ಎಲ್ಲರೂ ಸ್ವತಂತ್ರರಾಗಿರಲು ಬಯಸುತ್ತಾರೆ
“ಮನುಷ್ಯನು ಸ್ವತಂತ್ರನಾಗಿ ಜನಿಸಿದ್ದರೂ, ಎಲ್ಲೆಡೆಯಿಂದಲೂ ಸರಪಳಿಗಳಿಂದ ಬಂಧಿತನಾಗಿದ್ದಾನೆ,” ಎಂಬುದಾಗಿ ಫ್ರೆಂಚ್ ತತ್ವಜ್ಞಾನಿ ಷಾನ್ ಷಾಕ್ ರೂಸೋ 1762ರಲ್ಲಿ ಬರೆದನು. ಸ್ವತಂತ್ರರಾಗಿ ಜನಿಸಿರುವುದು, ಅದೆಂತಹ ಅದ್ಭುತಕರವಾದ ಸಂಗತಿ! ಆದರೆ ರೂಸೋ ಗಮನಿಸಿದಂತೆ, ಇತಿಹಾಸದಾದ್ಯಂತ ಕೋಟಿಗಟ್ಟಲೆ ಜನರು ಸ್ವಾತಂತ್ರ್ಯವನ್ನು ಕಿಂಚಿತ್ತೂ ಅನುಭವಿಸಿಲ್ಲ. ಅವರು ತಮ್ಮ ಜೀವಿತಗಳನ್ನು “ಸರಪಳಿ”ಗಳಲ್ಲಿ ಕಳೆದಿದ್ದಾರೆ. ಅಂದರೆ, ಜೀವನದಿಂದ ಬಾಳುವ ಸಂತೋಷ ಹಾಗೂ ಸಂತೃಪ್ತಿಯನ್ನು ದೋಚಿಕೊಂಡಿರುವ ಒಂದು ವ್ಯವಸ್ಥೆಯಲ್ಲಿ ಅವರು ಬಂಧಿತರಾಗಿದ್ದಾರೆ.
ಮನುಷ್ಯನು “ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟು” ಮಾಡಿದ್ದಾನೆಂದು ಈಗಲೂ ಕೋಟಿಗಟ್ಟಲೆ ಜನರು ಕಂಡುಕೊಳ್ಳುತ್ತಾರೆ. (ಪ್ರಸಂಗಿ 8:9) ಅಧಿಕಾರವನ್ನು ಬೆನ್ನಟ್ಟುತ್ತಾ ಮಹತ್ವಾಕಾಂಕ್ಷೆಯುಳ್ಳ ಸ್ತ್ರೀಪುರುಷರು, ಇತರರ ಸ್ವಾತಂತ್ರ್ಯಗಳನ್ನು ಅದುಮಿಬಿಡುವ ವಿಷಯದಲ್ಲಿ ಒಂದಿಷ್ಟೂ ಮನದಳುಕು ತೋರಿಸುವುದಿಲ್ಲ. “ಹುಚ್ಚಾವೇಶದ ಮೃತ್ಯು ದಳಗಳು 21 ಜನರನ್ನು ಕೊಂದುಹಾಕಿದವು” ಎಂಬುದಾಗಿ ಒಂದು ವರದಿಯು ಹೇಳುತ್ತದೆ. ಮತ್ತೊಂದು ವರದಿಯು, “ಕರುಣೆಯಿಲ್ಲದ ಕಗ್ಗೊಲೆಯ” ಕುರಿತು ತಿಳಿಸುತ್ತದೆ. ಭದ್ರತಾ ಪಡೆಯ ಸೈನಿಕರು “ಪ್ರತಿರೋಧಿಸದ ಹಾಗೂ ಆತ್ಮರಕ್ಷಣೆಯಿಲ್ಲದ ಸ್ತ್ರೀಯರನ್ನು, ಮಕ್ಕಳನ್ನು ಮತ್ತು ವೃದ್ಧರನ್ನು ಕೊಲ್ಲುತ್ತಾ, ಕತ್ತು ಕೊಯ್ಯುತ್ತಾ, ಸೈನಿಕರಲ್ಲದ ಸೆರೆಯಾಳುಗಳನ್ನು ಗುಂಡಿಕ್ಕಿ ಕೊಲ್ಲುತ್ತಾ, ಹಳ್ಳಿಗಳನ್ನು ನಾಶಪಡಿಸುತ್ತಾ ಮತ್ತು ಬಾಂಬುಗಳ ಸತತ ಪ್ರಹಾರವನ್ನು ಮಾಡುತ್ತಲೆ ಇದ್ದಾರೆಂದು” ತಿಳಿಸಲಾಯಿತು.
