ಅವನು ಮೆಸ್ಸೀಯನ ಮುನ್ಸೂಚಕನಾಗಿದ್ದನು
ಒಂದು ಅಗಲವಾದ ತೊಗಲಿನ ನಡುಕಟ್ಟು ಅವನ ಕಂದಿ ಹೋದ ಚರ್ಮವನ್ನು ಎದ್ದುಕಾಣುವಂತೆ ಮಾಡಿತು. ಒಂಟೇ ಕೂದಲಿನ ನಿಲುವಂಗಿಯನ್ನು ಧರಿಸಿದ್ದ ಅವನು, ಖಂಡಿತವಾಗಿಯೂ ಒಬ್ಬ ಪ್ರವಾದಿಯಂತೆ ಕಂಡನು. ಯೊರ್ದನ್ ನದಿಯ ಬಳಿ ಅವನ ಕಡೆಗೆ ಅನೇಕರು ಸೆಳೆಯಲ್ಪಟ್ಟರು. ಅಲ್ಲಿ ಈ ಆಕರ್ಷಕ ಪುರುಷನು ತಾನು ಪಶ್ಚಾತ್ತಾಪಿ ಪಾಪಿಗಳಿಗೆ ದೀಕ್ಷಾಸ್ನಾನ ಕೊಡಲು ಸಿದ್ಧನಾಗಿದ್ದೆನೆಂದು ಧೈರ್ಯದಿಂದ ಘೋಷಿಸಿದನು.
ಜನರು ಆಶ್ಚರ್ಯಚಕಿತರಾದರು! ಈ ಪುರುಷನು ಯಾರಾಗಿದ್ದನು? ಅವನ ಉದ್ದೇಶವು ಏನಾಗಿತ್ತು?
ಯೇಸು ಕ್ರಿಸ್ತನು ಈ ವ್ಯಕ್ತಿಯ ಕುರಿತು ಹೇಳಿದ್ದು: “ಹಾಗಾದರೆ ಯಾತಕ್ಕೆ ಹೋಗಿದ್ದಿರಿ? ಪ್ರವಾದಿಯನ್ನು ನೋಡುವದಕ್ಕೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನನ್ನು ನೋಡಿದಿರಿ ಎಂದು ನಿಮಗೆ ಹೇಳುತ್ತೇನೆ. . . . ಸ್ತ್ರೀಯರಲ್ಲಿ ಹುಟ್ಟಿದವರೊಳಗೆ ಸ್ನಾನಿಕನಾದ ಯೋಹಾನನಿಗಿಂತ ದೊಡ್ಡವನು ಎದ್ದಿಲ್ಲ.” (ಮತ್ತಾಯ 11:9-11) ಯೋಹಾನನು ಅಂತಹ ಒಬ್ಬ ವಿಶೇಷ ಪುರುಷನಾಗಿದ್ದನು ಏಕೆ? ಏಕೆಂದರೆ ಅವನು ಮೆಸ್ಸೀಯನ ಮುನ್ಸೂಚಕನಾಗಿದ್ದನು.
ಅವನ ನಿಯೋಗ ಮುಂತಿಳಿಸಲ್ಪಟ್ಟದ್ದು
ಯೋಹಾನನ ಜನನದ 700 ಕ್ಕಿಂತಲೂ ಹೆಚ್ಚು ವರ್ಷಗಳ ಮುಂಚೆ, ಇವನು ಅರಣ್ಯದಲ್ಲಿ ಹೀಗೆ ಕೂಗುವನೆಂದು ಯೆಹೋವನು ಪ್ರಕಟಿಸಿದನು: “ಯೆಹೋವನ ದಾರಿಯನ್ನು ಸರಿಪಡಿಸಿರಿ, ಅಡವಿಯಲ್ಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ನೆಟ್ಟಗೆ ಮಾಡಿರಿ.” (ಯೆಶಾಯ 40:3; ಮತ್ತಾಯ 3:3) ಯೋಹಾನನ ಜನನದ ಸುಮಾರು 400 ವರ್ಷಗಳ ಮೊದಲು, ಸರ್ವಶಕ್ತ ದೇವರು ಘೋಷಿಸಿದ್ದು: “ಯೆಹೋವನ ಆಗಮನದ ಭಯಂಕರವಾದ ಮಹಾದಿನವು ಬರುವದಕ್ಕೆ ಮುಂಚೆಯೇ ಪ್ರವಾದಿಯಾದ ಎಲೀಯನನ್ನು ನಿಮ್ಮ ಬಳಿಗೆ ಕಳುಹಿಸುವೆನು.” (ಮಲಾಕಿಯ 4:5) ಸ್ನಾನಿಕನಾದ ಯೋಹಾನನು ಯೇಸುವಿಗಿಂತ ಸುಮಾರು ಆರು ತಿಂಗಳು ಮುಂಚಿತವಾಗಿ ಜನಿಸಿದನೆಂಬ ಸಂಗತಿಯು ಬರಿಯ ಆಕಸ್ಮಿಕ ಘಟನೆಯಾಗಿರಲಿಲ್ಲ, ಇಲ್ಲವೆ ಇದು ಕೇವಲ ಸ್ವಾಭಾವಿಕ ಪ್ರಕ್ರಿಯೆಗಳ ಮೂಲಕ ಉಂಟಾಗಲಿಲ್ಲ. ವಾಗ್ದತ್ತ ಮಗುವಾದ ಇಸಾಕನ ಜನನದಂತೆ, ಯೋಹಾನನ ಜನನವು ಒಂದು ಅದ್ಭುತಕಾರ್ಯವಾಗಿತ್ತು, ಯಾಕೆಂದರೆ ಅವನ ಹೆತ್ತವರಾದ ಜಕರೀಯ ಮತ್ತು ಎಲಿಸಬೇತ್ ಇಬ್ಬರೂ ಮಕ್ಕಳನ್ನು ಪಡೆಯುವ ಸಾಮಾನ್ಯ ವಯಸ್ಸನ್ನು ಮೀರಿದ್ದರು.—ಲೂಕ 1:18.
