ಯೆಹೋವನು ಆಳುತ್ತಾನೆ—ದೇವಪ್ರಭುತ್ವದ ಮುಖಾಂತರ
“ಯೆಹೋವನು ಸದಾಕಾಲವೂ ಅರಸನಾಗಿರುವನು.”—ಕೀರ್ತನೆ 146:10.
1, 2. (ಎ) ಆಳಿಕೆಯ ವಿಷಯದಲ್ಲಿ ಮಾನವನ ಪ್ರಯತ್ನಗಳು ವಿಫಲಗೊಂಡಿವೆ ಏಕೆ? (ಬಿ) ನಿಜವಾಗಿಯೂ ಯಶಸ್ವಿಯಾಗಿರುವ ಸರಕಾರದ ಏಕಮಾತ್ರ ಪ್ರಕಾರವು ಯಾವುದಾಗಿದೆ?
ನಿಮ್ರೋದನ ಕಾಲದಿಂದಲೂ, ಮಾನವ ಸಮಾಜವನ್ನು ಆಳಲು ಮನುಷ್ಯರು ವಿಭಿನ್ನ ವಿಧಾನಗಳನ್ನು ಪ್ರಯೋಗಿಸಿದ್ದಾರೆ. ನಿರಂಕುಶ ಪ್ರಭುತ್ವಗಳು, ರಾಜ ಪ್ರಭುತ್ವಗಳು, ಸ್ವಲ್ಪಜನಾಧಿಪತ್ಯಗಳು, ಮತ್ತು ಪ್ರಜಾಪ್ರಭುತ್ವದ ಹಲವಾರು ಬಗೆಗಳು ಆಗಿ ಹೋಗಿವೆ. ಅವೆಲವ್ಲಕ್ಕೆ ಯೆಹೋವನು ಅನುಮತಿ ನೀಡಿದ್ದಾನೆ. ನಿಜವಾಗಿಯೂ, ಎಲ್ಲಾ ಅಧಿಕಾರದ ಅಂತಿಮ ಮೂಲವು ದೇವರಾಗಿರುವುದರಿಂದ, ಒಂದು ಅರ್ಥದಲ್ಲಿ ಆತನು ವಿಭಿನ್ನ ಪ್ರಭುಗಳನ್ನು ಅವರ ಸಂಬಂಧಕ ಸ್ಥಾನಗಳಲ್ಲಿ ಇರಿಸಿದನು. (ರೋಮಾಪುರ 13:1) ಆದರೂ, ಸರಕಾರ ರಚನೆಯಲ್ಲಿ ಮನುಷ್ಯನ ಎಲ್ಲಾ ಪ್ರಯತ್ನಗಳು ವಿಫಲಗೊಂಡಿವೆ. ಯಾವ ಮಾನವ ಅರಸನೂ ಬಹುಕಾಲ ಬಾಳುವ, ಸ್ಥಿರ, ನ್ಯಾಯವಾದ ಸಮಾಜವನ್ನು ರಚಿಸಿಲ್ಲ. ಅನೇಕ ವೇಳೆ, “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟು” ಮಾಡಿದ್ದಾನೆ.—ಪ್ರಸಂಗಿ 8:9.
2 ಇದು ನಮ್ಮನ್ನು ಆಶ್ಚರ್ಯಪಡಿಸಬೇಕೆ? ನಿಸ್ಸಂದೇಹವಾಗಿ ಇಲ್ಲ! ಅಪರಿಪೂರ್ಣ ಮನುಷ್ಯನು ತನ್ನನ್ನು ಆಳಿಕೊಳ್ಳುವಂತೆ ನಿರ್ಮಿಸಲ್ಪಡಲಿಲ್ಲ. “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಆದುದರಿಂದಲೇ, ಮಾನವ ಇತಿಹಾಸದ ಉದ್ದಕ್ಕೂ, ಕೇವಲ ಒಂದು ರೀತಿಯ ಸರಕಾರ ಮಾತ್ರ ನಿಜವಾಗಿಯೂ ಯಶಸ್ವಿಯಾಗಿದೆ. ಯಾವ ಸರಕಾರವು? ಯೆಹೋವ ದೇವರ ಅಧೀನದಲ್ಲಿರುವ ದೇವಪ್ರಭುತ್ವ. ಬೈಬಲಿನ ಗ್ರೀಕ್ ಭಾಷೆಯಲ್ಲಿ, “ದೇವಪ್ರಭುತ್ವ” ಎಂದರೆ ದೇವರ [ತೀಯಾಸ್] ಮೂಲಕ ಒಂದು ಆಳಿಕ್ವೆ [ಕ್ರಾಟೊಸ್]. ಸ್ವತಃ ಯೆಹೋವ ದೇವರ ಸರಕಾರಕ್ಕಿಂತ ಉತ್ತಮವಾದ ಸರಕಾರವು ಯಾವುದಾಗಿರಬಲ್ಲದು?—ಕೀರ್ತನೆ 146:10.
3. ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದ ದೇವಪ್ರಭುತ್ವದ ಕೆಲವು ಆದಿ ಉದಾಹರಣೆಗಳು ಯಾವುವಾಗಿದ್ದವು?
3 ಆದಾಮ ಮತ್ತು ಹವ್ವರು ಯೆಹೋವನ ವಿರುದ್ಧ ದಂಗೆ ಏಳುವ ತನಕ ಏದೆನಿನಲ್ಲಿ ಸ್ವಲ್ಪ ಸಮಯಕ್ಕಾಗಿ ದೇವಪ್ರಭುತ್ವವು ಆಳಿಕ್ವೆ ನಡೆಸಿತು. (ಆದಿಕಾಂಡ 3:1-6, 23) ಅಬ್ರಹಾಮನ ಕಾಲದಲ್ಲಿ, ಮೆಲ್ಕೀಚೆದೆಕನು ರಾಜ-ಯಾಜಕನಾಗಿದ್ದಾಗ ಸಾಲೇಮ್ ಶಹರದಲ್ಲಿ ಒಂದು ದೇವಪ್ರಭುತ್ವವು ಅಸ್ತಿತ್ವದಲ್ಲಿ ಇದ್ದಂತೆ ತೋರುತ್ತದೆ. (ಆದಿಕಾಂಡ 14:18-20; ಇಬ್ರಿಯ 7:1-3) ಹಾಗಿದ್ದರೂ, ಯೆಹೋವ ದೇವರ ಕೆಳಗೆ ಇದ್ದ ಪ್ರಥಮ ರಾಷ್ಟ್ರೀಯ ದೇವಪ್ರಭುತ್ವವು ಸಾ.ಶ.ಪೂ. 16 ನೆಯ ಶತಮಾನದಲ್ಲಿ ಸೀನಾಯಿ ಅರಣ್ಯದಲ್ಲಿ ಸ್ಥಾಪಿತವಾಯಿತು. ಅದು ಹೇಗೆ ಸಂಭವಿಸಿತು? ಮತ್ತು ಆ ದೇವಪ್ರಭುತ್ವ ಸರಕಾರವು ಹೇಗೆ ಕಾರ್ಯಮಾಡಿತು?
ದೇವಪ್ರಭುತ್ವವೊಂದು ಜನಿಸಿದೆ
4. ಇಸ್ರಾಯೇಲಿನ ದೇವಪ್ರಭುತ್ವ ಜನಾಂಗವನ್ನು ಯೆಹೋವನು ಹೇಗೆ ಸ್ಥಾಪಿಸಿದನು?
