ನಿಜ ನ್ಯಾಯ—ಯಾವಾಗ ಮತ್ತು ಹೇಗೆ?
ನಿರ್ದೋಷಿ ಜನರಿಗೆ, ನಿಜ ನ್ಯಾಯದ ಕುರಿತಾಗಿ ಭಯಪಡಲು ಯಾವ ಕಾರಣವೂ ಇರಬಾರದು. ಬಹುಮಟ್ಟಿಗೆ ಎಲ್ಲ ಕಡೆಗಳಲ್ಲಿರುವ ನಾಗರಿಕರಿಗೆ ತಮ್ಮ ದೇಶದಲ್ಲಿ ನ್ಯಾಯವನ್ನು ಖಾತ್ರಿಗೊಳಿಸಲು ಪ್ರಯತ್ನಿಸುವ ಒಂದು ಕಾನೂನು ವ್ಯವಸ್ಥೆಯು ಇರುವಲ್ಲಿ, ಅವರು ಕೃತಜ್ಞರಾಗಿರಲು ಕಾರಣವಿದೆ ನಿಶ್ಚಯ. ಅಂತಹ ಒಂದು ವ್ಯವಸ್ಥೆಯಲ್ಲಿ, ನಿಯಮಗಳ ಒಂದು ರಚನೆ, ಅವುಗಳನ್ನು ಜಾರಿಗೊಳಿಸಲಿಕ್ಕಾಗಿ ಒಂದು ಪೊಲೀಸ್ ಪಡೆ, ಮತ್ತು ನ್ಯಾಯವನ್ನು ಕೊಡಲಿಕ್ಕಾಗಿ ನ್ಯಾಯಾಲಯಗಳು ಒಳಗೂಡಿರುತ್ತದೆ. “ಮೇಲಧಿಕಾರಿಗಳಿಗೆ ಅಧೀನ”ರಾಗಿರಲು ಬೈಬಲು ಕೊಟ್ಟಿರುವ ಬುದ್ಧಿವಾದಕ್ಕೆ ಅನುಸಾರವಾಗಿ, ಸತ್ಯ ಕ್ರೈಸ್ತರು ತಾವು ವಾಸಿಸುತ್ತಿರುವ ದೇಶದಲ್ಲಿರುವ ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸುತ್ತಾರೆ.—ರೋಮಾಪುರ 13:1-7.
ಆದರೆ, ವಿಭಿನ್ನ ದೇಶಗಳಲ್ಲಿರುವ ನ್ಯಾಯಾಂಗ ವ್ಯವಸ್ಥೆಗಳು ಹಾನಿಕರವಾದ ಮತ್ತು ಪೇಚಾಟವನ್ನು ಉಂಟುಮಾಡುವಂತಹ ತಪ್ಪುಗಳನ್ನು ಮಾಡಿವೆ.a ಅಪರಾಧಿಗಳನ್ನು ಶಿಕ್ಷಿಸಿ, ನಿರಪರಾಧಿಗಳನ್ನು ಸಂರಕ್ಷಿಸುವ ಬದಲಿಗೆ, ಕೆಲವೊಮ್ಮೆ ನಿರಪರಾಧಿಗಳು ಮಾಡದಿರುವ ಪಾತಕಗಳಿಗಾಗಿ ಅವರನ್ನು ಶಿಕ್ಷಿಸಲಾಗಿದೆ. ಇತರ ವ್ಯಕ್ತಿಗಳು ಅನೇಕ ವರ್ಷಗಳ ವರೆಗೆ ಸೆರೆವಾಸದಲ್ಲಿದ್ದು, ತಮ್ಮ ಸೆರೆಮನೆವಾಸದ ಅವಧಿಯು ಮುಗಿಯುವ ಸ್ವಲ್ಪ ಮುಂಚೆ, ಅವರು ಅಪರಾಧಿಗಳಾಗಿದ್ದರೊ ಮತ್ತು ಅವರ ಅಪರಾಧನಿರ್ಣಯವು ಸಮರ್ಥಿಸಲ್ಪಟ್ಟಿದೆಯೊ ಎಂಬ ಬಲವಾದ ಸಂದೇಹದೊಂದಿಗೆ ಬಿಡುಗಡೆಗೊಳಿಸಲ್ಪಡುತ್ತಾರೆ. ಹೀಗಿರುವುದರಿಂದಲೇ, ಎಲ್ಲರಿಗಾಗಿ ನಿಜ ನ್ಯಾಯವು ಎಂದಾದರೂ ಸಿಗುವುದೊ? ಹಾಗಿರುವಲ್ಲಿ, ಯಾವಾಗ ಮತ್ತು ಹೇಗೆ? ನಿರಪರಾಧಿಗಳನ್ನು ಸಂರಕ್ಷಿಸಲಿಕ್ಕಾಗಿ ನಾವು ಯಾರಲ್ಲಿ ಭರವಸೆಯಿಡಬಲ್ಲೆವು? ಮತ್ತು ಅನ್ಯಾಯಕ್ಕೆ ಬಲಿಯಾದವರಿಗೆ ಯಾವ ನಿರೀಕ್ಷೆಯಿದೆ? ಎಂದು ಅನೇಕರು ಕೇಳುತ್ತಿದ್ದಾರೆ.
ದೋಷಯುಕ್ತ ನ್ಯಾಯ
1980ಗಳಲ್ಲಿ ಜರ್ಮನಿಯು, “ಯುದ್ಧಾನಂತರದ ಅವಧಿಯ ಅತಿ ಕೌತುಕಕರವಾದ ಕಾನೂನು ಕ್ರಮಗಳಲ್ಲೊಂದನ್ನು” ಕಂಡಿತು. ಆ ಸಮಯದಲ್ಲಿ ಒಬ್ಬ ತಾಯಿಯು, ತನ್ನ ಇಬ್ಬರು ಪುತ್ರಿಯರನ್ನು ಕೊಲೆಮಾಡಿದ್ದರಿಂದ ಜೀವಾವಧಿ ಶಿಕ್ಷೆಗಾಗಿ ಸೆರೆಮನೆಗೆ ಕಳುಹಿಸಲ್ಪಟ್ಟಳು. ಆದರೆ ಕೆಲವು ವರ್ಷಗಳ ಬಳಿಕ, ಅವಳ ವಿರುದ್ಧ ಇದ್ದಂತಹ ಪುರಾವೆಯನ್ನು ಪುನಃ ಪರಿಶೀಲಿಸಲಾಯಿತು, ಮತ್ತು ಒಂದು ಹೊಸ ವಿಚಾರಣೆಯನ್ನು ಇತ್ಯರ್ಥಗೊಳಿಸದೆ, ಬಿಡುಗಡೆ ಮಾಡಲಾಯಿತು. 1995ರಲ್ಲಿ ಡೆ ಸಿಟ್ ವರದಿಸಿದ್ದೇನೆಂದರೆ, ಆರಂಭದ ನ್ಯಾಯತೀರ್ಪು “ಒಂದು ನ್ಯಾಯಾಂಗ ದೋಷವಾಗಿ ರುಜುವಾಗಿರಸಾಧ್ಯವಿದೆ.” ಈ ಲೇಖನದ ಬರವಣಿಗೆಯ ಸಮಯದ ವರೆಗೆ ಈ ಸ್ತ್ರೀಯು, ತನ್ನ ಅಪರಾಧ ಅಥವಾ ನಿರಪರಾಧಿತನದ ಅನಿಶ್ಚಿತತೆಯೊಂದಿಗೆ ಸೆರೆಮನೆಯಲ್ಲಿ ಒಂಬತ್ತು ವರ್ಷಗಳನ್ನು ಕಳೆದಿದ್ದಳು.
