‘ಬಿರುಗಾಳಿಯಲ್ಲಿ ಸಮುದ್ರಯಾನಕ್ಕೆ ತೊಡಗುವುದು’
ಇಂತಹ ಒಂದು ಸಾಹಸವನ್ನು ನೀವು ಸಮಯೋಚಿತವಲ್ಲದ, ಮೂರ್ಖ, ಹಾಗೂ ವಿಪತ್ಕಾರಕ ಸಾಹಸವಾಗಿ ವೀಕ್ಷಿಸುವುದಿಲ್ಲವೊ? ಕೆಲವರಾದರೊ ತಮ್ಮನ್ನು ಇಂತಹ ಒಂದು ಸಾಂಕೇತಿಕ ಸನ್ನಿವೇಶದಲ್ಲಿ ಹಾಕಿಕೊಳ್ಳುತ್ತಾರೆ. ಹೇಗೆ? 17ನೆಯ ಶತಮಾನದ ಇಂಗ್ಲಿಷ್ ಬರಹಗಾರರಾದ ಥಾಮಸ್ ಫುಲ್ಲರ್ ಹೇಳಿದ್ದು: “ಕೋಪೋದ್ರಿಕ್ತರಾದಾಗ ಏನೂ ಮಾಡದಿರಿ. ಅದು ಬಿರುಗಾಳಿಯಲ್ಲಿ ಸಮುದ್ರಯಾನಕ್ಕೆ ತೊಡಗುವಂತಿದೆ.”
ಅನಿಯಂತ್ರಿತ ಕೋಪದ ಸ್ಥಿತಿಯಲ್ಲಿ ಏನನ್ನಾದರೂ ಮಾಡಿದರೆ, ಅದರ ಪರಿಣಾಮಗಳು ದುಃಖಕರವಾಗಿರಬಲ್ಲವು. ಇದು ಬೈಬಲಿನಲ್ಲಿ ದಾಖಲಿಸಲ್ಪಟ್ಟ ಒಂದು ಘಟನೆಯಿಂದ ತಿಳಿಸಲ್ಪಟ್ಟಿದೆ. ಪುರಾತನ ಕಾಲದ ಮೂಲಪಿತೃವಾದ ಯಾಕೋಬನ ಪುತ್ರರಾದ ಸಿಮೆಯೋನ್ ಮತ್ತು ಲೇವಿ, ತಮ್ಮ ತಂಗಿಯಾದ ದೀನಳ ಬಲಾತ್ಕಾರ ಸಂಭೋಗಕ್ಕೆ ಪ್ರತಿಕ್ರಿಯಿಸುತ್ತಾ, ಪ್ರತೀಕಾರಾತ್ಮಕ ಕ್ರೋಧದಿಂದ ಮುನ್ನುಗ್ಗಿದರು. ಪರಿಣಾಮವು ಭಾರಿ ಪ್ರಮಾಣದ ಕೊಲೆ ಹಾಗೂ ಲೂಟಿಯಾಗಿತ್ತು. ಯಾಕೋಬನು ಅವರ ದುಷ್ಕೃತ್ಯವನ್ನು ಖಂಡಿಸುತ್ತಾ ಹೇಳಿದ್ದು: “ನನ್ನ ಹೆಸರು ದುರ್ವಾಸನೆಯಾಗುವಂತೆ ಮಾಡಿ ನನ್ನನ್ನು ಅಪಾಯಕ್ಕೆ ಗುರಿಮಾಡಿದ್ದೀರಿ.”—ಆದಿಕಾಂಡ 34:25-30.
ವಿವೇಕಯುತವಾಗಿ ದೇವರ ವಾಕ್ಯವಾದ ಬೈಬಲು, ತುಂಬ ಭಿನ್ನವಾಗಿರುವ ಮಾರ್ಗವನ್ನು ಶಿಫಾರಸ್ಸುಮಾಡುತ್ತದೆ. ಅದು ಹೇಳುವುದು: “ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು. ಉರಿಗೊಳ್ಳಬೇಡ; ಕೆಡುಕಿಗೆ ಕಾರಣವಾದೀತು.” (ಕೀರ್ತನೆ 37:8) ಆ ಬುದ್ಧಿವಾದದ ಅನುಸರಣೆ, ಗಂಭೀರವಾದ ಪಾಪಗಳನ್ನು ತಡೆಯಬಲ್ಲದು.—ಪ್ರಸಂಗಿ 10:4; ಜ್ಞಾನೋಕ್ತಿ 22:24, 25ನ್ನು ಸಹ ನೋಡಿರಿ.