ಬೆದರಿಸುವ ಜ್ವಾಲಾಮುಖಿಯ ಮರೆಯಲ್ಲಿ ವಾಸಿಸುವುದು ಮತ್ತು ಸಾರುವುದು
“ಅದೊಂದು ದಿಗಿಲುಗೊಳಿಸುವ ಅನುಭವವಾಗಿದೆ. ಅದು ಬೈಬಲು ಮಾತಾಡುವಂತಹ ಲೋಕದ ಅಂತ್ಯದ ಹಾಗೆ ಇರಸಾಧ್ಯವಿದೆ. ಪ್ರತಿ ಗಳಿಗೆಯೂ ನಾವು ಎಚ್ಚರವಾಗಿದ್ದು, ಯೆಹೋವ ದೇವರ ಮುಂದೆ ಯೋಗ್ಯ ನಿಲುವಿನಲ್ಲಿರಬೇಕು.” ಮೆಕ್ಸಿಕೊದಲ್ಲಿ ಪೋಪೋ ಎಂಬುದಾಗಿ ಜನಪ್ರಿಯವಾಗಿ ಕರೆಯಲ್ಪಡುವ ಪೋಪಕಾಟಪ್ಲೆಟ್ ಜ್ವಾಲಾಮುಖಿಯ ಸಮೀಪದಲ್ಲೇ ಜೀವಿಸುತ್ತಿರುವ ಬಿಕ್ಟರ್ ಎಂಬ ಒಬ್ಬ ಯೆಹೋವನ ಸಾಕ್ಷಿಯು, ತನ್ನ ಅನುಭವವನ್ನು ಹೇಳುತ್ತಾ ಆ ಮಾತುಗಳನ್ನಾಡಿದನು.
ಈ ಗುಡುಗುಟ್ಟುತ್ತಿರುವ ಜ್ವಾಲಾಮುಖಿಯು, 1994ರಂದಿನಿಂದ ಅಂತಾರಾಷ್ಟ್ರೀಯ ಸುದ್ದಿಯಲ್ಲಿದೆ.a ಆ ಕುಳಿಯ 30 ಕಿಲೊಮೀಟರ್ ವೃತ್ತಕ್ಷೇತ್ರದೊಳಗಿರುವ ಎಲ್ಲವೂ, ಅತಿ ಅಪಾಯದ ವಲಯದಲ್ಲಿದೆಯೆಂದು ಅಧಿಕಾರಿಗಳು ತೀರ್ಮಾನಿಸಿದರು. ಜ್ವಾಲಾಮುಖಿಯ ದಕ್ಷಿಣಭಾಗವು ವಿಶೇಷವಾಗಿ ಅಪಾಯಕಾರಿಯಾಗಿದೆ. ಏಕೆಂದರೆ, ಕುಳಿಯು ಆ ದಿಕ್ಕಿನಲ್ಲಿ ವಾಲಿದೆ ಮತ್ತು ಕುಳಿಯಿಂದ ಶಿಲಾರಸ ಮತ್ತು ಮಣ್ಣು ಸ್ರವಿಸಸಾಧ್ಯವಿರುವ ಹಲವಾರು ಆಳವಾದ ಕಮರಿಗಳಿವೆ.
ಜ್ವಾಲಾಮುಖಿಯು ದೊಡ್ಡದಾಗಿ ಸ್ಫೋಟಿಸಿದ್ದಾದರೆ, ಮೆಕ್ಸಿಕೊ ನಗರಕ್ಕೆ ಏನು ಸಂಭವಿಸುವುದೆಂದು ಅನೇಕರು ಕುತೂಹಲಪಡುವುದು ಸ್ವಾಭಾವಿಕವೇ ಸರಿ. ಆ ನಗರವು ಗಂಡಾಂತರದಲ್ಲಿದೆಯೊ? ಮತ್ತು ಮರೇಲಸ್ ರಾಜ್ಯದಲ್ಲಿನ ಆ ಎಲ್ಲ ಜನರೂ ಜ್ವಾಲಾಮುಖಿಯ ದಕ್ಷಿಣಭಾಗದಲ್ಲಿದ್ದಾರೆ. ಆ ಕ್ಷೇತ್ರದಲ್ಲಿ ವಾಸಿಸುತ್ತಿರುವವರೆಲ್ಲರು ಅಪಾಯದಲ್ಲಿದ್ದಾರೊ? ಮತ್ತು ನಾಳೆ ಏನು ಸಂಭವಿಸುವುದೆಂದು ತಿಳಿಯದೆ, ಜ್ವಾಲಾಮುಖಿಯ ಮರೆಯಲ್ಲಿ ಜೀವಿಸುವುದು ಯಾವ ಅರ್ಥದಲ್ಲಿರುತ್ತದೆ?
