ಪ್ರೀತಿಯ ಮಾರ್ಗವು ಎಂದಿಗೂ ಬಿದ್ದುಹೋಗುವುದಿಲ್ಲ
“ಇವುಗಳಲ್ಲಿ ಶ್ರೇಷ್ಠ ವರಗಳನ್ನು ಆಸಕ್ತಿಯಿಂದ ಅಪೇಕ್ಷಿಸಿರಿ. ಇನ್ನೂ ಉತ್ಕೃಷ್ಟವಾದ ಮಾರ್ಗವನ್ನು ನಿಮಗೆ ತೋರಿಸುತ್ತೇನೆ.”—1 ಕೊರಿಂಥ 12:31.
1-3. (ಎ) ಪ್ರೀತಿಯನ್ನು ವ್ಯಕ್ತಪಡಿಸಲು ಕಲಿತುಕೊಳ್ಳುವುದು, ಯಾವ ರೀತಿಯಲ್ಲಿ ಒಂದು ಹೊಸ ಭಾಷೆಯನ್ನು ಕಲಿತುಕೊಳ್ಳುವಂತೆಯೇ ಇದೆ? (ಬಿ) ಪ್ರೀತಿಯನ್ನು ವ್ಯಕ್ತಪಡಿಸಲು ಕಲಿತುಕೊಳ್ಳುವುದನ್ನು ಯಾವ ಅಂಶಗಳು ಒಂದು ಸವಾಲನ್ನಾಗಿ ಮಾಡಬಲ್ಲವು?
ಒಂದು ಹೊಸ ಭಾಷೆಯನ್ನು ಕಲಿತುಕೊಳ್ಳಲು ನೀವು ಎಂದಾದರೂ ಪ್ರಯತ್ನಿಸಿದ್ದೀರೊ? ಅದು ತುಂಬ ಕಷ್ಟಕರ ಎಂಬುವುದರಲ್ಲಿ ಸಂಶಯವೇ ಇಲ್ಲ! ಆದರೆ ಒಂದು ಎಳೆಯ ಮಗು, ಕೇವಲ ಆ ಭಾಷೆಯನ್ನು ಕೇಳಿಸಿಕೊಳ್ಳುವ ಮೂಲಕ ಅದನ್ನು ಕಲಿತುಕೊಳ್ಳುತ್ತದೆ. ಅದರ ಮಿದುಳು, ಪದಗಳ ಉಚ್ಚಾರವನ್ನು ಹಾಗೂ ಅರ್ಥಗಳನ್ನು ಬೇಗನೆ ಗ್ರಹಿಸಿಕೊಳ್ಳುವುದರಿಂದ, ಆ ಪುಟ್ಟ ಮಗುವು ಸಮರ್ಥವಾಗಿ, ಬಹುಶಃ ಸರಾಗವಾಗಿ ಮಾತಾಡುತ್ತದೆ. ಆದರೆ ವಯಸ್ಕರ ವಿಷಯದಲ್ಲಿ ಹಾಗಿರುವುದಿಲ್ಲ. ನಾವು ಹೊಸ ಭಾಷೆಯ ಕೆಲವೊಂದು ಮೂಲ ಪದಗಳನ್ನು ಕಲಿತುಕೊಳ್ಳಲು, ಪದೇ ಪದೇ ಶಬ್ದಕೋಶಕ್ಕೆ ಮೊರೆಹೋಗುತ್ತೇವೆ. ಸಕಾಲದಲ್ಲಿ ಮತ್ತು ಸಾಕಷ್ಟು ಅನುಭವದೊಂದಿಗೆ, ನಾವು ಹೊಸ ಭಾಷೆಯಲ್ಲಿ ಆಲೋಚಿಸಲು ತೊಡಗುತ್ತೇವೆ, ಮತ್ತು ಹೀಗೆ ಮಾತಾಡುವುದು ಸುಲಭವಾಗುತ್ತದೆ.
2 ಪ್ರೀತಿಯನ್ನು ವ್ಯಕ್ತಪಡಿಸಲು ಕಲಿತುಕೊಳ್ಳುವುದು, ಒಂದು ಹೊಸ ಭಾಷೆಯನ್ನು ಕಲಿತುಕೊಳ್ಳುವಂತೆಯೇ ಇದೆ. ಮಾನವರಲ್ಲಿ ಪಿತ್ರಾರ್ಜಿವಾಗಿಯೇ ಈ ದೈವಿಕ ಗುಣವು ಒಂದಿಷ್ಟು ಪ್ರಮಾಣದಲ್ಲಿದೆ. (ಆದಿಕಾಂಡ 1:27; ಹೋಲಿಸಿ 1 ಯೋಹಾನ 4:8.) ಆದರೂ, ಸ್ವಾಭಾವಿಕ ಮಮತೆಯ ಕೊರತೆ ಇರುವ ಇಂದಿನ ಲೋಕದಲ್ಲಿ, ಪ್ರೀತಿಯನ್ನು ವ್ಯಕ್ತಪಡಿಸಲು ಕಲಿತುಕೊಳ್ಳುವುದು ಅಸಾಧಾರಣ ಪ್ರಯತ್ನವನ್ನು ಅಗತ್ಯಪಡಿಸುತ್ತದೆ. (2 ತಿಮೊಥೆಯ 3:1-5) ಇದು ಕೆಲವೊಮ್ಮೆ ಕುಟುಂಬದಲ್ಲೇ ಸಂಭವಿಸುತ್ತದೆ. ಹೌದು, ಪ್ರೀತಿಪೂರ್ಣ ಮಾತುಗಳೇ ಆಡಲ್ಪಡದ ಕಠೋರ ಪರಿಸರದಲ್ಲಿ ಅನೇಕರು ಬೆಳೆಯುತ್ತಾರೆ. (ಎಫೆಸ 4:29-31; 6:4) ಹಾಗಾದರೆ, ನಾವು ಪ್ರೀತಿಯನ್ನು ಅನುಭವಿಸಿರದಿದ್ದರೂ, ಅದನ್ನು ವ್ಯಕ್ತಪಡಿಸಲು ಹೇಗೆ ಕಲಿತುಕೊಳ್ಳಸಾಧ್ಯವಿದೆ?
3 ಬೈಬಲು ನಮಗೆ ಸಹಾಯ ಮಾಡಬಲ್ಲದು. 1 ಕೊರಿಂಥ 13:4-8ರಲ್ಲಿ, ಪ್ರೀತಿಯು ಏನಾಗಿದೆ ಎಂಬುದರ ಕುರಿತು ಪೌಲನು ಒಂದು ಅಕ್ಷರಶಃ ವ್ಯಾಖ್ಯಾನವನ್ನು ಕೊಡುವುದಿಲ್ಲ, ಬದಲಿಗೆ ಈ ಶ್ರೇಷ್ಠ ರೀತಿಯ ಪ್ರೀತಿಯು ಹೇಗೆ ಕಾರ್ಯಮಾಡುತ್ತದೆ ಎಂಬುದರ ಸುಸ್ಪಷ್ಟ ವಿವರಣೆಯನ್ನು ಒದಗಿಸುತ್ತಾನೆ. ಈ ವಚನಗಳ ಪರಿಗಣನೆಯು, ಈ ದೈವಿಕ ಗುಣದ ಸ್ವರೂಪವನ್ನು ಗ್ರಹಿಸಿಕೊಳ್ಳಲು ಸಹಾಯ ಮಾಡುವುದು ಮತ್ತು ಅದನ್ನು ಉತ್ತಮವಾಗಿ ವ್ಯಕ್ತಪಡಿಸಲು ನಮ್ಮನ್ನು ಸಜ್ಜುಗೊಳಿಸುವುದು. ಪೌಲನಿಂದ ವರ್ಣಿಸಲ್ಪಟ್ಟಂತೆ, ನಾವು ಪ್ರೀತಿಯ ಕೆಲವೊಂದು ಅಂಶಗಳನ್ನು ಪರಿಗಣಿಸೋಣ. ನಾವು ಅವುಗಳನ್ನು ವಿಶಾಲವಾಗಿ ಮೂರು ಗುಂಪುಗಳಾಗಿ ವಿಂಗಡಿಸೋಣ: ಸರ್ವಸಾಧಾರಣವಾಗಿ ನಾವು ನಡೆದುಕೊಳ್ಳುವ ರೀತಿ, ಹೆಚ್ಚು ನಿರ್ದಿಷ್ಟವಾಗಿ ಇತರರೊಂದಿಗಿನ ನಮ್ಮ ಸಂಬಂಧಗಳು, ಮತ್ತು ಕೊನೆಯದಾಗಿ ನಮ್ಮ ತಾಳ್ಮೆ.
