ಯೆಹೋವನ ಮೇಲೆ ಆತುಕೊಳ್ಳಲು ನಾನು ಕಲಿತುಕೊಂಡೆ
ಯಾನ್ ಕಾರ್ಪಾ ಆಂಡೋ ಹೇಳಿದಂತೆ
ಅದು 1942ನೇ ಇಸವಿಯಾಗಿತ್ತು ಮತ್ತು ರಷ್ಯದ ಕರ್ಸ್ಕ್ ಹತ್ತಿರ ಹಂಗೆರಿಯ ಸೈನಿಕರು ನನ್ನ ಕಾವಲಿದ್ದರು. IIನೇ ವಿಶ್ವ ಯುದ್ಧದ ಸಮಯದಲ್ಲಿ ರಷ್ಯನ್ನರ ವಿರುದ್ಧವಾಗಿ ಹೋರಾಡುತ್ತಿದ್ದ, ಮೈತ್ರಿ ಶಕ್ತಿಗಳ ಸೆರೆಯಾಳುಗಳು ನಾವಾಗಿದ್ದೆವು. ನನ್ನ ಸಮಾಧಿಯನ್ನು ತೋಡಲಾಗಿತ್ತು ಮತ್ತು ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಲ್ಲವೆಂದು ದಾಖಲೆಯೊಂದರ ಮೇಲೆ ಸಹಿ ಹಾಕಲಿಕ್ಕಾಗಿ ನನಗೆ ಹತ್ತು ನಿಮಿಷಗಳನ್ನು ನೀಡಲಾಯಿತು. ಮುಂದೆ ಏನಾಯಿತೆಂದು ಹೇಳುವ ಮುಂಚೆ, ನಾನು ಅಲ್ಲಿಗೆ ಹೇಗೆ ಬಂದೆನೆಂಬುದನ್ನು ಹೇಳುತ್ತೇನೆ.
ನಾನು ಸಾಹೊರ್ ಎಂಬ ಪುಟ್ಟ ಹಳ್ಳಿಯಲ್ಲಿ 1904ರಲ್ಲಿ ಜನಿಸಿದೆ. ಅದು ಈಗ ಪೂರ್ವ ಸ್ಲೊವಾಕೀಯದಲ್ಲಿದೆ. 1918ರಲ್ಲಿ ನಡೆದ Iನೇ ವಿಶ್ವ ಯುದ್ಧದ ಅನಂತರ, ಸಾಹೊರ್, ಹೊಸದಾಗಿ ರಚಿಸಲ್ಪಟ್ಟ ಚೆಕೊಸ್ಲೊವಾಕೀಯ ದೇಶದ ಒಂದು ಭಾಗವಾಗಿಹೋಯಿತು. ನಮ್ಮ ಹಳ್ಳಿಯಲ್ಲಿ ಸುಮಾರು 200 ಮನೆಗಳಿದ್ದು, ಎರಡು ಚರ್ಚುಗಳಿದ್ದವು. ಒಂದು, ಗ್ರೀಕ್ ಕ್ಯಾಥೊಲಿಕ್ ಮತ್ತು ಇನ್ನೊಂದು ಕ್ಯಾಲ್ವಿನ್ ಪಂಥದ್ದಾಗಿತ್ತು.
ನಾನು ಕ್ಯಾಲ್ವಿನ್ ಚರ್ಚಿಗೆ ಹೋದೆನಾದರೂ, ಯಾವುದೇ ನೈತಿಕ ಕಟ್ಟುಪಾಡುಗಳಿಲ್ಲದೆ ಜೀವನವನ್ನು ನಡೆಸಿದೆ. ತೀರ ಭಿನ್ನವಾಗಿದ್ದ ಒಬ್ಬ ವ್ಯಕ್ತಿಯು ನನ್ನ ಮನೆಯಿಂದ ಸ್ವಲ್ಪವೇ ದೂರದಲ್ಲಿ ವಾಸಿಸುತ್ತಿದ್ದ. ಒಂದು ದಿನ ಅವನು ನನ್ನೊಡನೆ ಮಾತಾಡಿ, ನನಗೆ ಒಂದು ಬೈಬಲನ್ನು ಎರವಲಾಗಿ ಕೊಟ್ಟ. ನಾನು ಆ ಪುಸ್ತಕವನ್ನು ನನ್ನ ಕೈಯಲ್ಲಿ ಹಿಡಿದದ್ದು ಅದೇ ಮೊದಲ ಬಾರಿ. ಅಷ್ಟರಲ್ಲಿ, 1926ರಲ್ಲಿ ನಾನು ಬಾರ್ಬರಾಳನ್ನು ಮದುವೆಯಾದೆ ಮತ್ತು ನಮಗೆ ಬೇಗನೆ ಬಾರ್ಬರಾ ಮತ್ತು ಜ್ಯಾನ್ ಎಂಬ ಇಬ್ಬರು ಮಕ್ಕಳು ಹುಟ್ಟಿದರು.
ನಾನು ಬೈಬಲನ್ನು ಓದಲಾರಂಭಿಸಿದೆ, ಆದರೆ ನನಗೆ ಅರ್ಥವಾಗದ ಅನೇಕ ವಿಷಯಗಳು ಅದರಲ್ಲಿದ್ದವು. ಆದುದರಿಂದ ನಾನು ನನ್ನ ಪಾಸ್ಟರ್ ಹತ್ತಿರ ಹೋಗಿ, ನನಗೆ ಸಹಾಯಮಾಡುವಂತೆ ಕೇಳಿಕೊಂಡೆ. “ಬೈಬಲು ಕೇವಲ ವಿದ್ಯಾವಂತ ಜನರಿಗೆ ಮಾತ್ರ, ಅದನ್ನು ಅರ್ಥಮಾಡಿಕೊಳ್ಳಲು ನೀನು ಪ್ರಯತ್ನಿಸುವುದೂ ಬೇಡ” ಎಂದು ಅವರು ಹೇಳಿದರು. ಅನಂತರ ಅವರು ನನ್ನನ್ನು ಇಸ್ಪೀಟು ಆಡಲು ಕರೆದರು.
ಅದಾದ ನಂತರ, ನನಗೆ ಬೈಬಲನ್ನು ಕೊಟ್ಟ ಆ ವ್ಯಕ್ತಿಯ ಹತ್ತಿರ ಹೋದೆ. ಅವನು ಒಬ್ಬ ಬೈಬಲ್ ವಿದ್ಯಾರ್ಥಿಯಾಗಿದ್ದನು. ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳು ಹಾಗೆ ಕರೆಯಲ್ಪಡುತ್ತಿದ್ದರು. ನನಗೆ ಸಹಾಯಮಾಡಲು ಅವನು ಸಂತೋಷವುಳ್ಳವನಾಗಿದ್ದ ಮತ್ತು ಸ್ವಲ್ಪ ಸಮಯದ ನಂತರ ನನಗೆ ಜ್ಞಾನೋದಯವಾಗಲು ಆರಂಭಿಸಿತು. ನಾನು ಅತಿಯಾಗಿ ಕುಡಿಯುವುದನ್ನು ನಿಲ್ಲಿಸಿಬಿಟ್ಟೆ ಮತ್ತು ಒಂದು ನೈತಿಕ ಜೀವನವನ್ನು ನಡೆಸಲು ಆರಂಭಿಸಿದೆ. ಯೆಹೋವನ ಬಗ್ಗೆ ಇತರರೊಂದಿಗೆ ಮಾತಾಡಲು ಸಹ ಆರಂಭಿಸಿದೆ. 1920ಗಳ ಆದಿಭಾಗದಲ್ಲಿ ಸಾಹೊರ್ನಲ್ಲಿ ಬೈಬಲ್ ಸತ್ಯವು ತಳವೂರಿತ್ತು ಮತ್ತು ಬೇಗನೆ ಬೈಬಲ್ ವಿದ್ಯಾರ್ಥಿಗಳ ಸಕ್ರಿಯ ಗುಂಪು ಸ್ಥಾಪನೆಗೊಂಡಿತ್ತು.
