ಓದುವಿಕೆಗೆ ನಿಮ್ಮನ್ನು ಅರ್ಪಿಸಿಕೊಳ್ಳಿರಿ
“ನಾನು ಬರುವ ತನಕ ವೇದಪಾರಾಯಣವನ್ನೂ ಪ್ರಸಂಗವನ್ನೂ ಉಪದೇಶವನ್ನೂ ಮಾಡುವದರಲ್ಲಿ ಆಸಕ್ತನಾಗಿರು.”—1 ತಿಮೊಥೆಯ 4:13.
1. ಬೈಬಲನ್ನು ಓದುವುದರಿಂದ ನಾವು ಹೇಗೆ ಪ್ರಯೋಜನ ಪಡೆಯಸಾಧ್ಯವಿದೆ?
ಯೆಹೋವ ದೇವರು ಮಾನವಕುಲಕ್ಕೆ ಓದಲು ಹಾಗೂ ಬರೆಯಲು ಕಲಿಯುವ ಅದ್ಭುತಕರವಾದ ಸಾಮರ್ಥ್ಯವನ್ನು ಕೊಟ್ಟಿದ್ದಾನೆ. ಆತನು ತನ್ನ ವಾಕ್ಯವಾದ ಬೈಬಲನ್ನೂ ಒದಗಿಸಿದ್ದಾನೆ, ಇದರಿಂದ ನಾವು ಚೆನ್ನಾಗಿ ಉಪದೇಶಿಸಲ್ಪಡಸಾಧ್ಯವಿದೆ. (ಯೆಶಾಯ 30:20, 21) ಸಾಂಕೇತಿಕವಾಗಿ, ಅದರ ಪುಟಗಳು ನಮ್ಮನ್ನು ಅಬ್ರಹಾಮ, ಇಸಾಕ, ಮತ್ತು ಯಾಕೋಬರಂತಹ ದೇವಭಯವುಳ್ಳ ಪೂರ್ವಜರೊಂದಿಗೆ “ನಡೆ”ಯಲು ಶಕ್ತರನ್ನಾಗಿ ಮಾಡುತ್ತವೆ. ನಾವು ಸಾರ, ರೆಬೆಕ್ಕ, ಮತ್ತು ಆ ನಿಷ್ಠಾವಂತೆ ಮೋವಾಬ್ಯ ಸ್ತ್ರೀಯಾದ ರೂತಳಂತಹ ದೈವಭಕ್ತಿಯುಳ್ಳ ಸ್ತ್ರೀಯರನ್ನು “ನೋಡ”ಬಲ್ಲೆವು. ಹೌದು, ಮತ್ತು ಯೇಸು ಕ್ರಿಸ್ತನು ತನ್ನ ಪರ್ವತ ಪ್ರಸಂಗವನ್ನು ನೀಡುವುದನ್ನು ನಾವು “ಕೇಳಿಸಿಕೊಳ್ಳ”ಬಲ್ಲೆವು. ನಾವು ಒಳ್ಳೆಯ ಓದುಗರಾಗಿರುವುದಾದರೆ, ಪವಿತ್ರ ಶಾಸ್ತ್ರಗಳಿಂದ ಬರುವ ಈ ಸಕಲ ಆಹ್ಲಾದ ಮತ್ತು ಮಹತ್ವವುಳ್ಳ ಉಪದೇಶವು ನಮ್ಮದಾಗಿರಬಲ್ಲದು.
2. ಯೇಸು ಮತ್ತು ಅವನ ಅಪೊಸ್ತಲರು ಚೆನ್ನಾಗಿ ಓದಶಕ್ತರಿದ್ದರೆಂಬುದನ್ನು ಯಾವುದು ಸೂಚಿಸುತ್ತದೆ?
2 ಖಂಡಿತವಾಗಿಯೂ, ಪರಿಪೂರ್ಣ ಮನುಷ್ಯನಾದ ಯೇಸು ಕ್ರಿಸ್ತನಿಗೆ ಅತ್ಯುತ್ತಮವಾದ ಓದುವ ಸಾಮರ್ಥ್ಯವು ಇತ್ತು, ಮತ್ತು ಅವನು ನಿಶ್ಚಯವಾಗಿಯೂ ಹೀಬ್ರು ಶಾಸ್ತ್ರಗಳನ್ನು ಬಹಳ ಚೆನ್ನಾಗಿ ಅರಿತವನಾಗಿದ್ದನು. ಆದುದರಿಂದ, ಪಿಶಾಚನಿಂದ ಶೋಧಿಸಲ್ಪಟ್ಟಾಗ, ಯೇಸು ಸತತವಾಗಿ ಅವುಗಳ ಕಡೆಗೆ ಸೂಚಿಸಿ, “ಎಂಬದಾಗಿ ಬರೆದದೆ” ಎಂದು ಹೇಳಿದನು. (ಮತ್ತಾಯ 4:4, 7, 10) ಒಂದು ಸಂದರ್ಭದಲ್ಲಿ, ಅವನು ನಜರೇತಿನ ಸಭಾಮಂದಿರದಲ್ಲಿ ಯೆಶಾಯನ ಪ್ರವಾದನೆಯ ಒಂದು ಭಾಗವನ್ನು ಬಹಿರಂಗವಾಗಿ ಓದಿ, ತನಗೆ ಅನ್ವಯಿಸಿಕೊಂಡನು. (ಲೂಕ 4:16-21) ಯೇಸುವಿನ ಅಪೊಸ್ತಲರ ಕುರಿತೇನು? ತಮ್ಮ ಬರಹಗಳಲ್ಲಿ ಅವರು ಅನೇಕ ವೇಳೆ ಹೀಬ್ರು ಶಾಸ್ತ್ರಗಳನ್ನು ಉದ್ಧರಿಸಿದರು. ಪೇತ್ರ ಮತ್ತು ಯೋಹಾನರು ಉನ್ನತ ಕಲಿಕೆಯ ಹೀಬ್ರು ಶಾಲೆಗಳಲ್ಲಿ ಶಿಕ್ಷಣ ಪಡೆಯದೆ ಇದ್ದ ಕಾರಣ, ಯೆಹೂದಿ ಪ್ರಭುಗಳು ಅವರನ್ನು ಅನಕ್ಷರಸ್ಥರು ಮತ್ತು ಸಾಮಾನ್ಯರೆಂದು ಪರಿಗಣಿಸಿದರೂ, ದೈವಿಕವಾಗಿ ಪ್ರೇರಿತವಾದ ಅವರ ಪತ್ರಗಳು, ಅವರು ಚೆನ್ನಾಗಿ ಓದಿ, ಬರೆಯಶಕ್ತರಿದ್ದರೆಂಬುದನ್ನು ಸ್ಪಷ್ಟವಾಗಿ ರುಜುಪಡಿಸುತ್ತವೆ. (ಅ. ಕೃತ್ಯಗಳು 4:13) ಆದರೆ ಓದುವ ಸಾಮರ್ಥ್ಯವು ನಿಜವಾಗಿಯೂ ಪ್ರಾಮುಖ್ಯವಾಗಿದೆಯೊ?
‘ಗಟ್ಟಿಯಾಗಿ ಓದುವವನು . . . ಸಂತೋಷಿತನು’
3. ಶಾಸ್ತ್ರಗಳನ್ನು ಮತ್ತು ಕ್ರೈಸ್ತ ಪ್ರಕಾಶನಗಳನ್ನು ಓದುವುದು ಅಷ್ಟೊಂದು ಪ್ರಾಮುಖ್ಯವೇಕೆ?
3 ಶಾಸ್ತ್ರಗಳ ನಿಷ್ಕೃಷ್ಟವಾದ ಜ್ಞಾನವನ್ನು ತೆಗೆದುಕೊಳ್ಳುವುದು ಮತ್ತು ಅನ್ವಯಿಸಿಕೊಳ್ಳುವುದು ಅನಂತ ಜೀವನದಲ್ಲಿ ಫಲಿಸಬಲ್ಲದು. (ಯೋಹಾನ 17:3) ಆದುದರಿಂದ, ಪವಿತ್ರ ಶಾಸ್ತ್ರಗಳನ್ನು ಮತ್ತು ಅಭಿಷಿಕ್ತ ಕ್ರೈಸ್ತರ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದ ಮುಖಾಂತರ ದೇವರಿಂದ ಒದಗಿಸಲ್ಪಟ್ಟಿರುವ ಕ್ರೈಸ್ತ ಪ್ರಕಾಶನಗಳನ್ನು ಓದುವುದು ಮತ್ತು ಅಭ್ಯಸಿಸುವುದು ಬಹಳ ಪ್ರಾಮುಖ್ಯವೆಂಬುದನ್ನು ಯೆಹೋವನ ಸಾಕ್ಷಿಗಳು ಗ್ರಹಿಸುತ್ತಾರೆ. (ಮತ್ತಾಯ 24:45-47) ವಾಸ್ತವದಲ್ಲಿ, ವಿಶೇಷವಾಗಿ ರಚಿಸಲ್ಪಟ್ಟ ವಾಚ್ ಟವರ್ ಪ್ರಕಾಶನಗಳನ್ನು ಉಪಯೋಗಿಸುವ ಮೂಲಕ, ಓದುವಂತೆ ಮತ್ತು ಹೀಗೆ ದೇವರ ವಾಕ್ಯದ ಜೀವದಾಯಕ ಜ್ಞಾನವನ್ನು ಗಳಿಸುವಂತೆ ಸಾವಿರಾರು ಜನರು ಕಲಿಸಲ್ಪಟ್ಟಿದ್ದಾರೆ.
