ಪರೀಕ್ಷೆಗಳ ಮಧ್ಯೆಯೂ ಯೆಹೋವನಲ್ಲಿ ಉಲ್ಲಾಸಿಸುವುದು
ಜಾರ್ಜ್ ಸ್ಕೀಪೀಯೊ ಅವರು ಹೇಳಿದಂತೆ
ಇಸವಿ 1945ರಲ್ಲಿ ನಾನು ಆಸ್ಪತ್ರೆಯ ವಾರ್ಡಿನಲ್ಲಿ ಮಲಗಿದ್ದೆ. ನನ್ನ ಕೈಕಾಲುಗಳನ್ನು ಬಿಟ್ಟು ದೇಹದ ಉಳಿದ ಭಾಗಕ್ಕೆ ಲಕ್ವ ಹೊಡೆದಿತ್ತು. ನನ್ನ ಈ ಸ್ಥಿತಿಯು ತಾತ್ಕಾಲಿಕವಾಗಿತ್ತೆಂದು ನಾನು ನೆನಸಿದೆ. ಆದರೆ ನಾನು ಪುನಃ ಎಂದಿಗೂ ನಡೆಯಲಾರೆ ಎಂದು ಇತರರು ಸಂದೇಹ ವ್ಯಕ್ತಪಡಿಸಿದರು. ಯಾವಾಗಲೂ ಚಟುವಟಿಕೆಯಿಂದಿದ್ದ 17 ವರ್ಷದ ಹುಡುಗನಿಗೆ ಇದು ಎಂತಹ ಒಂದು ಪರೀಕ್ಷೆಯಾಗಿತ್ತು! ನಾನು ಅಂತಹ ಮುನ್ಸೂಚನೆಯನ್ನು ಅಂಗೀಕರಿಸಲು ನಿರಾಕರಿಸಿದೆ. ನಾನು ಅನೇಕ ಯೋಜನೆಗಳನ್ನು ಹಾಕಿದ್ದೆ; ಮುಂದಿನ ವರ್ಷ ನನ್ನ ಕಂಪೆನಿಯ ಯಜಮಾನನ ಜೊತೆ ಇಂಗ್ಲೆಂಡ್ಗೆ ಹೋಗುವುದೂ ಅದರಲ್ಲಿ ಒಳಗೂಡಿತ್ತು.
ನಮ್ಮ ಸೆಂಟ್ ಹೆಲೆನ ದ್ವೀಪದಾದ್ಯಂತ ಹರಡಿದ್ದ ಪೋಲಿಯೋ ಸಾಂಕ್ರಾಮಿಕ ರೋಗಕ್ಕೆ ನಾನು ಬಲಿಯಾಗಿದ್ದೆ. ಈ ರೋಗವು 11 ಜನರನ್ನು ಕೊಂದು, ಅಸಂಖ್ಯಾತ ಮಂದಿಯನ್ನು ಅಂಗವಿಕಲರನ್ನಾಗಿ ಮಾಡಿತ್ತು. ಹಾಸಿಗೆಯಲ್ಲೇ ಮಲಗಿಕೊಂಡು, ನನ್ನ ಅಲ್ಪಾವಧಿಯ ಜೀವನ ಹಾಗೂ ನನ್ನ ಭವಿಷ್ಯತ್ತಿನ ಕುರಿತು ಯೋಚಿಸಲು ನನಗೆ ಬಹಳಷ್ಟು ಸಮಯವು ಸಿಗುತ್ತಿತ್ತು. ನಾನು ಹಾಗೆ ಯೋಚಿಸುತ್ತಿದ್ದಾಗ, ನನಗೆ ಸಂಕಟವಿರುವುದಾದರೂ, ಆನಂದಿಸಲು ಸಕಾರಣವಿದೆ ಎಂಬುದನ್ನು ನಾನು ಗ್ರಹಿಸಲಾರಂಭಿಸಿದೆ.
ಒಂದು ಚಿಕ್ಕ ಆರಂಭ
1933ರಲ್ಲಿ, ಅಂದರೆ ನಾನು ಐದು ವರ್ಷದವನಿದ್ದಾಗ, ಒಬ್ಬ ಪೊಲೀಸರೂ ಬ್ಯಾಪ್ಟಿಸ್ಟ್ ಚರ್ಚಿನಲ್ಲಿ ಡೀಕನ್ರೂ ಆಗಿದ್ದ ನನ್ನ ತಂದೆ ಟಾಮ್, ಇಬ್ಬರು ಯೆಹೋವನ ಸಾಕ್ಷಿಗಳಿಂದ ಕೆಲವು ಪುಸ್ತಕಗಳನ್ನು ತಂದಿದ್ದರು. ಅವರು ಸ್ವಲ್ಪ ಕಾಲದ ವರೆಗೆ ಈ ದ್ವೀಪವನ್ನು ಸಂದರ್ಶಿಸಲು ಬಂದ ಪೂರ್ಣ ಸಮಯದ ಸೌವಾರ್ತಿಕರು ಅಥವಾ ಪಯನೀಯರರಾಗಿದ್ದರು.
ದ ಹಾರ್ಪ್ ಆಫ್ ಗಾಡ್ ಎಂಬುದು ಅದರಲ್ಲಿ ಒಂದು ಪುಸ್ತಕದ ಶೀರ್ಷಿಕೆಯಾಗಿತ್ತು. ನಮ್ಮ ಕುಟುಂಬದೊಂದಿಗೆ ಮತ್ತು ಇತರ ಆಸಕ್ತ ವ್ಯಕ್ತಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲಿಕ್ಕಾಗಿ ತಂದೆಯವರು ಈ ಪುಸ್ತಕವನ್ನು ಉಪಯೋಗಿಸಿದರು. ಅದರಲ್ಲಿ ತುಂಬ ಜಟಿಲವಾದ ವಿಷಯಗಳು ಇದ್ದವು, ಮತ್ತು ನನಗೆ ಅದು ಸ್ವಲ್ಪವೂ ಅರ್ಥವಾಗುತ್ತಿರಲಿಲ್ಲ. ಆದರೆ ಅವರು ಪ್ರತಿಯೊಂದು ವಚನವನ್ನು ಚರ್ಚಿಸುತ್ತಿದ್ದಾಗ, ನಾನು ನನ್ನ ಬೈಬಲಿನಲ್ಲಿ ಆ ವಚನಗಳಿಗೆ ಅಡಿಗೆರೆಹಾಕುತ್ತಿದ್ದದ್ದು ನನಗೆ ಇನ್ನೂ ನೆನಪಿದೆ. ನಾವು ಅಭ್ಯಾಸಿಸುತ್ತಿರುವುದು ಸತ್ಯವಾಗಿದೆ ಮತ್ತು ತಾನು ಬ್ಯಾಪ್ಟಿಸ್ಟ್ ಚರ್ಚಿನಲ್ಲಿ ಕಲಿಸುತ್ತಿದ್ದ ವಿಷಯವು ಇದಕ್ಕಿಂತ ತೀರ ಭಿನ್ನವಾಗಿತ್ತು ಎಂಬುದನ್ನು ನನ್ನ ತಂದೆ ಅರಿತುಕೊಂಡರು. ಇದರ ಕುರಿತು ಅವರು ಇತರರಿಗೆ ಹೇಳಲಾರಂಭಿಸಿದರು ಮತ್ತು ತ್ರಯೈಕ್ಯವಿಲ್ಲ, ನರಕಾಗ್ನಿಯಿಲ್ಲ, ಮತ್ತು ಅಮರ ಆತ್ಮವಿಲ್ಲ ಎಂದು ಅವರು ಪೀಠದಿಂದ ಬೋಧಿಸುತ್ತಿದ್ದರು. ಇದು ಚರ್ಚಿನಲ್ಲಿ ತುಂಬ ಕಲಹವನ್ನು ಉಂಟುಮಾಡಿತು.
ಕಾಲಕ್ರಮೇಣ, ಈ ವಿವಾದವನ್ನು ಬಗೆಹರಿಸುವ ಪ್ರಯತ್ನದಿಂದ ಒಂದು ಚರ್ಚ್ ಕೂಟವು ಏರ್ಪಡಿಸಲ್ಪಟ್ಟಿತು. “ಯಾರು ಬ್ಯಾಪ್ಟಿಸ್ಟರ ಪಕ್ಷವನ್ನು ವಹಿಸುತ್ತೀರಿ?” ಎಂಬ ಪ್ರಶ್ನೆಯನ್ನು ಕೇಳಲಾಯಿತು. ಬಹಳಷ್ಟು ಮಂದಿ ಎದ್ದುನಿಂತರು. ಮುಂದಿನ ಪ್ರಶ್ನೆಯು ಹೀಗಿತ್ತು: “ಯಾರು ಯೆಹೋವನ ಪಕ್ಷದಲ್ಲಿ ನಿಲ್ಲುತ್ತೀರಿ?” ಸುಮಾರು 10 ಅಥವಾ 12 ಮಂದಿ ಎದ್ದುನಿಂತರು. ಅವರಿಗೆ ಚರ್ಚನ್ನು ಬಿಟ್ಟುಹೋಗುವಂತೆ ಹೇಳಲಾಯಿತು.
