ನೀವು ಯೆಹೋವನ ಆಶೀರ್ವಾದಗಳನ್ನು ನಿಜವಾಗಿಯೂ ಮಾನ್ಯಮಾಡುತ್ತೀರೊ?
ಕೆನೀಚೀ ಎಂಬ ಮಧ್ಯವಯಸ್ಸಿನ ಸದ್ಗೃಹಸ್ಥನೊಬ್ಬನು ತನಗಿದ್ದ ತುಸು ನೆಗಡಿಗಾಗಿ ಔಷಧವನ್ನು ಕೊಳ್ಳಲು ಔಷಧದಂಗಡಿಗೆ ಹೋದನು. ಆ ಔಷಧವನ್ನು ಸೇವಿಸಿದಾಗ ಅವನಲ್ಲಿ ಅಲರ್ಜಿ ಪ್ರತಿಕ್ರಿಯೆ ತೋರಿಬಂದು, ಅವನ ದೇಹದ ಮೇಲೆಲ್ಲ ತುರಿಸುವ ದದ್ದು ಮತ್ತು ನೀರುತುಂಬಿದ ಬೊಕ್ಕೆಗಳೆದ್ದವು. ಔಷಧ ತಯಾರಕನು ತನ್ನ ಆವಶ್ಯಕತೆಗಳಿಗೆ ಸಾಕಷ್ಟು ಗಮನ ಕೊಟ್ಟಿದ್ದನೊ ಇಲ್ಲವೊ ಎಂದು ಕೆನೀಚೀ ಸಂಶಯಪಡಲು ತೊಡಗಿದ್ದು ಆಶ್ಚರ್ಯವಲ್ಲ.
ಕೆನೀಚೀ ಔಷಧ ತಯಾರಕನನ್ನು ವೀಕ್ಷಿಸಿದ ವಿಧದಲ್ಲೇ ಯೆಹೋವ ದೇವರೂ ಇದ್ದಾನೆಂದು ಕೆಲವರು ಭಾವಿಸಬಹುದು. ಸರ್ವಶಕ್ತ ದೇವರಾದ ಯೆಹೋವನು ವ್ಯಕ್ತಿಗತವಾಗಿ ನಮ್ಮಲ್ಲಿ ನಿಜವಾದ ಆಸಕ್ತಿ ವಹಿಸುತ್ತಾನೊ ಎಂಬ ವಿಷಯದಲ್ಲಿ ಅವರು ಸಂಶಯಪಡುತ್ತಾರೆ. ದೇವರು ಒಳ್ಳೆಯವನೆಂದು ಅವರು ಒಪ್ಪುವುದಾದರೂ, ವೈಯಕ್ತಿಕವಾಗಿ ನಮ್ಮ ವಿಷಯದಲ್ಲಿ ಆತನು ಚಿಂತಿಸುತ್ತಾನೆಂಬ ವಿಷಯದಲ್ಲಿ ಅವರಿಗೆ ಮನವರಿಕೆಯಾಗಿರುವುದಿಲ್ಲ. ಇದು ವಿಶೇಷವಾಗಿ, ವಿಷಯಗಳು ಸರಾಗವಾಗಿ ಮುಂದುವರಿಯದಿರುವಲ್ಲಿ ಅಥವಾ ಬೈಬಲ್ ಮೂಲತತ್ವಗಳಿಗೆ ಅವರ ಅಂಟಿಕೊಳ್ಳುವಿಕೆಯು ಕಷ್ಟಕರವಾದ ಸಮಸ್ಯೆಗಳನ್ನು ತರುವಲ್ಲಿ ಸತ್ಯವಾಗಿರುತ್ತದೆ. ವಿವೇಚನಾಶಕ್ತಿಯ ಕೊರತೆಯ ಕಾರಣ, ಅವರು ತಮ್ಮ ಸಮಸ್ಯೆಗಳನ್ನು, ಕೆನೀಚೀಯ ಮೈಮೇಲೆ ಅನೀರೀಕ್ಷಿತವಾಗಿ ಉಂಟಾದ ತುರಿಸುವ ದದ್ದಿನಂತೆ ಮತ್ತು ಬೊಕ್ಕೆಗಳಂತೆ—ಅವು ದೇವರ ತಪ್ಪಿನಿಂದಾಗಿವೆಯೋ ಎಂಬಂತೆ—ವೀಕ್ಷಿಸುತ್ತಾರೆ.—ಜ್ಞಾನೋಕ್ತಿ 19:3.