4. (ಎ) ದೇವರ ವಾಕ್ಯವನ್ನು ಓದುವುದರಿಂದ, ಅಭ್ಯಸಿಸುವುದರಿಂದ ಮತ್ತು ಅನ್ವಯಿಸಿಕೊಳ್ಳುವುದರಿಂದ ಸಂತೋಷವು ಏಕೆ ಫಲಿಸುತ್ತದೆ? (ಬಿ) ಓದುವ ವಿಷಯದಲ್ಲಿ, ಪೌಲನು ತಿಮೊಥೆಯನಿಗೆ ಏನು ಹೇಳಿದನು?
4 ದೇವರ ವಾಕ್ಯವನ್ನು ಓದುವುದರಿಂದ, ಅಭ್ಯಸಿಸುವುದರಿಂದ, ಮತ್ತು ಅನ್ವಯಿಸಿಕೊಳ್ಳುವುದರಿಂದ ಸಂತೋಷವು ಫಲಿಸುತ್ತದೆ. ಇದು ಹಾಗಿದೆ ಏಕೆಂದರೆ, ಅದರ ಪರಿಣಾಮವಾಗಿ ನಾವು ದೇವರನ್ನು ಮೆಚ್ಚಿಸಿ, ಘನಪಡಿಸುತ್ತೇವೆ, ಆತನ ಆಶೀರ್ವಾದವನ್ನು ಪಡೆಯುತ್ತೇವೆ ಮತ್ತು ಆನಂದವನ್ನು ಅನುಭವಿಸುತ್ತೇವೆ. ತನ್ನ ಸೇವಕರು ಸಂತುಷ್ಟರಾಗಿರಬೇಕೆಂದು ಯೆಹೋವನು ಬಯಸುತ್ತಾನೆ. ಆದಕಾರಣ, ಪ್ರಾಚೀನ ಇಸ್ರಾಯೇಲಿನ ಜನರಿಗೆ ತನ್ನ ಧರ್ಮಶಾಸ್ತ್ರವನ್ನು ಓದುವಂತೆ ಆತನು ಯಾಜಕರಿಗೆ ಆಜ್ಞೆಯನ್ನಿತ್ತನು. (ಧರ್ಮೋಪದೇಶಕಾಂಡ 31:9-12) ಯೆರೂಸಲೇಮಿನಲ್ಲಿ ಕೂಡಿಬಂದಿದ್ದ ಸಕಲ ಜನರಿಗೆ, ನಕಲು ಬರೆಯುವವನಾದ ಎಜ್ರನು ಮತ್ತು ಇತರರು ಧರ್ಮಶಾಸ್ತ್ರವನ್ನು ಓದಿದಾಗ, ಅದರ ಅರ್ಥವನ್ನು ಸ್ಪಷ್ಟಪಡಿಸಲಾಯಿತು ಮತ್ತು ಫಲಿತಾಂಶವು “ಮಹಾ ಹರ್ಷಿಸುವಿಕೆ” ಆಗಿತ್ತು. (ನೆಹೆಮೀಯ 8:6-8, 12, NW) ಕ್ರೈಸ್ತ ಅಪೊಸ್ತಲನಾದ ಪೌಲನು ತದನಂತರ ತನ್ನ ಜೊತೆಕೆಲಸಗಾರನಾದ ತಿಮೊಥೆಯನಿಗೆ ಹೇಳಿದ್ದು: “ನಾನು ಬರುವ ತನಕ ವೇದಪಾರಾಯಣವನ್ನೂ ಪ್ರಸಂಗವನ್ನೂ ಉಪದೇಶವನ್ನೂ ಮಾಡುವದರಲ್ಲಿ ಆಸಕ್ತನಾಗಿರು.” (1 ತಿಮೊಥೆಯ 4:13) ಮತ್ತೊಂದು ಭಾಷಾಂತರವು ಓದುವುದು: “ಶಾಸ್ತ್ರದ ಸಾರ್ವಜನಿಕ ಓದುವಿಕೆಗೆ ನಿನ್ನನ್ನು ಅರ್ಪಿಸಿಕೊ.”—ನ್ಯೂ ಇಂಟರ್ನ್ಯಾಷನಲ್ ವರ್ಷನ್.
5. ಪ್ರಕಟನೆ 1:3, ಓದುವುದರೊಂದಿಗೆ ಸಂತೋಷವನ್ನು ಹೇಗೆ ಸಂಬಂಧಿಸುತ್ತದೆ?
5 ನಮ್ಮ ಸಂತೋಷವು ದೇವರ ವಾಕ್ಯದ ಓದುವಿಕೆ ಮತ್ತು ಅನ್ವಯಿಸಿಕೊಳ್ಳುವಿಕೆಯ ಮೇಲೆ ಅವಲಂಬಿಸಿದೆ ಎಂಬುದನ್ನು ಪ್ರಕಟನೆ 1:3 (NW)ರಲ್ಲಿ ಸ್ಪಷ್ಟಗೊಳಿಸಲಾಗಿದೆ. ಅಲ್ಲಿ ನಾವು ಹೀಗೆ ಹೇಳಲ್ಪಟ್ಟಿದ್ದೇವೆ: “ಈ ಪ್ರವಾದನಾ ಮಾತುಗಳನ್ನು ಗಟ್ಟಿಯಾಗಿ ಓದುವವನೂ ಮತ್ತು ಕೇಳುವವರೂ, ಮತ್ತು ಅದರಲ್ಲಿ ಬರೆದಿರುವ ಸಂಗತಿಗಳನ್ನು ಕೈಕೊಂಡು ನಡೆಯುವವರೂ ಸಂತೋಷಿಗಳು; ಯಾಕಂದರೆ ನೇಮಿತ ಸಮಯವು ಸಮೀಪವಿದೆ.” ಹೌದು, ಪ್ರಕಟನೆಯಲ್ಲಿರುವ ಮತ್ತು ಶಾಸ್ತ್ರಗಳಾದ್ಯಂತ ಇರುವ ದೇವರ ಪ್ರವಾದನಾತ್ಮಕ ಮಾತುಗಳನ್ನು ನಾವು ಗಟ್ಟಿಯಾಗಿ ಓದಿ, ಕೇಳಿಸಿಕೊಳ್ಳಬೇಕು. ಯಾರು “ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ,” ಅವನೇ ನಿಜವಾಗಿಯೂ ಸಂತುಷ್ಟನಾದ ವ್ಯಕ್ತಿಯಾಗಿದ್ದಾನೆ. ಫಲಿತಾಂಶವೇನು? “ಅವನ ಕಾರ್ಯವೆಲ್ಲವೂ ಸಫಲವಾಗುವದು.” (ಕೀರ್ತನೆ 1:1-3) ಆದುದರಿಂದ ಒಳ್ಳೆಯ ಕಾರಣಗಳಿಗಾಗಿ, ಯೆಹೋವನ ಸಂಸ್ಥೆಯು ನಮ್ಮಲ್ಲಿ ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ, ಕುಟುಂಬಗಳೋಪಾದಿ, ಮತ್ತು ಸ್ನೇಹಿತರೊಂದಿಗೆ ಆತನ ವಾಕ್ಯವನ್ನು ಓದಿ, ಅಭ್ಯಸಿಸುವಂತೆ ಪ್ರೇರಿಸುತ್ತದೆ.
ಸಕ್ರಿಯವಾಗಿ ಯೋಚಿಸಿರಿ ಮತ್ತು ಮನನ ಮಾಡಿರಿ
6. ಏನನ್ನು ಓದುವಂತೆ ಯೆಹೋಶುವನು ಉಪದೇಶಿಸಲ್ಪಟ್ಟನು ಮತ್ತು ಇದು ಹೇಗೆ ಪ್ರಯೋಜನಕರವಾಗಿತ್ತು?
