ಜಪಾನಿನಲ್ಲಿ ಧರ್ಮದ ಸ್ವಾತಂತ್ರ್ಯವು ಸಮರ್ಥಿಸಲ್ಪಟ್ಟದ್ದು
ಜಪಾನಿನಲ್ಲಿ, ಅನೇಕ ವರ್ಷಗಳಿಂದ, ಯೆಹೋವನ ಸಾಕ್ಷಿಗಳಾಗಿರುವ ಯುವ ವಿದ್ಯಾರ್ಥಿಗಳು ಒಂದು ಸಂದಿಗ್ಧತೆಯನ್ನು ಎದುರಿಸಿದ್ದಾರೆ: ಅವರು ತಮ್ಮ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯನ್ನು ಅನುಸರಿಸಬೇಕೋ, ಇಲ್ಲವೇ ತಮ್ಮ ಮನಸ್ಸಾಕ್ಷಿಯನ್ನು ಉಲ್ಲಂಘಿಸುವ ಒಂದು ಶಾಲಾ ಪಠ್ಯಕ್ರಮವನ್ನು ಅವರು ಅಂಗೀಕರಿಸಬೇಕೋ ಎಂಬುದೇ. ಏಕೆ ಈ ಸಂದಿಗ್ಧತೆ? ಏಕೆಂದರೆ ಯುದ್ಧೋಚಿತ ಕಲೆಯ ವ್ಯಾಯಾಮಗಳು, ಅವರ ಶಾಲೆಗಳಲ್ಲಿನ ಶಾರೀರಿಕ ಶಿಕ್ಷಣ ಪಾಠದ ಭಾಗವಾಗಿವೆ. ಇಂಥ ವ್ಯಾಯಾಮಗಳು ಯೆಶಾಯ 2ನೇ ಅಧ್ಯಾಯ, 4ನೇ ವಚನದಲ್ಲಿ ಕಂಡುಬರುವಂಥ ಬೈಬಲ್ ತತ್ತ್ವಗಳೊಂದಿಗೆ ಸರಿಹೊಂದಲಿಲ್ಲ ಎಂಬುದಾಗಿ ಆ ಯುವ ಸಾಕ್ಷಿಗಳು ಭಾವಿಸಿದರು. ಇದು ಓದುವುದು: “ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.”
ಮತ್ತೊಬ್ಬ ವ್ಯಕ್ತಿಗೆ ಕೇಡನ್ನುಂಟುಮಾಡುವುದನ್ನು ಒಳಗೂಡುವ, ಯುದ್ಧಸದೃಶ ಕೌಶಲಗಳನ್ನು ಕಲಿತುಕೊಳ್ಳಲು ಇಚ್ಛಿಸದೆ, ತಾವು ಯುದ್ಧೋಚಿತ ಕಲೆಯಲ್ಲಿ ಆತ್ಮಸಾಕ್ಷಿಕವಾಗಿ ಭಾಗವಹಿಸಸಾಧ್ಯವಿಲ್ಲ ಎಂಬುದನ್ನು ಆ ಯುವ ಕ್ರೈಸ್ತ ಸಾಕ್ಷಿಗಳು ತಮ್ಮ ಶಿಕ್ಷಕರಿಗೆ ವಿವರಿಸಿದರು. ಶಾಲಾ ಪಠ್ಯಕ್ರಮವನ್ನು ಅಂಗೀಕರಿಸುವಂತೆ ಈ ವಿದ್ಯಾರ್ಥಿಗಳ ಮನವೊಪ್ಪಿಸಲು ಪ್ರಯತ್ನಿಸಿದ ಅನಂತರ, ಅನೇಕ ಗ್ರಾಹ್ಯ ಶಿಕ್ಷಕರು ಕಟ್ಟಕಡೆಗೆ ವಿದ್ಯಾರ್ಥಿಗಳ ಮನಸ್ಸಾಕ್ಷಿಗಳನ್ನು ಗೌರವಿಸಲು ಮತ್ತು ಬದಲಿ ಚಟುವಟಿಕೆಗಳನ್ನು ಒದಗಿಸಲು ಸಮ್ಮತಿಸಿದರು.
ಹಾಗಿದ್ದರೂ, ಕೆಲವು ಶಿಕ್ಷಕರು ಉದ್ರೇಕಗೊಂಡರು, ಮತ್ತು ಕೆಲವು ಶಾಲೆಗಳು ಯುವ ಸಾಕ್ಷಿಗಳಿಗೆ, ಶಾರೀರಿಕ ಶಿಕ್ಷಣಕ್ಕಾಗಿರುವ ಅಂಕಗಳನ್ನು ನೀಡಲು ನಿರಾಕರಿಸಿದವು. 1993ರಲ್ಲಿ, ಕಡಿಮೆಪಕ್ಷ ಒಂಬತ್ತು ಸಾಕ್ಷಿಗಳು ಮುಂದಿನ ತರಗತಿಗೆ ತೇರ್ಗಡೆಯಾಗಲು ಅನುಮತಿಸಲ್ಪಡಲಿಲ್ಲ, ಮತ್ತು ಯುದ್ಧೋಚಿತ ಕಲೆಯಲ್ಲಿ ಭಾಗವಹಿಸದಿರುವುದಕ್ಕಾಗಿ ಶಾಲೆಯನ್ನು ಬಿಟ್ಟುಬಿಡುವಂತೆ ಇಲ್ಲವೇ ಹೊರಹಾಕಲ್ಪಡುವಂತೆ ಒತ್ತಾಯಿಸಲ್ಪಟ್ಟರು.