4 ಸಾ.ಶ.ಪೂ. 1513 ರಲ್ಲಿ, ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತದಲಿನ್ಲ ದಾಸತ್ವದಿಂದ ಬಿಡಿಸಿದನು ಮತ್ತು ಫರೋಹನ ಬೆನ್ನಟ್ಟುತ್ತಿರುವ ಸೇನೆಗಳನ್ನು ಕೆಂಪು ಸಮುದ್ರದಲ್ಲಿ ನಾಶಮಾಡಿದನು. ಆಮೇಲೆ ಆತನು ಇಸ್ರಾಯೇಲ್ಯರನ್ನು ಸೀನಾಯಿ ಪರ್ವತಕ್ಕೆ ನಡೆಸಿದನು. ಅವರು ಪರ್ವತದ ಬುಡದಲ್ಲಿ ಬೀಡು ಬಿಟ್ಟಿರುವಾಗ, ದೇವರು ಮೋಶೆಯ ಮುಖಾಂತರ ಅವರಿಗೆ ಹೇಳಿದ್ದು: “ನಾನು ಐಗುಪ್ತ್ಯರಿಗೆ ಏನು ಮಾಡಿದೆನೋ, ಹದ್ದು ತನ್ನ ಮರಿಗಳನ್ನು ರೆಕ್ಕೆಗಳ ಮೇಲೆ ಹೊತ್ತುಕೊಳ್ಳುವಂತೆ ನಾನು ನಿಮ್ಮನ್ನು ಹೊತ್ತುಕೊಂಡು ನನ್ನ ಸ್ಥಳಕ್ಕೆ ಹೇಗೆ ಸೇರಿಸಿದೆನೋ ಇದನ್ನೆಲ್ಲಾ ನೀವು ನೋಡಿದೀರ್ದಷ್ಟೆ. ಹೀಗಿರಲಾಗಿ ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಮಾಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸಕ್ವೀಯಜನರಾಗುವಿರಿ.” ಇಸ್ರಾಯೇಲ್ಯರು ಪ್ರತಿಕ್ರಿಯಿಸಿದ್ದು: “ಯೆಹೋವನು ಹೇಳಿದಂತೆಯೇ ಮಾಡುವೆವು.” (ವಿಮೋಚನಕಾಂಡ 19:4, 5, 8) ಒಡಂಬಡಿಕೆಯೊಂದನ್ನು ಮಾಡಲಾಯಿತು, ಮತ್ತು ಇಸ್ರಾಯೇಲ್ನ ದೇವಪ್ರಭುತ್ವ ಜನಾಂಗವು ಹುಟ್ಟಿತು.—ಧರ್ಮೋಪದೇಶಕಾಂಡ 26:18, 19.
5. ಯೆಹೋವನು ಇಸ್ರಾಯೇಲಿನಲ್ಲಿ ಆಳಿದನೆಂದು ಹೇಗೆ ಹೇಳಸಾಧ್ಯವಿದೆ?
5 ಮಾನವ ಕಣ್ಣುಗಳಿಗೆ ಅದೃಶ್ಯನಾಗಿರುವ ಯೆಹೋವನ ಮೂಲಕ, ಇಸ್ರಾಯೇಲ್ ಯಾವ ರೀತಿಯಲ್ಲಿ ಆಳಲ್ಪಟ್ಟಿತು? (ವಿಮೋಚನಕಾಂಡ 33:20) ಜನಾಂಗದ ನಿಯಮಗಳು ಮತ್ತು ಯಾಜಕತ್ವವು ಯೆಹೋವನ ಮೂಲಕ ಕೊಡಲ್ಪಟ್ಟ ಕಾರಣದಿಂದಲೇ. ನಿಯಮಗಳಿಗೆ ವಿಧೇಯರಾಗಿ ದೈವಿಕವಾಗಿ ಆಜ್ಞಾಪಿಸಲಾದ ಏರ್ಪಾಡುಗಳಿಗನುಸಾರ ಆರಾಧಿಸಿದವರು ಮಹಾ ದೇವಪ್ರಭುತ್ವಾಧಿಪತಿಯಾದ ಯೆಹೋವನನ್ನು ಸೇವಿಸಿದರು. ಇದರ ಜೊತೆಗೆ, ತುರ್ತಿನ ಸಮಯಗಳಲ್ಲಿ ಯೆಹೋವ ದೇವರು ಮಾರ್ಗದರ್ಶನವನ್ನು ಕೊಡುತ್ತಿದ್ದ ಊರೀಮ್ ಮತ್ತು ತುಮ್ಮೀಮ್ ಮಹಾ ಯಾಜಕನ ಬಳಿಯಲ್ಲಿತ್ತು. (ವಿಮೋಚನಕಾಂಡ 28:29, 30) ಇನ್ನೂ ಹೆಚ್ಚಾಗಿ, ದೇವಪ್ರಭುತ್ವದಲ್ಲಿ ಅರ್ಹ ಹಿರಿಯ ಪುರುಷರು ಯೆಹೋವನ ಪ್ರತಿನಿಧಿಗಳಾಗಿದ್ದರು ಮತ್ತು ದೇವರ ನಿಯಮದ ಅನ್ವಯದ ಕುರಿತು ಗಮನಕೊಡುತ್ತಿದ್ದರು. ಈ ಪುರುಷರಲ್ಲಿ ಕೆಲವರ ದಾಖಲೆಯನ್ನು ನಾವು ಪರಿಗಣಿಸುವುದಾದರೆ, ದೇವರ ಆಳಿಕೆಗೆ ಮಾನವರು ಹೇಗೆ ಅಧೀನರಾಗಬೇಕು ಎಂಬುದನ್ನು ನಾವು ಉತ್ತಮವಾಗಿ ಅರ್ಥಮಾಡಿಕೊಳ್ಳುವೆವು.
ದೇವಪ್ರಭುತ್ವದ ಕೆಳಗೆ ಅಧಿಕಾರ
6. ದೇವಪ್ರಭುತ್ವವೊಂದರಲ್ಲಿ ಅಧಿಕಾರವನ್ನು ಹೊಂದಿರುವುದು ಮಾನವರಿಗೆ ಒಂದು ಪಂಥಾಹ್ವಾನವಾಗಿತೇಕ್ತೆ, ಮತ್ತು ಈ ಜವಾಬ್ದಾರಿಗಾಗಿ ಯಾವ ರೀತಿಯ ಪುರುಷರು ಬೇಕಿದ್ದರು?
6 ಇಸ್ರಾಯೇಲಿನಲ್ಲಿ ಅಧಿಕಾರದ ಸ್ಥಾನಗಳಲ್ಲಿ ಇದ್ದವರಿಗೆ ಒಂದು ಮಹಾ ಸುಯೋಗವಿತ್ತು, ಆದರೆ ಅವರ ಸಮತೂಕವನ್ನು ಇಟ್ಟುಕೊಳ್ಳುವುದು ಅವರಿಗೆ ಒಂದು ಪಂಥಾಹ್ವಾನವಾಗಿತ್ತು. ಯೆಹೋವನ ನಾಮದ ಪವಿತ್ರೀಕರಣಕ್ಕಿಂತ ತಮ್ಮ ಸ್ವಂತ ಅಹಂಭಾವ ಎಂದಿಗೂ ಹೆಚ್ಚು ಪ್ರಾಮುಖ್ಯವಾಗಲಿಲ್ಲ ಎಂಬುದರ ಕುರಿತು ಅವರು ಜಾಗರೂಕರಾಗಿರಬೇಕಿತ್ತು. “ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು” ಎಂಬ ಪ್ರೇರಿತ ಹೇಳಿಕೆಯು ಮಾನವಕುಲದ ಉಳಿದ ಜನರ ವಿಷಯದಲ್ಲಿ ಎಷ್ಟು ಸತ್ಯವಾಗಿತ್ತೊ, ಇಸ್ರಾಯೇಲ್ಯರ ವಿಷಯದಲ್ಲಿ ಕೂಡ ಅಷ್ಟೇ ಸತ್ಯವಾಗಿತ್ತು. ಇಸ್ರಾಯೇಲ್ ಒಂದು ದೇವಪ್ರಭುತ್ವವೆಂದು ಮತ್ತು ಅವರು ತಮ್ಮ ಸ್ವಂತ ಚಿತ್ತವನ್ನಲ್ಲ ಯೆಹೋವನ ಚಿತ್ತವನ್ನು ಮಾಡಬೇಕು ಎಂಬುದನ್ನು ಹಿರಿಯ ಪುರುಷರು ಜ್ಞಾಪಿಸಿಕೊಂಡಾಗ ಮಾತ್ರ ಇಸ್ರಾಯೇಲ್ ಅಭಿವೃದ್ಧಿ ಪಡೆಯಿತು. ಇಸ್ರಾಯೇಲ್ ಜನಾಂಗದ ಸ್ಥಾಪನೆಯ ಬಳಿಕ, ಮೋಶೆಯ ಮಾವನಾದ ಇತ್ರೋವನು, ಅವರು ಯಾವ ರೀತಿಯ ಪುರುಷರಾಗಿರಬೇಕೆಂದು ಸರಿಯಾಗಿ ವರ್ಣಿಸಿದನು, ಅಂದರೆ, “ಸಮರ್ಥರೂ ದೇವಭಕ್ತರೂ ನಂಬಿಗಸ್ತರೂ ಲಂಚ ಮುಟ್ಟದವರೂ” ಆಗಿರಬೇಕು.—ವಿಮೋಚನಕಾಂಡ 18:21.