6 ದೇವರ ವಾಕ್ಯದ ಮತ್ತು ಕ್ರೈಸ್ತ ಪ್ರಕಾಶನಗಳ ನಿಮ್ಮ ಓದುವಿಕೆಯಿಂದ ಅತಿ ಹೆಚ್ಚಿನ ಪ್ರಯೋಜನವನ್ನು ನೀವು ಹೇಗೆ ಪಡೆಯಬಲ್ಲಿರಿ? ಪ್ರಾಚೀನ ಇಸ್ರಾಯೇಲಿನ ಒಬ್ಬ ದೇವಭಯವುಳ್ಳ ನಾಯಕನಾದ ಯೆಹೋಶುವನಿಂದ ಮಾಡಲ್ಪಟ್ಟ ವಿಷಯವನ್ನು ಮಾಡುವುದು ಪ್ರಯೋಜನಕರವೆಂದು ನೀವು ಬಹುಶಃ ಕಂಡುಕೊಳ್ಳುವಿರಿ. ಅವನು ಹೀಗೆ ಆಜ್ಞಾಪಿಸಲ್ಪಟ್ಟಿದ್ದನು: “ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು [“ತಗ್ಗುದನಿಯಲ್ಲಿ ಓದು,” NW] ಧ್ಯಾನಿಸುತ್ತಾ ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡಿ. ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ.” (ಯೆಹೋಶುವ 1:8) ‘ತಗ್ಗುದನಿಯಲ್ಲಿ ಓದುವುದು’ ಎಂದರೆ, ತಗ್ಗಿದ ಧ್ವನಿಯಲ್ಲಿ ನಿಮ್ಮಷ್ಟಕ್ಕೆ ನಿಮಗೆ ವಾಕ್ಯಗಳನ್ನು ಹೇಳಿಕೊಳ್ಳುವುದು ಆಗಿದೆ. ಇದು ಜ್ಞಾಪಕದಲ್ಲಿಡಲು ಒಂದು ಸಹಾಯಕವಾಗಿದೆ, ಏಕೆಂದರೆ ಮನಸ್ಸಿನ ಮೇಲೆ ಅದು ವಿಷಯವನ್ನು ಅಚ್ಚೊತ್ತುತ್ತದೆ. ಯೆಹೋಶುವನು ದೇವರ ಧರ್ಮಶಾಸ್ತ್ರವನ್ನು “ಹಗಲಿರುಳು” ಅಥವಾ ಕ್ರಮವಾಗಿ ಓದಬೇಕಿತ್ತು. ದೇವದತ್ತ ಜವಾಬ್ದಾರಿಗಳನ್ನು ನಿರ್ವಹಿಸುವುದರಲ್ಲಿ, ಸಫಲನಾಗಿರುವ ಮತ್ತು ವಿವೇಕಯುತವಾಗಿ ಕಾರ್ಯಮಾಡುವ ವಿಧವು ಅದಾಗಿತ್ತು. ದೇವರ ವಾಕ್ಯದ ಇಂತಹ ಕ್ರಮವಾದ ಓದುವಿಕೆಯು ನಿಮಗೆ ತದ್ರೀತಿಯಲ್ಲಿ ಸಹಾಯ ಮಾಡಬಲ್ಲದು.
7. ನಾವು ದೇವರ ವಾಕ್ಯವನ್ನು ಓದುವಾಗ, ವೇಗದ ವಿಚಾರವು ಪ್ರಬಲವಾಗಿರುವಂತೆ ನಾವು ಏಕೆ ಬಿಡಬಾರದು?
7 ದೇವರ ವಾಕ್ಯವನ್ನು ಓದುವಾಗ ವೇಗದ ಮೇಲೆ ಕೇಂದ್ರೀಕರಿಸಬೇಡಿ. ಬೈಬಲನ್ನು ಅಥವಾ ಯಾವುದೊ ಕ್ರೈಸ್ತ ಪ್ರಕಾಶನವನ್ನು ಓದುತ್ತಾ, ಒಂದಿಷ್ಟು ಸಮಯಾವಧಿಯನ್ನು ವ್ಯಯಿಸಲು ನೀವು ಯೋಜಿಸಿದ್ದಲ್ಲಿ, ಮಂದ ಗತಿಯಲ್ಲಿ ಓದಲು ನೀವು ಬಯಸಬಹುದು. ಮಹತ್ವವುಳ್ಳ ವಿಷಯಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳುವ ಉದ್ದೇಶದಿಂದ ನೀವು ಅಭ್ಯಸಿಸುತ್ತಿರುವಾಗ, ಇದು ವಿಶೇಷವಾಗಿ ಪ್ರಾಮುಖ್ಯವಾಗಿದೆ. ಮತ್ತು ನೀವು ಓದುವಾಗ, ಸಕ್ರಿಯವಾಗಿ ಯೋಚಿಸಿರಿ. ಬೈಬಲ್ ಬರಹಗಾರನ ಹೇಳಿಕೆಗಳನ್ನು ವಿಶ್ಲೇಷಿಸಿರಿ. ‘ಬರಹಗಾರನ ಉದ್ದೇಶವೇನಾಗಿದೆ? ಈ ಮಾಹಿತಿಯನ್ನು ನಾನು ಹೇಗೆ ಅನ್ವಯಿಸಿಕೊಳ್ಳಬಲ್ಲೆ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿರಿ.
8. ಶಾಸ್ತ್ರಗಳನ್ನು ಓದುತ್ತಿರುವಾಗ ಮನನ ಮಾಡುವುದು ಪ್ರಯೋಜನಕರವೇಕೆ?
8 ಪವಿತ್ರ ಶಾಸ್ತ್ರಗಳನ್ನು ಓದುತ್ತಿರುವಾಗ ಮನನ ಮಾಡಲು ಸಮಯವನ್ನು ತೆಗೆದುಕೊಳ್ಳಿ. ಇದು ಬೈಬಲ್ ವೃತ್ತಾಂತಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಮತ್ತು ಶಾಸ್ತ್ರೀಯ ಮೂಲತತ್ವಗಳನ್ನು ಅನ್ವಯಿಸಿಕೊಳ್ಳಲು ನಿಮಗೆ ಸಹಾಯ ಮಾಡುವುದು. ದೇವರ ವಾಕ್ಯದ ಮೇಲೆ ಮನನ ಮಾಡುವುದು ಮತ್ತು ಹೀಗೆ ನಿಮ್ಮ ಮನಸ್ಸಿನಲ್ಲಿ ಮುಖ್ಯವಾದ ಶಾಸ್ತ್ರೀಯ ವಿಷಯಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು, ನೀವು ತದನಂತರ ವಿಷಾದಿಸಬಹುದಾದ ಯಾವುದೊ ವಿಷಯವನ್ನು ಹೇಳುವ ಬದಲಿಗೆ, ಪ್ರಾಮಾಣಿಕ ವಿಚಾರಕರಿಗೆ ಉತ್ತಮ ಉತ್ತರಗಳನ್ನು ಕೊಡುತ್ತಾ, ಹೃದಯದಿಂದ ಮಾತಾಡುವಂತೆಯೂ ನಿಮ್ಮನ್ನು ಶಕ್ತಗೊಳಿಸುವುದು. ದೈವಿಕವಾಗಿ ಪ್ರೇರಿತವಾದೊಂದು ಜ್ಞಾನೋಕ್ತಿಯು ಹೇಳುವುದು: “ಶಿಷ್ಟನ ಹೃದಯ ವಿವೇಚಿಸಿ [“ಮನನ ಮಾಡಿ,” NW] ಉತ್ತರಕೊಡುತ್ತದೆ.”—ಜ್ಞಾನೋಕ್ತಿ 15:28.
ನವೀನ ವಿಷಯಗಳನ್ನು ಹಿಂದೆ ಕಲಿತ ವಿಷಯಗಳೊಂದಿಗೆ ಸಂಬಂಧಿಸಿರಿ
9, 10. ನಿಮಗೆ ಈಗಾಗಲೇ ತಿಳಿದಿರುವ ವಿಷಯಗಳೊಂದಿಗೆ ನವೀನ ಶಾಸ್ತ್ರೀಯ ವಿಷಯಗಳನ್ನು ಸಂಬಂಧಿಸುವ ಮೂಲಕ, ನಿಮ್ಮ ಬೈಬಲ್ ಓದುವಿಕೆಯು ಹೇಗೆ ವರ್ಧಿಸಲ್ಪಡಸಾಧ್ಯವಿದೆ?
