ಅವರು ಹರ್ಷಭರಿತ ಸ್ತುತಿಗಾರರಾಗಿ ಕೂಡಿಬಂದರು
ಯೆಹೋವ ದೇವರ ಪುರಾತನ ಜನರು ಆರಾಧನೆಗಾಗಿ ಕೂಡಿಬಂದಾಗ, ಅವರಿಗೆ “ಬಹಳ ಆನಂದದಿಂದಿರಬೇಕು,” ಎಂಬುದಾಗಿ ಆಜ್ಞಾಪಿಸಲಾಗಿತ್ತು. (ಧರ್ಮೋಪದೇಶಕಾಂಡ 16:15) ಯೆಹೋವನ ಸಾಕ್ಷಿಗಳಿಗೆ 1995⁄96ರ “ಹರ್ಷಭರಿತ ಸ್ತುತಿಗಾರರು” ಜಿಲ್ಲಾ ಅಧಿವೇಶನಗಳು ಹರ್ಷಕ್ಕೆ ಸಕಾರಣಗಳನ್ನು ಕೊಟ್ಟಿವೆ.
ಈ ಅಧಿವೇಶನಗಳ ಶ್ರೇಣಿಯು ಆರಂಭಿಸಿದಂದಿನಿಂದ, ಅವು ನಂಬಿಕೆಯನ್ನು ನೆಲೆಗೊಳಿಸಿವೆ. ಹರ್ಷರಹಿತ ಲೋಕವೊಂದರಲ್ಲಿ ಹರ್ಷವನ್ನು ಕಂಡುಕೊಳ್ಳುವುದು ಹೇಗೆಂದೂ ಅವು ತೋರಿಸಿವೆ. ನಾವು ಆ ಅಧಿವೇಶನವನ್ನು ದಿನದಿನವಾಗಿ ಪರಿಗಣಿಸೋಣ.
‘ಜನರೇ, ಯೆಹೋವನನ್ನು ಸ್ತುತಿಸಿರಿ . . . ಹರ್ಷಿಸಿರಿ!’
ಅಧಿವೇಶನದ ಮೊದಲನೆಯ ದಿನದ, ಮೇಲಿನ ಮುಖ್ಯ ವಿಷಯವು ಕೀರ್ತನೆ 149:1, 2ರ ಮೇಲೆ ಆಧಾರಿತವಾಗಿತ್ತು. “ಹರ್ಷಧ್ವನಿಗೈಯಲು ನಮಗೆ ಕಾರಣವಿದೆ” ಎಂಬ ಭಾಷಣವು ಯೆಶಾಯ 35ನೆಯ ಅಧ್ಯಾಯದ ಪ್ರವಾದನೆಯ ಅನ್ವಯವನ್ನು ಪರೀಕ್ಷಿಸಿತು. ಅದರ ಒಂದು ನೆರವೇರಿಕೆಯು ಪುರಾತನ ಇಸ್ರಾಯೇಲಿನಲ್ಲಾಗಿತ್ತು ಮತ್ತು ವಿಶೇಷವಾಗಿ ನಮ್ಮ ದಿನದಲ್ಲಿ ಯೆಹೋವನ ಆರಾಧಕರನ್ನು ಆತ್ಮಿಕ ಪ್ರಮೋದವನದ ಸಮೃದ್ಧಿ ಮತ್ತು ಆರೋಗ್ಯಕ್ಕೆ ಪುನಸ್ಸ್ಥಾಪನೆಯೊಂದಿಗೆ ಅದು ನೆರವೇರಿಯದೆ. ಹೀಗೆ, ಆತ್ಮಿಕ ಪ್ರಮೋದವನದಲ್ಲಿ ಮತ್ತು ಈಗ ಅತಿ ಸಮೀಪದಲ್ಲೇ ಇರುವ ಭೌತಿಕ ಪ್ರಮೋದವನದಲ್ಲಿ ದೇವರು ತನ್ನ ಜನರಿಗಾಗಿ ಏನನ್ನು ಉದ್ದೇಶಿಸಿದ್ದಾನೋ ಅದಕ್ಕಾಗಿ ಹರ್ಷಧ್ವನಿಗೈಯಲು ಅಧಿವೇಶನಗಾರರಿಗೆ ಸಕಾರಣವಿತ್ತು.