ಯೋಹಾನನ ಗರ್ಭಧಾರಣೆಯ ಮುಂಚೆಯೇ, ಅವನ ನಿಯೋಗ, ಕೆಲಸ, ಮತ್ತು ಜೀವನ ಶೈಲಿಯು ಗಬ್ರಿಯೇಲ್ ದೇವದೂತನ ಮೂಲಕ ಪ್ರಕಟಿಸಲ್ಪಟ್ಟವು. ಎಲೀಯನ ಹುರುಪು ಮತ್ತು ಹುಮ್ಮಸ್ಸಿನೊಂದಿಗೆ, ಯೋಹಾನನು ಅವಿಧೇಯ ಜನರನ್ನು ಮರಣದ ಮಾರ್ಗದಿಂದ ತಿರುಗಿಸಿ ಯೇಸುವನ್ನು ಮೆಸ್ಸೀಯನೋಪಾದಿ ಸ್ವೀಕರಿಸುವಂತೆ ಅವರನ್ನು ಸಿದ್ಧಗೊಳಿಸಲಿದ್ದನು. ಜನ್ಮತಃ ಯೋಹಾನನು ದೇವರಿಗೆ ಸಂಪೂರ್ಣವಾಗಿ ಸಮರ್ಪಿತನಾದ ನಾಜೀರನಾಗಿರಲಿದ್ದನು, ಮತ್ತು ಯಾವ ದ್ರಾಕ್ಷಾಮದ್ಯವನ್ನಾಗಲಿ ಅಥವಾ ಮದ್ಯಸಾರವುಳ್ಳ ಪಾನೀಯವನ್ನಾಗಲಿ ಅವನು ಕುಡಿಯಬಾರದಿತ್ತು. ವಾಸ್ತವವಾಗಿ, ಮರುಭೂಮಿಯಲ್ಲಿ ಅವನ ಆಹಾರವು ‘ಮಿಡಿತೆಗಳೂ ಕಾಡುಜೇನೂ’ ಆಗಿದ್ದವು. (ಮಾರ್ಕ 1:6; ಅರಣ್ಯಕಾಂಡ 6:2, 3; ಲೂಕ 1:13-17) ಸಮುವೇಲನಂತೆ, ಬಾಲ್ಯಾವಸ್ಥೆಯಿಂದ ಯೋಹಾನನು ಅತ್ಯುನ್ನತ ದೇವರ ಮಹಿಮಾಭರಿತ ಸೇವೆಗಾಗಿ ವಿಶೇಷವಾಗಿ ನೇಮಿಸಲ್ಪಟ್ಟಿದ್ದನು.—1 ಸಮುವೇಲ 1:11, 24-28.
ಯೋಹಾನ ಎಂಬ ಹೆಸರೂ ದೇವರಿಂದ ಆರಿಸಲಾಗಿತ್ತು. “ಯೋಹಾನ” ಎಂಬುದಾಗಿ ತರ್ಜುಮೆ ಮಾಡಲಾದ ಹೀಬ್ರು ಹೆಸರಿನ ಅರ್ಥವು “ಯೆಹೋವನು ಅನುಗ್ರಹವನ್ನು ತೋರಿಸಿದ್ದಾನೆ; ಯೆಹೋವನು ದಯೆಯುಳ್ಳವನಾಗಿದ್ದಾನೆ” ಎಂದಾಗಿದೆ.
