ಒಂದು “ಪವಿತ್ರ” ನಿವೇಶನಕ್ಕಾಗಿ ಕಾದಾಟ
ಜುಲೈ 15, 1099ರಂದು, ರೋಮ್ನಲ್ಲಿದ್ದ ಪೋಪರ ಅಧಿಕಾರದ ಕೆಳಗೆ ನಡೆಸಲ್ಪಟ್ಟ ಪ್ರಥಮ ಧರ್ಮಯುದ್ಧವು ಯೆರೂಸಲೇಮನ್ನು ಸ್ವಾಧೀನಪಡಿಸಿಕೊಳ್ಳುವ ತನ್ನ ಗುರಿಯನ್ನು ಸಾಧಿಸಿತು. ಆ ಪ್ರದೇಶದಲ್ಲಾದ ಕಗ್ಗೊಲೆಯು ಭಯಂಕರವಾಗಿತ್ತು! ಅಂದಿನ ಆ ದುರಂತದಿಂದ ಒಬ್ಬ ಪ್ರಾಂತಾಧಿಪತಿಯೂ ಅವನ ಅಂಗರಕ್ಷನೂ ಮಾತ್ರ ತಪ್ಪಿಸಿಕೊಂಡಿದ್ದರು. ಅವನು ಭಾರಿ ಮೊತ್ತದ ಹಣವನ್ನು ಲಂಚವಾಗಿ ಕೊಟ್ಟಿದ್ದರಿಂದಲೇ ಅವರಿಬ್ಬರು ಪಾರಾದರು. ದ ಕ್ರುಸೇಡ್ಸ್ ಎಂಬ ತನ್ನ ಪುಸ್ತಕದಲ್ಲಿ, ಆ್ಯಂಟನಿ ಬ್ರಿಜ್ ಎಂಬ ವೈದಿಕನು, ಅಲ್ಲಿದ್ದ ಮುಸ್ಲಿಮ್ ಹಾಗೂ ಯೆಹೂದಿ ನಿವಾಸಿಗಳಿಗೆ ಏನು ಸಂಭವಿಸಿತೆಂಬುದರ ಕುರಿತು ವರದಿಸುತ್ತಾನೆ: “ತಮ್ಮ ಮನಬಂದಂತೆ ವರ್ತಿಸುವ ಅವಕಾಶ ಸಿಕ್ಕಿದಾಗ, ರಕ್ತವನ್ನು ಸುರಿಸುವ ಭಾರಿ ಆಸೆ ಅವರಲ್ಲಿ ಹುಟ್ಟಿತು. . . . ನಗರದಲ್ಲಿ ತಮ್ಮ ಕೈಗೆ ಸಿಕ್ಕಿದಂತಹ ಪ್ರತಿಯೊಬ್ಬ ಪುರುಷ, ಸ್ತ್ರೀ ಮತ್ತು ಮಗುವನ್ನು ಅವರು ಕೊಂದುಹಾಕಿದರು, . . . ಕೊಲ್ಲಲು ಅವರಿಗೆ ಯಾರೂ ಸಿಗದೆ ಹೋದಾಗ, ಈ ವಿಜಯಿಗಳು ದೇವರಿಗೆ ಉಪಕಾರ ಸ್ತುತಿಗಳನ್ನು ಸಲ್ಲಿಸಲು, ಹೋಲಿ ಸೆಪಲ್ಕರ್ (ಕ್ರಿಸ್ತನ ಸಮಾಧಿ ಗುಹೆ) ಚರ್ಚಿಗೆ ಹೋಗುತ್ತಾ . . . ನಗರದ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.”