1974ರಲ್ಲಿ ನವೆಂಬರ್ ತಿಂಗಳ ಒಂದು ಸಾಯಂಕಾಲದಂದು, ಇಂಗ್ಲೆಂಡಿನ ಬರ್‌ಮಿಂಗಾಮ್ ನಗರದ ಕೇಂದ್ರಭಾಗವು ಎರಡು ಬಾಂಬ್‌ಗಳ ಸ್ಫೋಟದಿಂದ ಅಲುಗಾಡಿಸಲ್ಪಟ್ಟು, 21 ವ್ಯಕ್ತಿಗಳು ಕೊಲ್ಲಲ್ಪಟ್ಟರು. “ಬರ್‌ಮಿಂಗಾಮ್‌ನಲ್ಲಿದ್ದ ಯಾವ ವ್ಯಕ್ತಿಯೂ ಎಂದೂ ಮರೆಯಲಾಗದ” ಒಂದು ಘಟನೆಯು ಅದಾಗಿತ್ತು, ಎಂದು ಪಾರ್ಲಿಮೆಂಟಿನ ಒಬ್ಬ ಸದಸ್ಯರಾದ ಕ್ರಿಸ್ ಮೆಲೆನ್ ಬರೆದರು. ತದನಂತರ, “ಆರು ನಿರಪರಾಧಿ ಪುರುಷರ ಮೇಲೆ ಬ್ರಿಟಿಷ್ ಇತಿಹಾಸದಲ್ಲೇ ಅತಿ ದೊಡ್ಡದಾದ ಕೊಲೆಯನ್ನು ಮಾಡಿರುವ ಅಪರಾಧವನ್ನು ಹೊರಿಸಲಾಯಿತು.” ತರುವಾಯ ಅವರ ಅಪರಾಧನಿರ್ಣಯಗಳನ್ನು ರದ್ದುಮಾಡಲಾಯಿತು—ಆದರೆ ಅಷ್ಟರೊಳಗೆ ಆ ಪುರುಷರು ಸೆರೆಮನೆಯಲ್ಲಿ 16 ವರ್ಷಗಳನ್ನು ಕಳೆದಿದ್ದರು!
ಕಾನೂನಿನ ಸಲಹೆಗಾರನಾದ ಕೆನ್ ಕ್ರಿಸ್‌ಪಿನ್, “ಆಸ್ಟ್ರೇಲಿಯದ ನ್ಯಾಯಾಂಗ ಇತಿಹಾಸದ ದಾಖಲೆಗಳಲ್ಲಿ ಒಂದು ಅಪೂರ್ವ ವಿಧದಲ್ಲಿ ಸಾರ್ವಜನಿಕರ ಊಹನಾಶಕ್ತಿಯನ್ನು ಸೆರೆಹಿಡಿದ” ಒಂದು ಮೊಕದ್ದಮೆಯನ್ನು ವರದಿಸಿದನು. ಏಯರ್ಸ್ ರಾಕ್‌ನ ಬಳಿ ಒಂದು ಕುಟುಂಬವು ಬೀಡುಬಿಟ್ಟಿದ್ದಾಗ, ಅವರ ಮಗು ಕಾಣೆಯಾಗಿ, ಮತ್ತೆ ಸಿಗಲೇ ಇಲ್ಲ. ತಾಯಿಯ ಮೇಲೆ ಕೊಲೆಯ ಆರೋಪ ಹೊರಿಸಿ, ಅಪರಾಧನಿರ್ಣಯ ನೀಡಿ, ಜೀವಾವಧಿಯ ಸೆರೆಮನೆವಾಸದ ಶಿಕ್ಷೆಯನ್ನು ವಿಧಿಸಲಾಯಿತು. 1987ರಲ್ಲಿ, ಅವಳು ಮೂರು ವರ್ಷಗಳಿಗಿಂತಲೂ ಹೆಚ್ಚು ಸಮಯ ಸೆರೆಮನೆಯಲ್ಲಿದ್ದ ನಂತರ, ಅವಳ ವಿರುದ್ಧ ಇದ್ದಂತಹ ಪ್ರಮಾಣವು, ಆ ಅಪರಾಧನಿರ್ಣಯವನ್ನು ಸಮರ್ಥಿಸಲು ಸಾಧ್ಯವಿರಲಿಲ್ಲವೆಂದು ಒಂದು ಅಧಿಕೃತ ವಿಚಾರಣೆಯು ಕಂಡುಹಿಡಿಯಿತು. ಅವಳನ್ನು ಬಿಡುಗಡೆಗೊಳಿಸಿ, ಕ್ಷಮಾಪಣೆಯನ್ನು ನೀಡಲಾಯಿತು.
ಅಮೆರಿಕದ ದಕ್ಷಿಣಭಾಗದಲ್ಲಿ ವಾಸಿಸುತ್ತಿದ್ದ 18 ವರ್ಷ ಪ್ರಾಯದ ಹೆಂಗಸೊಬ್ಬಳನ್ನು 1986ರಲ್ಲಿ ಕೊಲೆಮಾಡಲಾಯಿತು. ಮಧ್ಯವಯಸ್ಸಿನ ಪುರುಷನೊಬ್ಬನ ಮೇಲೆ ಆರೋಪ ಹೊರಿಸಿ, ಅಪರಾಧನಿರ್ಣಯ ಮಾಡಿ, ಮರಣದಂಡನೆ ವಿಧಿಸಲಾಯಿತು. ಅವನಿಗೆ ಆ ಪಾತಕದೊಂದಿಗೆ ಯಾವುದೇ ಸಂಬಂಧವಿರಲಿಲ್ಲವೆಂದು ರುಜುವಾಗುವಷ್ಟರಲ್ಲಿ, ಅವನು ಮರಣದಂಡನೆಯುಳ್ಳವರಿಗಾಗಿದ್ದ ಸೆರೆಮನೆಯಲ್ಲಿ ಆರು ವರ್ಷಗಳನ್ನು ಕಳೆದಿದ್ದನು.
