ದೇವಪ್ರಭುತ್ವಕ್ಕೆ ನಿಕಟವಾಗಿ ಉಳಿಯಿರಿ
“ಯೆಹೋವನು ನಮ್ಮ ನ್ಯಾಯಾಧಿಪತಿ, ಯೆಹೋವನು ನಮಗೆ ಧರ್ಮವಿಧಾಯಕ, ಯೆಹೋವನು ನಮ್ಮ ರಾಜ.”—ಯೆಶಾಯ 33:22.
1. ಹೆಚ್ಚಿನ ಜನರಿಗೆ ಸರಕಾರವು ಆಸಕ್ತಿಯ ವಿಷಯವಾಗಿದೆ ಏಕೆ?
ಸರಕಾರದ ವಿಷಯವು ಎಲ್ಲರಿಗೂ ಅತ್ಯಾಸಕ್ತಿಯ ವಿಷಯವಾಗಿದೆ. ಒಳ್ಳೆಯ ಸರಕಾರವು ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ. ಬೈಬಲು ಹೇಳುವುದು: “ನ್ಯಾಯಪಾಲಕನಾದ ರಾಜನು ದೇಶವನ್ನು ವೃದ್ಧಿಗೆ ತರುವನು.” (ಜ್ಞಾನೋಕ್ತಿ 29:4) ಮತ್ತೊಂದು ಕಡೆಯಲ್ಲಿ, ಕೆಟ್ಟ ಸರಕಾರವು ಅನ್ಯಾಯ, ಭ್ರಷ್ಟತೆ, ಮತ್ತು ದಬ್ಬಾಳಿಕೆಗೆ ನಡೆಸುತ್ತದೆ. “ದುಷ್ಟನ ಆಳಿಕೆ ಜನರಿಗೆ ನರಳಾಟ.” (ಜ್ಞಾನೋಕ್ತಿ 29:2) ಇತಿಹಾಸದಾದ್ಯಂತ, ಮಾನವರು ಅನೇಕ ರೀತಿಯ ಸರಕಾರವನ್ನು ಪ್ರಯತ್ನಿಸಿದ್ದಾರೆ, ಮತ್ತು ದುಃಖಕರವಾಗಿ, ಅವರು ಅನೇಕ ವೇಳೆ ತಮ್ಮ ಪ್ರಭುಗಳ ದಬ್ಬಾಳಿಕೆಯ ಕಾರಣ ‘ನಿಟ್ಟುಸಿರು’ಬಿಟ್ಟಿದ್ದಾರೆ. (ಪ್ರಸಂಗಿ 8:9) ಯಾವುದೇ ರೀತಿಯ ಸರಕಾರವು ತನ್ನ ಪ್ರಜೆಗಳಿಗೆ ನಿರಂತರವಾದ ಸಂತೃಪ್ತಿಯನ್ನು ತರುವುದರಲ್ಲಿ ಸಫಲವಾಗುವುದೊ?
2. ಪ್ರಾಚೀನ ಇಸ್ರಾಯೇಲಿನ ಸರಕಾರದ ಸಂಬಂಧದಲ್ಲಿ, “ದೇವಪ್ರಭುತ್ವ” ಎಂಬುದು ಏಕೆ ಒಂದು ಸೂಕ್ತವಾದ ವರ್ಣನೆಯಾಗಿದೆ?
2 ಇತಿಹಾಸಕಾರ ಜೋಸೀಫಸನು ಹೀಗೆ ಬರೆದಾಗ, ಒಂದು ಅಪೂರ್ವ ರೀತಿಯ ಸರಕಾರವನ್ನು ಉಲ್ಲೇಖಿಸಿದನು. “ಕೆಲವು ಜನರು ಸರ್ವಶ್ರೇಷ್ಠ ರಾಜಕೀಯ ಶಕ್ತಿಯನ್ನು ರಾಜಪ್ರಭುತ್ವಗಳಿಗೆ, ಇತರರು ಸ್ವಲ್ಪಜನಾಧಿಪತ್ಯಗಳಿಗೆ, ಇನ್ನೂ ಕೆಲವರು ಜನಸಾಮಾನ್ಯರಿಗೆ ವಹಿಸಿಕೊಟ್ಟಿದ್ದಾರೆ. ಆದರೆ ನಮ್ಮ ಧರ್ಮವಿಧಾಯಕನಾದ [ಮೋಶೆ], ಇವುಗಳಲ್ಲಿ ಯಾವುದೇ ರೀತಿಯ ರಾಜಕೀಯ ಸಂಘಟನೆಯಿಂದ ಆಕರ್ಷಿತನಾಗದೆ, ತನ್ನ ಸಂವಿಧಾನಕ್ಕೆ ದೇವಪ್ರಭುತ್ವ—ಅಂತಹ ಒಂದು ವಿಚಿತ್ರ ಪದವನ್ನು ಉಪಯೋಗಿಸುವ ಅನುಮತಿ ನನಗಿರುವುದಾದರೆ—ಎಂಬ ನಿಶ್ಚಿತ ರಚನೆಯನ್ನು ನೀಡುತ್ತಾ, ಎಲ್ಲ ಪರಮಾಧಿಕಾರ ಮತ್ತು ಶಕ್ತಿಯನ್ನು ದೇವರ ಹಸ್ತಗಳಲ್ಲಿ ಇರಿಸಿದನು.” (ಅಗ್ನೆಯ್ಸ್ ಏಪೀಯನ್, II, 164-5) ಕನ್ಸೈಸ್ ಆಕ್ಸ್ಫರ್ಡ್ ಡಿಕ್ಷನೆರಿಗನುಸಾರ, ದೇವಪ್ರಭುತ್ವವು “ದೇವರಿಂದ ಆಳಲ್ಪಡುವ ಒಂದು ಸರಕಾರವಾಗಿದೆ.” ಆ ಪದವು ಬೈಬಲಿನಲ್ಲಿ ಕಾಣಿಸಿಕೊಳ್ಳುವುದಿಲ್ಲವಾದರೂ, ಅದು ಪ್ರಾಚೀನ ಇಸ್ರಾಯೇಲಿನ ಸರಕಾರವನ್ನು ಸೂಕ್ತವಾಗಿ ವರ್ಣಿಸುತ್ತದೆ. ಇಸ್ರಾಯೇಲ್ಯರಿಗೆ ಒಬ್ಬ ಮಾನವ ಅರಸನಿದ್ದರೂ, ಅವರ ನಿಜವಾದ ಅರಸನು ಯೆಹೋವನಾಗಿದ್ದನು. ಇಸ್ರಾಯೇಲ್ಯನಾದ ಪ್ರವಾದಿ ಯೆಶಾಯನು ಹೇಳಿದ್ದು: “ಯೆಹೋವನು ನಮ್ಮ ನ್ಯಾಯಾಧಿಪತಿ, ಯೆಹೋವನು ನಮಗೆ ಧರ್ಮವಿಧಾಯಕ, ಯೆಹೋವನು ನಮ್ಮ ರಾಜ.”—ಯೆಶಾಯ 33:22.
ನಿಜವಾದ ದೇವಪ್ರಭುತ್ವ ಎಂದರೇನು?
3, 4. (ಎ) ನಿಜವಾದ ದೇವಪ್ರಭುತ್ವ ಎಂದರೇನು? (ಬಿ) ನಿಕಟ ಭವಿಷ್ಯತ್ತಿನಲ್ಲಿ, ದೇವಪ್ರಭುತ್ವವು ಸಕಲ ಮಾನವಕುಲಕ್ಕೆ ಯಾವ ಆಶೀರ್ವಾದಗಳನ್ನು ತರುವುದು?