ಆದರೂ ಅಲ್ಲಿ ಬಲವಾದ ಧಾರ್ಮಿಕ ವಿರೋಧವಿತ್ತು. ನಾನು ಹುಚ್ಚನಾಗಿಬಿಟ್ಟಿದ್ದೇನೆಂದು ಹೇಳುತ್ತಾ, ಸ್ಥಳಿಕ ಪಾದ್ರಿಗಳು ನನ್ನ ಕುಟುಂಬದವರಲ್ಲಿ ಹೆಚ್ಚಿನವರು, ನನ್ನನ್ನು ವಿರೋಧಿಸುವಂತೆ ಮಾಡಿದರು. ಆದರೆ ನನ್ನ ಜೀವನಕ್ಕೆ ಒಂದು ಅರ್ಥವು ಸಿಗಲು ಆರಂಭವಾಯಿತು ಮತ್ತು ನಾನು ದೃಢಮನಸ್ಸಿನಿಂದ ಸತ್ಯ ದೇವರಾದ ಯೆಹೋವನನ್ನು ಸೇವಿಸಲು ನಿರ್ಧರಿಸಿದೆ. ಹೀಗೆ ನಾನು 1930ರಲ್ಲಿ ನನ್ನನ್ನು ಯೆಹೋವನಿಗೆ ಸಮರ್ಪಿಸಿಕೊಂಡು, ದೀಕ್ಷಾಸ್ನಾನ ಪಡೆದುಕೊಂಡೆ.
ತೀವ್ರ ಪರೀಕ್ಷೆಗಳ ಆರಂಭ
1938ರಲ್ಲಿ ನಮ್ಮ ಪ್ರಾಂತವು ಹಂಗೆರಿಯವರ ಆಳ್ವಿಕೆಯ ಕೆಳಗೆ ಬಂತು. ಇವರು IIನೇ ವಿಶ್ವ ಯುದ್ಧದಲ್ಲಿ ಜರ್ಮನಿಯ ಪಕ್ಷವಹಿಸಿದರು. ಅಷ್ಟರಲ್ಲಿ ನಮ್ಮ ಹಳ್ಳಿಯಲ್ಲಿ ಸಾವಿರಕ್ಕಿಂತಲೂ ಕಡಿಮೆಯಿದ್ದ ಜನರಲ್ಲಿ, ಸುಮಾರು 50 ಸಾಕ್ಷಿಗಳಿದ್ದರು. ನಮ್ಮ ಜೀವಿತಗಳು ಮತ್ತು ಸ್ವಾತಂತ್ರ್ಯವು ಗಂಡಾಂತರಕ್ಕೊಳಗಾಗಿದ್ದರೂ ಸಹ ನಾವು ಸಾರುವುದನ್ನು ಮುಂದುವರಿಸಿದೆವು.
ಒಂದು ವರ್ಷದ ಅನಂತರ, 1940ರಲ್ಲಿ ನನ್ನನ್ನು ಹಂಗೆರಿಯ ಸೇನೆಯಲ್ಲಿ ಬಲಾತ್ಕಾರವಾಗಿ ಆರಿಸಿಕೊಳ್ಳಲಾಯಿತು. ನಾನು ಏನು ಮಾಡಸಾಧ್ಯವಿತ್ತು? ಜನರು ತಮ್ಮ ಯುದ್ಧದ ಶಸ್ತ್ರಾಸ್ತ್ರಗಳನ್ನು, ಶಾಂತಿಯ ಸಾಧನಗಳನ್ನಾಗಿ ಮಾರ್ಪಡಿಸುವುದರ ಕುರಿತ ಬೈಬಲ್ ಪ್ರವಾದನೆಗಳನ್ನು ನಾನು ಓದಿದ್ದೆ ಮತ್ತು ಸಕಾಲದಲ್ಲಿ ದೇವರು ಭೂಮಿಯಿಂದ ಯುದ್ಧಗಳೆಲ್ಲವನ್ನೂ ತೆಗೆದುಹಾಕುವನೆಂಬುದು ನನಗೆ ಗೊತ್ತಿತ್ತು. (ಕೀರ್ತನೆ 46:9; ಯೆಶಾಯ 2:4) ಆದುದರಿಂದ, ನಾನು ಯುದ್ಧವನ್ನು ದ್ವೇಷಿಸಿದೆ ಮತ್ತು ಏನೇ ಆಗಲಿ ಸೇನೆಯನ್ನು ಸೇರಬಾರದೆಂದು ನಿರ್ಧರಿಸಿದೆ.
ನನಗೆ 14 ತಿಂಗಳುಗಳ ವರೆಗೆ ಸೆರೆಮನೆಯ ಶಿಕ್ಷೆ ನೀಡಲಾಯಿತು ಮತ್ತು ನಾನು ಹಂಗೆರಿಯ ಪೇಚ್ನಲ್ಲಿ ಅದನ್ನು ಕಳೆದೆ. ಅದೇ ಸೆರೆಮನೆಯಲ್ಲಿ ಇನ್ನೂ ಐದು ಸಾಕ್ಷಿಗಳಿದ್ದರು ಮತ್ತು ನಾವು ಅವರೊಡನೆ ಸಹವಾಸಿಸಲು ಸಾಧ್ಯವಾದುದಕ್ಕಾಗಿ ಗಣ್ಯತೆಯನ್ನು ವ್ಯಕ್ತಪಡಿಸಿದೆವು. ಆದರೂ ಸ್ವಲ್ಪ ಸಮಯಕ್ಕಾಗಿ, ನನ್ನ ಕಾಲುಗಳಿಗೆ ಸರಪಳಿ ಹಾಕಿ, ಏಕಾಂತ ಸೆರೆವಾಸದಲ್ಲಿ ಹಾಕಲಾಯಿತು. ನಾವು ಯುದ್ಧಕ್ಕೆ ಸಂಬಂಧಿಸಿದ ಕಾರ್ಯವನ್ನು ಮಾಡಲು ನಿರಾಕರಿಸಿದಾಗ, ನಮ್ಮನ್ನು ಹೊಡೆಯಲಾಯಿತು. ನಡುಬಿಸಿಲಿನಲ್ಲಿ, ಎರಡು ಗಂಟೆಗಳನ್ನು ಹೊರತುಪಡಿಸಿ, ಇಡೀ ದಿನ ನೆಟ್ಟಗೆ ನಿಲ್ಲುವಂತೆ ನಾವು ಬಲವಂತಪಡಿಸಲ್ಪಟ್ಟೆವು. ಈ ಕಠಿನ ಪರೀಕ್ಷೆಯನ್ನು ತಿಂಗಳುಗಟ್ಟಲೆ ನೀಡಲಾಯಿತು. ಆದರೂ ನಾವು ಸಂತೋಷಿತರಾಗಿದ್ದೆವು ಏಕೆಂದರೆ, ನಮಗೆ ನಮ್ಮ ದೇವರ ಮುಂದೆ ಒಂದು ಶುದ್ಧ ಮನಸ್ಸಾಕ್ಷಿಯಿತ್ತು.