ಯೆಹೋವನನ್ನು ಅಪರಿಪೂರ್ಣ ಮಾನವರಿಗೆ ಹೋಲಿಸಬಾರದು. ಮಾನವರು ಜ್ಞಾನ ಮತ್ತು ಸಾಮರ್ಥ್ಯದಲ್ಲಿ ಸೀಮಿತರು. ಅವರು ಬೇರೆಯವರ ನಿಜ ಆವಶ್ಯಕತೆಗಳನ್ನು, ಕೆನೀಚೀಯ ಔಷಧ ತಯಾರಕನಂತೆ, ಪೂರ್ತಿಯಾಗಿ ವಿವೇಚಿಸಿ ತಿಳಿಯಲು ತಪ್ಪುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಯೆಹೋವನ ದೃಷ್ಟಿಗೆ ಯಾವುದೂ ಮರೆಯಾಗುವುದಿಲ್ಲ. ಆ ನಿಜತ್ವವನ್ನು ನಾವು ಗ್ರಹಿಸದೆ ಮತ್ತು ಮಾನ್ಯಮಾಡದೆ ಇರುವಾಗಲೂ ಯೆಹೋವನು ಅನೇಕ ವೇಳೆ ನಮಗೆ ಸಹಾಯಮಾಡುತ್ತಾನೆ. ಏಕೆಂದರೆ ನಮ್ಮಲ್ಲಿ ಯಾವುದು ಇಲ್ಲವೊ ಅದರ ಮೇಲೆ ಕೇಂದ್ರೀಕರಿಸಿ, ನಮಗಿರುವ ಅನೇಕಾಶೀರ್ವಾದಗಳನ್ನು ಅಲಕ್ಷ್ಯಮಾಡುವ ಪ್ರವೃತ್ತಿ ನಮ್ಮಲ್ಲಿದೆ. ನಾವು ಎದುರಿಸುವ ಯಾವುದೇ ಸಮಸ್ಯೆಗಳಿಗೆ ದೇವರ ಮೇಲೆ ಒಡನೆ ದೂರುಹಾಕುವ ಬದಲಿಗೆ, ಯೆಹೋವನಿಂದ ನಾವು ಅನುಭವಿಸುವ ಆಶೀರ್ವಾದಗಳನ್ನು ಗ್ರಹಿಸಲು ಪ್ರಯತ್ನಿಸಬೇಕು.
“ಆಶೀರ್ವಾದ”ವನ್ನು “ಸಂತೋಷ ಅಥವಾ ಯೋಗಕ್ಷೇಮಕ್ಕೆ ನೆರವಾಗುವ ಒಂದು ವಿಷಯ” ಎಂದು ಅರ್ಥನಿರೂಪಿಸಸಾಧ್ಯವಿದೆ. ಯೆಹೋವನಿಂದ ಬರುವ ಆಶೀರ್ವಾದಗಳ ಸಂಬಂಧದಲ್ಲಿ ಇದು ವಿಶೇಷವಾಗಿ ನಿಜವಾಗಿದೆಯೆಂಬುದನ್ನು ನೀವು ಮಾನ್ಯಮಾಡುತ್ತೀರೋ?
ಒದಗಿಸುವವನೋಪಾದಿ ಅಸಮಾನನು
ತನ್ನ ಗಂಡನು ಉತ್ತಮವಾಗಿ ಒದಗಿಸುವಾತನೆಂದು ಒಬ್ಬ ಹೆಂಡತಿ ಹೇಳುವಾಗ, ಕುಟುಂಬದ ಆವಶ್ಯಕತೆಗಳ ವಿಷಯದಲ್ಲಿ ಅವನು ಸಾಕಷ್ಟು ಚಿಂತೆ ವಹಿಸುತ್ತಾನೆ ಮತ್ತು ಕುಟುಂಬದ ಸಂತೋಷ ಮತ್ತು ಕ್ಷೇಮಕ್ಕಾಗಿ ಸಾಕಷ್ಟು ಆಹಾರ, ವಸತಿ ಮತ್ತು ಬಟ್ಟೆಗಳನ್ನು ಒದಗಿಸುತ್ತಾನೆ ಎಂಬ ಸಾಮಾನ್ಯ ಅರ್ಥದಲ್ಲಿ ಆಕೆ ಹೇಳುತ್ತಾಳೆ. ನಮಗೆ ಒದಗಿಸುವವನೋಪಾದಿ ಯೆಹೋವನು ಎಷ್ಟು ಒಳ್ಳೆಯವನಾಗಿದ್ದಾನೆ? ಮನುಷ್ಯನ ಬೀಡಾಗಿರುವ ನಮ್ಮ ಭೂಗ್ರಹವನ್ನು ಸೂಕ್ಷ್ಮವಾಗಿ ಪರೀಕ್ಷಿಸಿರಿ. ಅದು ಸೂರ್ಯನಿಂದ 15 ಕೋಟಿ ಕಿಲೊಮೀಟರ್ಗಳಷ್ಟು ದೂರದಲ್ಲಿ, ಭೂಮಿಯ ಮೇಲೆ ಜೀವವನ್ನು ಸಾಧ್ಯಮಾಡುವಂತಹ ಮಿತವಾದ ತಾಪಮಾನಕ್ಕೆ ಸರಿಯಾಗುವಷ್ಟು ಯೋಗ್ಯ ದೂರದಲ್ಲಿ ಇದೆ. ನಮ್ಮ ಭೂಗೋಳದ 23.5 ಡಿಗ್ರಿ ವಾಲುವಿಕೆ ಪರಿಪೂರ್ಣವಾಗಿ ವಿನ್ಯಾಸಿಸಲ್ಪಟ್ಟಿದ್ದು, ಸಮೃದ್ಧ ಫಸಲುಗಳಿಗೆ ನೆರವಾಗುವ ವಿವಿಧ ಋತುಗಳನ್ನು ಫಲಿಸುತ್ತದೆ. ಇದರ ಪರಿಣಾಮವಾಗಿ, ಭೂಮಿಯು 500 ಕೋಟಿಗೂ ಮಿಕ್ಕಿದ ಜನರನ್ನು ಉಣಿಸುತ್ತದೆ. ನಿಶ್ಚಯವಾಗಿಯೂ ಯೆಹೋವನು ಅದ್ಭುತಕರವಾಗಿ ಒದಗಿಸುವವನಾಗಿದ್ದಾನೆ!
