ಯೆಹೋವನು—ನಿಜ ನ್ಯಾಯ ಮತ್ತು ನೀತಿಯ ಮೂಲನು
“ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.”—ಧರ್ಮೋಪದೇಶಕಾಂಡ 32:4.
1. ನ್ಯಾಯಕ್ಕಾಗಿ ನಮಗೆ ಒಂದು ಅಂತರ್ಗತವಾದ ಅಗತ್ಯವಿರುವುದು ಏಕೆ?
ಎಲ್ಲರಿಗೂ ಸ್ವಾಭಾವಿಕವಾಗಿ ಪ್ರೀತಿಯ ಅಗತ್ಯವಿರುವಂತೆಯೇ, ನ್ಯಾಯದಿಂದ ಉಪಚರಿಸಲ್ಪಡುವಂತೆಯೂ ನಾವೆಲ್ಲರೂ ಹಾತೊರೆಯುತ್ತೇವೆ. ಅಮೆರಿಕದ ರಾಜ್ಯನೀತಿಜ್ಞ ಥಾಮಸ್ ಜೆಫರ್ಸನ್ ಅವರು ಬರೆದಂತೆ, “[ನ್ಯಾಯವು] ಸಹಜಪ್ರವೃತ್ತಿಯದ್ದೂ ಸ್ವಾಭಾವಿಕವಾದದ್ದೂ ಆಗಿದೆ, . . . ಸ್ಪರ್ಶ, ದೃಷ್ಟಿ ಅಥವಾ ಶ್ರವಣದಂತೆಯೇ ನಮ್ಮ ರಚನೆಯ ಭಾಗವಾಗಿದೆ.” ಯೆಹೋವನು ನಮ್ಮನ್ನು ತನ್ನ ಸ್ವಂತ ಸ್ವರೂಪದಲ್ಲೇ ಸೃಷ್ಟಿಸಿರುವುದರಿಂದ ಇದು ಆಶ್ಚರ್ಯಕರವಾದ ಸಂಗತಿಯಲ್ಲ. (ಆದಿಕಾಂಡ 1:26) ಹೌದು, ಆತನು ತನ್ನ ಸ್ವಂತ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಗುಣಗಳನ್ನು ನಮಗೆ ಕೊಟ್ಟನು. ಮತ್ತು ಅವುಗಳಲ್ಲಿ ಒಂದು, ನ್ಯಾಯ ಆಗಿದೆ. ಈ ಕಾರಣದಿಂದಲೇ, ನಮ್ಮಲ್ಲಿ ನ್ಯಾಯಕ್ಕಾಗಿ ಒಂದು ಅಂತರ್ಗತ ಅಗತ್ಯವಿದೆ ಮತ್ತು ನಿಜ ನ್ಯಾಯ ಹಾಗೂ ನೀತಿಯ ಒಂದು ಲೋಕದಲ್ಲಿ ಜೀವಿಸಲು ನಾವು ಹಾತೊರೆಯುತ್ತೇವೆ.
2. ನ್ಯಾಯವು ಯೆಹೋವನಿಗೆ ಎಷ್ಟು ಪ್ರಾಮುಖ್ಯವಾಗಿದೆ, ಮತ್ತು ನಾವು ದೈವಿಕ ನ್ಯಾಯದ ಅರ್ಥವನ್ನು ಗ್ರಹಿಸುವ ಅಗತ್ಯ ಏಕಿದೆ?
2 ಯೆಹೋವನ ಕುರಿತಾಗಿ ಬೈಬಲ್ ನಮಗೆ ಆಶ್ವಾಸನೆಯನ್ನೀಯುವುದು: “ಆತನು ನಡಿಸುವದೆಲ್ಲಾ ನ್ಯಾಯ.” (ಧರ್ಮೋಪದೇಶಕಾಂಡ 32:4) ಆದರೆ ಅನ್ಯಾಯದಿಂದ ಪೀಡಿಸಲ್ಪಟ್ಟಿರುವ ಲೋಕವೊಂದರಲ್ಲಿ ದೈವಿಕ ನ್ಯಾಯದ ಅರ್ಥವನ್ನು ಗ್ರಹಿಸಿಕೊಳ್ಳುವುದು ಸುಲಭವಲ್ಲ. ದೇವರ ವಾಕ್ಯದ ಪುಟಗಳ ಮೂಲಕವಾದರೊ, ದೇವರು ನ್ಯಾಯವನ್ನು ಹೇಗೆ ನೀಡುತ್ತಾನೆಂಬುದನ್ನು ನಾವು ವಿವೇಚಿಸಬಲ್ಲೆವು, ಮತ್ತು ದೇವರ ಅದ್ಭುತಕರವಾದ ಮಾರ್ಗಗಳನ್ನು ಇನ್ನೂ ಹೆಚ್ಚಾಗಿ ಗಣ್ಯಮಾಡಬಲ್ಲೆವು. (ರೋಮಾಪುರ 11:33) ನ್ಯಾಯವನ್ನು ಬೈಬಲ್ ಸಂಬಂಧಿತ ಅರ್ಥದಲ್ಲಿ ತಿಳಿದುಕೊಳ್ಳುವುದು ಪ್ರಾಮುಖ್ಯ ಏಕಂದರೆ ನ್ಯಾಯದ ಕುರಿತಾದ ನಮ್ಮ ವಿಚಾರವು, ಮಾನವ ಕಲ್ಪನೆಗಳಿಂದ ಪ್ರಭಾವಿಸಲ್ಪಟ್ಟಿರಬಹುದು. ಮಾನವ ದೃಷ್ಟಿಕೋನದಿಂದ, ನ್ಯಾಯವು, ನಿಯಮದ ಪಕ್ಷಪಾತವಿಲ್ಲದ ಅನ್ವಯಕ್ಕಿಂತ ಹೆಚ್ಚೇನಲ್ಲವೆಂದು ಪರಿಗಣಿಸಲ್ಪಡಬಹುದು. ಅಥವಾ ತತ್ತ್ವಜ್ಞಾನಿ ಫ್ರಾನ್ಸಿಸ್ ಬೇಕನ್ ಬರೆದಂತೆ, “ಪ್ರತಿಯೊಬ್ಬ ಮನುಷ್ಯನಿಗೆ ಅವನು ಯಾವುದಕ್ಕೆ ಅರ್ಹನಾಗಿದ್ದಾನೊ ಅದನ್ನು ಕೊಡುವುದೇ ನ್ಯಾಯ.” ಆದರೆ ಯೆಹೋವನ ನ್ಯಾಯದಲ್ಲಿ ಹೆಚ್ಚಿನದ್ದು ಒಳಗೂಡಿರುತ್ತದೆ.
ಯೆಹೋವನ ನ್ಯಾಯವು ಹೃದಯೋಲ್ಲಾಸಕರ
3. ನ್ಯಾಯ ಮತ್ತು ನೀತಿಗಾಗಿ ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವ ಮೂಲ ಭಾಷಾ ಪದಗಳನ್ನು ಪರಿಗಣಿಸುವುದರಿಂದ ಏನನ್ನು ಕಲಿಯಸಾಧ್ಯವಿದೆ?