ಎಂಟನೆಯ ದಿನದಂದು ಮಗುವಿಗೆ ಸುನ್ನತಿಮಾಡಿದಾಗ, ಅವನ ತಂದೆಯಾದ ಜಕರೀಯನು ಹೀಗೆ ಘೋಷಿಸುವಂತೆ ದೈವಿಕವಾಗಿ ಪ್ರೇರೇಪಿಸಲ್ಪಟ್ಟನು: “ಮಗುವೇ, ನೀನಾದರೋ ಪರಾತ್ಪರನ ಪ್ರವಾದಿಯೆನಿಸಿಕೊಳ್ಳುವಿ. ನೀನು ಕರ್ತನ ಮುಂದೆ ಹೋಗಿ ಆತನ ಹಾದಿಗಳನ್ನು ಸಿದ್ಧಮಾಡುವವನಾಗಿಯೂ ನಮ್ಮ ದೇವರು ಅತ್ಯಂತಕರುಣೆಯಿಂದ ದಯಪಾಲಿಸುವ ಪಾಪಪರಿಹಾರವೆಂಬ ರಕ್ಷಣೆಯ ತಿಳುವಳಿಕೆಯನ್ನು ಆತನ ಪ್ರಜೆಗೆ ಕೊಡುವವನಾಗಿಯೂ ಇರುವಿ. ಆ ಕರುಣೆಯಿಂದಲೇ ನಮಗೆ ಮೇಲಿನಿಂದ ಅರುಣೋದಯವು ಉಂಟಾ” ಗುವುದು. (ಲೂಕ 1:76-78) ಯೋಹಾನನ ಸಾರ್ವಜನಿಕ ಶುಶ್ರೂಷೆಯು ಅವನ ಜೀವಿತದಲ್ಲಿ ಮಹತ್ತಮ ವಿಷಯವಾಗಿರಲಿತ್ತು. ಅದರೊಂದಿಗೆ ಹೋಲಿಸಿದಾಗ, ಬೇರೆ ಎಲ್ಲ ವಿಷಯಗಳು ಮಹತ್ವವಿಲ್ಲದವುಗಳಾಗಿದ್ದವು. ಆದಕಾರಣ, ಯೋಹಾನನ ಜೀವಿತದ ಮೊದಲ 30 ವರ್ಷಗಳನ್ನು ಶಾಸ್ತ್ರಗಳು ಒಂದೇ ಒಂದು ವಚನದಲ್ಲಿ ಆವರಿಸುತ್ತವೆ: “ಆ ಬಾಲಕನು ಬೆಳೆದು ಆತ್ಮದಲ್ಲಿ ಬಲವುಳ್ಳವನಾದನು. ಮತ್ತು ಇಸ್ರಾಯೇಲ್ ಜನರಿಗೆ ತನ್ನನ್ನು ತೋರ್ಪಡಿಸಿಕೊಳ್ಳುವ ದಿನದ ವರೆಗೆ ಅರಣ್ಯ ಪ್ರದೇಶಗಳಲ್ಲಿ ಇದ್ದನು.”—ಲೂಕ 1:80.
ಅಡವಿಯಲ್ಲಿನ ಧ್ವನಿ
ಕೈಸರ ತಿಬೇರಿಯನ ಆಳಿಕ್ವೆಯ 15 ನೆಯ ವರ್ಷದಲ್ಲಿ, ಪೊಂತ್ಯಪಿಲಾತನು ಯೂದಾಯದ ಅಧಿಪತಿಯಾಗಿದ್ದಾಗ, ಸ್ನಾನಿಕನಾದ ಯೋಹಾನನು ಈ ಆಶ್ಚರ್ಯಕರ ಸಂದೇಶದೊಂದಿಗೆ ಅರಣ್ಯದಲ್ಲಿ ಕಾಣಿಸಿಕೊಂಡನು: “ಪರಲೋಕರಾಜ್ಯವು ಸಮೀಪವಾಯಿತು; ದೇವರ ಕಡೆಗೆ ತಿರುಗಿಕೊಳ್ಳಿರಿ.” (ಮತ್ತಾಯ 3:2; ಮಾರ್ಕ 1:4; ಲೂಕ 3:1, 2) ಇಡೀ ಪ್ರದೇಶದ ಸಾಮಾನ್ಯ ಜನರು ಎಚ್ಚರಗೊಳಿಸಲ್ಪಟ್ಟರು. ನಿಶ್ಚಿತವಾದೊಂದು ನಿರೀಕ್ಷೆಗಾಗಿ ಹಾತೊರೆಯುತ್ತಿದ್ದ ಜನರ ಹೃದಯಗಳನ್ನು ಆ ದಿಟ್ಟ ಘೋಷಣೆಯು ಪ್ರಭಾವಿಸಿತು. ಯೋಹಾನನ ಘೋಷಣೆಯು ವ್ಯಕ್ತಿಯೊಬ್ಬನ ದೀನತೆಯನ್ನೂ ಪರೀಕ್ಷಿಸಿತು ಯಾಕೆಂದರೆ ಅದು ಹೃತ್ಪೂರ್ವಕ ಪಶ್ಚಾತ್ತಾಪವನ್ನು ಕೇಳಿಕೊಂಡಿತು. ಅವನ ಪ್ರಾಮಾಣಿಕತೆ ಮತ್ತು ದೃಢನಿಶ್ಚಯವು, ಅವನು ದೇವರಿಂದ ಕಳುಹಿಸಲ್ಪಟ್ಟ ಒಬ್ಬ ಪುರುಷನೆಂದು ಪ್ರಾಮಾಣಿಕ ಹಾಗೂ ಯಥಾರ್ಥ ಜನರ ಸಮೂಹಗಳು ಪರಿಗಣಿಸುವಂತೆ ಪ್ರೇರೇಪಿಸಿತು.
