ಸತ್ಯಕ್ಕಿಂತಲೂ ಹೆಚ್ಚು ಉತ್ತಮವಾದದ್ದು ಯಾವುದೂ ಇಲ್ಲ
ಜಿ. ಎನ್. ಫಾನ್ ಡರ್ ಬೇಲ್ ಹೇಳಿದಂತೆ
1941ರ ಜೂನ್ ತಿಂಗಳಿನಲ್ಲಿ, ನನ್ನನ್ನು ಗೆಸ್ಟಾಪೊ ಪೊಲೀಸರಿಗೆ ಒಪ್ಪಿಸಲಾಯಿತು ಮತ್ತು ಜರ್ಮನಿಯ ಬರ್ಲಿನ್ನ ಸ್ಯಾಕ್ಸನ್ಹಾಸೆನ್ ಕೂಟ ಶಿಬಿರಕ್ಕೆ ಕರೆದೊಯ್ಯಲಾಯಿತು. ಅಲ್ಲಿ, 38190ನೆಯ ನಂಬರಿನ ಸೆರೆವಾಸಿಯೋಪಾದಿ ನಾನು, 1945ರ ಏಪ್ರಿಲ್ ತಿಂಗಳಿನಲ್ಲಿ ನಡೆದ ಕುಖ್ಯಾತ ಸಾವು ಸಾಲುನಡೆ (ಡೆತ್ ಮಾರ್ಚ್)ಯ ತನಕ ಅಲ್ಲಿ ಉಳಿದೆ. ಆದರೆ ಆ ಘಟನೆಗಳನ್ನು ವರ್ಣಿಸುವುದಕ್ಕೆ ಮೊದಲು, ನಾನು ಹೇಗೆ ಒಬ್ಬ ಸೆರೆವಾಸಿಯಾದೆ ಎಂಬುದನ್ನು ವಿವರಿಸುತ್ತೇನೆ.
ನಾನು 1914ರಲ್ಲಿ Iನೆಯ ಲೋಕ ಯುದ್ಧವು ಆರಂಭವಾದ ಸ್ವಲ್ಪ ಸಮಯಾನಂತರ, ನೆದರ್ಲೆಂಡ್ಸ್ನ ರಾಟರ್ಡ್ಯಾಮ್ನಲ್ಲಿ ಜನಿಸಿದೆ. ತಂದೆಯವರು ರೈಲುಮಾರ್ಗದ ವಿಭಾಗದಲ್ಲಿ ಕೆಲಸಮಾಡಿದರು, ಮತ್ತು ನಮ್ಮ ಚಿಕ್ಕ ವಾಸದ ಮಹಡಿಯು ರೈಲುಹಳಿಯ ಸಮೀಪವೇ ಇತ್ತು. 1918ರಲ್ಲಿ, ಯುದ್ಧಾಂತ್ಯದ ಸಮಯದಷ್ಟಕ್ಕೆ, ಆ್ಯಂಬ್ಯುಲೆನ್ಸ್ ಟ್ರೈನ್ಗಳೆಂದು ಕರೆಯಲ್ಪಡುತ್ತಿದ್ದ ಅನೇಕ ಟ್ರೈನ್ಗಳು, ನಮ್ಮ ವಾಸದ ಮಹಡಿಯ ಬಳಿಯಿಂದ ದೊಡ್ಡ ಶಬ್ದ ಮಾಡುತ್ತಾ ವೇಗವಾಗಿ ಹೋಗುತ್ತಿದ್ದುದ್ದನ್ನು ನಾನು ಕಂಡೆ. ಯುದ್ಧ ರಂಗದಿಂದ ಮನೆಗೆ ಕರೆದೊಯ್ಯಲ್ಪಡುತ್ತಿದ್ದ ಗಾಯಗೊಂಡಿದ್ದ ಸೈನಿಕರು ಅವುಗಳಲ್ಲಿ ತುಂಬಿದ್ದರೆಂಬುದರಲ್ಲಿ ಸಂದೇಹವಿಲ್ಲ.
ನಾನು 12 ವರ್ಷ ಪ್ರಾಯದವನಾಗಿದ್ದಾಗ, ಉದ್ಯೋಗವೊಂದನ್ನು ಸಂಪಾದಿಸಲಿಕ್ಕಾಗಿ ಶಾಲೆಯನ್ನು ಬಿಟ್ಟೆ. ಎಂಟು ವರ್ಷಗಳ ತರುವಾಯ, ಪ್ರಯಾಣಿಕ ಹಡಗೊಂದರಲ್ಲಿ ಒಬ್ಬ ಪಾರುಪತ್ಯಗಾರನೋಪಾದಿ ನನ್ನನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಯಿತು, ಮತ್ತು ಮುಂದಿನ ನಾಲ್ಕು ವರ್ಷಗಳ ವರೆಗೆ ನಾನು ನೆದರ್ಲೆಂಡ್ಸ್ ಹಾಗೂ ಅಮೆರಿಕದ ಮಧ್ಯೆ ಸಮುದ್ರಯಾನ ಮಾಡಿದೆ.
1939ರ ಬೇಸಗೆ ಕಾಲದಲ್ಲಿ ನಾವು ನ್ಯೂ ಯಾರ್ಕ್ ಬಂದರಿನ ಹಡಗುಕಟ್ಟೆಗೆ ಆಗಮಿಸಿದಾಗ, ಇನ್ನೊಂದು ಲೋಕ ಯುದ್ಧವು ಬೆದರಿಕೆಯನ್ನೊಡ್ಡಿತು. ಆದುದರಿಂದ, ಒಬ್ಬ ವ್ಯಕ್ತಿಯು ನಮ್ಮ ಹಡಗಿಗೆ ಬಂದು, ನೀತಿಭರಿತ ಸರಕಾರವೊಂದರ ಕುರಿತು ತಿಳಿಯಪಡಿಸಿದ ಸರಕಾರ (ಇಂಗ್ಲಿಷ್) ಎಂಬ ಪುಸ್ತಕವನ್ನು ನನಗೆ ಕೊಟ್ಟಾಗ, ನಾನು ಅದನ್ನು ಸಂತೋಷದಿಂದ ಸ್ವೀಕರಿಸಿದೆ. ರಾಟರ್ಡ್ಯಾಮ್ಗೆ ಹಿಂದಿರುಗಿದ ಬಳಿಕ, ಸಮುದ್ರದಲ್ಲಿನ ಜೀವನವು ಇನ್ನುಮುಂದೆ ಸುರಕ್ಷಿತವಾಗಿ ಕಂಡುಬರದಿದ್ದ ಕಾರಣ, ಭೂಭಾಗದಲ್ಲಿಯೇ ಕೆಲಸಕ್ಕಾಗಿ ನಾನು ಹುಡುಕತೊಡಗಿದೆ. ಸೆಪ್ಟೆಂಬರ್ 1ರಂದು, ಜರ್ಮನಿಯು ಪೋಲೆಂಡ್ ಮೇಲೆ ದಂಡೆತ್ತಿಹೋಯಿತು ಮತ್ತು ರಾಷ್ಟ್ರಗಳು IIನೆಯ ಲೋಕ ಯುದ್ಧದಲ್ಲಿ ತೊಡಗಿದವು.