ಸಂಧಾನಮಾಡಿಕೊಳ್ಳುವಂತೆ ಪ್ರಯತ್ನ
ಸೇನೆಯನ್ನು ಸೇರಿಕೊಳ್ಳುವ ಮೂಲಕ ಯುದ್ಧ ಕಾರ್ಯಾಚಾರಣೆಯನ್ನು ಬೆಂಬಲಿಸುವುದು ಪ್ರಾಮುಖ್ಯವೆಂದು, ನಮ್ಮನ್ನು ಮನಗಾಣಿಸಲು, ಒಂದು ದಿನ 15 ಕ್ಯಾಥೊಲಿಕ್ ಪಾದ್ರಿಗಳನ್ನೊಳಗೊಂಡ ಗುಂಪು ಬಂತು. ಚರ್ಚೆಯ ಸಮಯದಲ್ಲಿ ನಾವು ಹೇಳಿದ್ದು: “ಪ್ರಾಣವು ಅಮರವಾಗಿದೆ ಮತ್ತು ನಾವು ಯುದ್ಧದಲ್ಲಿ ಸತ್ತುಹೋದರೆ ಸ್ವರ್ಗಕ್ಕೆ ಹೋಗುವೆವೆಂದು ನೀವು ಬೈಬಲಿನಿಂದ ರುಜುಪಡಿಸಬಲ್ಲಿರಾದರೆ ನಾವು ಸೇನೆಗೆ ಸೇರುತ್ತೇವೆ.” ನಿಜವಾಗಿ ಅದನ್ನು ಅವರಿಗೆ ರುಜುಪಡಿಸಲು ಸಾಧ್ಯವಾಗಲಿಲ್ಲ ಮತ್ತು ಅವರು ಆ ಚರ್ಚೆಯನ್ನು ಮುಂದುವರಿಸಲು ಇಷ್ಟಪಡಲಿಲ್ಲ.
1941ರಲ್ಲಿ ನನ್ನ ಸೆರೆಮನೆವಾಸವು ಮುಗಿಯಿತು ಮತ್ತು ನಾನು ನನ್ನ ಕುಟುಂಬದೊಂದಿಗೆ ಪುನರ್ಮಿಲನಗೊಳ್ಳಲಿಕ್ಕೆ ಕಾತುರನಾಗಿದ್ದೆ. ಅದಕ್ಕೆ ಬದಲಾಗಿ, ನನ್ನನ್ನು ಸರಪಳಿಯಿಂದ ಬಿಗಿದು, ಹಂಗೆರಿಯ ಶಾರಶ್ಪಾಟಕ್ನಲ್ಲಿ ಸೇನೆಯ ಕೆಳಮನೆಗೆ ಕರೆದುಕೊಂಡು ಹೋಗಲಾಯಿತು. ನಾವು ಅಲ್ಲಿ ಹೋಗಿ ಸೇರಿದಾಗ, ನನಗೆ ಬಿಡುಗಡೆ ಹೊಂದಲು ಒಂದು ಅವಕಾಶವನ್ನು ನೀಡಲಾಯಿತು. “ನೀನು ಮನೆಗೆ ಹಿಂದಿರುಗಿದ ಕೂಡಲೇ, 200 ಪೆಂಗೋವನ್ನು ನೀಡುವೆನೆಂದು ಮಾತುಕೊಡುವ ಈ ಕಾಗದದ ಮೇಲೆ ಸಹಿ ಹಾಕಿದರೆ ಸಾಕು” ಎಂದು ನನಗೆ ಹೇಳಲಾಯಿತು.
“ಅದು ಹೇಗೆ ಸಾಧ್ಯ, ನಾನು ನಿಮಗೆ ಏಕೆ ಹಣ ಕೊಡಬೇಕು?” ಎಂದು ನಾನು ಕೇಳಿದೆ.
“ನೀನು ಹಣ ನೀಡಿದರೆ, ಸೇನೆಗೆ ಸೇರಿಕೊಳ್ಳಲು ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿಲ್ಲವೆಂದು ಹೇಳುವ ಒಂದು ಸರ್ಟಿಫಿಕೇಟನ್ನು ನಾವು ನಿನಗೆ ಕೊಡುತ್ತೇವೆ” ಎಂದು ಅವರು ಹೇಳಿದರು.
ಇದು ನನಗೆ ಕಷ್ಟಕರವಾದ ನಿರ್ಣಯವನ್ನು ಒಡ್ಡಿತು. ಒಂದಕ್ಕಿಂತಲೂ ಹೆಚ್ಚಿನ ವರ್ಷಗಳ ವರೆಗೆ, ನಾನು ಅಮಾನುಷ ವರ್ತನೆಯಿಂದ ನೊಂದುಬೆಂದಿದ್ದೆ. ನಾನು ಬೇಸತ್ತುಹೋಗಿದ್ದೆ. ಈಗ, ಸ್ವಲ್ಪ ಹಣವನ್ನು ಕೊಡಲು ಒಪ್ಪಿದರೆ, ನಾನು ಸ್ವತಂತ್ರನಾಗುತ್ತಿದ್ದೆ. “ಅದರ ಬಗ್ಗೆ ಯೋಚಿಸಿ, ಹೇಳುತ್ತೇನೆ” ಎಂದು ನಾನು ಅಸ್ಪಷ್ಟ ಧ್ವನಿಯಲ್ಲಿ ಹೇಳಿದೆ.
ನಾನು ಯಾವ ನಿರ್ಧಾರವನ್ನು ಮಾಡಬಹುದಿತ್ತು? ನನಗೆ ನೋಡಿಕೊಳ್ಳಲು ಹೆಂಡತಿ ಮಕ್ಕಳಿದ್ದರು. ಆ ಸಮಯದಲ್ಲಿ ಉತ್ತೇಜನವನ್ನು ನೀಡುತ್ತಾ ಒಬ್ಬ ಜೊತೆ ಕ್ರೈಸ್ತನು ನನಗೆ ಒಂದು ಪತ್ರವನ್ನು ಬರೆದನು. ಅದರಲ್ಲಿ ಅವನು, ಅಪೊಸ್ತಲ ಪೌಲನು, ಯೆಹೋವನ ಮಾತುಗಳನ್ನು ಹೇಳುವ ಇಬ್ರಿಯ 10:38ನ್ನು ಉದ್ಧರಿಸಿದನು: “ನನ್ನವನಾಗಿರುವ ನೀತಿವಂತನು ನಂಬಿಕೆಯಿಂದಲೇ ಬದುಕುವನು; ಅವನು ಹಿಂದೆಗೆದರೆ ಅವನಲ್ಲಿ ನನಗೆ ಸಂತೋಷವಿರುವದಿಲ್ಲ.” ಅದಾದ ಸ್ವಲ್ಪದರಲ್ಲೇ, ಸಿಪಾಯಿ ವಾಸಸ್ಥಾನಗಳಲ್ಲಿದ್ದ ಇಬ್ಬರು ಹಂಗೆರಿಯ ಅಧಿಕಾರಿಗಳು ನನ್ನೊಂದಿಗೆ ಮಾತಾಡಿದರು. ಅವರಲ್ಲಿ ಒಬ್ಬನು ಹೇಳಿದ್ದು: “ಬೈಬಲ್ ತತ್ತ್ವಗಳನ್ನು ಇಷ್ಟೊಂದು ದೃಢವಾಗಿ ಎತ್ತಿಹಿಡಿಯುತ್ತಿರುವುದಕ್ಕಾಗಿ ನಾನು ನಿನ್ನನ್ನು ಎಷ್ಟು ಗೌರವಿಸುತ್ತೇವೆಂಬುದರ ಅರಿವು ನಿನಗಿಲ್ಲ! ಬಿಟ್ಟುಕೊಡಬೇಡ!”
