದೆ ಈ ಸ್ಥಳದಲ್ಲಿ ನೆಲೆಸಿದ್ದರೆಂದು ಕೆಲವು ವೆಂಡ ಜನರು ಪ್ರತಿಪಾದಿಸುತ್ತಾರೆ.

ಈ ಕ್ಷೇತ್ರವು ಒಮ್ಮೆ ಮಾಪುಂಗುಬ್ವೆ ರಾಜ್ಯವೆಂದು ಕರೆಯಲ್ಪಟ್ಟ ಒಂದು ಹಳೆಯ ನಾಗರಿಕತೆಯ ಭಾಗವಾಗಿತ್ತು. ಅದು ದಕ್ಷಿಣ ಆಫ್ರಿಕದ ವಿಶಾಲವಾದ ನಗರ ವಸಾಹತುಗಳಲ್ಲಿ ಪ್ರಥಮವಾಗಿತ್ತು. ಮತ್ತು ಪಶ್ಚಿಮದ ಬಾಟ್ಸ್‌ವಾನದಿಂದ ಪೂರ್ವದ ಮೋಸಾಂಬೀಕ್‌ ವರೆಗೆ ಹರಡಿರುವ ವಿಶಾಲವಾದ ಲಿಮ್‌ಪೋಪೊ ಕಣಿವೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿತ್ತು. ಸಾ.ಶ. 900ರಿಂದ ಸಾ.ಶ. 1100ದ ವರೆಗೆ, ಮಾಪುಂಗುಬ್ವೆ ಅರಬಿ ವ್ಯಾಪಾರಿಗಳಿಗೆ ದಂತ, ಘೇಂಡಾ ಮೃಗದ ಕೊಂಬು, ಪ್ರಾಣಿ ಚರ್ಮ, ತಾಮ್ರ, ಮತ್ತು ಬಂಗಾರವನ್ನೂ ಒದಗಿಸಿತು. ಬಂಗಾರದ ಲೇಪನವಿರುವ ಕೌಶಲಪೂರ್ಣವಾಗಿ ಕೆತ್ತಲ್ಪಟ್ಟ ವಸ್ತುಗಳನ್ನು, ಮಾಪುಂಗುಬ್ವೆ ಎಂಬ ಹೆಸರಿನ ರಾಜರ ಸಮಾಧಿ ಸ್ಥಳದಿಂದ ಅಗೆದು ತೆಗೆಯಲಾಗಿದೆ. “ದಕ್ಷಿಣ ಆಫ್ರಿಕದಲ್ಲಿ ಬಂಗಾರದ ಗಣಿಕೆಲಸದ ಬಹು ಪ್ರಾಚೀನ ಸೂಚನೆಗಳಲ್ಲಿ” ಇವು ಸೇರಿರುವುದಾಗಿ ಒಂದು ಎನ್‌ಸೈಕ್ಲೊಪೀಡಿಯ ಸೂಚಿಸುತ್ತದೆ.

ಬಂಗಾರದ ಗಣಿಕೆಲಸವು ಈಗ ಅಲ್ಲಿ ನಡೆಯುವುದಿಲ್ಲ. ಆದರೆ ಇಂದು, ವೆಂಡ ನಾಡು ಅದರ ಫಲವಂತಿಕೆಗೆ ಸುಪ್ರಸಿದ್ಧವಾಗಿದೆ. ಸೋಟ್‌ಪಾನ್ಸ್‌ಬರ್ಗ್‌ ಪರ್ವತಗಳ ದಕ್ಷಿಣಭಾಗದಲ್ಲಿ ಹುಲಸಾದ ಒಂದು ಕಣಿವೆಯಿದೆ. ಅಲ್ಲಿ ಅವಕಾಡೋ ಹಣ್ಣು, ಬಾಳೆಹಣ್ಣು, ಮಾವಿನಹಣ್ಣು ಮತ್ತು ಸೀಬೆಹಣ್ಣುಗಳು ಹೇರಳವಾಗಿ ಬೆಳೆಯುತ್ತವೆ. ಪಿಕಾನ್‌ ಮತ್ತು ಮ್ಯಾಕಡೇಮೀಯಗಳಂತಹ ಕರಟಕಾಯಿಗಳಲ್ಲದೆ, ತರಕಾರಿಗಳ ಯಥೇಷ್ಟವಾದ ಸರಬರಾಯಿಯೂ ಇದೆ. ಇವುಗಳಲ್ಲಿ ಕಾಡು ಮುರಾಹಾ ಸೇರಿದೆ. ಇದು ಬಸಲೆ ಸೊಪ್ಪಿನ ಸ್ವಾದವನ್ನು ಪಡೆದಿದ್ದು, ಸ್ಥಳೀಯ ಜನರಿಂದ ಬಹಳವಾಗಿ ಆಸ್ವಾದಿಸಲ್ಪಡುತ್ತದೆ.