ಜ್ವಾಲಾಮುಖಿಯ ಬೆದರಿಕೆ
ಮೆಕ್ಸಿಕೊ ನಗರದ ಮಧ್ಯಭಾಗವು ಪೋಪಕಾಟಪ್ಲೆಟ್ ಜ್ವಾಲಾಮುಖಿಯ ವಾಯವ್ಯ ದಿಕ್ಕಿಗೆ ಸುಮಾರು 70 ಕಿಲೊಮೀಟರುಗಳ ದೂರದಲ್ಲಿದೆಯಾದರೂ, ಕೆಲವು ಉಪನಗರಗಳು 40 ಕಿಲೊಮೀಟರುಗಳಷ್ಟು ಸಮೀಪದಲ್ಲಿವೆ. ಕಾನೂನಿನ ಪ್ರಕಾರ, ಎರಡು ಕೋಟಿ ಜನಸಂಖ್ಯೆಯಿರುವ ಆ ಇಡೀ ರಾಜಧಾನಿ ಕ್ಷೇತ್ರವು, ಅಪಾಯ ವಲಯದ ಹೊರಗಿದೆ. ಹಾಗಿದ್ದರೂ, ಗಾಳಿಯ ದಿಕ್ಕಿನ ಮೇಲೆ ಅವಲಂಬಿಸುತ್ತಾ, ಜ್ವಾಲಾಮುಖಿಯಿಂದ ದೊಡ್ಡ ಪ್ರಮಾಣದಲ್ಲಿ ಬೂದಿಯು ಹೊರಸೂಸಲ್ಪಡುವುದಾದರೆ, ಈ ಕ್ಷೇತ್ರವು ಬಾಧಿಸಲ್ಪಡಸಾಧ್ಯವಿದೆ.
ಜ್ವಾಲಾಮುಖಿಯಿಂದ ಹೊರಸೂಸಲ್ಪಡುವ ಬೂದಿಯ ಪರಿಣಾಮಗಳು, ಸಾಮಾನ್ಯವಾಗಿ ಜ್ವಾಲಾಮುಖಿಯ ಪೂರ್ವ ದಿಕ್ಕಿನ ಕಡೆಯಲ್ಲಿ ಹೆಚ್ಚು ತೀವ್ರವಾಗಿರುತ್ತವೆ. ಈ ಕ್ಷೇತ್ರವು ಪ್ಯೂಬ್ಲಾ ನಗರವನ್ನು ಮತ್ತು ಹಲವಾರು ಚಿಕ್ಕಪುಟ್ಟ ನಗರಗಳು ಹಾಗೂ ಪಟ್ಟಣಗಳನ್ನು ಒಳಗೊಂಡಿದ್ದು, ಈ ಅತಿ ಅಪಾಯದ ಕ್ಷೇತ್ರದೊಳಗೆ ಸುಮಾರು 2,00,000 ಜನರು ಜೀವಿಸುತ್ತಿದ್ದಾರೆ. ಆದಿತ್ಯವಾರ, ಮೇ 11, 1997ರಂದು, ಜ್ವಾಲಾಮುಖಿಯು ಟನ್ನುಗಟ್ಟಲೆ ಬೂದಿಯನ್ನು ವಾತಾವರಣದೊಳಗೆ ಹೊರಚೆಲ್ಲಿ, ಅದನ್ನು ಈ ಕ್ಷೇತ್ರದ ಎಲ್ಲೆಡೆಯೂ ಚೆದರಿಸಿತು. ಇದು ಪೂರ್ವ ದಿಕ್ಕಿನಲ್ಲಿ, 300 ಕಿಲೊಮೀಟರುಗಳಿಗಿಂತಲೂ ಹೆಚ್ಚು ದೂರವಿರುವ ವೆರಾಕ್ರೂಸ್ ರಾಜ್ಯವನ್ನೂ ತಲಪಿತು. ಜ್ವಾಲಾಮುಖಿಯ ದಕ್ಷಿಣ ಭಾಗದಲ್ಲಿರುವ ಮರೇಲಸ್ ರಾಜ್ಯದಲ್ಲಿ, ಸುಮಾರು 40,000ದಷ್ಟು ಒಟ್ಟು ಜನಸಂಖ್ಯೆಯಿರುವ ಹಲವಾರು ನಗರಗಳು ಮತ್ತು ಊರುಗಳಿವೆ. ಇವು ಸಹ ಗಂಭೀರವಾದ ಅಪಾಯದಲ್ಲಿರಸಾಧ್ಯವಿದೆ.
ಈ ಎಲ್ಲದರ ಮಧ್ಯೆ, ಯೆಹೋವನ ಸಾಕ್ಷಿಗಳು ವಾಸಿಸುತ್ತಾರೆ ಮತ್ತು ಕೆಲಸಮಾಡುತ್ತಾರೆ. ಮೆಕ್ಸಿಕೊ ನಗರದಲ್ಲಿ, ಸುಮಾರು 1,700 ಸಭೆಗಳಲ್ಲಿ 90,000ಕ್ಕಿಂತಲೂ ಹೆಚ್ಚಿನ ಯೆಹೋವನ ಸಾಕ್ಷಿಗಳಿದ್ದಾರೆ. ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸು, ಮೆಕ್ಸಿಕೊ ನಗರದ ಹೊರವಲಯದಲ್ಲಿ, ಈಶಾನ್ಯ ದಿಕ್ಕಿಗೆ, ಜ್ವಾಲಾಮುಖಿಯಿಂದ ಸುಮಾರು 100 ಕಿಲೊಮೀಟರುಗಳ ಕ್ಷೇತ್ರದೊಳಗಿದೆ. ಈ ಬ್ರಾಂಚ್ನಲ್ಲಿ 800ಕ್ಕಿಂತಲೂ ಹೆಚ್ಚಿನ ಸ್ವಯಂಸೇವಕರು ಸೇವೆಸಲ್ಲಿಸುತ್ತಾ ಇದ್ದಾರೆ. ಅದಲ್ಲದೆ, ಬೃಹತ್ ಪ್ರಮಾಣದ ನಿರ್ಮಾಣ ಯೋಜನೆಯಲ್ಲಿ ಸುಮಾರು 500 ಸ್ವಯಂಸೇವಕರು ಕಾರ್ಯಸಲ್ಲಿಸುತ್ತಿದ್ದಾರೆ. ಅವರೆಲ್ಲರು ಗಂಡಾಂತರ ವಲಯದ ಹೊರಗಿದ್ದಾರೆ.
