ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 5/1 ಪು. 4-7
  • ಎಲ್ಲರೂ ಸ್ವತಂತ್ರರಾಗಿರುವರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಲ್ಲರೂ ಸ್ವತಂತ್ರರಾಗಿರುವರು
  • ಕಾವಲಿನಬುರುಜು—1999
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ಈಗಿನ ಕಾಲದ ಕಷ್ಟಗಳು”
  • “ವ್ಯರ್ಥತ್ವಕ್ಕೆ ಒಳಗಾಯಿತು”
  • ‘ದೇವಪುತ್ರರ . . . ಪ್ರತ್ಯಕ್ಷವಾಗುವಿಕೆ’
  • ಕೊನೆಗೂ ನಿಜವಾದ ಸ್ವಾತಂತ್ರ್ಯ
  • ಒಂದು ಸ್ವತಂತ್ರ ಜನಾಂಗ ಆದರೆ ಲೆಕ್ಕತೆರಬೇಕಾದವರು
    ಕಾವಲಿನಬುರುಜು—1992
  • ದೇವ-ದತ್ತ ಸ್ವಾತಂತ್ರ್ಯದ ಉದ್ದೇಶವನ್ನು ವ್ಯರ್ಥಮಾಡಿಕೊಳ್ಳಬೇಡಿರಿ
    ಕಾವಲಿನಬುರುಜು—1992
  • ನಿಜ ಸ್ವಾತಂತ್ರ್ಯದ ದೇವರಾದ ಯೆಹೋವನ ಸೇವೆ ಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ನಿಜ ಸ್ವಾತಂತ್ರ್ಯ ಸಿಗುವ ವಿಧ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
ಇನ್ನಷ್ಟು
ಕಾವಲಿನಬುರುಜು—1999
w99 5/1 ಪು. 4-7

ಎಲ್ಲರೂ ಸ್ವತಂತ್ರರಾಗಿರುವರು

“ನಮಗೋಸ್ಕರ ಮುಂದಿನ ಕಾಲದಲ್ಲಿ ಪ್ರತ್ಯಕ್ಷವಾಗುವ ಮಹಿಮಪದವಿಯನ್ನು ಆಲೋಚಿಸಿ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ ಎಂದು ಎಣಿಸುತ್ತೇನೆ. ದೇವಪುತ್ರರ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೆಂದು ಜಗತ್ತು [“ಸೃಷ್ಟಿ,” NW] ಬಹು ಲವಲವಿಕೆಯಿಂದ ಎದುರು ನೋಡುತ್ತಿರುವದು. ಜಗತ್ತು [“ಸೃಷ್ಟಿ,” NW] ವ್ಯರ್ಥತ್ವಕ್ಕೆ ಒಳಗಾಯಿತು; ಹೀಗೆ ಒಳಗಾದದ್ದು ಸ್ವೇಚ್ಛೆಯಿಂದಲ್ಲ, ಅದನ್ನು ಒಳಪಡಿಸಿದವನ ಸಂಕಲ್ಪದಿಂದಲೇ. ಆದರೂ ಅದಕ್ಕೊಂದು ನಿರೀಕ್ಷೆಯುಂಟು; ಏನಂದರೆ ಆ ಜಗತ್ತು [“ಸೃಷ್ಟಿ,” NW] ಕೂಡ ನಾಶದ ವಶ [“ದಾಸತ್ವ,” NW]ದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವದೇ. ಜಗತ್ತೆಲ್ಲಾ [“ಸೃಷ್ಟಿಯೆಲ್ಲಾ,” NW] ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆಂದು ನಾವು ಬಲ್ಲೆವು.”—ರೋಮಾಪುರ 8:18-22.

ರೋಮಿನಲ್ಲಿದ್ದ ಕ್ರೈಸ್ತರಿಗೆ ಬರೆದ ತನ್ನ ಪತ್ರದ ಈ ಭಾಗದಲ್ಲಿ, ಜನರ ಜೀವಿತಗಳಲ್ಲಿ ನಿಜವಾದ ಸ್ವಾತಂತ್ರ್ಯದ ಕೊರತೆ ಏಕಿದೆ ಮತ್ತು ಅದು ಅನೇಕ ವೇಳೆ ಶೂನ್ಯಭಾವನೆ ಹಾಗೂ ವೇದನೆಯಿಂದ ತುಂಬಿರುವುದು ಏಕೆ ಎಂಬುದಕ್ಕೆ ಅಪೊಸ್ತಲ ಪೌಲನು ಎದ್ದುಕಾಣುವ ಸಾರಾಂಶವನ್ನು ಒದಗಿಸುತ್ತಾನೆ. ನಾವು ನಿಜವಾದ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವುದು ಹೇಗೆಂಬುದನ್ನೂ ಅವನು ವಿವರಿಸುತ್ತಾನೆ.

