ದೇವರ ವಾಕ್ಯವನ್ನು ಓದಿರಿ ಮತ್ತು ಸತ್ಯದಲ್ಲಿ ಆತನ ಸೇವೆಮಾಡಿರಿ
“ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯತೆಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡು ನಡೆಯುವೆನು.”—ಕೀರ್ತನೆ 86:11.
1. ಸಾರಾಂಶದಲ್ಲಿ, ಸತ್ಯದ ಕುರಿತು ಈ ಪತ್ರಿಕೆಯ ಪ್ರಥಮ ಸಂಚಿಕೆಯು ಏನು ಹೇಳಿತು?
ಯೆಹೋವನು ಬೆಳಕನ್ನೂ ಸತ್ಯವನ್ನೂ ಕಳುಹಿಸುತ್ತಾನೆ. (ಕೀರ್ತನೆ 43:3) ತನ್ನ ವಾಕ್ಯವಾದ ಬೈಬಲನ್ನು ಓದಿ, ಸತ್ಯವನ್ನು ಕಲಿತುಕೊಳ್ಳುವ ಸಾಮರ್ಥ್ಯವನ್ನೂ ಆತನು ನಮಗೆ ಕೊಡುತ್ತಾನೆ. ಈ ಪತ್ರಿಕೆಯ ಪ್ರಥಮ ಸಂಚಿಕೆ—ಜುಲೈ 1879—ಯು ಹೇಳಿದ್ದು: “ಸತ್ಯವು, ಜೀವನದ ಕಾಡಿನಲ್ಲಿರುವ ಒಂದು ಚಿಕ್ಕ ಸಾಧಾರಣ ರೀತಿಯ ಹೂವಿನಂತೆ, ಅಸತ್ಯದ ಕಳೆಗಳ ಹುಲುಸಾದ ಬೆಳವಣಿಗೆಯ ಮೂಲಕ ಸುತ್ತುವರಿಯಲ್ಪಟ್ಟು, ಬಹುಮಟ್ಟಿಗೆ ಉಸಿರುಕಟ್ಟಿಸಲ್ಪಟ್ಟಿದೆ. ನೀವು ಅದನ್ನು ಕಂಡುಕೊಳ್ಳಬಯಸುವಲ್ಲಿ, ನೀವು ಸದಾ ಎಚ್ಚರಿಕೆಯಿಂದ ನೋಡಬೇಕು. ನೀವು ಅದರ ಸೊಬಗನ್ನು ನೋಡಬಯಸುವಲ್ಲಿ, ಅಸತ್ಯದ ಕಳೆಗಳನ್ನು ಮತ್ತು ಮತಾಂಧತೆಯ ಮುಳ್ಳುಪೊದೆಗಳನ್ನು ನೀವು ತಳ್ಳಿಹಾಕಬೇಕು. ನೀವು ಅದನ್ನು ಪಡೆಯಬಯಸುವಲ್ಲಿ, ಅದನ್ನು ಪಡೆಯಲು ಬಗ್ಗಬೇಕು. ಸತ್ಯದ ಒಂದು ಹೂವಿನಿಂದ ತೃಪ್ತರಾಗಬೇಡಿ. ಸತ್ಯದ ಒಂದು ಹೂವು ಸಾಕಾಗಿದ್ದರೆ, ಇನ್ನೂ ಹೆಚ್ಚನ್ನು ಸೃಷ್ಟಿಸಲಾಗುತ್ತಿರಲಿಲ್ಲ. ಒಟ್ಟುಗೂಡಿಸುತ್ತಾ ಇರ್ರಿ, ಹುಡುಕುತ್ತಾ ಇರ್ರಿ.” ದೇವರ ವಾಕ್ಯವನ್ನು ಓದುವುದು ಮತ್ತು ಅಭ್ಯಸಿಸುವುದು, ನಿಷ್ಕೃಷ್ಟ ಜ್ಞಾನವನ್ನು ಸಂಪಾದಿಸುವಂತೆ ಮತ್ತು ಆತನ ಸತ್ಯದಲ್ಲಿ ನಡೆಯುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ.—ಕೀರ್ತನೆ 86:11.
2. ಪ್ರಾಚೀನ ಯೆರೂಸಲೇಮಿನಲ್ಲಿ ಯೆಹೂದ್ಯರಿಗೆ ಎಜ್ರನು ಮತ್ತು ಇತರರು ದೇವರ ಧರ್ಮಶಾಸ್ತ್ರವನ್ನು ಓದಿದಾಗ ಏನು ಫಲಿಸಿತು?
2 ಸಾ.ಶ.ಪೂ. 455ರಲ್ಲಿ ಯೆರೂಸಲೇಮಿನ ಗೋಡೆಗಳು ಪುನರ್ನಿರ್ಮಾಣವಾದ ನಂತರ, ಯಾಜಕನಾದ ಎಜ್ರನು ಮತ್ತು ಇತರರು ಯೆಹೂದ್ಯರಿಗೆ ದೇವರ ಧರ್ಮಶಾಸ್ತ್ರವನ್ನು ಓದಿಹೇಳಿದರು. ಇದು ಹರ್ಷಭರಿತ ಪರ್ಣಶಾಲೆಗಳ ಉತ್ಸವದಿಂದ, ಪಾಪಗಳ ನಿವೇದನೆಯಿಂದ, ಮತ್ತು “ಲೇಖನರೂಪವಾದ ಪ್ರತಿಜ್ಞೆಯನ್ನು” ಗೊತ್ತುಮಾಡುವುದರಿಂದ ಹಿಂಬಾಲಿಸಲ್ಪಟ್ಟಿತು. (ನೆಹೆಮೀಯ 8:1–9:38) ನಾವು ಓದುವುದು: “ಜನರು ಎದ್ದುನಿಂತ ನಂತರ ಅವರು ದೇವರ ಧರ್ಮಶಾಸ್ತ್ರವನ್ನು ಸ್ಪಷ್ಟವಾಗಿ ಓದುತ್ತಾ ಅದರ ತಾತ್ಪರ್ಯವನ್ನು ವಿವರಿಸಲು ಜನರು ಗ್ರಹಿಸಿದರು.” (ನೆಹೆಮೀಯ 8:8) ಯೆಹೂದ್ಯರು ಹೀಬ್ರು ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಿಲ್ಲವೆಂದು ಮತ್ತು ಆ್ಯರಮೇಯಿಕ್ ಭಾಷೆಯಲ್ಲಿ ಸರಳಾನುವಾದವು ಮಾಡಲ್ಪಟ್ಟಿತೆಂದು ಕೆಲವು ಪಂಡಿತರು ಸೂಚಿಸುತ್ತಾರೆ. ಆದರೆ ವಚನವು, ಕೇವಲ ಹೀಬ್ರು ಭಾಷೆಯ ಪದಗಳ ಸ್ಪಷ್ಟೀಕರಣವನ್ನು ಸೂಚಿಸುವುದಿಲ್ಲ. ಎಜ್ರನು ಮತ್ತು ಇತರರು, ಜನರು ಧರ್ಮಶಾಸ್ತ್ರದ ಮೂಲತತ್ವಗಳನ್ನು ಗ್ರಹಿಸುವಂತೆ ಮತ್ತು ಅವುಗಳನ್ನು ಅನ್ವಯಿಸಿಕೊಳ್ಳುವಂತೆ ಅದನ್ನು ವಿವರಿಸಿದರು. ಕ್ರೈಸ್ತ ಪ್ರಕಾಶನಗಳು ಮತ್ತು ಕೂಟಗಳು ಸಹ ದೇವರ ವಾಕ್ಯದೊಳಗೆ ‘ಅರ್ಥವನ್ನು ಹಾಕು’ವ ಕಾರ್ಯಮಾಡುತ್ತವೆ. “ಬೋಧಿಸುವದರಲ್ಲಿ ಪ್ರವೀಣ”ರಾಗಿರುವ ನೇಮಿತ ಹಿರಿಯರೂ ಹಾಗೆಯೇ ಮಾಡುತ್ತಾರೆ.—1 ತಿಮೊಥೆಯ 3:1, 2; 2 ತಿಮೊಥೆಯ 2:24.
ಬಾಳುವ ಪ್ರಯೋಜನಗಳು
3. ಬೈಬಲ್ ಓದುವಿಕೆಯಿಂದ ಸಂಗ್ರಹಿಸಲ್ಪಟ್ಟ ಕೆಲವೊಂದು ಪ್ರಯೋಜನಗಳಾವುವು?