ಸ್ಫುಟವಾಗಿಯೇ, ಇದು ಯುವ ಕ್ರೈಸ್ತರು ತಮ್ಮ ಮನಸ್ಸಾಕ್ಷಿಯನ್ನು ಸಂಧಾನಮಾಡಿಕೊಳ್ಳದೇ ಶಿಕ್ಷಣವನ್ನು ಪಡೆದುಕೊಳ್ಳುವ ಹಕ್ಕನ್ನು ಸಮರ್ಥಿಸಿಕೊಳ್ಳಬೇಕಾದ ಸಮಯವಾಗಿತ್ತು. ಕೋಬೆ ಮ್ಯುನಿಸಿಪಲ್ ಇಂಡಸ್ಟ್ರಿಯಲ್ ಟೆಕ್ನಿಕಲ್ ಕಾಲೇಜ್ನಲ್ಲಿ (ಸಂಕ್ಷಿಪ್ತವಾಗಿ ಕೋಬೆ ಟೆಕ್ ಎಂದು ಕರೆಯಲ್ಪಡುತ್ತದೆ) ಎರಡನೆಯ ದರ್ಜೆಗೆ ತೇರ್ಗಡೆಯಾಗುವುದರಿಂದ ನಿರಾಕರಿಸಲ್ಪಟ್ಟ ಐವರು ವಿದ್ಯಾರ್ಥಿಗಳು ಕಾನೂನು ಕ್ರಮವನ್ನು ತೆಗೆದುಕೊಳ್ಳಲು ನಿರ್ಧರಿಸಿದರು.
ಯಾವುದು ಗಂಡಾಂತರದಲ್ಲಿತ್ತು?
1990ರ ವಸಂತಕಾಲದಲ್ಲಿ ಐವರು ವಿದ್ಯಾರ್ಥಿಗಳು ಕೋಬೆ ಟೆಕ್ ಅನ್ನು ಪ್ರವೇಶಿಸಿದಾಗ, ತಮ್ಮ ಬೈಬಲಾಧಾರಿತ ನೋಟಗಳ ಕಾರಣದಿಂದ ಕೆಂಡೋ (ಜಪಾನಿಯರ ಕತ್ತಿವರಿಸೆ) ವ್ಯಾಯಾಮಗಳಲ್ಲಿ ತಾವು ಭಾಗವಹಿಸಸಾಧ್ಯವಿಲ್ಲವೆಂಬುದನ್ನು ಅವರು ಶಿಕ್ಷಕರಿಗೆ ವಿವರಿಸಿದರು. ಶಾರೀರಿಕ ಶಿಕ್ಷಣ ಶಾಖೆಯು ಬಲವಾಗಿ ವಿರೋಧಿಸಿ, ಶಾರೀರಿಕ ಶಿಕ್ಷಣಕ್ಕಾಗಿರುವ ಅಂಕವನ್ನು ಪಡೆದುಕೊಳ್ಳಲು ಯಾವುದೇ ಬದಲಿ ಮಾರ್ಗಗಳನ್ನು ಅವರಿಗೆ ನೀಡಲು ನಿರಾಕರಿಸಿತು. ಕಟ್ಟಕಡೆಗೆ, ಆ ವಿದ್ಯಾರ್ಥಿಗಳು ಶಾರೀರಿಕ ಶಿಕ್ಷಣದ ತರಗತಿಯಲ್ಲಿ ಅನುತ್ತೀರ್ಣರಾದರು ಮತ್ತು ಫಲಿತಾಂಶವಾಗಿ, ಮೊದಲನೆಯ ದರ್ಜೆಯನ್ನು (ಕಾಲೇಜ್ ಕೋರ್ಸ್ನ ಪ್ರಥಮ ವರ್ಷ) ಪುನಃ ಓದಬೇಕಾಯಿತು. 1991ರ ಎಪ್ರಿಲ್ ತಿಂಗಳಿನಲ್ಲಿ, ಶಾಲೆಯ ಕ್ರಮವು, ಧರ್ಮದ ಸ್ವಾತಂತ್ರ್ಯದ ಕುರಿತಾದ ಸಾಂವಿಧಾನಿಕ ಖಾತ್ರಿಯ ವಿರುದ್ಧವಾಗಿ ಕಾರ್ಯನಡೆಸಿತೆಂದು ಪ್ರತಿಪಾದಿಸುತ್ತಾ, ಅವರು ಕೋಬೆ ಜಿಲ್ಲಾ ನ್ಯಾಯಾಲಯದಲ್ಲಿ ಒಂದು ಮೊಕದ್ದಮೆಯನ್ನು ಹೂಡಿದರು.a
ಬದಲಿ ಚಟುವಟಿಕೆಗಳನ್ನು ಒದಗಿಸುವುದು, ಒಂದು ನಿರ್ದಿಷ್ಟ ಧರ್ಮಕ್ಕೆ ಒಲವನ್ನು ತೋರಿಸುವುದಕ್ಕೆ ಸಮನಾಗಿರುವುದು ಮತ್ತು ಹೀಗೆ ಸಾರ್ವಜನಿಕ ಶಿಕ್ಷಣದ ತಾಟಸ್ಥ್ಯದ ಕುರಿತಾಗಿ ಪಕ್ಷಪಾತ ತೋರಿಸುವುದಾಗಿರುವುದೆಂದು ಶಾಲೆಯು ಪ್ರತಿಪಾದಿಸಿತು. ಇದಕ್ಕೆ ಹೊರತಾಗಿ, ಬದಲಿ ಶಾರೀರಿಕ ಶಿಕ್ಷಣ ಕಾರ್ಯಕ್ರಮವನ್ನು ಒದಗಿಸಲಿಕ್ಕಾಗಿ ತಮ್ಮಲ್ಲಿ ಸೌಕರ್ಯಗಳು ಇಲ್ಲವೇ ಸಿಬ್ಬಂದಿವರ್ಗದವರು ಇರಲಿಲ್ಲವೆಂದು ಅವರು ಪ್ರತಿಪಾದಿಸಿದರು.
