ದಿವ್ಯಶಕ್ತಿ—ಮನುಷ್ಯನಿಗೆ ಸ್ತುತಿಯೋ ದೇವರಿಗೆ ಮಹಿಮೆಯೋ?
“ಒಬ್ಬ ದೊರೆಯು ತನ್ನ ಪ್ರಜೆಗಳಿಗಿಂತಲೂ ಉತ್ತಮನಾಗಿರಬೇಕು ಮಾತ್ರವಲ್ಲ, ಅವನು ಅವರ ಮೇಲೆ ಒಂದು ಬಲವಾದ ಮೋಡಿಯನ್ನು ಸಹ ಹಾಕುವವನಾಗಿರಬೇಕು” ಎಂದು ಒಬ್ಬ ಪ್ರಸಿದ್ಧ ಗ್ರೀಕ್ ಜನರಲ್ ಸೆನಫನ್ ಬರೆದನು. ಇಂದು, ಅಂಥ ಒಂದು “ಮೋಡಿಯನ್ನು” ಅನೇಕರು ದಿವ್ಯ(ಮೋಹಕ)ಶಕ್ತಿ [ಕರಿಸ್ಮ] ಎಂದು ಕರೆಯುತ್ತಾರೆ.
ಎಲ್ಲ ಮಾನವ ದೊರೆಗಳಲ್ಲಿ ಮೋಹಕಶಕ್ತಿಯಿಲ್ಲವೆಂಬುದು ನಿಶ್ಚಯ. ಆದರೆ ಯಾರಲ್ಲಿ ಅದು ಇದೆಯೋ ಅವರು ಜನಸಮೂಹಗಳ ನಿಷ್ಠೆಯನ್ನು ಪ್ರೇರಿಸಲು ಹಾಗೂ ತಮ್ಮ ವೈಯಕ್ತಿಕ ಹೇತುಗಳಿಗಾಗಿ ಜಾಣ್ಮೆಯಿಂದ ಅವುಗಳನ್ನು ಅಧೀನಪಡಿಸಿಕೊಳ್ಳಲು ತಮ್ಮ ಸಾಮರ್ಥ್ಯವನ್ನು ಉಪಯೋಗಿಸುತ್ತಾರೆ. ಇತ್ತೀಚಿನ ಅತ್ಯಂತ ಕುಖ್ಯಾತ ಉದಾಹರಣೆಯು ಆ್ಯಡಾಲ್ಫ್ ಹಿಟ್ಲರ್ನದ್ದಾಗಿರಬೇಕು. “[1933ರಲ್ಲಿ] ಅಧಿಕಾಂಶ ಜರ್ಮನರು ಹಿಟ್ಲರ್ನಲ್ಲಿ ನಿಜವಾಗಿಯೂ ಮೋಹಕಶಕ್ತಿಯುಳ್ಳ ನಾಯಕನೊಬ್ಬನ ಕಾಂತಿಯಿರುವುದನ್ನು ಅಥವಾ ಅವನು ಅದನ್ನು ಬೇಗನೇ ಧರಿಸಲಿರುವುದನ್ನು ಕಂಡರು” ಎಂದು ಮೂರನೆಯ ಜರ್ಮನ್ ಸಾಮ್ರಾಜ್ಯದ (ರೈಖ್) ಏಳುವಿಕೆ ಮತ್ತು ಬೀಳುವಿಕೆ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ವಿಲ್ಯಮ್ ಎಲ್. ಶೈರರ್ ಬರೆಯುತ್ತಾರೆ. “ಮುಂದಿನ ಹನ್ನೆರಡು ಪ್ರಕ್ಷುಬ್ಧ ವರ್ಷಗಳಲ್ಲಿ, ಅವನ ತೀರ್ಪು ದೈವಿಕವಾಗಿತ್ತೆಂಬಂತೆ ಅವನನ್ನು ಅವರು ಕುರುಡಾಗಿ ಅನುಸರಿಸಲಿದ್ದರು.”
ಧಾರ್ಮಿಕ ಚರಿತ್ರೆಯು ಸಹ, ಮೋಹಕಶಕ್ತಿಯುಳ್ಳ (ಕ್ಯಾರಿಸ್ಮ್ಯಾಟಿಕ್) ಧಾರ್ಮಿಕ ಮುಖಂಡರಿಂದ ತುಂಬಿದೆ. ಅವರು ಜನರು ತಮಗೆ ನಿಷ್ಠಾವಂತರಾಗಿರುವಂತೆ ಪ್ರೇರಿಸಿದರಾದರೂ, ತಮ್ಮ ಹಿಂಬಾಲಕರ ಮೇಲೆ ವಿಪತ್ತನ್ನು ತಂದಿದ್ದಾರೆ. “ಯಾರಾದರೂ ನಿಮ್ಮನ್ನು ಮೋಸಗೊಳಿಸಾರು ನೋಡಿಕೊಳ್ಳಿರಿ. ಯಾಕಂದರೆ ಅನೇಕರು ಬಂದು ನನ್ನ ಹೆಸರನ್ನು ಎತ್ತಿಕೊಂಡು—ನಾನು ಕ್ರಿಸ್ತನು, ನಾನು ಕ್ರಿಸ್ತನು ಎಂದು ಹೇಳಿ ಎಷ್ಟೋ ಜನರನ್ನು ಮೋಸಗೊಳಿಸುವರು” ಎಂದು ಯೇಸು ಎಚ್ಚರಿಸಿದನು. (ಮತ್ತಾಯ 24:4, 5) ಮೋಹಕಶಕ್ತಿಯ ಸುಳ್ಳು ಕ್ರಿಸ್ತರು ಪ್ರಥಮ ಶತಮಾನದಲ್ಲಿ ಮಾತ್ರವೇ ಕಾಣಿಸಿಕೊಳ್ಳಲಿಲ್ಲ. 1970ಗಳ ಸಮಯದಲ್ಲಿ, ಜಿಮ್ ಜೋನ್ಸ್ ತನ್ನನ್ನು “ಜನರ ಮಂದಿರದ ಮೆಸ್ಸೀಯ”ನೆಂದು ಕರೆದುಕೊಂಡನು. “ಜನರ ಮೇಲೆ ಒಂದು ಅಪೂರ್ವ ಶಕ್ತಿಯನ್ನು” ಹೊಂದಿದ್ದ “ಒಬ್ಬ ಮೋಹಕಶಕ್ತಿಯ ಪಾದ್ರಿ”ಯಾಗಿ ಅವನನ್ನು ವರ್ಣಿಸಲಾಯಿತು ಹಾಗೂ 1978ರಲ್ಲಿ ಇತಿಹಾಸದಲ್ಲಿಯೇ ಅತಿ ದೊಡ್ಡ ಸಮೂಹ ಆತ್ಮಹತ್ಯೆಗಳಲ್ಲಿ ಒಂದನ್ನು ಅವನು ಚಿತಾವಣೆಮಾಡಿದನು.a