“ಹರ್ಷಭರಿತ ಸ್ತುತಿಗಾರರೋಪಾದಿ ಲೋಕವ್ಯಾಪಕವಾಗಿ ಮೀಸಲಾಗಿಡಲ್ಪಡುವುದು” ಎಂಬ ಮುಖ್ಯ ಭಾಷಣವು ಈ ಪ್ರಶ್ನೆಯನ್ನು ಉತ್ತರಿಸಿತು: ಈ ಲೋಕದಿಂದ ನಮ್ಮನ್ನು ಮೀಸಲಾಗಿಡುವುದು ಯಾವುದು? ಅದು ನಮ್ಮ ಐಕಮತ್ಯದ ಯೆಹೋವನ ಆರಾಧನೆಯೇ ಆಗಿದೆ. ಈ ಭೂಮಿಯ ಮೇಲೆ ಯೆಹೋವನ ಸಾಕ್ಷಿಗಳು ಎಲ್ಲಿಯೇ ಜೀವಿಸಲಿ, ಅವರು ಏಕಮತದಿಂದ ಮಾತಾಡುತ್ತಾರೆ ಮತ್ತು ಕಲಿಸುತ್ತಾರೆ. ಆತನ ರಾಜ್ಯದ ಮೂಲಕ ಆತನ ಪವಿತ್ರ ನಾಮವನ್ನು ಪವಿತ್ರೀಕರಿಸುವ ಮತ್ತು ಆತನ ಪರಮಾಧಿಕಾರವನ್ನು ನಿರ್ದೋಷೀಕರಿಸುವ ಯೆಹೋವನ ಮಹಾ ಉದ್ದೇಶದಲ್ಲೂ ಅವರು ಆನಂದಿಸುತ್ತಾರೆ. ಹೀಗಿರಲಾಗಿ, ಆತನ ಉದ್ದೇಶದಲ್ಲಿ ನಮಗೆ ಒಂದು ಪಾಲು ಇರುವಂತೆ ಯೆಹೋವನು ನಮಗೆ ಹೇಗೆ ಸಹಾಯ ಮಾಡುತ್ತಾನೆ? ತನ್ನ ಪವಿತ್ರ ವಾಕ್ಯದ ಸತ್ಯವನ್ನು ಆತನು ನಮಗೆ ವಹಿಸಿಕೊಟ್ಟಿದ್ದಾನೆ. ದೇವರು ನಮಗೆ ತನ್ನ ಪವಿತ್ರಾತ್ಮವನ್ನು ಕೊಟ್ಟಿದ್ದಾನೆ. ಜಗದ್ವ್ಯಾಪಕ ಸಹೋದರತ್ವದಿಂದ ಮತ್ತು ಶುದ್ಧಾರಾಧನೆಯ ಒಂದು ಏರ್ಪಾಡಿನಿಂದ ಆಶೀರ್ವದಿಸಿದ್ದಾನೆ. ಯೆಹೋವನನ್ನು ಮಹಾ ಹರ್ಷದ ಹೃದಯದಿಂದ ಸೇವಿಸುವಂತೆ ನಮ್ಮ ಅಂತಾರಾಷ್ಟ್ರೀಯ ಪರಿವಾರವು ನಮಗೆ ಸಹಾಯ ಮಾಡುತ್ತದೆ.
“ಲೋಕದಿಂದ ಪ್ರತ್ಯೇಕರೂ ನಿಷ್ಕಳಂಕರೂ ಆಗಿರುವುದು” ಎಂಬ ಭಾಷಣವು ಪಕ್ಷಪಾತ ಮತ್ತು ವರ್ಗಬೇಧಗಳ ಕಲೆಗಳನ್ನು ವರ್ಜಿಸುವ ಅಗತ್ಯವನ್ನು ಒತ್ತಿಹೇಳಿತು. (ಯಾಕೋಬ 2:5-9) ಕೆಲವರು ಬಡವರಾಗಿರುವ ಅಥವಾ ಪ್ರತಿಕೂಲ ಪರಿಸ್ಥಿತಿಯಲ್ಲಿರುವ ಜೊತೆ ಕ್ರೈಸ್ತರನ್ನು ಉಪೇಕ್ಷಿಸುತ್ತಾ ಅಥವಾ ತಿರಸ್ಕರಿಸುತ್ತಾ, ಕೇವಲ ತದ್ರೀತಿಯ ಒಂದು ಹಿನ್ನೆಲೆ ಅಥವಾ ಹಣಕಾಸಿನ ಅಂತಸ್ತುಳ್ಳವರೊಂದಿಗೆ ಮಾತ್ರ ಮೈತ್ರಿಯನ್ನು ಮಾಡಬಹುದು. ಇತರರು ಸಭೆಯಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವವರಿಗೆ ಹೆಚ್ಚು ಒತ್ತಾಸೆ ನೀಡುವ ಪ್ರವೃತ್ತಿಯವರಾಗಬಹುದು. ಯಾರಿಗಾದರೂ ಇರಬಲ್ಲ ಅತ್ಯಂತ ಮಹಾ ಸುಯೋಗವು ಒಬ್ಬ ಯೆಹೋವನ ಸಾಕ್ಷಿಯಾಗಿರುವುದೇ ಎಂಬುದನ್ನು ಅವರು ಮರೆಯುತ್ತಾರೆ. ಆದುದರಿಂದ, ಲೌಕಿಕ ಪ್ರವೃತ್ತಿಗಳ ಕಲೆಯು ನಮಗೆ ಹತ್ತಿ ಸಭೆಯ ಶಾಂತಿಯನ್ನು ಭಂಗಗೊಳಿಸುವಂತೆ ನಾವು ಬಿಡಬಾರದು.—2 ಪೇತ್ರ 3:14.
