ನನ್ನ ಜೀವನ ಪರ್ಯಂತದ ನಿರೀಕ್ಷೆ —ಎಂದೂ ಸಾಯದಿರುವುದು
ಹೆಕ್ಟರ್ ಆರ್. ಪ್ರೀಸ್ಟಿ ಹೇಳಿರುವಂತೆ
“ಈ ಕಾನ್ಸರ್ ಗುಣಪಡಿಸಲಾರದಂತಹದ್ದಾಗಿದೆ,” ಎಂದು ವೈದ್ಯರು ಹೇಳಿದರು. “ನಾವು ನಿಮಗಾಗಿ ಇನ್ನು ಹೆಚ್ಚಿನದ್ದೇನನ್ನೂ ಮಾಡಲು ಸಾಧ್ಯವಿಲ್ಲ.” ಆ ರೋಗ ನಿರ್ಣಯವು ಹತ್ತು ವರ್ಷಗಳಿಗಿಂತಲೂ ಹಿಂದೆ ಮಾಡಲ್ಪಟ್ಟಿತು. ಆದರೂ ನಾನು ಇನ್ನೂ ಎಂದೂ ಸಾಯದೆ ಭೂಮಿಯ ಮೇಲೆ ಸದಾಕಾಲ ಜೀವಿಸುವ ಬೈಬಲ್ ಆಧರಿತ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇನೆ.—ಯೋಹಾನ 11:26.
ನನ್ನ ಹೆತ್ತವರು, ನಮ್ಮ ಕುಟುಂಬದ ಫಾರ್ಮ್ನಿಂದ ಅಷ್ಟೇನೂ ದೂರದಲ್ಲಿರದ ಒಂದು ಚಿಕ್ಕ ಹಳ್ಳಿ ಪಟ್ಟಣದಲ್ಲಿದ್ದ ಚರ್ಚನ್ನು ಕ್ರಮವಾಗಿ ಹಾಜರಾಗುತ್ತಿದ್ದ, ಪ್ರಾಮಾಣಿಕ ಮೆತೊಡಿಸ್ಟರಾಗಿದ್ದರು. ನ್ಯೂ ಸೀಲೆಂಡಿನ ವೆಲಿಂಗ್ಟನಿನ ಈಶಾನ್ಯ ದಿಕ್ಕಿನಲ್ಲಿ, ಸುಮಾರು 130 ಕಿಲೊಮೀಟರ್ಗಳಷ್ಟು ದೂರದಲ್ಲಿರುವ ವೈರಾರಾಪಾದ ಸೊಗಸಾದ ಫಾರ್ಮಿಂಗ್ ಕಣಿವೆಯಲ್ಲಿ ನಾನು ಜನಿಸಿದೆ. ಅಲ್ಲಿ ನಾವು ಹಿಮಾವೃತ ಪರ್ವತಗಳು, ತಿಳಿಯಾದ ಪರ್ವತ ನದಿಗಳು, ಏರುತಗ್ಗಿನ ಗುಡ್ಡಗಳು ಮತ್ತು ಫಲಪ್ರದವಾದ ಸಮತಟ್ಟು ಪ್ರದೇಶಗಳ ನೋಟವನ್ನು ಆನಂದಿಸಿದೆವು.
ಎಲ್ಲಾ ಒಳ್ಳೇ ಜನರು ಸ್ವರ್ಗಕ್ಕೆ ಹೋಗುತ್ತಾರೆಂದು ಆದರೆ ಕೆಟ್ಟ ಜನರು, ಯಾತನೆಯ ಸ್ಥಳವಾಗಿರುವ ನರಕಕ್ಕೆ ಹೋಗುತ್ತಾರೆಂದು ನಾವು ಮೆತೊಡಿಸ್ಟ್ ಚರ್ಚಿನಲ್ಲಿ ಕಲಿಸಲ್ಪಟ್ಟಿದ್ದೆವು. ಮನುಷ್ಯರು ಸ್ವರ್ಗದಲ್ಲಿ ಜೀವಿಸಬೇಕೆಂದು ದೇವರು ಬಯಸಿದ್ದಲ್ಲಿ, ಆರಂಭದಲ್ಲೇ ಅವನು ಅವರನ್ನು ಅಲ್ಲಿ ಏಕೆ ಇಡಲಿಲ್ಲವೆಂದು ನನಗೆ ತಿಳಿಯುತ್ತಿರಲಿಲ್ಲ. ನಾನು ಯಾವಾಗಲೂ ಮರಣಕ್ಕೆ ಹೆದರುತ್ತಿದ್ದೆ ಮತ್ತು ನಾವು ಏಕೆ ಸಾಯಬೇಕೆಂದು ಅನೇಕಸಲ ಸೋಜಿಗಪಡುತ್ತಿದ್ದೆ. 1927ರಲ್ಲಿ ನಾನು 16 ವರ್ಷ ಪ್ರಾಯದವನಾಗಿದ್ದಾಗ, ನಮ್ಮ ಕುಟುಂಬವು ಒಂದು ದುರಂತವನ್ನು ಅನುಭವಿಸಿತು. ಅದು ತಾನೇ ನನ್ನ ಪ್ರಶ್ನೆಗಳಿಗಾಗಿ ಉತ್ತರಗಳನ್ನು ಅನ್ವೇಷಿಸಲು ನನ್ನನ್ನು ನಡೆಸಿತು.
ರೆಜ್ ಏಕೆ ಸತ್ತನು?
ನನ್ನ ತಮ್ಮನಾದ ರೆಜ್, 11 ವರ್ಷ ಪ್ರಾಯದವನಾಗಿದ್ದಾಗ ಗಂಭೀರವಾಗಿ ಅಸ್ವಸ್ಥನಾದನು. ಏನಾಗಿದೆಯೆಂದು ವೈದ್ಯರಿಗೆ ನಿರ್ಣಯಿಸಲು ಸಾಧ್ಯವಾಗದೆ ಅವನಿಗೆ ಸಹಾಯ ಮಾಡಲು ಅಶಕ್ತರಾಗಿದ್ದರು. ತಾಯಿ ಮೆತೊಡಿಸ್ಟ್ ಶುಶ್ರೂಷಕನನ್ನು ಕರೆಸಿದರು. ಅವನು ರೆಜ್ಗಾಗಿ ಪ್ರಾರ್ಥಿಸಿದನು, ಆದರೆ ಇದು ತಾಯಿಯನ್ನು ಸಂತೈಸುವುದರಲ್ಲಿ ವಿಫಲಗೊಂಡಿತು. ವಾಸ್ತವದಲ್ಲಿ, ಅವನ ಪ್ರಾರ್ಥನೆಗಳು ಪರಿಣಾಮಕಾರಿಯಾಗಿರಲಿಲ್ಲವೆಂದು ಅವರು ಶುಶ್ರೂಷಕನಿಗೆ ಹೇಳಿದರು.