ಸ್ಪಷ್ಟವಾಗಿ, ಮೋಹಕಶಕ್ತಿಯು ಒಂದು ಅಪಾಯಕಾರಿಯಾದ ವರವಾಗಿರಸಾಧ್ಯವಿದೆ. ಆದರೂ ಎಲ್ಲರ ಒಳಿತಿಗಾಗಿ ಎಲ್ಲರಿಗೂ ದೇವರಿಂದ ಸಿಗುವ ಒಂದು ವಿಭಿನ್ನ ತೆರನಾದ ವರ ಅಥವಾ ವರಗಳ ಬಗ್ಗೆ ಬೈಬಲು ಮಾತಾಡುತ್ತದೆ. ಈ ವರಕ್ಕಾಗಿರುವ ಗ್ರೀಕ್ ಪದವು ಖಾರಿಸ್ಮ ಆಗಿದೆ ಮತ್ತು ಅದು ಬೈಬಲಿನಲ್ಲಿ 17 ಬಾರಿ ಕಂಡುಬರುತ್ತದೆ. ಇದನ್ನು ಒಬ್ಬ ಗ್ರೀಕ್ ವಿದ್ವಾಂಸನು ಹೀಗೆ ನಿರೂಪಿಸುತ್ತಾನೆ, “ಇದು ಉಚಿತವೂ ಅಪಾತ್ರ ವರವೂ ಆಗಿದೆ, ಗಳಿಸಲ್ಪಡದ ಹಾಗೂ ಅರ್ಹತೆಯಿಲ್ಲದ ಮನುಷ್ಯನಿಗೆ ಕೊಡಲ್ಪಡುವಂಥದ್ದಾಗಿದೆ, ಇದು ದೇವರ ಅಪಾತ್ರ ದಯೆಯಿಂದ ಬರುವಂಥ ಒಂದು ವಿಷಯ ಹಾಗೂ ಇದು ಒಬ್ಬ ಮನುಷ್ಯನ ಸ್ವಂತ ಪ್ರಯತ್ನದಿಂದ ಎಂದೂ ಗಳಿಸಲು ಅಥವಾ ಒಡೆತನ ಪಡೆದುಕೊಳ್ಳಲು ಸಾಧ್ಯವೇ ಇಲ್ಲದಿರುವ ಒಂದು ವಿಷಯವಾಗಿದೆ.”
ಆದುದರಿಂದ, ಶಾಸ್ತ್ರೀಯ ದೃಷ್ಟಿಕೋನದಿಂದ ಖಾರಿಸ್ಮ ದೇವರ ಅಪಾತ್ರ ದಯೆಯ ಕಾರಣದಿಂದ ಪಡೆದುಕೊಳ್ಳುವ ಒಂದು ವರವಾಗಿದೆ. ದೇವರು ನಮಗೆ ದಯೆಯಿಂದ ಕೊಟ್ಟಿರುವ ಈ ವರಗಳಲ್ಲಿ ಕೆಲವು ಯಾವುವು? ಮತ್ತು ಅವುಗಳನ್ನು ನಾವು ಆತನಿಗೆ ಸ್ತುತಿ ತರುವಂತೆ ಹೇಗೆ ಉಪಯೋಗಿಸಬಲ್ಲೆವು? ಈ ಕೃಪಾಪೂರ್ಣ ವರಗಳಲ್ಲಿ ಮೂರನ್ನು ನಾವು ಪರಿಗಣಿಸೋಣ.
ನಿತ್ಯಜೀವ
ವರಗಳಲ್ಲಿಯೇ ಅತ್ಯಂತ ದೊಡ್ಡ ವರ ನಿಸ್ಸಂದೇಹವಾಗಿಯೂ ನಿತ್ಯಜೀವವಾಗಿದೆ. ರೋಮನ್ ಸಭೆಗೆ ಪೌಲನು ಬರೆದುದು: “ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥ ವರವು [ಖಾರಿಸ್ಮ] ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.” (ರೋಮಾಪುರ 6:23) “ಸಂಬಳ” (ಮೃತ್ಯು) ನಮ್ಮ ಪಾಪಭರಿತ ಸ್ವಭಾವದಿಂದ ಇಷ್ಟವಿಲ್ಲದಿದ್ದರೂ ಸಂಪಾದಿಸಿರುವ ಒಂದು ವಿಷಯವಾಗಿದೆ ಎಂಬದನ್ನು ಗಮನಿಸುವುದು ಸಮಂಜಸವಾಗಿದೆ. ಮತ್ತೊಂದು ಕಡೆಯಲ್ಲಿ, ದೇವರು ಲಭ್ಯಗೊಳಿಸುವ ನಿತ್ಯಜೀವವು, ನಮ್ಮ ಸ್ವಂತ ಯೋಗ್ಯತೆಯಿಂದ ನಾವು ಎಂದೂ ಸಂಪಾದಿಸಸಾಧ್ಯವಿರದ ಸಂಪೂರ್ಣವಾಗಿ ಅಪಾತ್ರವಾದ ವಿಷಯವಾಗಿದೆ.
ನಿತ್ಯಜೀವದ ವರವನ್ನು ನಿಧಿಯಂತೆ ಕಾಪಾಡಬೇಕು ಮತ್ತು ಹಂಚಿಕೊಳ್ಳಬೇಕು. ಯೆಹೋವನನ್ನು ತಿಳಿದುಕೊಳ್ಳುವಂತೆ, ಆತನಿಗೆ ಸೇವೆಸಲ್ಲಿಸುವಂತೆ ಮತ್ತು ಹೀಗೆ ನಿತ್ಯಜೀವದ ವರದ ಅನುಗ್ರಹ ಪಡೆಯುವಂತೆ ನಾವು ಜನರಿಗೆ ಸಹಾಯಮಾಡಬಲ್ಲೆವು. ಪ್ರಕಟನೆ 22:17 ಹೇಳುವುದು: “ಆತ್ಮನೂ ಮದಲಗಿತ್ತಿಯೂ—ಬಾ ಅನ್ನುತ್ತಾರೆ. ಕೇಳುವವನು—ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.”