ಅಲ್ಲದೆ, ಯೆಹೋವನಿಗೆ ವ್ಯಕ್ತಿಗತವಾಗಿ ನಮ್ಮಲ್ಲಿ ಮತ್ತು ನಮ್ಮ ಯೋಗಕ್ಷೇಮದಲ್ಲಿ ಆಳವಾದ ಆಸಕ್ತಿಯಿದೆ ಎಂದು ಬೈಬಲು ನಮಗೆ ಆಶ್ವಾಸನೆ ನೀಡುತ್ತದೆ. ತುಸು ಯೋಚಿಸಿರಿ, ಯೆಹೋವನು ಕೋಟ್ಯಂತರ ನಕ್ಷತ್ರಗಳಲ್ಲಿ ಪ್ರತಿಯೊಂದನ್ನು ಹೆಸರೆಸರಾಗಿ ಬಲ್ಲನು ಮತ್ತು ಆತನಿಗೆ ಗೊತ್ತಿಲ್ಲದೆ ಒಂದು ಗುಬ್ಬಿಯೂ ನೆಲಕ್ಕೆ ಬೀಳದು. (ಯೆಶಾಯ 40:26; ಮತ್ತಾಯ 10:29-31) ಹಾಗಾದರೆ, ತನ್ನನ್ನು ಪ್ರೀತಿಸುವ ಹಾಗೂ ತನ್ನ ಪ್ರಿಯ ಕುಮಾರನಾದ ಯೇಸುಕ್ರಿಸ್ತನ ಅಮೂಲ್ಯವಾದ ರಕ್ತದಿಂದ ಕೊಂಡುಕೊಳ್ಳಲ್ಪಟ್ಟಿರುವ ಜನರನ್ನು ಆತನು ಎಷ್ಟು ಹೆಚ್ಚು ಪರಾಮರಿಸುವನು! (ಅ. ಕೃತ್ಯಗಳು 20:28) ವಿವೇಕಿಯು ಪ್ರಕಟಿಸಿದ್ದು ಸರಿಯೇ: “ಯೆಹೋವನ ಆಶೀರ್ವಾದವು ಭಾಗ್ಯದಾಯಕವು, ಅದು ವ್ಯಸನವನ್ನು ಸೇರಿಸದು.”—ಜ್ಞಾನೋಕ್ತಿ 10:22.
ನಮ್ಮನ್ನು ಸಂಪದ್ಭರಿತರನ್ನಾಗಿ ಮಾಡುವ ಆಶೀರ್ವಾದಗಳು
ನಾವು ಅತ್ಯಂತ ಕೃತಜ್ಞರಾಗಿರಬೇಕಾದ, ಅತಿ ಬೆಲೆ ಬಾಳುವ ಯಾವುದೊ ವಸ್ತು ನಮ್ಮ ವಶದಲ್ಲಿದೆ. ಅದೇನು? ಬೈಬಲು ಹೀಗೆ ಹೇಳುತ್ತ ಅದನ್ನು ಗುರುತಿಸುತ್ತದೆ: “ನೀನು ಉಸಿರಿದ ಧರ್ಮಶಾಸ್ತ್ರವು ಸಾವಿರಾರು ಚಿನ್ನಬೆಳ್ಳಿಯ ನಾಣ್ಯಗಳಿಗಿಂತಲೂ ನನಗೆ ಅತಿಪ್ರಿಯವಾಗಿದೆ.” (ಕೀರ್ತನೆ 119:72: ಜ್ಞಾನೋಕ್ತಿ 8:10) ಉತ್ಕೃಷ್ಟವಾದ ಚಿನ್ನವು ಬೆಲೆಬಾಳುವಂತಹದ್ದಾಗಿರಬಹುದಾದರೂ, ಯೆಹೋವನ ಧರ್ಮಶಾಸ್ತ್ರವು ಅದಕ್ಕಿಂತಲೂ ಹೆಚ್ಚು ಅಪೇಕ್ಷಣೀಯವಾಗಿದೆ. ಯೆಹೋವನ ಧರ್ಮಶಾಸ್ತ್ರದ ನಿಷ್ಕೃಷ್ಟ ಜ್ಞಾನವು, ಆತನು ಯಥಾರ್ಥರಾದ ಸತ್ಯಾನ್ವೇಷಕರಿಗೆ ಕೊಡುವ ಅಂತರ್ದೃಷ್ಟಿ ಮತ್ತು ವಿವೇಚನಾ ಶಕ್ತಿಗಳು, ಅಮೂಲ್ಯವೆಂದೆಣಿಸಬೇಕಾದ ವಸ್ತುಗಳಾಗಿವೆ. ಅವು ನಮ್ಮನ್ನು ನಾವು ಸಂರಕ್ಷಿಸಿಕೊಳ್ಳುವಂತೆ, ಕಷ್ಟಕರವಾದ ಪರಿಸ್ಥಿತಿಗಳನ್ನು ನಿಭಾಯಿಸುವಂತೆ, ಸಮಸ್ಯೆಗಳೊಂದಿಗೆ ಯಶಸ್ವಿಯಾಗಿ ವ್ಯವಹರಿಸುವಂತೆ ಮತ್ತು ಹೀಗೆ ಸಂತೃಪ್ತರೂ ಸಂತುಷ್ಟರೂ ಆಗಿರುವಂತೆ ಸಜ್ಜುಗೊಳಿಸುತ್ತವೆ.