ವೆಂಡ ಜನರು ಶಾಂತಿಪ್ರಿಯರೂ ಅತಿಥಿಸತ್ಕಾರ ಮಾಡುವವರೂ ಆಗಿದ್ದಾರೆ. ಅನಿರೀಕ್ಷಿತವಾಗಿ ಬಂದ ಒಬ್ಬ ಅತಿಥಿಗೆ ಕೋಳಿ ಮಾಂಸದ ಅಡುಗೆಯನ್ನು ತಯಾರಿಸುವಂತೆ ಮನೆಯ ಯಜಮಾನನು ವಿನಂತಿಸುವುದು ತೀರ ಸಾಮಾನ್ಯವಾದ ಸಂಗತಿಯಾಗಿದೆ. ಇದು ಮುಸುಕಿನ ಜೋಳದಿಂದ ಮಾಡಲ್ಪಟ್ಟ ಬುಸ್ವಾ ಎಂಬ ಮುಖ್ಯ ಆಹಾರದೊಂದಿಗೆ ಸೇವಿಸಲ್ಪಡುತ್ತದೆ. ಭೇಟಿಯ ನಂತರ, ಮನೆಯ ಯಜಮಾನನು ತನ್ನ ಅತಿಥಿಯನ್ನು ಸ್ವಲ್ಪ ದೂರದ ವರೆಗೆ ಬಿಟ್ಟುಬರುವನು. ಇದು ಒಬ್ಬ ಭೇಟಿಗಾರನಿಗೆ ಮರ್ಯಾದೆಯನ್ನು ತೋರಿಸುವ ಸಾಂಪ್ರದಾಯಿಕ ವಿಧಾನವಾಗಿದೆ. ತಲೆಬಾಗಿಸಿ ಕೈಗಳನ್ನು ಜೋಡಿಸುವ ಮೂಲಕ ಭೇಟಿಗಾರರನ್ನು ಮರ್ಯಾದೆಯಿಂದ ವಂದಿಸುವಂತೆ ಮಕ್ಕಳಿಗೆ ಕಲಿಸಲಾಗುತ್ತದೆ. ಈ ಸಾಂಪ್ರದಾಯಿಕ ಶೈಲಿಯಲ್ಲಿ ಪರಸ್ಪರ ವಂದಿಸುತ್ತಿರುವ ಇಬ್ಬರು ವೆಂಡ ಸ್ತ್ರೀಯರನ್ನು ನೀವು ಈ ಪುಟದಲ್ಲಿ ನೋಡುತ್ತೀರಿ.