ಇದು ಸೆಂಟ್ ಹೆಲೆನದಲ್ಲಿ ಒಂದು ಹೊಸ ಧರ್ಮದ ಚಿಕ್ಕ ಆರಂಭವಾಗಿತ್ತು. ನನ್ನ ತಂದೆಯವರು, ಅಮೆರಿಕದಲ್ಲಿರುವ ವಾಚ್ ಟವರ್ ಸೊಸೈಟಿಯ ಮುಖ್ಯಕಾರ್ಯಾಲಯವನ್ನು ಸಂಪರ್ಕಿಸಿ, ರೆಕಾರ್ಡ್ ಮಾಡಲ್ಪಟ್ಟಿದ್ದ ಬೈಬಲ್ ಭಾಷಣಗಳನ್ನು ಸಾರ್ವಜನಿಕರು ಕೇಳಿಸಿಕೊಳ್ಳಸಾಧ್ಯವಾಗುವಂತೆ ಒಂದು ಟ್ರಾನ್ಸ್ಕ್ರಿಪ್ಷನ್ ಯಂತ್ರವನ್ನು ಕಳುಹಿಸುವಂತೆ ಕೇಳಿಕೊಂಡರು. ಈ ಯಂತ್ರವು ತುಂಬ ದೊಡ್ಡದಾಗಿರುವುದರಿಂದ, ಇದನ್ನು ಸೆಂಟ್ ಹೆಲೆನಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಅವರಿಗೆ ಹೇಳಲಾಯಿತು. ಒಂದು ಚಿಕ್ಕ ಫೋನೋಗ್ರಾಫನ್ನು ಕಳುಹಿಸಲಾಯಿತು ಮತ್ತು ಸ್ವಲ್ಪ ಸಮಯದ ಬಳಿಕ ಸಹೋದರರು ಇನ್ನೂ ಎರಡು ಫೋನೋಗ್ರಾಫ್ಗಳನ್ನು ಕಳುಹಿಸುವಂತೆ ಕೇಳಿಕೊಂಡರು. ಅವರು ಕಾಲ್ನಡಿಗೆಯಲ್ಲಿ ಮತ್ತು ಕತ್ತೆಯ ಮೇಲೆ ಹೋಗಿ, ದ್ವೀಪದಾದ್ಯಂತ ಇದ್ದ ಜನರಿಗೆ ಸುವಾರ್ತೆಯನ್ನು ಮುಟ್ಟಿಸಿದರು.
ಈ ಸಂದೇಶವು ಎಲ್ಲ ಕಡೆಗಳಲ್ಲಿ ಹಬ್ಬಿದಂತೆ, ವಿರೋಧವೂ ಹೆಚ್ಚಾಯಿತು. ನನ್ನ ಶಾಲೆಯಲ್ಲಿ ಮಕ್ಕಳು ಹೀಗೆ ಹಾಡುತ್ತಿದ್ದರು: “ಎಲ್ಲರೂ ಬನ್ನಿ, ಎಲ್ಲರೂ ಬನ್ನಿ, ಟಾಮಿ ಸ್ಕೀಪೀಯೊನ ಗ್ರಾಮ್ಫೋನ್ ಬ್ಯಾಂಡನ್ನು ಕೇಳಿಸಿಕೊಳ್ಳಿ!” ಇದು ನನಗೆ ಒಂದು ಗಂಭೀರ ಪರೀಕ್ಷೆಯಾಗಿತ್ತು; ನಾನು ಒಬ್ಬ ಶಾಲಾಹುಡುಗನಾಗಿದ್ದರಿಂದ, ನನ್ನ ಗೆಳೆಯರ ಸ್ನೇಹವನ್ನು ಗಳಿಸಲು ನಾನು ಬಯಸುತ್ತಿದ್ದೆ. ಆದರೂ ಇದನ್ನು ಸಹಿಸಿಕೊಳ್ಳುವಂತೆ ಯಾವುದು ನನಗೆ ಸಹಾಯ ಮಾಡಿತು?
ಆರು ಮಕ್ಕಳಿದ್ದ ನಮ್ಮ ದೊಡ್ಡ ಕುಟುಂಬಕ್ಕೆ ಕ್ರಮವಾಗಿ ಒಂದು ಕುಟುಂಬ ಬೈಬಲ್ ಅಭ್ಯಾಸವು ನಡೆಸಲ್ಪಡುತ್ತಿತ್ತು. ಪ್ರತಿ ದಿನ ಬೆಳಗ್ಗೆ, ತಿಂಡಿ ತಿನ್ನುವ ಮೊದಲು ನಾವು ಒಟ್ಟಿಗೆ ಬೈಬಲನ್ನು ಓದುತ್ತಿದ್ದೆವು. ನಿಸ್ಸಂದೇಹವಾಗಿಯೂ, ಗತ ವರ್ಷಗಳಲ್ಲಿ ನಮ್ಮ ಕುಟುಂಬವು ಸತ್ಯದಲ್ಲಿ ನಂಬಿಗಸ್ತಿಕೆಯಿಂದ ಮುಂದುವರಿಯುವಂತೆ ಸಹಾಯ ಮಾಡುವುದರಲ್ಲಿ ಇದು ಒಳ್ಳೆಯ ಸಾಧನವಾಗಿತ್ತು. ತೀರ ಚಿಕ್ಕ ಪ್ರಾಯದಲ್ಲೇ ನಾನು ವೈಯಕ್ತಿಕವಾಗಿ ಬೈಬಲಿನ ಕಡೆಗೆ ಪ್ರೀತಿಯನ್ನು ಬೆಳೆಸಿಕೊಂಡೆ, ಮತ್ತು ಇದು ವರೆಗೂ ಕ್ರಮವಾದ ಬೈಬಲ್ ವಾಚನದ ಹವ್ಯಾಸವನ್ನು ನಾನು ಕಾಪಾಡಿಕೊಂಡುಬಂದಿದ್ದೇನೆ. (ಕೀರ್ತನೆ 1:1-3) 14ರ ಪ್ರಾಯದಲ್ಲಿ ನಾನು ಶಾಲೆಯನ್ನು ಬಿಟ್ಟಾಗ, ಸತ್ಯವು ನನ್ನಲ್ಲಿ ಆಳವಾಗಿ ಬೇರೂರಿತ್ತು, ಮತ್ತು ಯೆಹೋವನ ಭಯ ನನ್ನ ಹೃದಯದಲ್ಲಿತ್ತು. ಇದು ಪರೀಕ್ಷೆಗಳ ಎದುರಿನಲ್ಲೂ ಯೆಹೋವನಲ್ಲಿ ಉಲ್ಲಾಸಿಸುವಂತೆ ಮಾಡಿತ್ತು.
ಇನ್ನೂ ಹೆಚ್ಚಿನ ಪರೀಕ್ಷೆಗಳು ಮತ್ತು ಆನಂದಗಳು
ನನ್ನ ಆರಂಭದ ವರ್ಷಗಳು ಹಾಗೂ ನನ್ನ ಭವಿಷ್ಯತ್ತಿನ ಪ್ರತೀಕ್ಷೆಗಳ ಬಗ್ಗೆ ಯೋಚಿಸುತ್ತಾ ನಾನು ಹಾಸಿಗೆಯಲ್ಲಿ ಮಲಗಿದ್ದಾಗ, ಈ ಅಸ್ವಸ್ಥತೆಯು ದೇವರಿಂದ ಬಂದ ಪರೀಕ್ಷೆಯೂ ಅಲ್ಲ ದೇವರು ಬರಮಾಡಿದ ಶಿಕ್ಷೆಯೂ ಅಲ್ಲ ಎಂಬುದು ನನಗೆ ನನ್ನ ಬೈಬಲ್ ಅಭ್ಯಾಸದಿಂದ ಗೊತ್ತಿತ್ತು. (ಯಾಕೋಬ 1:12, 13) ಆದರೂ, ಪೋಲಿಯೋ ಒಂದು ಘೋರ ಪರೀಕ್ಷೆಯಾಗಿತ್ತು, ಮತ್ತು ಅದರ ಪರಿಣಾಮಗಳು ನನ್ನ ಉಳಿದ ಜೀವಮಾನವೆಲ್ಲಾ ಉಳಿಯಲಿಕ್ಕಿದ್ದವು.
ಈ ಅಸ್ವಸ್ಥತೆಯಿಂದ ಚೇತರಿಸಿಕೊಂಡಂತೆ, ನಾನು ಪುನಃ ನಡೆಯಲು ಕಲಿಯಬೇಕಾಗಿತ್ತು. ನನ್ನ ಕೈಗಳ ಕೆಲವು ಸ್ನಾಯುಗಳನ್ನು ಉಪಯೋಗಿಸುವುದು ಅಸಾಧ್ಯವಾಯಿತು. ಒಂದು ದಿನಕ್ಕೆ ನಾನು ಎಷ್ಟು ಬಾರಿ ಬಿದ್ದೆನೋ ಗೊತ್ತಿಲ್ಲ. ಆದರೂ, ಶ್ರದ್ಧಾಪೂರ್ವಕ ಪ್ರಾರ್ಥನೆ ಹಾಗೂ ಸತತ ಪ್ರಯತ್ನದಿಂದ, 1947ರಷ್ಟಕ್ಕೆ ನಾನು ಬೆತ್ತದ ಸಹಾಯದಿಂದ ನಡೆಯಲು ಶಕ್ತನಾದೆ.