3 ಬೈಬಲಿನಲ್ಲಿ ಮೂಲ ಭಾಷೆಯ ಪದಗಳು ಉಪಯೋಗಿಸಲ್ಪಟ್ಟಿರುವ ವಿಧವನ್ನು ಪರಿಗಣಿಸುವ ಮೂಲಕ ದೇವರ ನ್ಯಾಯದ ವ್ಯಾಪ್ತಿಯನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳಸಾಧ್ಯವಿದೆ.a ಆಸಕ್ತಿಕರವಾಗಿ, ಶಾಸ್ತ್ರಗಳಲ್ಲಿ ನ್ಯಾಯ ಮತ್ತು ನೀತಿಯ ನಡುವೆ ಮಹತ್ವದ ವ್ಯತ್ಯಾಸವೇನಿಲ್ಲ. ವಾಸ್ತವದಲ್ಲಿ ಆ ಹೀಬ್ರೂ ಪದಗಳನ್ನು, ಕೆಲವೊಮ್ಮೆ ಆಮೋಸ 5:24ರಲ್ಲಿ ನಾವು ನೋಡುವಂತೆ ಸಮಾಂತರವಾಗಿ ಉಪಯೋಗಿಸಲಾಗಿದೆ. ಅಲ್ಲಿ ಯೆಹೋವನು ತನ್ನ ಜನರಿಗೆ ಹೀಗೆ ಪ್ರೇರಿಸುತ್ತಾನೆ: “ನ್ಯಾಯವು ಹೊಳೆಯ ಹಾಗೆ ಹರಿಯಲಿ, ಧರ್ಮವು ಮಹಾ ನದಿಯಂತೆ ಪ್ರವಹಿಸಲಿ.” ಅದಲ್ಲದೆ, “ನೀತಿನ್ಯಾಯ” ಎಂಬ ಪದಗಳು, ಒತ್ತುಕೊಡುವುದಕ್ಕಾಗಿ ಹಲವಾರು ಸಲ ಜೊತೆಯಾಗಿ ಬರೆಯಲ್ಪಟ್ಟಿವೆ.—ಕೀರ್ತನೆ 33:5; ಯೆಶಾಯ 33:5; ಯೆರೆಮೀಯ 33:15; ಯೆಹೆಜ್ಕೇಲ 18:21; 45:9.
4. ನ್ಯಾಯವನ್ನು ಆಚರಿಸುವುದರ ಅರ್ಥವೇನು, ಮತ್ತು ನ್ಯಾಯದ ಅಂತಿಮ ಮಟ್ಟವು ಏನಾಗಿದೆ?
4 ಈ ಹೀಬ್ರು ಮತ್ತು ಗ್ರೀಕ್ ಪದಗಳು ಯಾವ ಅರ್ಥವನ್ನು ಕೊಡುತ್ತವೆ? ಶಾಸ್ತ್ರೀಯ ಅರ್ಥದಲ್ಲಿ ನ್ಯಾಯವನ್ನು ಆಚರಿಸುವುದು, ಸರಿಯಾದದ್ದನ್ನು ಮತ್ತು ನ್ಯಾಯವಾದದ್ದನ್ನು ಮಾಡುವುದನ್ನು ಅರ್ಥೈಸುತ್ತದೆ. ನೈತಿಕ ನಿಯಮಗಳು ಮತ್ತು ಮೂಲತತ್ವಗಳನ್ನು, ಅಥವಾ ಸರಿ ಮತ್ತು ನ್ಯಾಯವಾದದ್ದನ್ನು ಸ್ಥಾಪಿಸುವವನು ಯೆಹೋವನಾಗಿರುವುದರಿಂದ, ಯೆಹೋವನು ಕೆಲಸಗಳನ್ನು ಮಾಡುವ ವಿಧವು, ನ್ಯಾಯದ ಅಂತಿಮ ಮಟ್ಟವಾಗಿದೆ. ತೀಯೊಲಾಜಿಕಲ್ ವರ್ಡ್ಬುಕ್ ಆಫ್ ದ ಓಲ್ಡ್ ಟೆಸ್ಟಮೆಂಟ್ ಹೇಳುವುದೇನೆಂದರೆ ನೀತಿ (ಸೆಡೆಕ್) ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಶಬ್ದವು, “ಒಂದು ನೀತಿಶಾಸ್ತ್ರ, ನೈತಿಕ ಮಟ್ಟಕ್ಕೆ ಸೂಚಿಸುತ್ತದೆ ಮತ್ತು ಹಳೆಯ ಒಡಂಬಡಿಕೆಯಲ್ಲಿ ಆ ಮಟ್ಟವು ಖಂಡಿತವಾಗಿಯೂ ದೇವರ ಸ್ವಭಾವ ಮತ್ತು ಚಿತ್ತವಾಗಿದೆ.” ಹೀಗೆ, ದೇವರು ತನ್ನ ಮೂಲತತ್ವಗಳನ್ನು ಅನ್ವಯಿಸುವ ವಿಧ ಮತ್ತು ವಿಶೇಷವಾಗಿ ಆತನು ಅಪರಿಪೂರ್ಣ ಮನುಷ್ಯರೊಂದಿಗೆ ವ್ಯವಹರಿಸುವ ವಿಧವು, ನಿಜ ನ್ಯಾಯ ಮತ್ತು ನೀತಿಯ ಮಹತ್ವಾರ್ಥವನ್ನು ಪ್ರಕಟಿಸುತ್ತದೆ.
5. ಯಾವ ಗುಣಗಳು ದೇವರ ನ್ಯಾಯದೊಂದಿಗೆ ಸಂಬಂಧಿಸುತ್ತವೆ?
5 ದೈವಿಕ ನ್ಯಾಯವು ಕಠೋರ ಮತ್ತು ಬಗ್ಗದಂತಹದ್ದು ಆಗಿರುವ ಬದಲಿಗೆ ಹೃದಯೋಲ್ಲಾಸಕರ ಆಗಿದೆಯೆಂದು ಶಾಸ್ತ್ರಗಳು ಸ್ಪಷ್ಟವಾಗಿ ತೋರಿಸುತ್ತವೆ. ದಾವೀದನು ಹೀಗೆ ಹಾಡಿದನು: “ಯೆಹೋವನು ನ್ಯಾಯವನ್ನು ಮೆಚ್ಚುವವನು; ತನ್ನ ಭಕ್ತರನ್ನು ಎಂದಿಗೂ ಕೈಬಿಡುವವನಲ್ಲ.” (ಕೀರ್ತನೆ 37:28) ದೇವರ ನ್ಯಾಯವು, ಆತನು ತನ್ನ ಸೇವಕರ ಕಡೆಗೆ ನಂಬಿಗಸ್ತಿಕೆ ಮತ್ತು ಕನಿಕರವನ್ನು ತೋರಿಸುವಂತೆ ಪ್ರಚೋದಿಸುತ್ತದೆ. ದೈವಿಕ ನ್ಯಾಯವು ನಮ್ಮ ಅಗತ್ಯಗಳ ಕುರಿತು ಸೂಕ್ಷ್ಮಗ್ರಾಹಿಯಾಗಿದೆ ಮತ್ತು ನಮ್ಮ ಅಪರಿಪೂರ್ಣತೆಗಳನ್ನು ಕ್ಷಮಿಸುತ್ತದೆ. (ಕೀರ್ತನೆ 103:14) ದೇವರು ದುಷ್ಟತನವನ್ನು ಮನ್ನಿಸುತ್ತಾನೆಂಬುದನ್ನು ಇದು ಅರ್ಥೈಸುವುದಿಲ್ಲ, ಯಾಕಂದರೆ ಹಾಗೆ ಮಾಡುವುದು ಅನ್ಯಾಯವನ್ನು ಉತ್ತೇಜಿಸುವುದು. (1 ಸಮುವೇಲ 3:12, 13; ಪ್ರಸಂಗಿ 8:11) ತಾನು “ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು” ಆಗಿದ್ದೇನೆಂದು ಮೋಶೆಗೆ ಹೇಳಿದನು. ತಪ್ಪು ಮತ್ತು ದೋಷವನ್ನು ಕ್ಷಮಿಸಲು ಸಿದ್ಧನಾಗಿದ್ದರೂ, ಶಿಕ್ಷೆಗೆ ಅರ್ಹರಾದವರನ್ನು ಶಿಕ್ಷಿಸುವುದರಿಂದ ದೇವರು ಹಿಂದೆಸರಿಯುವುದಿಲ್ಲ.—ವಿಮೋಚನಕಾಂಡ 34:6, 7.
