ಟ್ಯಾಲ್ಮಡ್—ಅಂದರೆ ಏನು?
“ಈ ಸಮಯದ ವರೆಗಿನ ಅತ್ಯಂತ ಗಮನಾರ್ಹವಾದ ಎಲ್ಲ ಸಾಹಿತ್ಯಾತ್ಮಕ ಪ್ರಕಾಶನಗಳಲ್ಲಿ ಟ್ಯಾಲ್ಮಡ್ ಒಂದಾಗಿದೆ ಎಂಬುದರಲ್ಲಿ ಸಂದೇಹವಿಲ್ಲ.”—ದಿ ಯೂನಿವರ್ಸಲ್ ಜ್ಯೂವಿಷ್ ಎನ್‌ಸೈಕ್ಲೊಪೀಡಿಯ.
“[ಟ್ಯಾಲ್ಮಡ್] ಮಾನವಕುಲದ ಮಹಾನ್ ಬುದ್ಧಿಶಕ್ತಿಯ ಸಾಧನೆಗಳಲ್ಲಿ ಒಂದಾಗಿದೆ. ಅದು ಎಷ್ಟೊಂದು ಗಾಢವಾದ, ಅರ್ಥವತ್ತಾದ, ಕುಶಾಗ್ರವಾದ ದಾಖಲೆಯಾಗಿದೆ ಎಂದರೆ, ಅದು ಒಂದೂವರೆ ಸಹಸ್ರ ವರ್ಷಗಳಿಗಿಂತಲೂ ಹೆಚ್ಚು ಸಮಯದ ವರೆಗೆ ಭವ್ಯ ಬುದ್ಧಿಶಾಲಿಗಳನ್ನು ಕಾರ್ಯಮಗ್ನವಾಗಿಟ್ಟಿದೆ.”—ಜೇಕಬ್ ನೊಯಿಸ್ನರ್, ಯೆಹೂದಿ ಪಂಡಿತ ಹಾಗೂ ಗ್ರಂಥಕರ್ತ.
“ಟ್ಯಾಲ್ಮಡ್ [ಯೆಹೂದಿಮತದ] ಪ್ರಮುಖ ಸ್ತಂಭವಾಗಿದ್ದು, ಯೆಹೂದಿ ಜೀವನದ ಸಂಪೂರ್ಣ ಆತ್ಮಿಕ ಹಾಗೂ ಬುದ್ಧಿಶಕ್ತಿಯ ಕಟ್ಟಡಕ್ಕೆ ಆಧಾರವನ್ನು ಒದಗಿಸುತ್ತದೆ.”—ಏಡನ್ ಸ್ಟೈನ್‌ಸಾಲ್ಟ್ಸ್, ಟ್ಯಾಲ್ಮಡ್ ಸಂಬಂಧಿತ ಪಂಡಿತ ಹಾಗೂ ರಬ್ಬಿ.
ಟ್ಯಾಲ್ಮಡ್ ಶತಮಾನಗಳಿಂದ ಯೆಹೂದಿ ಜನರ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೆ, ಮೇಲೆ ಉಲ್ಲೇಖಿಸಲ್ಪಟ್ಟ ಈ ಸ್ತುತಿಯ ಅಭಿವ್ಯಕ್ತಿಗಳಿಗೆ ವ್ಯತಿರಿಕ್ತವಾಗಿ, ಟ್ಯಾಲ್ಮಡ್ ನಿಂದಿಸಲ್ಪಟ್ಟಿದೆ ಮತ್ತು “ಅಸ್ಪಷ್ಟತೆ ಹಾಗೂ ಗಲಿಬಿಲಿಯ ಸಾಗರ”ವೆಂದು ಕರೆಯಲ್ಪಟ್ಟಿದೆ. ಅದು ಪಿಶಾಚನ ಪಾಷಂಡ ಕೃತಿಯಾಗಿ ದೂಷಿಸಲ್ಪಟ್ಟಿದೆ. ಪೋಪನ ಆಜ್ಞೆಯ ಕಾರಣ, ಅದರ ಮೇಲೆ ಆಗಾಗ ಕತ್ತರಿಪ್ರಯೋಗವಾಗಿದೆ, ಅದು ವಶಪಡಿಸಿಕೊಳ್ಳಲ್ಪಟ್ಟಿದೆ, ಮತ್ತು ಯೂರೋಪಿನ ಸಾರ್ವಜನಿಕ ಚೌಕಗಳಲ್ಲಿ ಅದನ್ನು ದೊಡ್ಡ ಸಂಖ್ಯೆಗಳಲ್ಲಿ ಸುಡಲಾಯಿತು.
ಇಷ್ಟೊಂದು ವಾಗ್ವಾದವನ್ನು ಕೆರಳಿಸಿರುವ ಈ ಕೃತಿಯು ನಿಜವಾಗಿಯೂ ಯಾವುದಾಗಿದೆ? ಯೆಹೂದಿ ಬರಹಗಳಲ್ಲಿ ಟ್ಯಾಲ್ಮಡನ್ನು ಅಪೂರ್ವವಾದ ಕೃತಿಯನ್ನಾಗಿ ಯಾವುದು ಮಾಡುತ್ತದೆ? ಅದು ಏಕೆ ಬರೆಯಲ್ಪಟ್ಟಿತು? ಯೆಹೂದಿಮತದ ಮೇಲೆ ಅದು ಇಷ್ಟೊಂದು ಪ್ರಭಾವವನ್ನು ಹೇಗೆ ಬೀರುವಂತಾಗಿದೆ? ಇದು ಯೆಹೂದ್ಯೇತರರಿಗೆ ಯಾವ ಅರ್ಥವನ್ನಾದರೂ ಪಡೆದಿರುತ್ತದೊ?
