ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 8/15 ಪು. 25-29
  • ಸ್ವಾತಂತ್ರ್ಯಕ್ಕೆ ಹೂಗನಾಟರ ಪಲಾಯನ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸ್ವಾತಂತ್ರ್ಯಕ್ಕೆ ಹೂಗನಾಟರ ಪಲಾಯನ
  • ಕಾವಲಿನಬುರುಜು—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಆರಂಭದಿಂದಲೇ ವಿರೋಧಿಸಲ್ಪಟ್ಟದ್ದು
  • ತೀವ್ರಕ್ರಮ
  • ತಿರುಗಿ ಆರಂಭದ ಹಂತಕ್ಕೆ
  • ಅಡಗಿಕೊಳ್ಳುವುದೊ, ಹೋರಾಡುವುದೊ ಅಥವಾ ಪಲಾಯನಗೈಯುವುದೊ?
  • ಆದರಾತಿಥ್ಯದ ಆಶ್ರಯ
  • ಪಾಠಗಳನ್ನು ಕಲಿಯಲಾಯಿತೊ?
  • ಧಾರ್ಮಿಕ ಸ್ವಾತಂತ್ರ್ಯ—ಆಶೀರ್ವಾದವೋ ಶಾಪವೋ?
    ಎಚ್ಚರ!—1999
  • ಉಳಿವಿಗಾಗಿ ಫ್ರೆಂಚ್‌ ಬೈಬಲಿನ ಹೋರಾಟ
    ಎಚ್ಚರ!—1998
  • ಗುಲಾಮಗಿರಿಯ ಘೋರ ಇತಿಹಾಸವನ್ನು ಇಣುಕಿನೋಡುವುದು
    ಎಚ್ಚರ!—1999
  • ವೆಸ್ಟ್‌ಫೇಲಿಯದ ಶಾಂತಿ ಸಂಧಾನ ಯೂರೋಪಿನಲ್ಲಿ ಗಮನಾರ್ಹ ಬದಲಾವಣೆಯ ಕಾಲಾವಧಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
ಇನ್ನಷ್ಟು
ಕಾವಲಿನಬುರುಜು—1998
w98 8/15 ಪು. 25-29

ಸ್ವಾತಂತ್ರ್ಯಕ್ಕೆ ಹೂಗನಾಟರ ಪಲಾಯನ

“ರಾಜ ಮತ್ತು ರಾಣಿಯವರಿಂದ, . . . ನಾವು ಈಗ ಘೋಷಿಸುವುದೇನೆಂದರೆ, ಈ ನಮ್ಮ ರಾಜ್ಯದಲ್ಲಿ ಆಶ್ರಯವನ್ನು ಹುಡುಕುವ ಮತ್ತು ಇಲ್ಲಿಗೆ ಗಡಿಪಾರಾಗಿ ಬರುವ ಎಲ್ಲ ಫ್ರೆಂಚ್‌ ಪ್ರಾಟೆಸ್ಟಂಟರಿಗೆ, ನಮ್ಮ ರಾಜಯೋಗ್ಯ ಸಂರಕ್ಷಣೆ ಸಿಗುವುದು ಮಾತ್ರವಲ್ಲ . . . ಈ ಸಾಮ್ರಾಜ್ಯದಲ್ಲಿ ಅವರ ಜೀವನ ಮತ್ತು ವಾಸವನ್ನು ಸುಖಕರವೂ, ಸುಲಭವೂ ಆಗಿಸುವಂತೆ, ಎಲ್ಲ ನ್ಯಾಯಯುಕ್ತ ವಿಧಗಳು ಮತ್ತು ಮಾಧ್ಯಮಗಳ ಮೂಲಕ ನಾವು ಅವರನ್ನು ಬೆಂಬಲಿಸಿ, ಸಹಾಯ ಮತ್ತು ನೆರವನ್ನು ನೀಡುವೆವು.”

ಇಂಗ್ಲೆಂಡಿನ ರಾಜ ಮತ್ತು ರಾಣಿ, ವಿಲ್ಯಮ್‌ ಮತ್ತು ಮೇರಿಯವರ 1689ನೆಯ ಘೋಷಣೆಯು ಈ ಮೇಲಿನಂತೆ ಇತ್ತು. ಆದರೆ ಫ್ರೆಂಚ್‌ ಪ್ರಾಟೆಸ್ಟಂಟರು, ಅಥವಾ ಹೂಗನಾಟರು ಎಂದು ಪ್ರಸಿದ್ಧರಾದವರು, ಫ್ರಾನ್ಸ್‌ನ ಹೊರಗೆ ಆಶ್ರಯ ಮತ್ತು ಸಂರಕ್ಷಣೆಯನ್ನು ಹುಡುಕುವ ಅಗತ್ಯ ಏಕಿತ್ತು? ಸುಮಾರು 300 ವರ್ಷಗಳ ಹಿಂದೆ, ಫ್ರಾನ್ಸ್‌ನಿಂದ ಅವರ ಪಲಾಯನವು ಇಂದು ನಮಗೇಕೆ ಆಸಕ್ತಿಯ ವಿಷಯವಾಗಿರಬೇಕು?

ಹದಿನಾರನೆಯ ಶತಮಾನದಲ್ಲಿ ಯೂರೋಪ್‌, ಯುದ್ಧ ಮತ್ತು ಧರ್ಮಕ್ಕೆ ಸಂಬಂಧಪಟ್ಟ ವ್ಯಾಜ್ಯಗಳಿಂದ ಭಗ್ನಗೊಂಡಿತ್ತು. ಕ್ಯಾತೊಲಿಕರ ಮತ್ತು ಪ್ರಾಟೆಸ್ಟಂಟರ ನಡುವಿನ ಧರ್ಮ ಯುದ್ಧ (1562-1598)ಗಳೊಂದಿಗೆ, ಫ್ರಾನ್ಸ್‌ ಈ ಸಂಕ್ಷೋಭೆಯಿಂದ ಪಾರಾಗಲಿಲ್ಲ. 1598ರಲ್ಲಾದರೊ, ಫ್ರೆಂಚ್‌ ಅರಸನಾದ IVನೆಯ ಹೆನ್ರಿ, ಪ್ರಾಟೆಸ್ಟಂಟ್‌ ಹೂಗನಾಟರಿಗೆ ಒಂದಿಷ್ಟು ಧಾರ್ಮಿಕ ಸ್ವಾತಂತ್ರ್ಯವನ್ನು ದಯಪಾಲಿಸುತ್ತಾ, ಸಹಿಷ್ಣುತೆಯ ಶಾಸನವಾದ, ನಾಂತೆಯ ಶಾಸನಕ್ಕೆ ಸಹಿಹಾಕಿದನು. ಎರಡು ಧರ್ಮಗಳ ಈ ಕಾನೂನುಬದ್ಧ ಅಂಗೀಕಾರವು ಯೂರೋಪಿನಲ್ಲಿ ಅಪೂರ್ವವಾದ ಸಂಗತಿಯಾಗಿತ್ತು. 16ನೆಯ ಶತಮಾನದ ಫ್ರಾನ್ಸ್‌ ಅನ್ನು 30ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಕಳಂಕಿತಗೊಳಿಸಿದ ಧಾರ್ಮಿಕ ಉತ್ಕ್ರಾಂತಿಗಳನ್ನು ಅದು ಸ್ವಲ್ಪ ಸಮಯಕ್ಕೆ ಅಂತ್ಯಗೊಳಿಸಿತು.

