“ದೇವರ ಪರ್ವತ”ವಿರುವ ದೇಶದಲ್ಲಿ ಒಂದು “ಸಾಕ್ಷಿಕುಪ್ಪೆ”
ಭೂಖಂಡದ ಒಂದು ನಕ್ಷೆಯಲ್ಲಿ ನೀವು ಪಶ್ಚಿಮ ಆಫ್ರಿಕದ ಕಡಲಕರೆಯನ್ನು ಅನುಸರಿಸಿ, ಪೂರ್ವದ ಕಡೆಗೆ ಗಿನಿಯ ಕೊಲ್ಲಿಯ ಉದ್ದಕ್ಕೂ ಸಾಗುವುದಾದರೆ, ಕಡಲತೀರವು ದಕ್ಷಿಣದ ಕಡೆಗೆ ತಿರುಗುವ ಬಿಂದುವಿನಲ್ಲಿ ನೀವು ಕ್ಯಾಮರೂನ್ ಅನ್ನು ಕಂಡುಕೊಳ್ಳುವಿರಿ. ಕಡಲತೀರವನ್ನು ಅನುಸರಿಸಿ ನೀವು ದಕ್ಷಿಣದ ಕಡೆಗೆ ಸಾಗುವುದನ್ನು ಮುಂದುವರಿಸಿದರೆ, ಕಪ್ಪು ಮರಳಿನ ಕಡಲದಂಡೆಗಳ ಒಂದು ವಿಶಾಲವಾದ ವ್ಯಾಪ್ತಿಗೆ ನೀವು ಬರುವಿರಿ. ಕಪ್ಪು ಮರಳು ಕ್ಯಾಮರೂನ್ ಪರ್ವತದ ಜ್ವಾಲಾಮುಖಿಯ ಚಟುವಟಿಕೆಗಳ ಪರಿಣಾಮವಾಗಿದೆ.
ಈ ಶಂಕುವಿನಾಕಾರದ, 4,070 ಮೀಟರ್ ಪರ್ವತ ಶಿಖರವು ಪೂರ್ತಿಯಾಗಿ ಆ ಕ್ಷೇತ್ರದಲ್ಲಿ ಪ್ರಧಾನವಾಗಿರುತ್ತದೆ. ಅಸ್ತಮಿಸುತ್ತಿರುವ ಸೂರ್ಯನು ಕ್ಯಾಮರೂನ್ ಪರ್ವತದ ಇಳಿಜಾರುಗಳನ್ನು ಬೆಳಕಿನಲ್ಲಿ ಮುಳುಗಿಸುವಾಗ, ಅದು ಉಜ್ವಲವಾದ ಬಣ್ಣ—ಧೂಮ್ರ, ಕಿತ್ತಿಳೆಬಣ್ಣ, ಹೊಂಬಣ್ಣ, ಮತ್ತು ಕಡುಗೆಂಪು—ಗಳ ಒಂದು ಪ್ರೇಕ್ಷಣೀಯ ಪ್ರದರ್ಶನವನ್ನು ನೀಡುತ್ತದೆ. ಸಮುದ್ರ ಮತ್ತು ಹತ್ತಿರದಲ್ಲಿರುವ ಜೌಗು ಪ್ರದೇಶಗಳು—ಭೂಮಿಯಿಂದ ಆಕಾಶವನ್ನು ಪ್ರತ್ಯೇಕಿಸುವುದನ್ನು ಬಹುಮಟ್ಟಿಗೆ ಅಸಾಧ್ಯವಾದದ್ದನ್ನಾಗಿ ಮಾಡುತ್ತಾ—ಈ ಎಲ್ಲ ಛಾಯೆಗಳನ್ನು ಒಂದು ಕನ್ನಡಿಯಂತೆ ಪ್ರತಿಬಿಂಬಿಸುತ್ತವೆ. ಈ ಪ್ರಾಂತದ ಚೇತನವಾದಿ ಪಂಗಡಗಳು ಈ ಪರ್ವತವನ್ನು ಮಾಂಗೊ ಮಾ ಲೊಬಾ ಎಂದು ಏಕೆ ಹೆಸರಿಸಿದ್ದಾರೆಂದು ತಿಳಿದುಕೊಳ್ಳುವುದು ಸುಲಭ. ಇದನ್ನು “ದೇವತೆಗಳ ರಥ” ಅಥವಾ ಹೆಚ್ಚು ಸಾಮಾನ್ಯವಾಗಿ “ದೇವರ ಪರ್ವತ” ಎಂಬುದಾಗಿ ಭಾಷಾಂತರಿಸಲಾಗಿದೆ.
ದಕ್ಷಿಣದಲ್ಲಿ ಇನ್ನೂ ಮುಂದಕ್ಕೆ, ತೆಂಗಿನ ಮರಗಳಿಂದ ಸಾಲುಗಟ್ಟಿದ ಅನೇಕ ಕಿಲೊಮೀಟರುಗಳ ಬಿಳಿ ಮರಳಿನ ದಡಗಳಿವೆ. ವರ್ಣನಾತ್ಮಕ ಕಡಲಕರೆಯ ಹೊರತು, ದೇಶದ ಹೆಚ್ಚಿನ ಭಾಗವು ದಟ್ಟವಾದ ಈಕ್ವಟೋರಿಯಲ್ ಕಾಡಿನಿಂದ ಆವರಿಸಲ್ಪಟ್ಟಿದೆ, ಇದು ಎಲ್ಲೆಯಲ್ಲಿ ಕಾಂಗೊ ಮತ್ತು ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನ ವರೆಗೆ ಮತ್ತು ಉತ್ತರದಲ್ಲಿ ನೈಜೀರಿಯ ಹಾಗೂ ಉಪ ಸಹಾರದ ಚ್ಯಾಡ್ ವರೆಗೂ ವಿಸ್ತೃತವಾಗಿದೆ. ದೇಶದ ಪಶ್ಚಿಮ ಭಾಗವು ಪರ್ವತಮಯವಾಗಿದ್ದು, ಪ್ರಯಾಣಿಕನಿಗೆ ಯೂರೋಪಿನ ಭಾಗಗಳ ಜ್ಞಾಪಕ ಹುಟ್ಟಿಸುತ್ತದೆ. ಹಾಗಿದ್ದರೂ, ಬಿಸಿಯಾದ ವಾತಾವರಣವು, ನೀವು ಸಮಭಾಜಕ ವೃತ್ತಕ್ಕೆ ಬಹಳ ಹತ್ತಿರವಾಗಿದ್ದೀರಿ ಎಂಬುದನ್ನು ಮರೆತುಬಿಡುವಂತೆ ಅನುಮತಿಸಲಾರದು. ಕ್ಯಾಮರೂನನ್ನು ಚಿಕ್ಕ ಪ್ರಮಾಣದಲ್ಲಿ ಆಫ್ರಿಕದ ಪಡಿಯಚ್ಚಿನೋಪಾದಿ ವರ್ಣಿಸುವಂತೆ, ಅದರ ಗ್ರಾಮಪ್ರದೇಶದ ವಿವಿಧತೆಯು ಅನೇಕ ಪ್ರವಾಸಿ ಮಾರ್ಗದರ್ಶಕರನ್ನು ನಡೆಸುತ್ತದೆ. ಈ ಅಭಿಪ್ರಾಯವು ಕುಲಸಂಬಂಧವಾದ ವಿಭಿನ್ನ ಗುಂಪುಗಳು ಮತ್ತು 220ಕ್ಕಿಂತಲೂ ಹೆಚ್ಚಾಗಿರುವ ದಾಖಲಿತ ಭಾಷೆಗಳು ಮತ್ತು ಉಪಭಾಷೆಗಳಿಂದ ಬಲಗೊಳಿಸಲ್ಪಟ್ಟಿದೆ.