“ಈಗಿನ ಕಾಲದ ಕಷ್ಟಗಳು”

“ನಮಗೋಸ್ಕರ ಮುಂದಿನ ಕಾಲದಲ್ಲಿ ಪ್ರತ್ಯಕ್ಷವಾಗುವ ಮಹಿಮಪದವಿಯನ್ನು ಆಲೋಚಿಸಿ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ” ಎಂದು ಹೇಳುವಾಗ, ಪೌಲನು ಆ ಕಷ್ಟಗಳನ್ನು ನಿಕೃಷ್ಟಗೊಳಿಸುವುದಿಲ್ಲ. ಪೌಲನ ಸಮಯದಲ್ಲಿ ಮತ್ತು ಅನಂತರವೂ, ಮಾನವ ಹಕ್ಕುಗಳ ಬಗ್ಗೆ ಕಿಂಚಿತ್ತೂ ಚಿಂತಿಸದ ರೋಮನ್‌ ಅಧಿಕಾರಿಗಳ ಕಠೋರ ನಿರಂಕುಶಾಧಿಕಾರದ ಕೆಳಗೆ ಕ್ರೈಸ್ತರು ಬಹಳವಾಗಿ ಕಷ್ಟಾನುಭವಿಸಿದರು. ಕ್ರೈಸ್ತರು ರಾಜ್ಯದ ವೈರಿಗಳೆಂದು ರೋಮ್‌ಗೆ ಮನವರಿಕೆಯಾದಾಗ, ಅದು ಅವರನ್ನು ಕ್ರೂರವಾದ ದಬ್ಬಾಳಿಕೆಗೆ ಅಧೀನಪಡಿಸಿತು. ಇತಿಹಾಸಕಾರ ಜೆ. ಎಮ್‌. ರಾಬರ್ಟ್ಸ್‌ ಹೇಳುವುದು: “ರಾಜಧಾನಿ [ರೋಮ್‌]ಯಲ್ಲಿ ಅನೇಕ ಕ್ರೈಸ್ತರು, ಅಖಾಡದಲ್ಲಿ ಭಯಂಕರವಾದ ಹಿಂಸೆಗೆ ಬಲಿಯಾಗಿ ಮಡಿದರು ಇಲ್ಲವೆ ಜೀವಂತವಾಗಿ ಸುಡಲ್ಪಟ್ಟರು.” (ಲೋಕದ ಸಂಕ್ಷಿಪ್ತ ಇತಿಹಾಸ, ಇಂಗ್ಲಿಷ್‌) ನೀರೊವಿನ ಹಿಂಸೆಗೆ ಗುರಿಯಾದ ಈ ಬಲಿಗಳ ಕುರಿತು ಮತ್ತೊಂದು ವರದಿಯು ಹೇಳುವುದು: “ಕೆಲವರನ್ನು ಶಿಲುಬೆಗೇರಿಸಲಾಯಿತು, ಕೆಲವರು ಪ್ರಾಣಿಗಳ ಚರ್ಮದಿಂದ ಹೊದಿಸಲ್ಪಟ್ಟು ನಾಯಿಗಳಿಂದ ಬೇಟೆಯಾಡಲ್ಪಟ್ಟರು, ಕೆಲವರ ಮೇಲೆ ಕಪ್ಪು ರಾಳವನ್ನು ಸುರಿಸಿ, ಬೆಂಕಿಯನ್ನು ಹೊತ್ತಿಸಿದರು. ಕತ್ತಲೆಯು ಆವರಿಸಿದಾಗ ಇವರನ್ನು ಜೀವಂತ ದೀವಟಿಗೆಗಳಾಗಿ ಬಳಸಲಾಯಿತು.”—ಎಫ್‌. ಎಫ್‌. ಬ್ರೂಸ್‌ ಅವರ ಹೊಸ ಒಡಂಬಡಿಕೆಯ ಇತಿಹಾಸ (ಇಂಗ್ಲಿಷ್‌).