ಯೋಹಾನನ ಕೀರ್ತಿಯು ಒಂದು ಹೊಸ ದಿನದ ಅರುಣೋದಯದಂತೆ ಹಬ್ಬಿತು. ಯೆಹೋವನ ಪ್ರವಾದಿಯಂತೆ ಅವನು ಸುಲಭವಾಗಿ ತನ್ನ ಉಡುಪು ಮತ್ತು ಭಕ್ತಿಯಿಂದ ಗುರುತಿಸಲ್ಪಟ್ಟನು. (ಮಾರ್ಕ 1:6) ಈ ಎಲ್ಲಾ ಆಸಕ್ತಿಯನ್ನು ಯಾವುದು ಕೆದರುತ್ತಿತ್ತು ಎಂಬುದನ್ನು ಕಂಡುಹಿಡಿಯಲು ಯಾಜಕರು ಮತ್ತು ಲೇವಿಯರು ಸಹ ಯೆರೂಸಲೇಮಿನಿಂದ ಸಂಚರಿಸಿದರು. ಪಶ್ಚಾತ್ತಾಪ ಪಡುವುದೊ? ಯಾಕೆ, ಮತ್ತು ಯಾವ ವಿಷಯಕ್ಕಾಗಿ? ಈ ಪುರುಷನು ಯಾರಾಗಿದ್ದನು? ಎಂದು ಅವರು ತಿಳಿಯ ಬಯಸಿದರು. ಯೋಹಾನನು ವಿವರಿಸಿದ್ದು: “ನಾನು ಕ್ರಿಸ್ತನಲ್ಲ.” “ಹಾಗಾದರೆ ನೀನು ಯಾರು? ಎಲೀಯನೋ? ಎಂದು ಅವರು ಕೇಳಲು ಅಲ್ಲವೆಂದನು. ನೀನು ಬರಬೇಕಾದ ಆ ಪ್ರವಾದಿಯೋ? ಅಂದದ್ದಕ್ಕೂ ಅಲ್ಲವೆಂದನು. ಆಗ ಅವರು—ನೀನು ಯಾರು? ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರ ಹೇಳಬೇಕಲ್ಲಾ; ನಿನ್ನ ವಿಷಯವಾಗಿ ಏನು ಹೇಳುತ್ತೀ? ಎಂದು ಕೇಳಲು ಅವನು—ಕರ್ತನ ದಾರಿಯನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಶಬ್ದವದೆ ಎಂಬದಾಗಿ ಯೆಶಾಯಪ್ರವಾದಿಯು ಹೇಳಿದನಷ್ಟೆ; ಆ ಶಬ್ದವೇ ನಾನು ಎಂದು ಉತ್ತರಕೊಟ್ಟನು. ಬಂದಿದ್ದವರು ಫರಿಸಾಯರ ಕಡೆಯವರಾಗಿದ್ದು— ನೀನು ಕ್ರಿಸ್ತನೂ ಎಲೀಯನೂ ಆ ಪ್ರವಾದಿಯೂ ಅಲ್ಲವಾದರೆ ಸ್ನಾನಮಾಡಿಸುವದೇನು? ಎಂದು ಅವನನ್ನು ಕೇಳಿದರು.”—ಯೋಹಾನ 1:20-25.