3 ಕ್ರೈಸ್ತ ಕುಟುಂಬಗಳು ಬೈಬಲನ್ನು ಒಟ್ಟಿಗೆ ಓದುವಾಗ, ಅವರು ಬಾಳುವ ಪ್ರಯೋಜನಗಳನ್ನು ಅನುಭವಿಸುವುದು ಸಂಭವನೀಯ. ಅವರು ದೇವರ ನಿಯಮಗಳೊಂದಿಗೆ ಪರಿಚಿತರಾಗುತ್ತಾರೆ ಮತ್ತು ತತ್ವಗಳು, ಪ್ರವಾದನೆಗಳು, ಮತ್ತು ಇತರ ವಿಷಯಗಳ ಕುರಿತಾದ ಸತ್ಯವನ್ನು ಕಲಿಯುತ್ತಾರೆ. ಬೈಬಲಿನ ಒಂದು ಭಾಗವನ್ನು ಓದಿಯಾದ ಮೇಲೆ, ಮನೆವಾರ್ತೆಯ ಶಿರಸ್ಸು ಹೀಗೆ ಕೇಳಬಹುದು: ಇದು ನಮ್ಮನ್ನು ಹೇಗೆ ಪ್ರಭಾವಿಸಬೇಕು? ಇದು ಇತರ ಬೈಬಲ್ ಬೋಧನೆಗಳಿಗೆ ಯಾವ ವಿಧದಲ್ಲಿ ಸಂಬಂಧಿಸುತ್ತದೆ? ಸುವಾರ್ತೆಯನ್ನು ಸಾರುವುದರಲ್ಲಿ ಈ ವಿಷಯಗಳನ್ನು ನಾವು ಹೇಗೆ ಉಪಯೋಗಿಸಬಲ್ಲೆವು? ಬೈಬಲನ್ನು ಓದುವಾಗ ಅವರು ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ ಅಥವಾ ಬೇರೆ ಇಂಡೆಕ್ಸ್ಗಳನ್ನು ಉಪಯೋಗಿಸುವ ಮೂಲಕ ಸಂಶೋಧನೆಯನ್ನು ಮಾಡುವುದಾದರೆ, ಒಂದು ಕುಟುಂಬವು ಅತಿ ಹೆಚ್ಚಿನ ಒಳನೋಟವನ್ನು ಪಡೆಯುತ್ತದೆ. ಶಾಸ್ತ್ರಗಳ ಒಳನೋಟ (ಇಂಗ್ಲಿಷ್) ಎಂಬ ಪುಸ್ತಕದ ಎರಡು ಸಂಪುಟಗಳು, ಪ್ರಯೋಜನಗಳೊಂದಿಗೆ ಪರಾಮರ್ಶಿಸಲ್ಪಡಸಾಧ್ಯವಿದೆ.
4. ಯೆಹೋಶುವ 1:8ರಲ್ಲಿ ದಾಖಲಿಸಲ್ಪಟ್ಟ ಉಪದೇಶವನ್ನು ಯೆಹೋಶುವನು ಹೇಗೆ ಅನ್ವಯಿಸಿಕೊಳ್ಳಬೇಕಿತ್ತು?
4 ಶಾಸ್ತ್ರಗಳಿಂದ ತೆಗೆಯಲ್ಪಟ್ಟ ಮೂಲತತ್ವಗಳು, ನಮ್ಮನ್ನು ಜೀವಿತದಲ್ಲಿ ಮಾರ್ಗದರ್ಶಿಸಬಲ್ಲವು. ಅಲ್ಲದೆ, ‘ಪವಿತ್ರ ಬರಹಗಳ’ ಓದುವಿಕೆ ಹಾಗೂ ಅಭ್ಯಸಿಸುವಿಕೆಯು ‘ನಮ್ಮನ್ನು ರಕ್ಷಣೆಗಾಗಿ ವಿವೇಕವುಳ್ಳವರಾಗಿ ಮಾಡಬಲ್ಲದು.’ (2 ತಿಮೊಥೆಯ 3:15) ದೇವರ ವಾಕ್ಯವು ನಮ್ಮನ್ನು ಮಾರ್ಗದರ್ಶಿಸುವಂತೆ ನಾವು ಬಿಡುವುದಾದರೆ, ನಾವು ಆತನ ಸತ್ಯದಲ್ಲಿ ನಡೆಯುತ್ತಾ ಇರುವೆವು ಮತ್ತು ನಮ್ಮ ನೀತಿಯ ಬಯಕೆಗಳು ನೆರವೇರುವವು. (ಕೀರ್ತನೆ 26:3; 119:130) ಹಾಗಿದ್ದರೂ, ನಾವು ಮೋಶೆಯ ಉತ್ತರಾಧಿಕಾರಿಯಾದ ಯೆಹೋಶುವನು ಮಾಡಿದಂತೆ, ತಿಳಿವಳಿಕೆಯನ್ನು ಕೋರುವ ಅಗತ್ಯವಿದೆ. ಆ “ಧರ್ಮಶಾಸ್ತ್ರವು” ಅವನ ಬಾಯಿಯಿಂದ ಅಗಲಬಾರದಿತ್ತು, ಮತ್ತು ಅವನು ಅದನ್ನು ಹಗಲಿರುಳು ಓದಬೇಕಿತ್ತು. (ಯೆಹೋಶುವ 1:8) ಆ “ಧರ್ಮಶಾಸ್ತ್ರ”ವನ್ನು ಅವನ ಬಾಯಿಯಿಂದ ಅಗಲುವಂತೆ ಬಿಡಬಾರದೆಂಬುದು, ಯೆಹೋಶುವನು ಅದು ಹೇಳಿದ ಪ್ರಕಾಶಮಾನವಾದ ವಿಷಯಗಳನ್ನು ಇತರರಿಗೆ ಹೇಳುವುದನ್ನು ನಿಲ್ಲಿಸಬಾರದೆಂಬುದನ್ನು ಅರ್ಥೈಸಿತು. ಹಗಲಿರುಳು ಧರ್ಮಶಾಸ್ತ್ರವನ್ನು ಓದುವುದು, ಯೆಹೋಶುವನಿಗೆ ಅದರ ಮೇಲೆ ಮನನ ಮಾಡಲಿಕ್ಕಿತ್ತು, ಅದರ ಅಭ್ಯಾಸಮಾಡಲಿಕ್ಕಿತ್ತೆಂಬುದನ್ನು ಅರ್ಥೈಸಿತು. ಅಪೊಸ್ತಲ ಪೌಲನು ತದ್ರೀತಿಯಲ್ಲಿ ತಿಮೊಥೆಯನನ್ನು ಅವನ ನಡತೆ, ಶುಶ್ರೂಷೆ, ಮತ್ತು ಬೋಧನೆಯ ಕುರಿತು “ನಿರತನಾಗಿರು”ವಂತೆ—ಮನನ ಮಾಡುವಂತೆ—ಪ್ರೋತ್ಸಾಹಿಸಿದನು. ಒಬ್ಬ ಕ್ರೈಸ್ತ ಹಿರಿಯನೋಪಾದಿ, ತನ್ನ ಜೀವಿತವು ಆದರ್ಶಪ್ರಾಯವಾಗಿತ್ತೆಂದು ಮತ್ತು ತಾನು ಶಾಸ್ತ್ರೀಯ ಸತ್ಯವನ್ನು ಕಲಿಸಿದೆನೆಂಬ ವಿಷಯದಲ್ಲಿ ತಿಮೊಥೆಯನಿಗೆ ವಿಶೇಷವಾಗಿ ಜಾಗರೂಕನಾಗಿರುವ ಅಗತ್ಯವಿತ್ತು.—1 ತಿಮೊಥೆಯ 4:15.
5. ದೇವರ ಸತ್ಯವನ್ನು ನಾವು ಕಂಡುಹಿಡಿಯಬೇಕಾದರೆ, ಏನು ಅಗತ್ಯವಾಗಿದೆ?