ಇಂತಹ ದಬ್ಬಾಳಿಕೆಯಿಂದ ಸ್ವತಂತ್ರರಾಗಿರಲು ಆ ಆದಿ ಕ್ರೈಸ್ತರು ಖಂಡಿತವಾಗಿಯೂ ಬಯಸಿದ್ದಿರಬಹುದು. ಆದರೆ ಅದನ್ನು ಅನುಭವಿಸಲಿಕ್ಕಾಗಿ ಯೇಸು ಕ್ರಿಸ್ತನ ಬೋಧನೆಗಳನ್ನು ಉಲ್ಲಂಘಿಸಲು ಅವರು ಸಿದ್ಧರಾಗಿರಲಿಲ್ಲ. ಉದಾಹರಣೆಗೆ, ಆಳ್ವಿಕೆ ನಡೆಸುತ್ತಿದ್ದ ರೋಮನ್‌ ಅಧಿಕಾರಿಗಳು ಮತ್ತು ಹಠೋತ್ಸಾಹಿಗಳಂತಹ ಯೆಹೂದಿ ಸ್ವಾತಂತ್ರ್ಯ ಹೋರಾಟಗಾರರ ನಡುವಿನ ಸಂಘರ್ಷಣೆಯಲ್ಲಿ ಅವರು ಸಂಪೂರ್ಣವಾಗಿ ತಟಸ್ಥರಾಗಿದ್ದರು. (ಯೋಹಾನ 17:16; 18:36) ಹಠೋತ್ಸಾಹಿಗಳಿಗೆ, “ಕ್ಲುಪ್ತ ಕಾಲದಲ್ಲಿ ದೇವರ ಹಸ್ತಕ್ಷೇಪಕ್ಕಾಗಿ ಕಾಯುವುದರ ಕುರಿತಾದ ಮಾತುಕತೆಯು, ಸದ್ಯದ ಸಂಕಷ್ಟಕ್ಕೆ ಉತ್ತರವಾಗಿರಲಿಲ್ಲ.” ಅವರೆಣಿಕೆಯಲ್ಲಿ, ರೋಮಿನ ವಿರುದ್ಧ ಅಂದರೆ “ವೈರಿಯ ವಿರುದ್ಧ ಹಿಂಸಾತ್ಮಕ ಕ್ರಿಯೆಯೇ” ತಕ್ಕ ಉತ್ತರವಾಗಿತ್ತು. (ಹೊಸ ಒಡಂಬಡಿಕೆಯ ಇತಿಹಾಸ) ಆದರೆ, ಆದಿ ಕ್ರೈಸ್ತರ ಅಭಿಪ್ರಾಯವು ಭಿನ್ನವಾಗಿತ್ತು. “ಕ್ಲುಪ್ತ ಕಾಲದಲ್ಲಿ ದೇವರ ಹಸ್ತಕ್ಷೇಪಕ್ಕಾಗಿ ಕಾಯು”ವುದೇ ಅವರ ಏಕೈಕ ಆಯ್ಕೆಯಾಗಿತ್ತು. “ಈಗಿನ ಕಾಲದ ಕಷ್ಟಗಳ”ನ್ನು ಶಾಶ್ವತವಾಗಿ ಕೊನೆಗೊಳಿಸಿ, ನಿಜವಾದ ಹಾಗೂ ಬಾಳುವ ಸ್ವಾತಂತ್ರ್ಯವನ್ನು ದೈವಿಕ ಹಸ್ತಕ್ಷೇಪವಲ್ಲದೆ ಇನ್ಯಾವುದೂ ತರಲಾರದೆಂಬ ವಿಷಯದಲ್ಲಿ ಅವರು ನಿಶ್ಚಿತರಾಗಿದ್ದರು. (ಮೀಕ 7:7; ಹಬಕ್ಕೂಕ 2:3) ಆದರೆ, ಅದು ಹೇಗೆ ಸಂಭವಿಸುವುದೆಂಬುದನ್ನು ಪರಿಗಣಿಸುವ ಮೊದಲು, ‘ಸೃಷ್ಟಿ ವ್ಯರ್ಥತ್ವಕ್ಕೆ ಒಳ’ಗಾಗಿರುವುದು ಏಕೆಂಬುದನ್ನು ನಾವು ಪ್ರಥಮವಾಗಿ ಪರಿಶೀಲಿಸೋಣ.

“ವ್ಯರ್ಥತ್ವಕ್ಕೆ ಒಳಗಾಯಿತು”

ಇಲ್ಲಿರುವ “ಸೃಷ್ಟಿ” ಎಂಬ ಪದವು, ಕೆಲವರು ಸೂಚಿಸುವಂತೆ “ಜಡ ಹಾಗೂ ನಿರ್ಜೀವವುಳ್ಳ ಸೃಷ್ಟಿ”ಯನ್ನು ಅರ್ಥೈಸದೆ, “ಸಕಲ ಮಾನವಕುಲವನ್ನು” ಅರ್ಥೈಸುತ್ತದೆ ಎಂಬುದಾಗಿ, ದಿ ಎಮ್‌ಫಟಿಕ್‌ ಡೈಗ್ಲಾಟ್‌ನಲ್ಲಿ ಬೆಂಜಮಿನ್‌ ವಿಲ್ಸನ್‌ ಹೇಳುತ್ತಾರೆ. (ಕೊಲೊಸ್ಸೆ 1:23ನ್ನು ಹೋಲಿಸಿರಿ.) ಇದು, ಸ್ವಾತಂತ್ರ್ಯಕ್ಕಾಗಿ ಹಾತೊರೆಯುವ ನಮ್ಮೆಲ್ಲರನ್ನು, ಅಂದರೆ ಇಡೀ ಮಾನವ ಕುಟುಂಬವನ್ನು ಸೂಚಿಸುತ್ತದೆ. ನಾವು ನಮ್ಮ ಮೂಲ ಹೆತ್ತವರ ಕೃತ್ಯದ ಕಾರಣ ‘ವ್ಯರ್ಥತ್ವಕ್ಕೆ ಒಳಗಾದೆವು.’ ಇದು ಸಂಭವಿಸಿದ್ದು, “ಸ್ವೇಚ್ಛೆಯಿಂದಲ್ಲ” ಅಥವಾ ವ್ಯಕ್ತಿಗತ ಆಯ್ಕೆಯ ಪರಿಣಾಮದಿಂದಲ್ಲ. ಈ ಸ್ಥಿತಿಯನ್ನು ನಾವು ಪಿತ್ರಾರ್ಜಿತವಾಗಿ ಪಡೆದುಕೊಂಡೆವು. ಈ ಕಾರಣ ‘ಮನುಷ್ಯನು ಸ್ವತಂತ್ರನಾಗಿ ಜನಿಸಿದ್ದಾನೆಂದು’ ರೂಸ್ಸೊ ಹೇಳಿದ್ದನ್ನು ಶಾಸ್ತ್ರೀಯ ದೃಷ್ಟಿಕೋನದಿಂದ ಪರಿಶೀಲಿಸುವುದಾದರೆ, ಅವನ ಅಭಿಪ್ರಾಯವು ತಪ್ಪೆಂದು ತಿಳಿದುಬರುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರೂ ಪಾಪ ಮತ್ತು ಅಪರಿಪೂರ್ಣತೆಗೆ ದಾಸರಾಗಿ ಜನಿಸಿದೆವು. ಅಂದರೆ, ಆಶಾಭಂಗ ಮತ್ತು ವ್ಯರ್ಥತ್ವದಿಂದ ತುಂಬಿದ ಒಂದು ವ್ಯವಸ್ಥೆಗೆ ಗುಲಾಮರಾಗಿ ನಾವು ಹುಟ್ಟಿದೆವು.—ರೋಮಾಪುರ 3:23.