ಅತಿ ಚಿಕ್ಕವರ ವಿಷಯದಲ್ಲಿಯೂ ಇದು ನಿಜ. ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸುತ್ತ, ಒಬ್ಬ ಚಿಕ್ಕ ಹುಡುಗಿಯು ತನ್ನ ಸಮಸ್ಯೆಯನ್ನು ಬಗೆಹರಿಸಿದ ವಿಧವನ್ನು ಪರಿಗಣಿಸಿರಿ. ಆಕೇಮೀ ಎಂಬ ಈ ಹುಡುಗಿಯ ವಾಸಸ್ಥಳ ಟೋಕಿಯೊಗೆ ಸಮೀಪ. ಆಕೆಯ ತಂದೆತಾಯಿ ಆಕೆಯನ್ನು ತರಬೇತುಗೊಳಿಸುವುದರಲ್ಲಿ ಬೈಬಲ್ ಮೂಲತತ್ವಗಳನ್ನು ಅನ್ವಯಿಸಿ, ತಮ್ಮ ಮಗಳು ಯೆಹೋವನಿಗೂ ನೆರೆಯವರಿಗೂ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ನಡೆನುಡಿಗಳ ಮೂಲಕ ಸಹಾಯಮಾಡಿದರು. ಶಾಲೆಯಲ್ಲಿ ಆಕೆ ಎದುರಿಸಲಿದ್ದ ಸಮಸ್ಯೆಗಳನ್ನು ಮುನ್ನೋಡುತ್ತ, ತಮ್ಮಿಂದ ಸಾಧ್ಯವಾಗುವಷ್ಟು ಉತ್ತಮವಾಗಿ ಆಕೆಯನ್ನು ತಯಾರಿಸಲು ಅವರು ಪ್ರಯತ್ನಿಸಿದರು. ಆದರೆ ಆಕೇಮೀ ಪ್ರಾಥಮಿಕ ಶಾಲೆಯನ್ನು ಸೇರುವಷ್ಟರೊಳಗೆ, ಆಕೆಯ ಸಹಪಾಠಿಗಳಲ್ಲಿ ಕೆಲವರು ಆಕೆಯು “ಭಿನ್ನಳು” ಎಂಬುದನ್ನು ವೀಕ್ಷಿಸಿದರು. ಏಕೆಂದರೆ ಆಕೆ ಊಟಕ್ಕೆ ಮೊದಲು ಪ್ರಾರ್ಥಿಸಿದಳು ಮತ್ತು ಕೆಲವು ಶಾಸ್ತ್ರವಿರುದ್ಧವಾದ ಚಟುವಟಿಕೆಗಳನ್ನು ಆಕೆ ಶುದ್ಧಾಂತಃಕರಣದಿಂದ ತ್ಯಜಿಸಿದಳು. ಬೇಗನೆ, ಆಕೆ ದಬಾವಣೆಗಾರರ ಒಂದು ಗುಂಪಿನ ಗುರಿಹಲಗೆಯಾದಳು. ಶಾಲೆಯ ಬಳಿಕ ಅವರು ಆಕೆಯನ್ನು ಸುತ್ತುಗಟ್ಟಿ, ಮುಖಕ್ಕೆ ಹೊಡೆದು, ಆಕೆಯ ತೋಳುಗಳನ್ನು ತಿರುಚಿ, ತಮಾಷೆಮಾಡತೊಡಗಿದರು.