ಈ ಜೀವಜಲದ ಕಡೆಗೆ ನಾವು ಇತರರನ್ನು ಹೇಗೆ ನಡೆಸಬಲ್ಲೆವು? ಮುಖ್ಯವಾಗಿ, ನಮ್ಮ ಶುಶ್ರೂಷೆಯಲ್ಲಿ ಬೈಬಲನ್ನು ಪರಿಣಾಮಕಾರಿಯಾಗಿ ಉಪಯೋಗಿಸುವ ಮೂಲಕವೇ. ಲೋಕದ ಕೆಲವು ಭಾಗಗಳಲ್ಲಿ ಜನರು ಆತ್ಮಿಕ ವಿಷಯಗಳ ಕುರಿತು ಓದುವುದು ಅಥವಾ ಆಲೋಚಿಸುವುದೇ ವಿರಳ ಎಂಬುದು ಸತ್ಯವಾಗಿದೆಯಾದರೂ, ‘ಕಿವಿಯನ್ನು ಜಾಗರಗೊಳಿಸಲು’ ಯಾವಾಗಲೂ ಅವಕಾಶಗಳಿವೆ. (ಯೆಶಾಯ 50:4) ಈ ವಿಷಯದಲ್ಲಿ, ನಾವು ಬೈಬಲಿನ ಪ್ರೇರಕ ಶಕ್ತಿಯಲ್ಲಿ ಭರವಸೆಯುಳ್ಳವರಾಗಿರಸಾಧ್ಯವಿದೆ, “ಯಾಕಂದರೆ ದೇವರ ವಾಕ್ಯವೂ ಸಜೀವವಾದದ್ದು, ಕಾರ್ಯಸಾಧಕವಾದದ್ದು” ಆಗಿದೆ. (ಇಬ್ರಿಯ 4:12) ಬೈಬಲಿನ ಪ್ರಾಯೋಗಿಕ ವಿವೇಕವಾಗಿರಲಿ, ಅದು ನೀಡುವ ಸಾಂತ್ವನ ಹಾಗೂ ನಿರೀಕ್ಷೆಯಾಗಿರಲಿ, ಇಲ್ಲವೇ ಜೀವಿತದ ಉದ್ದೇಶದ ಕುರಿತಾದ ಅದರ ವಿವರಣೆಯಾಗಿರಲಿ, ದೇವರ ವಾಕ್ಯವು ಹೃದಯವನ್ನು ಸ್ಪರ್ಶಿಸಿ, ಜನರನ್ನು ಜೀವಿತದ ಮಾರ್ಗದಲ್ಲಿ ನಡೆಸಬಲ್ಲದು.—2 ತಿಮೊಥೆಯ 3:16, 17.
ಅಷ್ಟುಮಾತ್ರವಲ್ಲದೆ, ಬೈಬಲ್ ಆಧಾರಿತ ಸಾಹಿತ್ಯವು, “ಬಾ!” (NW) ಎಂದು ನಾವು ಹೇಳುವಂತೆ ಸಹಾಯಮಾಡಬಲ್ಲದು. ಆತ್ಮಿಕ ಅಂಧಕಾರದ ಈ ಸಮಯದಲ್ಲಿ ‘ಯೆಹೋವನ ತೇಜಸ್ಸು’ ಆತನ ಜನರ ಮೇಲೆ ‘ಉದಯಿಸುವುದು’ ಎಂದು ಪ್ರವಾದಿಯಾದ ಯೆಶಾಯನು ಮುಂತಿಳಿಸಿದನು. (ಯೆಶಾಯ 60:2) ವಾಚ್ಟವರ್ ಸೊಸೈಟಿಯ ಪ್ರಕಾಶನಗಳು ಯೆಹೋವನಿಂದ ಬರುವ ಈ ಆಶೀರ್ವಾದವನ್ನು ಪ್ರತಿಫಲಿಸುತ್ತವೆ ಮತ್ತು ಅವು ಪ್ರತಿ ವರ್ಷ ಆತ್ಮಿಕ ಜ್ಞಾನೋದಯದ ಮೂಲನಾದ ಯೆಹೋವನೆಡೆಗೆ ಸಾವಿರಾರು ಜನರನ್ನು ನಡೆಸುತ್ತದೆ. ಅವುಗಳ ಪುಟಗಳಾದ್ಯಂತ ವ್ಯಕ್ತಿಗಳಿಗೆ ಪ್ರಾಮುಖ್ಯವು ಕೊಡಲ್ಪಟ್ಟಿಲ್ಲ. ಕಾವಲಿನಬುರುಜು ಪತ್ರಿಕೆಯ ಪೀಠಿಕೆಯು ವಿವರಿಸುವಂತೆ, “ಕಾವಲಿನಬುರುಜು ಇದರ ಉದ್ದೇಶವು ಯೆಹೋವ ದೇವರನ್ನು ವಿಶ್ವದ ಪರಮಾಧಿಕಾರಿ ಪ್ರಭುವಾಗಿ ಮಹಿಮೆ ಪಡಿಸುವುದೇ ಆಗಿದೆ. . . . ಯಾರ ಸುರಿಸಲ್ಪಟ್ಟ ರಕ್ತವು ಮಾನವ ಕುಲಕ್ಕೆ ನಿತ್ಯಜೀವವನ್ನು ಪಡೆಯುವ ಮಾರ್ಗವನ್ನು ತೆರೆಯುತ್ತದೋ, ಆ ದೇವರ ಈಗ ಆಳುತ್ತಿರುವ ರಾಜನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡುವಂತೆ ಇದು ಉತ್ತೇಜಿಸುತ್ತದೆ.”
ಅನೇಕ ವರ್ಷಗಳಿಂದ ತನ್ನ ಶುಶ್ರೂಷೆಯಲ್ಲಿ ಗಮನಾರ್ಹವಾದ ಯಶಸ್ಸನ್ನು ಹೊಂದಿದ್ದ ಒಬ್ಬ ಪೂರ್ಣ ಸಮಯದ ಕ್ರೈಸ್ತ ಶುಶ್ರೂಷಕಿಯು, ದೇವರಿಗೆ ನಿಕಟವಾಗುವಂತೆ ಜನರಿಗೆ ಸಹಾಯಮಾಡುವುದರಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಮೌಲ್ಯದ ಕುರಿತು ಹೇಳಿಕೆಯನ್ನೀಡುವುದು: “ನನ್ನ ಬೈಬಲ್ ವಿದ್ಯಾರ್ಥಿಗಳು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಓದಲು ಶುರುಮಾಡಿ, ಆನಂದಿಸುವಾಗ ಅವರು ತೀವ್ರಗತಿಯ ಪ್ರಗತಿಯನ್ನು ಮಾಡುತ್ತಾರೆ. ಯೆಹೋವನನ್ನು ತಿಳಿದುಕೊಳ್ಳಲು ಜನರಿಗೆ ಸಹಾಯಮಾಡುವುದರಲ್ಲಿ ಈ ಪತ್ರಿಕೆಗಳನ್ನು ಒಂದು ಬೆಲೆಕಟ್ಟಲಾರದ ಸಹಾಯಕವಾಗಿ ನಾನು ನೋಡುತ್ತೇನೆ.”
