ಸುವಾರ್ತೆಯೊಂದಿಗೆ ಇನ್ನೂ ಹೆಚ್ಚು ಜನರನ್ನು ತಲಪುವುದು
ನನ್ನ ಸ್ವದೇಶದಲ್ಲಿರುವ ಜನರ ಕುರಿತಾಗಿ ನಾನು ಯೋಚಿಸಿದಾಗ, ಅನೇಕರು ಯೆಹೋವನ ಸಾಕ್ಷಿಗಳ ಕುರಿತಾಗಿ ಕೇವಲ ವಾರ್ತಾಮಾಧ್ಯಮದಿಂದ ತಿಳಿದುಕೊಂಡಿದ್ದಾರೆ ಎಂಬುದನ್ನು ಗ್ರಹಿಸಿದೆ. ಈ ಜನರು ಸಂಪರ್ಕಿಸಲ್ಪಡಲೇಬೇಕು ಎಂದು ನಾನು ನೆನಸಿದೆ, ಹೀಗೆ ಅವರು ಯೆಹೋವನ ಸಾಕ್ಷಿಗಳು ಯಾರು ಹಾಗೂ ಅವರು ನಿಜವಾಗಿಯೂ ಏನನ್ನು ನಂಬುತ್ತಾರೆ ಎಂಬುದನ್ನು ತಿಳಿದುಕೊಳ್ಳಬಹುದು. ಆದರೆ ನಾನು ಹೇಗೆ ಸಹಾಯಮಾಡಬಲ್ಲೆ? ನನ್ನ ಪತಿಯು ಒಬ್ಬ ಕ್ರೈಸ್ತ ಹಿರಿಯರು ಮತ್ತು ಅವರು ನನಗೆ ವಿವೇಕಯುಕ್ತ ಮಾರ್ಗದರ್ಶನೆ ಹಾಗೂ ಸಲಹೆಗಳನ್ನು ಕೊಟ್ಟರು.
ಎಚ್ಚರ! (ಇಂಗ್ಲಿಷ್) ಪತ್ರಿಕೆಯ, 1995, ಜನವರಿ 8ರ ಸಂಚಿಕೆಯಲ್ಲಿನ, “ಪ್ರಾಯೋಗಿಕ ಸಾಂತ್ವನವನ್ನು ನೀಡುವ ಪತ್ರಿಕೆಗಳು” ಎಂಬ ಲೇಖನದಲ್ಲಿ ನಾವು ಒಂದು ಮುಖ್ಯ ವಿಚಾರವನ್ನು ಕಂಡುಕೊಂಡೆವು. ಒಬ್ಬ ಸಾಕ್ಷಿಯ ಚಟುವಟಿಕೆಯ ಕುರಿತಾಗಿ ಆ ಲೇಖನವು ಹೇಳುವುದು: “ಅವಳು ಇತರ ಸಾಕ್ಷಿಗಳು ಮನೆಯಲ್ಲಿ ಕೂಡಿಸಿಟ್ಟಿದ್ದ ನಿರ್ದಿಷ್ಟ ಎಚ್ಚರ! ಪತ್ರಿಕೆಗಳ ಹಳೆಯ ಪ್ರತಿಗಳನ್ನು ಸಂಗ್ರಹಿಸಲು ನಿಶ್ಚಯಿಸಿದ್ದಾಳೆ. ಅನಂತರ ಕೆಲವೊಂದು ವಿಷಯಗಳಲ್ಲಿ ವಿಶೇಷ ಆಸಕ್ತಿಯನ್ನು ತೋರಿಸಬಹುದೆಂದು ಅವಳಿಗನಿಸುವ ಏಜನ್ಸಿಗಳಿಗೆ ಅವಳು ಭೇಟಿಯನ್ನು ನೀಡುತ್ತಾಳೆ.”
ನನ್ನ ಪತಿಯ ಸಹಾಯದಿಂದ, ನಾನು ಬೇಗನೆ ಪತ್ರಿಕೆಗಳ ನೂರಾರು ಪ್ರತಿಗಳನ್ನು ಸಂಗ್ರಹಿಸಿದೆ. ಇದರಿಂದ ನಾನು ಸಂಪರ್ಕಿಸಲು ಪ್ರಯತ್ನಿಸುವ ಜನರಿಗಾಗಿ ತಕ್ಕದಾದ ವಿಧವಿಧವಾದ ವಿಷಯಗಳನ್ನು ಆರಿಸಲು ಶಕ್ತಳಾದೆ.