ಇವು ನ್ಯಾಯಾಂಗ ತಪ್ಪುಗಳ ಅಪರೂಪದ ಉದಾಹರಣೆಗಳಾಗಿವೆಯೊ? ಪೆನ್ಸಿಲ್ವೇನಿಯಾದ ಕಾನೂನು ಶಾಲೆಯ ವಿಶ್ವವಿದ್ಯಾನಿಲಯದ ಡೇವಿಡ್ ರೊಡಾಫ್‌ಸ್ಕಿ ಗಮನಿಸಿದ್ದು: “ಸುಮಾರು 25 ವರ್ಷಗಳಿಂದ ನಾನು ಈ ನ್ಯಾಯಾಂಗ ವ್ಯವಸ್ಥೆಯಲ್ಲಿದ್ದೇನೆ ಮತ್ತು ಅನೇಕಾನೇಕ ಮೊಕದ್ದಮೆಗಳನ್ನು ನೋಡಿದ್ದೇನೆ. ವಾಸ್ತವದಲ್ಲಿ ನಿರಪರಾಧಿಗಳಾಗಿರುವ ಆಪಾದಿತರು . . . ಐದು ಮತ್ತು 10%ದ ನಡುವೆ ಇದ್ದಾರೆಂದು ನಾನು ಅಂದಾಜುಮಾಡುತ್ತೇನೆ.” ಕ್ಷೋಭೆಗೊಳಿಸುವ ಪ್ರಶ್ನೆಯೊಂದನ್ನು ಕ್ರಿಸ್‌ಪಿನ್ ಕೇಳುತ್ತಾನೆ: “ಸೆರೆಮನೆಯ ಕೋಣೆಗಳಲ್ಲಿ ಖಿನ್ನರಾಗಿ ಕುಳಿತುಕೊಂಡಿರುವ ಬೇರೆ ನಿರಪರಾಧಿಗಳು ಇದ್ದಾರೊ?” ಇಂತಹ ಘೋರ ತಪ್ಪುಗಳು ಆಗುವುದಾದರೂ ಹೇಗೆ?
ಮಾನವ ನ್ಯಾಯಾಂಗ ವ್ಯವಸ್ಥೆಗಳು—ಮಾನವ ಬಲಹೀನತೆಗಳೊಂದಿಗೆ
“ಯಾವುದೇ ಮಾನವ ವ್ಯವಸ್ಥೆಯು ಪರಿಪೂರ್ಣವಾಗಿರುವಂತೆ ನಿರೀಕ್ಷಿಸಲಾಗುವುದಿಲ್ಲ,” ಎಂದು 1991ರಲ್ಲಿ ಬ್ರಿಟಿಷ್ ಕೋರ್ಟ್ ಆಫ್ ಅಪೀಲ್ ಒತ್ತಿಹೇಳಿತು. ಒಂದು ನ್ಯಾಯಾಂಗ ವ್ಯವಸ್ಥೆಯು, ಅದನ್ನು ವಿನ್ಯಾಸಿಸುವ ಮತ್ತು ನಿರ್ವಹಿಸುವ ಜನರಷ್ಟೇ ನ್ಯಾಯಯುತ ಮತ್ತು ವಿಶ್ವಾಸಪಾತ್ರವಾಗಿರಲು ಸಾಧ್ಯವಿದೆ. ಜನರು ತಪ್ಪುಮಾಡುವ, ಅಪ್ರಾಮಾಣಿಕರಾಗಿರುವ ಮತ್ತು ಪೂರ್ವಾಗ್ರಹವನ್ನು ಹೊಂದಿರುವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಆದುದರಿಂದ, ಮಾನವನ ನ್ಯಾಯಾಂಗ ವ್ಯವಸ್ಥೆಗಳು ಇವೇ ದೋಷಗಳನ್ನು ನಿಖರವಾಗಿ ತೋರ್ಪಡಿಸುವುದು ಆಶ್ಚರ್ಯಕರ ಸಂಗತಿಯಾಗಿರಬಾರದು. ಮುಂದಿನ ವಿಷಯವನ್ನು ಪರಿಗಣಿಸಿರಿ.
ಜರ್ಮನಿಯ ನ್ಯಾಯಾಧೀಶರಾದ ರಾಲ್ಫ್ ಬೆಂಡರ್ ಅವರಿಗನುಸಾರ, 95 ಪ್ರತಿಶತ ಪಾತಕ ಮೊಕದ್ದಮೆಗಳಲ್ಲಿ, ಸಾಕ್ಷಿಗಳಿಂದ ಬರುವ ಹೇಳಿಕೆಗಳು ನಿರ್ವಿವಾದದ ಪುರಾವೆಯಾಗಿವೆ. ಆದರೆ ನ್ಯಾಯಾಲಯದಲ್ಲಿ ಅಂತಹ ಸಾಕ್ಷಿನೀಡುವವರು ಯಾವಾಗಲೂ ವಿಶ್ವಾಸಾರ್ಹರಾಗಿರುತ್ತಾರೊ? ಇಲ್ಲವೆಂದು ನ್ಯಾಯಾಧೀಶರಾದ ಬೆಂಡರ್ ನೆನಸುತ್ತಾರೆ. ನ್ಯಾಯಾಲಯಕ್ಕೆ ಬರುವ ಸಾಕ್ಷಿನೀಡುವವರಲ್ಲಿ ಅರ್ಧದಷ್ಟು ಮಂದಿ, ಅಸತ್ಯಗಳನ್ನು ನುಡಿಯುತ್ತಾರೆಂದು ಅವರು ಅಂದಾಜುಮಾಡುತ್ತಾರೆ. ಜರ್ಮನಿಯ ಮ್ಯೂನಿಕ್ ವಿಶ್ವವಿದ್ಯಾನಿಲಯದಲ್ಲಿ ಕ್ರಿಮಿನಲ್ ಕಾನೂನಿನ ಪ್ರೊಫೆಸರರಾಗಿರುವ ಬರ್ನ್ಟ್ ಶೂನೇಮನ್ ಅವರು ತದ್ರೀತಿಯ ಅವಲೋಕನವನ್ನು ಮಾಡಿದರು. ಡೇ ಸಿಟ್ ವಾರ್ತಾಪತ್ರಿಕೆಯೊಂದಿಗಿನ ಒಂದು ಸಂದರ್ಶನದಲ್ಲಿ, ಶೂನೆಮಾನ್ ದೃಢೀಕರಿಸಿದ್ದೇನೆಂದರೆ, ಸಾಕ್ಷಿಗಳ ಹೇಳಿಕೆಗಳು ವಿಶ್ವಾಸಾರ್ಹವಲ್ಲದಿದ್ದರೂ, ಅವೇ ರುಜುವಾತಿನ ಪ್ರಮುಖ ರೂಪವಾಗಿವೆ. “ನ್ಯಾಯದಲ್ಲಿನ ತಪ್ಪುಗಳಿಗೆ ಮೂಲ ಕಾರಣವೇನೆಂದರೆ, ನ್ಯಾಯಧೀಶನು ಸಾಕ್ಷಿಗಳ ಅವಿಶ್ವಸನೀಯ ಹೇಳಿಕೆಗಳ ಮೇಲೆ ಅವಲಂಬಿಸುತ್ತಾನೆ.”