ಸೇವಾ ಸುಯೋಗಗಳು
ತಿಮೊಥೆಯನು ವಿಶೇಷವಾದ ಗಮನಕ್ಕೆ ಅರ್ಹವಾಗಿದ್ದ ಇನ್ನೊಂದು ವರವು ಕೊಡಲ್ಪಟ್ಟ ಒಬ್ಬ ಕ್ರೈಸ್ತ ಶಿಷ್ಯನಾಗಿದ್ದನು. ಅಪೊಸ್ತಲ ಪೌಲನು ಅವನಿಗೆ ಹೇಳಿದ್ದು: “ನಿನ್ನಲ್ಲಿರುವ ವರವನ್ನು [ಖಾರಿಸ್ಮ] ಅಲಕ್ಷ್ಯಮಾಡಬೇಡ; ಸಭೆಯ ಹಿರಿಯರು ಪ್ರವಾದನೆಯ ಸಹಿತವಾಗಿ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ ಅದು ನಿನಗೆ ಕೊಡಲ್ಪಟ್ಟಿತಲ್ಲಾ.” (1 ತಿಮೊಥೆಯ 4:14) ಈ ವರವು ಏನಾಗಿತ್ತು? ತಿಮೊಥೆಯನು ಜವಾಬ್ದಾರಿಯುತವಾಗಿ ನೋಡಿಕೊಳ್ಳಬೇಕಾಗಿದ್ದ ಒಂದು ಸೇವಾ ಸುಯೋಗವಾದ, ಸಂಚರಣ ಮೇಲ್ವಿಚಾರಕನ ನೇಮಕವು ಇದರಲ್ಲಿ ಸೇರಿತ್ತು. ಅದೇ ವಚನದಲ್ಲಿ ಪೌಲನು ತಿಮೊಥೆಯನಿಗೆ ಬುದ್ಧಿವಾದ ಹೇಳಿದ್ದು: “ವೇದಪಾರಾಯಣವನ್ನೂ ಪ್ರಸಂಗವನ್ನೂ ಉಪದೇಶವನ್ನೂ ಮಾಡುವದರಲ್ಲಿ ಆಸಕ್ತನಾಗಿರು. ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು; ಹೀಗಿರುವದರಿಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.”—1 ತಿಮೊಥೆಯ 4:13, 16.
ಇಂದು ಸಹ ಹಿರಿಯರು ತಮ್ಮ ಸೇವಾ ಸುಯೋಗಗಳಿಗೆ ಮಾನ್ಯತೆಕೊಡುವ ಅಗತ್ಯವಿದೆ. ಪೌಲನು ಹೇಳುವಂತೆ, ಅವರು ಹೀಗೆ ಮಾಡಸಾಧ್ಯವಿರುವ ಒಂದು ವಿಧವು, ‘ತಮ್ಮ ಉಪದೇಶದ ವಿಷಯದಲ್ಲಿ ಎಚ್ಚರಿಕೆಯಾಗಿರುವ’ ಮೂಲಕವಾಗಿದೆ. ಲೌಕಿಕ ಮೋಹಕಶಕ್ತಿಯ ಮುಖಂಡರನ್ನು ಅನುಕರಿಸುವ ಬದಲಾಗಿ, ಅವರು ದೇವರ ಕಡೆಗೆ ಗಮನವನ್ನು ಸೆಳೆಯುತ್ತಾರೆ, ತಮ್ಮ ಕಡೆಗಲ್ಲ. ಅವರ ಆದರ್ಶವ್ಯಕ್ತಿಯಾದ ಯೇಸು, ನಿಸ್ಸಂದೇಹವಾಗಿಯೂ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದ್ದ ಗಮನಾರ್ಹವಾದ ಶಿಕ್ಷಕನಾಗಿದ್ದರೂ ಅವನು ನಮ್ರಭಾವದಿಂದ ಮಹಿಮೆಯನ್ನು ತನ್ನ ತಂದೆಗೆ ನೀಡಿದನು. “ನಾನು ಹೇಳುವ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದಾತನದು” ಎಂದು ಅವನು ಪ್ರಕಟಿಸಿದನು.—ಯೋಹಾನ 5:41; 7:16.
ಯೇಸು ತನ್ನ ಬೋಧನೆಗಾಗಿ ದೇವರ ವಾಕ್ಯವನ್ನು ಪ್ರಮಾಣ ಗ್ರಂಥವಾಗಿ ಉಪಯೋಗಿಸುತ್ತಾ, ತನ್ನ ಸ್ವರ್ಗೀಯ ತಂದೆಯನ್ನು ಮಹಿಮೆಪಡಿಸಿದನು. (ಮತ್ತಾಯ 19:4-6; 22:31, 32, 37-40) ಮೇಲ್ವಿಚಾರಕರಿಗೆ, “ಬೋಧಾನುಸಾರವಾದ ನಂಬತಕ್ಕ ವಾಕ್ಯವನ್ನು ದೃಢವಾಗಿ ಹಿಡಿದು”ಕೊಳ್ಳಲಿಕ್ಕಿರುವ ಅಗತ್ಯವನ್ನು ಅದೇ ರೀತಿಯಲ್ಲಿ ಪೌಲನು ಒತ್ತಿಹೇಳಿದನು. (ತೀತ 1:9) ತಮ್ಮ ಭಾಷಣಗಳನ್ನು ಶಾಸ್ತ್ರಗಳ ಮೇಲೆ ದೃಢವಾಗಿ ಆಧಾರಿಸುವ ಮೂಲಕ ಹಿರಿಯರು, “ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುವದಿಲ್ಲ” ಎಂದು ಯೇಸುವಿನಂತೆ ಹೇಳುವರು.—ಯೋಹಾನ 14:10.
ಹಿರಿಯರು “ನಂಬತಕ್ಕ ವಾಕ್ಯವನ್ನು” ಹೇಗೆ “ದೃಢವಾಗಿ ಹಿಡಿದು”ಕೊಳ್ಳಬಲ್ಲರು? ತಮ್ಮ ಭಾಷಣಗಳನ್ನು ಹಾಗೂ ಕೂಟದ ನೇಮಕಗಳನ್ನು ದೇವರ ವಾಕ್ಯದ ಮೇಲೆ ಕೇಂದ್ರೀಕರಿಸುವ ಮೂಲಕ, ಮತ್ತು ತಾವು ಉಪಯೋಗಿಸುವ ವಚನಗಳನ್ನು ವಿವರಿಸಿ, ಅವುಗಳಿಗೆ ಮಹತ್ತ್ವವನ್ನು ಕೊಡುವ ಮೂಲಕ. ನಾಟಕೀಯ ದೃಷ್ಟಾಂತಗಳು ಅಥವಾ ವಿನೋದಕರ ದಂತಕಥೆಗಳು, ವಿಶೇಷವಾಗಿ ಮಿತಿಮೀರಿ ಹೇಳಲ್ಪಡುವಾಗ, ಸಭಿಕರನ್ನು ದೇವರ ವಾಕ್ಯದಿಂದ ಅಪಕರ್ಷಿಸಿ, ಭಾಷಣಕಾರನ ಸ್ವಂತ ಸಾಮರ್ಥ್ಯಕ್ಕೆ ಗಮನವನ್ನು ಸೆಳೆಯಬಹುದು. ಮತ್ತೊಂದು ಕಡೆಯಲ್ಲಿ, ಹೃದಯವನ್ನು ತಲಪಿ, ಸಭಿಕರನ್ನು ಪ್ರೇರಿಸುವಂಥದ್ದು ಬೈಬಲಿನ ವಚನಗಳೇ ಆಗಿವೆ. (ಕೀರ್ತನೆ 19:7-9; 119:40; ಹೋಲಿಸಿರಿ ಲೂಕ 24:32.) ಅಂಥ ಭಾಷಣಗಳು ಮನುಷ್ಯರ ಕಡೆಗೆ ಕಡಿಮೆ ಗಮನವನ್ನು ಸೆಳೆದು, ದೇವರಿಗೆ ಹೆಚ್ಚು ಮಹಿಮೆಯನ್ನು ಕೊಡುತ್ತವೆ.