ಅಹಂಕಾರವನ್ನು ಜಯಿಸಲು ಪ್ರೀತಿಯು ನಮಗೆ ಸಹಾಯ ಮಾಡುತ್ತದೆ
4. (ಎ) ಈರ್ಷ್ಯೆಯ ವಿಷಯದಲ್ಲಿ ಬೈಬಲು ಯಾವ ಒಳನೋಟವನ್ನು ಒದಗಿಸುತ್ತದೆ?
4 ಪ್ರೀತಿಯ ಕುರಿತಾದ ತನ್ನ ಆರಂಭದ ಹೇಳಿಕೆಗಳ ತರುವಾಯ, ಪೌಲನು ಕೊರಿಂಥದವರಿಗೆ ಬರೆದುದು: “ಪ್ರೀತಿಯು ಹೊಟ್ಟೆಕಿಚ್ಚುಪಡುವದಿಲ್ಲ.” (1 ಕೊರಿಂಥ 13:4) ಆದರೆ ಈರ್ಷ್ಯೆಯು, ಇತರರ ಏಳಿಗೆ ಇಲ್ಲವೆ ಸಾಧನೆಗಳನ್ನು ನೋಡಿ ಅಸಂತುಷ್ಟ ಭಾವನೆಯನ್ನೂ ವ್ಯಕ್ತಪಡಿಸಬಲ್ಲದು. ಇಂತಹ ಈರ್ಷ್ಯೆಯು, ಶಾರೀರಿಕವಾಗಿ, ಭಾವನಾತ್ಮಕವಾಗಿ ಮತ್ತು ಆತ್ಮಿಕವಾಗಿ ಧ್ವಂಸಕರವಾಗಿದೆ.—ಜ್ಞಾನೋಕ್ತಿ 14:30; ರೋಮಾಪುರ 13:13; ಯಾಕೋಬ 3:14-16.
5. ನಾವು ಯಾವುದೊ ದೇವಪ್ರಭುತ್ವ ಸುಯೋಗಕ್ಕಾಗಿ ಕಡೆಗಣಿಸಲ್ಪಟ್ಟಿದ್ದೇವೆಂದು ತೋರಿದಾಗ, ಈರ್ಷ್ಯೆಯನ್ನು ಜಯಿಸಲು ಪ್ರೀತಿಯು ನಮಗೆ ಹೇಗೆ ಸಹಾಯ ಮಾಡಬಲ್ಲದು?
5 ಈ ಸಂಬಂಧದಲ್ಲಿ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಯಾವುದೊ ದೇವಪ್ರಭುತ್ವ ಸುಯೋಗಕ್ಕಾಗಿ ನನ್ನನ್ನು ಕಡೆಗಣಿಸಿದಂತೆ ತೋರಿದಾಗ, ನಾನು ಅಸೂಯೆ ಪಡುತ್ತೇನೊ?’ ಉತ್ತರವು ಹೌದಾಗಿರುವಲ್ಲಿ, ಹತಾಶರಾಗಬೇಡಿ. ಎಲ್ಲ ಅಪರಿಪೂರ್ಣ ಮಾನವರಲ್ಲಿ ‘ಅಸೂಯೆ ಪಡುವ ಪ್ರವೃತ್ತಿ’ ಇದೆಯೆಂದು, ಬೈಬಲ್ ಬರಹಗಾರನಾದ ಯಾಕೋಬನು ನಮಗೆ ಜ್ಞಾಪಕಹುಟ್ಟಿಸುತ್ತಾನೆ. (ಯಾಕೋಬ 4:5) ನಿಮ್ಮ ಸಹೋದರನಿಗಾಗಿರುವ ಪ್ರೀತಿಯು, ಸಮತೂಕವಾದ ಮನೋಭಾವವನ್ನು ಕಾಪಾಡಿಕೊಳ್ಳುವಂತೆ ನಿಮಗೆ ಸಹಾಯಮಾಡುವುದು. ಅದು ಹರ್ಷಿಸುವವರೊಂದಿಗೆ ಹರ್ಷಿಸಲು ಮತ್ತು ಯಾರಾದರೊಬ್ಬರು ಒಂದು ಆಶೀರ್ವಾದವನ್ನಾಗಲಿ ಮೆಚ್ಚಿಕೆಯನ್ನಾಗಲಿ ಪಡೆದುಕೊಳ್ಳುವಾಗ ಅದನ್ನು ವೈಯಕ್ತಿಕ ಅಪಮಾನವೆಂದು ಭಾವಿಸದಿರಲು ನಿಮ್ಮನ್ನು ಶಕ್ತಗೊಳಿಸಬಲ್ಲದು.—ಹೋಲಿಸಿ 1 ಸಮುವೇಲ 18:7-9.
6. ಯಾವ ಗಂಭೀರವಾದ ಪರಿಸ್ಥಿತಿಯು ಪ್ರಥಮ ಶತಮಾನದ ಕೊರಿಂಥ ಸಭೆಯಲ್ಲಿ ವಿಕಸಿಸಿಕೊಂಡಿತು?
6 ಪ್ರೀತಿಯು “ಹೊಗಳಿಕೊಳ್ಳುವದಿಲ್ಲ; ಉಬ್ಬಿಕೊಳ್ಳುವದಿಲ್ಲ”ವೆಂದು ಪೌಲನು ಕೂಡಿಸಿ ಹೇಳುತ್ತಾನೆ. (1 ಕೊರಿಂಥ 13:4) ನಮಲ್ಲಿ ಯಾವುದೊ ಒಂದು ಪ್ರತಿಭೆ ಇಲ್ಲವೆ ಸಾಮರ್ಥ್ಯವು ಇರುವಲ್ಲಿ, ಅದರ ಬಗ್ಗೆ ಜಂಬಕೊಚ್ಚಿಕೊಳ್ಳುವ ಅಗತ್ಯವಿಲ್ಲ. ಇದು ಕೊರಿಂಥದ ಸಭೆಯೊಳಗೆ ನುಸುಳಿ ಬಂದಿದ್ದ ಕೆಲವು ಮಹತ್ವಾಕಾಂಕ್ಷಿ ಪುರುಷರಲ್ಲಿದ್ದ ಸಮಸ್ಯೆಯಾಗಿತ್ತು. ಅವರಿಗೆ ವಿಚಾರಗಳನ್ನು ವಿವರಿಸುವ ಇಲ್ಲವೆ ಕೆಲಸಗಳನ್ನು ಪರಿಣಾಮಕಾರಿಯಾದ ವಿಧದಲ್ಲಿ ನಿರ್ವಹಿಸುವ ವಿಶೇಷ ಸಾಮರ್ಥ್ಯಗಳು ಇದ್ದಿರಬಹುದು. ಅವರು ತಮಗೇ ಹೆಚ್ಚಿನ ಗಮನವನ್ನು ಕೊಟ್ಟುಕೊಂಡಿದ್ದರಿಂದ, ಸಭೆಯಲ್ಲಿ ಪಕ್ಷಗಳು ಉಂಟಾಗಿದ್ದಿರಬಹುದು. (1 ಕೊರಿಂಥ 3:3, 4; 2 ಕೊರಿಂಥ 12:20) ಸನ್ನಿವೇಶವು ಎಷ್ಟು ಗಂಭೀರವಾಯಿತೆಂದರೆ, “ಅತಿಶ್ರೇಷ್ಠರಾದ ಅಪೊಸ್ತಲರು” ಎಂಬುದಾಗಿ ಪೌಲನು ಕಟುವಾಗಿ ವರ್ಣಿಸಿದಂತಹ ‘ಬುದ್ಧಿಹೀನರನ್ನು ಸಂತೋಷದಿಂದ ಸಹಿಸಿಕೊಳ್ಳುತ್ತಿದ್ದ’ ಕೊರಿಂಥದವರನ್ನು ಅವನು ತರುವಾಯ ಗದರಿಸಬೇಕಾಯಿತು.—2 ಕೊರಿಂಥ 11:5, 19, 20.