5 ದೇವರ ಸತ್ಯವು ಅಮೂಲ್ಯವಾದೊಂದು ನಿಧಿಯಾಗಿದೆ. ಅದನ್ನು ಕಂಡುಕೊಳ್ಳುವುದು ಅಗೆಯುವುದನ್ನು, ಶಾಸ್ತ್ರಗಳ ಸತತವಾದ ಅನ್ವೇಷಣೆಯನ್ನು ಅಗತ್ಯಪಡಿಸುತ್ತದೆ. ಆ ಮಹಾ ಶಿಕ್ಷಕನ ಮಗುವಿನಂತಹ ವಿದ್ಯಾರ್ಥಿಗಳೋಪಾದಿ ಮಾತ್ರ, ನಾವು ವಿವೇಕವನ್ನು ಗಳಿಸುತ್ತೇವೆ ಮತ್ತು ಯೆಹೋವನ ಪೂಜ್ಯಭಾವನೆಯಿಂದ ತುಂಬಿದ ಭಯವನ್ನು ಅರ್ಥಮಾಡಿಕೊಳ್ಳಲು ತೊಡಗುತ್ತೇವೆ. (ಜ್ಞಾನೋಕ್ತಿ 1:7; ಯೆಶಾಯ 30:20, 21) ನಿಶ್ಚಯವಾಗಿಯೂ, ನಾವು ವಿಷಯಗಳನ್ನು ಸ್ವತಃ ಶಾಸ್ತ್ರೀಯವಾಗಿ ರುಜುಪಡಿಸಿಕೊಳ್ಳಬೇಕು. (1 ಪೇತ್ರ 2:1, 2) ಬೆರೋಯದಲ್ಲಿದ್ದ ಯೆಹೂದ್ಯರು “ಥೆಸಲೊನೀಕದವರಿಗಿಂತ ಸದ್ಗುಣವುಳ್ಳವರಾಗಿದ್ದು ದೇವರ ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದರು.” ಇದನ್ನು ಮಾಡಿದ್ದಕ್ಕಾಗಿ ಬೆರೋಯದವರು ಖಂಡಿಸಲ್ಪಡುವ ಬದಲಿಗೆ ಪ್ರಶಂಸಿಸಲ್ಪಟ್ಟರು.—ಅ. ಕೃತ್ಯಗಳು 17:10, 11.
6. ಶಾಸ್ತ್ರಗಳನ್ನು ಹುಡುಕುವುದು ಕೆಲವು ಯೆಹೂದ್ಯರಿಗೆ ಯಾವ ಒಳಿತನ್ನೂ ತರಲಿಲ್ಲವೆಂದು ಯೇಸು ಏಕೆ ಸೂಚಿಸಬಹುದಿತ್ತು?
6 ಕೆಲವು ಯೆಹೂದ್ಯರಿಗೆ ಯೇಸು ಹೇಳಿದ್ದು: “ಶಾಸ್ತ್ರಗಳಿಂದ ನಿತ್ಯಜೀವವು ದೊರೆಯುತ್ತದೆಂದು ನೀವು ನೆನಸಿ ಅವುಗಳನ್ನು ವಿಚಾರಿಸುತ್ತೀರಲ್ಲಾ; ಅವುಗಳೂ ನನ್ನ ವಿಷಯದಲ್ಲಿ ಸಾಕ್ಷಿಕೊಡುವವುಗಳಾಗಿವೆ. ಆದರೂ ಜೀವ ಹೊಂದುವದಕ್ಕಾಗಿ ನನ್ನ ಬಳಿಗೆ ಬರುವದಕ್ಕೆ ನಿಮಗೆ ಮನಸ್ಸಿಲ್ಲ.” (ಯೋಹಾನ 5:39, 40) ಶಾಸ್ತ್ರಗಳು ತಮ್ಮನ್ನು ಜೀವಿತಕ್ಕೆ ನಡೆಸಸಾಧ್ಯವೆಂಬ ಸರಿಯಾದ ಉದ್ದೇಶದಿಂದ ಅವರು ಅವುಗಳನ್ನು ಹುಡುಕಿದರು. ನಿಶ್ಚಯವಾಗಿಯೂ, ಜೀವಿತದ ಮಾಧ್ಯಮವಾಗಿ ಯೇಸುವಿಗೆ ನಿರ್ದೇಶಿಸಿದ ಮೆಸ್ಸೀಯ ಸಂಬಂಧಿತ ಪ್ರವಾದನೆಗಳು ಶಾಸ್ತ್ರಗಳಲ್ಲಿದ್ದವು. ಆದರೆ ಯೆಹೂದ್ಯರು ಅವನನ್ನು ತಿರಸ್ಕರಿಸಿದರು. ಆದುದರಿಂದ ಶಾಸ್ತ್ರಗಳನ್ನು ಹುಡುಕುವುದು ಅವರಿಗೆ ಪ್ರಯೋಜನಕರವಾದದ್ದಾಗಿರಲಿಲ್ಲ.
7. ಬೈಬಲಿನ ತಿಳಿವಳಿಕೆಯಲ್ಲಿ ಬೆಳೆಯಲು ಏನು ಅಗತ್ಯವಾಗಿದೆ, ಮತ್ತು ಏಕೆ?
7 ಬೈಬಲಿನ ಕುರಿತಾದ ನಮ್ಮ ತಿಳಿವಳಿಕೆಯಲ್ಲಿ ಬೆಳೆಯಲು, ನಮಗೆ ದೇವರ ಆತ್ಮ, ಅಥವಾ ಸಕ್ರಿಯ ಶಕ್ತಿಯ ಮಾರ್ಗದರ್ಶನದ ಅಗತ್ಯವಿದೆ. ಅವುಗಳ ಅರ್ಥವನ್ನು ಬಯಲುಪಡಿಸಲು “ಆತ್ಮನು ಎಲ್ಲಾ ವಿಷಯಗಳನ್ನು, ದೇವರ ಅಗಾಧವಾದ ವಿಷಯಗಳನ್ನು ಕೂಡ ಪರಿಶೋಧಿಸುವವನಾಗಿದ್ದಾನೆ.” (1 ಕೊರಿಂಥ 2:10) ಥೆಸಲೊನೀಕದಲ್ಲಿದ್ದ ಕ್ರೈಸ್ತರು ತಾವು ಕೇಳಿದ ಯಾವುದೇ ಪ್ರವಾದನೆಯಲ್ಲಿನ “ಎಲ್ಲವನ್ನೂ ಪರಿಶೋಧಿ”ಸಬೇಕಿತ್ತು. (1 ಥೆಸಲೊನೀಕ 5:20, 21) ಥೆಸಲೊನೀಕದವರಿಗೆ ಪೌಲನು ಪತ್ರವನ್ನು ಬರೆದಾಗ (ಸುಮಾರು ಸಾ.ಶ. 50), ಈ ಮೊದಲೇ ಬರೆಯಲ್ಪಟ್ಟಿದ್ದ ಗ್ರೀಕ್ ಶಾಸ್ತ್ರಗಳ ಏಕೈಕ ಭಾಗವು ಮತ್ತಾಯನ ಸುವಾರ್ತೆಯಾಗಿತ್ತು. ಆದುದರಿಂದ ಥೆಸಲೊನೀಕದವರು ಮತ್ತು ಬೆರೋಯದವರು, ಬಹುಶಃ ಹೀಬ್ರು ಶಾಸ್ತ್ರಗಳ ಗ್ರೀಕ್ ಸೆಪ್ಟ್ಯುಅಜಿಂಟ್ ಭಾಷಾಂತರವನ್ನು ಪರಿಶೀಲಿಸುವ ಮೂಲಕ ಎಲ್ಲ ವಿಷಯಗಳನ್ನು ಖಚಿತಪಡಿಸಿಕೊಳ್ಳಸಾಧ್ಯವಿತ್ತು. ಅವರು ಶಾಸ್ತ್ರಗಳನ್ನು ಓದಿ, ಅಭ್ಯಸಿಸಬೇಕಿತ್ತು, ಮತ್ತು ನಾವೂ ಹಾಗೆಯೇ ಮಾಡುವ ಅಗತ್ಯವಿದೆ.
ಎಲ್ಲರಿಗೂ ಅತ್ಯಾವಶ್ಯಕ
8. ನೇಮಿತ ಹಿರಿಯರು ಬೈಬಲಿನ ಜ್ಞಾನದಲ್ಲಿ ಏಕೆ ಅತಿಶಯಿಸಬೇಕು?