ಈ ರೀತಿಯ ಪರಿಸ್ಥಿತಿ ಏಕೆ ಉಂಟಾಯಿತು? ಏಕೆಂದರೆ ನಮ್ಮ ಮೂಲ ಹೆತ್ತವರಾದ ಆದಾಮ ಹವ್ವರು “ದೇವರಂತೆ” ಆಗಲು, ಅಂದರೆ ಯಾವುದು ಕೆಟ್ಟದ್ದು ಯಾವುದು ಒಳ್ಳೆಯದ್ದೆಂದು ಸ್ವತಃ ನಿರ್ಣಯಿಸುತ್ತಾ ಸಂಪೂರ್ಣ ಆತ್ಮನಿರ್ಣಯಾಧಿಕಾರವನ್ನು ಪಡೆಯಲು ಬಯಸಿದರು. (ಆದಿಕಾಂಡ 3:5) ಅವರು ಸ್ವಾತಂತ್ರ್ಯದ ವಿಷಯದಲ್ಲಿ ಒಂದು ಮುಖ್ಯ ಅಂಶವನ್ನು ಕಡೆಗಣಿಸಿದರು. ಸೃಷ್ಟಿಕರ್ತನಿಗೆ ಮಾತ್ರ ಸಂಪೂರ್ಣ ಸ್ವಾತಂತ್ರ್ಯವಿರಸಾಧ್ಯವಿದೆ. ಆತನು ವಿಶ್ವದ ಪರಮಾಧಿಕಾರಿ. (ಯೆಶಾಯ 33:22; ಪ್ರಕಟನೆ 4:11) ಮಾನವ ಸ್ವಾತಂತ್ರ್ಯವು ಸೀಮಿತ ಸ್ವಾತಂತ್ರ್ಯವಾಗಿದೆ. ಆದುದರಿಂದಲೇ, ತನ್ನ ದಿನದ ಕ್ರೈಸ್ತರಿಗೆ “ಬಿಡುಗಡೆಯನ್ನುಂಟುಮಾಡುವ ಸರ್ವೋತ್ತಮ ಧರ್ಮಪ್ರಮಾಣ”ಕ್ಕನುಸಾರ ನಡೆಯುವಂತೆ ಶಿಷ್ಯನಾದ ಯಾಕೋಬನು ಉತ್ತೇಜನ ನೀಡಿದನು.—ಯಾಕೋಬ 1:25.

ಯೆಹೋವನು ಯೋಗ್ಯವಾಗಿಯೇ ಆದಾಮಹವ್ವರನ್ನು ತನ್ನ ವಿಶ್ವ ಕುಟುಂಬದಿಂದ ಬಹಿಷ್ಕರಿಸಿದ ಕಾರಣ, ಅವರು ಸತ್ತುಹೋದರು. (ಆದಿಕಾಂಡ 3:19) ಆದರೆ, ಅವರ ಸಂತತಿಯವರ ಕುರಿತೇನು? ಅವರು ಅಪರಿಪೂರ್ಣತೆ, ಪಾಪ ಮತ್ತು ಮರಣಗಳನ್ನು ಮಾತ್ರ ದಾಟಿಸಸಾಧ್ಯವಿದ್ದರೂ, ಮಕ್ಕಳನ್ನು ಪಡೆಯುವ ಅನುಮತಿಯನ್ನು ಯೆಹೋವನು ಇನ್ನೂ ನೀಡಿರುವುದು ಆತನ ಕೃಪೆಯಿಂದಲೇ. “ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರ 5:12) ಈ ಅರ್ಥದಲ್ಲಿ ದೇವರು ‘[ಸೃಷ್ಟಿಯನ್ನು] ವ್ಯರ್ಥತ್ವಕ್ಕೆ ಒಳಪಡಿಸಿದನು.’