ನೀವು ಕ್ಯಾಮರೂನನ್ನು ಸಂದರ್ಶಿಸುವಲ್ಲಿ, ಡೂಏಲಾದ ರೇವು ಪಟ್ಟಣದಲ್ಲಿನ ದೊಡ್ಡ ಹೋಟೆಲುಗಳಲ್ಲೊಂದರಲ್ಲಿ ಅಥವಾ ರಾಜಧಾನಿ ನಗರವಾದ ಯೋಅಂಡಿಯಲ್ಲಿ ತಂಗಬಹುದು. ಆದರೆ ಜನರ—ವಿಶೇಷವಾಗಿ ಯಾರು “ದೇವರ ಪರ್ವತ”ವಿರುವ ಈ ದೇಶದ ಉದ್ದಕ್ಕೂ ಒಂದು “ಸಾಕ್ಷಿಗುಪ್ಪೆ”ಯನ್ನು ಕಟ್ಟುವುದರಲ್ಲಿ ಕಾರ್ಯಮಗ್ನರಾಗಿ ಪರಿಣಮಿಸಿದ್ದಾರೊ, ಆ 24,000ಕ್ಕಿಂತಲೂ ಹೆಚ್ಚಿನ ಯೆಹೋವನ ಸಾಕ್ಷಿಗಳ—ಜೀವಿತಗಳ ಕುರಿತು ಏನನ್ನೊ ತಿಳಿದುಕೊಳ್ಳುವುದರ ಅವಕಾಶವನ್ನು ನೀವು ಕಳೆದುಕೊಳ್ಳಸಾಧ್ಯವಿದೆ.a ಅವರಲ್ಲಿ ಕೆಲವರನ್ನು ಸಂಧಿಸಲು ದೇಶದ ಒಂದು ಭಾಗದಿಂದ ಇನ್ನೊಂದು ಭಾಗದ ವರೆಗೆ ಒಂದು ಸಂಚಾರವನ್ನು ಏಕೆ ಕೈಕೊಳ್ಳಬಾರದು? ಈ ಪಶ್ಚಿಮ ಆಫ್ರಿಕನ್ ದೇಶದ ನಿಮ್ಮ ಪರಿಶೋಧನೆಯು ಖಂಡಿತವಾಗಿಯೂ ಹೇರಳವಾಗಿ ಬಹುಮಾನಿಸಲ್ಪಡುವುದು.
ತೋಡುದೋಣಿ, ಪೊದೆ ಟ್ಯಾಕ್ಸಿ, ಅಥವಾ ಸೈಕಲ್ ಮೂಲಕವೊ?
ಕ್ಯಾಮರೂನ್ನಲ್ಲಿರುವ ಅತಿ ನಿಡಿದಾದ ನದಿ ಸಾನಗ, ಎಲ್ಲಿ ಮಹಾಸಾಗರವನ್ನು ಮುಟ್ಟುತ್ತದೊ ಅಲ್ಲೊಂದು ದೊಡ್ಡ ಮೆಕ್ಕಲುಭೂಮಿಯನ್ನು ರಚಿಸುತ್ತದೆ. ಈ ವಿಶಾಲವಾದ ಪ್ರಾಂತದ ಸಕಲ ನಿವಾಸಿಗಳನ್ನು ತಲಪಲು, ಯೆಹೋವನ ಸಾಕ್ಷಿಗಳು ಅನೇಕ ವೇಳೆ ತೋಡುದೋಣಿಗಳಲ್ಲಿ ಪ್ರಯಾಣಿಸಬೇಕಾಗುತ್ತದೆ. ಎಮ್ಬಿಆಕೊದಲ್ಲಿರುವ ಒಂಬತ್ತು ಮಂದಿ ರಾಜ್ಯ ಪ್ರಚಾರಕರ ಈ ಸಣ್ಣ ಗುಂಪು ಅದನ್ನೇ ಮಾಡುತ್ತದೆ. ಅವರಲ್ಲಿ ಇಬ್ಬರು, 25 ಕಿಲೊಮೀಟರುಗಳಷ್ಟು ದೂರದಲ್ಲಿರುವ ಯೊಯೊ ಎಂಬ ಹಳ್ಳಿಯಲ್ಲಿ ಜೀವಿಸುತ್ತಾರೆ. ಎಮ್ಬಿಆಕೊ ಅನ್ನು ತಲಪುವುದು ಅವರಿಂದ ಕಸುವುಳ್ಳ ಹುಟ್ಟುಹಾಕುವಿಕೆಯನ್ನು ಕೇಳಿಕೊಳ್ಳುತ್ತದೆ, ಆದರೂ ಅವರು ಕ್ರೈಸ್ತ ಕೂಟಗಳಲ್ಲಿ ಯಾವಾಗಲೂ ಉಪಸ್ಥಿತರಿರುತ್ತಾರೆ. ಈ ಗುಂಪನ್ನು ಸಂದರ್ಶಿಸುತ್ತಿರುವಾಗ, ಒಬ್ಬ ಸಂಚರಣಾ ಮೇಲ್ವಿಚಾರಕನು ಜೆಹೋವಾಸ್ ವಿಟ್ನಸೆಸ್—ದಿ ಆರ್ಗನೈಸೇಷನ್ ಬಿಹೈಂಡ್ ದ ನೇಮ್ ಎಂಬ ವಿಡಿಯೋವನ್ನು ತೋರಿಸುವ ಸೂಚನೆಯನ್ನು ನೀಡಿದನು. ಆದರೆ ಅದನ್ನು ನೆರವೇರಿಸುವುದು ಸುಲಭವಲ್ಲ. ಇಂತಹ ಬಹುದೂರದ ಒಂದು ಹಳ್ಳಿಯಲ್ಲಿ, ಅವನೊಂದು ವಿಡಿಯೋಕ್ಯಾಸೆಟ್ ರೆಕಾರ್ಡರ್, ಒಂದು ಟೆಲಿವಿಷನ್ ಉಪಕರಣ, ಹಾಗೂ ಅವುಗಳನ್ನು ನಡೆಸಲು ಬೇಕಾದ ವಿದ್ಯುಚ್ಛಕ್ತಿಯನ್ನು ಎಲ್ಲಿ ಕಂಡುಕೊಂಡಾನು?
ಸಂದರ್ಶನದ ವಾರದಲ್ಲಿ, ಕೆಲವು ಪ್ರಚಾರಕರು ಸ್ಥಳಿಕ ಚರ್ಚ್ವೊಂದರ ಪಾಸ್ಟರ್ನನ್ನು ಭೇಟಿಯಾದರು. ಅವರಿಗೆ ಆಶ್ಚರ್ಯವಾಗುವಂತೆ, ಪಾಸ್ಟರನು ಅವರನ್ನು ಆದರದಿಂದ ಸ್ವಾಗತಿಸಿದನು, ಮತ್ತು ಅವನೊಂದಿಗೆ ಒಂದು ಸ್ವಾರಸ್ಯಕರವಾದ ಬೈಬಲ್ ಚರ್ಚೆಯನ್ನು ಅವರು ನಡೆಸಿದರು. ಪಾಸ್ಟರನು ಒಂದು ವಿಸಿಆರ್ ಅನ್ನು ಮಾತ್ರವಲ್ಲ ವಿದ್ಯುತ್ತಿನ ಉತ್ಪಾದಕ ಸಲಕರಣೆಯನ್ನೂ ಹೊಂದಿರುವುದನ್ನು ಗಮನಿಸಿ, ಅವನ ಸಜ್ಜನ್ನು ಅವರು ಎರವಲಾಗಿ ಪಡೆಯಸಾಧ್ಯವಿತ್ತೊ ಎಂದು ಕೇಳಲು ಸಹೋದರರು ಧೈರ್ಯ ತೆಗೆದುಕೊಂಡರು. ಈ ಮುಂಚೆ, ಬೈಬಲ್ ಚರ್ಚೆಯನ್ನು ಆನಂದಿಸಿದ್ದರಿಂದ, ಸಹಾಯ ಮಾಡಲು ಪಾಸ್ಟರನು ಒಪ್ಪಿಕೊಂಡನು. ಶನಿವಾರ ಸಂಜೆ ಪ್ರದರ್ಶನಕ್ಕೆ 102 ಮಂದಿ—ಪಾಸ್ಟರ್ ಮತ್ತು ಅವನ ಚರ್ಚಿನ ಸದಸ್ಯರಲ್ಲಿ ಹೆಚ್ಚಿನವರನ್ನು ಸೇರಿಸಿ—ಬಂದರು. ಯೊಯೊದಲ್ಲಿದ್ದ ಇಬ್ಬರು ಸಾಕ್ಷಿಗಳು ಅನೇಕ ಆಸಕ್ತ ಜನರನ್ನು ಎರಡು ದೋಣಿಗಳಲ್ಲಿ ಕರೆದುಕೊಂಡು ಬಂದರು. ಏರುತ್ತಿರುವ ಭರತದ ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಹುಟ್ಟುಹಾಕುವುದನ್ನು ಅವರು ಬಹುಕಷ್ಟಕರವೆಂದು ಎಣಿಸಲಿಲ್ಲ. ವಿಡಿಯೋವನ್ನು ನೋಡಿದ ಬಳಿಕ, ಅವರು ಗಾಢವಾಗಿ ಪ್ರೇರಿಸಲ್ಪಟ್ಟರು ಮತ್ತು ಉತ್ತೇಜಿಸಲ್ಪಟ್ಟರು, ಹಾಗೂ ಯಾವುದರ ಗುರಿಯು ಯೆಹೋವನನ್ನು ಘನಪಡಿಸುವುದಾಗಿದೆಯೊ ಅಂತಹ ಒಂದು ಮಹಾ ಸಂಸ್ಥೆಗೆ ಸೇರಿರಲು ಅವರು ಹೆಮ್ಮೆಪಟ್ಟರು.