7, 8. ಐಕ್ಯವನ್ನು ಪ್ರವರ್ಧಿಸಲು ನಮ್ಮಲ್ಲಿರುವ ಸಹಜ ಸಾಮರ್ಥ್ಯಗಳನ್ನು ನಾವು ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ಬೈಬಲಿನಿಂದ ತೋರಿಸಿರಿ.
7 ತದ್ರೀತಿಯ ಒಂದು ಸನ್ನಿವೇಶವು ಇಂದೂ ಏಳಬಹುದು. ಉದಾಹರಣೆಗೆ, ಶುಶ್ರೂಷೆಯಲ್ಲಿನ ತಮ್ಮ ಸಾಧನೆಗಳ ಕುರಿತು ಇಲ್ಲವೆ ದೇವರ ಸಂಸ್ಥೆಯಲ್ಲಿ ತಮಗಿರುವ ಸುಯೋಗಗಳ ಕುರಿತು ಜಂಬಕೊಚ್ಚಿಕೊಳ್ಳುವ ಪ್ರವೃತ್ತಿ ಕೆಲವರಿಗೆ ಇರಬಹುದು. ಸಭೆಯಲ್ಲಿರುವ ಇತರರಲ್ಲಿ ಇಲ್ಲದಿರುವ ಒಂದು ವಿಶೇಷವಾದ ಕೌಶಲ ಇಲ್ಲವೆ ಸಾಮರ್ಥ್ಯವು ನಮಗಿರುವುದಾದರೂ, ಹೆಮ್ಮೆಪಟ್ಟುಕೊಳ್ಳಲು ಅದು ಒಂದು ಕಾರಣವಾಗಿರಬೇಕೊ? ಎಷ್ಟೆಂದರೂ, ನಮ್ಮಲ್ಲಿರುವಂತಹ ನೈಜ ಸಾಮರ್ಥ್ಯಗಳನ್ನು ನಮ್ಮ ಏಳಿಗೆಗಾಗಿಯಲ್ಲ ಬದಲಿಗೆ ಐಕ್ಯವನ್ನು ಪ್ರವರ್ಧಿಸಲು ಬಳಸಬೇಕು.—ಮತ್ತಾಯ 23:12; 1 ಪೇತ್ರ 5:6.
8 ಒಂದು ಸಭೆಯಲ್ಲಿ ಅನೇಕ ಸದಸ್ಯರಿರುವುದಾದರೂ, “ದೇವರು . . . ದೇಹವನ್ನು ಹದವಾಗಿ ಕೂಡಿಸಿದ್ದಾನೆ” ಎಂದು ಪೌಲನು ಬರೆದನು. (1 ಕೊರಿಂಥ 12:19-26) ‘ಕೂಡಿಸು’ ಎಂಬುದಾಗಿ ಭಾಷಾಂತರಿಸಲ್ಪಟ್ಟ ಗ್ರೀಕ್ ಪದವು, ಬಣ್ಣಗಳ ಬೆರಸುವಿಕೆಯಲ್ಲಿರುವ ಸುಸಂಗತವಾದ ಸಂಯೋಜನೆಯನ್ನು ಸೂಚಿಸುತ್ತದೆ. ಆದುದರಿಂದ ಸಭೆಯಲ್ಲಿರುವ ಯಾವ ಸದಸ್ಯನೂ ತನ್ನ ಸಾಮರ್ಥ್ಯಗಳ ವಿಷಯದಲ್ಲಿ ಉಬ್ಬಿಕೊಂಡು, ಇತರರ ಮೇಲೆ ಪ್ರಭುತ್ವ ನಡೆಸಲು ಪ್ರಯತ್ನಿಸಬಾರದು. ದೇವರ ಸಂಸ್ಥೆಯಲ್ಲಿ ಅಹಂಕಾರ ಮತ್ತು ಮಹತ್ವಾಕಾಂಕ್ಷೆಗೆ ಯಾವುದೇ ಸ್ಥಾನವಿಲ್ಲ.—ಜ್ಞಾನೋಕ್ತಿ 16:19; 1 ಕೊರಿಂಥ 14:12; 1 ಪೇತ್ರ 5:2, 3.
9. ತಮ್ಮ ಸ್ವಂತ ಅಭಿರುಚಿಗಳ ಕಡೆಗೆ ಗಮನಹರಿಸಿದ ಯಾವ ಎಚ್ಚರಿಕೆಯ ಉದಾಹರಣೆಗಳನ್ನು ಬೈಬಲು ಒದಗಿಸುತ್ತದೆ?
9 ಪ್ರೀತಿಯು “ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ.” (1 ಕೊರಿಂಥ 13:5) ಪ್ರೀತಿಪೂರ್ಣನಾದ ಒಬ್ಬ ವ್ಯಕ್ತಿಯು ತನ್ನ ಅನುಕೂಲಕ್ಕಾಗಿ ಇತರರನ್ನು ಕುತಂತ್ರದಿಂದ ಅಧೀನಪಡಿಸಿಕೊಳ್ಳುವುದಿಲ್ಲ. ಈ ವಿಷಯದ ಕುರಿತು ಬೈಬಲಿನಲ್ಲಿ ಎಚ್ಚರಿಕೆಯ ಉದಾಹರಣೆಗಳಿವೆ. ದೃಷ್ಟಾಂತಕ್ಕೆ, ತಮ್ಮ ಸ್ವಂತ ಸ್ವಾರ್ಥಪರ ಕಾರಣಗಳಿಗಾಗಿ ಇತರರನ್ನು ಕುತಂತ್ರದಿಂದ ಅಧೀನಪಡಿಸಿಕೊಂಡ ದೆಲೀಲ, ಈಜೆಬೆಲ ಮತ್ತು ಅತಲ್ಯಳೆಂಬ ಸ್ತ್ರೀಯರ ಬಗ್ಗೆ ನಾವು ಓದುತ್ತೇವೆ. (ನ್ಯಾಯಸ್ಥಾಪಕರು 16:16; 1 ಅರಸು 21:25; 2 ಪೂರ್ವಕಾಲವೃತ್ತಾಂತ 22:10-12) ರಾಜ ದಾವೀದನ ಮಗನಾದ ಅಬ್ಷಾಲೋಮನೂ ಇಂಥವರಲ್ಲಿ ಒಬ್ಬನಾಗಿದ್ದನು. ಅವನು ವ್ಯಾಜ್ಯತೀರಿಸಿಕೊಳ್ಳುವದಕ್ಕಾಗಿ ಊರುಬಾಗಿಲಿಗೆ ಬರುವವರನ್ನು ತಡೆದು, ರಾಜನ ಆಸ್ಥಾನದಲ್ಲಿರುವವರಿಗೆ ಜನರ ಸಮಸ್ಯೆಗಳಲ್ಲಿ ಯಾವ ಆಸಕ್ತಿಯೂ ಇಲ್ಲವೆಂಬುದನ್ನು ಕುತಂತ್ರದಿಂದ ಹೇಳುತ್ತಿದ್ದನು. ಅನಂತರ ಆಸ್ಥಾನಕ್ಕೆ ತನ್ನಂತಹ ಒಬ್ಬ ಸಹೃದಯಿಯ ಅಗತ್ಯವಿದೆಯೆಂದು ಅವನು ನೇರವಾಗಿ ಹೇಳುತ್ತಿದ್ದನು! (2 ಸಮುವೇಲ 15:2-4) ಅಬ್ಷಾಲೋಮನು ಎದೆಗುಂದಿದವರ ಕುರಿತಲ್ಲ, ಬದಲಿಗೆ ತನ್ನ ವಿಷಯದಲ್ಲೇ ಆಸಕ್ತನಾಗಿದ್ದನು. ಸ್ವನೇಮಿತ ಅರಸನೋಪಾದಿ ಕ್ರಿಯೆಗೈಯುತ್ತಾ, ಅವನು ಅನೇಕರ ಮನಸ್ಸನ್ನು ತನ್ನ ಕಡೆಗೆ ತಿರುಗಿಸಿಕೊಂಡನು. ಆದರೆ ಸಕಾಲದಲ್ಲಿ ಅಬ್ಷಾಲೋಮನು ಸಂಪೂರ್ಣ ಸೋಲನ್ನು ಅನುಭವಿಸಿದನು. ಅವನು ಮರಣಹೊಂದಿದಾಗ, ಯೋಗ್ಯವಾದ ಶವಸಂಸ್ಕಾರಕ್ಕೂ ಅರ್ಹನೆಂದು ಎಣಿಸಲ್ಪಡಲಿಲ್ಲ.—2 ಸಮುವೇಲ 18:6-17.