ಹಿರಿಯರು ಹೆಚ್ಚು ಪರಿಣಾಮಕಾರಿ ಶಿಕ್ಷಕರಾಗಿ ಪರಿಣಮಿಸಬಲ್ಲ ಮತ್ತೊಂದು ವಿಧವು, ಒಬ್ಬರು ಮತ್ತೊಬ್ಬರಿಂದ ಕಲಿತುಕೊಳ್ಳುವ ಮೂಲಕವೇ. ಪೌಲನು ತಿಮೊಥೆಯನಿಗೆ ಸಹಾಯಮಾಡಿದಂತೆ, ಒಬ್ಬ ಹಿರಿಯನು ಮತ್ತೊಬ್ಬ ಹಿರಿಯನಿಗೆ ನೆರವನ್ನು ನೀಡಬಲ್ಲನು. “ಕಬ್ಬಿಣವು ಕಬ್ಬಿಣವನ್ನು ಹೇಗೋ ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆ ಹರಿತಮಾಡುವನು.” (ಜ್ಞಾನೋಕ್ತಿ 27:17; ಫಿಲಿಪ್ಪಿ 2:3) ವಿಚಾರಗಳನ್ನು ಮತ್ತು ಸಲಹೆಗಳನ್ನು ಹಂಚಿಕೊಳ್ಳುವುದರ ಮೂಲಕ ಹಿರಿಯರು ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಇತ್ತೀಚೆಗೆ ನಿಯುಕ್ತನಾದ ಒಬ್ಬ ಹಿರಿಯನು ವಿವರಿಸಿದ್ದು: “ಒಬ್ಬ ಅನುಭವಿ ಹಿರಿಯನು, ತಾನು ಒಂದು ಸಾರ್ವಜನಿಕ ಭಾಷಣವನ್ನು ಮಾಡಲು ಹೇಗೆ ವಿಷಯಗಳನ್ನು ಸಂಗ್ರಹಿಸುತ್ತೇನೆಂಬುದನ್ನು ನನಗೆ ತೋರಿಸಲು ಸಮಯವನ್ನು ವ್ಯಯಿಸಿದನು. ಅವನ ತಯಾರಿಯಲ್ಲಿ, ಅವನು ಅಲಂಕಾರಿಕ ಪ್ರಶ್ನೆಗಳು, ದೃಷ್ಟಾಂತಗಳು, ಉದಾಹರಣೆಗಳು ಅಥವಾ ಚಿಕ್ಕ ಅನುಭವಗಳನ್ನು ಹಾಗೂ ಜಾಗರೂಕವಾಗಿ ಸಂಶೋಧನೆಮಾಡಿದ್ದ ಶಾಸ್ತ್ರೀಯ ವಚನಗಳನ್ನು ಸಹ ಒಳಗೂಡಿಸಿದ್ದನು. ಭಾಷಣವು ನೀರಸವೂ ಬೇಸರಹಿಡಿಸುವಂಥದ್ದೂ ಆಗಿರುವುದನ್ನು ತಪ್ಪಿಸಲು, ನಾನು ನನ್ನ ಭಾಷಣಗಳಲ್ಲಿ ಹೇಗೆ ವೈವಿಧ್ಯಮಯ ವಿಷಯವನ್ನು ಕೂಡಿಸಸಾಧ್ಯವಿದೆ ಎಂಬುದನ್ನು ಅವನಿಂದ ಕಲಿತುಕೊಂಡಿದ್ದೇನೆ.”
ಸೇವಾ ಸುಯೋಗಗಳನ್ನು ಆನಂದಿಸುವ ನಾವೆಲ್ಲರೂ, ನಾವು ಹಿರಿಯರಾಗಿರಲಿ, ಶುಶ್ರೂಷಾ ಸೇವಕರು ಅಥವಾ ಪಯನೀಯರರಾಗಿರಲಿ, ನಮ್ಮ ವರವನ್ನು ನಿಧಿಯಂತೆ ಕಾಪಾಡುವ ಅಗತ್ಯವಿದೆ. ತಿಮೊಥೆಯನು, ‘ತನಗೆ ದೊರಕಿದ ದೇವರ ಕೃಪಾವರವನ್ನು [ಖಾರಿಸ್ಮ] ಪ್ರಜ್ವಲಿಸುವಂತೆ ಮಾಡಬೇಕೆಂದು’ ಪೌಲನು ತನ್ನ ಮರಣಕ್ಕೆ ಸ್ವಲ್ಪ ಮುಂಚೆ ಜ್ಞಾಪಕ ಹುಟ್ಟಿಸಿದನು. ಇದು ತಿಮೊಥೆಯನ ಸಂಬಂಧದಲ್ಲಿ ಆತ್ಮದ ಯಾವುದೋ ವಿಶೇಷ ವರವನ್ನು ಒಳಗೊಂಡಿತ್ತು. (2 ತಿಮೊಥೆಯ 1:6) ಇಸ್ರಾಯೇಲ್ಯ ಮನೆಗಳಲ್ಲಿ, ಬೆಂಕಿಯು ಅನೇಕ ವೇಳೆ ಕೇವಲ ಕಾವೇರಿದ ಕಲ್ಲಿದ್ದಲುಗಳಾಗಿದ್ದವು. ಜ್ವಾಲೆಯನ್ನು ಮತ್ತು ಹೆಚ್ಚು ಶಾಖವನ್ನು ಉತ್ಪಾದಿಸಲಿಕ್ಕಾಗಿ ಅವನ್ನು ‘ಪ್ರಜ್ವಲಿಸಲು’ ಸಾಧ್ಯವಿತ್ತು. ಹೀಗೆ ನಾವು ನಮ್ಮ ನೇಮಕಗಳಲ್ಲಿ, ನಮಗೆ ಒಪ್ಪಿಸಲ್ಪಟ್ಟಿರುವ ಯಾವುದೇ ಆತ್ಮಿಕ ವರವನ್ನು ಬೆಂಕಿಯಂತೆ ಪ್ರಜ್ವಲಿಸುತ್ತಾ ತನುಮನವನ್ನು ಹಾಕುವಂತೆ ಉತ್ತೇಜಿಸಲ್ಪಟ್ಟಿದ್ದೇವೆ.