ರೆಜ್ ಸತ್ತಾಗ, ತಾಯಿಯು ತನ್ನ ಎಳೆಯ ಮಗನು ಏಕೆ ಸಾಯಬೇಕಾಗಿತ್ತು ಎಂಬುದರ ಕುರಿತಾದ ಸತ್ಯಪೂರ್ಣ ಉತ್ತರಗಳಿಗಾಗಿರುವ ತನ್ನ ದಾಹವನ್ನು ತೃಪ್ತಿಪಡಿಸಲು ಯಾರೇ ಇರಲಿ ಅವರೊಂದಿಗೆ ಮಾತಾಡುತ್ತಿದ್ದರು. ಪಟ್ಟಣದಲ್ಲಿನ ಒಬ್ಬ ವ್ಯಾಪಾರಸ್ಥನೊಂದಿಗೆ ಮಾತಾಡುತ್ತಿದ್ದಾಗ, ಸತ್ತವರ ಸ್ಥಿತಿಯ ಕುರಿತಾಗಿ ಅವನಿಗೆ ಏನಾದರೂ ತಿಳಿದಿದೆಯೊ ಎಂದು ಅವರು ಕೇಳಿದರು. ಅವನಿಗೆ ಯಾವ ಕಲ್ಪನೆಯೂ ಇರಲಿಲ್ಲ, ಆದರೆ ಅವನು ಹೇಳಿದ್ದು: “ಯಾರೊ ಒಬ್ಬರು ಒಂದು ಪುಸ್ತಕವನ್ನು ಬಿಟ್ಟುಹೋದರು, ಅದನ್ನು ನೀವು ಇಟ್ಟುಕೊಳ್ಳಬಹುದು.”
ತಾಯಿ ಆ ಪುಸ್ತಕವನ್ನು ಮನೆಗೆ ಕೊಂಡೊಯ್ದು ಅದನ್ನು ಓದಲಾರಂಭಿಸಿದರು. ಅವರಿಗೆ ಅದನ್ನು ಕೆಳಗಿಡಲಾಗಲಿಲ್ಲ. ಅವರ ಇಡೀ ಪ್ರಕೃತಿಯು ಕ್ರಮೇಣವಾಗಿ ಬದಲಾಯಿತು. ಅವರು ಕುಟುಂಬಕ್ಕೆ ಹೇಳಿದ್ದು, “ಇದೇ, ಇದು ತಾನೇ ಸತ್ಯವಾಗಿದೆ.” ಆ ಪುಸ್ತಕವು ಸ್ಟಡೀಸ್ ಇನ್ ದ ಸ್ಕ್ರಿಪ್ಚರ್ಸ್ನ ಮೊದಲನೆಯ ಸಂಪುಟವಾದ, ದ ಡಿವೈನ್ ಪ್ಲ್ಯಾನ್ ಆಫ್ ದಿ ಏಜಸ್ ಆಗಿತ್ತು. ಆರಂಭದಲ್ಲಿ ನಾನು ಸಂದೇಹಿಸಿದೆ ಮತ್ತು ಸೃಷ್ಟಿಕರ್ತನ ಉದ್ದೇಶದ ಕುರಿತಾಗಿ ಪುಸ್ತಕದ ಪ್ರಸ್ತುತಪಡಿಸುವಿಕೆಯ ವಿರುದ್ಧ ವಾದಿಸಲು ಪ್ರಯತ್ನಿಸಿದೆ. ಕಟ್ಟಕಡೆಗೆ ನನ್ನ ವಾದಗಳು ನಿಂತುಹೋದವು.
ಬೈಬಲ್ ಸತ್ಯವನ್ನು ಸ್ವೀಕರಿಸುವುದು
‘ಎಂದಿಗೂ ಸಾಯದೆ ಇರುವುದು, ಸದಾಕಾಲ ಜೀವಿಸುವುದನ್ನು ಊಹಿಸಿಕೊ!’ ಎಂದು ನಾನು ಯೋಚಿಸಿದೆ. ಅಂತಹ ಒಂದು ನಿರೀಕ್ಷೆಯು, ಒಬ್ಬ ಪ್ರೀತಿಪೂರ್ಣ ದೇವರಿಂದ ಒಬ್ಬನು ನಿರೀಕ್ಷಿಸಬಹುದಾದ ಒಂದು ಸಂಗತಿಯಾಗಿದೆ. ಒಂದು ಪ್ರಮೋದವನ ಭೂಮಿ! ಹೌದು, ಇದು ನನಗಾಗಿರುವ ವಿಷಯವಾಗಿತ್ತು.
ಈ ಅದ್ಭುತಕರವಾದ ಸತ್ಯಗಳನ್ನು ಕಲಿತ ನಂತರ, ತಾಯಿಯವರು ಮತ್ತು ವೆಲಿಂಗ್ಟನ್ನ ಮೂರು ಕ್ರೈಸ್ತ ಸಹೋದರಿಯರು—ಸಹೋದರಿ ತಾಮ್ಸನ್, ಬಾರ್ಟನ್ ಮತ್ತು ಜೋನ್ಸ್—ಒಂದು ಸಮಯಕ್ಕೆ ಹಲವಾರು ದಿನಗಳ ತನಕ, ರಾಜ್ಯ ಬೀಜವನ್ನು ಗ್ರಾಮ ಪ್ರದೇಶಗಳಲ್ಲಿ ದೂರ ಮತ್ತು ವಿಸ್ತಾರವಾಗಿ ಹರಡಿಸುತ್ತಾ ದೂರವಿರುತ್ತಿದ್ದರು. ತಾಯಿಗಿದ್ದಂತಹ ಮಿಷನೆರಿ ಆತ್ಮವು ತಂದೆಯವರಿಗೆ ಇರದಿದ್ದರೂ, ಅವರು ಅವರನ್ನು ಅವರ ಚಟುವಟಿಕೆಯಲ್ಲಿ ಬೆಂಬಲಿಸುತ್ತಿದ್ದರು.
ನಾನು ಸತ್ಯದ ಕುರಿತಾಗಿ ಮನವರಿಕೆಯುಳ್ಳವನಾಗಿದ್ದೆ, ಆದರೆ ಒಂದು ಸಮಯಾವಧಿಯ ವರೆಗೆ ನನ್ನ ನಂಬಿಕೆಗಳ ಕುರಿತಾಗಿ ನಾನು ಏನನ್ನೂ ಮಾಡಲಿಲ್ಲ. 1935ರಲ್ಲಿ ನಾನು ರೊಇನಾ ಕಾರ್ಲೆಟ್ ಎಂಬವಳನ್ನು ಮದುವೆಯಾದೆ, ಮತ್ತು ಸಮಯಾನಂತರ ಒಬ್ಬ ಮಗಳು, ಎನಿಡ್, ಮತ್ತು ಒಬ್ಬ ಮಗ ಬ್ಯಾರಿಯೊಂದಿಗೆ ಆಶೀರ್ವದಿಸಲ್ಪಟ್ಟೆವು. ನಾನು ಸುತ್ತಮುತ್ತಲಿದ್ದ ರೈತರಿಂದ ಸಾವಿರಾರು ಜಾನುವಾರುಗಳನ್ನು ಖರೀದಿಸುತ್ತಾ, ಜಾನುವಾರು ಖರೀದಿಸುವವನಾಗಿ ಕೆಲಸಮಾಡಿದೆ. ಈ ರೈತರು ರಾಜಕೀಯ ವಿಷಯಗಳನ್ನು ಚರ್ಚಿಸುತ್ತಿದ್ದಾಗ, “ಮನುಷ್ಯರ ಈ ಯಾವ ಪ್ರಯತ್ನಗಳೂ ಸಫಲವಾಗುವುದಿಲ್ಲ. ದೇವರ ರಾಜ್ಯವು ಕಾರ್ಯಸಾಧಿಸುವ ಏಕೈಕ ಸರಕಾರವಾಗಿದೆ” ಎಂದು ನಾನು ಅವರಿಗೆ ಹೇಳುತ್ತಿದ್ದಾಗ ನನಗೆ ಸಂತೋಷವಾಗುತ್ತಿತ್ತು.