6. ಯೆಹೋವನು ತನ್ನ ಐಹಿಕ ಮಕ್ಕಳೊಂದಿಗೆ ಹೇಗೆ ವ್ಯವಹರಿಸುತ್ತಾನೆ?
6 ಯೆಹೋವನು ನ್ಯಾಯವನ್ನು ಆಚರಿಸುವ ವಿಧದ ಕುರಿತಾಗಿ ನಾವು ಮನನ ಮಾಡುವಾಗ, ತಪ್ಪಿತಸ್ಥರಿಗೆ ದಂಡನೆಯನ್ನು ಕೊಡುವುದರ ಕುರಿತಾಗಿ ಮಾತ್ರ ಚಿಂತಿತನಾಗಿರುವ ಒಬ್ಬ ನಿರ್ದಯಿ ನ್ಯಾಯಾಧೀಶನಾಗಿದ್ದಾನೆಂದು ನಾವು ಯೋಚಿಸಬಾರದು. ಅದಕ್ಕೆ ಬದಲಾಗಿ, ಆತನು ಯಾವಾಗಲೂ ತನ್ನ ಮಕ್ಕಳೊಂದಿಗೆ ಅತ್ಯುತ್ತಮವಾದ ವಿಧದಲ್ಲಿ ವ್ಯವಹರಿಸುವ ಪ್ರೀತಿಪರನಾದರೂ ದೃಢಮನಸ್ಸಿನ ತಂದೆಯಾಗಿದ್ದಾನೆಂದು ನಾವು ನೆನಸಬೇಕು. “ಯೆಹೋವನೇ, ನೀನು ನಮ್ಮ ತಂದೆಯಾಗಿದ್ದೀ” ಎಂದು ಪ್ರವಾದಿ ಯೆಶಾಯನು ಹೇಳಿದನು. (ಯೆಶಾಯ 64:8) ಒಬ್ಬ ನ್ಯಾಯವಂತ ಮತ್ತು ನೀತಿವಂತ ತಂದೆಯೋಪಾದಿ ಯೆಹೋವನು, ಸರಿಯಾದದ್ದನ್ನು ಮಾಡುವುದಕ್ಕಾಗಿರುವ ದೃಢತೆಯನ್ನು, ತನ್ನ ಐಹಿಕ ಮಕ್ಕಳ ಕಡೆಗಿನ ಕೋಮಲ ಕನಿಕರದೊಂದಿಗೆ ಸಮತೋಲನಗೊಳಿಸುತ್ತಾನೆ. ಆ ಮಕ್ಕಳಿಗೆ, ಕಷ್ಟಕರವಾದ ಪರಿಸ್ಥಿತಿಗಳಿಂದಾಗಿ ಅಥವಾ ಶಾರೀರಿಕ ಬಲಹೀನತೆಗಳಿಂದಾಗಿ ಸಹಾಯ ಅಥವಾ ಕ್ಷಮಾಪಣೆಯ ಅಗತ್ಯವಿದೆ.—ಕೀರ್ತನೆ 103:6, 10, 13.
ನ್ಯಾಯ ಏನಾಗಿದೆಯೆಂಬುದನ್ನು ಸ್ಪಷ್ಟಪಡಿಸುವುದು
7. (ಎ) ಯೆಶಾಯನ ಪ್ರವಾದನೆಯಿಂದ ನಾವು ದೈವಿಕ ನ್ಯಾಯದ ಕುರಿತಾಗಿ ಏನನ್ನು ಕಲಿಯುತ್ತೇವೆ? (ಬಿ) ಜನಾಂಗಗಳಿಗೆ ನ್ಯಾಯವನ್ನು ಕಲಿಸುವುದರಲ್ಲಿ ಯೇಸುವಿಗೆ ಯಾವ ಪಾತ್ರವಿತ್ತು?
7 ಯೆಹೋವನ ನ್ಯಾಯದ ಕನಿಕರಭರಿತ ಸ್ವಭಾವವು, ಮೆಸ್ಸೀಯನ ಬರುವಿಕೆಯಿಂದ ಎತ್ತಿತೋರಿಸಲ್ಪಟ್ಟಿತು. ಪ್ರವಾದಿಯಾದ ಯೆಶಾಯನಿಂದ ಮುಂತಿಳಿಸಲ್ಪಟ್ಟಂತೆ, ಯೇಸು ದೈವಿಕ ನ್ಯಾಯದ ಕುರಿತಾಗಿ ಕಲಿಸಿದನು ಮತ್ತು ಅದಕ್ಕನುಸಾರ ಜೀವಿಸಿದನು. ಸ್ಪಷ್ಟವಾಗಿ, ದೇವರ ನ್ಯಾಯದಲ್ಲಿ, ದಬ್ಬಾಳಿಕೆಗೆ ಒಳಗಾಗಿರುವ ಜನರನ್ನು ಕೋಮಲತೆಯಿಂದ ಉಪಚರಿಸುವುದು ಸೇರಿರುತ್ತದೆ. ಹೀಗೆ ಮಾಡುವುದರಿಂದ, ಅವರು ಚೇತರಿಸಿಕೊಳ್ಳಲಾರದಷ್ಟು ಮನಮುರಿದವರಾಗುವುದಿಲ್ಲ. ಯೆಹೋವನ “ಸೇವಕ”ನಾದ ಯೇಸು, ದೇವರ ನ್ಯಾಯದ ಈ ಅಂಶವನ್ನು ‘ಅನ್ಯಜನಗಳಿಗೂ ಸಾರಲು’ ಭೂಮಿಗೆ ಬಂದನು. ದೈವಿಕ ನ್ಯಾಯವೆಂದರೇನೆಂಬುದರ ಒಂದು ಜೀವಂತ ಮಾದರಿಯನ್ನು ನಮಗೆ ಕೊಡುವ ಮೂಲಕ ಅವನು ಎಲ್ಲಕ್ಕಿಂತಲೂ ಹೆಚ್ಚಾಗಿ ಇದನ್ನು ಮಾಡಿದನು. ರಾಜ ದಾವೀದನ “ಸದ್ಧರ್ಮಿಯಾದ ಮೊಳಿಕೆ”ಯೋಪಾದಿ, ಯೇಸು ‘ನ್ಯಾಯವನ್ನು ಹುಡುಕಲು ಮತ್ತು ನೀತಿಯನ್ನು ತಡವಿಲ್ಲದೇ ನಿರ್ವಹಿಸಲು’ (NW) ಆತುರನಾಗಿದ್ದನು.—ಯೆಶಾಯ 16:5; 42:1-4; ಮತ್ತಾಯ 12:18-21; ಯೆರೆಮೀಯ 33:14, 15.