ಸಾ.ಶ. 70ರಲ್ಲಿ ಯೆರೂಸಲೇಮಿನಲ್ಲಿದ್ದ ದೇವಾಲಯದ ನಾಶನದ ಅನಂತರದ 150 ವರ್ಷಗಳ ಸಮಯದಲ್ಲಿ, ಇಸ್ರಾಯೇಲಿನ ಆದ್ಯಂತವಿದ್ದ ರಬ್ಬಿಸಂಬಂಧಿತ ಜ್ಞಾನಿಗಳ ವಿದ್ಯಾಸಂಸ್ಥೆಗಳು, ಯೆಹೂದಿ ಆಚರಣೆಯನ್ನು ಉಳಿಸಿಕೊಂಡು ಹೋಗಲಿಕ್ಕಾಗಿ ಹೊಸದೊಂದು ಆಧಾರವನ್ನು ತುರ್ತಾಗಿ ಹುಡುಕಿದವು. ಅವರು ವಾಗ್ವಾದ ಮಾಡಿ, ತರುವಾಯ ತಮ್ಮ ಮೌಖಿಕ ನಿಯಮದ ಹಲವಾರು ಸಂಪ್ರದಾಯಗಳನ್ನು ಕ್ರೋಡೀಕರಿಸಿದರು. ಈ ಆಧಾರದ ಮೇಲೆ ಕಟ್ಟುತ್ತಾ, ಅವರು ಯೆಹೂದಿಮತಕ್ಕಾಗಿ ಹೊಸ ಮಿತಿಗಳನ್ನು ಮತ್ತು ಆವಶ್ಯಕತೆಗಳನ್ನು ಸ್ಥಾಪಿಸಿ, ದೇವಾಲಯವಿಲ್ಲದೆಯೇ ಅನುದಿನದ ಪರಿಶುದ್ಧ ಜೀವಿತಕ್ಕಾಗಿ ಮಾರ್ಗದರ್ಶನವನ್ನು ನೀಡಿದರು. ಈ ಹೊಸ ಆತ್ಮಿಕ ಚೌಕಟ್ಟು, ಸಾ.ಶ. ಮೂರನೆಯ ಶತಮಾನದ ಆರಂಭದಲ್ಲಿ ಜೂಡಾ ಹ-ನಸೀ ಅವರಿಂದ ಸಂಕಲಿಸಲ್ಪಟ್ಟ ಮಿಷ್ನಾದಲ್ಲಿ ರೇಖಿಸಲ್ಪಟ್ಟಿತ್ತು.a
ಮಿಷ್ನಾವು ಬೈಬಲ್ ಸಂಬಂಧಿತ ಉಲ್ಲೇಖಗಳ ಆಧಾರದ ಮೇಲೆ ಸಮರ್ಥನೆಯನ್ನು ಪಡೆದುಕೊಳ್ಳಲು ಪ್ರಯತ್ನಿಸದೆ, ಸ್ವತಂತ್ರವಾಗಿತ್ತು. ಬೈಬಲ್ ಗ್ರಂಥಪಾಠಕ್ಕಿಂತಲೂ ಭಿನ್ನವಾಗಿದ್ದು, ಇದರ ಚರ್ಚಾ ವಿಧಾನ ಮತ್ತು ಅದರ ಹೀಬ್ರೂ ಭಾಷೆಯ ಶೈಲಿಯು ಅಪೂರ್ವವಾಗಿತ್ತು. ಮಿಷ್ನಾದಲ್ಲಿ ಉಲ್ಲೇಖಿಸಲ್ಪಟ್ಟ ರಬ್ಬಿಗಳ ನಿರ್ಣಯಗಳು, ಎಲ್ಲೆಡೆಯೂ ಜೀವಿಸುತ್ತಿರುವ ಯೆಹೂದಿಗಳ ಅನುದಿನದ ಜೀವಿತಗಳನ್ನು ಪ್ರಭಾವಿಸಲಿಕ್ಕಿದ್ದವು. ಆ ಕಾರಣ, ಜೇಕಬ್ ನೊಯಿಸ್ನರ್ ಹೇಳಿಕೆ ನೀಡಿದ್ದು: “ಮಿಷ್ನಾ ಇಸ್ರಾಯೇಲ್‌ನ ನಿಬಂಧನೆಯನ್ನು ಒದಗಿಸಿಕೊಟ್ಟಿತು. . . . ಅದು ತನ್ನ ನಿಯಮಗಳಿಗೆ ಸಮ್ಮತಿಯನ್ನೂ ಅನುವರ್ತನೆಯನ್ನೂ ಅಗತ್ಯಪಡಿಸಿತು.”
ಆದರೆ, ಮಿಷ್ನಾದಲ್ಲಿ ಉಲ್ಲೇಖಿಸಲ್ಪಟ್ಟ ಜ್ಞಾನಿಗಳ ಅಧಿಕಾರವು, ಪ್ರಕಟಿಸಲ್ಪಟ್ಟ ಶಾಸ್ತ್ರಕ್ಕೆ ನಿಜವಾಗಿಯೂ ಸರಿಸಮವಾಗಿತ್ತೊ ಎಂದು ಯಾರಾದರೂ ಪ್ರಶ್ನಿಸುವುದಾದರೆ ಆಗೇನು? ಮಿಷ್ನಾದಲ್ಲಿ ಕಂಡುಕೊಳ್ಳಲ್ಪಡುವ ಟಾನಾಯೀಮ್ (ಮೌಖಿಕ ನಿಯಮದ ಶಿಕ್ಷಕರು)ರ ಬೋಧನೆಗಳು, ಹೀಬ್ರು ಶಾಸ್ತ್ರಗಳೊಂದಿಗೆ ಪರಿಪೂರ್ಣ ಒಮ್ಮತದಲ್ಲಿದ್ದವೆಂದು ರಬ್ಬಿಗಳು ತೋರಿಸಬೇಕಾಗಿತ್ತು. ಹೆಚ್ಚಿನ ವಿವರಣೆಯು ಅನಿವಾರ್ಯವಾಯಿತು. ಮಿಷ್ನಾವನ್ನು ವಿವರಿಸುವ ಹಾಗೂ ಸಮರ್ಥಿಸುವ ಮತ್ತು ಅದು ಸೀನಾಯಿಯಲ್ಲಿ ಮೋಶೆಗೆ ಕೊಡಲ್ಪಟ್ಟ ಧರ್ಮಶಾಸ್ತ್ರದಿಂದ ಉದ್ಭವಿಸಿತೆಂಬುದನ್ನು ರುಜುಪಡಿಸುವ ಅಗತ್ಯವನ್ನು ಅವರು ಮನಗಂಡರು. ಮೌಖಿಕ ಹಾಗೂ ಲಿಖಿತ ಧರ್ಮಶಾಸ್ತ್ರಕ್ಕೆ ಒಂದೇ ಅರ್ಥ ಹಾಗೂ ಉದ್ದೇಶವಿದೆಯೆಂದು ರುಜುಪಡಿಸುವ ನಿರ್ಬಂಧವನ್ನು ರಬ್ಬಿಗಳು ಮನಗಂಡರು. ಮಿಷ್ನಾವು ಯೆಹೂದಿಮತದ ವಿಷಯದಲ್ಲಿ ಅಂತಿಮ ಹೇಳಿಕೆಯಾಗಿರುವ ಬದಲು, ಧಾರ್ಮಿಕ ಚರ್ಚೆ ಹಾಗೂ ವಾಗ್ವಾದಕ್ಕಾಗಿ ಹೊಸ ಆಧಾರವಾಯಿತು.
ಟ್ಯಾಲ್ಮಡ್‌ನ ರಚನೆ
ಈ ಹೊಸ ಪಂಥಾಹ್ವಾನವನ್ನು ವಹಿಸಿಕೊಂಡ ರಬ್ಬಿಗಳು, ಅಮೋರಾಯೀಮ್—ಮಿಷ್ನಾದ “ವ್ಯಾಖ್ಯಾಕಾರರು,” ಇಲ್ಲವೆ “ವಿವರಣೆಗಾರರು”—ಎಂದು ಜ್ಞಾತರಾಗಿದ್ದರು. ಪ್ರತಿಯೊಂದು ವಿದ್ಯಾಸಂಸ್ಥೆಯು ಒಬ್ಬ ಪ್ರಖ್ಯಾತ ರಬ್ಬಿಯ ಸುತ್ತಲೂ ಕೇಂದ್ರೀಕೃತವಾಗಿತ್ತು. ಪಂಡಿತರ ಹಾಗೂ ವಿದ್ಯಾರ್ಥಿಗಳ ಒಂದು ಚಿಕ್ಕ ಗುಂಪು, ವರ್ಷವಿಡೀ ಚರ್ಚೆಗಳನ್ನು ನಡೆಸಿತು. ಆದರೆ ಅತ್ಯಂತ ಪ್ರಮುಖವಾದ ಕಾರ್ಯಕ್ರಮಾವಧಿಗಳು ವರ್ಷಕ್ಕೆ ಎರಡು ಬಾರಿ, ಆಡರ್ ಮತ್ತು ಏಲೂಲ್ ತಿಂಗಳುಗಳಲ್ಲಿ ಜರುಗಿದವು—ಆಗ ಬೇಸಾಯದ ಕೆಲಸವು ನಿಧಾನಗತಿಯಲ್ಲಿದ್ದು, ನೂರಾರು ಇಲ್ಲವೆ ಸಾವಿರಾರು ಹೆಚ್ಚಿನ ಜನರು ಹಾಜರಾಗಸಾಧ್ಯವಿತ್ತು.