ದುಃಖಕರವಾಗಿ, ನಾನು ಹೊಗೆಸೊಪ್ಪಿನ ಸೇವನೆಗೆ ವ್ಯಸನಿಯಾದೆ; ಯಾವಾಗಲೂ ನನ್ನ ಬಾಯಿಯಲ್ಲಿ ಒಂದು ಸಿಗಾರ್ ಇರುತ್ತಿತ್ತು. ಸಮಯಾನಂತರ ನನ್ನ ಆರೋಗ್ಯ ಕೆಟ್ಟಿತು ಮತ್ತು ಹೊಟ್ಟೆಯ ವೇದನಾಮಯ ಸಮಸ್ಯೆಗಳಿಂದಾಗಿ ನನ್ನನ್ನು ಆಸ್ಪತ್ರೆಗೆ ಸೇರಿಸಲಾಯಿತು. ನನ್ನ ಸಿಗರೇಟ್ ಸೇದುವಿಕೆಯಿಂದ ಉಂಟಾಗಿರುವ ಉಲ್ಬಣಗೊಂಡ ಗಾಸ್ಟ್ರೋಎನ್ಟರೈಟಿಸ್ ನನಗಿದೆಯೆಂದು ಹೇಳಲಾಯಿತು. ನಾನು ಆ ಚಾಳಿಯನ್ನು ಬಿಟ್ಟರೂ, ನಾನು ಒಂದು ಶಾಶ್ವತವಾದ ಸಿಗಾರ್ ಅಥವಾ ಸಿಗರೇಟನ್ನು ಸೇದುತ್ತಿರುವುದನ್ನು ಕನಸು ಕಾಣುವುದು ನನಗೆ ಅಸಾಮಾನ್ಯವಾಗಿರಲಿಲ್ಲ. ಹೊಗೆಸೊಪ್ಪಿನ ಸೇವನೆ ಎಂತಹ ಒಂದು ಘೋರ ವ್ಯಸನವಾಗಿರಸಾಧ್ಯವಿದೆ!
ಹೊಗೆಸೊಪ್ಪು ಸೇವನೆಯನ್ನು ನಿಲ್ಲಿಸಿದ ನಂತರ ನಾನು ಇತರ ಪ್ರಾಮುಖ್ಯ ಮಾರ್ಪಾಡುಗಳನ್ನು ಮಾಡಿದೆ. 1939ರಲ್ಲಿ ನಾನು 28 ವರ್ಷದವನಾಗಿದ್ದಾಗ, ಹಳ್ಳಿಯಲ್ಲಿನ ನಮ್ಮ ಮನೆಯ ಹತ್ತಿರವಿದ್ದ ಮಾಂಗಾಟಯಿ ನದಿಯಲ್ಲಿ ನನ್ನ ದೀಕ್ಷಾಸ್ನಾನವಾಯಿತು. ನಮ್ಮ ಮನೆಯಲ್ಲಿ ಭಾಷಣ ಕೊಟ್ಟು ನನಗೆ ದೀಕ್ಷಾಸ್ನಾನ ಮಾಡಿಸಲು, ವೆಲಿಂಗ್ಟನಿನಷ್ಟು ದೂರದಿಂದ ರಾಬರ್ಟ್ ಲಾಸನ್ಬಿ ಬಂದರು. ತದನಂತರ ಅವರು ನ್ಯೂ ಸೀಲೆಂಡಿನಲ್ಲಿನ ಪ್ರಚಾರ ಕಾರ್ಯದ ಉಸ್ತುವಾರಿ ವಹಿಸಿದರು. ಆ ಸಮಯದಂದಿನಿಂದ, ನಾನು ಯೆಹೋವನ ಒಬ್ಬ ಧೈರ್ಯಶಾಲಿ ಸಾಕ್ಷಿಯಾದೆ.
ಪ್ರಚಾರ ಕಾರ್ಯವನ್ನು ಸಂಘಟಿಸುವುದು
ನನ್ನ ದೀಕ್ಷಾಸ್ನಾನವನ್ನು ಹಿಂಬಾಲಿಸಿ, ನನ್ನನ್ನು ಎಕೆಟಾಹ್ಯೂನಾ ಸಭೆಯ ಮೇಲ್ವಿಚಾರಕನನ್ನಾಗಿ ನೇಮಿಸಲಾಯಿತು. ನನ್ನ ಹೆಂಡತಿ, ರೊಇನಾ ಇನ್ನೂ ಸತ್ಯವನ್ನು ಸ್ವೀಕರಿಸಿರಲಿಲ್ಲ. ಆದಾಗಲೂ, ಮನೆಯಿಂದ ಮನೆಗೆ ಸರಿಯಾಗಿ ಸಾಕ್ಷಿನೀಡುವ ವಿಧವನ್ನು ನನಗೆ ತೋರಿಸಲು ಪಾಹಿಆಟುಆದಿಂದ ಆಲ್ಫ್ ಬ್ರೈಯಾಂಟ್ ಬರುವಂತೆ ನಾನು ಆಮಂತ್ರಿಸಲಿದ್ದೇನೆಂದು ನಾನು ಅವಳಿಗೆ ತಿಳಿಯಪಡಿಸಿದೆ. ನಾನು ಸಾರುವ ಕಾರ್ಯವನ್ನು ಸಂಘಟಿಸಿ ನಮ್ಮ ಟೆರಿಟೊರಿಯನ್ನು ವ್ಯವಸ್ಥಿತವಾಗಿ ಆವರಿಸಲು ಬಯಸಿದೆ.
ರೊಇನಾ ಹೇಳಿದ್ದು: “ಹೆಕ್ಟರ್, ನೀನು ಮನೆಯಿಂದ ಮನೆಗೆ ಪ್ರಚಾರ ಮಾಡಲು ಹೋಗುವುದಾದರೆ, ನೀನು ಮರಳಿ ಬಂದಾಗ ನಾನು ಇಲ್ಲಿ ಇರುವುದಿಲ್ಲ. ನಾನು ನಿನ್ನನ್ನು ಬಿಟ್ಟುಹೋಗುತ್ತಿದ್ದೇನೆ. ನಿನ್ನ ಜವಾಬ್ದಾರಿಯು ಇಲ್ಲಿ—ಮನೆಯಲ್ಲಿ ನಿನ್ನ ಕುಟುಂಬದೊಂದಿಗೆ ಇದೆ.”
ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಹಿಂಜರಿಯುತ್ತಾ, ನಾನು ಉಡುಪನ್ನು ತೊಟ್ಟುಕೊಂಡೆ. ‘ನಾನು ಅದನ್ನು ಮಾಡಲೇಬೇಕು’ ಎಂದು ನಾನು ಸ್ವತಃ ಯೋಚಿಸತೊಡಗಿದೆ. ‘ನನ್ನ ಜೀವ ಹಾಗೂ ನನ್ನ ಕುಟುಂಬದ ಜೀವಗಳೂ ಅದರ ಮೇಲೆ ಅವಲಂಬಿಸಿವೆ.’ ಆದುದರಿಂದ ನಾನು ಅವಳನ್ನು ಯಾವುದೇ ವಿಧದಲ್ಲಿ ನೋಯಿಸಲು ಇಚ್ಛಿಸುವುದಿಲ್ಲವೆಂದು ನಾನು ರೊಇನಾಗೆ ಆಶ್ವಾಸನೆಕೊಟ್ಟೆ. ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆಂದು, ಆದರೆ ಯೆಹೋವನ ನಾಮ ಮತ್ತು ಪರಮಾಧಿಕಾರ, ಹಾಗೂ ನಮ್ಮ ಸ್ವಂತ ಜೀವಗಳು ಒಳಗೊಂಡಿರುವುದರಿಂದ ನಾನು ಈ ರೀತಿಯಲ್ಲಿ ಸಾರಲೇಬೇಕಾಗಿದೆಯೆಂದು ನಾನು ಅವಳಿಗೆ ಹೇಳಿದೆ.
ಆಲ್ಫ್ ಮತ್ತು ನಾನು ಮೊದಲ ಮನೆಗೆ ಹೋದೆವು, ಮತ್ತು ಅವನು ಮಾತಾಡುವುದರಲ್ಲಿ ಮುಂದಾಳುತ್ವವನ್ನು ವಹಿಸಿದನು. ಆದರೆ ಅನಂತರ ನಾನೇ ಸ್ವತಃ ಸಂಭಾಷಣೆಯಲ್ಲಿ ಪಾಲು ತೆಗೆದುಕೊಳ್ಳುತ್ತಾ, ನೋಹನ ದಿನದಲ್ಲಿ ಏನು ನಡೆಯಿತೊ ಅದು ನಮ್ಮ ದಿನದಲ್ಲಿ ಸಂಭವಿಸುತ್ತಿರುವ ಸಂಗತಿಗಳಿಗೆ ಸಮಾಂತರವಾಗಿದೆ ಮತ್ತು ನಮ್ಮ ರಕ್ಷಣೆಯನ್ನು ಖಚಿತಗೊಳಿಸಲು ಏನನ್ನಾದರೂ ಮಾಡಬೇಕು ಎಂಬುದನ್ನು ಮನೆಯವರಿಗೆ ತಿಳಿಸುತ್ತಿರುವುದನ್ನು ಕಂಡುಕೊಂಡೆ. (ಮತ್ತಾಯ 24:37-39) ಅಲ್ಲಿ ನಾನು ಕೆಲವು ಪುಸ್ತಿಕೆಗಳನ್ನು ಬಿಟ್ಟುಬಂದೆ.
ನಾವು ಹೊರಟ ನಂತರ, ಆಲ್ಫ್ ಹೇಳಿದ್ದು: “ನೀನು ಆ ಎಲ್ಲಾ ಜ್ಞಾನವನ್ನು ಎಲ್ಲಿಂದ ಪಡೆದುಕೊಂಡಿ? ನಿನಗೆ ನನ್ನ ಅಗತ್ಯವಿಲ್ಲ. ನೀನು ನಿನ್ನಷ್ಟಕ್ಕೆ ಹೋಗು ಮತ್ತು ನಾವು ಎರಡರಷ್ಟು ಟೆರಿಟೊರಿಯನ್ನು ಆವರಿಸುವೆವು.” ಆದುದರಿಂದ ನಾವು ಅದನ್ನೇ ಮಾಡಿದೆವು.
ನಾವು ಮನೆಗೆ ಹಿಂದಿರುಗುತ್ತಿದ್ದಂತೆಯೇ, ನಮಗಾಗಿ ಏನು ಕಾದಿದೆಯೆಂದು ನನಗೆ ತಿಳಿದಿರಲಿಲ್ಲ. ನನಗೆ ಆಶ್ಚರ್ಯ ಮತ್ತು ಆನಂದವನ್ನು ತರಿಸುತ್ತಾ, ರೊಇನಾ ನಮಗಾಗಿ ಒಂದು ಕಪ್ ಚಹಾವನ್ನು ಸಿದ್ಧವಾಗಿರಿಸಿದ್ದಳು. ಹದಿನೈದು ದಿನಗಳ ಬಳಿಕ, ನನ್ನ ಪತ್ನಿ ಸಾರ್ವಜನಿಕ ಶುಶ್ರೂಷೆಯಲ್ಲಿ ನನ್ನೊಂದಿಗೆ ಜೊತೆಗೂಡಿದಳು ಮತ್ತು ಕ್ರೈಸ್ತ ಹುರುಪನ್ನು ತೋರಿಸುವುದರಲ್ಲಿ ಒಂದು ಉತ್ತಮ ಮಾದರಿಯಾದಳು.
ನಮ್ಮ ಫಾರ್ಮಿಂಗ್ ಕಣಿವೆಯಲ್ಲಿ ಯೆಹೋವನ ಸಾಕ್ಷಿಗಳಾದವರಲ್ಲಿ ಪ್ರಥಮ ವ್ಯಕ್ತಿಗಳು ಮೊಡ್ ಮಾನ್ಸರ್, ಅವಳ ಮಗ ವಿಲ್ಯಮ್ ಮತ್ತು ಅವಳ ಮಗಳು ರೂಬಿ ಇದ್ದರು. ಮೊಡ್ಳ ಗಂಡನು ಒಂದು ಕಠೋರ ತೋರಿಕೆಯುಳ್ಳ ನೋಯಿಸುವಂಥ ಒಬ್ಬ ಪುರುಷನಾಗಿದ್ದನು. ಒಂದು ದಿನ ರೊಇನಾ ಮತ್ತು ನಾನು ಮೊಡ್ಳನ್ನು ಶುಶ್ರೂಷೆಗೆ ಕೊಂಡೊಯ್ಯಲು ಅವರ ಫಾರ್ಮ್ಗೆ ಆಗಮಿಸಿದೆವು. ಯುವ ವಿಲ್ಯಮ್ ನಾವು ಆತನ ಕಾರನ್ನು ಉಪಯೋಗಿಸುವಂತೆ ಏರ್ಪಾಡು ಮಾಡಿದ್ದನು, ಆದರೆ ಆತನ ತಂದೆಗೆ ಇತರ ವಿಚಾರಗಳಿದ್ದವು.