ಟೆಲಿಫೋನ್ ಡೈರೆಕ್ಟರಿ ಹಾಗೂ ಸಾರ್ವಜನಿಕ ರೆಕಾರ್ಡುಗಳನ್ನು ಉಪಯೋಗಿಸುತ್ತಾ, ಆಸ್ಪತ್ರೆಗಳ, ಯೂತ್ ಹಾಸ್ಟೆಲ್ ಮತ್ತು ನರ್ಸಿಂಗ್ ಹೋಮ್ಗಳ ಹೆಸರಿನ ಪಟ್ಟಿಯನ್ನು ನಾನು ಸಂಕಲಿಸಿದೆ. ಶವಸಂಸ್ಕಾರಗಳನ್ನು ನಡೆಸುವವರು, ಶಾಲಾ ಮೇಲ್ವಿಚಾರಕರು, ವಕೀಲರು, ವೈದ್ಯಕೀಯ ಪರೀಕ್ಷಕರು, ಮತ್ತು ಸೆರೆಮನೆಯ ಹಾಗೂ ನ್ಯಾಯಾಲಯಗಳ ಅಧಿಕಾರಿಗಳ ಹೆಸರುಗಳನ್ನು ಸಹ ನಾನು ಪಟ್ಟಿಮಾಡಿದೆ. ನನ್ನ ಪಟ್ಟಿಯು ಮದ್ಯಪಾನ ಹಾಗೂ ಅಮಲೌಷಧಗಳ ವ್ಯಸನಿಗಳಿಗಾಗಿರುವ ಸಂಸ್ಥೆಗಳ ಆಡಳಿತಗಾರರು, ಪರಿಸರೀಯ ಸಂಬಂಧಿತ ವಿಷಯಗಳು, ಅಂಗವಿಕಲರು ಹಾಗೂ ಯುದ್ಧಗಳಿಂದ ಬಾಧಿತರಾಗಿರುವ, ಮತ್ತು ಪೌಷ್ಟಿಕ ಸಂಶೋಧನೆಗಾಗಿರುವ ಒಕ್ಕೂಟಗಳ ಹೆಸರುಗಳನ್ನು ಒಳಗೊಂಡಿತು. ಕ್ಷೇಮಾಭಿವೃದ್ಧಿ, ಸಮಾಜ ಸೇವೆಗಳ ಮತ್ತು ಕುಟುಂಬ ವಿಚಾರಗಳ ಆಫೀಸ್ಗಳ ವ್ಯವಸ್ಥಾಪಕರನ್ನು ಸಹ ನಾನು ಕಡೆಗಣಿಸಲಿಲ್ಲ.
ನಾನು ಏನು ಹೇಳಬಲ್ಲೆ?
ಭೇಟಿಯೊಂದನ್ನು ಮಾಡುವಾಗ ನಾನು ಮಾಡಿದ ಮೊದಲ ವಿಷಯವು ನಾನು ಯಾರಾಗಿದ್ದೇನೆಂಬುದನ್ನು ಸ್ಪಷ್ಟವಾಗಿ ಗುರುತಿಸಿಕೊಳ್ಳುವುದೇ ಆಗಿತ್ತು. ಅನಂತರ ನನ್ನ ಭೇಟಿಯು ಕೇವಲ ಕೆಲವೊಂದು ನಿಮಿಷಗಳನ್ನು ತೆಗೆದುಕೊಳ್ಳುವುದೆಂದು ಹೇಳುತ್ತಿದ್ದೆ.