8. ಪ್ರಥಮ ಶತಮಾನದಲ್ಲಿ ನಿಜ ನ್ಯಾಯ ಮತ್ತು ನೀತಿಯು ಅಸ್ಪಷ್ಟವಾದದ್ದು ಏಕೆ?
8 ಯೆಹೋವನ ನ್ಯಾಯದ ಸ್ವಭಾವದ ಕುರಿತಾದ ಅಂತಹ ಒಂದು ಸ್ಪಷ್ಟೀಕರಣವು, ವಿಶೇಷವಾಗಿ ಸಾ.ಶ. ಪ್ರಥಮ ಶತಮಾನದಲ್ಲಿ ಅವಶ್ಯವಾಗಿತ್ತು. ಯೆಹೂದಿ ಹಿರಿಯರು ಮತ್ತು ಧಾರ್ಮಿಕ ಮುಖಂಡರು—ಶಾಸ್ತ್ರಿಗಳು, ಫರಿಸಾಯರು, ಮತ್ತು ಇತರರು—ನ್ಯಾಯ ಮತ್ತು ನೀತಿಯ ವಕ್ರಗೊಳಿಸಲ್ಪಟ್ಟ ದೃಷ್ಟಿಕೋನವನ್ನು ಘೋಷಿಸಿ, ಅದಕ್ಕನುಸಾರ ಜೀವಿಸಿದರು. ಫಲಸ್ವರೂಪವಾಗಿ, ಶಾಸ್ತ್ರಿಗಳು ಮತ್ತು ಫರಿಸಾಯರಿಂದ ಇಡಲ್ಪಟ್ಟಿದ್ದ ಬೇಡಿಕೆಗಳಿಗನುಸಾರ ಜೀವಿಸುವುದು ಅಸಾಧ್ಯವಾಗಿರುವುದನ್ನು ಕಂಡುಕೊಂಡ ಸಾಮಾನ್ಯ ಜನರು, ದೇವರ ನೀತಿಯು ನಿಲುಕಲಾರದ್ದೆಂದು ಊಹಿಸಿದ್ದಿರಬಹುದು. (ಮತ್ತಾಯ 23:4; ಲೂಕ 11:46) ಆದರೆ ವಿಷಯವು ಹಾಗಲ್ಲವೆಂದು ಯೇಸು ತೋರಿಸಿದನು. ಈ ಸಾಮಾನ್ಯ ಜನರೊಳಗಿಂದಲೇ ಅವನು ತನ್ನ ಶಿಷ್ಯರನ್ನು ಆರಿಸಿಕೊಂಡು, ಅವರಿಗೆ ದೇವರ ನೀತಿಯ ಮಟ್ಟಗಳನ್ನು ಕಲಿಸಿದನು.—ಮತ್ತಾಯ 9:36; 11:28-30.
9, 10. (ಎ) ಶಾಸ್ತ್ರಿಗಳು ಮತ್ತು ಫರಿಸಾಯರು ತಮ್ಮ ನೀತಿಯನ್ನು ಪ್ರದರ್ಶಿಸಲು ಪ್ರಯತ್ನಿಸಿದ್ದು ಹೇಗೆ? (ಬಿ) ಶಾಸ್ತ್ರಿಗಳು ಮತ್ತು ಫರಿಸಾಯರ ಆಚರಣೆಗಳು ವ್ಯರ್ಥವಾಗಿದ್ದವೆಂದು ಯೇಸು ಹೇಗೆ ಮತ್ತು ಯಾಕೆ ಪ್ರಕಟಿಸಿದನು?
9 ಇನ್ನೊಂದು ಕಡೆ, ಫರಿಸಾಯರು ಬಹಿರಂಗವಾಗಿ ಪ್ರಾರ್ಥಿಸುವ ಮೂಲಕ ಅಥವಾ ಕಾಣಿಕೆಗಳನ್ನು ಕೊಡುವ ಮೂಲಕ ತಮ್ಮ “ನೀತಿಯನ್ನು” (NW) ಪ್ರದರ್ಶಿಸಲು ಸಂದರ್ಭಗಳನ್ನು ಹುಡುಕಿದರು. (ಮತ್ತಾಯ 6:1-6) ಎಣಿಸಲಾಗದಷ್ಟು ನಿಯಮಗಳು ಮತ್ತು ವಿಧಿಗಳನ್ನು—ಇವುಗಳಲ್ಲಿ ಹೆಚ್ಚಿನವುಗಳನ್ನು ಅವರೇ ರಚಿಸಿದ್ದರು—ಪಾಲಿಸುವ ಮೂಲಕವೂ ಅವರು ತಮ್ಮ ನೀತಿಯನ್ನು ಪ್ರದರ್ಶಿಸಲು ಪ್ರಯತ್ನಿಸಿದರು. ಅಂತಹ ಪ್ರಯತ್ನಗಳು ಅವರು “ನ್ಯಾಯವನ್ನೂ ದೇವರ ಪ್ರೀತಿಯನ್ನೂ ಒತ್ತಟ್ಟಿಗೆ ಬಿಡು”ವಂತೆ ನಡಿಸಿತು. (ಲೂಕ 11:42) ಹೊರಗಿನಿಂದ ಅವರು ನೀತಿವಂತರಾಗಿ ತೋರಿದ್ದಿರಬಹುದಾದರೂ, ಒಳಗೆ ಅವರು ಅನೀತಿ ಅಥವಾ “ಅನ್ಯಾಯದಿಂದ ತುಂಬಿದವರಾಗಿ”ದ್ದರು. (ಮತ್ತಾಯ 23:28) ಸರಳವಾಗಿ ಹೇಳುವುದಾದರೆ, ಅವರಿಗೆ ದೇವರ ನೀತಿಯ ತುಂಬ ಕಡಿಮೆ ಜ್ಞಾನವಿತ್ತು.
10 ಆ ಕಾರಣಕ್ಕಾಗಿ, ಯೇಸು ತನ್ನ ಹಿಂಬಾಲಕರನ್ನು ಎಚ್ಚರಿಸಿದ್ದು: “ನಿಮ್ಮ ನೀತಿಯು ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ಹೆಚ್ಚಿನದಾಗದಿದ್ದರೆ ನೀವು ಪರಲೋಕರಾಜ್ಯದಲ್ಲಿ ಸೇರಲಾರಿರಿ.” (ಮತ್ತಾಯ 5:20) ಯೇಸುವಿನಿಂದ ತೋರಿಸಲ್ಪಟ್ಟ ದೈವಿಕ ನ್ಯಾಯ ಮತ್ತು ಶಾಸ್ತ್ರಿಗಳು ಹಾಗೂ ಫರಿಸಾಯರ ಸಂಕುಚಿತಸ್ವಭಾವದ ಸ್ವನೀತಿಯ ನಡುವಿನ ದೊಡ್ಡ ವ್ಯತ್ಯಾಸವು ಅವರ ನಡುವೆ ಪದೇಪದೇ ಸಂಭವಿಸುತ್ತಿದ್ದ ಕಲಹಗಳಿಗೆ ಕಾರಣವಾಗಿತ್ತು.
ದೈವಿಕ ನ್ಯಾಯದ ವಿರುದ್ಧ ವಕ್ರಗೊಳಿಸಲ್ಪಟ್ಟಿರುವ ನ್ಯಾಯ
11. (ಎ) ಸಬ್ಬತ್ದಿನದಂದು ಗುಣಪಡಿಸುವುದರ ಕುರಿತಾಗಿ ಫರಿಸಾಯರು ಯೇಸುವನ್ನು ಪ್ರಶ್ನಿಸಿದ್ದೇಕೆ? (ಬಿ) ಯೇಸುವಿನ ಉತ್ತರವು ಏನನ್ನು ಪ್ರಕಟಪಡಿಸಿತು?