ಬೈಬಲ್ ಸತ್ಯವನ್ನು ಕಲಿಯುವುದು
ಮಾರ್ಚ್ 1940ರ ಒಂದು ಆದಿತ್ಯವಾರ ಬೆಳಗ್ಗೆ ನಾನು ನನ್ನ ವಿವಾಹಿತ ಅಣ್ಣನನ್ನು ಭೇಟಿಯಾಗಲು ಹೋಗಿದ್ದೆ. ಆಗ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು ಕರೆಗಂಟೆಯನ್ನು ಬಾರಿಸಿದನು. ನನ್ನ ಬಳಿ ಈಗಾಗಲೇ ಸರಕಾರ (ಇಂಗ್ಲಿಷ್) ಪುಸ್ತಕವು ಇದೆ ಎಂದು ನಾನು ಅವನಿಗೆ ಹೇಳಿ, ಪರಲೋಕದ ಕುರಿತು ಮತ್ತು ಅಲ್ಲಿಗೆ ಯಾರು ಹೋಗುತ್ತಾರೆಂಬುದರ ಕುರಿತು ಅವನನ್ನು ಕೇಳಿದೆ. ನನಗೆ ಎಷ್ಟು ಸ್ಪಷ್ಟವಾದ ಹಾಗೂ ವಿವೇಚನಾರ್ಹವಾದ ಉತ್ತರವು ಸಿಕ್ಕಿತೆಂದರೆ, ‘ಇದೇ ಸತ್ಯ’ ಎಂದು ನಾನು ನನ್ನಷ್ಟಕ್ಕೇ ಹೇಳಿಕೊಂಡೆ. ನಾನು ಅವನಿಗೆ ನನ್ನ ವಿಳಾಸವನ್ನು ಕೊಟ್ಟು, ನನ್ನ ಮನೆಯಲ್ಲಿ ನನ್ನನ್ನು ಭೇಟಿಮಾಡುವಂತೆ ಅವನಿಗೆ ಕರೆಕೊಟ್ಟೆ.
ಕೇವಲ ಮೂರು ಭೇಟಿಗಳ ಅನಂತರ—ಆ ಸಮಯದಲ್ಲಿ ನಾವು ಗಾಢವಾಗಿ ಬೈಬಲ್ ಚರ್ಚೆಗಳನ್ನು ನಡೆಸಿದ್ದೆವು—ನಾನು ಮನೆ ಮನೆಯ ಸಾರುವ ಕಾರ್ಯದಲ್ಲಿ ಆ ಸಾಕ್ಷಿಯೊಂದಿಗೆ ಜೊತೆಗೂಡತೊಡಗಿದೆ. ನಾವು ಟೆರಿಟೊರಿಗೆ ಬಂದು ತಲಪಿದಾಗ, ನಾನು ಎಲ್ಲಿಂದ ಆರಂಭಿಸಬೇಕೆಂದು ಅವನು ನನಗೆ ತೋರಿಸಿದನು, ಮತ್ತು ನಾನು ಒಂಟಿಯಾಗಿಯೇ ಸಾರತೊಡಗಿದೆ. ಆ ದಿವಸಗಳಲ್ಲಿ ಅನೇಕ ಹೊಸಬರು ಸಾರುವ ಕೆಲಸಕ್ಕೆ ಪರಿಚಯಿಸಲ್ಪಡುತ್ತಿದ್ದದ್ದು ಅದೇ ರೀತಿಯಲ್ಲಿ. ನಾನು ಬೀದಿಯಲ್ಲಿ ಕಂಡುಬರಬಾರದೆಂಬ ಕಾರಣದಿಂದ, ಸಾಹಿತ್ಯವನ್ನು ನೀಡುವಾಗ, ಯಾವಾಗಲೂ ಮೊಗಸಾಲೆಯ ಒಳಗೇ ಇರಬೇಕೆಂದು ನನಗೆ ಸಲಹೆ ನೀಡಲಾಯಿತು. ಯುದ್ಧಾರಂಭದ ದಿವಸಗಳಲ್ಲಿ ಎಚ್ಚರಿಕೆಯ ಅಗತ್ಯವಿತ್ತು.
ಮೂರು ವಾರಗಳ ಬಳಿಕ, 1940ರ ಮೇ 10ರಂದು, ಜರ್ಮನ್ ಸೇನೆಯು ನೆದರ್ಲೆಂಡ್ಸ್ನ ಮೇಲೆ ದಂಡೆತ್ತಿಹೋಯಿತು, ಮತ್ತು ಮೇ 29ರಂದು, ಯೆಹೋವನ ಸಾಕ್ಷಿಗಳ ಸಂಸ್ಥೆಯ ಮೇಲೆ ನಿಷೇಧ ಹಾಕಲಾಗಿದೆ ಎಂದು ರೈಕ್ನ ಕಮಿಷನರರಾದ ಸೈಸಿಂಕ್ವಾರ್ಟ್ ಅವರು ಪ್ರಕಟಿಸಿದರು. ನಾವು ಚಿಕ್ಕ ಗುಂಪುಗಳಲ್ಲಿ ಮಾತ್ರವೇ ಭೇಟಿಯಾದೆವು, ಮತ್ತು ನಮ್ಮ ಕೂಟದ ಸ್ಥಳಗಳನ್ನು ರಹಸ್ಯವಾಗಿಡಲಿಕ್ಕಾಗಿ ಎಚ್ಚರಿಕೆಯು ವಹಿಸಲ್ಪಟ್ಟಿತು. ಸಂಚರಣ ಮೇಲ್ವಿಚಾರಕರ ಭೇಟಿಗಳು ನಮಗೆ ವಿಶೇಷವಾಗಿ ಬಲದಾಯಕವಾಗಿದ್ದವು.
ನಾನು ಬಹಳ ಧೂಮಪಾನಮಾಡುತ್ತಿದ್ದೆ. ಮತ್ತು ನನ್ನೊಂದಿಗೆ ಅಭ್ಯಾಸಮಾಡಿದ ಸಾಕ್ಷಿಗೆ ನಾನು ಒಂದು ಸಿಗರೇಟನ್ನು ಕೊಟ್ಟಾಗ, ಅವನು ಧೂಮಪಾನಮಾಡಲಿಲ್ಲವೆಂಬುದನ್ನು ನಾನು ತಿಳಿದುಕೊಂಡಾಗ, ಹೇಳಿದ್ದು: “ನಾನು ಎಂದೂ ಧೂಮಪಾನವನ್ನು ನಿಲ್ಲಿಸಲು ಸಾಧ್ಯವಿಲ್ಲ!” ಆದರೂ, ತದನಂತರ ಸ್ವಲ್ಪದರಲ್ಲಿಯೇ, ನಾನು ಬೀದಿಯಲ್ಲಿ ನಡೆದು ಹೋಗುತ್ತಿರುವಾಗ, ‘ನಾನು ಒಬ್ಬ ಸಾಕ್ಷಿಯಾಗಲಿದ್ದೇನಾದರೆ, ಒಬ್ಬ ನಿಜವಾದ ಸಾಕ್ಷಿಯಾಗಲು ಬಯಸುತ್ತೇನೆ’ ಎಂದು ಆಲೋಚಿಸಿದೆ. ಹೀಗೆ ನಾನು ಪುನಃ ಧೂಮಪಾನಮಾಡಲೇ ಇಲ್ಲ.