ಸಾಕ್ಷಿಗಳು ತಪ್ಪುಮಾಡುತ್ತಾರೆ; ಮತ್ತು ಪೊಲೀಸರು ಕೂಡ. ವಿಶೇಷವಾಗಿ ಸಾರ್ವಜನಿಕರ ರೋಷವನ್ನೆಬ್ಬಿಸುವ ಪಾತಕದ ನಂತರ ಪೊಲೀಸರು ದಸ್ತಗಿರಿಯನ್ನು ಮಾಡುವ ಒತ್ತಡಕ್ಕೆ ಒಳಗಾಗುತ್ತಾರೆ. ಅಂತಹ ಪರಿಸ್ಥಿತಿಗಳ ಕೆಳಗೆ, ಕೆಲವು ಪೊಲೀಸರು ರುಜುವಾತನ್ನು ಸೃಷ್ಟಿಸುವ ಅಥವಾ ಒಬ್ಬ ಸಂದೇಹಾಸ್ಪದ ವ್ಯಕ್ತಿಯು ತಪ್ಪೊಪ್ಪಿಕೊಳ್ಳುವಂತೆ ಒತ್ತಾಯಿಸುವ ಪ್ರಲೋಭನಕ್ಕೆ ತುತ್ತಾಗಿದ್ದಾರೆ. ಬರ್‌ಮಿಂಗಾಮ್ ಬಾಂಬ್ ಸ್ಫೋಟಗಳ ಅಪರಾಧ ಹೊರಿಸಲ್ಪಟ್ಟ ಆ ಆರು ಮಂದಿ ಪುರುಷರು ಬಿಡುಗಡೆಗೊಳಿಸಲ್ಪಟ್ಟಾಗ, ದ ಇಂಡಿಪೆಂಡೆಂಟ್ ಎಂಬ ಬ್ರಿಟಿಷ್ ವಾರ್ತಾಪತ್ರಿಕೆಯಲ್ಲಿ ಈ ತಲೆಬರಹವಿತ್ತು: “ಆರು ಮಂದಿಯ ಅಪರಾಧನಿರ್ಣಯವನ್ನು ಭ್ರಷ್ಟ ಪೊಲೀಸರ ಮೇಲೆ ಆಪಾದಿಸಲಾಗಿದೆ.” ದ ಟೈಮ್ಸ್ ವಾರ್ತಾಪತ್ರಿಕೆಗನುಸಾರ: “ಪೊಲೀಸರು ಸುಳ್ಳುಹೇಳಿದರು, ಸಂಚುಹೂಡಿದರು ಮತ್ತು ವಂಚಿಸಿದರು.”
ಕೆಲವು ವಿದ್ಯಮಾನಗಳಲ್ಲಿ, ಪೂರ್ವಾಗ್ರಹದಿಂದಾಗಿ ಪೊಲೀಸರು ಮತ್ತು ಸಾರ್ವಜನಿಕರು, ಒಂದು ನಿರ್ದಿಷ್ಟ ಕುಲ, ಧರ್ಮ, ಅಥವಾ ರಾಷ್ಟ್ರೀಯತೆಯ ವ್ಯಕ್ತಿಗಳನ್ನು ಶಂಕಿಸಬಹುದು. ಯು.ಎಸ್. ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಹೇಳಿಕೆಯನ್ನೀಯುವಂತೆ, ಒಂದು ಪಾತಕವನ್ನು ಬಗೆಹರಿಸುವುದು ಆಗ “ತರ್ಕಕ್ಕಿಂತ ಜಾತೀವಾದದ ವಿವಾದಾಂಶವಾಗಿ” ಕ್ಷೀಣಿಸಬಲ್ಲದು.
ಒಂದು ಮೊಕದ್ದಮೆಯು ನ್ಯಾಯಾಲಯಕ್ಕೆ ತಲಪಿದಾಗ, ಸಾಕ್ಷಿಗಳು ಹೇಳುವ ವಿಷಯದಿಂದ ಮಾತ್ರವಲ್ಲದೆ, ವೈಜ್ಞಾನಿಕ ಪುರಾವೆಯಿಂದಲೂ ತೀರ್ಪುಗಳು ಪ್ರಭಾವಿಸಲ್ಪಡಬಹುದು. ನ್ಯಾಯಶಾಸ್ತ್ರದ ಹೆಚ್ಚೆಚ್ಚು ಜಟಿಲವಾಗುತ್ತಿರುವ ಕ್ಷೇತ್ರದಲ್ಲಿ, ಬಂದೂಕುಗಳ ಅಧ್ಯಯನ ಅಥವಾ ಬೆರಳಿನ ಗುರುತುಗಳು, ಕೈಬರಹ, ರಕ್ತಗುಂಪುಗಳು, ಕೂದಲಿನ ಬಣ್ಣ, ಬಟ್ಟೆಯ ನೂಲುಗಳು, ಅಥವಾ ಡಿಎನ್‌ಎ ನಮೂನೆಗಳ ಗುರುತಿಸುವಿಕೆಯ ಮೇಲೆ ಆಧಾರಿಸಿ, ಅಪರಾಧ ಅಥವಾ ನಿರಾಪರಾಧಿತನವನ್ನು ನಿರ್ಣಯಿಸಲಿಕ್ಕಾಗಿ ನ್ಯಾಯಾಧೀಶ ಅಥವಾ ನ್ಯಾಯದರ್ಶಿ ಮಂಡಲಿಯನ್ನು ಕೇಳಬಹುದು. ನ್ಯಾಯಾಲಯಗಳು “ಬೆರಗುಗೊಳಿಸುವಂತಹ ಜಟಿಲತೆಯ ಕಾರ್ಯವಿಧಾನಗಳನ್ನು ವರ್ಣಿಸುವ ವಿಜ್ಞಾನಿಗಳ ತಂಡಗಳಿಂದ” ಎದುರಿಸಲ್ಪಟ್ಟಿವೆಯೆಂದು ಒಬ್ಬ ವಕೀಲನು ಗಮನಿಸಿದನು.