“ನಾನು ವಿವಾಹವಾಗಲು ಸಿದ್ಧವಾಗಿದ್ದೇನೋ?” ಎಂಬ ಭಾಷಣವು, ಅನೇಕರು ಮುಂದಾಲೋಚನೆಯಿಲ್ಲದೆ ಮದುವೆಯನ್ನು ಪ್ರವೇಶಿಸುತ್ತಾರೆಂದು ತಿಳಿಯಪಡಿಸಿತು. ಕೆಲವರು ಮದುವೆಯಾಗುವುದು ಮನೆಯಲ್ಲಿ ಒಂದು ಕಷ್ಟದ ಸನ್ನಿವೇಶವನ್ನು ಪಾರಾಗಲು ಅಥವಾ ತಮ್ಮ ಸಮಾನಸ್ಥರು ಮದುವೆಯಾಗುವ ಕಾರಣದಿಂದಾಗಿ. ಆದರೆ, ಮದುವೆಗೆ ಸಮಂಜಸ ಕಾರಣಗಳಲ್ಲಿ ದೇವಪ್ರಭುತ್ವ ಗುರಿಗಳನ್ನು ಬೆನ್ನಟ್ಟುವ ಪರಸ್ಪರ ಅಪೇಕ್ಷೆ, ನೈಜ ಪ್ರೀತಿ, ಸಾಹಚರ್ಯ ಮತ್ತು ಸುರಕ್ಷಿತತೆಯ ಅಗತ್ಯ, ಮತ್ತು ಮಕ್ಕಳನ್ನು ಬೆಳಸುವ ಅಪೇಕ್ಷೆಗಳು ಕೂಡಿರುತ್ತವೆ. ಮದುವೆಗಾಗಿ ತಯಾರಿಯಲ್ಲಿ ಆತ್ಮಿಕ ತರಬೇತು ಅತ್ಯಾವಶ್ಯಕ. ಇತರ ವಿಷಯಗಳಲ್ಲದೆ, ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳುವ ಮೂಲಕ ಅಪೇಕ್ಷಣೀಯ ಗುಣಗಳನ್ನು ಕಟ್ಟುವ ಒಂದು ಅಗತ್ಯವಿದೆ. ಭಾವೀ ಜೊತೆಯು ಯೆಹೋವನೊಂದಿಗೆ ಒಂದು ನಿಜ ಸಂಬಂಧವನ್ನು ಹೊಂದಿರುವ ಪುರಾವೆಯನ್ನು ಕೊಡುತ್ತಾನೋ ಮತ್ತು ಇತರರೊಂದಿಗೆ ಗೌರವಪೂರ್ವಕವಾಗಿ ವ್ಯವಹರಿಸುತ್ತಾನೋ ಎಂದು ಗೊತ್ತುಮಾಡುವುದೂ ವಿವೇಕಪ್ರದವು. ಪಕ್ವತೆಯುಳ್ಳ ಕ್ರೈಸ್ತರಿಂದ ಬುದ್ಧಿವಾದವನ್ನು ಕೋರುವುದು ಸಹ ಬುದ್ಧಿವಂತಿಕೆಯಾಗಿದೆ.—ಜ್ಞಾನೋಕ್ತಿ 11:14.
ಈ ಪ್ರಬೋಧಕ ಚರ್ಚೆಯು, “ತಮ್ಮ ಮಕ್ಕಳಲ್ಲಿ ಆಹ್ಲಾದವನ್ನು ಕಂಡುಕೊಳ್ಳುವ ಹೆತ್ತವರು” ಎಂಬ ಶೀರ್ಷಿಕೆಯ ಭಾಷಣದಿಂದ ಹಿಂಬಾಲಿಸಲ್ಪಟ್ಟಿತು. ಒಂದು ಮಗುವಿನ ಜನನವು ಸಾಮಾನ್ಯವಾಗಿ ಮಹಾ ಉಲ್ಲಾಸದ ಸಮಯವಾಗಿರುತ್ತದೆ. ಆದರೂ, ಮಕ್ಕಳನ್ನು ಹುಟ್ಟಿಸುವುದು ಸಹ ಮಹಾ ಜವಾಬ್ದಾರಿಯನ್ನು ತರುತ್ತದೆ. (ಕೀರ್ತನೆ 127:3) ಹೀಗೆ, ಯೆಹೋವನನ್ನು ಪ್ರೀತಿಸಲಿಕ್ಕೆ ಮಕ್ಕಳಿಗೆ ಕಲಿಸಲ್ಪಡುವುದು ಪ್ರಾಮುಖ್ಯವು. ಹೆತ್ತವರು ಕ್ರಮವಾಗಿ ಯೆಹೋವನ ಕುರಿತು ತಮ್ಮ ಮಕ್ಕಳೊಂದಿಗೆ ಮಾತನಾಡುವ ಮೂಲಕ ಮತ್ತು ಕುಟುಂಬದಲ್ಲಿ ಆತನ ವಾಕ್ಯದ ಮೂಲತತ್ವಗಳನ್ನು ಅನ್ವಯಿಸುವ ಮೂಲಕ ಇದನ್ನು ಮಾಡಸಾಧ್ಯವಿದೆ.