7. ಯೆಹೋವ ದೇವರ ಕೆಳಗೆ ಅಧಿಕಾರವನ್ನು ಹೊಂದಿದವನೋಪಾದಿ ಮೋಶೆಯು ಯಾವ ವಿಧಗಳಲ್ಲಿ ಒಂದು ಉತ್ತಮ ಉದಾಹರಣೆಯಾಗಿದ್ದನು?
7 ಇಸ್ರಾಯೇಲಿನಲ್ಲಿ ಉನ್ನತ ಅಧಿಕಾರವನ್ನು ನಿರ್ವಹಿಸಿದವರಲ್ಲಿ ಪ್ರಥಮನು ಮೋಶೆಯಾಗಿದ್ದನು. ದೇವಪ್ರಭುತ್ವ ಏರ್ಪಾಡಿನೊಳಗೆ, ಅಧಿಕಾರವಿರುವ ಒಬ್ಬ ವ್ಯಕ್ತಿಯ ಉತ್ತಮ ಉದಾಹರಣೆ ಅವನಾಗಿದ್ದನು. ಒಂದು ಸಂದರ್ಭದಲ್ಲಿ ಮಾನವ ಬಲಹೀನತೆಯು ಪ್ರಕಟವಾಯಿತು ನಿಜ. ಹಾಗಿದ್ದರೂ, ಮೋಶೆಯು ಯಾವಾಗಲೂ ಯೆಹೋವನ ಮೇಲೆ ಆತುಕೊಂಡನು. ಆಗಲೇ ಬಗೆಹರಿಸಲ್ಪಟ್ಟಿರದ ಪ್ರಶ್ನೆಗಳು ಎದ್ದಾಗ, ಅವನು ಯೆಹೋವನ ಮಾರ್ಗದರ್ಶನವನ್ನು ಕೋರಿದನು. (ಹೋಲಿಸಿ ಅರಣ್ಯಕಾಂಡ 15:32-36.) ತನ್ನ ಸ್ವಂತ ಮಹಿಮೆಗಾಗಿ ತನ್ನ ಉನ್ನತ ಸ್ಥಾನವನ್ನು ಉಪಯೋಗಿಸಲು ಬಂದ ಶೋಧನೆಯನ್ನು ಮೋಶೆ ಹೇಗೆ ತಡೆದನು? ಒಳ್ಳೆಯದು, ಲಕ್ಷಂತರ ಜನರಿದ್ದ ಒಂದು ಜನಾಂಗವನ್ನು ಅವನು ನಡೆಸಿದರೂ ಕೂಡ, ಅವನು “ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕ” ನಾಗಿದ್ದನು. (ಅರಣ್ಯಕಾಂಡ 12:3) ಅವನಿಗೆ ವೈಯಕ್ತಿಕ ಹೆಬ್ಬಯಕೆಗಳು ಇರಲಿಲ್ಲ ಆದರೆ ಅವನು ದೇವರ ಮಹಿಮೆಯ ಕುರಿತು ಚಿಂತಿತನಾಗಿದ್ದನು. (ವಿಮೋಚನಕಾಂಡ 32:7-14) ಮತ್ತು ಮೋಶೆಗೆ ಬಲವಾದ ನಂಬಿಕೆಯಿತ್ತು. ಅವನೊಬ್ಬ ರಾಷ್ಟ್ರೀಯ ನಾಯಕನಾಗುವ ಮುಂಚೆ, ಅವನ ಕುರಿತು ಮಾತಾಡುತ್ತಾ, ಅಪೊಸ್ತಲ ಪೌಲನು ಅಂದದ್ದು: “ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.” (ಇಬ್ರಿಯ 11:27) ಸ್ಪಷ್ಟವಾಗಿಗಿ, ಜನಾಂಗದ ನಿಜವಾದ ಪ್ರಭು ಯೆಹೋವನಾಗಿದ್ದನು ಎಂಬುದನ್ನು ಮೋಶೆಯು ಎಂದೂ ಮರೆಯಲಿಲ್ಲ. (ಕೀರ್ತನೆ 90:1, 2) ಇಂದು ನಮಗಾಗಿ ಎಂತಹ ಉತ್ತಮವಾದ ಮಾದರಿ!
8. ಯಾವ ಆಜ್ಞೆಯನ್ನು ಯೆಹೋವನು ಯೆಹೋಶುವನಿಗೆ ಕೊಟ್ಟನು, ಮತ್ತು ಇದು ಗಮನಾರ್ಹವಾಗಿದೆ ಏಕೆ?
8 ಮೋಶೆಯೊಬ್ಬನಿಗೇ ಇಸ್ರಾಯೇಲಿನ ಮೇಲ್ವಿಚಾರಣೆಯು ಅತಿಯಾಗಿ ಪರಿಣಮಿಸಿದಾಗ, ಜನಾಂಗವನ್ನು ನ್ಯಾಯತೀರಿಸುವುದರಲ್ಲಿ ಅವನನ್ನು ಬೆಂಬಲಿಸುವ 70 ಹಿರಿಯ ಪುರುಷರ ಮೇಲೆ ಯೆಹೋವನು ತನ್ನ ಆತ್ಮವನ್ನು ಸುರಿಸಿದನು. (ಅರಣ್ಯಕಾಂಡ 11:16-25) ತದನಂತರದ ವರ್ಷಗಳಲ್ಲಿ ಪ್ರತಿಯೊಂದು ಪಟ್ಟಣಕ್ಕೆ ಅದರ ಹಿರಿಯ ಪುರುಷರಿದ್ದರು. (ಹೋಲಿಸಿ ಧರ್ಮೋಪದೇಶಕಾಂಡ 19:12; 22:15-18; 25:7-9.) ಮೋಶೆಯು ಮರಣ ಹೊಂದಿದ ಬಳಿಕ, ಯೆಹೋವನು ಯೆಹೋಶುವನನ್ನು ಜನಾಂಗದ ನಾಯಕನನ್ನಾಗಿ ಮಾಡಿದನು. ಈ ಸುಯೋಗದೊಂದಿಗೆ ಯೆಹೋಶುವನಿಗೆ ಇನ್ನೂ ಹೆಚ್ಚಿನದನ್ನು ಮಾಡಲಿಕ್ಕಿತ್ತು ಎಂಬುದನ್ನು ನಾವು ಕಲ್ಪಿಸಿಕೊಳ್ಳಬಲ್ಲೆವು. ಆದರೂ, ಅವನು ಎಂದೂ ಬಿಟ್ಟುಬಿಡಬಾರದ ಒಂದು ಕಾರ್ಯವಿತ್ತೆಂದು ಯೆಹೋವನು ಅವನಿಗೆ ಹೇಳಿದನು: “ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡಿ.” (ಯೆಹೋಶುವ 1:8) ಯೆಹೋಶುವನು 40 ಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಸೇವೆ ಮಾಡಿದ್ದರೂ, ಅವನು ಧರ್ಮಶಾಸ್ತ್ರವನ್ನು ಓದುತ್ತಾ ಇರುವ ಆವಶ್ಯಕತೆ ಇತ್ತೆಂಬುದನ್ನು ಗಮನಿಸಿರಿ. ನಮ್ಮ ಸೇವಾ ದಾಖಲೆ ಎಷ್ಟೇ ದೀರ್ಘವಾಗಿರಲಿ, ನಮಗೆ ಎಷ್ಟೊಂದು ಸುಯೋಗಗಳೇ ಇರಲಿ, ನಮಗೂ ಕೂಡ ಬೈಬಲನ್ನು ಅಭ್ಯಾಸಿಸುವ ಮತ್ತು ಯೆಹೋವನ ನಿಯಮ ಮತ್ತು ತತ್ವಗಳನ್ನು ಕುರಿತು ನಮ್ಮ ಮನಸ್ಸುಗಳನ್ನು ಚುರುಕುಗೊಳಿಸುವ ಅಗತ್ಯವಿದೆ.—ಕೀರ್ತನೆ 119:111, 112.
9. ನ್ಯಾಯಸ್ಥಾಪಕರ ಸಮಯದಲ್ಲಿ ಇಸ್ರಾಯೇಲಿನಲ್ಲಿ ಏನು ಸಂಭವಿಸಿತು?