ರಾಜ್ಯವನ್ನು ಪ್ರವೇಶಿಸಲಿದ್ದವರಿಗಾಗಿ ಪಶ್ಚಾತ್ತಾಪ ಮತ್ತು ದೀಕ್ಷಾಸ್ನಾನ ಆವಶ್ಯಕ ಹೆಜ್ಜೆಗಳಾಗಿದ್ದವು. ಆದುದರಿಂದ ಯೋಹಾನನು ಉತ್ತರಿಸಿದ್ದು: ‘ನಾನಂತೂ ಪಶ್ಚಾತ್ತಾಪಿ ಪಾಪಿಗಳಿಗೆ ನೀರಿನ ದೀಕ್ಷಾಸ್ನಾನ ಮಾಡಿಸುವವನು; ಆದರೆ ನನಗಿಂತ ಶಕ್ತನು ಬರುತ್ತಾನೆ. ಆತನು ಪವಿತ್ರಾತ್ಮದಲ್ಲಿಯೂ ಬೆಂಕಿಯಲ್ಲಿಯೂ ನಿಮಗೆ ದೀಕ್ಷಾಸ್ನಾನ ಮಾಡಿಸುವನು. ಆತನ ಕೆರಗಳ ಬಾರನ್ನು ಬಿಚ್ಚುವದಕ್ಕೂ ನಾನು ಯೋಗ್ಯನಲ್ಲ. ಆತನು ಮೊರವನ್ನು ಕೈಯಲ್ಲಿ ಹಿಡಿದಿದ್ದಾನೆ; ತನ್ನ ಕಣದಲಿಯ್ಲ ರಾಶಿಯನ್ನು ತೂರಿ ಹಸನುಮಾಡಿ ತನ್ನ ಗೋಧಿಯನ್ನು ಕಣಜದಲ್ಲಿ ತುಂಬಿಕೊಳ್ಳುವದಕ್ಕಿದ್ದಾನೆ, ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು.’ (ಲೂಕ 3:15-17; ಅ. ಕೃತ್ಯಗಳು 1:5) ನಿಶ್ಚಯವಾಗಿಯೂ ಪವಿತ್ರಾತ್ಮವು ಮೆಸ್ಸೀಯನ ಹಿಂಬಾಲಕರ ಮೇಲೆ ಸುರಿಯಲ್ಪಡಲಿತ್ತು, ಆದರೆ ಅವನ ವೈರಿಗಳು ನಾಶನದ ಬೆಂಕಿಯನ್ನು ಅನುಭವಿಸಲಿದ್ದರು.
‘ಎಲ್ಲ ಬಗೆಯ ಜನರು’ ಎಚ್ಚರಿಸಲ್ಪಟ್ಟದ್ದು
ಅನೇಕ ಪ್ರಾಮಾಣಿಕ ಹೃದಯದ ಯೆಹೂದ್ಯರು ಯೋಹಾನನ ಮಾತುಗಳಿಂದ ಆಳವಾಗಿ ಪ್ರೇರೇಪಿಸಲ್ಪಟ್ಟರು ಮತ್ತು ನಿಯಮದ ಒಡಂಬಡಿಕೆಯ ಕಡೆಗೆ ತಮ್ಮ ಅಪನಂಬಿಗಸ್ತಿಕೆಯ ಪಾಪಗಳ ಕುರಿತು ಮುಕ್ತವಾಗಿ ಪಾಪನಿವೇದನೆ ಮಾಡಿದರು. ತಮಗೆ ಯೊರ್ದನ್ ನದಿಯಲ್ಲಿ ದೀಕ್ಷಾಸ್ನಾನ ಕೊಡುವಂತೆ ಯೋಹಾನನನ್ನು ಅನುಮತಿಸುವ ಮೂಲಕ ತಮ್ಮ ಪಶ್ಚಾತ್ತಾಪವನ್ನು ಅವರು ಬಹಿರಂಗವಾಗಿ ಪ್ರದರ್ಶಿಸಿದರು. (ಮತ್ತಾಯ 3:5, 6) ಫಲಸ್ವರೂಪವಾಗಿ, ಮೆಸ್ಸೀಯನನ್ನು ಸ್ವೀಕರಿಸಲು ಅವರ ಹೃದಯಗಳು ಯೋಗ್ಯ ಸ್ಥಿತಿಯಲ್ಲಿದ್ದವು. ದೇವರ ನೀತಿಯ ಆವಶ್ಯಕತೆಗಳ ಜ್ಞಾನಕ್ಕಾಗಿದ್ದ ಅವರ ದಾಹವನ್ನು ಶಮನಮಾಡುತ್ತಾ, ಪ್ರಾರ್ಥನೆ ಮಾಡಲು ಸಹ ಅವರಿಗೆ ಕಲಿಸುತ್ತಾ ತನ್ನ ಶಿಷ್ಯರೋಪಾದಿ ಯೋಹಾನನು ಅವರಿಗೆ ಸಂತೋಷದಿಂದ ಉಪದೇಶ ನೀಡಿದನು.—ಲೂಕ 11:1.