ಮರುದಿನ, 200 ಪೆಂಗೋವಿಗಾಗಿ ನನಗೆ ಸ್ವಾತಂತ್ರ್ಯವನ್ನು ಕೊಡುತ್ತೇವೆಂದು ಹೇಳಿದವರ ಬಳಿಗೆ ಹೋಗಿ ನಾನು ಹೇಳಿದ್ದು: “ನನ್ನನ್ನು ಬಂಧಿಸುವಂತೆ ಯೆಹೋವ ದೇವರು ಅನುಮತಿಸಿದ್ದರಿಂದ, ಆತನೇ ನನ್ನ ಬಿಡುಗಡೆಯನ್ನು ಸಹ ಮಾಡುವನು. ನಾನು ನನ್ನ ಬಿಡುಗಡೆಗೆ ಹಣವನ್ನು ಕೊಡುವುದಿಲ್ಲ.” ಆದುದರಿಂದ ಸೆರೆಮನೆಯಲ್ಲಿ ಹತ್ತು ವರ್ಷಗಳ ವರೆಗಿರುವಂತೆ ನನಗೆ ತೀರ್ಪುನೀಡಲಾಯಿತು. ಆದರೆ ನಾನು ಸಂಧಾನಮಾಡಿಕೊಳ್ಳುವಂತೆ, ಮಾಡಲ್ಪಟ್ಟ ಪ್ರಯತ್ನಗಳು ಅವು ಮಾತ್ರವೇ ಆಗಿರಲಿಲ್ಲ. ನಾನು ಕೇವಲ ಎರಡು ತಿಂಗಳುಗಳ ವರೆಗೆ ಸೇನೆಯಲ್ಲಿ ಕೆಲಸಮಾಡಲು ಒಪ್ಪಿದರೆ ನನಗೆ ಕ್ಷಮಾಪಣೆಯನ್ನು ನೀಡುವುದೆಂದು ಕೋರ್ಟು ಹೇಳಿತು. ಮತ್ತು ನನಗೆ ಒಂದೇ ಒಂದು ಆಯುಧವನ್ನು ಹೊತ್ತುಕೊಂಡು ಹೋಗಬೇಕಾಗಿರಲಿಲ್ಲ! ನಾನು ಅದನ್ನು ಸಹ ನಿರಾಕರಿಸಿದೆ ಮತ್ತು ನನ್ನ ಸೆರೆಮನೆವಾಸವು ಪ್ರಾರಂಭವಾಯಿತು.
ಹಿಂಸೆಯು ಹೆಚ್ಚುತ್ತದೆ
ನನ್ನನ್ನು ಪುನಃ ಪೇಚ್ನಲ್ಲಿರುವ ಸೆರೆಮನೆಗೆ ಕರೆದುಕೊಂಡು ಹೋಗಲಾಯಿತು. ಈ ಸಲ ಚಿತ್ರಹಿಂಸೆಯು ಇನ್ನೂ ತೀವ್ರವಾಗಿತ್ತು. ನನ್ನ ಕೈಗಳನ್ನು ಹಿಂದಕ್ಕೆ ಕಟ್ಟಿ ಅವುಗಳಿಂದ ನನ್ನನ್ನು ಸುಮಾರು ಎರಡು ಗಂಟೆಗಳ ವರೆಗೆ ನೇತಾಡಿಸಲಾಯಿತು. ಅದರ ಪರಿಣಾಮವಾಗಿ, ನನ್ನ ಎರಡು ತೋಳುಗಳ ಕೀಲು ತಪ್ಪಿಹೋದವು. ಅಂಥ ಚಿತ್ರಹಿಂಸೆಯನ್ನು ಸುಮಾರು ಆರು ತಿಂಗಳುಗಳ ವರೆಗೆ ಪುನರಾವರ್ತಿಸಲಾಯಿತು. ನಾನು ಬಿಟ್ಟುಕೊಡದೆ ಇದ್ದುದು ಯೆಹೋವ ದೇವರಿಂದಲೇ ಎಂದು ನಾನು ಹೇಳಬಲ್ಲೆ.
1942ರಲ್ಲಿ ನಮ್ಮ ಒಂದು ಗುಂಪನ್ನು—ರಾಜಕೀಯ ಸೆರೆವಾಸಿಗಳು, ಯೆಹೂದಿಗಳು ಮತ್ತು ಯೆಹೋವನ ಸಾಕ್ಷಿಗಳಲ್ಲಿ 26 ಮಂದಿ—ಜರ್ಮನ್ ಪಡೆಗಳಿಂದ ಆಕ್ರಮಿಸಲ್ಪಟ್ಟಿದ್ದ ಕರ್ಸ್ಕ್ ಎಂಬ ಪಟ್ಟಣಕ್ಕೆ ಕರೆದುಕೊಂಡು ಹೋಗಲಾಯಿತು. ನಮ್ಮನ್ನು ಜರ್ಮನಿಯವರಿಗೆ ಒಪ್ಪಿಸಲಾಯಿತು ಮತ್ತು ರಣರಂಗದಲ್ಲಿದ್ದ ಸೈನಿಕರಿಗೆ ಆಹಾರ, ಶಸ್ತ್ರಾಸ್ತ್ರ ಮತ್ತು ಬಟ್ಟೆಬರೆಗಳನ್ನು ತೆಗೆದುಕೊಂಡು ಹೋಗಿ ಕೊಡುವಂತೆ ಅವರು ಸೆರೆವಾಸಿಗಳಿಗೆ ಕೆಲಸಕೊಟ್ಟರು. ಸಾಕ್ಷಿಗಳಾದ ನಾವು ಆ ಕೆಲಸವನ್ನು ಸಹ ನಿರಾಕರಿಸಿದೆವು, ಏಕೆಂದರೆ ಅದು ನಮ್ಮ ಕ್ರೈಸ್ತ ತಾಟಸ್ಥ್ಯವನ್ನು ಉಲ್ಲಂಘಿಸಿತು. ಇದರಿಂದಾಗಿ, ನಮ್ಮನ್ನು ಮತ್ತೇ ಹಂಗೆರಿಯವರಿಗೆ ಒಪ್ಪಿಸಲಾಯಿತು.