ತಿಳಿಸಲ್ಪಟ್ಟವರನ್ನು ಜಿಲ್ಲಾ ನ್ಯಾಯಾಲಯದ ನಿರ್ಣಯವು ಪ್ರೇರಿಸುತ್ತದೆ
ಮೊಕದ್ದಮೆಯು ವಿಚಾರಣೆಮಾಡಲ್ಪಡುತ್ತಿದ್ದ ಸಮಯದಲ್ಲಿ, ಐವರು ವಿದ್ಯಾರ್ಥಿಗಳಲ್ಲಿ ಇಬ್ಬರು, ಶಾರೀರಿಕ ಶಿಕ್ಷಣಕ್ಕಾಗಿರುವ ಉತ್ತೀರ್ಣ ದರ್ಜೆಯಲ್ಲಿ ಪುನಃ ಅನುತ್ತೀರ್ಣರಾದರು; ಇತರ ಮೂವರು ವಿದ್ಯಾರ್ಥಿಗಳು ಹೆಚ್ಚುಕಡಿಮೆ ಉತ್ತೀರ್ಣರಾಗಿ, ಮುಂದಿನ ದರ್ಜೆಗೆ ತೇರ್ಗಡೆಹೊಂದಿದರು. ವಿದ್ಯಾಭ್ಯಾಸದ ಸಾಧನೆಗಳು ನ್ಯೂನವಾಗಿದ್ದು, ಯಾವುದೇ ಎರಡು ಆನುಕ್ರಮಿಕ ವರ್ಷಗಳಿಗೆ ಅದೇ ದರ್ಜೆಯನ್ನು ಪುನಃ ಓದುವ ವಿದ್ಯಾರ್ಥಿಗಳು ಹೊರಹಾಕಲ್ಪಡಸಾಧ್ಯವಿದೆ ಎಂದು ಶಾಲೆಯ ನಿಯಮಗಳು ತಿಳಿಸಿದವು. ಇದರ ನೋಟದಲ್ಲಿ, ಇಬ್ಬರು ವಿದ್ಯಾರ್ಥಿಗಳಲ್ಲಿ ಒಬ್ಬನು, ಹೊರಹಾಕಲ್ಪಡುವುದಕ್ಕಿಂತ ಮುನ್ನ ಶಾಲೆಯನ್ನು ಬಿಟ್ಟುಬಿಡಲು ನಿರ್ಧರಿಸಿದನು, ಆದರೆ ಮತ್ತೊಬ್ಬನು, ಕುನೀಹೀಟೋ ಕೋಬಾಯಾಶೀ, ಬಿಟ್ಟುಬಿಡಲು ನಿರಾಕರಿಸಿದನು. ಆದುದರಿಂದ ಅವನು ಹೊರಹಾಕಲ್ಪಟ್ಟನು. ಆಸಕ್ತಿಕರವಾಗಿ, ಅವನು 48 ಅಂಕಗಳನ್ನು ಪಡೆದುಕೊಂಡು ಅನುತ್ತೀರ್ಣವಾದ ಶಾರೀರಿಕ ಶಿಕ್ಷಣವನ್ನು ಸೇರಿಸಿ, ಎಲ್ಲ ವಿಷಯಗಳಿಗಾಗಿರುವ ಕುನೀಹೀಟೋನ ಸರಾಸರಿಯು, 100ಕ್ಕೆ 90.2 ಅಂಕಗಳಾಗಿದ್ದವು. 42 ವಿದ್ಯಾರ್ಥಿಗಳ ತನ್ನ ತರಗತಿಯಲ್ಲಿ ಅವನೇ ಮೊದಲಿಗನಾಗಿದ್ದನು.
1993, ಫೆಬ್ರವರಿ 22ರಂದು, ಕೋಬೆ ಜಿಲ್ಲಾ ನ್ಯಾಯಾಲಯವು, ಕೋಬೆ ಟೆಕ್ನ ಪರವಾಗಿ ತೀರ್ಪುನೀಡಿ, ಹೀಗೆ ಹೇಳಿತು: “ಶಾಲೆಯಿಂದ ತೆಗೆದುಕೊಳ್ಳಲ್ಪಟ್ಟ ಕ್ರಮಗಳು ಸಂವಿಧಾನವನ್ನು ಉಲ್ಲಂಘಿಸಲಿಲ್ಲ,” ಆದರೂ “ಫಿರ್ಯಾದಿಯ ಆರಾಧನಾ ಸ್ವಾತಂತ್ರ್ಯವು, ಕೆಂಡೋ ವ್ಯಾಯಾಮಗಳಲ್ಲಿ ಭಾಗವಹಿಸಬೇಕೆಂಬ ಶಾಲೆಯ ಆವಶ್ಯಕತೆಯಿಂದ ಹೇಗೂ ನಿರ್ಬಂಧಿಸಲ್ಪಟ್ಟಿತೆಂಬ ವಿಷಯವನ್ನು ಅಲ್ಲಗಳೆಯಸಾಧ್ಯವಿಲ್ಲ” ಎಂದು ಅದು ಗುರುತಿಸಿತು.