8 ನೇಮಿತ ಹಿರಿಯರು ಬೈಬಲ್ ಜ್ಞಾನದಲ್ಲಿ ಅತಿಶಯಿಸಬೇಕು. ಅವರು “ಬೋಧಿಸಲು ಅರ್ಹರು” ಆಗಿರಬೇಕು ಮತ್ತು ‘ನಂಬಿಗಸ್ತ ವಾಕ್ಯಕ್ಕೆ ದೃಢವಾಗಿ ಅಂಟಿಕೊಳ್ಳ’ಬೇಕು. ಮೇಲ್ವಿಚಾರಕನಾದ ತಿಮೊಥೆಯನು ‘ಸತ್ಯದ ವಾಕ್ಯವನ್ನು ಸರಿಯಾಗಿ ನಿರ್ವಹಿಸ’ಬೇಕಿತ್ತು. (1 ತಿಮೊಥೆಯ 3:2, NW; ತೀತ 1:9; 2 ತಿಮೊಥೆಯ 2:15) ಅವನ ತಂದೆಯು ಒಬ್ಬ ಅವಿಶ್ವಾಸಿಯಾಗಿದ್ದರೂ, ಅವನ ತಾಯಿಯಾದ ಯೂನೀಕೆ ಮತ್ತು ಅಜ್ಜಿಯಾದ ಲೋವಿ, ಅವನಲ್ಲಿ ‘ನಿಷ್ಕಪಟವಾದ ನಂಬಿಕೆ’ಯನ್ನು ತುಂಬುತ್ತಾ, ಶೈಶವಾವಸ್ಥೆಯಿಂದ ಪವಿತ್ರ ಬರಹಗಳನ್ನು ಅವನಿಗೆ ಕಲಿಸಿದ್ದರು. (2 ತಿಮೊಥೆಯ 1:5; 3:15) ವಿಶ್ವಾಸಿ ತಂದೆಗಳು ತಮ್ಮ ಸಂತಾನವನ್ನು “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ” ಬೆಳೆಸಬೇಕು, ಮತ್ತು ವಿಶೇಷವಾಗಿ ಹಿರಿಯರಾಗಿರುವ ತಂದೆಗಳಿಗೆ “ವಿಷಯಲಂಪಟತನದ ಆರೋಪವಿರದ ಅಥವಾ ಸ್ವಚ್ಛಂದರಾಗಿರದ ವಿಶ್ವಾಸಿ ಮಕ್ಕಳು” ಇರತಕ್ಕದ್ದು. (ಎಫೆಸ 6:4, NW; ತೀತ 1:6, NW) ಹಾಗಾದರೆ, ನಮ್ಮ ಪರಿಸ್ಥಿತಿಗಳು ಏನೇ ಆಗಿರಲಿ, ದೇವರ ವಾಕ್ಯವನ್ನು ಓದುವ, ಅಭ್ಯಸಿಸುವ, ಮತ್ತು ಅನ್ವಯಿಸಿಕೊಳ್ಳುವ ಅಗತ್ಯವನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು.
9. ಬೈಬಲನ್ನು ಜೊತೆ ಕ್ರೈಸ್ತರೊಂದಿಗಿನ ಸಹವಾಸದಲ್ಲಿ ಏಕೆ ಅಭ್ಯಸಿಸಬೇಕು?
9 ನಾವು ಬೈಬಲನ್ನು ಜೊತೆ ವಿಶ್ವಾಸಿಗಳ ಸಹವಾಸದಲ್ಲಿಯೂ ಅಭ್ಯಸಿಸಬೇಕು. ಥೆಸಲೊನೀಕದ ಕ್ರೈಸ್ತರು ತನ್ನ ಸಲಹೆಯನ್ನು ಒಬ್ಬರೊಂದಿಗೊಬ್ಬರು ಚರ್ಚಿಸಬೇಕೆಂದು ಪೌಲನು ಬಯಸಿದನು. (1 ಥೆಸಲೊನೀಕ 4:18) ಸತ್ಯದ ಕುರಿತಾದ ನಮ್ಮ ತಿಳಿವಳಿಕೆಯನ್ನು ಹರಿತಗೊಳಿಸಲು, ಶಾಸ್ತ್ರಗಳನ್ನು ಪರೀಕ್ಷಿಸುವುದರಲ್ಲಿ ಇತರ ಶ್ರದ್ಧಾಳು ವಿದ್ಯಾರ್ಥಿಗಳನ್ನು ಜೊತೆಗೂಡುವುದಕ್ಕಿಂತ ಬೇರೆ ಉತ್ತಮವಾದ ಮಾರ್ಗವು ಇರುವುದಿಲ್ಲ. “ಕಬ್ಬಿಣವು ಕಬ್ಬಿಣವನ್ನು ಹೇಗೋ ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆ ಹರಿತಮಾಡುವನು,” ಎಂಬ ಜ್ಞಾನೋಕ್ತಿಯು ಸತ್ಯವಾಗಿದೆ. (ಜ್ಞಾನೋಕ್ತಿ 27:17) ಕಬ್ಬಿಣದ ಒಂದು ಉಪಕರಣವು ಉಪಯೋಗಿಸಲ್ಪಡದಿದ್ದರೆ ಮತ್ತು ಹರಿತಗೊಳಿಸಲ್ಪಡದಿದ್ದರೆ ಅದಕ್ಕೆ ತುಕ್ಕುಹಿಡಿಯಬಲ್ಲದು. ತದ್ರೀತಿಯಲ್ಲಿ, ನಾವು ಕ್ರಮವಾಗಿ ಕೂಡಿಬಂದು, ದೇವರ ವಾಕ್ಯದ ಸತ್ಯವನ್ನು ಓದುವುದರಿಂದ, ಅಭ್ಯಸಿಸುವುದರಿಂದ ಮತ್ತು ಮನನ ಮಾಡುವುದರಿಂದ ಪಡೆದುಕೊಂಡ ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ಒಬ್ಬರನ್ನೊಬ್ಬರು ಹರಿತಗೊಳಿಸಬೇಕು. (ಇಬ್ರಿಯ 10:24, 25) ಅಲ್ಲದೆ, ನಾವು ಆತ್ಮಿಕ ಬೆಳಕಿನ ಪ್ರಕಾಶಗಳಿಂದ ಪ್ರಯೋಜನ ಪಡೆಯುತ್ತೇವೆಂಬುದನ್ನು ಖಚಿತಪಡಿಸಿಕೊಳ್ಳುವ ಒಂದು ವಿಧವು ಇದಾಗಿದೆ.—ಕೀರ್ತನೆ 97:11; ಜ್ಞಾನೋಕ್ತಿ 4:18.
10. ಸತ್ಯದಲ್ಲಿ ನಡೆಯುವುದರ ಅರ್ಥವೇನು?
10 ಶಾಸ್ತ್ರಗಳ ನಮ್ಮ ಅಭ್ಯಾಸದಲ್ಲಿ, ನಾವು ಕೀರ್ತನೆಗಾರನು ಮಾಡಿದಂತೆ, ದೇವರಿಗೆ ಸೂಕ್ತವಾಗಿ ಪ್ರಾರ್ಥಿಸಬಲ್ಲೆವು: “ನಿನ್ನ ಸತ್ಯಪ್ರಸನ್ನತೆಗಳನ್ನು [ದೂತರನ್ನೋ ಎಂಬಂತೆ] ಕಳುಹಿಸು; ಅವೇ ನಿನ್ನ ಪರಿಶುದ್ಧಪರ್ವತಕ್ಕೆ ನನ್ನನ್ನು ಕರೆದುಕೊಂಡು ಹೋಗಿ ನಿನ್ನ ನಿವಾಸಕ್ಕೆ ಸೇರಿಸಲಿ.” (ಕೀರ್ತನೆ 43:3) ನಾವು ದೇವರ ಸಮ್ಮತಿಯನ್ನು ಪಡೆಯಲು ಬಯಸುವುದಾದರೆ, ನಾವು ಆತನ ಸತ್ಯದಲ್ಲಿ ನಡೆಯಬೇಕು. (3 ಯೋಹಾನ 3, 4) ಇದು ಆತನ ಆವಶ್ಯಕತೆಗಳನ್ನು ಅನುಸರಿಸುವುದು ಮತ್ತು ಆತನನ್ನು ನಂಬಿಗಸ್ತಿಕೆ ಹಾಗೂ ಯಥಾರ್ಥತೆಯಲ್ಲಿ ಸೇವಿಸುವುದನ್ನು ಒಳಗೊಳ್ಳುತ್ತದೆ. (ಕೀರ್ತನೆ 25:4, 5; ಯೋಹಾನ 4:23, 24) ಆತನ ವಾಕ್ಯದಲ್ಲಿ ಪ್ರಕಟಿಸಲ್ಪಟ್ಟಂತೆ ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಪ್ರಕಾಶನಗಳಲ್ಲಿ ಸ್ಪಷ್ಟಗೊಳಿಸಲ್ಪಟ್ಟಂತೆ, ನಾವು ಯೆಹೋವನನ್ನು ಸತ್ಯದಲ್ಲಿ ಸೇವಿಸಬೇಕು. (ಮತ್ತಾಯ 24:45-47) ಇದು ಶಾಸ್ತ್ರಗಳ ನಿಷ್ಕೃಷ್ಟ ಜ್ಞಾನವನ್ನು ಕೇಳಿಕೊಳ್ಳುತ್ತದೆ. ಹಾಗಾದರೆ ನಾವು ದೇವರ ವಾಕ್ಯವನ್ನು ಹೇಗೆ ಓದಿ, ಅಭ್ಯಸಿಸಬೇಕು? ನಾವು ಆದಿಕಾಂಡ 1ನೆಯ ಅಧ್ಯಾಯ, 1ನೆಯ ವಚನದಿಂದ ಆರಂಭಿಸಿ, ಆ 66 ಪುಸ್ತಕಗಳನ್ನು ಅನುಕ್ರಮವಾಗಿ ಓದಬೇಕೊ? ಹೌದು, ತನ್ನ ಭಾಷೆಯಲ್ಲಿ ಸಂಪೂರ್ಣ ಬೈಬಲನ್ನು ಪಡೆದಿರುವ ಪ್ರತಿಯೊಬ್ಬ ಕ್ರೈಸ್ತನು ಅದನ್ನು ಆದಿಕಾಂಡದಿಂದ ಪ್ರಕಟನೆಯ ವರೆಗೆ ಓದಬೇಕು. ಮತ್ತು ಬೈಬಲನ್ನು ಹಾಗೂ ಕ್ರೈಸ್ತ ಪ್ರಕಾಶನಗಳನ್ನು ಓದುವುದರಲ್ಲಿನ ನಮ್ಮ ಉದ್ದೇಶವು, ದೇವರು ‘ನಂಬಿಗಸ್ತ ಆಳಿ’ನ ಮುಖಾಂತರ ಲಭ್ಯಮಾಡಿರುವ ಶಾಸ್ತ್ರೀಯ ಸತ್ಯದ ದೊಡ್ಡ ಪ್ರಮಾಣದ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸುವುದೇ ಆಗಿರಬೇಕು.