ಏಡನ್ ಸ್ಟೈನ್‌ಸಾಲ್ಟ್ಸ್ ವಿವರಿಸುವುದು: “ವಿದ್ಯಾಸಂಸ್ಥೆಯ ಮುಖ್ಯಸ್ಥನು, ಒಂದು ಕುರ್ಚಿಯ ಮೇಲೆ ಇಲ್ಲವೆ ವಿಶೇಷ ಚಾಪೆಗಳ ಮೇಲೆ ಕುಳಿತು ಅಧ್ಯಕ್ಷತೆ ವಹಿಸಿದನು. ಅವನಿಗೆ ಎದುರಾಗಿ ಮುಂದಿನ ಸಾಲುಗಳಲ್ಲಿ, ಅವನ ಜೊತೆಕೆಲಸಗಾರರು ಇಲ್ಲವೆ ಪ್ರಖ್ಯಾತ ಪಂಡಿತರನ್ನು ಒಳಗೊಂಡು, ಪ್ರಮುಖರಾದ ವಿದ್ಯಾವರ್ಗದವರು ಮತ್ತು ಅವರ ಹಿಂದೆ ಬೇರೆಲ್ಲಾ ಪಂಡಿತರು ಕುಳಿತಿರುತ್ತಿದ್ದರು. . . . ಕುಳಿತುಕೊಳ್ಳುವ ಕ್ರಮವು [ಪ್ರಮುಖತೆಗನುಸಾರ] ನಿಖರವಾಗಿ ವ್ಯಾಖ್ಯಾನಿಸಲ್ಪಟ್ಟ ಕ್ರಮಬದ್ಧ ಶ್ರೇಣಿಯ ಮೇಲಾಧಾರಿತವಾಗಿತ್ತು.” ಮಿಷ್ನಾದ ಒಂದು ಭಾಗವನ್ನು ಪಠಿಸಲಾಗುತ್ತಿತ್ತು. ತರುವಾಯ ಇದನ್ನು, ಮಿಷ್ನಾದಲ್ಲಿ ಸೇರಿಸಲ್ಪಟ್ಟಿರದ ಆದರೆ ಟಾನಾಯೀಮ್ ಅವರಿಂದ ಒಟ್ಟುಗೂಡಿಸಲ್ಪಟ್ಟ ಸದೃಶ ಇಲ್ಲವೆ ಸಂಪೂರಕ ವಿಷಯದೊಂದಿಗೆ ಹೋಲಿಸಲಾಗುತ್ತಿತ್ತು. ವಿಶ್ಲೇಷಣೆಯ ಪ್ರಕ್ರಿಯೆಯು ಆರಂಭವಾಗುತ್ತಿತ್ತು. ಪ್ರಶ್ನೆಗಳು ಕೇಳಲ್ಪಟ್ಟವು, ಮತ್ತು ಬೋಧನೆಗಳ ನಡುವಿನ ಆಂತರಿಕ ಸಾಮರಸ್ಯವನ್ನು ಕಂಡುಹಿಡಿಯಲಿಕ್ಕಾಗಿ ಭಿನ್ನಾಭಿಪ್ರಾಯಗಳು ವಿಶ್ಲೇಷಿಸಲ್ಪಟ್ಟವು. ರಬ್ಬಿಸಂಬಂಧಿತ ಬೋಧನೆಗಳನ್ನು ಬೆಂಬಲಿಸಲು, ಹೀಬ್ರು ಶಾಸ್ತ್ರಗಳಿಂದ ತೆಗೆಯಲ್ಪಟ್ಟ ದೃಢೀಕರಿಸುವ ವಚನಗಳನ್ನು ಅವಲಂಬಿಸಲಾಯಿತು.
ಜಾಗರೂಕತೆಯಿಂದ ನಿರೂಪಿಸಲ್ಪಟ್ಟಿದ್ದರೂ, ಈ ಚರ್ಚೆಗಳು ತೀವ್ರಭಾವದವುಗಳು ಮತ್ತು ಕೆಲವೊಮ್ಮೆ ಉಗ್ರಾವೇಶದವುಗಳೂ ಆಗಿರುತ್ತಿದ್ದವು. ಟ್ಯಾಲ್ಮಡ್‌ನಲ್ಲಿ ಉಲ್ಲೇಖಿಸಲ್ಪಟ್ಟ ಒಬ್ಬ ಜ್ಞಾನಿಯು, ವಾಗ್ವಾದದ ಸಮಯದಲ್ಲಿ ರಬ್ಬಿಗಳ ಬಾಯಿಂದ “ಬೆಂಕಿಯ ಕಿಡಿಗಳು” ಹೊರಚಿಮ್ಮುವುದರ ಕುರಿತು ಮಾತಾಡಿದನು. (ಹುಲಿನ್ 137ಬಿ, ಬ್ಯಾಬಿಲೋನಿಯನ್ ಟ್ಯಾಲ್ಮಡ್) ಕಾರ್ಯವಿಧಾನಗಳ ಕುರಿತು ಸ್ಟೈನ್‌ಸಾಲ್ಟ್ಸ್ ಹೀಗೆ ಹೇಳುತ್ತಾರೆ: “ಉಪನ್ಯಾಸವನ್ನು ಕೊಡುತ್ತಿರುವ ವಿದ್ಯಾಸಂಸ್ಥೆಯ ಮುಖ್ಯಸ್ಥನು ಇಲ್ಲವೆ ಜ್ಞಾನಿಯು, ಸಮಸ್ಯೆಗಳ ಕುರಿತಾಗಿ ತನ್ನ ಸ್ವಂತ ಅರ್ಥವಿವರಣೆಯನ್ನು ಕೊಡುವನು. ಸಭಿಕರಲ್ಲಿರುವ ಪಂಡಿತರು, ಇತರ ಮೂಲಗಳು, ಇತರ ವ್ಯಾಖ್ಯಾನಕಾರರ ದೃಷ್ಟಿಕೋನಗಳು, ಇಲ್ಲವೆ ತಮ್ಮ ಸ್ವಂತ ತರ್ಕಬದ್ಧ ತೀರ್ಮಾನಗಳ ಆಧಾರದ ಮೇಲೆ, ಅನೇಕ ವೇಳೆ ಅವನಿಗೆ ಪ್ರಶ್ನೆಗಳ ಮಳೆಗರೆಯುತ್ತಿದ್ದರು. ಕೆಲವೊಮ್ಮೆ ವಾಗ್ವಾದವು ತೀರ ಸಂಕ್ಷಿಪ್ತವಾಗಿದ್ದು, ನಿರ್ದಿಷ್ಟ ಪ್ರಶ್ನೆಗೆ ಕೊಡಲ್ಪಟ್ಟ ಸ್ಫುಟವಾದ ಹಾಗೂ ನಿರ್ಣಾಯಕ ಪ್ರತ್ಯುತ್ತರಕ್ಕೆ ನಿರ್ಬಂಧಿಸಲ್ಪಟ್ಟಿರುತ್ತಿತ್ತು. ಬೇರೆ ವಿದ್ಯಮಾನಗಳಲ್ಲಿ, ಇತರ ಪಂಡಿತರು ಬದಲಿ ಪರಿಹಾರಗಳನ್ನು ನೀಡುತ್ತಿದ್ದರು ಮತ್ತು ಒಂದು ದೊಡ್ಡ ವಾಗ್ವಾದವು ಪರಿಣಮಿಸುತ್ತಿತ್ತು.” ಹಾಜರಿದ್ದವರೆಲ್ಲರೂ ಭಾಗವಹಿಸಬಹುದಿತ್ತು. ಕಾರ್ಯಕ್ರಮಾವಧಿಗಳಲ್ಲಿ ಸ್ಪಷ್ಟಗೊಳಿಸಲ್ಪಟ್ಟ ವಾದಾಂಶಗಳು, ಇತರ ಪಂಡಿತರು ಪುನರ್ವಿಮರ್ಶಿಸುವಂತೆ ಬೇರೆ ವಿದ್ಯಾಸಂಸ್ಥೆಗಳಿಗೆ ಕಳಿಸಲ್ಪಡುತ್ತಿದ್ದವು.