ಅಧಿವೇಶನದ ಮೊದಲನೆಯ ದಿನವು, ಯೆಹೋವನ ಸಾಕ್ಷಿಗಳು ಮತ್ತು ಶಿಕ್ಷಣ (ಇಂಗ್ಲಿಷ್) ಎಂಬ ಹೊಸ ಬ್ರೋಷರಿನ ಅನಿರೀಕ್ಷಿತ ಬಿಡುಗಡೆಯೊಂದಿಗೆ ಕೊನೆಗೊಂಡಿತು. ಸಾಕ್ಷಿಗಳು “ತಮ್ಮ ಎಳೆಯರನ್ನು ಶಾಲೆಯಲ್ಲಿ ಕಷ್ಟಪಟ್ಟು ಕೆಲಸಮಾಡುವಂತೆಯೂ ಅವರಿಗೆ ನೇಮಕವಾದ ಕರ್ತವ್ಯಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆಯೂ ಪ್ರೋತ್ಸಾಹಿಸುತ್ತಾರೆಂದು” ಅದು ಸ್ಪಷ್ಟವಾಗಿ ವಿವರಿಸುತ್ತದೆ. ಯೆಹೋವನ ಸಾಕ್ಷಿಗಳು ಅನೇಕ ವರ್ಷಗಳಿಂದ ನೈಜೀರಿಯ, ಮೆಕ್ಸಿಕೊ, ಮತ್ತು ಇತರ ದೇಶಗಳಲ್ಲಿ ನಿರ್ವಹಿಸಿರುವ ಸಾಕ್ಷರತೆಯ ತರಗತಿಗಳ ಗಮನಾರ್ಹ ಪರಿಣಾಮಗಳನ್ನು ಸಹ ಈ ಪ್ರಕಾಶನವು ವಿವರಿಸುತ್ತದೆ. ನಾವು ವಿದ್ಯಾಭ್ಯಾಸವನ್ನು ಅತಿ ಪ್ರಾಮುಖ್ಯವಾಗಿ ವೀಕ್ಷಿಸುತ್ತೇವೆಂದು ಕಾಣಲು ಈ ಬ್ರೋಷರ್ ಶಿಕ್ಷಕರಿಗೆ ಸಹಾಯ ಮಾಡಬೇಕು.
‘ಸ್ತೋತ್ರಯಜ್ಞವನ್ನು ದೇವರಿಗೆ ಎಡೆಬಿಡದೆ ಸಮರ್ಪಿಸಿರಿ’
ಮೊದಲೇ ಹೇಳಲಾದ ಎರಡನೆಯ ದಿನದ ಮುಖ್ಯ ವಿಷಯವು ಇಬ್ರಿಯ 13:15ರ ಮೇಲೆ ಆಧಾರಿತವಾಗಿತ್ತು. ಬೆಳಗ್ಗಿನ ಕಾರ್ಯಕ್ರಮವು “ಯೆಹೋವನನ್ನು ಸ್ತುತಿಸುವ ಕರೆಗೆ ಓಗೊಡುವುದು” ಎಂಬ ಭಾಷಣಮಾಲೆಯನ್ನು ನೀಡಿತು. ಈ ಕರೆಗೆ ಓಗೊಡಲು ವಯಸ್ಸು ಪ್ರತಿಬಂಧಕವಲ್ಲ. ಯುವಕರು, ಕನ್ಯೆಯರು, ವೃದ್ಧರು ಮತ್ತು ಹುಡುಗರು ಯೆಹೋವನನ್ನು ಸ್ತುತಿಸುವಂತೆ ಕೀರ್ತನೆ 148:12, 13 ಉತ್ತೇಜಿಸುತ್ತದೆ. ಯೆಹೋವನ ಅನೇಕ ಹರ್ಷಭರಿತ ಸೇವಕರು ತಮ್ಮ ಸ್ತುತಿಯನ್ನು ಅಧಿಕಗೊಳಿಸಲು ಶಕ್ತರಾಗಿರುತ್ತಾರೆ. ಲೋಕಾದ್ಯಂತ 6,00,000ಕ್ಕಿಂತ ಹೆಚ್ಚು ಜನರು ಪೂರ್ಣ ಸಮಯದ ಸಾರುವ ಚಟುವಟಿಕೆ, ಅಥವಾ ಪಯನೀಯರ ಸೇವೆಯಲ್ಲಿ ಪಾಲಿಗರಾಗುತ್ತಾರೆ. 15,000ಕ್ಕಿಂತಲೂ ಹೆಚ್ಚು ಮಂದಿ ವಿಶೇಷ ಪಯನೀಯರ ಕೆಲಸದಲ್ಲಿ, ಮತ್ತು 15,000ಕ್ಕೆ ಮೇಲ್ಪಟ್ಟು ಬೆತೆಲ್ ಸೇವೆಯಲ್ಲಿದ್ದಾರೆ.