ಪ್ರಥಮ ಶತಮಾನದಲ್ಲಿನ ಅಪೊಸ್ತಲ ಪೌಲನಂತೆ, ಫಿರ್ಯಾದಿಗಳು ಉಚ್ಚ ಮಟ್ಟದ ಕಾನೂನು ಅಧಿಕಾರಿಗಳಿಗೆ ಮನವಿಮಾಡಲು ನಿರ್ಧರಿಸಿದರು. (ಅ. ಕೃತ್ಯಗಳು 25:11, 12) ಮೊಕದ್ದಮೆಯು ಓಸಾಕ ಉಚ್ಚ ನ್ಯಾಯಾಲಯಕ್ಕೆ ಹೋಯಿತು.
ಫಿರ್ಯಾದಿಗಳ ನಿಸ್ವಾರ್ಥ ಮನೋಭಾವ
ಟ್ಸೂಕೂಬಾ ವಿಶ್ವವಿದ್ಯಾನಿಲಯದ ಒಬ್ಬ ಖ್ಯಾತ ವಿದ್ವಾಂಸರಾದ ಪ್ರೊಫೆಸರ್ ಟೆಟ್ಸೂಓ ಶೀಮೋಮುರಾ, ಓಸಾಕ ಉಚ್ಚ ನ್ಯಾಯಾಲಯದಲ್ಲಿ ಒಬ್ಬ ನಿಪುಣ ಸಾಕ್ಷಿಯೋಪಾದಿ ಪ್ರಮಾಣವನ್ನು ಕೊಡಲು ಸಮ್ಮತಿಸಿದರು. ಅವರು ಶಿಕ್ಷಣ ಮತ್ತು ಕಾನೂನಿನಲ್ಲಿ ಒಬ್ಬ ವಿಶೇಷಜ್ಞರೋಪಾದಿ, ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುವುದರಲ್ಲಿ ಶಾಲೆಯ ಕ್ರಮಗಳು ಎಷ್ಟೊಂದು ದಯಾದಾಕ್ಷಿಣ್ಯರಹಿತವಾಗಿದ್ದವು ಎಂಬುದನ್ನು ಒತ್ತಿಹೇಳಿದರು. ನ್ಯಾಯಾಲಯದಲ್ಲಿ ಕುನೀಹೀಟೋ ಕೋಬಾಯಾಶೀ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದನು ಮತ್ತು ಅವನ ಪ್ರಾಮಾಣಿಕ ಮನೋಭಾವವು, ನ್ಯಾಯಾಲಯದ ಕೋಣೆಯಲ್ಲಿದ್ದವರ ಹೃದಯಗಳನ್ನು ಸ್ಪರ್ಶಿಸಿತು. ಇನ್ನೂ ಹೆಚ್ಚಾಗಿ, 1994, ಫೆಬ್ರವರಿ 22ರಂದು, ಕೋಬೆ ವಕೀಲ ಸಂಘವು, ಶಾಲೆಯ ಕ್ರಮಗಳು ಕುನೀಹೀಟೋನ ಆರಾಧನಾ ಸ್ವಾತಂತ್ರ್ಯದ ವಿಷಯದಲ್ಲಿ ಪಕ್ಷಪಾತವನ್ನು ತೋರಿಸಿದವೆಂದು ಮತ್ತು ಶಿಕ್ಷಣವನ್ನು ಪಡೆದುಕೊಳ್ಳಲಿಕ್ಕಾಗಿರುವ ಅವನ ಹಕ್ಕಿನ ವಿಷಯದಲ್ಲಿ ಪ್ರಕಟಿಸುತ್ತಾ, ಶಾಲೆಯು ಅವನನ್ನು ಪುನಃ ಸೇರಿಸಿಕೊಳ್ಳುವಂತೆ ಶಿಫಾರಸ್ಸು ಮಾಡಿತು.
ಓಸಾಕ ಉಚ್ಚ ನ್ಯಾಯಾಲಯದಲ್ಲಿ ನಿರ್ಣಯವು ಹೇಳಲ್ಪಡುವ ಸಮಯವು ಹತ್ತಿರವಾದಂತೆ, ಒಳಗೊಂಡ ಎಲ್ಲ ಯುವ ಕ್ರೈಸ್ತರು ಮುಕ್ತಾಯದ ತನಕ ಹೋರಾಟದ ಭಾಗವಾಗಿರಲು ಉತ್ಸುಕರಾಗಿದ್ದರು. ಜಪಾನಿನಾದ್ಯಂತ ಶಾಲೆಗಳಲ್ಲಿ ಅದೇ ವಿವಾದಾಂಶವನ್ನು ಎದುರಿಸುವ ಸಾವಿರಾರು ಯುವ ಸಾಕ್ಷಿಗಳ ಪರವಾಗಿ ತಾವು ಒಂದು ಕಾನೂನುಬದ್ಧ ಸಂಗ್ರಾಮವನ್ನು ಹೋರಾಡುತ್ತಿದ್ದೇವೆಂಬ ಅನಿಸಿಕೆ ಅವರಿಗಾಯಿತು. ಆದರೆ ಅವರು ಶಾಲೆಯಿಂದ ಹೊರಹಾಕಲ್ಪಡದಿದ್ದ ಕಾರಣದಿಂದಾಗಿ, ನ್ಯಾಯಾಲಯವು ಅವರ ಮೊಕದ್ದಮೆಯನ್ನು ತಳ್ಳಿಹಾಕುವ ಸಂಭವನೀಯತೆಯು ಹೆಚ್ಚಾಗಿತ್ತು. ಮತ್ತು ತಮ್ಮ ವ್ಯಾಜ್ಯವನ್ನು ಅವರು ಹಿಂದೆಗೆದುಕೊಂಡಲ್ಲಿ, ಕುನೀಹೀಟೋನ ಹೊರಹಾಕುವಿಕೆಯಲ್ಲಿನ ಅನ್ಯಾಯವು ಅತ್ಯುಜ್ವಲಪಡಿಸಲ್ಪಡುವುದು ಎಂಬುದನ್ನು ಅವರು ನೋಡಸಾಧ್ಯವಿತ್ತು. ಆದುದರಿಂದ, ಕುನೀಹೀಟೋನನ್ನು ಹೊರತುಪಡಿಸಿ ಎಲ್ಲ ವಿದ್ಯಾರ್ಥಿಗಳು ಮೊಕದ್ದಮೆಯನ್ನು ಕೈಬಿಡಲು ನಿರ್ಧರಿಸಿದರು.