‘ದೇವಪುತ್ರರ . . . ಪ್ರತ್ಯಕ್ಷವಾಗುವಿಕೆ’

“ದೇವಪುತ್ರರ” ಚಟುವಟಿಕೆಗಳ ಮೂಲಕ ಮಾನವ ಕುಟುಂಬಕ್ಕೆ ಸ್ವಾತಂತ್ರ್ಯವು ಒಂದಲ್ಲ ಒಂದು ದಿನ ಪುನಸ್ಸ್ಥಾಪಿಸಲ್ಪಡುವುದೆಂಬ “ನಿರೀಕ್ಷೆ”ಯ ಆಧಾರದ ಮೇಲೆ ಯೆಹೋವನು ಸೃಷ್ಟಿಯನ್ನು ವ್ಯರ್ಥತ್ವಕ್ಕೆ ಒಳಪಡಿಸಿದನು. ಈ “ದೇವಪುತ್ರರು” ಯಾರಾಗಿದ್ದಾರೆ? ಇವರು ಉಳಿದೆಲ್ಲ “[ಮಾನವ] ಸೃಷ್ಟಿ”ಯಂತೆ, ಪಾಪ ಮತ್ತು ಅಪರಿಪೂರ್ಣತೆಗೆ ದಾಸರಾಗಿ ಜನಿಸಿದ ಯೇಸು ಕ್ರಿಸ್ತನ ಶಿಷ್ಯರಾಗಿದ್ದಾರೆ. ಜನ್ಮದಿಂದ ಅವರಿಗೆ ದೇವರ ಶುದ್ಧ, ಪರಿಪೂರ್ಣ ವಿಶ್ವ ಕುಟುಂಬದಲ್ಲಿ ನ್ಯಾಯವಾದ ಹಕ್ಕುಳ್ಳ ಸ್ಥಾನವಿರಲಿಲ್ಲ. ಆದರೆ ಯೆಹೋವನು ಅವರಿಗಾಗಿ ಗಮನಾರ್ಹವಾದೊಂದು ವಿಷಯವನ್ನು ಮಾಡುತ್ತಾನೆ. ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಮೂಲಕ, ಆತನು ಅವರನ್ನು ಪಿತ್ರಾರ್ಜಿತ ಪಾಪದ ದಾಸತ್ವದಿಂದ ಬಿಡುಗಡೆಗೊಳಿಸಿ, ಅವರನ್ನು “ನೀತಿವಂತ”ರೆಂದು ಇಲ್ಲವೆ ಆತ್ಮಿಕವಾಗಿ ಶುದ್ಧರೆಂದು ಘೋಷಿಸುತ್ತಾನೆ. (1 ಕೊರಿಂಥ 6:11) ತರುವಾಯ ಅವರನ್ನು “ದೇವಪುತ್ರ”ರಾಗಿ ದತ್ತುಸ್ವೀಕರಿಸಿ, ತನ್ನ ವಿಶ್ವ ಕುಟುಂಬದಲ್ಲಿ ಮತ್ತೆ ಸೇರಿಸಿಕೊಳ್ಳುತ್ತಾನೆ.—ರೋಮಾಪುರ 8:14-17.

ಯೆಹೋವನ ದತ್ತು ಪುತ್ರರೋಪಾದಿ ಅವರಿಗೊಂದು ಮಹಿಮಾಭರಿತ ಸುಯೋಗವಿರುವುದು. ಅವರು ದೇವರ ಸ್ವರ್ಗೀಯ ರಾಜ್ಯ ಇಲ್ಲವೆ ಸರಕಾರದ ಭಾಗದೋಪಾದಿ, ಯೇಸು ಕ್ರಿಸ್ತನೊಂದಿಗೆ “ನಮ್ಮ ದೇವರಿಗೋಸ್ಕರ . . . ಯಾಜಕ”ರಾಗಿರುವರು ಮತ್ತು “ಅವರು ಭೂಮಿಯ ಮೇಲೆ ಆಳುವರು.” (ಪ್ರಕಟನೆ 5:9, 10; 14:1-4) ಇದು ದಬ್ಬಾಳಿಕೆ ಹಾಗೂ ಪೀಡಕ ಪ್ರಭುತ್ವವಲ್ಲ, ಸ್ವಾತಂತ್ರ್ಯ ಹಾಗೂ ನ್ಯಾಯದ ತತ್ವಗಳ ಮೇಲೆ ದೃಢವಾಗಿ ಸ್ಥಾಪಿಸಲ್ಪಟ್ಟಿರುವ ಒಂದು ಸರಕಾರವಾಗಿದೆ. (ಯೆಶಾಯ 9:6, 7; 61:1-4) ಈ ದೇವಪುತ್ರರು, ವಾಗ್ದಾನಿತ ‘ಅಬ್ರಹಾಮನ ಸಂತಾನ’ವಾಗಿರುವ ಯೇಸುವಿನ ಸಹಭಾಗಿಗಳೆಂದು ಅಪೊಸ್ತಲ ಪೌಲನು ಹೇಳುತ್ತಾನೆ. (ಗಲಾತ್ಯ 3:16, 26, 29) ದೇವರು ತನ್ನ ಮಿತ್ರನಾದ ಅಬ್ರಹಾಮನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವುದರಲ್ಲಿ ಅವರು ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಆ ವಾಗ್ದಾನದ ಒಂದು ಭಾಗವು ಏನೆಂದರೆ, ಅಬ್ರಹಾಮನ ಸಂತಾನದ ಮೂಲಕ “ಎಲ್ಲಾ ಜನಾಂಗಗಳಿಗೂ . . . ಆಶೀರ್ವಾದವುಂಟಾಗುವದು.”—ಆದಿಕಾಂಡ 22:18.