ಕಟ್ಟಕಡೆಗೆ, ನಮ್ಮನ್ನು ಕರ್ಸ್ಕ್ನಲ್ಲಿರುವ ಸ್ಥಳಿಕ ಸೆರೆಮನೆಯಲ್ಲಿ ಹಾಕಲಾಯಿತು. ಹಲವಾರು ದಿವಸಗಳ ವರೆಗೆ, ದಿನವೊಂದಕ್ಕೆ ಮೂರು ಬಾರಿ ನಮಗೆ ರಬ್ಬರ್ ದೊಣ್ಣೆಗಳಿಂದ ಹೊಡೆಯಲಾಗುತ್ತಿತ್ತು. ನನ್ನ ಕಣತಲೆಗೆ ಬಲವಾದ ಒಂದು ಏಟು ಬಿತ್ತು ಮತ್ತು ನಾನು ಕೆಳಗೆ ಬಿದ್ದುಹೋದೆ. ನನಗೆ ಹೊಡೆಯುತ್ತಿರುವಾಗ, ನಾನು ಹೀಗೆ ನೆನಸಿಕೊಂಡೆ, ‘ಸಾಯುವುದು ಅಷ್ಟೇನು ಕಷ್ಟಕರವಲ್ಲ.’ ನನ್ನ ಇಡೀ ಶರೀರವು ಮರಗಟ್ಟಿಹೋಯಿತು, ಆದ ಕಾರಣ ನನಗೇನು ಅನಿಸಲಿಲ್ಲ. ಮೂರು ದಿವಸಗಳ ತನಕ ನಮಗೆ ತಿನ್ನಲು ಏನನ್ನೂ ಕೊಡಲಾಗಲಿಲ್ಲ. ನಂತರ ನಮ್ಮನ್ನು ಕೋರ್ಟಿಗೆ ಕರೆದುಕೊಂಡು ಹೋದರು ಮತ್ತು ಅಲ್ಲಿ ಆರು ಮಂದಿಗೆ ಮರಣದಂಡನೆಯನ್ನು ವಿಧಿಸಿದರು. ಅದರ ನಂತರ, ನಮ್ಮಲ್ಲಿ 20 ಮಂದಿ ಉಳಿದೆವು.
1942ರ ಅಕ್ಟೋಬರ್ ತಿಂಗಳಿನಲ್ಲಿ, ಕರ್ಸ್ಕ್ನಲ್ಲಿ ಕಳೆದ ಆ ದಿವಸಗಳಲ್ಲಿ ಅನುಭವಿಸಿದ ನಂಬಿಕೆಯ ಪರೀಕ್ಷೆಗಳು, ನಾನು ಎದುರಿಸಿದುದರಲ್ಲೇ ಅತ್ಯಂತ ಕಠಿನವಾದವುಗಳು. ನಮ್ಮ ಭಾವನೆಗಳು, ಪ್ರಾಚೀನ ಕಾಲದ ರಾಜನಾದ ಯೆಹೋಷಾಫಾಟನ ಜನರು ಭೀಕರ ವಿರೋಧವನ್ನು ಎದುರಿಸಿದಾಗ, ಅವನು ವ್ಯಕ್ತಪಡಿಸಿದಂತದ್ದೇ ರೀತಿಯಲ್ಲಿದ್ದವು: “ನಮ್ಮ ಮೇಲೆ ಬಂದ ಈ ಮಹಾಸಮೂಹದ ಮುಂದೆ ನಿಲ್ಲುವದಕ್ಕೆ ನಮ್ಮಲ್ಲಿ ಬಲವಿಲ್ಲ, ಏನು ಮಾಡಬೇಕೆಂಬದೂ ತಿಳಿಯದು; ನಮ್ಮ ಕಣ್ಣುಗಳು ನಿನ್ನನ್ನೇ ನೋಡುತ್ತವೆ.”—2 ಪೂರ್ವಕಾಲವೃತ್ತಾಂತ 20:12.
ನಮ್ಮಲ್ಲಿ 20 ಮಂದಿಯನ್ನು, ನಮ್ಮ ಸ್ವಂತ ಸಮಾಧಿಯನ್ನು ತೋಡಲು ಕರೆದುಕೊಂಡು ಹೋಗಲಾಯಿತು. 18 ಹಂಗೆರಿಯ ಸೈನಿಕರು ನಮಗೆ ಕಾವಲಿದ್ದರು. ನಾವು ಗುಂಡಿ ತೋಡಿದ ಅನಂತರ, ಒಂದು ದಾಖಲೆಪತ್ರಕ್ಕೆ ಸಹಿ ಹಾಕುವಂತೆ ನಮಗೆ 10 ನಿಮಿಷಗಳನ್ನು ನೀಡಲಾಯಿತು. ಅದರ ಒಂದು ಭಾಗವು ಹೀಗೆ ಹೇಳಿತು: “ಯೆಹೋವನ ಸಾಕ್ಷಿಗಳ ಬೋಧನೆಯು ತಪ್ಪಾಗಿದೆ. ನಾನು ಅದನ್ನು ಇನ್ನು ಮುಂದೆ ನಂಬುವುದಿಲ್ಲ ಅಥವಾ ಬೆಂಬಲಿಸುವುದಿಲ್ಲ. ನಾನು ಹಂಗೆರಿಯ ತಾಯ್ನಾಡಿಗಾಗಿ ಹೋರಾಡುವೆ . . . ರೋಮನ್ ಕ್ಯಾಥೊಲಿಕ್ ಚರ್ಚಿಗೆ ಸೇರಿಕೊಳ್ಳುವೆನೆಂದು ಸಹಿಯೊಂದಿಗೆ ನಾನು ದೃಢೀಕರಿಸುತ್ತೇನೆ.”
ಹತ್ತು ನಿಮಿಷಗಳ ನಂತರ ಒಂದು ಆಜ್ಞೆಯು ಬಂತು: “ಬಲಪಕ್ಕಕ್ಕೆ ತಿರುಗಿ! ಸಮಾಧಿಗೆ ಮುಂದೊತ್ತಿ!” ಅನಂತರ ಬಂದ ಆಜ್ಞೆಯು ಹೀಗಿತ್ತು: “ಮೊದಲನೆಯ ಮತ್ತು ಮೂರನೆಯ ಸೆರೆವಾಸಿಗಳೇ ಗುಂಡಿಯೊಳಗೆ ಇಳಿಯಿರಿ!” ಆ ದಾಖಲೆಪತ್ರದ ಮೇಲೆ ಸಹಿಯನ್ನು ಹಾಕಲು ಇನ್ನೂ ಹತ್ತು ನಿಮಿಷಗಳನ್ನು ಇವರಿಬ್ಬರಿಗೆ ನೀಡಲಾಯಿತು. ಸೈನಿಕರಲ್ಲಿ ಒಬ್ಬನು ಬೇಡಿಕೊಂಡದ್ದು: “ನಿಮ್ಮ ನಂಬಿಕೆಯನ್ನು ಬಿಟ್ಟುಬಿಟ್ಟು, ಸಮಾಧಿಯೊಳಗಿಂದ ಹೊರಬನ್ನಿರಿ!” ಯಾರೊಬ್ಬರು ಒಂದು ಮಾತನ್ನೂ ಆಡಲಿಲ್ಲ. ಅನಂತರ ಅಧಿಕಾರಿಯು ಅವರಿಬ್ಬರನ್ನೂ ಗುಂಡಿಟ್ಟು ಕೊಂದನು.