10. ನಾವು ಇತರರ ಅಭಿರುಚಿಗಳ ಕಡೆಗೆ ಗಮನಹರಿಸುತ್ತಿದ್ದೇವೆಂದು ಹೇಗೆ ತೋರಿಸಸಾಧ್ಯವಿದೆ?
10 ಇಂದು ಕ್ರೈಸ್ತರಿಗೆ ಇದೊಂದು ಎಚ್ಚರಿಕೆಯ ರೂಪದಲ್ಲಿದೆ. ಪುರುಷರಾಗಿರಲಿ ಸ್ತ್ರೀಯರಾಗಿರಲಿ, ಪಟ್ಟುಹಿಡಿಯುವ ಗುಣ ನಮ್ಮದಾಗಿರಬಹುದು. ಒಂದು ಸಂಭಾಷಣೆಯಲ್ಲಿ ಮುಖ್ಯಸ್ಥಾನವನ್ನು ಹೊಂದಿರುವ ಮೂಲಕ ಇಲ್ಲವೆ ಭಿನ್ನಾಭಿಪ್ರಾಯವುಳ್ಳವರನ್ನು ಅದುಮಿಹಾಕುವ ಮೂಲಕ, ನಮ್ಮ ಇಚ್ಛೆಯಂತೆ ಕ್ರಿಯೆಗೈಯುವುದು ನಮಗೆ ಸುಲಭವಾಗಿರಬಹುದು. ಆದರೆ ನಾವು ನಿಜವಾಗಿಯೂ ಪ್ರೀತಿಪೂರ್ಣರಾಗಿರುವುದಾದರೆ, ನಾವು ಇತರರ ಅಭಿರುಚಿಗಳ ಕಡೆಗೆ ಗಮನಹರಿಸುವೆವು. (ಫಿಲಿಪ್ಪಿ 2:2-4) ನಾವು ಇತರರನ್ನು ದುರುಪಯೋಗಿಸಿಕೊಳ್ಳಲಾರೆವು ಇಲ್ಲವೆ ನಮ್ಮ ವಿಚಾರಗಳು ಮಾತ್ರ ಪರಿಗಣನೆಗೆ ಅರ್ಹವಾಗಿವೆಯೊ ಎಂಬಂತೆ, ನಮ್ಮ ಅನುಭವದ ಕಾರಣ ಅಥವಾ ದೇವರ ಸಂಸ್ಥೆಯಲ್ಲಿ ನಮಗಿರುವ ಸ್ಥಾನದ ಕಾರಣ, ಸಂಶಯಾಸ್ಪದವಾದ ವಿಷಯಗಳನ್ನು ನಾವು ಪ್ರವರ್ಧಿಸಲಾರೆವು. ಬದಲಿಗೆ ನಾವು ಬೈಬಲಿನ ಜ್ಞಾನೋಕ್ತಿಯನ್ನು ಜ್ಞಾಪಕದಲ್ಲಿಟ್ಟುಕೊಳ್ಳುವೆವು: “ಗರ್ವದಿಂದ ಭಂಗ; ಉಬ್ಬಿನಿಂದ ದೊಬ್ಬು.”—ಜ್ಞಾನೋಕ್ತಿ 16:18.
ಪ್ರೀತಿಯು ಶಾಂತಿಪೂರ್ಣ ಸಂಬಂಧಗಳನ್ನು ಉಂಟುಮಾಡುತ್ತದೆ
11. (ಎ) ದಯೆಯುಳ್ಳದ್ದೂ ಸಭ್ಯವೂ ಆದ ಪ್ರೀತಿಯನ್ನು ನಾವು ಯಾವ ವಿಧಗಳಲ್ಲಿ ತೋರಿಸಸಾಧ್ಯವಿದೆ? (ಬಿ) ನಾವು ಅನ್ಯಾಯವನ್ನು ಕಂಡು ಹರ್ಷಿಸುವುದಿಲ್ಲವೆಂದು ಹೇಗೆ ತೋರಿಸಸಾಧ್ಯವಿದೆ?
11 ಪ್ರೀತಿಯು “ದಯೆ ತೋರಿಸುವದು” ಮತ್ತು ಅದು “ಮರ್ಯಾದೆಗೆಟ್ಟು ನಡೆಯುವದಿಲ್ಲ” ಎಂಬುದಾಗಿಯೂ ಪೌಲನು ಬರೆದನು. (1 ಕೊರಿಂಥ 13:4, 5) ಪ್ರೀತಿಯು, ನಾವು ಅಸಭ್ಯವಾಗಿಯೂ ಅಶ್ಲೀಲವಾಗಿಯೂ ಇಲ್ಲವೆ ಮರ್ಯಾದೆಗೆಟ್ಟ ವಿಧದಲ್ಲಿ ನಡೆದುಕೊಳ್ಳುವಂತೆ ಬಿಡಲಾರದೆಂಬುದು ನಿಶ್ಚಯ. ಬದಲಿಗೆ, ನಾವು ಇತರರ ಅನಿಸಿಕೆಗಳನ್ನು ಗಣನೆಗೆ ತೆಗೆದುಕೊಳ್ಳುವೆವು. ಉದಾಹರಣೆಗೆ, ಒಬ್ಬ ಪ್ರೀತಿಪೂರ್ಣ ವ್ಯಕ್ತಿಯು, ಇತರರ ಮನಸ್ಸಾಕ್ಷಿಯನ್ನು ಗೊಂದಲಕ್ಕೀಡುಮಾಡುವ ಕೆಲಸಗಳನ್ನು ಮಾಡುವುದರಿಂದ ದೂರವಿರುವನು. (ಹೋಲಿಸಿ 1 ಕೊರಿಂಥ 8:13.) ಪ್ರೀತಿಯು “ಅನ್ಯಾಯವನ್ನು ನೋಡಿ ಸಂತೋಷಪಡದೆ ಸತ್ಯಕ್ಕೆ ಜಯವಾಗುವಲ್ಲಿ ಸಂತೋಷಪಡುತ್ತದೆ.” (1 ಕೊರಿಂಥ 13:6) ನಾವು ಯೆಹೋವನ ನಿಯಮವನ್ನು ಪ್ರೀತಿಸುವುದಾದರೆ, ಅನೈತಿಕತೆಯನ್ನು ಲಘುವಾಗಿ ಎಣಿಸಲಾರೆವು ಇಲ್ಲವೆ ದೇವರು ದ್ವೇಷಿಸುವಂತಹ ಕಾರ್ಯಗಳಿಂದ ಮನೋರಂಜಿಸಲ್ಪಡಲಾರೆವು. (ಕೀರ್ತನೆ 119:97) ನಮ್ಮನ್ನು ಕುಗ್ಗಿಸುವಂತಹ ವಿಷಯಗಳಿಗಿಂತಲೂ ಆತ್ಮೋನ್ನತಿಯನ್ನು ಉಂಟುಮಾಡುವ ವಿಷಯಗಳಲ್ಲಿ ಆನಂದವನ್ನು ಕಂಡುಕೊಳ್ಳುವಂತೆ, ಪ್ರೀತಿಯು ನಮಗೆ ಸಹಾಯ ಮಾಡುವುದು.—ರೋಮಾಪುರ 15:2; 1 ಕೊರಿಂಥ 10:23, 24; 14:26.