ಆ ಸಮಯದಲ್ಲಿ ನಾನು ಡೋರಸ್ ಎಂಬ ಯುವತಿಯನ್ನು ಪ್ರೀತಿಸತೊಡಗಿದೆ. ಅವಳು ಸಹ ನನ್ನ ಧರ್ಮಕ್ಕೆ ಸೇರಿದವಳಾಗಿದ್ದಳು. ಮದುವೆಯಾಗಲು ನಾವು ಇನ್ನೂ ಚಿಕ್ಕ ಪ್ರಾಯದವರಾಗಿದ್ದೆವು, ಆದರೆ ನಡೆಯುವುದರಲ್ಲಿ ಇನ್ನೂ ಹೆಚ್ಚಿನ ಪ್ರಗತಿಯನ್ನು ಮಾಡುವಂತೆ ನಾನು ಪ್ರಚೋದಿತನಾದೆ. ನನ್ನ ಸಂಬಳವು ನನ್ನ ಹೆಂಡತಿಯನ್ನು ಸಾಕಲು ಸಾಕಾಗುತ್ತಿರಲಿಲ್ಲವಾದುದರಿಂದ, ನಾನು ನನ್ನ ಉದ್ಯೋಗವನ್ನು ಬಿಟ್ಟುಬಿಟ್ಟೆ, ಮತ್ತು ನನ್ನ ಸ್ವಂತ ದಂತ ಪ್ರಯೋಗಾಲಯವನ್ನು ತೆರೆದೆ. ಮುಂದಿನ ಎರಡು ವರ್ಷಗಳ ವರೆಗೆ ಅದು ಮುಂದುವರಿಯಿತು. 1950ರಲ್ಲಿ ನಾವು ಮದುವೆಯಾದೆವು. ಅಷ್ಟರೊಳಗೆ ನಾನು ಒಂದು ಚಿಕ್ಕ ಕಾರನ್ನು ಕೊಂಡುಕೊಳ್ಳಲು ಸಾಕಾಗುವಷ್ಟು ಹಣವನ್ನು ಸಂಪಾದಿಸಿದ್ದೆ. ಈಗ ನಾನು ಸಹೋದರರನ್ನು ಕೂಟಗಳಿಗೆ ಹಾಗೂ ಕ್ಷೇತ್ರ ಸೇವೆಗೆ ಕರೆದುಕೊಂಡು ಹೋಗಲು ಸಾಧ್ಯವಾಯಿತು.
ದ್ವೀಪದಲ್ಲಿ ದೇವಪ್ರಭುತ್ವ ಕಾರ್ಯಗಳು ಅಭಿವೃದ್ಧಿಯಾದವು
1951ರಲ್ಲಿ ಸೊಸೈಟಿಯು ತನ್ನ ಮೊತ್ತಮೊದಲ ಪ್ರತಿನಿಧಿಯನ್ನು ನಮ್ಮ ಸ್ಥಳಕ್ಕೆ ಕಳುಹಿಸಿತು. ಯಕೋಬಸ್ ವಾನ್ ಸ್ಟಾಡನ್ ಎಂಬ ಈ ಪ್ರತಿನಿಧಿಯು, ದಕ್ಷಿಣ ಆಫ್ರಿಕದ ಒಬ್ಬ ಯೌವನಸ್ಥನಾಗಿದ್ದನು. ಸ್ವಲ್ಪ ಸಮಯದ ಹಿಂದೆಯೇ ನಾವು ಒಂದು ದೊಡ್ಡ ಮನೆಗೆ ಸ್ಥಳಾಂತರಿಸಿದ್ದೆವು, ಆದುದರಿಂದ ಇಡೀ ವರ್ಷ ಅವನನ್ನು ನಮ್ಮ ಜೊತೆಯಲ್ಲೇ ಇರಿಸಿಕೊಳ್ಳಸಾಧ್ಯವಿತ್ತು. ನನ್ನದೇ ಸ್ವಂತ ಉದ್ಯೋಗವಿದ್ದುದರಿಂದ, ಸಾರುವ ಕೆಲಸದಲ್ಲಿ ನಾವು ಬಹಳಷ್ಟು ಸಮಯವನ್ನು ಒಟ್ಟಿಗೆ ಕಳೆದೆವು, ಮತ್ತು ತುಂಬ ಅಮೂಲ್ಯವಾದ ತರಬೇತಿಯು ಅವನಿಂದ ನನಗೆ ದೊರೆಯಿತು.
ಯಕೋಬಸ್ನನ್ನು ನಾವು ಕೂಸ್ ಎಂದು ಕರೆಯುತ್ತಿದ್ದೆವು. ಅವನು ಕ್ರಮವಾದ ಸಭಾ ಕೂಟಗಳನ್ನು ಏರ್ಪಡಿಸಿದನು, ನಾವೆಲ್ಲರೂ ಅದಕ್ಕೆ ಸಂತೋಷದಿಂದ ಹಾಜರಾಗುತ್ತಿದ್ದೆವು. ನಮಗೆ ವಾಹನ ಸೌಕರ್ಯದ ಸಮಸ್ಯೆಯಿತ್ತು, ಏಕೆಂದರೆ ಎಲ್ಲ ಆಸಕ್ತ ಜನರ ಬಳಿ ಕೇವಲ ಎರಡೇ ಕಾರುಗಳಿದ್ದವು. ದಾರಿಯು ತುಂಬ ಒರಟಾಗಿದ್ದು, ಗುಡ್ಡಬೆಟ್ಟಗಳಿಂದ ಕೂಡಿತ್ತು, ಮತ್ತು ಆ ಸಮಯದಲ್ಲಿ ಒಳ್ಳೆಯ ರಸ್ತೆಗಳು ತುಂಬ ವಿರಳವಾಗಿದ್ದವು. ಹೀಗೆ, ಪ್ರತಿಯೊಬ್ಬರನ್ನು ಕೂಟಗಳಿಗೆ ಕರೆದೊಯ್ಯುವುದು ಒಂದು ದೊಡ್ಡ ಜವಾಬ್ದಾರಿಯಾಗಿತ್ತು. ಕೆಲವರು ಬೆಳಗ್ಗೆ ಬೇಗನೆ ನಡೆಯಲು ಆರಂಭಿಸುತ್ತಿದ್ದರು. ನನ್ನ ಚಿಕ್ಕ ಕಾರಿನಲ್ಲಿ ನಾನು ಮೂವರನ್ನು ಕೂರಿಸಿಕೊಂಡು, ದಾರಿಯಲ್ಲಿ ಸ್ವಲ್ಪ ದೂರದ ತನಕ ಅವರನ್ನು ಕರೆದೊಯ್ದು, ನಂತರ ಕೆಳಗಿಳಿಸುತ್ತಿದ್ದೆ. ಅವರು ಅಲ್ಲಿಂದ ನಡೆದುಕೊಂಡು ಹೋಗುತ್ತಿದ್ದರು. ನಾನು ಹಿಂದಿರುಗಿ ಬಂದು, ಇನ್ನೂ ಮೂವರನ್ನು ಕೂರಿಸಿಕೊಂಡು ಸ್ವಲ್ಪ ದೂರದ ವರೆಗೆ ಹೋಗಿ, ಅವರನ್ನು ಇಳಿಸಿ ಪುನಃ ಹಿಂದಿರುಗಿ ಬೇರೆಯವರನ್ನು ಕರೆದೊಯ್ಯುತ್ತಿದ್ದೆ. ಕಟ್ಟಕಡೆಗೆ ಈ ರೀತಿಯಲ್ಲಿ ಎಲ್ಲರೂ ಕೂಟಗಳಿಗೆ ಹಾಜರಾಗುತ್ತಿದ್ದರು. ಕೂಟದ ನಂತರ ಪ್ರತಿಯೊಬ್ಬರನ್ನು ಮನೆಗೆ ತಲಪಿಸಲಿಕ್ಕಾಗಿ ಅದೇ ರೀತಿಯ ವಿಧಾನವನ್ನು ಅನುಸರಿಸುತ್ತಿದ್ದೆವು.