ತೋಡುದೋಣಿಗಳು ಹೋಗಲು ಸಾಧ್ಯವಿರದ ಸ್ಥಳಗಳಿಗೆ, ಒಬ್ಬನು ಪೊದೆ ಟ್ಯಾಕ್ಸಿಯನ್ನು ಉಪಯೋಗಿಸಬಲ್ಲನು. ಪ್ರಯಾಣಿಕರಿಗಾಗಿ ಈ ಟ್ಯಾಕ್ಸಿಗಳು ಕಾಯುವ ನಿಲ್ದಾಣ ಕ್ಷೇತ್ರಗಳು ಸದಾ ಚಟುವಟಿಕೆಯಿಂದ ತುಂಬಿರುತ್ತವೆ. ತಂಪು ನೀರಿನ ಮಾರಾಟಗಾರರು, ಬಾಳೆಯ ಹಣ್ಣಿನ ಮಾರಾಟಗಾರರು, ಮತ್ತು ಕೂಲಿ ಹುಡುಗರ ನಡುವೆ, ಪೂರ್ತಿಯಾಗಿ ಗಲಿಬಿಲಿಗೊಳ್ಳುವುದು ಸುಲಭ. ಕೂಲಿ ಹುಡುಗರ ಕೆಲಸವು, ಪ್ರಯಾಣಿಕರನ್ನು ಕಾಯುತ್ತಿರುವ ಪೊದೆ ಟ್ಯಾಕ್ಸಿಗಳೊಳಗೆ ಹೋಗುವಂತೆ ಮಾಡುವುದಾಗಿದೆ, ಈ ಎಲ್ಲ ಟ್ಯಾಕ್ಸಿಗಳು ಅವರಿಗನುಸಾರ “ಹೊರಡಲು ಸಿದ್ಧವಾಗಿವೆ.” ಹಾಗಿದ್ದರೂ, “ಸಿದ್ಧ” ಎಂಬುದನ್ನು ಗಂಭೀರವಾಗಿ ಅರ್ಥಮಾಡಿಕೊಳ್ಳಬಾರದು. ಪ್ರಯಾಣಿಕರು ಗಂಟೆಗಳನ್ನು, ಕೆಲವೊಮ್ಮೆ ದಿನಗಳನ್ನು ಸಹ ಕಾಯುತ್ತಾ ಕಳೆಯಬೇಕು. ಒಮ್ಮೆ ಎಲ್ಲ ಪ್ರಯಾಣಿಕರನ್ನು ಒಳಗೆ ತುರುಕಿ, ಚಾಲಕನು ಸಾಮಾನು, ಸರಕಿನ ಚೀಲಗಳು ಮತ್ತು ಕೆಲವೊಮ್ಮೆ ಜೀವಂತ ಕೋಳಿ ಮರಿಗಳನ್ನು ಮತ್ತು ಆಡುಗಳನ್ನು ಚಾವಣಿಯ ಚೌಕಟ್ಟಿನಲ್ಲಿ ತುಂಬಿಸಿದ ನಂತರ, ಪೊದೆ ಟ್ಯಾಕ್ಸಿಯು ಉಬ್ಬುಗಳುಳ್ಳ, ದೂಳು ತುಂಬಿದ ಹಾದಿಗಳ ಮೇಲೆ ಚಲಿಸುತ್ತದೆ.
ಒಬ್ಬ ಸಂಚರಣಾ ಶುಶ್ರೂಷಕನು ಈ ರೀತಿಯ ವಾಹನಸೌಕರ್ಯದಿಂದ ಬೇಸತ್ತು, ಸ್ವಾತಂತ್ರ್ಯವನ್ನು ಆಯ್ದುಕೊಂಡನು. ಈಗ ಅವನು ತನ್ನೆಲ್ಲ ಸಂಚಾರಗಳನ್ನು ಸೈಕಲ್ನ ಮೂಲಕ ಮಾಡುತ್ತಾನೆ. ಅವನು ಹೇಳುವುದು: “ಸಭೆಯಿಂದ ಸಭೆಗೆ ಪ್ರಯಾಣಿಸಲು ನಾನು ಸೈಕಲೊಂದನ್ನು ಉಪಯೋಗಿಸಲು ನಿರ್ಧರಿಸಿದಂದಿನಿಂದ, ಸಂದರ್ಶನಕ್ಕಾಗಿ ನಾನು ಯಾವಾಗಲೂ ಸರಿಯಾದ ಸಮಯಕ್ಕೆ ಬಂದು ಮುಟ್ಟುತ್ತೇನೆ. ಸಂಚಾರವು ಹಲವಾರು ತಾಸುಗಳನ್ನು ತೆಗೆದುಕೊಳ್ಳಬಹುದು ನಿಜ, ಆದರೆ ಪೊದೆ ಟ್ಯಾಕ್ಸಿಗಾಗಿ ಕಾಯುತ್ತಾ ನಾನು ಒಂದೆರಡು ದಿನಗಳನ್ನು ಕಳೆಯಬೇಕಾಗುವುದಿಲ್ಲ. ಮಳೆಗಾಲದಲ್ಲಿ, ಕೆಲವು ರಸ್ತೆಗಳು ನೆರೆಯಿಂದಾಗಿ ಬಹುಮಟ್ಟಿಗೆ ಸಂಪೂರ್ಣವಾಗಿ ಕಣ್ಮರೆಯಾಗುತ್ತವೆ. ಮಣ್ಣು ಹಾಗೂ ನೀರಿನ ಈ ವಿಸ್ತಾರವಾದ ಪ್ರದೇಶಗಳನ್ನು ದಾಟಲು ನೀವು ನಿಮ್ಮ ಪಾದರಕ್ಷೆಗಳನ್ನು ತೆಗೆದುಬಿಡಬೇಕು. ಒಂದು ದಿನ ನನ್ನ ಪಾದರಕ್ಷೆಗಳಲ್ಲೊಂದು ಹಳ್ಳದಲ್ಲಿ ಬಿದ್ದು, ಅನೇಕ ವಾರಗಳ ವರೆಗೆ—ಸಾಕ್ಷಿಗಳಲ್ಲಿ ಒಬ್ಬರ ಮಗಳು ಮೀನು ಹಿಡಿಯುವಾಗ, ಆಕಸ್ಮಿಕವಾಗಿ ಅದನ್ನು ಹಿಡಿಯುವ ತನಕ—ಮತ್ತೆ ವಶಕ್ಕೆ ಬರಲಿಲ್ಲ! ಪಾದರಕ್ಷೆಗಳ ಈ ಜೋಡಿಯನ್ನು ಪುನಃ ಮೆಟ್ಟಿಕೊಳ್ಳಲು—ಅವುಗಳಲ್ಲೊಂದು ಮೀನಿನೊಂದಿಗೆ ಸ್ವಲ್ಪ ಸಮಯವನ್ನು ಕಳೆದ ಬಳಿಕ—ಶಕ್ತನಾಗಿರುವುದಕ್ಕೆ ನಾನು ಸಂತೋಷಿಸುತ್ತೇನೆ. ಯೆಹೋವನ ಸಾಕ್ಷಿಗಳು ಈ ಮೊದಲು ಎಂದೂ ಸಾರಿರದ ಕ್ಷೇತ್ರಗಳಿಗೆ ನಾನು ಆಗಾಗ ಹೋಗುತ್ತೇನೆ. ನನ್ನಲ್ಲಿ ಏನಿದೆ ಎಂದು ಈ ಹಳ್ಳಿಗರು ಯಾವಾಗಲೂ ನನ್ನನ್ನು ಕೇಳುತ್ತಾರೆ. ಆದುದರಿಂದ ನಾನು ಪತ್ರಿಕೆಗಳು ಹಾಗೂ ಬ್ರೋಷರುಗಳನ್ನು ನನ್ನೊಂದಿಗೆ ಇಟ್ಟುಕೊಳ್ಳುತ್ತೇನೆ. ಪ್ರತಿಸಲ ನಾನು ನಿಂತಾಗ, ಈ ಬೈಬಲಾಧಾರಿತ ಪ್ರಕಾಶನಗಳನ್ನು ಮತ್ತು ಒಂದು ಸಂಕ್ಷಿಪ್ತ ಸಾಕ್ಷಿಯನ್ನು ನೀಡುತ್ತೇನೆ. ಯೆಹೋವನು ಸತ್ಯದ ಈ ಬೀಜಗಳನ್ನು ಬೆಳೆಯುವಂತೆ ಮಾಡುವನೆಂದು ನಾನು ನಂಬುತ್ತೇನೆ.”