12, 13. (ಎ) ಯಾರಾದರೊಬ್ಬರು ನಮ್ಮ ಮನನೋಯಿಸುವಾಗ ನಾವು ಹೇಗೆ ಪ್ರತಿಕ್ರಿಯಿಸಬೇಕು? (ಬಿ) ನ್ಯಾಯವಾದ ಕೋಪವು ಕೂಡ ನಾವು ಬುದ್ಧಿಹೀನರಾಗಿ ಕ್ರಿಯೆಗೈಯುವಂತೆ ಮಾಡಬಹುದೆಂಬುದನ್ನು ತೋರಿಸಲು ಬೈಬಲ್ ಉದಾಹರಣೆಗಳನ್ನು ಉದ್ಧರಿಸಿರಿ.
12 ಪ್ರೀತಿಯು “ಸಿಟ್ಟುಗೊಳ್ಳುವದಿಲ್ಲ” (“ಮುನಿಸಿಕೊಳ್ಳುವುದಿಲ್ಲ,” ಫಿಲಿಪ್ಸ್) ಎಂದು ಪೌಲನು ಬರೆಯುತ್ತಾನೆ. (1 ಕೊರಿಂಥ 13:5) ಯಾರಾದರೊಬ್ಬರು ನಮ್ಮ ಮನನೋಯಿಸುವಾಗ, ರೇಗುವುದು ಇಲ್ಲವೆ ಕೋಪಗೊಳ್ಳುವುದು, ಅಪರಿಪೂರ್ಣ ಮಾನವರಾದ ನಮಗೆ ತೀರ ಸಾಧಾರಣವಾದ ವಿಷಯವಾಗಿದೆ. ಆದರೆ, ದೀರ್ಘ ಸಮಯದ ವರೆಗೆ ಅಸಮಾಧಾನಕ್ಕೆ ಇಂಬುಕೊಡುವುದು ಇಲ್ಲವೆ ಕೋಪದ ಸ್ಥಿತಿಯಲ್ಲಿ ಮುಂದುವರಿಯುವುದು ತಪ್ಪಾಗಿರುವುದು. (ಕೀರ್ತನೆ 4:4; ಎಫೆಸ 4:26) ನಿಯಂತ್ರಿಸಲ್ಪಡದಿದ್ದಾಗ, ನ್ಯಾಯವಾದ ಕೋಪವು ಸಹ, ನಾವು ಬುದ್ಧಿಹೀನರಾಗಿ ಕಾರ್ಯಮಾಡುವಂತೆ ನಮ್ಮನ್ನು ಪ್ರಚೋದಿಸಬಹುದು, ಮತ್ತು ಇದಕ್ಕಾಗಿ ನಾವು ಯೆಹೋವನಿಗೆ ಜವಾಬ್ದಾರರಾಗಿರುವೆವು.—ಆದಿಕಾಂಡ 34:1-31; 49:5-7; ಅರಣ್ಯಕಾಂಡ 12:3; 20:10-12; ಕೀರ್ತನೆ 106:32, 33.
13 ಇತರರ ಅಸಂಪೂರ್ಣತೆಗಳ ಕಾರಣ, ಕೆಲವರು ಕ್ರೈಸ್ತ ಕೂಟಗಳಿಗೆ ಹಾಜರಾಗುವುದನ್ನು ಇಲ್ಲವೆ ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಇವರಲ್ಲಿ ಅನೇಕರು, ಕುಟುಂಬದ ಅಡೆತಡೆಗಳು, ಜೊತೆಕೆಲಸಗಾರರ ಅಪಹಾಸ್ಯ ಇತ್ಯಾದಿಗಳನ್ನು ತಾಳಿಕೊಳ್ಳುತ್ತಾ, ನಂಬಿಕೆಗಾಗಿ ಕಠಿನವಾಗಿ ಹೋರಾಡಿದ್ದಾರೆ. ಇಂತಹ ಅಡಚಣೆಗಳನ್ನು ಅವರು ಸೂಕ್ತವಾಗಿಯೇ ಸಮಗ್ರತೆಯ ಪರೀಕ್ಷೆಗಳೆಂದು ಭಾವಿಸಿ, ಅವುಗಳನ್ನು ತಾಳಿಕೊಂಡರು. ಆದರೆ ಜೊತೆ ಕ್ರೈಸ್ತನೊಬ್ಬನು ಪ್ರೀತಿಪೂರ್ಣವಲ್ಲದ ವಿಷಯವನ್ನು ಹೇಳುವುದಾದರೆ ಇಲ್ಲವೆ ಮಾಡುವುದಾದರೆ ಆಗೇನು? ಇದು ಕೂಡ ಸಮಗ್ರತೆಯ ಪರೀಕ್ಷೆಯಲ್ಲವೊ? ನಿಶ್ಚಯವಾಗಿಯೂ ಹೌದು, ಏಕೆಂದರೆ ನಾವು ಕೋಪದ ಸ್ಥಿತಿಯಲ್ಲಿಯೇ ಇರುವುದಾದರೆ, ನಾವು “ಸೈತಾನನಿಗೆ ಅವಕಾಶಕೊಡು”ವವರಾಗಬಹುದು.—ಎಫೆಸ 4:27.
14, 15. (ಎ) “ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳು”ವುದರ ಅರ್ಥವೇನು? (ಬಿ) ಕ್ಷಮಿಸುವುದರಲ್ಲಿ ನಾವು ಯೆಹೋವನನ್ನು ಹೇಗೆ ಅನುಕರಿಸಬಲ್ಲೆವು?
14 ಸಕಾರಣದಿಂದಲೇ, ಪೌಲನು ಕೂಡಿಸಿ ಹೇಳುವುದು, ಪ್ರೀತಿಯು “ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವದಿಲ್ಲ.” (1 ಕೊರಿಂಥ 13:5) ಇಲ್ಲಿ ಅವನು ಲೆಕ್ಕಪತ್ರಕ್ಕೆ ಸಂಬಂಧಿಸಿದ ಒಂದು ಪದವನ್ನು ಬಳಸುತ್ತಾನೆ. ಅಪಕಾರವನ್ನು ಮರೆತುಹೋಗದಂತೆ ಅದನ್ನು ಒಂದು ಲೆಕ್ಕಪುಸ್ತಕದಲ್ಲಿ ಬರೆದಿಡುವ ಕ್ರಿಯೆಯನ್ನು ಸೂಚಿಸಲಿಕ್ಕಾಗಿಯೇ ಈ ಪದವು ಬಳಸಲಾಯಿತೆಂಬುದು ಸುವ್ಯಕ್ತ. ಮನನೋಯಿಸಿದ ಒಂದು ಮಾತು ಇಲ್ಲವೆ ಕ್ರಿಯೆಯನ್ನು ಮುಂದೆ ಭವಿಷ್ಯತ್ತಿನಲ್ಲಿ ಎಂದಾದರೂ ಪುನರ್ವಿಮರ್ಶಿಸುವ ಅಗತ್ಯ ಏಳಬಹುದೇನೊ ಎಂಬಂತೆ, ಅದರ ಮಾನಸಿಕ ದಾಖಲೆಯನ್ನು ಮಾಡಿಕೊಳ್ಳುವುದು ಪ್ರೀತಿಪೂರ್ಣವಾಗಿದೆಯೊ? ಯೆಹೋವನು ನಮ್ಮನ್ನು ಇಂತಹ ದಯಾಹೀನ ವಿಧದಲ್ಲಿ ಪರಿಶೀಲಿಸುವುದಿಲ್ಲ ಎಂಬುದಕ್ಕೆ ನಾವೆಷ್ಟು ಆನಂದಿತರಾಗಿರಸಾಧ್ಯವಿದೆ! (ಕೀರ್ತನೆ 130:3) ಹೌದು, ನಾವು ಪಶ್ಚಾತ್ತಾಪಪಡುವಾಗ, ಆತನು ನಮ್ಮ ಪಾಪಗಳನ್ನು ತೊಡೆದುಹಾಕುತ್ತಾನೆ.—ಅ. ಕೃತ್ಯಗಳು 3:19.