ಮೆಸ್ಸೀಯನ ಈ ಮುನ್ಸೂಚಕನ ಕುರಿತು ಅಪೊಸ್ತಲ ಯೋಹಾನನು ಬರೆದದ್ದು: “ತನ್ನ ಮೂಲಕವಾಗಿ ಎಲ್ಲರು ನಂಬುವಂತೆ ಅವನು ಆ ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡುವದಕ್ಕೆ ಬಂದನು.” (ಯೋಹಾನ 1:7) ಆದುದರಿಂದ, “ಇಸ್ರಾಯೇಲ್ ಜನರೆಲ್ಲರಿಗೆ—ನೀವು ದೇವರ ಕಡೆಗೆ ತಿರುಗಿಕೊಂಡು ಸ್ನಾನ ಮಾಡಿಸಿಕೊಳ್ಳಬೇಕೆಂದು ಸಾರಿ” ದಂತೆ, ಸ್ನಾನಿಕನಾದ ಯೋಹಾನನಿಗೆ ಕಿವಿಗೊಡಲು ಎಲ್ಲ ಬಗೆಯ ಜನರು ಬಂದರು. (ಅ. ಕೃತ್ಯಗಳು 13:24) ಸುಲಿಗೆ ಮಾಡುವುದರ ವಿರುದ್ಧ ಅವನು ಸುಂಕದವರನ್ನು ಎಚ್ಚರಿಸಿದನು. ಯಾರನ್ನಾದರೂ ಪೀಡಿಸುವ ಅಥವಾ ಸುಳ್ಳು ಅಪವಾದಗಳನ್ನು ಹಾಕುವುದರ ವಿರುದ್ಧ ಅವನು ಸೈನಿಕರನ್ನು ಎಚ್ಚರಿಸಿದನು. ಮತ್ತು ಅವನು ಧಾರ್ಮಿಕ ಭಕ್ತಿಯುಳ್ಳ ಕಪಟ ಫರಿಸಾಯರಿಗೆ ಮತ್ತು ಸದ್ದುಕಾಯರಿಗೆ ಹೇಳಿದ್ದು: “ಎಲೈ ಸರ್ಪಜಾತಿಯವರೇ, ಮುಂದೆ ಕಾಣಬರುವ ದೈವಕೋಪದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮಗೆ ಉಪದೇಶ ಮಾಡಿದವರಾರು? ಹಾಗಾದರೆ ನಿಮ್ಮ ಮನಸ್ಸು ದೇವರ ಕಡೆಗೆ ತಿರುಗಿತೆಂಬದನ್ನು ತಕ್ಕ ಫಲದಿಂದ ತೋರಿಸಿರಿ. ಅಬ್ರಹಾಮನು ನಮಗೆ ಮೂಲಪುರುಷನಲ್ಲವೇ ಎಂಬುವ ಆಲೋಚನೆಯನ್ನು ಬಿಡಿರಿ. ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದಲೂ ಮಕ್ಕಳನ್ನು ಹುಟ್ಟಿಸಬಲ್ಲನೆಂದು ನಿಮಗೆ ಹೇಳುತ್ತೇನೆ.”—ಮತ್ತಾಯ 3:7-9; ಲೂಕ 3:7-14.
ಒಂದು ಗುಂಪಿನೋಪಾದಿ, ಯೋಹಾನನ ದಿನದ ಧಾರ್ಮಿಕ ನಾಯಕರು ಅವನನ್ನು ನಂಬಲು ನಿರಾಕರಿಸಿದರು ಮತ್ತು ಅವನಿಗೆ ದೆವ್ವ ಹಿಡಿದಿರುವುದಾಗಿ ಸುಳ್ಳು ಆರೋಪ ಹೊರಿಸಿದರು. ಅನಂತ ಜೀವಿತಕ್ಕೆ ನಡೆಸುವ ನೀತಿಯ ಮಾರ್ಗವನ್ನು ಅವರು ತಿರಸ್ಕರಿಸಿದರು. ಇನ್ನೊಂದು ಕಡೆಯಲ್ಲಿ, ಯೋಹಾನನ ಸಾಕ್ಷ್ಯವನ್ನು ನಂಬಿದ ಪಾಪಪೂರ್ಣ ಸುಂಕದವರು ಮತ್ತು ವೇಶ್ಯೆಯರು ಪಶ್ಚಾತ್ತಾಪಪಟ್ಟರು ಮತ್ತು ದೀಕ್ಷಾಸ್ನಾನ ಪಡೆದುಕೊಂಡರು. ಸಕಾಲದಲ್ಲಿ, ಅವರು ಯೇಸು ಕ್ರಿಸ್ತನನ್ನು ಮೆಸ್ಸೀಯನೋಪಾದಿ ಸ್ವೀಕರಿಸಿದರು.—ಮತ್ತಾಯ 21:25-32; ಲೂಕ 7:31-33.