ಹಂಚಿಕೊಳ್ಳಬೇಕಾಗಿರುವ ಆತ್ಮಿಕ ವರಗಳು
ರೋಮ್ನಲ್ಲಿದ್ದ ತನ್ನ ಸಹೋದರರಿಗಾಗಿದ್ದ ಪ್ರೀತಿಯು ಪೌಲನನ್ನು ಹೀಗೆ ಬರೆಯುವಂತೆ ಪ್ರಚೋದಿಸಿತು: “ನನ್ನ ಮುಖಾಂತರವಾಗಿ ನಿಮಗೆ ಪಾರಮಾರ್ಥಿಕ ವರವೇನಾದರೂ [ಖಾರಿಸ್ಮ] ದೊರಕಿ ನೀವು ದೃಢವಾಗುವದಕ್ಕೋಸ್ಕರ ಅಂದರೆ ನಾನು ನಿಮ್ಮ ನಂಬಿಕೆಯಿಂದ ನೀವು ನನ್ನ ನಂಬಿಕೆಯಿಂದ ಸಹಾಯಹೊಂದಿ ಈ ಪ್ರಕಾರ ನಿಮ್ಮೊಂದಿಗೆ ನಾನು ಧೈರ್ಯಗೊಳ್ಳುವದಕ್ಕೋಸ್ಕರ ನಿಮ್ಮನ್ನು ನೋಡಬೇಕೆಂದು ಅಪೇಕ್ಷಿಸುತ್ತೇನೆ.” (ರೋಮಾಪುರ 1:11, 12) ಇತರರೊಂದಿಗೆ ಮಾತಾಡುವ ಮೂಲಕ ಅವರ ನಂಬಿಕೆಯನ್ನು ಬಲಪಡಿಸಲು ನಮಗಿರುವ ಸಾಮರ್ಥ್ಯವನ್ನು ಪೌಲನು ಒಂದು ಆತ್ಮಿಕ ವರವಾಗಿ ವೀಕ್ಷಿಸಿದನು. ಅಂಥ ಆತ್ಮಿಕ ವರಗಳ ವಿನಿಮಯವು, ನಂಬಿಕೆಗೆ ಒತ್ತಾಸರೆಯನ್ನು ಕೊಡುವುದರಲ್ಲಿ ಹಾಗೂ ಪರಸ್ಪರ ಉತ್ತೇಜನದಲ್ಲಿ ಫಲಿಸುವುದು.
ಮತ್ತು ಇದು ನಿಶ್ಚಯವಾಗಿಯೂ ಬೇಕಾಗಿದೆ. ನಾವು ಜೀವಿಸುವ ಈ ದುಷ್ಟ ವ್ಯವಸ್ಥೆಯಲ್ಲಿ ನಾವೆಲ್ಲರೂ ಒಂದಲ್ಲ ಒಂದು ವಿಧದಲ್ಲಿ ಒತ್ತಡವನ್ನು ಎದುರಿಸುತ್ತೇವೆ. ಉತ್ತೇಜನದ ಕ್ರಮವಾದ ವಿನಿಮಯವಾದರೋ ಬಿಡದೆ ಮುಂದುವರಿಯುವಂತೆ ನಮಗೆ ಸಹಾಯಮಾಡಬಲ್ಲದು. ವಿನಿಮಯ ಮಾಡಿಕೊಳ್ಳುವ ವಿಚಾರವು—ಕೊಡುವುದು ಮತ್ತು ಪಡೆದುಕೊಳ್ಳುವುದು—ಆತ್ಮಿಕ ಬಲವನ್ನು ಕಾಪಾಡಿಕೊಳ್ಳುವುದಕ್ಕೆ ಪ್ರಾಮುಖ್ಯವಾಗಿದೆ. ನಮಗೆಲ್ಲರಿಗೂ ಸಮಯ ಸಮಯಕ್ಕೆ ಹುರಿದುಂಬಿಸುವಿಕೆಯ ಅಗತ್ಯವಿದೆ ಎಂಬುದು ನಿಜವಾದರೂ, ನಾವು ಸಹ ಒಬ್ಬರು ಇನ್ನೊಬ್ಬರನ್ನು ಆತ್ಮೋನ್ನತಿಗೊಳಿಸಸಾಧ್ಯವಿದೆ.
ಎದೆಗುಂದಿದ ಜೊತೆ ವಿಶ್ವಾಸಿಗಳನ್ನು ನಾವು ಗಮನಿಸಲು ಚುರುಕಾಗಿರುವಲ್ಲಿ, ‘ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಬಿದ್ದಿರುವವರನ್ನು ಸಂತೈಸುವದಕ್ಕೆ ಶಕ್ತರಾಗ’ಬಹುದು. (2 ಕೊರಿಂಥ 1:3-5) ಸಾಂತ್ವನಕ್ಕಿರುವ ಗ್ರೀಕ್ ಪದವು (ಪಾರಕ್ಲಿಸಿಸ್) ಅಕ್ಷರಾರ್ಥವಾಗಿ, “ಒಬ್ಬನ ಪಕ್ಕಕ್ಕೆ ಕರೆಯುವುದು” ಎಂಬ ಅರ್ಥವುಳ್ಳದ್ದಾಗಿದೆ. ಅಗತ್ಯವಿರುವಾಗ, ನಮ್ಮ ಸಹೋದರ ಅಥವಾ ಸಹೋದರಿಗೆ ಸಹಾಯ ಹಸ್ತನೀಡಲು ಅವರೊಂದಿಗಿರುವುದಾದರೆ, ನಿಸ್ಸಂದೇಹವಾಗಿಯೂ ನಮಗೆ ಅಗತ್ಯವಿರುವಾಗ ಅದೇ ಪ್ರೀತಿಪರ ಬೆಂಬಲವನ್ನು ನಾವು ಸ್ವತಃ ಪಡೆದುಕೊಳ್ಳುವೆವು.—ಪ್ರಸಂಗಿ 4:9, 10; ಹೋಲಿಸಿರಿ ಅ. ಕೃತ್ಯಗಳು 9:36-41.
ಹಿರಿಯರ ಪ್ರೀತಿಪರ ಕುರಿಪಾಲನಾ ಭೇಟಿಗಳು ಸಹ ಅತ್ಯಂತ ಪ್ರಯೋಜನಕಾರಿಯಾಗಿವೆ. ಆಗಾಗ್ಗೆ, ಗಮನವನ್ನು ಕೇಳಿಕೊಳ್ಳುವ ವಿಷಯದ ಮೇಲೆ ಶಾಸ್ತ್ರೀಯ ಸಲಹೆಯನ್ನು ಕೊಡಲು ಭೇಟಿಗಳು ಮಾಡಲ್ಪಡುತ್ತವಾದರೂ, ಹೆಚ್ಚಿನ ಕುರಿಪಾಲನಾ ಭೇಟಿಗಳು ಉತ್ತೇಜನಕ್ಕಾಗಿ, ‘ಹೃದಯಗಳನ್ನು ಸಾಂತ್ವನಗೊಳಿಸುವ’ (NW) ಸಂದರ್ಭಗಳಾಗಿರುತ್ತವೆ. (ಕೊಲೊಸ್ಸೆ 2:2) ಮೇಲ್ವಿಚಾರಕರು ಅಂಥ ನಂಬಿಕೆಯನ್ನು ಬಲಪಡಿಸುವ ಭೇಟಿಗಳನ್ನು ಮಾಡುವಾಗ, ಅವರು ನಿಜವಾಗಿಯೂ ಒಂದು ಆತ್ಮಿಕ ವರವನ್ನು ಕೊಡುತ್ತಿದ್ದಾರೆ. ಪೌಲನಂತೆ, ಅವರು ಈ ಅಪೂರ್ವವಾದ ಕೊಡುವಿಕೆಯನ್ನು ಪ್ರತಿಫಲದಾಯಕವಾಗಿ ಕಂಡುಕೊಳ್ಳುವರು ಮತ್ತು ತಮ್ಮ ಸಹೋದರರಿಗಾಗಿ “ಹಂಬಲ”ವನ್ನು (NW) ವಿಕಸಿಸಿಕೊಳ್ಳುವರು.—ರೋಮಾಪುರ 1:11.
