ದೇವರ ಹೆಸರನ್ನು ಹೊತ್ತಿರುವ ನಾಣ್ಯಗಳು
ಇಲ್ಲಿ ತೋರಿಸಲ್ಪಟ್ಟಿರುವ ಬೆಳ್ಳಿಯ ನಾಣ್ಯಗಳನ್ನು ನಿಕಟವಾಗಿ ನೋಡಿರಿ. ಅವು 1627 ರಿಂದ 1637ರ ವರೆಗಿನ ತನ್ನ ಆಳಿಕ್ವೆಯ ಸಮಯದಲ್ಲಿ ಜರ್ಮನ್ ಚಕ್ರವರ್ತಿಯಾದ V ನೆಯ ವಿಲ್ಹೆಲ್ಮ್ನಿಂದ ಟಂಕಿಸಲ್ಪಟ್ಟವು. ಆ ಸಮಯದಲ್ಲಿ, ಮಧ್ಯ ಯೂರೋಪ್, ಕ್ಯಾತೊಲಿಕರು ಮತ್ತು ಪ್ರಾಟೆಸ್ಟಂಟರ ನಡುವಿನ ಒಂದು ಹೋರಾಟವಾಗಿದ್ದ ಮೂವತ್ತು ವರ್ಷಗಳ ಯುದ್ಧದಲ್ಲಿ ತೊಡಗಿತ್ತು. V ನೆಯ ವಿಲ್ಹೆಲ್ಮ್ ಪ್ರಾಟೆಸ್ಟಂಟ್ ಸಮರ್ಥನೆಯ ಪಕ್ಷವಹಿಸಿದನು. ಈ ಹೋರಾಟದ ವಿಪರೀತ ಖರ್ಚನ್ನು ಒದಗಿಸಲು, ಅವನು ತನ್ನ ಎಲ್ಲ ಬೆಳ್ಳಿಯನ್ನು ತೆಗೆದು ಅದರಿಂದ ನಾಣ್ಯಗಳನ್ನು ಟಂಕಿಸಿದನು.
ಆಸಕ್ತಿಕರವಾಗಿ, ಹಲವಾರು ನಾಣ್ಯಗಳ ಮೇಲಿರುವ ಚಿತ್ರಣಗಳು, ಹೀಬ್ರು ಟೆಟ್ರಗ್ರ್ಯಾಮಟಾನ್ ರೂಪದಲ್ಲಿರುವ ಯೆಹೋವ ಎಂಬ ದೇವರ ಹೆಸರನ್ನು ಸುತ್ತುವರಿಯುವ ಸೂರ್ಯನನ್ನು ಚಿತ್ರಿಸುತ್ತವೆ. ಬಲವನ್ನು ಸೂಚಿಸುವ ಒಂದು ತಾಳೆಯ ಮರ ಸಹ ಇದೆ. ಗಾಳಿಯಿಂದ ಬಗ್ಗಿಸಲ್ಪಟ್ಟರೂ, ಮರವು ದೇವರ ಸಂರಕ್ಷಣೆಯ ಕೆಳಗೆ ಮುರಿಯದೆ ಉಳಿಯುತ್ತದೆಂಬ ಅರ್ಥವನ್ನು ಕೊಡುತ್ತದೆ. ನಾಣ್ಯದ ಮೇಲೆ ಇರುವ ಲ್ಯಾಟಿನ್ ಲೇಖವು ಯೆಹೋವನ ಹೆಸರನ್ನು ಒಳಗೂಡಿರುತ್ತದೆ ಮತ್ತು ಆತನ ಸಂರಕ್ಷಕ ಪರಾಮರಿಕೆಯಲ್ಲಿ ಭರವಸೆಯನ್ನು ವ್ಯಕ್ತಪಡಿಸುತ್ತದೆ.
ದೇವರ ಸಂರಕ್ಷಣೆಯನ್ನು ಆಹ್ವಾನಿಸುವ ಬದಲು, ದೇವರ ಹೆಸರಿನ ಅಂತಹ ಬಳಸುವಿಕೆಯು ವ್ಯರ್ಥವಾಗಿತ್ತು ಯಾಕಂದರೆ ಯೆಹೋವನು ಮಾನವಕುಲದ ಹಿಂಸಾತ್ಮಕ ಹೋರಾಟಗಳಲ್ಲಿ ಪಕ್ಷವಹಿಸುವದಿಲ್ಲ. ಖಂಡಿತವಾಗಿಯೂ ಮೂವತ್ತು ವರ್ಷಗಳ ಯುದ್ಧವು ದೇವರ ಮೆಚ್ಚಿಕೆಯನ್ನು ಪಡೆದಿರಲಾರದು. “ಸಂಪ್ರದಾಯವಾದಿ ಅಂದಾಜುಗಳಿಗನುಸಾರ, ಜರ್ಮನ್ ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಯುದ್ಧದ ಸಮಯದಲ್ಲಿ ಸತ್ತರು” ಎಂದು ಫಂಕ್ ಆ್ಯಂಡ್ ವಾಗ್ನಾಲ್ಸ್ ನ್ಯೂ ಎನ್ಸೈಕ್ಲೊಪೀಡಿಯ ಹೇಳುತ್ತದೆ. “ಅಸಂಖ್ಯಾತ ಜರ್ಮನ್ ನಗರಗಳು, ಪಟ್ಟಣಗಳು, ಹಳ್ಳಿಗಳು, ಮತ್ತು ಹೊಲಗಳು ಪೂರ್ಣವಾಗಿ ನಾಶವಾದವು. ಜರ್ಮನಿಯ ಕೈಗಾರಿಕಾ, ವ್ಯವಸಾಯ, ಮತ್ತು ವ್ಯಾಪಾರಸ್ಥ ಸೌಕರ್ಯಗಳ ಸರಿಸುಮಾರು ಮೂರರಲ್ಲಿ ಎರಡು ಭಾಗ ಧ್ವಂಸವಾಗಿದ್ದವು.”
ಈ ನಾಣ್ಯಗಳ ಮೇಲೆ ಯೆಹೋವನ ಹೆಸರಿನ ಬಳಕೆಯು ಇಸ್ರಾಯೇಲಿಗೆ ಕೊಡಲ್ಪಟ್ಟ ಆಜ್ಞೆಯನ್ನು ಜ್ಞಾಪಕಕ್ಕೆ ತರುತ್ತದೆ: “ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಎತ್ತಬಾರದು.” (ವಿಮೋಚನಕಾಂಡ 20:7) ಆದಾಗಲೂ, ಜರ್ಮನಿಯಲ್ಲಿರುವ ಜನರಿಗೆ ಯೆಹೋವ ಎಂಬ ದೈವಿಕ ನಾಮವು ಬಹು ಸಮಯದಿಂದ ಪರಿಚಿತವಾಗಿದೆಯೆಂಬದಕ್ಕೆ ಈ ನಾಣ್ಯಗಳು ಸಾಕ್ಷಿಯನ್ನು ಕೊಡುತ್ತವೆ. ಆ ಹೆಸರನ್ನು ಹೊತ್ತಿರುವ ದೇವರನ್ನು ನೀವು ಎಷ್ಟು ಚೆನ್ನಾಗಿ ಬಲ್ಲಿರಿ?