ಕ್ಲಿಷ್ಟವಾದ ಭಾಷೆ

ಯೂರೋಪಿಯನ್‌ ಮೂಲದ ಜನರು ವೆಂಡ ಭಾಷೆಯಲ್ಲಿ ನಿಪುಣರಾಗುವುದು ಅಷ್ಟೇನೂ ಸುಲಭವಲ್ಲ. ಒಂದು ತೊಂದರೆ ಏನೆಂದರೆ, ಅನೇಕ ಪದಗಳು ಒಂದೇ ರೀತಿಯಲ್ಲಿ ಬರೆಯಲ್ಪಟ್ಟರೂ ಭಿನ್ನವಾಗಿ ಉಚ್ಚರಿಸಲ್ಪಡುತ್ತವೆ. ಒಂದು ದಿನ ಯೆಹೋವನ ಸಾಕ್ಷಿಗಳ ವೆಂಡ ಸಭೆಯಲ್ಲಿ ಬೈಬಲ್‌ ಭಾಷಣವನ್ನು ನೀಡುತ್ತಿದ್ದಾಗ, ಸಭಿಕರು ಪ್ರತಿಯೊಬ್ಬರೊಂದಿಗೆ ಮಾತಾಡುವಂತೆ ಅವರನ್ನು ಉತ್ತೇಜಿಸಲು ನಾನು ಪ್ರಯತ್ನಿಸುತ್ತಿದ್ದೆ. ನಾನು “ವ್ಯಕ್ತಿಯಿಂದ ವ್ಯಕ್ತಿಗೆ” ಎಂದು ಹೇಳುವ ಬದಲು “ಬೆರಳಿನಿಂದ ಬೆರಳಿಗೆ” ಎಂದು ಹೇಳಿದ ಕಾರಣ, ಸಭಿಕರಲ್ಲಿದ್ದ ಒಬ್ಬನಿಗೆ ತನ್ನ ನಗುವನ್ನು ತಡೆದುಕೊಳ್ಳಲಿಕ್ಕಾಗಲಿಲ್ಲ.

ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ವೆಂಡ ಭಾಷೆಯನ್ನು ಮಾತಾಡಲು ನಾನು ಮೊದಮೊದಲು ಪ್ರಯತ್ನಿಸಿದಾಗ, ವೆಂಡ ಸ್ತ್ರೀಯೊಬ್ಬಳು ಉತ್ತರಿಸಿದ್ದು: “ನನಗೆ ಇಂಗ್ಲಿಷ್‌ ಭಾಷೆ ಬರುವುದಿಲ್ಲ.” ವೆಂಡ ಭಾಷೆಯನ್ನು ತುಂಬ ಚೆನ್ನಾಗಿ ಮಾತಾಡಿದೆನೆಂದು ನಾನು ನೆನಸಿದರೂ, ಅವಳದನ್ನು ಇಂಗ್ಲಿಷ್‌ ಭಾಷೆ ಎಂದೆನಿಸಿದಳು! ಮತ್ತೊಂದು ಸಂದರ್ಭದಲ್ಲಿ ಮನೆಯೊಂದನ್ನು ಸಮೀಪಿಸಿ, ಕುಟುಂಬದ ಯಜಮಾನನನ್ನು ಕರೆಯುವಂತೆ ಒಬ್ಬ ಹುಡುಗನಲ್ಲಿ ಕೇಳಿಕೊಂಡೆ. ಕುಟುಂಬದ ಯಜಮಾನನಿಗಾಗಿರುವ ವೆಂಡ ಶಬ್ದವು ಟಾಹಾ ಎಂದಾಗಿದೆ. ಆದರೆ ನಾನು ಟಹಾ ಎಂದೆ, ಅಂದರೆ ಮನೆಯ ಮಂಗನೊಂದಿಗೆ ಮಾತಾಡಬೇಕೆಂದು ಕೇಳಿಕೊಂಡೆ! ಈ ರೀತಿಯ ಲೋಪದೋಷಗಳು ನನ್ನ ಉತ್ಸಾಹವನ್ನು ಕುಂದಿಸಿದರೂ, ಸತತ ಪ್ರಯತ್ನದ ಕಾರಣ ನನ್ನ ಪತ್ನಿ ಮತ್ತು ನಾನು ವೆಂಡ ಭಾಷೆಯನ್ನು ಸಾಕಷ್ಟು ಉತ್ತಮವಾಗಿಯೇ ಮಾತಾಡುತ್ತಿದ್ದೇವೆ.