ಮನೆಯಿಂದ ಮನೆಗೆ ಸಾರುವಾಗ ಹೇಗೆ ಪರಿಣಾಮಕಾರಕ ನಿರೂಪಣೆಗಳನ್ನು ಉಪಯೋಗಿಸಬೇಕು ಎಂಬುದನ್ನು ಸಹ ಕೂಸ್ ನಮಗೆ ಕಲಿಸಿದರು. ನಮಗೆ ಅನೇಕ ಒಳ್ಳೆಯ ಅನುಭವಗಳಾದವು, ಆದರೆ ಕೆಲವು ಅನುಭವಗಳು ಅಷ್ಟೇನೂ ಒಳ್ಳೇದಾಗಿರಲಿಲ್ಲ. ಆದರೆ ಕ್ಷೇತ್ರ ಸೇವೆಯಲ್ಲಿ ನಮಗೆ ಸಿಕ್ಕಿದಂತಹ ಆನಂದವು, ನಮ್ಮ ಸಾರುವ ಚಟುವಟಿಕೆಯನ್ನು ವಿರೋಧಿಸುವವರಿಂದ ಉಂಟುಮಾಡಲ್ಪಟ್ಟ ಎಲ್ಲ ಪರೀಕ್ಷೆಗಳನ್ನೂ ಮರೆಯುವಂತೆ ಮಾಡಿತ್ತು. ಒಂದು ದಿನ ನಾನು ಕೂಸ್ ಜೊತೆ ಸಾರುವ ಕೆಲಸವನ್ನು ಮಾಡುತ್ತಿದ್ದೆ. ನಾವು ಒಂದು ಮನೆಯ ಸಮೀಪಕ್ಕೆ ಬಂದಾಗ, ಆ ಮನೆಯ ಒಳಗಿನಿಂದ ನಮಗೆ ಒಂದು ಧ್ವನಿ ಕೇಳಿಸಿತು. ಒಬ್ಬ ವ್ಯಕ್ತಿಯು ಬೈಬಲನ್ನು ಗಟ್ಟಿಯಾಗಿ ಓದುತ್ತಿದ್ದನು. ಯೆಶಾಯ ಪುಸ್ತಕದ 2ನೆಯ ಅಧ್ಯಾಯದ ಪರಿಚಿತ ನುಡಿಗಳನ್ನು ನಾವು ಸ್ಪಷ್ಟವಾಗಿ ಕೇಳಿಸಿಕೊಳ್ಳಸಾಧ್ಯವಿತ್ತು. ಅವನು 4ನೆಯ ವಚನವನ್ನು ಓದಲಾರಂಭಿಸಿದಾಗ, ನಾವು ಬಾಗಿಲನ್ನು ತಟ್ಟಿದೆವು. ಸ್ನೇಹಭಾವದ ಒಬ್ಬ ವೃದ್ಧನು ನಮ್ಮನ್ನು ಒಳಗೆ ಕರೆದನು, ಮತ್ತು ದೇವರ ರಾಜ್ಯದ ಸುವಾರ್ತೆಯನ್ನು ಅವನಿಗೆ ವಿವರಿಸಲಿಕ್ಕಾಗಿ ನಾವು ಯೆಶಾಯ 2:4ನ್ನು ಉಪಯೋಗಿಸಿದೆವು. ಅವನ ಮನೆಯನ್ನು ತಲಪುವುದು ತುಂಬ ಕಷ್ಟಕರವಾಗಿತ್ತಾದರೂ, ಅವನೊಂದಿಗೆ ಒಂದು ಬೈಬಲ್ ಅಭ್ಯಾಸವು ಆರಂಭಿಸಲ್ಪಟ್ಟಿತು. ನಾವು ಒಂದು ಬೆಟ್ಟದಿಂದ ಇಳಿದು, ಚಿಕ್ಕ ಚಿಕ್ಕ ಕಲ್ಲುಗಳ ಮೇಲೆ ಕಾಲಿಟ್ಟು ಹೊಳೆಯನ್ನು ದಾಟಿ, ಇನ್ನೊಂದು ಬೆಟ್ಟವನ್ನು ಹತ್ತಿ, ಅಲ್ಲಿಂದ ಕೆಳಗಿಳಿದು ಅವನ ಮನೆಗೆ ಹೋಗಬೇಕಾಗಿತ್ತು. ಆದರೆ ನಮ್ಮ ಪ್ರಯತ್ನವು ಸಾರ್ಥಕವಾಗಿತ್ತು. ದೀನ ಮನಸ್ಸಿನ ಆ ವೃದ್ಧನು ಸತ್ಯವನ್ನು ಸ್ವೀಕರಿಸಿದನು ಮತ್ತು ದೀಕ್ಷಾಸ್ನಾನವನ್ನು ಪಡೆದುಕೊಂಡನು. ಕೂಟಗಳಿಗೆ ಹಾಜರಾಗಲಿಕ್ಕಾಗಿ ಅವನು ಎರಡು ಕೋಲುಗಳ ಸಹಾಯದಿಂದ ಒಂದು ನಿಗದಿತ ಸ್ಥಳಕ್ಕೆ ಬರುತ್ತಿದ್ದನು, ಮತ್ತು ಅಲ್ಲಿಂದ ನಾವು ಅವನನ್ನು ನಮ್ಮ ಕಾರಿನಲ್ಲಿ ಕರೆದೊಯ್ಯುತ್ತಿದ್ದೆವು. ತದನಂತರ ಅವನು ಒಬ್ಬ ನಂಬಿಗಸ್ತ ಸಾಕ್ಷಿಯಾಗಿ ಮೃತಪಟ್ಟನು.
ಒಬ್ಬ ಪೊಲೀಸ್ ಕಮಿಷನರನು ನಮ್ಮ ಸಾರುವ ಕೆಲಸವನ್ನು ವಿರೋಧಿಸುತ್ತಿದ್ದನು ಮತ್ತು ಕೂಸ್ನನ್ನು ದೇಶದಿಂದ ಗಡೀಪಾರುಮಾಡುತ್ತೇನೆ ಎಂದು ಆಗಿಂದಾಗ್ಗೆ ಬೆದರಿಕೆ ಹಾಕುತ್ತಿದ್ದನು. ತಿಂಗಳಿಗೊಮ್ಮೆ ಅವನು ಕೂಸ್ನನ್ನು ವಿಚಾರಣೆಗೆ ಕರೆಸುತ್ತಿದ್ದನು. ಕೂಸ್ ಯಾವಾಗಲೂ ಅವನಿಗೆ ಬೈಬಲಿನಿಂದಲೇ ನೇರವಾಗಿ ಉತ್ತರಿಸುತ್ತಿದ್ದುದರಿಂದ, ಪೊಲೀಸ್ ಕಮಿಷನರ್ ಇನ್ನೂ ಹೆಚ್ಚು ಕೋಪಗೊಳ್ಳುತ್ತಿದ್ದನು. ಪ್ರತಿ ಬಾರಿ ಕೂಸ್ ಅವನನ್ನು ಸಂಧಿಸಿದಾಗಲೂ ಅವನು ಸಾರುವ ಕೆಲಸವನ್ನು ನಿಲ್ಲಿಸುವಂತೆ ಕೂಸ್ನಿಗೆ ಎಚ್ಚರಿಕೆ ನೀಡುತ್ತಿದ್ದರೂ, ಪ್ರತಿ ಬಾರಿ ಕೂಸ್ ಅವನಿಗೆ ಸಾಕ್ಷಿ ನೀಡುತ್ತಿದ್ದನು. ಕೂಸ್ ಸೆಂಟ್ ಹೆಲೆನ ದ್ವೀಪವನ್ನು ಬಿಟ್ಟುಹೋದ ಬಳಿಕವೂ ಇವನು ಸಾಕ್ಷಿಕಾರ್ಯವನ್ನು ವಿರೋಧಿಸುವುದನ್ನು ಮುಂದುವರಿಸಿದನು. ತದನಂತರ, ದೃಢಕಾಯನೂ ಬಲಿಷ್ಠನೂ ಆಗಿದ್ದಂತಹ ಕಮಿಷನರ್ ಇದ್ದಕ್ಕಿದ್ದಂತೆ ಅಸ್ವಸ್ಥನಾದನು ಮತ್ತು ತುಂಬ ಕೃಶನಾದನು. ಅವನಿಗೆ ಯಾವ ಕಾಯಿಲೆಯಿದೆ ಎಂಬುದನ್ನು ವೈದ್ಯರು ಕಂಡುಹಿಡಿಯಲು ಸಾಧ್ಯವಾಗಲೇ ಇಲ್ಲ. ಇದರ ಪರಿಣಾಮವಾಗಿ ಅವನು ನಮ್ಮ ದ್ವೀಪವನ್ನು ಬಿಟ್ಟುಹೋದನು.