ನಾಂತೆಯ ಶಾಸನವು, “ಶಾಶ್ವತವೂ, ರದ್ದುಮಾಡಲಾರದ್ದೂ” ಆಗಿರುವಂತೆ ಉದ್ದೇಶಿಸಲ್ಪಟ್ಟಿದ್ದರೂ, 1685ರಲ್ಲಿ ಅದು ಫಾಂಟೇನ್‌ಬ್ಲೂ ಶಾಸನದ ಮೂಲಕ ರದ್ದುಗೊಳಿಸಲ್ಪಟ್ಟಿತು. ತದನಂತರ ಫ್ರೆಂಚ್‌ ತತ್ವಜ್ಞಾನಿಯಾದ ವಾಲ್ಟೇರ್‌, ಈ ರದ್ದುಗೊಳಿಸುವಿಕೆಯನ್ನು “ಫ್ರಾನ್ಸ್‌ನ ಅತಿ ದೊಡ್ಡದಾದ ದುರಂತಗಳಲ್ಲಿ ಒಂದು” ಎಂದು ವರ್ಣಿಸಿದನು. ಸ್ವಲ್ಪ ಸಮಯದೊಳಗೆ, ಅದು ಸುಮಾರು 2,00,000ದಷ್ಟು ಹೂಗನಾಟರು ಬೇರೆ ದೇಶಗಳಿಗೆ ಪಲಾಯನಗೈಯುವಂತೆ ಮಾಡಿತು. ಈ ವಲಸೆಹೋಗುವಿಕೆಗೆ ಹೆಚ್ಚಿನ ದೀರ್ಘಕಾಲಿಕ ಪರಿಣಾಮಗಳಿದ್ದವು. ಆದರೆ ಧಾರ್ಮಿಕ ಸಹಿಷ್ಣುತೆಯ ಪರವಾಗಿದ್ದ ಹಿಂದಿನ ಶಾಸನವನ್ನು ಏಕೆ ರದ್ದುಗೊಳಿಸಲಾಯಿತು?

ಆರಂಭದಿಂದಲೇ ವಿರೋಧಿಸಲ್ಪಟ್ಟದ್ದು

ನಾಂತೆಯ ಶಾಸನವು, ಬಹುಮಟ್ಟಿಗೆ 90 ವರ್ಷಗಳ ವರೆಗೆ ಅಧಿಕೃತವಾಗಿ ಜಾರಿಯಲ್ಲಿತ್ತಾದರೂ, “ಅದು 1685ರಲ್ಲಿ ರದ್ದುಗೊಳಿಸಲ್ಪಟ್ಟಾಗ, ಆಗಲೇ ಕಣ್ಮರೆಯಾಗುತ್ತಾ ಇತ್ತು” ಎಂದು ಒಬ್ಬ ಇತಿಹಾಸಗಾರ್ತಿಯು ಹೇಳುತ್ತಾಳೆ. ನಿಶ್ಚಯವಾಗಿಯೂ, ಆ ಶಾಸನವು ದೃಢವಾದ ತಳಪಾಯಗಳ ಮೇಲೆ ಕಟ್ಟಲ್ಪಟ್ಟಿರಲಿಲ್ಲ. ಆರಂಭದಿಂದಲೇ ಅದು, ಯಾವುದನ್ನು ಒಂದು “ಶೀತಲ ಯುದ್ಧ”ವೆಂದು ವರ್ಣಿಸಲಾಯಿತೊ ಅದಕ್ಕೆ ಸಹಾಯಮಾಡಿತು. ಈ ಯುದ್ಧವು ಕ್ಯಾತೊಲಿಕ್‌ ಪಾದ್ರಿ ವರ್ಗ, ಮತ್ತು ಅವರು ಯಾವುದನ್ನು “ಆರ್‌. ಪಿ. ಆರ್‌” (ಸುಧಾರಿತ ಧರ್ಮವೆಂದು ಎನ್ನಿಸಿಕೊಂಡಿರುವ) ಎಂದು ಕರೆಯುತ್ತಿದ್ದರೊ, ಅದರ ನಡುವೆ ನಡೆಯಿತು. 1598ರಲ್ಲಿ ನಾಂತೆಯ ಶಾಸನವು ಹೊರಡಿಸಲ್ಪಟ್ಟಿದ್ದಾಗಿನಿಂದ ಸುಮಾರು 1630ರ ತನಕ, ಪ್ರಾಟೆಸ್ಟಂಟರು ಮತ್ತು ಕ್ಯಾತೊಲಿಕರ ನಡುವಿನ ಸಾರ್ವಜನಿಕ ವಾಗ್ವಾದಗಳ ಮೂಲಕ ಮತ್ತು ಪಂಥಕ್ಕೆ ಸಂಬಂಧಿಸಿದ ಸಾಹಿತ್ಯಾತ್ಮಕ ಕೃತಿಗಳ ಪ್ರಕಾಶನಗಳ ಮೂಲಕ ಅದಕ್ಕೆ ವಿರೋಧವು ವ್ಯಕ್ತಪಡಿಸಲ್ಪಟ್ಟಿತು. ಆದರೆ ಅಸಹಿಷ್ಣುತೆಯ ಅನೇಕ ಮುಖಗಳಿದ್ದವು.

ಇಸವಿ 1621ರಿಂದ 1629ರ ವರೆಗೆ ಪ್ರಾಟೆಸ್ಟಂಟರ ವಿರುದ್ಧ ಹೋರಾಡಿದ ಬಳಿಕ, ನಿಗ್ರಹಕಾರಿ ಕ್ರಮಗಳ ಸರಣಿಯ ಮೂಲಕ, ಫ್ರೆಂಚ್‌ ಸರಕಾರವು ಅವರನ್ನು ಪುನಃ ಕ್ಯಾತೊಲಿಕ್‌ ಮಂದೆಯೊಳಗೆ ಬರುವಂತೆ ಒತ್ತಾಯಿಸಲು ಪ್ರಯತ್ನಿಸಿತು. ಈ ಪೀಡಿಸುವಿಕೆಯು, “ಸೂರ್ಯ ರಾಜ”ನಾದ XIVನೆಯ ಲೂಯಿಯ ಕೆಳಗೆ ಹೆಚ್ಚು ತೀಕ್ಷ್ಣವಾಯಿತು. ಅವನ ಹಿಂಸೆಯ ಕಾರ್ಯನೀತಿಯು, ನಾಂತೆಯ ಶಾಸನದ ರದ್ದುಗೊಳಿಸುವಿಕೆಗೆ ನಡಿಸಿತು.

ತೀವ್ರಕ್ರಮ

ತೀವ್ರಕ್ರಮದ ಭಾಗವಾಗಿ, ಪ್ರಾಟೆಸ್ಟಂಟ್‌ ಪೌರ ಹಕ್ಕುಗಳನ್ನು ಒಂದೊಂದಾಗಿ ತೆಗೆದುಹಾಕಲಾಯಿತು. 1657 ಮತ್ತು 1685ರ ನಡುವೆ, ಅನೇಕವೇಳೆ ಪಾದ್ರಿವರ್ಗದಿಂದ ಸೂಚಿಸಲ್ಪಟ್ಟಿರುವ ಸುಮಾರು 300 ತೀರ್ಪುಗಳು ಹೂಗನಾಟರ ವಿರುದ್ಧ ಮಾಡಲ್ಪಟ್ಟವು. ಆ ತೀರ್ಪುಗಳು ಅವರ ಜೀವಿತಗಳ ಪ್ರತಿಯೊಂದು ಅಂಶವನ್ನು ಆಕ್ರಮಿಸಿದವು. ದೃಷ್ಟಾಂತಕ್ಕಾಗಿ, ವೈದ್ಯಶಾಸ್ತ್ರ, ನ್ಯಾಯಶಾಸ್ತ್ರ ಮತ್ತು ಪ್ರಸವಶಾಸ್ತ್ರದಂತಹ ವೃತ್ತಿಗಳ ವಿಶಾಲವಾದ ಶ್ರೇಣಿಯಿಂದ ಹೂಗನಾಟರನ್ನು ನಿಷೇಧಿಸಲಾಯಿತು. ಪ್ರಸವಶಾಸ್ತ್ರದ ವಿಷಯದಲ್ಲಿ ಒಬ್ಬ ಇತಿಹಾಸಗಾರ್ತಿಯು ತರ್ಕಿಸಿದ್ದು: “ಯಾರ ಉದ್ದೇಶವು ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಉರುಳಿಸುವುದಾಗಿದೆಯೊ, ಅಂತಹ ಪಾಷಂಡಿಗೆ ಒಂದು ಜೀವವನ್ನು ಒಪ್ಪಿಸುವುದಾದರೂ ಹೇಗೆ?”