ಇನ್ನೂ ಹೆಚ್ಚಾಗಿ, ನಿಸರ್ಗ (ಇಂಗ್ಲಿಷ್) ಎಂಬ ಪತ್ರಿಕೆಯು ಗಮನಿಸುವುದೇನೆಂದರೆ, ನ್ಯಾಯಶಾಸ್ತ್ರದ ಪುರಾವೆಯ ಅರ್ಥವಿವರಣೆಯ ವಿಷಯವನ್ನು ಎಲ್ಲ ವಿಜ್ಞಾನಿಗಳು ಒಪ್ಪಿಕೊಳ್ಳುವುದಿಲ್ಲ. “ನ್ಯಾಯಶಾಸ್ತ್ರದ ವಿಜ್ಞಾನಿಗಳ ನಡುವೆ ಯಥಾರ್ಥವಾದ ಭಿನ್ನಾಭಿಪ್ರಾಯವು ಇರಸಾಧ್ಯವಿದೆ.” ವಿಷಾದಕರವಾಗಿ, “ದೋಷಯುಕ್ತ ನ್ಯಾಯಶಾಸ್ತ್ರದ ಪುರಾವೆಯು, ಈಗಾಗಲೇ ಅನೇಕಾನೇಕ ದೋಷಯುಕ್ತ ಅಪರಾಧನಿರ್ಣಯಗಳಿಗೆ ಜವಾಬ್ದಾರಿಯುಳ್ಳದ್ದಾಗಿದೆ.”
ನಾವು ಎಲ್ಲೇ ಜೀವಿಸುತ್ತಿರಲಿ, ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಎಲ್ಲ ನ್ಯಾಯಾಂಗ ವ್ಯವಸ್ಥೆಗಳು ಮಾನವನ ಕುಂದುಗಳನ್ನು ಪ್ರತಿಬಿಂಬಿಸುತ್ತವೆ. ಹಾಗಾದರೆ, ನಿರಪರಾಧಿಗಳನ್ನು ಸಂರಕ್ಷಿಸಲಿಕ್ಕಾಗಿ ನಾವು ಯಾರಲ್ಲಿ ಭರವಸೆಯಿಡಬಲ್ಲೆವು? ನಿಜ ನ್ಯಾಯವನ್ನು ನಾವು ಎಂದಾದರೂ ನಿರೀಕ್ಷಿಸಬಲ್ಲೆವೊ? ಮತ್ತು ನ್ಯಾಯಾಂಗ ದೋಷಕ್ಕೆ ಬಲಿಯಾಗಿರುವವರಿಗೆ ಯಾವ ನಿರೀಕ್ಷೆಯಿದೆ?
“ಯೆಹೋವನೆಂಬ ನಾನು ನ್ಯಾಯವನ್ನು ಪ್ರೀತಿಸುತ್ತೇನೆ”
ನೀವು ಅಥವಾ ನಿಮ್ಮ ಕುಟುಂಬದ ಒಬ್ಬ ಸದಸ್ಯನು ದೋಷಯುಕ್ತ ನ್ಯಾಯಕ್ಕೆ ಬಲಿಯಾಗಿರುವಲ್ಲಿ, ಯೆಹೋವ ದೇವರು ಮತ್ತು ಆತನ ಮಗನಾದ ಯೇಸುವು, ನೀವೇನನ್ನು ಅನುಭವಿಸುತ್ತೀರೆಂಬುದನ್ನು ಗ್ರಹಿಸುತ್ತಾರೆ. ನಡೆಸಲ್ಪಟ್ಟಿರುವವುಗಳಲ್ಲೇ ಅತಿ ಘೋರವಾದ ಅನ್ಯಾಯವು, ಯೇಸು ಯಾತನಾಕಂಬದ ಮೇಲೆ ವಧಿಸಲ್ಪಟ್ಟಾಗ ನಡೆಸಲ್ಪಟ್ಟಿತು. ಯೇಸು “ಯಾವ ಪಾಪವನ್ನೂ ಮಾಡಲಿಲ್ಲ” ಎಂದು ಅಪೊಸ್ತಲ ಪೇತ್ರನು ನಮಗೆ ಹೇಳುತ್ತಾನೆ. ಆದರೂ ಸುಳ್ಳು ಸಾಕ್ಷಿನೀಡುವವರಿಂದಾಗಿ ಅವನು ಆಪಾದಿಸಲ್ಪಟ್ಟು, ಅಪರಾಧಿಯೆಂದು ನಿರ್ಣಯಿಸಲ್ಪಟ್ಟು, ವಧಿಸಲ್ಪಟ್ಟನು.—1 ಪೇತ್ರ 2:22; ಮತ್ತಾಯ 26:3, 4, 59-62.
ತನ್ನ ಪುತ್ರನಿಗೆ ಮಾಡಲ್ಪಟ್ಟ ಅಂತಹ ದುರುಪಚಾರದ ಕುರಿತಾಗಿ ಯೆಹೋವನಿಗೆ ಹೇಗನಿಸಿರಬೇಕೆಂಬುದನ್ನು ಸ್ವಲ್ಪ ಊಹಿಸಿಕೊಳ್ಳಿರಿ! ನ್ಯಾಯವು ಯೆಹೋವನ ಪ್ರಧಾನ ಗುಣಗಳಲ್ಲೊಂದಾಗಿದೆ. ಬೈಬಲ್ ನಮಗನ್ನುವುದು: “ಆತನು ನಡಿಸುವದೆಲ್ಲಾ ನ್ಯಾಯ.”—ಧರ್ಮೋಪದೇಶಕಾಂಡ 32:4; ಕೀರ್ತನೆ 33:5.