ಉಸ್ತುವಾರಿಯಲ್ಲಿರುವ ವ್ಯಕ್ತಿಯೊಂದಿಗೆ ಮುಖಾಮುಖಿ ಭೇಟಿಯಾದಾಗ, ನಾನು ಹೀಗೆ ಹೇಳುತ್ತಿದ್ದೆ: “ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳು. ಆದರೆ ನಾನು ಇಲ್ಲಿ ಧಾರ್ಮಿಕ ವಿಷಯದ ಕುರಿತು ಚರ್ಚೆಯನ್ನು ಮಾಡಲು ಬಂದಿಲ್ಲ, ಏಕೆಂದರೆ ಇದು ಆಫೀಸ್ ಸಮಯದಲ್ಲಿ ಅನುಚಿತವಾಗಿರುವುದು.” ಸಾಮಾನ್ಯವಾಗಿ ವಾತಾವರಣವು ಹೆಚ್ಚು ತಿಳಿಯಾಗುತ್ತಿತ್ತು. ಅನಂತರ ಆ ಸನ್ನಿವೇಶಕ್ಕೆ ನನ್ನ ಹೇಳಿಕೆಗಳನ್ನು ಹೊಂದಿಸುತ್ತಾ, ನಾನು ಹೀಗೆ ಮುಂದುವರಿಸುತ್ತಿದ್ದೆ: “ನಾನು ಭೇಟಿಮಾಡುವುದಕ್ಕೆ ಎರಡು ಕಾರಣಗಳಿವೆ. ಮೊದಲಾಗಿ, ನಿಮ್ಮ ಆಫೀಸಿನಿಂದ ಸಂಘಟಿಸಲ್ಪಡುತ್ತಿರುವ ಕಾರ್ಯಕ್ಕಾಗಿ ನಾನು ನನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಇಚ್ಛಿಸುತ್ತೇನೆ. ಎಷ್ಟೆಂದರೂ, ಒಬ್ಬ ವ್ಯಕ್ತಿಯು ಜನತೆಯ ಪರವಾಗಿ ವ್ಯಯಿಸುವ ಸಮಯ ಮತ್ತು ಶಕ್ತಿಯ ಮಹತ್ತ್ವದ ಬಗ್ಗೆ ನಾವು ಕಡಿಮೆಯಾಗಿ ಎಣಿಸಬಾರದು. ನಿಮ್ಮ ಶ್ರಮ ನಿಜವಾಗಿಯೂ ಪ್ರಶಂಸಿಸಲ್ಪಡಬೇಕು.” ಅನೇಕ ಸಂದರ್ಭಗಳಲ್ಲಿ ಈ ರೀತಿಯಲ್ಲಿ ಸಮೀಪಿಸಲ್ಪಟ್ಟ ವ್ಯಕ್ತಿಯು ಆಶ್ಚರ್ಯಪಟ್ಟನು.
ಇಷ್ಟರೊಳಗೆ ಆ ವ್ಯಕ್ತಿಯು, ನನ್ನ ಭೇಟಿಯ ಎರಡನೆಯ ಕಾರಣವು ಏನೆಂಬುದಾಗಿ ಕುತೂಹಲಗೊಳ್ಳುತ್ತಿದ್ದನು. ನಾನು ಹೀಗೆ ಮುಂದುವರಿಸುತ್ತಿದ್ದೆ: “ನನ್ನ ಭೇಟಿಯ ಎರಡನೆಯ ಕಾರಣವು ಇದಾಗಿದೆ: ಅಂತಾರಾಷ್ಟ್ರೀಯವಾಗಿ ಪ್ರಕಾಶಿಸಲ್ಪಡುತ್ತಿರುವ ನಮ್ಮ ಎಚ್ಚರ! ಪತ್ರಿಕೆಯಿಂದ ನಾನು ಕೆಲವೊಂದು ಲೇಖನಗಳನ್ನು ಆರಿಸಿದ್ದೇನೆ, ಅವು ವಿಶೇಷವಾಗಿ ನೀವು ಮಾಡುವ ಕೆಲಸ ಹಾಗೂ ಅದರಲ್ಲಿ ಒಳಗೂಡಿರುವ ಸಮಸ್ಯೆಗಳ ಕುರಿತಾಗಿ ಚರ್ಚಿಸುತ್ತವೆ. ಈ ಸಮಸ್ಯೆಗಳನ್ನು ಒಂದು ಅಂತಾರಾಷ್ಟ್ರೀಯ ಪತ್ರಿಕೆಯು ಹೇಗೆ ವೀಕ್ಷಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ನೀವು ಇಷ್ಟಪಡುವಿರಿ ಖಂಡಿತ. ಈ ಪ್ರತಿಗಳನ್ನು ನಿಮ್ಮಲ್ಲಿ ಬಿಟ್ಟುಹೋಗಲು ನಾನು ಸಂತೋಷಿಸುವೆ.” ನನ್ನ ಪ್ರಯತ್ನಗಳು ಗಣ್ಯಮಾಡಲ್ಪಟ್ಟಿವೆಯೆಂದು ನನಗೆ ಅನೇಕ ಬಾರಿ ಹೇಳಲಾಯಿತು.