ದೀಕ್ಷಾಸ್ನಾನ ಮತ್ತು ಸತತ ಬೆಳವಣಿಗೆ
ಕೂಸ್ ನಮ್ಮ ದ್ವೀಪಕ್ಕೆ ಬಂದು ಮೂರು ತಿಂಗಳುಗಳಾದ ಬಳಿಕ, ಈಗ ದೀಕ್ಷಾಸ್ನಾನದ ಏರ್ಪಾಡನ್ನು ಮಾಡುವುದು ಸೂಕ್ತವಾಗಿದೆ ಎಂದು ಅವನಿಗನಿಸಿತು. ಒಂದು ಒಳ್ಳೆಯ ಕೊಳವನ್ನು ಕಂಡುಹಿಡಿಯುವುದೇ ಒಂದು ಸಮಸ್ಯೆಯಾಗಿತ್ತು. ನಾವು ಒಂದು ದೊಡ್ಡ ಗುಂಡಿಯನ್ನು ತೋಡಿ, ಸುತ್ತಲೂ ಸಿಮೆಂಟ್ ಹಾಕಿ, ಅದರಲ್ಲಿ ನೀರನ್ನು ತುಂಬಿಸುವ ಆಲೋಚನೆ ಮಾಡಿದೆವು. ದೀಕ್ಷಾಸ್ನಾನಕ್ಕೆ ಹಿಂದಿನ ರಾತ್ರಿ ಧಾರಾಕಾರವಾಗಿ ಮಳೆ ಬಂತು, ಮತ್ತು ತೋಡಲ್ಪಟ್ಟಿದ್ದ ಗುಂಡಿಯ ಅಂಚಿನ ತನಕ ನೀರು ತುಂಬಿರುವುದನ್ನು ನೋಡಿ ನಾವು ತುಂಬ ಆನಂದಪಟ್ಟೆವು.
ಆ ಭಾನುವಾರ ಬೆಳಗ್ಗೆ ಕೂಸ್ ದೀಕ್ಷಾಸ್ನಾನದ ಭಾಷಣವನ್ನು ಕೊಟ್ಟನು. ದೀಕ್ಷಾಸ್ನಾನದ ಅಭ್ಯರ್ಥಿಗಳು ನಿಂತುಕೊಳ್ಳಿ ಎಂದು ಅವನು ಹೇಳಿದಾಗ, ವಾಡಿಕೆಯ ಪ್ರಕಾರ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿಕ್ಕಾಗಿ ನಮ್ಮಲ್ಲಿ 26 ಮಂದಿ ಎದ್ದುನಿಂತೆವು. ನಮ್ಮ ದ್ವೀಪದಲ್ಲಿ ಮೊತ್ತಮೊದಲ ಸಾಕ್ಷಿಗಳೋಪಾದಿ ದೀಕ್ಷಾಸ್ನಾನ ಪಡೆದುಕೊಳ್ಳುವುದು ನಮಗೆ ಒಂದು ಸುಯೋಗವಾಗಿತ್ತು. ಅದು ನನ್ನ ಜೀವಿತದಲ್ಲೇ ಅತ್ಯಂತ ಸಂತೋಷಮಯ ದಿನವಾಗಿತ್ತು, ಏಕೆಂದರೆ ನಾನು ದೀಕ್ಷಾಸ್ನಾನ ಪಡೆದುಕೊಳ್ಳುವುದಕ್ಕೆ ಮೊದಲು ಅರ್ಮಗೆದೋನ್ ಬಂದುಬಿಡುತ್ತದೆ ಎಂದು ನಾನು ಯಾವಾಗಲೂ ಕಳವಳಪಡುತ್ತಿದ್ದೆ.
ಕಾಲಕಳೆದಂತೆ ಇಲ್ಲಿ ಎರಡು ಸಭೆಗಳು ಸ್ಥಾಪಿಸಲ್ಪಟ್ಟವು. ಒಂದು ಲೆವಲ್ವುಡ್ನಲ್ಲಿ ಮತ್ತು ಇನ್ನೊಂದು ಜೇಮ್ಸ್ಟೌನ್ನಲ್ಲಿ. ಒಂದು ಸಭೆಯಲ್ಲಿ ಶನಿವಾರ ಸಾಯಂಕಾಲ ದೇವಪ್ರಭುತ್ವ ಶುಶ್ರೂಷಾ ಶಾಲೆ ಮತ್ತು ಸೇವಾ ಕೂಟವನ್ನು ನಡೆಸಲಿಕ್ಕಾಗಿ, ಪ್ರತಿ ವಾರ ನಮ್ಮಲ್ಲಿ ಮೂರು ಅಥವಾ ನಾಲ್ಕು ಮಂದಿ 13 ಕಿಲೊಮೀಟರುಗಳಷ್ಟು ದೂರ ಪ್ರಯಾಣಿಸುತ್ತಿದ್ದೆವು. ಭಾನುವಾರ ಬೆಳಗ್ಗೆ ಕ್ಷೇತ್ರ ಸೇವೆಯಾದ ಬಳಿಕ, ನಾವು ಹಿಂದಿರುಗುತ್ತಿದ್ದೆವು ಮತ್ತು ಮಧ್ಯಾಹ್ನ ಹಾಗೂ ಸಾಯಂಕಾಲದಲ್ಲಿ ಅದೇ ಕೂಟಗಳನ್ನು ಹಾಗೂ ಕಾವಲಿನಬುರುಜು ಪತ್ರಿಕೆಯ ಅಭ್ಯಾಸವನ್ನು ನಮ್ಮ ಸಭೆಯಲ್ಲೂ ನಡೆಸುತ್ತಿದ್ದೆವು. ಹೀಗೆ ನಮ್ಮ ವಾರಾಂತ್ಯಗಳು ಹರ್ಷಭರಿತ ದೇವಪ್ರಭುತ್ವ ಚಟುವಟಿಕೆಗಳಿಂದ ತುಂಬಿರುತ್ತಿದ್ದವು. ನಾನು ಪೂರ್ಣ ಸಮಯ ಸಾರುವ ಕೆಲಸವನ್ನು ಮಾಡಲು ಹಂಬಲಿಸುತ್ತಿದ್ದೆ, ಆದರೆ ನಾನು ಕುಟುಂಬವನ್ನು ಪೋಷಿಸಬೇಕಿತ್ತು. ಆದುದರಿಂದ, 1952ರಲ್ಲಿ ಒಬ್ಬ ಪೂರ್ಣ ಸಮಯದ ದಂತವೈದ್ಯನೋಪಾದಿ ನಾನು ಸರಕಾರೀ ಕೆಲಸಕ್ಕೆ ಸೇರಿದೆ.
1955ರಲ್ಲಿ, ಸೊಸೈಟಿಯ ಸಂಚರಣ ಪ್ರತಿನಿಧಿಗಳು, ಅಂದರೆ ಸರ್ಕಿಟ್ ಮೇಲ್ವಿಚಾರಕರು ಪ್ರತಿ ವರ್ಷ ನಮ್ಮ ದ್ವೀಪವನ್ನು ಸಂದರ್ಶಿಸಲು ಆರಂಭಿಸಿದರು. ಆ ಸಮಯದಲ್ಲಿ ಅವರು ನಮ್ಮ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಸುಮಾರು ಅದೇ ಸಮಯದಲ್ಲಿ, ಸೊಸೈಟಿಯ ಮೂರು ಚಲನಚಿತ್ರಗಳನ್ನು ನಮ್ಮ ದ್ವೀಪದಾದ್ಯಂತ ತೋರಿಸುವುದರಲ್ಲಿ ಪಾಲ್ಗೊಳ್ಳುವಂತಹ ಸುಯೋಗ ಸಹ ನನಗೆ ದೊರಕಿತ್ತು.
ರೋಮಾಂಚನವನ್ನು ಉಂಟುಮಾಡುವಂತಹ ದೈವಿಕ ಚಿತ್ತ ಸಮ್ಮೇಳನ
1958ರಲ್ಲಿ, ನ್ಯೂ ಯಾರ್ಕಿನಲ್ಲಿ ನಡೆಯಲಿದ್ದ ದೈವಿಕ ಚಿತ್ತ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಹಾಜರಾಗಲಿಕ್ಕಾಗಿ ನಾನು ನನ್ನ ಸರಕಾರೀ ಕೆಲಸಕ್ಕೆ ರಾಜೀನಾಮೆ ನೀಡಿದೆ. ಆ ಸಮ್ಮೇಳನವು ನನ್ನ ಜೀವನದಲ್ಲಿ ಒಂದು ಮೈಲುಗಲ್ಲಾಗಿತ್ತು. ಆ ಸಂದರ್ಭವು ಯೆಹೋವನಲ್ಲಿ ಆನಂದಿಸಲಿಕ್ಕಾಗಿ ನನಗೆ ಅತ್ಯಧಿಕ ಕಾರಣಗಳನ್ನು ಒದಗಿಸಿತು. ದ್ವೀಪಕ್ಕೆ ಹೋಗಲಿಕ್ಕಾಗಿ ಕ್ರಮವಾದ ವಾಹನ ಸೌಕರ್ಯಗಳು ಸರಿಯಾಗಿ ಇಲ್ಲದಿದ್ದ ಕಾರಣದಿಂದ, ನಾವು ಐದೂವರೆ ತಿಂಗಳುಗಳ ವರೆಗೆ ದೂರವೇ ಉಳಿಯಬೇಕಾಯಿತು. ಸಮ್ಮೇಳನವು ಎಂಟು ದಿನಗಳ ವರೆಗೆ ಇತ್ತು, ಮತ್ತು ಸೆಷನ್ಗಳು ಬೆಳಗ್ಗೆ ಒಂಬತ್ತು ಗಂಟೆಯಿಂದ ರಾತ್ರಿ ಒಂಬತ್ತು ಗಂಟೆಯ ವರೆಗೆ ಇರುತ್ತಿದ್ದವು. ಆದರೆ ನಾನು ಆಯಾಸಗೊಳ್ಳಲೇ ಇಲ್ಲ, ಬದಲಾಗಿ ನಾನು ಮರುದಿನದ ಕಾರ್ಯಕ್ರಮಕ್ಕಾಗಿ ಮುನ್ನೋಡುತ್ತಿದ್ದೆ. ಕಾರ್ಯಕ್ರಮದಲ್ಲಿ ಎರಡು ನಿಮಿಷಗಳ ವರೆಗೆ ಸೆಂಟ್ ಹೆಲೆನ ದ್ವೀಪದ ಬಗ್ಗೆ ಹೇಳುವ ಸುಯೋಗ ನನಗೆ ದೊರಕಿತ್ತು. ಯಾಂಕೀ ಸ್ಟೇಡಿಯಮ್ ಮತ್ತು ಪೋಲೊ ಗ್ರೌಂಡ್ಗಳಲ್ಲಿ ನೆರೆದಿದ್ದ ದೊಡ್ಡ ಗುಂಪುಗಳಿಗೆ ಸಂಬೋಧಿಸಿ ಮಾತಾಡುವುದು ತುಂಬ ಒತ್ತಡಭರಿತ ಅನುಭವವಾಗಿತ್ತು.