3 ಜೋಸೀಫಸನು ಆ ಪದವನ್ನು ರಚಿಸಿದ ಸಮಯದಂದಿನಿಂದ, ಅನೇಕ ಸಮಾಜಗಳು ದೇವಪ್ರಭುತ್ವಗಳಾಗಿ ವರ್ಣಿಸಲ್ಪಟ್ಟಿವೆ. ಅವುಗಳಲ್ಲಿ ಕೆಲವು ಸಹಿಷ್ಣುತೆಯಿಲ್ಲದವುಗಳು, ಮತಭ್ರಾಂತ, ಮತ್ತು ಕ್ರೂರವಾಗಿ ದಬ್ಬಾಳಿಕೆ ನಡೆಸುವವುಗಳಾಗಿ ಕಂಡುಬಂದವು. ಅವು ನಿಜವಾದ ದೇವಪ್ರಭುತ್ವಗಳಾಗಿದ್ದವೊ? ಇಲ್ಲ, ಜೋಸೀಫಸನು ಆ ಪದವನ್ನು ಬಳಸಿದ ಅರ್ಥದಲ್ಲಿ, ಅವು ನಿಜವಾದ ದೇವಪ್ರಭುತ್ವಗಳಾಗಿರಲಿಲ್ಲ. ಸಮಸ್ಯೆಯು ಏನೆಂದರೆ, “ದೇವಪ್ರಭುತ್ವ” ಎಂಬ ಪದದ ಅರ್ಥವು ವಿಸ್ತೃತಗೊಂಡಿದೆ. ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಅದನ್ನು ಹೀಗೆ ವ್ಯಾಖ್ಯಾನಿಸುತ್ತದೆ: “ರಾಜ್ಯವು ಒಬ್ಬ ಪುರೋಹಿತನಿಂದ ಇಲ್ಲವೆ ಪುರೋಹಿತರಿಂದ ಆಳಲ್ಪಡುವ ಒಂದು ರೀತಿಯ ಸರಕಾರವಾಗಿದ್ದು, ಅದರಲ್ಲಿ ಪುರೋಹಿತರಿಗೆ ಪೌರ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಧಿಕಾರವಿರುತ್ತದೆ.” ಆದರೆ ನಿಜವಾದ ದೇವಪ್ರಭುತ್ವವು, ಪುರೋಹಿತರಿಂದ ರಚಿತವಾದ ಸರಕಾರವಾಗಿರುವುದಿಲ್ಲ. ಅದು ನಿಜವಾಗಿಯೂ ದೇವರ ಆಳ್ವಿಕೆಯಾಗಿದ್ದು, ವಿಶ್ವದ ಸೃಷ್ಟಿಕರ್ತನಾದ ಯೆಹೋವ ದೇವರು ಆಳುವ ಸರಕಾರವಾಗಿದೆ.
4 ನಿಕಟ ಭವಿಷ್ಯತ್ತಿನಲ್ಲಿ, ಇಡೀ ಭೂಮಿಯು ದೇವಪ್ರಭುತ್ವದ ಅಧೀನದಲ್ಲಿರುವುದು. ಅದು ಎಂತಹ ಆಶೀರ್ವಾದವಾಗಿರುವುದು! “ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:3, 4) ಅಪರಿಪೂರ್ಣ ಮಾನವರಿಂದ ನಡೆಸಲ್ಪಡುವ ಯಾವುದೇ ಪುರೋಹಿತ ಆಳ್ವಿಕೆಯು ಇಂತಹ ಸಂತೋಷವನ್ನು ತರಲಾರದು. ದೇವರ ಆಳ್ವಿಕೆಯು ಮಾತ್ರ ತರಬಲ್ಲದು. ಆದಕಾರಣ, ಕ್ರೈಸ್ತರು ರಾಜಕೀಯ ಚಟುವಟಿಕೆಯ ಮೂಲಕ ದೇವಪ್ರಭುತ್ವವನ್ನು ತರಲು ಪ್ರಯತ್ನಿಸುವುದಿಲ್ಲ. ದೇವರು ತನ್ನದೇ ಆದ ಸಮಯದಲ್ಲಿ ಹಾಗೂ ತನ್ನದೇ ಆದ ವಿಧದಲ್ಲಿ, ಲೋಕವ್ಯಾಪಕ ದೇವಪ್ರಭುತ್ವವನ್ನು ಸ್ಥಾಪಿಸುವಂತೆ ಅವರು ತಾಳ್ಮೆಯಿಂದ ಕಾಯುತ್ತಾರೆ.—ದಾನಿಯೇಲ 2:44.
5. ಇಂದು ನಿಜವಾದ ದೇವಪ್ರಭುತ್ವವು ಎಲ್ಲಿ ಕಾರ್ಯನಡೆಸುತ್ತಿದೆ, ಮತ್ತು ಅದರ ಕುರಿತು ಯಾವ ಪ್ರಶ್ನೆಗಳು ಎಬ್ಬಿಸಲ್ಪಡುತ್ತವೆ?
5 ಆದರೆ, ಈ ನಡುವೆ ನಿಜವಾದ ದೇವಪ್ರಭುತ್ವವೊಂದು ಕಾರ್ಯನಡಿಸುತ್ತಿದೆ. ಎಲ್ಲಿ? ಸ್ವಇಚ್ಛೆಯಿಂದ ದೇವರ ಆಳ್ವಿಕೆಗೆ ಅಧೀನರಾಗಿ, ಆತನ ಚಿತ್ತವನ್ನು ಮಾಡಲು ಒಟ್ಟಿಗೆ ಸಹಕರಿಸುವವರ ಮಧ್ಯದಲ್ಲಿ. ಅಂತಹ ನಂಬಿಗಸ್ತರು, ಲೋಕವ್ಯಾಪಕ ಆತ್ಮಿಕ “ಜನಾಂಗ”ದೋಪಾದಿ, ಆತ್ಮಿಕ “ರಾಷ್ಟ್ರ”ದಲ್ಲಿ ಒಟ್ಟುಸೇರಿಸಲ್ಪಟ್ಟಿದ್ದಾರೆ. ಅವರು “ದೇವರ ಇಸ್ರಾಯೇಲ್”ನ ಉಳಿಕೆಯವರು ಮತ್ತು ಅವರ 55 ಲಕ್ಷಕ್ಕಿಂತಲೂ ಹೆಚ್ಚಿನ ಕ್ರೈಸ್ತ ಸಂಗಾತಿಗಳಾಗಿದ್ದಾರೆ. (ಯೆಶಾಯ 66:8; ಗಲಾತ್ಯ 6:16) ಅವರು “ಸರ್ವಯುಗಗಳ ಅರಸ”ನಾದ ಯೆಹೋವ ದೇವರಿಂದ ಸಿಂಹಾಸನಕ್ಕೇರಿಸಲ್ಪಟ್ಟ, ಸ್ವರ್ಗೀಯ ಅರಸನಾದ ಯೇಸು ಕ್ರಿಸ್ತನಿಗೆ ಅಧೀನರಾಗಿದ್ದಾರೆ. (1 ತಿಮೊಥೆಯ 1:17; ಪ್ರಕಟನೆ 11:15) ಯಾವ ವಿಧದಲ್ಲಿ ಈ ಸಂಸ್ಥೆಯು ದೇವಪ್ರಭುತ್ವವಾಗಿದೆ? ಅದರ ಸದಸ್ಯರು ಐಹಿಕ ಸರಕಾರಗಳ ಅಧಿಕಾರವನ್ನು ಹೇಗೆ ವೀಕ್ಷಿಸುತ್ತಾರೆ? ಮತ್ತು ತಮ್ಮ ಆತ್ಮಿಕ ಜನಾಂಗದೊಳಗೆ ಅಧಿಕಾರವನ್ನು ನಡೆಸುವವರಿಂದ, ಈ ದೇವಪ್ರಭುತ್ವದ ತತ್ವವು ಹೇಗೆ ಕಾಪಾಡಿಕೊಳ್ಳಲ್ಪಡುತ್ತದೆ?
ಒಂದು ದೇವಪ್ರಭುತ್ವ ಸಂಸ್ಥೆ
6. ಒಂದು ಮಾನವ ದೃಶ್ಯ ಸಂಸ್ಥೆಯು ದೇವರಿಂದ ಹೇಗೆ ಆಳಲ್ಪಡಸಾಧ್ಯವಿದೆ?