15 ಈ ಸಂಬಂಧದಲ್ಲಿ ನಾವು ಯೆಹೋವನನ್ನು ಅನುಕರಿಸಬಲ್ಲೆವು. ಯಾರಾದರೊಬ್ಬರು ನಮ್ಮನ್ನು ತಾತ್ಸಾರಮಾಡುವಂತೆ ತೋರುವಾಗ, ನಾವು ವಿಪರೀತ ಸೂಕ್ಷ್ಮಮತಿಗಳಾಗಿರಬಾರದು. ನಾವು ಬಹು ಬೇಗ ಅಪರ್ಥಮಾಡಿಕೊಳ್ಳುವುದಾದರೆ, ನಮ್ಮ ಮನನೋಯಿಸಿದ ವ್ಯಕ್ತಿಗಿಂತಲೂ ಸ್ವತಃ ನಾವೇ ನಮ್ಮನ್ನು ಹೆಚ್ಚು ತೀವ್ರವಾದ ನೋವಿಗೆ ಗುರಿಮಾಡಿಕೊಳ್ಳುತ್ತಿರುವೆವು. (ಪ್ರಸಂಗಿ 7:9, 22) ಬದಲಿಗೆ, ಪ್ರೀತಿಯು “ಎಲ್ಲವನ್ನೂ ನಂಬುತ್ತದೆ” ಎಂಬುದನ್ನು ನಾವು ಜ್ಞಾಪಕದಲ್ಲಿಟ್ಟುಕೊಳ್ಳಬೇಕಾಗಿದೆ. (1 ಕೊರಿಂಥ 13:7) ನಮ್ಮಲ್ಲಿ ಯಾರೂ ಸುಲಭವಾಗಿ ಮೋಸಹೋಗುವವರಾಗಿರಲು ಬಯಸುವುದಿಲ್ಲ. ಹಾಗಿದ್ದರೂ, ನಮ್ಮ ಸಹೋದರರ ಹೇತುಗಳ ವಿಷಯದಲ್ಲಿ ನಾವು ವಿನಾಕಾರಣ ಸಂಶಯಪಡಬಾರದು. ಸಾಧ್ಯವಿರುವಲ್ಲೆಲ್ಲ, ಆ ವ್ಯಕ್ತಿಗೆ ತಪ್ಪಾದ ಹೇತುಗಳೇ ಇರಲಿಲ್ಲವೆಂದು ನಾವು ಊಹಿಸಿಕೊಳ್ಳೋಣ.—ಕೊಲೊಸ್ಸೆ 3:13.
ಪ್ರೀತಿಯು ತಾಳಿಕೊಳ್ಳುವಂತೆ ನಮಗೆ ಸಹಾಯ ಮಾಡುತ್ತದೆ
16. ಯಾವ ಸನ್ನಿವೇಶಗಳಲ್ಲಿ ನಾವು ಬಹು ತಾಳ್ಮೆಯುಳ್ಳವರಾಗಿರುವಂತೆ ಪ್ರೀತಿಯು ಸಹಾಯ ಮಾಡಬಲ್ಲದು?
16 “ಪ್ರೀತಿ ಬಹು ತಾಳ್ಮೆಯುಳ್ಳದ್ದು” ಎಂದು ಪೌಲನು ನಮಗೆ ಹೇಳುತ್ತಾನೆ. (1 ಕೊರಿಂಥ 13:4) ನಾವು ತೊಂದರೆಭರಿತ ಪರಿಸ್ಥಿತಿಗಳನ್ನು, ಬಹುಶಃ ದೀರ್ಘ ಸಮಯದ ವರೆಗೆ ತಾಳಿಕೊಳ್ಳುವಂತೆ ಅದು ಸಹಾಯ ಮಾಡುತ್ತದೆ. ಉದಾಹರಣೆಗೆ, ಧಾರ್ಮಿಕವಾಗಿ ವಿಭಜಿಸಲ್ಪಟ್ಟಿರುವ ಕುಟುಂಬದಲ್ಲಿ ಅನೇಕ ಕ್ರೈಸ್ತರು ವರ್ಷಗಟ್ಟಲೆ ಜೀವಿಸಿದ್ದಾರೆ. ಕೆಲವರು ಆಯ್ಕೆಯಿಂದಲ್ಲ ಬದಲಿಗೆ “ಕರ್ತನಲ್ಲಿ” ಯೋಗ್ಯವಾದ ಸಂಗಾತಿಯನ್ನು ಕಂಡುಕೊಳ್ಳಲು ಅಶಕ್ತರಾದ ಕಾರಣ ಅವಿವಾಹಿತರಾಗಿ ಉಳಿದಿದ್ದಾರೆ. (1 ಕೊರಿಂಥ 7:39; 2 ಕೊರಿಂಥ 6:14) ನಿಶಕ್ತಗೊಳಿಸುವ ಆರೋಗ್ಯದ ಸಮಸ್ಯೆಗಳೊಂದಿಗೆ ಹೆಣಗಾಡುವವರೂ ಇದ್ದಾರೆ. (ಗಲಾತ್ಯ 4:13, 14; ಫಿಲಿಪ್ಪಿ 2:25-30) ಈ ಅಪರಿಪೂರ್ಣ ವ್ಯವಸ್ಥೆಯಲ್ಲಿ, ಪ್ರತಿಯೊಬ್ಬರೂ ತಮ್ಮ ಜೀವಿತದ ಸನ್ನಿವೇಶಗಳನ್ನು ಒಂದಲ್ಲ ಒಂದು ರೀತಿಯಲ್ಲಿ ತಾಳಿಕೊಳ್ಳಬೇಕಾಗಿದೆ.—ಮತ್ತಾಯ 10:22; ಯಾಕೋಬ 1:12.
17. ಎಲ್ಲವನ್ನೂ ತಾಳಿಕೊಳ್ಳಲು ಯಾವುದು ನಮಗೆ ಸಹಾಯ ಮಾಡುವುದು?
17 ಪ್ರೀತಿಯು “ಎಲ್ಲವನ್ನೂ ಅಡಗಿಸಿಕೊಳ್ಳುತ್ತದೆ, . . . ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ಸಹಿಸಿಕೊಳ್ಳುತ್ತದೆ” ಎಂಬ ಆಶ್ವಾಸನೆಯನ್ನು ಪೌಲನು ನಮಗೆ ಕೊಡುತ್ತಾನೆ. (1 ಕೊರಿಂಥ 13:7) ಯೆಹೋವನಿಗಾಗಿರುವ ನಮ್ಮ ಪ್ರೀತಿಯು, ನೀತಿಯ ಸಲುವಾಗಿ ಯಾವುದೇ ಸನ್ನಿವೇಶವನ್ನು ತಾಳಿಕೊಳ್ಳುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡುವುದು. (ಮತ್ತಾಯ 16:24; 1 ಕೊರಿಂಥ 10:13) ನಾವು ಹುತಾತ್ಮರಾಗಲು ಬಯಸುವುದಿಲ್ಲ. ಬದಲಿಗೆ ನಮ್ಮ ಗುರಿಯು, ಶಾಂತಿಪೂರ್ಣ ಹಾಗೂ ನೆಮ್ಮದಿಯ ಜೀವಿತಗಳನ್ನು ನಡೆಸುವುದಾಗಿದೆ. (ರೋಮಾಪುರ 12:18; 1 ಥೆಸಲೊನೀಕ 4:11, 12) ಆದರೂ, ನಂಬಿಕೆಯ ಪರೀಕ್ಷೆಗಳು ಎದುರುಗೊಳ್ಳುವಾಗ, ಇವುಗಳನ್ನು ನಾವು ಕ್ರೈಸ್ತ ಶಿಷ್ಯತನಕ್ಕೆ ತೆರಬೇಕಾದ ಬೆಲೆಯೋಪಾದಿ ಸಂತೋಷದಿಂದ ತಾಳಿಕೊಳ್ಳುತ್ತೇವೆ. (ಲೂಕ 14:28-33) ನಾವು ತಾಳಿಕೊಂಡಂತೆ, ಸಕಾರಾತ್ಮಕವಾದ ನೋಟವನ್ನು ಕಾಪಾಡಿಕೊಳ್ಳುತ್ತೇವೆ, ಮತ್ತು ಕಷ್ಟದ ಸನ್ನಿವೇಶಗಳ ಮಧ್ಯೆಯೂ ಅತ್ಯುತ್ತಮವಾದ ಪರಿಣಾಮಕ್ಕಾಗಿ ನಿರೀಕ್ಷಿಸುತ್ತೇವೆ.