ಆಶ್ಚರ್ಯಕರವೂ ಪ್ರತಿಫಲದಾಯಕವೂ ಆದ ಫಲಿತಾಂಶಗಳು
ಈ ಸಮೀಪಿಸುವಿಕೆಯನ್ನು ನಾನು ಉಪಯೋಗಿಸಿದಾಗ, ಹೆಚ್ಚಿನವರು ದಯಾಪೂರ್ವಕವಾಗಿ ನನಗೆ ಕಿವಿಗೊಟ್ಟರು; 17 ಜನರಲ್ಲಿ ಕೇವಲ ಒಬ್ಬ ವ್ಯಕ್ತಿ ತಿರಸ್ಕರಿಸಿದನು. ಆಶ್ಚರ್ಯಕರವೂ ಪ್ರತಿಫಲದಾಯಕವೂ ಆದ ಹಲವಾರು ಅನುಭವಗಳು ನನಗಿದ್ದವು.
ಉದಾಹರಣೆಗೆ, ನಾಲ್ಕು ಬಾರಿ ಪ್ರಯತ್ನಿಸಿ, ತಾಳ್ಮೆಯಿಂದ ಕಾದ ಅನಂತರ, ನಾನು ಒಬ್ಬ ಜಿಲ್ಲಾ ಶಾಲಾ ಇನ್ಸ್ಪೆಕ್ಟರನ್ನು ಸಂಧಿಸುವುದರಲ್ಲಿ ಸಫಲಳಾದೆ. ಅವರು ಒಬ್ಬ ತೀರ ಕಾರ್ಯಮಗ್ನ ವ್ಯಕ್ತಿಯಾಗಿದ್ದರು. ಆದರೂ ಅವರು ತುಂಬ ಸ್ನೇಹಶೀಲರಾಗಿದ್ದು, ನನ್ನೊಂದಿಗೆ ಸ್ವಲ್ಪ ಸಮಯ ಮಾತಾಡಿದರು. ನಾನು ಅಲ್ಲಿಂದ ಹೊರಬರುತ್ತಿರುವಾಗ, ಅವರು ಹೇಳಿದ್ದು: “ನಿಮ್ಮ ಪ್ರಯತ್ನವನ್ನು ನಾನು ನಿಜವಾಗಿಯೂ ಗಣ್ಯಮಾಡುತ್ತೇನೆ, ಮತ್ತು ನಿಮ್ಮ ಸಾಹಿತ್ಯವನ್ನು ಖಂಡಿತವಾಗಿಯೂ ಜಾಗರೂಕವಾಗಿ ಓದುವೆನು.”
ಮತ್ತೊಂದು ಸಂದರ್ಭದಲ್ಲಿ, ಒಬ್ಬ ಮಧ್ಯವಯಸ್ಸಿನ ಮುಖ್ಯ ನ್ಯಾಯಾಧೀಶರನ್ನು ಜಿಲ್ಲಾ ನ್ಯಾಯಾಲಯದಲ್ಲಿ ಭೇಟಿಮಾಡಿದೆ. ನಾನು ಅವರ ಆಫೀಸನ್ನು ಪ್ರವೇಶಿಸಿದಾಗ, ಅವರು ತಮ್ಮ ದಾಖಲೆಪತ್ರಗಳಿಂದ ಕಣ್ಣೆತ್ತಿ, ಸಿಡುಕು ಮುಖಮಾಡಿಕೊಂಡು ನನ್ನನ್ನು ನೋಡಿದರು.
“ಆಫೀಸ್ ಸಮಯ ಕೇವಲ ಮಂಗಳವಾರ ಬೆಳಗ್ಗೆ, ಯಾವುದೇ ಮಾಹಿತಿ ಬೇಕಾಗಿದ್ದರೂ ಆಗ ನನ್ನ ಹತ್ತಿರ ಮಾತಾಡಬಹುದು” ಎಂದು ಅವರು ಒರಟಾಗಿ ಹೇಳಿದರು.
“ಅನುಚಿತವಾದ ಸಮಯದಲ್ಲಿ ಬಂದದ್ದಕ್ಕಾಗಿ ನನ್ನನ್ನು ಕ್ಷಮಿಸಿರಿ” ಎಂದು ನಾನು ಥಟ್ಟನೆ ಉತ್ತರಕೊಡುತ್ತಾ, “ಬೇರೊಂದು ಸಮಯದಲ್ಲಿ ಪುನಃ ಬರಲು ಖಂಡಿತ ನಾನು ಸಂತೋಷಿಸುವೆ. ಆದರೆ ನನ್ನ ಭೇಟಿಯು ವಾಸ್ತವದಲ್ಲಿ ಒಂದು ವೈಯಕ್ತಿಕ ವಿಷಯವಾಗಿದೆ” ಎಂದು ಸೇರಿಸಿದೆ.