ಮರೇಲಸ್ ರಾಜ್ಯದಲ್ಲಿ, ಯೆಹೋವನ ಸಾಕ್ಷಿಗಳ ಸುಮಾರು 50 ಸಭೆಗಳಿದ್ದು, ಅವುಗಳಲ್ಲಿ 2,000ಕ್ಕಿಂತಲೂ ಹೆಚ್ಚಿನ ರಾಜ್ಯ ಪ್ರಚಾರಕರಿದ್ದಾರೆ. ಟೆಟೆಲಾ ಡೆಲ್ ಬಾಲ್ಕಾನ್ ಮತ್ತು ವೇಯಾಪಾನ್ನಲ್ಲಿರುವ ಕೆಲವು ಸಭೆಗಳು, ಕುಳಿಯಿಂದ ಕೇವಲ 20 ಕಿಲೊಮೀಟರುಗಳಷ್ಟು ಹತ್ತಿರದಲ್ಲಿವೆ. ಇದಕ್ಕೆ ಕೂಡಿಸಿ, ಪೂರ್ವದಲ್ಲಿರುವ ಪ್ಯೂಬ್ಲಾ ರಾಜ್ಯದಲ್ಲಿ, ಸುಮಾರು 600 ಪ್ರಚಾರಕರಿರುವ ಸಭೆಗಳಿದ್ದು, ಅವು ಜ್ವಾಲಾಮುಖಿಯಿಂದ 20ರಿಂದ 30 ಕಿಲೊಮೀಟರುಗಳ ಕ್ಷೇತ್ರದೊಳಗಿವೆ. ಇವರಾದರೊ ನಿಜವಾಗಿ ಗಂಭೀರವಾದ ಅಪಾಯದಲ್ಲಿರಸಾಧ್ಯವಿದೆ.
ಯೆಹೋವನ ಸಾಕ್ಷಿಗಳು ಸಕ್ರಿಯರಾಗಿ ಉಳಿಯುತ್ತಾರೆ
ಸತತವಾದ ಬೆದರಿಕೆಯ ಎದುರಿನಲ್ಲೂ, ಈ ಕ್ಷೇತ್ರದಲ್ಲಿ ಯೆಹೋವನ ಸಾಕ್ಷಿಗಳು ತಮ್ಮ ಸಾರುವ ಕಾರ್ಯವನ್ನು ನಿಲ್ಲಿಸಿರುವುದಿಲ್ಲ. ಅವರು ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುತ್ತಾರೆ. ಇದು ಅವರಿಗೆ ಇಂತಹ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಏಕತೆಯ ಪ್ರಜ್ಞೆ ಮತ್ತು ಭರವಸೆಯನ್ನು ಕೊಡುತ್ತದೆ. (ಇಬ್ರಿಯ 10:24, 25) ಆ ಸಭೆಗಳಲ್ಲೊಂದರ ವರದಿಯು ಹೇಳುವದು: “ರಾಜ್ಯ ಸುವಾರ್ತೆಯ ಕಡೆಗೆ ಜನರಿಗಿರುವ ಮನೋಭಾವದಲ್ಲಿ ಎದ್ದುಕಾಣುವ ಬದಲಾವಣೆಯೊಂದು ಉಂಟಾಗಿದೆ. ದೃಷ್ಟಾಂತಕ್ಕೆ, ಒಂದು ಚಿಕ್ಕ ಹಳ್ಳಿಯಲ್ಲಿ ಇತ್ತೀಚೆಗೆ 18 ಜನರು ಮನೆ ಬೈಬಲ್ ಅಧ್ಯಯನಗಳನ್ನು ಸ್ವೀಕರಿಸಿದ್ದಾರೆ.”