ದೇವರ ವಾಕ್ಯವನ್ನು ಗಟ್ಟಿಯಾಗಿ ಓದಿರಿ
11, 12. ಕೂಟಗಳಲ್ಲಿ ಬೈಬಲನ್ನು ಗಟ್ಟಿಯಾಗಿ ಓದಿಸುವುದು ಪ್ರಯೋಜನಕರವೇಕೆ?
11 ನಾವು ಒಬ್ಬಂಟಿಗರಾಗಿರುವಾಗ ಮೌನವಾಗಿ ಓದಬಹುದು. ಆದರೆ, ಪ್ರಾಚೀನ ಸಮಯಗಳಲ್ಲಿ, ಖಾಸಗಿ ಓದುವಿಕೆಯು ಗಟ್ಟಿಯಾದ ದನಿಯಲ್ಲಿ ಮಾಡಲ್ಪಡುತ್ತಿತ್ತು. ಆದುದರಿಂದ ಇಥಿಯೋಪ್ಯದ ಕಂಚುಕಿಯು ತನ್ನ ರಥದಲ್ಲಿ ಸವಾರಿಮಾಡಿದಂತೆ, ಯೆಶಾಯನ ಪ್ರವಾದನೆಯಿಂದ ಅವನು ಓದುವುದನ್ನು ಸೌವಾರ್ತಿಕನಾದ ಫಿಲಿಪ್ಪನು ಕೇಳಿಸಿಕೊಂಡನು. (ಅ. ಕೃತ್ಯಗಳು 8:27-30) “ಓದು” ಎಂಬುದಾಗಿ ಭಾಷಾಂತರಿಸಲಾದ ಹೀಬ್ರು ಪದವು ಪ್ರಧಾನವಾಗಿ “ಕರೆ”ಯುವುದನ್ನು ಅರ್ಥೈಸುತ್ತದೆ. ಆದುದರಿಂದ ಆರಂಭದಲ್ಲಿ ಮೌನವಾಗಿ ಓದಲು ಮತ್ತು ಓದಿದ ವಿಷಯದ ಅರ್ಥವನ್ನು ಗ್ರಹಿಸಲು ಅಶಕ್ತರಾಗಿರುವವರು, ಪ್ರತಿಯೊಂದು ಶಬ್ದವನ್ನು ಗಟ್ಟಿಯಾಗಿ ಉಚ್ಚರಿಸುವುದರಿಂದ ನಿರುತ್ಸಾಹಗೊಳಿಸಲ್ಪಡಬಾರದು. ಮುಖ್ಯವಾದ ವಿಷಯವು, ದೇವರ ಲಿಖಿತ ವಾಕ್ಯವನ್ನು ಓದುವ ಮೂಲಕ ಸತ್ಯವನ್ನು ಕಲಿಯುವುದಾಗಿದೆ.
12 ಕ್ರೈಸ್ತ ಕೂಟಗಳಲ್ಲಿ ಬೈಬಲನ್ನು ಗಟ್ಟಿಯಾಗಿ ಓದಿಸುವುದು ಪ್ರಯೋಜನಕರವಾಗಿದೆ. ಅಪೊಸ್ತಲ ಪೌಲನು ತನ್ನ ಜೊತೆಕೆಲಸಗಾರನಾದ ತಿಮೊಥೆಯನನ್ನು ಪ್ರೇರಿಸಿದ್ದು: “ವೇದಪಾರಾಯಣವನ್ನೂ [“ಸಾರ್ವಜನಿಕ ವಾಚನವನ್ನೂ,” NW] ಪ್ರಸಂಗವನ್ನೂ ಉಪದೇಶವನ್ನೂ ಮಾಡುವದರಲ್ಲಿ ಆಸಕ್ತನಾಗಿರು.” (ಓರೆಅಕ್ಷರಗಳು ನಮ್ಮವು.) (1 ತಿಮೊಥೆಯ 4:13) ಪೌಲನು ಕೊಲೊಸ್ಸೆಯವರಿಗೆ ಹೇಳಿದ್ದು: “ನಿಮ್ಮಲ್ಲಿ ಈ ಪತ್ರಿಕೆಯನ್ನು ಓದಿಸಿಕೊಂಡ ತರುವಾಯ ಲವೊದಿಕೀಯದವರ ಸಭೆಯಲ್ಲಿಯೂ ಓದಿಸಿರಿ; ಮತ್ತು ನಾನು ಬರೆದ ಪತ್ರಿಕೆಯನ್ನು ಲವೊದಿಕೀಯದಿಂದ ತರಿಸಿ ನೀವೂ ಓದಿಸಿಕೊಳ್ಳಿರಿ.” (ಕೊಲೊಸ್ಸೆ 4:16) ಮತ್ತು ಪ್ರಕಟನೆ 1:3 (NW) ಹೇಳುವುದು: “ಈ ಪ್ರವಾದನಾ ಮಾತುಗಳನ್ನು ಗಟ್ಟಿಯಾಗಿ ಓದುವವನೂ ಮತ್ತು ಕೇಳುವವರೂ, ಮತ್ತು ಅದರಲ್ಲಿ ಬರೆದಿರುವ ಸಂಗತಿಗಳನ್ನು ಕೈಕೊಂಡು ನಡೆಯುವವರೂ ಸಂತೋಷಿಗಳು; ಯಾಕಂದರೆ ನೇಮಿತ ಸಮಯವು ಸಮೀಪವಿದೆ.” ಆದುದರಿಂದ, ಒಬ್ಬ ಸಾರ್ವಜನಿಕ ಭಾಷಣಕರ್ತನು ತಾನು ಸಭೆಗೆ ಹೇಳುವುದನ್ನು ಬೆಂಬಲಿಸಲು, ಬೈಬಲಿನಿಂದ ವಚನಗಳನ್ನು ಓದಬೇಕು.
ವಿಷಯ ಸಂಬಂಧವಾದ ಅಭ್ಯಾಸ ವಿಧಾನ
13. ಬೈಬಲ್ ಸತ್ಯಗಳನ್ನು ಕಲಿಯುವ ಅತ್ಯಂತ ಪ್ರಗತಿಪರ ವಿಧಾನವು ಯಾವುದಾಗಿದೆ, ಮತ್ತು ಶಾಸ್ತ್ರಗಳನ್ನು ಗುರುತಿಸುವುದರಲ್ಲಿ ನಮಗೆ ಯಾವುದು ಸಹಾಯ ಮಾಡಬಲ್ಲದು?