ಆದರೂ, ಈ ಕಾರ್ಯಕ್ರಮಾವಧಿಗಳು ಕೇವಲ ಕೊನೆಯಿಲ್ಲದ ಕಾನೂನುಬದ್ಧ ವಾಗ್ವಾದಗಳಾಗಿರಲಿಲ್ಲ. ಯೆಹೂದಿ ಧಾರ್ಮಿಕ ಜೀವಿತದ ನಿಮಯಗಳು ಹಾಗೂ ಕಟ್ಟಳೆಗಳೊಂದಿಗೆ ವ್ಯವಹರಿಸುತ್ತಿದ್ದ ಕಾನೂನುಬದ್ಧ ವಿಷಯಗಳು ಹಾಲಾಕ ಎಂಬುದಾಗಿ ಕರೆಯಲ್ಪಡುತ್ತವೆ. ಈ ಪದವು “ಹೋಗಲು” ಎಂಬ ಅರ್ಥಕೊಡುವ ಹೀಬ್ರು ಮೂಲದಿಂದ ಬರುತ್ತದೆ ಹಾಗೂ ‘ಒಬ್ಬನು ವರ್ತಿಸಬೇಕಾದ ವಿಧವನ್ನು’ ಸೂಚಿಸುತ್ತದೆ. ಬೇರೆ ಎಲ್ಲಾ ವಿಷಯಗಳು—ರಬ್ಬಿಗಳು ಹಾಗೂ ಬೈಬಲ್ ವ್ಯಕ್ತಿಗಳ ಕುರಿತಾದ ಕಥೆಗಳು, ಜ್ಞಾನೋಕ್ತಿಗಳು, ನಂಬಿಕೆ ಹಾಗೂ ತತ್ವಜ್ಞಾನದ ಪರಿಕಲ್ಪನೆಗಳು—“ಹೇಳಲು” ಎಂಬ ಅರ್ಥಕೊಡುವ ಹೀಬ್ರು ಮೂಲದಿಂದ ತೆಗೆಯಲ್ಪಟ್ಟಿದ್ದು, ಹಗಾದ ಎಂಬುದಾಗಿ ಕರೆಯಲ್ಪಡುತ್ತವೆ. ರಬ್ಬಿಸಂಬಂಧಿತ ವಾಗ್ವಾದದ ಸಮಯದಲ್ಲಿ ಹಾಲಾಕ ಮತ್ತು ಹಗಾದಗಳು ಒಟ್ಟುಗೂಡಿಸಲ್ಪಟ್ಟವು.
ಟ್ಯಾಲ್ಮಡ್‌ನ ಲೋಕ (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ ಮಾರಿಸ್ ಆ್ಯಡ್ಲರ್ ಹೇಳಿಕೆ ನೀಡುವುದು: “ಬುದ್ಧಿವಂತ ಬೋಧಕನೊಬ್ಬನು, ದೀರ್ಘವೂ ಕಷ್ಟಕರವೂ ಆದ ಕಾನೂನುಬದ್ಧ ವಾದವಿವಾದವನ್ನು, ಕಡಿಮೆ ಹೊರೆಯುಳ್ಳ ಹಾಗೂ ಹೆಚ್ಚು ಆತ್ಮೋನ್ನತಿಯನ್ನು ಉಂಟುಮಾಡುವ ಒಂದು ವಿಷಯದ ಮೂಲಕ ಬದಲಾಯಿಸುವನು. . . . ಆದಕಾರಣ ನಾವು ಮಿಥ್ಯೆ ಹಾಗೂ ಇತಿಹಾಸ, ಸಮಕಾಲೀನ ವಿಜ್ಞಾನ ಹಾಗೂ ಐತಿಹ್ಯ, ಬೈಬಲ್ ಸಂಬಂಧಿತ ನಿರೂಪಣೆಗಳು ಹಾಗೂ ಜೀವನಚರಿತ್ರೆ, ಧರ್ಮಬೋಧೆ ಹಾಗೂ ದೇವತಾಶಾಸ್ತ್ರವು ಒಟ್ಟಿಗೆ ಸೇರಿಸಲ್ಪಟ್ಟಿರುವುದನ್ನು ಕಾಣುತ್ತೇವೆ. ಇದು ವಿದ್ಯಾಸಂಸ್ಥೆಗಳ ರೀತಿನೀತಿಗಳೊಂದಿಗೆ ಅಪರಿಚಿತನಾಗಿರುವ ಒಬ್ಬ ವ್ಯಕ್ತಿಗೆ, ಅಸಂಘಟಿತ ಮಾಹಿತಿಯ ಅಸಮಂಜಸವಾದ ಮಿಶ್ರಣವಾಗಿ ತೋರುವುದು.” ವಿದ್ಯಾಸಂಸ್ಥೆಗಳಲ್ಲಿದ್ದ ಪಂಡಿತರಿಗೆ, ಇಂತಹ ಎಲ್ಲಾ ವಿಷಯಾಂತರಗಳು ಒಂದು ಉದ್ದೇಶಕ್ಕಾಗಿದ್ದವು ಮತ್ತು ಚರ್ಚಿಸಲ್ಪಡುತ್ತಿರುವ ವಿಷಯಕ್ಕೆ ಸಂಬಂಧಿಸಲ್ಪಟ್ಟಿದ್ದವು. ಹಾಲಾಕ ಮತ್ತು ಹಗಾದಗಳು, ರಬ್ಬಿಸಂಬಂಧಿತ ವಿದ್ಯಾಸಂಸ್ಥೆಗಳಲ್ಲಿ ನಿರ್ಮಾಣದ ಹಂತದಲ್ಲಿದ್ದ ಒಂದು ಹೊಸ ಧಾರ್ಮಿಕ ಚೌಕಟ್ಟಿನ ಕಟ್ಟಡ ಕಲ್ಲುಗಳಾಗಿದ್ದವು.