1994, ಡಿಸೆಂಬರ್ 22ರಂದು, ಓಸಾಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ, ರೇಸುಕೀ ಶೀಮಾಡಾ, ಕೋಬೆ ಜಿಲ್ಲಾ ನ್ಯಾಯಾಲಯವು ತೀರ್ಪುನೀಡಿದ್ದ ವಿಷಯವನ್ನು ವಿಪರ್ಯಸ್ತಗೊಳಿಸಿದ ಒಂದು ನಿರ್ಣಯವನ್ನು ನೀಡಿದರು. ಕೆಂಡೋ ವ್ಯಾಯಾಮಗಳನ್ನು ನಿರಾಕರಿಸುವುದಕ್ಕಾಗಿರುವ ಕುನೀಹೀಟೋನ ಕಾರಣವು ಪ್ರಾಮಾಣಿಕವಾಗಿತ್ತು ಮತ್ತು ಅವನ ಧಾರ್ಮಿಕ ನಂಬಿಕೆಯ ಮೇಲಾಧಾರಿತವಾದ ಅವನ ಕ್ರಿಯೆಗಾಗಿ ಅವನಿಗಾದ ಅನನುಕೂಲವು ತೀರ ಮಹತ್ತರವಾಗಿತ್ತು ಎಂಬುದನ್ನು ನ್ಯಾಯಾಲಯವು ಕಂಡುಕೊಂಡಿತು. ಶಾಲೆಯು ಬದಲಿ ಚಟುವಟಿಕೆಗಳನ್ನು ಒದಗಿಸಿರಬೇಕಾಗಿತ್ತೆಂದು ಮುಖ್ಯ ನ್ಯಾಯಾಧೀಶರಾದ ಶೀಮಾಡಾ ಹೇಳಿದರು. ಈ ಅತ್ಯುತ್ಕೃಷ್ಟವಾದ ನಿರ್ಣಯವು, ಮಾನವ ಹಕ್ಕುಗಳ ಕುರಿತಾಗಿ ಚಿಂತಿತರಾಗಿದ್ದವರ ಹೃದಯಗಳಲ್ಲಿನ ಒಂದು ಪ್ರತಿಕ್ರಿಯಾತ್ಮಕ ತಂತಿಯನ್ನು ಮೀಟಿತು. ಹಾಗಿದ್ದರೂ, ಮತ್ತೊಂದು ವರ್ಷಕ್ಕಿಂತಲೂ ಹೆಚ್ಚು ಅವಧಿಯ ವರೆಗೆ ಕುನೀಹೀಟೋನ ಶಿಕ್ಷಣವನ್ನು ಕಸಿದುಕೊಳ್ಳುತ್ತಾ, ಶಾಲೆಯು ಮೊಕದ್ದಮೆಯನ್ನು ಜಪಾನಿನ ಅತ್ಯುಚ್ಚ ನ್ಯಾಯಾಲಯಕ್ಕೆ ಮನವಿಮಾಡಿತು.
ಅತ್ಯುಚ್ಚ ನ್ಯಾಯಾಲಯ
ಕೋಬೆ ಶೀಂಬೂನ್ ಎಂಬ ವಾರ್ತಾಪತ್ರಿಕೆಯಲ್ಲಿನ ಒಂದು ಸಂಪಾದಕೀಯವು ಅನಂತರ ಹೇಳಿದ್ದು: “ಕೋಬೆ ನಗರ ಶಾಲಾ ಸಮಿತಿ ಮತ್ತು ಶಾಲೆಯು, ಆ ಹಂತದಲ್ಲಿ [ಓಸಾಕ ಉಚ್ಚ ನ್ಯಾಯಾಲಯದ ನಿರ್ಣಯದ ಅನಂತರ] ಶ್ರೀ. ಕೋಬಾಯಾಶೀಯನ್ನು ಶಾಲೆಗೆ ಪುನಃ ಅಂಗೀಕರಿಸಬೇಕಾಗಿತ್ತು. . . . ಅವರ ಅನಗತ್ಯವಾದ ಎದುರುನಿಲ್ಲುವಿಕೆಯ ಮನೋಭಾವನೆಯು, ಒಬ್ಬ ವಿದ್ಯಾರ್ಥಿಯನ್ನು ಅವನ ಯೌವನದ ಒಂದು ಬಹುಮುಖ್ಯ ಅವಧಿಯಿಂದ ವಂಚಿಸಿದೆ.” ಆದರೂ, ಈ ಮೊಕದ್ದಮೆಯಲ್ಲಿ ಕೋಬೆ ಟೆಕ್ ಒಂದು ದೃಢವಾದ ನಿಲುವನ್ನು ತೆಗೆದುಕೊಂಡಿತು. ಪರಿಣಾಮವಾಗಿ, ಅದು ರಾಷ್ಟ್ರದಾದ್ಯಂತ ವಾರ್ತಾ ವರದಿಗಳ ಒಂದು ವಿಷಯವಾಗಿ ಪರಿಣಮಿಸಿತು. ದೇಶದಾದ್ಯಂತ ಶಿಕ್ಷಕರು ಮತ್ತು ಶಾಲಾ ಅಧಿಕಾರಿಗಳು ಅದನ್ನು ಗಮನಿಸಿದರು, ಮತ್ತು ದೇಶದಲ್ಲಿನ ಉಚ್ಚ ನ್ಯಾಯಾಲಯದಿಂದ ಬಂದ ಒಂದು ನಿರ್ಣಯವು, ಭವಿಷ್ಯತ್ತಿನಲ್ಲಿ ಬರುವ ತದ್ರೀತಿಯ ಮೊಕದ್ದಮೆಗಳಿಗಾಗಿ ಒಂದು ಹೆಚ್ಚು ದೃಢವಾದ ಕಾನೂನುಬದ್ಧ ಪೂರ್ವಭಾವಿಯನ್ನು ಪ್ರತಿನಿಧಿಸುವುದು.