9 ಒಂದು ಸಮಯದಲ್ಲಿ ತಮಗೆ ದೇವರ, ಆತನ ವಾಕ್ಯದ ಮತ್ತು ಆತನ ಉದ್ದೇಶಗಳ ಕುರಿತು ಬಹಳ ಕಡಿಮೆ ಅರಿವಿತ್ತೆಂದು ಹೆಚ್ಚಿನ ಕ್ರೈಸ್ತರು ಒಪ್ಪಿಕೊಳ್ಳಬೇಕು. ಆದರೆ, ಇಂದು ಈ ಕ್ರೈಸ್ತ ಶುಶ್ರೂಷಕರು, ಸೃಷ್ಟಿ ಮತ್ತು ಪಾಪದೊಳಗೆ ಮನುಷ್ಯನ ಬೀಳುವಿಕೆಯಿಂದ ಆರಂಭಿಸುತ್ತಾ, ಕ್ರಿಸ್ತನ ಯಜ್ಞಾರ್ಪಣೆಯ ಉದ್ದೇಶವನ್ನು ವಿವರಿಸಬಲ್ಲರು, ಈ ದುಷ್ಟ ವಿಷಯಗಳ ವ್ಯವಸ್ಥೆಯ ನಾಶನದ ಕುರಿತು ಹೇಳಬಲ್ಲರು, ಮತ್ತು ವಿಧೇಯ ಮಾನವಕುಲವು ಒಂದು ಪ್ರಮೋದವನ ಭೂಮಿಯ ಮೇಲೆ ಅನಂತ ಜೀವನದೊಂದಿಗೆ ಹೇಗೆ ಆಶೀರ್ವದಿಸಲ್ಪಡುವುದೆಂಬುದನ್ನು ತೋರಿಸಬಲ್ಲರು. ಇದು ಬಹುಮಟ್ಟಿಗೆ ಸಂಭವನೀಯ, ಏಕೆಂದರೆ ಯೆಹೋವನ ಈ ಸೇವಕರು ಬೈಬಲನ್ನು ಮತ್ತು ಕ್ರೈಸ್ತ ಪ್ರಕಾಶನಗಳನ್ನು ಅಭ್ಯಸಿಸುವ ಮೂಲಕ “ದೈವಜ್ಞಾನವನ್ನು” ಪಡೆದುಕೊಂಡಿದ್ದಾರೆ. (ಜ್ಞಾನೋಕ್ತಿ 2:1-5) ಅವರು ಕ್ರಮೇಣವಾಗಿ ಈಗಾಗಲೇ ಅರ್ಥಮಾಡಿಕೊಂಡಿರುವ ಹಿಂದಿನ ವಿಷಯಗಳೊಂದಿಗೆ ನವೀನ ವಿಷಯಗಳನ್ನು ಸಂಬಂಧಿಸಿದ್ದಾರೆ.
10 ನಿಮಗೆ ಈಗಾಗಲೇ ತಿಳಿದಿರುವ ವಿಷಯಗಳೊಂದಿಗೆ ನವೀನ ಶಾಸ್ತ್ರೀಯ ವಿಷಯಗಳನ್ನು ಸಂಬಂಧಿಸುವುದು ಪ್ರಯೋಜನಕರವೂ ಪ್ರತಿಫಲದಾಯಕವೂ ಆಗಿದೆ. (ಯೆಶಾಯ 48:17) ಬೈಬಲ್ ನಿಯಮಗಳು, ಮೂಲತತ್ವಗಳು, ಅಥವಾ ಕೊಂಚಮಟ್ಟಿಗೆ ಅಮೂರ್ತವಾಗಿರುವ ವಿಚಾರಗಳು ಸಾದರಪಡಿಸಲ್ಪಟ್ಟಾಗ, ಇವುಗಳನ್ನು ನಿಮಗೆ ಈಗಾಗಲೇ ತಿಳಿದಿರುವ ವಿಷಯದೊಂದಿಗೆ ಸಂಬಂಧಿಸಿರಿ. “ಸ್ವಸ್ಥಬೋಧನಾವಾಕ್ಯಗಳ . . . ಮಾದರಿ”ಯ ಕುರಿತು ನೀವು ಕಲಿತಿರುವ ವಿಷಯದೊಳಗೆ ಈ ಮಾಹಿತಿಯನ್ನು ಸರಿಹೊಂದಿಸಿರಿ. (2 ತಿಮೊಥೆಯ 1:13) ದೇವರೊಂದಿಗಿನ ನಿಮ್ಮ ಸಂಬಂಧವನ್ನು ಬಲಪಡಿಸಲು, ನಿಮ್ಮ ಕ್ರೈಸ್ತ ವ್ಯಕ್ತಿತ್ವವನ್ನು ಉತ್ತಮಪಡಿಸಿಕೊಳ್ಳಲು ಸಹಾಯ ಮಾಡುವ, ಅಥವಾ ಇತರರೊಂದಿಗೆ ಬೈಬಲ್ ಸತ್ಯಗಳನ್ನು ಹಂಚಿಕೊಳ್ಳುವಂತೆ ನಿಮಗೆ ನೆರವು ನೀಡಬಹುದಾದ ಮಾಹಿತಿಗಾಗಿ ಹುಡುಕಿರಿ.
11. ನಡತೆಯ ಕುರಿತು ಬೈಬಲ್ ಹೇಳುವ ಯಾವುದೊ ವಿಷಯವನ್ನು ಓದುತ್ತಿರುವಾಗ, ನೀವು ಏನನ್ನು ಮಾಡಬಹುದಾಗಿದೆ? ದೃಷ್ಟಾಂತಿಸಿರಿ.
11 ನಡತೆಯ ಕುರಿತು ಬೈಬಲ್ ಹೇಳುವ ಯಾವುದೊ ವಿಷಯವನ್ನು ಓದುತ್ತಿರುವಾಗ, ಒಳಗೊಂಡಿರುವ ಮೂಲತತ್ವವನ್ನು ವಿವೇಚಿಸಲು ಪ್ರಯತ್ನಿಸಿರಿ. ಅದರ ಮೇಲೆ ಮನನ ಮಾಡಿರಿ, ಮತ್ತು ತದ್ರೀತಿಯ ಪರಿಸ್ಥಿತಿಗಳಲ್ಲಿ ನೀವು ಏನು ಮಾಡುವಿರೆಂದು ನಿರ್ಣಯಿಸಿರಿ. “ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ” ಎಂದು ಕೇಳುತ್ತಾ, ಯಾಕೋಬನ ಮಗನಾದ ಯೋಸೇಫನು ಪೋಟೀಫರನ ಹೆಂಡತಿಯೊಂದಿಗೆ ಲೈಂಗಿಕ ಅನೈತಿಕತೆಯಲ್ಲಿ ತೊಡಗಲು ಸ್ಥಿರವಾಗಿ ನಿರಾಕರಿಸಿದನು. (ಆದಿಕಾಂಡ 39:7-9) ಈ ಮನಕರಗಿಸುವ ವೃತ್ತಾಂತದಲ್ಲಿ, ಒಳಗೊಂಡಿರುವ ಒಂದು ಮೂಲತತ್ವವನ್ನು ನೀವು ಕಂಡುಕೊಳ್ಳುತ್ತೀರಿ—ಲೈಂಗಿಕ ಅನೈತಿಕತೆಯು ದೇವರ ವಿರುದ್ಧ ಒಂದು ಪಾಪವಾಗಿದೆ. ಈ ಮೂಲತತ್ವವನ್ನು ನೀವು ದೇವರ ವಾಕ್ಯದಲ್ಲಿರುವ ಇತರ ಹೇಳಿಕೆಗಳೊಂದಿಗೆ ಮಾನಸಿಕವಾಗಿ ಸಂಬಂಧಿಸಸಾಧ್ಯವಿದೆ, ಮತ್ತು ಅಂತಹ ತಪ್ಪುಮಾಡುವಿಕೆಯಲ್ಲಿ ಒಳಗೂಡಲು ಪ್ರಲೋಭನಗೊಳಿಸಲ್ಪಡುವುದಾದರೆ ಈ ಜ್ಞಾನದಿಂದ ನೀವು ಲಾಭಪಡೆಯುವಿರಿ.—1 ಕೊರಿಂಥ 6:9-11.
ಶಾಸ್ತ್ರೀಯ ಘಟನೆಗಳನ್ನು ಚಿತ್ರಿಸಿಕೊಳ್ಳಿರಿ
12. ನೀವು ಬೈಬಲ್ ವೃತ್ತಾಂತಗಳನ್ನು ಓದಿದಂತೆ ಅವುಗಳನ್ನು ಏಕೆ ಚಿತ್ರಿಸಿಕೊಳ್ಳಬೇಕು?