ಎರಡು ಟ್ಯಾಲ್ಮಡ್‌ಗಳ ರಚನೆ
ಕಟ್ಟಕಡೆಗೆ, ಪ್ಯಾಲಸ್ಟೀನ್‌ನಲ್ಲಿದ್ದ ಮುಖ್ಯ ರಬ್ಬಿಸಂಬಂಧಿತ ಕೇಂದ್ರವು, ಟೈಬೀರಿಯಸ್‌ಗೆ ಸ್ಥಳಾಂತರಗೊಂಡಿತು. ಇತರ ಪ್ರಮುಖ ವಿದ್ಯಾಸಂಸ್ಥೆಗಳು, ಸಫೊರಸ್, ಸಿಸಿರಿಯ, ಮತ್ತು ಲಿಡ್ಡದಲ್ಲಿ ಇದ್ದವು. ಆದರೆ ಕ್ಷೀಣಿಸುತ್ತಿರುವ ಆರ್ಥಿಕ ಸ್ಥಿತಿ, ಸತತವಾದ ರಾಜಕೀಯ ಅಸ್ಥಿರತೆ, ಮತ್ತು ಅಂತಿಮವಾಗಿ ಮತಭ್ರಷ್ಟ ಕ್ರೈಸ್ತತ್ವದಿಂದ ಬಂದ ಒತ್ತಡ ಹಾಗೂ ಹಿಂಸೆಯು, ಪೂರ್ವದಲ್ಲಿ ಮತ್ತೊಂದು ಪ್ರಮುಖ ಯೆಹೂದಿ ಜನಸಂಖ್ಯೆಯ ಕೇಂದ್ರ—ಬ್ಯಾಬಿಲೋನಿಯ—ಕ್ಕೆ ಬೃಹತ್ ಪ್ರಮಾಣದ ವಲಸೆಹೋಗುವಿಕೆಗೆ ನಡೆಸಿತು.
ಶತಮಾನಗಳ ವರೆಗೆ, ಮಹಾ ರಬ್ಬಿಗಳ ಕೆಳಗೆ ಅಧ್ಯಯನಮಾಡಲು ಬ್ಯಾಬಿಲೋನಿಯದಿಂದ ವಿದ್ಯಾರ್ಥಿಗಳು, ಪ್ಯಾಲಸ್ಟೀನ್‌ನಲ್ಲಿದ್ದ ವಿದ್ಯಾಸಂಸ್ಥೆಗಳಿಗೆ ಹಿಂಡು ಹಿಂಡಾಗಿ ಬಂದಿದ್ದರು. ಆಬ ಬೆನ್ ಈಬೋ ಅಂತಹ ಒಬ್ಬ ವಿದ್ಯಾರ್ಥಿಯಾಗಿದ್ದನು. ಅವನು ಆಬ ಆರೀಕಾ—ಎತ್ತರವಾಗಿರುವ ಆಬ—ಎಂದೂ ಕರೆಯಲ್ಪಟ್ಟನು, ಆದರೆ ತರುವಾಯ ಕೇವಲ ರಾಬ್ ಆಗಿ ವಿದಿತನಾದನು. ಜೂಡಾ ಹ-ನಸೀಯನ ಕೆಳಗೆ ಅಧ್ಯಯನ ಮಾಡಿದ ಬಳಿಕ, ಸಾ.ಶ. 219ರ ಸುಮಾರಿಗೆ ಅವನು ಬ್ಯಾಬಿಲೋನಿಯಕ್ಕೆ ಹಿಂದಿರುಗಿದನು. ಇದು ಬ್ಯಾಬಿಲೋನಿಯದಲ್ಲಿದ್ದ ಯೆಹೂದಿ ಸಮುದಾಯದ ಆತ್ಮಿಕ ಮಹತ್ವಕ್ಕೆ ಒಂದು ತಿರುವನ್ನು ಕೊಟ್ಟಿತು. ಅನೇಕ ಯೆಹೂದ್ಯರಿದ್ದು, ಕೆಲವೇ ಪಂಡಿತರಿದ್ದ ಸುರ ಎಂಬ ಕ್ಷೇತ್ರದಲ್ಲಿ, ರಾಬ್ ಒಂದು ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದನು. ಅವನ ಖ್ಯಾತಿಯು, ಅವನ ವಿದ್ಯಾಸಂಸ್ಥೆಗೆ 1,200 ಕ್ರಮವಾದ ವಿದ್ಯಾರ್ಥಿಗಳಲ್ಲದೆ, ಯೆಹೂದಿ ತಿಂಗಳುಗಳಾದ ಆಡರ್ ಮತ್ತು ಏಲೂಲ್‌ನ ಸಮಯದಲ್ಲಿ ಹಾಜರಾಗುತ್ತಿದ್ದ ಇನ್ನೂ ಹೆಚ್ಚಿನ ಸಾವಿರಾರು ಜನರನ್ನು ಆಕರ್ಷಿಸಿತು. ರಾಬ್‌ನ ಸಮಕಾಲೀನರಲ್ಲಿ ಪ್ರಮುಖನಾದ ಸ್ಯಾಮ್ವೆಲ್, ನೆಹರ್‌ಡಿಯದಲ್ಲಿ ಒಂದು ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದನು. ಇತರ ಪ್ರಮುಖ ವಿದ್ಯಾಸಂಸ್ಥೆಗಳು, ಪಮ್‌ಬಿಡಿಥಾ ಮತ್ತು ಮೆಹೋಸಾದಲ್ಲಿಯೂ ಸ್ಥಾಪಿಸಲ್ಪಟ್ಟವು.
ಈಗ ಪ್ಯಾಲಸ್ಟೀನ್‌ಗೆ ಪ್ರಯಾಣಿಸುವ ಅಗತ್ಯವಿರಲಿಲ್ಲ, ಏಕೆಂದರೆ ಒಬ್ಬನು ಬ್ಯಾಬಿಲೋನಿಯದಲ್ಲಿದ್ದ ಮಹಾ ಪಂಡಿತರ ಕೆಳಗೆ ಅಧ್ಯಯನ ಮಾಡಸಾಧ್ಯವಿತ್ತು. ಒಂದು ಪ್ರತ್ಯೇಕ ಗ್ರಂಥಪಾಠವಾಗಿ ರಚಿಸಲ್ಪಟ್ಟಿದ್ದ ಮಿಷ್ನಾ, ಬ್ಯಾಬಿಲೋನಿಯದ ವಿದ್ಯಾಸಂಸ್ಥೆಗಳ ಸಂಪೂರ್ಣ ಸ್ವಾತಂತ್ರ್ಯಕ್ಕೆ ದಾರಿಯನ್ನು ಸಿದ್ಧಪಡಿಸಿತು. ಪ್ಯಾಲಸ್ಟೀನ್ ಮತ್ತು ಬ್ಯಾಬಿಲೋನಿಯದಲ್ಲಿ ಈಗ ಭಿನ್ನವಾದ ಶೈಲಿಗಳು ಹಾಗೂ ಅಧ್ಯಯನದ ವಿಧಾನಗಳು ವಿಕಸಿಸಿಕೊಂಡಿದ್ದರೂ, ಪದೇ ಪದೇ ನಡಿಯುತ್ತಿದ್ದ ಸಂವಾದ ಹಾಗೂ ಶಿಕ್ಷಕರ ವಿನಿಮಯವು ವಿದ್ಯಾಸಂಸ್ಥೆಗಳ ಐಕ್ಯವನ್ನು ಕಾಪಾಡಿತು.