ಅತಿ ಒಳಗಿನ ಕ್ಷೇತ್ರದಲ್ಲಿ
ಯೆಹೋವನ ಸಾಕ್ಷಿಗಳು ರಾಜ್ಯದ ಸುವಾರ್ತೆಯನ್ನು ಕ್ಯಾಮರೂನ್ನ ಮಧ್ಯದಲ್ಲಿರುವ ಅತಿ ಒಳಗಿನ, ಕಾಡುಗಳ ಆಳದಲ್ಲಿ ಅಡಗಿಕೊಂಡಿರುವ ಹಳ್ಳಿಗಳಲ್ಲಿನ ಇತರರೊಂದಿಗೂ ಹಂಚಿಕೊಳ್ಳಲು ಪ್ರಯಾಸಪಡುತ್ತಾರೆ. ಇದು ಬಹಳಷ್ಟು ಪ್ರಯತ್ನವನ್ನು ಕೇಳಿಕೊಳ್ಳುತ್ತದೆ, ಆದರೆ ಫಲಿತಾಂಶಗಳು ಹೃದಯೋಲ್ಲಾಸಕರವಾಗಿವೆ.
ಪೂರ್ಣ ಸಮಯದ ಶುಶ್ರೂಷಕಳಾದ ಮಾರಿ, ಆರ್ಲೆಟ್ ಎಂಬ ಯುವತಿಯೊಂದಿಗೆ ಒಂದು ಬೈಬಲಧ್ಯಯನವನ್ನು ಆರಂಭಿಸಿದಳು. ಮೊದಲನೆಯ ಅಧ್ಯಯನದ ಕೊನೆಯಲ್ಲಿ, ಆಫ್ರಿಕದ ಈ ಭಾಗದಲ್ಲಿನ ರೂಢಿಯಾಗಿರುವಂತೆ, ಆಕೆಯನ್ನು ಬಾಗಲಿನ ವರೆಗೆ ಬಿಡುವಳೊ ಎಂದು ಮಾರಿ ಆರ್ಲೆಟಳನ್ನು ಕೇಳಿದಳು. ಆದರೆ ತನ್ನ ಪಾದಗಳಲ್ಲಿನ ವೇದನೆಯ ಕಾರಣ ತನಗೆ ನಡೆಯಲೂ ಸಾಧ್ಯವಿಲ್ಲವೆಂದು ಆ ಯುವತಿಯು ವಿವರಿಸಿದಳು. ಆರ್ಲೆಟಳ ಪಾದಗಳು, ಯಾವ ಹೆಣ್ಣು ಕೀಟಗಳು ಮಾಂಸದೊಳಗೆ ಅವಿತುಕೊಂಡು, ಒಳ ಕುರುಗಳನ್ನು ಉಂಟುಮಾಡುತ್ತವೊ ಅಂತಹ ಒಂದು ರೀತಿಯ ಕೀಟದಿಂದ ಸೋಂಕಿತಗೊಂಡಿದ್ದವು. ಮಾರಿ ಧೈರ್ಯದಿಂದ ಕೀಟಗಳನ್ನು ಒಂದೊಂದಾಗಿ ತೆಗೆದಳು. ತದನಂತರ, ರಾತ್ರಿಯಲ್ಲಿ ಈ ಯುವತಿಯು ದೆವ್ವಗಳಿಂದ ಹಿಂಸಿಸಲ್ಪಡುತ್ತಾಳೆಂದೂ ಆಕೆ ತಿಳಿದುಕೊಂಡಳು. ಪ್ರಾರ್ಥನೆಯಲ್ಲಿ ಗಮನಾರ್ಹವಾಗಿ ಯೆಹೋವನ ಹೆಸರನ್ನು ಗಟ್ಟಿಯಾಗಿ ಹೇಳುವ ಮೂಲಕ ಒಬ್ಬನ ಭರವಸೆಯನ್ನು ಆತನಲ್ಲಿ ಹೇಗೆ ಇರಿಸುವುದೆಂದು ಮಾರಿ ತಾಳ್ಮೆಯಿಂದ ವಿವರಿಸಿದಳು.—ಜ್ಞಾನೋಕ್ತಿ 18:10.
ಆರ್ಲೆಟ್ ತೀವ್ರವಾದ ಪ್ರಗತಿಯನ್ನು ಮಾಡಿದಳು. ಆರಂಭದಲ್ಲಿ, ಆಕೆ ಶಾರೀರಿಕವಾಗಿಯೂ ಬೌದ್ಧಿಕವಾಗಿಯೂ ಮಾಡುತ್ತಿದ್ದ ಎದ್ದುಕಾಣುವ ಪ್ರಗತಿಯಿಂದಾಗಿ, ಆಕೆಯ ಕುಟುಂಬವು ಅಧ್ಯಯನದಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ. ಆದರೆ ಆಕೆ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಲು ಬಯಸುತ್ತಾಳೆಂದು ಅವರು ಗ್ರಹಿಸಿದಾಗ, ಅಧ್ಯಯನವನ್ನು ಮುಂದುವರಿಸುವುದರಿಂದ ಅವರು ಆಕೆಯನ್ನು ತಡೆದರು. ಮೂರು ವಾರಗಳ ನಂತರ, ತನ್ನ ಮಗಳು ಎಷ್ಟು ಸಂಕಟಪಡುತ್ತಿದ್ದಳೆಂದು ಗ್ರಹಿಸಿದ ಆರ್ಲೆಟಳ ತಾಯಿಯು, ಮಾರಿಯನ್ನು ಸಂಪರ್ಕಿಸಿ, ಅಧ್ಯಯನವನ್ನು ಪುನಃ ಆರಂಭಿಸುವಂತೆ ಕೇಳಿಕೊಂಡಳು.