9 ಯೆಹೋಶುವನು ನ್ಯಾಯಸ್ಥಾಪಕರ ಒಂದು ಶ್ರೇಣಿಯಿಂದ ಹಿಂಬಾಲಿಸಲ್ಪಟ್ಟನು. ಅಸಂತೋಷಕರವಾಗಿ, ಅವರ ಸಮಯದಲ್ಲಿ ಇಸ್ರಾಯೇಲ್ಯರು ಅನೇಕ ಬಾರಿ, “ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು.” (ನ್ಯಾಯಸ್ಥಾಪಕರು 2:11) ನ್ಯಾಯಸ್ಥಾಪಕರ ಕಾಲಾವಧಿಯ ಕುರಿತು, ದಾಖಲೆಯು ಹೇಳುವುದು: “ಆ ಕಾಲದಲ್ಲಿ ಇಸ್ರಾಯೇಲ್ಯರೊಳಗೆ ಅರಸನಿರಲಿಲ್ಲ; ಪ್ರತಿಯೊಬ್ಬನೂ ತನ್ನ ಮನಸ್ಸಿಗೆ ಬಂದಂತೆ ನಡೆಯುತ್ತಿದ್ದನು.” (ನ್ಯಾಯಸ್ಥಾಪಕರು 21:25) ನಡತೆ ಮತ್ತು ಆರಾಧನೆಯ ಕುರಿತು ಪ್ರತಿಯೊಬ್ಬನು ತನ್ನ ಸ್ವಂತ ನಿರ್ಣಯಗಳನ್ನು ಮಾಡಿದನು, ಮತ್ತು ಅನೇಕ ಇಸ್ರಾಯೇಲ್ಯರು ಕೆಟ್ಟ ನಿರ್ಣಯಗಳನ್ನು ಮಾಡಿದರೆಂದು ಇತಿಹಾಸವು ತೋರಿಸುತ್ತದೆ. ಅವರು ಮೂರ್ತಿ ಪೂಜೆಗೆ ಬಿದ್ದು ಹೋದರು ಮತ್ತು ಕೆಲವೊಮ್ಮೆ ಭಯಂಕರ ಅಪರಾಧಗಳನ್ನು ಮಾಡಿದರು. (ನ್ಯಾಯಸ್ಥಾಪಕರು 19:25-30) ಕೆಲವರಾದರೊ, ಆದರ್ಶ ನಂಬಿಕೆಯನ್ನು ಪ್ರದರ್ಶಿಸಿದರು.—ಇಬ್ರಿಯ 11:32-38.
10. ಸಮುವೇಲನ ಸಮಯದಲ್ಲಿ ಇಸ್ರಾಯೇಲಿನಲ್ಲಿ ಸರಕಾರವು ಹೇಗೆ ತೀವ್ರವಾಗಿ ಬದಲಾಯಿತು, ಮತ್ತು ಇದಕ್ಕೆ ಯಾವುದು ನಡೆಸಿತು?
10 ಕೊನೆಯ ನ್ಯಾಯಸ್ಥಾಪಕನಾದ ಸಮುವೇಲನ ಜೀವಮಾನದಲ್ಲಿ, ಸರಕಾರದ ವಿಷಯದಲ್ಲಿ ಇಸ್ರಾಯೇಲ್ ಒಂದು ಸಂದಿಗ್ಧ ಸಮಯವನ್ನು ಅನುಭವಿಸಿತು. ಅರಸುಗಳ ಮೂಲಕ ಆಳಲ್ಪಟ್ಟ ಸುತ್ತುವರಿದಿದ್ದ ಎಲ್ಲಾ ವೈರಿ ಜನಾಂಗಗಳಿಂದ ಪ್ರಭಾವಿತರಾದ ಇಸ್ರಾಯೇಲ್ಯರು ಕೂಡ ತಮಗೆ ಒಬ್ಬ ಅರಸನ ಅಗತ್ಯವಿದೆಯೆಂದು ವಿವೇಚಿಸಿದರು. ಅವರಿಗೆ ಆಗಲೇ ಒಬ್ಬ ಅರಸನಿದ್ದನು ಮತ್ತು ಅವರ ಸರಕಾರವು ಒಂದು ದೇವಪ್ರಭುತ್ವವಾಗಿತ್ತು ಎಂಬುದನ್ನು ಅವರು ಮರೆತರು. “ಅವರು ನಿನ್ನನ್ನಲ್ಲ, ನನ್ನನ್ನು ತಿರಸ್ಕರಿಸಿದ್ದಾರೆ. ನನ್ನ ಆಳಿಕೆಗೆ ಬೇಡವೆನ್ನುತ್ತಾರೆ,” ಎಂದು ಯೆಹೋವನು ಸಮುವೇಲನಿಗೆ ಹೇಳಿದನು. (1 ಸಮುವೇಲ 8:7) ನಮ್ಮ ಆತ್ಮಿಕ ನೋಟವನ್ನು ಕಳೆದುಕೊಳ್ಳುವುದು ಮತ್ತು ನಮ್ಮ ಸುತ್ತಲೂ ಇರುವ ಲೋಕದಿಂದ ಪ್ರಭಾವಿತರಾಗುವುದು ಎಷ್ಟು ಸುಲಭವಾಗಿದೆ ಎಂಬುದನ್ನು ಅವರ ಉದಾಹರಣೆಯು ನಮಗೆ ಜ್ಞಾಪಿಸುತ್ತದೆ.—ಹೋಲಿಸಿ 1 ಕೊರಿಂಥ 2:14-16.
11. (ಎ) ಸರಕಾರದಲ್ಲಿ ಬದಲಾವಣೆಯ ಹೊರತೂ, ಅರಸುಗಳ ಕೆಳಗೆ ಇಸ್ರಾಯೇಲ್ ಒಂದು ದೇವಪ್ರಭುತ್ವವಾಗಿರುತ್ತಾ ಮುಂದುವರಿಯಿತೆಂದು ಹೇಗೆ ಹೇಳಸಾಧ್ಯವಿದೆ? (ಬಿ) ಯಾವ ಆಜ್ಞೆಯನ್ನು ಯೆಹೋವನು ಇಸ್ರಾಯೇಲಿನ ಅರಸುಗಳಿಗೆ ಕೊಟ್ಟನು, ಮತ್ತು ಯಾವ ಉದ್ದೇಶದಿಂದ?
11 ಆದರೂ, ಯೆಹೋವನು ಇಸ್ರಾಯೇಲ್ಯರ ವಿನಂತಿಗೆ ಸಮ್ಮತಿಸಿದನು ಮತ್ತು ಅವರ ಪ್ರಥಮ ಎರಡು ಅರಸ—ಸೌಲ ಮತ್ತು ದಾವೀದ—ರನ್ನು ಆರಿಸಿದನು. ಯೆಹೋವನಿಂದ ಆಳಲ್ಪಟ್ಟ ಒಂದು ದೇವಪ್ರಭುತ್ವವಾಗಿರುತ್ತಾ ಇಸ್ರಾಯೇಲ್ ಮುಂದುವರಿಯಿತು. “ಅವನು ಮದದಿಂದ ತನ್ನ ಸ್ವದೇಶದವರನ್ನು ಹಿಯ್ಯಾಳಿಸದೆ ಯೆಹೋವನ ಆಜ್ಞೆಯನ್ನು ಮೀರಿ ಎಡಬಲಕ್ಕೆ ತಿರುಗಿಕೊಳ್ಳದೆ ತನ್ನ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಈ ಧರ್ಮಶಾಸ್ತ್ರದ ಎಲ್ಲಾ ವಾಕ್ಯಗಳನ್ನೂ ವಿಧಿಗಳನ್ನೂ ಅನುಸರಿಸುವದಕ್ಕೆ ಅಭ್ಯಾಸಮಾಡಿಕೊಳ್ಳುವ” ವಿಷಯವನ್ನು ಆಕೆಯ ಅರಸರು ನೆನಪಿನಲ್ಲಿಡುವಂತೆ, ಅವರಲ್ಲಿ ಪ್ರತಿಯೊಬ್ಬರು ಧರ್ಮಶಾಸ್ತ್ರದ ತನ್ನ ಸ್ವಂತ ಪ್ರತಿಯನ್ನು ಮಾಡಿಕೊಳ್ಳುವ ಮತ್ತು ಅದನ್ನು ಪ್ರತಿನಿತ್ಯವು ಓದುವ ಹಂಗಿನವರಾಗಿದ್ದರು. (ಧರ್ಮೋಪದೇಶಕಾಂಡ 17:19, 20) ಹೌದು, ತನ್ನ ದೇವಪ್ರಭುತ್ವದಲ್ಲಿ ಅಧಿಕಾರವಿರುವವರು ತಮ್ಮನ್ನು ತಾವೇ ಘನತೆಗೇರಿಸಬಾರದೆಂದು ಮತ್ತು ಅವರ ಕ್ರಿಯೆಗಳು ಆತನ ಧರ್ಮಶಾಸ್ತ್ರವನ್ನು ಪ್ರತಿಬಿಂಬಿಸಬೇಕೆಂದು ಯೆಹೋವನು ಬಯಸಿದನು.