ಸಾ.ಶ. ನಾಲ್ಕನೆಯ ಶತಮಾನದ ಅಂತ್ಯ ಹಾಗೂ ಐದನೆಯ ಶತಮಾನದ ಆರಂಭದಲ್ಲಿ, ವಿಶೇಷವಾಗಿ ಪ್ಯಾಲಸ್ಟೀನ್‌ನಲ್ಲಿದ್ದ ಯೆಹೂದ್ಯರಿಗೆ ಪರಿಸ್ಥಿತಿಯು ಕಷ್ಟಕರವಾಯಿತು. ಮತಭ್ರಷ್ಟ ಕ್ರೈಸ್ತಪ್ರಪಂಚದ ಹೆಚ್ಚಾಗುತ್ತಿರುವ ಅಧಿಕಾರದ ಕೆಳಗೆ, ನಿರ್ಬಂಧಗಳು ಹಾಗೂ ಹಿಂಸೆಯ ಅಲೆಗಳು, ಸಾ.ಶ. 425ರ ಸುಮಾರಿಗೆ ಸಭಾಮಂದಿರ ಹಾಗೂ ನಸೀ (ಕುಲಪತಿ)ಯ ಸ್ಥಾನದ—ಎರಡೂ—ತೆಗೆದುಹಾಕುವಿಕೆಯ ಕೊನೆಯ ಏಟಿಗೆ ನಡೆಸಿದವು. ಆದುದರಿಂದ, ಪ್ಯಾಲಸ್ಟೀನ್‌ನ ಅಮೋರಾಯೀಮರು, ವಿದ್ಯಾಸಂಸ್ಥೆಗಳಲ್ಲಿ ನಡೆದ ವಾಗ್ವಾದಗಳ ಸಾರಾಂಶಗಳನ್ನು—ಅವುಗಳ ಸಂರಕ್ಷಣೆಯನ್ನು ಖಚಿತಪಡಿಸಲಿಕ್ಕಾಗಿ—ಒಂದೇ ಸುಸಂಗತ ಕೃತಿಯಲ್ಲಿ ಕ್ರೋಡೀಕರಿಸಲು ತೊಡಗಿದರು. ಸಾ.ಶ. ನಾಲ್ಕನೆಯ ಶತಮಾನದ ಕೊನೆಯ ಭಾಗದಲ್ಲಿ ತರಾತುರಿಯಾಗಿ ಸಂಕಲಿಸಿದ ಈ ಕೃತಿಯು, ಪ್ಯಾಲಸ್ಟೀನ್ ಟ್ಯಾಲ್ಮಡ್ ಎಂಬುದಾಗಿ ವಿದಿತವಾಯಿತು.b
ಪ್ಯಾಲಸ್ಟೀನ್‌ನಲ್ಲಿದ್ದ ವಿದ್ಯಾಸಂಸ್ಥೆಗಳು ಇಳಿಮುಖಗೊಳ್ಳುತ್ತಿದ್ದಾಗ, ಬ್ಯಾಬಿಲೋನಿಯದ ಅಮೋರಾಯೀಮರು ತಮ್ಮ ಸಾಮರ್ಥ್ಯಗಳ ಶಿಖರವನ್ನು ಮುಟ್ಟುತ್ತಿದ್ದರು. ಆಬಾಯೆ ಮತ್ತು ರಾಬಾ, ವಾಗ್ವಾದದ ಮಟ್ಟವನ್ನು ಜಟಿಲವಾದ ಹಾಗೂ ನವಿರಾದ ವಾಗ್ವಾದಕ್ಕೆ ವಿಕಸಿಸಿದರು, ಇದು ತರುವಾಯ ಟ್ಯಾಲ್ಮಡ್ ಸಂಬಂಧಿತ ವಿಶ್ಲೇಷಣೆಯ ಮಾದರಿಯಾಯಿತು. ಅನಂತರ, ಸುರದಲ್ಲಿದ್ದ (ಸಾ.ಶ. 371-427) ವಿದ್ಯಾಸಂಸ್ಥೆಯ ಮುಖ್ಯಸ್ಥನಾಗಿದ್ದ ಆಶೀ, ವಾಗ್ವಾದಗಳ ಸಾರಾಂಶಗಳನ್ನು ಸಂಕಲಿಸಲು ಮತ್ತು ಪರಿಷ್ಕರಿಸಲು ತೊಡಗಿದನು. ಸ್ಟೈನ್‌ಸಾಲ್ಟ್ಸ್‌ಗನುಸಾರ, “ಅದು ಈಗಾಗಲೇ ಅವ್ಯವಸ್ಥಿತವಾಗಿದ್ದು, ಮೌಖಿಕ ವಿಷಯಗಳ ಆ ಭಾರಿ ಪ್ರಮಾಣವು ಕ್ರಮೇಣವಾಗಿ ಮರೆಯಲ್ಪಡುವ ಅಪಾಯದಲ್ಲಿತ್ತೆಂದು ಭಯಪಡುತ್ತಾ” ಅವನು ಹಾಗೆ ಮಾಡಿದನು.
ಈ ಭಾರಿ ಮೊತ್ತದ ವಸ್ತುವಿಷಯವನ್ನು ಒಬ್ಬ ಮನುಷ್ಯನಿಂದ ಇಲ್ಲವೆ ಒಂದು ಸಂತತಿಯಿಂದಲೂ ಸಂಘಟಿಸಸಾಧ್ಯವಿರಲಿಲ್ಲ. ಅಮೋರಾಯೀಮ್ ಅವರ ಅವಧಿಯು, ಸಾ.ಶ. ಐದನೆಯ ಶತಮಾನದಲ್ಲಿ ಬ್ಯಾಬಿಲೋನಿಯದಲ್ಲಿ ಕೊನೆಗೊಂಡಿತಾದರೂ, ಸಬೋರಾಯಿಮ್—“ವಿವರಿಸುವವರು,” ಇಲ್ಲವೆ “ಅಭಿಪ್ರಾಯವುಳ್ಳವರು” ಎಂಬ ಅರ್ಥವುಳ್ಳ ಆ್ಯರಮೇಯಿಕ್ ಪದದಿಂದ ಬಂದಿದೆ—ಎಂಬುದಾಗಿ ಕರೆಯಲ್ಪಟ್ಟ ಒಂದು ಗುಂಪಿನಿಂದ ಬ್ಯಾಬಿಲೋನಿಯದ ಟ್ಯಾಲ್ಮಡ್‌ನ ಅಂತಿಮ ತಿದ್ದುವಿಕೆಯು, ಸಾ.ಶ. ಆರನೆಯ ಶತಮಾನದಲ್ಲೂ ಮುಂದುವರಿಯಿತು. ಈ ಅಂತಿಮ ಸಂಪಾದಕರು, ಸಂಮಿಶ್ರಿತ ಮಾಹಿತಿಯನ್ನು ಒಂದು ಸಂಪೂರ್ಣ ಮಾಹಿತಿಯನ್ನಾಗಿ ರೂಪಿಸಿ, ಅದನ್ನು ಬೇರೆ ಮಾತುಗಳಲ್ಲಿ ನಿರೂಪಿಸಿದರು. ಬ್ಯಾಬಿಲೋನಿಯದ ಟ್ಯಾಲ್ಮಡನ್ನು ಹಿಂದಿನ ಬೇರೆ ಎಲ್ಲ ಯೆಹೂದಿ ಬರಹಗಳಿಂದ ಪ್ರತ್ಯೇಕಿಸಿದ ಶೈಲಿ ಹಾಗೂ ರಚನೆಯನ್ನು ಅವರು ಅದಕ್ಕೆ ನೀಡಿದರು.