ಪಯನೀಯರ್ ಸೇವೆಮಾಡುವ ನನ್ನ ನಿರ್ಧಾರವನ್ನು ಸಮ್ಮೇಳನವು ಇನ್ನೂ ಬಲಪಡಿಸಿತು. “ದೇವರ ರಾಜ್ಯವು ಆಳುತ್ತದೆ—ಲೋಕದ ಅಂತ್ಯವು ಸಮೀಪವಿದೆಯೊ?” ಎಂಬ ಬಹಿರಂಗ ಭಾಷಣವು ವಿಶೇಷವಾಗಿ ಉತ್ತೇಜನೀಯವಾಗಿತ್ತು. ಸಮ್ಮೇಳನದ ಬಳಿಕ ನಾವು ಬ್ರೂಕ್ಲಿನ್ನಲ್ಲಿರುವ ಸೊಸೈಟಿಯ ಮುಖ್ಯಕಾರ್ಯಾಲಯವನ್ನು ಸಂದರ್ಶಿಸಿ, ಫ್ಯಾಕ್ಟ್ರಿಯನ್ನೂ ನೋಡಿ ಬಂದೆವು. ಆಗ ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾಗಿದ್ದ ಸಹೋದರ ನಾರ್ರೊಂದಿಗೆ, ಸೆಂಟ್ ಹೆಲೆನ ದ್ವೀಪದಲ್ಲಿನ ಸಾಕ್ಷಿಕಾರ್ಯದ ಪ್ರಗತಿಯ ಕುರಿತು ನಾನು ಮಾತಾಡಿದೆ. ಮುಂದೆ ಯಾವಾಗಲಾದರೊಮ್ಮೆ ನಿಮ್ಮ ದ್ವೀಪವನ್ನು ಸಂದರ್ಶಿಸುವ ಬಯಕೆ ನನಗೂ ಇದೆ ಎಂದು ಅವರು ಹೇಳಿದರು. ಕುಟುಂಬಕ್ಕೆ ಹಾಗೂ ಸ್ನೇಹಿತರಿಗೆ ತೋರಿಸಲಿಕ್ಕಾಗಿ ನಾವು ಎಲ್ಲ ಭಾಷಣಗಳ ಟೇಪ್ ರೆಕಾರ್ಡಿಂಗ್ಗಳನ್ನು ಹಾಗೂ ಸಮ್ಮೇಳನದ ಅನೇಕ ಚಲನಚಿತ್ರಗಳನ್ನು ನಮ್ಮೊಂದಿಗೆ ತಂದೆವು.
ಪೂರ್ಣ ಸಮಯದ ಸೇವೆಯ ಗುರಿಯು ಸಾಧಿಸಲ್ಪಟ್ಟದ್ದು
ನಾನು ಹಿಂದಿರುಗಿ ಬಂದ ಬಳಿಕ, ನನ್ನ ಹಿಂದಿನ ಉದ್ಯೋಗವನ್ನೇ ಮಾಡುವಂತೆ ನನಗೆ ಕರೆ ಬಂತು. ಏಕೆಂದರೆ ನಮ್ಮ ದ್ವೀಪದಲ್ಲಿ ಯಾವ ದಂತವೈದ್ಯನೂ ಇರಲಿಲ್ಲ. ಆದರೂ, ನಾನು ಪೂರ್ಣ ಸಮಯದ ಸೇವೆಯನ್ನು ಆರಂಭಿಸುವ ಮನಸ್ಸುಮಾಡಿದ್ದೇನೆ ಎಂದು ಅವರಿಗೆ ವಿವರಿಸಿದೆ. ತುಂಬ ಸಮಾಲೋಚನೆ ನಡೆಸಿದ ಬಳಿಕ, ನಾನು ವಾರದಲ್ಲಿ ಕೇವಲ ಮೂರು ದಿನ ಕೆಲಸಮಾಡಲು ಒಪ್ಪಿಕೊಂಡೆ. ಆದರೆ ನಾನು ವಾರದಲ್ಲಿ ಆರು ದಿನಗಳು ಕೆಲಸಮಾಡುತ್ತಿದ್ದಾಗ ಸಿಗುತ್ತಿದ್ದ ಸಂಬಳಕ್ಕಿಂತಲೂ ಈಗ ಹೆಚ್ಚು ಸಂಬಳವು ನನಗೆ ದೊರಕುತ್ತಿತ್ತು. ಯೇಸುವಿನ ಮಾತುಗಳು ಸತ್ಯವಾಗಿ ರುಜುವಾದವು: “ಹೀಗಿರುವದರಿಂದ, ನೀವು ಮೊದಲಾಗಿ ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” (ಮತ್ತಾಯ 6:33) ನನ್ನ ದುರ್ಬಲ ಕಾಲುಗಳ ಸಹಾಯದಿಂದ ನಮ್ಮ ದ್ವೀಪದ ಗುಡ್ಡಗಾಡುಗಳುಳ್ಳ ಪ್ರದೇಶದಲ್ಲಿ ಪ್ರಯಾಣಿಸುವುದು ಯಾವಾಗಲೂ ಸುಲಭವಾಗಿರಲಿಲ್ಲ. ಹಾಗಿದ್ದರೂ, ನಾನು 14 ವರ್ಷಗಳ ವರೆಗೆ ಪಯನೀಯರ್ ಸೇವೆಮಾಡಿದೆ ಮತ್ತು ನಮ್ಮ ದ್ವೀಪದ ಅನೇಕ ನಿವಾಸಿಗಳಿಗೆ ಸತ್ಯವನ್ನು ಕಲಿಯುವಂತೆ ಸಹಾಯ ಮಾಡಲು ಶಕ್ತನಾದೆ. ಖಂಡಿತವಾಗಿಯೂ ಇದು ಅತ್ಯಧಿಕ ಸಂತೋಷಕ್ಕೆ ಒಂದು ಕಾರಣವಾಗಿದೆ.
1961ರಲ್ಲಿ, ನಾನು ಸಂಪೂರ್ಣ ಅರ್ಹನಾದ ಒಬ್ಬ ದಂತವೈದ್ಯನಾಗಲಿಕ್ಕಾಗಿ, ಎರಡು ವರ್ಷಗಳ ಉಚಿತ ತರಬೇತಿಯನ್ನು ಪಡೆಯುವಂತೆ ಸರಕಾರವು ನನ್ನನ್ನು ಫಿಜಿ ದ್ವೀಪಗಳಿಗೆ ಕಳುಹಿಸಲು ಬಯಸಿತು. ನಾನು ಮಾತ್ರವಲ್ಲ ನನ್ನ ಕುಟುಂಬವನ್ನೂ ನನ್ನೊಂದಿಗೆ ಕಳುಹಿಸುವ ಭರವಸೆಯನ್ನು ಅವರು ಕೊಟ್ಟರು. ನನಗೆ ಇದು ಒಂದು ಶೋಧನೆಯಾಗಿತ್ತು. ಆದರೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಬಳಿಕ, ಆ ಅವಕಾಶವನ್ನು ಸ್ವೀಕರಿಸಲು ನಾನು ನಿರಾಕರಿಸಿದೆ. ಅಷ್ಟು ದೀರ್ಘಕಾಲದ ವರೆಗೆ ನನ್ನ ಸಹೋದರರನ್ನು ಬಿಟ್ಟಿರಲು ಮತ್ತು ಅವರೊಂದಿಗೆ ಸೇವೆಮಾಡುವ ಸುಯೋಗವನ್ನು ಕಳೆದುಕೊಳ್ಳಲು ನಾನು ಇಷ್ಟಪಡಲಿಲ್ಲ. ಈ ಏರ್ಪಾಡನ್ನು ಮಾಡಿದ್ದ ವೈದ್ಯಕೀಯ ಮೇಲಧಿಕಾರಿಯು ತುಂಬ ಕೋಪಗೊಂಡನು. ಅವನು ಹೇಳಿದ್ದು: “ಅಂತ್ಯವು ತುಂಬ ಸಮೀಪವಿದೆ ಎಂದು ನಿನಗನಿಸುವಲ್ಲಿ, ಅಷ್ಟರ ತನಕ ನೀನು ಸಂಪಾದಿಸುವ ಹಣವನ್ನು ನೀನು ತುಂಬ ಚೆನ್ನಾಗಿ ಉಪಯೋಗಿಸಸಾಧ್ಯವಿದೆ.” ಆದರೆ ನಾನು ನನ್ನ ಅಭಿಪ್ರಾಯವನ್ನು ಬದಲಾಯಿಸಲಿಲ್ಲ.