12. ನಂಬಿಗಸ್ತಿಕೆಯ ಯಾವ ದಾಖಲೆಯನ್ನು ರಾಜ ದಾವೀದನು ಮಾಡಿದನು?
12 ರಾಜ ದಾವೀದನಿಗೆ ಯೆಹೋವನಲ್ಲಿ ಎದ್ದುಕಾಣುವ ನಂಬಿಕೆ ಇತ್ತು, ಮತ್ತು ಅನಂತ ಕಾಲದ ವರೆಗೆ ಬಾಳುವ ರಾಜರ ವಂಶದ ತಂದೆಯು ಅವನಾಗುವನೆಂದು ದೇವರು ಒಡಂಬಡಿಕೆ ಮಾಡಿದನು. (2 ಸಮುವೇಲ 7:16; 1 ಅರಸು 9:5; ಕೀರ್ತನೆ 89:29) ಯೆಹೋವನಿಗೆ ದಾವೀದನ ದೀನ ಅಧೀನತೆಯು ಅನುಕರಣಾರ್ಹವಾಗಿತ್ತು. ಅವನಂದದ್ದು: “ಯೆಹೋವನೇ, ನಿನ್ನ ಪರಾಕ್ರಮದಲ್ಲಿ ಅರಸನು ಸಂತೋಷಿಸುತ್ತಾನೆ; ನೀನು ಉಂಟುಮಾಡಿದ ಜಯಕ್ಕಾಗಿ ಎಷ್ಟೋ ಆನಂದ ಪಡುತ್ತಾನೆ.” (ಕೀರ್ತನೆ 21:1) ಶಾರೀರಿಕ ಬಲಹೀನತೆಗಳ ಕಾರಣ ದಾವೀದನು ಕೆಲವೊಮ್ಮೆ ತಪ್ಪಿಹೋದರೂ, ಸಾಮಾನ್ಯವಾಗಿ ಅವನು ತನ್ನ ಸ್ವಂತ ಬಲದ ಮೇಲೆ ಅಲ್ಲ ಯೆಹೋವನ ಬಲದ ಮೇಲೆ ಆತುಕೊಂಡನು.
ದೇವಪ್ರಭುತ್ವಾತ್ಮಕವಲ್ಲದ ಕ್ರಿಯೆಗಳು ಮತ್ತು ಮನೋಭಾವಗಳು
13, 14. ದಾವೀದನ ಉತ್ತರಾಧಿಕಾರಿಗಳಿಂದ ತೆಗೆದುಕೊಳ್ಳಲಾದ ಕೆಲವು ದೇವಪ್ರಭುತ್ವಾತ್ಮಕವಲ್ಲದ ಕ್ರಿಯೆಗಳು ಯಾವುವಾಗಿದ್ದವು?
13 ಎಲ್ಲಾ ಇಸ್ರಾಯೇಲ್ಯ ನಾಯಕರು ಮೋಶೆ ಮತ್ತು ದಾವೀದರಂತೆ ಇರಲಿಲ್ಲ. ಇಸ್ರಾಯೇಲಿನಲ್ಲಿ ಸುಳ್ಳು ಆರಾಧನೆಯನ್ನು ಅನುಮತಿಸುತ್ತಾ, ಅನೇಕರು ದೇವಪ್ರಭುತ್ವ ಏರ್ಪಾಡಿಗೆ ಮಹತ್ತರವಾದ ಅಗೌರವವನ್ನು ತೋರಿಸಿದರು. ನಂಬಿಗಸ್ತ ಅರಸುಗಳಲ್ಲಿ ಕೂಡ ಕೆಲವರು ಕೆಲವೊಮ್ಮೆ ದೇವಪ್ರಭುತ್ವಾತ್ಮಕವಲ್ಲದ ರೀತಿಯಲ್ಲಿ ವರ್ತಿಸಿದರು. ಮಹಾ ವಿವೇಕ ಮತ್ತು ಏಳಿಗೆ ದಯಪಾಲಿಸಲ್ಪಟ್ಟ ಸೊಲೊಮೋನನ ವಿಷಯವು ಬಹಳ ದುರಂತಕರವಾಗಿತ್ತು. (1 ಅರಸು 4:2, 5, 29) ಆದರೂ, ಯೆಹೋವನ ಧರ್ಮಶಾಸ್ತ್ರದ ಅನಾದರ ಮಾಡುತ್ತಾ, ಅವನು ಅನೇಕ ಪತ್ನಿಯರನ್ನು ಮದುವೆ ಮಾಡಿಕೊಂಡನು ಮತ್ತು ಇಸ್ರಾಯೇಲಿನಲ್ಲಿ ಮೂರ್ತಿ ಪೂಜೆಯನ್ನು ಅನುಮತಿಸಿದನು. ಸೊಲೊಮೋನನ ಆಳಿಕೆಯು ಅವನ ತದನಂತರದ ವರ್ಷಗಳಲ್ಲಿ ದಬ್ಬಾಳಿಕೆ ಮಾಡುವಂಥದ್ದಾಗಿತ್ತೆಂಬುದು ಸ್ಪಷ್ಟ.—ಧರ್ಮೋಪದೇಶಕಾಂಡ 17:14-17; 1 ಅರಸು 11:1-8; 12:4.
14 ತನ್ನ ಪ್ರಜೆಗಳ ಭಾರವನ್ನು ಹಗುರಗೊಳಿಸಬೇಕೆಂಬ ಒಂದು ಬೇಡಿಕೆಯನ್ನು ಸೊಲೊಮೋನನ ಮಗನಾದ ರೆಹಬ್ಬಾಮನು ಎದುರಿಸಿದನು. ಸನ್ನಿವೇಶವನ್ನು ಮೃದುವಾಗಿ ನಿರ್ವಹಿಸುವ ಬದಲು, ಅವನು ಕುತರ್ಕದಿಂದ ತನ್ನ ಅಧಿಕಾರವನ್ನು ಪ್ರತಿಪಾದಿಸಿ—12 ಕುಲಗಳಲ್ಲಿ 10ನ್ನು ಕಳೆದುಕೊಂಡನು. (2 ಪೂರ್ವಕಾಲವೃತ್ತಾಂತ 10:4-17) ಒಡೆದುಹೋದ ಹತ್ತು ಕುಲ ರಾಜ್ಯದ ಪ್ರಥಮ ಅರಸನು ಯಾರೊಬ್ಬಾಮನಾಗಿದ್ದನು. ತನ್ನ ರಾಜ್ಯವು ಅದರ ಸಹೋದರಿ ಜನಾಂಗವನ್ನು ಎಂದೂ ಕೂಡದಿರುವ ಸಂಗತಿಯನ್ನು ಖಚಿತಪಡಿಸಿಕೊಳ್ಳುವ ಒಂದು ಪ್ರಯತ್ನದಲ್ಲಿ, ಅವನು ಬಸವಾರಾಧನೆಯನ್ನು ಸ್ಥಾಪಿಸಿದನು. ರಾಜಕೀಯವಾಗಿ ಇದು ಚತುರವಾದೊಂದು ಹೆಜ್ಜೆಯಾಗಿ ತೋರಿರಬಹುದು, ಆದರೆ ದೇವಪ್ರಭುತ್ವಕ್ಕೆ ಎದ್ದು ಕಾಣುವ ತಾತ್ಸಾರವನ್ನು ಅದು ತೋರಿಸಿತು. (1 ಅರಸು 12:26-30) ತದನಂತರ, ನಂಬಿಗಸ್ತ ಸೇವೆಯ ದೀರ್ಘ ಜೇವಿತದ ಕೊನೆಯಲ್ಲಿ, ಅಹಂಕಾರವು ತನ್ನ ದಾಖಲೆಯನ್ನು ಕಳಂಕಿತಗೊಳಿಸುವಂತೆ ರಾಜ ಆಸನು ಬಿಟ್ಟನು. ಯೆಹೋವನಿಂದ ಸಲಹೆಯೊಂದಿಗೆ ಅವನಲಿಗ್ಲೆ ಬಂದ ಪ್ರವಾದಿಯೊಂದಿಗೆ ಅವನು ಕೆಟ್ಟ ರೀತಿಯಲ್ಲಿ ವರ್ತಿಸಿದನು. (2 ಪೂರ್ವಕಾಲವೃತ್ತಾಂತ 16:7-11) ಹೌದು, ಹಳಬರಿಗೂ ಕೂಡ ಕೆಲವೊಮ್ಮೆ ಸಲಹೆಯ ಅಗತ್ಯವಿದೆ.