ಸತ್ಯಕ್ಕಾಗಿ ಒಂದು ನಿಲುವನ್ನು ತೆಗೆದುಕೊಳ್ಳುವುದು
1940ರ ಜೂನ್ ತಿಂಗಳಿನಲ್ಲಿ, ನನ್ನ ಅಣ್ಣನ ಮನೆಬಾಗಿಲಿಗೆ ಬಂದ ಸಾಕ್ಷಿಯನ್ನು ಭೇಟಿಯಾದ ಮೂರು ತಿಂಗಳುಗಳಿಗಿಂತ ಕಡಿಮೆ ಸಮಯದೊಳಗೇ, ನಾನು ಯೆಹೋವನಿಗೆ ನನ್ನ ಸಮರ್ಪಣೆಯನ್ನು ಸಂಕೇತಿಸಿ, ದೀಕ್ಷಾಸ್ನಾನವನ್ನು ಪಡೆದುಕೊಂಡೆ. ಕೆಲವೊಂದು ತಿಂಗಳುಗಳ ಬಳಿಕ, 1940ರ ಅಕ್ಟೋಬರ್ ತಿಂಗಳಿನಲ್ಲಿ, ನಾನು ಒಬ್ಬ ಪಯನೀಯರನೋಪಾದಿ ಪೂರ್ಣ ಸಮಯದ ಶುಶ್ರೂಷೆಯನ್ನು ಪ್ರವೇಶಿಸಿದೆ. ಆ ಸಮಯದಲ್ಲಿ, ಯಾವುದು ಪಯನೀಯರ್ ಜ್ಯಾಕೆಟ್ ಎಂದು ಕರೆಯಲ್ಪಟ್ಟಿತ್ತೋ ಅದು ನನಗೆ ಕೊಡಲ್ಪಟ್ಟಿತು. ಪುಸ್ತಕಗಳು ಹಾಗೂ ಪುಸ್ತಿಕೆಗಳಿಗಾಗಿ ಅದರಲ್ಲಿ ಅನೇಕ ಪಾಕೆಟ್ಗಳಿದ್ದವು, ಮತ್ತು ಅದನ್ನು ಒಂದು ಕೋಟ್ನ ಅಡಿಯಲ್ಲಿ ಧರಿಸಸಾಧ್ಯವಿತ್ತು.
ಕಾರ್ಯತಃ ಜರ್ಮನ್ ಸ್ವಾಧೀನಾನುಭವದ ಆರಂಭದಿಂದ, ಯೆಹೋವನ ಸಾಕ್ಷಿಗಳು ಕ್ರಮಬದ್ಧವಾಗಿ ಬೆನ್ನಟ್ಟಲ್ಪಟ್ಟು, ಬಂಧಿಸಲ್ಪಟ್ಟರು. 1941ರ ಫೆಬ್ರವರಿ ತಿಂಗಳಿನ ಒಂದು ಬೆಳಗ್ಗೆ, ಇನ್ನಿತರ ಕೆಲವು ಸಾಕ್ಷಿಗಳೊಂದಿಗೆ ನಾನು ಕ್ಷೇತ್ರ ಸೇವೆಯಲ್ಲಿದ್ದೆ. ಮನೆಗಳ ಒಂದು ಬ್ಲಾಕ್ನ ಒಂದು ಬದಿಯಿಂದ ಅವರು ಜನರನ್ನು ಭೇಟಿಮಾಡುತ್ತಿದ್ದಾಗ, ಅವರನ್ನು ಸಂಧಿಸಲಿಕ್ಕಾಗಿ ನಾನು ಆ ಬ್ಲಾಕ್ನ ಇನ್ನೊಂದು ಬದಿಯಿಂದ ಸಾರುತ್ತಾಹೋದೆ. ಸಕಾಲದಲ್ಲಿ, ಅವರಿಗೆ ಯಾಕೆ ತಡವಾಗುತ್ತಿದೆಯೆಂಬುದನ್ನು ನಾನು ನೋಡಲು ಹೋದಾಗ, “ಈ ಚಿಕ್ಕ ಪುಸ್ತಕಗಳಲ್ಲಿ ಯಾವುದಾದರೂ ನಿನ್ನ ಬಳಿ ಇದೆಯೊ?” ಎಂದು ಕೇಳಿದ ಒಬ್ಬ ವ್ಯಕ್ತಿಯನ್ನು ನಾನು ಭೇಟಿಯಾದೆ.
“ಹೌದು” ಎಂದು ನಾನು ಉತ್ತರಿಸಿದೆ. ಆಗ ಅವನು ನನ್ನನ್ನು ಬಂಧಿಸಿ, ಪೊಲೀಸ್ ಠಾಣೆಗೆ ಕರೆದೊಯ್ದನು. ಸುಮಾರು ನಾಲ್ಕು ವಾರಗಳ ವರೆಗೆ ನಾನು ಸೆರೆಯಲ್ಲಿಡಲ್ಪಟ್ಟೆ. ಅಧಿಕಾರಿಗಳಲ್ಲಿ ಹೆಚ್ಚಿನವರು ಸ್ನೇಹಪರರಾಗಿದ್ದರು. ವ್ಯಕ್ತಿಯೊಬ್ಬನು ಗೆಸ್ಟಾಪೊ ಪೊಲೀಸರಿಗೆ ಒಪ್ಪಿಸಲ್ಪಡದಿರುವ ತನಕ, ತಾನು ಇನ್ನುಮುಂದೆ ಬೈಬಲ್ ಸಾಹಿತ್ಯವನ್ನು ವಿತರಿಸುವುದಿಲ್ಲ ಎಂಬ ಲಿಖಿತ ಡಿಕ್ಲರೇಷನ್ (ಪ್ರಕಟನೆ)ಗೆ ಕೇವಲ ಸಹಿಹಾಕುವ ಮೂಲಕ ತನ್ನ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಸಾಧ್ಯವಿತ್ತು. ಅಂತಹ ಒಂದು ಡಿಕ್ಲರೇಷನ್ಗೆ ಸಹಿಹಾಕುವಂತೆ ನನ್ನನ್ನು ಕೇಳಿದಾಗ, ನಾನು ಉತ್ತರಿಸಿದ್ದು: “ನೀವು ನನಗೆ ಒಂದು ಅಥವಾ ಎರಡು ಕೋಟಿಯಷ್ಟು ಗಲ್ಡನ್ (ದೊಡ್ಡ ಮೊತ್ತದ ಹಣ)ಗಳನ್ನು ಕೊಡುವುದಾದರೂ, ನಾನು ಸಹಿಹಾಕುವುದಿಲ್ಲ.”
ಇನ್ನೂ ಸ್ವಲ್ಪ ಕಾಲ ಬಂಧನದಲ್ಲಿ ಇರಿಸಲ್ಪಟ್ಟ ಬಳಿಕ, ನನ್ನನ್ನು ಗೆಸ್ಟಾಪೊ ಪೊಲೀಸರಿಗೆ ಒಪ್ಪಿಸಲಾಯಿತು. ತದನಂತರ ನನ್ನನ್ನು ಜರ್ಮನಿಯಲ್ಲಿರುವ ಸ್ಯಾಕ್ಸನ್ಹಾಸೆನ್ ಕೂಟ ಶಿಬಿರಕ್ಕೆ ಕರೆದೊಯ್ಯಲಾಯಿತು.
ಸ್ಯಾಕ್ಸನ್ಹಾಸೆನ್ನಲ್ಲಿ ಜೀವನ
ಜೂನ್ 1941ರಲ್ಲಿ ನಾನು ಆಗಮಿಸಿದಾಗ, ಸ್ಯಾಕ್ಸನ್ಹಾಸೆನ್ನಲ್ಲಿ ಈಗಾಗಲೇ ಸುಮಾರು 150 ಸಾಕ್ಷಿಗಳು—ಹೆಚ್ಚು ಮಂದಿ ಜರ್ಮನರೇ—ಇದ್ದರು. ಹೊಸ ಸೆರೆವಾಸಿಗಳಾದ ನಮ್ಮನ್ನು, ಐಸೊಲೇಷನ್ (ಪ್ರತ್ಯೇಕವಾಸ) ಎಂದು ಕರೆಯಲ್ಪಟ್ಟ ಶಿಬಿರದ ಒಂದು ಭಾಗಕ್ಕೆ ಕರೆದೊಯ್ಯಲಾಯಿತು. ಅಲ್ಲಿ ನಮ್ಮ ಕ್ರೈಸ್ತ ಸಹೋದರರು ನಮ್ಮ ಆರೈಕೆಮಾಡಿ, ನಾವು ಏನನ್ನು ನಿರೀಕ್ಷಿಸಬೇಕಾಗಿತ್ತೋ ಅದಕ್ಕಾಗಿ ನಮ್ಮನ್ನು ಸಿದ್ಧಪಡಿಸಿದರು. ಒಂದು ವಾರದ ಅನಂತರ ಸಾಕ್ಷಿಗಳ ಮತ್ತೊಂದು ಬಂದಿಗುಂಪು ನೆದರ್ಲೆಂಡ್ಸ್ನಿಂದ ಬಂತು. ಆರಂಭದಲ್ಲಿ ನಮ್ಮನ್ನು, ಬೆಳಗ್ಗೆ ಏಳು ಗಂಟೆಯಿಂದ ಸಂಜೆ ಆರು ಗಂಟೆಯ ವರೆಗೆ ಸಿಪಾಯಿಗಳ ಪಾಳೆಯಗಳ ಮುಂದೆಯೇ ನಿಂತುಕೊಳ್ಳುವಂತೆ ಮಾಡಲಾಯಿತು. ಕೆಲವೊಮ್ಮೆ ಸೆರೆವಾಸಿಗಳು ಅದನ್ನು ಒಂದು ವಾರದ ವರೆಗೆ ಅಥವಾ ಅದಕ್ಕಿಂತಲೂ ಹೆಚ್ಚಿನ ಸಮಯದ ವರೆಗೆ ಪ್ರತಿದಿನ ಮಾಡಬೇಕಾಗಿತ್ತು.
ಕಠಿನವಾದ ದುರುಪಚಾರದ ಎದುರಿನಲ್ಲಿಯೂ, ಸಂಘಟಿತರಾಗಿ ಉಳಿಯುವ ಹಾಗೂ ಆತ್ಮಿಕ ಪೋಷಣೆಯನ್ನು ಪಡೆದುಕೊಳ್ಳುವ ತುರ್ತು ಆವಶ್ಯಕತೆಯನ್ನು ಆ ಸಹೋದರರು ಮನಗಂಡರು. ಪ್ರತಿ ದಿನ ಯಾರಾದರೊಬ್ಬರು ಬೈಬಲ್ ವಚನದ ಮೇಲೆ ಅಭಿಪ್ರಾಯಗಳನ್ನು ಸಿದ್ಧಗೊಳಿಸುವಂತೆ ನೇಮಿಸಲಾಯಿತು. ತದನಂತರ, ಅಂಗಳದಲ್ಲಿ, ಒಬ್ಬೊಬ್ಬ ಸಾಕ್ಷಿಯೂ ಆ ಸಹೋದರನನ್ನು ಸಮೀಪಿಸಿ, ಅವನು ತಯಾರಿಸಿದ್ದ ವಿಷಯಗಳಿಗೆ ಕಿವಿಗೊಟ್ಟನು. ಒಂದಲ್ಲ ಒಂದು ವಿಧದಲ್ಲಿ, ಸಾಹಿತ್ಯವನ್ನು ಕ್ರಮವಾಗಿ ಶಿಬಿರದೊಳಗೆ ಕಳ್ಳತನದಿಂದ ಸಾಗಿಸಲಾಗುತ್ತಿತ್ತು, ಮತ್ತು ನಿಜವಾಗಿಯೂ ನಾವು ಪ್ರತಿ ಆದಿತ್ಯವಾರ ಒಟ್ಟುಗೂಡಿ, ಈ ಬೈಬಲ್ ಸಾಹಿತ್ಯವನ್ನು ಒಟ್ಟಾಗಿ ಅಭ್ಯಾಸಿಸಿದೆವು.
1941ರ ಬೇಸಗೆಯಲ್ಲಿ ಅಮೆರಿಕದ ಸೆಂಟ್ ಲೂಯಿಸ್ ಅಧಿವೇಶನದಲ್ಲಿ ಬಿಡುಗಡೆಮಾಡಲ್ಪಟ್ಟಿದ್ದ ಮಕ್ಕಳು (ಇಂಗ್ಲಿಷ್) ಎಂಬ ಪುಸ್ತಕದ ಒಂದು ಪ್ರತಿಯು, ಹೇಗೋ ಸ್ಯಾಕ್ಸನ್ಹಾಸೆನ್ ಕೂಟ ಶಿಬಿರಕ್ಕೆ ಕಳ್ಳತನದಿಂದ ಸಾಗಿಸಲ್ಪಟ್ಟಿತು. ಆ ಪುಸ್ತಕವು ಕಂಡುಹಿಡಿಯಲ್ಪಟ್ಟು, ನಾಶಪಡಿಸಲ್ಪಡುವ ಗಂಡಾಂತರವನ್ನು ಕಡಿಮೆಗೊಳಿಸುವ ಸಲುವಾಗಿ, ನಾವು ಅದನ್ನು ಬಿಡಿಬಿಡಿಯಾಗಿ ಬೇರ್ಪಡಿಸಿ, ಅದರ ವಿಭಾಗಗಳನ್ನು ನಮ್ಮ ಸಹೋದರರ ಮಧ್ಯೆ ಒಬ್ಬರಿಂದ ಇನ್ನೊಬ್ಬರಿಗೆ ಸಾಗಿಸಿದೆವು. ಇದರಿಂದಾಗಿ ಪ್ರತಿಯೊಬ್ಬರೂ ಸರದಿ ಪ್ರಕಾರವಾಗಿ ಅದನ್ನು ಓದಲು ಸಾಧ್ಯವಾಯಿತು.
ಸ್ವಲ್ಪ ಸಮಯದ ಬಳಿಕ, ನಾವು ನಡೆಸುತ್ತಿದ್ದ ಕೂಟಗಳ ವಿಷಯವು ಆ ಶಿಬಿರದ ಆಡಳಿತ ವರ್ಗಕ್ಕೆ ತಿಳಿದುಬಂತು. ಆದುದರಿಂದ ಸಾಕ್ಷಿಗಳನ್ನು ಪ್ರತ್ಯೇಕಿಸಿ, ಬೇರೆ ಬೇರೆ ಸಿಪಾಯಿ ಪಾಳೆಯಗಳಲ್ಲಿ ಹಾಕಲಾಯಿತು. ಇತರ ಸೆರೆವಾಸಿಗಳಿಗೆ ಸಾರುವ ಅತ್ಯುತ್ತಮವಾದ ಅವಕಾಶವನ್ನು ಅದು ನಮಗೆ ಒದಗಿಸಿತು, ಮತ್ತು ಇದರ ಫಲಿತಾಂಶವಾಗಿ, ಅನೇಕ ಪೋಲೆಂಡ್ ದೇಶೀಯರು, ಯುಕ್ರೇನಿಯರು, ಮತ್ತು ಇನ್ನಿತರರು ಸತ್ಯವನ್ನು ಸ್ವೀಕರಿಸಿದರು.