6 ಒಂದು ಮಾನವ ಸಂಸ್ಥೆಯು, ಅದೃಶ್ಯ ಸ್ವರ್ಗಗಳಲ್ಲಿ ವಾಸಿಸುವಾತನಾದ ಯೆಹೋವನಿಂದ ಹೇಗೆ ಆಳಲ್ಪಡಸಾಧ್ಯವಿದೆ? (ಕೀರ್ತನೆ 103:19) ಹೇಗೆಂದರೆ, ಅದರೊಂದಿಗೆ ಜೊತೆಗೂಡಿರುವವರು ಈ ಕೆಳಗಿನ ಪ್ರೇರಿತ ಸಲಹೆಯನ್ನು ಅನುಸರಿಸುತ್ತಾರೆ: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು.” (ಜ್ಞಾನೋಕ್ತಿ 2:6; 3:5) ಅವರು “ಕ್ರಿಸ್ತನ ನಿಯಮವನ್ನು” ಅನುಸರಿಸಿದಂತೆ ಮತ್ತು ತಮ್ಮ ಅನುದಿನದ ಜೀವಿತಗಳಲ್ಲಿ ಪ್ರೇರಿತ ಬೈಬಲ್ ತತ್ವಗಳನ್ನು ಅನ್ವಯಿಸಿದಂತೆ, ದೇವರು ತಮ್ಮನ್ನು ಆಳುವಂತೆ ಅವರು ಅನುಮತಿಸುತ್ತಾರೆ. (ಗಲಾತ್ಯ 6:2; 1 ಕೊರಿಂಥ 9:21; 2 ತಿಮೊಥೆಯ 3:16; ನೋಡಿ ಮತ್ತಾಯ 5:22, 28, 39; 6:24, 33; 7:12, 21.) ಇದನ್ನು ಮಾಡಲು ಅವರು ಬೈಬಲನ್ನು ಅಭ್ಯಸಿಸುವವರಾಗಿರಬೇಕು. (ಕೀರ್ತನೆ 1:1-3) “ಸದ್ಗುಣವುಳ್ಳವರಾಗಿದ್ದ” ಗತಕಾಲದ ಬೆರೋಯದವರಂತೆ, ಅವರು ಮನುಷ್ಯರು ಹೇಳುವುದನ್ನು ನಂಬುವುದಿಲ್ಲ, ಬದಲಿಗೆ ತಾವು ಕಲಿತುಕೊಳ್ಳುತ್ತಿರುವ ಸಂಗತಿಗಳನ್ನು ಬೈಬಲಿನಲ್ಲಿ ಸದಾ ಪರೀಕ್ಷಿಸಿನೋಡುತ್ತಾರೆ. (ಅ. ಕೃತ್ಯಗಳು 17:10, 11; ಕೀರ್ತನೆ 119:33-36) ಅವರು ಕೀರ್ತನೆಗಾರನಂತೆ ಹೀಗೆ ಪ್ರಾರ್ಥಿಸುತ್ತಾರೆ: “ಉತ್ಕೃಷ್ಟವಾದ ಜ್ಞಾನವಿವೇಕಗಳನ್ನು ನನಗೆ ಹೇಳಿಕೊಡು; ನಿನ್ನ ಆಜ್ಞೆಗಳನ್ನು ನಂಬಿಕೊಂಡಿದ್ದೇನಲ್ಲಾ.”—ಕೀರ್ತನೆ 119:66.
7. ದೇವಪ್ರಭುತ್ವದಲ್ಲಿ ಮೇಲ್ವಿಚಾರಣೆಯ ಕ್ರಮಾನುಗತಿ ಏನಾಗಿದೆ?
7 ಪ್ರತಿಯೊಂದು ಸಂಸ್ಥೆಯಲ್ಲಿ, ಅಧಿಕಾರವಹಿಸುವ ಇಲ್ಲವೆ ಮಾರ್ಗದರ್ಶನವನ್ನು ಒದಗಿಸುವ ಕೆಲವರು ಇರಲೇಬೇಕು. ಯೆಹೋವನ ಸಾಕ್ಷಿಗಳು ಇದಕ್ಕೆ ಹೊರತಾಗಿಲ್ಲ, ಮತ್ತು ಅವರು ಅಪೊಸ್ತಲ ಪೌಲನಿಂದ ಸೂಚಿಸಿಹೇಳಲ್ಪಟ್ಟ ಅಧಿಕಾರ ಕ್ರಮವನ್ನು ಅನುಸರಿಸುತ್ತಾರೆ: “ಆದರೂ ಒಂದು ಸಂಗತಿಯನ್ನು ನೀವು ತಿಳಿಯಬೇಕೆಂದು ನನ್ನ ಇಷ್ಟ; ಅದೇನಂದರೆ ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.” (1 ಕೊರಿಂಥ 11:3) ಇದಕ್ಕೆ ಹೊಂದಿಕೆಯಾಗಿ, ಅರ್ಹರಾದ ಪುರುಷರು ಮಾತ್ರ ಸಭೆಗಳಲ್ಲಿ ಹಿರಿಯರಾಗಿ ಸೇವೆಸಲ್ಲಿಸುತ್ತಾರೆ. ಮತ್ತು ‘ಪ್ರತಿ ಪುರುಷನ ತಲೆ’ಯಾಗಿರುವ ಯೇಸು ಸ್ವರ್ಗದಲ್ಲಿರುವುದಾದರೂ, ಭೂಮಿಯ ಮೇಲೆ ಆತನ ಅಭಿಷಿಕ್ತ ಸಹೋದರರಲ್ಲಿ ‘ಉಳಿದವರು’ ಇನ್ನೂ ಇದ್ದಾರೆ. ಇವರು ಸ್ವರ್ಗದಲ್ಲಿ ಯೇಸುವಿನೊಂದಿಗೆ ಆಳುವ ನಿರೀಕ್ಷೆಯುಳ್ಳವರಾಗಿದ್ದಾರೆ. (ಪ್ರಕಟನೆ 12:17; 20:6) ಇವರು ಸಂಘಟಿತ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗವನ್ನು ರಚಿಸುತ್ತಾರೆ. ಕ್ರೈಸ್ತರು ಈ “ಆಳು” ವರ್ಗದ ಮೇಲ್ವಿಚಾರಣೆಯನ್ನು ಅಂಗೀಕರಿಸಿಕೊಳ್ಳುವ ಮೂಲಕ, ಯೇಸುವಿಗೆ ಮತ್ತು ಹೀಗೆ ಯೇಸುವಿನ ತಲೆಯಾದ ಯೆಹೋವನಿಗೆ ತಮ್ಮ ಅಧೀನತೆಯನ್ನು ತೋರಿಸುತ್ತಾರೆ. (ಮತ್ತಾಯ 24:45-47; 25:40) ಈ ರೀತಿಯಲ್ಲಿ, ದೇವಪ್ರಭುತ್ವವು ಕ್ರಮಬದ್ಧವಾಗಿದೆ. “ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ.”—1 ಕೊರಿಂಥ 14:33.
8. ಕ್ರೈಸ್ತ ಹಿರಿಯರು ದೇವಪ್ರಭುತ್ವದ ತತ್ವವನ್ನು ಹೇಗೆ ಬೆಂಬಲಿಸುತ್ತಾರೆ?