ಅವರು ಮಾನವಕುಲಕ್ಕೆ ಯಾವ ಆಶೀರ್ವಾದವನ್ನು ತರುತ್ತಾರೆ? ಇಡೀ ಮಾನವ ಕುಟುಂಬವನ್ನು ಆದಾಮಸಂಬಂಧಿತ ಪಾಪದ ಭಯಂಕರ ಪರಿಣಾಮಗಳಿಂದ ಬಿಡುಗಡೆಗೊಳಿಸಿ, ಮಾನವಕುಲವನ್ನು ಪರಿಪೂರ್ಣತೆಗೆ ಪುನಸ್ಸ್ಥಾಪಿಸುವುದರಲ್ಲಿ ದೇವಪುತ್ರರು ಭಾಗವಹಿಸುವರು. “ಸಕಲ ಜನಾಂಗ ಕುಲ ಪ್ರಜೆ”ಗಳಿಂದ ಬಂದ ಜನರು, ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯನ್ನಿಡುವ ಮೂಲಕ ಮತ್ತು ಅವನ ಉದಾತ್ತ ರಾಜ್ಯದಾಳ್ವಿಕೆಗೆ ಅಧೀನರಾಗುವ ಮೂಲಕ, ಆಶೀರ್ವಾದವನ್ನು ಪಡೆದುಕೊಳ್ಳಬಹುದು. (ಪ್ರಕಟನೆ 7:9, 14-17; 21:1-4; 22:1, 2; ಮತ್ತಾಯ 20:28; ಯೋಹಾನ 3:16) ಈ ರೀತಿಯಲ್ಲಿ ‘ಸೃಷ್ಟಿಯೆಲ್ಲಾ’ ಮತ್ತೊಮ್ಮೆ ‘ದೇವರ ಮಕ್ಕಳ ಮಹಿಮೆಯುಳ್ಳ ಸ್ವಾತಂತ್ರ್ಯದಲ್ಲಿ’ ಆನಂದಿಸುವುದು. ಇದು ಸೀಮಿತ ಹಾಗೂ ತಾತ್ಕಾಲಿಕವಾದ ರಾಜಕೀಯ ಸ್ವಾತಂತ್ರ್ಯವಲ್ಲ, ಬದಲಿಗೆ ಆದಾಮಹವ್ವರು ದೇವರ ಪರಮಾಧಿಕಾರವನ್ನು ತಿರಸ್ಕರಿಸಿದಂದಿನಿಂದ ಮಾನವ ಕುಟುಂಬವು ಅನುಭವಿಸಿರುವ ವೇದನೆ ಹಾಗೂ ಸಂಕಷ್ಟದ ಎಲ್ಲ ವಿಷಯಗಳಿಂದ ಬಿಡುಗಡೆಯಾಗಿರುವುದು. ಈ ನಂಬಿಗಸ್ತರು ಮಾಡಲಿರುವ ಮಹಿಮೆಯುಳ್ಳ ಸೇವೆಗೆ ಹೋಲಿಸುವಾಗ, “ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ” ಎಂದು ಅಪೊಸ್ತಲ ಪೌಲನು ಹೇಳಿದುದರಲ್ಲಿ ಯಾವ ಆಶ್ಚರ್ಯವೂ ಇಲ್ಲ!

‘ದೇವಪುತ್ರರ ಪ್ರತ್ಯಕ್ಷವಾಗುವಿಕೆ’ ಯಾವಾಗ ಆರಂಭಗೊಳ್ಳುತ್ತದೆ? ಬಲುಬೇಗನೆ ದೇವಪುತ್ರರು ಯಾರೆಂಬುದನ್ನು ಯೆಹೋವನು ಸ್ಪಷ್ಟಪಡಿಸಿದಾಗ ಅದು ಆರಂಭಗೊಳ್ಳುತ್ತದೆ. ಆತ್ಮ ಕ್ಷೇತ್ರಕ್ಕೆ ಪುನರುತ್ಥಿತರಾದ ಈ “ಪುತ್ರರು” ಯೇಸು ಕ್ರಿಸ್ತನೊಂದಿಗೆ ಸೇರಿ, ಹರ್ಮಗೆದೋನ್‌ ಎಂಬ ದೇವರ ಯುದ್ಧದಲ್ಲಿ ಭೂಮಿಯಿಂದ ಎಲ್ಲ ದುಷ್ಟತನ ಹಾಗೂ ದಬ್ಬಾಳಿಕೆಯನ್ನು ತೆಗೆದುಬಿಡುವಾಗ ಇದು ಆರಂಭಗೊಳ್ಳುವುದು. (ದಾನಿಯೇಲ 2:44; 7:13, 14, 27; ಪ್ರಕಟನೆ 2:26, 27; 16:16; 17:14; 19:11-21) ನಾವು “ಕಡೇ ದಿವಸಗಳ” ಕೊನೆಯ ಭಾಗದಲ್ಲಿದ್ದೇವೆ ಎಂಬುದಕ್ಕೆ ನಮ್ಮ ಸುತ್ತಲೂ ಬಹಳಷ್ಟು ಪ್ರಮಾಣವನ್ನು ನೋಡುತ್ತೇವೆ. ಇದು, ದೇವರು ಇಷ್ಟರ ವರೆಗೆ ತಾಳಿಕೊಂಡಿರುವ ದಂಗೆ ಮತ್ತು ಅದು ಉಂಟುಮಾಡಿದ ದುಷ್ಟತನವನ್ನು ಕೊನೆಗೊಳಿಸುವ ಸಮಯವಾಗಿರುವುದು.—2 ತಿಮೊಥೆಯ 3:1-5; ಮತ್ತಾಯ 24:3-31.