ಬೀಬೆಲ್ಫಾರ್ಷರ್—ಯೆಹೋವನ ಸಾಕ್ಷಿಗಳನ್ನು ಹೀಗೆ ಕರೆಯಲಾಗುತ್ತಿತ್ತು—ರ ಸಮಗ್ರತೆಯನ್ನು ಮುರಿಯಲು ಅಥವಾ ಅವರನ್ನು ಕೊಲ್ಲಲಿಕ್ಕಾಗಿರುವ ತಮ್ಮ ಉದ್ದೇಶವನ್ನು ನಾಸಿಗಳು ರಹಸ್ಯವಾಗಿಡಲಿಲ್ಲ. ಪರಿಣಾಮವಾಗಿ, ನಮ್ಮ ಮೇಲೆ ಹಾಕಲ್ಪಟ್ಟ ಒತ್ತಡವು ತೀರ ಭಯಾನಕವಾಗಿತ್ತು. ನಮ್ಮ ನಂಬಿಕೆಯನ್ನು ತೊರೆಯುವಂತಹ ಒಂದು ಡಿಕ್ಲರೇಷನ್ಗೆ ನಾವು ಸಹಿಹಾಕುವಲ್ಲಿ, ನಮ್ಮನ್ನು ಬಿಡುಗಡೆಗೊಳಿಸಸಾಧ್ಯವಿದೆ ಎಂದು ನಮಗೆ ಹೇಳಲಾಯಿತು. “ನಾನು ಸ್ವತಂತ್ರನಾದರೆ, ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡಬಲ್ಲೆ” ಎಂದು ಕೆಲವು ಸಹೋದರರು ತರ್ಕಸಮ್ಮತವಾಗಿ ವಾದಿಸತೊಡಗಿದರು. ಕೆಲವರು ಸಹಿಹಾಕಿದರಾದರೂ, ಅಧಿಕಾಂಶ ಸಹೋದರರು ಎಲ್ಲ ಅಗಲಿಕೆ, ಅವಮಾನ, ಮತ್ತು ದುರುಪಚಾರದ ಎದುರಿನಲ್ಲಿಯೂ ನಂಬಿಗಸ್ತರಾಗಿ ಉಳಿದರು. ಒಪ್ಪಂದಮಾಡಿಕೊಂಡವರಲ್ಲಿ ಕೆಲವರು, ಪುನಃ ಎಂದೂ ಕೇಳಿಬರಲೇ ಇಲ್ಲ. ಆದರೂ, ಸಂತೋಷಕರವಾಗಿ, ಇನ್ನಿತರರು ಪುನಃ ಹಿಂದಿರುಗಿದರು ಮತ್ತು ಇನ್ನು ಕೂಡ ಕ್ರಿಯಾಶೀಲ ಸಾಕ್ಷಿಗಳಾಗಿದ್ದಾರೆ.
ಸೆರೆವಾಸಿಗಳಿಗೆ, ಕೋಲಿನಿಂದ 25 ಚಡಿಏಟುಗಳನ್ನು ಕೊಡುವಂತಹ ಪಾಶವೀಯ ರೀತಿಯ ದೈಹಿಕ ದಂಡನೆಯು ಕೊಡಲ್ಪಡುತ್ತಿದ್ದಾಗ, ಅದನ್ನು ನೋಡುವಂತೆ ನಮ್ಮನ್ನು ಕ್ರಮವಾಗಿ ಒತ್ತಾಯಪಡಿಸಲಾಯಿತು. ಒಮ್ಮೆ ನಾಲ್ಕು ಜನರನ್ನು ಗಲ್ಲಿಗೇರಿಸಿದಾಗ ಅವರ ವಧೆಯನ್ನು ನೋಡುವಂತೆ ನಮ್ಮನ್ನು ಒತ್ತಾಯಿಸಲಾಯಿತು. ಆ ಅನುಭವಗಳು ವ್ಯಕ್ತಿಯೊಬ್ಬನ ಮೇಲೆ ಬಲವಾದ ಪರಿಣಾಮವನ್ನು ಬೀರುತ್ತವೆ. ನಾನು ವಾಸಿಸುತ್ತಿದ್ದ ಸಿಪಾಯಿ ಪಾಳೆಯದಲ್ಲಿಯೇ ವಾಸಿಸುತ್ತಿದ್ದ, ಎತ್ತರವಾಗಿದ್ದು ಸುಂದರನೂ ಆಗಿದ್ದ ಸಹೋದರನೊಬ್ಬನು ನನಗೆ ಹೇಳಿದ್ದು: “ಇಲ್ಲಿ ಬರುವುದಕ್ಕೆ ಮೊದಲು, ರಕ್ತವನ್ನು ನೋಡಿದ ಕೂಡಲೆ ನಾನು ತಲೆತಿರುಗಿ ಬೀಳುತ್ತಿದ್ದೆ. ಆದರೆ ಈಗ ನಾನು ಕಠಿನ ಹೃದಯಿಯಾಗಿದ್ದೇನೆ.” ನಾವು ಕಠಿನ ಹೃದಯಿಗಳಾಗಿರಬಹುದಾದರೂ, ನಾವು ನಿರ್ದಯಿಗಳಾಗಲಿಲ್ಲ. ನಮ್ಮ ಹಿಂಸಕರ ಕಡೆಗೆ ನಾನು ಎಂದಿಗೂ ದ್ವೇಷಕಾರಲಿಲ್ಲ ಅಥವಾ ಅವರನ್ನು ಹಗೆಮಾಡಲಿಲ್ಲ ಎಂದು ನಾನು ಹೇಳಲೇಬೇಕು.
ಸ್ವಲ್ಪ ಸಮಯದ ವರೆಗೆ ಕಮಾಂಡೊ (ಕಾರ್ಮಿಕ ತಂಡ)ದೊಂದಿಗೆ ಕೆಲಸಮಾಡಿದ ಬಳಿಕ, ತುಂಬ ಜ್ವರವಿದ್ದ ಕಾರಣ ನನ್ನನ್ನು ಆಸ್ಪತ್ರೆಗೆ ಸೇರಿಸಲಾಯಿತು. ನಾರ್ವೆ ದೇಶದ ಒಬ್ಬ ದಯಾಪರ ವೈದ್ಯನು ಹಾಗೂ ಚೆಕಸ್ಲೊವಾಕಿಯದ ಒಬ್ಬ ನರ್ಸ್ ನನಗೆ ಸಹಾಯ ಮಾಡಿದರು, ಮತ್ತು ಬಹುಶಃ ಅವರ ದಯಾಪರಭಾವವು ನನ್ನ ಜೀವವನ್ನು ಕಾಪಾಡಿತು.