ದಬ್ಬಾಳಿಕೆಯ ಹಿಡಿತವು 1677ರಲ್ಲಿ ಹೆಚ್ಚು ಬಿಗಿಮಾಡಲ್ಪಟ್ಟಿತು. ಯಾವನೇ ಹೂಗನಾಟನು, ಒಬ್ಬ ಕ್ಯಾತೊಲಿಕನನ್ನು ಮತಾಂತರಿಸಲು ಪ್ರಯತ್ನಿಸುವ ಸಮಯದಲ್ಲಿ ಹಿಡಿಯಲ್ಪಡುವಲ್ಲಿ, ಅವನು ಒಂದು ಸಾವಿರ ಫ್ರೆಂಚ್‌ ಪೌಂಡ್‌ಗಳ ದಂಡವನ್ನು ತೆರಬೇಕಾಗುತ್ತಿತ್ತು. ವಿಪರೀತವಾದ ತೆರಿಗೆಗಳಿಂದ ಪಡೆಯಲಾದ ಸರಕಾರದ ನಿಧಿಗಳನ್ನು, ಹೂಗನಾಟರನ್ನು ಮತಾಂತರಿಸಲು ಪ್ರಭಾವಿಸಲಿಕ್ಕಾಗಿ ಉಪಯೋಗಿಸಲಾಗುತ್ತಿತ್ತು. 1675ರಲ್ಲಿ, ಕ್ಯಾತೊಲಿಕ್‌ ಪಾದ್ರಿ ವರ್ಗವು, ರಾಜನಾದ XIVನೆಯ ಲೂಯಿಗೆ 45 ಲಕ್ಷ ಫ್ರೆಂಚ್‌ ಪೌಂಡ್‌ಗಳನ್ನು ಕೊಡುತ್ತಾ ಹೇಳಿದ್ದು: “ಈಗ ನೀನು ನಿನ್ನ ಕೃತಜ್ಞತೆಯನ್ನು, ಪಾಷಂಡವಾದವನ್ನು ಸಂಪೂರ್ಣವಾಗಿ ಅಳಿಸಿಹಾಕಲಿಕ್ಕಾಗಿ ನಿನ್ನ ಅಧಿಕಾರವನ್ನು ಉಪಯೋಗಿಸುವ ಮೂಲಕ ಮುಂದುವರಿಸಿಕೊಂಡು ಹೋಗಬೇಕು.” ಮತಾಂತರಿಗಳನ್ನು “ಖರೀದಿಸುವ” ಈ ಯುಕ್ತಿಯು, ಮೂರು ವರ್ಷಗಳೊಳಗೇ, ಸುಮಾರು 10,000 ಮಂದಿಯನ್ನು ಕ್ಯಾತೊಲಿಕ್‌ ಧರ್ಮಕ್ಕೆ ಮತಾಂತರಿಸುವುದರಲ್ಲಿ ಫಲಿಸಿತು.

1663ರಲ್ಲಿ, ಪ್ರಾಟೆಸ್ಟಂಟ್‌ ಮತಕ್ಕೆ ಮತಾಂತರವಾಗುವುದನ್ನು, ಕಾನೂನುವಿರುದ್ಧವನ್ನಾಗಿ ಮಾಡಲಾಯಿತು. ಹೂಗನಾಟರು ಎಲ್ಲಿ ಜೀವಿಸಸಾಧ್ಯವಿದೆ ಎಂಬುದರ ಕುರಿತಾಗಿಯೂ ನಿರ್ಬಂಧಗಳಿದ್ದವು. ಏಳು ವರ್ಷ ಪ್ರಾಯದಲ್ಲಿ, ಮಕ್ಕಳು ತಮ್ಮ ಹೆತ್ತವರ ಇಷ್ಟಗಳಿಗೆ ವಿರುದ್ಧವಾಗಿ ಕ್ಯಾತೊಲಿಕರಾಗಸಾಧ್ಯವಿತ್ತೆಂಬ ವಿಷಯವು, ಆ ಅತಿರೇಕ ಕ್ರಮಗಳ ಒಂದು ಉದಾಹರಣೆಯಾಗಿದೆ. ಪ್ರಾಟೆಸ್ಟಂಟ್‌ ಹೆತ್ತವರು, ತಮ್ಮ ಮಕ್ಕಳು ಜೆಸ್ಯುಯಿಟ್‌ರಿಂದ ಅಥವಾ ಬೇರೆ ಕ್ಯಾತೊಲಿಕ್‌ ಬೋಧಕರಿಂದ ಪಡೆಯುತ್ತಿದ್ದ ಶಿಕ್ಷಣಕ್ಕೆ ಹಣಕಾಸನ್ನು ನೀಡಲು ಹಂಗುಳ್ಳವರಾಗಿದ್ದರು.

ಹೂಗನಾಟರನ್ನು ನಿಗ್ರಹಿಸಲು ಇನ್ನೊಂದು ಶಸ್ತ್ರವು, ಗೋಪ್ಯವಾದ ಕೊಂಪಾನ್ಯಿ ದ್ಯೂ ಸಾ ಸಾಕ್ರೆಮಾ (ಕಂಪೆನಿ ಆಫ್‌ ದ ಹೊಲಿ ಸಾಕ್ರೆಮೆಂಟ್‌) ಆಗಿತ್ತು. ಇದು ಒಂದು ಕ್ಯಾತೊಲಿಕ್‌ ಸಂಸ್ಥೆಯಾಗಿದ್ದು, ಇತಿಹಾಸಗಾರ್ತಿ ಜಾನಿನ್‌ ಗ್ಯಾರಿಸೊ ಹೇಳಿದಂತೆ, ಇಡೀ ಫ್ರಾನ್ಸ್‌ ಅನ್ನು ಆವರಿಸಿದ ಒಂದು “ವಿಸ್ತಾರವಾದ ಜಾಲ”ವಾಗಿತ್ತು. ಸಮಾಜದ ಅತಿ ಉಚ್ಚವಾದ ಕ್ಷೇತ್ರಗಳನ್ನು ಛೇದಿಸುತ್ತಾ, ಅದಕ್ಕೆ ಹಣಕಾಸು ಇಲ್ಲವೇ ಶತ್ರುಗಳ ಕುರಿತಾದ ಮಾಹಿತಿಯ ಕೊರತೆ ಇರಲಿಲ್ಲ. ಅದರ ತಂತ್ರಗಳು ಅನೇಕವಾಗಿದ್ದವೆಂದು ಗ್ಯಾರಿಸೊ ವಿವರಿಸುತ್ತಾಳೆ: “ಪ್ರಾಟೆಸ್ಟಂಟ್‌ ಸಮುದಾಯವನ್ನು ದುರ್ಬಲಗೊಳಿಸಲು ಕೊಂಪಾನ್ಯಿ, ಒತ್ತಡದಿಂದ ಹಿಡಿದು ಅಡಚಣೆಗಳ ವರೆಗೆ, ಕೈವಾಡದಿಂದ ದೂಷಣೆಯ ವರೆಗೆ, ಪ್ರತಿಯೊಂದು ಮಾಧ್ಯಮವನ್ನು ಉಪಯೋಗಿಸಿತು.” ಹಾಗಿದ್ದರೂ, ಹೆಚ್ಚಿನ ಹೂಗನಾಟರು, ಹಿಂಸೆಯ ಈ ಅವಧಿಯಲ್ಲಿ ಫ್ರಾನ್ಸ್‌ನಲ್ಲೇ ಉಳಿದರು. ಇತಿಹಾಸಗಾರ್ತಿ ಗ್ಯಾರಿಸೊ ಗಮನಿಸಿದ್ದು: “ತಮ್ಮ ಕಡೆಗಿನ ವೈರತ್ವವು ಕ್ರಮೇಣವಾಗಿ ಹೆಚ್ಚಾದಂತೆ, ಪ್ರಾಟೆಸ್ಟಂಟರು ಆ ರಾಜ್ಯವನ್ನು ಅಧಿಕ ಸಂಖ್ಯೆಯಲ್ಲಿ ಏಕೆ ಬಿಟ್ಟುಹೋಗಲಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ.” ಆದರೆ, ಸ್ವಾತಂತ್ರ್ಯಕ್ಕಾಗಿ ಪಲಾಯನವು ಕಟ್ಟಕಡೆಗೆ ಆವಶ್ಯಕವಾಯಿತು.