ಪರಿಸ್ಥಿತಿಯು ಬಿಗಿಯಾಗಿತ್ತು. ನಾನು ರೊಇನಾಳಿಗೆ, ಹಸುಗೂಸಾಗಿದ್ದ ನಮ್ಮ ಮಗಳು ಎನಿಡ್ಳನ್ನು ಹಿಡಿದುಕೊಳ್ಳಲು ಹೇಳಿದೆ. ಶ್ರೀ. ಮಾನ್ಸರ್ ನಾವು ಹೊರಬರುವ ಮುಂಚೆ ಗ್ಯಾರೇಜಿನ ಬಾಗಿಲನ್ನು ಮುಚ್ಚಲಿಕ್ಕಾಗಿ ಪ್ರಯತ್ನಿಸಲು ತ್ವರೆಪಟ್ಟಂತೆ, ನಾನು ವಿಲ್ಯಮ್ನ ಕಾರಿನೊಳಗೆ ಹತ್ತಿ ಗ್ಯಾರೇಜಿನಿಂದ ಬೇಗನೆ ಹೊರಬಂದೆ. ಆದರೆ ಅವನು ವಿಫಲನಾದನು. ವಾಹನಪಥದಲ್ಲಿ ಸ್ವಲ್ಪ ಮುಂದೆ ಹೋದ ನಂತರ ನಾವು ನಿಂತೆವು, ಮತ್ತು ಸಿಟ್ಟುಗೊಂಡಿದ್ದ ಶ್ರೀ. ಮಾನ್ಸರ್ರನ್ನು ಸಂಧಿಸಲು ನಾನು ಕಾರಿನಿಂದ ಹೊರಬಂದೆ. ನಾನು ಅವರಿಗೆ ಹೇಳಿದ್ದು: “ನಾವು ಕ್ಷೇತ್ರ ಶುಶ್ರೂಷೆಗೆ ಹೋಗುತ್ತಿದ್ದೇವೆ, ಮತ್ತು ಶ್ರೀಮತಿ ಮಾನ್ಸರ್ ನಮ್ಮೊಂದಿಗೆ ಬರುತ್ತಿದ್ದಾರೆ.” ನಾನು ಅವನಲ್ಲಿ ಯಾಚಿಸಿಕೊಂಡೆ, ಮತ್ತು ಅವನ ಕೋಪವು ಸ್ವಲ್ಪ ಇಳಿಯಿತು. ಅದನ್ನು ನೆನೆಸುವಾಗ, ನಾನು ಅದನ್ನು ಪ್ರಾಯಶಃ ಭಿನ್ನವಾಗಿ ನಿರ್ವಹಿಸಬೇಕಾಗಿತ್ತು, ಆದರೆ ಅವನು ಎಂದೂ ಒಬ್ಬ ಸಾಕ್ಷಿಯಾಗದಿದ್ದರೂ ಅವನು ಅನಂತರ ಯೆಹೋವನ ಸಾಕ್ಷಿಗಳೆಡೆಗೆ ಹೆಚ್ಚು ಪ್ರಸನ್ನ ಸ್ವಭಾವವುಳ್ಳವನಾದನು.
ಆ ವರ್ಷಗಳಲ್ಲಿ ಕೇವಲ ಕೆಲವು ಯೆಹೋವನ ಜನರಿದ್ದರು. ಮತ್ತು ನಮ್ಮ ಫಾರ್ಮ್ನಲ್ಲಿ ತಂಗಿದಂತಹ ಪೂರ್ಣ ಸಮಯದ ಶುಶ್ರೂಷಕರ ಭೇಟಿಗಳನ್ನು ನಾವು ನಿಜವಾಗಿಯೂ ಆನಂದಿಸಿದೆವು ಮತ್ತು ಪ್ರಯೋಜನ ಪಡೆದೆವು. ಈ ಸಂದರ್ಶಕರಲ್ಲಿ, ಮಿಷನೆರಿಗಳಿಗಾಗಿರುವ ವಾಚ್ಟವರ್ ಸ್ಕೂಲ್ ಆಫ್ ಗಿಲ್ಯಡ್ನ ಆರಂಭದ ತರಗತಿಗಳನ್ನು ಹಾಜರಾದ ಮತ್ತು ಜಪಾನ್ ಹಾಗೂ ಪಾಕಿಸ್ತಾನ್ನಲ್ಲಿನ ವಿದೇಶೀಯ ನೇಮಕಗಳಲ್ಲಿ ಸೇವೆ ಸಲ್ಲಿಸಿದ ಆಡ್ರಿಯನ್ ತಾಮ್ಸನ್ ಮತ್ತು ಅವನ ಸಹೋದರಿ ಮೋಲಿ ಸೇರಿದ್ದರು.
ಯುದ್ಧಸಮಯದ ಅನುಭವಗಳು
ಸೆಪ್ಟೆಂಬರ್ 1939ರಲ್ಲಿ, IIನೇ ಲೋಕ ಯುದ್ಧವು ಆರಂಭಿಸಿತು ಮತ್ತು ಅಕ್ಟೋಬರ್ 1940ರಲ್ಲಿ ನ್ಯೂ ಸೀಲೆಂಡ್ ಸರಕಾರವು ಯೆಹೋವನ ಸಾಕ್ಷಿಗಳ ಚಟುವಟಿಕೆಯನ್ನು ನಿಷೇಧಿಸಿತು. ನಮ್ಮ ಕ್ರೈಸ್ತ ಸಹೋದರರಲ್ಲಿ ಅನೇಕರು ದೇಶದ ನ್ಯಾಯಾಲಯಗಳ ಮುಂದೆ ಹೋಗಲು ನಿರ್ಬಂಧಿಸಲ್ಪಟ್ಟರು. ಕೆಲವರು ಶ್ರಮೆ ಶಿಬಿರಗಳಲ್ಲಿ ಹಾಕಲ್ಪಟ್ಟರು ಮತ್ತು ತಮ್ಮ ಹೆಂಡತಿ ಮಕ್ಕಳಿಂದ ಪ್ರತ್ಯೇಕಿಸಲ್ಪಟ್ಟರು. ಯುದ್ಧವು ಮುಂದುವರಿದಂತೆ, ನಮಗೆ ಒಂದು ಹೈನುದಾಣವಿದ್ದರೂ, ನನ್ನನ್ನು ಮಿಲಿಟರಿ ಸೇವೆಗಾಗಿ ಕರೆಯಲಾಗುವುದೊ ಎಂದು ನಾನು ಸೋಜಿಗಪಡುತ್ತಿದ್ದೆ. ಅನಂತರ, ಮಿಲಿಟರಿ ಸೇವೆಗಾಗಿ ಇನ್ನೂ ಹೆಚ್ಚಿನ ರೈತರು ತಮ್ಮ ಫಾರ್ಮ್ಗಳನ್ನು ಬಿಟ್ಟುಬರಬೇಕಾಗಿಲ್ಲ ಎಂದು ಪ್ರಕಟನೆಮಾಡಲಾಯಿತು.
