ನಾಲ್ಕು ವರುಷಗಳ ಯುದ್ಧಾವಧಿಯಲ್ಲಿ ಸಾಂತ್ವನ
ಮುನ್ನಿನ ಯುಗೊಸ್ಲಾವಿಯ ಪ್ರದೇಶದ ನಾಲ್ಕು ವರುಷಗಳ ಯುದ್ಧಾವಧಿಯಲ್ಲಿ, ಅನೇಕ ಜನರು ಅತಿ ಕಷ್ಟದೆಸೆಗಳನ್ನೂ ಕಠಿನ ಕೊರತೆಗಳನ್ನೂ ಅನುಭವಿಸಿದರು. ಇವರಲ್ಲಿ, ಯಾರು ನಂಬಿಗಸ್ತರಾಗಿ “ಸಕಲ ಸಾಂತ್ವನದ ದೇವರ”ನ್ನು ಆರಾಧಿಸುತ್ತ ಮುಂದುವರಿದರೊ, ಆ ನೂರಾರು ಮಂದಿ ಯೆಹೋವನ ಸಾಕ್ಷಿಗಳೂ ಇದ್ದರು.—2 ಕೊರಿಂಥ 1:3, NW.
ಸಾರಯೆವೊದಲ್ಲಿ ಜನರು, ಯುದ್ಧಾದ್ಯಂತ ಮುತ್ತಿಗೆಗೊಳಗಾಗಿದ್ದ ದೊಡ್ಡ ನಗರವೊಂದರಲ್ಲಿ ಜೀವಿಸುವ ಹೆಚ್ಚಿನ ಕಷ್ಟವನ್ನು ಅನುಭವಿಸಿದರು. ಅಲ್ಲಿ ವಿದ್ಯುಚ್ಛಕ್ತಿ, ನೀರು, ಕಟ್ಟಿಗೆ ಮತ್ತು ಆಹಾರದ ಕೊರತೆಯಿತ್ತು. ಈ ಉಗ್ರ ಸ್ಥಿತಿಗಳಲ್ಲಿ, ಯೆಹೋವನ ಸಾಕ್ಷಿಗಳ ಸಾರಯೆವೊ ಸಭೆಯು ಹೇಗೆ ಕಾರ್ಯನಡೆಸಿತು? ನೆರೆಹೊರೆಯ ದೇಶಗಳ ಕ್ರೈಸ್ತರು ದೊಡ್ಡ ಮೊತ್ತದ ಪರಿಹಾರ ಸಹಾಯ ಸರಬರಾಯಿ ತರಲು ತಮ್ಮ ಜೀವಗಳನ್ನು ಅಪಾಯಕ್ಕೊಡ್ಡಿದರು. (ಕಾವಲಿನಬುರುಜು, ನವೆಂಬರ್ 1, 1994, ಪುಟಗಳು 23-7ನ್ನು ನೋಡಿ.) ಅಲ್ಲದೆ, ಸಾರಯೆವೊದಲ್ಲಿನ ಸಹೋದರರು, ಆತ್ಮಿಕ ವಿಷಯಗಳಲ್ಲಿ ಪಾಲಿಗರಾಗುವುದರ ಮೇಲೆ ಮುಖ್ಯ ಒತ್ತನ್ನು ಹಾಕುತ್ತ, ತಮ್ಮಲ್ಲಿದ್ದುದನ್ನು ಪರಸ್ಪರ ಹಂಚಿಕೊಂಡರು. ಮುತ್ತಿಗೆಯ ಸಮಯದಲ್ಲಿ, ಆ ಶಹರದ ಕ್ರೈಸ್ತ ಮೇಲ್ವಿಚಾರಕನೊಬ್ಬನು ಈ ಕೆಳಗಣ ವರದಿಯನ್ನು ಕೊಟ್ಟನು:
“ನಾವು ನಮ್ಮ ಕೂಟಗಳನ್ನು ಬಹಳ ಬೆಲೆಯುಳ್ಳವುಗಳಾಗಿ ನೋಡುತ್ತೇವೆ. ನನ್ನ ಹೆಂಡತಿ, ನಾನು ಮತ್ತು ಇತರ 30 ಮಂದಿ ಕೂಟಗಳಿಗೆ ಹೋಗಲು 15 ಕಿಲೊಮೀಟರುಗಳು [9 ಮೈಲುಗಳು], ಬರಲು 15 ಕಿಲೊಮೀಟರುಗಳು ನಡೆಯುತ್ತೇವೆ. ಕೆಲವು ಬಾರಿ, ಕೂಟಗಳು ನಡೆಯುತ್ತಿದ್ದಾಗ ನೀರಿನ ಸರಬರಾಯಿಯಾಗುವುದು ಎಂದು ಪ್ರಕಟಿಸಲ್ಪಟ್ಟಿತು. ಸಹೋದರರು ಏನು ಮಾಡುವರು? ಮನೆಯಲ್ಲಿ ಉಳಿಯುವರೊ, ಕೂಟಗಳಿಗೆ ಹಾಜರಾಗುವರೊ? ನಮ್ಮ ಸಹೋದರರು ಕೂಟಗಳಿಗೆ ಹಾಜರಾಗಲು ಇಷ್ಟಪಟ್ಟರು. ಸಹೋದರರು ಯಾವಾಗಲೂ ಒಬ್ಬರಿಗೊಬ್ಬರು ಸಹಾಯಮಾಡುತ್ತಾರೆ; ಅವರಲ್ಲಿ ಏನೇ ಇರಲಿ, ಅದನ್ನು ಹಂಚಿಕೊಳ್ಳುತ್ತಾರೆ. ನಮ್ಮ ಸಭೆಯಲ್ಲಿ ಒಬ್ಬ ಸಹೋದರಿ ನಗರದ ಹೊರ ಅಂಚಿನಲ್ಲಿ, ಕಾಡಿನ ಹತ್ತಿರ ಜೀವಿಸುತ್ತಾಳೆ. ಆದಕಾರಣ ಕಟ್ಟಿಗೆ ಪಡೆಯುವುದು ಅವಳಿಗೆ ತುಸು ಸುಲಭ. ಅವಳು ಒಂದು ರೊಟ್ಟಿಯಂಗಡಿಯಲ್ಲಿಯೂ ಕೆಲಸಮಾಡುತ್ತಾಳೆ, ಮತ್ತು ಅವಳಿಗೆ ಸಂಬಳ ಸಿಗುವುದು ಹಿಟ್ಟಿನ ರೂಪದಲ್ಲಿ. ಸಾಧ್ಯವಿರುವಾಗ ಅವಳು ಒಂದು ದೊಡ್ಡ ರೊಟ್ಟಿಯನ್ನು ಸುಟ್ಟು, ಕೂಟಕ್ಕೆ ತರುತ್ತಾಳೆ. ಕೂಟ ಮುಗಿದ ಬಳಿಕ, ಹೋಗುವಾಗ ಅವಳು ಪ್ರತಿಯೊಬ್ಬರಿಗೆ ಒಂದೊಂದು ತುಂಡನ್ನು ಕೊಡುತ್ತಾಳೆ.
“ಯಾವ ಸಹೋದರನಿಗೂ, ಸಹೋದರಿಗೂ ಎಂದೂ ತೊರೆಯಲ್ಪಟ್ಟಿರುವ ಅನಿಸಿಕೆಯಾಗದಿರುವುದು ಪ್ರಾಮುಖ್ಯ. ಒಂದು ಅಹಿತಕರ ಪರಿಸ್ಥಿತಿಯಲ್ಲಿ ಮುಂದೆ ನಮ್ಮಲ್ಲಿ ಯಾವನಿಗೆ ಸಹಾಯ ಬೇಕಾಗುತ್ತದೆಂಬುದನ್ನು ಯಾವನೂ ತಿಳಿದಿಲ್ಲ. ನಮಗೆ ಹಿಮ ತುಂಬಿದ ರಸ್ತೆಗಳಿದ್ದಾಗ ಮತ್ತು ಒಬ್ಬ ಸಹೋದರಿ ಕಾಯಿಲೆ ಬಿದ್ದಾಗ, ಯುವ ಪ್ರಾಯದ, ಬಲಾಢ್ಯರಾದ ಸಹೋದರರು ಸ್ಲೆಜ್ ಗಾಡಿಯಲ್ಲಿ ಆಕೆಯನ್ನು ಕೂಟಗಳಿಗೆ ಎಳೆದುಕೊಂಡು ಹೋದರು.