ಆದರೆ ಆ ಚಿಕ್ಕ ಆಕೇಮೀ ಸೇಡು ತೀರಿಸಿದ್ದೂ ಇಲ್ಲ, ತನ್ನ ಹಿಂಸಕರ ಮುಂದೆ ಭಯದಿಂದ ಬಗ್ಗಿ ಕುಳಿತದ್ದೂ ಇಲ್ಲ. ಬದಲಿಗೆ, ತಾನು ಕಲಿತ ವಿಷಯವನ್ನು ಅನ್ವಯಿಸಲು ಆಕೆ ಪ್ರಯತ್ನಿಸಿದಳು. ಆಕೆಯ ಉತ್ತಮ ನಡತೆ ಮತ್ತು ಧೈರ್ಯದ ಕಾರಣದಿಂದ, ಆಕೆಯ ಜೊತೆ ವಿದ್ಯಾರ್ಥಿಗಳಲ್ಲಿ ಅನೇಕರಿಂದ ಆಕೆ ಗೌರವವನ್ನು ಸಂಪಾದಿಸಿದಳು. ಅವರು ಆ ಸಂಗತಿಯನ್ನು ಉಪಾದ್ಯಾಯರ ಗಮನಕ್ಕೆ ತರಲಾಗಿ, ಆ ದಿನದಿಂದ ಹಿಡಿದು, ಆಕೇಮೀ ಶಾಲೆಯಲ್ಲಿ ನಿಂದೆಯನ್ನು ಅನುಭವಿಸಲಿಲ್ಲ.
ಒಂದು ಕಷ್ಟಕರ ಸನ್ನಿವೇಶದೊಂದಿಗೆ ಯಶಸ್ವಿಕರವಾಗಿ ವ್ಯವಹರಿಸಲು ಆಕೇಮೀಗೆ ಯಾವುದು ಸಹಾಯಮಾಡಿತು? ಅವಳ ಹೆತ್ತವರು ಅವಳಲ್ಲಿ ಬೇರೂರಿಸಿದ್ದ, ಯೆಹೋವನಿಂದ ಬಂದ ನಿಷ್ಕೃಷ್ಟವಾದ ಜ್ಞಾನ, ಒಳನೋಟ, ಮತ್ತು ಜ್ಞಾನವೇ ಅವಳಿಗೆ ಸಹಾಯ ಮಾಡಿತು. ಯೇಸುವಿನ ತಾಳ್ಮೆಯ ವಿಷಯವು ಅವಳಿಗೆ ಚಿರಪರಿಚಿತವಾಗಿತ್ತು, ಮತ್ತು ಅದು ಅವನ ಮಾದರಿಯನ್ನು ಅನುಕರಿಸುವಂತೆ ಅವಳನ್ನು ಪ್ರಚೋದಿಸಿತು. ಕೆಲವು ಜನರು ಅಜ್ಞಾನದ ನಿಮಿತ್ತವಾಗಿ ತಪ್ಪನ್ನು ಮಾಡುತ್ತಾರೆಂಬುದನ್ನು ವಿವೇಚಿಸಲು ಬೈಬಲು ಅವಳಿಗೆ ಸಹಾಯ ಮಾಡಿತು, ಮತ್ತು ಜಗಳಗಂಟರನ್ನು ತಾನೇ ದ್ವೇಷಿಸದೆ, ಅವರು ಮಾಡಿದ ತಪ್ಪನ್ನು ದ್ವೇಷಿಸುವಂತೆ ಅದು ಅವಳನ್ನು ಪ್ರೋತ್ಸಾಹಿಸಿತು.—ಲೂಕ 23:34; ರೋಮಾಪುರ 12:9, 17-21.
ನಿಶ್ಚಯವಾಗಿಯೂ, ತಮ್ಮ ಮಗು ಅಪಹಾಸ್ಯ ಮತ್ತು ನಿಂದೆಗೆ ಒಳಗಾಗುವುದನ್ನು ನೋಡಲು ಯಾವ ಹೆತ್ತವರೂ ಇಷ್ಟಪಡುವುದಿಲ್ಲ. ಆದರೂ, ಏನು ಸಂಭವಿಸಿತೋ ಅದರ ಕುರಿತಾದ ವಿವರಗಳನ್ನು ಕೇಳಿಸಿಕೊಂಡಾಗ, ಆಕೇಮೀಯ ಹೆತ್ತವರು ಎಷ್ಟು ಖುಷಿಪಟ್ಟರೆಂಬುದನ್ನು ನೀವು ಊಹಿಸಿಕೊಳ್ಳಬಲ್ಲಿರೊ? ಅಂತಹ ಮಕ್ಕಳು ನಿಜವಾಗಿಯೂ ಯೆಹೋವನಿಂದ ಬಂದ ಆಶೀರ್ವಾದವಾಗಿದ್ದಾರೆ.—ಕೀರ್ತನೆ 127:3; 1 ಪೇತ್ರ 1:6, 7.