ಯೆಹೋವನು ಇಸ್ರಾಯೇಲಿಗೆ ಎದ್ದುಕಾಣುವಂತಹ ಒಂದು ನ್ಯಾಯಾಂಗ ವ್ಯವಸ್ಥೆಯನ್ನು ಕೊಟ್ಟನು. ಬಗೆಹರಿಸಲ್ಪಟ್ಟಿರದ ಕೊಲೆಯ ವಿದ್ಯಮಾನದಲ್ಲಿ, ಮರಣವನ್ನು ಯಜ್ಞದ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಲಾಗುತ್ತಿತ್ತು. ಒಬ್ಬ ನಿರಪರಾಧಿಯನ್ನು ಆಪಾದಿಸುವ ಗಂಡಾಂತರದೊಂದಿಗೆ ಪ್ರತಿಯೊಂದು ಪಾತಕವನ್ನು ಬಗೆಹರಿಸಲು ಯಾವುದೇ ಒತ್ತಡವಿರಲಿಲ್ಲ. ಬರಿಯ ಸಾಂದರ್ಭಿಕ ಅಥವಾ ವೈಜ್ಞಾನಿಕ ಪುರಾವೆಯ ಮೇಲೆ ಯಾರೊಬ್ಬರನ್ನೂ ಕೊಲೆಗಾಗಿ ಆಪಾದಿಸಲು ಸಾಧ್ಯವಿರಲಿಲ್ಲ; ಕಡಿಮೆಪಕ್ಷ ಎರಡು ಪ್ರತ್ಯಕ್ಷ ಸಾಕ್ಷಿಗಳ ಅಗತ್ಯವಿತ್ತು. (ಧರ್ಮೋಪದೇಶಕಾಂಡ 17:6; 21:1-9) ಯೆಹೋವನಿಗೆ ಉನ್ನತ ಮಟ್ಟಗಳಿವೆ ಮತ್ತು ನ್ಯಾಯವು ಸರಿಯಾಗಿ ನೀಡಲ್ಪಡಬೇಕೆಂಬುದರ ಕುರಿತು ಆತನು ಚಿಂತಿತನಾಗಿದ್ದಾನೆಂದು ಈ ಉದಾಹರಣೆಗಳು ತೋರಿಸುತ್ತವೆ. ನಿಜವಾಗಿಯೂ, ಆತನು ಹೇಳುವುದು: “ಯೆಹೋವನೆಂಬ ನಾನು ನ್ಯಾಯವನ್ನು ಪ್ರೀತಿಸುತ್ತೇನೆ.”—ಯೆಶಾಯ 61:8.
ನಿಶ್ಚಯವಾಗಿಯೂ, ಇಸ್ರಾಯೇಲಿನ ನ್ಯಾಯಾಂಗ ವ್ಯವಸ್ಥೆಯು, ನಮ್ಮಂತೆಯೇ ಕುಂದುಕೊರತೆಗಳಿದ್ದ ಮಾನವರ ನಿಯಂತ್ರಣದಲ್ಲಿತ್ತು. ನಿಯಮವನ್ನು ತಪ್ಪಾಗಿ ಅನ್ವಯಿಸಲ್ಪಟ್ಟ ಸಂದರ್ಭಗಳಿದ್ದವು. ರಾಜ ಸೊಲೊಮೋನನು ಬರೆದುದು: “ಸಂಸ್ಥಾನದಲ್ಲಿ ಬಡವರ ಹಿಂಸೆಯನ್ನೂ ನೀತಿನ್ಯಾಯಗಳ ನಾಶನವನ್ನೂ ನೀನು ನೋಡಿದರೆ ಆಶ್ಚರ್ಯಪಡಬೇಡ.”—ಪ್ರಸಂಗಿ 5:8.
ತನ್ನ ಪುತ್ರನಿಗೆ ಆಗಿರುವ ಅನ್ಯಾಯವನ್ನು ಯೆಹೋವನು ಸರಿಪಡಿಸಲು ಶಕ್ತನಾಗಿದ್ದನು. ಇದರ ನಿಶ್ಚಿತತೆಯು ಯೇಸುವನ್ನು ಬಲಪಡಿಸಿತು. ಅವನು “ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ . . . ಶಿಲುಬೆಯ [“ಯಾತನಾಕಂಬದ,” NW] ಮರಣವನ್ನು ಸಹಿಸಿಕೊಂಡ”ನು. ತದ್ರೀತಿಯಲ್ಲಿ, ನಿಜ ನ್ಯಾಯದ ಪ್ರಚಲಿತತೆಯೊಂದಿಗೆ ಮೆಸ್ಸೀಯನ ಆಳ್ವಿಕೆಯ ಕೆಳಗಿನ ಭೂಪ್ರಮೋದವನದಲ್ಲಿ ಜೀವಿಸುವ ಆನಂದಕರ ಪ್ರತೀಕ್ಷೆಯು, ಈ ಹಳೆಯ ವ್ಯವಸ್ಥೆಯಲ್ಲಿ ಅನ್ಯಾಯದ ಕುರಿತು ಕೇಳಿಸಿಕೊಳ್ಳುವುದನ್ನು ಅಥವಾ ಅನುಭವಿಸುವುದನ್ನು ಸಹ ಸಹಿಸಿಕೊಳ್ಳುವಂತೆ ನಮ್ಮನ್ನು ಬಲಪಡಿಸಸಾಧ್ಯವಿದೆ. ಯೆಹೋವನು ತನ್ನ ತಕ್ಕ ಸಮಯದಲ್ಲಿ ಸರಿಪಡಿಸಲಾಗದಂತಹ ಯಾವುದೇ ರೀತಿಯ ಹಾನಿ ಅಥವಾ ಕೇಡು ಇಲ್ಲ. ಒಂದು ನ್ಯಾಯಾಂಗದ ತಪ್ಪಿನಿಂದಾಗಿ ತಮ್ಮ ಜೀವಗಳನ್ನು ಕಳೆದುಕೊಳ್ಳುವವರು ಕೂಡ ಪುನರುತ್ಥಾನವನ್ನು ಪಡೆಯಬಹುದು.—ಇಬ್ರಿಯ 12:2; ಅ. ಕೃತ್ಯಗಳು 24:15.