11 ಇಸವಿ ಸಾ.ಶ. 31ರ ವಸಂತಕಾಲದಲ್ಲಿ, ಗಲಿಲಾಯದಲ್ಲಿನ ತನ್ನ ಶುಶ್ರೂಷೆಯ ಸಮಯದಲ್ಲಿ, ಯೇಸು ಸಭಾಮಂದಿರದಲ್ಲಿ ಕೈಬತ್ತಿದ್ದ ಮನುಷ್ಯನೊಬ್ಬನನ್ನು ಕಂಡನು. ಅದು ಸಬ್ಬತ್ ಸಮಯವಾಗಿದ್ದುದರಿಂದ ಫರಿಸಾಯರು ಯೇಸುವಿಗೆ ಹೀಗೆ ಕೇಳಿದರು: “ಸಬ್ಬತ್ದಿನದಲ್ಲಿ ಸ್ವಸ್ಥಮಾಡುವದು ಸರಿಯೋ”? ಈ ಬಡ ಮನುಷ್ಯನ ಕಷ್ಟಾನುಭವಕ್ಕಾಗಿ ನಿಜವಾದ ಚಿಂತೆಯನ್ನು ತೋರಿಸುವ ಬದಲಿಗೆ, ಅವರ ಪ್ರಶ್ನೆಯು ಪ್ರಕಟಿಸಿದಂತೆ, ಯೇಸುವನ್ನು ಖಂಡಿಸಲಿಕ್ಕಾಗಿ ಒಂದು ನೆಪವನ್ನು ಹುಡುಕಲು ಅವರು ಬಯಸಿದರು. ಅವರ ಕಲ್ಲು ಹೃದಯಗಳಿಂದಾಗಿ ಯೇಸು ದುಃಖಪಟ್ಟದ್ದು ಆಶ್ಚರ್ಯಕರವಲ್ಲ! ಅವನು ಅನಂತರ ಫರಿಸಾಯರಿಗೆ ತದ್ರೀತಿಯ ಪ್ರಶ್ನೆಯನ್ನು ತಿರುಗಿ ಕೇಳಿದನು: “ಸಬ್ಬತ್ದಿನದಲ್ಲಿ ಯಾವದನ್ನು ಮಾಡುವದು ನ್ಯಾಯ? ಮೇಲನ್ನು ಮಾಡುವದೋ”? ಅವರು ಉತ್ತರಕೊಡದೆ ಸುಮ್ಮನಾದಾಗ, ಸಬ್ಬತ್ದಿನದಂದು ಕುಣಿಯೊಳಗೆ ಬಿದ್ದಿರುವ ಒಂದು ಕುರಿಯನ್ನು ಅವರು ಮೇಲೆತ್ತುವುದಿಲ್ಲವೊ ಎಂದು ಕೇಳುವ ಮೂಲಕ ಯೇಸು ತನ್ನ ಸ್ವಂತ ಪ್ರಶ್ನೆಯನ್ನು ಉತ್ತರಿಸಿದನು.b “ಕುರಿಗಿಂತ ಮನುಷ್ಯನು ಎಷ್ಟೋ ಹೆಚ್ಚು” ಎಂದು ಯೇಸು ನಿರಾಕರಿಸಲಾಗದ ವಾದಸರಣಿಯೊಂದಿಗೆ ತರ್ಕಿಸಿದನು. “ಆದಕಾರಣ ಸಬ್ಬತ್ ದಿನದಲ್ಲಿ ಒಳ್ಳೇ ಕೆಲಸ ಮಾಡುವದು ತಕ್ಕದ್ದೇ ಸರಿ” ಎಂದು ಅವನು ಹೇಳಿಮುಗಿಸಿದನು. ದೇವರ ನ್ಯಾಯವು ಮಾನವ ಸಂಪ್ರದಾಯದಿಂದ ಎಂದೂ ಕಟ್ಟಿಹಾಕಲ್ಪಡಬಾರದು. ಆ ವಿಷಯವನ್ನು ಸ್ಪಷ್ಟಪಡಿಸಿದ ಬಳಿಕ, ಯೇಸು ಮುಂದೆ ಹೋಗಿ ಆ ಮನುಷ್ಯನ ಕೈಯನ್ನು ಗುಣಪಡಿಸಿದನು.—ಮತ್ತಾಯ 12:9-13; ಮಾರ್ಕ 3:1-5.
12, 13. (ಎ) ಶಾಸ್ತ್ರಿಗಳು ಮತ್ತು ಫರಿಸಾಯರಿಗೆ ವ್ಯತಿರಿಕ್ತವಾಗಿ, ಪಾಪಿಗಳಿಗೆ ಸಹಾಯಮಾಡುವುದರಲ್ಲಿ ಯೇಸು ತನ್ನ ಆಸಕ್ತಿಯನ್ನು ತೋರಿಸಿದ್ದು ಹೇಗೆ? (ಬಿ) ದೈವಿಕ ನ್ಯಾಯ ಮತ್ತು ಸ್ವನೀತಿಯ ನಡುವಿನ ವ್ಯತ್ಯಾಸವೇನು?
12 ಶಾರೀರಿಕ ಕುಂದುಗಳಿದ್ದವರ ಕುರಿತಾಗಿ ಸ್ವಲ್ಪವೇ ಕಾಳಜಿವಹಿಸಿದ ಫರಿಸಾಯರು, ಆತ್ಮಿಕವಾಗಿ ಬಡವರಾಗಿದ್ದವರ ಕುರಿತಾಗಿ ಇನ್ನೂ ಕಡಿಮೆ ಕಾಳಜಿವಹಿಸಿದರು. ನೀತಿಯ ಕುರಿತಾದ ಅವರ ವಕ್ರವಾದ ನೋಟವು, ಸುಂಕದವರು ಮತ್ತು ಪಾಪಿಗಳನ್ನು ಅಲಕ್ಷಿಸಿ, ತುಚ್ಛವಾಗಿ ಕಾಣುವಂತೆ ಅವರನ್ನು ನಡಿಸಿತು. (ಯೋಹಾನ 7:49) ಹಾಗಿದ್ದರೂ, ಅಂತಹವರಲ್ಲಿ ಅನೇಕರು ಯೇಸುವಿನ ಬೋಧನೆಗೆ ಪ್ರತಿಕ್ರಿಯಿಸಿದರು. ಇದು, ಅವನಿಗೆ ತೀರ್ಪನ್ನು ವಿಧಿಸುವುದಕ್ಕಿಂತಲೂ ಸಹಾಯಮಾಡಲು ಅವನಿಗಿದ್ದ ಬಯಕೆಯನ್ನು ಅವರು ಗ್ರಹಿಸಿದ್ದರಿಂದಾಗಿತ್ತೆಂಬುದು ನಿಸ್ಸಂದೇಹ. (ಮತ್ತಾಯ 21:31; ಲೂಕ 15:1) ಫರಿಸಾಯರಾದರೊ, ಯೇಸು ಆತ್ಮಿಕವಾಗಿ ಅಸ್ವಸ್ಥರಾಗಿದ್ದವರನ್ನು ಗುಣಪಡಿಸಲು ಮಾಡಿದಂತಹ ಪ್ರಯತ್ನಗಳನ್ನು ಹೀನೈಸಿದರು. “ಇವನು ಪಾಪಿಗಳನ್ನು ಸೇರಿಸಿಕೊಂಡು ಅವರ ಜೊತೆಯಲ್ಲಿ ಊಟಮಾಡುತ್ತಾನೆ” ಎಂದು ಅವರು ಆಕ್ಷೇಪಣಾರ್ಹವಾಗಿ ಗುಣುಗುಟ್ಟಿದ್ದರು. (ಲೂಕ 15:2) ಅವರ ಅಪವಾದಕ್ಕೆ ಉತ್ತರವಾಗಿ, ಯೇಸು ಪುನಃ ಒಬ್ಬ ಕುರುಬನ ದೃಷ್ಟಾಂತವನ್ನು ಉಪಯೋಗಿಸಿದನು. ಒಬ್ಬ ಕುರುಬನು ಕಳೆದುಹೋಗಿರುವ ಕುರಿಯೊಂದನ್ನು ಪುನಃ ಕಂಡುಕೊಳ್ಳುವಾಗ ಹರ್ಷಿಸುವಂತೆಯೇ, ಒಬ್ಬ ಪಾಪಿಯು ಪಶ್ಚಾತ್ತಾಪಪಡುವಾಗ ಸ್ವರ್ಗದಲ್ಲಿರುವ ದೇವದೂತರು ಹರ್ಷಿಸುತ್ತಾರೆ. (ಲೂಕ 15:3-7) ಜಕ್ಕಾಯನು ತನ್ನ ಹಿಂದಿನ ಪಾಪಪೂರ್ಣ ಜೀವನಕ್ರಮದ ಕುರಿತು ಪಶ್ಚಾತ್ತಾಪಪಡುವಂತೆ ಸಹಾಯಮಾಡಲು ಶಕ್ತನಾದಾಗ ಯೇಸು ತಾನೇ ಹರ್ಷಿಸಿದನು. “ಮನುಷ್ಯಕುಮಾರನು ಕೆಟ್ಟುಹೋಗಿರುವದನ್ನು ಹುಡುಕಿ ರಕ್ಷಿಸುವದಕ್ಕೆ ಬಂದನು” ಎಂದು ಅವನು ಹೇಳಿದನು.—ಲೂಕ 19:8-10.