ದೇವಪ್ರಭುತ್ವವೊಂದರ ಅಂತ್ಯ
15. ಯೇಸು ಭೂಮಿಯಲ್ಲಿದ್ದಾಗ, ದೇವಪ್ರಭುತ್ವವೊಂದರಲ್ಲಿ ಅಧಿಕಾರದ ವ್ಯಕ್ತಿಗಳಾಗಿ ಯೆಹೂದಿ ನಾಯಕರು ಹೇಗೆ ವಿಫಲರಾದರು?
15 ಯೇಸು ಕ್ರಿಸ್ತನು ಭೂಮಿಯ ಮೇಲಿದ್ದಾಗ, ಇಸ್ರಾಯೇಲ್ ಇನ್ನೂ ಒಂದು ದೇವಪ್ರಭುತ್ವವಾಗಿತ್ತು. ದುಃಖಕರವಾಗಿ, ಆಕೆಯ ಜವಾಬ್ದಾರ ಹಿರಿಯ ಪುರುಷರಲ್ಲಿ ಅನೇಕರು ಆತ್ಮಿಕ ಮನಸ್ಸುಳ್ಳವರಾಗಿರಲಿಲ್ಲ. ಮೋಶೆಯು ಪ್ರದರ್ಶಿಸಿದಂಥ ಸೌಮ್ಯತೆಯನ್ನು ಬೆಳೆಸುವುದರಲ್ಲಿ ಅವರು ನಿಶ್ಚಯವಾಗಿಯೂ ತಪ್ಪಿಹೋದರು. “ಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಪೀಠದಲ್ಲಿ ಕೂತುಕೊಂಡಿದ್ದಾರೆ; ಆದದರಿಂದ ಅವರು ನಿಮಗೆ ಏನೇನು ಹೇಳುತ್ತಾರೋ ಅದನ್ನೆಲ್ಲಾ ಮಾಡಿರಿ, ಕಾಪಾಡಿಕೊಳ್ಳಿರಿ; ಆದರೆ ಅವರ ನಡತೆಯ ಪ್ರಕಾರ ನಡೆಯಬೇಡಿರಿ; ಅವರು ಹೇಳುತ್ತಾರೇ ಹೊರತು ನಡೆಯುವದಿಲ್ಲ,” ಎಂದು ಯೇಸು ಹೇಳಿದಾಗ ಅವರ ಆತ್ಮಿಕ ಭ್ರಷ್ಟತೆಯನ್ನು ಅವನು ಸೂಚಿಸಿದನು.—ಮತ್ತಾಯ 23:2, 3.
16. ತಮಗೆ ದೇವಪ್ರಭುತ್ವಕ್ಕಾಗಿ ಗೌರವವಿರಲಿಲ್ಲವೆಂದು ಪ್ರಥಮ ಶತಮಾನದ ಯೆಹೂದಿ ನಾಯಕರು ಹೇಗೆ ತೋರಿಸಿದರು?
16 ಪೊಂತ್ಯ ಪಿಲಾತನಿಗೆ ಯೇಸುವನ್ನು ವಹಿಸಿಕೊಟ್ಟ ತರುವಾಯ, ದೇವಪ್ರಭುತ್ವ ಅಧೀನತೆಯಿಂದ ತಾವು ಎಷ್ಟು ದೂರ ದಾರಿತಪ್ಪಿಹೋಗಿದ್ದರೆಂದು ಯೆಹೂದಿ ನಾಯಕರು ತೋರಿಸಿದರು. ಪಿಲಾತನು ಯೇಸುವನ್ನು ಪರೀಕ್ಷಿಸಿ ಅವನೊಬ್ಬ ನಿಷ್ಕಳಂಕ ಮನುಷ್ಯನೆಂದು ತೀರ್ಮಾನಿಸಿದನು. ಯೆಹೂದ್ಯರ ಮುಂದೆ ಯೇಸುವನ್ನು ತರುತ್ತಾ, ಪಿಲಾತನು ಅಂದದ್ದು: “ಇಗೋ, ನಿಮ್ಮ ಅರಸನು!” ಯೆಹೂದ್ಯರು ಯೇಸುವಿನ ಮರಣಕ್ಕಾಗಿ ಬೊಬ್ಬೆಯಿಡುವಾಗ, ಪಿಲಾತನು ಕೇಳಿದ್ದು: “ನಿಮ್ಮ ಅರಸನನ್ನು ಶಿಲುಬೆಗೆ ಹಾಕಿಸಲೋ?” ಮಹಾಯಾಜಕರು ಉತ್ತರಿಸಿದ್ದು: “ಕೈಸರನೇ ಹೊರತು ನಮಗೆ ಬೇರೆ ಅರಸನಿಲ್ಲ.” (ಯೋಹಾನ 19:14, 15) ಅವರು ‘ಕರ್ತನ ಹೆಸರಿನಲ್ಲಿ ಬಂದ’ ಯೇಸುವನಲ್ಲ, ಕೈಸರನನ್ನು ಅರಸನಂತೆ ಅಂಗೀಕರಿಸಿದರು.—ಮತ್ತಾಯ 21:9.
17. ಶಾರೀರಿಕ ಇಸ್ರಾಯೇಲ್ ಒಂದು ದೇವಪ್ರಭುತ್ವ ಜನಾಂಗವಾಗಿರಲು ನಿಂತು ಹೋಯಿತೇಕೆ?
17 ಯೇಸುವನ್ನು ತಿರಸ್ಕರಿಸಿದಾಗ ಯೆಹೂದ್ಯರು ದೇವಪ್ರಭುತ್ವವನ್ನು ತಿರಸ್ಕರಿಸಿದರು, ಯಾಕೆಂದರೆ ಭವಿಷ್ಯತ್ತಿನ ದೇವಪ್ರಭುತ್ವ ಏರ್ಪಾಡುಗಳಲ್ಲಿ ಅವನು ಮುಖ್ಯ ವ್ಯಕ್ತಿಯಾಗಿರಲಿದ್ದನು. ಯೇಸು ಅನಂತ ಕಾಲ ಆಳಿಕೆ ನಡಿಸುವ ದಾವೀದನ ರಾಜಯೋಗ್ಯ ಪುತ್ರನಾಗಿದ್ದನು. (ಯೆಶಾಯ 9:6, 7; ಲೂಕ 1:33; 3:23, 31) ಹೀಗೆ, ಶಾರೀರಿಕ ಇಸ್ರಾಯೇಲ್ ದೇವರ ಆಯ್ದುಕೊಂಡ ಜನಾಂಗವಾಗಿರುವುದು ನಿಂತುಹೋಯಿತು.—ರೋಮಾಪುರ 9:31-33.
ಹೊಸದಾದ ಒಂದು ದೇವಪ್ರಭುತ್ವ
18. ಪ್ರಥಮ ಶತಮಾನದಲ್ಲಿ ಯಾವ ಹೊಸ ದೇವಪ್ರಭುತ್ವವು ಹುಟ್ಟಿಕೊಂಡಿತು? ವಿವರಿಸಿರಿ.