ಜ್ವಾಲಾಮುಖಿಯಿಂದ 20 ಕಿಲೊಮೀಟರುಗಳ ಅಂತರದಲ್ಲಿರುವ ಮತ್ತೊಂದು ಸಭೆಯು ವರದಿಸುವುದು: “ಬೆಳವಣಿಗೆಯು ಗಮನಾರ್ಹವಾದದ್ದಾಗಿದೆ. ಈ ಸಭೆಯು 1996ರ ನವೆಂಬರ್ ತಿಂಗಳಿನಲ್ಲಿ ಸ್ಥಾಪಿಸಲ್ಪಟ್ಟಿತು. ಮುಂದಿನ ಆರು ತಿಂಗಳುಗಳಲ್ಲಿ, 10 ಜನರು ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸಲು ಅರ್ಹರಾದರು. ಕೆಲವು ಪ್ರಚಾರಕರು ಕುಳಿಯಿಂದ ಕೇವಲ 20 ಕಿಲೊಮೀಟರುಗಳ ಅಂತರದಲ್ಲಿ ವಾಸಿಸುತ್ತಾರೆ. ಅಲ್ಲಿ ಕ್ರೈಸ್ತ ಕೂಟಗಳು ನಡೆಸಲ್ಪಡುತ್ತವೆ ಮತ್ತು ಸುಮಾರು 40 ಜನರು ಹಾಜರಾಗುತ್ತಾರೆ.”
ಜ್ವಾಲಾಮುಖಿಯಿಂದ ಕೇವಲ 25 ಕಿಲೊಮೀಟರುಗಳ ಅಂತರದಲ್ಲಿರುವ, ಪ್ಯೂಬ್ಲಾದ ಸಾನ್ ಆಗಾಸ್ಟೀನ್ ಈಕ್ಸ್ಟಾವೀಕ್ಸ್ಟ್ಲಾದಲ್ಲಿ ಜೀವಿಸುವ ಮ್ಯಾಗ್ಡಾಲೀನಾ ಎಂಬ ಸಹೋದರಿಯು, ಬೈಬಲ್ ಅಧ್ಯಯನಗಳನ್ನು ನಡೆಸುತ್ತಾ ಬಹಳ ಸಕ್ರಿಯವಾಗಿದ್ದಾಳೆ. ಗುರುತರವಾದ ಒಂದು ಸ್ಫೋಟನದ ತರುವಾಯ ಏನು ಸಂಭವಿಸಿತೆಂಬುದನ್ನು ಅವಳು ಹೇಳುತ್ತಾಳೆ.
“ನಮ್ಮ ಮನೆಗಳನ್ನು ಬಿಟ್ಟುಹೋಗಬೇಕೆಂದು ನಮಗೆ ತಿಳಿಸಲಾಯಿತು, ಮತ್ತು ನಾವು ಬೂದಿಯ ಮಳೆಗರೆಯುತ್ತಿದ್ದಾಗ ಮನೆಗಳನ್ನು ಬಿಟ್ಟುಹೋದೆವು. ಆ ತುರ್ತು ಪರಿಸ್ಥಿತಿಯಲ್ಲೂ, ನಾನು ಯಾರೊಂದಿಗೆ ಬೈಬಲ್ ಅಧ್ಯಯನವನ್ನು ನಡೆಸುತ್ತಿದ್ದೆನೊ, ಆ ಡೊರಾಡೊ ಕುಟುಂಬದ ಕುರಿತು ಚಿಂತಿಸಿದೆ. ಕೆಲವು ಸಾಕ್ಷಿಗಳು ಮತ್ತು ನಾನು, ಡೊರಾಡೊ ಅವರ ಮನೆಗೆ ಹೋಗಿ, ಸುರಕ್ಷಿತವಾದ ಸ್ಥಳಕ್ಕೆ ಸ್ಥಳಾಂತರಿಸಲು ಅವರಿಗೆ ಸಹಾಯ ಮಾಡಿದೆವು. ಹತ್ತಿರದಲ್ಲಿದ್ದ ಪ್ಯೂಬ್ಲಾ ನಗರದಲ್ಲಿ, ಯೆಹೋವನ ಸಾಕ್ಷಿಗಳ ಪರಿಹಾರ ಸಮಿತಿಯು ಈಗಾಗಲೇ ತನ್ನ ಕಾರ್ಯವನ್ನು ಆರಂಭಿಸಿತ್ತು. ನಾವೆಲ್ಲರು ಅಲ್ಲಿ ಉಪಚರಿಸಲ್ಪಟ್ಟ ವಿಧದಿಂದ ಡೊರಾಡೊ ಕುಟುಂಬವು ಬಹಳವಾಗಿ ಪ್ರಭಾವಿಸಲ್ಪಟ್ಟಿತು. ಮುಂಚಿತವಾಗಿಯೇ ನಮಗಾಗಿ ವಿಭಿನ್ನ ಸ್ಥಳಗಳಲ್ಲಿ ವಸತಿಯು ನಮ್ಮ ಕ್ರೈಸ್ತ ಸಹೋದರರಿಂದ ಸಿದ್ಧವಾಗಿರಿಸಲ್ಪಟ್ಟಿತ್ತು. ನಾವು ಮನೆಯಿಂದ ದೂರವಿದ್ದರೂ ನಮಗೆ ಯಾವ ಕೊರತೆಯೂ ಇರಲಿಲ್ಲ. ಡೊರಾಡೊ ಕುಟುಂಬವು ರಾಜ್ಯ ಸಭಾಗೃಹದಲ್ಲಿ ಕೆಲವು ಕೂಟಗಳಿಗೆ ಹಾಜರಾಗಿತ್ತು, ಆದರೆ ತಾವೆಂದಿಗೂ ಸಂಧಿಸದೆ ಇದ್ದ ಸಹೋದರರ ಮೂಲಕ ತೋರಿಸಲ್ಪಟ್ಟ ಪ್ರೀತಿಯಿಂದ ಅವರು ಆಶ್ಚರ್ಯಪಟ್ಟರು. ನಮ್ಮ ಮನೆಗಳಿಗೆ ಹಿಂದಿರುಗಿದ ಕೆಲವು ವಾರಗಳ ತರುವಾಯ, ಈ ಕುಟುಂಬವು ಕ್ರಮವಾಗಿ ಎಲ್ಲ ಕೂಟಗಳಿಗೆ ಹಾಜರಾಗತೊಡಗಿತು. ಬೇಗನೆ ಅವರು ಸುವಾರ್ತೆಯ ಪ್ರಚಾರಕರಾಗಲು ಅರ್ಹರಾದರು. ಅವರಲ್ಲಿ ಇಬ್ಬರು ಈಗ ದೀಕ್ಷಾಸ್ನಾನ ಪಡೆದುಕೊಂಡಿದ್ದಾರೆ. ಕೆಲವು ತಿಂಗಳುಗಳ ವರೆಗೆ ಆಕ್ಸಿಲಿಯರಿ ಪಯನೀಯರರಾಗಿ ಅವರು ಸೇವೆಸಲ್ಲಿಸಿದ್ದಾರೆ, ಮತ್ತು ಕ್ರಮದ ಪಯನೀಯರ್ ಸೇವೆಯನ್ನು ಆರಂಭಿಸುವ ಯೋಜನೆಗಳನ್ನು ಮಾಡುತ್ತಿದ್ದಾರೆ.”
ಕುಳಿಯಿಂದ 21 ಕಿಲೊಮೀಟರುಗಳ ಅಂತರದಲ್ಲಿ ಜೀವಿಸುವ, 20 ವರ್ಷ ಪ್ರಾಯದ ಮಾರ್ಥಾ, ಸಾರಲಿಕ್ಕಾಗಿದ್ದ ಪ್ರತಿಯೊಂದು ಅವಕಾಶದ ಲಾಭಪಡೆದುಕೊಳ್ಳುವುದರಿಂದ, ಅವಳ ಬಲಹೀನತೆಯು ಅವಳನ್ನು ತಡೆಯುವಂತೆ ಬಿಡಲಿಲ್ಲ. ಮೂರು ವರ್ಷಗಳ ಹಿಂದೆ ಜ್ವಾಲಾಮುಖಿಯು ಪುನಃ ಸಕ್ರಿಯವಾದಾಗ, ಅವಳು ಸತ್ಯವನ್ನು ಕಲಿತಳು. ಅವಳು ಜೀವಿಸುವ ಕಡಿದಾದ ಕ್ಷೇತ್ರದಲ್ಲಿ ಗಾಲಿಕುರ್ಚಿಯನ್ನು ಬಳಸುವ ಬದಲಿಗೆ, ಸಾರುವ ಕೆಲಸದಲ್ಲಿ ಭಾಗವಹಿಸಲು ಕತ್ತೆಯ ಮೇಲೆ ಸವಾರಿ ಮಾಡುತ್ತಾಳೆ. ಕೂಟಗಳಿಗೆ ಬರಲೂ ಅದೇ ಕತ್ತೆಯನ್ನು ಅವಳು ಉಪಯೋಗಿಸುತ್ತಾಳೆ. ಆ ಪ್ರೀತಿಪರ ಸಹೋದರತ್ವದ ಭಾಗವಾಗಿರುವುದಕ್ಕಾಗಿ ಮಾರ್ಥಾ ಯೆಹೋವನಿಗೆ ತುಂಬ ಕೃತಜ್ಞಳಾಗಿದ್ದಾಳೆ. ಏಕೆಂದರೆ ಕತ್ತೆಯ ಮೇಲೇರಲು ಮತ್ತು ಕೆಳಗಿಳಿಯಲು ಅವಳು ಸಭೆಯಲ್ಲಿರುವ ಸಹೋದರಿಯರ ಸಹಾಯದ ಮೇಲೆ ಅವಲಂಬಿಸುತ್ತಾಳೆ. ಪ್ರತಿ ತಿಂಗಳು ಅವಳು ಶುಶ್ರೂಷೆಯಲ್ಲಿ 15ಕ್ಕಿಂತಲೂ ಹೆಚ್ಚಿನ ತಾಸುಗಳನ್ನು ವ್ಯಯಿಸುತ್ತಾಳೆ.