8 ಕ್ರೈಸ್ತ ಹಿರಿಯರು ದೇವಪ್ರಭುತ್ವದ ತತ್ವವನ್ನು ಬೆಂಬಲಿಸುತ್ತಾರೆ. ಏಕೆಂದರೆ, ತಮ್ಮ ಸೀಮಿತ ಅಧಿಕಾರವನ್ನು ಅವರು ಹೇಗೆ ನಡೆಸುತ್ತಾರೆಂಬುದಕ್ಕೆ ಅವರು ಯೆಹೋವನಿಗೆ ಜವಾಬ್ದಾರರಾಗಿದ್ದಾರೆ ಎಂಬುದನ್ನು ಗ್ರಹಿಸುತ್ತಾರೆ. (ಇಬ್ರಿಯ 13:17) ಮತ್ತು ನಿರ್ಣಯಗಳನ್ನು ಮಾಡುವಾಗ, ಅವರು ತಮ್ಮ ವಿವೇಕದ ಮೇಲಲ್ಲ, ದೇವರ ವಿವೇಕದ ಮೇಲೆ ಅವಲಂಬಿಸುತ್ತಾರೆ. ಈ ವಿಷಯದಲ್ಲಿ ಅವರು ಯೇಸುವಿನ ಮಾದರಿಯನ್ನು ಅನುಸರಿಸುತ್ತಾರೆ. ಅವನು ಜೀವಿಸಿರುವವರಲ್ಲೆ ಅತ್ಯಂತ ಬುದ್ಧಿವಂತ ವ್ಯಕ್ತಿಯಾಗಿದ್ದನು. (ಮತ್ತಾಯ 12:42) ಹಾಗಿದ್ದರೂ, ಅವನು ಯೆಹೂದ್ಯರಿಗೆ ಹೇಳಿದ್ದು: “ತಂದೆಯು ಮಾಡುವದನ್ನು ಕಂಡು ಮಗನು ಮಾಡುತ್ತಾನೆ ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು.” (ಯೋಹಾನ 5:19) ಹಿರಿಯರು, ರಾಜ ದಾವೀದನಿಗಿದ್ದ ಅದೇ ಮನೋಭಾವವನ್ನು ಹೊಂದಿರುತ್ತಾರೆ. ಅವನು ದೇವಪ್ರಭುತ್ವದಲ್ಲಿ ಜವಾಬ್ದಾರಿಯುತ ಅಧಿಕಾರವನ್ನು ವಹಿಸಿದವನಾಗಿದ್ದನು. ಆದರೂ, ಅವನು ತನ್ನದ್ದಲ್ಲ, ಯೆಹೋವನ ಮಾರ್ಗಕ್ರಮವನ್ನು ಅನುಕರಿಸಲು ಬಯಸಿದನು. ಅವನು ಪ್ರಾರ್ಥಿಸಿದ್ದು: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; . . . ನನ್ನನ್ನು ಸಮವಾದ ದಾರಿಯಲ್ಲಿ ನಡಿಸು.”—ಕೀರ್ತನೆ 27:11.
9. ದೇವಪ್ರಭುತ್ವದಲ್ಲಿರುವ ವಿಭಿನ್ನ ನಿರೀಕ್ಷೆಗಳು ಮತ್ತು ವಿಭಿನ್ನ ಸೇವಾ ಸುಯೋಗಗಳ ಸಂಬಂಧದಲ್ಲಿ, ಸಮರ್ಪಿತ ಕ್ರೈಸ್ತರಿಗೆ ಯಾವ ಸಮತೂಕದ ದೃಷ್ಟಿಕೋನವಿದೆ?
9 ಸಭೆಯಲ್ಲಿ ಅರ್ಹರಾದ ಪುರುಷರು ಮಾತ್ರ ಅಧಿಕಾರ ನಡೆಸುವ ಸಂಗತಿಯು ಮತ್ತು ಇತರರಿಗೆ ಭೂನಿರೀಕ್ಷೆಯಿರುವಾಗ, ಕೆಲವರು ಸ್ವರ್ಗೀಯ ನಿರೀಕ್ಷೆಯುಳ್ಳವುರಾಗಿರುವುದು ಪಕ್ಷಪಾತವಲ್ಲವೊ ಎಂದು ಕೆಲವರು ಪ್ರಶ್ನಿಸಿದ್ದಾರೆ. (ಕೀರ್ತನೆ 37:29; ಫಿಲಿಪ್ಪಿ 3:20) ಆದರೆ, ಈ ಏರ್ಪಾಡುಗಳು ದೇವರ ವಾಕ್ಯದಲ್ಲಿ ನಿರೂಪಿಸಲ್ಪಟ್ಟಿವೆ ಎಂಬುದನ್ನು ಸಮರ್ಪಿತ ಕ್ರೈಸ್ತರು ಗ್ರಹಿಸುತ್ತಾರೆ. ಅವು ದೇವಪ್ರಭುತ್ವವಾಗಿವೆ. ಅವು ಪ್ರಶ್ನಿಸಲ್ಪಡುವುದಾದರೆ, ಅದು ಸಾಮಾನ್ಯವಾಗಿ ಬೈಬಲ್ ತತ್ವಗಳನ್ನು ಅಂಗೀಕರಿಸದ ವ್ಯಕ್ತಿಗಳಿಂದಲೇ ಆಗಿರುತ್ತದೆ. ಅಲ್ಲದೆ, ರಕ್ಷಣೆಯ ವಿಷಯದಲ್ಲಿ ಸ್ತ್ರೀಪುರುಷರಿಬ್ಬರೂ ಯೆಹೋವನ ದೃಷ್ಟಿಯಲ್ಲಿ ಸಮಾನರೆಂದು ಕ್ರೈಸ್ತರು ಬಲ್ಲರು. (ಗಲಾತ್ಯ 3:28) ಸತ್ಯ ಕ್ರೈಸ್ತರಿಗೆ, ಈ ವಿಶ್ವದ ಪರಮಾಧಿಕಾರಿಯ ಆರಾಧಕರಾಗಿರುವುದೇ ಅತ್ಯುನ್ನತ ಸುಯೋಗವಾಗಿದೆ, ಮತ್ತು ಯೆಹೋವನು ಅವರಿಗೆ ನೀಡುವ ಯಾವುದೇ ಪಾತ್ರವನ್ನು ನಿರ್ವಹಿಸಲು ಅವರು ಸಂತೋಷಿಸುತ್ತಾರೆ. (ಕೀರ್ತನೆ 31:23; 84:10; 1 ಕೊರಿಂಥ 12:12, 13, 18) ಅದೂ ಅಲ್ಲದೆ, ಸ್ವರ್ಗದಲ್ಲಾಗಲಿ ಪ್ರಮೋದವನ ಭೂಮಿಯಲ್ಲಾಗಲಿ ಅನುಭವಿಸಲ್ಪಡುವ ನಿತ್ಯ ಜೀವವು, ನಿಜವಾಗಿಯೂ ಒಂದು ಅದ್ಭುತಕರವಾದ ನಿರೀಕ್ಷೆಯಾಗಿದೆ.
10. (ಎ) ಯಾವ ಅತ್ಯುತ್ತಮ ಮನೋಭಾವವನ್ನು ಯೋನಾತಾನನು ಪ್ರದರ್ಶಿಸಿದನು? (ಬಿ) ಯೋನಾತಾನನು ತೋರಿಸಿದಂತಹ ಅದೇ ಮನೋಭಾವವನ್ನು ಇಂದು ಕ್ರೈಸ್ತರು ಹೇಗೆ ತೋರಿಸುತ್ತಾರೆ?
10 ಈ ರೀತಿಯಲ್ಲಿ ಯೆಹೋವನ ಸಾಕ್ಷಿಗಳು, ದೇವಭಯವಿದ್ದ ರಾಜ ಸೌಲನ ಮಗನಾದ ಯೋನಾತಾನನನ್ನು ಹೋಲುತ್ತಾರೆ. ಯೋನಾತಾನನು ಒಬ್ಬ ಅತ್ಯುತ್ತಮ ಅರಸನಾಗಿ ಪರಿಣಮಿಸಬಹುದಿತ್ತು. ಹಾಗಿದ್ದರೂ, ಸೌಲನ ಅಪನಂಬಿಗಸ್ತಿಕೆಯ ಕಾರಣ, ಇಸ್ರಾಯೇಲ್ನ ಎರಡನೆಯ ಅರಸನಾಗಿರುವಂತೆ ಯೆಹೋವನು ದಾವೀದನನ್ನು ಆಯ್ದುಕೊಂಡನು. ಇದರಿಂದ ಯೋನಾತಾನನು ಅಸಮಾಧಾನಗೊಂಡನೊ? ಇಲ್ಲ. ಅವನು ದಾವೀದನ ಒಳ್ಳೆಯ ಮಿತ್ರನಾದನು ಮತ್ತು ಅವನನ್ನು ಸೌಲನಿಂದ ರಕ್ಷಿಸಿದನು. (1 ಸಮುವೇಲ 18:1; 20:1-42) ತದ್ರೀತಿಯಲ್ಲಿ, ಭೂನಿರೀಕ್ಷೆಯುಳ್ಳವರು, ಸ್ವರ್ಗೀಯ ನಿರೀಕ್ಷೆಯುಳ್ಳವರೆಡೆಗೆ ಹೊಟ್ಟೆಕಿಚ್ಚುಪಡುವುದಿಲ್ಲ. ಮತ್ತು ಸತ್ಯ ಕ್ರೈಸ್ತರು, ಸಭೆಯಲ್ಲಿ ದೇವಪ್ರಭುತ್ವ ಅಧಿಕಾರವನ್ನು ನಡೆಸುವವರ ಬಗ್ಗೆಯೂ ಹೊಟ್ಟೆಕಿಚ್ಚುಪಡುವುದಿಲ್ಲ. ಬದಲಿಗೆ, ತಮ್ಮ ಆತ್ಮಿಕ ಸಹೋದರ ಸಹೋದರಿಯರ ಪರವಾಗಿ, ಹಿರಿಯರ ಶ್ರದ್ಧಾಪೂರ್ವಕ ಕೆಲಸವನ್ನು ಅಂಗೀಕರಿಸುತ್ತಾ, “ಅವರನ್ನು ಪ್ರೀತಿಯಿಂದ ಬಹಳವಾಗಿ ಸನ್ಮಾನಮಾಡು”ತ್ತಾರೆ.—1 ಥೆಸಲೊನೀಕ 5:12, 13.