12 ನೀವು ಓದಿದಂತೆ ವಿಷಯಗಳನ್ನು ನಿಮ್ಮ ಮನಸ್ಸಿನ ಮೇಲೆ ಅಚ್ಚೊತ್ತಲು, ಸಂಭವಿಸುತ್ತಿರುವುದನ್ನು ಚಿತ್ರಿಸಿಕೊಳ್ಳಿರಿ. ಮಾನಸಿಕವಾಗಿ ಭೂಪ್ರದೇಶವನ್ನು, ಮನೆಗಳನ್ನು, ಜನರನ್ನು ನೋಡಿರಿ. ಅವರ ಧ್ವನಿಗಳನ್ನು ಕೇಳಿರಿ. ಗೂಡು ಒಲೆಯಲ್ಲಿ ಸುಡುತ್ತಿರುವ ರೊಟ್ಟಿಯನ್ನು ಆಘ್ರಾಣಿಸಿರಿ. ಕಲ್ಪನೆಯಲ್ಲಿ ದೃಶ್ಯಗಳನ್ನು ಪುನಃ ಅನುಭವಿಸಿರಿ. ಆಗ ನಿಮ್ಮ ಓದುವಿಕೆಯು ಪ್ರೇರಿಸುವಂತಹ ಒಂದು ಅನುಭವವಾಗಿರುವುದು, ಏಕೆಂದರೆ ನೀವೊಂದು ಪ್ರಾಚೀನ ನಗರವನ್ನು ನೋಡಬಹುದು, ಅತ್ಯಂತ ಎತ್ತರವಾದೊಂದು ಪರ್ವತವನ್ನೇರಬಹುದು, ಸೃಷ್ಟಿಯ ಅದ್ಭುತಗಳ ಕುರಿತು ವಿಸ್ಮಯಪಡಬಹುದು, ಅಥವಾ ಮಹತ್ತರವಾದ ನಂಬಿಕೆಯುಳ್ಳ ಪುರುಷರು ಹಾಗೂ ಸ್ತ್ರೀಯರೊಂದಿಗೆ ಸಹವಾಸಿಸಬಹುದು.
13. ನ್ಯಾಯಸ್ಥಾಪಕರು 7:19-22ರಲ್ಲಿ ದಾಖಲಿಸಲ್ಪಟ್ಟಿರುವುದನ್ನು ನೀವು ಹೇಗೆ ವರ್ಣಿಸುವಿರಿ?
13 ನೀವು ನ್ಯಾಯಸ್ಥಾಪಕರು 7:19-22ನ್ನು ಓದುತ್ತಿದ್ದೀರೆಂದು ಭಾವಿಸಿಕೊಳ್ಳಿರಿ. ನಡೆಯುತ್ತಿರುವುದನ್ನು ಚಿತ್ರಿಸಿಕೊಳ್ಳಿರಿ. ನ್ಯಾಯಸ್ಥಾಪಕನಾದ ಗಿದ್ಯೋನನು ಮತ್ತು ಮುನ್ನೂರು ಧೈರ್ಯವಂತ ಇಸ್ರಾಯೇಲ್ಯ ಪುರುಷರು, ಮಿದ್ಯಾನ್ಯರ ಪಾಳೆಯದ ಅಂಚಿನಲ್ಲಿ ತಮ್ಮ ಸ್ಥಾನಗಳನ್ನು ತೆಗೆದುಕೊಂಡಿದ್ದಾರೆ. ಅದು ಸಂಜೆಯ ಸುಮಾರು ಹತ್ತು ಗಂಟೆಯಾಗಿದೆ, “ರಾತ್ರಿಯ ಮಧ್ಯಯಾಮ” ಪ್ರಾರಂಭವಾಗುವ ಸಮಯ. ಮಿದ್ಯಾನ್ಯ ಕಾವಲುಗಾರರು ಈಗತಾನೆ ನಿಲ್ಲಿಸಲ್ಪಟ್ಟಿದ್ದಾರೆ, ಮತ್ತು ಅಂಧಕಾರವು ನಿದ್ರಿಸುತ್ತಿರುವ ಇಸ್ರಾಯೇಲಿನ ವೈರಿಗಳ ಪಾಳೆಯವನ್ನು ಆವರಿಸುತ್ತದೆ. ಇಗೋ! ಗಿದ್ಯೋನನು ಮತ್ತು ಅವನ ಪುರುಷರು ಕೊಂಬುಗಳಿಂದ ಸಜ್ಜಿತರಾಗಿದ್ದಾರೆ. ತಮ್ಮ ಎಡಗೈಯಲ್ಲಿರುವ ಪಂಜುಗಳನ್ನು ಮುಚ್ಚುವಂತಹ ದೊಡ್ಡ ನೀರಿನ ಕೊಡಗಳು ಅವರಲ್ಲಿವೆ. ಕೂಡಲೇ, ಪ್ರತಿಯೊಂದರಲ್ಲಿ ನೂರು ಮಂದಿಯಿರುವ ಮೂರು ಗುಂಪುಗಳವರು ಕೊಂಬುಗಳನ್ನು ಊದಿ, ಕೊಡಗಳನ್ನು ಒಡೆದು, ಪಂಜುಗಳನ್ನು ಮೇಲಕ್ಕೆತ್ತಿ, “ಯೆಹೋವನ ಕತ್ತಿ, ಗಿದ್ಯೋನನ ಕತ್ತಿ” ಎಂದು ಕೂಗುತ್ತಾರೆ. ನೀವು ಪಾಳೆಯದ ಕಡೆಗೆ ನೋಡುತ್ತೀರಿ. ಮಿದ್ಯಾನ್ಯರಾದರೊ ಕೂಗುತ್ತಾ ಓಡಿಹೋಗುತ್ತಾರೆ! ಆ ಮುನ್ನೂರು ಜನರು ತಮ್ಮ ಕೊಂಬುಗಳನ್ನು ಊದುವುದನ್ನು ಮುಂದುವರಿಸಿದಂತೆ, ಮಿದ್ಯಾನ್ಯರು ಒಬ್ಬರನ್ನೊಬ್ಬರು ಕೊಲ್ಲುವಂತೆ ದೇವರು ಮಾಡುತ್ತಾನೆ. ಮಿದ್ಯಾನ್ಯರು ಓಡಿಹೋಗುವಂತೆ ಮಾಡಲಾಗಿದೆ, ಮತ್ತು ಯೆಹೋವನು ಇಸ್ರಾಯೇಲ್ಗೆ ವಿಜಯವನ್ನು ಕೊಟ್ಟಿದ್ದಾನೆ.
ಅಮೂಲ್ಯವಾದ ಪಾಠಗಳನ್ನು ಕಲಿಯುವುದು
14. ದೀನನಾಗಿರುವ ಅಗತ್ಯವನ್ನು ಒಂದು ಮಗುವಿಗೆ ಕಲಿಸಲು ನ್ಯಾಯಸ್ಥಾಪಕರು 9ನೆಯ ಅಧ್ಯಾಯವನ್ನು ಹೇಗೆ ಉಪಯೋಗಿಸಸಾಧ್ಯವಿದೆ?
14 ದೇವರ ವಾಕ್ಯವನ್ನು ಓದುವ ಮೂಲಕ ನಾವು ಅನೇಕ ಪಾಠಗಳನ್ನು ಕಲಿಯಬಲ್ಲೆವು. ಉದಾಹರಣೆಗೆ, ದೀನರಾಗಿರುವ ಅಗತ್ಯವನ್ನು ನಿಮ್ಮ ಮಕ್ಕಳ ಮೇಲೆ ಅಚ್ಚೊತ್ತಲು ಬಹುಶಃ ನೀವು ಬಯಸುತ್ತೀರಿ. ಒಳ್ಳೆಯದು, ಗಿದ್ಯೋನನ ಮಗನಾದ ಯೋತಾಮನ ಪ್ರವಾದನೆಯಲ್ಲಿ ಏನನ್ನು ಹೇಳಲಾಗಿದೆಯೊ ಅದನ್ನು, ಚಿತ್ರಿಸಿಕೊಳ್ಳಲು ಮತ್ತು ಮಹತ್ವವನ್ನು ಅರ್ಥಮಾಡಿಕೊಳ್ಳಲು ಸುಲಭವಾಗಿರಬೇಕು. ನ್ಯಾಯಸ್ಥಾಪಕರು 9:8ರಿಂದ (NW) ಓದಲು ಆರಂಭಿಸಿರಿ. “ಒಂದಾನೊಂದು ಕಾಲದಲ್ಲಿ ಮರಗಳು ತಮಗೋಸ್ಕರ ಒಬ್ಬ ಅರಸನನ್ನು ಅಭಿಷೇಕಿಸಬೇಕೆಂದು ಹೊರಟ”ವು ಎಂದು ಯೋತಾಮನು ಹೇಳಿದನು. ಆಲಿವ್ ಎಣ್ಣೆಯ ಮರ, ಅಂಜೂರದ ಮರ, ಮತ್ತು ದ್ರಾಕ್ಷಾಲತೆಗಳು ಆಳಲು ನಿರಾಕರಿಸಿದವು. ಆದರೆ ಅಲ್ಪವಾದ ಮುಳ್ಳುಗಿಡವು ಅರಸನಾಗಲು ಸಂತೋಷಿಸಿತು. ನಿಮ್ಮ ಮಕ್ಕಳಿಗೆ ಈ ವೃತ್ತಾಂತವನ್ನು ಗಟ್ಟಿಯಾಗಿ ಓದಿದ ತರುವಾಯ, ಈ ಅಮೂಲ್ಯವಾದ ಗಿಡಗಳು, ತಮ್ಮ ಜೊತೆ ಇಸ್ರಾಯೇಲ್ಯರ ಮೇಲೆ ರಾಜತ್ವದ ಸ್ಥಾನವನ್ನು ಕೋರದ ಅರ್ಹ ವ್ಯಕ್ತಿಗಳನ್ನು ಪ್ರತಿನಿಧಿಸಿದವು ಎಂದು ನೀವು ವಿವರಿಸಬಹುದು. ಉರುವಲಿಗಾಗಿ ಮಾತ್ರ ಪ್ರಯೋಜನಕರವಾಗಿದ್ದ ಮುಳ್ಳುಗಿಡವು, ಇತರರ ಮೇಲೆ ದಬ್ಬಾಳಿಕೆ ನಡೆಸಲು ಬಯಸಿದ, ಆದರೆ ಯೋತಾಮನ ಪ್ರವಾದನೆಯ ನೆರವೇರಿಕೆಯಲ್ಲಿ ಕೊನೆಯನ್ನು ಕಂಡ ಒಬ್ಬ ಕೊಲೆಗಾರನಾದ ದುರಹಂಕಾರಿ ಅಬೀಮೆಲೆಕನ ರಾಜತ್ವವನ್ನು ಪ್ರತಿನಿಧಿಸಿತು. (ನ್ಯಾಯಸ್ಥಾಪಕರು, ಅಧ್ಯಾಯ 9) ಯಾವ ಮಗುವು ತಾನೇ ದೊಡ್ಡದಾಗಿ ಒಂದು ಮುಳ್ಳುಗಿಡದಂತಾಗಲು ಬಯಸುವುದು?