ಹೌದು, “ಸೃಷ್ಟಿಯೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆಂದು” ಅಪೊಸ್ತಲ ಪೌಲನು ಹೇಳಿದ್ದು ಸತ್ಯವಾಗಿದ್ದರೂ, ಅದು ಇನ್ನೂ ಹೆಚ್ಚು ಕಾಲ ಮುಂದುವರಿಯಲಾರದು. ಈಗ ಜೀವಿಸುತ್ತಿರುವ ಲಕ್ಷಾಂತರ ಜನರು, ಇಡೀ ಮಾನವ ಕುಟುಂಬಕ್ಕೆ ಶಾಂತಿ, ಸ್ವಾತಂತ್ರ್ಯ, ಹಾಗೂ ನ್ಯಾಯದ ಪುನಸ್ಸ್ಥಾಪನೆಯೊಂದಿಗೆ, ‘ದೇವರು ಪೂರ್ವದಲ್ಲಿದ್ದ ತನ್ನ ಪರಿಶುದ್ಧ ಪ್ರವಾದಿಗಳ ಬಾಯಿಂದ ಹೇಳಿಸಿದ, ಸಮಸ್ತವನ್ನು ಸರಿಮಾಡುವ ಕಾಲವನ್ನು’ ಎದುರುನೋಡುವರು.—ಅ. ಕೃತ್ಯಗಳು 3:21.

ಕೊನೆಗೂ ನಿಜವಾದ ಸ್ವಾತಂತ್ರ್ಯ

“ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆ”ಯನ್ನು ಅನುಭವಿಸಲು ನೀವು ಏನು ಮಾಡತಕ್ಕದ್ದು? ಯೇಸು ಕ್ರಿಸ್ತನು ಹೇಳಿದ್ದು: “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ ನಿಜವಾಗಿ ನನ್ನ ಶಿಷ್ಯರಾಗಿದ್ದು ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.” (ಯೋಹಾನ 8:31, 32) ಸ್ವಾತಂತ್ರ್ಯಕ್ಕಾಗಿರುವ ಕೀಲಿ ಕೈ ಇದೇ ಆಗಿದೆ, ಅಂದರೆ ಕ್ರಿಸ್ತನ ಆಜ್ಞೆಗಳನ್ನು ಮತ್ತು ಬೋಧನೆಗಳನ್ನು ಕಲಿತು, ಅದಕ್ಕೆ ವಿಧೇಯರಾಗುವುದು. ಇದು ಈಗಲೂ ಒಂದಿಷ್ಟು ಮಟ್ಟಿಗಿನ ಸ್ವಾತಂತ್ರ್ಯವನ್ನು ತರುತ್ತದೆ. ಹತ್ತಿರದ ಭವಿಷ್ಯತ್ತಿನಲ್ಲಿ, ಕ್ರಿಸ್ತ ಯೇಸುವಿನ ಆಳ್ವಿಕೆಯ ಕೆಳಗೆ ಅದು ಸಂಪೂರ್ಣ ಸ್ವಾತಂತ್ರ್ಯವನ್ನು ತರುವುದು. ಬೈಬಲಿನ ಅಧ್ಯಯನದ ಮೂಲಕ ಯೇಸುವಿನ “ವಾಕ್ಯ”ವನ್ನು ತಿಳಿದುಕೊಳ್ಳುವುದೇ ವಿವೇಕದ ಮಾರ್ಗಕ್ರಮವಾಗಿದೆ. (ಯೋಹಾನ 17:3) ಆದಿ ಕ್ರೈಸ್ತರಂತೆ ಕ್ರಿಸ್ತನ ನಿಜ ಶಿಷ್ಯರ ಸಭೆಯೊಂದಿಗೆ ಸಕ್ರಿಯವಾಗಿ ಸಹವಸಿಸಿರಿ. ಹೀಗೆ ಮಾಡುವ ಮೂಲಕ, ಇಂದು ಯೆಹೋವನು ತನ್ನ ಸಂಸ್ಥೆಯ ಮೂಲಕ ಲಭ್ಯಗೊಳಿಸುವ ವಿಮೋಚನಾತ್ಮಕ ಸತ್ಯಗಳಿಂದ ನೀವು ಪ್ರಯೋಜನ ಪಡೆದುಕೊಳ್ಳಬಲ್ಲಿರಿ.—ಇಬ್ರಿಯ 10:24, 25.