ರೊಇನಾ ಮತ್ತು ನಾನು ನಮ್ಮ ಕ್ರೈಸ್ತ ಶುಶ್ರೂಷೆಯಲ್ಲಿ, ಒಂದು ತಿಂಗಳಿಗೆ ಸುಮಾರು 60 ತಾಸುಗಳನ್ನು ಸಾರುವ ಕಾರ್ಯದಲ್ಲಿ ಮೀಸಲಾಗಿಡುತ್ತಾ ಮುಂದುವರಿದೆವು. ಈ ಸಮಯದಲ್ಲಿ, ತಮ್ಮ ಕ್ರೈಸ್ತ ತಾಟಸ್ಥ್ಯವನ್ನು ಕಾಪಾಡಿಕೊಳ್ಳುತ್ತಿದ್ದ ಯುವ ಸಾಕ್ಷಿಗಳಿಗೆ ಸಹಾಯ ಮಾಡುವ ಸುಯೋಗವು ನನಗೆ ಇತ್ತು. ವೆಲಿಂಗ್ಟನ್, ಪಾಮರ್ಸ್ಟನ್ ನಾರ್ತ್, ಪಾಹಿಆಟುಆ ಮತ್ತು ಮಾಸ್ಟರನ್ನ ನ್ಯಾಯಾಲಯಗಳ ಮುಂದೆ ನಾನು ಅವರ ಪರವಾಗಿ ಹಾಜರಾದೆ. ಸಾಮಾನ್ಯವಾಗಿ ಡ್ರಾಫ್ಟ್ ಬೋರ್ಡಿನ ಮೇಲೆ ವೈದಿಕರ ಒಬ್ಬ ಸದಸ್ಯನಿರುತ್ತಿದ್ದನು, ಮತ್ತು ಯುದ್ಧ ಪ್ರಯತ್ನದ ಅವರ ಅಕ್ರೈಸ್ತ ಬೆಂಬಲವನ್ನು ಬಯಲುಪಡಿಸುವುದು ಹರ್ಷಕರವಾಗಿತ್ತು.—1 ಯೋಹಾನ 3:10-12.
ಒಂದು ರಾತ್ರಿ ನಾನು ಮತ್ತು ರೊಇನಾ ಕಾವಲಿನಬುರುಜು ಪತ್ರಿಕೆಯನ್ನು ಅಭ್ಯಾಸಿಸುತ್ತಿದ್ದಾಗ, ನಮ್ಮ ಮನೆಯು ಪತ್ತೇದಾರರಿಂದ ದಾಳಿಮಾಡಲ್ಪಟ್ಟಿತು. ಒಂದು ಶೋಧವು ನಮ್ಮ ಮನೆಯಲ್ಲಿ ಬೈಬಲ್ ಸಾಹಿತ್ಯವನ್ನು ಹೊರಗೆಡಹಿತು. “ಇದಕ್ಕಾಗಿ ನೀವು ಜೈಲಿಗೆ ಹೋಗಸಾಧ್ಯವಿದೆ,” ಎಂದು ನಮಗೆ ತಿಳಿಸಲಾಯಿತು. ಪತ್ತೇದಾರರು ಹೊರಡಲು ತಮ್ಮ ಕಾರಿನಲ್ಲಿ ಕುಳಿತುಕೊಂಡಾಗ, ಅದರ ಬ್ರೇಕ್ಗಳು ಲಾಕ್ ಆಗಿರುವುದನ್ನು ಅವರು ಕಂಡುಹಿಡಿದರು ಮತ್ತು ಕಾರ್ ಚಲಿಸುತ್ತಿರಲಿಲ್ಲ. ವಿಲ್ಯಮ್ ಮಾನ್ಸರ್ ಕಾರನ್ನು ಸರಿಪಡಿಸಲು ಸಹಾಯ ಮಾಡಿದನು, ಮತ್ತು ಆ ಮನುಷ್ಯರು ಪುನಃ ಎಂದೂ ಹಿಂದಿರುಗಲಿಲ್ಲ.
ನಿಷೇಧದ ಸಮಯದಲ್ಲಿ ನಮ್ಮ ಫಾರ್ಮ್ನ ಒಂದು ಮೂಲೆಯ ಭಾಗದಲ್ಲಿದ್ದ ಒಂದು ಕಟ್ಟಡದಲ್ಲಿ ನಾವು ಬೈಬಲ್ ಸಾಹಿತ್ಯವನ್ನು ಅಡಗಿಸುತ್ತಿದ್ದೆವು. ಮಧ್ಯರಾತ್ರಿಯಲ್ಲಿ ನಾನು ನ್ಯೂ ಸೀಲೆಂಡಿನ ಬ್ರಾಂಚ್ ಆಫೀಸನ್ನು ಸಂದರ್ಶಿಸಿ ನನ್ನ ಕಾರನ್ನು ಸಾಹಿತ್ಯದೊಂದಿಗೆ ತುಂಬಿಸುತ್ತಿದ್ದೆ. ಅನಂತರ ನಾನು ಅದನ್ನು ಮನೆಗೆ ತಂದು ನಮ್ಮ ಪ್ರತ್ಯೇಕವಾದ ಸ್ಥಳದಲ್ಲಿ ಶೇಖರಿಸಿ ಇಡುತ್ತಿದ್ದೆ. ಒಂದು ರಾತ್ರಿ ನಾನು ಒಂದು ಗುಪ್ತ ರವಾನೆ ಸರಕನ್ನು ಕೊಂಡೊಯ್ಯಲು ಬ್ರಾಂಚಿಗೆ ಆಗಮಿಸಿದಂತೆ, ಇಡೀ ಸ್ಥಳವು ತಟ್ಟನೆ ಬೆಳಗಿತು! ಪೊಲೀಸರು ಬೊಬ್ಬೆಯಿಟ್ಟರು: “ನಿನ್ನನ್ನು ಹಿಡಿದುಬಿಟ್ಟೆವು!” ಆದರೆ ಆಶ್ಚರ್ಯಜನಕವಾಗಿ, ಅವರು ನನ್ನನ್ನು ಹೆಚ್ಚು ಗಲಾಟೆಮಾಡದೆ ಹೋಗಲು ಬಿಟ್ಟರು.
1949ರಲ್ಲಿ, ರೊಇನಾ ಮತ್ತು ನಾನು ಫಾರ್ಮನ್ನು ಮಾರಿ, ನಮ್ಮ ಹಣ ಮುಗಿಯುವ ತನಕ ಪಯನೀಯರ್ ಸೇವೆಯನ್ನು ಮಾಡಲು ನಿರ್ಣಯಿಸಿದೆವು. ನಾವು ಮಾಸ್ಟರನ್ನಲ್ಲಿರುವ ಒಂದು ಮನೆಗೆ ಸ್ಥಳಾಂತರಿಸಿದೆವು ಮತ್ತು ಮಾಸ್ಟರನ್ ಸಭೆಯೊಂದಿಗೆ ಪಯನೀಯರ್ ಸೇವೆ ಮಾಡಿದೆವು. ಎರಡು ವರ್ಷಗಳೊಳಗೆ ಫೆದರ್ಸ್ಟೋನ್ ಸಭೆಯು 24 ಕ್ರಿಯಾಶೀಲ ಪ್ರಚಾರಕರೊಂದಿಗೆ ಸ್ಥಾಪಿಸಲ್ಪಟ್ಟಿತು, ಮತ್ತು ನಾನು ಅಧ್ಯಕ್ಷ ಮೇಲ್ವಿಚಾರಕನಾಗಿ ಸೇವೆ ಸಲ್ಲಿಸಿದೆ. ಅನಂತರ, 1953ರಲ್ಲಿ ನ್ಯೂ ಯಾರ್ಕ್ ನಗರದ ಯಾಂಕೀ ಸ್ಟೇಡಿಯಮ್ನಲ್ಲಿ, ಯೆಹೋವನ ಸಾಕ್ಷಿಗಳ ಎಂಟು ದಿನಗಳ ಅಂತಾರಾಷ್ಟ್ರೀಯ ಅಧಿವೇಶನವನ್ನು ಹಾಜರಾಗಲು ಅಮೆರಿಕಕ್ಕೆ ಪ್ರಯಾಣಿಸುವ ಸುಯೋಗವನ್ನು ನಾನು ಅನುಭವಿಸಿದೆ. ರೊಇನಾ ನನ್ನೊಂದಿಗೆ ಬರಲು ಅಶಕ್ತಳಾಗಿದ್ದಳು ಯಾಕಂದರೆ ಅವಳು, ಮಿದುಳು ಲಕ್ವಾದಿಂದ ನರಳುತ್ತಿದ್ದ ನಮ್ಮ ಮಗಳಾದ ಎನಿಡ್ಳನ್ನು ಪರಾಮರಿಸುವ ಅಗತ್ಯವಿತ್ತು.