18. ಯಾವ ರೀತಿಯಲ್ಲಿ ಅನುಕೂಲಕರವಾದ ಸಮಯದಲ್ಲಿಯೂ ತಾಳ್ಮೆಯ ಅಗತ್ಯವಿದೆ ಎಂಬುದನ್ನು ವಿವರಿಸಿರಿ.
18 ಸಂಕಟದ ಸಮಯವು ಮಾತ್ರ ನಮ್ಮಿಂದ ತಾಳ್ಮೆಯನ್ನು ಕೇಳಿಕೊಳ್ಳುವ ಸಂದರ್ಭವಾಗಿರುವುದಿಲ್ಲ. ಕೆಲವೊಮ್ಮೆ, ಕಷ್ಟಕರ ಸನ್ನಿವೇಶಗಳು ಎದುರಾಗಲಿ ಇಲ್ಲದಿರಲಿ, ನಿರ್ದಿಷ್ಟವಾದ ಪಥದಲ್ಲಿ ಮುಂದುವರಿಯುತ್ತಾ ಇರುವುದು ತಾನೇ ತಾಳಿಕೊಳ್ಳುವ ಅರ್ಥದಲ್ಲಿದೆ. ತಾಳಿಕೊಳ್ಳುವುದರಲ್ಲಿ, ಒಳ್ಳೆಯ ಆತ್ಮಿಕ ದಿನಚರಿಯನ್ನು ಕಾಪಾಡಿಕೊಳ್ಳುವುದೂ ಸೇರಿರುತ್ತದೆ. ಉದಾಹರಣೆಗೆ, ನಿಮ್ಮ ಪರಿಸ್ಥಿತಿಗೆ ತಕ್ಕಂತೆ ನೀವು ಶುಶ್ರೂಷೆಯಲ್ಲಿ ಅರ್ಥಪೂರ್ಣವಾಗಿ ಪಾಲ್ಗೊಳ್ಳುತ್ತೀರೊ? ನೀವು ದೇವರ ವಾಕ್ಯವನ್ನು ಓದಿ, ಮನನ ಮಾಡುತ್ತೀರೊ? ಪ್ರಾರ್ಥನೆಯ ಮೂಲಕ ನಿಮ್ಮ ಸ್ವರ್ಗೀಯ ತಂದೆಯೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಳ್ಳುತ್ತೀರೊ? ನೀವು ಕ್ರಮವಾಗಿ ಸಭಾ ಕೂಟಗಳಿಗೆ ಹಾಜರಾಗುತ್ತೀರೊ, ಮತ್ತು ನಿಮ್ಮ ಜೊತೆ ವಿಶ್ವಾಸಿಗಳೊಂದಿಗೆ ವಿನಿಮಯಮಾಡಿಕೊಳ್ಳುವ ಉತ್ತೇಜನದಿಂದ ಪ್ರಯೋಜನ ಪಡೆದುಕೊಳ್ಳುತ್ತೀರೊ? ಹಾಗಿರುವಲ್ಲಿ, ನೀವು ಇರುವ ಸಮಯ ಅನುಕೂಲಕರವಾಗಿರಲಿ ಇಲ್ಲದಿರಲಿ, ನೀವು ತಾಳಿಕೊಳ್ಳುತ್ತಾ ಇದ್ದೀರಿ. ಹೀಗೆ ಮಾಡುವುದನ್ನು ಬಿಟ್ಟುಬಿಡಬೇಡಿರಿ, “ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯು”ವಿರಿ.—ಗಲಾತ್ಯ 6:9.
ಪ್ರೀತಿ—ಒಂದು “ಉತ್ಕೃಷ್ಟವಾದ ಮಾರ್ಗ”
19. ಪ್ರೀತಿಯು ಹೇಗೆ ಒಂದು “ಉತ್ಕೃಷ್ಟವಾದ ಮಾರ್ಗ”ವಾಗಿದೆ?
19 ಈ ದೈವಿಕ ಗುಣವನ್ನು ಒಂದು “ಉತ್ಕೃಷ್ಟವಾದ ಮಾರ್ಗ”ವೆಂದು ಕರೆಯುವ ಮೂಲಕ, ಪೌಲನು ಪ್ರೀತಿಯನ್ನು ವ್ಯಕ್ತಪಡಿಸುವುದರ ಮಹತ್ವವನ್ನು ಒತ್ತಿಹೇಳಿದನು. (1 ಕೊರಿಂಥ 12:31) ಯಾವ ಅರ್ಥದಲ್ಲಿ “ಉತ್ಕೃಷ್ಟ”ವಾದದ್ದು? ಪೌಲನು ಆಗ ತಾನೇ, ಪ್ರಥಮ ಶತಮಾನದ ಕ್ರೈಸ್ತರಲ್ಲಿ ಸಾಮಾನ್ಯವಾಗಿದ್ದ ಆತ್ಮದ ವರಗಳನ್ನು ನಮೂದಿಸಿದ್ದನು. ಕೆಲವರಿಗೆ ಪ್ರವಾದಿಸುವ ವರ, ಇತರರಿಗೆ ರೋಗಗಳನ್ನು ವಾಸಿಮಾಡುವ ವರ, ಇನ್ನೂ ಅನೇಕರಿಗೆ ಅನ್ಯ ಭಾಷೆಗಳಲ್ಲಿ ಮಾತಾಡುವ ವರವಿತ್ತು. ಇವು ನಿಜವಾಗಿಯೂ ಅದ್ಭುತಕರವಾದ ವರಗಳಾಗಿದ್ದವು! ಆದರೂ, ಪೌಲನು ಕೊರಿಂಥದವರಿಗೆ ಹೇಳಿದ್ದು: “ನಾನು ಮನುಷ್ಯರ ಭಾಷೆಗಳನ್ನೂ ದೇವದೂತರ ಭಾಷೆಗಳನ್ನೂ ಆಡುವವನಾದರೂ ಪ್ರೀತಿಯಿಲ್ಲದವನಾಗಿದ್ದರೆ ನಾದಕೊಡುವ ಕಂಚೂ ಗಣಗಣಿಸುವ ತಾಳವೂ ಆಗಿದ್ದೇನೆ. ನನಗೆ ಪ್ರವಾದನವರವಿದ್ದರೂ ಎಲ್ಲಾ ರಹಸ್ಯಗಳೂ ಸಕಲ ವಿಧವಾದ ವಿದ್ಯೆಯೂ ತಿಳಿದರೂ, ಬೆಟ್ಟಗಳನ್ನು ತೆಗೆದಿಡುವದಕ್ಕೆ ಬೇಕಾದಷ್ಟು ನಂಬಿಕೆಯಿದ್ದರೂ ನಾನು ಪ್ರೀತಿಯಿಲ್ಲದವನಾಗಿದ್ದರೆ ಏನೂ ಅಲ್ಲದವನಾಗಿದ್ದೇನೆ.” (1 ಕೊರಿಂಥ 13:1, 2) ಮಹತ್ವದ ಕೆಲಸಗಳೆಂದು ಎಣಿಸಲ್ಪಡುವ ಕೆಲಸಗಳು, ದೇವರಿಗಾಗಿ ಮತ್ತು ನೆರೆಯವರಿಗಾಗಿರುವ ಪ್ರೀತಿಯಿಂದ ಪ್ರಚೋದಿತವಾಗದೆ ಇರುವಲ್ಲಿ, ಅವು “ನಿರ್ಜೀವಕರ್ಮ”ಗಳಾಗುತ್ತವೆ.—ಇಬ್ರಿಯ 6:1.
20. ನಾವು ಪ್ರೀತಿಯನ್ನು ಬೆಳಸಿಕೊಳ್ಳಬೇಕಾದರೆ, ಸತತವಾದ ಪ್ರಯತ್ನವು ಏಕೆ ಅಗತ್ಯವಾಗಿದೆ?