ಸಹನೆಯಿಂದ ಯೆಹೋವನ ಮೇಲೆ ಆತುಕೊಳ್ಳುವುದು
ಆದರೂ, ಯೆಹೋವನ ಆಶೀರ್ವಾದಗಳನ್ನು ಪಡೆದುಕೊಳ್ಳುವುದಕ್ಕೆ ಮೊದಲು, ಕೆಲವೊಮ್ಮೆ ನೀವು ಆತನ ಸಮಯಕ್ಕಾಗಿ ಕಾಯಬೇಕು. ನಿಮ್ಮ ಸನ್ನಿವೇಶವು ಯೆಹೋವನಿಗೆ ತಿಳಿದಿದೆ ಮತ್ತು ಅತ್ಯಂತ ಪ್ರಯೋಜನಕರವಾಗಿದ್ದಾಗ ಆತನು ಪ್ರತಿಯೊಂದು ಆವಶ್ಯಕತೆಯನ್ನು ಪೂರೈಸುತ್ತಾನೆ. (ಕೀರ್ತನೆ 145:16; ಪ್ರಸಂಗಿ 3:1; ಯಾಕೋಬ 1:17) ನಿಮಗೆ ಹಣ್ಣುಗಳನ್ನು ತಿನ್ನುವುದೆಂದರೆ ತುಂಬಾ ಇಷ್ಟವಿರಬಹುದು, ಆದರೆ ತಿನ್ನಲು ಸಿದ್ಧವಾಗಿರುವಷ್ಟು ಹಣ್ಣಾಗುವ ಮೊದಲೇ ಆ ಹಣ್ಣನ್ನು ನಿಮ್ಮ ಮುಂದೆ ತಂದಿಡುವ ಒಬ್ಬ ಆತಿಥೇಯನ ವಿಷಯದಲ್ಲಿ ನೀವೇನು ನೆನಸುವಿರಿ? ಒಂದು ಸೇಬಾಗಲಿ, ಕಿತ್ತಿಳೆಹಣ್ಣಾಗಲಿ, ಅಥವಾ ಬೇರೆ ಯಾವುದೇ ಹಣ್ಣಾಗಲಿ, ನಿಮ್ಮ ಹಣ್ಣು ಹಣ್ಣಾದದ್ದೂ, ರಸವತ್ತಾದದ್ದೂ, ಸಿಹಿಯಾದದ್ದೂ ಆಗಿರುವುದನ್ನು ನೀವು ಇಷ್ಟಪಡುತ್ತೀರಿ. ತದ್ರೀತಿಯಲ್ಲಿ, ಯೆಹೋವನು ನಿಮ್ಮ ಆವಶ್ಯಕತೆಯನ್ನು ಸರಿಯಾದ ಸಮಯಕ್ಕೆ ಪೂರೈಸುತ್ತಾನೆ—ತೀರ ಬೇಗನೆಯೂ ಅಲ್ಲ ತೀರ ತಡವಾಗಿಯೂ ಅಲ್ಲ.
ಯೋಸೇಫನ ಅನುಭವವನ್ನು ಜ್ಞಾಪಿಸಿಕೊಳ್ಳಿರಿ. ಅವನಲ್ಲಿ ಯಾವುದೇ ವೈಯಕ್ತಿಕ ಪಾಪವು ಇರಲಿಲ್ಲವಾದರೂ, ಅವನು ಐಗುಪ್ತದ ಕಾರಾಗೃಹದಲ್ಲಿ ತಾನಿರುವುದನ್ನು ಕಂಡುಕೊಂಡನು. ಒಬ್ಬ ಜೊತೆ ಸೆರೆವಾಸಿಯಾದ ಫರೋಹನ ಪಾನದಾಯಕನು, ಬಿಡುಗಡೆಹೊಂದುವ ನಿರೀಕ್ಷೆಯಲ್ಲಿದ್ದವನಾಗಿ, ಯೋಸೇಫನ ವಿದ್ಯಮಾನವನ್ನು ಫರೋಹನ ಗಮನಕ್ಕೆ ತರುವ ವಾಗ್ದಾನ ಮಾಡಿದನು. ಆದರೆ ಅವನ ಬಿಡುಗಡೆಯ ಬಳಿಕ ಅವನು ಯೋಸೇಫನ ಕುರಿತು ಎಲ್ಲವನ್ನೂ ಮರೆತುಬಿಟ್ಟನು. ಯೇಸೇಫನು ಕೈಬಿಡಲ್ಪಟ್ಟಿದ್ದಾನೋ ಎಂಬಂತೆ ತೋರಿಬಂತು. ಆದರೂ, ಎರಡು ವರ್ಷಗಳು ಕಳೆದ ಬಳಿಕ, ಕಟ್ಟಕಡೆಗೂ ಅವನನ್ನು ಸೆರೆಯಿಂದ ಬಿಡುಗಡೆಗೊಳಿಸಲಾಯಿತು ಮತ್ತು ಕ್ರಮೇಣವಾಗಿ ಅವನನ್ನು ಐಗುಪ್ತದಲ್ಲಿ ಎರಡನೆಯ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಅಸಹನೆಯುಳ್ಳವನಾಗಿರುವುದಕ್ಕೆ ಬದಲಾಗಿ, ಯೋಸೇಫನು ಯೆಹೋವನ ಮೇಲೆ ಆತುಕೊಂಡನು. ಈ ಕಾರಣದಿಂದಲೇ, ಇಸ್ರಾಯೇಲ್ಯರಿಗೂ ಐಗುಪ್ತದವರಿಗೂ—ಇಬ್ಬರಿಗೂ ಜೀವಸಂರಕ್ಷಣೆಯನ್ನೊದಗಿಸುವ ಅರ್ಥದಲ್ಲಿ ಅವನು ಆಶೀರ್ವದಿಸಲ್ಪಟ್ಟನು.—ಆದಿಕಾಂಡ 39:1–41:57.