ಈ ಏಕಾಂತ ಕ್ಷೇತ್ರಗಳಲ್ಲಿ, ನೆರೆಯವರೊಂದಿಗೆ ಸೇರಿ ಧಾರ್ಮಿಕ ರಜಾದಿನಗಳನ್ನು ಆಚರಿಸುವಂತೆ ಯೆಹೋವನ ಸಾಕ್ಷಿಗಳು ಅನೇಕ ವೇಳೆ ಅವರಿಂದ ಒತ್ತಡಕ್ಕೆ ಒಳಗಾಗುತ್ತಾರೆ. ಜ್ವಾಲಾಮುಖಿಯಿಂದ ಸುಮಾರು 20 ಕಿಲೊಮೀಟರುಗಳ ಅಂತರದಲ್ಲಿರುವ ಒಂದು ಹಳ್ಳಿಯಾದ ಟೂಲ್ಸಿಂಗೊದಲ್ಲಿ, ಆಚರಣೆಗಳಿಗಾಗಿ ಸಾಕ್ಷಿಗಳಿಂದ ದಾನಗಳನ್ನು ಒಟ್ಟುಗೂಡಿಸಲು ಅವರನ್ನು ಭೇಟಿಯಾಗುವಂತೆ ವ್ಯಕ್ತಿಯೊಬ್ಬನು ನೇಮಿಸಲ್ಪಟ್ಟನು. ಆ ಧಾರ್ಮಿಕ ರಜಾದಿನಗಳಲ್ಲಿ ತಾವು ಏಕೆ ಭಾಗವಹಿಸಲು ಸಾಧ್ಯವಿಲ್ಲ ಎಂಬುದನ್ನು ಸಾಕ್ಷಿಗಳು ತಾಳ್ಮೆಯಿಂದ ವಿವರಿಸಿದರು. ಸಹೋದರರಿಂದ ಹಣವನ್ನು ಪಡೆದುಕೊಳ್ಳಲು ಆ ವ್ಯಕ್ತಿಯು ಯಾವ ರೀತಿಯಲ್ಲಿ ಪಟ್ಟುಬಿಡದೆ ಪ್ರಯತ್ನಿಸಿದನೆಂದರೆ, ಅವರ ನಂಬಿಕೆಗಳಲ್ಲಿ ಕೆಲವನ್ನು ತಿಳಿದುಕೊಳ್ಳುತ್ತಾ ಅವರೊಂದಿಗೆ ಸಹವಾಸಿಸಲು ಆರಂಭಿಸಿದನು. ತನ್ನ ಪ್ರಶ್ನೆಗಳಿಗೆ ತನ್ನದೇ ಆದ ಕ್ಯಾತೊಲಿಕ್ ಬೈಬಲಿನಿಂದ ಉತ್ತರಗಳನ್ನು ಕಂಡುಕೊಳ್ಳುವುದರಲ್ಲಿ ಅವನು ಆನಂದಿಸಿದನು. ಈಗ ಒಂದು ವರ್ಷದಿಂದ ಅವನು, ತನ್ನ ಹೆಂಡತಿ ಮತ್ತು ಮಗಳೊಂದಿಗೆ ಕ್ರಮವಾಗಿ ಕೂಟಗಳಿಗೆ ಹಾಜರಾಗುತ್ತಿದ್ದಾನೆ, ಮತ್ತು ಸುವಾರ್ತೆಯ ಪ್ರಚಾರಕನಾಗಲು ತನ್ನ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದಾನೆ.
ನೀವು ಹೇಗೆ ಸಿದ್ಧರಾಗಿರಸಾಧ್ಯವಿದೆ?
ಅಪಾಯಕರ ಪೋಪಕಾಟಪ್ಲೆಟ್ ಜ್ವಾಲಾಮುಖಿಯ ಕುರಿತು ಜ್ವಾಲಾಮುಖಿಶಾಸ್ತ್ರಜ್ಞರು ಅಧ್ಯಯನಗಳನ್ನು ನಡೆಸಿ, ಅಧಿಕೃತ ವರದಿಗಳನ್ನು ಹೊರಡಿಸುವುದಾದರೂ, ಏನು ಸಂಭವಿಸುವುದು ಮತ್ತು ಯಾವಾಗ ಸಂಭವಿಸುವುದೆಂದು ಯಾರಿಗೂ ತಿಳಿಯದು. ವಾರ್ತಾ ಮಾಧ್ಯಮ ಮತ್ತು ಹತ್ತಿರದಲ್ಲಿ ಜೀವಿಸುತ್ತಿರುವ ಜನರಿಗನುಸಾರ, ಜ್ವಾಲಾಮುಖಿಯು ಯಾವುದೇ ಸಮಯದಲ್ಲಿ ಸ್ಫೋಟಿಸಬಹುದು. ಬೆದರಿಕೆಯು ನಿಜವಾಗಿದೆ. ನಿಶ್ಚಯವಾಗಿಯೂ ಅಧಿಕಾರಿಗಳು ಬಹಳಷ್ಟು ಚಿಂತಿತರಾಗಿದ್ದು, ಒಂದು ತುರ್ತಿನ ಸಂದರ್ಭದಲ್ಲಿ ಸಿದ್ಧರಾಗಿರಲು ತಮ್ಮಿಂದ ಸಾಧ್ಯವಾದ ಎಲ್ಲವನ್ನು ಮಾಡಲು ಬಯಸುತ್ತಾರೆ. ಆದರೆ ಒಂದು ಎಚ್ಚರಿಕೆಯನ್ನು ಹೊರಡಿಸುವ ವಿಷಯದಲ್ಲಿ ಅವರು ಜಾಗರೂಕರಾಗಿರಬೇಕೆಂಬುದು ಗ್ರಾಹ್ಯವೇ ಸರಿ, ಏಕೆಂದರೆ ಸನ್ನಿಹಿತವಾದ ಅಪಾಯವಿಲ್ಲದಿದ್ದಲ್ಲಿ, ಒಂದು ಸಾಮೂಹಿಕ ನಿರ್ಗಮನವನ್ನು ಆರಂಭಿಸಲು ಅವರು ಬಯಸುವುದಿಲ್ಲ. ಹಾಗಾದರೆ, ಒಬ್ಬನು ಏನು ಮಾಡಬೇಕು?
“ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು” ಎಂಬುದಾಗಿ ಒಂದು ಬೈಬಲ್ ಜ್ಞಾನೋಕ್ತಿಯು ಹೇಳುತ್ತದೆ. (ಜ್ಞಾನೋಕ್ತಿ 22:3) ಆದುದರಿಂದ, ಅವಕಾಶದ ಬಾಗಿಲು ಇನ್ನೂ ತೆರೆದಿರುವಾಗಲೇ, ಒಬ್ಬನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬೇಕಾದ ಹೆಜ್ಜೆಗಳನ್ನು ತೆಗೆದುಕೊಳ್ಳುವುದು, ಮತ್ತು ಇಂತಹ ಭಯಂಕರವಾದ ನೈಸರ್ಗಿಕ ಶಕ್ತಿಗಳೊಂದಿಗೆ ಕಾಯ್ದುನೋಡುವ ಆಟವನ್ನು ಆಡುತ್ತಾ, ಏನೂ ಸಂಭವಿಸಲಾರದೋ ಎಂಬಂತೆ ಉದಾಸೀನ ಮನೋಭಾವದೊಂದಿಗೆ ಜೀವಿಸದಿರುವುದು ವಿವೇಕದ ಮಾರ್ಗವಾಗಿದೆ. ಆ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳು ವಿಷಯವನ್ನು ಹೀಗೆಯೇ ವೀಕ್ಷಿಸುತ್ತಾರೆ.
ಇತ್ತೀಚೆಗೆ, ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿನ ಪ್ರತಿನಿಧಿಗಳು, ಅಪಾಯ ವಲಯದಲ್ಲಿರುವ ಸಭೆಗಳೊಂದಿಗೆ ನಿಕಟ ಸಂಪರ್ಕವನ್ನು ಪಡೆದಿರುವ ಪ್ಯೂಬ್ಲಾ ರಾಜ್ಯದಲ್ಲಿನ ಸಂಚರಣ ಮೇಲ್ವಿಚಾರಕರನ್ನು ಭೇಟಿಯಾದರು. ಕುಳಿಯಿಂದ 25 ಕಿಲೊಮೀಟರುಗಳ ಅಂತರದಲ್ಲಿ ಜೀವಿಸುತ್ತಿರುವ ಪ್ರತಿಯೊಂದು ಕುಟುಂಬವನ್ನು ಭೇಟಿಮಾಡುವಂತೆ, ಸಂಚರಣ ಮೇಲ್ವಿಚಾರಕರು ಮತ್ತು ಪರಿಹಾರ ಸಮಿತಿಯ ಸದಸ್ಯರಿಗಾಗಿ ಯೋಜನೆಗಳು ಮಾಡಲ್ಪಟ್ಟವು. ಸ್ಫೋಟನವು ಆಗುವ ಮುಂಚೆಯೇ, ಅಪಾಯ ವಲಯದಿಂದ ಸ್ಥಳಾಂತರಿಸುವ ವಿಷಯವನ್ನು ಪರಿಗಣಿಸುವಂತೆ ಈ ಕುಟುಂಬಗಳಿಗೆ ಸಹಾಯವು ನೀಡಲಾಯಿತು. ಪ್ಯೂಬ್ಲಾ ನಗರದಲ್ಲಿ 1,500 ಜನರನ್ನು ಪುನರ್ನೆಲೆಗೊಳಿಸಲು, ಸಾಗಣೆ ಮತ್ತು ವಸತಿಗಳು ಏರ್ಪಡಿಸಲ್ಪಟ್ಟವು. ಕೆಲವು ಕುಟುಂಬಗಳು ಬೇರೆ ನಗರಗಳಲ್ಲಿರುವ ಸಂಬಂಧಿಕರೊಂದಿಗೆ ವಾಸಿಸಲು ಸ್ಥಳಾಂತರಿಸಿದರು.