ಟ್ಯಾಲ್ಮಡ್ ಏನನ್ನು ಸಾಧಿಸಿತು?
ಯಾವ ಮೂಲದಿಂದ ಹೀಬ್ರು ಶಾಸ್ತ್ರಗಳು ಬಂದವೊ ಅದೇ ಮೂಲದಿಂದ ಮಿಷ್ನಾ ಸಹ ಬಂದಿತೆಂದು ರುಜುಪಡಿಸಲು ಟ್ಯಾಲ್ಮಡ್‌ನ ರಬ್ಬಿಗಳು ಬಯಸಿದರು. ಆದರೆ ಏಕೆ? ಜೇಕಬ್ ನೊಯಿಸ್ನರ್ ಹೇಳಿಕೆ ನೀಡುವುದು: “ಪ್ರಕಟಿತ ವಿವಾದಾಂಶವು ಮಿಷ್ನಾದ ಸ್ಥಾನಮಾನವಾಗಿತ್ತು. ಆದರೆ ಜ್ಞಾನಿಯ ಅಧಿಕಾರದ ವಿಷಯವು ತಾನೇ ನಿರ್ಣಾಯಕ ವಿಷಯವಾಗಿತ್ತೆಂದು ತಿಳಿದುಬರುತ್ತದೆ.” ಈ ಅಧಿಕಾರವನ್ನು ಭದ್ರಪಡಿಸಲು, ಮಿಷ್ನಾದ ಪ್ರತಿಯೊಂದು ಸಾಲು, ಕೆಲವೊಮ್ಮೆ ಪ್ರತಿಯೊಂದು ಪದವು, ಒಂದಲ್ಲ ಒಂದು ನಿರ್ದಿಷ್ಟ ವಿಧದಲ್ಲಿ ಪರೀಕ್ಷಿಸಲ್ಪಟ್ಟು, ಆಕ್ಷೇಪಿಸಲ್ಪಟ್ಟು, ವಿವರಿಸಲ್ಪಟ್ಟು, ಸರಿದೂಗಿಸಲ್ಪಟ್ಟಿತು. ಈ ವಿಧದಲ್ಲಿ ರಬ್ಬಿಗಳು “ಮಿಷ್ನಾದ ದಿಕ್ಕನ್ನು ಒಂದು ಪಥದಿಂದ ಮತ್ತೊಂದಕ್ಕೆ ಬದಲಾಯಿಸಿದರು” ಎಂದು ನೊಯಿಸ್ನರ್ ಗಮನಿಸುತ್ತಾರೆ. ಸ್ವತಃ ಸಂಪೂರ್ಣವಾದ ಕೃತಿಯಾಗಿ ಸೃಷ್ಟಿಸಲ್ಪಟ್ಟಿದ್ದರೂ, ಮಿಷ್ನಾ ಈಗ ಕೂಲಂಕಷವಾಗಿ ಪರಿಶೀಲಿಸಲ್ಪಟ್ಟಿತು. ಈ ಪ್ರಕ್ರಿಯೆಯಲ್ಲಿ, ಅದು ಪುನರ್‌ಸೃಷ್ಟಿಸಲ್ಪಟ್ಟಿತ್ತು, ಪುನರ್‌ವ್ಯಾಖ್ಯಾನಿಸಲ್ಪಟ್ಟಿತ್ತು.
ಈ ಹೊಸ ಕೃತಿಯಾದ ಟ್ಯಾಲ್ಮಡ್, ರಬ್ಬಿಗಳ ಉದ್ದೇಶವನ್ನು ಪೂರೈಸಿತು. ಅವರು ವಿಶ್ಲೇಷಣೆಯ ನಿಯಮಗಳನ್ನು ಸ್ಥಾಪಿಸಿದರು, ಮತ್ತು ಆ ಕಾರಣ ಜನರು ರಬ್ಬಿಗಳಂತೆ ಯೋಚನೆಮಾಡುವಂತೆ ಅದು ಅವರಿಗೆ ಕಲಿಸಿತು. ತಮ್ಮ ಅಧ್ಯಯನಾ ವಿಧಾನ ಮತ್ತು ವಿಶ್ಲೇಷಣೆಯು, ದೇವರ ಮನಸ್ಸನ್ನು ಪ್ರತಿನಿಧಿಸಿತೆಂದು ರಬ್ಬಿಗಳು ನಂಬಿದರು. ಟ್ಯಾಲ್ಮಡ್ ಸಂಬಂಧಿತ ಅಧ್ಯಯನವೇ—ಮನಸ್ಸಿನ ಬಳಕೆಯು ದೇವರ ಅನುಕರಣೆಯಲ್ಲಿತ್ತೆಂಬ ಭಾವನೆಯೇ—ಒಂದು ಉದ್ದೇಶವೂ ಆರಾಧನೆಯ ಒಂದು ವಿಧವೂ ಆಯಿತು. ಬರಲಿದ್ದ ಸಂತತಿಗಳಿಗೆ, ಟ್ಯಾಲ್ಮಡ್ ಇದೇ ವಿಧಾನದಿಂದ ವಿಶ್ಲೇಷಿಸಲ್ಪಡಲಿಕ್ಕಿತ್ತು. ಪರಿಣಾಮವು ಏನಾಗಿತ್ತು? ಇತಿಹಾಸಕಾರ ಸೀಸಲ್ ರಾತ್ ಬರೆಯುವುದು: “ಟ್ಯಾಲ್ಮಡ್ . . . [ಯೆಹೂದ್ಯರಿಗೆ] ಅವರನ್ನು ಇತರರಿಂದ ಪ್ರತ್ಯೇಕಿಸಿದ, ಅಷ್ಟೇ ಅಲ್ಲದೆ ತಮ್ಮಲ್ಲಿದ್ದ ಗಮನಾರ್ಹವಾದ ನಿರೋಧಕ ಶಕ್ತಿ ಹಾಗೂ ಒಗ್ಗಟ್ಟನ್ನು ತೋರಿಸಿದ ವಿಶಿಷ್ಟವಾದ ಪರಿಣಾಮವನ್ನು ನೀಡಿತು. ಅದರ ತಾರ್ಕಿಕ ವಾದವಿವಾದವು ಅವರ ಬುದ್ಧಿಯನ್ನು ಚುರುಕುಗೊಳಿಸಿ, ಅವರಿಗೆ . . . ಮಾನಸಿಕ ತೀಕ್ಷ್ಣತೆಯನ್ನು . . . ನೀಡಿತು. ಮಧ್ಯಯುಗಗಳ ಹಿಂಸಿಸಲ್ಪಟ್ಟ ಯೆಹೂದ್ಯನಿಗೆ, ಅವನು ತಪ್ಪಿಸಿಕೊಳ್ಳಸಾಧ್ಯವಿದ್ದ ಮತ್ತೊಂದು ಲೋಕವನ್ನು ಟ್ಯಾಲ್ಮಡ್ ನೀಡಿತು . . . ಅದು ಅವನಿಗೆ ಸಾಂಕೇತಿಕ ತಂದೆನಾಡನ್ನು ಕೊಟ್ಟಿತು; ತನ್ನ ಸ್ವಂತ ದೇಶವು ಕಳೆದುಹೋಗುವಾಗ ಅವನು ಅದನ್ನು ತನ್ನೊಂದಿಗೆ ಕೊಂಡೊಯ್ಯಸಾಧ್ಯವಿತ್ತು.”