ಈಗ ನ್ಯಾಯಾಧೀಶರು ಕುತೂಹಲಿಯಾಗಿದ್ದರು. ಸ್ವಲ್ಪ ಮೃದುವಾಗಿ ಅವರು ನನಗೆ ಏನು ಬೇಕೆಂದು ಕೇಳಿದರು. ನಾನು ಮಂಗಳವಾರದಂದು ಪುನಃ ಭೇಟಿಯಾಗುವೆ ಎಂದು ಮತ್ತೆ ಹೇಳಿದೆ.
ನನಗೆ ತೀರ ಆಶ್ಚರ್ಯವಾಗುವಂತೆ, ಅವರು “ದಯವಿಟ್ಟು ಕುಳಿತುಕೊಳ್ಳಿರಿ” ಎಂದು ಒತ್ತಾಯಿಸಿದರು. “ನಿಮಗೆ ಏನು ಬೇಕು?”
ಒಂದು ಕಳೆಗೂಡಿದ ಸಂಭಾಷಣೆಯು ಮುಂದುವರಿಯಿತು ಮತ್ತು ಅವರು ನಿಜವಾಗಿಯೂ ತುಂಬ ಕಾರ್ಯಮಗ್ನರಾಗಿದ್ದ ಕಾರಣ, ಪ್ರಾರಂಭದಲ್ಲಿ ಸ್ನೇಹಶೀಲರಾಗಿರದೆ ಇದ್ದುದಕ್ಕಾಗಿ ಅವರು ಕ್ಷಮಾಪಣೆಯನ್ನು ಕೇಳಿಕೊಂಡರು.
ಸ್ವಲ್ಪ ಸಮಯದ ನಂತರ ಆ ನ್ಯಾಯಾಧೀಶರು, “ಯೆಹೋವನ ಸಾಕ್ಷಿಗಳ ಬಗ್ಗೆ ನಾನು ಇಷ್ಟಪಡುವಂಥ ಸಂಗತಿ ಏನೆಂಬುದು ನಿಮಗೆ ಗೊತ್ತೋ?” ಎಂದು ಕೇಳಿದನು. “ಅವರಿಗೆ ಸುದೃಢವಾದ ತತ್ತ್ವಗಳಿವೆ, ಅವರು ಅದರಿಂದ ದಿಕ್ಕುತಪ್ಪುವುದಿಲ್ಲ. ಹಿಟ್ಲರ್ ತನ್ನಿಂದ ಸಾಧ್ಯವಾದುದೆಲ್ಲವನ್ನು ಪ್ರಯತ್ನಿಸಿದನಾದರೂ ಸಾಕ್ಷಿಗಳು ಯುದ್ಧಕ್ಕೆ ಹೋಗಲೇ ಇಲ್ಲ.”
ನಾವಿಬ್ಬರು ಸಹೋದರಿಯರು ಒಂದು ಆಫೀಸನ್ನು ಪ್ರವೇಶಿಸಿದಾಗ, ಅಲ್ಲಿದ್ದ ಸೆಕ್ರಿಟರಿಗಳು ನಮ್ಮನ್ನು ಗುರುತಿಸಿದರು. ಅನಂತರ ನಿರ್ವಾಹಕ ಸೆಕ್ರಿಟರಿಯು ನಿರ್ಭಾವದಿಂದ ಜೋರಾಗಿ ಹೇಳಿದ್ದು, “ಅಧ್ಯಕ್ಷರು ಯಾವುದೇ ಗುಂಪನ್ನು ಎಂದೂ ಬರಗೊಡುವುದಿಲ್ಲ.”