15. ರೂತಳ ಪುಸ್ತಕದಲ್ಲಿ ನಿಷ್ಠೆಯ ಪ್ರಮುಖತೆಯು ಹೇಗೆ ಎತ್ತಿತೋರಿಸಲ್ಪಟ್ಟಿದೆ?
15 ನಿಷ್ಠೆಯ ಪ್ರಮುಖತೆಯು ಬೈಬಲ್ ಪುಸ್ತಕವಾದ ರೂತಳಲ್ಲಿ ಸ್ಪಷ್ಟಗೊಳಿಸಲ್ಪಟ್ಟಿದೆ. ಆ ವೃತ್ತಾಂತವನ್ನು ಗಟ್ಟಿಯಾಗಿ ಓದಿ, ಅದು ಹೇಳುವ ವಿಷಯವನ್ನು ಹೀರಿಕೊಳ್ಳಲು ಪ್ರಯತ್ನಿಸುವುದರಲ್ಲಿ ನಿಮ್ಮ ಕುಟುಂಬದ ಸದಸ್ಯರು ಸರದಿಗಳನ್ನು ತೆಗೆದುಕೊಳ್ಳುತ್ತಿದ್ದಾರೆಂದು ಭಾವಿಸಿಕೊಳ್ಳಿರಿ. ಮೋವಾಬ್ಯ ಸ್ತ್ರೀಯಾದ ರೂತಳು, ವಿಧವೆಯಾದ ತನ್ನ ಅತ್ತೆ ನೊವೊಮಿಯೊಂದಿಗೆ ಬೇತ್ಲೆಹೇಮಿಗೆ ಪ್ರಯಾಣ ಮಾಡುವುದನ್ನು ನೀವು ನೋಡುತ್ತೀರಿ, ಮತ್ತು ರೂತಳು ಹೀಗೆ ಹೇಳುವುದನ್ನು ನೀವು ಕೇಳಿಸಿಕೊಳ್ಳುತ್ತೀರಿ: “ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು.” (ರೂತಳು 1:16) ಉದ್ಯೋಗಶೀಲಳಾದ ರೂತಳು ಬೋವಜನ ಹೊಲದಲ್ಲಿ ಕೊಯ್ಲುಗಾರರ ಹಿಂದೆ ಹಕ್ಕಲಾಯುವುದು ಕಂಡುಬರುತ್ತದೆ. ಅವನು ಹೀಗೆ ಹೇಳುತ್ತಾ, ಆಕೆಯನ್ನು ಶ್ಲಾಘಿಸುವುದನ್ನು ನೀವು ಕೇಳುತ್ತೀರಿ: “ನೀನು ಗುಣವಂತೆಯೆಂಬದು ಊರಿನವರಿಗೆಲ್ಲಾ ಗೊತ್ತದೆ.” (ರೂತಳು 3:11) ಬೇಗನೆ, ಬೋವಜನು ರೂತಳನ್ನು ವಿವಾಹವಾಗುತ್ತಾನೆ. ಮೈದುನಧರ್ಮದ ವಿವಾಹಕ್ಕಾಗಿದ್ದ ಏರ್ಪಾಡಿನೊಂದಿಗೆ ಹೊಂದಿಕೆಯಲ್ಲಿ, ಬೋವಜನ ಮೂಲಕ ಆಕೆ “ನೊವೊಮಿಗೆ” ಒಬ್ಬ ಮಗನನ್ನು ಹೆರುತ್ತಾಳೆ. ರೂತಳು ದಾವೀದನ ಮತ್ತು ಕೊನೆಗೆ ಯೇಸು ಕ್ರಿಸ್ತನ ಪೂರ್ವಜಳಾಗುತ್ತಾಳೆ. ಹೀಗೆ ಆಕೆ “ಉತ್ತಮವಾದ ಪ್ರತಿಫಲವನ್ನು” ಪಡೆದಳು. ಅಷ್ಟೇ ಅಲ್ಲದೆ, ಈ ಶಾಸ್ತ್ರೀಯ ವೃತ್ತಾಂತವನ್ನು ಓದುತ್ತಿರುವವರು ಒಂದು ಅಮೂಲ್ಯವಾದ ಪಾಠವನ್ನು ಕಲಿಯುತ್ತಾರೆ: ಯೆಹೋವನಿಗೆ ನಿಷ್ಠಾವಂತರಾಗಿರಿ, ಮತ್ತು ನೀವು ಸಮೃದ್ಧವಾಗಿ ಆಶೀರ್ವದಿಸಲ್ಪಡುವಿರಿ.—ರೂತಳು 2:12: 4:17-22; ಜ್ಞಾನೋಕ್ತಿ 10:22; ಮತ್ತಾಯ 1:1, 5, 6.
16. ಯಾವ ಪರೀಕ್ಷೆಯನ್ನು ಆ ಮೂವರು ಹೀಬ್ರು ಪುರುಷರು ಅನುಭವಿಸಿದರು, ಮತ್ತು ಈ ವೃತ್ತಾಂತವು ನಮಗೆ ಹೇಗೆ ಸಹಾಯ ಮಾಡಬಲ್ಲದು?
16 ಶೋಧನಾಮಯ ಸನ್ನಿವೇಶಗಳಲ್ಲಿ ನಾವು ದೇವರಿಗೆ ನಂಬಿಗಸ್ತರಾಗಿ ಉಳಿಯಲು ನಮಗೆ ಶದ್ರಕ್, ಮೇಶಕ್, ಮತ್ತು ಅಬೇದ್ನೆಗೋ ಎಂಬ ಹೆಸರಿನ ಹೀಬ್ರು ಪುರುಷರ ವೃತ್ತಾಂತವು ಸಹಾಯ ಮಾಡಬಲ್ಲದು. ದಾನಿಯೇಲ 3ನೆಯ ಅಧ್ಯಾಯವು ಗಟ್ಟಿಯಾಗಿ ಓದಲ್ಪಡುವಾಗ, ಘಟನೆಯನ್ನು ಚಿತ್ರಿಸಿಕೊಳ್ಳಿರಿ. ಬಾಬೆಲಿನ ಅಧಿಕಾರಿಗಳು ಕೂಡಿಸಲ್ಪಟ್ಟಿರುವ ದೂರಾ ಬಯಲಿನಲ್ಲಿ, ಬಂಗಾರದ ಒಂದು ಅತಿದೊಡ್ಡ ಪ್ರತಿಮೆಯು ಉನ್ನತವಾಗಿ ನಿಂತಿರುತ್ತದೆ. ಸಂಗೀತವಾದ್ಯಗಳ ನಾದವು ಕೇಳಿಬಂದಾಗ, ರಾಜನಾದ ನೆಬೂಕದ್ನೆಚ್ಚರನು ಸ್ಥಾಪಿಸಿರುವ ಪ್ರತಿಮೆಗೆ ಅವರು ಅಡ್ಡಬಿದ್ದು ಆರಾಧಿಸುತ್ತಾರೆ. ಅಂದರೆ, ಶದ್ರಕ್, ಮೇಶಕ್, ಮತ್ತು ಅಬೇದ್ನೆಗೋ ಎಂಬವರನ್ನು ಹೊರತುಪಡಿಸಿ, ಸಕಲರೂ ಹಾಗೆ ಮಾಡುತ್ತಾರೆ. ಗೌರವಪೂರ್ಣವಾಗಿಯಾದರೂ, ದೃಢವಾಗಿ ತಾವು ಅವನ ದೇವರುಗಳನ್ನು ಸೇವಿಸಲಾರೆವೆಂದು ಹಾಗೂ ಬಂಗಾರದ ಪ್ರತಿಮೆಯನ್ನು ಆರಾಧಿಸಲಾರೆವೆಂದು ಅವರು ರಾಜನಿಗೆ ಹೇಳುತ್ತಾರೆ. ಈ ಯುವ ಹೀಬ್ರು ಪುರುಷರು ಅತಿಯಾಗಿ ಕಾಯಿಸಿದ ಕುಲುಮೆಯೊಳಗೆ ಹಾಕಲ್ಪಡುತ್ತಾರೆ. ಆದರೆ ಏನು ಸಂಭವಿಸುತ್ತದೆ? ಕುಲುಮೆಯೊಳಗೆ ನೋಡುವಾಗ, ರಾಜನು ದೃಢಕಾಯಸ್ಥರಾದ ನಾಲ್ಕು ಪುರುಷರನ್ನು ಕಾಣುತ್ತಾನೆ, ಅವರಲ್ಲಿ ಒಬ್ಬನು “ದೇವಕುಮಾರನ ರೂಪ”ವನ್ನು ಹೋಲುತ್ತಿದ್ದನು. (ದಾನಿಯೇಲ 3:25) ಈ ಮೂವರು ಹೀಬ್ರು ಪುರುಷರು ಕುಲುಮೆಯಿಂದ ಹೊರತರಲ್ಪಡುತ್ತಾರೆ, ಮತ್ತು ನೆಬೂಕದ್ನೆಚ್ಚರನು ಅವರ ದೇವರನ್ನು ಕೊಂಡಾಡುತ್ತಾನೆ. ಈ ವೃತ್ತಾಂತವನ್ನು ಚಿತ್ರಿಸಿಕೊಂಡದ್ದು ಪ್ರತಿಫಲದಾಯಕವಾಗಿ ಪರಿಣಮಿಸಿದೆ. ಮತ್ತು ಪರೀಕ್ಷೆಯ ಕೆಳಗೆ ಯೆಹೋವನಿಗೆ ನಂಬಿಗಸ್ತರಾಗಿರುವುದರ ಕುರಿತು ಎಂತಹ ಒಂದು ಪಾಠವನ್ನು ಅದು ಒದಗಿಸುತ್ತದೆ!