‘ದೇವಪುತ್ರರ ಪ್ರತ್ಯಕ್ಷವಾಗುವಿಕೆಯನ್ನು ಎದುರುನೋಡುತ್ತಿರುವಾಗ,’ ಕಷ್ಟಾನುಭವಗಳು ಮತ್ತು ಅನ್ಯಾಯಗಳು ಬಹುಮಟ್ಟಿಗೆ ಸಹಿಸಲಸಾಧ್ಯವಾಗಿರುವಂತೆ ತೋರಿದರೂ, ಕ್ರಿಸ್ತನ ಸಂರಕ್ಷಕ ಆರೈಕೆ ಹಾಗೂ ಸಮರ್ಥನೆಯಲ್ಲಿ ಅಪೊಸ್ತಲ ಪೌಲನಿಗಿದ್ದ ಭರವಸೆಯನ್ನು ನೀವೂ ವಿಕಸಿಸಿಕೊಳ್ಳಬಹುದು. ದೇವಪುತ್ರರ ಪ್ರತ್ಯಕ್ಷವಾಗುವಿಕೆಯನ್ನು ಚರ್ಚಿಸಿದ ಬಳಿಕ, ಪೌಲನು ಕೇಳಿದ್ದು: “ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು? ಕಷ್ಟವೋ ಸಂಕಟವೋ ಹಿಂಸೆಯೋ ಅನ್ನವಿಲ್ಲದಿರುವದೋ ವಸ್ತ್ರವಿಲ್ಲದಿರುವದೋ ಗಂಡಾಂತರವೋ ಖಡ್ಗವೋ?” (ರೋಮಾಪುರ 8:35) ಹೌದು, ರೂಸೊ ಅವರ ಮಾತಿಗನುಸಾರ, ಪೌಲನ ದಿನದಲ್ಲಿದ್ದ ಕ್ರೈಸ್ತರು ಒಂದಲ್ಲ ಒಂದು ವಿಧದ ದಬ್ಬಾಳಿಕೆಯ “ಸರಪಳಿಗಳಲ್ಲಿ ಬಂಧಿತರಾಗಿದ್ದರು.” ಅವರು “ಕೊಯ್ಗುರಿಗಳಂತೆ ದಿನವೆಲ್ಲಾ ಕೊಲೆಗೆ ಗುರಿಯಾಗಿ”ದ್ದರು. (ರೋಮಾಪುರ 8:36) ಈ ಪರಿಸ್ಥಿತಿಗಳು ಅವರನ್ನು ಪೂರ್ತಿಯಾಗಿ ಮುಳುಗಿಸುವಂತೆ ಅವರು ಅನುಮತಿಸಿದರೊ?

ಪೌಲನು ಬರೆಯುವುದು: “ಆದರೆ ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ ನಾವು ಈ ಎಲ್ಲಾ ವಿಷಯಗಳಲ್ಲಿ ಪೂರ್ಣ ಜಯಶಾಲಿಗಳಾಗುತ್ತೇವೆ.” (ರೋಮಾಪುರ 8:37) ಆ ಆದಿ ಕ್ರೈಸ್ತರು ಎಲ್ಲ ಸಂಕಟಗಳ ಮಧ್ಯದಲ್ಲಿಯೂ ಜಯಶಾಲಿಗಳಾಗಿದ್ದರೊ? ಅದು ಹೇಗೆ? ಅವನು ಉತ್ತರನೀಡುತ್ತಾ ಹೇಳುವುದು: “ಹೇಗಂದರೆ ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಮಹತ್ವಗಳಾಗಲಿ ಮೇಲಣ ಲೋಕವಾಗಲಿ ಕೆಳಗಣ ಲೋಕವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು.” (ರೋಮಾಪುರ 8:38, 39) ಈ ಮಧ್ಯೆ ನೀವು ತಾಳಿಕೊಳ್ಳಬೇಕಾದ ಯಾವುದೇ ‘ಕಷ್ಟ ಇಲ್ಲವೆ ಸಂಕಟ ಇಲ್ಲವೆ ಹಿಂಸೆ’ಯಿಂದ “ಜಯಶಾಲಿಗಳಾಗ”ಬಹುದು. ಬಹು ಬೇಗನೆ ನಾವು “[ಎಲ್ಲ] ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದು”ವೆವೆಂದು ದೇವರ ಪ್ರೀತಿಯು ನಮಗೆ ಖಾತ್ರಿಯನ್ನು ನೀಡುತ್ತದೆ.

[ಪುಟ 6 ರಲ್ಲಿರುವ ಚಿತ್ರ]

“ಸೃಷ್ಟಿಯೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆ”

[ಪುಟ 7 ರಲ್ಲಿರುವ ಚಿತ್ರ]

‘ಸೃಷ್ಟಿಯು ಎಲ್ಲ ದಾಸತ್ವದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವುದು’

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