ಆತ್ಮಿಕ ಫಲ

ವೆಂಡ ನಾಡು ಆತ್ಮಿಕ ರೀತಿಯಲ್ಲಿಯೂ ಫಲಪ್ರದವಾಗಿ ಪರಿಣಮಿಸುತ್ತಿದೆ. 1950ಗಳ ಸಮಯದಲ್ಲಿ, ಮಸೀನ ಪಟ್ಟಣದಲ್ಲಿದ್ದ ತಾಮ್ರದ ಗಣಿಯಲ್ಲಿ ಕೆಲಸಮಾಡಲು ಅಕ್ಕಪಕ್ಕದ ದೇಶಗಳಿಂದ ವಲಸೆಬಂದಿದ್ದ ಜನರಲ್ಲಿ ಕೆಲವರು ಯೆಹೋವನ ಸಾಕ್ಷಿಗಳ ಸಭೆಯೊಂದನ್ನು ರಚಿಸಿದರು. ಅವರ ಹುರುಪಿನ ಚಟುವಟಿಕೆಯು ಬೈಬಲ್‌ ಸತ್ಯಗಳನ್ನು ಅನೇಕ ವೆಂಡ ಜನರಿಗೆ ಪರಿಚಯಿಸಿತು. ಒಂದು ದಶಕದ ನಂತರ, ಸಿಬಾಸಾ ಪಟ್ಟಣದ ಒಂದು ಖಾಸಗಿ ಮನೆಯಲ್ಲಿ ವೆಂಡ ಸಾಕ್ಷಿಗಳ ಒಂದು ಗುಂಪು ಕೂಟಗಳನ್ನು ನಡೆಸುತ್ತಿತ್ತು.

ಅಭಿವೃದ್ಧಿಯನ್ನು ತ್ವರಿತಗೊಳಿಸಲು, ದಕ್ಷಿಣ ಆಫ್ರಿಕದಲ್ಲಿರುವ ವಾಚ್‌ ಟವರ್‌ ಸೊಸೈಟಿಯ ಬ್ರಾಂಚ್‌ ಆಫೀಸು ಈ ಫಲಪ್ರದ ಕ್ಷೇತ್ರಕ್ಕೆ ಪೂರ್ಣ ಸಮಯದ ಸೌವಾರ್ತಿಕರನ್ನು ಕಳುಹಿಸಿತು. ಬೇಗನೆ ಸಿಬಾಸಾ ಗುಂಪು ಒಂದು ದೊಡ್ಡ ಸಭೆಯಾಗಿ ಬೆಳೆಯಿತು. ಆ ಸಮಯದಲ್ಲಿ ಕ್ರೈಸ್ತ ಕೂಟಗಳು ಒಂದು ತರಗತಿ ಕೋಣೆಯಲ್ಲಿ ನಡೆಯುತ್ತಿದ್ದವು. ಆದರೆ, ದಕ್ಷಿಣಭಾಗದಲ್ಲಿ ಸುಮಾರು 160 ಕಿಲೊಮೀಟರುಗಳ ದೂರದಲ್ಲಿರುವ ಪೀಟರ್ಸ್‌ಬರ್ಗ್‌ ಕ್ಷೇತ್ರದ ಯೆಹೋವನ ಸಾಕ್ಷಿಗಳ ಸಹಾಯದಿಂದ, ಪಕ್ಕದಲ್ಲಿರುವ ಟಾಹಾಯಾಂಡಾವು ಪಟ್ಟಣದಲ್ಲಿ ಒಂದು ರಾಜ್ಯ ಸಭಾಗೃಹವು ಕಟ್ಟಲ್ಪಟ್ಟಿತು.