ಒಂದು ಕುಟುಂಬದೋಪಾದಿ ಬೈಬಲನ್ನು ಓದುವುದರಿಂದ ಪ್ರಯೋಜನ ಪಡೆಯಿರಿ
17. ಬೈಬಲನ್ನು ಒಟ್ಟಿಗೆ ಓದುವ ಮೂಲಕ ನಿಮ್ಮ ಕುಟುಂಬವು ಕಲಿಯಬಲ್ಲ ಕೆಲವೊಂದು ಪ್ರಯೋಜನಕರವಾದ ವಿಷಯಗಳನ್ನು ಸಂಕ್ಷಿಪ್ತವಾಗಿ ತಿಳಿಸಿರಿ.
17 ನೀವು ಕ್ರಮವಾಗಿ ಬೈಬಲನ್ನು ಒಟ್ಟಿಗೆ ಓದುತ್ತಾ, ಸಮಯವನ್ನು ವ್ಯಯಿಸುವುದಾದರೆ, ನಿಮ್ಮ ಕುಟುಂಬವು ಅನೇಕ ಪ್ರಯೋಜನಗಳನ್ನು ಅನುಭವಿಸಬಲ್ಲದು. ಆದಿಕಾಂಡದಲ್ಲಿ ಆರಂಭಿಸುತ್ತಾ, ನೀವು ಸೃಷ್ಟಿಯನ್ನು ಚಿತ್ರಿಸಿಕೊಳ್ಳಸಾಧ್ಯವಿದೆ ಮತ್ತು ಮನುಷ್ಯನ ಮೂಲಭೂತ ಪ್ರಮೋದವನ ಮನೆಯೊಳಗೆ ಇಣಿಕಿ ನೋಡಸಾಧ್ಯವಿದೆ. ನಂಬಿಗಸ್ತ ಪೂರ್ವಜರು ಮತ್ತು ಅವರ ಕುಟುಂಬಗಳ ಅನುಭವಗಳನ್ನು ನೀವು ಹಂಚಿಕೊಳ್ಳಸಾಧ್ಯವಿದೆ ಮತ್ತು ಇಸ್ರಾಯೇಲ್ಯರು ಕೆಂಪು ಸಮುದ್ರದ ಮುಖಾಂತರ ಪಾದಗಳನ್ನು ತೇವಮಾಡಿಕೊಳ್ಳದೆ ಹಾದುಹೋದಂತೆ ಅವರನ್ನು ಹಿಂಬಾಲಿಸಸಾಧ್ಯವಿದೆ. ಬಾಲಕನಾದ ಕುರುಬ ದಾವೀದನು, ಫಿಲಿಷ್ಟಿಯ ದೈತ್ಯನಾದ ಗೊಲ್ಯಾತನನ್ನು ಸೋಲಿಸುವುದನ್ನು ನೀವು ನೋಡಬಲ್ಲಿರಿ. ನಿಮ್ಮ ಕುಟುಂಬವು ಯೆರೂಸಲೇಮಿನಲ್ಲಿ ಯೆಹೋವನ ಆಲಯದ ನಿರ್ಮಾಣವನ್ನು ಗಮನಿಸಬಲ್ಲದು, ಬಾಬೆಲಿನ ದಳಗಳಿಂದ ಅದರ ನಾಶನವನ್ನು ನೋಡಬಲ್ಲದು, ಮತ್ತು ಪ್ರಾಂತಾಧಿಪತಿಯಾದ ಜೆರುಬ್ಬಾಬೆಲ್ನ ಅಧಿಕಾರದಲ್ಲಿ ಅದರ ಪುನರ್ನಿರ್ಮಾಣವನ್ನು ವೀಕ್ಷಿಸಬಲ್ಲದು. ಬೇತ್ಲೆಹೇಮಿನ ಹತ್ತಿರ ದೀನ ಕುರುಬರೊಂದಿಗೆ, ಯೇಸುವಿನ ಜನನದ ಕುರಿತು ದೇವದೂತ ಸಂಬಂಧಿತ ಪ್ರಕಟನೆಯನ್ನು ನೀವು ಕೇಳಬಲ್ಲಿರಿ. ಅವನ ದೀಕ್ಷಾಸ್ನಾನ ಮತ್ತು ಶುಶ್ರೂಷೆಯ ಕುರಿತಾದ ವಿವರಗಳನ್ನು ನೀವು ಪಡೆಯಬಲ್ಲಿರಿ, ಒಂದು ಪ್ರಾಯಶ್ಚಿತ್ತದೋಪಾದಿ ತನ್ನ ಮಾನವ ಜೀವಿತವನ್ನು ಅವನು ಅರ್ಪಿಸುವುದನ್ನು ನೀವು ನೋಡಬಲ್ಲಿರಿ, ಮತ್ತು ಅವನ ಪುನರುತ್ಥಾನದ ಆನಂದವನ್ನು ಹಂಚಿಕೊಳ್ಳಬಲ್ಲಿರಿ. ಅನಂತರ, ನೀವು ಅಪೊಸ್ತಲ ಪೌಲನೊಂದಿಗೆ ಪ್ರಯಾಣಿಸಿ, ಕ್ರೈಸ್ತತ್ವವು ಹಬ್ಬಿಕೊಂಡಂತೆ ಸಭೆಗಳ ಸ್ಥಾಪನೆಯನ್ನು ಗಮನಿಸಬಲ್ಲಿರಿ. ಆಮೇಲೆ, ಪ್ರಕಟನೆಯ ಪುಸ್ತಕದಲ್ಲಿ ನಿಮ್ಮ ಕುಟುಂಬವು, ಕ್ರಿಸ್ತನ ಸಾವಿರ ವರ್ಷದ ಆಳಿಕೆಯನ್ನು ಸೇರಿಸಿ, ಭವಿಷ್ಯತ್ತಿನ ಕುರಿತಾದ ಅಪೊಸ್ತಲ ಯೋಹಾನನ ಮಹತ್ತರವಾದ ದರ್ಶನವನ್ನು ಆನಂದಿಸಬಲ್ಲದು.
18, 19. ಕುಟುಂಬ ಬೈಬಲ್ ಓದುವಿಕೆಯ ಸಂಬಂಧದಲ್ಲಿ ಯಾವ ಸೂಚನೆಗಳು ನೀಡಲ್ಪಟ್ಟಿವೆ?