1995, ಜನವರಿ 17ರಂದು, ಶಾಲೆಯು ಮೊಕದ್ದಮೆಯನ್ನು ಅತ್ಯುಚ್ಚ ನ್ಯಾಯಾಲಯಕ್ಕೆ ಮನವಿಮಾಡಿದ ಸುಮಾರು ಒಂದು ವಾರದ ಅನಂತರ, ಕೋಬೆ ಭೂಕಂಪವು, ಎಲ್ಲಿ ಕುನೀಹೀಟೋ ಹಾಗೂ ಅವನ ಕುಟುಂಬವು ನೆಲೆಸಿತ್ತೋ, ಆ ಆಶೀಯಾ ನಗರಕ್ಕೆ ಬಡಿಯಿತು. ಆ ಬೆಳಗ್ಗೆ ಸುಮಾರು ಐದೂವರೆಗೆ ಆ ಕ್ಷೇತ್ರವನ್ನು ಕಂಪನವು ತಾಕುವ ಕೆಲವೊಂದು ನಿಮಿಷಗಳ ಮುನ್ನ, ಕುನೀಹೀಟೋ ತನ್ನ ಅಂಶಕಾಲಿಕ ಉದ್ಯೋಗಕ್ಕಾಗಿ ಮನೆಯನ್ನು ಬಿಟ್ಟುಹೊರಟನು. ಅವನು ಹಾನ್ಶೀನ್ ವೇಗಹೆದ್ದಾರಿಯ ಕೆಳಗಿರುವ ರಸ್ತೆಯ ಮೇಲೆ ಸೈಕಲಿನಲ್ಲಿ ಹೋಗುತ್ತಿದ್ದನು, ಮತ್ತು ಕಂಪನವು ತಾಕಿದಾಗ, ಅವನು ಆ ಕುಸಿದಂಥ ಭಾಗವನ್ನು ಇನ್ನೇನು ಸಮೀಪಿಸುತ್ತಿದ್ದನು. ತತ್ಕ್ಷಣವೇ ಅವನು ಮನೆಗೆ ಹಿಂದಿರುಗಿಹೋದನು ಮತ್ತು ತನ್ನ ಮನೆಯ ನೆಲದ ಅಂತಸ್ತು ಸಂಪೂರ್ಣವಾಗಿ ನುಚ್ಚುನೂರಾಗಿರುವುದನ್ನು ಕಂಡುಕೊಂಡನು. ಕಂಪನದಲ್ಲಿ ಕುನೀಹೀಟೋ ತನ್ನ ಜೀವವನ್ನು ಸುಲಭವಾಗಿ ಕಳೆದುಕೊಳ್ಳಸಾಧ್ಯವಿತ್ತು ಎಂಬುದನ್ನು ಕಂಡುಕೊಂಡನು ಮತ್ತು ಪಾರಾಗಿ ಉಳಿಯಲು ತನ್ನನ್ನು ಅನುಮತಿಸಿದುದಕ್ಕಾಗಿ ಯೆಹೋವನಿಗೆ ಉಪಕಾರವನ್ನು ಸಲ್ಲಿಸಿದನು. ಅವನು ಮೃತಹೊಂದಿರುತ್ತಿದ್ದಲ್ಲಿ, ಬಹುಶಃ ಕೆಂಡೋ ಮೊಕದ್ದಮೆಯು ಅತ್ಯುಚ್ಚ ನ್ಯಾಯಾಲಯದ ನಿರ್ಣಯವಿಲ್ಲದೆ ಕೊನೆಗೊಳ್ಳುತ್ತಿತ್ತು.