ಮುಂದಿನ ವರ್ಷ, ರಾಜ್ಯ ಶುಶ್ರೂಷಾ ಶಾಲೆಯನ್ನು ಹಾಜರಾಗಲಿಕ್ಕಾಗಿ ನನ್ನನ್ನು ದಕ್ಷಿಣ ಆಫ್ರಿಕಕ್ಕೆ ಆಮಂತ್ರಿಸಲಾಯಿತು. ಇದು ಸಭಾ ಮೇಲ್ವಿಚಾರಕರಿಗಾಗಿ ಏರ್ಪಡಿಸಲ್ಪಟ್ಟ ಒಂದು ತಿಂಗಳ ತರಬೇತಿಯಾಗಿತ್ತು. ನಮಗೆ ತುಂಬ ಅಮೂಲ್ಯವಾದ ಉಪದೇಶವು ಕೊಡಲ್ಪಟ್ಟಿತ್ತು; ಇದು ನಮ್ಮ ಸಭಾ ನೇಮಕಗಳ ಕಡೆಗೆ ಅತಿ ಹೆಚ್ಚು ಗಮನಕೊಡುವಂತೆ ನಮಗೆ ಸಹಾಯ ಮಾಡಿತು. ಶುಶ್ರೂಷಾ ಶಾಲೆಯು ಮುಗಿದ ಬಳಿಕ, ಒಬ್ಬ ಸಂಚರಣ ಮೇಲ್ವಿಚಾರಕನೊಂದಿಗೆ ಕೆಲಸಮಾಡುವ ಮೂಲಕ ಇನ್ನೂ ಹೆಚ್ಚಿನ ತರಬೇತಿಯನ್ನು ಪಡೆದುಕೊಂಡೆ. ತದನಂತರ ಹತ್ತು ವರ್ಷಗಳ ವರೆಗೆ ನಾನು ಬದಲಿ ಸರ್ಕಿಟ್ ಮೇಲ್ವಿಚಾರಕನೋಪಾದಿ ಸೆಂಟ್ ಹೆಲೆನದಲ್ಲಿರುವ ಎರಡು ಸಭೆಗಳನ್ನು ಸಂದರ್ಶಿಸುತ್ತಿದ್ದೆ. ಸಕಾಲದಲ್ಲಿ ಇನ್ನಿತರ ಸಹೋದರರು ಅರ್ಹತೆಯನ್ನು ಪಡೆದರು ಮತ್ತು ಒಬ್ಬರಾದ ಮೇಲೆ ಇನ್ನೊಬ್ಬರು ಸಂದರ್ಶಿಸುತ್ತಿದ್ದರು.
ಈ ಮಧ್ಯೆ ನಾವು ಜೇಮ್ಸ್ಟೌನ್ನಿಂದ ಲೆವಲ್ವುಡ್ಗೆ ಸ್ಥಳಾಂತರಿಸಿದ್ದೆವು. ಏಕೆಂದರೆ ಅಲ್ಲಿ ತುಂಬ ಆವಶ್ಯಕತೆಯಿತ್ತು ಮತ್ತು ನಾವು ಹತ್ತು ವರ್ಷಗಳ ವರೆಗೆ ಅಲ್ಲಿಯೇ ಇದ್ದೆವು. ಈ ಸಮಯದಲ್ಲಿ, ನಾನು ಹಗಲೂರಾತ್ರಿ ಕೆಲಸಮಾಡುತ್ತಿದ್ದೆ—ಪಯನೀಯರ್ ಸೇವೆ, ವಾರದಲ್ಲಿ ಮೂರು ದಿನ ಸರಕಾರೀ ಕೆಲಸ, ಮತ್ತು ಒಂದು ಚಿಕ್ಕ ಕಿರಾಣಿ ಅಂಗಡಿಯನ್ನು ಸಹ ನೋಡಿಕೊಳ್ಳುತ್ತಿದ್ದೆ. ಅಷ್ಟುಮಾತ್ರವಲ್ಲ, ನಾನು ಸಭಾ ವಿಷಯಗಳನ್ನೂ ನೋಡಿಕೊಳ್ಳುತ್ತಿದ್ದೆ; ಇದಲ್ಲದೆ ನಾನು ಹಾಗೂ ನನ್ನ ಪತ್ನಿ ನಮ್ಮ ಬೆಳೆಯುತ್ತಿರುವ ನಾಲ್ಕು ಮಂದಿ ಪುತ್ರರ ಜವಾಬ್ದಾರಿಯನ್ನೂ ಹೊರಬೇಕಾಗಿತ್ತು. ಈ ಸಮಸ್ಯೆಗಳನ್ನು ನಿಭಾಯಿಸಲಿಕ್ಕಾಗಿ ನಾನು ನನ್ನ ಉದ್ಯೋಗವನ್ನು ಬಿಟ್ಟುಬಿಟ್ಟೆ, ಅಂಗಡಿಯನ್ನು ಮಾರಿದೆ, ಮತ್ತು ಇಡೀ ಕುಟುಂಬವನ್ನು ಕರೆದುಕೊಂಡು ಮೂರು ತಿಂಗಳ ರಜೆಯಲ್ಲಿ ದಕ್ಷಿಣ ಆಫ್ರಿಕದ ಕೇಪ್ ಟೌನಿಗೆ ಹೊರಟುಹೋದೆ. ತದನಂತರ ನಾವು ಅಸೆನ್ಷನ್ ದ್ವೀಪಕ್ಕೆ ಸ್ಥಳಾಂತರಿಸಿದೆವು ಮತ್ತು ಅಲ್ಲಿ ಒಂದು ವರ್ಷ ಇದ್ದೆವು. ಆ ಸಮಯದಲ್ಲಿ ನಾವು ಅನೇಕರಿಗೆ ಬೈಬಲ್ ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವಂತೆ ಸಹಾಯ ಮಾಡಲು ಶಕ್ತರಾಗಿದ್ದೆವು.
ನಾವು ಸೆಂಟ್ ಹೆಲೆನಕ್ಕೆ ಹಿಂದಿರುಗಿದ ಬಳಿಕ, ಪುನಃ ನಾವು ಜೇಮ್ಸ್ಟೌನಿಗೆ ಹೋದೆವು. ರಾಜ್ಯ ಸಭಾಗೃಹದ ಪಕ್ಕದಲ್ಲೇ ಇದ್ದ ಒಂದು ಮನೆಯನ್ನು ನಾವು ರಿಪೇರಿಮಾಡಿಸಿದೆವು. ನಮ್ಮ ಮನೆಯ ಖರ್ಚನ್ನು ನಿಭಾಯಿಸಲಿಕ್ಕಾಗಿ, ನಾನೂ ನನ್ನ ಮಗ ಜಾನನೂ ಸೇರಿಕೊಂಡು ಫೋರ್ಡ್ ಟ್ರಕ್ನಲ್ಲಿ ಒಂದು ಐಸ್ಕ್ರೀಮ್ ಅಂಗಡಿಯನ್ನು ತೆರೆದೆವು. ಮತ್ತು ಮುಂದಿನ ಐದು ವರ್ಷಗಳ ವರೆಗೆ ನಾವು ಐಸ್ಕ್ರೀಮನ್ನು ಮಾರಿದೆವು. ಈ ವ್ಯಾಪಾರವನ್ನು ಆರಂಭಿಸಿದ ಸ್ವಲ್ಪ ಸಮಯಾನಂತರ ನನ್ನ ವ್ಯಾನ್ ಅಪಘಾತಕ್ಕೀಡಾಯಿತು. ಅದು ಮಗುಚಿಬಿತ್ತು ಮತ್ತು ನನ್ನ ಕಾಲುಗಳು ಅದರ ಕೆಳಗೆ ಸಿಕ್ಕಿಕೊಂಡವು. ಇದರ ಫಲಿತಾಂಶವಾಗಿ ನನ್ನ ಮಂಡಿಗಳ ಕೆಳಗಿನ ನರಗಳು ಜಜ್ಜಿಹೋದವು ಮತ್ತು ಗುಣಹೊಂದಲು ಸುಮಾರು ಮೂರು ತಿಂಗಳುಗಳು ಹಿಡಿದವು.