“ಯೆಹೋವನ ಸಂಸ್ಥೆಯೊಂದಿಗೆ ನಿಷ್ಠೆಯಿಂದ ಸೇವೆಸಲ್ಲಿಸುವುದು” ಎಂಬ ಭಾಷಣವು ದೇವರ ಸೇವಕರಿಗೆ ನಿಷ್ಠೆಯು ಅತ್ಯಾವಶ್ಯಕವೆಂದು ತೋರಿಸಿತು. ಯೆಹೋವನಿಗೆ ನಿಷ್ಠೆಯುಳ್ಳವರಾಗಿರುವುದೆಂದರೆ, ಯಾವುದು ಒಂದು ಬಲವಾದ ಅಂಟಿನಂತೆ ವರ್ತಿಸುತ್ತದೊ ಅಷ್ಟು ಬಲವಾದ ಭಕ್ತಿಯಿಂದ ಆತನಿಗೆ ಅಂಟಿಕೊಳ್ಳುವುದೆಂದರ್ಥ. ಇತರರು ನಮ್ಮನ್ನು ನೋಡಲಿ, ನೋಡದಿರಲಿ, ನಾವು ಬೈಬಲಿನ ಆಜ್ಞೆಗಳನ್ನು ಬುದ್ಧಿಪೂರ್ವಕವಾಗಿ ಉಲ್ಲಂಘಿಸುವುದನ್ನು ವರ್ಜಿಸುವಂತೆ ನಿಷ್ಠೆಯು ಆವಶ್ಯಪಡಿಸುತ್ತದೆ. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಕಂಡುಕೊಳ್ಳಲ್ಪಡುವ ಹಾಗೂ ವಾಚ್ ಟವರ್ ಸೊಸೈಟಿಯಿಂದ ಒದಗಿಸಲ್ಪಡುವ ಬೇರೆ ಎಲ್ಲ ಆತ್ಮಿಕ ಆಹಾರವನ್ನು ನಾವು ನಿಷ್ಠೆಯಿಂದ ಎತ್ತಿಹಿಡಿಯುವುದನ್ನೂ ಅದು ಅವಶ್ಯಪಡಿಸುತ್ತದೆ. ಈ ಭಾಷಣವನ್ನು ದೀಕ್ಷಾಸ್ನಾನದ ಉಪನ್ಯಾಸವು ಹಿಂಬಾಲಿಸಿತು. ದೀಕ್ಷಾಸ್ನಾನದ ಅಭ್ಯರ್ಥಿಗಳು ಯೆಹೋವನಿಗೆ ತಮ್ಮ ಸಮರ್ಪಣೆಯ ಪುರಾವೆಯನ್ನು ಕೊಟ್ಟಾಗ ಅಲ್ಲಿ ಎಷ್ಟು ಸಂತೋಷವು ತೋರಿಬಂತು!
ಹೋಶೇಯ 4:1-3ರ ಮಾತುಗಳು ಅಪರಾಹ್ಣದ “ಸದ್ಗುಣ ಅಥವಾ ದುರ್ಗುಣ—ಯಾವುದನ್ನು ನೀವು ಬೆನ್ನಟ್ಟುತ್ತೀರಿ?” ಎಂಬ ಭಾಷಣಕ್ಕೆ ಮಾದರಿಯನ್ನು ಒದಗಿಸಿದವು. ಸದ್ಗುಣದ ಬಗ್ಗೆ ಲೋಕದ ನೋಟವು ಅವನತಿಗಿಳಿದರೂ, ನೈತಿಕ ಉತ್ಕೃಷ್ಟತೆಯನ್ನು ಬೆನ್ನಟ್ಟಲು ಕ್ರೈಸ್ತರು “ಶ್ರದ್ಧಾಪೂರ್ವಕ ಪ್ರಯತ್ನವನ್ನು” ಮಾಡಬೇಕು. (2 ಪೇತ್ರ 1:5, NW) ಒಬ್ಬ ವ್ಯಕ್ತಿಯು ಹೇಗೆ ಯೋಚಿಸುತ್ತಾನೆಂಬುದರಿಂದ ಇದು ಆರಂಭಿಸುತ್ತದೆ. ಅವನ ಯೋಚನೆಗಳು ಶುದ್ಧವಾಗಿದ್ದರೆ, ಅವನು ಶುದ್ಧವೂ, ಹಿತಕರವೂ, ಭಕ್ತಿವರ್ಧಕವೂ ಆದ ಮಾತುಗಳನ್ನಾಡುವನು ಮತ್ತು ಇತರರೊಂದಿಗೆ ತನ್ನ ವ್ಯವಹಾರಗಳಲ್ಲಿ ಪ್ರಾಮಾಣಿಕನಾಗಿರಲು ಪ್ರಯಾಸಪಡುವನು. ಸದ್ಗುಣದ ಬೆನ್ನಟ್ಟುವಿಕೆಯಲ್ಲಿ, ಸಂಕಟ ಅಥವಾ ಹತಾಶೆಯನ್ನು ಅನುಭವಿಸುವ ಒಬ್ಬ ಜೊತೆ ಕ್ರೈಸ್ತನೆಡೆಗೆ ತಿಳಿವಳಿಕೆ ಮತ್ತು ಕನಿಕರದಿಂದಿರಲು ಪ್ರಯತ್ನಿಸುವುದೂ ಒಳಗೂಡುತ್ತದೆ.—1 ಥೆಸಲೊನೀಕ 5:14.