ಆದುದರಿಂದ ಜನರು ದಬ್ಬಾಳಿಕೆಯಿಂದ ಸ್ವತಂತ್ರರಾಗಿರಲು ತೀವ್ರವಾಗಿ ಬಯಸುವುದು ಮತ್ತು ಅದಕ್ಕಾಗಿ ಹೋರಾಟ ನಡೆಸುವುದರಲ್ಲಿ ಆಶ್ಚರ್ಯವೇನೂ ಇಲ್ಲ! ಆದರೆ, ಒಬ್ಬನ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಅನೇಕ ವೇಳೆ ಮತ್ತೊಬ್ಬನ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯಗಳನ್ನು ತುಳಿದುಹಾಕುವುದನ್ನು ಒಳಗೊಳ್ಳುತ್ತದೆಂಬುದು ವಿಷಾದಕರ ಸಂಗತಿಯೇ ಸರಿ. ಆ ಹೋರಾಟದಲ್ಲಿ ನಿರ್ದೋಷಿಗಳಾದ ಸ್ತ್ರೀಪುರುಷರು ಮತ್ತು ಮಕ್ಕಳು ಆಹುತಿಗಳಾಗುವುದು ಬಹುಮಟ್ಟಿಗೆ ಅನಿವಾರ್ಯವಾಗಿದೆ. ಮತ್ತು ಅವರ ಮೃತ್ಯುವಿನ ಕಾರಣವು ಯೋಗ್ಯವೂ ನ್ಯಾಯವಾದದ್ದೂ ಎಂದು ಘೋಷಿಸುವ ಮೂಲಕ ಅದನ್ನು “ನ್ಯಾಯಸಮ್ಮತ”ಗೊಳಿಸಲಾಗುತ್ತದೆ. ಕಳೆದ ವರ್ಷ, ಐಅರ್ಲೆಂಡ್ನಲ್ಲಿರುವ ಓಮಾ ಎಂಬ ಚಿಕ್ಕ ಗ್ರಾಮದಲ್ಲಿನ “ಸ್ವಾತಂತ್ರ್ಯ ಹೋರಾಟಗಾರ”ರಿಂದ ಕಾರಿನೊಳಗಿಡಲ್ಪಟ್ಟ ಬಾಂಬು, ಅಲ್ಲಿ ನಿಂತಿದ್ದ 29 ನಿರ್ದೋಷಿಗಳನ್ನು ಕೊಂದು, ನೂರಾರು ಜನರನ್ನು ಗಾಯಗೊಳಿಸಿತು.
ಈಗಲೂ ‘ಸರಪಳಿಗಳಿಂದ ಬಂಧಿತ’
ಇಂತಹ ಹೋರಾಟದಿಂದ ಏನು ಸಾಧಿಸಲಾಗುತ್ತದೆ? ಈ “ಸ್ವಾತಂತ್ರ್ಯ ಹೋರಾಟಗಾರರು” ತಮ್ಮ ಹೋರಾಟದಲ್ಲಿ ವಿಜಯಿಗಳಾದಾಗ, ಒಂದಿಷ್ಟು ಸೀಮಿತ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬಹುದು. ಆದರೆ, ಅವರು ನಿಜವಾಗಿಯೂ ಸ್ವತಂತ್ರರಾಗಿದ್ದಾರೊ? ನಾಮಮಾತ್ರದ ಮುಕ್ತ ಲೋಕದಲ್ಲಿನ ಅಂತಹ ಸ್ವತಂತ್ರ ಸಮಾಜಗಳಲ್ಲಿರುವ ಜನರು ಸಹ, ಬಡತನ, ಅಸಂಪೂರ್ಣತೆ, ಅನಾರೋಗ್ಯ, ಮತ್ತು ಮರಣದಂತಹ ಕ್ರೂರ ಯಜಮಾನರಿಗೆ ಈಗಲೂ ‘ಸರಪಳಿಗಳಿಂದ ಬಂಧಿತ’ರಾಗಿಲ್ಲವೊ? ಇಂತಹ ವಿಷಯಗಳು ಒಬ್ಬನನ್ನು ದಾಸನೋಪಾದಿ ನಡೆಸುವ ತನಕ, ಅವನು ನಿಜವಾಗಿಯೂ ಸ್ವತಂತ್ರನೆಂದು ಯಾರಾದರೂ ಹೇಳಸಾಧ್ಯವಿದೆಯೊ?