13 ಈ ವಿವಾದಗಳು, ಗುಣಪಡಿಸಲು ಹಾಗೂ ರಕ್ಷಿಸಲು ಪ್ರಯತ್ನಿಸುವ ದೈವಿಕ ನ್ಯಾಯ, ಮತ್ತು ಕೆಲವರನ್ನು ಉನ್ನತಕ್ಕೇರಿಸಿ ಅನೇಕರನ್ನು ಖಂಡಿಸಲು ಪ್ರಯತ್ನಿಸುವ ಸ್ವನೀತಿಯ ನಡುವಣ ವ್ಯತ್ಯಾಸವನ್ನು ಸ್ಪಷ್ಟವಾಗಿ ಪ್ರಕಟಪಡಿಸುತ್ತವೆ. ಪೊಳ್ಳು ಸಂಸ್ಕಾರ ಮತ್ತು ಮಾನವರಚಿತ ಸಂಪ್ರದಾಯವು, ಶಾಸ್ತ್ರಿಗಳನ್ನು ಮತ್ತು ಫರಿಸಾಯರನ್ನು ಅಹಂಭಾವ ಮತ್ತು ಸ್ವಪ್ರಾಮುಖ್ಯತೆಗೆ ನಡಿಸಿತು. ಆದರೆ ಅವರು “ಧರ್ಮಶಾಸ್ತ್ರದಲ್ಲಿ ಗೌರವವಾದದ್ದನ್ನು, ಅಂದರೆ ನ್ಯಾಯವನ್ನೂ ಕರುಣೆಯನ್ನೂ ನಂಬಿಕೆಯನ್ನೂ ಬಿಟ್ಟುಬಿಟ್ಟಿ”ದ್ದರೆಂದು ಯೇಸು ಸೂಕ್ತವಾಗಿಯೇ ತೋರಿಸಿದನು. (ಮತ್ತಾಯ 23:23) ನಾವು ಮಾಡುವ ಪ್ರತಿಯೊಂದು ವಿಷಯದಲ್ಲಿ ನಿಜ ನ್ಯಾಯವನ್ನು ಆಚರಿಸುವ ಮೂಲಕ ನಾವು ಯೇಸುವನ್ನು ಅನುಕರಿಸೋಣ ಮತ್ತು ಸ್ವನೀತಿಯ ಗುಂಡಿಯೊಳಗೆ ಬೀಳದಂತೆಯೂ ಜಾಗ್ರತೆವಹಿಸೋಣ.
14. ಯೇಸುವಿನ ಅದ್ಭುತಕಾರ್ಯಗಳಲ್ಲಿ ಒಂದು, ದೈವಿಕ ನ್ಯಾಯವು ಒಬ್ಬ ವ್ಯಕ್ತಿಯ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆಂಬುದನ್ನು ಹೇಗೆ ತೋರಿಸುತ್ತದೆ?
14 ಯೇಸು, ಫರಿಸಾಯರ ಇಚ್ಛಾನುಸಾರವಾದ ನಿಯಮಗಳನ್ನು ಅಲಕ್ಷಿಸಿದರೂ, ಅವನು ಮೋಶೆಯ ಧರ್ಮಶಾಸ್ತ್ರವನ್ನು ನಿಶ್ಚಯವಾಗಿಯೂ ಪಾಲಿಸಿದನು. (ಮತ್ತಾಯ 5:17, 18) ಹೀಗೆ ಮಾಡುವುದರಿಂದ, ಆ ನೀತಿಯ ಧರ್ಮಶಾಸ್ತ್ರದ ಶಬ್ದಾರ್ಥವು, ಅದರ ಮೂಲತತ್ತ್ವಗಳನ್ನು ತುಳಿದುಹಾಕುವಂತೆ ಅವನು ಅನುಮತಿಸಲಿಲ್ಲ. 12 ವರ್ಷಗಳಿಂದ ರಕ್ತಕುಸುಮ ರೋಗದಿಂದ ಬಳಲುತ್ತಿದ್ದ ಒಬ್ಬ ಸ್ತ್ರೀಯು ಅವನ ಬಟ್ಟೆಗಳನ್ನು ಸ್ಪರ್ಶಿಸಿ ಗುಣವಾದಾಗ, ಯೇಸು ಅವಳಿಗಂದದ್ದು: “ಮಗಳೇ ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು.” (ಲೂಕ 8:43-48) ದೇವರ ನ್ಯಾಯವು ಅವಳ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಂಡಿತ್ತೆಂಬುದನ್ನು ಯೇಸುವಿನ ಸಹಾನುಭೂತಿಯ ಮಾತುಗಳು ದೃಢೀಕರಿಸಿದವು. ಅವಳು ಸಂಪ್ರದಾಯಕ್ಕನುಸಾರವಾಗಿ ಅಶುದ್ಧಳಾಗಿದ್ದು, ಜನಸಮೂಹದ ಮಧ್ಯೆ ಬರುವ ಮೂಲಕ ಮೋಶೆಯ ಧರ್ಮಶಾಸ್ತ್ರವನ್ನು ಕಾನೂನಿನ ದೃಷ್ಟಿಯಿಂದ ಉಲ್ಲಂಘಿಸಿದ್ದರೂ, ಅವಳ ನಂಬಿಕೆಯು ಬಹುಮಾನಿಸಲ್ಪಡಲು ಅರ್ಹವಾದಂತಹದ್ದಾಗಿತ್ತು.—ಯಾಜಕಕಾಂಡ 15:25-27; ರೋಮಾಪುರ 9:30-33ನ್ನು ಹೋಲಿಸಿರಿ.