ಇದು ಸ್ಪೆಯ್ನ್ನಲ್ಲಿರುವ ಒಬ್ಬ ಹಿರಿಯನ ವಿಷಯದಲ್ಲಿ ಸತ್ಯವಾಗಿತ್ತು. ಅವನು ಈ ಮುಂದಿನ ಅನುಭವವನ್ನು ತಿಳಿಸುತ್ತಾನೆ: “11 ವರ್ಷ ಪ್ರಾಯದ ರೀಕಾರ್ಡೋ ಕೂಟಗಳಲ್ಲಿ, ಮತ್ತು ಸಭೆಯಲ್ಲಿ ಕೊಂಚವೇ ಆಸಕ್ತಿಯನ್ನು ತೋರಿಸುತ್ತಿರುವಂತೆ ಕಂಡುಬಂದನು. ಆದುದರಿಂದ ನಾನು ರೀಕಾರ್ಡೋವನ್ನು ಸಂಧಿಸಲು ಅವನ ಹೆತ್ತವರಲ್ಲಿ ಅನುಮತಿಯನ್ನು ಕೇಳಿದೆ. ಅವರು ಸಿದ್ಧಮನಸ್ಸಿನಿಂದ ಒಪ್ಪಿಕೊಂಡರು. ನನ್ನ ಮನೆಯಿಂದ ಸುಮಾರು ಒಂದು ತಾಸಿನ ದೂರದಲ್ಲಿ ಬೆಟ್ಟದ ಮೇಲೆ ಅವರು ವಾಸಿಸುತ್ತಿದ್ದರು. ನಾನು ಅವನಲ್ಲಿ ತೆಗೆದುಕೊಂಡ ಆಸಕ್ತಿಯನ್ನು ನೋಡಲು ರೀಕಾರ್ಡೋ ಸಂತೋಷಪಟ್ಟನು ಎಂಬುದು ಸ್ಪಷ್ಟ ಮತ್ತು ಅವನು ಆ ಕ್ಷಣವೇ ಪ್ರತಿಕ್ರಿಯಿಸಿದನು. ಅವನು ಬೇಗನೆ ಒಬ್ಬ ಅಸ್ನಾನಿತ ಪ್ರಚಾರಕನಾದನು ಮತ್ತು ಸಭೆಯ ಒಬ್ಬ ಚುರುಕಾದ ಸದಸ್ಯನಾಗಿ ಪರಿಣಮಿಸಿದನು. ಅವನ ನಾಚಿಕೆ ಸ್ವಭಾವವು, ಒಂದು ತೀರ ಸಂತೋಷಿತವಾದ ಸ್ನೇಹಭಾವದ ವ್ಯಕ್ತಿತ್ವಕ್ಕೆ ಸ್ಥಾನಪಲ್ಲಟಗೊಂಡಿತು. ಸಭೆಯಲ್ಲಿದ್ದ ಅನೇಕರು ಕೇಳಿದ್ದು: ‘ರೀಕಾರ್ಡೋ ಏನು ಇಷ್ಟೊಂದು ಬದಲಾಗಿಬಿಟ್ಟಿದ್ದಾನೆ?’ ಅವರು ಅವನನ್ನು ಗಮನಿಸಿದ್ದು ಇದೇ ಮೊದಲ ಬಾರಿ ಎಂಬಂತೆ ತೋರುತ್ತಿತ್ತು. ಆ ನಿರ್ಣಾಯಕ ಕುರಿಪಾಲನಾ ಭೇಟಿಯ ಕುರಿತಾಗಿ ಚಿಂತನೆಮಾಡುವಾಗ, ರೀಕಾರ್ಡೋ ಪಡೆದುಕೊಂಡದ್ದಕ್ಕಿಂತಲೂ ಹೆಚ್ಚಿನ ಪ್ರಯೋಜನಗಳನ್ನು ನಾನು ಪಡೆದುಕೊಂಡಿದ್ದೇನೆಂದು ನನಗನಿಸುತ್ತದೆ. ಅವನು ರಾಜ್ಯ ಸಭಾಗೃಹವನ್ನು ಪ್ರವೇಶಿಸುವಾಗ, ಅವನ ಮುಖವು ಕಳೆಗೂಡುತ್ತದೆ ಮತ್ತು ಅವನು ನನ್ನನ್ನು ಅಭಿವಂದಿಸಲು ಧಾವಿಸಿಬರುತ್ತಾನೆ. ಅವನ ಆತ್ಮಿಕ ಪ್ರಗತಿಯನ್ನು ನೋಡುವುದು ಸಂತೋಷದಾಯಕವಾಗಿದೆ.”
ನಿಸ್ಸಂದೇಹವಾಗಿಯೂ, ಈ ರೀತಿಯ ಕುರಿಪಾಲನಾ ಭೇಟಿಗಳು ಹೇರಳವಾಗಿ ಆಶೀರ್ವದಿಸಲ್ಪಡುತ್ತವೆ. ಅಂಥ ಭೇಟಿಗಳು ಯೇಸುವಿನ ಬೇಡಿಕೆಗೆ ಹೊಂದಿಕೆಯಲ್ಲಿವೆ: “ನನ್ನ ಪುಟ್ಟ ಕುರಿಗಳ ಪಾಲನೆಮಾಡು” (NW). (ಯೋಹಾನ 21:16) ಅಂಥ ಆತ್ಮಿಕ ವರಗಳನ್ನು ಕೊಡಸಾಧ್ಯವಿರುವವರು ಹಿರಿಯರು ಮಾತ್ರ ಆಗಿರುವುದಿಲ್ಲವೆಂಬುದು ನಿಶ್ಚಯ. ಸಭೆಯಲ್ಲಿರುವ ಪ್ರತಿಯೊಬ್ಬರೂ ಇತರರನ್ನು ಪ್ರೀತಿ ಹಾಗೂ ಒಳ್ಳೆಯ ಕಾರ್ಯಗಳಿಗೆ ಹುರಿದುಂಬಿಸಸಾಧ್ಯವಿದೆ. (ಇಬ್ರಿಯ 10:23, 24) ಪರ್ವತವನ್ನು ಹತ್ತುತ್ತಿರುವ ಪರ್ವತಾರೋಹಿಗಳು ಒಟ್ಟಿಗೆ ಹಗ್ಗದಿಂದ ಕಟ್ಟಲ್ಪಟ್ಟಿರುವಂತೆಯೇ, ನಾವು ಆತ್ಮಿಕ ಬಂಧಗಳಿಂದ ಒಟ್ಟಿಗೆ ಜೋಡಿಸಲ್ಪಟ್ಟಿದ್ದೇವೆ. ಖಂಡಿತವಾಗಿಯೂ, ನಾವು ಏನು ಮಾಡುತ್ತೇವೋ ಮತ್ತು ಹೇಳುತ್ತೇವೋ ಅದು ಇತರರ ಮೇಲೆ ಪ್ರಭಾವವನ್ನು ಬೀರುತ್ತದೆ. ಒಂದು ವ್ಯಂಗ್ಯ ನುಡಿ ಅಥವಾ ಒರಟಾದ ಟೀಕೆಯು ನಮ್ಮನ್ನು ಒಂದುಗೂಡಿಸುವ ಬಂಧಗಳನ್ನು ನಿರ್ಬಲಗೊಳಿಸಾಧ್ಯವಿದೆ. (ಎಫೆಸ 4:29; ಯಾಕೋಬ 3:8) ಮತ್ತೊಂದು ಕಡೆಯಲ್ಲಿ, ಉತ್ತೇಜನದಾಯಕವಾದ ಆಯ್ದ ನುಡಿಗಳು ಮತ್ತು ಪ್ರೀತಿಪರ ನೆರವು, ನಮ್ಮ ಸಹೋದರರು ತಮ್ಮ ಕಷ್ಟಗಳನ್ನು ಎದುರಿಸಿ ನಿಲ್ಲುವಂತೆ ಸಹಾಯಮಾಡಬಲ್ಲದು. ಈ ರೀತಿಯಲ್ಲಿ ನಾವು ಶಾಶ್ವತ ಬೆಲೆಯುಳ್ಳ ಆತ್ಮಿಕ ವರಗಳನ್ನು ಹಂಚಿಕೊಳ್ಳುತ್ತಿರುವೆವು.—ಜ್ಞಾನೋಕ್ತಿ 12:25.