ಜೀವನವು ಎಷ್ಟೋ ಜನರಿಗೆ ಇತಿಹಾಸದಾದ್ಯಂತ ಹೇಗಿತ್ತೊ ಮತ್ತು ಈಗ ಹೇಗಿದೆಯೊ ಅದನ್ನೇ ಪುರಾತನ ಬೈಬಲ್ ಬರಹಗಾರನಾದ ಮೋಶೆಯು ನಿಷ್ಕೃಷ್ಟವಾಗಿ ವರ್ಣಿಸಿದನು. ನಾವು 70 ಇಲ್ಲವೆ 80 ವರ್ಷ ಜೀವಿಸಬಹುದಾದರೂ, “ಕಷ್ಟಸಂಕಟಗಳೇ ಅದರ ಆಡಂಬರ” ಎಂದನವನು. (ಕೀರ್ತನೆ 90:10) ಇದು ಎಂದಾದರೂ ಬದಲಾಗುವುದೊ? ಇಂದು ಅನೇಕರು ಅನುಭವಿಸುವ ವೇದನೆ ಹಾಗೂ ಭಯದಿಂದ ಮುಕ್ತವಾದ, ಸಂಪೂರ್ಣ ತೃಪ್ತಿಯನ್ನೀಡುವ ಜೀವಿತಗಳನ್ನು ನಾವು ಜೀವಿಸಲು ಎಂದಾದರೂ ಸಾಧ್ಯವಾಗುವುದೊ?
ಹೌದೆಂದು ಬೈಬಲು ಹೇಳುತ್ತದೆ! ಅದು “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆ [“ಸ್ವಾತಂತ್ರ್ಯ,” NW]ಯ” ಕುರಿತು ಮಾತಾಡುತ್ತದೆ. (ರೋಮಾಪುರ 8:21) ಪ್ರಥಮ ಶತಮಾನದಲ್ಲಿ ಅಪೊಸ್ತಲ ಪೌಲನು ರೋಮಿನಲ್ಲಿದ್ದ ಕ್ರೈಸ್ತರಿಗೆ ಬರೆದ ಒಂದು ಪತ್ರದಲ್ಲಿ ಉಲ್ಲೇಖಿಸಿದಂತಹ ಸ್ವಾತಂತ್ರ್ಯದ ಕುರಿತು ನಾವೀಗ ವಿವರವಾಗಿ ಪರಿಶೀಲಿಸೋಣ. ನಮ್ಮಲ್ಲಿ ಪ್ರತಿಯೊಬ್ಬರೂ, ನಿಜವಾದ ಮತ್ತು ಬಾಳುವ “ಮಹಿಮೆಯುಳ್ಳ ಸ್ವಾತಂತ್ರ್ಯ”ವನ್ನು ಹೇಗೆ ಪಡೆದುಕೊಳ್ಳಬಹುದೆಂದು ಪೌಲನು ಈ ಪತ್ರದಲ್ಲಿ ಸ್ಪಷ್ಟವಾಗಿ ವಿವರಿಸುತ್ತಾನೆ.
[ಪುಟ 3 ರಲ್ಲಿರುವ ಚಿತ್ರ ಕೃಪೆ]
ಇತಿಹಾಸದ ಸಂಜ್ಞಾಜ್ಯೋತಿಗಳು, ಸಂಪುಟ XIII ಎಂಬ ಪುಸ್ತಕದಿಂದ