ಒಂದು ಸರ್ಕಿಟ್ ಸಮ್ಮೇಳನವನ್ನು ಹಾಜರಾಗುವ ಸಮಯವು ಬಂದಾಗ, ಎರಡೂ ದಿವಸಗಳಂದು ಆರ್ಲೆಟಳನ್ನು ಕರೆದುಕೊಂಡು ಹೋಗಲು ಮಾರಿ ಒಬ್ಬ ಟ್ಯಾಕ್ಸಿ ಚಾಲಕನಿಗೆ ಹಣವನ್ನು ನೀಡಿದಳು. ಚಾಲಕನಾದರೊ, ರಸ್ತೆಗೆ ನಡೆಸುವ ಹಾದಿಯು ದುರ್ಗಮವಾಗಿತ್ತೆಂದು ನಿರ್ಧರಿಸಿ, ಆರ್ಲೆಟಳ ಮನೆಯ ವರೆಗೆ ಹೋಗಲು ನಿರಾಕರಿಸಿದನು. ಆದುದರಿಂದ ಮಾರಿ ಆ ಹುಡುಗಿಯನ್ನು ರಸ್ತೆಯ ವರೆಗೆ ಹೇಗೋ ಕರೆದುಕೊಂಡು ಬಂದಳು. ಯೆಹೋವನು ಖಂಡಿತವಾಗಿಯೂ ಈ ಪ್ರಯತ್ನಗಳನ್ನು ಆಶೀರ್ವದಿಸಿದನು. ಇಂದು ಆರ್ಲೆಟ್ ಎಲ್ಲ ಸಭಾ ಕೂಟಗಳಿಗೆ ಹಾಜರಾಗುತ್ತಾಳೆ. ಇದನ್ನು ಮಾಡುವಂತೆ ಆಕೆಗೆ ಸಹಾಯ ಮಾಡಲು, ಮಾರಿ ದಣಿಯದೆ ಆಕೆಯನ್ನು ಕರೆದುಕೊಂಡು ಹೋಗಲು ಬರುತ್ತಾಳೆ. ಒಟ್ಟಿಗೆ ಅವರು ಒಂದು ದಿಕ್ಕಿನಲ್ಲಿ 75 ನಿಮಿಷದ ನಡಿಗೆಯನ್ನು ಪೂರ್ಣಗೊಳಿಸುತ್ತಾರೆ. ರವಿವಾರದ ಕೂಟವು ಬೆಳಗ್ಗೆ 8:30ಕ್ಕೆ ಆರಂಭಿಸುವುದರಿಂದ, ಮಾರಿ 6:30ಕ್ಕೆ ಮನೆಯನ್ನು ಬಿಡಬೇಕಾಗುತ್ತದೆ; ಆದರೂ ಅವರು ಹೇಗೋ ಸರಿಯಾದ ಸಮಯಕ್ಕೆ ಬಂದು ಮುಟ್ಟುತ್ತಾರೆ. ಬೇಗನೆ ನೀರಿನ ದೀಕ್ಷಾಸ್ನಾನದ ಮೂಲಕ ತನ್ನ ಸಮರ್ಪಣೆಯನ್ನು ಸಂಕೇತಿಸಿಕೊಳ್ಳಲು ಆರ್ಲೆಟ್ ನಿರೀಕ್ಷಿಸುತ್ತಾಳೆ. ಮಾರಿ ಹೇಳುವುದು: “ಆಕೆ ಅಧ್ಯಯನ ಮಾಡಲು ಆರಂಭಿಸಿದಾಗ ಅವಳನ್ನು ನೋಡದಿದ್ದ ಯಾವನೇ ವ್ಯಕ್ತಿಯು, ಆಕೆ ಎಷ್ಟು ಬದಲಾಗಿದ್ದಾಳೆ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆಕೆಯನ್ನು ಆಶೀರ್ವದಿಸಿದ ರೀತಿಗಾಗಿ ನಾನು ಯೆಹೋವನಿಗೆ ಬಹಳಷ್ಟು ಉಪಕಾರ ಸಲ್ಲಿಸುತ್ತೇನೆ.” ಮಾರಿ ಖಂಡಿತವಾಗಿಯೂ ಸ್ವತ್ಯಾಗದ ಪ್ರೀತಿಯ ಒಂದು ಅತ್ಯುತ್ತಮ ಮಾದರಿಯಾಗಿದ್ದಾಳೆ.
ಉತ್ತರದಲ್ಲಿ ಬಹುದೂರಕ್ಕೆ
ಉತ್ತರ ಕ್ಯಾಮರೂನ್ ವ್ಯತ್ಯಾಸಗಳು ಹಾಗೂ ಆಶ್ಚರ್ಯಗಳಿಂದ ತುಂಬಿದೆ. ಮಳೆಗಾಲದಲ್ಲಿ, ಅದೊಂದು ದೊಡ್ಡ, ಹುಲುಸಾದ ತೋಟವಾಗಿ ರೂಪಾಂತರಗೊಳ್ಳುತ್ತದೆ. ಆದರೆ ಸುಡುವ ಸೂರ್ಯನು ತನ್ನ ಸರದಿಯನ್ನು ತೆಗೆದುಕೊಳ್ಳುವಾಗ, ಹುಲ್ಲು ಬಾಡಿಹೋಗುತ್ತದೆ. ಮಧ್ಯಾಹ್ನದಲ್ಲಿ, ಸೂರ್ಯನು ತನ್ನ ಉತ್ತುಂಗದಲ್ಲಿರುವಾಗ, ಮತ್ತು ನೆರಳನ್ನು ಕಂಡುಕೊಳ್ಳುವುದು ಕಷ್ಟಕರವಾಗಿರುವಾಗ, ಕುರಿಗಳು ಮನೆಗಳ ಕೆಂಪು ಮಣ್ಣಿನ ಗೋಡೆಗಳಿಗೆ ತಮ್ಮನ್ನು ಒತ್ತಿಕೊಳ್ಳುವವು. ಮರಳು ಮತ್ತು ಒಣ ಹುಲ್ಲಿನ ನಡುವೆ, ಹಸುರಿನ ಏಕಮಾತ್ರ ಗುರುತುಗಳು ಬೋಆಬಾಬ್ ಮರಗಳ ಕೆಲವು ಎಲೆಗಳಾಗಿವೆ. ಇವು ಈಕ್ವಟೋರಿಯಲ್ ಕಾಡಿನಲ್ಲಿರುವ ಅದೇ ಕುಟುಂಬದ ಬೇರೆ ಮರಗಳಷ್ಟು ದೊಡ್ಡವುಗಳಾಗಿಲ್ಲವಾದರೂ, ಅವುಗಳಷ್ಟೇ ಸಹಿಷ್ಣುವಾದವುಗಳಾಗಿವೆ. ಕಠೋರವಾದ ಪರಿಸರವನ್ನು ತಾಳಿಕೊಳ್ಳಲಿಕ್ಕಾಗಿರುವ ಅವುಗಳ ಸಾಮರ್ಥ್ಯವು, ಸತ್ಯದ ಬೆಳಕನ್ನು ಪ್ರಜ್ವಲಿಸುವಂತೆ ಮಾಡುವ ಸಲುವಾಗಿ ಈ ಪ್ರಾಂತದಲ್ಲಿ ಜೀವಿಸಲು ಹೋಗಿರುವ ಕೆಲವು ಸಾಕ್ಷಿಗಳ ಹುರುಪು ಮತ್ತು ಧೈರ್ಯವನ್ನು ಚೆನ್ನಾಗಿ ದೃಷ್ಟಾಂತಿಸುತ್ತದೆ.