ನಾನು ನ್ಯೂ ಸೀಲೆಂಡಿಗೆ ಹಿಂದಿರುಗಿದ ಬಳಿಕ, ನಾನು ಐಹಿಕ ಕೆಲಸವನ್ನು ಮಾಡಬೇಕಾಯಿತು. ನಾವು ಮಾಸ್ಟರನ್ ಸಭೆಗೆ ಪುನಃ ಸ್ಥಳಾಂತರಿಸಿದೆವು, ಅಲ್ಲಿ ನಾನು ಅಧ್ಯಕ್ಷ ಮೇಲ್ವಿಚಾರಕನಾಗಿ ನೇಮಿಸಲ್ಪಟ್ಟೆ. ಈ ಸಮಯದಷ್ಟಕ್ಕೆ ವಿಲ್ಯಮ್ ಮಾನ್ಸರ್ ಮಾಸ್ಟರನ್ನಲ್ಲಿನ ಲಿಟ್ಲ್ ಥಿಯೇಟರನ್ನು ಖರೀದಿಸಿದನು, ಮತ್ತು ಇದು ವೈರಾರಾಪಾದಲ್ಲಿನ ಪ್ರಥಮ ರಾಜ್ಯ ಸಭಾಗೃಹವಾಯಿತು. 1950ಗಳಲ್ಲಿ, ನಮ್ಮ ಸಭೆಯು ಉತ್ತಮ ಆತ್ಮಿಕ ಮತ್ತು ಸಂಖ್ಯಾ ಬೆಳವಣಿಗೆಯನ್ನು ಅನುಭವಿಸಿತು. ಆದುದರಿಂದ, ಸರ್ಕಿಟ್ ಮೇಲ್ವಿಚಾರಕರು ಸಂದರ್ಶಿಸಿದಾಗ, ಅವರು ಹೆಚ್ಚಾಗಿ ಪ್ರೌಢ ವ್ಯಕ್ತಿಗಳನ್ನು, ಸಾರುವ ಕಾರ್ಯದಲ್ಲಿ ಸಹಾಯ ಮಾಡಲು ದೇಶದ ಇತರ ಭಾಗಗಳಿಗೆ ಸ್ಥಳಾಂತರಿಸುವಂತೆ ಉತ್ತೇಜಿಸುತ್ತಿದ್ದರು, ಮತ್ತು ಅನೇಕರು ಹಾಗೆ ಮಾಡಿದರು.
ನಮ್ಮ ಕುಟುಂಬವು ಮಾಸ್ಟರನ್ನಲ್ಲಿ ಉಳಿಯಿತು, ಮತ್ತು ಮುಂದಿನ ದಶಕಗಳಲ್ಲಿ, ನಾನು ಸಭೆಯಲ್ಲಿ ಅನೇಕ ಸುಯೋಗಗಳನ್ನು ಮಾತ್ರವಲ್ಲ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಅಧಿವೇಶನಗಳಲ್ಲೂ ನೇಮಕಗಳನ್ನು ಅನುಭೋಗಿಸಿದೆ. ರೊಇನಾ ಕ್ಷೇತ್ರ ಸೇವೆಯಲ್ಲಿ ಹುರುಪಿನಿಂದ ಭಾಗವಹಿಸುತ್ತಾ, ಇತರರು ಅದನ್ನೇ ಮಾಡುವಂತೆ ಸತತವಾಗಿ ನೆರವು ನೀಡುತ್ತಿದ್ದಳು.
ನಂಬಿಕೆಯ ಪರೀಕ್ಷೆಗಳನ್ನು ತಾಳಿಕೊಳ್ಳುವುದು
ಆರಂಭದಲ್ಲಿ ಹೇಳಲಾದಂತೆ, 1985ರಲ್ಲಿ ನನಗೆ ಗುಣಪಡಿಸಲಾಗದ ಕ್ಯಾನ್ಸರ್ ಇರುವುದಾಗಿ ರೋಗ ನಿರ್ಣಯಮಾಡಲಾಯಿತು. ನನ್ನ ನಂಬಿಗಸ್ತ ಪತ್ನಿ ರೊಇನಾ, ಮತ್ತು ನಾನು, ನಮ್ಮ ಮಕ್ಕಳೊಂದಿಗೆ ಎಂದೂ ಸಾಯದಿರುವ, ಇಂದು ಜೀವಿಸುತ್ತಿರುವ ಲಕ್ಷಾಂತರ ಜನರ ನಡುವೆ ಇರಲು ಎಷ್ಟು ಬಯಸಿದ್ದೆವು! ಆದರೆ ವೈದ್ಯರು ನಾನು ಸಾಯುವಂತೆ ನನ್ನನ್ನು ಮನೆಗೆ ಕಳುಹಿಸಿದರು. ಪ್ರಥಮವಾಗಿಯಾದರೊ, ನಾನು ಆ ರೋಗ ನಿರ್ಣಯವನ್ನು ಹೇಗೆ ವೀಕ್ಷಿಸುತ್ತೇನೆಂದು ಅವರು ಕೇಳಿದರು.
“ನಾನು ಒಂದು ಶಾಂತ ಹೃದಯವನ್ನು ಕಾಪಾಡಿಕೊಂಡು, ಆಶಾವಾದಿಯಾಗಿರುವೆನು,” ಎಂದು ನಾನು ಉತ್ತರಿಸಿದೆ. ನಿಜವಾಗಿಯೂ, ಈ ಬೈಬಲ್ ಜ್ಞಾನೋಕ್ತಿಯು ನನ್ನ ಸಮಸ್ಥಿತಿಯ ಸ್ಥಾಪಕವಾಯಿತು: “ಶಾಂತಿಗುಣವು [“ಶಾಂತ ಹೃದಯವು,” NW] ದೇಹಕ್ಕೆ ಜೀವಾಧಾರವು.”—ಜ್ಞಾನೋಕ್ತಿ 14:30.
ಆ ಕ್ಯಾನ್ಸರ್ ವಿಶೇಷಜ್ಞರು ಆ ಬೈಬಲ್ ಬುದ್ಧಿವಾದವನ್ನು ಹೊಗಳಿದರು. “ಆ ಮಾನಸಿಕ ಹೊರನೋಟವು ಕಾನ್ಸರ್ ರೋಗಿಗಳಲ್ಲಿನ 90 ಪ್ರತಿಶತದ ಗುಣಪಡಿಸುವಿಕೆಯಾಗಿದೆ,” ಎಂದು ಅವರು ಹೇಳಿದರು. ಅವರು ಏಳು ವಾರಗಳ ವಿಕಿರಣ ಚಿಕಿತ್ಸೆಯನ್ನು ಸಹ ಶಿಫಾರಸ್ಸು ಮಾಡಿದರು. ಸಂತೋಷಕರವಾಗಿ, ನಾನು ಕಟ್ಟಕಡೆಗೆ ಕ್ಯಾನ್ಸರನ್ನು ಹೋರಾಡುವುದರಲ್ಲಿ ಯಶಸ್ವಿಯಾದೆ.