“ನಾವೆಲ್ಲರೂ ಸಾರುವ ಕಾರ್ಯದಲ್ಲಿ ಭಾಗವಹಿಸುತ್ತೇವೆ, ಮತ್ತು ಯೆಹೋವನು ನಮ್ಮ ಪ್ರಯತ್ನಗಳನ್ನು ಆಶೀರ್ವದಿಸಿದ್ದಾನೆ. ಆತನು ಬಾಸ್ನಿಯದಲ್ಲಿ ನಮ್ಮ ಘೋರ ಸನ್ನಿವೇಶವನ್ನು ನೋಡಿದ್ದಾನೆ, ಆದರೆ ಆತನು ನಮಗೆ ವೃದ್ಧಿಯನ್ನು ಕೊಟ್ಟು, ನಾವು ಯುದ್ಧಕ್ಕೆ ಮೊದಲು ನೋಡಿದ್ದಿರದ ವೃದ್ಧಿಯನ್ನು ಕೊಟ್ಟು ಆಶೀರ್ವದಿಸಿದ್ದಾನೆ.”
ತದ್ರೀತಿ, ಮುನ್ನಿನ ಯುಗೊಸ್ಲಾವಿಯದ ಇತರ ಯುದ್ಧಛಿದ್ರಿತ ಭಾಗಗಳಲ್ಲಿ, ಯೆಹೋವನ ಸಾಕ್ಷಿಗಳು ಕಠಿನ ಕಷ್ಟದೆಸೆಗಳ ಹೊರತೂ ಅಭಿವೃದ್ಧಿಯನ್ನು ಸವಿದಿದ್ದಾರೆ. ಯೆಹೋವನ ಸಾಕ್ಷಿಗಳ ಕ್ರೊಏಷಿಯ ಆಫೀಸಿನಿಂದ, ಸಾಕ್ಷಿಗಳ ಒಂದು ಗುಂಪಿನ ಕುರಿತು ಈ ವರದಿಯು ಬರುತ್ತದೆ: “ವೆಲಿಕಾ ಕ್ಲಾಡುಶಾದಲ್ಲಿ ಜೀವಿಸುತ್ತಿದ್ದ ಸಹೋದರರ ಮುಂದೆ ನಿಭಾಯಿಸಲು ತೀರ ಕಠಿನವಾದ ಸಮಯವಿತ್ತು. ಅನೇಕ ಸಂದರ್ಭಗಳಲ್ಲಿ ಪಟ್ಟಣದ ಮೇಲೆ ಆಕ್ರಮಣ ನಡೆಯಿತು. ಕ್ರೊಏಷಿಯನ್, ಸರ್ಬಿಯನ್ ಮತ್ತು ವಿವಿಧ ಮುಸ್ಲಿಮ್ ಸೈನ್ಯಗಳಿಗೆ ಸಹೋದರರು ತಮ್ಮ ತಾಟಸ್ಥ್ಯವನ್ನು ವಿವರಿಸಬೇಕಾಯಿತು. ಅವರು ಸಹಿಸಿಕೊಳ್ಳಬೇಕಾಗಿದ್ದ ವಿಷಯಗಳು ಹೇರಳವಾಗಿದ್ದವು—ಬಂಧನ, ಹೊಡೆತಗಳು, ಹಸಿವು, ಮರಣಾಪಾಯ. ಆದರೂ ಅವರೆಲ್ಲರೂ ನಂಬಿಗಸ್ತರಾಗಿ ಉಳಿದರು ಮತ್ತು ಅವರಿಗೆ ತಮ್ಮ ಚಟುವಟಿಕೆಗಳ ಮೇಲೆ ಯೆಹೋವನ ಆಶೀರ್ವಾದವನ್ನು ನೋಡುವ ವಿಶೇಷವಾದ ಸುಯೋಗವಿದೆ.”
ಈ ಕಷ್ಟದೆಸೆಗಳ ಹೊರತೂ, ವೆಲಿಕಾ ಕ್ಲಾಡುಶಾ ಮತ್ತು ಹತ್ತಿರದ ಬೀಹಾಚ್ನಲ್ಲಿರುವ ಯೆಹೋವನ ಸಾಕ್ಷಿಗಳು, ದೇವರ ಸಾಂತ್ವನದ ಸಂದೇಶದಲ್ಲಿ ತಮ್ಮ ನೆರೆಯವರೊಂದಿಗೆ ಹುರುಪಿನಿಂದ ಭಾಗಿಗಳಾಗುವಾಗ, ಅಭಿವೃದ್ಧಿಗಳನ್ನು ಸವಿಯುತ್ತ ಮುಂದುವರಿಯುತ್ತಾರೆ. ಈ ಎರಡು ಸ್ಥಳಗಳ ಒಟ್ಟು 26 ರಾಜ್ಯ ಪ್ರಚಾರಕರು, 39 ಗೃಹ ಬೈಬಲ್ ಅಭ್ಯಾಸಗಳನ್ನು ನಡೆಸುತ್ತಿದ್ದಾರೆ!