ಉತ್ತರ ಜಪಾನಿನಲ್ಲಿನ ಸಭೆಯೊಂದರಲ್ಲಿ ಮಾಸಾಶೀ ಒಬ್ಬ ಹಿರಿಯನಾಗಿದ್ದನು. ಅವನೊಂದು ಕಾರಾಗೃಹದಲ್ಲಿರಲಿಲ್ಲ, ಆದರೆ ಅವನು ಯೆಹೋವನ ಮೇಲೆ ಆತುಕೊಳ್ಳುವ ಅಗತ್ಯವಿತ್ತು. ಏಕೆ? ಜಪಾನಿನಲ್ಲಿ ಶುಶ್ರೂಷಾ ತರಬೇತಿ ಶಾಲೆ—ಅರ್ಹರಾದ ಕ್ರೈಸ್ತ ಶುಶ್ರೂಷಕರನ್ನು ತರಬೇತಿಗೊಳಿಸಲಿಕ್ಕಾಗಿರುವ ಒಂದು ಶಾಲೆ—ಯು ಆರಂಭಿಸಲ್ಪಟ್ಟಂದಿನಿಂದ, ಅದಕ್ಕೆ ಹಾಜರಾಗುವುದನ್ನು ತನ್ನ ಕಟ್ಟಾಸಕ್ತಿಯ ಗುರಿಯನ್ನಾಗಿ ಅವನು ಮಾಡಿಕೊಂಡನು. ಆ ಸುಯೋಗದ ಕುರಿತು ಅವನು ಬಹಳವಾಗಿ ಪ್ರಾರ್ಥಿಸಿದನು. ಮಾಸಾಶೀಗೆ ಬಲವಾದ ಅಪೇಕ್ಷೆಯಿತ್ತಾದರೂ, ಅವನನ್ನು ಆಮಂತ್ರಿಸಲಾಗಲಿಲ್ಲ, ಬದಲಾಗಿ ಅವನ ಪಯನೀಯರ್ ಸಹಭಾಗಿಯನ್ನು ಆಮಂತ್ರಿಸಲಾಯಿತು. ಅವನಿಗೆ ತೀರ ನಿರಾಸೆಯಾಯಿತು.
ಆದರೂ, ತನ್ನ ಭಾವನೆಗಳನ್ನು ನಿಭಾಯಿಸುವ ಹೆಜ್ಜೆಗಳನ್ನು ಅವನು ತೆಗೆದುಕೊಂಡನು. ಅವನು ಬೈಬಲನ್ನೂ, ದೀನರಾಗಿರುವುದು ಹಾಗೂ ಒಬ್ಬನ ಭಾವೋದ್ವೇಗಗಳನ್ನು ನಿಯಂತ್ರಿಸಿಕೊಳ್ಳುವಂತಹ ವಸ್ತುವಿಷಯಗಳ ಮೇಲೆ ಕೇಂದ್ರೀಕರಿಸುವಂತಹ ವಾಚ್ ಟವರ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಪ್ರಕಾಶನಗಳನ್ನೂ ಅಭ್ಯಾಸಿಸಿದನು. ಅವನು ತನ್ನ ಆಲೋಚನೆಯನ್ನು ಸರಿಪಡಿಸಿಕೊಂಡು, ತನ್ನ ನೇಮಕದಲ್ಲಿ ಹೆಚ್ಚು ಸಂತೃಪ್ತಿಯನ್ನು ಅನುಭವಿಸಿದನು. ತದನಂತರ, ಅವನು ಅದನ್ನು ನಿರೀಕ್ಷಿಸಿರದಂತಹ ಒಂದು ಸಮಯದಲ್ಲಿ, ಶಾಲೆಗೆ ಹಾಜರಾಗಲಿಕ್ಕಾಗಿರುವ ಒಂದು ಆಮಂತ್ರಣವನ್ನು ಅವನು ಪಡೆದುಕೊಂಡನು.
ಸಹನೆ ಮತ್ತು ದೀನಭಾವದಂತಹ ಗುಣಗಳನ್ನು ಬೆಳೆಸಿಕೊಂಡವನಾಗಿದ್ದು, ಅವನು ಆ ಶಾಲೆಯಿಂದ ಅತ್ಯಧಿಕವಾಗಿ ಪ್ರಯೋಜನವನ್ನು ಪಡೆದುಕೊಂಡನು. ತದನಂತರ, ಒಬ್ಬ ಸಂಚರಣ ಮೇಲ್ವಿಚಾರಕನೋಪಾದಿ ತನ್ನ ಸಹೋದರರ ಸೇವೆಮಾಡುವ ಸುಯೋಗವು ಮಾಸಾಶೀಗೆ ಕೊಡಲ್ಪಟ್ಟಿತು. ಹೌದು, ಮಾಸಾಶೀಗೆ ಏನು ಅಗತ್ಯವಿತ್ತೆಂಬುದು ಯೆಹೋವನಿಗೆ ತಿಳಿದಿತ್ತು, ಮತ್ತು ಅದು ಅತ್ಯುತ್ತಮ ಪ್ರಯೋಜನಗಳನ್ನು ತರುವಂತಹ ಸಮಯದಲ್ಲೇ ಆತನು ಅದನ್ನು ಒದಗಿಸಿದನು.