ನೀತಿಯು ಎಲ್ಲರಿಗಾಗಿದೆ
15, 16. (ಎ) ನೆರೆಹೊರೆಭಾವದ ಸಮಾರ್ಯದವನ ಯೇಸುವಿನ ದೃಷ್ಟಾಂತವು ನ್ಯಾಯದ ಕುರಿತಾಗಿ ನಮಗೇನನ್ನು ಕಲಿಸುತ್ತದೆ? (ಬಿ) ನಾವು ಏಕೆ “ವಿಪರೀತವಾಗಿ ನೀತಿವಂತ”ರಾಗಿರಬಾರದು?
15 ದೈವಿಕ ನ್ಯಾಯದ ಕನಿಕರಭರಿತ ಸ್ವರೂಪವನ್ನು ಒತ್ತಿತೋರಿಸಿದ್ದಲ್ಲದೆ, ದೈವಿಕ ನ್ಯಾಯವು ಎಲ್ಲ ಜನರನ್ನು ಒಳಗೂಡಿಸಬೇಕೆಂಬುದನ್ನೂ ಯೇಸು ತನ್ನ ಶಿಷ್ಯರಿಗೆ ಕಲಿಸಿದನು. ಅವನು ‘ರಾಷ್ಟ್ರಗಳಿಗೆ ನ್ಯಾಯವನ್ನು ತರುವುದು’ (NW) ಯೆಹೋವನ ಚಿತ್ತವಾಗಿತ್ತು. (ಯೆಶಾಯ 42:1) ನೆರೆಹೊರೆಭಾವದ ಸಮಾರ್ಯದವನ, ಯೇಸುವಿನ ಅತಿ ಪ್ರಸಿದ್ಧ ದೃಷ್ಟಾಂತವೊಂದರ ಮುಖ್ಯವಿಷಯ ಇದೇ ಆಗಿತ್ತು. ಆ ದೃಷ್ಟಾಂತವು, “ತನ್ನನ್ನು ನೀತಿವಂತನೆಂದು ತೋರಿಸಿಕೊಳ್ಳ”ಲು ಬಯಸಿದ, ಧರ್ಮಶಾಸ್ತ್ರದಲ್ಲಿ ನಿಪುಣನಾಗಿದ್ದ ಒಬ್ಬ ಮನುಷ್ಯನಿಂದ ಎಬ್ಬಿಸಲ್ಪಟ್ಟಿದ್ದ ಪ್ರಶ್ನೆಗೆ ಉತ್ತರವಾಗಿತ್ತು. ತನ್ನ ನೆರೆಹೊರೆಯ ಕಡೆಗಿನ ಜವಾಬ್ದಾರಿಗಳನ್ನು ನಿಸ್ಸಂದೇಹವಾಗಿ ಕೇವಲ ಯೆಹೂದಿ ಜನರಿಗೆ ನಿರ್ಬಂಧಿಸಲು ಬಯಸುತ್ತಾ, “ನನ್ನ ನೆರೆಯವನು ಯಾರು?” ಎಂದು ಆ ಮನುಷ್ಯನು ಕೇಳಿದನು. ಯೇಸುವಿನ ದೃಷ್ಟಾಂತದಲ್ಲಿನ ಆ ಸಮಾರ್ಯದವನು, ದೈವಿಕ ನೀತಿಯನ್ನು ಪ್ರದರ್ಶಿಸಿದನು ಯಾಕಂದರೆ ಅವನು, ಇನ್ನೊಂದು ಜನಾಂಗದ ಒಬ್ಬ ಅಪರಿಚಿತನಿಗೆ ಸಹಾಯಮಾಡಲು ತನ್ನ ಸಮಯ ಮತ್ತು ಹಣವನ್ನು ಖರ್ಚುಮಾಡಲು ಸಿದ್ಧನಿದ್ದನು. “ನೀನೂ ಅದರಂತೆ ಮಾಡು,” ಎಂದು ತನ್ನನ್ನು ಪ್ರಶ್ನಿಸುವವನಿಗೆ ಬುದ್ಧಿಹೇಳುತ್ತಾ ಯೇಸು ಆ ದೃಷ್ಟಾಂತವನ್ನು ಸಮಾಪ್ತಿಗೊಳಿಸಿದನು. (ಲೂಕ 10:25-37) ನಾವು ತದ್ರೀತಿಯಲ್ಲಿ, ಎಲ್ಲ ಜನರಿಗೆ ಅವರ ಜಾತೀಯ ಅಥವಾ ಕುಲಸಂಬಂಧಿತ ಹಿನ್ನಲೆಯನ್ನು ಎಣಿಸದೆ ನಾವು ಒಳಿತನ್ನು ಮಾಡುವಲ್ಲಿ, ನಾವು ದೇವರ ನ್ಯಾಯವನ್ನು ಅನುಕರಿಸುತ್ತಿರುವೆವು.—ಅ. ಕೃತ್ಯಗಳು 10:34, 35.
16 ಇನ್ನೊಂದು ಕಡೆ, ಶಾಸ್ತ್ರಿಗಳ ಮತ್ತು ಫರಿಸಾಯರ ಉದಾಹರಣೆಯು, ನಾವು ದೈವಿಕ ನ್ಯಾಯವನ್ನು ಆಚರಿಸುವಲ್ಲಿ, “ವಿಪರೀತವಾಗಿ ನೀತಿವಂತ” (NW)ರಾಗಿರಬಾರದೆಂಬುದನ್ನು ನಮಗೆ ಜ್ಞಾಪಕಹುಟ್ಟಿಸುತ್ತದೆ. (ಪ್ರಸಂಗಿ 7:16) ನೀತಿಯ ಆಡಂಬರದ ಪ್ರದರ್ಶನಗಳೊಂದಿಗೆ ಇತರರ ಮನಸ್ಸಿಗೆ ಹಿಡಿಸಲು ಪ್ರಯತ್ನಿಸುವುದು, ಅಥವಾ ಮಾನವನಿರ್ಮಿತ ನಿಯಮಗಳಿಗೆ ಅತಿರೇಕವಾದ ಮಹತ್ವವನ್ನು ಕೊಡುವುದು ನಮಗೆ ದೇವರ ಸಮ್ಮತಿಯನ್ನು ತರುವುದಿಲ್ಲ.—ಮತ್ತಾಯ 6:1.
17. ನಾವು ದೈವಿಕ ನ್ಯಾಯವನ್ನು ಪ್ರದರ್ಶಿಸುವುದು ಏಕೆ ಬಹಳ ಪ್ರಾಮುಖ್ಯವಾಗಿದೆ?