“ಬೇರೆಯವರನ್ನು ಏನು ಮಾಡಬೇಕು?” ಎಂದು ಒಬ್ಬ ಸೈನಿಕನು ಆ ಅಧಿಕಾರಿಯನ್ನು ಕೇಳಿದನು.
“ಅವರನ್ನು ಕಟ್ಟಿಹಾಕಿರಿ, ನಾವು ಅವರಿಗೆ ಇನ್ನೂ ಸ್ವಲ್ಪ ಚಿತ್ರಹಿಂಸೆ ಕೊಟ್ಟು, ಬೆಳಗ್ಗೆ ಆರು ಗಂಟೆಗೆ ಗುಂಡಿಟ್ಟು ಕೊಲ್ಲೋಣ” ಎಂದು ಅವನು ಉತ್ತರಿಸಿದನು.
ತಕ್ಷಣವೇ ನಾನು ಭಯಭೀತನಾದೆ, ನಾನು ಸಾಯಲಿದ್ದೇನೆಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ ನಾನು ಆ ಚಿತ್ರಹಿಂಸೆಯನ್ನು ತಡೆದುಕೊಳ್ಳಲಾರದೆ, ಸಂಧಾನಮಾಡಿಕೊಳ್ಳುವೆನೋ ಎಂಬ ಕಾರಣಕ್ಕಾಗಿಯೇ. ಆದುದರಿಂದ ನಾನು ಮುಂದೆ ಬಂದು, ಹೀಗೆ ಹೇಳಿದೆ: “ಸರ್, ನೀವು ಈಗಷ್ಟೇ ಗುಂಡಿಟ್ಟು ಕೊಂದ ನಮ್ಮ ಸಹೋದರರಂತೆಯೇ ನಾವು ಸಹ ನಿಮ್ಮ ಮಾತನ್ನು ಮೀರಿದ್ದೇವೆ. ನಮ್ಮನ್ನು ನೀವು ಏಕೆ ಗುಂಡಿಟ್ಟು ಕೊಲ್ಲುತ್ತಿಲ್ಲ?”
ಆದರೆ ಅವರು ಹಾಗೆ ಮಾಡಲಿಲ್ಲ. ನಮ್ಮ ಕೈಗಳನ್ನು ಹಿಂದಕ್ಕೆ ಕಟ್ಟಿಹಾಕಲಾಯಿತು. ಮತ್ತು ಕೈಗಳನ್ನು ಮೇಲೆ ಸಿಕ್ಕಿಸಿ ನಮ್ಮನ್ನು ನೇತಾಡಿಸಲಾಯಿತು. ನಮಗೆ ಪ್ರಜ್ಞೆತಪ್ಪಿಹೋದಾಗ, ಅವರು ನಮ್ಮ ಮೇಲೆ ನೀರನ್ನು ಎರಚುತ್ತಿದ್ದರು. ನೋವು ಭಯಂಕರವಾಗಿತ್ತು ಏಕೆಂದರೆ, ದೇಹದ ಭಾರವು ನಮ್ಮ ತೋಳುಗಳ ಕೀಲನ್ನು ತಪ್ಪಿಸಿತ್ತು. ಈ ಚಿತ್ರಹಿಂಸೆಯು, ಸುಮಾರು ಮೂರು ಗಂಟೆಗಳ ತನಕ ಮುಂದುವರಿಯಿತು. ಅನಂತರ ಹಠಾತ್ತನೇ, ಯೆಹೋವನ ಸಾಕ್ಷಿಗಳಲ್ಲಿ ಯಾರೊಬ್ಬರನ್ನೂ ಇನ್ನು ಮುಂದೆ ಗುಂಡಿಟ್ಟು ಕೊಲ್ಲಬಾರೆದೆಂಬ ಆಜ್ಞೆಯು ಬಂತು.
ಪೂರ್ವಕ್ಕೆ ಪಯಣ—ಅನಂತರ ತಪ್ಪಿಸಿಕೊಂಡದ್ದು
ಮೂರು ವಾರಗಳ ಅನಂತರ, ಡಾನ್ ನದಿಯ ದಡಗಳನ್ನು ತಲಪುವ ತನಕ ನಾವು ಸಾಲಾಗಿ ನಡೆದುಕೊಂಡು ಹೋದೆವು. ನಾವು ಜೀವಂತವಾಗಿ ಹಿಂದೆ ಕಳುಹಿಸಲ್ಪಡುವಂತಿಲ್ಲವೆಂದು ಆ ಮೇಲ್ವಿಚಾರಕರು ನಮಗೆ ಹೇಳಿದರು. ದಿನದ ಸಮಯದಲ್ಲಿ ನಮಗೆ ಪ್ರಯೋಜನಕ್ಕೆ ಬಾರದಂಥ ಕೆಲಸವನ್ನು ನೀಡಲಾಯಿತು. ಹಳ್ಳಗಳನ್ನು ತೋಡುವುದು ಮತ್ತು ಪುನಃ ಅದನ್ನು ತುಂಬಿಸುವುದು. ಸಂಜೆಯ ಸಮಯದಲ್ಲಿ, ಅಲ್ಲಿಲ್ಲಿ ಸುತ್ತಾಡಲು ಸ್ವಲ್ಪ ಸ್ವಾತಂತ್ರ್ಯವಿತ್ತು.
ನಾನು ಸನ್ನಿವೇಶವನ್ನು ವೀಕ್ಷಿಸಿದಂತೆ, ಅಲ್ಲಿ ಎರಡು ಮಾರ್ಗಗಳಿದ್ದವು. ನಾವು ಅಲ್ಲಿಯೇ ಸಾಯುವುದು ಇಲ್ಲವೇ ಜರ್ಮನಿಯವರಿಂದ ತಪ್ಪಿಸಿಕೊಂಡು, ರಷ್ಯನರಿಗೆ ಶರಣಾಗುವುದು. ಹೆಪ್ಪುಗಟ್ಟಿದ ಡಾನ್ ನದಿಯನ್ನು ದಾಟಿ ತಪ್ಪಿಸಿಕೊಳ್ಳಲು ನಮ್ಮಲ್ಲಿ ಮೂವರು ಮಾತ್ರ ನಿರ್ಧರಿಸಿದೆವು. 1942ರ ಡಿಸೆಂಬರ್ 12ರಂದು, ನಾವು ಯೆಹೋವನಿಗೆ ಪ್ರಾರ್ಥಿಸಿ, ಅಲ್ಲಿಂದ ಹೊರಬಿದ್ದೆವು. ನಾವು ರಷ್ಯನ್ ರಣರಂಗಕ್ಕೆ ಬಂದು ಮುಟ್ಟಿದೆವು ಮತ್ತು ತಕ್ಷಣವೇ ನಮ್ಮನ್ನು ಸುಮಾರು 35,000 ಸೆರೆವಾಸಿಗಳಿದ್ದ ಒಂದು ಸೆರೆಮನೆ ಶಿಬಿರಕ್ಕೆ ಹಾಕಲಾಯಿತು. ವಸಂತ ಋತುವಿನಷ್ಟರಲ್ಲಿ, ಸುಮಾರು 2,300 ಸೆರೆವಾಸಿಗಳು ಮಾತ್ರವೇ ಜೀವಂತವಾಗಿದ್ದರು. ಉಳಿದವರೆಲ್ಲರೂ ಹಸಿವಿನಿಂದಾಗಿ ಸತ್ತುಹೋಗಿದ್ದರು.