ಜಪಾನಿನಲ್ಲಿರುವ ಅತ್ಯುಚ್ಚ ನ್ಯಾಯಾಲಯವು ಸಾಮಾನ್ಯವಾಗಿ ಮನವಿಗಳನ್ನು ಬರವಣಿಗೆಯಲ್ಲಿ ಮಾತ್ರವೇ ಪರೀಕ್ಷಿಸುತ್ತದೆ ಮತ್ತು ಕೆಳ ನ್ಯಾಯಾಲಯದ ನಿರ್ಣಯಗಳು ಸರಿಯಾಗಿದ್ದವೋ ಇಲ್ಲವೋ ಎಂಬುದನ್ನು ತೀರ್ಮಾನಿಸುತ್ತದೆ. ಕೆಳ ನ್ಯಾಯಾಲಯದ ನಿರ್ಣಯವನ್ನು ವಿಪರ್ಯಸ್ತಗೊಳಿಸಲು ಒಂದು ಮುಖ್ಯವಾದ ಕಾರಣವಿರುವ ಹೊರತು, ವಿಚಾರಣೆಗಳು ನಡೆಯುವುದಿಲ್ಲ. ಅತ್ಯುಚ್ಚ ನ್ಯಾಯಾಲಯವು, ಸಂಬಂಧಪಟ್ಟ ವ್ಯಕ್ತಿಗಳಿಗೆ ಯಾವಾಗ ನಿರ್ಣಯವು ನೀಡಲ್ಪಡುವುದೆಂಬುದರ ಬಗ್ಗೆ ತಾರೀಖನ್ನು ತಿಳಿಯಪಡಿಸುವುದಿಲ್ಲ. ಆದುದರಿಂದ, 1996, ಮಾರ್ಚ್ 8ರ ಬೆಳಗ್ಗೆ, ನಿರ್ಣಯವು ಆ ಬೆಳಗ್ಗೆ ಹೇಳಲ್ಪಡುವುದೆಂಬುದಾಗಿ ಕುನೀಹೀಟೋಗೆ ಹೇಳಲ್ಪಟ್ಟಾಗ ಅವನು ಆಶ್ಚರ್ಯಚಕಿತನಾದನು. ಅವನ ಹರ್ಷ ಮತ್ತು ಸಂತೋಷಕ್ಕೆ, ಓಸಾಕ ಉಚ್ಚ ನ್ಯಾಯಾಲಯದ ನಿರ್ಣಯವನ್ನು ಅತ್ಯುಚ್ಚ ನ್ಯಾಯಾಲಯ ಸಮರ್ಥಿಸಿತ್ತೆಂಬುದನ್ನು ಅವನು ಕಂಡುಕೊಂಡನು.
ನ್ಯಾಯಾಧೀಶರಾದ ಶೀನೀಚೀ ಕಾವೈಯ ಅಧ್ಯಕ್ಷತೆಯಲ್ಲಿ ನಾಲ್ವರು ನ್ಯಾಯಾಧೀಶರು, ಏಕಾಭಿಪ್ರಾಯದಿಂದ ಹೀಗೆ ತೀರ್ಪುನೀಡಿದರು, “ಶಾಲೆಯ ಕ್ರಮಗಳು ಸಾಮಾಜಿಕವಾಗಿ ಅಂಗೀಕರಿಸಲ್ಪಟ್ಟ ವರ್ತನೆಗಳ ದೃಷ್ಟಿಕೋನದಿಂದ ತೀರ ಅಯೋಗ್ಯವಾದ, ವಿವೇಚನೆಗೆ ಒಳಪಟ್ಟ ಹಕ್ಕುಗಳ ಕ್ಷೇತ್ರದಿಂದ ವಿಪಥವಾದ ವಿಷಯದೋಪಾದಿ ಎಣಿಸಲ್ಪಡಬೇಕು ಮತ್ತು ಈ ಕಾರಣದಿಂದ ಈ ಕ್ರಮಗಳು ಕಾನೂನುಬಾಹಿರವಾಗಿವೆ.” ಕೆಂಡೋ ವ್ಯಾಯಾಮಗಳನ್ನು ಮಾಡಲು ಕುನೀಹೀಟೋನ ಪ್ರಾಮಾಣಿಕ ನಿರಾಕರಣೆಯನ್ನು ನ್ಯಾಯಾಲಯವು ಅಂಗೀಕರಿಸುತ್ತಾ ಹೇಳಿದ್ದು: “ಕೆಂಡೋ ವ್ಯಾಯಾಮಗಳಲ್ಲಿನ ಭಾಗವಹಿಸುವಿಕೆಯ ನಿರಾಕರಣೆಗೆ ಮೇಲ್ಮನವಿಗಾರನ ಕಾರಣವು, ಶ್ರದ್ಧಾಪೂರ್ವಕವೂ ಅವನ ನಂಬಿಕೆಯ ಅಂತಸ್ಸಾರಕ್ಕೇ ಅತ್ಯಂತ ನಿಕಟವಾಗಿ ಸಂಬಂಧಿಸಿದ್ದೂ ಆಗಿತ್ತು.” ಶಾಲೆಯು ಬದಲಿ ಮಾರ್ಗಗಳನ್ನು ಒದಗಿಸಸಾಧ್ಯವಿತ್ತು ಮತ್ತು ಒದಗಿಸಬೇಕಾಗಿತ್ತು ಎಂದು ಅತ್ಯುಚ್ಚ ನ್ಯಾಯಾಲಯವು ತೀರ್ಪುನೀಡಿತು; ಹೀಗೆ ಮೇಲ್ಮನವಿಗಾರನ ಧಾರ್ಮಿಕ ನಂಬಿಕೆಯು ಗೌರವಿಸಲ್ಪಡಬಹುದಿತ್ತು.
ವ್ಯಾಪಕ ಪರಿಣಾಮ
ಈ ನಿರ್ಣಯವು ನಿಸ್ಸಂದೇಹವಾಗಿ, ಶಾಲೆಗಳಲ್ಲಿನ ಆರಾಧನಾ ಸ್ವಾತಂತ್ರ್ಯದ ಪರವಾಗಿ ಒಂದು ಉತ್ತಮ ಪೂರ್ವಭಾವಿಯನ್ನಿಡುವುದು. ದ ಜಪಾನ್ ಟೈಮ್ಸ್ ಹೇಳಿದ್ದು: “ಶಿಕ್ಷಣ ಮತ್ತು ಧರ್ಮ ಸ್ವಾತಂತ್ರ್ಯದ ವಿವಾದಾಂಶದ ಮೇಲೆ ಅತ್ಯುಚ್ಚ ನ್ಯಾಯಾಲಯವು ಕೊಟ್ಟ ಪ್ರಥಮ ತೀರ್ಪು ಇದಾಗಿದೆ.” ಹಾಗಿದ್ದರೂ, ಈ ನಿರ್ಣಯವು ನಂಬಿಕೆಯ ಪರೀಕ್ಷೆಗಳನ್ನು ಎದುರಿಸುವಾಗ ತನ್ನ ಸ್ವಂತ ಆತ್ಮಸಾಕ್ಷಿಕ ನಿಲುವನ್ನು ತೆಗೆದುಕೊಳ್ಳಲಿಕ್ಕಿರುವ ಪ್ರತಿಯೊಬ್ಬ ಯುವ ಸಾಕ್ಷಿಯ ಜವಾಬ್ದಾರಿಯನ್ನು ತೆಗೆದುಹಾಕುವುದಿಲ್ಲ.