20 ಪ್ರೀತಿಯೆಂಬ ದೈವಿಕ ಗುಣವನ್ನು ಬೆಳಸಿಕೊಳ್ಳುವುದಕ್ಕಾಗಿರುವ ಮತ್ತೊಂದು ಕಾರಣವನ್ನು ಯೇಸು ನಮಗೆ ಕೊಡುತ್ತಾನೆ. ಅವನಂದದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ [“ಪ್ರೀತಿಯಿರುವುದಾದರೆ,” NW] ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ‘ಇರುವುದಾದರೆ’ ಎಂಬ ಪದವು, ಪ್ರತಿಯೊಬ್ಬ ಕ್ರೈಸ್ತನು, ಅವನೊ ಅವಳೊ ಪ್ರೀತಿಯನ್ನು ವ್ಯಕ್ತಪಡಿಸಲು ಕಲಿತುಕೊಳ್ಳುವರೊ ಎಂಬುದನ್ನು ಸ್ವತಃ ನಿರ್ಧರಿಸುವಂತೆ ಕೇಳಿಕೊಳ್ಳುತ್ತದೆ. ಎಷ್ಟೆಂದರೂ, ಅನ್ಯ ದೇಶದಲ್ಲಿ ವಾಸಿಸುತ್ತಿರುವುದರಿಂದ ಮಾತ್ರ ನಾವು ಅದರ ಭಾಷೆಯನ್ನು ಮಾತಾಡಲು ಕಲಿತುಕೊಳ್ಳುವಂತೆ ಪ್ರೇರೇಪಿಸಲ್ಪಡಲಾರೆವು. ಅದೇ ರೀತಿಯಲ್ಲಿ, ಕೇವಲ ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಹಾಜರಾಗುವ ಮೂಲಕ ಇಲ್ಲವೆ ಜೊತೆ ಕ್ರೈಸ್ತರೊಂದಿಗೆ ಸಹವಾಸಿಸುವ ಮೂಲಕ, ನಾವು ಯಾವ ಪ್ರಯತ್ನವನ್ನೂ ಮಾಡದೆ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಈ “ಭಾಷೆಯನ್ನು” ಕಲಿತುಕೊಳ್ಳಲು, ಸತತವಾಗಿ ಪ್ರಯತ್ನಿಸಬೇಕಾಗಿದೆ.
21, 22. (ಎ) ಪೌಲನು ಯಾವುದರ ಕುರಿತು ಚರ್ಚಿಸಿದನೊ ಆ ಪ್ರೀತಿಯ ಯಾವುದಾದರೊಂದು ಅಂಶಕ್ಕೆ ತಕ್ಕಂತೆ ನಾವು ನಡೆದುಕೊಳ್ಳದಿದ್ದಲ್ಲಿ, ಹೇಗೆ ಪ್ರತಿಕ್ರಿಯಿಸಬೇಕು? (ಬಿ) “ಪ್ರೀತಿ ಎಂದಿಗೂ ಬಿದ್ದುಹೋಗುವದಿಲ್ಲ” ಎಂದು ಯಾವ ರೀತಿಯಲ್ಲಿ ಹೇಳಸಾಧ್ಯವಿದೆ?
21 ಪೌಲನಿಂದ ಚರ್ಚಿಸಲ್ಪಟ್ಟ ಪ್ರೀತಿಯ ಯಾವುದೊ ಅಂಶಕ್ಕೆ ತಕ್ಕಂತೆ ಕೆಲವೊಮ್ಮೆ ನೀವು ನಡೆದುಕೊಳ್ಳಲು ಸಾಧ್ಯವಾಗದೇ ಇರಬಹುದು. ಆ ಸಮಯದಲ್ಲಿ ಎದೆಗುಂದುವ ಅಗತ್ಯವಿಲ್ಲ. ಪ್ರೀತಿಯ ಗುಣಗಳನ್ನು ತಾಳ್ಮೆಯಿಂದ ಸ್ವತಃ ಪ್ರಯೋಗಿಸಿ ನೋಡಿರಿ. ಸಲಹೆಗಾಗಿ ಬೈಬಲಿನ ಕಡೆಗೆ ತಿರುಗಿರಿ ಮತ್ತು ಇತರರೊಂದಿಗೆ ವ್ಯವಹರಿಸುವಾಗ ಅದರ ತತ್ವಗಳನ್ನು ಅನ್ವಯಿಸಿಕೊಳ್ಳಿರಿ. ಸ್ವತಃ ಯೆಹೋವನೇ ನಮಗಿಟ್ಟಿರುವ ಮಾದರಿಯನ್ನು ಎಂದಿಗೂ ಮರೆಯದಿರಿ. ಪೌಲನು ಎಫೆಸದವರಿಗೆ ಬುದ್ಧಿವಾದ ನೀಡಿದ್ದು: “ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ. ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿದನಲ್ಲಾ.”—ಎಫೆಸ 4:32.
22 ಹೊಸ ಭಾಷೆಯನ್ನು ಮಾತಾಡುವುದು ಸಕಾಲದಲ್ಲಿ ಸುಲಭವಾಗುವಂತೆಯೇ, ಕಾಲಾನಂತರ ಪ್ರೀತಿಯನ್ನು ವ್ಯಕ್ತಪಡಿಸುವುದೂ ಸುಲಭವಾಗಿದೆಯೆಂದು ನೀವು ಕಂಡುಕೊಳ್ಳಬಹುದು. “ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ” ಎಂಬ ಆಶ್ವಾಸನೆಯನ್ನು ಪೌಲನು ನಮಗೆ ಕೊಡುತ್ತಾನೆ. (1 ಕೊರಿಂಥ 13:8) ಆತ್ಮದ ಅದ್ಭುತಕರ ವರಗಳಿಗೆ ಅಸದೃಶವಾಗಿ, ಪ್ರೀತಿಯು ಸದಾಕಾಲ ಅಸ್ತಿತ್ವದಲ್ಲಿರುವುದು. ಆದುದರಿಂದ ಈ ದೈವಿಕ ಗುಣವನ್ನು ವ್ಯಕ್ತಪಡಿಸಲು ಕಲಿಯುತ್ತಾ ಇರಿ. ಅದು ಪೌಲನು ಹೇಳುವಂತೆ, ಒಂದು “ಉತ್ಕೃಷ್ಟವಾದ ಮಾರ್ಗ”ವಾಗಿದೆ.
ನೀವು ವಿವರಿಸಬಲ್ಲಿರೊ?
◻ ಅಹಂಕಾರವನ್ನು ಜಯಿಸಲು ಪ್ರೀತಿಯು ನಮಗೆ ಹೇಗೆ ಸಹಾಯ ಮಾಡಬಲ್ಲದು?
◻ ಸಭೆಯಲ್ಲಿ ಶಾಂತಿಯನ್ನು ಪ್ರವರ್ಧಿಸಲು ಪ್ರೀತಿಯು ಯಾವ ವಿಧಗಳಲ್ಲಿ ನಮಗೆ ಸಹಾಯ ಮಾಡಬಲ್ಲದು?
◻ ತಾಳಿಕೊಳ್ಳುವಂತೆ ಪ್ರೀತಿಯು ಹೇಗೆ ನಮಗೆ ಸಹಾಯ ಮಾಡಬಲ್ಲದು?
◻ ಯಾವ ರೀತಿಯಲ್ಲಿ ಪ್ರೀತಿಯು ಒಂದು “ಉತ್ಕೃಷ್ಟವಾದ ಮಾರ್ಗ”ವಾಗಿದೆ?
[ಪುಟ 19 ರಲ್ಲಿರುವ ಚಿತ್ರ]
ನಮ್ಮ ಜೊತೆ ವಿಶ್ವಾಸಿಗಳ ತಪ್ಪುಗಳನ್ನು ಮನ್ನಿಸಲು ಪ್ರೀತಿಯು ನಮಗೆ ಸಹಾಯ ಮಾಡುವುದು
[ಪುಟ 23 ರಲ್ಲಿರುವ ಚಿತ್ರಗಳು]
ನಮ್ಮ ದೇವಪ್ರಭುತ್ವ ದಿನಚರಿಯನ್ನು ಕಾಪಾಡಿಕೊಳ್ಳುವುದೇ ತಾಳ್ಮೆಯ ಅರ್ಥವಾಗಿದೆ