ಈ ಅತಿ ಕಷ್ಟಕರವಾದ ಸಮಯದಲ್ಲಿ, ನನಗೆ ಒಂದು ಭೀಷಣ ಪೆಟ್ಟು ಎರಗಿತು. ನನ್ನ ಸುಂದರ, ನಿಷ್ಠಾವಂತ ಪತ್ನಿಯು ಮಿದುಳಿನ ರಕ್ತಸ್ರಾವದಿಂದ ಬಾಧಿತಳಾಗಿ ಸತ್ತಳು. ಶಾಸ್ತ್ರವಚನಗಳಲ್ಲಿ ದಾಖಲಿಸಲ್ಪಟ್ಟ ನಂಬಿಗಸ್ತ ವ್ಯಕ್ತಿಗಳ ಮಾದರಿಗಳು ಮತ್ತು ಅವರು ತಮ್ಮ ಸಮಗ್ರತೆಯನ್ನು ಕಾಪಾಡಿಕೊಂಡಂತೆ ಯೆಹೋವನು ಅವರ ಸಮಸ್ಯೆಗಳನ್ನು ಬಗೆಹರಿಸಿದಂತಹ ವಿಧದಲ್ಲಿ ನಾನು ಸಾಂತ್ವನವನ್ನು ಕಂಡುಕೊಂಡೆ. ಹೀಗೆ ಹೊಸ ಲೋಕದಲ್ಲಿನ ನನ್ನ ನಿರೀಕ್ಷೆಯು ಪ್ರಕಾಶಮಾನವಾಗಿಯೇ ಉಳಿಯಿತು.—ರೋಮಾಪುರ 15:4.
ಹಾಗಿದ್ದರೂ, ನಾನು ಖಿನ್ನನಾದೆ ಮತ್ತು ಒಬ್ಬ ಹಿರಿಯನಾಗಿ ಸೇವೆ ಸಲ್ಲಿಸುವುದನ್ನು ನಿಲ್ಲಿಸಬಯಸಿದೆ. ಮುಂದುವರಿಯುತ್ತಾ ಹೋಗಲು ನಾನು ಪುನಃ ಶಕ್ತಿಯನ್ನು ಹೊಂದುವ ತನಕ ಸ್ಥಳಿಕ ಸಹೋದರರು ನನ್ನನ್ನು ಉತ್ತೇಜಿಸಿದರು. ಫಲಸ್ವರೂಪವಾಗಿ, ಕಳೆದ 57 ವರ್ಷಗಳಿಂದ ನಾನು ನಿರಂತರವಾಗಿ ಒಬ್ಬ ಕ್ರೈಸ್ತ ಹಿರಿಯನೂ ಮೇಲ್ವಿಚಾರಕನೂ ಆಗಿ ಸೇವೆ ಸಲ್ಲಿಸಲು ಶಕ್ತನಾಗಿದ್ದೇನೆ.
ಭವಿಷ್ಯತ್ತನ್ನು ಭರವಸೆಯಿಂದ ಎದುರಿಸುವುದು
ಈ ಎಲ್ಲಾ ವರ್ಷಗಳಲ್ಲಿ ಯೆಹೋವನನ್ನು ಸೇವಿಸುವುದು ಒಂದು ಅಗಣ್ಯ ಸುಯೋಗವಾಗಿರುತ್ತದೆ. ನಾನು ಎಷ್ಟೊಂದು ಆಶೀರ್ವಾದಗಳನ್ನು ಪಡೆದಿದ್ದೇನೆ! 16 ವರ್ಷ ಪ್ರಾಯದವನಾಗಿದ್ದಾಗ, ನನ್ನ ತಾಯಿಯು “ಇದೇ, ಇದು ತಾನೇ ಸತ್ಯವಾಗಿದೆ!” ಎಂದು ಉದ್ಗರಿಸಿದ್ದನ್ನು ನಾನು ಕೇಳಿದ್ದು ತುಂಬ ಸಮಯದ ಹಿಂದೆ ಎಂಬಂತೆ ತೋರುವುದಿಲ್ಲ. ನನ್ನ ತಾಯಿಯವರು 1979ರಲ್ಲಿ, ಅವರು 100ಕ್ಕಿಂತಲೂ ಹೆಚ್ಚು ವರ್ಷ ವಯಸ್ಸಿನವರಾಗಿದ್ದಾಗ ಸಾಯುವ ಸಮಯದ ತನಕ ಒಬ್ಬ ನಂಬಿಗಸ್ತ, ಹುರುಪಿನ ಸಾಕ್ಷಿಯಾಗಿದ್ದರು. ಅವರ ಮಗಳು ಮತ್ತು ಆರು ಪುತ್ರರು ಕೂಡ ನಿಷ್ಠಾವಂತ ಸಾಕ್ಷಿಗಳಾದರು.
ಯೆಹೋವನ ನಾಮವು ಎಲ್ಲಾ ನಿಂದೆಯಿಂದ ಮುಕ್ತವಾಗುವುದನ್ನು ಕಾಣಲು ಜೀವಿಸುವುದು ನನ್ನ ಕಡು ಬಯಕೆಯಾಗಿದೆ. ಎಂದೂ ಸಾಯದಿರುವ ನನ್ನ ಜೀವನ ಪರ್ಯಂತದ ನಿರೀಕ್ಷೆಯು ಕೈಗೂಡುವುದನ್ನು ನಾನು ಕಾಣುವೆನೊ? ಅದು, ನಿಶ್ಚಯವಾಗಿಯೂ ಮುಂದೆ ನೋಡಬೇಕಾದ ಸಂಗತಿಯಾಗಿದೆ. ಆದಾಗಲೂ, ಅನೇಕರು, ಹೌದು ಲಕ್ಷಾಂತರ ಜನರು ಕಟ್ಟಕಡೆಗೆ ಆ ಆಶೀರ್ವಾದವನ್ನು ಅನುಭವಿಸುವರೆಂಬ ಭರವಸೆ ನನಗಿದೆ. ನಾನು ಜೀವಿಸಲು ಮುಂದುವರಿಯುವಷ್ಟು ಸಮಯ, ಎಂದೂ ಸಾಯದಿರುವವರ ನಡುವೆ ಎಣಿಸಲ್ಪಡುವ ಪ್ರತೀಕ್ಷೆಯನ್ನು ನಾನು ಅಮೂಲ್ಯವೆಂದೆಣಿಸುವೆನು.—ಯೋಹಾನ 11:26.
[ಪುಟ 28 ರಲ್ಲಿರುವ ಚಿತ್ರ]
ನನ್ನ ತಾಯಿ
[ಪುಟ 28 ರಲ್ಲಿರುವ ಚಿತ್ರ]
ನನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