ಆ ಧರ್ಮಯುದ್ಧದ ಗೆಲುವಿನಂದಿನಿಂದ ಯೆರೂಸಲೇಮಿನಲ್ಲಿನ ಕ್ರೈಸ್ತಪ್ರಪಂಚದ ಉಪಸ್ಥಿತಿಯು, ರೋಮನ್ ಕ್ಯಾತೊಲಿಕ್, ಈಸ್ಟರ್ನ್ ಆರ್ತೋಡಾಕ್ಸ್, ಮತ್ತು ಕ್ರೈಸ್ತರೆಂದು ಹೇಳಿಕೊಳ್ಳುವ ಇತರ ಧರ್ಮಗಳ ನಡುವಿನ ಸಂಕ್ಷೋಭೆಯಿಂದ ಗುರುತಿಸಲ್ಪಟ್ಟಿದೆ. 1850ರಲ್ಲಿ ಚರ್ಚಿನ ಹಲವಾರು ನಾಯಕರುಗಳ ಮಧ್ಯೆ, ಯೆರೂಸಲೇಮ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಪವಿತ್ರ ನಿವೇಶನಗಳ ವಿಷಯದಲ್ಲಿ ಜಗಳವಾಯಿತು. ಇದು ಕ್ರೀಮಿಯನ್ ಯುದ್ಧಕ್ಕೆ ಕಾರಣವಾದ ಅಂಶಗಳಲ್ಲಿ ಪ್ರಧಾನವಾದ ಅಂಶವಾಗಿತ್ತು. ಇಂಗ್ಲೆಂಡ್, ಫ್ರಾನ್ಸ್, ಮತ್ತು ಟರ್ಕಿ ದೇಶಗಳು ರಷ್ಯಾ ದೇಶದ ವಿರುದ್ಧ ಹೋರಾಡಿ, ಐದು ಲಕ್ಷ ಜೀವಗಳ ಬಲಿ ತೆತ್ತವು.
ಯೆರೂಸಲೇಮ್ ಮತ್ತು ಅದರ ಪವಿತ್ರ ನಿವೇಶನಗಳ ಸಂಬಂಧದಲ್ಲಿ ಕ್ರೈಸ್ತಪ್ರಪಂಚಕ್ಕಿದ್ದ ಭಿನ್ನಾಭಿಪ್ರಾಯಗಳನ್ನು ಯುದ್ಧವು ಕೊನೆಗಾಣಿಸಲಿಲ್ಲ. ಆ ಸಮಯದಲ್ಲಿ ದೇಶವನ್ನು ಆಳುತ್ತಿದ್ದ ತುರ್ಕಿ ಮಹಮ್ಮದೀಯರು, ಪವಿತ್ರ ನಿವೇಶನಗಳನ್ನು ವಿಭಿನ್ನ ಧರ್ಮಗಳ ಜನರ ನಡುವೆ ವಿಂಗಡಿಸುವ ಮೂಲಕ ಶಾಂತಿಯನ್ನು ಸ್ಥಾಪಿಸಿಲು ಪ್ರಯತ್ನಿಸಿದರು. “ಈ ತತ್ವವು, ನವೆಂಬರ್ 1947ರ ವಿಂಗಡನಾ ಠರಾವಿನೊಂದಿಗೆ ವಿಶ್ವ ಸಂಸ್ಥೆಯಿಂದ ಸ್ವೀಕರಿಸಲ್ಪಟ್ಟಿತು” ಎಂದು ಇದೇ ಯೆರೂಸಲೇಮ್ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಡಾ. ಮನಾಶೇ ಹಾರೆಲ್ ವಿವರಿಸುತ್ತಾರೆ. ಹೀಗೆ, ಇದು ಅಂತಾರಾಷ್ಟ್ರೀಯ ನಿಯಮದ ಭಾಗವಾಗಿದೆ. ಈ ಕಾರಣ, ಹೋಲಿ ಸೆಪಲ್ಕರ್ ಚರ್ಚಿನ ಸ್ವಾಮ್ಯವು, ರೋಮನ್ ಕ್ಯಾತೊಲಿಕ್, ಗ್ರೀಕ್ ಆರ್ತೋಡಾಕ್ಸ್, ಅರ್ಮಿನಿಯನ್, ಸಿರಿಯನ್, ಮತ್ತು ಕಾಪ್ಟ್ ಜನರ ನಡುವೆ ವಿಂಗಡಿಸಲ್ಪಟ್ಟಿತು. ಕೊನೆಯದಾಗಿ, ಇತಿಯೋಪ್ಯರಾದ ಆ್ಯಬಿಸಿನೀಯನ್ ಚರ್ಚಿನ ವೈದಿಕರು, ಆ ಚರ್ಚಿನ ಚಾವಣಿಯ ಮೇಲೆ ಕೆಲವು ಗುಡಿಸಲುಗಳನ್ನು ಕಟ್ಟಿ, ಅದರಲ್ಲಿ ತಮ್ಮ ಸದಸ್ಯರು ವಾಸಿಸುವಂತೆ ಏರ್ಪಡಿಸುವ ಮೂಲಕ, ಆ ಚರ್ಚು ತಮಗೆ ಸೇರಬೇಕೆಂದು ವಾದಿಸಿದ್ದಾರೆ. ಹೋಲಿ ಸೆಪಲ್ಕರ್ ಚರ್ಚು, ಕ್ರೈಸ್ತಪ್ರಪಂಚದ ಅತ್ಯಂತ ಪವಿತ್ರವಾದ ನಿವೇಶನವೆಂದು ಅನೇಕರು ವೀಕ್ಷಿಸುತ್ತಾರೆ. ಈ ನಿವೇಶನವು ದೇವಾಲಯಗಳು, ಮೂರ್ತಿಗಳು ಮತ್ತು ಪ್ರತಿಮೆಗಳಿಂದ ತುಂಬಿದೆ. ಗಾರ್ಡನ್ಸ್ ಕ್ಯಾಲ್ವರಿ ಎಂಬ ಮತ್ತೊಂದು ನಾಮಮಾತ್ರದ ಪವಿತ್ರ ನಿವೇಶನವನ್ನು, ಯೇಸುವು ವಧಿಸಲ್ಪಟ್ಟು, ಹೂಳಲ್ಪಟ್ಟಿರಬಹುದಾದ ಸ್ಥಳದೋಪಾದಿ ಕೆಲವು ಪ್ರಾಟೆಸ್ಟಂಟರು ಪೂಜ್ಯಭಾವನೆಯಿಂದ ಕಾಣುತ್ತಾರೆ.
ಪವಿತ್ರ ನಿವೇಶನಗಳಲ್ಲಿ ನಂಬಿಕೆಯಿಟ್ಟಿದ್ದ ಒಬ್ಬಾಕೆ ಸ್ತ್ರೀಗೆ ಯೇಸು ಬಹಳ ಸಮಯದ ಹಿಂದೆ ಹೀಗೆ ಹೇಳಿದನು: “ಆ ಕಾಲದಲ್ಲಿ ನೀವು ತಂದೆಯನ್ನು ಆರಾಧಿಸಬೇಕಾದರೆ ಈ ಬೆಟ್ಟಕ್ಕೂ ಹೋಗುವದಿಲ್ಲ, ಯೆರೂಸಲೇಮಿಗೂ ಹೋಗುವದಿಲ್ಲ. . . . [ದೇವರನ್ನು] ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು.” (ಯೋಹಾನ 4:21-24) ಆ ಕಾರಣ, ಸತ್ಯ ಕ್ರೈಸ್ತರು ಪವಿತ್ರ ನಿವೇಶನಗಳನ್ನು ಪೂಜ್ಯಭಾವನೆಯಿಂದ ಕಾಣುವುದಿಲ್ಲ. ಸಾ.ಶ. 70ರಲ್ಲಿ ರೋಮನ್ ಸೈನಿಕರಿಂದಾದ ಅಪನಂಬಿಗಸ್ತ ಯೆರೂಸಲೇಮಿನ ನಾಶನವು, ಕ್ರೈಸ್ತಪ್ರಪಂಚ ಎಂಬಾಕೆಗೆ ಒಂದು ಎಚ್ಚರಿಕೆಯ ರೂಪದಲ್ಲಿದೆ. ತಾನು ಕ್ರೈಸ್ತಳೆಂಬ ಅವಳ ವಾದವು, ಅವಳ ಮೂರ್ತಿಪೂಜೆ, ಭಿನ್ನಾಭಿಪ್ರಾಯಗಳು, ಮತ್ತು ರಕ್ತಾಪರಾಧದೋಷದಿಂದ ಸುಳ್ಳಾಗಿಸಲ್ಪಟ್ಟಿದೆ. ಆದಕಾರಣ, ಮಹಾ ಬಾಬೆಲಿನಲ್ಲಿ ಒಳಗೂಡಿರುವ ಎಲ್ಲ ಧರ್ಮಗಳಿಗೆ ದೇವರು ಮುಂತಿಳಿಸಿರುವ ಅಂತ್ಯವನ್ನೇ ಅವಳೂ ಅನುಭವಿಸುವಳು.—ಪ್ರಕಟನೆ 18:2-8.