ಸಾವು ಸಾಲುನಡೆ
1945ರ ಎಪ್ರಿಲ್ ತಿಂಗಳಷ್ಟಕ್ಕೆ, ಜರ್ಮನಿಯು ಯುದ್ಧದಲ್ಲಿ ಸೋಲುತ್ತಿದೆಯೆಂಬುದು ಸ್ಪಷ್ಟವಾಯಿತು. ಪಶ್ಚಿಮದಿಂದ ಪಶ್ಚಿಮದ ಮಿತ್ರ ರಾಷ್ಟ್ರಗಳು ಹಾಗೂ ಪೂರ್ವದಿಂದ ಸೋವಿಎಟರು ತೀವ್ರಗತಿಯಲ್ಲಿ ಮುಂದುವರಿಯುತ್ತಿದ್ದರು. ಕೂಟ ಶಿಬಿರದಲ್ಲಿದ್ದ ನೂರಾರು ಸಾವಿರ ಜನರನ್ನು ವಧಿಸಿ, ಕೆಲವೇ ದಿವಸಗಳಲ್ಲಿ ಅವರ ದೇಹಗಳನ್ನು ಯಾವುದೇ ಗುರುತುಗಳಿಲ್ಲದಂತೆ ತೊಲಗಿಸಿಬಿಡುವುದು ನಾಸಿಗಳಿಗೆ ಅಸಾಧ್ಯವಾಗಿತ್ತು. ಆದುದರಿಂದ ಅವರು ಅಸ್ವಸ್ಥರನ್ನು ಕೊಂದುಹಾಕಿ, ಉಳಿದ ಸೆರೆವಾಸಿಗಳನ್ನು ಅತಿ ಸಮೀಪದ ರೇವುಪಟ್ಟಣಗಳಿಗೆ ಸ್ಥಳಾಂತರಿಸಲು ನಿರ್ಧರಿಸಿದರು. ಅಲ್ಲಿ ಅವರನ್ನು ಹಡಗುಗಳಿಗೆ ಹತ್ತಿಸಿ, ಆ ಹಡಗುಗಳನ್ನು ಸಮುದ್ರದಲ್ಲಿ ಮುಳುಗಿಸಿಬಿಡುವ ಯೋಜನೆಯನ್ನು ಅವರು ಮಾಡಿದರು.
ಸ್ಯಾಕ್ಸನ್ಹಾಸೆನ್ನಿಂದ ಸುಮಾರು 26,000 ಮಂದಿ ಸೆರೆವಾಸಿಗಳ ಸಾಲುನಡೆಯು, ಎಪ್ರಿಲ್ 20ರ ರಾತ್ರಿಯಂದು ಆರಂಭವಾಯಿತು. ನಾವು ಶಿಬಿರವನ್ನು ಬಿಡುವ ಮೊದಲು, ನಮ್ಮ ಅಸ್ವಸ್ಥ ಸಹೋದರರು ಆಸ್ಪತ್ರೆಯಿಂದ ರಕ್ಷಿಸಲ್ಪಟ್ಟರು. ಅವರನ್ನು ಸಾಗಿಸಸಾಧ್ಯವಾಗುವಂತೆ, ಒಂದು ಗಾಡಿಯನ್ನು ತರಿಸಲಾಯಿತು. ಒಟ್ಟಿಗೆ, ನಮ್ಮಲ್ಲಿ ಆರು ಬೇರೆ ಬೇರೆ ದೇಶಗಳಿಂದ ಬಂದ 230 ಮಂದಿ ಇದ್ದೆವು. ಅಸ್ವಸ್ಥರಾಗಿದ್ದವರಲ್ಲಿ, ನೆದರ್ಲೆಂಡ್ಸ್ನಲ್ಲಿನ ಕೆಲಸದ ವಿಸ್ತಾರ್ಯಕ್ಕೆ ಬಹಳವಾಗಿ ಸಹಾಯ ಮಾಡಿದ್ದ ಸಹೋದರ ಆರ್ಥರ್ ವಿಂಕ್ಲರ್ ಒಬ್ಬರಾಗಿದ್ದರು. ಸಾವು ಸಾಲುನಡೆಯಲ್ಲಿ ಸಾಕ್ಷಿಗಳಾದ ನಾವೇ ಕೊನೆಯವರಾಗಿದ್ದೆವು, ಮತ್ತು ನಡೆಯುತ್ತಾ ಸಾಗುವಂತೆ ನಾವು ಒಬ್ಬರನ್ನೊಬ್ಬರು ಉತ್ತೇಜಿಸುತ್ತಾ ಇದ್ದೆವು.
ಮೊದಲನೆಯದಾಗಿ, ನಾವು 36 ತಾಸುಗಳ ವರೆಗೆ ಯಾವ ವಿಶ್ರಾಂತಿಯೂ ಇಲ್ಲದೆ ನಡೆದೆವು. ನಾನು ನಡೆಯುತ್ತಾ ಇದ್ದಾಗ, ವಾಸ್ತವದಲ್ಲಿ ಸಂಕಟ ಹಾಗೂ ಬಳಲಿಕೆಯಿಂದಾಗಿ ನಿಜವಾಗಿಯೂ ನಿದ್ರಿಸಿಬಿಟ್ಟೆ. ಆದರೆ ಹಿಂದೆ ಉಳಿಯುವುದು ಅಥವಾ ವಿಶ್ರಾಂತಿ ಪಡೆದುಕೊಳ್ಳುವುದು ಅಸಾಧ್ಯವಾಗಿತ್ತು. ಏಕೆಂದರೆ ಒಬ್ಬನು ಗಾರ್ಡ್ಗಳ ಗುಂಡಿಗೆ ಬಲಿಯಾಗುವ ಅಪಾಯವಿತ್ತು. ರಾತ್ರಿ ಸಮಯದಲ್ಲಿ ನಾವು ಬಯಲು ಪ್ರದೇಶಗಳಲ್ಲಿ ಅಥವಾ ಕಾಡಿನಲ್ಲಿ ಮಲಗಿದೆವು. ಆಗ ಸ್ವಲ್ಪವೇ ಆಹಾರವಿತ್ತು, ಕೆಲವೊಮ್ಮೆ ಆಹಾರವೇ ಇರಲಿಲ್ಲ. ತೀರ ಹಸಿವೆಯ ಅರಿವಾದಾಗ, ಸ್ವೀಡಿಶ್ ರೆಡ್ ಕ್ರಾಸ್ ಸಂಸ್ಥೆಯು ನಮಗೆ ಕೊಟ್ಟಿದ್ದ ಟೂಥ್ಪೇಸ್ಟನ್ನು ನಾನು ನೆಕ್ಕಿದೆ.
ಒಂದು ಹಂತದಲ್ಲಿ, ರಷ್ಯದ ಹಾಗೂ ಅಮೆರಿಕದ ಸೈನ್ಯಗಳು ಎಲ್ಲಿದ್ದವು ಎಂಬ ವಿಷಯದಲ್ಲಿ ಜರ್ಮನ್ ಗಾರ್ಡ್ಗಳಿಗೆ ಗೊಂದಲವುಂಟಾಗಿದ್ದ ಕಾರಣ, ನಾವು ಕಾಡಿನಲ್ಲಿ ನಾಲ್ಕು ದಿವಸಗಳ ವರೆಗೆ ಉಳಿದುಕೊಂಡೆವು. ಇದು ದೈವದತ್ತವಾದ ಏರ್ಪಾಡಾಗಿತ್ತು, ಏಕೆಂದರೆ ಇದರ ಫಲಿತಾಂಶವಾಗಿ, ನಮ್ಮನ್ನು ನಮ್ಮ ಜಲಸಮಾಧಿಗೆ ಕೊಂಡೊಯ್ಯಬೇಕಾಗಿದ್ದಂತಹ ಹಡಗುಗಳಿಗೆ ಹತ್ತಲಿಕ್ಕಾಗಿ ನಾವು ಸಕಾಲದಲ್ಲಿ ಲೂಬೆಕ್ ಕೊಲ್ಲಿಗೆ ಬಂದು ತಲಪಲಿಲ್ಲ. ಕೊನೆಯದಾಗಿ, 12 ದಿವಸಗಳು ಹಾಗೂ ಸುಮಾರು 200 ಕಿಲೊಮೀಟರುಗಳಷ್ಟು ಸಾವು ಸಾಲುನಡೆಯ ಬಳಿಕ, ನಾವು ಕ್ರಿವಿಟ್ಸ್ ಕಾಡಿಗೆ ಬಂದು ತಲಪಿದೆವು. ಇದು, ಲೂಬೆಕ್ನಿಂದ ಸುಮಾರು 50 ಕಿಲೊಮೀಟರುಗಳಷ್ಟು ದೂರವಿರುವ ಒಂದು ನಗರವಾದ ಶ್ವೇರೀನ್ನಿಂದ ಹೆಚ್ಚು ದೂರವಿರಲಿಲ್ಲ.