ಐಹಿಕ ಆಳ್ವಿಕೆಯ ಸಂಬಂಧದಲ್ಲಿರುವ ದೇವಪ್ರಭುತ್ವ ದೃಷ್ಟಿಕೋನ
11. ದೇವಪ್ರಭುತ್ವ ಆಳ್ವಿಕೆಗೆ ತಮ್ಮನ್ನು ಅಧೀನಪಡಿಸಿಕೊಳ್ಳುವ ಕ್ರೈಸ್ತರು, ಐಹಿಕ ಅಧಿಕಾರಿಗಳನ್ನು ಹೇಗೆ ವೀಕ್ಷಿಸುತ್ತಾರೆ?
11 ಯೆಹೋವನ ಸಾಕ್ಷಿಗಳು, ದೇವಪ್ರಭುತ್ವ ಅಂದರೆ ದೇವರ ಆಳ್ವಿಕೆಯ ಕೆಳಗಿರುವುದಾದರೆ, ಅವರು ರಾಷ್ಟ್ರೀಯ ಅಧಿಪತಿಗಳನ್ನು ಹೇಗೆ ವೀಕ್ಷಿಸುತ್ತಾರೆ? ತನ್ನ ಹಿಂಬಾಲಕರು “ಲೋಕದವರಲ್ಲ” ಎಂದು ಯೇಸು ಹೇಳಿದನು. (ಯೋಹಾನ 17:16) ಹಾಗಿದ್ದರೂ, ಕ್ರೈಸ್ತರು “ಕೈಸರ”ನಿಗೆ, ಅಂದರೆ ಐಹಿಕ ಸರಕಾರಗಳಿಗೆ ತಾವು ನೀಡಬೇಕಾದ ಗೌರವವನ್ನು ಅಂಗೀಕರಿಸುತ್ತಾರೆ. ಅವರು “ಕೈಸರನದನ್ನು ಕೈಸರನಿಗೆ . . . ದೇವರದನ್ನು ದೇವರಿಗೆ” ಕೊಡಬೇಕೆಂದು ಯೇಸು ಹೇಳಿದನು. (ಮತ್ತಾಯ 22:21) ಬೈಬಲಿಗನುಸಾರ, ಮಾನವ ಸರಕಾರಗಳು “ದೇವರಿಂದ ನೇಮಿಸಲ್ಪಟ್ಟ”ವುಗಳಾಗಿವೆ. ಎಲ್ಲ ಅಧಿಕಾರದ ಮೂಲನಾಗಿರುವ ಯೆಹೋವನು, ಸರಕಾರಗಳು ಅಸ್ತಿತ್ವದಲ್ಲಿರುವಂತೆ ಅನುಮತಿಸುತ್ತಾನೆ, ಮತ್ತು ಅವರು ತಮ್ಮ ಆಡಳಿತದ ಅಧೀನದಲ್ಲಿರುವವರಿಗೆ ಒಳಿತನ್ನು ಮಾಡುವಂತೆ ಆತನು ನಿರೀಕ್ಷಿಸುತ್ತಾನೆ. ಅವರು ಹಾಗೆ ಮಾಡುವಾಗ, “ದೇವರ ಸೇವಕ”ರಾಗಿರುತ್ತಾರೆ. ಕ್ರೈಸ್ತರು ತಮ್ಮ “ಮನಸ್ಸಿಗೆ ನ್ಯಾಯವಾಗಿ ತೋರುವದರಿಂದ” ತಾವು ವಾಸಿಸುವ ದೇಶದ ಸರಕಾರಕ್ಕೆ ಅಧೀನರಾಗಿದ್ದಾರೆ. (ರೋಮಾಪುರ 13:1-7) ಆದರೆ ಸರಕಾರವು ದೇವರ ನಿಯಮಕ್ಕೆ ವಿರುದ್ಧವಾದುದನ್ನು ಕೇಳಿಕೊಳ್ಳುವುದಾದರೆ, ಕ್ರೈಸ್ತನೊಬ್ಬನು “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯ”ನಾಗಿರುವನು.—ಅ. ಕೃತ್ಯಗಳು 5:29.
12. ಕ್ರೈಸ್ತರು ಅಧಿಕಾರಿಗಳಿಂದ ಹಿಂಸಿಸಲ್ಪಟ್ಟಾಗ, ಅವರು ಯಾರ ಮಾದರಿಯನ್ನು ಅನುಸರಿಸುತ್ತಾರೆ?
12 ಆದರೆ, ನಿಜ ಕ್ರೈಸ್ತರು ಸರಕಾರದ ಅಧಿಕಾರಿಗಳಿಂದ ಹಿಂಸಿಸಲ್ಪಟ್ಟಾಗ ಆಗೇನು? ಆ ಸಮಯದಲ್ಲಿ, ಅವರು ಮಹಾ ಹಿಂಸೆಯನ್ನು ತಾಳಿಕೊಂಡ ಆದಿ ಕ್ರೈಸ್ತರ ಮಾದರಿಯನ್ನು ಅನುಸರಿಸುತ್ತಾರೆ. (ಅ. ಕೃತ್ಯಗಳು 8:1; 13:50) ನಂಬಿಕೆಯ ಈ ಪರೀಕ್ಷೆಗಳು ಅನಿರೀಕ್ಷಿತವಾಗಿರಲಿಲ್ಲ, ಏಕೆಂದರೆ ಅವು ಬರುವವು ಎಂದು ಯೇಸು ಎಚ್ಚರಿಸಿದ್ದನು. (ಮತ್ತಾಯ 5:10-12; ಮಾರ್ಕ 4:17) ಆದರೂ, ಆ ಆದಿ ಕ್ರೈಸ್ತರು ತಮ್ಮನ್ನು ಹಿಂಸಿಸುವವರನ್ನು ವಿರೋಧಿಸಲಿಲ್ಲ, ಅಥವಾ ಒತ್ತಡದ ಕೆಳಗೆ ಅವರ ನಂಬಿಕೆಯು ಬಲಹೀನಗೊಳ್ಳಲಿಲ್ಲ. ಬದಲಿಗೆ ಅವರು ಯೇಸುವಿನ ಮಾದರಿಯನ್ನು ಅನುಸರಿಸಿದರು: “ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು. ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ; ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು.” (1 ಪೇತ್ರ 2:21-23) ಹೌದು, ಕ್ರೈಸ್ತ ತತ್ವಗಳು ಸೈತಾನನ ಪ್ರಲೋಭನೆಗಳ ಮೇಲೆ ಜಯಸಾಧಿಸಿದವು.—ರೋಮಾಪುರ 12:21.
13. ಯೆಹೋವನ ಸಾಕ್ಷಿಗಳು ಹಿಂಸೆಗೆ ಮತ್ತು ತಮ್ಮ ವಿರುದ್ಧ ನಡೆಸಲ್ಪಟ್ಟ ನಿಂದಾತ್ಮಕ ಕಾರ್ಯಾಚರಣೆಗಳಿಗೆ ಹೇಗೆ ಪ್ರತಿಕ್ರಿಯಿಸಿದ್ದಾರೆ?