ಈ ಪ್ರದೇಶದಲ್ಲಿರುವ ಸಭೆಗಳಲ್ಲಿ ಕೆಲವು ಸಭೆಗಳು, 500ರಿಂದ 800 ಕಿಲೊಮೀಟರುಗಳ ಅಂತರದಿಂದ ಪ್ರತ್ಯೇಕಿಸಲ್ಪಟ್ಟಿವೆ, ಮತ್ತು ಪ್ರತ್ಯೇಕತೆಯ ಅನಿಸಿಕೆಯು ಬಹಳ ನೈಜವಾಗಿದೆ. ಆದರೆ ಬಹಳಷ್ಟು ಆಸಕ್ತಿಯು ಇದೆ. ಸಹಾಯ ಮಾಡಲು ಬೇರೆ ಪ್ರದೇಶಗಳಿಂದ ಸಾಕ್ಷಿಗಳು ಇಲ್ಲಿಗೆ ಸ್ಥಳಾಂತರಿಸುತ್ತಾರೆ. ಶುಶ್ರೂಷೆಯಲ್ಲಿ ಪರಿಣಾಮಕಾರಿಯಾಗಿರಲು, ಅವರು ಸ್ಥಳೀಯ ಉಪಭಾಷೆಯಾದ ಫೂಫೂಲ್ಡಾ ಅನ್ನು ಕಲಿಯಬೇಕು.
ಗರೂಅದ ಒಬ್ಬ ಸಾಕ್ಷಿಯು, ಸುಮಾರು 160 ಕಿಲೊಮೀಟರುಗಳಷ್ಟು ದೂರದಲ್ಲಿರುವ ತನ್ನ ಸ್ಥಳೀಯ ಹಳ್ಳಿಯಲ್ಲಿ ಸಾರುತ್ತಾ ಕೆಲವೊಂದು ದಿನಗಳನ್ನು ಕಳೆಯಲು ನಿರ್ಧರಿಸಿದನು. ಒಂದಿಷ್ಟು ಆಸಕ್ತಿಯನ್ನು ಅವನು ಕಂಡುಕೊಂಡನು, ಆದರೆ ವಾಹನಸೌಕರ್ಯದ ಉಚ್ಚ ಬೆಲೆಯು, ಕ್ರಮವಾಗಿ ಹಿಂದಿರುಗುವುದರಿಂದ ಅವನನ್ನು ತಡೆಯಿತು. ಕೆಲವು ವಾರಗಳ ನಂತರ, ಸಾಕ್ಷಿಯು ಆಸಕ್ತ ವ್ಯಕ್ತಿಗಳಲ್ಲಿ ಒಬ್ಬನಿಂದ ಒಂದು ಪತ್ರವನ್ನು ಪಡೆದನು, ಅದರಲ್ಲಿ ಸಾಕ್ಷಿಯು ಬಂದು ಪುನಃ ಸಂದರ್ಶಿಸುವಂತೆ ಅವನು ಬೇಡಿಕೊಂಡಿದ್ದನು. ಪ್ರಯಾಣದ ಖರ್ಚಿಗಾಗಿ ಹಣದ ಕೊರತೆಯು ಇನ್ನೂ ಇದ್ದ ಕಾರಣ, ಅವನು ಹೋಗಲು ಶಕ್ತನಾಗಲಿಲ್ಲ. ಅವನ ಸಂದರ್ಶನಕ್ಕಾಗಿ ಹಳ್ಳಿಯಲ್ಲಿ ಹತ್ತು ಜನರು ಕಾಯುತ್ತಿದ್ದರೆಂದು ಅವನಿಗೆ ತಿಳಿಸಲು ಆ ವ್ಯಕ್ತಿಯು ಗರೂಅದಲ್ಲಿದ್ದ ಸಾಕ್ಷಿಯ ಮನೆಯನ್ನು ಸಂದರ್ಶಿಸಿದಾಗ, ಸಾಕ್ಷಿಯು ಎಷ್ಟು ಆಶ್ಚರ್ಯಗೊಂಡನೆಂಬುದನ್ನು ಊಹಿಸಿಕೊಳ್ಳಿರಿ!
ಚ್ಯಾಡ್ನ ಎಲ್ಲೆಯ ಬಳಿಯಲ್ಲಿರುವ ಮತ್ತೊಂದು ಹಳ್ಳಿಯಲ್ಲಿ, 50 ಮಂದಿ ಆಸಕ್ತ ಜನರ ಒಂದು ಗುಂಪು ತಮ್ಮ ಸ್ವಂತ ಬೈಬಲ್ ಅಧ್ಯಯನವನ್ನು ಸಂಘಟಿಸಿಕೊಂಡಿದೆ. ಚ್ಯಾಡ್ನಲ್ಲಿರುವ ಅತಿ ಹತ್ತಿರದ ಸಭೆಯಲ್ಲಿನ ಕೂಟಗಳಿಗೆ ತಮ್ಮ ಗುಂಪಿನ ಮೂವರು ಹಾಜರಾಗುವಂತೆ ಅವರು ಏರ್ಪಡಿಸಿದರು. ಹಿಂದಿರುಗಿದ ಮೇಲೆ, ಇವರು ಇಡೀ ಗುಂಪಿನೊಂದಿಗೆ ಬೈಬಲ್ ಅಧ್ಯಯನವನ್ನು ನಡೆಸುತ್ತಿದ್ದರು. ನಿಶ್ಚಯವಾಗಿಯೂ ಯೇಸುವಿನ ಮಾತುಗಳು ಇಲ್ಲಿ ಸರಿಯಾಗಿ ಅನ್ವಯಿಸಬಲ್ಲವು: “ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನನ್ನು—ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ.”—ಮತ್ತಾಯ 9:37, 38.
ನಗರಗಳಲ್ಲಿ ಸಾಕ್ಷಿನೀಡುವುದು
ಸಾಹಿತ್ಯದ ಅನೇಕ ವರ್ಷಗಳ ಕೊರತೆಯ ನಂತರ, ಸುಮಾರು ಎರಡು ವರ್ಷಗಳ ಹಿಂದೆ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಕ್ಯಾಮರೂನ್ನಲ್ಲಿ ಮುಕ್ತವಾಗಿ ಲಭ್ಯವಾದವು. ಈ ಪತ್ರಿಕೆಗಳಿಗಾಗಿ ಹೆಚ್ಚಿನ ಉತ್ಸಾಹವು ಮತ್ತು ಅವುಗಳಲ್ಲಿ ಹೆಚ್ಚಿನ ಆಸಕ್ತಿಯೂ ಇದೆ, ಏಕೆಂದರೆ ಅನೇಕ ಜನರು ಅವುಗಳನ್ನು ಪ್ರಥಮ ಬಾರಿ ಓದುತ್ತಿದ್ದಾರೆ. ಒಬ್ಬ ಯುವ ವಿಶೇಷ ಪಯನೀಯರ್ ದಂಪತಿಗಳು, ನಗರಗಳಲ್ಲಿ ಒಂದಕ್ಕೆ ನೇಮಿಸಲ್ಪಟ್ಟಿದ್ದು, ತಮ್ಮ ಹೊಸ ಟೆರಿಟೊರಿಯಲ್ಲಿ ಸಾರುತ್ತಾ, ಪ್ರಥಮ ಬೆಳಗ್ಗೆಯಂದು 86 ಪತ್ರಿಕೆಗಳನ್ನು ನೀಡಿದರು. ಒಂದೇ ಒಂದು ತಿಂಗಳಿನಲ್ಲಿ ಕೆಲವು ಪ್ರಚಾರಕರು ಸುಮಾರು 250 ಪತ್ರಿಕೆಗಳನ್ನು ನೀಡುತ್ತಾರೆ! ಅವರ ಯಶಸ್ಸಿನ ಗುಟ್ಟೇನು? ಪ್ರತಿಯೊಬ್ಬರಿಗೂ ಪತ್ರಿಕೆಗಳನ್ನು ನೀಡುವುದೇ.