18 ಕುಟುಂಬದೋಪಾದಿ ನೀವು ಬೈಬಲನ್ನು ಗಟ್ಟಿಯಾಗಿ ಓದುತ್ತಿರುವಲ್ಲಿ, ಅದನ್ನು ಸ್ಪಷ್ಟತೆ ಹಾಗೂ ಉತ್ಸಾಹದೊಂದಿಗೆ ಓದಿರಿ. ಶಾಸ್ತ್ರಗಳ ಕೆಲವು ಭಾಗಗಳನ್ನು ಓದುತ್ತಿರುವಾಗ, ಕುಟುಂಬದ ಒಬ್ಬ ಸದಸ್ಯನು—ಬಹುಶಃ ತಂದೆಯು—ಸಾಮಾನ್ಯ ವೃತ್ತಾಂತದ ವಾಕ್ಯಗಳನ್ನು ಓದಬಹುದು. ಕುಟುಂಬದ ಇತರ ಸದಸ್ಯರಾದ ನೀವು, ನಿಮ್ಮ ಭಾಗಗಳನ್ನು ಸೂಕ್ತವಾದ ಅನಿಸಿಕೆಗಳೊಂದಿಗೆ ಓದುತ್ತಾ, ಬೈಬಲ್ ವ್ಯಕ್ತಿಗಳ ಪಾತ್ರಗಳನ್ನು ವಹಿಸಿಕೊಳ್ಳಸಾಧ್ಯವಿದೆ.
19 ಕುಟುಂಬದೋಪಾದಿ ಬೈಬಲ್ ಓದುವಿಕೆಯಲ್ಲಿ ನೀವು ಭಾಗವಹಿಸಿದಂತೆ, ಓದಲಿಕ್ಕಾಗಿರುವ ನಿಮ್ಮ ಸಾಮರ್ಥ್ಯವು ಉತ್ತಮಗೊಳ್ಳಬಹುದು. ಬಹುಶಃ ದೇವರ ಕುರಿತಾದ ನಿಮ್ಮ ಜ್ಞಾನವು ವೃದ್ಧಿಸುವುದು ಮತ್ತು ಇದು ನಿಮ್ಮನ್ನು ಆತನ ಹತ್ತಿರಕ್ಕೆ ತರತಕ್ಕದ್ದು. ಆಸಾಫನು ಹಾಡಿದ್ದು: “ನನಗಾದರೋ ದೇವರ ಸಾನ್ನಿಧ್ಯವೇ ಭಾಗ್ಯವು. ಕರ್ತನೇ, ಯೆಹೋವನೇ, ನಾನು ನಿನ್ನನ್ನು ಆಶ್ರಯಿಸಿಕೊಂಡವನಾಗಿ ನಿನ್ನ ಮಹತ್ಕಾರ್ಯಗಳನ್ನು ಪ್ರಕಟಿಸುವೆನು.” (ಕೀರ್ತನೆ 73:28) ಇದು, ಮೋಶೆಯ ಹಾಗೆ ಇರುವಂತೆ ನಿಮ್ಮ ಕುಟುಂಬಕ್ಕೆ ಸಹಾಯ ಮಾಡುವುದು, ಅವನು ಯೆಹೋವ ದೇವರನ್ನು, ಅಂದರೆ “ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.”—ಇಬ್ರಿಯ 11:27.
ಓದುವಿಕೆ ಮತ್ತು ಕ್ರೈಸ್ತ ಶುಶ್ರೂಷೆ
20, 21. ನಮ್ಮ ಸಾರುವ ಆದೇಶವು ಓದುವ ಸಾಮರ್ಥ್ಯಕ್ಕೆ ಹೇಗೆ ಸಂಬಂಧಿಸಿದೆ?
20 “ಅದೃಶ್ಯನಾಗಿರುವಾತನನ್ನು” ಆರಾಧಿಸುವ ನಮ್ಮ ಬಯಕೆಯು, ಒಳ್ಳೆಯ ಓದುಗರಾಗಿರುವುದರ ಕಡೆಗೆ ಕೆಲಸಮಾಡುವಂತೆ ನಮ್ಮನ್ನು ಪ್ರೇರಿಸತಕ್ಕದ್ದು. ಚೆನ್ನಾಗಿ ಓದುವ ಸಾಮರ್ಥ್ಯವು, ದೇವರ ವಾಕ್ಯದಿಂದ ಸಾಕ್ಷಿನೀಡುವಂತೆ ನಮಗೆ ಸಹಾಯ ಮಾಡುತ್ತದೆ. “ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶಮಾಡಿರಿ,” ಎಂದು ಯೇಸು ಹೇಳಿದಾಗ, ಯಾವ ಕಾರ್ಯಕ್ಕೆ ಅವನು ತನ್ನ ಹಿಂಬಾಲಕರಿಗೆ ಆದೇಶ ನೀಡಿದನೊ, ಆ ರಾಜ್ಯ ಸಾರುವಿಕೆಯ ಕೆಲಸದಲ್ಲಿ ಮುಂದುವರಿಯಲು ಅದು ಖಂಡಿತವಾಗಿಯೂ ನಮಗೆ ಸಹಾಯ ಮಾಡುತ್ತದೆ. (ಮತ್ತಾಯ 28:19, 20; ಅ. ಕೃತ್ಯಗಳು 1:8) ಸಾಕ್ಷಿಕಾರ್ಯವು ಯೆಹೋವನ ಜನರ ಪ್ರಧಾನ ಕಾರ್ಯವಾಗಿದೆ, ಮತ್ತು ಓದುವ ಸಾಮರ್ಥ್ಯವು ಅದನ್ನು ಪೂರೈಸುವಂತೆ ನಮಗೆ ಸಹಾಯ ಮಾಡುತ್ತದೆ.
21 ಒಳ್ಳೆಯ ಓದುಗರಾಗಿರಲು ಮತ್ತು ದೇವರ ವಾಕ್ಯದ ನಿಪುಣ ಬೋಧಕರಾಗಿರಲು ಪ್ರಯತ್ನದ ಆವಶ್ಯಕತೆಯಿದೆ. (ಎಫೆಸ 6:17) ಆದುದರಿಂದ, ‘ಸತ್ಯವಾಕ್ಯವನ್ನು ಸರಿಯಾಗಿ ನಿರ್ವಹಿಸುತ್ತಾ, ದೇವರ ದೃಷ್ಟಿಗೆ ಯೋಗ್ಯರಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡಿರಿ.’ (2 ತಿಮೊಥೆಯ 2:15) ಓದುವಿಕೆಗೆ ನಿಮ್ಮನ್ನು ಅರ್ಪಿಸಿಕೊಳ್ಳುವ ಮೂಲಕ, ಶಾಸ್ತ್ರೀಯ ಸತ್ಯದ ನಿಮ್ಮ ಜ್ಞಾನವನ್ನು ಮತ್ತು ಯೆಹೋವನ ಒಬ್ಬ ಸಾಕ್ಷಿಯೋಪಾದಿ ನಿಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಿರಿ.
ನಿಮ್ಮ ಉತ್ತರಗಳು ಏನಾಗಿವೆ?
◻ ದೇವರ ವಾಕ್ಯವನ್ನು ಓದುವುದರ ಮೇಲೆ ಸಂತೋಷವು ಹೇಗೆ ಅವಲಂಬಿಸಿದೆ?
◻ ಬೈಬಲಿನಲ್ಲಿ ನೀವು ಓದುವ ವಿಷಯದ ಕುರಿತು ಏಕೆ ಮನನ ಮಾಡಬೇಕು?
◻ ಶಾಸ್ತ್ರಗಳನ್ನು ಓದುತ್ತಿರುವಾಗ, ಸಂಬಂಧಿಸುವಿಕೆಯನ್ನು ಮತ್ತು ಚಿತ್ರಿಸಿಕೊಳ್ಳುವಿಕೆಯನ್ನು ಏಕೆ ಉಪಯೋಗಿಸಬೇಕು?
◻ ಬೈಬಲ್ ಓದುವಿಕೆಯಿಂದ ಕಲಿಯಬೇಕಾಗಿರುವ ಕೆಲವು ಪಾಠಗಳಾವುವು?
◻ ಕುಟುಂಬದೋಪಾದಿ ಬೈಬಲನ್ನು ಗಟ್ಟಿಯಾಗಿ ಓದಬೇಕು ಏಕೆ, ಮತ್ತು ಕ್ರೈಸ್ತ ಶುಶ್ರೂಷೆಯೊಂದಿಗೆ ಓದುವಿಕೆಗೆ ಯಾವ ಸಂಬಂಧವಿದೆ?
[ಪುಟ 13 ರಲ್ಲಿರುವ ಚಿತ್ರಗಳು]
ಕುಟುಂಬದೋಪಾದಿ ಬೈಬಲನ್ನು ಓದುತ್ತಿರುವಾಗ, ವೃತ್ತಾಂತಗಳನ್ನು ಚಿತ್ರಿಸಿಕೊಳ್ಳಿರಿ ಮತ್ತು ಅವುಗಳ ಮಹತ್ವದ ಕುರಿತು ಮನನ ಮಾಡಿರಿ