ಮೆಸ್ಸೀಯನು ಪರಿಚಯಿಸಲ್ಪಟ್ಟದ್ದು
ಆರು ತಿಂಗಳುಗಳ—ಸಾ.ಶ. 29ರ ವಸಂತಋತುವಿನಿಂದ ಮಾಗಿಕಾಲ—ವರೆಗೆ, ದೇವರ ನಂಬಿಗಸ್ತ ಸಾಕ್ಷಿಯಾದ ಯೋಹಾನನು ಯೆಹೂದ್ಯರ ಗಮನವನ್ನು, ಬರಲಿದ್ದ ಮೆಸ್ಸೀಯನ ಕಡೆಗೆ ಕೇಂದ್ರೀಕರಿಸಿದನು. ಮೆಸ್ಸೀಯ ಸಂಬಂಧಿತ ರಾಜನು ತೋರಿಬರುವ ಸಮಯವು ಅದಾಗಿತ್ತು. ಆದರೆ ಅವನು ತೋರಿಬಂದಾಗ, ಅವನು ಅದೇ ಯೊರ್ದನ್ ನೀರುಗಳ ಬಳಿ ಬಂದನು ಮತ್ತು ದೀಕ್ಷಾಸ್ನಾನ ನೀಡುವಂತೆ ಕೇಳಿಕೊಂಡನು. ಮೊದಲಿಗೆ ಯೋಹಾನನು ವಿರೋಧಿಸಿದನು, ಆದರೆ ನಂತರ ಅವನು ಒಪ್ಪಿಕೊಂಡನು. ಯೇಸುವಿನ ಮೇಲೆ ಪವಿತ್ರಾತ್ಮವು ಇಳಿದು ಬಂದಾಗ ಮತ್ತು ತನ್ನ ಮಗನ ಮೆಚ್ಚುವಿಕೆಯನ್ನು ವ್ಯಕ್ತಪಡಿಸುತ್ತಾ ಯೆಹೋವನ ಧ್ವನಿಯು ಕೇಳಲ್ಪಟ್ಟಾಗ ಅವನಿಗಾದ ಆನಂದವನ್ನು ಊಹಿಸಿರಿ.—ಮತ್ತಾಯ 3:13-17; ಮಾರ್ಕ 1:9-11.
ಯೇಸುವನ್ನು ಮೆಸ್ಸೀಯನೋಪಾದಿ ಗುರುತಿಸುವುದರಲ್ಲಿ ಯೋಹಾನನು ಮೊದಲಿಗನಾಗಿದ್ದನು, ಮತ್ತು ಅವನು ತನ್ನ ಸ್ವಂತ ಶಿಷ್ಯರನ್ನು ಈ ಅಭಿಷಿಕ್ತನಿಗೆ ಪರಿಚಯಿಸಿದನು. “ಅಗೋ” ಯೋಹಾನನು ಅಂದದ್ದು, “ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು.” ಅವನು ಮತ್ತೂ ಘೋಷಿಸಿದ್ದು: “ನನ್ನ ಹಿಂದೆ ಬರುವವನು ನನಗಿಂತ ಮೊದಲೇ ಇದದ್ದರಿಂದ ನನಗೆ ಮುಂದಿನವನಾದನು ಎಂದು ನಾನು ಹೇಳಿದ ಮಾತು ಈತನ ವಿಷಯವಾಗಿಯೇ. ನನಗೂ ಆತನ ಗುರುತಿರಲಿಲ್ಲ; ಆದರೆ ಆತನನ್ನು ಇಸ್ರಾಯೇಲ್ಯರಿಗೆ ತಿಳಿಯಪಡಿಸುವದಕ್ಕೋಸ್ಕರವೇ ನಾನು ನೀರಿನ ಸ್ನಾನವನ್ನು ಮಾಡಿಸುವವನಾಗಿ ಬಂದೆನು ಅಂದನು.”—ಯೋಹಾನ 1:29-37.
ಸುಮಾರು ಆರು ತಿಂಗಳುಗಳ ವರೆಗೆ ಯೋಹಾನನ ಕೆಲಸವು ಯೇಸುವಿನ ಶುಶ್ರೂಷೆಗೆ ಸಮಾಂತರವಾಗಿ ಮುಂದುವರಿಯಿತು. ಇನ್ನೊಬ್ಬ ವ್ಯಕ್ತಿಯು ಮಾಡುತ್ತಿದ್ದ ಕೆಲಸವನ್ನು ಅವರಲ್ಲಿ ಪ್ರತಿಯೊಬ್ಬರು ಅರ್ಥಮಾಡಿಕೊಂಡರು. ತನ್ನನ್ನು ಯೋಹಾನನು ಮದಲಿಂಗನ ಮಿತ್ರನೋಪಾದಿ ವೀಕ್ಷಿಸಿಕೊಂಡನು ಮತ್ತು ಅವನೂ ಅವನ ಕೆಲಸವೂ ಕಡಿಮೆಯಾದಂತೆ ಕ್ರಿಸ್ತನು ವೃದ್ಧಿಯಾಗುವುದನ್ನು ನೋಡಲು ಹರ್ಷಿಸಿದನು.—ಯೋಹಾನ 3:22-30.
