“ನಿಮ್ಮಲ್ಲಿರುವುದನ್ನು ಭದ್ರವಾಗಿ ಹಿಡಿದುಕೊಳ್ಳಿರಿ”
ಸುಮಾರು 30 ದ್ವೀಪಗಳುಳ್ಳ ಗ್ರೀಸಿನ ಸೈಕ್ಲೆಡೀಸ್ನ ದ್ವೀಪವೊಂದರಲ್ಲಿ, ಸಾಕ್ಷಿಗಳ ಒಂದು ಗುಂಪು ಸಾರುತ್ತಿತ್ತು. ಅವರಲ್ಲಿ ಇಬ್ಬರು ಮನೆಮನೆಯ ಸಾಕ್ಷಿಕಾರ್ಯದಲ್ಲಿ ತೊಡಗಿರುವಾಗ, ಅವರು ಒಬ್ಬ ಪೊಲೀಸನನ್ನು ಸಂಧಿಸಿದರು. ಅವನು ಅವರನ್ನು ಪೊಲೀಸ್ ಠಾಣೆಗೆ ಬರುವಂತೆ ಹೇಳಿದನು. ಅವರು ಪೊಲೀಸ್ ಠಾಣೆಗೆ ಹೋದ ಸ್ವಲ್ಪದರಲ್ಲೇ, ಟೆಲಿಫೋನ್ ಗಂಟೆ ಬಾರಿಸಿತು. ಅದು ಹಳ್ಳಿಯ ಪಾದ್ರಿಯದ್ದಾಗಿತ್ತು. “ಹಳ್ಳಿಯಲ್ಲಿ ಯೆಹೋವನ ಸಾಕ್ಷಿಗಳಿದ್ದಾರೆಂದು ನಾನು ಕೇಳಿಸಿಕೊಂಡೆ” ಎಂದು ಅವನು ಹೇಳಿದನು. “ಹೌದು, ನನ್ನ ಬಳಿ ಇಬ್ಬರಿದ್ದಾರೆ” ಎಂದು ಆ ಪೊಲೀಸನು ಉತ್ತರಿಸಿದನು. “ನಾನು ಈ ಕೂಡಲೇ ಅಲ್ಲಿಗೆ ಬರುವೆ.” ಅವರು ಮಾತಾಡುವ ರೀತಿಯನ್ನು ನೋಡಿ, ಆ ಸಹೋದರರಿಗೆ ಒಂದು ರೀತಿ ಭಯವಾಯಿತು.
ಆದರೆ, ಆ ಪಾದ್ರಿಯು ಅಲ್ಲಿಗೆ ಬಂದಾಗ, ಅವರನ್ನು ನೋಡಿ ಮುಗುಳ್ನಕ್ಕನು, ಅವರ ಕೈಗಳನ್ನು ಕುಲುಕಿದನು ಮತ್ತು ಆ ಪೊಲೀಸನ ಪಕ್ಕದಲ್ಲಿದ್ದ ಕುರ್ಚಿಯಲ್ಲಿ ಕುಳಿತುಕೊಂಡನು. ಚರ್ಚೆಯು ಮುಂದುವರಿದಂತೆ, ಪಾದ್ರಿಯು ಸಾಮಂಜಸ್ಯನೂ ವಿನಯಶೀಲನೂ ಆಗಿದ್ದಾಗ, ಆ ಪೊಲೀಸನು ಜಗಳಮಾಡಲು ಪ್ರಾರಂಭಿಸಿದನು. ಪಾದ್ರಿಯು ಆ ಪೊಲೀಸನಿಗೆ ಸಾಕ್ಷಿಗಳನ್ನು ಅಲ್ಪವಾಗಿ ಎಣಿಸಬಾರದೆಂದು ಹೇಳಿದನು. ಮತ್ತು ಹೇಳಿದ್ದು: “ಅವರು ಯಾವುದೇ ಪ್ರಶ್ನೆಗೆ ಉತ್ತರ ಹೇಳಶಕ್ತರು, ಏಕೆಂದರೆ ಅವರು ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ತರಬೇತಿಯನ್ನು ಪಡೆದುಕೊಳ್ಳುತ್ತಾರೆ. ಲೋಕವನ್ನು ಅಲುಗಾಡಿಸುವುದು ಸುಲಭವಾಗಿರಬಹುದು, ಆದರೆ ಯೆಹೋವನ ಸಾಕ್ಷಿಗಳ ನಂಬಿಕೆಯನ್ನು ಕದಲಿಸಸಾಧ್ಯವಿಲ್ಲ.”