“ವ್ಯಾಸಂಗ ಸಾಧನೆಯು ಎದ್ದುಕಾಣುವಂತಿದ್ದ ಒಬ್ಬ ಪ್ರಾಮಾಣಿಕ ವಿದ್ಯಾರ್ಥಿ” ಅವನಾಗಿದ್ದನು ಎಂದು ಟ್ಸೂಕೂಬಾ ವಿಶ್ವವಿದ್ಯಾನಿಲಯದ ಪ್ರೊಫೆಸರರಾದ, ಮಾಸಾಯುಕೀ ಉಚೀನೋ ಹೇಳಿಕೆಯನ್ನಿತ್ತದ್ದು, ಕುನೀಹೀಟೋಗೆ ಗೆಲುವನ್ನು ನೀಡುವಂತೆ ನ್ಯಾಯಾಧೀಶರನ್ನು ಪ್ರೇರಿಸಿದ ಅಂಶಗಳಲ್ಲಿ ಒಂದಾಗಿತ್ತು. ತಮ್ಮ ನಂಬಿಕೆಯ ಪರೀಕ್ಷೆಗಳನ್ನು ಎದುರಿಸುವ ಕ್ರೈಸ್ತರಿಗೆ ಬೈಬಲ್ ಈ ಸಲಹೆಯನ್ನು ನೀಡುತ್ತದೆ: “ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಅಕ್ರಮಗಾರರೆಂದು ನಿಂದಿಸುತ್ತಾರೋ ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು.” (1 ಪೇತ್ರ 2:12) ನಂಬಿಗಸ್ತ ಯುವ ಕ್ರೈಸ್ತರು ತಮ್ಮ ಇಡೀ ಜೀವಿತವನ್ನು ಬೈಬಲ್ ಮಟ್ಟಗಳಿಗನುಸಾರ ಜೀವಿಸುವ ಮೂಲಕ, ತಮ್ಮ ಬೈಬಲ್ ಸಂಬಂಧಿತ ಸ್ಥಾನವು ಜನರ ಗೌರವಕ್ಕೆ ಅರ್ಹವಾಗಿದೆ ಎಂಬುದನ್ನು ತೋರಿಸಬಲ್ಲರು.
ಅತ್ಯುಚ್ಚ ನ್ಯಾಯಾಲಯದ ನಿರ್ಣಯದ ಬಳಿಕ, ಕುನೀಹೀಟೋ ಕೋಬಾಯಾಶೀ, ಕೋಬೆ ಟೆಕ್ಗೆ ಪುನಃ ಸೇರಿಸಿಕೊಳ್ಳಲ್ಪಟ್ಟನು. ಕುನೀಹೀಟೋನೊಂದಿಗೆ ಪ್ರವೇಶಿಸಿದ ಹೆಚ್ಚಿನ ವಿದ್ಯಾರ್ಥಿಗಳು ಈಗಾಗಲೇ ಪದವಿಪಡೆದುಕೊಂಡಿದ್ದರು. ಈಗ ಕುನೀಹೀಟೋ ತನಗಿಂತ ಐದು ವರ್ಷಗಳಷ್ಟು ಕಿರಿಯರಾಗಿರುವ ವಿದ್ಯಾರ್ಥಿಗಳೊಂದಿಗೆ ಓದುತ್ತಿದ್ದಾನೆ. ಲೋಕದ ಅನೇಕ ಜನರ ದೃಷ್ಟಿಯಲ್ಲಿ, ಅವನ ಯೌವನದ ಅಮೂಲ್ಯವಾದ ಐದು ವರ್ಷಗಳು ಹಾಳುಮಾಡಲ್ಪಟ್ಟಿರುವಂತೆ ತೋರುತ್ತದೆ. ಆದರೆ, ಕುನೀಹೀಟೋನ ಸಮಗ್ರತೆಯು ಯೆಹೋವ ದೇವರ ದೃಷ್ಟಿಯಲ್ಲಿ ಅಮೂಲ್ಯವಾದದ್ದಾಗಿದೆ ಮತ್ತು ಅವನ ತ್ಯಾಗವು ಖಂಡಿತವಾಗಿಯೂ ವ್ಯರ್ಥವಾಗಿರುವುದಿಲ್ಲ.
[ಪಾದಟಿಪ್ಪಣಿ]
a ವಿವರಗಳಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, 1995, ನವೆಂಬರ್ 8ರ ಎಚ್ಚರ! ಪತ್ರಿಕೆಯ ಸಂಚಿಕೆಯಲ್ಲಿರುವ 18ರಿಂದ 22ರ ಪುಟಗಳನ್ನು ನೋಡಿರಿ.
[ಪುಟ 20 ರಲ್ಲಿರುವ ಚಿತ್ರಗಳು]
ಎಡಭಾಗದಲ್ಲಿ: ಭೂಕಂಪದ ಅನಂತರ ಕುನೀಹೀಟೋನ ಮನೆ
ಕೆಳಗಡೆ: ಇಂದು ಕುನೀಹೀಟೋ