ಬಿಡುಗಡೆ ಆದರೆ ಇನ್ನೂ ಹೆಚ್ಚಿನ ದುರಂತ
ನಾನು ಉಳಿದ ಯುದ್ಧವನ್ನು ಮತ್ತು ಅದು ಮುಕ್ತಾಯಗೊಂಡ ಹಲವಾರು ತಿಂಗಳುಗಳ ಅನಂತರ, ಒಬ್ಬ ರಷ್ಯದ ಸೆರೆವಾಸಿಯಾಗಿ ಬದುಕಿಕೊಂಡೆ. ಕಡೆಗೆ, 1945ರ ನವೆಂಬರ್ ತಿಂಗಳಿನಲ್ಲಿ, ನಾನು ಸ್ವದೇಶವಾದ ಸಾಹೊರ್ಗೆ ಪ್ರಯಾಣ ಬೆಳೆಸಿದೆ. ನಮ್ಮ ಹೊಲಗದ್ದೆಯು ದುಸ್ಥಿತಿಯಲ್ಲಿತ್ತು, ಆದುದರಿಂದ ನಾನು ಪುನಃ ಮೊದಲಿಂದ ಕೆಲಸವನ್ನು ಶುರುಮಾಡಬೇಕಿತ್ತು. ನನ್ನ ಹೆಂಡತಿ, ಮಕ್ಕಳು ಯುದ್ಧದ ಸಮಯದಲ್ಲಿ ಹೊಲಗದ್ದೆಗಳಲ್ಲಿ ಕೆಲಸಮಾಡಿದ್ದರು, ಆದರೆ 1944ರ ಅಕ್ಟೋಬರ್ ತಿಂಗಳಿನಲ್ಲಿ, ರಷ್ಯನರು ಆಕ್ರಮಿಸಲು ಬರುತ್ತಿದ್ದಂತೆ, ಅವರು ಪೂರ್ವಕ್ಕೆ ಹೋಗಿ ನೆಲೆಸಿದ್ದರು. ನಮ್ಮ ಸ್ವತ್ತೆಲ್ಲವೂ ಸೂರೆಗೊಂಡಿತ್ತು.
ಇದೆಲ್ಲಕ್ಕಿಂತ ಹೆಚ್ಚಿನ ದುಃಖಕರ ಸಂಗತಿಯೇನೆಂದರೆ, ನಾನು ಮನೆಗೆ ಹಿಂದಿರುಗಿದಾಗ ನನ್ನ ಹೆಂಡತಿಯು ಖಾಯಿಲೆ ಬಿದ್ದಿದ್ದಳು. 1946ರ ಫೆಬ್ರವರಿ ತಿಂಗಳಿನಲ್ಲಿ ಅವಳು ತೀರಿಕೊಂಡಳು. ಅವಳಿಗೆ ಕೇವಲ 38 ವರ್ಷ ವಯಸ್ಸಾಗಿತ್ತು. ಐದಕ್ಕಿಂತಲೂ ಹೆಚ್ಚು ದೀರ್ಘ, ಕಷ್ಟಕರ ವರ್ಷಗಳ ತನಕ ಅಗಲಿದ್ದು, ಮತ್ತೇ ನಾವು ಪುನರ್ಮಿಲನಗೊಂಡಾಗ ಆ ಆನಂದವನ್ನು, ನಾವು ಬಹಳ ಕಾಲ ಸವಿಯಲಿಕ್ಕೆ ಆಗಲಿಲ್ಲ.
ನನ್ನ ಆತ್ಮಿಕ ಸಹೋದರರಿಂದ, ಕೂಟಗಳಿಗೆ ಹಾಜರಾಗುವುದರಿಂದ ಮತ್ತು ಮನೆಮನೆಯ ಶುಶ್ರೂಷಾ ಸೇವೆಯಲ್ಲಿ ಪಾಲ್ಗೊಳ್ಳುವುದರಿಂದ ನಾನು ಸಾಂತ್ವನವನ್ನು ಕಂಡುಕೊಂಡೆ. 1947ರಲ್ಲಿ, ಅಧಿವೇಶನವೊಂದನ್ನು ಹಾಜರಾಗಲಿಕ್ಕಾಗಿ ಸುಮಾರು 400 ಕಿಲೊಮೀಟರುಗಳಷ್ಟು ದೂರದಲಿದ್ದ ಬ್ರೂನ್ಗೆ ಪ್ರಯಾಣಿಸಲು ಸ್ವಲ್ಪ ಹಣವನ್ನು ಸಾಲಪಡೆದುಕೊಳ್ಳಲು ಶಕ್ತನಾದೆ. ಅಲ್ಲಿ ನನ್ನ ಕ್ರೈಸ್ತ ಸಹೋದರರ ಮಧ್ಯೆ, ಆಗ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಅಧ್ಯಕ್ಷರಾಗಿದ್ದ ನೇತನ್ ಏಚ್. ನಾರ್ ಸಹ ಇದ್ದರು. ಅವರಿಂದ ನನಗೆ ಬಹಳ ಸಾಂತ್ವನ ಮತ್ತು ಉತ್ತೇಜನವು ದೊರೆಯಿತು.
ನಾವು ಯುದ್ಧಾನಂತರದ ಸ್ವಾತಂತ್ರ್ಯವನ್ನು ಬಹಳ ಕಾಲವೇನೂ ಆನಂದಿಸಲಿಲ್ಲ. 1948ರಲ್ಲಿ ಕಮ್ಯುನಿಸ್ಟರು ನಮ್ಮ ಮೇಲೆ ದಬ್ಬಾಳಿಕೆ ಮಾಡಲು ಪ್ರಾರಂಭಿಸಿದರು. ಚೆಕೊಸ್ಲೊವಾಕಿಯದಲ್ಲಿ ಯೆಹೋವನ ಸಾಕ್ಷಿಗಳ ಕಾರ್ಯದಲ್ಲಿ ನೇತೃತ್ವವನ್ನು ತೆಗೆದುಕೊಳ್ಳುತ್ತಿದ್ದ ಅನೇಕ ಸಹೋದರರು 1952ರಲ್ಲಿ ಬಂಧಿಸಲ್ಪಟ್ಟರು ಮತ್ತು ಸಭೆಯನ್ನು ನೋಡಿಕೊಳ್ಳುವುದಕ್ಕಾಗಿ ನನಗೆ ಜವಾಬ್ದಾರಿಯನ್ನು ಕೊಡಲಾಯಿತು. 1954ರಲ್ಲಿ ನಾನು ಸಹ ಬಂಧಿಸಲ್ಪಟ್ಟು, ನಾಲ್ಕು ವರ್ಷಗಳ ಸೆರೆಮನೆಯ ಶಿಕ್ಷೆಯನ್ನು ವಿಧಿಸಲಾಯಿತು. ಕ್ರೈಸ್ತ ತಾಟಸ್ಥ್ಯವನ್ನು ಕಾಪಾಡಿಕೊಂಡದ್ದಕ್ಕಾಗಿ, ನನ್ನ ಪುತ್ರನಾದ ಜ್ಯಾನ್ ಮತ್ತು ಅವನ ಪುತ್ರನಾದ ಯೂರೀ ಸಹ ಸೆರೆಮನೆಗೆ ಹಾಕಲ್ಪಟ್ಟರು. ಪ್ರಾಗ್ನಲ್ಲಿರುವ ಪಾಂಕ್ರಾಟ್ಸ್ ರಾಜ್ಯ ಸಜಾ ಕೇಂದ್ರದಲ್ಲಿ ಎರಡು ವರ್ಷಗಳನ್ನು ಕಳೆದೆ. 1956ರಲ್ಲಿ ಕ್ಷಮಾದಾನವು ನೀಡಲ್ಪಟ್ಟಿತು ಮತ್ತು ನಾನು ಬಿಡುಗಡೆಗೊಂಡೆ.