ಸಾರ್ವಜನಿಕರಿಗೆ ತೆರೆದಿರುವ ಒಂದು ಆಫೀಸಿನಲ್ಲಿ ಕೆಲಸಮಾಡುತ್ತಿರುವ ಒಬ್ಬ ಸಾಕ್ಷಿಯು, ಯಾವಾಗಲೂ ಪತ್ರಿಕೆಗಳನ್ನು ಪ್ರದರ್ಶಿಸಿಡುತ್ತಾನೆ. ಸ್ತ್ರೀಯೊಬ್ಬಳು ಪ್ರತಿಕೆಗಳನ್ನು ನೋಡಿದಳು, ಆದರೆ ಯಾವ ಪತ್ರಿಕೆಯನ್ನೂ ತೆಗೆದುಕೊಳ್ಳಲಿಲ್ಲ. ಸಾಕ್ಷಿಯು ಆಕೆಯ ಆಸಕ್ತಿಯನ್ನು ವಿವೇಚಿಸಿ, ಆಕೆಗೊಂದು ಪ್ರತಿಯನ್ನು ನೀಡಿದನು, ಅದನ್ನು ಆಕೆ ಸ್ವೀಕರಿಸಿದಳು. ಮರುದಿನ ಆಕೆ ಪುನಃ ಬರುವುದನ್ನು ಕಂಡು ಅವನಿಗೆ ಆಶ್ಚರ್ಯವಾಯಿತು. ಆಕೆ ತೆಗೆದುಕೊಂಡು ಹೋಗಿದ್ದ ಪತ್ರಿಕೆಗೆ ಆಕೆ ದಾನವನ್ನು ಮಾಡಲು ಬಯಸಿದಳು ಮಾತ್ರವಲ್ಲ, ಹೆಚ್ಚಿನ ಪತ್ರಿಕೆಗಳಿಗಾಗಿಯೂ ಕೇಳಿಕೊಂಡಳು. ಏಕೆ? ಬಲಾತ್ಕಾರ ಸಂಭೋಗದ ಒಬ್ಬ ಬಲಿಯಾಗಿದ್ದ ಕಾರಣ, ಆ ವಿಷಯದ ಕುರಿತಾಗಿದ್ದ ಪತ್ರಿಕೆಯನ್ನು ಆಕೆ ಆರಿಸಿಕೊಂಡಿದ್ದಳು. ಕೊಡಲ್ಪಟ್ಟ ಸಲಹೆಯನ್ನು ಓದುತ್ತಾ ಮತ್ತು ಪುನಃ ಓದುತ್ತಾ ಆಕೆ ಇಡೀ ರಾತ್ರಿಯನ್ನು ಕಳೆದಿದ್ದಳು. ಬಹಳಷ್ಟು ನೆಮ್ಮದಿಯ ಅನಿಸಿಕೆಯಾಗುತ್ತಾ, ಯೆಹೋವನ ಸಾಕ್ಷಿಗಳ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ಆಕೆ ಬಯಸಿದಳು.
ಬೈಬಲಿನ ನಿರೀಕ್ಷೆಯ ಸಂದೇಶವನ್ನು ಹಬ್ಬಿಸುವುದರಲ್ಲಿ ಸಣ್ಣ ಮಕ್ಕಳೂ ಪಾಲ್ಗೊಳ್ಳಬಲ್ಲರು. ಆರು ವರ್ಷ ಪ್ರಾಯದ ಸಾಕ್ಷಿ ಹುಡುಗಿಯೊಬ್ಬಳು ತನ್ನ ಶಿಕ್ಷಕನಿಂದ ಒಂದು ಕ್ಯಾತೊಲಿಕ್ ಸ್ತೋತ್ರಗೀತೆಯನ್ನು ಹಾಡುವಂತೆ ಕೇಳಲ್ಪಟ್ಟಾಗ, ತಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳೆಂದು ಹೇಳುತ್ತಾ, ಅವಳು ನಿರಾಕರಿಸಿದಳು. ತನ್ನ ಸ್ವಂತ ಧರ್ಮದ ಗೀತೆಗಳನ್ನು ಹಾಡುವಂತೆ ಶಿಕ್ಷಕನು ನಂತರ ಆಕೆಯನ್ನು ಕೇಳಿಕೊಂಡನು. ಅದರ ಮೇಲೆ ಆಕೆಗೆ ಅಂಕಗಳನ್ನು ಕೊಡಲು ಅವನಿಗೆ ಸಾಧ್ಯವಿತ್ತು. ಆಕೆ “ಪ್ರಮೋದವನದ ಕುರಿತಾದ ದೇವರ ವಾಗ್ದಾನ” ಎಂಬ ಶೀರ್ಷಿಕೆಯ ಗೀತೆಯನ್ನು ಆರಿಸಿಕೊಂಡು, ಬಾಯಿಪಾಠವಾಗಿ ಹಾಡಿದಳು. ಹೀಗೆ ಹೇಳುತ್ತಾ ಶಿಕ್ಷಕನು ಆಕೆಯನ್ನು ಪ್ರಶ್ನಿಸಿದನು: “ನಿನ್ನ ಹಾಡಿನಲ್ಲಿ ನೀನು ಒಂದು ಪ್ರಮೋದವನವನ್ನು ಉಲ್ಲೇಖಿಸುತ್ತಿ. ಈ ಪ್ರಮೋದವನವು ಎಲ್ಲಿದೆ?” ಭೂಮಿಯ ಮೇಲೆ ಬಹಳ ಬೇಗನೆ ಪ್ರಮೋದವನವನ್ನು ಸ್ಥಾಪಿಸುವ ದೇವರ ಉದ್ದೇಶದ ಕುರಿತು ಆ ಹುಡುಗಿಯು ವಿವರಿಸಿದಳು. ಆಕೆಯ ಉತ್ತರದಿಂದ ಆಶ್ಚರ್ಯಗೊಂಡು, ಆಕೆ ಅಭ್ಯಸಿಸುತ್ತಿದ್ದ ಪುಸ್ತಕಕ್ಕಾಗಿ ಅವನು ಆಕೆಯ ಹೆತ್ತವರಲ್ಲಿ ಕೇಳಿಕೊಂಡನು. ಧರ್ಮದ ಕುರಿತಾದ ಪಾಠಗಳ ಸಮಯದಲ್ಲಿ ಕಲಿಸಲ್ಪಡುತ್ತಿದ್ದ ವಿಷಯಗಳ ಮೇಲೆ ಅಂಕಗಳನ್ನು ಕೊಡುವ ಬದಲಿಗೆ, ಆ ಪುಸ್ತಕದಿಂದ ಆಕೆ ಕಲಿತಿದ್ದ ವಿಷಯದ ಮೇಲೆ ಆಕೆಗೆ ಅಂಕಗಳನ್ನು ಕೊಡಲು ಅವನು ಸಿದ್ಧನಿದ್ದನು. ಆಕೆಗೆ ಸರಿಯಾಗಿ ಅಂಕಗಳನ್ನು ಕೊಡಲು ಅವನು ಬಯಸುವುದಾದರೆ, ಪ್ರಥಮವಾಗಿ ಅವನು ಸ್ವತಃ ಅಭ್ಯಸಿಸಬೇಕೆಂದು ಹೆತ್ತವರು ಆ ಶಿಕ್ಷಕನಿಗೆ ಸೂಚಿಸಿದರು. ಅವನೊಂದಿಗೆ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲಾಯಿತು.
ಒಂದು ಸಂದರ್ಶನವನ್ನು ಯೋಜಿಸುತ್ತಿದ್ದೀರೊ?
ಇಂದು, ಲೋಕದ ಅನೇಕ ಭಾಗಗಳಲ್ಲಿ, ರಾಜ್ಯದ ಸುವಾರ್ತೆಯ ಕಡೆಗೆ ಜನರು ಉದಾಸೀನರಾಗಿದ್ದಾರೆ. ದೇವರಾಗಲಿ ಬೈಬಲಾಗಲಿ ಅವರಿಗೆ ಅಭಿರುಚಿಯುಳ್ಳದ್ದಾಗಿರುವುದಿಲ್ಲ. ಇತರರು ಭಯದಿಂದ ನಿಸ್ಸತ್ವಗೊಳಿಸಲ್ಪಟ್ಟು, ಬಾಗಿಲಿಗೆ ಬರುವ ಯಾವನೇ ಅಪರಿಚಿತನಿಗೆ ಪ್ರತಿಕ್ರಿಯಿಸಲು ನಿರಾಕರಿಸುತ್ತಾರೆ. ಇದೆಲ್ಲವು ಯೆಹೋವನ ಸಾಕ್ಷಿಗಳಿಗೆ ಅವರ ಶುಶ್ರೂಷೆಯಲ್ಲಿ ಒಂದು ನಿಜವಾದ ಪಂಥಾಹ್ವಾನವಾಗಿದೆ. ಆದರೆ ಕ್ಯಾಮರೂನ್ನಲ್ಲಿ ಎಂತಹ ಒಂದು ವ್ಯತ್ಯಾಸ!