13 ಇಂದು ಕೂಡ ಸನ್ನಿವೇಶವು ಹೀಗೆಯೇ ಇದೆ. ಈ ಶತಮಾನದಲ್ಲಿಯೂ, ನಿರಂಕುಶಪ್ರಭುಗಳು ಯೆಹೋವನ ಸಾಕ್ಷಿಗಳನ್ನು ಹಿಂಸಿಸಿರುವುದು, ಅವರು ಮಾಡಿರುವಂತಹ ಯಾವುದೇ ತಪ್ಪಿಗಾಗಿ ಅಲ್ಲ, ಬದಲಿಗೆ ದೇವರನ್ನು ಅವರು ನಂಬಿಗಸ್ತಿಕೆಯಿಂದ ಸೇವಿಸಿದಕ್ಕಾಗಿಯೇ. (ಮತ್ತಾಯ 24:9, 13) ಕೆಲವು ದೇಶಗಳಲ್ಲಿ, ಈ ಪ್ರಾಮಾಣಿಕ ಕ್ರೈಸ್ತರ ವಿರುದ್ಧ ಅಧಿಕಾರಿಗಳು ಕ್ರಿಯೆಗೈಯುವಂತೆ ಅವರನ್ನು ಒತ್ತಾಯಿಸುವ ಪ್ರಯತ್ನದಲ್ಲಿ, ಸುಳ್ಳು ಅಪವಾದಗಳು ಹಬ್ಬಿಸಲ್ಪಡುತ್ತವೆ. ಆದರೂ, ಇಂತಹ “ಕೆಟ್ಟ ವರದಿ”ಯ ಎದುರಿನಲ್ಲೂ, ಸಾಕ್ಷಿಗಳು ತಮ್ಮ ಉತ್ತಮ ನಡತೆಯಿಂದ ತಮ್ಮನ್ನು ದೇವರ ಶುಶ್ರೂಷಕರಾಗಿ ತೋರಿಸಿಕೊಳ್ಳುತ್ತಾರೆ. (2 ಕೊರಿಂಥ 6:4, 8) ಸಾಧ್ಯವಾದಾಗ, ಅವರು ತಮ್ಮ ವಿಷಯವನ್ನು ಅಧಿಕಾರಿಗಳು ಹಾಗೂ ಆ ದೇಶದ ನ್ಯಾಯಾಲಯಗಳ ಮುಂದೆ ಮಂಡಿಸುತ್ತಾರೆ ಮತ್ತು ಹೀಗೆ, ತಮ್ಮ ನಿರಪರಾಧಿತ್ವವನ್ನು ಪ್ರದರ್ಶಿಸುತ್ತಾರೆ. ತಮ್ಮ ನಂಬಿಕೆಯನ್ನು ಬಹಿರಂಗವಾಗಿ ರಕ್ಷಿಸಲು ಲಭ್ಯವಿರುವ ಯಾವುದೇ ವಿಧಾನವನ್ನು ಉಪಯೋಗಿಸಿಕೊಳ್ಳುತ್ತಾರೆ. (ಫಿಲಿಪ್ಪಿ 1:7) ತರುವಾಯ, ಕಾನೂನುಬದ್ಧವಾಗಿ ತಮ್ಮಿಂದ ಸಾಧ್ಯವಿರುವುದೆಲ್ಲವನ್ನು ಮಾಡಿದ ಬಳಿಕ, ಅವರು ವಿಷಯಗಳನ್ನು ಯೆಹೋವನ ಹಸ್ತಗಳಲ್ಲಿ ಬಿಟ್ಟುಬಿಡುತ್ತಾರೆ. (ಕೀರ್ತನೆ 5:8-12; ಜ್ಞಾನೋಕ್ತಿ 20:22) ಅಗತ್ಯವಿರುವಲ್ಲಿ ಅವರು ಆದಿ ಕ್ರೈಸ್ತರಂತೆ, ನೀತಿಗೋಸ್ಕರ ಕಷ್ಟಾನುಭವಿಸಲು ಕೂಡ ಹೆದರುವುದಿಲ್ಲ.—1 ಪೇತ್ರ 3:14-17; 4:12-14, 16.
ದೇವರ ಮಹಿಮೆಗೆ ಪ್ರಥಮ ಸ್ಥಾನವನ್ನು ಕೊಡಿರಿ
14, 15. (ಎ) ದೇವಪ್ರಭುತ್ವದ ತತ್ವವನ್ನು ಬೆಂಬಲಿಸುವವರಿಗೆ ಅಗ್ರಗಣ್ಯವಾದ ವಿಷಯವು ಯಾವುದಾಗಿದೆ? (ಬಿ) ಯಾವ ಸಂದರ್ಭದಲ್ಲಿ ಸೊಲೊಮೋನನು, ಮೇಲ್ವಿಚಾರಣೆಯ ತನ್ನ ಸ್ಥಾನಮಾನದ ಸಂಬಂಧದಲ್ಲಿ ದೀನತೆಯ ಅತ್ಯುತ್ತಮ ಮಾದರಿಯನ್ನಿಟ್ಟನು?
14 ಯೇಸು ತನ್ನ ಹಿಂಬಾಲಕರಿಗೆ ಪ್ರಾರ್ಥಿಸುವಂತೆ ಕಲಿಸಿದಾಗ, ಅವನು ಉಲ್ಲೇಖಿಸಿದ ಮೊದಲನೆಯ ವಿಷಯವು, ಯೆಹೋವನ ನಾಮದ ಪವಿತ್ರೀಕರಣವಾಗಿತ್ತು. (ಮತ್ತಾಯ 6:9) ಇದಕ್ಕೆ ಹೊಂದಿಕೆಯಲ್ಲಿ, ದೇವಪ್ರಭುತ್ವಕ್ಕೆ ಅಧೀನರಾಗಿ ಜೀವಿಸುತ್ತಿರುವವರು, ತಮ್ಮ ಮಹಿಮೆಯನ್ನಲ್ಲ, ದೇವರ ಮಹಿಮೆಯನ್ನು ಹುಡುಕುತ್ತಾರೆ. (ಕೀರ್ತನೆ 29:1, 2) ಪ್ರಥಮ ಶತಮಾನದಲ್ಲಿದ್ದ ಕೆಲವರು “ದೇವರಿಂದ ಬರುವ ಮಾನಕ್ಕಿಂತ” ಮನುಷ್ಯರಿಂದ ಬರುವ ಮಹಿಮೆಯನ್ನೇ ಪಡೆದುಕೊಳ್ಳಲು ಬಯಸಿದ ಕಾರಣ, ಯೇಸುವನ್ನು ಅನುಕರಿಸಲು ನಿರಾಕರಿಸಿದವರಿಗೆ ಇದೊಂದು ಅಡಚಣೆಯಾಗಿತ್ತೆಂದು ಬೈಬಲು ವರದಿಸುತ್ತದೆ. (ಯೋಹಾನ 12:42, 43) ನಿಶ್ಚಯವಾಗಿಯೂ, ಸ್ವಪ್ರತಿಷ್ಠೆಗಿಂತ ಯೆಹೋವನಿಗೆ ಪ್ರಥಮ ಸ್ಥಾನ ಕೊಡಲು, ದೀನಭಾವದ ಅಗತ್ಯವಿದೆ.