ಸೋವಿಎಟರು ನಮ್ಮ ಬಲಕ್ಕಿದ್ದರು, ಮತ್ತು ಅಮೆರಿಕನರು ನಮ್ಮ ಎಡಕ್ಕಿದ್ದರು. ದೊಡ್ಡ ಬಂದೂಕುಗಳ ಮೊಳಗುವಿಕೆಯಿಂದಾಗಿ, ಹಾಗೂ ರೈಫ್ಲ್ನ ಸತತವಾದ ಗುಂಡುಗಳಿಂದಾಗಿ, ನಾವು ಸೇನೆಯ ಮುಂಭಾಗದ ಸಮೀಪದಲ್ಲಿದ್ದೆವು ಎಂಬುದು ನಮಗೆ ಗೊತ್ತಿತ್ತು. ಜರ್ಮನ್ ಗಾರ್ಡ್ಗಳು ಭಯಭೀತರಾದರು; ಕೆಲವರು ಪಲಾಯನಗೈದರು, ಮತ್ತು ಇತರರು ತಾವು ಗುರುತಿಸಲ್ಪಡಬಾರದೆಂದು ನಿರೀಕ್ಷಿಸುತ್ತಾ, ತಮ್ಮ ಮಿಲಿಟರಿ ಸಮವಸ್ತ್ರಗಳನ್ನು ತೆಗೆದುಹಾಕಿ, ಮೃತರಿಂದ ತಾವು ಕಿತ್ತುಕೊಂಡಿದ್ದ ಸೆರೆಯ ಉಡುಪುಗಳನ್ನು ಧರಿಸಿದರು. ಈ ಗೊಂದಲದ ಮಧ್ಯದಲ್ಲಿಯೂ, ಸಾಕ್ಷಿಗಳಾದ ನಾವು ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಲು ಒಟ್ಟುಗೂಡಿದೆವು.
ನಾವು ಮರುದಿನ ಮುಂಜಾವದ ತಾಸುಗಳಲ್ಲಿ ಆ ಸ್ಥಳವನ್ನು ಬಿಟ್ಟು, ಅಮೆರಿಕದ ಸೈನಿಕರಿರುವ ದಿಕ್ಕಿನಲ್ಲಿ ಹೋಗುವಂತೆ, ಮೇಲ್ವಿಚಾರಣೆ ನಡೆಸುತ್ತಿದ್ದ ಸಹೋದರರು ನಿರ್ಧರಿಸಿದರು. ಸಾವು ಸಾಲುನಡೆಯನ್ನು ಆರಂಭಿಸಿದ್ದ ಸೆರೆವಾಸಿಗಳಲ್ಲಿ ಸುಮಾರು ಅರ್ಧದಷ್ಟು ಮಂದಿ ದಾರಿಯುದ್ದಕ್ಕೂ ಮೃತಪಟ್ಟು, ಕೊಲ್ಲಲ್ಪಟ್ಟಿದ್ದರೂ, ಎಲ್ಲ ಸಾಕ್ಷಿಗಳು ಬದುಕಿ ಉಳಿದರು.
ಕೆನಡದ ಮಿಲಿಟರಿ ಸಿಬ್ಬಂದಿಯಲ್ಲಿ ಯಾರೋ ಒಬ್ಬರು ನನ್ನನ್ನು ನೈಮೇಗನ್ ನಗರದ ವರೆಗೆ ಬಿಟ್ಟುಕೊಟ್ಟರು. ಅಲ್ಲಿ ನನ್ನ ಅಕ್ಕ ವಾಸಿಸುತ್ತಿದ್ದಳು. ಆದರೆ ನಾನು ಆ ಜಾಗವನ್ನು ತಲಪಿದಾಗ, ಅವಳು ಅಲ್ಲಿಂದ ಸ್ಥಳಾಂತರಿಸಿದ್ದಳೆಂಬುದು ನನಗೆ ತಿಳಿದುಬಂತು. ಆದುದರಿಂದ ನಾನು ರಾಟರ್ಡ್ಯಾಮ್ಗೆ ನಡೆದುಹೋಗಲು ಆರಂಭಿಸಿದೆ. ಸಂತೋಷಕರವಾಗಿಯೇ, ದಾರಿಯಲ್ಲಿ ನನಗೆ ಖಾಸಗಿ ವಾಹನವೊಂದರಲ್ಲಿ ಲಿಫ್ಟ್ ಕೊಡಲ್ಪಟ್ಟಿತು. ಆ ವಾಹನವು ನನ್ನನ್ನು ನನ್ನ ಗಮ್ಯಸ್ಥಾನಕ್ಕೆ ನೇರವಾಗಿ ಕೊಂಡೊಯ್ದಿತು.
ಸತ್ಯವು ನನ್ನ ಜೀವಿತವಾಗಿ ಪರಿಣಮಿಸಿದೆ
ನಾನು ರಾಟರ್ಡ್ಯಾಮ್ಗೆ ಆಗಮಿಸಿದ ದಿನವೇ, ಪಯನೀಯರ್ ಕೆಲಸಕ್ಕಾಗಿ ಪುನಃ ಅರ್ಜಿಹಾಕಿದೆ. ಮೂರು ವಾರಗಳ ಬಳಿಕ ನಾನು ಸಟ್ಫನ್ ನಗರದಲ್ಲಿನ ನನ್ನ ನೇಮಕದಲ್ಲಿದ್ದೆ. ಅಲ್ಲಿ ಮುಂದಿನ ಒಂದೂವರೆ ವರ್ಷಗಳ ವರೆಗೆ ನಾನು ಸೇವೆಮಾಡಿದೆ. ಆ ಸಮಯದಲ್ಲಿ ನಾನು ಸ್ವಲ್ಪ ಶಾರೀರಿಕ ಬಲವನ್ನು ಪುನಃ ಪಡೆದುಕೊಂಡೆ. ತದನಂತರ ನಾನು ಒಬ್ಬ ಸರ್ಕಿಟ್ ಮೇಲ್ವಿಚಾರಕನಾಗಿ—ಸಂಚರಣ ಶುಶ್ರೂಷಕರು ಹಾಗೆಂದು ಕರೆಯಲ್ಪಡುತ್ತಾರೆ—ನೇಮಿಸಲ್ಪಟ್ಟೆ. ಕೆಲವೊಂದು ತಿಂಗಳುಗಳ ಅನಂತರ, ನ್ಯೂ ಯಾರ್ಕಿನ ಸೌತ್ ಲ್ಯಾನ್ಸಿಂಗ್ನಲ್ಲಿರುವ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ಗೆ ಆಮಂತ್ರಿಸಲ್ಪಟ್ಟೆ. 1949ರ ಫೆಬ್ರವರಿ ತಿಂಗಳಿನಲ್ಲಿ, 12ನೆಯ ಕ್ಲಾಸಿನಿಂದ ಪದವಿಪಡೆದುಕೊಂಡ ಬಳಿಕ, ನನ್ನನ್ನು ಬೆಲ್ಜಿಯಮ್ಗೆ ನೇಮಿಸಲಾಯಿತು.