ದಕ್ಷಿಣ ಆಫ್ರಿಕದ ಉತ್ತರಭಾಗದಲ್ಲಿರುವ ವೆಂಡ ಜನರ ಸಂಖ್ಯೆಯು 5,00,000ಕ್ಕಿಂತಲೂ ಹೆಚ್ಚಾಗಿದೆ. 1950ಗಳಲ್ಲಿ ರಾಜ್ಯ ಸಾರುವಿಕೆಯು ಅಲ್ಲಿ ಪ್ರಾರಂಭಿಸಿದಾಗ, ಅಲ್ಲಿ ವೆಂಡ ಸಾಕ್ಷಿಗಳಿರಲಿಲ್ಲ. ಈಗ 150ಕ್ಕಿಂತಲೂ ಹೆಚ್ಚಿನ ಸಾಕ್ಷಿಗಳಿದ್ದಾರೆ. ಆದರೆ ಸಾರಲ್ಪಡದ ಕ್ಷೇತ್ರಗಳು ಅನೇಕ ಇರುವ ಕಾರಣ, ಬಹಳಷ್ಟು ಕೆಲಸ ಇನ್ನೂ ಮಾಡಲಿಕ್ಕಿದೆ. 1989ರಲ್ಲಿ ನಾವು ಹಾಮುಟ್‌ಶಾ ಎಂಬ ವೆಂಡ ಹಳ್ಳಿಯನ್ನು ಸಂದರ್ಶಿಸಲಾರಂಭಿಸಿದೆವು. ಆ ಸಮಯದಲ್ಲಿ ಕೇವಲ ಒಬ್ಬ ಸಾಕ್ಷಿಯು ಅಲ್ಲಿದ್ದನು. ಆದರೆ ಈಗ ಆ ಹಳ್ಳಿಯಲ್ಲಿ ಸುಮಾರು 40 ರಾಜ್ಯ ಪ್ರಚಾರಕರಿದ್ದಾರೆ. ಅಲ್ಲಿಯೂ ಒಂದು ರಾಜ್ಯ ಸಭಾಗೃಹದ ನಿರ್ಮಾಣವನ್ನು ಪೂರ್ಣಗೊಳಿಸುವುದರಲ್ಲಿ ನಾವು ಕಾರ್ಯಮಗ್ನರಾಗಿದ್ದೇವೆ. ಪೀಟರ್ಸ್‌ಬರ್ಗ್‌ ಸಭೆಗಳ ಸಾಕ್ಷಿಗಳಿಂದ ಬಂದ ನೆರವು ಮತ್ತು ಶ್ರೀಮಂತ ರಾಷ್ಟ್ರಗಳಲ್ಲಿರುವ ಸಹೋದರರಿಂದ ಬಂದ ಆರ್ಥಿಕ ಸಹಾಯಕ್ಕೆ ನಾವು ಉಪಕಾರ ಸಲ್ಲಿಸುತ್ತೇವೆ.