“ಸೈತಾನನ ಪಾಶಗಳ ವಿರುದ್ಧ ಕಾಪಿಡಿರಿ,” ಎಂಬ ಇನ್ನೊಂದು ಭಾಷಣವು ಕ್ರೈಸ್ತರನ್ನು ಪೈಶಾಚಿಕ ಪ್ರಭಾವಗಳಿಗೆ ತಮ್ಮನ್ನು ಒಡ್ಡಿಕೊಳ್ಳುವ ವಿರುದ್ಧವಾಗಿ ಎಚ್ಚರಿಸಿತು. ಅಸ್ವಸ್ಥಗಳ ಚಿಕಿತ್ಸಾ ರಂಗದಲ್ಲಿ ಸುಪ್ತ್ಯಾವಾಹನೆಯಂತಹ ರಹಸ್ಯವಿದ್ಯೆಗೆ ಸಂಬಂಧಿಸಿದ ತಂತ್ರಗಳ ಕುರಿತು ಕ್ರೈಸ್ತರು ಎಚ್ಚರದಿಂದಿರುವ ಅಗತ್ಯವಿದೆ. ಅನ್ಯಥಾ, ತಮ್ಮ ಶಾರೀರಿಕ ಆರೋಗ್ಯದ ಆರೈಕೆಗಾಗಿ ಜನರು ಏನು ಮಾಡುತ್ತಾರೋ ಅದು ಅವರ ವೈಯಕ್ತಿಕ ವಿಷಯ.
ಎರಡನೆಯ ದಿನವು ಒಂದು ಹರ್ಷಾಶ್ಚರ್ಯದೊಂದಿಗೆ—ಒಂದು ಹೊಸ ಪಾಕೆಟ್-ಸೈಸ್ ಪುಸ್ತಕದ ಬಿಡುಗಡೆಯೊಂದಿಗೆ ಕೊನೆಗೊಂಡಿತು. ಇದು ಪ್ರಾಮಾಣಿಕ ಹೃದಯದ ಜನರು ಬೇಗನೆ ಸಮರ್ಪಣೆ ಮತ್ತು ದೀಕ್ಷಾಸ್ನಾನದ ಕಡೆಗೆ ಪ್ರಗತಿಮಾಡುವಂತೆ ರಚಿಸಲಾದ ಪ್ರಕಾಶನವಾಗಿದೆ. ಈ ಹೊಸ 192 ಪುಟದ ಪುಸ್ತಕದ ಶೀರ್ಷಿಕೆಯು, ನಿತ್ಯಜೀವಕ್ಕೆ ನಡೆಸುವ ಜ್ಞಾನ. ಈ ಜ್ಞಾನ ಪುಸ್ತಕವು ಒಂದು ಆತ್ಮೋನ್ನತಿಯ ವಿಧಾನದಲ್ಲಿ ಸತ್ಯವನ್ನು ಪ್ರಸ್ತುತಪಡಿಸುತ್ತದೆ. ಸುಳ್ಳು ಬೋಧನೆಗಳನ್ನು ತಪ್ಪೆಂದು ತೋರಿಸುವುದಕ್ಕೆ ಅದು ಹೆಚ್ಚು ಗಮನಕೊಡುವುದಿಲ್ಲ. ಭಾಷಾ ಸ್ಪಷ್ಟತೆ ಮತ್ತು ತರ್ಕಬದ್ಧ ವಿಕಸನೆಯು ಈ ಪುಸ್ತಕವನ್ನು ಬೈಬಲ್ ಅಧ್ಯಯನ ನಡಸಲಿಕ್ಕೆ ಸುಲಭವನ್ನಾಗಿ ಮಾಡಿ, ಜನರಿಗೆ ಹೃದಯೋಲ್ಲಾಸದ ದೇವರ ಜ್ಞಾನದ ಗ್ರಹಿಕೆಯನ್ನು ಕೊಡುವಂತೆ ಸಹಾಯ ಮಾಡಬೇಕು.