15 ಈ ಸಂಬಂಧದಲ್ಲಿ ಸೊಲೊಮೋನನು ಅತ್ಯುತ್ತಮವಾದ ಮನೋಭಾವವನ್ನು ಪ್ರದರ್ಶಿಸಿದನು. ತಾನು ಕಟ್ಟಿಸಿದ ಮಹಿಮಾಭರಿತ ದೇವಾಲಯವನ್ನು ದೇವರಿಗೆ ಸಮರ್ಪಿಸುವ ಸಂದರ್ಭದಲ್ಲಿ ಆಡಿದ ಮಾತುಗಳನ್ನು, ನೆಬೂಕದ್ನೆಚ್ಚರನು ತನ್ನ ನಿರ್ಮಾಣ ಕಾರ್ಯಗಳ ಸಂಬಂಧದಲ್ಲಿ ಆಡಿದ ಮಾತುಗಳೊಂದಿಗೆ ಹೋಲಿಸಿರಿ. “ನನ್ನ ಮಹಿಮೆಯು ಪ್ರಸಿದ್ಧಿಗೆ ಬರುವಂತೆ ನನ್ನ ಸಾಮರ್ಥ್ಯಬಲದಿಂದ ರಾಜನಿವಾಸಕ್ಕಾಗಿ ನಾನು ಕಟ್ಟಿಸಿಕೊಂಡಿರುವದು ಇಗೋ, ಮಹಾಪಟ್ಟಣವಾದ ಈ ಬಾಬೆಲ್” ಎಂದು ಅತಿಶಯವಾದ ದುರಹಂಕಾರದಿಂದ ನೆಬೂಕದ್ನೆಚ್ಚರನು ಜಂಬಕೊಚ್ಚಿಕೊಂಡನು. (ದಾನಿಯೇಲ 4:30) ಇದಕ್ಕೆ ವಿರುದ್ಧವಾಗಿ, ಸೊಲೊಮೋನನು ದೀನಭಾವದಿಂದ ತನ್ನ ಸಾಧನೆಯನ್ನು ಅತಿಶಯಿಸದೆ ಹೇಳಿದ್ದು: “ದೇವರು ನಿಜವಾಗಿ ಮನುಷ್ಯರೊಡನೆ ಭೂಲೋಕದಲ್ಲಿ ವಾಸಿಸುವನೋ? ಆಕಾಶವೂ ಉನ್ನತೋನ್ನತವಾದ ಆಕಾಶವೂ ನಿನ್ನ ವಾಸಕ್ಕೆ ಸಾಲವು; ಹೀಗಿರುವಲ್ಲಿ ನಾನು ಕಟ್ಟಿಸಿದ ಈ ಮಂದಿರವು ಹೇಗೆ ಸಾಕಾದೀತು?” (2 ಪೂರ್ವಕಾಲವೃತ್ತಾಂತ 6:14, 15, 18; ಕೀರ್ತನೆ 127:1) ಸೊಲೊಮೋನನು ತನ್ನನ್ನು ಘನತೆಗೇರಿಸಿಕೊಳ್ಳಲಿಲ್ಲ. ತಾನು ಕೇವಲ ಯೆಹೋವನ ಪ್ರತಿನಿಧಿಯೆಂದು ತಿಳಿದವನಾಗಿ, ಅವನು ಬರೆದುದು: “ಎಲ್ಲಿ ಹೆಮ್ಮೆಯೋ ಅಲ್ಲಿ ನಾಚಿಕೆ; ದೀನರಲ್ಲಿ ಜ್ಞಾನ.”—ಜ್ಞಾನೋಕ್ತಿ 11:2.
16. ಹಿರಿಯರು ತಮ್ಮನ್ನು ಘನತೆಗೇರಿಸಿಕೊಳ್ಳದಿರುವ ಮೂಲಕ, ಯಾವ ರೀತಿಯಲ್ಲಿ ಒಂದು ನಿಜವಾದ ಆಶೀರ್ವಾದವಾಗಿದ್ದಾರೆ?
16 ತದ್ರೀತಿಯಲ್ಲಿ ಕ್ರೈಸ್ತ ಹಿರಿಯರು ತಮ್ಮನ್ನಲ್ಲ, ಯೆಹೋವನನ್ನು ಘನತೆಗೇರಿಸುತ್ತಾರೆ. ಅವರು ಪೇತ್ರನ ಸಲಹೆಯನ್ನು ಅನುಸರಿಸುತ್ತಾರೆ: “ಒಬ್ಬನು ಸಭೆಯ ಸೇವೆ ಮಾಡುವವನಾದರೆ ದೇವರಿಂದ ಶಕ್ತಿಯನ್ನು ಹೊಂದಿದವನಾಗಿ ಮಾಡಲಿ. ಇದರಿಂದ ಎಲ್ಲಾದರಲ್ಲಿ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಉಂಟಾಗುವದು.” (1 ಪೇತ್ರ 4:11) ಅಪೊಸ್ತಲ ಪೌಲನು “ಸಭಾಧ್ಯಕ್ಷನ ಉದ್ಯೋಗವನ್ನು” ಪ್ರಾಧಾನ್ಯತೆಯ ಒಂದು ಮುಖ್ಯ ಸ್ಥಾನವಾಗಿ ಅಲ್ಲ, ಬದಲಿಗೆ “ಒಳ್ಳೇ ಕೆಲಸ”ವಾಗಿ ವರ್ಣಿಸಿದನು. (1 ತಿಮೊಥೆಯ 3:1) ಹಿರಿಯರು ಆಳಲಿಕ್ಕಾಗಿ ಅಲ್ಲ, ಸೇವೆಮಾಡಲಿಕ್ಕಾಗಿಯೇ ನೇಮಿಸಲ್ಪಟ್ಟಿದ್ದಾರೆ. ಅವರು ದೇವರ ಮಂದೆಯ ಬೋಧಕರೂ ಕುರುಬರೂ ಆಗಿದ್ದಾರೆ. (ಅ. ಕೃತ್ಯಗಳು 20:28; ಯಾಕೋಬ 3:1) ದೀನರೂ ಸ್ವತ್ಯಾಗಿಗಳೂ ಆಗಿರುವ ಹಿರಿಯರು, ಸಭೆಗೆ ನಿಜವಾದ ಆಶೀರ್ವಾದವಾಗಿದ್ದಾರೆ. (1 ಪೇತ್ರ 5:2, 3) “ಅಂಥವರನ್ನು ಮಾನ್ಯರೆಂದೆಣಿಸಿರಿ” ಮತ್ತು ಈ “ಕಡೇ ದಿವಸಗಳಲ್ಲಿ” ದೇವಪ್ರಭುತ್ವವನ್ನು ಎತ್ತಿಹಿಡಿಯಲು ಇಷ್ಟೊಂದು ಅರ್ಹ ಹಿರಿಯರನ್ನು ಒದಗಿಸಿದಕ್ಕಾಗಿ ಯೆಹೋವನಿಗೆ ಉಪಕಾರ ಸಲ್ಲಿಸಿರಿ.—ಫಿಲಿಪ್ಪಿ 2:29; 2 ತಿಮೊಥೆಯ 3:1.
‘ದೇವರನ್ನು ಅನುಸರಿಸುವವರಾಗಿರಿ’
17. ದೇವಪ್ರಭುತ್ವಕ್ಕೆ ಅಧೀನದಲ್ಲಿರುವವರು ದೇವರನ್ನು ಯಾವ ವಿಧಗಳಲ್ಲಿ ಅನುಸರಿಸುತ್ತಾರೆ?
17 ಅಪೊಸ್ತಲ ಪೌಲನು ಪ್ರೇರಿಸಿದ್ದು: “ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ.” (ಎಫೆಸ 5:1) ತಮ್ಮನ್ನು ದೇವಪ್ರಭುತ್ವಕ್ಕೆ ಅಧೀನಪಡಿಸಿಕೊಳ್ಳುವವರು, ಅಪರಿಪೂರ್ಣ ಮನುಷ್ಯರೋಪಾದಿ ತಮಗೆ ಸಾಧ್ಯವಿರುವಷ್ಟರ ಮಟ್ಟಿಗೆ ದೇವರಂತಿರಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ, ಬೈಬಲು ಯೆಹೋವನ ಕುರಿತು ಹೀಗೆ ಹೇಳುತ್ತದೆ: “ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು; ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.” (ಧರ್ಮೋಪದೇಶಕಾಂಡ 32:3, 4) ಈ ವಿಷಯದಲ್ಲಿ ದೇವರನ್ನು ಅನುಸರಿಸಲು, ಕ್ರೈಸ್ತರು ನಂಬಿಗಸ್ತಿಕೆಯನ್ನು, ನೀತಿಯನ್ನು ಮತ್ತು ನ್ಯಾಯದ ಸಮತೂಕ ಭಾವವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. (ಮೀಕ 6:8; 1 ಥೆಸಲೊನೀಕ 3:6; 1 ಯೋಹಾನ 3:7) ಲೋಕದಲ್ಲಿ ಸ್ವೀಕಾರಾರ್ಹವಾಗಿರುವ ಅನೈತಿಕತೆ, ಅತ್ಯಾಶೆ, ಮತ್ತು ಲೋಭದಂತಹ ಅನೇಕ ವಿಷಯಗಳಿಂದ ಅವರು ದೂರವಿರುತ್ತಾರೆ. (ಎಫೆಸ 5:5) ಯೆಹೋವನ ಸೇವಕರು ಮಾನವ ಮಟ್ಟಗಳನ್ನಲ್ಲ, ದೈವಿಕ ಮಟ್ಟಗಳನ್ನು ಅನುಸರಿಸುವುದರಿಂದ, ಆತನ ಸಂಸ್ಥೆಯು ದೇವಪ್ರಭುತ್ವವೂ, ಶುದ್ಧವೂ, ಹಿತಕರವೂ ಆಗಿದೆ.