ರಬ್ಬಿಗಳ ವಿಚಾರಪರತೆಯನ್ನು ಇತರರಿಗೆ ಕಲಿಸುವ ಮೂಲಕ, ಟ್ಯಾಲ್ಮಡ್‌ಗೆ ಖಂಡಿತವಾಗಿಯೂ ಅಧಿಕಾರವಿತ್ತು. ಆದರೆ ಎಲ್ಲರಿಗೂ—ಏಕರೂಪವಾಗಿ ಯೆಹೂದ್ಯರಿಗೆ ಮತ್ತು ಯೆಹೂದ್ಯೇತರರಿಗೆ—ಇರುವಂತಹ ಪ್ರಶ್ನೆಯೇನೆಂದರೆ, ಟ್ಯಾಲ್ಮಡ್ ನಿಜವಾಗಿಯೂ ದೇವರ ಮನಸ್ಸನ್ನು ಪ್ರತಿಬಿಂಬಿಸುತ್ತದೊ?—1 ಕೊರಿಂಥ 2:11-16.
[ಅಧ್ಯಯನ ಪ್ರಶ್ನೆಗಳು]
a ಮಿಷ್ನಾದ ವಿಕಸನೆ ಹಾಗೂ ಒಳವಿಷಯದ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ನವೆಂಬರ್ 15, 1997ರ ಕಾವಲಿನಬುರುಜು ಪತ್ರಿಕೆಯಲ್ಲಿ “ಮಿಷ್ನಾ ಮತ್ತು ಮೋಶೆಗೆ ದೇವರು ಕೊಟ್ಟ ಧರ್ಮಶಾಸ್ತ್ರ” ಎಂಬ ಲೇಖನವನ್ನು ನೋಡಿರಿ.
b ಪ್ಯಾಲಸ್ಟೀನ್ ಟ್ಯಾಲ್ಮಡ್ ಜನಪ್ರಿಯವಾಗಿ ಯೆರೂಸಲೇಮ್ ಟ್ಯಾಲ್ಮಡ್ ಎಂಬುದಾಗಿ ವಿದಿತವಾಗಿದೆ. ಹಾಗಿದ್ದರೂ, ಈ ಪದವು ಅಪಪ್ರಯೋಗವಾಗಿದೆ, ಏಕೆಂದರೆ ಅಮೋರಾಯಿಕ್ ಅವಧಿಯಲ್ಲಿ ಹೆಚ್ಚಿನ ಕಾಲ ಯೆಹೂದ್ಯರಿಗೆ ಯೆರೂಸಲೇಮನ್ನು ಪ್ರವೇಶಿಸುವ ಅನುಮತಿ ಇರಲಿಲ್ಲ.
[ಪುಟ 31 ರಲ್ಲಿರುವ ಚೌಕ]
ಎರಡು ಟ್ಯಾಲ್ಮಡ್‌ಗಳು—ಅವು ಎಷ್ಟರ ಮಟ್ಟಿಗೆ ಸದೃಶವಾಗಿವೆ?
“ಟ್ಯಾಲ್ಮಡ್” ಎಂಬ ಹೀಬ್ರು ಪದದ ಅರ್ಥ, “ಅಧ್ಯಯನ” ಇಲ್ಲವೆ “ಕಲಿಕೆ” ಎಂದಾಗಿದೆ. ಪ್ಯಾಲಸ್ಟೀನ್ ಮತ್ತು ಬ್ಯಾಬಿಲೋನಿಯದ ಅಮೋರಾಯೀಮ್, ಮಿಷ್ನಾದ ಅಧ್ಯಯನ ನಡೆಸಲು ಇಲ್ಲವೆ ಅದನ್ನು ವಿಶ್ಲೇಷಿಸಲು ನಿರ್ಧರಿಸಿದ್ದರು. ಎರಡೂ ಟ್ಯಾಲ್ಮಡ್‌ಗಳು (ಪ್ಯಾಲಸ್ಟೀನ್ ಮತ್ತು ಬ್ಯಾಬಿಲೋನಿಯ) ಇದನ್ನು ಮಾಡುತ್ತವೆ, ಆದರೆ ಅವು ಎಷ್ಟರ ಮಟ್ಟಿಗೆ ಸದೃಶವಾಗಿವೆ? ಜೇಕಬ್ ನೊಯಿಸ್ನರ್ ಬರೆಯುವುದು: “ಮೊದಲನೆಯ ಟ್ಯಾಲ್ಮಡ್ ಪ್ರಮಾಣವನ್ನು ವಿಶ್ಲೇಷಿಸುತ್ತದೆ, ಎರಡನೆಯದು ಪೂರ್ವೋಕ್ತಿಗಳ ತನಿಖೆ ನಡೆಸುತ್ತದೆ; ಮೊದಲನೆಯದು ತನಿಖಾ ವಸ್ತುವಿನ ಇತಿಮಿತಿಗಳೊಳಗೆ ಸಂಪೂರ್ಣವಾಗಿ ಉಳಿಯುತ್ತದೆ, ಎರಡನೆಯದು ವಿಶಾಲವಾಗಿ ಅವುಗಳನ್ನು ಅತಿಶಯಿಸುತ್ತದೆ.”
ಬ್ಯಾಬಿಲೋನಿಯನ್ ಟ್ಯಾಲ್ಮಡ್‌ನಲ್ಲಿ ಮಾಡಲ್ಪಟ್ಟ ಹೆಚ್ಚು ತೀಕ್ಷ್ಣವೂ ಸಂಪೂರ್ಣವೂ ಆದ ತಿದ್ದುವಿಕೆಯು, ಅದನ್ನು ಹೆಚ್ಚು ದೊಡ್ಡದಾಗಿ ಮಾಡಿತು ಮಾತ್ರವಲ್ಲ, ಅದರ ಯೋಚನಾಕ್ರಮ ಹಾಗೂ ವಿಶ್ಲೇಷಣೆಯಲ್ಲಿ ಹೆಚ್ಚು ಗಹನವಾದದ್ದೂ ಮನಸ್ಸಿಗೆ ನಾಟುವಂತಹದ್ದೂ ಆಗಿ ಮಾಡಿತು. “ಟ್ಯಾಲ್ಮಡ್” ಎಂಬ ಪದವು ಉಲ್ಲೇಖಿಸಲ್ಪಟ್ಟಾಗ, ಅದು ಸಾಮಾನ್ಯವಾಗಿ ಬ್ಯಾಬಿಲೋನಿಯನ್ ಟ್ಯಾಲ್ಮಡನ್ನು ಅರ್ಥೈಸುತ್ತದೆ. ಶತಮಾನಗಳಿಂದಲೂ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅಭ್ಯಾಸಿಸಲ್ಪಟ್ಟ ಹಾಗೂ ಹೇಳಿಕೆ ನೀಡಲ್ಪಟ್ಟ ಟ್ಯಾಲ್ಮಡ್ ಇದೇ ಆಗಿದೆ. ನೊಯಿಸ್ನರ್‌ಗನುಸಾರ, ಪ್ಯಾಲಸ್ಟೀನ್ ಟ್ಯಾಲ್ಮಡ್ “ದಕ್ಷತೆಯ ಕೃತಿಯಾಗಿದೆ,” ಮತ್ತು ಬ್ಯಾಬಿಲೋನಿಯನ್ ಟ್ಯಾಲ್ಮಡ್ “ಅಸಾಧಾರಣವಾದ ಪ್ರತಿಭೆಯ ಕೃತಿಯಾಗಿದೆ.”