“ಹರ್ಷಗೊಂಡು ಸದಾ ಉಲ್ಲಾಸಿಸಿರಿ”
ಯೆಶಾಯ 65:18ರ ಈ ಮಾತುಗಳು ಅಧಿವೇಶನದ ಮೂರನೆಯ ದಿನದ ಮುಖ್ಯ ವಿಷಯವಾಗಿದ್ದವು. ಬೈಬಲ್ ಪ್ರವಾದನೆಯ ನೆರವೇರಿಕೆಯು 1914ನ್ನು, ಈ ದುಷ್ಟ ವಿಷಯಗಳ ವ್ಯವಸ್ಥೆಯು ತನ್ನ ಕಡೇ ದಿನಗಳನ್ನು ಪ್ರವೇಶಿಸಿದ ವರ್ಷವಾಗಿ ತೋರಿಸುತ್ತದೆ. ಆದುದರಿಂದ, “ಈ ವ್ಯವಸ್ಥೆಯ ಸಮಾಪ್ತಿಯ ಸಮಯದಲ್ಲಿ ಹರ್ಷಭರಿತ ಸ್ತುತಿಗಾರರು” ಎಂಬ ಭಾಷಣಮಾಲೆಯು ಸಭಿಕರ ತನ್ಮಯ ಗಮನವನ್ನು ಸೆಳೆಯಿತು. ಜಗತ್ತಿನ ಅತ್ಯಾಸೆ ಮತ್ತು ಹಿಂಸಾತ್ಮಕ ಆತ್ಮದಿಂದ ನೂರಾರು ಕೋಟಿ ಜನರು ಹೇಗೆ ಪ್ರಭಾವಿತರಾಗಿದ್ದಾರೆಂದು ಭಾಷಣಗಾರರು ತೋರಿಸಿದರು. ತಕ್ಕ ಕಾಲದಲ್ಲಿ ಅವರು, ಸೈತಾನನು ಅಧಿಪತಿಯಾಗಿರುವ ಲೋಕದ ಭಾಗದೋಪಾದಿ ತೀರ್ಪಿಗೆ ಗುರಿಯಾಗುವರು. ಹೀಗೆ, ಒಂದು ಆಯ್ಕೆಯನ್ನು ಮಾಡುವ ಸಮಯವು ಇದೇ ಆಗಿದೆ. ಯಾರ ಪಕ್ಕದಲ್ಲಿ ನಾವು ಇರಲು ಬಯಸುತ್ತೇವೆ? ನಾವು ಯೆಹೋವನನ್ನು ಆರಾಧಿಸಿ ಆತನ ಪರಮಾಧಿಕಾರವನ್ನು ಎತ್ತಿಹಿಡಿಯಲು ಬಯಸುತ್ತೇವೋ, ಇಲ್ಲವೆ ಸೈತಾನನಿಗೆ ಮೆಚ್ಚಿಗೆಯಾಗುವ ವಿಷಯಗಳನ್ನು ಮಾಡಿ, ಅವನನ್ನು ನಮ್ಮ ಅಧಿಪತಿಯಾಗಿರುವಂತೆ ಬಿಡುತ್ತೇವೋ? ಯೆಹೋವನ ಪಕ್ಕದಲ್ಲಿ ನಾವೆಲ್ಲರೂ ನಮ್ಮ ಸ್ಥಾನವನ್ನು ನಿಸ್ಸಂದಿಗ್ಧವಾಗಿ ತೆಗೆದುಕೊಳ್ಳಬೇಕು.
ಅಧಿವೇಶನದ ಸಾರ್ವಜನಿಕ ಭಾಷಣವಾದ “ನಿತ್ಯತೆಯ ಅರಸನನ್ನು ಸ್ತುತಿಸಿರಿ!” ಎಂಬುದು ಉಪಸ್ಥಿತರೆಲ್ಲರ ಬುದ್ಧಿಗೆ ಸಶಕ್ತ ಆಹಾರವನ್ನೊದಗಿಸಿತು. ನಿತ್ಯತೆಯ ವಿಚಾರವು ಅಬಲರಾದ ಮಾನವರ ಗ್ರಹಿಕೆಗೆ ಮೀರಿದ್ದಾದರೂ, ಯೆಹೋವನು ಅದನ್ನು ಪೂರ್ಣವಾಗಿ ತಿಳಿಯುತ್ತಾನೆ. “ಯೆಹೋವನು ಯುಗಯುಗಾಂತರಗಳಲ್ಲಿಯೂ ಅರಸನಾಗಿರುವನು,” ಎಂದು ಹಾಡಿದನು ಕೀರ್ತನೆಗಾರ. (ಕೀರ್ತನೆ 10:16) ಈ ನಿತ್ಯತೆಯ ರಾಜನು ನಿತ್ಯಜೀವವನ್ನು ಅನುಭವಿಸುವಂತೆ ಮಾನವಕುಲಕ್ಕಾಗಿ ತನ್ನ ಮಗನಾದ ಯೇಸು ಕ್ರಿಸ್ತನ ಮೂಲಕ ಮಾರ್ಗವನ್ನು ತೆರೆದಿದ್ದಾನೆ. (ಯೋಹಾನ 17:3) “ಹೌದು, ಪಾಪಿಗಳಾದ ನಾವು ದೈವಿಕ ಶಿಕ್ಷಣ ಮತ್ತು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯ ಮೂಲಕ ನಿತ್ಯಜೀವವನ್ನು ಪಡೆಯಬಹುದು,” ಎಂದರು ಭಾಷಣಕರ್ತರು.