ತಿರುಗಿ ಆರಂಭದ ಹಂತಕ್ಕೆ

ನೈಮೆಗನ್‌ನ ಶಾಂತಿ (1678) ಮತ್ತು ರಾಟಿಸ್ಬೊನ್‌ ಶಾಂತಿಸಂಧಾನವು (1684), ರಾಜನಾದ XIVನೆಯ ಲೂಯಿಯನ್ನು ಬಾಹ್ಯ ಯುದ್ಧದಿಂದ ಮುಕ್ತಗೊಳಿಸಿತು. ಫೆಬ್ರವರಿ 1685ರಲ್ಲಿ ಇಂಗ್ಲೆಂಡಿನಲ್ಲಿ ಕಡಲ್ಗಾಲುವೆಯಾಚೆ ಒಬ್ಬ ಕ್ಯಾತೊಲಿಕನು ರಾಜನಾದನು. XIVನೆಯ ಲೂಯಿಯು, ಈ ಹೊಸ ಸನ್ನಿವೇಶದ ಪ್ರಯೋಜನವನ್ನು ಪಡೆದುಕೊಳ್ಳಬಹುದಿತ್ತು. ಅದಕ್ಕಿಂತ ಕೆಲವು ವರ್ಷಗಳ ಹಿಂದೆ, ಫ್ರಾನ್ಸ್‌ನಲ್ಲಿನ ಕ್ಯಾತೊಲಿಕ್‌ ಪಾದ್ರಿವರ್ಗವು, ಪೋಪರ ಅಧಿಕಾರವನ್ನು ನಿರ್ಬಂಧಿಸಿದ ನಾಲ್ಕು ಗ್ಯಾಲಿಕನ್‌ ಕಟ್ಟಲೆಗಳನ್ನು ಹೊರಡಿಸಿತ್ತು. ಪೋಪ್‌ XIನೆಯ ಇನೊಸೆಂಟ್‌ ಆಗ “ಫ್ರೆಂಚ್‌ ಚರ್ಚನ್ನು ಬಹುಮಟ್ಟಿಗೆ ಒಡಕನ್ನು ಉಂಟುಮಾಡುವಂಥದ್ದಾಗಿ ವೀಕ್ಷಿಸಿದರು.” ಫಲಸ್ವರೂಪವಾಗಿ, ನಾಂತೆಯ ಶಾಸನವನ್ನು ರದ್ದುಗೊಳಿಸುವ ಮೂಲಕ, XIVನೆಯ ಲೂಯಿಯು ತನ್ನ ಕಳಂಕಿತ ಕೀರ್ತಿಯನ್ನು ಅಧಿಕಗೊಳಿಸಸಾಧ್ಯವಿತ್ತು ಮತ್ತು ಪೋಪರೊಂದಿಗೆ ಸಾಮಾನ್ಯ ಸಂಬಂಧಗಳನ್ನು ಪುನಃಜೋಡಿಸಸಾಧ್ಯವಿತ್ತು.

ಪ್ರಾಟೆಸ್ಟಂಟರ ಕಡೆಗಿನ ರಾಜನ ಕಾರ್ಯನೀತಿಯು ಸುಸ್ಪಷ್ಟವಾಯಿತು. ಸೌಮ್ಯವಾದ ವಿಧಾನವು (ಮನವೊಪ್ಪಿಸುವಿಕೆ ಮತ್ತು ಶಾಸನರಚನೆ) ಕೆಲಸಮಾಡಿರಲಿಲ್ಲವೆಂಬುದು ಸ್ಪಷ್ಟ. ಇನ್ನೊಂದು ಕಡೆ, ಇತ್ತೀಚೆಗೆ ಸೈನಿಕರ ಮೂಲಕ ನಡೆಸಲ್ಪಟ್ಟ ಚಿತ್ರಹಿಂಸೆಗಳು (ಡ್ರ್ಯಾಗನೇಡ್‌ಗಳು)a ಯಶಸ್ವಿಕರವಾಗಿದ್ದವು. ಆದುದರಿಂದ XIVನೆಯ ಲೂಯಿ 1685ರಲ್ಲಿ, ನಾಂತೆಯ ಶಾಸನವನ್ನು ರದ್ದುಗೊಳಿಸುತ್ತಾ, ಫಾಂಟೇನ್‌ಬ್ಲೂ ಶಾಸನಕ್ಕೆ ಸಹಿಹಾಕಿದನು. ಈ ರದ್ದುಗೊಳಿಸುವಿಕೆಯೊಂದಿಗೆ ಜೊತೆಗೂಡಿದ್ದ ಉಗ್ರ ಹಿಂಸೆಯು ಹೂಗನಾಟರನ್ನು, ನಾಂತೆಯ ಶಾಸನದ ಜಾರಿಗೊಳಿಸುವಿಕೆಯ ಮುಂಚೆ ಅವರಿದ್ದ ಪರಿಸ್ಥಿತಿಗಿಂತಲೂ ಕೆಟ್ಟದ್ದಾದ ಪರಿಸ್ಥಿತಿಯಲ್ಲಿರಿಸಿತು. ಅವರೀಗ ಏನು ಮಾಡುವರು?

ಅಡಗಿಕೊಳ್ಳುವುದೊ, ಹೋರಾಡುವುದೊ ಅಥವಾ ಪಲಾಯನಗೈಯುವುದೊ?

ಕೆಲವು ಹೂಗನಾಟರು, ರಹಸ್ಯವಾಗಿ ಆರಾಧಿಸುವ ಆಯ್ಕೆಯನ್ನು ಮಾಡಿದರು. ಅವರ ಕೂಟದ ಸ್ಥಳಗಳು ನಾಶಗೊಳಿಸಲ್ಪಟ್ಟು, ಅವರ ಸಾರ್ವಜನಿಕ ಆರಾಧನೆಯು ನಿಷೇಧಿಸಲ್ಪಟ್ಟಿರಲಾಗಿ, ಅವರು ‘ಮರುಭೂಮಿಯ ಚರ್ಚು’ ಅಥವಾ ಭೂಗತ ಆರಾಧನೆಯ ಕಡೆಗೆ ತಿರುಗಿದರು. ಜುಲೈ 1686ರಲ್ಲಿ ಜಾರಿಗೊಳಿಸಲ್ಪಟ್ಟ ಒಂದು ನಿಯಮಕ್ಕನುಸಾರ, ಅಂತಹ ಕೂಟಗಳನ್ನು ನಡಿಸುವವರಿಗೆ ಮರಣದಂಡನೆ ವಿಧಿಸಲ್ಪಡುವ ಅಪಾಯವಿದೆಯೆಂಬ ವಾಸ್ತವಾಂಶವು ಅವರಿಗೆ ತಿಳಿದಿದ್ದರೂ ಅವರು ಹಾಗೆ ಮಾಡಿದರು. ತದನಂತರ ಪುನಃ ಹೂಗನಾಟರಾಗಲು ಸಾಧ್ಯವಿದೆ ಎಂದು ನೆನಸುತ್ತಾ, ಕೆಲವು ಹೂಗನಾಟರು ತಮ್ಮ ನಂಬಿಕೆಯನ್ನು ತೊರೆದರು. ಅಂತಹ ಮತಾಂತರಿಗಳು, ಬಾಹ್ಯತೋರಿಕೆಗಾಗಿ ಕ್ಯಾತೊಲಿಕ್‌ ಧರ್ಮವನ್ನು ಆಚರಿಸಿದರು. ತದನಂತರದ ಸಂತತಿಗಳು ಇದನ್ನೇ ಅನುಕರಿಸಲಿದ್ದವು.