13 ವಿಷಯ ಸಂಬಂಧವಾದ ಅಭ್ಯಾಸವು, ಶಾಸ್ತ್ರೀಯ ಸತ್ಯಗಳನ್ನು ಕಲಿಯುವ ಅತ್ಯಂತ ಪ್ರಗತಿಪರ ವಿಧಾನವಾಗಿದೆ. ಪುಸ್ತಕ, ಅಧ್ಯಾಯ, ಮತ್ತು ವಚನಕ್ಕನುಸಾರವಾಗಿ ತಮ್ಮ ಪೂರ್ವಾಪರದಲ್ಲಿ ಬೈಬಲ್ ಶಬ್ದಗಳನ್ನು ವರ್ಣಾನುಕ್ರಮವಾಗಿ ಪಟ್ಟಿಮಾಡುವ ಕನ್ಕಾರ್ಡನ್ಸ್ಗಳು, ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿರುವ ವಚನಗಳ ಗುರುತಿಸುವಿಕೆಯನ್ನು ಸುಲಭವಾಗಿ ಮಾಡುತ್ತವೆ. ಮತ್ತು ಅಂತಹ ಶಾಸ್ತ್ರವಚನಗಳನ್ನು ಪರಸ್ಪರವಾಗಿ ಹೊಂದಿಸಸಾಧ್ಯವಿದೆ ಏಕೆಂದರೆ, ಬೈಬಲಿನ ಗ್ರಂಥಕರ್ತನು ಸ್ವತಃ ಅಸಂಬದ್ಧನಾಗಿರುವುದಿಲ್ಲ. ಪವಿತ್ರಾತ್ಮನ ಮೂಲಕ, 16 ಶತಮಾನಗಳ ಒಂದು ಅವಧಿಯಲ್ಲಿ ಬೈಬಲನ್ನು ಬರೆಯಲು ಆತನು ಸುಮಾರು 40 ಪುರುಷರನ್ನು ಪ್ರೇರಿಸಿದನು, ಮತ್ತು ಅದನ್ನು ವಿಷಯ ಸಂಬಂಧವಾಗಿ ಅಭ್ಯಸಿಸುವುದು ಸತ್ಯವನ್ನು ಕಲಿಯುವ, ದೀರ್ಘ ಸಮಯದಿಂದ ಪರೀಕ್ಷಿಸಲ್ಪಟ್ಟ ವಿಧವಾಗಿದೆ.
14. ಹೀಬ್ರು ಮತ್ತು ಕ್ರೈಸ್ತ ಗ್ರೀಕ್ ಶಾಸ್ತ್ರಗಳನ್ನು ಏಕೆ ಒಟ್ಟಿಗೆ ಅಭ್ಯಸಿಸಬೇಕು?
14 ಬೈಬಲ್ ಸತ್ಯಕ್ಕಾಗಿರುವ ನಮ್ಮ ಗಣ್ಯತೆಯು, ಹೀಬ್ರು ಶಾಸ್ತ್ರಗಳೊಂದಿಗೆ ಕ್ರೈಸ್ತ ಗ್ರೀಕ್ ಶಾಸ್ತ್ರಗಳನ್ನು ಓದಿ, ಅಭ್ಯಸಿಸುವಂತೆ ನಮ್ಮನ್ನು ಪ್ರಚೋದಿಸಬೇಕು. ಇದು ದೇವರ ಉದ್ದೇಶದೊಂದಿಗೆ ಗ್ರೀಕ್ ಶಾಸ್ತ್ರಗಳು ಹೇಗೆ ಸಂಬಂಧಿಸಿವೆ ಎಂಬುದನ್ನು ತೋರಿಸುವುದು ಮತ್ತು ಹೀಬ್ರು ಶಾಸ್ತ್ರಗಳ ಪ್ರವಾದನೆಗಳ ಮೇಲೆ ಬೆಳಕನ್ನು ಬೀರುವುದು. (ರೋಮಾಪುರ 16:25-27; ಎಫೆಸ 3:4-6; ಕೊಲೊಸ್ಸೆ 1:26) ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್, ಈ ಸಂಬಂಧದಲ್ಲಿ ಬಹಳ ಸಹಾಯಕಾರಿಯಾಗಿದೆ. ಇದು ಮೂಲಭೂತ ಬೈಬಲ್ ಪಾಠವನ್ನು ಅಷ್ಟೇ ಅಲ್ಲದೆ ಅದರ ಹಿನ್ನೆಲೆ ಮತ್ತು ನುಡಿಗಟ್ಟಿನ ಅಭಿವ್ಯಕ್ತಿಗಳ ಕುರಿತು ಲಭ್ಯವಿರುವ ವೃದ್ಧಿಗೊಂಡ ಜ್ಞಾನದ ಲಾಭವನ್ನು ತೆಗೆದುಕೊಂಡ ದೇವರ ಸಮರ್ಪಿತ ಸೇವಕರಿಂದ ತಯಾರಿಸಲ್ಪಟ್ಟಿದೆ. ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ’ನ ಮೂಲಕ ಯೆಹೋವನು ಒದಗಿಸಿರುವ ಬೈಬಲ್ ಅಭ್ಯಾಸದ ಸಹಾಯಕಗಳೂ ಅತ್ಯಾವಶ್ಯಕವಾಗಿವೆ.
15. ಬೈಬಲಿನ ವಿಭಿನ್ನ ಭಾಗಗಳಿಂದ ಉದ್ಧರಿಸುವುದು ಸೂಕ್ತವಾಗಿದೆ ಎಂಬುದನ್ನು ನೀವು ಹೇಗೆ ರುಜುಪಡಿಸುವಿರಿ?
15 ‘ನಿಮ್ಮ ಪ್ರಕಾಶನಗಳು ಬೈಬಲಿನಿಂದ ತೆಗೆಯಲ್ಪಟ್ಟ ಸಾವಿರಾರು ಉದ್ಧರಣಗಳನ್ನು ಮಾಡುತ್ತವೆ, ಆದರೆ ಇವುಗಳನ್ನು ನೀವು ಬೈಬಲಿನ ವಿಭಿನ್ನ ಭಾಗಗಳಿಂದ ಏಕೆ ತೆಗೆಯುತ್ತೀರಿ?’ ಎಂದು ಕೆಲವರು ಹೇಳಬಹುದು. ಬೈಬಲಿನ 66 ಪುಸ್ತಕಗಳ ವಿಭಿನ್ನ ಭಾಗಗಳಿಂದ ಉದ್ಧರಿಸುವ ಮೂಲಕ, ಒಂದು ಬೋಧನೆಯ ಸತ್ಯತೆಯನ್ನು ರುಜುಪಡಿಸಲು ಪ್ರಕಾಶನಗಳು ಹಲವಾರು ಪ್ರೇರಿತ ಸಾಕ್ಷಿಗಳನ್ನು ಅವಲಂಬಿಸುತ್ತವೆ. ಸ್ವತಃ ಯೇಸು, ಉಪದೇಶದ ಈ ವಿಧಾನವನ್ನು ಉಪಯೋಗಿಸಿದನು. ತನ್ನ ಪರ್ವತ ಪ್ರಸಂಗವನ್ನು ನೀಡಿದಾಗ, ಅವನು ಹೀಬ್ರು ಶಾಸ್ತ್ರಗಳಿಂದ 21 ಉದ್ಧರಣಗಳನ್ನು ಮಾಡಿದನು. ಆ ಭಾಷಣದಲ್ಲಿ ವಿಮೋಚನಕಾಂಡದಿಂದ ಮೂರು, ಯಾಜಕಕಾಂಡದಿಂದ ಎರಡು, ಅರಣ್ಯಕಾಂಡದಿಂದ ಒಂದು, ಧರ್ಮೋಪದೇಶಕಾಂಡದಿಂದ ಆರು, ಎರಡನೆಯ ಅರಸುಗಳಿಂದ ಒಂದು, ಕೀರ್ತನೆಗಳಿಂದ ನಾಲ್ಕು, ಯೆಶಾಯದಿಂದ ಮೂರು, ಮತ್ತು ಯೆರೆಮೀಯದಿಂದ ಒಂದು ಉದ್ಧರಣವಿದೆ. ಇದನ್ನು ಮಾಡುವ ಮೂಲಕ, ಯೇಸು ‘ಯಾವುದೊ ವಿಷಯವನ್ನು ಕೇವಲ ರುಜುಪಡಿಸಲು ಪ್ರಯತ್ನಿಸುತ್ತಾ’ ಇದ್ದನೊ? ಇಲ್ಲ, ಯಾಕೆಂದರೆ ‘ಅವನು ಶಾಸ್ತ್ರಿಗಳು ಕಲಿಸಿದಂತೆ ಅಲ್ಲ, ಅಧಿಕಾರವಿರುವ ವ್ಯಕ್ತಿಯಂತೆ ಕಲಿಸಿದನು.’ ಅದು ಹಾಗಿತ್ತು ಏಕೆಂದರೆ, ಯೇಸು ತನ್ನ ಬೋಧನೆಯನ್ನು ದೇವರ ಲಿಖಿತ ವಾಕ್ಯದ ಅಧಿಕಾರದೊಂದಿಗೆ ಸಮರ್ಥಿಸಿದನು. (ಮತ್ತಾಯ 7:29) ಅಪೊಸ್ತಲ ಪೌಲನೂ ಹಾಗೆಯೇ ಮಾಡಿದನು.