ಮರುದಿನ ಬೆಳಗ್ಗೆ ಆ ಸಹೋದರರು ಸಾರುತ್ತಿದ್ದಾಗ, ಅವರು ಪಾದ್ರಿಯನ್ನು ಪುನಃ ಎದುರಾದರು ಮತ್ತು ಅವರು ಕೇಳಿದ್ದು: “ಪೊಲೀಸ್ ಠಾಣೆಯಲ್ಲಿ ನಾವು ಮಾತಾಡುತ್ತಿದ್ದಾಗ ನೀವು ಅಷ್ಟೊಂದು ಒಳ್ಳೆಯ ರೀತಿಯಲ್ಲಿ ಏಕೆ ನಡೆದುಕೊಂಡಿರಿ?” ಆ ಪಾದ್ರಿಯು ಅದಕ್ಕೆ, ಸೈರಾಸ್ನಲ್ಲಿರುವ ಅನೇಕ ಸಾಕ್ಷಿಗಳ ಪರಿಚಯ ತನಗಿತ್ತೆಂಬುದನ್ನು ಮತ್ತು ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳನ್ನು ಅನೇಕ ವರ್ಷಗಳಿಂದ ಓದುತ್ತಿದ್ದೆನೆಂಬುದನ್ನು ಹೇಳಿದನು. ವಾಸ್ತವದಲ್ಲಿ, ಅನೇಕ ಸಂದರ್ಭಗಳಲ್ಲಿ ಅವನು ಕಾವಲಿನಬುರುಜು ಪತ್ರಿಕೆಯನ್ನು ತೆಗೆದುಕೊಂಡು ಹೋಗಿ, ಫೋಲ್ಡರ್ ಒಳಗೆ ಬಚ್ಚಿಟ್ಟುಕೊಂಡು, ಚರ್ಚಿನಲ್ಲಿ ಧರ್ಮಪ್ರವಚನ ಮಾಡುವಾಗ ಉಪಯೋಗಿಸಿದ್ದನು. ಅವನು ಹೇಳಿದ್ದು: “ನಿಮ್ಮ ಸಾಹಿತ್ಯವನ್ನು ನಾನು ಓದದೇ ಇದ್ದಿದ್ದರೆ, ಜೀವಿತಕ್ಕೆ ಯಾವ ಅರ್ಥವೂ ಇದ್ದಿರುತ್ತಿರಲಿಲ್ಲವೇನೋ ಎಂದು ನೆನಸುತ್ತೇನೆ. ಅದು ತಾನೇ ನನ್ನ ಜೀವಿತಕ್ಕೆ ಒಂದು ಆಶಾಕಿರಣವಾಗಿದೆ.”
ಅನಂತರ ಪಾದ್ರಿಯು ಆ ಸಾಕ್ಷಿಗಳಿಗೆ ಹೇಳಿದ್ದು: “ನಾನು ನಿಮಗೆ ಒಂದು ವಿಷಯವನ್ನು ಹೇಳಲೇಬೇಕು. ನಿಮ್ಮಲ್ಲಿರುವುದನ್ನು ಭದ್ರವಾಗಿ ಹಿಡಿದುಕೊಳ್ಳಿರಿ. ಅದನ್ನು ಬಿಟ್ಟುಬಿಡುವ ತಪ್ಪನ್ನು ಮಾತ್ರ ಮಾಡಬೇಡಿ. ಈಗ ನಾನು ನಿಮಗೆ ಹೇಳುತ್ತಿರುವ ವಿಷಯವು, ನಾನು ಕೊಟ್ಟ ಪ್ರವಚನದಲ್ಲೇ ಅತ್ಯುತ್ತಮವಾದದ್ದು, ಮತ್ತು ಅದನ್ನು ನಾನು ಬರಿ ಬಾಯಿಮಾತಿನಲ್ಲಿ ಹೇಳುತ್ತಿಲ್ಲ; ಅದನ್ನು ನಿಜವಾಗಿಯೂ ನನ್ನ ಹೃದಯದಾಳದಿಂದ ಹೇಳುತ್ತಿದ್ದೇನೆ.”