ಸರಕಾರವು ಮತಾಂತರಿಸುವಿಕೆಗಳನ್ನು ಬಲಗೊಳಿಸಲು ಪ್ರಯತ್ನಿಸಿತು. ಹೊಸತಾಗಿ ಮತಾಂತರಿಗಳಾಗಿದ್ದವರು, ಉದ್ಯೋಗಗಳನ್ನು ಪಡೆಯಲಿಕ್ಕಾಗಿ, ಚರ್ಚಿನಲ್ಲಿನ ಅವರ ಹಾಜರಿಯನ್ನು ಗಮನಿಸುತ್ತಿದ್ದ ಪ್ಯಾರಿಷ್‌ ಪಾದ್ರಿಯಿಂದ ಸಹಿಹಾಕಲಾದ ತಮ್ಮ ಕ್ಯಾತೊಲಿಕತ್ವದ ಒಂದು ಪ್ರಮಾಣಪತ್ರವನ್ನು ತೋರಿಸಬೇಕಾಗಿತ್ತು. ಮಕ್ಕಳು ದೀಕ್ಷಾಸ್ನಾನ ಪಡೆಯದೆ ಇರುವಲ್ಲಿ ಮತ್ತು ಕ್ಯಾತೊಲಿಕರಾಗಿ ಬೆಳೆಸಲ್ಪಡದಿರುವಲ್ಲಿ, ಅವರನ್ನು ಅವರ ಹೆತ್ತವರಿಂದ ವಶಪಡಿಸಿಕೊಳ್ಳಸಾಧ್ಯವಿತ್ತು. ಶಾಲೆಗಳು ಕ್ಯಾತೊಲಿಕ್‌ ಶಿಕ್ಷಣವನ್ನೇ ಪ್ರವರ್ಧಿಸಬೇಕಿತ್ತು. ಪ್ರಾಟೆಸ್ಟಂಟರನ್ನು “ಗ್ರಂಥ [ಬೈಬಲ್‌]ದ ಜನರು” ಎಂದು ಕರೆಯಲಾಗುತ್ತಿತ್ತು. ಮತ್ತು ಅವರಿಗಾಗಿ ಕ್ಯಾತೊಲಿಕ್‌ ಮತಕ್ಕೆ ಪರವಾಗಿದ್ದ ಧಾರ್ಮಿಕ ಕೃತಿಗಳನ್ನು ರಚಿಸಲು ಪ್ರಯತ್ನಗಳನ್ನು ಮಾಡಲಾಯಿತು. ಸರಕಾರವು ಹತ್ತು ಲಕ್ಷಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ಮುದ್ರಿಸಿ, ಅತ್ಯಧಿಕ ಸಂಖ್ಯೆಗಳಲ್ಲಿ ಜನರು ಮತಾಂತರಗೊಂಡಿದ್ದ ಕ್ಷೇತ್ರಗಳಿಗೆ ಅವುಗಳನ್ನು ಕಳುಹಿಸಿತು. ಆ ಕ್ರಮಗಳು ಎಷ್ಟು ವಿಪರೀತವಾಗಿದ್ದವೆಂದರೆ, ಅಸ್ವಸ್ಥನಾಗಿದ್ದ ಯಾವನೇ ವ್ಯಕ್ತಿಯು, ಕ್ಯಾತೊಲಿಕ್‌ ಅಂತಿಮ ಸಂಸ್ಕಾರವನ್ನು ನಿರಾಕರಿಸಿ ಅನಂತರ ಗುಣವಾಗುವಲ್ಲಿ, ಅವನಿಗೆ ಜೀವನ ಪರ್ಯಂತ ಸೆರೆವಾಸ ಅಥವಾ ಹಡಗಿನಲ್ಲಿ ಹುಟ್ಟುಹಾಕುವ ದಂಡನೆಯನ್ನು ವಿಧಿಸಲಾಗುತ್ತಿತ್ತು. ಮತ್ತು ಅವನು ಅನಂತರ ಸತ್ತಾಗ, ಅವನ ಶವವನ್ನು ಕಸವೆಂಬಂತೆಯೊ ಎಸೆಯಲಾಗುತ್ತಿತ್ತು, ಮತ್ತು ಅವನ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗುತ್ತಿತ್ತು.

ಕೆಲವು ಹೂಗನಾಟರು ಸಶಸ್ತ್ರ ಪ್ರತಿಭಟನೆಯನ್ನು ಆರಂಭಿಸಿದರು. ತನ್ನ ಧಾರ್ಮಿಕ ಶ್ರದ್ಧೆಗಾಗಿ ಖ್ಯಾತವಾಗಿದ್ದ ಸಾವೈನ್‌ ಪ್ರದೇಶದಲ್ಲಿ, ಕ್ಯಾಮಿಸಾರ್ಡ್‌ ಎಂದು ಕರೆಯಲ್ಪಟ್ಟ ಯೋಧ ಹೂಗನಾಟರು 1702ರಲ್ಲಿ ದಂಗೆಯೆದ್ದರು. ಕ್ಯಾಮಿಸಾರ್ಡ್‌ರ ಹೊಂಚುದಾಳಿಗಳು ಮತ್ತು ರಾತ್ರಿ ಸಮಯದ ಆಕ್ರಮಣಗಳಿಗೆ ಪ್ರತಿಕ್ರಿಯಿಸುತ್ತಾ, ಸರಕಾರಿ ಪಡೆಗಳು ಹಳ್ಳಿಗಳನ್ನು ಭಸ್ಮಮಾಡಿದವು. ಆಕಸ್ಮಿಕ ಹೂಗನಾಟ್‌ ಆಕ್ರಮಣಗಳು ಸ್ವಲ್ಪ ಸಮಯದ ವರೆಗೆ ಮುಂದುವರಿದರೂ, 1710ರೊಳಗೆ ರಾಜ ಲೂಯಿಯ ಸೇನಾಬಲವು ಕ್ಯಾಮಿಸಾರ್ಡರನ್ನು ಜಜ್ಜಿಹಾಕಿತ್ತು.

ಹೂಗನಾಟರ ಇನ್ನೊಂದು ಪ್ರತಿಕ್ರಿಯೆಯು, ಫ್ರಾನ್ಸನ್ನು ಬಿಟ್ಟು ಪಲಾಯನಗೈಯುವುದಾಗಿತ್ತು. ಈ ವಲಸೆಹೋಗುವಿಕೆಯನ್ನು ಸಾಕ್ಷಾತ್ತಾದ ಡೈಆಸ್ಪರ (ಚೆದರಿಹೋಗುವಿಕೆ) ಎಂದು ಕರೆಯಲಾಗಿದೆ. ಸರಕಾರವು ಅವರ ಸ್ವತ್ತುಗಳನ್ನು ವಶಪಡಿಸಿಕೊಳ್ಳುತ್ತಾ, ಕ್ಯಾತೊಲಿಕ್‌ ಚರ್ಚು ಆ ಸಂಪತ್ತಿನಲ್ಲಿ ತಮ್ಮ ಪಾಲನ್ನು ಪಡೆದಿದ್ದರಿಂದ, ಹೆಚ್ಚಿನ ಹೂಗನಾಟರು ಬಿಟ್ಟುಹೋಗುತ್ತಿದ್ದಾಗ ನಿರ್ಗತಿಕರಾಗಿದ್ದರು. ಆದುದರಿಂದ ಪಲಾಯನಗೈಯುವುದು ಸುಲಭವಾಗಿರಲಿಲ್ಲ. ಏನು ಸಂಭವಿಸುತ್ತಿತ್ತೊ ಅದಕ್ಕೆ ಫ್ರೆಂಚ್‌ ಸರಕಾರವು ಕೂಡಲೇ ಪ್ರತಿಕ್ರಿಯಿಸುತ್ತಾ, ದೇಶದಿಂದ ಹೊರಗೆ ಹೋಗಲು ಇದ್ದಂತಹ ಮಾರ್ಗಗಳ ಮೇಲೆ ಕಣ್ಣಿಟ್ಟರು ಮತ್ತು ಹಡಗುಗಳ ಅನ್ವೇಷಣೆ ನಡಿಸಿದರು. ಕಡಲುಗಳ್ಳರು, ಫ್ರಾನ್ಸ್‌ನಿಂದ ಹೊರಡುತ್ತಿದ್ದ ಹಡಗುಗಳನ್ನು ಲೂಟಿಮಾಡಿದರು, ಯಾಕಂದರೆ ಪಲಾಯನಗೈಯುತ್ತಿದ್ದವರನ್ನು ಸೆರೆಹಿಡಿಯುವುದಕ್ಕಾಗಿ ಅವರಿಗೆ ಪ್ರೋತ್ಸಾಹ ಧನ ಸಿಗುತ್ತಿತ್ತು. ಪಲಾಯನಗೈಯುವಾಗ ಹಿಡಿಯಲ್ಪಟ್ಟ ಹೂಗನಾಟರಿಗೆ ಕಠಿನವಾದ ಶಿಕ್ಷೆಯನ್ನು ಕೊಡಲಾಗುತ್ತಿತ್ತು. ಸಮುದಾಯಗಳೊಳಗೇ ಕೆಲಸಮಾಡುತ್ತಿದ್ದ ಗೂಢಚಾರರು, ಪರಿಸ್ಥಿತಿಯನ್ನು ಇನ್ನೂ ಕೆಟ್ಟದ್ದನ್ನಾಗಿ ಮಾಡಿದರು. ಅವರು, ಪಲಾಯನಗೈಯಲು ಯೋಜಿಸುತ್ತಿದ್ದವರ ಹೆಸರುಗಳನ್ನು ಮತ್ತು ಅವರು ಹೋಗುವ ಮಾರ್ಗಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರು. ತಡೆಹಿಡಿಯಲಾಗುತ್ತಿದ್ದ ಪತ್ರಗಳು, ನಕಲುಪತ್ರಗಳು, ಮತ್ತು ಒಳಸಂಚುಗಳು ಸಾಮಾನ್ಯವಾದ ಸಂಗತಿಯಾಯಿತು.