16. ರೋಮಾಪುರ 15:7-13ರಲ್ಲಿ ಯಾವ ಶಾಸ್ತ್ರೀಯ ಉದ್ಧರಣಗಳನ್ನು ಪೌಲನು ಮಾಡಿದನು?
16 ರೋಮಾಪುರ 15:7-13ರಲ್ಲಿ ಕಂಡುಕೊಳ್ಳಲ್ಪಡುವ ಶಾಸ್ತ್ರೀಯ ಭಾಗದಲ್ಲಿ, ಪೌಲನು ಮೂರು ಹೀಬ್ರು ಶಾಸ್ತ್ರದ ಭಾಗಗಳಿಂದ ಉದ್ಧರಿಸಿದನು—ಧರ್ಮಶಾಸ್ತ್ರ, ಪ್ರವಾದಿಗಳು, ಮತ್ತು ಕೀರ್ತನೆಗಳು. ಯೆಹೂದ್ಯರೂ ಅನ್ಯಜನಾಂಗದವರೂ ದೇವರನ್ನು ಮಹಿಮೆಪಡಿಸುವರೆಂದು ಅವನು ತೋರಿಸಿದನು, ಮತ್ತು ಹೀಗೆ ಕ್ರೈಸ್ತರು ಎಲ್ಲ ರಾಷ್ಟ್ರಗಳ ಜನರನ್ನು ಸ್ವಾಗತಿಸಬೇಕು. ಪೌಲನು ಹೇಳಿದ್ದು: “ಆದದರಿಂದ ಕ್ರಿಸ್ತನು ನಿಮ್ಮನ್ನು ಸೇರಿಸಿಕೊಂಡಂತೆ ನೀವು ಸಹ ಒಬ್ಬರನ್ನೊಬ್ಬರು ಸೇರಿಸಿಕೊಂಡು ದೇವರ ಮಹಿಮೆಯನ್ನು ಪ್ರಕಾಶಪಡಿಸಿರಿ. ಯಾಕಂದರೆ ನಾನು ಹೇಳುವದೇನಂದರೆ—ಕ್ರಿಸ್ತನು ಪಿತೃಗಳಿಗೆ ಉಂಟಾದ ದೇವರ ವಾಗ್ದಾನಗಳನ್ನು ದೃಢಪಡಿಸಿ ಆತನ ಸತ್ಯವನ್ನು ತೋರಿಸುವದಕ್ಕಾಗಿ ಸುನ್ನತಿಯೆಂಬ ಸಂಸ್ಕಾರಕ್ಕೆ ಒಳಗಾದನು; ಜನಾಂಗಗಳಾದರೆ ಕಾರುಣ್ಯದ ನಿಮಿತ್ತ ದೇವರನ್ನು ಕೊಂಡಾಡುತ್ತಾರೆಂಬದೇ. ಇದಕ್ಕೆ ಸರಿಯಾಗಿ ಶಾಸ್ತ್ರದಲ್ಲಿಯೂ [ಕೀರ್ತನೆ 18:49ರಲ್ಲಿ] ಬರೆದದೆ. ಹೇಗಂದರೆ—ಈ ಕಾರಣದಿಂದ ಅನ್ಯಜನಗಳ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು; ನಿನ್ನ ನಾಮವನ್ನು ಸಂಕೀರ್ತಿಸುವೆನು ಎಂದೂ ಇನ್ನೊಂದು [ಧರ್ಮೋಪದೇಶಕಾಂಡ 32:43ರಲ್ಲಿ] ಸ್ಥಳದಲ್ಲಿ—ಜನಾಂಗಗಳಿರಾ, ದೇವರ ಜನರೊಡನೆ ಉಲ್ಲಾಸಪಡಿರಿ ಎಂದೂ ಬೇರೊಂದು [ಕೀರ್ತನೆ 117:1] ಸ್ಥಳದಲ್ಲಿ—ಸರ್ವಜನಾಂಗಗಳೇ, ಕರ್ತ [“ಯೆಹೋವ,” NW]ನನ್ನು ಕೀರ್ತಿಸಿರಿ, ಸಮಸ್ತಪ್ರಜೆಗಳೂ ಆತನನ್ನು ಸಂಕೀರ್ತಿಸಲಿ ಎಂದೂ ಬರೆದದೆ. ಮತ್ತೊಂದು ಸ್ಥಳದಲ್ಲಿ ಯೆಶಾಯನು [11:1, 10] ಹೇಳುವದೇನಂದರೆ—ಇಷಯನ ಅಂಕುರದವನು ಅಂದರೆ ಜನಾಂಗಗಳನ್ನು ಆಳತಕ್ಕವನು ಬರುತ್ತಾನೆ. ಜನಾಂಗಗಳು ಆತನನ್ನು ನಿರೀಕ್ಷಿಸುತ್ತಿರುವರು. ನಿರೀಕ್ಷೆಯ ಮೂಲನಾದ ದೇವರು ನಂಬಿಕೆಯಿಂದುಂಟಾಗುವ ಸಂತೋಷವನ್ನೂ ಮನಶ್ಶಾಂತಿಯನ್ನೂ ನಿಮಗೆ ಪರಿಪೂರ್ಣವಾಗಿ ದಯಪಾಲಿಸಿ ನೀವು ಪವಿತ್ರಾತ್ಮನ ಬಲಗೂಡಿದವರಾಗಿ ನಿರೀಕ್ಷೆಯಲ್ಲಿ ಅಭಿವೃದ್ಧಿಯನ್ನು ಹೊಂದುವಂತೆ ಅನುಗ್ರಹಿಸಲಿ.” ಈ ವಿಷಯ ಸಂಬಂಧವಾದ ವಿಧಾನದ ಮೂಲಕ, ಬೈಬಲ್ ಸತ್ಯಗಳನ್ನು ಸ್ಥಾಪಿಸಲು ಶಾಸ್ತ್ರವಚನಗಳನ್ನು ಹೇಗೆ ಉದ್ಧರಿಸುವುದೆಂಬುದನ್ನು ಪೌಲನು ತೋರಿಸಿದನು.
17. ಯಾವ ಪೂರ್ವನಿದರ್ಶನದೊಂದಿಗೆ ಹೊಂದಿಕೆಯಲ್ಲಿ, ಕ್ರೈಸ್ತರು ಇಡೀ ಬೈಬಲಿನ ವಿಭಿನ್ನ ಭಾಗಗಳಿಂದ ಉದ್ಧರಿಸುತ್ತಾರೆ?