ನಾವು ಒಂದು ಹೊಲದಲ್ಲಿ ನೆಲೆಸಿರುವ ಕ್ಯಾರವನ್‌ (ಚಿಕ್ಕ ಬಂಡಿ)ನಲ್ಲಿ ವಾಸಿಸುತ್ತೇವೆ. ನಮ್ಮ ಜೀವನವನ್ನು ಸರಳವಾಗಿಟ್ಟುಕೊಳ್ಳುವ ಮೂಲಕ, ಸ್ಥಳಿಕ ಜನರಿಗೆ ಸುವಾರ್ತೆಯನ್ನು ನೀಡಲು ನಮ್ಮಲ್ಲಿ ಸಾಕಷ್ಟು ಸಮಯವಿರುತ್ತದೆ. (ಮಾರ್ಕ 13:10) ಈ ಕಾರಣ, ಅನೇಕರು ತಮ್ಮ ಜೀವಿತಗಳನ್ನು ಯೆಹೋವ ದೇವರಿಗೆ ಸಮರ್ಪಿಸಿಕೊಳ್ಳುವಂತೆ ಸಹಾಯಮಾಡುವ ಸುಯೋಗದಿಂದ ನಾವು ಹೇರಳವಾಗಿ ಆಶೀರ್ವದಿಸಲ್ಪಟ್ಟಿದ್ದೇವೆ. ಒಂದು ಉದಾಹರಣೆಯು, ಮೈಕಲ್‌ ಎಂಬ ವ್ಯಕ್ತಿಯದ್ದು. ಇವನು ಮಿತ್ರನೊಬ್ಬನ ಮನೆಯಲ್ಲಿ ನೀವು ಸದಾಕಾಲ ಭೂಮಿಯ ಮೇಲೆ ಪ್ರಮೋದವನದಲ್ಲಿ ಜೀವಿಸಬಲ್ಲಿರಿ ಎಂಬ ಪುಸ್ತಕವನ್ನು ನೋಡಿದನು.a ಅದನ್ನು ಓದಲಾರಂಭಿಸಿದ ಕೂಡಲೇ ಅದರಲ್ಲಿರುವ ಸತ್ಯವನ್ನು ಗ್ರಹಿಸಿಕೊಂಡನು. ಆದುದರಿಂದ ಹೆಚ್ಚಿನ ಬೈಬಲ್‌ ಸಾಹಿತ್ಯಕ್ಕಾಗಿ ಅವನು ವಾಚ್‌ ಟವರ್‌ ಸೊಸೈಟಿಗೆ ಪತ್ರಬರೆದನು. ತಾನು ಇತ್ತೀಚೆಗೆ ಸ್ಥಳಿಕ ಅಪೊಸ್ಟಾಲಿಕ್‌ ಚರ್ಚಿನ ಸದಸ್ಯನಾಗಿ ದೀಕ್ಷಾಸ್ನಾನ ಪಡೆದಿರುವ ವಿಷಯವನ್ನು ಮೈಕಲ್‌ ತನ್ನ ಪತ್ರದಲ್ಲಿ ಬರೆದನು. ಅವನು ಮುಂದುವರಿಸಿ ತಿಳಿಸಿದ್ದು, “ನಾನು ದೇವರ ರಾಜ್ಯಕ್ಕೆ ನಡೆಸದ ತಪ್ಪಾದ ದಾರಿಯಲ್ಲಿದ್ದೇನೆಂದು ನನಗೆ ತಿಳಿದುಬಂದಿದೆ. ನಿಮ್ಮ ಸದಸ್ಯರಲ್ಲಿ ಒಬ್ಬನಾಗಲು ನಾನು ನಿರ್ಧರಿಸಿರುವುದಾದರೂ, ಏನು ಮಾಡಬೇಕೆಂದು ನನಗೆ ಗೊತ್ತಿಲ್ಲ.” ತನ್ನ ವಿಳಾಸವನ್ನು ಕೊಟ್ಟು, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ತನಗೆ ಸಹಾಯ ನೀಡುವಂತೆ ಕಳುಹಿಸಲ್ಪಡಬೇಕೆಂದು ವಿನಂತಿಸಿಕೊಂಡನು. ನಾನು ಮೈಕಲನ್ನು ಕಂಡುಹಿಡಿದು, ಅವನೊಂದಿಗೆ ಒಂದು ಮನೆ ಬೈಬಲ್‌ ಅಧ್ಯಯನವನ್ನು ಆರಂಭಿಸಿದೆ. ಇಂದು, ಅವನೊಬ್ಬ ಸ್ನಾತ ಸಾಕ್ಷಿಯಾಗಿದ್ದು, ನಿಷ್ಠೆಯಿಂದ ಯೆಹೋವನನ್ನು ಸೇವಿಸುತ್ತಾನೆ.

ಡಿಸೆಂಬರ್‌ 1997ರಲ್ಲಿ ನಾವು ಯೆಹೋವನ ಸಾಕ್ಷಿಗಳ “ದೇವರ ವಾಕ್ಯದಲ್ಲಿ ನಂಬಿಕೆ” ಎಂಬ ಜಿಲ್ಲಾ ಅಧಿವೇಶನಕ್ಕೆ ಹಾಜರಾದೆವು. ಅದು ಟಾಹಾಯಾಂಡಾವು ಕ್ರೀಡಾಂಗಣದಲ್ಲಿ ನಡೆಸಲ್ಪಟ್ಟಿತು. ಅಲ್ಲಿ 634 ಜನರು ಹಾಜರಿದ್ದು, 12 ಹೊಸಬರು ದೀಕ್ಷಾಸ್ನಾನ ಪಡೆದುಕೊಂಡರು. ವೆಂಡ ಭಾಷೆಯಲ್ಲಿ ಎರಡು ಭಾಷಣಗಳನ್ನು ನೀಡುವ ಸುಯೋಗವು ನನಗೊದಗಿತು. ಅದು ನಿಜವಾಗಿಯೂ ಈ ಫಲಪ್ರದ ನಾಡಿನಲ್ಲಿ ನಾವು ಕಳೆದಿರುವ ಆನಂದಭರಿತ ದಶಕದ ಒಂದು ಮುಖ್ಯಾಂಶವಾಗಿತ್ತು!—ದತ್ತುಲೇಖನ.

[ಅಧ್ಯಯನ ಪ್ರಶ್ನೆಗಳು]

a ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿತ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