ಆದರಾತಿಥ್ಯದ ಆಶ್ರಯ

ಫ್ರಾನ್ಸ್‌ನಿಂದ ಹೂಗನಾಟರ ಪಲಾಯನವು, ಮತ್ತು ಅತಿಥೇಯ ದೇಶಗಳಲ್ಲಿ ಅವರ ಸ್ವಾಗತವು, ರೆಫ್ಯೂಜ್‌ (ಆಶ್ರಯ) ಎಂದು ಪ್ರಸಿದ್ಧವಾಯಿತು. ಹೂಗನಾಟರು ಹಾಲೆಂಡ್‌, ಸ್ವಿಟ್ಸರ್ಲೆಂಡ್‌, ಜರ್ಮನಿ ಮತ್ತು ಇಂಗ್ಲೆಂಡ್‌ಗೆ ಪಲಾಯನಗೈದಿದ್ದರು. ತದನಂತರ ಕೆಲವರು, ಸ್ಕಾಂಡಿನೇವಿಯ, ಅಮೆರಿಕ, ಐರ್ಲೆಂಡ್‌, ವೆಸ್ಟ್‌ ಇಂಡೀಸ್‌, ದಕ್ಷಿಣ ಆಫ್ರಿಕ, ಮತ್ತು ರಷ್ಯಕ್ಕೆ ಹೋದರು.

ಹೂಗನಾಟರನ್ನು ವಲಸೆಹೋಗುವಂತೆ ಉತ್ತೇಜಿಸುತ್ತಾ, ಯೂರೋಪಿನ ಅನೇಕ ದೇಶಗಳು ಶಾಸನಗಳನ್ನು ಮಂಜೂರುಮಾಡಿದವು. ನೀಡಲ್ಪಟ್ಟ ಉತ್ತೇಜಕ ಸವಲತ್ತುಗಳಲ್ಲಿ, ಉಚಿತ ಪ್ರಜಾ ಹಕ್ಕು ಕೊಡುವಿಕೆ, ತೆರಿಗೆಗಳಿಂದ ವಿನಾಯಿತಿ, ಮತ್ತು ಒಂದು ಉದ್ಯಮ ಸಂಘದಲ್ಲಿ ಉಚಿತ ಸದಸ್ಯತನವು ಸೇರಿತ್ತು. ಇತಿಹಾಸಗಾರ್ತಿ ಎಲೀಸಬೇತ್‌ ಲಾಬ್ರುಸ್‌ಗನುಸಾರ, ಹೂಗನಾಟರು ಹೆಚ್ಚಾಗಿ “ಯುವ ಪುರುಷರಾಗಿದ್ದು . . . ಅಸಾಧಾರಣವಾದ ನೈತಿಕ ಮೌಲ್ಯವುಳ್ಳ ಸಾಹಸಶೀಲ, ಚುರುಕಾದ ಪ್ರಜೆಗಳಾಗಿದ್ದರು.” ಹೀಗೆ ಫ್ರಾನ್ಸ್‌, ತನ್ನ ಅಧಿಕಾರದ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ, ಅನೇಕ ಕಸುಬುಗಳಲ್ಲಿ ಕುಶಲರಾಗಿರುವ ಕಾರ್ಮಿಕರನ್ನು ಕಳೆದುಕೊಂಡಿತು. ಹೌದು, “ಸ್ವತ್ತುಗಳು, ಐಶ್ವರ್ಯಗಳು ಮತ್ತು ಕೌಶಲಗಳು” ವಿದೇಶಕ್ಕೆ ಹೋದವು. ಹೂಗನಾಟರಿಗೆ ಆಶ್ರಯವನ್ನು ನೀಡುವುದರಲ್ಲಿ, ಧಾರ್ಮಿಕ ಮತ್ತು ರಾಜಕೀಯ ಅಂಶಗಳೂ ಒಂದು ಪಾತ್ರವನ್ನು ವಹಿಸಿದವು. ಆದರೆ ಈ ವಲಸೆಹೋಗುವಿಕೆಯ ದೀರ್ಘಕಾಲಿಕ ಪರಿಣಾಮಗಳೇನಾಗಿದ್ದವು?

ನಾಂತೆಯ ಶಾಸನದ ರದ್ದುಗೊಳಿಸುವಿಕೆಯು ಮತ್ತು ಅದರೊಂದಿಗಿನ ಹಿಂಸೆಯು, ನಕಾರಾತ್ಮಕ ಅಂತಾರಾಷ್ಟ್ರೀಯ ಪ್ರತಿಕ್ರಿಯೆಯನ್ನು ಕೆರಳಿಸಿತು. ನೆದರ್ಲೆಂಡ್ಸ್‌ನ ದೊರೆಯಾಗಲು, ವಿಲ್ಯಮ್‌ ಆಫ್‌ ಆರೆಂಜ್‌ ಈ ಫ್ರೆಂಚ್‌ ವಿರೋಧಿ ಭಾವನೆಯ ಲಾಭ ಪಡೆಯಲು ಶಕ್ತನಾಗಿದ್ದನು. ಹೂಗನಾಟ್‌ ಅಧಿಕಾರಿಗಳ ಸಹಾಯದೊಂದಿಗೆ, ಅವನು ಕ್ಯಾತೊಲಿಕನಾದ IIನೆಯ ಜೇಮ್ಸ್‌ನನ್ನು ಸ್ಥಾನಪಲ್ಲಟಗೊಳಿಸುತ್ತಾ, ಅವನು ಗ್ರೇಟ್‌ ಬ್ರಿಟನಿನ ರಾಜನೂ ಆದನು. ಇತಿಹಾಸಕಾರ ಫಿಲಿಪ್‌ ಜುಟಾರ್‌ ವಿವರಿಸುವುದೇನೆಂದರೆ, “XIVನೆಯ ಲೂಯಿಯ ಪ್ರಾಟೆಸ್ಟಂಟ್‌ ಕಾರ್ಯನೀತಿಯು, IIನೆಯ ಜೇಮ್ಸ್‌ನ ಅಧಿಕಾರಚ್ಯುತಿ [ಮತ್ತು] ಆಗ್ಸ್‌ಬರ್ಗ್‌ ಒಕ್ಕೂಟದ ರಚನೆಯ ಪ್ರಧಾನ ಕಾರಣಗಳಲ್ಲಿ ಒಂದಾಗಿತ್ತು. . . . [ಈ] ಘಟನೆಗಳು, ಫ್ರೆಂಚ್‌ ಅಧಿಪತ್ಯವನ್ನು ಇಂಗ್ಲಿಷ್‌ ಅಧಿಪತ್ಯವು ಸ್ಥಾನಪಲ್ಲಟಗೊಳಿಸಲು ನಡಿಸುತ್ತಾ, ಯೂರೋಪಿನ ಇತಿಹಾಸದಲ್ಲಿ ಒಂದು ಸಂಧಿಕಾಲವನ್ನು ಗುರುತಿಸಿದವು.”