18. ದೇವರ ಸರ್ವೋತ್ಕೃಷ್ಟ ಗುಣ ಯಾವುದು, ಮತ್ತು ಕ್ರೈಸ್ತರು ಹೇಗೆ ಈ ಗುಣವನ್ನು ಪ್ರತಿಬಿಂಬಿಸುತ್ತಾರೆ?
18 ಯೆಹೋವ ದೇವರ ಸರ್ವೋತ್ಕೃಷ್ಟ ಗುಣವು ಪ್ರೀತಿಯಾಗಿದೆ. “ದೇವರು ಪ್ರೀತಿಸ್ವರೂಪಿಯು” ಎಂದು ಅಪೊಸ್ತಲ ಯೋಹಾನನು ಹೇಳುತ್ತಾನೆ. (1 ಯೋಹಾನ 4:8) ದೇವಪ್ರಭುತ್ವವು ದೇವರ ಆಳ್ವಿಕೆಯಾಗಿರುವುದರಿಂದ, ಅದು ಪ್ರೀತಿಯಿಂದ ಆಳುವುದನ್ನು ಸೂಚಿಸುತ್ತದೆ. ಯೇಸು ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ಈ ಕಠಿನವಾದ ಕಡೇ ದಿವಸಗಳಲ್ಲಿ, ಈ ದೇವಪ್ರಭುತ್ವ ಸಂಸ್ಥೆಯು, ಎದ್ದುಕಾಣುವ ವಿಧದಲ್ಲಿ ಪ್ರೀತಿಯನ್ನು ಪ್ರದರ್ಶಿಸಿದೆ. ಆಫ್ರಿಕದಲ್ಲಿ ನಡೆದ ಜನಹತ್ಯೆಯ ಸಮಯದಲ್ಲಿ, ಯೆಹೋವನ ಸಾಕ್ಷಿಗಳು ಎಲ್ಲರಿಗೆ, ಅವರು ಯಾವುದೇ ಕುಲಕ್ಕೆ ಸೇರಿದವರಾಗಿರಲಿ, ಪ್ರೀತಿಯನ್ನು ತೋರಿಸಿದರು. ಹಿಂದಿನ ಯುಗೋಸ್ಲಾವಿಯದಲ್ಲಿ ನಡೆದ ಯುದ್ಧದ ಸಮಯದಲ್ಲಿ, ಎಲ್ಲ ಕ್ಷೇತ್ರಗಳಿಂದ ಬಂದ ಯೆಹೋವನ ಸಾಕ್ಷಿಗಳು ಒಬ್ಬರಿಗೊಬ್ಬರು ಸಹಾಯಮಾಡಿದರು. ಇತರ ಧಾರ್ಮಿಕ ಗುಂಪುಗಳ ಜನರಾದರೊ, ಕುಲಸಂಬಂಧಿತ ಹತ್ಯೆಗಳಲ್ಲಿ ಭಾಗವಹಿಸಿದರು. ವ್ಯಕ್ತಿಗತ ಮಟ್ಟದಲ್ಲಿಯಾದರೊ, ಯೆಹೋವನ ಸಾಕ್ಷಿಗಳು ಪೌಲನ ಸಲಹೆಯಂತೆ ನಡೆಯಲು ಪ್ರಯಾಸಪಡುತ್ತಾರೆ. “ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ. ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ. ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿದನಲ್ಲಾ.”—ಎಫೆಸ 4:31, 32.
19. ದೇವಪ್ರಭುತ್ವಕ್ಕೆ ತಮ್ಮನ್ನು ಅಧೀನಪಡಿಸಿಕೊಳ್ಳುವವರಿಗೆ, ಈಗ ಮತ್ತು ಭವಿಷ್ಯತ್ಕಾಲದಲ್ಲಿ ಯಾವ ಆಶೀರ್ವಾದಗಳಿವೆ?
19 ದೇವಪ್ರಭುತ್ವಕ್ಕೆ ಅಧೀನರಾಗುವವರು ಮಹಾ ಆಶೀರ್ವಾದಗಳನ್ನು ಅನುಭವಿಸುತ್ತಾರೆ. ಅವರಿಗೆ ದೇವರೊಂದಿಗೆ ಮತ್ತು ಜೊತೆ ಕ್ರೈಸ್ತರೊಂದಿಗೆ ಸಮಾಧಾನವೂ ಇರುತ್ತದೆ. (ಇಬ್ರಿಯ 12:14; ಯಾಕೋಬ 3:17) ಅವರ ಜೀವಿತಕ್ಕೆ ಒಂದು ಉದ್ದೇಶವಿದೆ. (ಪ್ರಸಂಗಿ 12:13) ಅವರಿಗೆ ಆತ್ಮಿಕ ಭದ್ರತೆ ಮತ್ತು ಭವಿಷ್ಯತ್ತಿಗಾಗಿ ಒಂದು ನಿಶ್ಚಿತವಾದ ನಿರೀಕ್ಷೆಯಿದೆ. (ಕೀರ್ತನೆ 59:9) ಸಕಲ ಮಾನವಕುಲವು ದೇವಪ್ರಭುತ್ವ ಆಳ್ವಿಕೆಯ ಕೆಳಗಿರುವಾಗ ಪರಿಸ್ಥಿತಿಯು ಹೇಗಿರುವುದೊ, ಅದರ ಪೂರ್ವಾನುಭವವನ್ನು ಅವರು ಈಗಲೇ ಅನುಭವಿಸುತ್ತಿದ್ದಾರೆ. ಆ ಸಮಯದಲ್ಲಿ, ಬೈಬಲು ಹೇಳುವಂತೆ, “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” (ಯೆಶಾಯ 11:9) ಅದು ಎಂತಹ ಮಹಿಮಾಭರಿತ ಸಮಯವಾಗಿರುವುದು! ಈಗ ದೇವಪ್ರಭುತ್ವಕ್ಕೆ ನಿಕಟರಾಗಿರುವ ಮೂಲಕ, ಆ ಭವಿಷ್ಯತ್ಕಾಲದ ಪ್ರಮೋದವನದಲ್ಲಿ ನಾವೆಲ್ಲರೂ ನಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳೋಣ.
ನೀವು ವಿವರಿಸಬಲ್ಲಿರೊ?
◻ ನಿಜವಾದ ದೇವಪ್ರಭುತ್ವ ಎಂದರೇನು ಮತ್ತು ಇಂದು ಅದನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?
◻ ಮಾನವರು ತಮ್ಮ ಜೀವಿತಗಳಲ್ಲಿ, ದೇವಪ್ರಭುತ್ವ ಆಳ್ವಿಕೆಗೆ ಹೇಗೆ ಅಧೀನರಾಗುತ್ತಾರೆ?
◻ ದೇವಪ್ರಭುತ್ವಕ್ಕೆ ಅಧೀನರಾಗಿರುವವರೆಲ್ಲರು, ತಮ್ಮ ಮಹಿಮೆಗಿಂತ ದೇವರ ಮಹಿಮೆಗೆ ಯಾವ ವಿಧಗಳಲ್ಲಿ ಪ್ರಥಮಸ್ಥಾನ ಕೊಡುತ್ತಾರೆ?
◻ ದೇವಪ್ರಭುತ್ವವನ್ನು ಬೆಂಬಲಿಸುವವರು ಯಾವ ದೈವಿಕ ಗುಣಗಳನ್ನು ಅನುಸರಿಸುತ್ತಾರೆ?
[ಪುಟ 17 ರಲ್ಲಿರುವ ಚಿತ್ರ]
ಸೊಲೊಮೋನನು ತನ್ನ ಮಹಿಮೆಗಿಂತ ದೇವರ ಮಹಿಮೆಗೆ ಪ್ರಥಮಸ್ಥಾನ ನೀಡಿದನು