ದೇವರ ಮಹಿಮೆಯನ್ನು ಇನ್ನೂ ಹೆಚ್ಚಾಗಿ ಪ್ರತಿಬಿಂಬಿಸುವುದು
ಪ್ರತಿಯೊಬ್ಬ ಕ್ರೈಸ್ತನಲ್ಲಿಯೂ ಒಂದಿಷ್ಟು ದಿವ್ಯಶಕ್ತಿಯಿದೆ ಎಂಬುದು ಸ್ಫುಟ. ನಮಗೆ ಬೆಲೆಕಟ್ಟಲಾರದ ನಿತ್ಯಜೀವದ ನಿರೀಕ್ಷೆಯು ನೀಡಲ್ಪಟ್ಟಿದೆ. ಒಬ್ಬರು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಸಾಧ್ಯವಿರುವ ಆತ್ಮಿಕ ವರಗಳು ಸಹ ನಮ್ಮಲ್ಲಿವೆ. ಮತ್ತು ಸರಿಯಾದ ಹೇತುಗಳ ಕಡೆಗೆ ಇತರರಿಗೆ ಸ್ಫೂರ್ತಿನೀಡಲು ಅಥವಾ ಅವರನ್ನು ಪ್ರಚೋದಿಸಲು ನಾವು ಶ್ರಮಿಸಸಾಧ್ಯವಿದೆ. ಸೇವಾ ಸುಯೋಗಗಳ ರೂಪದಲ್ಲಿ ಕೆಲವರಿಗೆ ಇನ್ನೂ ಹೆಚ್ಚಿನ ವರಗಳಿವೆ. ಈ ಎಲ್ಲ ವರಗಳು ದೇವರ ಅಪಾತ್ರ ದಯೆಯ ಪುರಾವೆಯಾಗಿವೆ. ಮತ್ತು ನಮ್ಮಲ್ಲಿರಬಹುದಾದ ಯಾವುದೇ ವರವು ದೇವರಿಂದ ಪಡೆದುಕೊಂಡ ವಿಷಯವಾಗಿರುವುದರಿಂದ, ಜಂಬಕೊಚ್ಚಿಕೊಳ್ಳುವುದಕ್ಕೆ ನಮಗೆ ಖಂಡಿತವಾಗಿಯೂ ಯಾವ ಕಾರಣವೂ ಇರುವುದಿಲ್ಲ.—1 ಕೊರಿಂಥ 4:7.
ಕ್ರೈಸ್ತರೋಪಾದಿ, ನಾವು ನಮ್ಮನ್ನು ಹೀಗೆ ಕೇಳಿಕೊಳ್ಳುವುದು ಒಳ್ಳೆಯದು, ‘ನಾನು ಪಡೆದಿರಬಹುದಾದ ದಿವ್ಯಶಕ್ತಿಯನ್ನು “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳ”ನ್ನೂ ಕೊಡುವ ಯೆಹೋವನಿಗೆ ಮಹಿಮೆಯನ್ನು ತರುವುದಕ್ಕೆ ಉಪಯೋಗಿಸುವೆನೋ? (ಯಾಕೋಬ 1:17) ನಾನು ಯೇಸುವನ್ನು ಅನುಕರಿಸಿ, ನನ್ನ ಸಾಮರ್ಥ್ಯಗಳು ಹಾಗೂ ಸಂದರ್ಭಗಳಿಗನುಸಾರವಾಗಿ ಇತರರಿಗೆ ಸೇವೆಮಾಡುವೆನೋ?’
ಈ ಸಂಬಂಧದಲ್ಲಿ ಅಪೊಸ್ತಲ ಪೇತ್ರನು ನಮ್ಮ ಜವಾಬ್ದಾರಿಯನ್ನು ಹೀಗೆ ಸಾರಾಂಶಿಸುತ್ತಾನೆ: “ನೀವೆಲ್ಲರು ದೇವರ ವಿವಿಧ ಕೃಪೆಯ ವಿಷಯದಲ್ಲಿ ಒಳ್ಳೇ ಮನೆವಾರ್ತೆಯವರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ಕೃಪಾವರವನ್ನು [ಖಾರಿಸ್ಮ] ಎಲ್ಲರ ಸೇವೆಯಲ್ಲಿ ಉಪಯೋಗಿಸಲಿ. ಒಬ್ಬನು ಬೋಧಿಸುವವನಾದರೆ ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸಭೆಯ ಸೇವೆ ಮಾಡುವವನಾದರೆ ದೇವರಿಂದ ಶಕ್ತಿಯನ್ನು ಹೊಂದಿದವನಾಗಿ ಮಾಡಲಿ. ಇದರಿಂದ ಎಲ್ಲಾದರಲ್ಲಿ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ [“ಮಹಿಮೆ,” NW] ಉಂಟಾಗುವದು.”—1 ಪೇತ್ರ 4:10, 11.
[ಪಾದಟಿಪ್ಪಣಿ]
a ಜಿಮ್ ಜೋನ್ಸ್ ಅನ್ನು ಸೇರಿಸಿ, ಒಟ್ಟು 913 ಜನರು ಮೃತರಾದರು.
[ಪುಟ 23 ರಲ್ಲಿರುವ ಚಿತ್ರ ಕೃಪೆ]
Corbis-Bettmann
UPI/Corbis-Bettmann