ಹೂಗನಾಟರು ಯೂರೋಪಿನಲ್ಲಿ ಒಂದು ಪ್ರಾಮುಖ್ಯ ಸಾಂಸ್ಕೃತಿಕ ಪಾತ್ರವನ್ನು ವಹಿಸಿದರು. ತಾವು ಹೊಸತಾಗಿ ಕಂಡುಕೊಂಡ ಸ್ವಾತಂತ್ರ್ಯವನ್ನು, ಜ್ಞಾನೋದಯದ (ಎನ್‌ಲೈಟನ್‌ಮೆಂಟ್‌) ತತ್ವಜ್ಞಾನವನ್ನು ಮತ್ತು ಸಹಿಷ್ಣುತೆಯ ವಿಚಾರಗಳನ್ನು ರೂಪಿಸಲು ಸಹಾಯಮಾಡಿದ ಸಾಹಿತ್ಯವನ್ನು ರಚಿಸಲು ಅವರು ಉಪಯೋಗಿಸಿದರು. ಉದಾಹರಣೆಗಾಗಿ ಒಬ್ಬ ಫ್ರೆಂಚ್‌ ಪ್ರಾಟೆಸ್ಟಂಟನು, ಇಂಗ್ಲಿಷ್‌ ತತ್ವಜ್ಞಾನಿಯಾದ ಜಾನ್‌ ಲಾಕ್‌ನ ಕೃತಿಗಳನ್ನು ಭಾಷಾಂತರಿಸುತ್ತಾ, ಮಾನವ ಹಕ್ಕುಗಳ ವಿಚಾರಗಳನ್ನು ಪ್ರಸಾರಮಾಡಿದನು. ಇತರ ಪ್ರಾಟೆಸ್ಟಂಟ್‌ ಬರಹಗಾರರು, ಮನಸ್ಸಾಕ್ಷಿಯ ಸ್ವಾತಂತ್ರ್ಯದ ಮಹತ್ವವನ್ನು ಒತ್ತಿಹೇಳಿದರು. ಅಧಿಪತಿಗಳಿಗೆ ಯಾವಾಗಲೂ ವಿಧೇಯರಾಗಿರುವ ಅಗತ್ಯವಿಲ್ಲ ಮತ್ತು ತಮ್ಮೊಂದಿಗೆ ಹಾಗೂ ಜನರ ನಡುವೆ ಇರುವ ಕರಾರನ್ನು ಅಧಿಪತಿಗಳು ಮುರಿಯುವಲ್ಲಿ, ಅವರಿಗೆ ವಿಧೇಯರಾಗುವುದನ್ನು ಅಲಕ್ಷಿಸಸಾಧ್ಯವಿದೆಯೆಂಬ ವಿಚಾರವು ವಿಕಾಸಗೊಂಡಿತು. ಹೀಗೆ, ಇತಿಹಾಸಕಾರ ಚಾರ್ಲ್ಸ್‌ ರೀಡ್‌ ವಿವರಿಸುವಂತೆ, ನಾಂತೆಯ ಶಾಸನದ ರದ್ದುಗೊಳಿಸುವಿಕೆಯು, “ಫ್ರೆಂಚ್‌ ಕ್ರಾಂತಿಯ ಸುವ್ಯಕ್ತ ಕಾರಣಾಂಶಗಳಲ್ಲಿ ಒಂದಾಗಿತ್ತು.”

ಪಾಠಗಳನ್ನು ಕಲಿಯಲಾಯಿತೊ?

ಹಿಂಸೆಯ ವಿರುದ್ಧಪರಿಣಾಮಗಳು ಮತ್ತು ರಾಜ್ಯವು ಇಷ್ಟೊಂದು ಅಮೂಲ್ಯ ಜನರನ್ನು ಕಳೆದುಕೊಂಡದ್ದರಿಂದಾಗಿ, ಮಿಲಿಟರಿ ಸಲಹೆಗಾರನಾಗಿದ್ದ ಮಾರ್ಕ್ವಿಸ್‌ ದೆ ವೌಬಾನ್‌, ರಾಜನಾದ XIVನೆಯ ಲೂಯಿಗೆ ನಾಂತೆಯ ಶಾಸನವನ್ನು ಪುನಸ್ಸ್ಥಾಪಿಸಲು ಪ್ರೇರಿಸುತ್ತಾ ಹೇಳಿದ್ದು: “ಹೃದಯಗಳ ಮತಾಂತರವು ಕೇವಲ ದೇವರಿಗೆ ಸೇರಿರುವ ವಿಷಯವಾಗಿದೆ.” ಹಾಗಾದರೆ ಫ್ರೆಂಚ್‌ ಸರಕಾರವು ಪಾಠವನ್ನು ಕಲಿತು, ತನ್ನ ನಿರ್ಣಯವನ್ನು ಹಿಂದೆ ತೆಗೆದುಕೊಳ್ಳಲಿಲ್ಲವೇಕೆ? ನಿಶ್ಚಯವಾಗಿಯೂ, ನೆರವು ನೀಡಿದ ಒಂದು ಅಂಶವು ಏನೆಂದರೆ, ಶಾಸನವನ್ನು ಪುನಸ್ಸ್ಥಾಪಿಸುವುದು ರಾಜ್ಯವನ್ನು ದುರ್ಬಲಗೊಳಿಸುವುದು ಎಂದು ರಾಜನು ಭಯಪಟ್ಟನು. ಇನ್ನೂ ಹೆಚ್ಚಾಗಿ, ಅದು ಕ್ಯಾತೊಲಿಕ್‌ ಪುನರ್‌ಸುಧಾರಣೆ ಮತ್ತು 17ನೆಯ ಶತಮಾನದ ಧಾರ್ಮಿಕ ಅಸಹಿಷ್ಣುತೆಗೆ ಸಹಾಯಮಾಡಲು ಯಥೋಚಿತವಾಗಿತ್ತು.

ರದ್ದುಗೊಳಿಸುವಿಕೆಯನ್ನು ಸುತ್ತುವರಿದ ಘಟನೆಗಳು, “ಒಂದು ಸಮಾಜವು ಎಷ್ಟೊಂದು ಮತಗಳನ್ನು ಅನುಮತಿಸಿ, ಸಹಿಸಬಲ್ಲದು?” ಎಂದು ಕೆಲವರು ಕೇಳಿಕೊಳ್ಳುವಂತೆ ಮಾಡಿತು. ಇತಿಹಾಸಗಾರರು ಗಮನಿಸಿದಂತೆ, “ಅಧಿಕಾರದ ಸಂಯೋಜನೆಗಳು ಮತ್ತು ಅವುಗಳ ಅಪಪ್ರಯೋಗಗಳ” ಕುರಿತಾಗಿ ಯೋಚಿಸದೆ ಹೂಗನಾಟರ ಕಥೆಯನ್ನು ಪರಿಗಣಿಸಲು ಸಾಧ್ಯವಿಲ್ಲ. ಅಧಿಕವಾಗಿ ಬಹುಜಾತೀಯ ಮತ್ತು ಧಾರ್ಮಿಕ ವೈವಿಧ್ಯತೆಯುಳ್ಳ ಸಮಾಜಗಳಲ್ಲಿ ಇಂದು, ಸ್ವಾತಂತ್ರ್ಯಕ್ಕಾಗಿ ಹೂಗನಾಟರ ಪಲಾಯನವು, ಜನರ ಹಿತಚಿಂತನೆಗಿಂತಲೂ ಚರ್ಚ್‌ನಿಂದ ಪ್ರೇರಿತವಾದ ರಾಜಕೀಯವು ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆದುಕೊಳ್ಳುವಾಗ ಏನು ಸಂಭವಿಸುತ್ತದೊ ಅದರ ಒಂದು ತೀಕ್ಷ್ಣವಾದ ಮರುಜ್ಞಾಪನವಾಗಿದೆ.

