ಈರೀನಾಳ ಅಚ್ಚುಮೆಚ್ಚಿನ ಸಂಗೀತ ಪುಸ್ತಕ
ಸ್ವಲ್ಪ ಸಮಯದ ಹಿಂದೆ, ಬಲ್ಗೇರಿಯದಲ್ಲಿರುವ ಸೋಫಿಯದ ಒಂಬತ್ತು ವರ್ಷ ಪ್ರಾಯದ ಒಬ್ಬ ಹುಡುಗಿಯಾದ, ಈರೀನಾ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿ ದೀಕ್ಷಾಸ್ನಾನಹೊಂದಿದಳು. ಅವಳಿಗೆ ಹಾಡುವುದೆಂದರೆ ಬಲು ಇಷ್ಟ ಮತ್ತು ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ (ಇಂಗ್ಲಿಷ್) ಎಂಬ ಪುಸ್ತಕದಲ್ಲಿರುವ ಹಾಡುಗಳನ್ನು ಅವಳು ವಿಶೇಷವಾಗಿ ಆನಂದಿಸುತ್ತಾಳೆ. ಆದುದರಿಂದ ಪ್ರತಿ ತಿಂಗಳು ಕೆಲವು ಹಾಡುಗಳನ್ನು ಬಾಯಿಪಾಠ ಮಾಡಿ ಕಲಿಯುವುದನ್ನು ಈರೀನಾ ಒಂದು ಗುರಿಯನ್ನಾಗಿ ಮಾಡಿಕೊಂಡಳು.
ಶಾಲೆಯಲ್ಲಿ ಈರೀನಾಳ ಅಚ್ಚುಮೆಚ್ಚಿನ ಪಾಠವಿಷಯಗಳಲ್ಲಿ ಒಂದು, ಸಂಗೀತವಾಗಿದೆ. ಆದುದರಿಂದ ಶಾಲೆಯ ಗಾಯಕವೃಂದದಲ್ಲಿ ಹಾಡುವ ಒಂದು ನೀಡಿಕೆಯನ್ನು ಈರೀನಾ ನಿರಾಕರಿಸಿದಾಗ, ಅವಳ ಸಂಗೀತ ಶಿಕ್ಷಕಿಯು ಗಲಿಬಿಲಿಗೊಂಡಳು. ಈರೀನಾಳು ನಿರಾಕರಿಸಿದ್ದೇಕೆ? ಅವಳು ಹಾಡಬೇಕಾಗುವ ಸಂಗೀತದಲ್ಲಿ ಹೆಚ್ಚಿನದ್ದು ರಾಷ್ಟ್ರೀಯ ವೀರರನ್ನು ಮತ್ತು ವಿಧರ್ಮಿ ಮೂಲದ ರಜಾದಿನಗಳನ್ನು ಕೀರ್ತಿಸುತ್ತದೆಂದು ಅವಳು ಗ್ರಹಿಸಿದಳು. ಕೆಲವು ಹಾಡುಗಳು ರಾಷ್ಟ್ರೀಯ ಧ್ಯೇಯಗಳನ್ನು ಪ್ರವರ್ಧಿಸಲಿಕ್ಕಾಗಿ ದಂಗೆಯನ್ನೂ ಹಿಂಸಾಚಾರವನ್ನೂ ಸಮರ್ಥಿಸುತ್ತವೆ. ಈ ವಿಷಯದ ಕುರಿತಾದ ಈರೀನಾಳ ಸ್ಥಾನವನ್ನು ಶಿಕ್ಷಕಿಗೆ ತಿಳಿಯಲಾಗಲಿಲ್ಲ. ತನ್ನ ಶಿಕ್ಷಕಿಗೆ ತನ್ನ ಧಾರ್ಮಿಕ ನಂಬಿಕೆಗಳನ್ನು ಸಾದರಪಡಿಸುವ ಒಂದು ಪತ್ರವನ್ನು ಬರೆಯಲು ಈರೀನಾ ಪ್ರಯತ್ನಿಸಿದಳು—ಆದರೆ ಪ್ರಯೋಜನವಾಗಲಿಲ್ಲ.
ಈರೀನಾಳ ತಂದೆಗೆ ಒಂದು ಉಪಾಯ ಹೊಳೆಯಿತು. ಅವನು ಶಿಕ್ಷಕಿಗೆ, ಈರೀನಾಳು ಹಾಡಲು ಇಷ್ಟಪಡುವ ಹಾಡುಗಳನ್ನು ಒಳಗೊಂಡಿರುವ, ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ ಎಂಬ ಪುಸ್ತಕದ ಒಂದು ಪ್ರತಿಯನ್ನು ಕೊಟ್ಟನು. ಕೆಲವು ದಿನಗಳ ಬಳಿಕ, ಶಿಕ್ಷಕಿಯು ಈರೀನಾಳನ್ನು ಸಂಗೀತ ಕೋಣೆಗೆ ಕರೆದಳು. ಅವಳು ಈರೀನಾಳಿಗೆ ಆ ಪುಸ್ತಕದಿಂದ ತನ್ನ ಅಚ್ಚುಮೆಚ್ಚಿನ ಹಾಡುಗಳಲ್ಲಿ ಕೆಲವನ್ನು—ತನ್ನ ಸಹಪಾಠಿಗಳ ಉಪಸ್ಥಿತಿಯಲ್ಲಿ—ಹಾಡುವಂತೆ ಕೇಳಿಕೊಂಡಳು, ಮತ್ತು ಶಿಕ್ಷಕಿಯು ಪಿಯಾನೊ ಬಾರಿಸಿ ಅವಳೊಂದಿಗೆ ಜೊತೆಗೂಡಿದಳು. ಈ ಪ್ರದರ್ಶನವು ಒಂದು ತಾಸಿಗಿಂತಲೂ ಹೆಚ್ಚು ಸಮಯ ನಡೆಯಿತು! ಈರೀನಾಳ ಅಚ್ಚುಮೆಚ್ಚಿನ ಸಂಗೀತ ಪುಸ್ತಕವು ಕೆಲವು ಸುಂದರ ರಾಗವಿನ್ಯಾಸಗಳನ್ನು ಹೊಂದಿತ್ತೆಂಬುದನ್ನು ಶಿಕ್ಷಕಿಯು ಒಪ್ಪಲೇಬೇಕಾಯಿತು.