17 ಅಪೊಸ್ತಲ ಪೇತ್ರನ ಪ್ರಥಮ ಪ್ರೇರಿತ ಪತ್ರದಲ್ಲಿ, ಧರ್ಮಶಾಸ್ತ್ರ, ಪ್ರವಾದಿಗಳು ಮತ್ತು ಕೀರ್ತನೆಗಳಲ್ಲಿನ ಹತ್ತು ಪುಸ್ತಕಗಳಿಂದ 34 ಉದ್ಧರಣಗಳಿವೆ. ತನ್ನ ಎರಡನೆಯ ಪತ್ರದಲ್ಲಿ ಪೇತ್ರನು ಮೂರು ಪುಸ್ತಕಗಳಿಂದ ಆರು ಬಾರಿ ಉದ್ಧರಿಸುತ್ತಾನೆ. ಮತ್ತಾಯನ ಸುವಾರ್ತೆಯಲ್ಲಿ ಆದಿಕಾಂಡದಿಂದ ಮಲಾಕಿಯನ ವರೆಗಿನ 122 ಉದ್ಧರಣಗಳಿವೆ. ಗ್ರೀಕ್ ಶಾಸ್ತ್ರಗಳ 27 ಪುಸ್ತಕಗಳಲ್ಲಿ, ಆದಿಕಾಂಡದಿಂದ ಮಲಾಕಿಯನ ವರೆಗಿನ, ನೇರವಾದ 320 ಉದ್ಧರಣಗಳಿವೆ, ಅಷ್ಟೇ ಅಲ್ಲದೆ ಹೀಬ್ರು ಶಾಸ್ತ್ರಗಳಿಗೆ ನೂರಾರು ಇತರ ಉಲ್ಲೇಖಗಳಿವೆ. ಯೇಸುವಿನ ಮೂಲಕ ಸ್ಥಾಪಿಸಲ್ಪಟ್ಟ ಮತ್ತು ಅವನ ಅಪೊಸ್ತಲರ ಮೂಲಕ ಅನುಸರಿಸಲ್ಪಟ್ಟ ಪೂರ್ವನಿದರ್ಶನದೊಂದಿಗೆ ಹೊಂದಿಕೆಯಲ್ಲಿ, ಆಧುನಿಕ ದಿನದ ಕ್ರೈಸ್ತರು ಒಂದು ಶಾಸ್ತ್ರೀಯ ವಿಷಯದ, ವಿಷಯ ಸಂಬಂಧವಾದ ಅಭ್ಯಾಸವನ್ನು ಮಾಡುವಾಗ, ಇಡೀ ಬೈಬಲಿನಲ್ಲಿನ ವಿಭಿನ್ನ ಭಾಗಗಳಿಂದ ಅವರು ಉದ್ಧರಿಸುತ್ತಾರೆ. ಇದು ಹೆಚ್ಚಿನ ಹೀಬ್ರು ಮತ್ತು ಗ್ರೀಕ್ ಶಾಸ್ತ್ರಗಳು ನೆರವೇರುತ್ತಿರುವ ಈ “ಕಡೇ ದಿವಸಗಳಲ್ಲಿ” ವಿಶೇಷವಾಗಿ ತಕ್ಕದ್ದಾಗಿದೆ. (2 ತಿಮೊಥೆಯ 3:1) ‘ನಂಬಿಗಸ್ತ ಆಳು’ ತನ್ನ ಪ್ರಕಾಶನಗಳಲ್ಲಿ ಬೈಬಲಿನ ಅಂತಹ ಉಪಯೋಗವನ್ನು ಮಾಡುತ್ತದೆ, ಆದರೆ ದೇವರ ವಾಕ್ಯಕ್ಕೆ ಅದು ವಿಷಯಗಳನ್ನು ಎಂದಿಗೂ ಕೂಡಿಸುವುದಿಲ್ಲ ಅಥವಾ ಅದರಿಂದ ತೆಗೆಯುವುದಿಲ್ಲ.—ಜ್ಞಾನೋಕ್ತಿ 30:5, 6; ಪ್ರಕಟನೆ 22:18, 19.
ಸದಾ ಸತ್ಯದಲ್ಲಿ ನಡೆಯಿರಿ
18. ನಾವು ಏಕೆ ‘ಸತ್ಯದಲ್ಲಿ ನಡೆಯ’ಬೇಕು?
18 ನಾವು ಬೈಬಲಿನಿಂದ ಏನನ್ನೂ ತೆಗೆಯಬಾರದು, ಯಾಕೆಂದರೆ ದೇವರ ವಾಕ್ಯದಲ್ಲಿರುವ ಸಕಲ ಕ್ರೈಸ್ತ ಬೋಧನೆಗಳು “ಸತ್ಯ”ವಾಗಿವೆ ಅಥವಾ “ಸುವಾರ್ತೆಯ ಸತ್ಯ”ವಾಗಿವೆ. ಈ ಸತ್ಯಕ್ಕೆ ಅಂಟಿಕೊಳ್ಳುವಿಕೆಯು—ಅದರಲ್ಲಿ ‘ನಡೆಯುತ್ತಿರುವುದು’—ರಕ್ಷಣೆಗಾಗಿ ಅತ್ಯಾವಶ್ಯಕವಾಗಿದೆ. (ಗಲಾತ್ಯ 2:5; 2 ಯೋಹಾನ 4; 1 ತಿಮೊಥೆಯ 2:3, 4) ಕ್ರೈಸ್ತತ್ವವು “ಸತ್ಯದ ಮಾರ್ಗ”ವಾಗಿರುವುದರಿಂದ, ಅದರ ಅಭಿರುಚಿಗಳನ್ನು ಹೆಚ್ಚಿಸುವುದರಲ್ಲಿ ಇತರರಿಗೆ ಸಹಾಯ ಮಾಡುವ ಮೂಲಕ, ನಾವು “ಸತ್ಯಕ್ಕೆ ಸಹಕಾರಿಗಳಾಗು”ತ್ತೇವೆ.—2 ಪೇತ್ರ 2:2; 3 ಯೋಹಾನ 8.
19. ನಾವು “ಸತ್ಯವನ್ನು ಅನುಸರಿಸಿ ನಡೆಯುವವರಾಗಿ” ಹೇಗೆ ಇರಬಲ್ಲೆವು?
19 ನಾವು “ಸತ್ಯವನ್ನು ಅನುಸರಿಸಿ ನಡೆಯುವವರಾಗಿ” ಇರಬೇಕಾದರೆ, ನಾವು ಬೈಬಲನ್ನು ಓದಬೇಕು ಮತ್ತು ದೇವರು ‘ನಂಬಿಗಸ್ತ ಆಳಿನ’ ಮುಖಾಂತರ ಒದಗಿಸುವ ಆತ್ಮಿಕ ಸಹಾಯವನ್ನು ನಮಗಾಗಿ ದೊರಕಿಸಿಕೊಳ್ಳಬೇಕು. (3 ಯೋಹಾನ 4) ನಾವು ಇದನ್ನು ನಮ್ಮ ಸ್ವಂತ ಒಳಿತಿಗಾಗಿ ಮತ್ತು ಇತರರಿಗೆ ಯೆಹೋವ ದೇವರು, ಯೇಸು ಕ್ರಿಸ್ತನು, ಮತ್ತು ದೈವಿಕ ಉದ್ದೇಶದ ಕುರಿತು ಕಲಿಸುವ ಸ್ಥಾನದಲ್ಲಿರುವ ಸಲುವಾಗಿ ಮಾಡುವಂತಾಗಲಿ. ಯೆಹೋವನ ಆತ್ಮವು, ಆತನ ವಾಕ್ಯವನ್ನು ಅರ್ಥಮಾಡಿಕೊಳ್ಳುವಂತೆ ಮತ್ತು ಆತನನ್ನು ಸತ್ಯದಲ್ಲಿ ಸೇವಿಸುವುದರಲ್ಲಿ ಸಫಲರಾಗುವಂತೆ ಸಹಾಯ ಮಾಡುತ್ತದೆ ಎಂಬ ವಿಷಯಕ್ಕಾಗಿ ನಾವು ಕೃತಜ್ಞರಾಗಿರೋಣ.
ನಿಮ್ಮ ಉತ್ತರಗಳು ಏನಾಗಿವೆ?
◻ ಬೈಬಲ್ ಓದುವಿಕೆಯ ಕೆಲವು ಬಾಳುವ ಪ್ರಯೋಜನಗಳಾವುವು?
◻ ಬೈಬಲನ್ನು ಜೊತೆ ವಿಶ್ವಾಸಿಗಳೊಂದಿಗಿನ ಸಹವಾಸದಲ್ಲಿ ಏಕೆ ಅಭ್ಯಸಿಸಬೇಕು?
◻ ಬೈಬಲಿನಾದ್ಯಂತ ಹಲವಾರು ಸ್ಥಳಗಳಿಂದ ಉದ್ಧರಿಸುವುದು ಏಕೆ ಯೋಗ್ಯವಾಗಿದೆ?
◻ ‘ಸತ್ಯದಲ್ಲಿ ನಡೆ’ಯುವುದರ ಅರ್ಥವೇನು, ಮತ್ತು ನಾವು ಆ ರೀತಿಯಲ್ಲಿ ಹೇಗೆ ಮಾಡಬಲ್ಲೆವು?
[ಪುಟ 17 ರಲ್ಲಿರುವ ಚಿತ್ರ]
ಹೆತ್ತವರೇ, ನಿಮ್ಮ ಮಕ್ಕಳಿಗೆ ಶಾಸ್ತ್ರಗಳನ್ನು ಕಲಿಸಿರಿ
[ಪುಟ 18 ರಲ್ಲಿರುವ ಚಿತ್ರ]
ತನ್ನ ಪರ್ವತ ಪ್ರಸಂಗದಲ್ಲಿ, ಯೇಸು ಹೀಬ್ರು ಶಾಸ್ತ್ರಗಳ ಹಲವಾರು ಭಾಗಗಳಿಂದ ಉದ್ಧರಿಸಿದನು