ಬ್ರಾಂಚ್ ಆಫೀಸಿನಲ್ಲಿ ಸುಮಾರು ಎಂಟು ವರ್ಷಗಳು ಹಾಗೂ ಸಂಚರಣ ಕೆಲಸದಲ್ಲಿ ಸರ್ಕಿಟ್ ಮೇಲ್ವಿಚಾರಕನಾಗಿ ಹಾಗೂ ಜಿಲ್ಲಾ ಮೇಲ್ವಿಚಾರಕನಾಗಿ ದಶಕಗಳನ್ನು ಕಳೆದಿರುವುದನ್ನೂ ಸೇರಿಸಿ, ಬೆಲ್ಜಿಯಮ್ನಲ್ಲಿನ ಶುಶ್ರೂಷೆಯ ವಿಭಿನ್ನ ಅಂಶಗಳಲ್ಲಿ ನಾನು ಸೇವೆಮಾಡಿದ್ದೇನೆ. 1958ರಲ್ಲಿ, ನಾನು ಸ್ಯೂಸ್ಟೀನಳನ್ನು ವಿವಾಹವಾದೆ, ಅವಳು ನನ್ನ ಸಂಚರಣ ಸಂಗಾತಿಯಾದಳು. ಈಗ, ನನ್ನ ವೃದ್ಧಾಪ್ಯದ ವರ್ಷಗಳಲ್ಲಿ, ಒಬ್ಬ ಬದಲಿ ಸಂಚರಣ ಮೇಲ್ವಿಚಾರಕನೋಪಾದಿ ಪರಿಮಿತ ರೀತಿಯಲ್ಲಿ ಸೇವಿಸಲು ಶಕ್ತನಾಗಿರುವ ಆನಂದವು ಇನ್ನೂ ನನಗಿದೆ.
ನನ್ನ ಶುಶ್ರೂಷೆಯನ್ನು ನಾನು ಪುನಃ ಅವಲೋಕಿಸುವಾಗ, “ಸತ್ಯಕ್ಕಿಂತಲೂ ಹೆಚ್ಚು ಉತ್ತಮವಾದದ್ದು ಯಾವುದೂ ಇಲ್ಲ” ಎಂದು ನಾನು ಸತ್ಯವಾಗಿ ಹೇಳಬಲ್ಲೆ. ನಿಶ್ಚಯವಾಗಿಯೂ ಅದು ಯಾವಾಗಲೂ ಸುಲಭವಾದದ್ದಾಗಿರಲಿಲ್ಲ. ನನ್ನ ತಪ್ಪುಗಳು ಹಾಗೂ ಕುಂದುಕೊರತೆಗಳಿಂದ ಪಾಠವನ್ನು ಕಲಿಯುವುದರ ಆವಶ್ಯಕತೆಯನ್ನು ನಾನು ಕಂಡುಕೊಂಡಿದ್ದೇನೆ. ಆದುದರಿಂದ ನಾನು ಯುವ ಜನರೊಂದಿಗೆ ಮಾತಾಡುವಾಗ, ಅನೇಕವೇಳೆ ಅವರಿಗೆ ಹೇಳುವುದು: “ನೀವು ಕೂಡ ತಪ್ಪುಗಳನ್ನು ಮಾಡುತ್ತೀರಿ ಮತ್ತು ಬಹುಶಃ ಗಂಭೀರವಾಗಿ ಪಾಪವನ್ನು ಮಾಡುತ್ತೀರಿ, ಆದರೆ ಅದರ ಕುರಿತು ಸುಳ್ಳು ಹೇಳಬೇಡಿ. ಆ ವಿಷಯದ ಕುರಿತು ನಿಮ್ಮ ಹೆತ್ತವರೊಂದಿಗೆ ಅಥವಾ ಒಬ್ಬ ಹಿರಿಯರೊಂದಿಗೆ ಚರ್ಚಿಸಿ, ತದನಂತರ ಅಗತ್ಯವಿರುವ ಸರಿಪಡಿಸುವಿಕೆಗಳನ್ನು ಮಾಡಿರಿ.”
ಬೆಲ್ಜಿಯಮ್ನಲ್ಲಿನ ನನ್ನ ಸುಮಾರು 50 ವರ್ಷಗಳ ಪೂರ್ಣ ಸಮಯದ ಶುಶ್ರೂಷೆಯಲ್ಲಿ, ಒಂದು ಕಾಲದಲ್ಲಿ ಮಕ್ಕಳೋಪಾದಿ ನನಗೆ ಗೊತ್ತಿದ್ದ ಜನರು ಈಗ ಹಿರಿಯರು ಹಾಗೂ ಸರ್ಕಿಟ್ ಮೇಲ್ವಿಚಾರಕರೋಪಾದಿ ಸೇವೆಮಾಡುವುದನ್ನು ನೋಡುವ ಸುಯೋಗ ದೊರಕಿದೆ. ಮತ್ತು ಆ ದೇಶದಲ್ಲಿ 1,700ರಷ್ಟಿದ್ದ ರಾಜ್ಯ ಘೋಷಕರು, 27,000ಕ್ಕಿಂತಲೂ ಹೆಚ್ಚಿಗೆ ಬೆಳೆದಿರುವುದನ್ನು ನಾನು ನೋಡಿದ್ದೇನೆ.
“ಯೆಹೋವನನ್ನು ಸೇವಿಸುವುದರ ಹೊರತು ಜೀವಿಸುವ ಇನ್ನಾವುದಾದರೂ ಸ್ತುತ್ಯಾರ್ಹ ವಿಧವು ಇರಸಾಧ್ಯವಿದೆಯೆ?” ಎಂದು ನಾನು ಕೇಳುತ್ತೇನೆ. ಈ ಹಿಂದೆ ಇರಲಿಲ್ಲ, ಈಗಲೂ ಇಲ್ಲ, ಮತ್ತು ಇನ್ನು ಮುಂದೆಯೂ ಇರುವುದಿಲ್ಲ. ನನ್ನ ಹೆಂಡತಿಯೂ ನಾನೂ ಸದಾಕಾಲಕ್ಕೂ ಆತನ ಸೇವೆಮಾಡುತ್ತಾ ಇರಸಾಧ್ಯವಾಗುವಂತೆ ಯೆಹೋವನು ನಮ್ಮನ್ನು ಮಾರ್ಗದರ್ಶಿಸುತ್ತಾ, ಆಶೀರ್ವದಿಸುತ್ತಾ ಇರುವಂತೆ ನಾನು ಪ್ರಾರ್ಥಿಸುತ್ತೇನೆ.
[ಪುಟ 26 ರಲ್ಲಿರುವ ಚಿತ್ರ]
1958ರಲ್ಲಿ ನಮ್ಮ ವಿವಾಹದ ಸ್ವಲ್ಪ ಸಮಯಾನಂತರ ನನ್ನ ಹೆಂಡತಿಯೊಂದಿಗೆ