18 ಶಾರೀರಿಕ ಇಸ್ರಾಯೇಲನ್ನು ದೇವರು ತಿರಸ್ಕರಿಸಿದ್ದು ಭೂಮಿಯ ಮೇಲೆ ದೇವಪ್ರಭುತ್ವದ ಅಂತ್ಯವಾಗಿರಲಿಲ್ಲ. ಯೇಸು ಕ್ರಿಸ್ತನ ಮುಖಾಂತರ, ಯೆಹೋವನು ಹೊಸದಾದ ಒಂದು ದೇವಪ್ರಭುತ್ವವನ್ನು ಸ್ಥಾಪಿಸಿದನು. ಇದು ನಿಜವಾಗಿಯೂ ಒಂದು ಹೊಸ ಜನಾಂಗವಾಗಿದ್ದ ಅಭಿಷಿಕ್ತ ಕ್ರೈಸ್ತ ಸಭೆಯಾಗಿತ್ತು. (1 ಪೇತ್ರ 2:9) ಅಪೊಸ್ತಲ ಪೌಲನು ಅದನ್ನು “ದೇವರ ಇಸ್ರಾಯೇಲ್” ಎಂದು ಕರೆದನು, ಮತ್ತು ಅಂತಿಮವಾಗಿ ಅದರ ಸದಸ್ಯರು “ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ” ಬಂದರು. (ಗಲಾತ್ಯ 6:16; ಪ್ರಕಟನೆ 5:9, 10) ಅವರು ಜೀವಿಸಿದ್ದ ಮಾನವ ಸರಕಾರಗಳಿಗೆ ಅಧೀನರಾಗಿದ್ದಾಗ್ಯೂ, ಈ ಹೊಸ ದೇವಪ್ರಭುತ್ವದ ಸದಸ್ಯರು ವಾಸ್ತವವಾಗಿ ದೇವರಿಂದ ಆಳಲ್ಪಟ್ಟಿದ್ದರು. (1 ಪೇತ್ರ 2:13, 14, 17) ಹೊಸ ದೇವಪ್ರಭುತ್ವದ ಜನನದ ತತ್ಕ್ಷಣವೆ, ಯೇಸು ಅವರಿಗೆ ಕೊಟ್ಟಿದ್ದ ಒಂದು ಆಜೆಗ್ಞೆ ವಿಧೇಯರಾಗಿರುವುದನ್ನು ನಿಲ್ಲಿಸುವಂತೆ, ಶಾರೀರಿಕ ಇಸ್ರಾಯೇಲಿನ ಅಧಿಪತಿಗಳು ಕೆಲವು ಶಿಷ್ಯರನ್ನು ಒತ್ತಯಾ ಮಾಡಲು ಪ್ರಯತ್ನಿಸಿದರು. ಪ್ರತ್ಯುತ್ತರ? “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ.” (ಅ. ಕೃತ್ಯಗಳು 5:29) ಸತ್ಯವಾಗಿ, ದೇವಪ್ರಭುತ್ವಾತ್ಮಕವಾದ ಒಂದು ದೃಷ್ಟಿಕೋನ!
19. ಯಾವ ಅರ್ಥದಲ್ಲಿ ಪ್ರಥಮ ಶತಮಾನದ ಕ್ರೈಸ್ತ ಸಭೆಯನ್ನು ಒಂದು ದೇವಪ್ರಭುತ್ವವೆಂದು ಕರೆಯಬಹುದಿತ್ತು?
19 ಹೊಸ ದೇವಪ್ರಭುತ್ವವಾದರೊ ಹೇಗೆ ಕಾರ್ಯನಡಿಸಿತು? ಒಳ್ಳೆಯದು, ಮಹಾ ದೇವಪ್ರಭುತ್ವಾಧಿಪತಿಯಾದ ಯೆಹೋವ ದೇವರನ್ನು ಪ್ರತಿನಿಧಿಸುವ ಒಬ್ಬ ಅರಸ, ಯೇಸು ಕ್ರಿಸ್ತನು ಅಲ್ಲಿದ್ದನು. (ಕೊಲೊಸ್ಸೆ 1:13) ಅರಸನು ಸ್ವರ್ಗದಲ್ಲಿ ಅದೃಶ್ಯನಾಗಿದ್ದರೂ, ಅವನ ಪ್ರಜೆಗಳಿಗೆ ಅವನ ಆಳಿಕೆಯು ನೈಜವಾಗಿತ್ತು, ಮತ್ತು ಅವನ ಮಾತುಗಳು ಅವರ ಜೀವಿತಗಳನ್ನು ಆಳಿದವು. ದೃಶ್ಯ ಮೇಲ್ವಿಚಾರಣೆಗಾದರೊ, ಆತ್ಮಿಕವಾಗಿ ಅರ್ಹರಾದ ಹಿರಿಯ ಪುರುಷರು ನೇಮಿಸಲ್ಪಟ್ಟರು. ಯೆರೂಸಲೇಮಿನಲ್ಲಿ ಇಂತಹ ಪುರುಷರ ಒಂದು ಗುಂಪು ಆಡಳಿತ ಮಂಡಳಿಯಂತೆ ಕಾರ್ಯನಡೆಸಿತು. ಪೌಲ, ತಿಮೊಥೆಯ, ಮತ್ತು ತೀತನಂತಹ ಸಂಚಾರಿ ಹಿರಿಯರು, ಆ ಮಂಡಳಿಯನ್ನು ಪ್ರತಿನಿಧಿಸುತ್ತಿದ್ದರು. ಮತ್ತು ಪ್ರತಿಯೊಂದು ಸಭೆಯು ಹಿರಿಯ ಪುರುಷರ ಒಂದು ಮಂಡಳಿಯಿಂದ ಯಾ ಹಿರಿಯರಿಂದ ನೋಡಿಕೊಳ್ಳಲ್ಪಡುತ್ತಿತ್ತು. (ತೀತ 1:5) ಕಠಿನವಾದೊಂದು ಸಮಸ್ಯೆ ಎದ್ದಾಗ, ಆಡಳಿತ ಮಂಡಳಿಯ ಅಥವಾ ಪೌಲನಂತೆ ಅದರ ಪ್ರತಿನಿಧಿಗಳಲ್ಲಿ ಒಬ್ಬರ ಸಲಹೆಯನ್ನು ಹಿರಿಯರು ಕೇಳುತ್ತಿದ್ದರು. (ಹೋಲಿಸಿ ಅ. ಕೃತ್ಯಗಳು 15:2; 1 ಕೊರಿಂಥ 7:1; 8:1; 12:1) ಇನ್ನೂ ಹೆಚ್ಚಾಗಿ, ಸಭೆಯ ಪ್ರತಿಯೊಬ್ಬ ಸದಸ್ಯನು ದೇವಪ್ರಭುತ್ವವನ್ನು ಎತ್ತಿಹಿಡಿಯುವುದರಲ್ಲಿ ಒಂದು ಪಾತ್ರವನ್ನು ವಹಿಸಿದನು. ತನ್ನ ಜೀವಿತದಲ್ಲಿ ಶಾಸ್ತ್ರೀಯ ತತ್ವಗಳನ್ನು ಅನ್ವಯಿಸುವುದರಲ್ಲಿ ಪ್ರತಿಯೊಬ್ಬನು ಯೆಹೋವನ ಮುಂದೆ ಜವಾಬ್ದಾರನಾಗಿದ್ದನು.—ರೋಮಾಪುರ 14:4, 12.
20. ಅಪೊಸ್ತಲರ ತರುವಾಯದ ಸಮಯದಲ್ಲಿ ದೇವಪ್ರಭುತ್ವದ ಕುರಿತು ಏನನ್ನು ಹೇಳಸಾಧ್ಯವಿದೆ?
20 ಅಪೊಸ್ತಲರ ಮರಣಾನಂತರ ಧರ್ಮಭ್ರಷ್ಟತೆಯು ವಿಕಸಿಸುವುದು ಎಂದು ಪೌಲನು ಎಚ್ಚರಿಸಿದಂತೆಯೇ ನಿಕರವಾಗಿ ಸಂಭವಿಸಿತು. (2 ಥೆಸಲೊನೀಕ 2:3) ಸಮಯವು ಗತಿಸಿದಂತೆ, ಕ್ರೈಸ್ತರೆಂದು ಹೇಳಿಕೊಳ್ಳುವವರ ಸಂಖ್ಯೆ ಲಕ್ಷಗಳಿಗೆ ಏರಿತು ಮತ್ತು ತದನಂತರ ಕೋಟಿಗಳಿಗೆ. ಅವರು ಪುರೋಹಿತ ಪ್ರಭುತ್ವ, ಹಿರಿಯರ ಆಡಳಿತ, ಮತ್ತು ಸಭಾಪದ್ಧತಿಯಂತಹ ವಿಭಿನ್ನ ರೀತಿಯ ಚರ್ಚ್ ಸರಕಾರವನ್ನು ವಿಕಸಿಸಿದರು. ಹಾಗಿದ್ದರೂ, ಯೆಹೋವನ ಆಳಿಕೆಯನ್ನು ಈ ಚರ್ಚುಗಳ ನಡತೆಯಾಗಲಿ ವಿಶ್ವಾಸಗಳಾಗಲಿ ಪ್ರತಿಬಿಂಬಿಸಲಿಲ್ಲ. ಅವು ದೇವಪ್ರಭುತ್ವಗಳಾಗಿರಲಿಲ್ಲ!