[ಪಾದಟಿಪ್ಪಣಿ]

a ಪುಟ 28ರಲ್ಲಿರುವ ರೇಖಾಚೌಕವನ್ನು ನೋಡಿರಿ.

[ಪುಟ 28 ರಲ್ಲಿರುವ ಚೌಕ]

ಡ್ರ್ಯಾಗನೇಡ್ಸ್‌

ಭಯಹುಟ್ಟಿಸುವ ಮೂಲಕ ಮತಾಂತರಿಸುವಿಕೆ

ಕೆಲವರು ಡ್ರ್ಯಾಗೂನರನ್ನು “ಉತ್ಕೃಷ್ಟ ಮಿಷನೆರಿಗಳು” ಎಂದು ಪರಿಗಣಿಸಿದರು. ಆದರೆ ಹೂಗನಾಟರ ಮಧ್ಯೆ, ಅವರು ಭೀತಿಯನ್ನು ಹುಟ್ಟಿಸಿದರು, ಮತ್ತು ಕೆಲವು ಸಂದರ್ಭಗಳಲ್ಲಿ ಅವರ ಆಗಮನದ ಕುರಿತಾಗಿ ಕೇಳಿದ ಕೂಡಲೇ, ಇಡೀ ಹಳ್ಳಿಗಳು ಕ್ಯಾತೊಲಿಕ್‌ ಧರ್ಮಕ್ಕೆ ಮತಾಂತರವಾಗುತ್ತಿದ್ದವು. ಆದರೆ ಈ ಡ್ರ್ಯಾಗೂನರು ಯಾರಾಗಿದ್ದರು?

ಡ್ರ್ಯಾಗೂನರು ಸಂಪೂರ್ಣವಾಗಿ ಶಸ್ತ್ರಸಜ್ಜಿತರಾಗಿದ್ದ ಸೈನಿಕರಾಗಿದ್ದರು. ಹೂಗನಾಟರಲ್ಲಿ ಭಯಹುಟ್ಟಿಸುವ ಉದ್ದೇಶದಿಂದಲೇ ಅವರ ಮನೆಗಳಲ್ಲಿ ಅವರು ತಂಗುತ್ತಿದ್ದರು. ಈ ರೀತಿಯಲ್ಲಿ ಡ್ರ್ಯಾಗೂನರ ಉಪಯೋಗವು, ಡ್ರ್ಯಾಗನೇಡ್‌ಗಳೆಂದು ಪ್ರಸಿದ್ಧವಾಗಿದ್ದವು. ಕುಟುಂಬಗಳ ಮೇಲೆ ಹೇರಲ್ಪಟ್ಟ ಹೊರೆಯನ್ನು ಹೆಚ್ಚಿಸಲು, ಒಂದು ಮನೆಗೆ ಕಳುಹಿಸಲ್ಪಟ್ಟಿರುವ ಸೈನಿಕರ ಸಂಖ್ಯೆಯು, ಕುಟುಂಬದ ಜೀವನೋಪಾಯಕ್ಕಿಂತಲೂ ಹೆಚ್ಚಾಗಿರುತ್ತಿತ್ತು. ಕುಟುಂಬಗಳನ್ನು ಪೀಡಿಸಲು, ಅವರು ನಿದ್ರಿಸದಂತೆ ಮಾಡಲು, ಮತ್ತು ಸ್ವತ್ತುಗಳನ್ನು ನಷ್ಟಗೊಳಿಸಲು ಡ್ರ್ಯಾಗೂನರಿಗೆ ಅಧಿಕಾರವನ್ನು ಕೊಡಲಾಗಿತ್ತು. ಮನೆಯ ನಿವಾಸಿಗಳು ಪ್ರಾಟೆಸ್ಟಂಟ್‌ ನಂಬಿಕೆಯನ್ನು ತೊರೆಯುವಲ್ಲಿ ಮಾತ್ರ, ಡ್ರ್ಯಾಗೂನರು ಹೊರಟುಹೋಗುತ್ತಿದ್ದರು.

ಅನೇಕ ಹೂಗನಾಟರು ವಾಸಿಸುತ್ತಿದ್ದ ಒಂದು ಕ್ಷೇತ್ರವಾದ, ಪಶ್ಚಿಮ ಫ್ರಾನ್ಸ್‌ನ ಪ್ವಾಟೂವಿನಲ್ಲಿ, 1681ರಲ್ಲಿ ಮತಾಂತರಗೊಳಿಸಲಿಕ್ಕಾಗಿ ಡ್ರ್ಯಾಗನೇಡ್‌ಗಳನ್ನು ಉಪಯೋಗಿಸಲಾಯಿತು. ಕೆಲವೇ ತಿಂಗಳುಗಳಲ್ಲಿ, 30,000ರಿಂದ 35,000 ಜನರು ಮತಾಂತರಗೊಂಡರು. 1685ರಲ್ಲಿ ಇನ್ನಿತರ ಹೂಗನಾಟ್‌ ಪ್ರದೇಶಗಳಲ್ಲಿ ಅದೇ ಮಾಧ್ಯಮವನ್ನು ಉಪಯೋಗಿಸಲಾಯಿತು. ಕೆಲವೇ ತಿಂಗಳುಗಳೊಳಗೆ, 3,00,000ರಿಂದ 4,00,000 ಪರಿತ್ಯಾಗಗಳನ್ನು ಪಡೆಯಲಾಯಿತು. ಇತಿಹಾಸಕಾರ ಸಾನ್‌ ಕಾನ್ಯಾರ್‌ರವರಿಗನುಸಾರ, ಹೂಗನಾಟರನ್ನು ಮತಾಂತರಿಸುವುದರಲ್ಲಿ ಡ್ರ್ಯಾಗನೇಡ್‌ಗಳ ಯಶಸ್ಸು, “[ಸಹಿಷ್ಣುತೆಯ ನಾಂತೆ ಶಾಸನದ] ರದ್ದುಗೊಳಿಸುವಿಕೆಯನ್ನು ಅನಿವಾರ್ಯಗೊಳಿಸಿತು, ಯಾಕಂದರೆ ಅದು ಈಗ ಸಾಧ್ಯವಿರುವಂತೆ ತೋರಿತು.”

[ಕೃಪೆ]

© Cliché Bibliothèque Nationale de France, Paris

[ಪುಟ 25 ರಲ್ಲಿರುವ ಚಿತ್ರ]

1689ರ ಈ ಘೋಷಣೆಯು, ಧಾರ್ಮಿಕ ದಬ್ಬಾಳಿಕೆಯಿಂದ ಪರಿಹಾರವನ್ನು ಹುಡುಕುತ್ತಿದ್ದ ಫ್ರೆಂಚ್‌ ಪ್ರಾಟೆಸ್ಟಂಟರಿಗೆ ಆಶ್ರಯವನ್ನು ನೀಡಿತು

[ಕೃಪೆ]

By permission of The Huguenot Library, Huguenot Society of Great Britain and Ireland, London

[ಪುಟ 26 ರಲ್ಲಿರುವ ಚಿತ್ರ]

ನಾಂತೆಯ ಶಾಸನದ ರದ್ದುಗೊಳಿಸುವಿಕೆ, 1685 (ಆ ರದ್ದುಗೊಳಿಸುವಿಕೆಯ ಪ್ರಥಮ ಪುಟವನ್ನು ತೋರಿಸಲಾಗಿದೆ)

[ಕೃಪೆ]

Documents conservés au Centre Historique des Archives nationales à Paris

[ಪುಟ 26 ರಲ್ಲಿರುವ ಚಿತ್ರ]

ಅನೇಕ ಪ್ರಾಟೆಸ್ಟಂಟ್‌ ಆಲಯಗಳನ್ನು ನಾಶಗೊಳಿಸಲಾಯಿತು

[ಕೃಪೆ]

© Cliché Bibliothèque Nationale de France, Paris

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