ಆತನ ಆಶೀರ್ವಾದಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿ
ಆದುದರಿಂದ, ಯೆಹೋವನು ಔಷಧದಂಗಡಿಗಾರನಂತಿರುವುದಿಲ್ಲ. ಯೆಹೋವನ ಕಾಳಜಿ ಮತ್ತು ಚಿಂತೆಯನ್ನು ಅರಿಯುವುದರಲ್ಲಿ ನಾವು ತಪ್ಪಿಬೀಳಬಹುದಾದರೂ, ಆತನ ದಯಾಪರತೆಯು ಬೇರೆ ಬೇರೆ ರೂಪಗಳಲ್ಲಿ—ನಮಗೆ ಅತ್ಯಂತ ಪ್ರಯೋಜನವನ್ನು ತರುವಂತಹ ಸಮಯಗಳಲ್ಲಿ ಮತ್ತು ರೀತಿಯಲ್ಲಿ—ಬರುತ್ತದೆ. ಆದುದರಿಂದ ಆತನ ಆಶೀರ್ವಾದಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿ. ಕೃತಜ್ಞತೆಯುಳ್ಳವರಾಗಿರಲಿಕ್ಕಾಗಿ ನಿಮಗೆ ಈಗಾಗಲೇ ಅನೇಕ ಕಾರಣಗಳಿವೆ ಎಂಬುದನ್ನು ನೆನಪಿನಲ್ಲಿಡಿರಿ. ಭೂಮಿಯಲ್ಲಿ ಜೀವಿಸುತ್ತಾ ಇರಲಿಕ್ಕಾಗಿ ಅಗತ್ಯವಿರುವ ಮೂಲಭೂತ ಒದಗಿಸುವಿಕೆಗಳಿಂದ ನೀವು ಆಶೀರ್ವದಿಸಲ್ಪಟ್ಟಿದ್ದೀರಿ. ಯೆಹೋವನ ಕುರಿತಾದ ಹಾಗೂ ಆತನ ಪರಿಪೂರ್ಣ ಮಾರ್ಗಗಳ ಕುರಿತಾದ ಜ್ಞಾನವು ನಿಮಗೆ ಕೊಡಲ್ಪಟ್ಟಿದೆ. ನಿಮಗೆ ಒಳನೋಟವು ಕೊಡಲ್ಪಟ್ಟಿದೆ. ಮತ್ತು ನೀವು ವಿವೇಚನಾಶಕ್ತಿಯನ್ನು ಗಳಿಸಿಕೊಂಡಿದ್ದೀರಿ. ಇವೆಲ್ಲವೂ ನಿಮ್ಮ ಹಿತಕ್ಷೇಮ ಹಾಗೂ ಸಂತೋಷಕ್ಕೆ ನೆರವನ್ನೀಯುತ್ತವೆ.
ಯೆಹೋವನ ಆಶೀರ್ವಾದವನ್ನು ಇನ್ನೂ ಸಂಪೂರ್ಣವಾಗಿ ಅನುಭವಿಸಲಿಕ್ಕಾಗಿ, ಬೈಬಲನ್ನು ಕ್ರಮವಾಗಿ ಅಭ್ಯಾಸಿಸುವುದನ್ನು ಮುಂದುವರಿಸಿರಿ. ಯೆಹೋವನ ಪ್ರೇರಿತ ವಾಕ್ಯದಲ್ಲಿರುವ ರತ್ನಾಭರಣದಂತಿರುವ ಬೋಧನೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಅನ್ವಯಿಸಿಕೊಳ್ಳಲು ನಿಮಗೆ ಸಹಾಯ ಮಾಡುವಂತೆ ಆತನ ಬಳಿ ವಿನಂತಿಸಿಕೊಳ್ಳಿರಿ. ಅವು ನಿಮ್ಮನ್ನು ಆತ್ಮಿಕವಾಗಿ ಐಶ್ವರ್ಯವಂತರನ್ನಾಗಿ ಮಾಡುವವು, ಇದರಿಂದ ನಿಮಗೆ ಏನೂ ಕೊರತೆಯಾಗುವುದಿಲ್ಲ. ಹೌದು, ಅವು ಈಗ ನಿಮ್ಮ ಸಂತೋಷ ಹಾಗೂ ತೃಪ್ತಿಯನ್ನೂ, ಬರಲಿರುವ ಹೊಸ ಲೋಕದಲ್ಲಿ ಸಮೃದ್ಧವಾದ ಜೀವವನ್ನೂ ಅರ್ಥೈಸುವುವು.—ಯೋಹಾನ 10:10; 1 ತಿಮೊಥೆಯ 4:8, 9.
[ಪುಟ 23 ರಲ್ಲಿರುವ ಚಿತ್ರ]
ಯೆಹೋವನ ಆಶೀರ್ವಾದವು ಚಿನ್ನಕ್ಕಿಂತಲೂ ಹೆಚ್ಚು ಅಮೂಲ್ಯ