ಇಲ್ಲಿ ಮನೆಯಿಂದ ಮನೆಗೆ ಸಾರುವುದು ಒಂದು ಹರ್ಷವಾಗಿದೆ. ಬಾಗಲು ತಟ್ಟುವ ಬದಲಿಗೆ, “ಕಾಂಗ್, ಕಾಂಗ್, ಕಾಂಗ್” ಎಂದು ಕೂಗುವುದು ರೂಢಿಯಾಗಿದೆ. ನಂತರ ಒಳಗಿನಿಂದ ಒಂದು ಧ್ವನಿಯು, “ಯಾರದು?” ಎಂದು ಉತ್ತರಿಸುತ್ತದೆ, ಇದರ ನಂತರ ನಮ್ಮನ್ನು ಯೆಹೋವನ ಸಾಕ್ಷಿಗಳೆಂದು ನಾವು ಪರಿಚಯಿಸಿಕೊಳ್ಳುತ್ತೇವೆ. ಸಾಮಾನ್ಯವಾಗಿ, ಬೆಂಚುಗಳನ್ನು ತಂದು, ಅವುಗಳನ್ನು ಒಂದು ಮರದ, ಬಹುಶಃ ಒಂದು ಮಾವಿನ ಮರದ ನೆರಳಿನಲ್ಲಿ ಇರಿಸುವಂತೆ ಹೆತ್ತವರು ತಮ್ಮ ಮಕ್ಕಳನ್ನು ಕೇಳಿಕೊಳ್ಳುತ್ತಾರೆ. ಅನಂತರ ದೇವರ ರಾಜ್ಯವು ಏನಾಗಿದೆ ಮತ್ತು ಮಾನವಕುಲದ ಸಂಕಟಮಯ ಪರಿಸ್ಥಿತಿಯನ್ನು ತೆಗೆದುಹಾಕಲು ಅದು ಏನು ಮಾಡುವುದೆಂದು ವಿವರಿಸುತ್ತಾ, ಆಹ್ಲಾದಕರವಾದ ಸಮಯವು ವ್ಯಯಿಸಲ್ಪಡುತ್ತದೆ.
ಇಂತಹ ಒಂದು ಚರ್ಚೆಯನ್ನು ಅನುಸರಿಸಿ, ಸ್ತ್ರೀಯೊಬ್ಬಳು ಹೀಗೆ ಹೇಳುತ್ತಾ, ಮುಕ್ತವಾಗಿ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿಕೊಂಡಳು: “ನಾನು ಹುಡುಕುತ್ತಾ ಇದ್ದ ಸತ್ಯವು, ನಾನು ಹುಟ್ಟಿರುವ ಮತ್ತು ದೊಡ್ಡವಳಾಗಿ ಬೆಳೆದಿರುವ ಧರ್ಮದಲ್ಲಿಲ್ಲವೆಂಬುದನ್ನು ಕಂಡು ನಾನು ಸಂಕಟಪಡುತ್ತೇನೆ. ದೇವರು ನನಗೆ ಸತ್ಯವನ್ನು ತೋರಿಸಿದ್ದಾನೆಂಬುದಕ್ಕೆ ನಾನು ಆತನಿಗೆ ಉಪಕಾರ ಸಲ್ಲಿಸುತ್ತೇನೆ. ನನ್ನ ಚರ್ಚಿನಲ್ಲಿ ನಾನೊಬ್ಬ ಡೀಕನ್ ಆಗಿದ್ದೆ. ಕನ್ಯೆ ಮರಿಯಳ ಮೂರ್ತಿಯು ಪ್ರತಿಯೊಬ್ಬ ಡೀಕನ್ನಿನ ಮನೆಯಲ್ಲಿ ಒಂದು ವಾರ ಇರುತ್ತದೆ, ಇದರಿಂದ ಪ್ರತಿಯೊಬ್ಬರೂ ಆಕೆಗೆ ವಿನಂತಿಗಳನ್ನು ಮಾಡಸಾಧ್ಯವಿದೆ. ನನ್ನ ವಿಷಯದಲ್ಲಾದರೊ, ಸತ್ಯವನ್ನು ಕಂಡುಕೊಳ್ಳಲು ನನಗೆ ಸಹಾಯ ಮಾಡುವಂತೆ ನಾನು ಯಾವಾಗಲೂ ಮರಿಯಳನ್ನು ಕೇಳಿಕೊಂಡೆ. ಸತ್ಯವು ಆಕೆಯಲ್ಲಿಲ್ಲವೆಂದು ದೇವರು ನನಗೀಗ ತೋರಿಸಿಕೊಟ್ಟಿದ್ದಾನೆ. ನಾನು ಯೆಹೋವನಿಗೆ ಉಪಕಾರ ಸಲ್ಲಿಸುತ್ತೇನೆ.”
ಆದುದರಿಂದ ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಪಡೆಯಸಾಧ್ಯವಿರುವ ತೀವ್ರವಾದ ಆನಂದವನ್ನು ಅನುಭವಿಸುವ ಅಗತ್ಯವು ನಿಮಗೆ ಯಾವ ದಿನವಾದರೂ ಅನಿಸುವಲ್ಲಿ, ಪಶ್ಚಿಮ ಆಫ್ರಿಕದ ಈ ಭಾಗವನ್ನು ಏಕೆ ಸಂದರ್ಶಿಸಬಾರದು? ತೋಡುದೋಣಿ, ಪೊದೆ ಟ್ಯಾಕ್ಸಿಯ ಮೂಲಕವಾಗಲಿ, ಅಥವಾ ಸೈಕಲಿನ ಮೂಲಕವಾಗಲಿ “ಚಿಕ್ಕ ಪ್ರಮಾಣದ ಆಫ್ರಿಕ” ದೇಶವನ್ನು ಕಂಡುಹಿಡಿಯುವುದರ ಜೊತೆಗೆ, “ದೇವರ ಪರ್ವತ”ವಿರುವ ದೇಶದಲ್ಲಿ ಕಟ್ಟಲ್ಪಡುತ್ತಿರುವ “ಸಾಕ್ಷಿಕುಪ್ಪೆ”ಗೆ ನೀವು ನೆರವನ್ನೂ ನೀಡುತ್ತಿರುವಿರಿ.
[ಪಾದಟಿಪ್ಪಣಿ]
a “ಗಿಲ್ಯಾದ್” ಎಂಬುದಾಗಿ ಭಾಷಾಂತರಿಸಲ್ಪಟ್ಟ ಹೀಬ್ರು ಪದದ ಸಂಭಾವ್ಯ ಅರ್ಥವು “ಸಾಕ್ಷಿಕುಪ್ಪೆ” ಆಗಿದೆ. 1943ರಂದಿನಿಂದ, ಕ್ಯಾಮರೂನ್ನಲ್ಲಿ ಸೇರಿಸಿ, ಲೋಕವ್ಯಾಪಕವಾಗಿ ಸಾರುವ ಕೆಲಸವನ್ನು ಆರಂಭಿಸಲು, ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ ಮಿಷನೆರಿಗಳನ್ನು ಕಳುಹಿಸುತ್ತಾ ಇದೆ.
[ಪುಟ 22 ರಲ್ಲಿರುವ ಚಿತ್ರ ಕೃಪೆ]
Map: Mountain High Maps® Copyright © 1995 Digital Wisdom, Inc.