ನಾನು ಶಾಂತಚಿತ್ತಳಾಗಿ ಉತ್ತರಿಸಿದ್ದು, “ಆದರೆ ಅವರು ನಮ್ಮನ್ನು ಬರಗೊಡುವರು ಏಕೆಂದರೆ ನಾವು ಯೆಹೋವನ ಸಾಕ್ಷಿಗಳು. ನಾವು ಮನವಿಗಾರರಲ್ಲ ಮತ್ತು ನಮ್ಮ ಭೇಟಿಯು ಮೂರು ನಿಮಿಷಗಳಿಗಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದಿಲ್ಲ.” ನಾನು ಒಳಗೊಳಗೆ ತೀವ್ರತರನಾಗಿ ಹೀಗೆ ಪ್ರಾರ್ಥಿಸಿದೆ, “ಯೆಹೋವನೇ, ದಯವಿಟ್ಟು ಇದನ್ನು ಪ್ರತಿಫಲದಾಯಕವಾಗಿ ಮಾಡು!”
ಆ ಸೆಕ್ರಿಟರಿಯು ಉದಾಸೀನಭಾವದ ರೀತಿಯಲ್ಲಿ “ಸರಿ ನೋಡೋಣ, ನಾನು ಪ್ರಯತ್ನಿಸಿನೋಡುತ್ತೇನೆ” ಎಂದು ಹೇಳಿದಳು. ಅವಳು ಹೊರಟುಹೋದಳು. ನನಗೆ ತುಂಬ ದೀರ್ಘವಾದ ಸಮಯದಂತೆ ತೋರಿದ, ಸುಮಾರು ಎರಡು ನಿಮಿಷಗಳ ಬಳಿಕ, ಅವಳು ಸ್ವತಃ ಅಧ್ಯಕ್ಷರೊಟ್ಟಿಗೆ ಮತ್ತೆ ಬಂದಳು. ಏನನ್ನೂ ಹೇಳದೆ, ಇನ್ನೂ ಎರಡು ರೂಮುಗಳನ್ನು ದಾಟಿಹೋಗುತ್ತಾ, ಅವನು ತನ್ನ ಆಫೀಸಿನ ಕಡೆಗೆ ನಮ್ಮನ್ನು ಕರೆದುಕೊಂಡುಹೋದನು.
ನಾವು ಮಾತಾಡಲು ಆರಂಭಿಸಿದಂತೆ ಅವರು ಹೆಚ್ಚೆಚ್ಚು ಸ್ನೇಹಶೀಲರಾದರು. ನಾವು ಅವರಿಗೆ ಎಚ್ಚರ! ಪತ್ರಿಕೆಯ ವಿಶೇಷ ಸಂಚಿಕೆಗಳನ್ನು ನೀಡಿದಾಗ ಅವುಗಳನ್ನು ಸಿದ್ಧಮನಸ್ಸಿನಿಂದ ತೆಗೆದುಕೊಂಡರು. ನಮ್ಮ ಕಾರ್ಯದ ಉದ್ದೇಶದ ಕುರಿತು ಒಂದು ಒಳ್ಳೆಯ ಸಾಕ್ಷಿಯನ್ನು ನೀಡಲಿಕ್ಕಾಗಿ ಇಂಥ ಅವಕಾಶವನ್ನು ಒದಗಿಸಿಕೊಟ್ಟ ಯೆಹೋವನಿಗೆ ನಾವು ಉಪಕಾರಹೇಳಿದೆವು.
ಅನೇಕ ಅದ್ಭುತಕರವಾದ ಅನುಭವಗಳ ಬಗ್ಗೆ ಚಿಂತನೆಮಾಡಿ ನೋಡುವಾಗ, ಅಪೊಸ್ತಲ ಪೇತ್ರನು ಹೇಳಿದ ವಿಷಯವನ್ನು ನಾನು ಹೆಚ್ಚು ಪೂರ್ಣವಾಗಿ ಗಣ್ಯಮಾಡಲು ಪ್ರಾರಂಭಿಸಿದ್ದೇನೆ: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.” (ಅ. ಕೃತ್ಯಗಳು 10:34, 35) ಮಾನವಕುಲಕ್ಕಾಗಿ ಮತ್ತು ಭೂಮಿಗಾಗಿ ಇರುವ ತನ್ನ ಉದ್ದೇಶವನ್ನು, ಎಲ್ಲ ಹಿನ್ನೆಲೆಗಳ, ಭಾಷೆಗಳ, ಅಥವಾ ಸಾಮಾಜಿಕ ಸ್ಥಾನಗಳಲ್ಲಿರುವ ಜನರು ತಿಳಿದುಕೊಳ್ಳಲು ಅವಕಾಶವು ನೀಡಲ್ಪಡಬೇಕು ಎಂಬುದೇ ದೇವರ ಚಿತ್ತವಾಗಿದೆ.—ದತ್ತಲೇಖನ.