ಅಧಿವೇಶನವು ಕೊನೆಗೊಳ್ಳುತ್ತಾ ಬಂದಾಗ, “ಯೆಹೋವನನ್ನು ಅನುದಿನವೂ ಹರ್ಷಭರಿತರಾಗಿ ಸ್ತುತಿಸಿರಿ” ಎಂಬ ಅಂತಿಮ ಭಾಷಣದಿಂದ ಉಪಸ್ಥಿತರೆಲ್ಲರೂ ಆತ್ಮೋನ್ನತಿಯನ್ನು ಹೊಂದಿದರು. ಭೂಮಿಯಾದ್ಯಂತ ಶಿಷ್ಯರನ್ನಾಗಿ ಮಾಡುವ ಕಾರ್ಯದ ಪ್ರವರ್ಧನೆಯ ವರದಿಗಳು ಹೃದಯೋಲ್ಲಾಸವನ್ನು ತಂದವು. ಮತ್ತು ಅಧಿವೇಶನಗಾರರು “ದಿನಂಪ್ರತಿ ಯೆಹೋವನನ್ನು ಕೀರ್ತಿಸುವುದಕ್ಕೆ ಮತ್ತು ಆತನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಸ್ತುತಿಸುವುದಕ್ಕೆ” ಪ್ರೇರೇಪಿಸಲ್ಪಟ್ಟರು.—ಕೀರ್ತನೆ 145:2, NW.
ಅಮಾನುಷತೆಯ ನುಡಿಯಲಶಕ್ಯವಾದ ಕೃತ್ಯಗಳು ಲೋಕದ ಸಂತೋಷವನ್ನು ಅಪಹರಿಸುತ್ತವೆ. ಆದಾಗ್ಯೂ, ಯೆಹೋವನಲ್ಲಿ ಪೂರ್ಣ ನಂಬಿಕೆಯುಳ್ಳ ವ್ಯಕ್ತಿಗಳು ದೈವಿಕ ಹರ್ಷವನ್ನು ಅನುಭವಿಸಬಲ್ಲರು. ಆದುದರಿಂದ ಯೆಹೋವನ ಸಾಕ್ಷಿಗಳು ಲೋಕವ್ಯಾಪಕ ಸಹೋದರತ್ವದೋಪಾದಿ ಕೀರ್ತನೆ 35:27, 28ರ ಈ ಕೆಳಗಿನ ಮಾತುಗಳನ್ನು ಪುನರುಚ್ಚರಿಸಬಲ್ಲರು: “ನನ್ನ ನ್ಯಾಯಸ್ಥಾಪನೆಯನ್ನು ಬಯಸುವವರು ಆನಂದದೊಡನೆ ಜಯಧ್ವನಿಮಾಡಲಿ; ತನ್ನ ಸೇವಕನ ಹಿತವನ್ನು ಕೋರುವ ಯೆಹೋವನಿಗೆ ಸ್ತೋತ್ರ ಎಂದು ಯಾವಾಗಲೂ ಹೇಳುವವರಾಗಲಿ. ನನ್ನ ನಾಲಿಗೆಯು ನಿನ್ನ ನೀತಿಯನ್ನೂ ಮಹಿಮೆಯನ್ನೂ ದಿನವೆಲ್ಲಾ ವರ್ಣಿಸುವದು.”
[ಪುಟ 7 ರಲ್ಲಿರುವ ಚಿತ್ರಗಳು]
“ಯೆಹೋವನ ಸಾಕ್ಷಿಗಳು ಮತ್ತು ಶಿಕ್ಷಣ” (ಇಂಗ್ಲಿಷ್) ಎಂಬ ಬ್ರೋಷರ್ನಿಂದ ಕುಟುಂಬಗಳು ಪ್ರಯೋಜನ ಪಡೆಯುವುವು
[ಪುಟ 8,9 ರಲ್ಲಿರುವ ಚಿತ್ರಗಳು]
“ನಿತ್ಯಜೀವಕ್ಕೆ ನಡೆಸುವ ಜ್ಞಾನ” ಎಂಬ ಹೊಸ ಪುಸ್ತಕವು, ಒಂದು ಆತ್ಮೋನ್ನತಿಯ ವಿಧಾನದಲ್ಲಿ ಸತ್ಯವನ್ನು ಪ್ರಸ್ತುತಪಡಿಸುತ್ತದೆ
[ಪುಟ 9 ರಲ್ಲಿರುವ ಚಿತ್ರ]
ಯೆಹೋವನಿಗೆ ತಮ್ಮ ಸಮರ್ಪಣೆಯ ಸಂಕೇತವಾಗಿ ಅನೇಕರು ದೀಕ್ಷಾಸ್ನಾನ ಪಡೆದುಕೊಂಡರು
[ಪುಟ 9 ರಲ್ಲಿರುವ ಚಿತ್ರ]
“ಅವರ ಮುಪ್ಪಿನ ವರ್ಷಗಳಲ್ಲಿ ಅರ್ಹ ವ್ಯಕ್ತಿಗಳನ್ನು ಸನ್ಮಾನಿಸುವುದು” ಎಂಬ ಡ್ರಾಮದಿಂದ ಅಧಿವೇಶನಗಾರರು ಆಳವಾಗಿ ಪ್ರೇರೇಪಿಸಲ್ಪಟ್ಟರು