ಕೊನೆಗೂ ಸ್ವಾತಂತ್ರ್ಯ!
ಕಟ್ಟಕಡೆಗೆ, 1989ರಲ್ಲಿ ಕಮ್ಯುನಿಸ್ಟ್ ವಾದವು, ಚೆಕೊಸ್ಲೊವಾಕಿಯದ ಮೇಲಿನ ತನ್ನ ಹಿಡಿತವನ್ನು ಕಳೆದುಕೊಂಡಿತು ಮತ್ತು ಯೆಹೋವನ ಸಾಕ್ಷಿಗಳ ಕೆಲಸವು ಕಾನೂನುರೀತ್ಯವಾಗಿ ಅಂಗೀಕರಿಸಲ್ಪಟ್ಟಿತು. ಹೀಗೆ, ನಮಗೆ ಸಭೆಯಾಗಿ ಜೊತೆಗೂಡಲು ಮತ್ತು ಬಹಿರಂಗವಾಗಿ ಸಾರಲು ಸ್ವಾತಂತ್ರ್ಯ ಸಿಕ್ಕಿತು. ಆ ಸಮಯದಷ್ಟಕ್ಕೆ ಸಾಹೊರ್ನಲ್ಲಿ, ಹತ್ತಿರ ಹತ್ತಿರ ನೂರು ಸಾಕ್ಷಿಗಳಿದ್ದರು. ಅದರರ್ಥ ಹಳ್ಳಿಯಲ್ಲಿದ್ದ ಪ್ರತಿ 10 ವ್ಯಕ್ತಿಗಳಲ್ಲಿ ಸುಮಾರು ಒಬ್ಬ ವ್ಯಕ್ತಿ ಸಾಕ್ಷಿಯಾಗಿದ್ದನು. ಕೆಲವೊಂದು ವರ್ಷಗಳ ಹಿಂದೆ, ನಾವು ಸುಮಾರು 200 ಜನರು ಕುಳಿತುಕೊಳ್ಳಲು ಸಾಕಾಗುವಷ್ಟು, ಒಂದು ಭವ್ಯ, ವಿಶಾಲವಾದ ರಾಜ್ಯ ಸಭಾಗೃಹವನ್ನು ಸಾಹೊರ್ನಲ್ಲಿ ಕಟ್ಟಿದೆವು.
ನನ್ನ ಆರೋಗ್ಯವೇನೂ ಅಷ್ಟು ಚೆನ್ನಾಗಿಲ್ಲ, ಆದುದರಿಂದ ಸಹೋದರರು ನನ್ನನ್ನು ರಾಜ್ಯ ಸಭಾಗೃಹಕ್ಕೆ ಕರೆದುಕೊಂಡುಹೋಗುತ್ತಾರೆ. ನಾನು ಅಲ್ಲಿರುವುದಕ್ಕಾಗಿ ಸಂತೋಷಿಸುತ್ತೇನೆ ಮತ್ತು ಕಾವಲಿನಬುರುಜು ಅಭ್ಯಾಸದಲ್ಲಿ ಉತ್ತರಗಳನ್ನು ನೀಡುವುದರಲ್ಲಿ ಆನಂದಿಸುತ್ತೇನೆ. ಅನೇಕ ಮೊಮ್ಮಕ್ಕಳನ್ನು ಒಳಗೊಂಡ, ನನ್ನ ಕುಟುಂಬದ ಮೂರು ಸಂತತಿಗಳು ಯೆಹೋವನನ್ನು ಸೇವಿಸುತ್ತಿರುವುದರಿಂದ ನನಗೆ ವಿಶೇಷವಾಗಿ ಸಂತೋಷವಾಗುತ್ತದೆ. ಇವರಲ್ಲಿ ಒಬ್ಬನು, ತನ್ನ ಕುಟುಂಬ ಜವಾಬ್ದಾರಿಗಳ ನಿಮಿತ್ತ ಸಂಚರಣ ಕೆಲಸವನ್ನು ಬಿಡಬೇಕಾದ ತನಕವೂ, ಚೆಕೊಸ್ಲೊವಾಕಿಯದಲ್ಲಿ ಯೆಹೋವನ ಸಾಕ್ಷಿಗಳ ಒಬ್ಬ ಸಂಚರಣ ಮೇಲ್ವಿಚಾರಕನಾಗಿ ಸೇವೆ ಸಲ್ಲಿಸಿದನು.
ಎಷ್ಟೋ ಸಮಯ ನನಗೆ ಪರೀಕ್ಷೆಗಳು ಬಂದಾಗ, ಯೆಹೋವನು ನನ್ನನ್ನು ಬಲಪಡಿಸಿದಕ್ಕಾಗಿ ನಾನು ಆಭಾರಿಯಾಗಿದ್ದೇನೆ. ನನ್ನ ಗಮನವನ್ನು ಆತನ ಮೇಲೆ—‘ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನಾಗಿ’—ಕೇಂದ್ರೀಕರಿಸಿದ್ದರಿಂದಲೇ ನನಗೆ ಶಕ್ತಿ ಸಿಕ್ಕಿದೆ. (ಇಬ್ರಿಯ 11:27) ಹೌದು, ವಿಮೋಚಿಸುವ ಆತನ ಬಾಹುಬಲದ ಸಹಾಯವನ್ನು ಸಹ ಕಂಡಿದ್ದೇನೆ. ಆದುದರಿಂದಲೇ, ಈಗಲೂ ಸಹ ನಾನು ಸಭಾ ಕೂಟಗಳಲ್ಲಿ ಉಪಸ್ಥಿತನಾಗಿರಲು ಮತ್ತು ನನಗಾಗುವಷ್ಟರ ಮಟ್ಟಿಗೆ, ಸಾರ್ವಜನಿಕ ಶುಶ್ರೂಷೆಯಲ್ಲಿ, ಆತನ ನಾಮವನ್ನು ಘೋಷಿಸುವುದರಲ್ಲಿ ಪಾಲ್ಗೊಳ್ಳುತ್ತಾ ಇರಲು ಪ್ರಯತ್ನಿಸುತ್ತಿದ್ದೇನೆ.
[ಪುಟ 25 ರಲ್ಲಿರುವ ಚಿತ್ರ]
ಸಾಹೊರ್ನಲ್ಲಿರುವ ರಾಜ್ಯ ಸಭಾಗೃಹ
[ಪುಟ 26 ರಲ್ಲಿರುವ ಚಿತ್ರ]
ಕಾವಲಿನಬುರುಜು ಅಭ್ಯಾಸದಲ್ಲಿ ಉತ್ತರವನ್ನು ನೀಡುವ ಸುಯೋಗವನ್ನು ನಾನು ಗಣ್ಯಮಾಡುತ್ತೇನೆ