ನಾವು ಅನ್ಯಾಯಕ್ಕೆ ಬಲಿಯಾಗಿ ಕಷ್ಟಪಡುತ್ತಿರುವಲ್ಲಿ, ಅನೇಕ ನ್ಯಾಯಾಂಗ ವ್ಯವಸ್ಥೆಗಳು, ಸನ್ನಿವೇಶವನ್ನು ಸರಿಪಡಿಸಲು ನಮ್ಮನ್ನು ಶಕ್ತಗೊಳಿಸಬಹುದಾದ ಕಾನೂನುಸಂಬಂಧಿತ ಮಾಧ್ಯಮಗಳನ್ನು ಹೊಂದಿರುವುದಕ್ಕಾಗಿ ನಾವು ಕೃತಜ್ಞರಾಗಿರಬಲ್ಲೆವು. ಕ್ರೈಸ್ತರು ಅಂತಹ ಮಾಧ್ಯಮಗಳನ್ನು ಉಪಯೋಗಿಸಬಹುದು. ಹಾಗಿದ್ದರೂ, ಅವರು ಈ ವಾಸ್ತವಾಂಶವನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ: ಅಪರಿಪೂರ್ಣ ನ್ಯಾಯಾಂಗ ವ್ಯವಸ್ಥೆಗಳು, ಪ್ರಮುಖ ಪುನರ್‌ರಚನೆಯ ಅಗತ್ಯವುಳ್ಳ ಮಾನವ ಸಮಾಜದ ಒಂದು ಪ್ರತಿಬಿಂಬವಾಗಿವೆ. ಆ ಪುನರ್‌ರಚನೆಯು ಬೇಗನೆ ದೇವರ ಹಸ್ತದಿಂದ ನಡೆಯಲಿದೆ.
ಯೆಹೋವನು ಬಲು ಬೇಗನೆ, ಈ ಅನ್ಯಾಯದ ವಿಷಯಗಳ ವ್ಯವಸ್ಥೆಯನ್ನು ತೆಗೆದುಹಾಕಿ, ಇದನ್ನು “ನೀತಿಯು ವಾಸವಾಗಿರುವ” ಒಂದು ಹೊಸ ವ್ಯವಸ್ಥೆಯೊಂದಿಗೆ ಸ್ಥಾನಭರ್ತಿಗೊಳಿಸುವನು. ನಮ್ಮ ಸೃಷ್ಟಿಕರ್ತನು ಆಗ ತನ್ನ ಮೆಸ್ಸೀಯ ರಾಜನಾದ ಯೇಸು ಕ್ರಿಸ್ತನ ಮೂಲಕ ನ್ಯಾಯವನ್ನು ಕೊಡುವನೆಂಬ ಪೂರ್ಣ ಭರವಸೆಯು ನಮಗೆ ಇರಬಲ್ಲದು. ಎಲ್ಲರಿಗಾಗಿಯೂ ನಿಜ ನ್ಯಾಯ ಹತ್ತಿರದಲ್ಲಿದೆ! ಈ ಪ್ರತೀಕ್ಷೆಗಾಗಿ ನಾವೆಷ್ಟು ಆಭಾರಿಗಳಾಗಿರಬಲ್ಲೆವು.—2 ಪೇತ್ರ 3:13.
[ಪುಟ 39 ರಲ್ಲಿರುವ ಚೌಕ]
ಪವಿತ್ರ ಶಾಸ್ತ್ರಗಳಿಂದ ಸಾಂತ್ವನ
ನವೆಂಬರ್ 1952ರಲ್ಲಿ, ಡೆರೆಕ್ ಬೆಂಟ್ಲಿ ಮತ್ತು ಕ್ರಿಸ್ಟೊಫರ್ ಕ್ರೇಗ್, ಇಂಗ್ಲೆಂಡಿನ ಲಂಡನಿನ ಹತ್ತಿರದಲ್ಲಿದ್ದ ಕ್ರೈಡನ್‌ನಲ್ಲಿನ ಸರಕುಮಳಿಗೆಯೊಂದಕ್ಕೆ ಕನ್ನಹಾಕಿದರು. ಬೆಂಟ್ಲಿ 19 ವರ್ಷ ಪ್ರಾಯದವನು ಮತ್ತು ಕ್ರೇಗ್ 16 ವರ್ಷ ಪ್ರಾಯದವನಾಗಿದ್ದನು. ಪೊಲೀಸರನ್ನು ಕರೆಯಲಾಯಿತು ಮತ್ತು ಕ್ರೇಗ್ ಪೊಲೀಸರಲ್ಲಿ ಒಬ್ಬನನ್ನು ಗುಂಡಿಕ್ಕಿ ಕೊಂದನು. ಕ್ರೇಗ್ ಸೆರೆಮನೆಯಲ್ಲಿ ಒಂಬತ್ತು ವರ್ಷ ಉಳಿದನು ಮತ್ತು ಬೆಂಟ್ಲಿಯನ್ನು ಜನವರಿ 1953ರಲ್ಲಿ ಕೊಲೆಯ ಆರೋಪದ ಮೇರೆಗೆ ಗಲ್ಲಿಗೇರಿಸಲಾಯಿತು.
ಬೆಂಟ್ಲಿಯ ಅಕ್ಕ ಐರಿಸ್, ಅವನು ಮಾಡದಿದ್ದ ಕೊಲೆಯ ದೋಷಾರೋಪದಿಂದ ಅವನ ಹೆಸರನ್ನು ಮುಕ್ತಗೊಳಿಸಲು, 40 ವರ್ಷಗಳ ವರೆಗೆ ಚಳವಳಿ ನಡಿಸಿದಳು. 1993ರಲ್ಲಿ, ಡೆರೆಕ್ ಬೆಂಟ್ಲಿಯನ್ನು ಗಲ್ಲಿಗೇರಿಸಲೇಬಾರದಿತ್ತು ಎಂಬುದನ್ನು ಒಪ್ಪಿಕೊಳ್ಳುತ್ತಾ, ಆ ದಂಡನೆಯ ವಿಷಯದಲ್ಲಿ ರಾಜಪ್ರಭುತ್ವದ ಅಧಿಕಾರಿಯು ಒಂದು ಕ್ಷಮಾಪಣೆಯನ್ನು ಹೊರಡಿಸಿದನು. ಅವನಿಗೆ ನ್ಯಾಯ ಸಿಗಲಿ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಐರಿಸ್ ಬೆಂಟ್ಲಿ ಆ ಕೇಸಿನ ಕುರಿತಾಗಿ ಬರೆದುದು:
“ಆ ಗುಂಡಿಕ್ಕುವ ಪ್ರಸಂಗದ ಸುಮಾರು ಒಂದು ವರ್ಷದ ಹಿಂದೆ, ಅವನು ಬೀದಿಯಲ್ಲಿ ಒಬ್ಬ ಯೆಹೋವನ ಸಾಕ್ಷಿಯನ್ನು ಭೇಟಿಯಾಗಿದ್ದನು . . . ಸಹೋದರಿ ಲೇನ್, ನಮ್ಮ ಮನೆಯ ಹತ್ತಿರದಲ್ಲಿದ್ದ ಫೇರ್‌ವ್ಯೂ ರಸ್ತೆಯಲ್ಲಿ ವಾಸಿಸುತ್ತಿದ್ದರು ಮತ್ತು ಅವರು ಡೆರೆಕ್‌ನನ್ನು ಬೈಬಲ್ ಕಥೆಗಳಿಗೆ ಕಿವಿಗೊಡುವಂತೆ ತನ್ನ ಮನೆಗೆ ಆಮಂತ್ರಿಸುತ್ತಿದ್ದರು. . . . ಸಹಾಯಕಾರಿಯಾದ ಸಂಗತಿಯೇನಾಗಿತ್ತೆಂದರೆ, ಸಹೋದರಿ ಲೇನ್‌ರವರ ಬಳಿ ಆ ಬೈಬಲ್ ಕಥೆಗಳ ಟೇಪ್‌ಗಳಿದ್ದವು, ಮತ್ತು ಅವರು ಅದನ್ನು ಅವನಿಗೆ ಎರವಲಾಗಿ ನೀಡಿದ್ದರು. [ಯಾಕೆಂದರೆ ಡೆರೆಕ್ ಒಬ್ಬ ಒಳ್ಳೆಯ ಓದುಗನಾಗಿರಲಿಲ್ಲ]. . . . ಅವರು ಅವನಿಗೆ ಏನೆಲ್ಲ ಹೇಳಿದ್ದರೊ ಅದನ್ನು ಅವನು ಮನೆಗೆ ಬಂದು ನನಗೆ ಹೇಳುತ್ತಿದ್ದ. ಸತ್ತ ನಂತರ ನಾವೆಲ್ಲರೂ ಪುನಃ ಹಿಂದಿರುಗಿ ಬರುವೆವು ಎಂಬಂತಹ ಸಂಗತಿಗಳನ್ನು ಹೇಳುತ್ತಿದ್ದ.”
