ಒಳ್ಳೆಯ ನಡತೆಯು ಸ್ತುತಿಯನ್ನು ತರುತ್ತದೆ
ಇಟಾಲಿಯನ್ ವಾರ್ತಾಪತ್ರಿಕೆಯಾದ ಲಾ ಗಾಡ್ಸೆಟಾ ಡೆಲ್ ಮೆಡ್ಸೊಜೊರ್ನೊ, “ಮಟೀರ—ಅಪೂರ್ವವಾದ ಗವಿಗಳ ನಗರ” ಎಂಬ ಲೇಖನವನ್ನು ಪ್ರಕಟಿಸಿದ್ದಕ್ಕಾಗಿ, ಯೆಹೋವನ ಸಾಕ್ಷಿಗಳನ್ನು ಪ್ರಶಂಸಿಸಿತು. ಈ ಲೇಖನವು ಜುಲೈ 8, 1997ರ ಅವೇಕ್! ಸಂಚಿಕೆಯಲ್ಲಿ ಪ್ರಕಟವಾಯಿತು. ಇದು ಅನೇಕ ಭಾಷೆಗಳಲ್ಲಿ ವ್ಯಾಪಕವಾದ ವಿತರಣೆಯನ್ನು ಪಡೆದಿತ್ತು. ಪ್ರಚಲಿತವಾಗಿ ಎಚ್ಚರ! ಪತ್ರಿಕೆಯು 81 ಭಾಷೆಗಳಲ್ಲಿ ಭಾಷಾಂತರಿಸಲ್ಪಡುತ್ತಿದೆ ಮತ್ತು ಲೋಕವ್ಯಾಪಕವಾಗಿ ಅದಕ್ಕೆ 1.9 ಕೋಟಿ ಪ್ರತಿಗಳಿಗಿಂತಲೂ ಹೆಚ್ಚಿನ ವಿತರಣೆಯಿದೆ. “[ಮಟೀರ] ನಗರದ ಐತಿಹಾಸಿಕ ಹಾಗೂ ಕಲಾತ್ಮಕ ಪರಂಪರೆಯನ್ನು ವರ್ಧಿಸುವ ಬಹಿರಂಗ ಪ್ರಕಟನೆಯ ವಿಷಯದಲ್ಲಿ” ಅವೇಕ್! ಪತ್ರಿಕೆಯು, ಆ ಬೇಸಗೆಕಾಲದ ದಾಖಲೆಯನ್ನು ಸ್ಥಾಪಿಸಿತೆಂದು ವಾರ್ತಾಪತ್ರಿಕೆಯು ಹೇಳಿಕೆಯನ್ನು ನೀಡಿತು.
1997ರಲ್ಲಿ ಮಟೀರದಲ್ಲಿ ನಡೆಸಲ್ಪಟ್ಟ “ದೇವರ ವಾಕ್ಯದಲ್ಲಿ ನಂಬಿಕೆ” ಎಂಬ ಜಿಲ್ಲಾ ಅಧಿವೇಶನದ ಸಂಬಂಧದಲ್ಲಿ, ಆ ವಾರ್ತಾಪತ್ರಿಕೆಯು ಸಾಕ್ಷಿಗಳನ್ನು ಪ್ರಶಂಸಿಸಿತು. ಸಾಕ್ಷಿಗಳು “ಬೇಸಗೆಕಾಲದ ಮಧ್ಯಭಾಗದಲ್ಲಿ ಮತ್ತು ಸುಡುವ ಬಿಸಿಲಿನಲ್ಲಿ [ನಗರದ] XXI ಸಿಟ್ಟಮ್ಬ್ರೆ ಕ್ರೀಡಾಂಗಣಕ್ಕೆ 4,000 ಜನರನ್ನು ಒಟ್ಟುಗೂಡಿಸಿದರು. ಅವರು ವಸ್ತುಗಳ ಶುಚಿಮಾಡುವಿಕೆ, ಬಣ್ಣಬಳಿಯುವಿಕೆ, ಮತ್ತು ಈ ಕ್ರೀಡಾಕೇಂದ್ರದ ಮೂಲಭೂತ ಸುಧಾರಣೆ (ವಿಶೇಷವಾಗಿ ಪಾಯಿಖಾನೆಯ ಸೌಕರ್ಯಗಳು)ಯನ್ನು ಉಚಿತವಾಗಿ ಮಾಡಿದ್ದಾರೆ. ಬೇಕಾದ ಸಾಮಗ್ರಿಗಳ ಖರೀದಿಗೆ ತಾವೇ ಹಣ ತೆತ್ತಿದ್ದಾರೆ” ಎಂದು ಆ ಲೇಖನವು ಗಮನಿಸಿತು.
ಯೆಹೋವನ ಸಾಕ್ಷಿಗಳು ಒಳ್ಳೆಯ ನೆರೆಯವರಾಗಿರಲು ಪ್ರಯಾಸಪಡುತ್ತಾರೆ. (ಮತ್ತಾಯ 22:37-39) ಅವರು ಈ ಶಾಸ್ತ್ರೀಯ ಬುದ್ಧಿವಾದವನ್ನೂ ಅನುಸರಿಸುತ್ತಾರೆ: “ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು . . . ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು.”—1 ಪೇತ್ರ 2:12.