21, 22. (ಎ) ಅಂತ್ಯದ ಸಮಯದಲ್ಲಿ ಯೆಹೋವನು ದೇವಪ್ರಭುತ್ವವನ್ನು ಹೇಗೆ ಪುನಃಸ್ಥಾಪಿಸಿದ್ದಾನೆ? (ಬಿ) ದೇವಪ್ರಭುತ್ವದ ಕುರಿತು ಯಾವ ಪ್ರಶ್ನೆಗಳು ಮುಂದೆ ಉತ್ತರಿಸಲ್ಪಡುವವು?
21 ಈ ವಿಷಯಗಳ ವ್ಯವಸ್ಥೆಯ ಅಂತ್ಯದ ಸಮಯದಲ್ಲಿ, ಸುಳ್ಳು ಕ್ರೈಸ್ತರಿಂದ ನಿಜ ಕ್ರೈಸ್ತರನ್ನು ಬೇರ್ಪಡಿಸುವ ಒಂದು ಕೆಲಸವಿರಲಿತ್ತು. (ಮತ್ತಾಯ 13:37-43) ದೇವಪ್ರಭುತ್ವದ ಇತಿಹಾಸದಲ್ಲಿ ಪ್ರಮುಖ ವರ್ಷವಾದ, 1919 ರಲ್ಲಿ ಇದು ಸಂಭವಿಸಿತು. ಆ ಸಮಯದಲ್ಲಿ ಯೆಶಾಯ 66:8ರ ಮಹಿಮಾಭರಿತ ಪ್ರವಾದನೆಯು ನೆರವೇರಿತು: “ಇಂಥಾ ಸಂಗತಿಯನ್ನು ಕಂಡವರಾರು? ಒಂದು ದಿನದಲ್ಲಿ ರಾಷ್ಟ್ರವು [ದೇಶ, NW] ಹುಟ್ಟೀತೇ? ಕ್ಷಣಮಾತ್ರದಲ್ಲಿ ಜನಾಂಗವನ್ನು ಹೆರಲಿಕ್ಕಾದೀತೇ?” ಆ ಪ್ರಶ್ನೆಗಳಿಗೆ ಉತ್ತರವು ಪ್ರತಿಧ್ವನಿಸುವ ಹೌದಾಗಿತ್ತು! ಇಸವಿ 1919 ರಲ್ಲಿ ಕ್ರೈಸ್ತ ಸಭೆಯು ಮತ್ತೊಮ್ಮೆ ಒಂದು ಪ್ರತ್ಯೇಕವಾದ “ಜನಾಂಗ” ದಂತೆ ಅಸ್ತಿತ್ವದಲ್ಲಿತ್ತು. ದೇವಪ್ರಭುತ್ವವಾದ ಒಂದು “ದೇಶ” ನಿಜವಾಗಿಯೂ ಒಂದೇ ದಿನದಲ್ಲಿಯೊ ಎಂಬಂತೆ ಹುಟ್ಟಿತು! ಅಂತ್ಯದ ಸಮಯವು ಮುಂದುವರಿದಂತೆ, ಪ್ರಥಮ ಶತಮಾನದಲ್ಲಿದ್ದ ಸಂಸ್ಥೆಗೆ ಸಾಧ್ಯವಾದಷ್ಟು ನಿಕಟವಾಗಿ ತರಲ್ಪಡುವಂತೆ ಈ ಹೊಸ ಜನಾಂಗದ ಸಂಸ್ಥೆಯು ಹೊಂದಾಣಿಸಲ್ಪಟ್ಟಿತು. (ಯೆಶಾಯ 60:17) ಆದರೆ ಅದು ಯಾವಾಗಲೂ ಒಂದು ದೇವಪ್ರಭುತ್ವವಾಗಿತ್ತು. ನಡತೆಯಲ್ಲಿ ಮತ್ತು ವಿಶ್ವಾಸದಲ್ಲಿ, ಅದು ಯಾವಾಗಲೂ ಶಾಸ್ತ್ರಗಳಲ್ಲಿರುವ ದೈವಿಕವಾಗಿ ಪ್ರೇರೇಪಿಸಲ್ಪಟ್ಟ ನಿಯಮಗಳನ್ನು ಮತ್ತು ತತ್ವಗಳನ್ನು ಪ್ರತಿಬಿಂಬಿಸಿತು. ಮತ್ತು ಅದು ಯಾವಾಗಲೂ ಸಿಂಹಾಸನವೇರಿದ ಅರಸ, ಯೇಸು ಕ್ರಿಸ್ತನಿಗೆ ಅಧೀನವಾಗಿತ್ತು.—ಕೀರ್ತನೆ 45:17; 72:1, 2.
22 ಈ ದೇವಪ್ರಭುತ್ವದೊಂದಿಗೆ ನೀವು ಚೊತೆಗೂಡಿದ್ದೀರೊ? ಅದರಲ್ಲಿ ನಿಮಗೊಂದು ಅಧಿಕಾರದ ಸ್ಥಾನವಿದೆಯೊ? ಹಾಗಿರುವಲ್ಲಿ, ದೇವಪ್ರಭುತ್ವವಾಗಿ ಕಾರ್ಯನಡಿಸುವುದರ ಅರ್ಥ ಏನಾಗಿದೆ ಎಂದು ನಿಮಗೆ ಗೊತ್ತಿದೆಯೊ? ಯಾವ ಉರುಲುಗಳನ್ನು ತಡೆಯಬೇಕೆಂದು ನಿಮಗೆ ಗೊತ್ತಿದೆಯೊ? ಕೊನೆಯ ಎರಡು ಪ್ರಶ್ನೆಗಳು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವವು.
ನೀವು ವಿವರಿಸಬಲ್ಲಿರೊ?
▫ ದೇವಪ್ರಭುತ್ವ ಎಂದರೇನು?
▫ ಯಾವ ರೀತಿಯಲ್ಲಿ ಇಸ್ರಾಯೇಲ್ ಒಂದು ದೇವಪ್ರಭುತ್ವವಾಗಿತ್ತು?
▫ ಇಸ್ರಾಯೇಲ್ ಒಂದು ದೇವಪ್ರಭುತ್ವವಾಗಿದೆ ಎಂಬುದನ್ನು ಅರಸುಗಳಿಗೆ ಜ್ಞಾಪಿಸಲು ಯೆಹೋವನು ಯಾವ ಏರ್ಪಾಡನ್ನು ಮಾಡಿದನು?
▫ ಯಾವ ವಿಧದಲ್ಲಿ ಕ್ರೈಸ್ತ ಸಭೆಯು ಒಂದು ದೇವಪ್ರಭುತ್ವವಾಗಿತ್ತು, ಮತ್ತು ಅದು ಹೇಗೆ ಸಂಘಟಿಸಲ್ಪಟ್ಟಿತ್ತು?
▫ ನಮ್ಮ ಸಮಯದಲ್ಲಿ ಯಾವ ದೇವಪ್ರಭುತ್ವ ಸಂಸ್ಥೆಯನ್ನು ಸ್ಥಾಪಿಸಲಾಗಿದೆ?
[ಪುಟ 12 ರಲ್ಲಿರುವ ಚಿತ್ರ]
ಪೊಂತ್ಯ ಪಿಲಾತನ ಸಮ್ಮುಖದಲ್ಲಿ ಯೆಹೂದಿ ಅಧಿಪತಿಗಳು, ಯೆಹೋವನ ದೇವಪ್ರಭುತ್ವವಾಗಿ ನೇಮಿಸಿದ ರಾಜನ ಬದಲಾಗಿ ಕೈಸರನನ್ನು ಅಂಗೀಕರಿಸಿದರು