ಅವನ ಗಲ್ಲಿಗೇರಿಸುವಿಕೆಯ ಮುಂಚೆ, ಐರಿಸ್ ಬೆಂಟ್ಲಿ ತನ್ನ ತಮ್ಮನನ್ನು ಮರಣದಂಡನೆಯುಳ್ಳವರಿಗಾಗಿರುವ ಸೆರೆಮನೆಯಲ್ಲಿ ಭೇಟಿಯಾದಳು. ಅವನಿಗೆ ಹೇಗನಿಸುತ್ತಿತ್ತು? “ಸಹೋದರಿ ಲೇನ್ ಅವನಿಗೆ ಹೇಳಿದಂತಹ ಆ ಸಂಗತಿಗಳು, ಅವನಿಗೆ ಆ ಅಂತಿಮ ಕೆಲವು ದಿನಗಳಲ್ಲಿ ಸಹಾಯಮಾಡಿದವು.”—ಓರೆಅಕ್ಷರಗಳು ನಮ್ಮವು.
ನ್ಯಾಯದ ಒಂದು ದೋಷದಿಂದಾಗಿ ನೀವು ಕಷ್ಟವನ್ನು ಅನುಭವಿಸುತ್ತಿರುವಲ್ಲಿ, ಬೈಬಲ್ ಸತ್ಯಗಳನ್ನು ಓದಿ ಅವುಗಳ ಕುರಿತು ಮನನ ಮಾಡುವುದು ನಿಮಗೆ ಒಳ್ಳೇದಾಗಿರುವುದು. ಇವು ಅಪಾರ ಸಾಂತ್ವನವನ್ನು ಒದಗಿಸಬಲ್ಲವು, ಯಾಕಂದರೆ ಯೆಹೋವ ದೇವರು “ಕನಿಕರವುಳ್ಳ ತಂದೆಯೂ ಸಕಲವಿಧವಾಗಿ ಸಂತೈಸುವ ದೇವರೂ ಆಗಿದ್ದು ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುತ್ತಾನೆ.”—2 ಕೊರಿಂಥ 1:3, 4.
[ಪಾದಟಿಪ್ಪಣಿ]
a ಇಲ್ಲಿ ತಿಳಿಸಲ್ಪಟ್ಟಿರುವ ಮೊಕದ್ದಮೆಗಳಲ್ಲಿ, ಕಾವಲಿನಬುರುಜು ಪತ್ರಿಕೆಯು, ಯಾವುದೇ ವ್ಯಕ್ತಿಯ ಅಪರಾಧ ಅಥವಾ ನಿರಪರಾಧಿತನವನ್ನು ಸೂಚಿಸುತ್ತಿಲ್ಲ, ಅಥವಾ ಒಂದು ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಇನ್ನೊಂದು ದೇಶದ ವ್ಯವಸ್ಥೆಗಿಂತ ಉತ್ತಮವಾಗಿದೆಯೆಂದು ಎತ್ತಿಹಿಡಿಯುತ್ತಿಲ್ಲ. ಅದಲ್ಲದೆ, ಈ ಪತ್ರಿಕೆಯು ಯಾವುದೇ ಒಂದು ರೀತಿಯ ಶಿಕ್ಷೆಯನ್ನು ಬೇರೊಂದು ರೀತಿಯ ಶಿಕ್ಷೆಗಿಂತ ಒಳ್ಳೇದೆಂದು ಸಮರ್ಥಿಸುತ್ತಿಲ್ಲ. ಈ ಲೇಖನದ ಬರವಣಿಗೆಯ ಸಮಯದಲ್ಲಿ ಜ್ಞಾತವಾಗಿದ್ದ ವಾಸ್ತವಾಂಶಗಳನ್ನು ಈ ಲೇಖನವು ತಿಳಿಸುತ್ತದೆ.
[ಪುಟ 27 ರಲ್ಲಿರುವ ಚಿತ್ರ]
ಅಪರಿಪೂರ್ಣ ನ್ಯಾಯಾಂಗ ವ್ಯವಸ್ಥೆಗಳು—ಭ್ರಷ್ಟ ಸರಕಾರ, ಕೀಳುಮಟ್ಟದ ಧರ್ಮ ಮತ್ತು ನೀತಿಸೂತ್ರಗಳಿಲ್ಲದ ವ್ಯಾಪಾರದೊಂದಿಗೆ—ಪ್ರಧಾನ ಪುನರ್‌ರಚನೆಯ ಅಗತ್ಯವಿರುವ ಮಾನವ ಸಮಾಜದ ಪ್ರತಿಬಿಂಬವಾಗಿವೆ
[ಪುಟ 29 ರಲ್ಲಿರುವ ಚಿತ್ರ]
ಕ್ರಿಸ್ತನು ವಧಿಸಲ್ಪಟ್ಟಾಗ ಒಂದು ಘೋರ ಅನ್ಯಾಯವು ನಡೆಸಲ್ಪಟ್ಟಿತು