ಎಲೀಯನಿಂದ ಚಿತ್ರಿಸಲ್ಪಟ್ಟ ಯೋಹಾನನನ್ನು, ಯೇಸು ತನ್ನ ಮುನ್ಸೂಚಕನಂತೆ ಗುರುತಿಸಿದನು. (ಮತ್ತಾಯ 11:12-15; 17:12) ಒಂದು ಸಂದರ್ಭದಲ್ಲಿ, ಯೇಸು ಹೇಳಿದ್ದು: “ಧರ್ಮಶಾಸ್ತ್ರವೂ ಪ್ರವಾದಿಗಳೂ ಯೋಹಾನನ ತನಕವೇ. ಈಚೆಗೆ ದೇವರ ರಾಜ್ಯವು ಸಾರಲ್ಪಡುತ್ತಾ ಇದೆ. ಅದರಲ್ಲಿ ಸಕಲರೂ ಬಲಾತ್ಕಾರವಾಗಿ ನುಗ್ಗುತ್ತಾರೆ.”—ಲೂಕ 16:16.
ಕೊನೆಯ ವರೆಗೂ ನಂಬಿಗಸ್ತನು
ಅವನು ಸತ್ಯವನ್ನು ಧೈರ್ಯದಿಂದ ಘೋಷಿಸಿದರ್ದಿಂದ ಯೋಹಾನನು ಹಿಡಿಯಲ್ಪಟ್ಟು ಸೆರೆಮನೆಯೊಳಗೆ ಹಾಕಲ್ಪಟ್ಟನು. ರಾಜ ಹೆರೋದನ ಪಾಪವನ್ನು ಬಯಲುಪಡಿಸುವುದರಲ್ಲಿ ಸಹ ಅವನು ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳಲಿಲ್ಲ. ದೇವರ ನಿಯಮದ ಉಲ್ಲಂಘನೆಯಲ್ಲಿ, ಆ ರಾಜನು ತನ್ನ ಸ್ವಂತ ಸಹೋದರನ ಹೆಂಡತಿಯಾದ ಹೆರೋದ್ಯಳೊಂದಿಗೆ ವ್ಯಭಿಚಾರದಿಂದ ಜೀವಿಸುತ್ತಿದ್ದನು. ಆ ಪುರುಷನು ಪಶ್ಚಾತ್ತಾಪಪಟ್ಟು ದೇವರ ಕರುಣೆಯನ್ನು ಪಡೆಯಬಹುದೆಂಬದಕ್ಕಾಗಿ ಯೋಹಾನನು ಧೈರ್ಯದಿಂದ ಮಾತಾಡಿದನು.
ಯೋಹಾನನು ನಂಬಿಕೆ ಮತ್ತು ಪ್ರೀತಿಯ ಎಂತಹ ಒಂದು ಮಾದರಿಯಾಗಿದ್ದನು! ತನ್ನ ವೈಯಕ್ತಿಕ ಸ್ವತಂತ್ರದ ವೆಚ್ಚದಲ್ಲಿ, ಯೆಹೋವ ದೇವರಿಗೆ ತನ್ನ ನಂಬಿಗಸ್ತಿಕೆಯನ್ನು ಮತ್ತು ಜೊತೆ ಮಾನವರಿಗಾಗಿ ತನ್ನ ಪ್ರೀತಿಯನ್ನು ಆತನು ರುಜುಪಡಿಸಿದನು. ಒಂದು ವರ್ಷದ ಸೆರೆಮನೆವಾಸದ ತರುವಾಯ, ಅವನ ವಿರುದ್ಧ “ದ್ವೇಷವಿಟ್ಟು” ಕೊಂಡಿದ್ದ ದುಷ್ಟ ಹೆರೋದ್ಯಳ ಮೂಲಕ ರಚಿಸಲಾದ ದೆವ್ವ ಪ್ರೇರಿತ ಯೋಜನೆಯ ಫಲಿತಾಂಶವಾಗಿ ಯೋಹಾನನ ಶಿರಚ್ಛೇದನ ಮಾಡಲಾಯಿತು. (ಮಾರ್ಕ 6:16-19; ಮತ್ತಾಯ 14:3-12) ಆದರೆ ಮೆಸ್ಸೀಯನ ಮುನ್ಸೂಚಕನು ಯೆಹೋವನಿಗೆ ತನ್ನ ಸಮಗ್ರತೆಯನ್ನು ಕಾಪಾಡಿಕೊಂಡನು ಮತ್ತು ಬೇಗನೆ ದೇವರ ನೀತಿಯ ಹೊಸ ಲೋಕದಲ್ಲಿ ಜೀವನವನ್ನು ಅನುಭವಿಸಲು ಸತ್ತವರಿಂದ ಎಬ್ಬಿಸಲ್ಪಡುವನು.—ಯೋಹಾನ 5:28, 29; 2 ಪೇತ್ರ 3:13.