17 ದೇವರ ನ್ಯಾಯದ ಸ್ವರೂಪವನ್ನು ಯೇಸು ರಾಷ್ಟ್ರಗಳಿಗೆ ಸ್ಪಷ್ಟಪಡಿಸಿದ ಒಂದು ಕಾರಣ, ತನ್ನ ಶಿಷ್ಯರೆಲ್ಲರೂ ಇದೇ ಗುಣವನ್ನು ಪ್ರದರ್ಶಿಸಲು ಕಲಿಯಬೇಕೆಂಬುದೇ. ಇದು ಯಾಕೆ ಇಷ್ಟು ಪ್ರಾಮುಖ್ಯವಾಗಿದೆ? ‘ದೇವರನ್ನು ಅನುಸರಿಸುವವರಾಗಿರಿ’ ಎಂದು ಶಾಸ್ತ್ರಗಳು ನಮಗೆ ಬುದ್ಧಿಹೇಳುತ್ತವೆ ಮತ್ತು ದೇವರ ಎಲ್ಲ ಮಾರ್ಗಗಳು ನ್ಯಾಯವಾಗಿವೆ. (ಎಫೆಸ 5:1) ತದ್ರೀತಿಯಲ್ಲಿ, ಯೆಹೋವನ ಆವಶ್ಯಕತೆಗಳಲ್ಲಿ ಒಂದು, ನಾವು ನಮ್ಮ ದೇವರೊಂದಿಗೆ ನಡೆಯುತ್ತಿರುವಾಗ “ನ್ಯಾಯವನ್ನು ಆಚರಿಸುವುದು” ಆಗಿದೆಯೆಂದು ಮೀಕ 6:8 ವಿವರಿಸುತ್ತದೆ. ಇನ್ನೂ ಹೆಚ್ಚಾಗಿ, ಯೆಹೋವನ ಕೋಪದ ದಿನದ ಸಮಯದಲ್ಲಿ ನಾವು ಮರೆಯಾಗಲು ಬಯಸುವಲ್ಲಿ, ಆ ದಿನವು ಬರುವ ಮುಂಚೆ ನಾವು “ನೀತಿಯನ್ನು ಹುಡುಕಬೇಕು” (NW) ಎಂದು ಚೆಫನ್ಯ 2:2, 3 ನಮಗೆ ಜ್ಞಾಪಕಹುಟ್ಟಿಸುತ್ತದೆ.
18. ಮುಂದಿನ ಲೇಖನದಲ್ಲಿ ಯಾವ ಪ್ರಶ್ನೆಗಳು ಉತ್ತರಿಸಲ್ಪಡುವವು?
18 ಆದುದರಿಂದ ಈ ಕಠಿನವಾದ ಕಡೇ ದಿವಸಗಳು, ನ್ಯಾಯವನ್ನು ಆಚರಿಸಲು “ಪ್ರಸನ್ನಕಾಲ” ಆಗಿವೆ. (2 ಕೊರಿಂಥ 6:2) ಯೋಬನಂತೆ, ನಾವು ‘ನೀತಿಯನ್ನು ನಮ್ಮ ಬಟ್ಟೆ’ ಮತ್ತು ‘ನ್ಯಾಯವನ್ನು ನಮ್ಮ ತೋಳಿಲ್ಲದ ನಿಲುವಂಗಿ’ ಮಾಡುವಲ್ಲಿ ಯೆಹೋವನು ನಮ್ಮನ್ನು ಆಶೀರ್ವದಿಸುವನು. (ಯೋಬ 29:14, NW) ಯೆಹೋವನ ನ್ಯಾಯದಲ್ಲಿ ನಂಬಿಕೆಯು, ನಾವು ಭವಿಷ್ಯತ್ತಿನ ಕಡೆಗೆ ಭರವಸೆಯಿಂದ ಎದುರುನೋಡುವಂತೆ ಹೇಗೆ ಸಹಾಯಮಾಡುವುದು? ಇದಲ್ಲದೆ, ನಾವು ನೀತಿಯ “ನೂತನಭೂಮಿ”ಗಾಗಿ ಕಾಯುತ್ತಿರುವಾಗ, ದೈವಿಕ ನ್ಯಾಯವು ನಮ್ಮನ್ನು ಆತ್ಮಿಕವಾಗಿ ಹೇಗೆ ಸಂರಕ್ಷಿಸುವುದು? (2 ಪೇತ್ರ 3:13) ಮುಂದಿನ ಲೇಖನವು ಈ ಪ್ರಶ್ನೆಗಳನ್ನು ಉತ್ತರಿಸುವುದು.
[ಅಧ್ಯಯನ ಪ್ರಶ್ನೆಗಳು]
a ಹೀಬ್ರೂ ಶಾಸ್ತ್ರಗಳಲ್ಲಿ, ಮೂರು ಪ್ರಧಾನ ಶಬ್ದಗಳು ಒಳಗೂಡಿವೆ. ಅವುಗಳಲ್ಲಿ ಒಂದನ್ನು (ಮಿಷ್ಫಾಟ್) ಅನೇಕವೇಳೆ “ನ್ಯಾಯ” ಎಂದು ಭಾಷಾಂತರಿಸಲಾಗಿದೆ. ಇನ್ನೆರಡು ಪದಗಳನ್ನು (ಸೆದೆಕ್ ಮತ್ತು ಸಂಬಂಧಿತ ಪದವಾದ ಸೆದಾಕಾ) ಹೆಚ್ಚಾಗಿ “ನೀತಿ” ಎಂದು ಭಾಷಾಂತರಿಸಲಾಗಿದೆ. “ನೀತಿ” (ಡಿಕೈಸಿನೇ) ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು, “ಸರಿ ಅಥವಾ ನ್ಯಾಯವಾದದ್ದಾಗಿರುವ ಗುಣ”ದೋಪಾದಿ ಅರ್ಥನಿರೂಪಿಸಲಾಗಿದೆ.
b ಯೇಸು ಕೊಟ್ಟ ಉದಾಹರಣೆಯು ತಕ್ಕದ್ದಾಗಿತ್ತು, ಯಾಕಂದರೆ ಯೆಹೂದ್ಯರ ಮೌಖಿಕ ನಿಯಮವು, ಸಬ್ಬತ್ದಿನದಂದು ಅವರು ಸಂಕಷ್ಟದಲ್ಲಿರುವ ಒಂದು ಪ್ರಾಣಿಗೆ ನೆರವನ್ನು ಕೊಡಲು ನಿರ್ದಿಷ್ಟವಾಗಿ ಅನುಮತಿಸಿತು. ಇತರ ಅನೇಕ ಸಂದರ್ಭಗಳಲ್ಲಿ, ಇದೇ ವಿಷಯದ ಕುರಿತು ಅಂದರೆ, ಸಬ್ಬತ್ದಿನದಂದು ಗುಣಪಡಿಸುವುದು ನ್ಯಾಯಯುತವಾಗಿತ್ತೊ ಎಂಬುದರ ಕುರಿತು ವಿವಾದಗಳಿದ್ದವು.—ಲೂಕ 13:10-17; 14:1-6; ಯೋಹಾನ 9:13-16.
ನೀವು ವಿವರಿಸಬಲ್ಲಿರೊ?
◻ ದೈವಿಕ ನ್ಯಾಯದ ಅರ್ಥವೇನು?
◻ ಯೇಸು ಜನಾಂಗಗಳಿಗೆ ನ್ಯಾಯವನ್ನು ಕಲಿಸಿದ್ದು ಹೇಗೆ?
◻ ಫರಿಸಾಯರ ನೀತಿಯು ವಕ್ರಗೊಳಿಸಲ್ಪಟ್ಟಂಥದ್ದು ಆಗಿತ್ತು ಏಕೆ?
◻ ನಾವು ನ್ಯಾಯವನ್ನು ಆಚರಿಸುವ ಅಗತ್ಯವಿದೆಯೇಕೆ?
[ಪುಟ 8 ರಲ್ಲಿರುವ ಚಿತ್ರ]
ದೈವಿಕ ನ್ಯಾಯದ ವ್ಯಾಪ್ತಿಯನ್ನು ಯೇಸು ಸ್ಪಷ್ಟಪಡಿಸಿದನು