ದೊಡ್ಡ ಪ್ರಮಾಣದಲ್ಲಿ ಎಚ್ಚರಿಕೆ ನೀಡುವುದು
ಪೋಪಕಾಟಪ್ಲೆಟ್ ಜ್ವಾಲಾಮುಖಿಯಿಂದ ಹೊರಬರುವ ಹೊಗೆ, ಬೆಂಕಿ ಮತ್ತು ಗುಡುಗುಟ್ಟುವ ಸದ್ದು, ಇವು ಒಂದು ಸ್ಫೋಟನವು ಹತ್ತಿರವಿದೆ ಎಂಬುದಕ್ಕೆ ಸ್ಪಷ್ಟವಾದ ಸೂಚನೆಗಳಾಗಿವೆ. ಪಾರಾಗಲು ಬಯಸುವವರೆಲ್ಲರು, ಅಧಿಕಾರಿಗಳಿಂದ ಹೊರಡಿಸಲ್ಪಟ್ಟ ಎಚ್ಚರಿಕೆಗಳಿಗೆ ಕಿವಿಗೊಡಬೇಕು ಮತ್ತು ಸೂಕ್ತವಾದ ಕ್ರಿಯೆಗೈಯಬೇಕು. ಜ್ವಾಲಾಮುಖಿಯ ಹತ್ತಿರದ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳು, ತಮ್ಮ ಸ್ವಂತ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯಾವಾಗಲೂ ಜಾಗರೂಕರಾಗಿರುತ್ತಾರೆ, ಅಲ್ಲದೆ ಅಪಾಯವನ್ನು ಮುಂಗಾಣುವಂತೆ ಮತ್ತು ತೀರ ತಡವಾಗುವ ಮುಂಚೆ ಏನನ್ನಾದರೂ ಮಾಡುವಂತೆ ಇತರರಿಗೆ ಸಹಾಯ ಮಾಡುತ್ತಾರೆ.
ಒಂದು ದೊಡ್ಡದಾದ ಪ್ರಮಾಣದಲ್ಲಿ, ಯೆಹೋವನ ಸಾಕ್ಷಿಗಳು ಬೈಬಲ್ ಪ್ರವಾದನೆಗಳ ಬೆಳಕಿನಲ್ಲಿ ಮುಂತಿಳಿಸಲ್ಪಟ್ಟಿರುವ ಲೋಕದ ಘಟನೆಗಳಿಗೂ ಎಚ್ಚರವಾಗಿರುತ್ತಾರೆ. ಯುದ್ಧಗಳು, ಭೂಕಂಪಗಳು, ಬರಗಾಲಗಳು, ರೋಗಗಳು, ಮತ್ತು ಪಾತಕವು, ಒಂದು ಜ್ವಾಲಾಮುಖಿಯ ಚಟುವಟಿಕೆಗಳಷ್ಟೇ ಮಹತ್ವದ್ದಾಗಿವೆ. ಅವು, ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯನ್ನು’ ಗುರುತಿಸುವುವೆಂದು ಯೇಸು ಕ್ರಿಸ್ತನು ಮುಂತಿಳಿಸಿದ ಸಂಘಟಿತ ಸೂಚನೆಯ ಅಂಶಗಳಾಗಿವೆ. ಅಂತ್ಯವು ಯಾವಾಗ ಬರುವುದೆಂಬುದು ಯಾರಿಗೂ ನಿಖರವಾಗಿ ಗೊತ್ತಿರದಿರುವುದರಿಂದ, ಅದು ಬರುತ್ತಿರುವುದರಲ್ಲಿ ಯಾವ ಸಂದೇಹವೂ ಇರುವುದಿಲ್ಲ, ಮತ್ತು ಅದು ಅತಿ ಹತ್ತಿರದಲ್ಲೇ ಇದೆ.—ಮತ್ತಾಯ 24:3, 7-14, 32-39.
ಇಂದು ಎಲ್ಲೆಡೆಯೂ ಇರುವ ಜನರಿಗೆ ಅತಿ ತುರ್ತಿನ ಸಂಗತಿಯು ಏನೆಂದರೆ, ಯೇಸುವಿನ ಎಚ್ಚರಿಕೆಯನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುವುದೇ: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು.” (ಲೂಕ. 21:34) ಇದು ಸ್ಪಷ್ಟವಾಗಿಯೂ ವಿವೇಕಯುತವಾದ ಮಾರ್ಗಕ್ರಮವಾಗಿದೆ. ಜ್ವಾಲಾಮುಖಿಯ ಎಚ್ಚರಿಕೆಯ ಸೂಚನೆಗಳನ್ನು ಲಘುವಾಗಿ ಎಣಿಸದೆ ಇರಬೇಕಾದಂತೆಯೇ, ಮನುಷ್ಯಕುಮಾರನಾದ ಯೇಸು ಕ್ರಿಸ್ತನ ಬರುವಿಕೆಯನ್ನು ನಾವು ಕಡೆಗಣಿಸಬಾರದು. ಅವನು ಪ್ರೇರೇಪಿಸಿದ್ದು: “ಆದಕಾರಣ ನೀವು ಸಹ ಸಿದ್ಧವಾಗಿರ್ರಿ; ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.”—ಮತ್ತಾಯ 24:44.
[ಪಾದಟಿಪ್ಪಣಿ]
a ಮಾರ್ಚ್ 8, 1997ರ ಅವೇಕ್! ಪತ್ರಿಕೆಯು, ಈ ಅಪಾಯಕರ ಜ್ವಾಲಾಮುಖಿಯ ಕುರಿತು ವರದಿಸಿತು.
[ಪುಟ 23 ರಲ್ಲಿರುವ ಚಿತ್ರ]
ಮಾರ್ಥಾ (ಕತ್ತೆಯ ಮೇಲೆ) ಮತ್ತು ಇತರರು ಪೋಪಕಾಟಪ್ಲೆಟ್ ಜ್ವಾಲಾಮುಖಿಯ ಮರೆಯಲ್ಲಿ ಸಾಕ್ಷಿನೀಡುತ್ತಾರೆ