ಗತ ಸಮಯದಲ್ಲಿ ಹಾಗೂ ಭವಿಷ್ಯತ್ತಿನಲ್ಲಿ ಹೇರಳ ಆಶೀರ್ವಾದಗಳು
ಕಳೆದ ವರ್ಷಗಳಲ್ಲಿ, ನಮಗೆ ಅನೇಕ ಆಶೀರ್ವಾದಗಳು ದೊರೆತವು. ಇದು ಇನ್ನೂ ಹೆಚ್ಚಿನ ಆನಂದಕ್ಕೆ ಕಾರಣವಾಗಿತ್ತು. ಈ ಆಶೀರ್ವಾದಗಳಲ್ಲಿ ಒಂದು, 1985ರಲ್ಲಿ ಒಂದು ಅಂತಾರಾಷ್ಟ್ರೀಯ ಅಧಿವೇಶನವನ್ನು ಹಾಜರಾಗಲಿಕ್ಕಾಗಿ ನಾವು ದಕ್ಷಿಣ ಆಫ್ರಿಕಕ್ಕೆ ಹೋಗಿ, ಇನ್ನೂ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದ್ದ ಹೊಸ ಬೆತೆಲ್ ಗೃಹವನ್ನು ಸಂದರ್ಶಿಸಿದ್ದೇ ಆಗಿತ್ತು. ನಾನು ಹಾಗೂ ನನ್ನ ಮಗನಾದ ಜಾನ್, ಜೇಮ್ಸ್ಟೌನ್ನ ಬಳಿ ಒಂದು ಸುಂದರವಾದ ಅಸೆಂಬ್ಲಿ ಹಾಲ್ ಅನ್ನು ಕಟ್ಟುವ ಕೆಲಸದಲ್ಲಿ ಪಾಲ್ಗೊಂಡದ್ದು ಇನ್ನೊಂದು ಆಶೀರ್ವಾದವಾಗಿತ್ತು. ನಮ್ಮ ಮಕ್ಕಳಲ್ಲಿ ಮೂವರು ಹಿರಿಯರಾಗಿ, ಮತ್ತು ಒಬ್ಬ ಮೊಮ್ಮಗನು ದಕ್ಷಿಣ ಆಫ್ರಿಕದ ಬೆತೆಲಿನಲ್ಲಿ ಸೇವೆಮಾಡುತ್ತಿರುವುದಕ್ಕಾಗಿಯೂ ನಾವು ಸಂತೋಷಪಡುತ್ತೇವೆ. ಮತ್ತು ಬೈಬಲಿನ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲು ಅನೇಕರಿಗೆ ಸಹಾಯ ಮಾಡುವುದರಿಂದ ನಾವು ಅತ್ಯಧಿಕ ಆನಂದವನ್ನು ಹಾಗೂ ಸಂತೃಪ್ತಿಯನ್ನು ಕಂಡುಕೊಂಡಿದ್ದೇವೆ ಎಂಬುದು ಖಂಡಿತ.
ನಮ್ಮ ಶುಶ್ರೂಷೆಯ ಕ್ಷೇತ್ರವು ತುಂಬ ಚಿಕ್ಕದಾಗಿದೆ. ಕೇವಲ 5,000 ಜನರು ಮಾತ್ರ ಅಲ್ಲಿದ್ದಾರೆ. ಆದರೂ, ಪುನಃ ಪುನಃ ಇದೇ ಟೆರಿಟೊರಿಯಲ್ಲಿ ಸೇವೆಮಾಡುವುದರಿಂದ ಅತ್ಯುತ್ತಮ ಫಲಿತಾಂಶಗಳು ದೊರೆತಿವೆ. ಕೆಲವರು ಮಾತ್ರ ಒರಟಾಗಿ ಪ್ರತಿಕ್ರಿಯಿಸುತ್ತಾರೆ. ಸೆಂಟ್ ಹೆಲೆನ ದ್ವೀಪವು ತನ್ನ ಸ್ನೇಹಭಾವಕ್ಕೆ ಪ್ರಸಿದ್ಧವಾಗಿದೆ, ಮತ್ತು ನೀವು ಎಲ್ಲೇ ಹೋದರೂ—ನೀವು ರಸ್ತೆಯಲ್ಲಿ ನಡೆಯುತ್ತಿರಲಿ ನಿಮ್ಮ ಕಾರಿನಲ್ಲಿ ಹೋಗುತ್ತಿರಲಿ—ಜನರು ನಿಮ್ಮನ್ನು ಅಭಿವಂದಿಸುತ್ತಾರೆ. ನನ್ನ ಅನುಭವವೇನೆಂದರೆ, ನೀವು ಜನರಿಗೆ ಎಷ್ಟು ಪರಿಚಿತರಾಗುತ್ತೀರೋ ಅಷ್ಟೇ ಸುಲಭವಾಗಿ ನೀವು ಅವರಿಗೆ ಸಾಕ್ಷಿ ನೀಡಸಾಧ್ಯವಿದೆ. ಬಹಳಷ್ಟು ಪ್ರಚಾರಕರು ನಮ್ಮ ದ್ವೀಪವನ್ನು ಬಿಟ್ಟುಹೋಗಿರುವುದಾದರೂ, ಈಗ ನಮ್ಮಲ್ಲಿ 150 ಪ್ರಚಾರಕರಿದ್ದಾರೆ.
ನಮ್ಮ ವಿವಾಹವಾಗಿ 48 ವರ್ಷಗಳು ಕಳೆದ ಬಳಿಕ, ಪುನಃ ನಾನು ಹಾಗೂ ನನ್ನ ಪತ್ನಿ ಮಾತ್ರ ಮನೆಯಲ್ಲಿ ಇದ್ದೇವೆ, ಏಕೆಂದರೆ ನಮ್ಮ ಮಕ್ಕಳೆಲ್ಲರೂ ದೊಡ್ಡವರಾಗಿ ಮನೆಯಿಂದ ದೂರವಿದ್ದಾರೆ. ಗತ ವರ್ಷಗಳಲ್ಲಿ ಅವಳು ನಿಷ್ಠೆಯಿಂದ ಸಹಕರಿಸುವ ಮೂಲಕ, ಪರೀಕ್ಷೆಗಳ ಮಧ್ಯೆಯೂ ಸಂತೋಷದಿಂದ ಯೆಹೋವನ ಸೇವೆಯನ್ನು ಮುಂದುವರಿಸಲು ಅವಳು ನನಗೆ ಸಹಾಯ ಮಾಡಿದ್ದಾಳೆ. ನಮ್ಮ ಶಾರೀರಿಕ ಬಲ ತುಂಬ ಕಡಿಮೆಯಾಗುತ್ತಿದೆ, ಆದರೆ ಆತ್ಮಿಕ ಬಲ ದಿನೇ ದಿನೇ ನವೀಕರಿಸುತ್ತಿದೆ. (2 ಕೊರಿಂಥ 4:16) ನಾನು, ನನ್ನ ಕುಟುಂಬ ಮತ್ತು ಸ್ನೇಹಿತರು, ನಾನು 17ರ ಪ್ರಾಯದಲ್ಲಿ ಹೇಗಿದ್ದೆನೋ ಅದಕ್ಕಿಂತಲೂ ಉತ್ತಮವಾದ ಶಾರೀರಿಕ ಸ್ಥಿತಿಯನ್ನು ಪುನಃ ಪಡೆಯುವ ಅದ್ಭುತಕರ ಭವಿಷ್ಯತ್ತಿಗಾಗಿ ಮುನ್ನೋಡುತ್ತಿದ್ದೇವೆ. ನನ್ನ ಮನದಾಸೆ ಏನೆಂದರೆ, ಎಲ್ಲ ರೀತಿಯಲ್ಲಿ ಪರಿಪೂರ್ಣತೆಯನ್ನು ಆನಂದಿಸುವುದು, ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ, ಪ್ರೀತಿಪೂರ್ಣನೂ ಲಕ್ಷಿಸುವಾತನೂ ಆಗಿರುವ ನಮ್ಮ ದೇವರಾದ ಯೆಹೋವನ ಹಾಗೂ ಆತನ ಆಳುವ ಅರಸನಾದ ಯೇಸು ಕ್ರಿಸ್ತನ ಸೇವೆಯನ್ನು ಸದಾಕಾಲ ಮಾಡುತ್ತಾ ಇರುವುದೇ ಆಗಿದೆ.—ನೆಹೆಮೀಯ 8:10.
[ಪುಟ 26 ರಲ್ಲಿರುವ ಚಿತ್ರ]
ಜಾರ್ಜ್ ಸ್ಕೀಪೀಯೊ ಮತ್ತು ಹಿರಿಯರೋಪಾದಿ ಸೇವೆಮಾಡುತ್ತಿರುವ ಅವರ ಮೂವರು ಪುತ್ರರು
[ಪುಟ 29 ರಲ್ಲಿರುವ ಚಿತ್ರ]
ಜಾರ್ಜ್ ಸ್ಕೀಪೀಯೊ ಮತ್ತು ಅವರ ಪತ್ನಿಯಾದ ಡೋರಸ್